Sunday, December 7, 2008

ಅಗ್ನಿದಿವ್ಯ



ನಿನ್ನೆ ಶನಿವಾರ ನಾನು ಮಾಡಿದ ಎಡವಟ್ಟಿನಿಂದಾಗಿ ಒಂದು ಕವಿಗೋಷ್ಠಿಯಲ್ಲಿ ಸಿಲುಕಿಕೊಂಡ ಘಟನೆ ನಡೆಯಿತು.ಎಡವಟ್ಟು ನಾನೇ ಮಾಡಿಕೊಂಡ್ರು ಅದಕ್ಕೆ ಹಲವು ಜನರು ಕಾರಣಕರ್ತೃರು ಇದ್ದಾರೆ!

ಏನಾಯ್ತು ಅಂದ್ರೆ ಕೆಲ ದಿನಗಳ ಹಿಂದೆ ’ಅವಧಿ’ಯಲ್ಲಿ ’ಗಾಂಧಿ ಸಾಹಿತ್ಯಸಂಘ’ದವರು ನಡೆಸಿಕೊಡಲಿರುವ ಜಿ.ಪಿ ರಾಜರತ್ನಂ ಜನ್ಮಶತಾಬ್ದಿ ಆಚರಣೆಯ ಬಗ್ಗೆ ಒಂದು ಕಾರ್ಯಕ್ರಮದ ಬಗ್ಗೆ ಒಂದು ಪ್ರಕಟಣೆ ಬಂದಿತ್ತು.ಅದರಲ್ಲಿ ನನಗೆ ಗಮನ ಸೆಳೆದದ್ದು ಸಂಧ್ಯಾದೇವಿಯವರ ಹೆಸರು.ಅವರನ್ನು ಮುಖತ ನೋಡಬೇಕೆಂಬ ಆಸೆ ಬಹಳ ದಿನಗಳಿಂದ ಇತ್ತು ನಂಗೆ.ಆದ್ರೆ ಕಾರ್ಯಕ್ರಮ ಶುಕ್ರವಾರವಾದ್ದರಿಂದ ಹೋಗಲು ಖಂಡಿತ ಸಾಧ್ಯವಿಲ್ಲ ಅನ್ನೋ ನಿರಾಸೆಯಲ್ಲಿ ನಾನಿದ್ದೆ ,ಹಾಗೆಯೆ ಅದನ್ನು ಮರೆತಿದ್ದೆ ಕೂಡಾ.
ಆದ್ರೆ ಶನಿವಾರ ಎಂದಿನಂತೆ ಬೆಳಿಗ್ಗೆ ಹ್ಯಾಂಗೋವರ್ ಇಳಿದ ನಂತರ ’ವಿಜಯಕರ್ನಾಟಕ’ ಓದ್ಬೇಕಾದ್ರೆ ಅದರಲ್ಲಿ ಗಾಂಧಿಸಾಹಿತ್ಯ ಸಂಘದ ಕಾರ್ಯಕ್ರಮದ ಬಗ್ಗೆ ’ಈ ದಿನದ ಕಾರ್ಯಕ್ರಮ’ದ ಪಟ್ಟಿಯಲ್ಲಿ ಹಾಕಿದ್ರು.ಸಾಲದ್ದಕ್ಕೆ ಬಿಡುಗಡೆಯಾಗುವ ಪುಸ್ತಕಗಳು ಅಂತ ಸಂಧ್ಯಾದೇವಿಯವರ ’ಅಗ್ನಿದಿವ್ಯ’ದ ಬಗ್ಗೆ ಪ್ರಸ್ತಾವಿಸಿದ್ದರು.

ಹೇಗೂ ನನ್ನ ಜ್ಞಾಪಕ ಶಕ್ತಿಯ ಬಗ್ಗೆ ನನಗೇ ಕಾನ್ಫಿಡೆನ್ಸ್ ಇಲ್ಲ ! ಹಾಗಾಗಿ ನಾನು ’ಅವಧಿ’ಯಲ್ಲಿ ನೋಡಿದ ದಿನಾಂಕ ತಪ್ಪಿರಬಹುದು ಅಂತ ಖುಶಿಯಿಂದ ಸಾಯಂಕಾಲ ಕಾರ್ಯಕ್ರಮಕ್ಕೆ ಹೋಗುವ ನಿರ್ಧಾರ ಮಾಡಿದೆ.

ಹೇಗೂ ಸಂಧ್ಯಾದೇವಿಯವರನ್ನು ನೋಡ್ಬೇಕಿತ್ತು ನಂಗೆ ,ಅದೂ ಅಲ್ಲದೆ ಎರಡು ವರ್ಷಗಳಿಂದ ಕಪಾಟಿನಲ್ಲಿ ಬೆಚ್ಚಗೆ ಕುಳಿತಿರುವ ’ಮಾತು ಚಿಟ್ಟೆ-ಬೆಂಕಿ ಬೆರಳು’ ಪುಸ್ತಕದ್ದು ಒಂದೇ ಕಂಪ್ಲೇಂಟು - ’ನಂಗೆ ಯಾರೂ ಕಂಪೆನಿ ಇಲ್ಲ ಇಲ್ಲಿ.ಆ ಚೇತನ್ ಭಗತ್ ನ ’One Night At Call Center ' ತಿಕ್ಕಲು ತಿಕ್ಕಲಾಗಿ ಮಾತಾಡ್ತಾವೆ ನನ್ ಹತ್ರ !ನಂಗೆ ಯಾವುದಾದ್ರೂ ಒಳ್ಳೆಯ ಕಂಪೆನಿ ಕೊಡಿಸು ’ ಅಂತ!ಅದಕ್ಕೆ ಕಂಪೆನಿ ಕೊಡಲಾದ್ರೂ ’ಅಗ್ನಿದಿವ್ಯ’ ತಗೊಳ್ಳಬೇಕಿತ್ತು ನಾನು.

ಸಂಜೆ ಗಾಂಧಿಸಾಹಿತ್ಯ ಸಂಘ ಹುಡುಕಿಕೊಂಡು ಒಳಗೆ ಹೊಕ್ಕು ಕೂತೆ.ಆಗ ತಾನೇ ಪ್ರಾರಂಭ ಆಗಿತ್ತು ಕಾರ್ಯಕ್ರಮ .ಅಕ್ಕಪಕ್ಕ ನೋಡಿ ಸ್ವಲ್ಪ ಬೇಜಾರಾಯ್ತು !ಯಾಕಂದ್ರೆ ಇದ್ದಿದ್ದೆ ಹತ್ತೆನ್ನರಡು ಜನ!ಅದರಲ್ಲೂ ನನ್ನನ್ನು ಬಿಟ್ರೆ ಎಲ್ಲ ಹಿರಿ ತಲೆಗಳು.ಅಪ್ಪಿ ತಪ್ಪಿ ಏನಾದ್ರೂ ಹಿರಿಯನಾಗರಿಕರ ಕಾರ್ಯಕ್ರಮಕ್ಕೇನಾದ್ರೂ ಬಂದ್ನೇನೋ ಅಂತ ಭಯ ಆಯ್ತು.ಆದರೂ ನಂಗೆ ನಾನೇ ಸಮಾಧಾನ ಮಾಡ್ಕೊಂಡೆ.ಯಾಕಂದ್ರೆ ಹಿಂದಿನ ದಿನ ಮೆಸೇಜ್ ಬಂದಿತ್ತು .ಬಾಬ್ರಿ ಮಸೀದಿಯ ಕರಾಳ ನೆನಪಿಗೆ ಉಗ್ರರು ದುಷ್ಕೃತ್ಯ ಎರಗೋ ಸಾಧ್ಯತೆಗಳಿವೆ .ಹಾಗಾಗಿ ಜನನಿಭಿಡ ಪ್ರದೇಶಗಳಿಗೆ ಹೋಗ್ಬೇಡಿ ಅಂತ.

ಗಾಂಧಿ ಸಾಹಿತ್ಯಸಂಘದಲ್ಲಿ ಅಷ್ಟೇನೂ ಜನನಿಭಿಡತೆ ಕಾಣದ್ದರಿಂದ ಸ್ವಲ್ಪ ’ಸಮಾಧಾನ’ ಆಯ್ತು!

ಕಾರ್ಯಕ್ರಮದ ಮುಗಿದ ಮೇಲೇನೆ ಗೊತ್ತಾಗಿದ್ದು ನಂಗೆ ನಾನು ಎಡವಟ್ಟು ಮಾಡ್ಕೊಂಡಿರೋದು.ಕೊನೆ ತನಕ ಸಂಧ್ಯಾದೇವಿಯವರು ಬರಲೆ ಇಲ್ಲ!(ಹಿಂದಿನ ದಿನ ಅಲ್ವ ಇದ್ದಿದ್ದು ಪುಸ್ತಕ ಬಿಡುಗಡೆ ಕಾರ್ಯಕ್ರಮ ಅವರೆಲ್ಲಿಂದ ಬರ್ತಾರೆ!).

ಆದ್ರೆ ಈ ಕಾರ್ಯಕ್ರಮದಲ್ಲಿ ಭಾಗವಸಿದ್ದಕ್ಕೆ ಏನೂ ಬೇಜಾರಾಗಿಲ್ಲ ನಂಗೆ.ತುಂಬಾನೇ ಚೆನ್ನಾಗಿತ್ತು .ಕಾರ್ಯಕ್ರಮ ಮುಗಿದ ಮೇಲೆ ನನಗನಿಸಿತು - ’ನನಗೂ ಕವಿತೆಗಳು ಅ(ಪಾ?)ರ್ಥವಾಗತ್ತವೆ ’!

ಕವಿಗೋಷ್ಠಿಯ ಅಧ್ಯಕ್ಷತೆಯನ್ನು ’ಅಪರಂಜಿ’ ಶಿವಕುಮಾರ್ ವಹಿಸಿದ್ದರು.ಕವಿ ಗೋಷ್ಟಿಯಲ್ಲಿ ಸುಮಾರು ಏಳೆಂಟು ಜನ ಕವಿಗಳು/ಕವಯತ್ರಿಯರು ತಮ್ಮ ಕವನ ,ಹಾಗೂ ಜಿ.ಪಿ ರಾಜರತ್ನಂರವರ ಕವನಗಳನ್ನು ವಾಚಿಸಿದರು.

ಮೊದಲಿಗೆ ಭಾರತಿದೇವಿಯವರ ಸರದಿಯಾಗಿತ್ತು .ಕೆಲವೊಂದು ಕವನಗಳು ನಂಗೆ ಬೌನ್ಸರ್ ಗಳಾದ್ರೂ ,ಕೆಲವೊಂದು ಅರ್ಥವಾಯ್ತು.ತಮಿಳು ಕವಯತ್ರಿಯೊಬ್ಬರ ಕವನದ ಕನ್ನಡಾನುವಾದ ತುಂಬಾ ಚೆನ್ನಾಗಿತ್ತು.ಕವಿತೆಯ ಶೀರ್ಷಿಕೆ ’ರಕ್ತದಲ್ಲಿ ಬರೆದ ಟಿಪ್ಪಣಿಗಳು’ .ಇನ್ನೊಂದು ಕವನ ಕೂಡಾ ಚೆನ್ನಾಗಿತ್ತು .ಆದ್ರೆ ಶೀರ್ಷಿಕೆ ನೆನಪಿಲ್ಲ ! ಕೊನೆಯ ವಾಕ್ಯ ಮಾತ್ರ ಸೊಗಸಾಗಿತ್ತು ." ಕೋಗಿಲೆ ಮನೆ ಕಟ್ಟುವುದಿಲ್ಲ ,ಅದಕ್ಕೇ ಅದು ಹಾಡುತ್ತದೆ !" .

ಎಲ್ ಜಿ ಮೀರಾರ ’ಅಡುಗೆ ಮನೆ ಸಾಹಿತ್ಯ’ ಕವನ ಹಿಡಿಸಿತು ನಂಗೆ.ಹಾಗೇ ಯಲ್ಲಪ್ಪರವರೂ ಕೆಲವು ಒಳ್ಳೆಯ ಕವನಗಳನ್ನು ವಾಚಿಸಿದರು.ರಾಮಚಂದ್ರ ರಾಯರೆಂಬ ಕವಿ ಜಿ ಪಿ ರಾಜರತ್ನಂ ಬಗ್ಗೆ ಕುಸುಮ ಷಟ್ಪದಿಯಲ್ಲಿರೋ ಒಂದು ಕವನ ವಾಚಿಸಿದರು.

ಇನ್ನಿಬ್ಬರು ಮಹನೀಯರು ಎರಡು ಒಳ್ಳೆಯ ಕವಿತೆಗಳನ್ನು ವಾಚಿಸಿದರು .ಆದ್ರೆ ಅವರ ಹೆಸರುಗಳು ಮಾತ್ರ ಎಷ್ಟು ತಲೆ ಕೆರ್ಕೋಂಡ್ರೂ ನೆನಪಾಗ್ತಿಲ್ಲ ಸಾರಿ!( ಬರೀ ಹೆಂಗಸರ/ಹೆಣ್ಣುಮಕ್ಕಳ ಹೆಸರು ನೆನಪಿರುತ್ತೆ ನಿಂಗೆ ಬಯ್ತೀರಾ ಅಂತ ಗೊತ್ತು ನಂಗೆ I can't help it!).

ಅಧ್ಯಕ್ಷತೆ ವಹಿಸಿದ ಶಿವಕುಮಾರ್ ಅವ್ರೂ ರಾಜರತ್ನಂ ಅವರ ಕೆಲವು ಕವಿತೆಗಳನ್ನು ಹೇಳಿದ್ರು.ಬಹಳ ಸೊಗಸಾಗಿತ್ತು ಅವು ಹಾಸ್ಯಭರಿತ.

’ಅಭಿನವ’ದ ರವಿಕುಮಾರ್ ಮಗ ಸೂರ್ಯವಂಶಿ ಕೂಡಾ ಒಂದು ಹಾಡು ಹಾಡಿದ್ದ .’ಹಬ್ಬದ ದಿನವೇ ಸುಬ್ಬನ ಮನೆಗೊಂದ್ ಆನೆ ಬಂದಿತ್ತು ’ ಅಂತ! ತಾರಕದಲ್ಲಿ ಹಾಡಿದ್ದ ಹುಡುಗ ಪಾಪ.ಕಾರ್ಯಕ್ರಮ ಮುಗಿದ ಮೇಲೆ ಅವನ ಹತ್ರ ಮಾತಾಡಿದ್ದೆ ನಾನು ."ಅಂಕಲ್ ನಿನ್ನೇನೆ ಹಾಡ್ ಬೇಕಿತ್ತು ನಾನು ಅಪ್ಪ ಮೋಸ ಮಾಡಿದ್ರು,ಅದಿಕ್ಕೆ ಇವತ್ತು ಬಿಡ್ಲೇ ಇಲ್ಲ ,ಹಾಡೇ ಬಿಟ್ಟೆ ! ನಂಗೆ ಇನ್ನೂ ಐವತ್ತು ಕನ್ನಡ ಹಾಡುಗಳು ಬರುತ್ತೆ ಹಾಡ್ಲಾ " ಅಂದ ! ಇಂಗ್ಲೀಷ್ ಮೀಡಿಯಂ ಹುಡುಗ -ಐವತ್ತು ಕನ್ನಡ ಹಾಡುಗಳು ! ಅಬ್ಬ!

’ಸಂಚಯ’ ದ ಪ್ರಹ್ಲಾದ್ ಸುಂದರವಾಗಿ ನಿರೂಪಣೆ ಮಾಡಿದ್ರು.(ಹೊರಗಡೆ ಪುಸ್ತಕ ಮಾರುತ್ತಿದ್ದವನ ಹತ್ರ ಕೇಳಿದ್ದು ,ಒಳಗೆ ಜುಬ್ಬ ಧರಿಸಿ ಮಾತಾಡ್ತಾ ಇದ್ರಲ್ಲ ಅವರ್ಯಾರು ಅಂತ .ಅವನು ’ಅದು ಪ್ರಹ್ಲಾದ್ ಸರ್ ’ಅಂದ -ತಪ್ಪಾಗಿದ್ರೆ ನಾನು ಜವಾಬ್ದಾರನಲ್ಲ!)

ಹೊರಗೆ ಬಂದು ಸೀದಾ ಪುಸ್ತಕ ಮಾರುತ್ತಿದ್ದವನ ಬಳಿ ’ಅಗ್ನಿದಿವ್ಯ’ ಕೊಡಿ ಅಂತ ಕೇಳಿ ಪಡೆದೆ.ಮೂವತ್ತು ರೂಪಾಯಿಯ ಪುಸ್ತಕಕ್ಕೆ ಐದು ರೂಪಾಯಿ ಡಿಸ್ಕೌಂಟ್ ! ಆದ್ರೆ ಅದೇ ಮಲ್ಯನ ಟಿನ್ ಬಿಯರ್ ಗೆ ಕೂಡ ಮೂವತ್ತೆಂಟು ರೂಪಾಯಿ ಈಗ -ಛೇ ಎಂಥ ಕಲಿಗಾಲ ಬಂತು!

5 comments:

shivu.k said...

ಸಂದೀಪ್ ,

ಹಾಗೊದೆಲ್ಲಾ ಒಳ್ಳೆಯದಕ್ಕೆ ಅಂತ ದೊಡ್ದವರು ಹೇಳಿರುವುದು ಸುಮ್ನೆ ಅಲ್ಲ ಅಲ್ಲವೇ !

ವಿ.ರಾ.ಹೆ. said...

Li(o)vely :-)

Harisha - ಹರೀಶ said...

ಅಗ್ನಿದಿವ್ಯ ಹೇಗಿದೆ?

ಸಂದೀಪ್ ಕಾಮತ್ said...

ಧನ್ಯವಾದಗಳು ಶಿವು,ವಿಕಾಸ್ ,ಹರೀಶ್,

@ಹರೀಶ್,
ಹರೀಶ್ ’ಅಗ್ನಿದಿವ್ಯ’ ಸಂಧ್ಯಾದೇವಿಯವರು ಬರೆದಿದ್ದಲ್ವ ಹಾಗಾಗಿ ಚೆನ್ನಾಗಿ ಇದ್ದೇ ಇರುತ್ತೆ ಅನ್ನೋ ನಂಬಿಕೆ ನಂದು.To be honest ನಾನದನ್ನು ಓದಿಲ್ಲ !ನನಗೆ ಜಾವೆದ್ ಅಖ್ತರ್ ಬರೆದಿರೋ ಸಿನೆಮಾ ಪದ್ಯಗಳಷ್ಟೇ ಅರ್ಥ ಆಗೋದು:(

ಕವಿ ಗೋಷ್ಠಿಯಲ್ಲಿ ಯಲ್ಲಪ್ಪನವರು ಅದ್ಭುತವಾದ ಕವಿತೆಗಳನ್ನು ಹಾಡಿದ್ರು.ಅವು ಹಳ್ಳಿಗಳಲ್ಲಾಗು ದಬ್ಬಾಳಿಕೆಯ ಕುರಿತಾದುದು ಅಂತ ಗೊತ್ತಾಯ್ತು.ಆದ್ರೆ ನಾನು ಬೆಳೆದ ಪರಿಸರದಲ್ಲಿ ಅಂಥ ದಬ್ಬಾಳಿಕೆಗಳಿಲ್ಲದ ಕಾರಣ ಅದರ ತೀವ್ರತೆ ಅಷ್ಟೊಂದು ಅರ್ಥ ಆಗಿಲ್ಲ.

ಹಾಗೆಯೆ ಭಾರತಿದೇವಿ ಅನುವಾದಿಸಿದ ಕವಿತೆ ಇಷ್ಟ ಆಯ್ತು ಆದ್ರೆ ಅರ್ಥ ಆಯ್ತು ಅಂತ ಹೇಳಲಾರೆ!

ಚಿತ್ರಾ ಸಂತೋಷ್ said...

Cooool!!GUD..!
-chitra