Sunday, May 24, 2009

ಚಿಟ್ಟೆ ಹೆಜ್ಜೆ ಜಾಡು....



ಕನ್ನಡ ಸಾಹಿತ್ಯ ಲೋಕಕ್ಕೊಂದು ಕಾದಂಬರಿಯ ಸೇರ್ಪಡೆಯಾಗಿದೆ .ಹಾಗೆಯೇ ಕನ್ನಡಕ್ಕೊಂದು ಹೊಸ ’ಟಂಗ್ ಟ್ವಿಸ್ಟರ್ ’ ಕೂಡಾ!
ಜೋಗಿಯವರ ಹೊಸ ಕಾದಂಬರಿ ’ಚಿಟ್ಟೆ ಹೆಜ್ಜೆ ಜಾಡು ’ ಇವತ್ತು ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಕಾದಂಬರಿಯ ಹೆಸರೇ ತುಂಬಾ ಆಕರ್ಷಕವಾಗಿದೆ ,ಹಾಗೇ ಅದೊಂದು ರೀತಿಯ ಟಂಗ್ ಟ್ವಿಸ್ಟರ್ ಕೂಡಾ! ನೀವು ಬಿಡದೆ ಕಾದಂಬರಿಯ ಹೆಸರನ್ನು ಹತ್ತು ಬಾರಿ ಹೇಳಿ ನೋಡಿ.ಒಂದೋ ಅದು ’ಚಿಟ್ಟೆ ಹೆಜ್ಜೆಯ ಹಾಡು ’ ಆಗುತ್ತೆ(ಈ ಸಾಧ್ಯತೆ ಹೆಚ್ಚು) ಅಥವಾ ’ಚಿಟ್ಟೆ ಜೆಜ್ಜೆ ಜಾಡು ’ ಆಗುತ್ತೆ(ಸಾಧ್ಯತೆ ಕಮ್ಮಿ ಆದರೂ ಅಲ್ಲಗಳೆಯುವ ಹಾಗಿಲ್ಲ!).ಇದ್ಯಾವುದೂ ಆಗದೇ ನೀವು ಹತ್ತು ಬಾರಿಯೂ ’ಚಿಟ್ಟೆ ಹೆಜ್ಜೆ ಜಾಡು ’ ಅಂತ ಸರಿಯಾಗಿ ಹೇಳಿದರೆ ನಿಮಗೆ ಕಾದಂಬರಿಯ ಒಂದು ಪ್ರತಿಯನ್ನು ಬಹುಮಾನವಾಗಿ ಕಳಿಸಿಕೊಡಲಾಗುತ್ತದೆ !(ರೂ.80ರ ಚೆಕ್ ಅನ್ನು ಅಂಕಿತ ಪ್ರಕಾಶನದ ಹೆಸರಲ್ಲಿ ಪ್ರಕಾಶ್ ಕಂಬತ್ತಳ್ಳಿಯವರಿಗೆ ಕಳಿಸಿದರಾಯಿತು ಅಷ್ಟೇ!)

ತೋಚಿದ್ದೆಲ್ಲಾ ಬ್ಲಾಗಿಗೆ ಬರೆಯುತ್ತಾನೆ ಕ್ಷೌರವನ್ನೂ,ಮೊದಲ ರಾತ್ರಿಯನ್ನೂ ಕೂಡಾ ಬಿಡಲ್ಲ ಅನ್ನೋ ಗಂಭೀರ ಆರೋಪ ನನ್ನ ಮೇಲಿದೆ !ಆದರೆ ಇಂಥ ಕಾರ್ಯಕ್ರಮದ ಬಗ್ಗೆ ನಾನು ಬರೆಯೋದು ಸುನಾಥ್ ಜಿಯಂಥ ಪ್ರೀತಿಯ ಓದುಗರಿಗೆ .ದೂರದ ಊರಲ್ಲಿದ್ದು ನನ್ನಂಥವರ ಬ್ಲಾಗ್ ಬರಹದ ಮೂಲಕ ಕಾರ್ಯಕ್ರಮದ ಬಗ್ಗೆ ಕಿಂಚಿತ್ ವಿವರ ತಿಳಿದುಕೊಳ್ಳುವ ಆಸಕ್ತಿ ಇರುವವರಿಗೆ ಅಷ್ಟೇ.

ಇತ್ತೀಚೆಗೆ ಪುಸ್ತಕ ಬಿಡುಗಡೆಯ ಕಾರ್ಯಕ್ರಮಗಳಿಗೆ ಜನರಂತೂ ಕಿಕ್ಕಿರಿದು ತುಂಬಿರ್ತಾರೆ.ಕಾರ್ಯಕ್ರಮ ಮುಗಿದ ನಂತರ ಜನ ಮುಗಿಬಿದ್ದು ಪುಸ್ತಕ ತಗೊಳ್ಳೋದು ಅಷ್ಟೇ ನಿಜ !ಆದರೆ ಕಾರ್ಯಕ್ರಮ ಮುಗಿದ ನಂತರದ ದಿನಗಳಲ್ಲಿ ಪಾಪ ’ಪ್ರಕಾಶ’ಕರು ಪುಸ್ತಕಗಳನ್ನು ಮಾರಲು ಅದೆಷ್ಟು ಕಷ್ಟ ಪಡ್ತಾರೋ ಆ ದೇವರೇ ಬಲ್ಲ.ಆದರೆ ಇಂಥಾ ಸಮಾರಂಭ ನೋಡಿದ ಮೇಲೆ ,ಕನ್ನಡ ಪುಸ್ತಕಗಳಿಗೆ ಮಾರುಕಟ್ಟೆಯಿಲ್ಲ ಅನ್ನೋ ಅಪವಾದ ಕಿಂಚಿತ್ ಕಮ್ಮಿ ಆಗ್ತಾ ಇದೆ ಅನ್ನೋ ಅನಿಸಿಕೆ ನನ್ನದು .
ನಾನೂ ಅಷ್ಟೆ ಓದ್ತೀನೋ ಬಿಡ್ತೀನೋ ಪುಸ್ತಕ ತಗೊಳ್ಳೋದು ಬಿಟ್ಟಿಲ್ಲ.

ಇವತ್ತಿನ ಕಾರ್ಯಕ್ರಮದಲ್ಲಿ ನನಗೆ ಖುಷಿ ಕೊಟ್ಟಿದ್ದು ಜೋಗಿ ಗೆಳೆಯ ಕುಂಟಿನಿಯವರ ಮಾತುಗಳು.ಯಾಕೋ ನನಗೆ ಹಾಸ್ಯ ಪ್ರಜ್ಞೆಯುಳ್ಳವರ ಮಾತುಗಳನ್ನು ಕೇಳೋದು ತುಂಬಾ ಖುಷಿ ಕೊಡುತ್ತೆ.ಮಂಗಳೂರಿನ ಟ್ರೇಡ್ ಮಾರ್ಕ್ ಆದ ಹಾಸ್ಯ ಪ್ರಜ್ಞೆಯನ್ನು ತಮ್ಮ ಮಾತಿನುದ್ದಕ್ಕೂ ಕುಂಟಿನಿಯವರು ತೋರಿಸಿದರು.ಈ ಮೂಲಕ ಅವರೇ ಹೇಳುವಂತೆ ಜೋಗಿಯ ಮಾನ ಹರಾಜಿಗೆ ಹಾಕಿದರು !

ಜೋಗಿಯ ಬಾಲ್ಯದ ಗೆಳೆಯ ಕುಂಟಿನಿ ಸಹಜವಾಗಿಯೇ ಕೆಲವು ’ಮಂಗಳೂರಿನ ಭಾಗದ ರಹಸ್ಯ ರಾತ್ರಿ’ಯ ಕಥೆಗಳನ್ನು ಬಹಿರಂಗಗೊಳಿಸಿದರು.ಜೋಗಿಯ ತುಂಟತನ ,ಅವರ ಅನ್ಯೋನ್ಯ ಸ್ನೇಹ,ಬಾಲ್ಯದ ನೆನಪುಗಳು ಸರಾಗವಾಗಿ ಹರಿದು ಬಂದವು ಕುಂಟಿನಿಯವರ ಮಾತಿನಲ್ಲಿ.

ಅವರು ಬಯಲುಗೊಳಿಸಿದ ರಹಸ್ಯಗಳಲ್ಲಿ ನನಗೆ ತುಂಬಾ ಖುಶಿ ಕೊಟ್ಟಿದ್ದು ಜೋಗಿಯವ ಪ್ರೇಮಾಂಕುರದ ರಹಸ್ಯ!ಕಾಲೇಜಿನ ಸಮಯದಲ್ಲಿ ಯಾವುದೋ ಒಂದು ಪಠ್ಯವಾಗಿದ್ದ ಇಂಗ್ಲೀಷ್ ಕಾದಂಬರಿ ಗೆಳತಿ ಜ್ಯೋತಿಯವರಿಗೆ ಅರ್ಥವಾಗಿಲ್ಲ ಅನ್ನೋ ಕಾರಣಕ್ಕೆ ಜೋಗಿಯವರು ಎರಡೇ ದಿನದಲ್ಲಿ ಅದನ್ನು ಕನ್ನಡಕ್ಕೆ ಅನುವಾದ ಮಾಡಿದ್ದೇ ಗಿರೀಶ್ ರಾವ್ ಜೋಗಿ ಆಗೋದಕ್ಕೆ ಮೊದಲ ಕಾರಣ ಅನ್ನೋ ರಹಸ್ಯವನ್ನು ಕುಂಟಿನಿಯವರು ಬಯಲು ಮಾಡಿದರು.ಜೋಗಿಯವರ ಬರವಣಿಗೆಯ ದೈತ್ಯ ಶಕ್ತಿಯನ್ನು ನಾವು ಇದನ್ನು ಕೇಳಿಯೇ ಕಲ್ಪಿಸಬಹುದು.

ಆದರೆ ಪಾಪ ಕುಂಟಿನಿಯವರಿಗೆ ಬೆಂಗಳೂರಿನ ಯಾವನೋ ಆಸಾಮಿ ಸರಿಯಾಗಿ ದ್ರೋಹ ಬಗೆದಿರೋದಂತೂ ನಿಜ .ಅವರ ಮಾತುಗಳಲ್ಲಿ ಬೆಂಗಳೂರಿನ ಜನರ ಆಶಾಢಭೂತಿತನದ ಬಗ್ಗೆ ಅಸಮಧಾನ ಪದೇ ಪದೇ ಕಂಡು ಬರುತ್ತಿತ್ತು.ಆದರೆ ಜೋಗಿ ಹೇಳಿದ ಹಾಗೆ ’ಮಗಳನ್ನು ಗಂಡನ ಮನೆಗೆ ಕಳಿಸಿಕೊಟ್ಟಂಥ ಪರಿಸ್ಥಿಯನ್ನು ಬಹುಷ ಕುಂಟಿನಿಯವರು ಜೋಗಿಯವರನ್ನು ಬೆಂಗಳೂರಿಗೆ ಕಳಿಸಿಕೊಟ್ಟಾಗ ಅನುಭವಿಸಿರಬೇಕು .ಅದಕ್ಕೇ ಆ ರೀತಿಯ ಅಸಮಾಧಾನ ಕುಂಟಿನಿಯವರಿಗೆ.

ಮತ್ತೊಂದು ಮಜವಾದ ಘಟನೆ , ಪೇಜಾವರ ಮಠದವರು ಆಯೋಜಿಸಿದ ಪ್ರಬಂಧ ಸ್ಪರ್ಧೆಯದ್ದು ! ’ಸಮಾಜ ನಿರ್ಮಾಣದಲ್ಲಿ ಯುವಜನರ ಪಾತ್ರ’ ಅನ್ನೋ ವಿಷಯದ ಮೇಲೆ ಪ್ರಬಂಧ ಸ್ಪರ್ಧೆಗೆ ಜೋಗಿಯವರು ತಮ್ಮ ಪ್ರಬಂಧವನ್ನು ಕಳಿಸಿದ್ದರಂತೆ.ಒಂಭತ್ತನೇ ತರಗತಿಯಲ್ಲಿದ್ದ ಜೋಗಿ ಆಗ ನಲವತ್ತು ಪುಟಗಳ ಪ್ರಬಂಧ ಬರೆದಿದ್ದರಂತೆ !ಅದೂ ಪ್ರಬಂಧದ ನಡು ನಡುವೆ ಜರ್ಮನ್ ದೇಶದ ಮನಶಾಸ್ತ್ರಜ್ಞ ಈ ರೀತಿ ಬರೆದಿದ್ದಾರೆ ,ಚೈನಾದ ವಿಜ್ಞಾನಿ ಟಿಂಗ್-ಲಿ ಅನ್ನೋರು ಈ ಬಗ್ಗೆ ಈ ರೀತಿ ಬರೆದಿದ್ದಾರೆ ಅನ್ನೋ ಸುಳ್ಳು ಸುಳ್ಳೂ ವ್ಯಾಖ್ಯಾನಗಳಿಂದಲೇ ಪ್ರಬಂಧದ ತೂಕ ಹೆಚ್ಚಿ ಅದು ಪ್ರಥಮ ಬಹುಮಾನ ಪಡೆದಿದ್ದು ,ಜೋಗಿ ಹಾಗೂ ಕುಂಟಿನಿ ಆ ಬಹುಮಾನವನ್ನು ಪಡೆಯಲು ಉಡುಪಿಗೆ ಹೋಗಿದ್ದು ,ಬಹುಮಾನದ ಹಣದಲ್ಲಿ ಉಷಾ ಹೋಟೇಲಿನಲ್ಲಿ ಒಂದೊಂದು ಬಿಯರ್ ಹೊಡೆದಿದ್ದು ಹೀಗೆ ರಸವತ್ತಾದ ಅನುಭವಗಳನ್ನು ಹಂಚಿಕೊಂಡರು ಕುಂಟಿನಿ.

ಜಿ. ಎನ್ ಮೋಹನ್ ರವರು ರಿಯಾಲಿಟಿ ಶೋಗಳ ಮನಸ್ಥಿಯಲ್ಲಿ ಬದುಕುತ್ತಿರುವ ಜನರ ಬದುಕಿನಲ್ಲಿ ಸಾಹಿತ್ಯಿಕ ಔಚಿತ್ಯದ ಬಗ್ಗೆ ಮಾತಾಡಿದರು.ಯಾವಾಗಲೂ ಹಾಸ್ಯಮಯವಾಗಿ ಮಾತಾಡುವ ಮೋಹನ್ ರವರು ಈ ರಿಯಾಲಿಟಿ ಮನಸ್ಥಿತಿಯಿಂದ ನಿಜಕ್ಕೂ ತಲ್ಲಣಗೊಂಡಿದ್ದ ಹಾಗೆ ಕಾಣಿಸಿತು.

ನಾಗತಿಹಳ್ಳಿಯವರು ಅಲ್ಲೇ ಪುಸ್ತಕದ ಕಿರು ವಿಮರ್ಶೆಯನ್ನೂ ಮಾಡಿದ್ರು .ಪುಸ್ತಕದ ಬಗ್ಗೆ ಸೊಗಸಾಗಿ ಮಾತಾಡಿದ ನಾಗತಿಹಳ್ಳಿ ಅವರ ಹೊಸ ಚಿತ್ರಕ್ಕೆ ’ಒಲವೇ ಜೀವನ ಲೆಕ್ಕಾಚಾರ ’ ಅನ್ನೋ ಹೆಸರಿಟ್ಟ ಜೋಗಿಗೆ ಕೃತಜ್ಞತೆ ಸಲ್ಲಿಸಿದರು.ನಾಗತಿಹಳ್ಳಿಯವರ ವಿಮರ್ಶೆ ನಾನಿಲ್ಲಿ ಬರೆದರೆ ಅದು ಬೇರೊಂದು ಅರ್ಥ ನೀಡುವ ಅಪಾಯವಿರೋದ್ರಿಂದ ಬರೀತಾ ಇಲ್ಲ ಕ್ಷಮಿಸಿ.

ಹಂಸಲೇಖಾ ರವರೂ ಪುಸ್ತಕದ ಬಗ್ಗೆ ,ಜೋಗಿಯ ಬಗ್ಗೆ ನಾಲ್ಕು ಮೆಚ್ಚುಗೆಯ ಮಾತನ್ನಾಡಿದರು.ಅವರು ತುರ್ತಾಗಿ ಬೇರೊಂದು ಕಾರ್ಯಕ್ರಮಕ್ಕೆ ಭಾಗವಹಿಸಲು ಇದ್ದರಿಂದ ಚಿಕ್ಕದಾಗಿ ಚೊಕ್ಕದಾಗಿ ಮಾತಾಡಿ ಜೋಗಿಗೆ ಶುಭ ಕೋರಿ ಹೊರ‍ಟರು ಅವರು.

ಕೊನೆಯದಾಗಿ ಮಾತಾಡಿದ ಜೋಗಿ ಗೆಳೆಯ ಕುಂಟಿನಿಯ ಬಗ್ಗೆ ಮೆಚ್ಚುಗೆಯ ಮಾತಾಡಿದರು.ಗೆಳೆಯ ಆತಂಕ ಪಟ್ಟಷ್ಟು ಬೆಂಗಳೂರೇನೂ ತಮ್ಮನ್ನು ಬದಲಿಸಿಲ್ಲ.ತಾನು ಬೆಂಗಳೂರಿನಲ್ಲಿ ಅತ್ಯಂತ ನೆಮ್ಮದಿಯಿಂದಿದ್ದೇನೆ ಅನ್ನೋ ಮಾತನ್ನೂ ಹೇಳಿದರು ಜೋಗಿ.

ಜೋಗಿಯವರ ಬಗ್ಗೆ ಮತ್ತಷ್ಟು ಓದಬೇಕಾದಲ್ಲಿ ಸಿಂಧು ಭಟ್ ರವರ ಅಮೃತಸಿಂಧು ನೋಡಿ.ಅವರು ಜೋಗಿಯ ಕೃತಿಗಳ ಬಗ್ಗೆ ಥೀಸೀಸ್ ಬರೀತಾ ಇದ್ದಾರೆ.ಅವರಿಗೆ ಆಲ್ ದಿ ಬೆಸ್ಟ್ !

7 comments:

ಸಿಂಧು ಭಟ್. said...

ಜೋಗಿಯವರ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಕುರಿತ ಹಾಗೆ ನಿಮ್ಮ ಬರಹ ಚೆನ್ನಾಗಿತ್ತು.

PARAANJAPE K.N. said...

ಕಾರ್ಯಕ್ರಮದಲ್ಲಿ ಕ೦ಬತ್ತಳ್ಳಿ ಯವರೇ ಮೊದಲು ಒ೦ದೆರಡು ಬಾರಿ ಪುಸ್ತಕದ ಹೆಸರು ಹೇಳುವಾಗ ತಡವರಿಸಿದ್ದರು. ಕಾರ್ಯಕ್ರಮದ ಬಗ್ಗೆ ನಿಮ್ಮ ಎ೦ದಿನ ಸರ ಶೈಲಿಯ ಆಪ್ತ ಬರಹ ಇಷ್ಟವಾಯಿತು.

PARAANJAPE K.N. said...

ಸ೦ದೀಪ,
"ಸರಸ ಶೈಲಿ" ಎ೦ದು ಓದಿಕೊಳ್ಳಿ,

sunaath said...

ಸಂದೀಪ,
ಬೆಂಗಳೂರಿನ ಸಾಹಿತ್ಯಕ ಚಟುವಟಿಕೆಗಳನ್ನು ಸರಸವಾಗಿ ವರ್ಣಿಸಿದ್ದೀರಿ. ಧನ್ಯವಾದಗಳು.
‘ಚಿಟ್ಟೆ ಹೆಜ್ಜೆ ಜಾಡು’ ಅನ್ನೋದನ್ನ ಸರಿಯಾಗಿ ಅನ್ನಲು ನಾನು ಮೊದಲ ಪ್ರಯತ್ನದಲ್ಲೇ ಸೋತು ಬಿಟ್ಟೆ. ಇನ್ನು ಪುಸ್ತಕದ ಅಂಗಡಿಗಳಲ್ಲಿ ಕೇಳುವಾಗ, ಒಂದು slipನಲ್ಲಿ ಬರೆದುಕೊಂಡು ಹೋಗಿ ತೋರಿಸೋದು ಒಳ್ಳೇದು ಅಂತ ಅನ್ನಿಸ್ತದೆ.

guruve said...

ಕಾರ್ಯಕ್ರಮದ ವಿವರ ಚೆನ್ನಾಗಿ ಮೂಡಿ ಬಂದಿದೆ.. ಪುಸ್ತಕ ಓದಿ, ಪುಸ್ತಕದ ಬಗ್ಗೆಯೂ ಆದೊಷ್ಟು ಬೇಗ ಬರೆದುಬಿಡಿ..

ಬೆಂಗಳೂರು ರಘು said...

Sandeep,
I had the privilage of meeting Mr.Girish Hatwar and Prof.Baraguru Ramachandrappa at Ankita and pleasure was all mine. I purchased his Rayabhagada Rahasya Raatri, it was a smooth reading. Good article from your side as always.
Thanks and Regards
Raghu

Anonymous said...

naanoo program ge hogirlilla.. neevu ishtu chennagi kaamentri baredre inmele naanu pgm ge hogo kashtaane tagollolla