Sunday, August 30, 2009

ರೇಡಿಯೋ ಮೋಡಿ..

ಬೆಂಗಳೂರಿಗೆ ಬಂದ ಹೊಸದರಲ್ಲಿ ನಾನು ತೆಗೆದುಕೊಂಡ ಮೊದಲ ವಸ್ತು ಅಂದ್ರೆ FM Radio.ಮೈಸೂರು ಬ್ಯಾಂಕ್ ಸಿಗ್ನಲ್ ನಲ್ಲಿ ಗೋಡೆಗೆ ನೇತು ಹಾಕಿರುತ್ತಿದ್ದ ಉದ್ಯೋಗ ಜಾಹೀರಾತುಗಳನ್ನು ನೋಡುತ್ತಾ ಇರ್ಬೇಕಾದ್ರೆ ಅಲ್ಲೇ ಒಬ್ಬ ರೇಡಿಯೋ ಮಾರ್ತಾ ಇದ್ದ.ಚಿಕ್ಕದಾಗಿ ಪೆನ್ ಟಾರ್ಚ್ ಥರ ಇದ್ದ ರೇಡಿಯೋ ಇಯರ್ ಫೋನ್ ನ ಅವನು ನನ್ನ ಕಿವಿಗೆ ಬಲವಂತವಾಗಿ ತುರುಕಿರದೇ ಇದ್ದರೆ ಬಹುಷ ನಾನು ಆ ದಿನ ಅದನ್ನು ತಗೊಳ್ತಾ ಇರ್ಲಿಲ್ಲ.ನನಗೆ ಎಫ್.ಎಮ್ ರೇಡಿಯೋ ಸಿಗ್ನಲ್ ಕ್ವಾಲಿಟಿ ಅಷ್ಟೊಂದು ಚೆನ್ನಾಗಿರುತ್ತೆ ಅಂತ ಅದೇ ಮೊದಲ ಸಲ ಗೊತ್ತಾಗಿದ್ದು.ಊರಲ್ಲಿದ್ದಾಗ ಮನೆಯಲ್ಲಿ ಟು ಇನ್ ಒನ್ ಟೇಪ್ ರೆಕಾರ್ಡರ್ ಇದ್ದರೂ ಅಷ್ಟಾಗಿ ರೇಡಿಯೋ ಕೇಳ್ತಾ ಇರ್ಲಿಲ್ಲ.ಅದರಲ್ಲೂ ರೇಡಿಯೋ ಅನ್ನು ಎಫ್.ಎಮ್ ಮೋಡ್ ಗೆ ಹಾಕಿದಾಗಲಂತೂ ಬರೀ ಪುಸ್ ಅಂತ ಗಾಳಿಯ ಶಬ್ದವಷ್ಟೇ ಕೇಳಿ ಬರ್ತಾ ಇತ್ತು. ಆಮೇಲೆ ಒಂದು ದಿನ ಯಾರೋ ಹೇಳಿದ್ರು ಎಫ್.ಎಮ್ ಟ್ರಾನ್ಸ್ಮಿಶನ್ ಮಂಗಳೂರಿನಲ್ಲಿಲ್ಲ ಅದಿಕ್ಕೇ ಏನೂ ಕೇಳ್ಸಲ್ಲ ಅಂತ!

ಮೈಸೂರು ಬ್ಯಾಂಕ್ ಸಿಗ್ನಲ್ ನ ಆ ವ್ಯಾಪಾರಿ ನೂರು ರೂ ಕೇಳಿದ್ದ ಆ ರೇಡಿಯೋ ಗೆ.ಆದ್ರೆ ಬೆಂಗಳೂರಿನಲ್ಲಿ ಯಾವ ವಸ್ತುವನ್ನೂ ಚೌಕಾಶಿ ಮಾಡದೇ ತಗೋಬೇಡ ಅನ್ನೋ ಹಿತವಚನ ಬಹಳಷ್ಟು ಜನ ನೀಡಿದ್ದರಿಂದ ಅವನ ಬಳಿ ’ಬೆಲೆ ಕಡಿಮೆ ಮಾಡು’ ಅಂತ ವಾದಕ್ಕೆ ನಿಂತಿದ್ದೆ.ಕೊನೆಗೆ ಐವತ್ತು ರೂಗೆ ಡೀಲ್ ಕುದುರಿಸಿ ಅದಕ್ಕೆ ಚೈನಾ ಸೆಲ್ ಹಾಕಿ ಹಾಡು ಕೇಳಿದಾಗಲಂತೂ ಸಕ್ಕತ್ ಖುಷಿಯಾಗಿತ್ತು.

ಅಂದಿನಿಂದ ರೇಡಿಯೋ ಜೊತೆ ಲವ್ ಶುರು ಆಯ್ತು.

ಆಗ (೨೦೦೨) ಇದ್ದಿದ್ದೇ ಎರಡು ಎಫ್.ಎಂ ಸ್ಟೇಶನ್ .ಒಂದು ರೇಡಿಯೋ ಸಿಟಿ ಇನ್ನೊಂದು ಎಫ್.ಎಮ್ ರೇನ್ಬೋ.ಎಫ್.ಎಮ್ ರೇನ್ಬೋ ದ RJ ಗಳು ಹಳೇ ಶೈಲಿಯಲ್ಲೇ ಮಾತಾಡ್ತಾ ಇದ್ದಿದ್ದರಿಂದ ಅಷ್ಟೊಂದು ಇಷ್ಟವಾಗಿರಲಿಲ್ಲ.ಬದಲಾಗಿ ಚಟಪಟನೆ ಮಾತಾಡೋ ರೇಡಿಯೋ ಸಿಟಿ ತುಂಬಾನೇ ಇಷ್ಟ ಆಗಿತ್ತು.ಅದರಲ್ಲಿ ಬರೋ ಜಾಹೀರಾತುಗಳೂ ತುಂಬಾ ವಿಭಿನ್ನವಾಗಿದ್ದರಿಂದ ಸಂಪೂರ್ಣವಾಗಿ ಮನಸೋತು ಹೋಗಿದ್ದೆ ರೇಡಿಯೋ ಸಿಟಿಗೆ.ರಘು ದೀಕ್ಷಿತ್ ರ ಸ್ಪೈಸ್ ಟೆಲಿಕಾಮ್ ನ ’ಲೈಫಿನಲ್ಲಿ ಆಪರ್ಚುನಿಟಿ’ ಮುಂತಾದ ಜಾಹಿರಾತುಗಳು ಕೇಳಿ ರೇಡಿಯೋದಲ್ಲಿ ಕೂಡ ಇಷ್ಟೊಂದು ಕ್ರಿಯೇಟಿವಿಟಿ ಬಳಸಬಹುದು ಅನ್ನೋದು ಗೊತ್ತಾಗಿ ಬೆರಗಾಗಿತ್ತು.

ನನಗೆ ಇಷ್ಟವಾಗ್ತಾ ಇದ್ದಿದ್ದು ಚೈತನ್ಯಾ ಹೆಗ್ಡೆಯ ’ಚೌ ಚೌ ಬಾತ್’ ಕಾರ್ಯಕ್ರಮ.ಭಾನುವಾರ ಹನ್ನೊಂದು ಘಂಟೆಗೆ ಮುಂಚೆ ಯಾವತ್ತೂ ಏಳದ ನಾನು ಅವನ ಧ್ವನಿ ಕೇಳಲೆಂದೇ ಬೇಗ ಏಳ್ತಾ ಇದ್ದೆ.(ಕಿವಿಗೆ ರೇಡಿಯೋ ಇಯರ್ ಫೋನ್ ಸಿಕ್ಕಿಸಿ ಮತ್ತೆ ಬಿದ್ದುಕೋತಾ ಇದ್ದೆ ಆ ವಿಷಯ ಬೇರೆ!).ಒಂಥರಾ ಮಾಂತ್ರಿಕ ಶಕ್ತಿ ಇತ್ತು ಚೈತನ್ಯಾ ಹೆಗ್ಡೆಯ ಮಾತಿಗೆ.ಗಡುಸಾದರೂ ಮಾತಿನ ಮಧ್ಯೆ ಚೆಂದನೆಯ ನಗು, ಸಕ್ಕತ್ ಹಾಸ್ಯ ಪ್ರಜ್ಜ್ಞೆ,ಕನ್ನಡ ಇಂಗ್ಲೀಷ್ ಎರಡೂ ಮಿಕ್ಸ್ ಮಾಡಿ ಮಾತಾಡೋ ಅವನ ಭಾಷೆ ತುಂಬಾನೇ ಇಷ್ಟ ಆಗಿತ್ತು.ರೇಡಿಯೋದಲ್ಲಿ ಬರೀ ಧ್ವನಿ ಮಾತ್ರ ಕೇಳಿಸೋದ್ರಿಂದ ಚೈತನ್ಯಾ ಹೆಗ್ಡೆ ಅನಿಲ್ ಕುಂಬ್ಳೆ ಥರ ದಪ್ಪ ಮೀಸೆ ಇಟ್ಕೊಂಡಿರ್ತಾನೆ,ಹೀಗಿರ್ತಾನೆ ಹಾಗಿರ್ತಾನೆ ಅಂತೆಲ್ಲ ಮನಸಲ್ಲೇ ಕಲ್ಪಿಸಿಕೊಂಡಿದ್ದೆ.ಚೈತನ್ಯಾ ಹೆಗ್ಡೆ ರೇಡಿಯೋ ಸಿಟಿ ಬಿಟ್ಟು ಹೋದ ಮೇಲಂತೂ ರೇಡಿಯೋ ಕೇಳೋದೇ ಬಿಟ್ಟಿದ್ದೆ ನಾನು.

ಮತ್ತೆ ರೇಡಿಯೋ ಕೇಳೋಕೆ ಶುರು ಮಾಡಿದಾಗ ವಾಸಂತಿ ಇಷ್ಟವಾಗತೊಡಗಿದಳು.ತುಂಬಾ ಸ್ಪಷ್ಟವಾದ ಧ್ವನಿ,ಎನರ್ಜೆಟಿಕ್ ಆಗಿ ಮಾತಾಡೋ ವಿಭಿನ್ನ ಶೈಲಿ ಇಷ್ಟವಾಗಿತ್ತು.ಯಥಾಪ್ರಕಾರ ವಾಸಂತಿ ರೇಡಿಯೋ ಸಿಟಿ ಬಿಟ್ಟಾಗ ಮತ್ತೆ ರೇಡಿಯೋ ಕೇಳೋದು ಬಿಟ್ಟು ಬಿಟ್ಟೆ.

ತೀರಾ ಈಚೆಗೆ ಮತ್ತೆ ರೇಡಿಯೊ ಕೇಳೋಕೆ ಶುರು ಮಾಡಿದ ಮೇಲೆ ಬಿಗ್ ಎಫ್ ನ ’ದೀಪು -ನಾನು ನಿಮ್ಮ ಟೈಪು ’ತುಂಬಾ ಇಷ್ಟವಾಗಿದ್ದ.ಸಕ್ಕತ್ ತರಲೆ ಮಾಡೋ ಅವನು ಶೋ ನಲ್ಲಿ ಕಾಂಟೆಸ್ಟ್ ಕೂಡಾ ಇಡ್ತಾ ಇದ್ದ.ಒಂದು ದಿನ ’ಯಾವುದಾದರೂ ತರಕಾರಿ ಇಟ್ಕೊಂಡು ಯವುದಾದರೂ ಹುಡುಗೀನ ಪ್ರಪೋಸ್ ಮಾಡೋದಾದ್ರೆ ಹೇಗೆ ಪ್ರಪೋಸ್ ಮಾಡ್ತೀರಾ? ’ ಅಂತ ಕೇಳಿದ್ದ.ಅದಕ್ಕೆ ನಾನು ಬದನೆಕಾಯಿ ಇಟ್ಕೊಂಡು ಉಪೇಂದ್ರ ಶೈಲಿಯಲ್ಲಿ ಪ್ರಪೋಸ್ ಮಾಡ್ತೀನಿ ಅಂತ ದೊಡ್ಡ SMS ಕಂಪೋಸ್ ಮಾಡಿ ಕಳಿಸಿದ್ದೆ.

ಹೀಗಿತ್ತು ಆ SMS :- " ಚಾಂದಿನಿ ನೋಡು ಈ ಪ್ರೀತಿ ಪ್ರೇಮ ಎಲ್ಲಾ ಪುಸ್ತಕದ ಬದನೆಕಾಯಿ ಅಂತ ಯಾರೋ ತಲೆ ಕೆಟ್ಟೋನು ಹೇಳಿದ್ದಾನೆ.ಅವನ ಮಾತು ಕೇಳ್ಬೇಡ ನೀನು.ಆ ರೀತಿ ಹೇಳೋರೆಲ್ಲಾ ’ಹೇಳೋದು ಶಾಸ್ತ್ರ ತಿನ್ನೋದು ಬದನೆಕಾಯಿ’ ಅನ್ನೋ ರೀತಿಯ ಜನ.ನೀನು ಚೆನ್ನಾಗಿರ್ಬೇಕು ಆಗ್ಲೇ ನಾನು ನಿನ್ನನ್ನು ಪ್ರೀತಿಸೋಕಾಗೊದು.ಮನೆಗೆ ಹೋಗಿ ಈ ಬದನೆಕಾಯಿ ಸಾಂಬಾರ್ ಮಾಡಿ ಊಟ ಮಾಡು. ಚಾಂದಿನಿ ನೀನು ಚೆನ್ನಾಗಿರ್ಬೆಕು,ನೀನು ಚೆನ್ನಾಗಿದ್ರೇನೇ ನಾನೂ ಚೆನ್ನಾಗಿರೋದು " ಅಂತ ಉಪೇಂದ್ರನಿಗೇ ಡೋಸ್ ಇಟ್ಟು ಬರೆದಿದ್ದೆ.

ಯಾಕೋ ದೀಪು ಗೆ ಈ ಉತ್ತರ ಸಕ್ಕತ್ ಇಷ್ಟ ಆಗಿ ನನಗೆ ಕಾಲ್ ಮಾಡಿ ನನ್ನನ್ನು On Air ಹಾಕಿಬಿಟ್ಟ.ಯಾಕೋ ಇಡೀ ಬೆಂಗಳೂರು ಕೇಳಿಸ್ಕೊಳ್ಳುತ್ತೆ ಅನ್ನೋದು ಗೊತ್ತಾಗಿ ತುಂಬಾ ನರ್ವಸ್ ಆಗಿ ಸರಿಯಾಗಿ ಮಾತಾಡೋಕೇ ಆಗಿರ್ಲಿಲ್ಲ ನಂಗೆ.ಆದರೆ ಆ ದಿನ ದೀಪು ನನಗೆ ಸಾವರಿಯಾ ಸಿ.ಡಿ ಬಹುಮಾನವಾಗಿ ಕೊಟ್ಟಿದ್ದ .
ಇನ್ನೊಂದು ದಿನ ದೀಪು ಗೋಲ್ ಅನ್ನೊ ಶಬ್ದಕ್ಕೆ ಕನ್ನಡ ಶಬ್ದ ನೀಡಿ ಅಂತ ಕೇಳಿದ್ದ.ಎಲ್ಲರೂ ಧ್ಯೇಯ ,ಗುರಿ ಅಂತೆಲ್ಲಾ ಮೆಸೇಜ್ ಮಾಡಿದ್ರು.ಆದ್ರೆ ಅವನು ಕೇಳಿದ್ದು ಫುಟ್ಬಾಲ್ ಗೋಲ್ ಬಗ್ಗೆ!
ನಾನು ಅದಕ್ಕೆ ’ಚೆಂಡ್ಜಾಲ ಪ್ರವೇಶ’ ಅಂತ ಉತ್ತರ ಕಳಿಸಿದ್ದಕ್ಕೆ ’ಗೋಲ್’ ಸಿನೆಮಾದ ಕಪಲ್ ಪಾಸ್ ಕೊಟ್ಟಿದ್ದ.ನಾನು ಕಪಲ್ ಆಗಿರದೇ ಇದ್ದಿದ್ರಿಂದ(ನಿಜ ಹೇಳ್ಬೇಕೂಂದ್ರೆ ಸಿನೆಮಾ ಪಿ.ವಿ.ಆರ್ ನಲ್ಲಿ ರಾತ್ರಿ ಏಳಕ್ಕೆ ಇದ್ದದ್ದರಿಂದ!)ಸಿನೆಮಾಗೆ ಹೋಗೋಕೆ ಆಗಿರ್ಲಿಲ್ಲ ನನಗೆ.

ದೀಪು ಬಿಗ್ ಎಫ್ ಎಮ್ ಬಿಟ್ಟ ಮೇಲೆ ನಾನು ಮತ್ತೆ ರೇಡಿಯೋ ಕೇಳೋದು ಬಿಟ್ಟು ಬಿಟ್ಟೆ.

11 comments:

Pramod said...

ಬೆ೦ಗಳೂರಿಗೆ ಬ೦ದ ಹೊಸತಲ್ಲಿ ನಾನೂ ಹೊಸ ರೇಡಿಯೊ ತಗೊ೦ಡಿದ್ದೆ. ವಾಸ೦ತಿ ವಾಯ್ಸ್ ಸೂಪರ್..

Sushrutha Dodderi said...

ಹೇಯ್, ನಾನೂ ನನ್ನ ಮೊದಲ ಸ್ಯಾಲರಿಯಲ್ಲಿ ಕೊಂಡ ಮೊದಲ ವಸ್ತು ಆ ಪೆನ್-ಟಾರ್ಚ್ ಥರದ ಎಫ್ಫೆಮ್ಮು! ಆದ್ರೆ ನಾ ಅದಕ್ಕೆ ಬರೀ ಮೂವತ್ ರೂಪಾಯ್ ಕೊಟ್ಟಿದ್ದೆ. :D

ಚೈತನ್ಯ ಹೆಗ್ಡೆ, ವಾಸಂತಿ ಎಲ್ರನ್ನೂ ನೆನಪಿಸಿದ್ದಕ್ಕೆ ಥ್ಯಾಂಕ್ಸ್. ಅಂದಹಾಗೆ ನಾನೂ ಒಂದ್ಸಲ ಯಾವ್ದೋ ಪ್ರಶ್ನೆಗೆ ಉತ್ರ ಕೊಟ್ಟು ಏರ್ ಶೋಗೆ ಫ್ರೀ ಟಿಕೆಟ್ ಗೆದ್ದಿದ್ದೆ. ಅದ್ಯಾಕಾದ್ರೂ ಎಲ್ಲಾರೂ ಕಪಲ್ ಪಾಸೇ ಕೋಡ್ತಾರೇನೋ (ಎಷ್ಟ್ ಬೇಜಾರಾಗತ್ತೆ ನಮ್ ಬಗ್ಗೆ ನಮ್ಗೇ!), ನನ್ ಜೊತೆ ಬರ್ಲಿಕ್ಕೆ ಯಾವ್ ಹುಡ್ಗೀನೂ ಇರ್ಲಿಲ್ಲವಾದ್ರಿಂದ ಕೊನೆಗೆ ಒಬ್ಬ ಬಾಯ್ ಫ್ರೆಂಡ್ ಜೊತೆನೇ ಹೋಗ್ಬಂದೆ. :(

ಮತ್ತೆ ಈಗ ನಾನೂ ಎಫ್ಫೆಮ್ ಕೇಳಲ್ಲ. :x

ರೂpaश्री said...

ಚೈತನ್ಯ ಹೆಗ್ಡೆ, ವಾಸಂತಿ ಎಲ್ರನ್ನೂ ನೆನಪಿಸಿದ್ದಕ್ಕೆ ಥ್ಯಾಂಕ್ಸ್! ಲಿಂಗೋ ಲೀಲಾ ಮರೆತಿರಲ್ಲಾ...

sunaath said...

ನಾನು FM ಕೇಳಿಲ್ಲ. ನೀವು ಹೇಳೋದು ಕೇಳಿದ್ರೆ ಖುಶಿಯಾಗ್ತಿದೆ.

Shivanand said...

ತುಂಬಾ ಚೆನ್ನಾಗಿದೆ. ಚೈತನ್ಯ ಹೆಗಡೆ, ವಾಸಂತಿ ಎಲ್ಲಾ ಬಿಟ್ಟ ಮೇಲೆ ನಾನೂ ರೇಡಿಯೋ ಕೇಳೋದು ಕಡಿಮೆಯಾಗಿದೆ. ಈಗ ವಿನಾಯಕ ಜೋಶಿ ಧ್ವನಿ ಪರ್ವಾಗಿಲ್ಲ ಅನ್ನಿಸುತ್ತೆ. ಚೈತನ್ಯ ಹೆಗಡೆ ಈಗ ವರ್ಲ್ಡ್ ಸ್ಪೇಸ್ ನಲ್ಲಿ ಇದ್ದಾರಾ ?

ನೂರು ರುಪಾಯಿ ರೇಡಿಯೋನ ಚೌಕಾಸಿ ಮಾಡಿ ಐವತ್ತು ರುಪಾಯಿಗೆ ಕೊಂಡ್ರಾ ? ಮೆಚ್ಚಬೇಕು ನಿಮ್ಮ ಚಾಕಚಕ್ಯತೆಯನ್ನು. :-)

ಇನ್ನೂ ಆ ರೇಡಿಯೋ ಇದೆಯಾ ? ಇಲ್ಲಾ Mobile/Home theater ನಲ್ಲಿ FM ಕೇಳ್ತೀರಾ ?

umesh desai said...

ಸಂದೀಪ್ ಮೊದಲಬಾರಿ ನಿಮ್ಮ ಬ್ಲಾಗ್ ಗೆ ಬರ್ತಿರೋದು ರೇಡಿಯೋ ನಾನು ಕೇಳ್ತೀನಿ ಆದರೆ
ಮೀಠಿಯಾದೇನ್ ಮಾತ್ರ
ಬಿಡುವು ಇದ್ದಾಗ ನನ್ನ ಬ್ಲಾಗು ಬನ್ನಿರಿ...
usdesai.blogspot.com

Anonymous said...

yes. chaitanya hegde is with sparsha-world space.
Nice trip down the memory lane, dear Sandeep!!!

:-)

malathi S

ಅನಿಕೇತನ ಸುನಿಲ್ said...

Sandeep,
Baraha tumba khushi kottitu.....:-)
nanna duradrushtavo eno..nanu tagonda FM radiogalu begane haalagibittvu....:-(
Nanna geleyarada Rashmi mattu Swamy ibbroo seri nangondu moble phone na gift aagi kottidru...adralli FM irlilla..nanu hey mobilu irodu tandu kodro anta maryaade bittu keli FM iromobilanne kodiskonde hegide? :-)
Sunil.

Unknown said...

ಸಂದೀಪ್ ಸರ್,
ನೀವು ಅಕಾಸವಾಣಿ ರೈ ಹಾಗು ಶಕು೦ತಲ ಕಿಣಿ, ಇವರನ್ನು ಮರೆತದ್ದೆ ? ರೈ ಸರ್ ಅವರ ಸ್ವರವನ್ನು ನಾವು ಬಯಸಿದರು ಕೇಳಲು ಮ೦ಗಳೂರು ಆಕಾಶವಾಣಿ ಇ೦ದ ಸಾದ್ಯವಿಲ್ಲ . ಅವರು ಈಗ ಈ ಪ್ರಪ೦ಚದಲ್ಲೆ ಇಲ್ಲ .:-( :-(

ಧರಿತ್ರಿ said...

ಮೂರು ವರ್ಷಗಳ ಹಿಂದೆ ನನ್ನ ಮೊದಲ ಸಾಲರಿಯಲ್ಲಿ ನಾನೂ ಎಫ್ ಎಂ ತಕೊಂಡಿದ್ದೆ. ಆದರೆ ಟಿವಿ ಬಂದ ಮೇಲೆ ಅದು ಮೂಲೆ ಸೇರಿದೆ. ಒಳ್ಳೆ ಬರಹ

Prabhuraj Moogi said...

ಸರ್ ದೀಪು ಈಗ ಪ್ರದೀಪ ಅಂತ ರೇಡಿಯೋ ಸಿಟಿನಲ್ಲಿ ಮುಂಜಾನೆ ಶೊ ನಡೆಸ್ತಿರೋದು, ಬೆಸ್ಟ ಅರ್ ಜೆ... ಈಗಲೂ ಅದೇ ಲವಲವಿಕೆಯಿಂದ ಶೊ ನಡೆಸೋದು, ಕೇಳಿ ನೋಡಿ...
ರೇಡಿಯೊ ಸಿಟಿನಲ್ಲಿ ಆಗಿದ್ದ ಡೊರೈಸ್! ಮತ್ತೆ ಸುನೈನಾ ಲಾಲ್ ಕೂಡ ಚೆನ್ನಾಗಿದ್ರು, ರೇಡಿಯೋ ಒನ್‌ನ ಪೃಥ್ವಿ ಸ್ಮಿತಾ ಜೊಡಿ ಕೂಡ ಬಹಳ ಚೆನ್ನಾಗಿತ್ತು.