Wednesday, August 29, 2012

ಬೆಂಗಳೂರೆಂಬ ಮಾಯಾನಗರಿ!



ಮಾಯಾನಗರಿ ಬೆಂಗಳೂರು!

ಟಿ.ವಿ ಚ್ಯಾನಲ್ ನವರು ಆಗಾಗ್ಗೆ ಬೆಂಗಳೂರನ್ನು ಸಂಬೋಧಿಸೋದು ಹೀಗೆ! ಬಹುಶಃ ಎಲ್ಲಾ ನಗರಗಳೂ ಒಂದು ರೀತಿಯಲ್ಲಿ ಮಾಯಾನಗರಿಗಳೇ! ನಾನು ಚಿಕ್ಕವನಿದ್ದಾಗ ಬಹುತೇಕ ಜನರು ವಲಸೆ ಹೋಗುತ್ತಿದ್ದುದು ದೂರದ ಬೊಂಬಾಯಿಗೆ. ಅದೀಗ ಮುಂಬಯಿ ಆದರೂ ಮಂಗಳೂರಿನವರ ಬಾಯಲ್ಲಿ ಬೊಂಬಾಯೇ! ಬೊಂಬಾಯಿಯಿಂದ ಎರಡು ವರ್ಷಕ್ಕೊಮ್ಮೆ ಊರಿಗೆ ಬರುವವರ ಬಾಯಲ್ಲಿ ಮುಂಬಯಿಯ ರೊಚಕ ಕಥೆಗಳನ್ನು ಕೇಳಿದವರಿಗೆ ಅದು ನಿಜಕ್ಕೂ ಮಾಯಾನಗರಿಯೆ ಅನ್ನೋ ಭರವಸೆ ಮೂಡಿ ಹೋಗಿತ್ತು. ಆದರೆ ಕಾಲ ಕಳೆದಂತೆ ಮುಂಬಯಿಗೆ ವಲಸೆ ಹೋಗುವವರ ಸಂಖ್ಯೆ ಕಡಿಮೆ ಆಗಿ ಬೆಂಗಳೂರಿಗೆ ವಲಸೆ ಹೋಗೋವವರ ಸಂಖ್ಯೆ ಹೆಚ್ಚತೊಡಗಿತು. ಬಹುತೇಕ ಬೊಂಬಾಯಿ ಮಾದರಿಯ ಕಥೆಗಳೇ ಬೆಂಗಳೂರಿನ ಬಗ್ಗೆಯೂ ಕೇಳತೊಡಗಿತು. ಹೀಗೆ ಬೆಂಗಳೂರೂ ಟಾಪ್ ಟೆನ್ ಮಾಯಾನಗರಿಗಳ ಪಟ್ಟಿಗೆ ಸೇರಿ ಬಿಟ್ಟಿತು!

ಬೆಂಗಳೂರಿಗೆ ಎಂಟ್ರಿ ನೀಡುವ ಎಲ್ಲರಿಗೂ ಈ ಮಾಯಾನಗರಿ ತನ್ನ ಮಾಯೆ ತೋರಿಸಿಯೇ ಇರುವುದರಿಂದ ಬಹುಶಃ ಯಾರೂ ನನ್ನ ಮಾತನ್ನು ಅಲ್ಲಗಳೆಯಲಾರರೇನೋ. ಅದಲ್ಲದೇ ಊರಿನಿಂದ ಅಷ್ಟೇನೂ ದೂರವಿಲ್ಲದೇ ಇದ್ದುದರಿಂದ, ಊರಿಂದ ಸಾಕ್ಷಾತ್ ಬೆಂಗಳೂರಿನ ಮಾಯೆಯನ್ನು ಕಣ್ಣಾರೆ ನೋಡಲು ಬರುವವರೂ ಕಮ್ಮಿ ಇಲ್ಲ ಬಿಡಿ!

ಬೆಂಗಳೂರಿಗೆ ಕಾಲಿಡುವ ಎಲ್ಲರೂ ಮೊದಲು ಭೇಟಿ ನೀಡುವ, ನೀಡಲೇ ಬೇಕಾಗಿರುವ ಸ್ಥಳ ಮೆಜೆಸ್ಟಿಕ್. ಬೆಳ್ಳಂಬೆಳಿಗ್ಗೆ ಬಸ್ ನಿಂದ ಇಳಿದ ತಕ್ಷಣ ಮುತ್ತಿಕೊಳ್ಳುವ ಆಟೋ ಡ್ರೈವರ್ ಗಳೇ ಮೊದಲನೆ ಮಾಯೆ ತೋರಿಸುವವರು. ಮಂಗಳೂರಿನಿಂದ ಬರಲು ತಗುಲಿದಷ್ಟೇ ಕಾಸನ್ನು ಆಟೋದವರೂ ಕೇಳಿದಾಗ ಮತ್ತೆ ವಾಪಸ್ ಹೋಗೋದೇ ವಾಸಿ ಅಂತ ಬಹಳಷ್ಟು ಸಲ ಅನಿಸದೆ ಇಲ್ಲ! ಒಮ್ಮೆ ನನ್ನ ಸ್ನೇಹಿತನಿಗೆ ಮೆಜೆಸ್ಟಿಕ್ ನಿಂದ ರೈಲ್ವೆ ಸ್ಟೇಶನ್ ಗೆ ಹೊಗಬೇಕಾಗಿತ್ತು. ಮೆಜೆಸ್ಟಿಕ್ ಮುಂದೇನೇ ರೈಲ್ವೇ ಸ್ಟೇಶನ್ ಇರೋದು ಗೊತ್ತಿಲ್ಲದೇ ಇದ್ದರಿಂದ ಅವನು ಸಹಜವಾಗೇ ಆಟೋದವರೊಬ್ಬರನ್ನು ಕೇಳಿದಾಗ ಅವನು ಐವತ್ತು ರೂಪಾಯಿಗೆ ಒಪ್ಪಿದ್ದಾನೆ. ಇವನು ಹತ್ತಿದ ತಕ್ಷಣ ಎರಡೇ ಎರಡು ನಿಮಿಷದಲ್ಲಿ ರೈಲ್ವೇ ಸ್ಟೇಶನ್ ಮುಂದೆ ಇಳಿಸಿ ಐವತ್ತು ರೂಪಾಯಿ ಪೀಕಿದ್ದಾನೆ. ಆಟೋದವರು ಊರೆಲ್ಲಾ ಸುತ್ತಿಸಿ ಜಾಸ್ತಿ ದುಡ್ಡು ಲೂಟಿ ಮಾಡೋದು ಗೊತ್ತಿತ್ತು ಮಾರಾಯ. ನಿನ್ನ ಬೆಂಗಳೂರಿನ ಆಟೋದವರು ಇಷ್ಟು ಪ್ರಾಮಾಣಿಕರು ಅಂತ ಗೊತ್ತಿರಲಿಲ್ಲ ಅಂತ ಸರ್ಟಿಫಿಕೇಟ್ ಬೇರೆ ಕೊಟ್ಟು ಹೋಗಿದ್ದ ನನಗೆ ಆ ಸ್ನೇಹಿತ!

ನಾನು ಬೆಂಗಳೂರಿಗೆ ಬಂದು ಹತ್ತು ವರ್ಷವಾದರೂ ಬೆಂಗಳೂರು ಇನ್ನೂ ಒಂದು ಬೆರಗು. ಮೆಜೆಸ್ಟಿಕ್ ನ ಹೊಟೇಲ್ ನಲ್ಲಿ ಒಂದೆ ಸಲ ಐವತ್ತು ಮಾಸಾಲೆ ದೋಸೆ ತಂದು ಸುರಿಯೋದು, ವಿದ್ಯಾರ್ಥಿ ಭವನದಲ್ಲಿ ಒಂದೇ ಕೈಯಲ್ಲಿ ಹದಿನೈದು ಮಸಾಲೆದೋಸೆ ತಟ್ಟೆ ಬ್ಯಾಲೆನ್ಸ್ ಮಾಡೋದು, ಅವೆನ್ಯೂ ರೋಡಲ್ಲಿ ಪೇರಿಸಿಟ್ಟ ನೂರು ಪುಸ್ತಕಗಳ ಮಧ್ಯದಿಂದ ನಮಗೆ ಬೇಕಾದ ಒಂದು ಪುಸ್ತಕ ತೆಗೆದು ಕೊಡೋದು. ಅವೆನ್ಯೂ ರೋಡಲ್ಲಿ ಹೊಚ್ಚ ಹೊಸ ಕಾರೊಂದನ್ನು ಆ ಬದಿಯಿಂದ ಈ ಬದಿಗೆ ಎಲ್ಲಿಯೂ ತಗುಲಿಸದೆ ಡ್ರೈವ್ ಮಾಡಿಕೊಂಡು ಬರೋದು! ಎಲ್ಲವೂ ಬೆರಗಿನ ಸಂಗತಿಗಳೇ.

ಬೆಂಗಳೂರಿನ ಫುಟ್ಪಾತ್ ನಲ್ಲಿ ಯಾವುದಾದರೂ ವಸ್ತುವನ್ನು ಚೌಕಾಸಿ ಮಾಡಿ ತಗೊಂಡ್ರೆ ಆ ದಿನ ಅವರು ಬೆಂಗಳೂರಿನಲ್ಲಿ ಸೆಟ್ಲ್ ಆದರು ಅಂತ ಅರ್ಥ! ಸ್ಥಳದಲ್ಲಿಯೇ ಅವರಿಗೊಂದು ಸರ್ಟಿಫಿಕೇಟ್ ಬರೆದು ಕೊಡಬಹುದು! ನಾನೂ ಒಮ್ಮೆ ಇಂಥ ರಸ್ತೆ ಬದಿಯ ಅಂಗಡಿಯಲ್ಲಿ ಚೇತನ್ ಭಗತ್ ರ ಪುಸ್ತಕ ಒಂದನ್ನು ಕೊಂಡಿದ್ದೆ. ಅದೂ ಭರ್ಜರಿ ಚೌಕಾಸಿ ಮಾಡಿ. ಅವನು ಮೂನ್ನೂರು ರೂಪಾಯಿ ಹೇಳಿದ ಪುಸ್ತಕವನ್ನು ನಾನು ಬರೋಬ್ಬರಿ ಅರ್ಧ ಗಂಟೆ ಚೌಕಾಸಿ ಮಾಡಿ ನೂರೈವತ್ತಕ್ಕೆ ಕೊಂಡಿದ್ದೆ! ಆದರೆ ದುಖಃದ ಸಂಗತಿ ಏನೆಂದರೆ ಅದರ ಬೆಲೆ ತೊಂಬತ್ತು ರೂಪಾಯಿ ಆಗಿತ್ತೆಂದು ನನಗೆ ಎರಡು ವರ್ಷದ ಬಳಿಕ ಗೊತ್ತಾಗಿದ್ದು! ಅದೇ ಚೇತನ್ ಭಗತ್ ರ ಹೊಸ ಪುಸ್ತಕ ಕೊಳ್ಳಲು ಇಂಟರ್ನೆಟ್ ನಲ್ಲಿ ಹುಡುಕಿದಾಗ ಅವರ ಎಲ್ಲಾ ಪುಸ್ತಕಗಳಿಗೂ ತೊಂಬತ್ತು ರೂಪಾಯಿ ಇತ್ತೆಂದು ಗೊತ್ತಾಗಿದ್ದು ನನಗೆ! ಪೈರೇಟೆಡ್ ಪುಸ್ತಕ ಒಂದನ್ನು ಹೊಸ ಪುಸ್ತಕದ ಬೆಲೆಗಿಂತಲೂ ಹೆಚ್ಚಿನ ಬೆಲೆ ಕೊಟ್ಟು ಕೊಂಡ ಭೂಪ ನಾನೊಬ್ಬನೆ ಅಂತ ಹೇಳಿಕೊಳ್ಳಲು ನನಗೆ ಯಾವ ನಾಚಿಕೆಯೂ ಇಲ್ಲ ಬಿಡಿ! ನಾಚಿಕೆ ಪಡಲು ನಾನೇನು ಸದನದಲ್ಲಿ ಡಾಕ್ಯುಮೆಂಟರಿ ನೋಡಿಲ್ಲವಲ್ಲ!!

ಬೆಂಗಳೂರಿನ ನಿಜ ರುಚಿ ಸಿಗೋದು ಬಾಡಿಗೆಗೆ ಮನೆ ಹಿಡಿದಾಗ. ಮನೆ ಹುಡುಕುವವರು ಬ್ಯಾಚುಲರ್ ಆಗಿದ್ದರಂತೂ ಕೇಳೋದೇ ಬೇಡ. ಒಂದು ದಿನ ಮನೆಯಲ್ಲಿ ಟ್ರಯಲ್ ಗೋಸ್ಕರ ಇರೋದಕ್ಕೆ ಯಾರೂ ಬಿಡದೇ ಇರೋದ್ರಿಂದ ಆ ಮನೆಯಲ್ಲಿರೋ ಎಲ್ಲಾ ತೊಂದರೆಗಳೂ ನಿಮಗೆ ಮನೆ ಬದಲಾಯಿಸಿದ ಮೇಲೇಯೇ ತಿಳಿಯೋದು. ನೀವು ಮನೆ ನೋಡಲು ರಾತ್ರಿ ಹೋಗಿರ್ತೀರಾ ಹಾಗಾಗಿ ಟ್ಯೂಬ್ ಲೈಟ್ ಬೆಳಕಲ್ಲಿ ಮನೆ ಜಗಮಗ ಕಾಣಿಸುತ್ತಿರುತ್ತೆ. ಆದರೆ ಮನೆ ಬದಲಾಯಿಸಿ ಬಂದ ಮೇಲಷ್ಟೇ ನಿಮಗೆ ಗೊತ್ತಾಗೋದು, ಆ ಮನೆಯಲ್ಲಿ ಹಗಲು ಹೊತ್ತಲ್ಲೂ ನೀವು ಟ್ಯೂಬ್ ಲೈಟ್ ಹಾಕಿಯೇ ಇರಬೇಕಾಗುತ್ತೆ ಅಂತ! ಯಾಕಂದ್ರೆ ಕಿಟಕಿಗಳಿದ್ರೆ ತಾನೇ ಬೆಳಕು ಬರೋದು. ಕೆಲವು ಮನೆಗಳಿಗೆ ಕಿಟಕಿಗಳಿದ್ರೂ ಓಪನ್ ಮಾಡೋ ಹಾಗಿಲ್ಲ ಯಾಕಂದ್ರೆ ಓಪನ್ ಮಾಡಿದ್ರೆ ಇನ್ನೊಂದು ಮನೆಯ ಬೆಡ್ ರೂಮ್ ಕಾಣಿಸುತ್ತೆ. ಎರಡೂ ಮನೆಯ ಓನರ್ ಒಬ್ಬನೇ ಆದ್ದರಿಂದ ಒಂದೇ ಕಿಟಕಿ ಇಟ್ಟಿರ್ತಾನೆ. ಕೇಳಿದ್ರೆ 'ನನ್ ಮನೆ ಕಣ್ರಿ ನನ್ನಿಷ್ಟ' ಅಂತಾನೆ! ಶೌಚಾಲಯ ಅಂತೂ ಕೇಳೋದೇ ಬೇಡ. ಕೂತು ಮಾಡುವ ಕೆಲಸವನ್ನು ಕೂತೇ ಮಾಡಬೇಕು! ಅಕಸ್ಮಾತ್ ಎದ್ದು ನಿಂತರೆ ತಲೆ ಗೋಡೆಗೆ ಬಡಿಯುತ್ತೆ. ಮೆಟ್ಟಿಲ ಕೆಳಗೆ ಶೌಚಾಲಯ ಕಟ್ಟಿಸಿದ್ರೆ ಇನ್ನೇನ್ ಅಗುತ್ತೆ ಹೇಳಿ? ಬೆಂಗಳೂರಿನ ಜನರಿಗೆ ವೇಸ್ಟ್ ಮಾಡೋದು ಅಂದ್ರೆ ಸ್ವಲ್ಪಾನೂ ಆಗಲ್ಲ. ಅದಿಕ್ಕೇ ಒಂದಿಂಚೂ ಜಾಗ ವೇಸ್ಟ್ ಮಾಡದೆ ಮನೆ ಕಟ್ಟಿಸ್ತಾರೆ.

ಬೆಂಗಳೂರಿನಲ್ಲಿ ಖುಷಿ ಕೊಡುವ ಒಂದು ಸೌಲಭ್ಯ ಅಂದರೆ ಬಸ್ ಪಾಸ್. ಒಂದು ಸಾರಿ ಪಾಸ್ ಮಾಡಿಸಿಕೊಂಡರೆ ಸಾಕು, ಕಾಸು ಕೊಡೋ, ಚಿಲ್ಲರೆಗಾಗಿ ಕಾಯೋ ತೊಂದರೇನೆ ಇಲ್ಲ. ಕಂಡಕ್ಟರ್ ಟಿಕೇಟ್ ಕೇಳಿದ ತಕ್ಷಣ ಹೆಬ್ಬೆರಳನ್ನು ಮಡಚಿ ಅಂಗೈ ತೋರಿಸಿದ್ರೆ ಸಾಕು ಕಂಡಕ್ಟರ್ ಗೆ ಅರ್ಥವಾಗಿ ಬಿಡುತ್ತೆ ಪಾಸ್ ಅಂತ. ಅದಕ್ಕೂ ಮೀರಿ ಯಾರಾದ್ರೂ ಪಾಸ್ ತೋರಿಸಿ ಅಂದರೆ ಸಿನೆಮಾಗಳಲ್ಲಿ ಸಿ.ಬಿ.ಐ ಆಫೀಸರ್ ಗಳು ತಮ್ಮ ಕಾರ್ಡ್ ತೋರಿಸಿದ ಹಾಗೆ ತೆಗೆದು ತೋರಿಸಿದರೆ ಆಯ್ತು! ಈ ಪಾಸ್ ಗೆ ಅದರದ್ದೇ ಆದ ತೊಂದರೆಗಳೂ ಇವೆ. ಟಿಕೆಟ್ ತಗೊಳ್ಳುವಾಗ ಒಂದು ವೇಳೆ ಬಸ್ ಆ ಜಾಗಕ್ಕೆ ಹೋಗದೇ ಇದ್ದಲ್ಲಿ ಕಂಡಕ್ಟರ್ ಕೂಡಲೇ ನಿಮ್ಮನ್ನು ಇಳಿಸಿ ಬಿಡುತ್ತಾನೆ. ಆದರೆ ಪಾಸ್ ಇರೋರನ್ನು ಯಾರೂ ಎಲ್ಲಿಗೆ ಅಂತ ಕೇಳದೇ ಇರೋದ್ರಿಂದ ಅವರು ಎಲ್ಲೆಲ್ಲೋ ಹೋಗಿ ತಲುಪುವ ಸಾಧ್ಯತೆಗಳೇ ಹೆಚ್ಚು. ನಾನೂ ಬಹಳಷ್ಟು ಸಲ ಎಲ್ಲೆಲ್ಲೋ ತಲುಪಿದ್ದಿದೆ. ಮಂಗಳೂರಿನಲ್ಲಿದ್ದಾಗ ಈ ಸಮಸ್ಯೆ ಇರಲಿಲ್ಲ. ಎಡಕ್ಕೆ ಉಡುಪಿ ಬಲಕ್ಕೆ ಮಂಗಳೂರು. ಒಂದು ಸಲ ಮೇಯೊ ಹಾಲ್ ಬಳಿ ಮೆಜೆಸ್ಟಿಕ್ ಅನ್ನೋ ಬೋರ್ಡ್ ನೋಡಿ ಹತ್ತಿದ್ದೆ. ಹಲಸೂರು ಬಂದ ನಂತರವೇ ನನಗೆ ತಪ್ಪಿನ ಅರಿವಾಗಿದ್ದು. ಅದೂ ಅಲ್ಲದೇ ಎಲ್ಲದಕ್ಕೂ ಮೆಜೆಸ್ಟಿಕ್ಕೇ ಆರಂಭ ಮತ್ತು ಅಂತ್ಯ ಆಗಿದ್ದರಿಂದ ಏನೇ ಎಡವಟ್ಟಾದ್ರೂ ವಾಪಸ್ ಮೆಜೆಸ್ಟಿಕ್ ಗೆ ಬರಬೇಕಾಗಿತ್ತು. ಒಂದು ಸಲ ದೊಮ್ಮಲೂರಿನಿಂದ ಇಂದಿರಾನಗರಕ್ಕೆ ಬರಲು ಅದೇ ದಾರಿಯಲ್ಲಿ ಹೋಗುವ ಬಸ್ ಇದೆ ಅನ್ನೋದು ಗೊತ್ತಿರದೆ, ಮೆಜೆಸ್ಟಿಕ್ ಗೆ ಬಂದು ಮತ್ತೆ ಇಂದಿರಾನಗರಕ್ಕೆ ಹೋಗಿದ್ದೆ! ಇನ್ನೊಂದು ಸಲ ಪಾಸ್ ಇದೆ ಅನ್ನೋ ಭಂಡ ಧೈರ್ಯದಿಂದ ಹೆಸರಘಟ್ಟದ ಬಸ್ ಹತ್ತಿ ಹೋಗಿದ್ದೆ. ಹೆಸರಘಟ್ಟ ತಲುಪಿದ ಮೇಲೆ ಕಂಡಕ್ಟರ್ ಬಳಿ ಮತ್ತೆ ವಾಪಸ್ ಮೆಜೆಸ್ಟಿಕ್ ಗೆ ಯಾವಾಗ ಹೊರಡೋದು ಅಂತ ಕೇಳಿದಾಗ ಅವನು 'ನಾಳೆ ಬೆಳಿಗ್ಗೆ' ಅಂದಿದ್ದ. ಎಡವಟ್ಟಾಗಿ ಕೊನೆ ಟ್ರಿಪ್ ನ ಬಸ್ ಹತ್ತಿದ್ದೆ! ಹೇಗೊ ಕಷ್ಟಪಟ್ಟು ಯಾರದೋ ಬೈಕ್ ನಲ್ಲಿ ಮುಖ್ಯ ರಸ್ತೆಯ ತನಕ ಡ್ರಾಪ್ ಕೇಳಿ ರೂಮ್ ಗೆ ವಾಪಸ್ ಬರೋ ಅಷ್ಟರಲ್ಲಿ ಸಾಕು ಸಾಕಾಗಿತ್ತು!

ಶಾಲೆಯಲ್ಲಿದ್ದಾಗ ಬೆಂಗಳೂರಿನಲ್ಲಿ ಐಟಿಐ, ಹೆಚ್.ಎ.ಎಲ್, ಬಿ.ಎಚ್.ಇ.ಎಲ್ ನಂಥ ಕಂಪೆನಿಗಳಿವೆ ಅಂತ ಓದಿದ್ದೆ. ಆದರೆ ಇಲ್ಲಿ ಬಂದು ನೋಡಿದಾಗ ಗಗನಚುಂಬಿ ಕಟ್ಟಡಗಳು. ಎಲ್ಲಿ ನೋಡಿದರೂ ಐಟಿ, ಬಿಟಿ ಕಟ್ಟಡಗಳು. ಇಂಥ ಕಟ್ಟಡಗಳಲ್ಲಿ ಕೆಲಸ ಮಾಡೋ ಅವಕಾಶ ನನಗೂ ಸಿಗಬಹುದಾ ಅನ್ನೋ ಸಣ್ಣ ಆಸೆ. ಹೀಗೆ ಬಂದ ಹೊಸತರಲ್ಲಿ ಕೆಲಸ ಸಿಗೋ ಮುನ್ನ ಒಂದು ದಿನ ಮೆಜೆಸ್ಟಿಕ್ ಫುಟ್ಪಾತ್ ನಲ್ಲಿ ಗಾಡಿಯಲ್ಲಿ ಮಾರೋ ಚಿಕನ್ ಬಿರಿಯಾನಿ ತಿನ್ನುತ್ತಾ ಇದ್ದೆ. ಅಲ್ಲಿಗೆ ಒಬ್ಬ ಟೈ ಹಾಕಿಕೊಂಡು ಬೈಕಿನಲ್ಲಿ ಬಂದು ಇಳಿದ. ಯಾವುದೋ ದೊಡ್ಡ ಕಂಪನಿಯಲ್ಲಿ ಕೆಲಸಕ್ಕಿರಬೇಕು ಇವನ ಬಳಿ ಕೇಳಿದ್ರೆ ಯಾವುದಾದರೂ ಕೆಲಸ ಸಿಕ್ಕರೂ ಸಿಗಬಹುದು ಅನ್ನೋ ಆಸೆ ಚಿಗುರೊಡೆಯಿತು. ಅವನು ಬಂದು ಒಂದು ಪ್ಲೇಟ್ ಅನ್ನ ಸಾಂಬಾರ್ ತಗೊಂಡು ಸೀದಾ ನನ್ನ ಬಳಿಯೇ ನಿಂತ! ಒಂದೆರಡು ನಿಮಿಷ ಹಾಗೇ ಮುಖ ಮುಖ ನೋಡಿದೆವು. ಆಮೇಲೆ ಅವನೇ ಮಾತಿಗಿಳಿಸಿದ. ಅವನು ಕೇಳಿದ ಮೊದಲನೇ ಪ್ರಶ್ನೆ 'ಗುರು ಒಂದ್ ಪೀಸ್ ಚಿಕನ್ ಕೊಡ್ತೀಯಾ?' ಅನ್ನೋದು. ಅವನು ಯಾವುದೋ ಕಂಪೆನಿಯಲ್ಲಿ ಮಾರ್ಕೆಟಿಂಗ್ ಕೆಲಸಕ್ಕಿದ್ದಾನಂತೆ. ಬೈಕು, ಹಾಕಿರೋ ಡ್ರೆಸ್ ಎಲ್ಲವೂ ಕಂಪೆನಿಯದ್ದಂತೆ. ಚಿಕನ್ ತಿನ್ನದೆ ತುಂಬಾ ದಿನ ಆಗಿದ್ದರಿಂದ ಬಾಯಿಬಿಟ್ಟು ಕೇಳಿದ್ದಾನೆ. ಅದೂ ಅಲ್ಲದೆ ಮಾರ್ಕೆಟಿಂಗ್ ಕೆಲಸ ಮಾಡಿದ್ರೆ ನಾಚಿಕೆ ಎಲ್ಲಾ ಹಂಗೆ ಮಾಯ ಆಗಿ ಬಿಡುತ್ತಂತೆ!

ಬಹುಶಃ ಇದಕ್ಕೇ ಏನೋ ಬೆಂಗಳೂರು ಮಾಯಾನಗರಿ!

[ಈ ಪ್ರಬಂಧ 'ಬ್ಲಾಗಿಸು ಕನ್ನಡ ಡಿಂಡಿಮವ' ಪುಸ್ತಕದಲ್ಲಿ ಪ್ರಕಟವಾಗಿದೆ]

Saturday, May 12, 2012

ಉದರನಿಮಿತ್ತಂ...



ಅದೊಂದು ಪುಟ್ಟ ಊರು. ಊರಂದ ಮೇಲೆ ಅಲ್ಲಿ ಸಲೂನು, ಹಾಲಿನ ಅಂಗಡಿ, ಜಿನಸಿ ಅಂಗಡಿ, ಹೋಟಲ್ ಇತ್ಯಾದಿ ಇದ್ದೇ ಇರುತ್ತೆ ಅಲ್ವ. ಈ ಊರಲ್ಲೂ ಪುಟ್ಟ ಹೋಟಲ್ ಒಂದಿತ್ತು. ಬಹುಷಃ ಉಡುಪಿಯ ಯಾವುದೊ ಹಳ್ಳಿಯಿಂದ ಬಂದು ಈ ಊರಲ್ಲಿ ಹೋಟಲ್ ಮಾಡಿದ್ರು ಅನ್ಸುತ್ತೆ.

ಬೆಳಿಗ್ಗೆ ಬೆಳಿಗ್ಗೆ ಬಿಸಿ ಬಿಸಿ ಇಡ್ಲಿ, ವಡಾ, ನೀರ್ ದೋಸೆ, ಮಸಾಲೆ ದೋಸೆ ಎಲ್ಲವೂ ಸಿಗುತ್ತಿತ್ತು. ಹಾಗಾಗಿ ವ್ಯಾಪಾರವೂ ಚೆನ್ನಾಗೇ ಇತ್ತು.

ಆಲ್ ಇಸ್ ವೆಲ್!

ಅದ್ಯಾವುದೋ ನಡು ರಾತ್ರಿ ಪಕ್ಕದ ಕೇರಳದಿಂದ ಮಲಯಾಳಿಯೊಬ್ಬ ಆ ಊರಿಗೆ ಕಾಲಿಟ್ಟ. ಅವನದೂ ಹೊಟ್ಟೆ ಪಾಡು ನಡೆಯಬೇಕಲ್ಲ ಅವನಿಗೆ ಗೊತ್ತಿದ್ದಿದ್ದೇ ಹೋಟಲ್ ಬಿಸಿನೆಸ್. ಸಹಜವಾಗೇ ಅವನು ಆ ಊರಲ್ಲಿ ಹೋಟಲ್ ಶುರು ಮಾಡಿದ. ಅವನು ಬೆಳಿಗ್ಗೆ ಬಿಸಿ ಬಿಸಿ ಪುಟ್ಟು, ಆಪಂ ಇತ್ಯಾದಿ ಮಲಯಾಳಿ ತಿನಿಸುಗಳನ್ನು ಮಾಡತೊಡಗಿದ. ಕೆಲವು ವಾರಗಳು ವ್ಯಾಪಾರವೇ ಇರಲಿಲ್ಲ. ಎಲ್ಲರೂ ಉಡುಪಿ ಹೋಟಲ್ ಗೆ ಹೋಗುತ್ತಿದ್ದರಿಂದ ಇವನ ಹೋಟಲ್ ಗೆ ಯಾರೂ ಬರುತ್ತಿರಲಿಲ್ಲ. ಅದೂ ಅಲ್ಲದೇ ಮಲಯಾಳಿ ತಿನಿಸು ಬೇರೆ. ಹೇಗಿರುತ್ತೆ ಅನ್ನೋ ಕಲ್ಪನೆ ಕೂಡಾ ಅಲ್ಲಿನ ಜನರಿಗಿರಲಿಲ್ಲ! ಅದ್ಯಾವುದೋ ಘಳಿಗೆಯಲ್ಲಿ ಊರಿನ ಒಬ್ಬ, ಆ ಮಲಯಾಳಿ ಹೋಟಲ್ ಗೆ ಹೋಗಿ ತಿಂಡಿ ತಿಂದ. ತಿಂದವನಿಗೆ ಬಹಳ ಇಷ್ಟವಾಗಿ ಊರಿನ ಜನರಿಗೆಲ್ಲ ತಿಳಿಸಿದ. ಊರವರೆಲ್ಲಾ ಮಲಯಾಳಿ ಹೋಟಲ್ ಗೂ ಹೋಗತೊಡಗಿದರು.

ಉಡುಪಿ ಹೋಟಲ್ ನವನು ಕಂಗಾಲಾದ.ಚೆನ್ನಾಗೇ ನಡೆಯುತ್ತಿದ್ದ ಬದುಕಿನಲ್ಲಿ ಅಚಾಕ್ ಆಗಿ ತಿರುವೊಂದು ಬಂದಿತ್ತು.

ಕಂಗಾಲಾದವನೇ ಬೇರೆ ಬೇರೆ ಸಂಘ ಸಂಸ್ಥೆಗಳ ಮೊರೆ ಹೊಕ್ಕ. ನಮ್ಮದು ಮಲಯಾಳಿ ಸಂಸ್ಕೃತಿ ಅಲ್ಲ. ಪುಟ್ಟು ನಮಗೆ ಆಗಿ ಬರಲ್ಲ. ನಮ್ಮದೇನಿದ್ದರೂ ಇಡ್ಲಿ ವಡಾ ಸಂಸ್ಕೃತಿ. ಅದೂ ಅಲ್ಲದೆ ನನ್ನದು ಸೀಮಿತ ಮಾರುಕಟ್ಟೆ. ದಯವಿಟ್ಟು ಆ ಮಲಯಾಳಿ ಹೋಟಲ್ ನವನನ್ನು ಇಲ್ಲಿಂದ ಒದ್ದೋಡಿಸಿ ಅಂತ ಎಲ್ಲರಲ್ಲೂ ಮನವಿ ಮಾಡಿದ.

ಅವನ ಮನವಿಗೆ ಸ್ಪಂದಿಸಿದ ಸಂಘ ಸಂಸ್ಥೆಯವರು ಆ ಮಲಯಾಳಿಗೆ ನೋಟಿಸ್ ಕಳಿಸಿದರು. ನೋಟಿಸ್ ಗೆ ಹೆದರಿದ ಮಲಯಾಳಿ ಹೋಟಲ್ ಮುಚ್ಚಿದ.

ಮತ್ತೆ ಉಡುಪಿ ಹೋಟಲ್ ಬಿಸಿನೆಸ್ ಭರ್ಜರಿಯಾಗಿ ನಡೆಯತೊಡಗಿತು.

ಇಲ್ಲಿಗೆ ಕಥೆ ಮುಗಿಯಲಿಲ್ಲ! ಈಗ ಇಂಟರ್ವಲ್ ............

ಕಂಗಾಲಾದ ಮಲಯಾಳಿಗೆ ಏನು ಮಾಡುವುದೆಂದೇ ತೋಚಲಿಲ್ಲ. ಅದೇ ಊರಿನ ಬಾರ್ ಒಂದರಲ್ಲಿ ಝೀರೋ ವ್ಯಾಟ್ ನ ಬಲ್ಬ್ ನ ಕೆಳಗೆ ಕಿಂಗ್ ಫಿಷರ್ ಬೀರ್ ಹೀರುವಾಗ ಅವನಿಗೆ ಏನೋ ಹೊಳೆಯಿತು. ಥಟ್ಟನೆ ಅದೇ ರಾತ್ರಿ ಬಸ್ ಹಿಡಿದು ಉಡುಪಿಗೆ ಹೋಗಿ ಅಡುಗೆ ಭಟ್ಟರೊಬ್ಬರನ್ನು ಹುಡುಕಿ ತನ್ನೊಂದಿಗೆ ಕರೆ ತಂದ.

ಮಾರನೇ ದಿನದಿಂದ ಮಲಯಾಳಿ ಹೋಟಲ್ ಮತ್ತೆ ಶುರು! ಉಡುಪಿಯ ಅಡುಗೆ ಭಟ್ಟರು ಇಡ್ಲಿ, ವಡಾ, ನೀರ್ ದೋಸೆ, ಮಸಾಲೆ ದೊಸೆ ಮಾಡಿದ್ರೆ ಮಲಯಾಳಿ ತಾನೇ ಸ್ವಥ ಪುಟ್ಟು, ಆಪಂ ಥರದ ಮಲಯಾಳಿ ತಿನಿಸು ಮಾಡತೊಡಗಿದ.

ಜನರ ಬಳಿ ಈಗ ಹೆಚ್ಚಿನ ಆಯ್ಕೆ ಇತ್ತು. ಮಲಯಾಳಿ ಹೋಟಲ್ ಗೆ ಹೋದರೆ ಎಲ್ಲವೂ ಸಿಗುತ್ತಿದ್ದರಿಂದ ಎಲ್ಲರೂ ಅಲ್ಲಿಗೇ ಹೋಗತೊಡಗಿದರು.

ಓಕೆ. ಈಗ ಕಥೆ ಮುಗಿಯಿತು. ತಾವಿನ್ನು ಹೊರಡಬಹುದು.

ಕಥೆಯ ನೀತಿ?

ಇದು ಈಸೋಪನ ಅಥವ ಪಂಚತಂತ್ರದ ಕಥೆಯಲ್ಲ ನೀತಿ ಇರಲು! ಇದು ಬಿಸಿನೆಸ್!