Tuesday, November 11, 2008

ಬಿಳಿ ಹುಲಿಯ ಕಪ್ಪು ಬಣ್ಣ!



’ವೈಟ್ ಟೈಗರ್ ’ ಗೆ ಬೂಕರ್ ಪ್ರಶಸ್ತಿ ಸಿಕ್ಕಿತಂತೆ.ಅರವಿಂದ ಅಡಿಗ ಕನ್ನಡಿಗರಂತೆ(ಅದರಲ್ಲೂ ಮಂಗಳೂರು ಅಂದ ತಕ್ಷಣ ಎರಡು ಕಿವಿಗಳು ಒಂದೇ ಸಲ ನಿಮಿರುತ್ತವೆ) !ಇಷ್ಟು ದಿನ ಇದೇ ಸಂಭ್ರಮದಲ್ಲಿದ್ದೆ .ಆದ್ರೆ ಪುಸ್ತಕದ ಬಗ್ಗೆ ವಿಮರ್ಷೆಗಳನ್ನು ನೋಡಿದ ಮೇಲೆ ಯಾಕೋ ಸಂತೋಷಕ್ಕೆ ತಣ್ಣೀರೆರಚಿದ ಹಾಗಾಗಿದೆ.

ಅಡಿಗರು ಹೇಳಿದ್ದು ’ನಗ್ನ ಸತ್ಯ ’ವಂತೆ ! ಭಾರತದ ಇನ್ನೊಂದು ಮುಖ ತೋರಿಸಿದ್ದಾರಂತೆ !

ಇನ್ನೊಂದು ಮುಖ ತೋರಿಸಿದ್ದಾರಾ?? ಯಾವ ಮುಖ ????

ಓಹ್ ಅದಾ ! ಭಾರತ ಒಂದು ಭ್ರಷ್ಟರ ಕೂಪ,ಇಲ್ಲಿ ವಿದ್ಯುತ್ ಕೊರತೆ ಯಾವಾಗಲೂ ,ಇಲ್ಲಿನ ಎಡುಕೇಶನ್ ಸರಿ ಇಲ್ಲ (ಅದಕ್ಕೆ ಆಕ್ಸ್ಫರ್ಡ್ ನಲ್ಲಿ ಓದಿದ್ದು),ಇಲ್ಲಿನ ಟ್ರಾಫಿಕ್ ಸರಿ ಇಲ್ಲ,ಇಲ್ಲಿನ ಜನರಿಗೆ ಶಿಸ್ತಿಲ್ಲ ,ಇಲ್ಲಿ ಜಾತಿಗಳ ಹೆಸರಲ್ಲಿ ಮಾರಣ ಹೋಮವೇ ನಡೆಯುತ್ತೆ, etc etc etc .......

ಈ ಮುಖ ’ಪ್ರತಿಯೊಬ್ಬ ಭಾರತೀಯ ’ನಿಗೂ ಗೊತ್ತಿರುವಂಥದ್ದೇ ! ಅದರಲ್ಲೇನ್ರಿ ಬಂತು??

ಇನ್ನೂ ಶಾಲೆಯ ಮುಖವನ್ನೇ ನೋಡದ, ಗೊಣ್ಣೆ ಒರಸಿಕೊಂಡು ಒಂದು ಕೈಯಲ್ಲಿ ಜಾರುತ್ತಿರುವ ಚಡ್ಡಿ ಮೇಲಕ್ಕೇರಿಸ್ತಾ ಆಟ ಆಡಲು ಓಡೋ ಪುಟ್ಟ ಮಗುವಿಗೂ ಗೊತ್ತು ಈ ’ನಗ್ನ ಸತ್ಯ’. ಅದನ್ನು ’ನಮಗೆ ’ಹೇಳಲು ಅಡಿಗರು ಬರಬೇಕಿತ್ತಾ????

ಓಹ್ ಇಲ್ಲೇ ಅಲ್ವಾ ನಾನು ಎಡವಿದ್ದು ! ಅಡಿಗರಿಗೂ ಗೊತ್ತು ಅವರು ಏನೂ ಹೊಸದನ್ನ ಹೇಳ್ತಾ ಇಲ್ಲ ಅಂತ .ಅದಿಕ್ಕೇ ಅವರು ಹಳೆಯದನ್ನೇ ’ಹೊಸಬರಿಗೆ’ ಹೇಳಲು ನಿಶ್ಚಯಿಸಿದ್ದು.
ಭಾರತೀಯರೆಲ್ಲರಿಗೂ ಗೊತ್ತು ಭಾರತ ಎಷ್ಟು ಭ್ರಷ್ಟ ಅಂತ ,ಇನ್ನು ಜಗತ್ತಿಗೆಲ್ಲಾ ಹೇಳೋಣ ಈ ಸತ್ಯ ಅಂತ ಅನ್ನಿಸಿರ್ಬೇಕು ಅವರಿಗೆ.ಬಹುಷ: ಅಡಿಗರು ಅಬ್ದುಲ್ ಕಲಾಂ ರ ಪತ್ರ ವನ್ನು ಓದಿಲ್ಲ ಅಂತ ಕಾಣ್ಸುತ್ತೆ! ಓದಿದ್ರೆ ಬಹುಷ: ಇಂಥ ಪುಸ್ತಕ ಬರೀತಾ ಇರ್ಲಿಲ್ಲ.

ಭಾರತ ಹಾವಾಡಿಗರ ದೇಶ ,ಭಿಕ್ಷುಕರ ದೇಶ ಅನ್ನೋ ತಪ್ಪು ಕಲ್ಪನೆಯನ್ನು ನಿವಾರಿಸಲು ಪಾಪ ವರ್ಷಗಳೇ ಹಿಡಿಯಿತು ನಮಗೆ.ಇನ್ನು ಅಡಿಗರು ಹೇಳಿದ್ದು ತಪ್ಪು ಅಂತ ಸಾಧಿಸಲು ಅದೆಷ್ಟು ವರ್ಷಗಳು ಹಿಡಿಯುತ್ತೋ??

ಅಡಿಗರು ಹೇಳಿದ್ದು ಖಂಡಿತ ತಪ್ಪಲ್ಲ -ಅದು ಕಟು ವಾಸ್ತವ ....ಆದ್ರೆ ಅದನ್ನು ಜಗತ್ತಿಗೆಲ್ಲಾ ಸಾರಿ ಹೇಳುವ ಅಗತ್ಯ ಇತ್ತಾ?

ಮನೆಗೆ ಯಾರೋ ನಿಮ್ಮ ಪರಿಚಯದವರು ಬರ್ತಾರೆ .ನೀವು ಅವರಿಗೆ ಮನೆ ಎಲ್ಲಾ ತೋರಿಸ್ತೀರ .ಹೆಂಡತಿ ಮಕ್ಕಳನ್ನು ಪರಿಚಯಿಸ್ತೀರ.ಚೆನ್ನಾಗಿ ಊಟ ಉಪಚಾರ ಮಾಡಿ ಕಳಿಸ್ತೀರ .ಅದು ಬಿಟ್ಟು "ನೋಡಿ ಈ ಜಾಗ actually ನನ್ನ ಅಣ್ಣಂದು ನಾನು ಮೋಸ ಮಾಡಿ ನನ್ನ ಹೆಸರಿಗೆ ಮಾಡಿಸಿಕೊಂಡೆ. ನೋಡಿ ಇವ್ಳು ನನ್ನ ಹೆಂಡತಿ ,ಇವಳಿಗೆ ಯಾರ್ದೋ ಜೊತೆ ಅನೈತಿಕ ಸಂಬಂದ ಇದೆ.ಇನ್ನು ಮಗಳ ವಿಷಯ ಕೇಳಲೇ ಬೇಡಿ ,ದಿನಕ್ಕೊಂದು ಹುಡುಗರ ಜೊತೆ ಸುತ್ತಾಡ್ತಾಳೆ " ಅಂತ ಯಾವತ್ತೂ ಹೇಳಲ್ಲ.

ಮೇಲಿನದೆಲ್ಲ ’ಕಟು ವಾಸ್ತವ ’ ಆದ್ರೂ!

ಊರಿಂದ ಯಾರೋ ಬೆಂಗಳೂರಿಗೆ ಬಂದ್ರೆ ಅವರನ್ನು ಕಬ್ಬನ್ ಪಾರ್ಕ್ ,ಲಾಲ್ ಬಾಗ್ ವಿಧಾನ ಸೌಧ ಅಂತ ಒಳ್ಳೊಳ್ಳೆ ಸ್ಥಳಗಳನ್ನು ತೋರಿಸಿ ಖುಷಿ ಖುಷಿಯಾಗಿ ಊರಿಗೆ ವಾಪಾಸ್ ಕಳಿಸ್ತೀವಿ.
ಅದು ಬಿಟ್ಟು ಅವರನ್ನು ಕಬ್ಬನ್ ಪಾರ್ಕ್ ನ ಪೊದೆಗಳ ಹಿಂದೆ ಕರೆದುಕೊಂಡು ಹೋಗಿ "ನೋಡ್ತಾ ಇರಿ ಇಲ್ಲಿ ಈಗ ಹೇಗೆ ವೇಶ್ಯಾವಾಟಿಕೆ ನಡೆಯುತ್ತೆ ನೋಡ್ತಾ ಇರಿ " ಅನ್ನಲ್ಲ.
ಕೆ.ಆರ್ ಮಾರ್ಕೆಟ್ ನ ಹಿಂದೆ ಇರೋ ಕಸದ ತೊಟ್ಟಿ ತೋರಿಸಿ "ನೋಡಿ ಇಲ್ಲೇ ಎಲ್ಲಾ ಕಸ ಹಾಕೋದು, ಮಾರ್ಕೆಟ್ ಸ್ವಲ್ಪ ಗಬ್ಬು -ಇಲ್ಲಾಂದ್ರೆ ಇದೂ ಒಳ್ಳೆಯ ಟೂರಿಸ್ಟ್ ಪ್ಲೇಸು " ಅನ್ನಲ್ಲ.
ಚೆನ್ನಾಗಿರೋ ಹೋಟೆಲ್ ಗೆ ಕರ್ಕೊಂಡು ಹೋಗಿ ಚೆನ್ನಾಗಿರೋ ಊಟಾನೇ ಕೊಡಿಸ್ತೇವೇ ವಿನಹ ,ರಸ್ತೆ ಬದಿಯಲ್ಲಿ ಯ ಕಬಾಬ್ ಕೊಡಿಸಿ "ರೋಗದಿಂದ ಸತ್ತಿರೋ ಕೋಳಿ ಎಲ್ಲಾ ಹಾಕ್ತಾರೆ ಇಲ್ಲಾಂದ್ರೆ ಟೇಸ್ಟ್ ಇನ್ನೂ ಚೆನ್ನಾಗಿರುತ್ತೆ ಇಲ್ಲಿ " ಅನ್ನಲ್ಲ.

ನಮ್ಮ ಬದುಕಿನಲ್ಲಿ ಅದೆಷ್ಟೊ ’ಕಟು ವಾಸ್ತವ’ಗಳಿವೆ ಆದ್ರೂ ಅದನ್ನು ಎಲ್ಲರಿಗೂ ನಾವು ಹೇಳಲ್ಲ/ಹೇಳೋಕಾಗಲ್ಲ/ಹೇಳಲೂ ಬಾರದು.

ಈಗ ಹೇಳಿ ಅಡಿಗರು ಮಾಡಿದ್ದು ಸರಿ ನಾ??
ಸರಿ ತಪ್ಪು ಡಿಸೈಡ್ ಮಾಡೋದಕ್ಕೆ ನಾನ್ಯಾರು ಅಲ್ವ?ನನ್ನ ದೇಶದ ಬಗ್ಗೆ ಕಿಂಚಿತ್ ಅಪವಾದ ಹಾಕಿದ್ರೂ ಯಾಕೋ ತುಂಬಾ ಬೇಜಾರಾಗುತ್ತೆ.

ಖಂಡಿತ ಭಾರತದಲ್ಲಿ ಭ್ರಷ್ಟಾಚಾರದ ಸಮಸ್ಯೆ ತುಂಬಾ ಇದೆ .ಭಾರತ 74 ನೇ ಸ್ಥಾನದಲ್ಲಿದೆಯಂತೆ ಭ್ರಷ್ಟಾಚಾರದಲ್ಲಿ ! ಅದೇನೋ ಸರಿ ಆದ್ರೆ ಇನ್ನೂ 73 ದೇಶಗಳಿಲ್ವಾ ನಮಗಿಂತ ಮುಂದೆ?? ಅಮೆರಿಕಾದ ಸ್ಥಾನ 20 !!! ಬ್ರಿಟನ್ ನ ಸ್ಥಾನ 13 !!
ಭಾರತದಲ್ಲಿ ಜಾತಿವಾದ ದೊಡ್ಡ ಪಿಡುಗು ಒಪ್ತೀನಿ. ಆದ್ರೆ ಕಪ್ಪು ಜನಾಂಗದವರ ಮೇಲೆ ಅಮೆರಿಕಾದಲ್ಲಿ ನಡೆಯುತ್ತಿದ್ದ(ರುವ?) ದೌರ್ಜನ್ಯ ???

ಭಾರತ ಆರ್ಥಿಕ ಸ್ಥಿತಿ ಅಷ್ಟು ಉತ್ತಮವಾಗಿಲ್ಲ .ಹೌದು ಅದಕ್ಕೇನಿಗ?? ಎಲ್ಲಾ ರೀತಿಯಲ್ಲೂ ಸಬಲರಾಗಿದ್ದ ಅಮೆರಿಕಾ ಯಾಕೆ ಅಲುಗಾಡ್ತಾ ಇದೆ?
ಭಾರತದಲ್ಲಿ ಸೆಕ್ಯುರಿಟಿ ನೇ ಇಲ್ಲ ಕಣ್ರಿ ’ಯಾವಾಗ ಎಲ್ಲಿ ಬಾಂಬ್ ಬೀಳುತ್ತೋ ಗೊತ್ತಿಲ್ಲ!’ -ಇದೂ ಸರೀನೆ!! ಆದ್ರೆ ಇರುವೆ ಕೂಡ ಅನುಮತಿ ಇಲ್ಲದೆ ನುಸುಳಲಾಗದ ಅಮೆರಿಕಾಗೆ ಹೋಗಿ ,ಅವರದ್ದೇ ವಿಮಾನ ಅಪಹರಿಸಿ ,ಅವರ ಪ್ರತಿಷ್ಟಿತ ಕಟ್ಟಡವನ್ನು ಉರುಳಿಸಿಲ್ವಾ??
BMTC ಬಸ್ ’ಪ್ರಪಂಚದಲ್ಲೆ’ ಸಕ್ಕತ್ ರಶ್ ಅಂತ ಅಂದುಕೊಂಡಿದ್ದೆ ನಾನು ! ಮೊನ್ನೆ ಚೈನಾ ದ ರೈಲಿನ ವೀಡಿಯೋ ನೋಡಿದೆ .ಕುರಿ ತುಂಬಿದ ಹಾಗೆ ತುಂಬ್ತಾ ಇದ್ರು ಜನರನ್ನ .ಅದನ್ನು ನೋಡಿದ ಮೇಲೆ BMTC ನೇ ವಾಸಿ ಅನ್ನಿಸಿದೆ ನಂಗೆ.
ಭಾರತದಲ್ಲಿ ಅದೆಷ್ಟೋ ಮಕ್ಕಳಿಗೆ ಶಿಕ್ಷಣ ದೊರೀತಿಲ್ವಂತೆ .ತುಂಬಾ ಬೇಸರದ ವಿಷಯ ,ಆದ್ರೆ ಮೊನ್ನೆ ಯಾವುದೋ ಫೋಟೋದಲ್ಲಿ ನೋಡಿದೆ ಹೊಟ್ಟಿಗಿಲ್ಲದ ಮಗು ಈಗ ಸಾಯುತ್ತೆ ಅಂತ ಗಿಡುಗವೊಂದು ದೂರದಲ್ಲಿ ಕಾಯ್ತಾ ಇತ್ತು!ಅದಕ್ಕಿಂತ ವಾಸಿ ಅಲ್ಲ ಭಾರತ??
ತಾಲಿಬಾನ್ ನಲ್ಲಿ ಮಕ್ಕಳಿಗೆ a,b,c,d ಕಲಿಸುವ ಬದಲು ಬಂದೂಕು ಚಲಾಯಿಸೋದು ಹೇಗೆ ಅಂತ ಹೇಳಿ ಕೊಡ್ತಾರಂತೆ .ಅದಕ್ಕಿಂತ ವಾಸಿ ಅಲ್ಲ ಭಾರತ??

ಭಾರತದ ಯಾವುದೇ ಸಮಸ್ಯೆ ತಗೊಂಡ್ರೂ ಅದಕ್ಕಿಂತ ಎರಡು ಪಟ್ಟು ಹೆಚ್ಚಾಗಿರೋ ಸಮಸ್ಯೆ ಪ್ರಪಂಚದ ಬೇರೆ ದೇಶದಲ್ಲಿರೋದು ಕಂಡು ಬರುತ್ತದೆ.ಆದ್ರೂ ನಾವು ಕೊರಗೋದು ಬಿಟ್ಟಿಲ್ಲ.

ಇಷ್ಟೆಲ್ಲಾ ಭ್ರಷ್ಟಾಚಾರ ಇದ್ರೂ ಇನ್ಫೋಸಿಸ್ ಪ್ರಗತಿ ಹೊಂದುತ್ತೆ.ಇಷ್ಟೆಲ್ಲಾ ವೈರುಧ್ಯಗಳಿದ್ರೂ ಅಂಬಾನಿ ಸಹೋದರರು ಪ್ರಪಂಚದ ಶ್ರೀಮಂತರ ಪಟ್ಟಿಯಲ್ಲಿ ಹೆಸರು ಗಳಿಸುತ್ತಾರೆ.ಇಷ್ಟೆಲ್ಲ ನ್ಯೂನತೆಗಳಿದ್ರೂ ಇಸ್ರೋದ ವಿಜ್ಞಾನಿಗಳು ಚಂದ್ರಯಾನ-2 ರ ಕನಸನ್ನು ಮರೆತಿಲ್ಲ.

...............ಇದು ನಿಜವಾದ ಭಾರತ ...............

It is better to light a candle than curse darkness .

14 comments:

Unknown said...

well written. We surely need +ve thinking in our country (well i should admit lot of youth are optimistic about country recently than before). But I have noticed all these foreign educated or IIT/International school educated people who crib more about our country.. they talk more about problems than thinking about solving it.

good blogs overall.. keep writing.

ವಿ.ರಾ.ಹೆ. said...

perfect.

ಬರೀ ನೆಗೆಟಿವ್ ತೋರ್ಸಿ ತೋರ್ಸಿ ಭಾರತದ ಜನರಿಗೇ ಭಾರತದ ಮೇಲೆ ಬೇಸರ ಬರುವಂತೆ ಮಾಡಿಬಿಡುತ್ತಾರೆ . ಈ ವೈಟ್ ಟೈಗರ್ ಮುಂತಾದ ಬೂಕರ್ ನ ಪೇಪರ್ ಟೈಗರ್ ಗಳನ್ನು ತಲೆ ಮೇಲೆ ಹೊತ್ತುಕೊಳ್ಳುವುದಕ್ಕಿಂತ ನಮ್ಮ ಜೀವನಪ್ರೀತಿ ಹೆಚ್ಚಿಸುವಂತೆ ಬರೆಯುವ ನಮ್ಮ ಬರಹಗಾರರೆ ಬೆಸ್ಟು.

Anonymous said...

ತುಂಬಾ ಚೆನ್ನಾಗಿ ಬರೆದಿದೀರ ಸಂದೀಪ್. ಈ ನನ್ಮಕ್ಕಳು ಭಾರತಾನ ಬೈದು ಬೈದು ಪ್ರಶಸ್ತಿ ತೊಗೊತಿದ್ದಾರೆ. ಇಂತಹ ಕೆಲಸ ಮಾಡಿ ಎಂತಹ ಪ್ರಶಸ್ತಿ ತೊಗೊಂಡ್ರೂನು ಅದು ಎಕ್ಕಡದ ಸಮಾನ.

ಪಲ್ಲವಿ ಎಸ್‌. said...

ಚೆನ್ನಾಗಿ ವಿಶ್ಲೇಷಿಸಿದ್ದೀರಿ ಸಂದೀಪ್‌.

ಪ್ರತಿಯೊಂದು ಅಂತರ್‌ರಾಷ್ಟ್ರೀಯ ಪ್ರಶಸ್ತಿ ಅಥವಾ ಮನ್ನಣೆ ಹಿಂದೆ ಇಂಥದೇನೋ ಕೆಲಸ ಮಾಡಿರುತ್ತದೆ ಎಂಬ ಎಂದಿನ ಅನುಮಾನ ಅಡಿಗರ ವಿಷಯದಲ್ಲಿಯೂ ನಿಜವಾಗಿದೆ.

- ಪಲ್ಲವಿ ಎಸ್‌.

ಹರೀಶ ಮಾಂಬಾಡಿ said...

ಅಡಿಗ ಮತ್ತು ನಾನು ಮಂಗಳೂರಿನ ಪ್ರತ್ಯೇಕ ಹೈಸ್ಕೂಲ್( ಆತ ಅಲೋಷಿಯಸ್, ನಾನು ಕೆನರಾ)ನಲ್ಲಿ ಒಂದೇ ವರ್ಷ ಹತ್ತನೇ ತರಗತಿ ಓದಿದವರು. ಆತ ಮಂಗಳೂರು ಬಿಟ್ಟು ವಿದೇಶಕ್ಕೆ ಹೋದರು. ನಾನು ಇಲ್ಲೇ ಇದ್ದೇನೆ. ಅದು ಅವರವರ ವೈಯಕ್ತಿಕ ಎಂದಾಯಿತು.
ನನಗೆ ಮಂಗಳೂರಿನ ಸಿಟಿ ಬಸ್, ರೈಲು, ಜನರು ಯಾವ ತೊಂದರೆಯೂ ಮಾಡಿಲ್ಲ. ಹಾಗೆ ನೋಡಿದರೆ ಕೋಳಕು ಎಲ್ಲಲ್ಲಿ ಇಲ್ಲ ಹೇಳಿ? ಮಂಗಳೂರು, ಭಾರತ ಹೇಗೇ ಇರಲಿ, ನಾನದನ್ನು ಪ್ರೀತಿಸುತ್ತೇನೆ. ಅಡಿಗರ ಬರೆಹ ಚೆನ್ನಗಿದೆ ಅಂತೆ(ನಾನು ಓದಿಲ್ಲ.) ಅವರು ಅಲೋಶಿಯಸ್ ಹೈಸ್ಕೂಲ್ ಗೆ ಪ್ರಶಸ್ತಿ ಹಣ ಕೊಡುತ್ತಾರಂತೆ... ಅದರಿಂದ ಯಾರಿಗೆ ಲಾಭ? ಆ ಸಂಸ್ಥೆಗೆ ಲಾಭ ಅಲ್ಲವಾ?.
ಅಡಿಗರೇ ಪ್ರಸ್ತಾಪಿಸಿದ ‘ಸಮಸ್ಯೆ’ಗೆ ಪರಿಹಾರ ಸಿಗುತ್ತಾ?
(ಇಲ್ಲಿ ಯಾರನ್ನೂ ದೂರುವುದು ನನ್ನ ಉದ್ದೇಶ ಅಲ್ಲ. ಆದರೆ ನಮ್ಮ ‘ಬುಧ್ಧಿವಂತರು’ ಹೀಗ್ಯಾಕೆ?)

ಸಂದೀಪ್ ಕಾಮತ್ said...

ಸರಿಯಾಗಿ ಹೇಳಿದ್ರಿ ಹರೀಶ್,

ಒಂದು ವಿಷಯ ಗಮನಿಸಿ.
ಮಂಗಳೂರಿನ ಒಬ್ಬ ಹುಡುಗ ಆರ್ಥಿಕ ಮುಗ್ಗಟ್ಟಿನಿಂದ SSLC ಮಾಡೋಕಾಗದೆ ಬೆಂಗಳೂರಿನ ಶಾಂತಿಸಾಗರ ಹೋಟೇಲಿಗೆ ಸೇರಿಕೊಳ್ತಾನೆ .ಅವನಿಗೆ ಯಾವತ್ತೂ ಭಾರತ ಭ್ರಷ್ಟ ,ಭಾರತದಲ್ಲಿ ನನ್ಗೆ ಏಳಿಗೆ ಇಲ್ಲ ಅಂತ ಅನ್ನಿಸಲ್ಲ.
ಅಡಿಗರ ಥರ ಆಕ್ಸ್ಫರ್ಡ್ ನಲ್ಲಿ ಓದಿದ್ ಮೇಲೇನೆ ಅದು ಅರಿವಾಗೋದು.
ಒಂದು ರೂಪಾಯಿ ಜಾಸ್ತಿ ಅಂತ ಪುಷ್ಪಕ್ ಬಸ್ ನ ಬಿಟ್ಟು ಮಾಮೂಲಿ ಬಸ್ ನಲ್ಲಿ ನೇತಾಡ್ಕೊಂಡು ಹೋಗೋ ಜನ ಸಾಮಾನ್ಯನಿಗೆ ಟ್ರಾಫಿಕ್ ಅಷ್ಟು ಸಮ್ಸ್ಯೆ ಆಗಲ್ಲ.
ಆಗೋದು ೮ ಲಕ್ಷದ ಲಕ್ಸುರಿ ಕಾರ್ ನಲ್ಲಿ ಓಡಾಡೋನಿಗೆ.
ತಾಲೂಕು ಆಫೀಸ್ ನಲ್ಲಿ ಜಾತಿ ಸರ್ಟಿಫಿಕೇಟ್ ಗಾಗಿ ಹತ್ತು ರೂಪಾಯಿ ಲಂಚ ಕೊಡೋನಿಗೂ ಭಾರತ ಭ್ರಷ್ಟ ದೇಶ ಅನ್ನಿಸಲ್ಲ(ಸ್ವಲ್ಪ ಗೊಣಗಿದ್ರೂ ಗೊಣಗಬಹುದು).
ಆದ್ರೆ ತನ್ನ ಫ್ಲೈ ಓವರ್ ಪ್ರಾಜೆಕ್ಟ್ ಫೈಲ್ ಪಾಸ್ ಮಾಡಲು 20,000 Rs ಲಂಚ ಕೊಟ್ಟು ಲಕ್ಷಗಟ್ಟಲೆ ಲಾಭ ಮಾಡಿಕೊಳ್ಳೋನೆ ಗೊಣಗೋದು ’what a f**king country -so much of corruption' ಅಂತ!

ಒಬ್ಬ ತಮಿಳುನಾಡಿನ ವ್ಯಕ್ತಿ ನನ್ನ ಹತ್ತಿರ ’ಲಾಲೂ ಪ್ರಸಾದ್ ಯಾದವ್’ ಬಗ್ಗೆ ನನ್ನ ಹತ್ತಿರ ಅಭಿಪ್ರಾಯ ಕೇಳಿದ್ರೆ ಖಂಡಿತವಾಗೂ ನಾನು ’ಛೆ ಸಕ್ಕತ್ ಭ್ರಷ್ಟ ಅವನು ’ ಅಂತೀನಿ!

ಆದ್ರೆ ಇದೇ ಪ್ರಶ್ನೆ ಒಬ್ಬ ಅಮೆರಿಕಾದವನು ನಮ್ಮ ಆಫೀಸಿಗೆ ಬಂದಾಗ ಕೇಳಿದ್ರೆ "He is one of the best railway minister of our country " ಅಂತೀನಿ.

shivu.k said...

ಸಂದೀಪ್
ಸಕ್ಕತ್ ಇಷ್ಟವಾಯ್ತು ನಿಮ್ಮ ಬರವಣಿಗೆ ಶೈಲಿ.. ನೀವು ಹೇಳಿದಂತೆ ಬೇರೆಯವರಿಗೆ ಹೋಲಿಸಿಕೊಂಡು ನಮ್ಮನ್ನು ನಾವು ಕೀಳರಿಮೆ ಬೆಳೆಸಿಕೊಳ್ಳೋದು ಬಿಟ್ಟು ನಾವು ಮಾಡಿದ ಸಾದನೆ ಬಗ್ಗೆ ಹೆಮ್ಮೆ ಪಟ್ಟು ಕೊಳ್ಳೋಣ. ಇದಕ್ಕೆ ಅಬ್ದುಲ್ ಕಲಾಂ ಪತ್ರವೇ ಸಾಕ್ಷಿ. ಹೀಗೆ ಬರೆಯುತ್ತಿರಿ...
ನನ್ನ ಬ್ಲಾಗಿನಲ್ಲಿ ಸಂತೆಯ ಸಮಾಚಾರವೊಂದಿದೆ ಬಿಡುವು ಮಾಡಿಕೊಂಡು ಬನ್ನಿ.

Anonymous said...

Good one dear Sandeep.
Whatever the drawbacks, meraa bharath mahaan. if there were to be a second birth i would like to be born in India.
:-)
but i sincerely wish men would stop pissing by the roadside, :-(
Haven't read
white tiger...but i dont think i am going to...for i did not find a single favorable review.
:-)

yes keep writing
dost

ಸಂದೀಪ್ ಕಾಮತ್ said...

dost ,
he he I know you women don't have luxury to do this that’s why you are jealous :D

ಚಿತ್ರಾ ಸಂತೋಷ್ said...

ಭಲೇ ಸಂದೀಪ್! ತುಂಬಾ ಇಷ್ಟವಾಯ್ತು ಲೇಖನ..ಬರೆದ್ರೆ ಹೀಗೆ ಬರೇಬೇಕು. ಭಾರತ ಕೆಟ್ಟೋಗಿದೆ ಎನ್ನುವ 'ನಾನ್ಸ್ ಸೆನ್ಸ್' ಯೋಚನೆಯನ್ನು ತಲೆಯಲ್ಲಿ ತುಂಬಿಬಿಟ್ಟಿದ್ದಾರೆ. ಇಂಥ ಒಳ್ಳೆಯ ಲೇಖನಗಳು ಇನ್ನಷ್ಟು ಬರಲಿ.
ನಿರೀಕ್ಷೆಯಿಂದ,
ಚಿತ್ರ

shivu.k said...

ಸಂದೀಪ್,
ನೀವು ನನ್ನ ಬ್ಲಾಗಿಗೆ ಬಂದು ನನ್ನ ಸಂತೆ ಲೇಖನಕ್ಕೆ ಪ್ರತಿಕ್ರಿಯಿಸಿದ್ದಕ್ಕೆ thanks.
flickr.com ನಲ್ಲಿ ನನ್ನ ಸುಮಾರು ೨೦೦ ಫೋಟೊಗಳನ್ನು ಈಗಾಗಲೇ ಹಾಕಿದ್ದೇನೆ. ನೀವು ಬೇಕಾದರೆ ಅಲ್ಲಿಗೆ ಬೇಟಿ ಕೊಡಬಹುದು.
ನನ್ನ ವಿಳಾಸ :
www.flickr.com/photos/shivuimages

ಪ್ರಿಯಾ ಕೆರ್ವಾಶೆ said...

ಬಿಳಿ ಹುಲಿ ಕರಿ ಮನಸ್ಸು ಢಾಳಾಗಿದೆ. ನೀವದನ್ನ ಗ್ರಹಿಸಿದ ರೀತಿ ಇಷ್ಟವಾಯ್ತು.

ಸುಧೇಶ್ ಶೆಟ್ಟಿ said...

ಪ್ರತಾಪ್ ಸಿ೦ಹರ ಬರಹ ಓದಿದ್ದೆ. ಅದಕ್ಕೆ ಸಹವರ್ತಿಯಾಗಿ ಬ೦ದ ನಿಮ್ಮ ಬರಹ ತು೦ಬಾ ಇಷ್ಟವಾಯಿತು. ನಿಮ್ಮ ಬರವಣಿಗೆ ಶೈಲಿ, ನೀವು ಉದಾಹರಿಸುವ ರೀತಿ, ನಿಮ್ಮ ಕಾಳಜಿ ನನ್ನನ್ನು ನಿಮ್ಮ ಬ್ಲಾಗಿನ ಅಭಿಮಾನಿಯಾಗಿಸಿದೆ:)

ಸಂದೀಪ್ ಕಾಮತ್ said...

ಧನ್ಯವಾದಗಳು ಸುಧೇಶ್,ಪ್ರಿಯಾ .