Sunday, February 15, 2009

ವಸುಧೇಂದ್ರರೊಂದಿಗೆ ಒಂದು ’ಛಂದ’ದ ಸಂಜೆ !



ಪ್ರತಿವರ್ಷದಂತೆ ಈ ವರ್ಷವೂ ವ್ಯಾಲೆಂಟೈನ್ಸ್ ಡೇ ಗೆ ಯಾವ ಹುಡುಗಿಯೂ ನನಗೆ ಪ್ರಪೋಸ್ ಮಾಡಿಲ್ಲ ! ನಾನು ಯಾರಿಗಾದ್ರೂ ಪ್ರಪೋಸ್ ಮಾಡೋಣ ಅಂದ್ರೆ ’ಯಾರಿಗೆ’ ಅನ್ನೋ ದ್ವಂದ್ವ!ಹೀಗಾಗಿ ಈ ವ್ಯಾಲೆಂಟೈನ್ಸ್ ಡೇ ಕೂಡಾ ವ್ಯರ್ಥವಾಯ್ತೇನೋ ಅಂದುಕೊಂಡೆ .

ಹಾಗಾಗಲು ’ಮೇ ಫ್ಲವರ್’ನವರು ಬಿಡಲಿಲ್ಲ !ಹಾಗಂತ ಪ್ರಪೋಸ್ ಮಾಡಲು ನನ್ಗೆ ಹುಡುಗಿ ಹುಡುಕಿ ಕೊಟ್ಟರು ಅಂದುಕೋಬೇಡಿ !
ಪ್ರೇಮಿಗಳ ದಿನದಂದೇ ನಮ್ಮ ನೆಚ್ಚಿನ ಕಥೆಗಾರ ವಸುಧೇಂದ್ರರೊಂದಿಗೆ ಒಂದು ಸುಂದರ ಸಂಜೆಯನ್ನು ಕಳೆಯುವ ಅವಕಾಶವನ್ನು ಮೇ ಫ್ಲವರ್ ನವರು ಕಲ್ಪಿಸಿದ್ರು.ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನರ ಸಂಖ್ಯೆಯೇ ಸಾಕು ವಸುಧೇಂದ್ರರ ಜನಪ್ರಿಯತೆ,ಜನರು ಅವರನ್ನು ಇಷ್ಟಪಡುತ್ತಿರೋ ಬಗೆಯನ್ನು ತಿಳಿಸಲು.

’ನನಗೆ ಚೆನ್ನಾಗಿ ಮಾತಾಡಲು ಬರೋದಿಲ್ಲ ’ ಅಂತ ಹೇಳಿಯೇ ವಸು ಪಾಪ ಒಂದೂ ಕಾಲು ಘಂಟೆಗಳ ಕಾಲ ನಿರರ್ಗಳವಾಗಿ ಸ್ವಲ್ಪವೂ ಬೋರ್ ಹೊಡೆಸದೆ ಅದ್ಭುತವಾಗಿ ಮಾತಾಡಿದ್ರು.

ಕಾರ್ಯಕ್ರಮಕ್ಕೆ ಬರದವರಂತೂ ಒಂದು ಒಳ್ಳೆಯ ಅವಕಾಶವನ್ನು ಕಳೆದುಕೊಂಡರು -ಸಾರಿ ಕಣ್ರೀ !

ಐದು ಚಂದನೆಯ ’ಹುಡುಗಿಯರು’(ಯಾರು ಅನ್ನೋದು ಸಸ್ಪೆನ್ಸ್!) ವಸುಧೇಂದ್ರರನ್ನು ಕೆಂಪು ಗುಲಾಬಿ ಕೊಟ್ಟು ಸ್ವಾಗತಿಸಿದರು.’ನನಗೆ ಅಷ್ಟು ಚೆನ್ನಾಗಿ ಮಾತಾಡೋಕೆ ಬರಲ್ಲ ಆದ್ದರಿಂದ ಒಂದು ಲೇಖನವನ್ನು ಓದಿ ಕಾರ್ಯಕ್ರಮ ಆರಂಭಿಸ್ತೀನಿ ’ ಅಂತ ವಸು ಹೇಳಿದ್ರೂ ಮೋಹನ್ ಅವರು ಒಪ್ಪದೆ ’ಮೊದಲು ಮಾತಾಡಿ ಆಮೇಲೆ ಲೇಖನ ಓದಿ’ ಅಂದಿದ್ದು ಒಳ್ಳೆಯದೇ ಆಯ್ತು.ಇಲ್ಲಾಂದ್ರೆ ಅಷ್ಟು ಮಾತಾಡೋದು ಸಾಧ್ಯ ಆಗ್ತಿರ್ಲಿಲ್ವೇನೋ!

ವಸು ತಾವು ಕಥೆ ಬರೆಯಲು ಶುರು ಮಾಡಿದ ರೀತಿ ,’ಛಂದ ಪುಸ್ತಕ’ ಹುಟ್ಟಿದ ರೀತಿ ಯನ್ನು ಚೆನ್ನಾಗಿ ವಿವರಿಸಿದರು.ಉತ್ತರ ಕರ್ನಾಟಕ flavour ಇರ್ಲಿ ಅಂತ ಅವರು ತಮ್ಮ ಪ್ರಕಾಶನಕ್ಕೆ ’ಛಂದ ’ಆನ್ನೋ ಹೆಸರಿಟ್ಟರಂತೆ .ಮೊದ ಮೊದಲು ತಮ್ಮ ಪುಸ್ತಕಗಳು ಮಾರಾಟವಾಗಲು ತಾವು ಪಟ್ಟ ಶ್ರಮವನ್ನು ಹಾಸ್ಯಭರಿತವಾಗೇ ವಿವರಿಸಿದರು.ಜೊತೆಗೆ ’ಛಂದ ಪುಸ್ತಕ’ ಕ್ಕೆ ಗೆಳೆಯ ಅಪಾರರ ಅಪಾರವಾದ ಕೊಡುಗೆಯನ್ನೂ ಮನದುಂಬಿ ಕೊಂಡಾಡಿದರು .
ತಮ್ಮ ಪುಸ್ತಕಗಳನ್ನು ಸಾಹಿತ್ಯ ಸಮ್ಮೇಳನದಲ್ಲಿ ಮಾರಾಟ ಮಾಡಲು ಹೋದಾಗ ಅನುಭವಿಸಿದ ಮುಜುಗುರದ ಪ್ರಸಂಗವನ್ನೂ ಅವರು ವಿವರಿಸಿದರು.
ಒಂದು ಕಡೆ ಸಮ್ಮೇಳನದಲ್ಲಿ ಅವರು ತಮ್ಮ ಪುಸ್ತಕ ಮಾರಾಟ ಮಾಡ್ತಿದ್ದಾಗ ಒಬ್ಬರು ಬಂದು ಅವರನ್ನೇ ’ಈ ಪುಸ್ತಕ ಹೇಗಿದೆ ?’ ಅಂತ ಕೇಳಿದ್ರಂತೆ .ಮೊದ ಮೊದಲು ,ಮುಜುಗುರ ಆಗ್ತಾ ಇದ್ರೂ ಕಾಲ ಕಳೆದಂತೆ ಅಂತ ಸಂದರ್ಭಗಳಿಗೆ ಒಗ್ಗಿಕೊಂಡ ಬಗೆಯನ್ನೂ ವಿವರಿಸಿದರು.
ಇನ್ನೊಂದು ಕಡೆ ಸಮ್ಮೇಳನದಲ್ಲಿ ಒಬ್ಬ ಹೆಂಗಸು ತಮ್ಮ ’ಚೇಳು’ ಕಥಾ ಸಂಕಲನವನ್ನು ತೋರಿಸಿ ’ಅದು ಹೇಗಿದೆ ?’ ಅಂದರಂತೆ ವಸುಧೇಂದ್ರ ಈಗಾಗಲೇ ಮಾರ್ಕೆಟಿಂಗ್ ತಂತ್ರವನ್ನು ಕಲಿತಿದ್ದರಿಂದ ’ಅದ್ಭುತವಾಗಿದೆ ಮ್ಯಾಡಂ ತಗೊಳ್ಳಿ ಅದಕ್ಕೆ ಪ್ರಶಸ್ತಿ ಬಂದಿದೆ’ ಅಂದ್ರಂತೆ .ಆದ್ರೆ ಆ ಹೆಂಗಸು ತಮ್ಮ ಪಕ್ಕದಲ್ಲಿದ್ದ ಗೆಳತಿಯ ಬಳಿ ಅಭಿಪ್ರಾಯ ಕೇಳಿದಾಗ ’ಛೇ ತಗೋಬೇಡ ಅದು ,ಮಡಿ ಯಾವುದು ಮೈಲಿಗೆ ಯಾವುದು ಗೊತ್ತಿಲ್ಲ ಆ ಕಥೆಗಳಲ್ಲಿ ’ ಅಂತ ಬೈದು ಕರ್ಕೊಂಡು ಹೋದ್ರಂತೆ! ನಾವೆಲ್ಲಾ ನಕ್ಕಿದ್ದೇ ನಕ್ಕಿದ್ದು ಅದನ್ನು ಕೇಳಿ (ನೀವೂ ನಗ್ರಿ ಫ್ರೀ ಆಗಿ!)

ನನಗೆ ವಸುಧೇಂದ್ರ ಕಥೆಗಾರರಾಗಿ ಎಷ್ಟು ಇಷ್ಟ ಆಗ್ತಿದ್ರೋ ಅವರ ಜೊತೆ ಒಂದು ಸಂಜೆ ಕಳೆದ ಮೇಲೆ ಅದರ ಎರಡು ಪಟ್ಟು ಇಷ್ಟ ಆಗ್ತಾ ಇದ್ದಾರೆ.ಬದುಕಿನ ಬಗ್ಗೆ ಅಪಾರವಾದ ಗೌರವ,ಪ್ರೀತಿ ಇದೆ ಅವರಿಗೆ.

ಬೆಂಗಳೂರಿನ ಟ್ರಾಫಿಕ್ ಬಗ್ಗೆ ಅಸಮಧಾನ ಇರದೆ ಅದನ್ನೇ ಸಕಾರಾತ್ಮಕವಾಗಿ ಬಳಸಿದ ಮೊದಲ ವ್ಯಕ್ತಿ ಬಹುಷಃ ವಸುಧೇಂದ್ರ ! ಯಾಕಂದ್ರೆ ಅವರು ತಮ್ಮ ಬಹಳಷ್ಟು ಕಥೆಗಳನ್ನು ಬರೆದಿರೋದು ಟ್ರಾಫಿಕ್ ನಲ್ಲಂತೆ! ಹಾಗಾಗಿ ತಮ್ಮ ’ಚೇಳು’ ಕಥಾಸಂಕಲನವನ್ನು ಅವರು ಬೆಂಗಳೂರಿನ ಟ್ರಾಫಿಕ್ ಜಾಮ್ ಹಾಗೂ ಅವರ ಡ್ರೈವರ್ ಗೆ ಅರ್ಪಿಸಿದ್ದಾರೆ.

ತಮ್ಮ ಬರವಣಿಗೆಗೆ ಸಹಾಯವಾದ ಶೇಶಾದ್ರಿ ವಾಸುರವರನ್ನೂ ನೆನೆಯಲು ಮರೆಯಲಿಲ್ಲ ವಸುಧೇಂದ್ರ.’ಅದೃಶ್ಯ ಕಾವ್ಯ ’ ಬ್ರೈಲ್ ಅವತರಣಿಕೆಯನ್ನು ತರೋದಿಕ್ಕೆ ಹೇಗೆ ಶೇಷಾದ್ರಿ ವಾಸುರವರು ಬರಹದಲ್ಲಿ ಬ್ರೈಲ್ ಅಳವಡಿಸಿ ತಮಗೆ ಸಹಾಯ ಮಾಡಿದ್ರು ಅನ್ನೋದನ್ನೂ ಅವರು ಹೇಳಿದ್ರು .
ಸೇರಿದ ಅಭಿಮಾನಿಗಳ ಪ್ರಶ್ನೆಗೂ ಅವರು ಬಹಳ ಚೆನ್ನಾಗಿ ಉತ್ತರಿಸಿದರು.
ಒಟ್ಟಿನಲ್ಲಿ ತಮ್ಮ ಕಥೆಗಳ ಮೂಲಕ ಬಹಳಷ್ಟು ಜನರ ಪ್ರೀತಿಯನ್ನು ಗಳಿಸಿರುವ ವಸುಧೇಂದ್ರ ಹೀಗೆ ಒಳ್ಳೊಳ್ಳೆಯ ಕಥೆಗಳನ್ನು,ಪುಸ್ತಕಗಳನ್ನು ತಮ್ಮ ’ಛಂದ ಪುಸ್ತಕ’ದ ಮೂಲಕ ನೀಡಲಿ ಅನ್ನೋದು ನಮ್ಮೆಲ್ಲರ ಹಾರೈಕೆ.

ಛಂದದ ಕಾರ್ಯಕ್ರಮ ನಡೆಸಿಕೊಟ್ಟ ಮೇ ಫ್ಲವರ್ ಬಳಗಕ್ಕೆ ಧನ್ಯವಾದಗಳು.

12 comments:

shivu.k said...

ಸಂದೀಪ್,

ಕಾರಣಾಂತರಗಳಿಂದ ಸ್ವಲ್ಪ ಲೇಟಾಗಿ ಬಂದೆ....ಅಷ್ಟರಲ್ಲಿ ಐದು ಹುಡುಗಿಯರು "ವಸುದೇಂದ್ರರವರಿಗೆ ಹೂ ಕೊಟ್ಟಿದ್ದು ನೋಡಲಾಗಲಿಲ್ಲ.....ಛೇ...ಇರಲಿ....ಮತ್ತೆ ಇನ್ನುಳಿದ ಕಾರ್ಯಕ್ರಮವೆಲ್ಲಾ ನೀವೇಳಿದಂತೆ....ಅವರಂತೆ ನನಗೂ ಟ್ರಾಫಿಕ್ ಅಂದ್ರೆ ಇಷ್ಟ....ಅವರು ಬರೆಯುತ್ತಾರೆ...ನಾನು ಓದುತ್ತೇನೆ...ಆಷ್ಟೇ.....ಲೇಟಾಗಿ ಬಂದಿದ್ದಕ್ಕೆ ಟಿ೯..ಮಿಕ್ಸರ್ ಸ್ವೀಟ್ ಸಿಗಲಿಲ್ಲ....ಇದರ ಬಗ್ಗೆ ಮೋಹನ ಸರ್‌ಗೆ ಹೇಳಬೇಕಂತಿದ್ದೀನಿ.....ಏನಂತೀರಿ..!!

suragi \ ushakattemane said...

ಪ್ರೇಮಿಗಳ ದಿನದಂದು ಒಂದು ಸುಂದರ ಸಂಜೆಯನ್ನು ಕೊಟ್ಟ ’ಅವಧಿ’ಗೆ ಧನ್ಯವಾದಗಳು.
ಆ ಐದು ಹುಡುಗಿ[!]ಯರಲ್ಲಿ ನಾನೂ ಒಬ್ಬಳು ಕಣ್ರೀ.

ಸಂದೀಪ್ ಕಾಮತ್ said...

ಶಿವು ,
ಛೆ ಮಿಸ್ ಮಾಡ್ಕೊಂಡ್ರಲ್ರಿ ಹುಡುಗೀರ್ನ!
ಹೌದು ಮೋಹನ್ ಸರ್ ಗೆ ಹೇಳ್ಬೇಕು ಲೇಟ್ ಆಗಿ ಬಂದವರಿಗೆ ಮಿಕ್ಸರ್ ಪಾರ್ಸೆಲ್ ಮಾಡಿ ಕೊಡುವ ವ್ಯವಸ್ಥೆ ಆಗ್ಬೇಕು:)

ಸುರಗಿ,
ಛೆ ನಾನು ಸಸ್ಪೆನ್ಸ್ ಇಟ್ರೆ ನೀವು ಅದನ್ನು ಬಯಲು ಮಾಡಿಬಿಟ್ರಿ!ಅಂದ ಹಾಗೆ ಅವರಲ್ಲಿ ಒಬ್ರು ನೀವು ಅಂತ ನನಗೂ ಗೊತ್ತಿರಲಿಲ್ಲ:)

Anonymous said...

Latecomers self-service maDkoLLalu anumathi koDabekaGi Mohan avarige keLikoLLuttene...:-)

guruve said...

ನಿಮ್ಮ ಹಿಂದಿನ ಒಂದು ಬ್ಳಾಗ್ ನಿಂದ ವಸುಧೇಂದ್ರ ರವರ ಪರಿಚಯ ಆಯ್ತು. ಅವರ ಹಂಪಿ ಎಕ್ಸ್ ಪ್ರೆಸ್ ನನಗೆ ಸಪ್ನಾದಲ್ಲಿ ಸಿಗಲಿಲ್ಲ. ವಿಕ್ರಾಂತ ಕರ್ನಾಟಕದಲ್ಲಿ ’ಬಾಗಿಲಿನಿಂದಾಚೆ ಪೋಗದಿರಲ, ರಂಗ’ ಕಥೆ ಓದಿದೆ. ಬಹಳ ಇಷ್ಟ ಆಯ್ತು! ಹೀಗ ವಸುಧೇಂದ್ರರ ಜಾಡು ಹಿಡಿದು ಹುಡುಕಾಡಿ, ಅವಧಿ ರವರು ನಡೆಸುತ್ತಿದ್ದ ಕಾರ್ಯಕ್ರಮದ ಬಗ್ಗೆ ತಿಳೀತು.ನಾನೂ ಕಾರ್ಯಕ್ರಮಕ್ಕೆ ಬಂದಿದ್ದೆ. ಅಚ್ಚುಕಟ್ಟಾಗಿತ್ತು. ವಸುಧೇಂದ್ರ ರವರು ಅದ್ಭುತವಾಗಿ ಮಾತಾಡಿದ್ರು!ಕೊನೆಗೆ ನಂಗೆ ವಸುಧೇಂದ್ರ ಸಹಿ ಇರುವ ಹಂಪಿ ಎಕ್ಸ್ ಪ್ರೆಸ್ ಕೂಡ ದೊರೀತು. :) ನೀವು ಹಾಕಿರುವ ಛಾಯಾಚಿತ್ರದಲ್ಲಿ, ಸಹಿಗಾಗಿ ಕಾಯ್ತಾ ಇರೋದು ನಾನೆ! :).ಛೆ! ಅಲ್ಲಿ ನಿಮ್ಮ ಪರಿಚಯ ಮಾತ್ರ ಆಗ್ಲಿಲ್ಲ ನೋಡಿ..

Raveesh Kumar said...

ವಸುಧೇ೦ದ್ರರವರ ಒ೦ದೂ ಕತೆಯನ್ನು ಓದದೇ ಕಾರ್ಯಕ್ರಮಕ್ಕೆ ಬ೦ದವನು ನಾನೊಬ್ಬನೇ ಇರಬೇಕು. ಅದೇನೆ ಇರಲಿ, ವಸುಧೇ೦ದ್ರ ರವರ ಮಾತುಗಳು ತು೦ಬಾ ಆತ್ಮೀಯವಾಗಿದ್ದವು. ಒಬ್ಬ ಗೆಳೆಯನ ಜೊತೆ ಮಾತನಾಡಿದ ಹಾಗೆ ಇತ್ತು. ಕಾರ್ಯಕ್ರಮ ಮುಗಿದ ಮೇಲೆ ಮನೆಗೆ ಹೋಗಿ ಅವರ ಒ೦ದು ಕತೆಯನ್ನು(ಬಾಗಿಲಿ೦ದಾಚೆ ಪೋಗದಿರೆಲೋ ರ೦ಗ) ಓದಿದೆ. ನೇರ ಮಾತು ಹಾಗು ಸರಳ ನಿರೂಪಣೆ ಇಷ್ಟವಾಯಿತು.

ಸಂದೀಪ್ ಕಾಮತ್ said...

ಅಬಿಮಾನಿ,
ನಿಮ್ಮ ಸಲಹೆ ಸೂಪರ್ ಆಗಿದೆ ! ಮೋಹನ್ ಅವ್ರು ಖಂಡಿತ ಅದನ್ನು ಪರಿಗಣಿಸ್ತಾರೆ :)
ಗುರು,
ತುಂಬಾ ಒಳ್ಳೆಯ ಕೆಲಸ ಮಾಡಿದ್ರಿ ಬಂದು.ಇಂಥ ಕಾರ್ಯಕ್ರಮ ರವೀಂದ್ರ ಕಲಾಕ್ಷೇತ್ರದಲ್ಲೇನಾದ್ರೂ ಆಗಿದ್ರೆ ನಮಗೆ ವಸುಧೇಂದ್ರರೊಂದಿಗೆ ಅಷ್ಟು ಸಲುಗೆಯಿಂದ ಮಾತಾಡೋದು ಸಾಧ್ಯ ಆಗ್ತಿರ್ಲಿಲ್ಲ ಅಲ್ವ?
ರವೀಶ್,
ನಂಗೂ ತುಂಬಾ ಇಷ್ಟ ಆ ಕಥೆ:)

PaLa said...

ವಸುದೇಂದ್ರರ ಪರಿಚಯ ಮಾಡಿಸಿದ್ದಕ್ಕೆ ವಂದನೆಗಳು
--
ಪಾಲ

sunaath said...

ನಿಮ್ಮ ವಿವರಗಳು ತುಂಬಾ ಚೆನ್ನಾಗಿವೆ. ಧನ್ಯವಾದಗಳು.

ಸಂದೀಪ್ ಕಾಮತ್ said...

ಪಾಲಚಂದ್ರ,ಸುನಾಥ್ ರವರೇ ಧನ್ಯವಾದಗಳು:)

ಇನ್ನೂ ವಿವರವಾಗಿ ಬರಯಬಹುದಿತ್ತು ನನಗೆ ಮರೆವು ಜಾಸ್ತಿ ಕೆಲವು ಅಂಶಗಳು ಮರೆತೇ ಹೋದವು.

Anonymous said...

ಮಂಗಳೂರ ಧೂಮಕೇತು ಅವರೇ
ತಪ್ಪಿ ಹೋಯಿತಲ್ಲ ಒಳ್ಳೆ ಸದವಕಾಶ. ಛೇ ನಮಗೆಲ್ಲ ಇಂತಹ ಅವಕಾಶನೆ ಸಿಗಲ್ಲ ರೀ ನಿಮ್ಮ ಲೇಖನ ಓದಿ ತುಂಬಾ ಖುಷಿಯಾಯಿತು ಹಾಗೂ ಬೇಜಾರು ಆಯಿತು ಇಂಥ ಅವಕಾಶ ನನಗೆ ಸಿಕ್ಕಿಲ್ಲ ಎಂದು

ಸಂದೀಪ್ ಕಾಮತ್ said...

ಹಾಯ್ ನಕ್ಷತ್ರ ,

ಇನ್ನೊಂದು ಸಲ ಬನ್ನಿ ಅದಕ್ಕೇನಂತೆ.

http://avadhi.wordpress.com ನೋಡ್ತಾ ಇರಿ. ಒಳ್ಳೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಸಿಗುತ್ತೆ....