Sunday, June 7, 2009

ಗೇರ್ ಗೇರ್ ಗೇರಣ್ಣ.....

ಇವತ್ತು ಬೆಳಿಗ್ಗೆ ಬಿ.ಇ.ಎಲ್ ಕಾಲೋನಿಯ ಒಳಗೆ ಹಾಗೆ ನಡೆದು ಹೋಗ್ತಾ ಇದ್ದೆ .ನಮ್ಮ ಮನೆ ಬಿ.ಇ.ಎಲ್ ಕಾಲೋನಿಯ ಆಸು ಪಾಸಿನಲ್ಲೇ ಇರೋದ್ರಿಂದ ಆಗಾಗ ಕಾಲೋನಿಯ ಒಳಗಿರುವ ಗಣಪತಿ ದೇವಸ್ಥಾನಕ್ಕೆ ಭೇಟಿ ಕೊಡೋದು ಹವ್ಯಾಸ.ಸಕ್ಕತ್ ಕೂಲ್ ಕಾಲೋನಿ ಇದು.ಹೀಗೆ ಕಾಲೊನಿಯ ಒಳಗಡೆ ನಡೆದುಕೊಂಡು ಹೋಗ್ತಾ ಇರ್ಬೇಕಾದ್ರೆ ಟಪಕ್ ಅಂತ ಒಂದು ಗೇರು ಹಣ್ಣು ಬಿತ್ತು.ಸ್ವಲ್ಪ ಟೈಮಿಂಗ್ ಹೆಚ್ಚು ಕಮ್ಮಿ ಆಗಿದ್ದಿದ್ರೆ ನನ್ ತಲೆ ಮೇಲೇ ಬೀಳ್ತಾ ಇತ್ತು ! ಸಧ್ಯ ತಪ್ಪಿಸಿಕೊಂಡೆ.

’ ಗೇರು ಹಣ್ಣು ತಲೆ ಮೇಲೆ ಬಿದ್ರೆ ಸಾಯ್ತಾರಾ ? ಏನೀ ಹುಡುಗ ವಿಪರೀತ ಆಡ್ತಾನೆ ’ ಅಂದುಕೋಬೇಡಿ .ಸಾಯಲ್ಲ ಆದ್ರೆ ಅದು ಶರ್ಟ್ ಮೇಲೇನಾದ್ರೂ ಬಿದ್ರೆ ಅದರ ಕಲೆ ಸರ್ಫ್ ಎಕ್ಸೆಲ್ ಮತ್ತೆ ಏರಿಯಲ್ ಎರಡೂ ಮಿಕ್ಸ್ ಮಾಡಿ ಒಗೆದರೂ ಹೋಗಲ್ಲ! ಅದಕ್ಕೆ ಭಯ .

ಗೇರು ಹಣ್ಣು ಬಿದ್ದಿದ್ದೆ ತಡ ನಾನು ಯೋಚಿಸೋದಕ್ಕೆ ಶುರು ಮಾಡಿದೆ.

ಅದು ಮೇಲೆ ಹೋಗದೆ ಕೆಳಗೇ ಯಾಕೆ ಬಿತ್ತು ಅಂತ ಅಲ್ಲ ಮಾರಾಯ್ರೇ ! ಅದೆಲ್ಲ ಆ ಪಾಪಿ ನ್ಯೂಟನ್ ಮೊದಲೇ ಎಲ್ಲಾ ಸಂಶೋಧನೆ ಮಾಡಿ ಮುಗಿಸಿದ್ದಾನೆ .ನನ್ನಂಥ ಬಡಪಾಯಿಗಳಿಗೆ ಏನೂ ಉಳಿಸಿಲ್ಲ ಈ ವಿಜ್ಞಾನಿಗಳು !ನಾನು ಯೋಚಿಸತೊಡಗಿದ್ದು ಬೆಂಗಳೂರಿನಂಥ ಮಹಾನಗರಿಯಲ್ಲಿ ಗೇರು ಹಣ್ಣು ಎಲ್ಲಿಂದ ಬಿತ್ತು ಅಂತ .

ತಲೆ ಎತ್ತಿ ನೋಡಿದ್ರೆ ಗೇರು ಹಣ್ಣಿನ ಮರ.’ನೀನು ತಲೆ ಎತ್ತಿ ನೋಡೋ ಅಗತ್ಯವೇ ಇರಲಿಲ್ಲ .ಒಂದು ವೇಳೆ ಗೇರು ಹಣ್ಣು ಬಿದ್ದಿದ್ದೇ ಅದ್ರೆ ಅದು ಗೇರು ಹಣ್ಣಿನ ಮರದಿಂದಲೇ ಆಗಿರುತ್ತೆ’ ಅಂತೆಲ್ಲಾ ನೀವು ನನ್ನ ಹತ್ತಿರ ವಾದಿಸಲು ಹೊರಟಿದ್ರೆ ಸ್ವಲ್ಪ ನಿಲ್ಲಿ. ಮಹಾಸ್ವಾಮಿ ಇದು ಬೆಂಗಳೂರು .ಐಟಿ-ಬಿಟಿ ನಗರ !ಯಾರಿಗೆ ಗೊತ್ತು ಎಲ್ಲೆಲ್ಲಿಂದ ಏನೇನು ಬೀಳುತ್ತೆ ಅಂತ ! ಅದಕ್ಕೆ ಸ್ವಲ್ಪ ತಲೆ ಎತ್ತಲು ಕಷ್ಟವಾದ್ರೂ ಪರ್ವಾಗಿಲ್ಲ ಕನ್ಫರ್ಮ್ ಮಾಡೋದೇ ಒಳ್ಳೆಯದು ಅನಿಸಿತು ನನಗೆ.

ಗೇರು ಹಣ್ಣು ಬಿದ್ದಿದ್ದು ನಿಜವಾದ ಗೇರು ಮರದಿಂದಲೇ.ಅದೆಷ್ಟು ಬಾರಿ ಬಿ.ಇ.ಎಲ್ ಕಾಲೋನಿಯ ಒಳಗಡೆ ಸುತ್ತು ಹಾಕಿದ್ದೇನೋ .ಒಂದು ದಿನವೂ ಗೇರುಮರ ಗಮನಿಸಿರಲಿಲ್ಲ ನಾನು !ಗೇರು ಮರವೇನು ಇಲ್ಲಿ ಎಲ್ಲಾ ಥರದ ಮರಗಳೂ ಕಾಣ ಸಿಗುತ್ತವೆ.ಪ್ರತಿ ಮನೆಯಲ್ಲೂ ಒಂದು ಗೇರು ಅಥವ ಹಲಸು ಅಥವ ಮಾವಿನ ಮರ ಇದ್ದೇ ಇದೆ.ತುಂಬಾ ಅದೃಷ್ಟಶಾಲಿಗಳು ಈ ಕಾಲೋನಿಯವರು.ಪಾಪ ಈ ಮರಗಳನ್ನು ನೆಟ್ಟವರು ರಿಟೈರ್ಡ್ ಆಗಿ ಎಲ್ಲಿದ್ದಾರೋ ? ಆದ್ರೆ ಅದರ ಫಲ ಮಾತ್ರ ತುಂಬಾ ಈಗ ಅಲ್ಲಿರೋ ಜನರಿಗೆ ಸಿಗುತ್ತಾ ಇದೆ.ಮರಗಳ ವಿಷಯದಲ್ಲಂತೂ ಇದೇ ಗೋಳು.ನಾವು ಗಿಡ ನೆಟ್ಟರೆ ನಮಗೆ ಫಲ ಸಿಗೋದು ಅಷ್ಟರಲ್ಲೇ ಇದೆ ಅಂತೇನಾದ್ರೂ ನಮ್ಮ ಪೂರ್ವಜರು ಸುಮ್ಮನಿದ್ದರೆ ನಮಗೆ ಚಿಪ್ಪೇ ಗತಿಯಾಗ್ತಾ ಇತ್ತು(ಅಯ್ಯೋ ಚಿಪ್ಪು ಸಿಗಲೂ ತೆಂಗಿನಮರ ನೆಟ್ಟಿರಬೇಕು ಅಲ್ವಾ!).

ನನಗೆ ಗೇರು ಹಣ್ಣೆಂದ್ರೆ ತುಂಬಾ ಇಷ್ಟ.ಈ ಹಣ್ಣನ್ನು ನೋಡಿದ ತಕ್ಷಣ ಬಾಲ್ಯಕ್ಕೆ ರಿವೈಂಡ್ ಆಗುತ್ತೆ ನೆನಪುಗಳು.ಗೇರು ಹಣ್ಣು ಅಂದ್ರೆ ಇಷ್ಟ ಅಂದ ತಕ್ಷಣ ಕೆಲವರು ತಲ ಕೆರ್ಕೋತಾ ಇರಬಹುದು .’ ಏನ್ ಟೇಸ್ಟ್ ಮಾರಾಯ ಈ ಹುಡುಗನದ್ದು ’ ಅಂತ! ನಿಜ ಹೇಳಬೇಕೂಂದ್ರೆ ಆ ಹಣ್ಣಿನ ಟೇಸ್ಟೇ ನೆನಪಿಲ್ಲ ನನಗೆ .ತಿಂದ್ರೆ ತಾನೇ ನೆನಪಿರೋದು .

ನಮ್ಮನ್ನು ಚಿಕ್ಕಂದಿನಲ್ಲೇ ಬಿಸಿನೆಸ್ ಮ್ಯಾನ್ ಗಳನ್ನಾಗಿ ಮಾಡಿದ್ದಕ್ಕಷ್ಟೇ ನನಗೆ ಆ ಹಣ್ಣಿನ ಬಗ್ಗೆ ವಿಪರೀತ ಪ್ರೀತಿ ,ಗೌರವ .ಗೇರು ಹಣ್ಣು ಕಾಣಿಸಿದ ತಕ್ಷಣ ಹುಡುಗರು ಮಾಡುವ ಮೊದಲ ಕೆಲಸ ಅಂದ್ರೆ ಆ ಹಣ್ಣನ್ನು ಕಾಲಿನಿಂದ ಒತ್ತಿ ಹಿಡಿದು ಅದರ ಬೀಜವನ್ನು ಕೀಳುವುದು !ಅಲ್ಲಿಯವರೆಗೆ ಫಳ ಫಳ ಹೊಳೀತಾ ಇದ್ದ ಗೇರು ಹಣ್ಣು ಮಾತ್ರ ಈಗ ವಿಲ ವಿಲ ಒದ್ದಾಡ್ತಿರೋ ಹಾಗೆ ಕಾಣ್ಸುತ್ತೆ ! ಅಪ್ಪಿತಪ್ಪಿ ಕೂಡಾ ಆ ಹಣ್ಣಿನ ರುಚಿ ನೋಡೋದಕ್ಕೂ ಹೋಗಲ್ಲ ಯಾರೂ .ಅಷ್ಟಕ್ಕೂ ಆ ಗೋಡಂಬಿ ಬೀಜ ತರೋ ಕಾಸಿನ ರುಚಿ ಮುಂದೆ ಹಣ್ಣಿನ ರುಚಿ ಯಾರಿಗೆ ಬೇಕು ಹೇಳಿ . ಬೇರೆ ಯಾವ ಹಣ್ಣೂ ಈ ಪರಿ ಕಾಸು ತಂದು ಕೊಟ್ಟಿರಲಿಕ್ಕಿಲ್ಲ ಹುಡುಗರಿಗೆ.

ನಮ್ಮ ಮನೆಯ ಹಿಂದೆಯೇ ಒಂದು ಗೇರು ಹಣ್ಣಿನ ಮರವಿತ್ತು.ನನ್ನ ಸ್ನೇಹಿತರೆಲ್ಲ ಊರಲ್ಲಿರೋ ಯಾವ ಗೇರು ಹಣ್ಣಿನ ಮರವನ್ನೂ ಬಿಡ್ತಾ ಇರಲಿಲ್ಲ.ಆದ್ರೆ ನನಗೆ ಅವರ ಥರ ಏಟು ತಿಂದುಕೊಂಡು ಗೇರು ಬೀಜ ಸಂಗ್ರಹ ಮಾಡೋ ಹುಚ್ಚಿರಲಿಲ್ಲ(ಪರ್ಯಾಯ ಶಬ್ದ ಧೈರ್ಯ!).ಹಾಗಾಗಿ ನಾನು ನನ್ನ ಮನೆಯ ಹಿಂದಿರುವ ಗೇರು ಮರಕ್ಕಷ್ಟೇ ನಿಷ್ಠಾವಂತ ನಾಗಿ ’ಏಕ ಗೇರು ಮರ ವೃತಸ್ಥ ’ ಅನಿಸಿಕೊಂಡಿದ್ದೆ.ನನ್ನ ಕೆಲಸವೇನೂ ಸುಲಭದ್ದಾಗಿತ್ತು ಅಂದುಕೊಳ್ಳಬೇಡಿ.ಎರಡು ಬಲಿಷ್ಟ ನಾಯಿಗಳು ಆ ಗೇರುಮರದ ವಾಚ್ ಮ್ಯಾನ್(ವುಮನ್??)ಆಗಿ ನೇಮಕವಾಗಿತ್ತು.ಹಾಗಾಗಿ ಅಲ್ಲಿಂದ ಗೇರು ಹಣ್ಣನ್ನು ಎತ್ತಿ(ಕದ್ದು!) ತರೋದು ತುಂಬಾ ಚ್ಯಾಲೆಂಜಿಗ್ ಆಗಿರ್ತಾ ಇತ್ತು .

ಗೇರು ಹಣ್ಣನ್ನು ಬೀಳಿಸಲು ಕಲ್ಲೆಸೆಯಬೇಕಾದರೆ ನಮಗೆ ಬರೀ ಗೇರು ಹಣ್ಣಷ್ಟೆ ಕಾಣಿಸ್ತಾ ಇತ್ತು ! ಬೇರೇನೂ ಕಾಣಿಸ್ತಾ ಇರಲಿಲ್ಲ .ಅರ್ಜುನನಿಗಿದ್ದ ಏಕಾಗ್ರತೆ ನಮಗಿತ್ತು ಅಂತ ನೀವೇನಾದರೂ ಅಂದುಕೊಂಡಿದ್ದರೆ ಅದು ತಪ್ಪು !ನಮ್ಮ ಮನೆಯ ಕಂಪೌಂಡ್ ನಮಗಿಂತ ಎತ್ತರವಿತ್ತು .ಹಾಗಾಗಿ ಈ ಕಡೆಯಿಂದ ನಮಗೆ ಬರೀ ಮರದಲ್ಲಿರೋ ಗೇರು ಹಣ್ಣಷ್ಟೇ ಕಾಣಿಸ್ತಾ ಇತ್ತು ,ಬೇರೇನೂ ಕಾಣಿಸ್ತಾ ಇರಲಿಲ್ಲ!

’ದೇವರೇ ಮರದ ಕೆಳಗೆ ಯಾರೂ ನಡೆಯದಿರಲಿ ’ ಅಂತ ದೇವರಲ್ಲಿ ಪ್ರಾರ್ಥಿಸಿಯೇ ನಾವು ಕಲ್ಲೆಸೀತಾ ಇದ್ದಿದ್ದು.ಕೆಲವೊಂದು ಸಲ ನಾವು ಬೀಳಿಸಿದ ಗೇರು ಹಣ್ಣನ್ನು ನಮಗಿಂತ ಮೊದಲು ಆ ಹಾದಿಯಲ್ಲಿ ನಡೆದು ಹೋಗುವವರು ಎತ್ತಿ ಹೋಗೋದೂ ಇತ್ತು.Practice makes man/woman perfect ಅನ್ನೋ ಮಾತಿನ ಅರ್ಥ ನಮಗೆ ಆಗಲೇ ತಿಳಿದಿದ್ದು.ಯಾಕಂದ್ರೆ ದಿನಾ ಕಲ್ಲು ಎಸೆದು ಎಸೆದು ಗೇರು ಹಣ್ಣನ್ನು ಕೇವಲ ಒಂದೇ ಕಲ್ಲಲ್ಲಿ ಬೀಳಿಸುವ ವಿದ್ಯೆ ನಮಗೆ ಕರಗತವಾಗಿತ್ತು.ಅದೆಷ್ಟೇ ಪ್ರಯತ್ನಿಸಿದರೂ ಒಂದು ಕಲ್ಲಲ್ಲಿ ಎರಡು ಹಣ್ಣನ್ನು ಬೀಳಿಸುವ ಕಲೆ ಕರಗತವಾಗಲೇ ಇಲ್ಲ.

ನಮಗೆ ಹಣ್ಣನ್ನು ಬೀಳಿಸೋದು ದೊಡ್ಡ ಸಮಸ್ಯೆಯೇ ಆಗಿರಲಿಲ್ಲ .ಸಮಸ್ಯೆ ಇರ್ತಾ ಇದ್ದಿದ್ದೇ ಹಣ್ಣನ್ನು ಬೀಳಿಸಿದ ಮೇಲೆ ಅದನ್ನು ತರೋದ್ರಲ್ಲಿ!ಕಂಪೌಂಡ್ ನಮಗಿಂತ ಎತ್ತರವಾಗಿದ್ದರಿಂದ ದೂರದಿಂದ ಪೋಲ್ ವಾಲ್ಟ್ ಅಥ್ಲೀಟ್ ಥರ ಓಡಿ ಬಂದು ಕಂಪೌಂಡ್ ಮೇಲೆ ಲ್ಯಾಂಡ್ ಆಗ್ಬೇಕು.ಅದಾದ ಮೇಲೆ ಆ ಎರಡು ನಾಯಿಗಳು ಎಲ್ಲಿವೆ ಅನ್ನೋದನ್ನು ನೋಡಬೇಕು.ಯಾರೂ ಇಲ್ಲವೆಂದು ಖಚಿತವಾದ ಮೇಲೆ ಬಿದ್ದ ಗೇರು ಹಣ್ಣು ಎಲ್ಲಿದೆ ಅಂತ ಇಲ್ಲಿಂದಲೇ ಪತ್ತೆ ಮಾಡಬೇಕು.ಎಲ್ಲಾ ಸರಿ ಇದೆ ಅನ್ನೋದು ಖಾತ್ರಿಯಾದರೆ ಮಾತ್ರ ಚಂಗನೆ ಹಾರಿ ಗೇರು ಹಣ್ಣನ್ನು ಎತ್ತಿ ಜೋಬಿನೊಳಗೆ ಹಾಕಿ ಅದೇ ಸ್ಪೀಡಿನಲ್ಲಿ ಮತ್ತೆ ಅಥ್ಲೀಟ್ ಥರ ಚಂಗನೆ ಕಂಪೌಂಡ್ ಹಾರಿ ವಾಪಸ್ ಬರಬೇಕು.ಮೊದಲೇ ತಯಾರಿ ನಡೆಸದೆ ಅಲ್ಲಿ ಹೋಗಿ ಗೇರು ಹಣ್ಣು ಎಲ್ಲಿ ಬಿದ್ದಿದೆ ಅಂತ ಹುಡುಕ್ತಾ ಇದ್ರೆ ನಾಯಿಗಳು ಬಂದು ಚಡ್ಡಿ ಹರಿಯುತ್ತಿದ್ದವು ಅಷ್ಟೆ!

ಅಲ್ಲಿ ಎರಡು ನಾಯಿಗಳಿದ್ರೂ ಒಂದು ಮಜ ಥರೋ ಸಂಗತಿ ಇತ್ತು.ಎರಡೂ ನಾಯಿಗಳು ಸ್ನೇಹಿತರಾಗಿದ್ದರಿಂದ ಅವು ಎಲ್ಲೇ ಹೋದರೂ ಜೊತೆ ಜೊತೆಗೆ ಹೋಗುತ್ತಿದ್ದವು.ಹಾಗಾಗಿ ಅಸಲಿಗೆ ಅವು ಎರಡಾಗಿದ್ದರೂ ನಾವು ಒಂದರ ಮೇಲಷ್ಟೆ ನಿಗಾ ಇಟ್ಟರೆ ಸಾಕಾಗ್ತಾ ಇತ್ತು.ಅಷ್ಟರ ಮಟ್ಟಿಗೆ ಅವುಗಳ ಸ್ನೇಹ ನಮಗೆ ಸಹಕಾರಿಯಾಗಿತ್ತು.

ಹೀಗೆ ಬಹಳ ಕಷ್ಟಪಟ್ಟು ತಂದ ಗೇರು ಹಣ್ಣನ್ನು ಯಥಾ ಪ್ರಕಾರ ಕಾಲ ಕೆಳಗೆ ಇಟ್ಟು ಗೇರು ಬೀಜವನ್ನು ಎಳೆದು ಪಾಲೀಥೀನ್ ಚೀಲದೊಳಗೆ ಹಾಕಿ ಆ ಚೀಲದ ತೂಕವನ್ನೊಮ್ಮೆ ಕೈಯಲ್ಲೇ ತೂಗಿದಾಗಲೇ ನಮಗೆ ಸಮಾಧಾನ.ಹೀಗೆ ಎಲ್ಲಾ ಹುಡುಗರ ಆಸಕ್ತಿ ಗೇರು ಬೀಜವನ್ನು ಸಂಗ್ರಹಿಸೋದರಲ್ಲೇ ಇದ್ದಿದ್ದರಿಂದ ಮಂಗಳೂರಿನ ಹುಡುಗರಿಗೆ ಗೇರು ಹಣ್ಣಿನ ರುಚಿ ಗೊತ್ತಿರುವುದು ಸ್ವಲ್ಪ ಸಂಶಯ.ಮೊನ್ನೆ ಗೋವಾಗೆ ಹೋಗಿದ್ದಾಗ ಫೆನ್ನಿ ಕುಡಿದಾಗಲೇ ಗೇರು ಹಣ್ಣಿನ ನಿಜವಾದ ರುಚಿ ಗೊತ್ತಾಗಿದ್ದು ನನಗೆ !

ಕೆಲವು ಹುಡುಗರು ಹೀಗೆ ಕಂಡವರ ಮನೆಯ ಗೇರುಬೀಜವನ್ನು ಕದ್ದು ತಮ್ಮ ಥೈಲಿ ಭಾರ ಮಾಡುವುದಲ್ಲದೇ ಇನ್ನೊಂದು ವಿಧಾನದಿಂದಲೂ ತಮ್ಮ ಥೈಲಿಯ ಭಾರವನ್ನು ಹೆಚ್ಚಿಸುತ್ತಿದ್ದರು(ಕೆಲವೊಮ್ಮೆ ಇಳಿಸುತ್ತಿದ್ದರು!)

ಆ ಇನ್ನೊಂದು ವಿಧಾನವೇ ಗೇರು ಬೀಜದಾಟ! ಈ ಆಟದ ಬಗ್ಗೆ ಬರೆದರೆ ಅದೇ ಒಂದು ಲೇಖನವಾಗುತ್ತೆ.ತಮ್ಮಲ್ಲಿರೋ ಗೇರು ಬೀಜಗಳನ್ನು ಪ್ರತಿಸ್ಪರ್ಧಿಯ ಗೇರು ಬೀಜದೊಂದಿಗೆ ಮಣ್ಣಿನಲ್ಲಿ ನೇರ ನಿಲ್ಲಿಸಿ ಕಲ್ಲಿನಿಂದ ಅದಕ್ಕೆ ಗುರಿ ಇಟ್ಟು ಎಸೆದು...... ಹೀಗೆ ಆ ಆಟಕ್ಕೇ ದೊಡ್ಡ ನೀತಿ,ನಿಯಮಗಳಿವೆ.ಒಟ್ಟಿನಲ್ಲಿ ಆಟದ ಕೊನೆಗೆ ಒಂದೋ ನಿಮಗೆ ಪ್ರತಿಸ್ಪರ್ಧಿಯ ಗೇರು ಬೀಜಗಳು ದೊರೆಯುತ್ತವೆ ,ಅಥವಾ ನೀವು ನಿಮ್ಮ ಗೇರು ಬೀಜಗಳನ್ನು ಪ್ರತಿಸ್ಪರ್ಧಿಗೆ ಒಲ್ಲದ ಮನಸ್ಸಿನಿಂದ ವರ್ಗಾಯಿಸಬೇಕು !

ಹೀಗೆ ಇಡೀ ಗೇರು ಹಣ್ಣಿನ ಸೀಸನ್ ನಲ್ಲಿ ಗೇರು ಬೀಜಗಳನ್ನು ಸಂಗ್ರಹಿಸಿ ಅದನ್ನು ಅಂಗಡಿಗೆ ಹೊಗಿ ಮಾರಿದಾಗ ಅವನು ಕೊಡುವ ಗರಿ ಗರಿ ನೋಟು ಎಣಿಸಿದಾಗಲೇ ಹುಡುಗರಿಗೆ ಸಮಾಧಾನ.ಅವನು ನೂರು ರುಪಾಯಿಯ ಒಂದೇ ಒಂದು ನೋಟು ಕೊಟ್ರೆ ಅದಕ್ಕೂ ಸಿಟ್ಟು ಹುಡುಗರಿಗೆ! ಅದರ ಬದಲು ಹತ್ತು ರೂ ನ ಹತ್ತು ನೋಟು ಕೊಟ್ರೆ ಅದನ್ನು ಮತ್ತೆ ಮತ್ತೆ ಎಣಿಸಿ ಜೇಬಿಗಿಳಿಸೋದರಲ್ಲೇ ಮಜಾ ಇರೋದು.

ಈಗ ಬಿಡಿ ’ನಿಮ್ಮ ಸಂಬಳ ನಿಮ್ಮ ಅಕೌಂಟ್ ಗೆ ಜಮೆಯಾಗಿದೆ’ ಅಂತ ಒಂದೇ ಒಂದು SMS ಬರುತ್ತೆ ಅಷ್ಟೆ !

16 comments:

Shivanand said...

ನೀವು ಇನ್ನೂ ಗೇರು ಹಣ್ಣಿನ ರುಚಿ ನೋಡಿಲ್ವೇ ? ಮಧ್ಯಾನ್ಹ ಸುಡು ಬಿಸಿಲಿನಲ್ಲಿ ೨-೩ ಗೇರು ಹಣ್ಣು ತಿಂದು ಮಲಗಿದರೆ ಸಂಜೆ ೬ರವರೆಗೆ ಎಚ್ಚರವೇ ಆಗಲ್ಲ. ಅಂಥಾ ನಿದ್ದೆ ಬರಿಸುತ್ತೆ. ನಾನೂ ಈ ಬೇಸಿಗೆಯಲ್ಲಿ ೨-೩ ಸಲ ಊರಿಗೆ ಹೋಗಿ ಬಂದೆ. ಆದರೆ ಎಲ್ಲೂ ಹಣ್ಣು ಸಿಕ್ಕಿಲ್ಲ. ಈಸಲ ಅದರ ಫಸಲು ಕಮ್ಮಿ ಅಂತೆ. ಆದರೆ ಹಲಸು-ಮಾವುಗಳದ್ದು ಈ ಬಾರಿ ಭರ್ಜರಿ ಇಳುವರಿ.

ಲೇಖನ ಚೆನ್ನಾಗಿದೆ.

Govinda Nelyaru said...

ಇತ್ತೀಚೆಗೆ ಚುರುಮುರಿಯಲ್ಲೊಂದು ನೋಡಿದ್ದೆ. ಪೋಟೊ ಮೆಕ್ರಿ ಸರ್ಕಲಿನಲ್ಲಿ ಗೇರು ಹೆಣ್ಣು ಮಾರುವ ಹೆಂಗಸು. ದೂರದಿಂದ ತಂದಿರಬಹುದು ಅಂದುಕೊಂಡಿದ್ದೆ. ಅಕ್ಕ ಪಕ್ಕದಲ್ಲೇ ಸಿಗುತ್ತೆ ಅಂತಾಯಿತು.

Prabhuraj Moogi said...

ಬಾಲ್ಯಾನಾ ಸಕತ ಎಂಜಾಯ ಮಾಡೀದೀರಾ ಅನ್ಸತ್ತೆ, ನಿರೂಪಣೆ, ಅಲ್ಲಲ್ಲಿ ಕೀಟಲೆ ಪ್ರಸಂಗಗಳು ಎಂದಿನಂತೆ ಚೆನ್ನಾಗಿವೆ..

ಸುಧೇಶ್ ಶೆಟ್ಟಿ said...

ಸ೦ದೀಪ್...

ತು೦ಬಾ ಚೆನ್ನಾಗಿತ್ತು ಲೇಖನ...ನಾನು ಸಣ್ಣವನಾಗಿರುವಾಗ ನಡೆದಿದೆ... ಗೇರು ಹಣ್ಣನ್ನು ನಾನು ತಿ೦ದಿದ್ದೇನೆ... ತು೦ಬಾ ತಿ೦ದರೆ ಅಮಲು ಕೂಡ ಬರುತ್ತೆ....

ಗೇರು ಬೀಜದಾಟ ತು೦ಬಾ ಮಜ ಕೊಡುತ್ತಿತ್ತು:)

ಲೇಖನ ಬಾಲ್ಯದ ದಿನಗಳನ್ನು ಮೆಲುಕು ಹಾಕುವ೦ತೆ ಮಾಡಿತು..

PARAANJAPE K.N. said...

ಸ೦ದೀಪ,
ಚೆನ್ನಾಗಿದೆ ಗೋ೦ಕು (ಗೇರು) ಕಥೆ, ನಿಮ್ಮೊಳಗಿರುವ ಹಾಸ್ಯಪ್ರಜ್ಞೆ ಬರಹದ ತು೦ಬ ತನ್ನ ಛಾಪು ಒತ್ತಿದೆ.

sunaath said...

Beautiful article!
(ಗೇರುಮರ ಕಂಡರೆ ಕಲ್ಲು ಹೊಡೆಯೊ ಹವ್ಯಾಸ ಇನ್ನೂ ಇದೆಯೊ ಹ್ಯಾಗೆ?)

ದಿವ್ಯಾ ಮಲ್ಯ ಕಾಮತ್ said...

ಬರಹ ಚೆನ್ನಾಗಿದೆ :-) ಸುಂದರ ಗಂಟೆಯ ಆಕಾರದಲ್ಲಿರುವ, ಹಳದಿ ಕೆಂಪು ಗೇರು ಹಣ್ಣು, ಮರದಲ್ಲಿ ನೇತಾಡುವುದನ್ನು ನೋಡಿ ಆಗುತ್ತಿದ್ದ ಖುಷಿ, ಅಂಥ ಚೆನ್ನಾಗಿ ಬೆಳೆದ ಹಣ್ಣಿಗೆ, ಉಪ್ಪು, ಖಾರ ಹಾಕಿ, ಬಾಯಿ ಚಪ್ಪರಿಸುತ್ತಾ ತಿಂದದ್ದು ನೆನಪಿಗೆ ಬಂತು. ಜೊತೆಗೆ, ನಿಮ್ಮಂಥ ಹುಡುಗರು, ಅದನ್ನು ಅಷ್ಟು ದೊಡ್ಡದಾಗಿ ಬೆಳೆಯಲು ಬಿಡದೆ, ಹಸಿರು ಕಾಯಿ ಇರುವಾಗಲೇ, ಗೇರು ಬೀಜಕ್ಕಾಗಿ ಕಿತ್ತಾಗ, ಅವರನ್ನು ಬಯ್ಕೊತ್ತಾ ಇದ್ದದು ಕೂಡ ನೆನಪಾಯಿತು :-)

Pramod said...

ಪೋಸ್ಟ್ ಗಮ್ಮತ್ತಾಗಿದೆ..ಗೇರು ಬೀಜದ ಆಟದ ನಾವು ಆಡಿದ್ದೇವೆ...ಗೇರು ಹಣ್ಣಿನ ರಸ ತೆಗೆದು ಟ್ರೆಡಿಶನಲ್ 'ಡ್ರಿ೦ಕ್ಸ್' ಮಾಡೋದು ಯಾರು ಕಲಿಸಿ ಕೊಟ್ಟಿಲ್ವಾ?

Sushrutha Dodderi said...

ಹುಷಾರು ಮಾರಾಯಾ ಓಡಾಡ್ಬೇಕಾದ್ರೆ.. ಈ ಬೆಂಗಳೂರಲ್ಲಿ ಗೇರು ಹಣ್ಣಲ್ಲ, ಸಣ್ಣದೊಂದು ಗಾಳಿ-ಮಳೆ ಬಂದ್ರೆ ಮರದ ಕೊಂಬೆಯೇ ಮುರಕೊಂಡು ಬೀಳುತ್ತೆ! ಮೊನ್ನೆ ನಾನೂ-ನನ್ ಕಲೀಗೂ ಸ್ವಲ್ಪದ್ರಲ್ಲೇ ಮಿಸ್ ಆದ್ವಿ! :D

ಮತ್ತೆ ಊರಲ್ಲಿರ್ತಾ ನಾನೂ ಗೇರುಪೀಟ ಹೆಕ್ತಿದ್ದೆ.. ಒಂದಷ್ಟ್ ಹಣ್ಣು ತಿಂತಿದ್ದ ಹಾಗೇ ಹೊಟ್ಟೆ ತುಂಬಿ ಹೋಗೋದು, ಆಮೇಲೆ ಉಳಿದ ಹಣ್ಣನ್ನೆಲ್ಲಾ ನಮ್ಮನೆ ಗೋಬರ್ ಗ್ಯಾಸ್ ಗುಂಡಿಗೆ ಹಾಕ್ತಿದ್ದೆ.. ಅದ್ರಿಂದ ಗ್ಯಾಸ್ ಜಾಸ್ತಿ ಬರ್ತಿತ್ತು (ಅಪ್ಪನ ನಂಬಿಕೆ).. ಇತ್ತೀಚಿಗೆ ತಿಂದೇ ಇಲ್ಲ ಗೇರ್ ಹಣ್ಣು.. :(

ಪ್ರಬಂಧ ಮಸ್ತ್!

Guruprasad said...

ಬರಹ ತುಂಬ ಚೆನ್ನಾಗಿ ಇದೆ.....
ಚಿಕ್ಕವರಿರಬೇಕಾದರೆ ನಾವು ಇ ತರಹದ ಹಣ್ಣುಗಳಿಗಾಗಿ ಆಡಿದ ಆಟ ನೆನಪಿಗೆ ಬಂತು,,,,
ಗುರು

Guruprasad said...
This comment has been removed by the author.
Unknown said...

ಹಾಯ್ ಸಂದೀಪ್..
ನವಿರು ನಿರೂಪಣೆ ಸಖತ್ತಾಗಿದೆ..
ಮೂಗು ಬೀಜ ಹಾಕಿ ಹಾಕಿ ಮೂಗಿನ ಮೇಲೆ ಕಜ್ಜಿ ಮಾಡ್ಕೊಳ್ಳಿಲ್ವಾ ? ಗೇರು ಬೀಜದ ಸೊನೆ ತಾಗಿ ತಾಗಿ ಮೂಗಿನ ಮೇಲೆ ಕಜ್ಜಿ ಮಾಡ್ಕೊಂಡು ಅಮ್ಮನ ಕೈಲಿ ಹೊದಿಸ್ಕೊಂದಿದ್ವಪ್ಪ.. ನಮ್ದು ಹಳ್ಳಿ.. ಮನೆಯಿಂದ ಶಾಲೆಗೆ ತಲ್ಪೋಕೆ ಏನಿಲ್ಲ ಅಂದ್ರು 3 km ನಡಿಬೇಕಿತ್ತು ,ರಸ್ತೇನೋ ದಾರಿನೋ ಏನಾದ್ರೂ ಸರಿ ಮನೆ ಬಳಿಯಿಂದ ಶುರು ಆಗೋ ಮೂಗು ಬೀಜ ಸ್ಪರ್ಧೆ ( ಜೂಜು ?) ಶಾಲೆ ಮೈದಾನದಲ್ಲಿ ಕೊನೆ ಆಗ್ತಿದ್ದಿದ್ದು, ಒಳಗಡೆ ಬಂದ್ರೆ ಮೇಸ್ಟ್ರ ಬೆಟ್ಟದ ರುಚಿ ನೋಡಬೇಕಿತ್ತು, ಅದ್ಕೆ ಮೈದಾನವೇ ಸಮರಾಂಗಣದ ಕೊನೆ.

Anonymous said...

baraha thumbaa khushi koDtu...
sanje shaale bitt mele geru mara (nam kundaapra kade Gwaay mara antaare) hudukutta kallu hodeyuttiddaddu nenapythu...

thanks for such a nice write-up

ಗಿರೀಶ್ ರಾವ್, ಎಚ್ (ಜೋಗಿ) said...

ಗೇರು ಹಣ್ಣಿಗಿಂತ ನಮಗೆ ಬೀಜದಲ್ಲಿ ಆಸಕ್ತಿ. ಒಂದು ಗೇರುಬೀಜಕ್ಕೆ ಐದು ಪೈಸೆ ಕೊಡುತ್ತಿದ್ದರು ಅಂಗಡಿ ಕಾಮತರು.
ಕಾಲೇಜಿಗೆ ಹೋದ ಮೇಲೆ ನಮ್ಮ ಇಂಗ್ಲಿಷ್ ಮೇಷ್ಟ್ರು ರಾಬರ್ಟ್ ಫ್ರಾಸ್ಟನ ಆಫ್ಟರ್ ಆಪಲ್ ಪಿಕಿಂಗ್ ಪದ್ಯ ಹೇಳ್ಕೊಡುವಾಗ ಬರೀ ಗೇರು ಹಣ್ಣಿನ ನೆನಪೇ.
fter Apple-Picking

My long two-pointed ladder's sticking through a tree
Toward heaven still,
And there's a barrel that I didn't fill
Beside it, and there may be two or three
Apples I didn't pick upon some bough.
But I am done with apple-picking now.
Essence of winter sleep is on the night,
The scent of apples: I am drowsing off.
I cannot rub the strangeness from my sight
I got from looking through a pane of glass
I skimmed this morning from the drinking trough
And held against the world of hoary grass.
It melted, and I let it fall and break.
But I was well
Upon my way to sleep before it fell,
And I could tell
What form my dreaming was about to take.
Magnified apples appear and disappear,
Stem end and blossom end,
And every fleck of russet showing clear.
My instep arch not only keeps the ache,
It keeps the pressure of a ladder-round.
I feel the ladder sway as the boughs bend.
And I keep hearing from the cellar bin
The rumbling sound
Of load on load of apples coming in.
For I have had too much
Of apple-picking: I am overtired
Of the great harvest I myself desired.
There were ten thousand thousand fruit to touch,
Cherish in hand, lift down, and not let fall.
For all
That struck the earth,
No matter if not bruised or spiked with stubble,
Went surely to the cider-apple heap
As of no worth.
One can see what will trouble
This sleep of mine, whatever sleep it is.
Were he not gone,
The woodchuck could say whether it's like his
Long sleep, as I describe its coming on,
Or just some human sleep.

Robert Frost

ಥ್ಯಾಂಕ್ಸ್ ಸಂದೀಪ್

ಹರಿಜೋಗಿ said...

ಸಂದೀಪ್,
ಗೇರು ಹಣ್ಣಿನ ಸಾರಿ.. ಬೀಜದ ಬಗೆಗಿನ ಲೇಖನ ಸಕತ್ ಖುಷಿ ಕೊಟ್ಟಿತು ಮಾರಾಯ್ರೆ.. ನನ್ನ ಗೆಳೆಯರೆಲ್ಲ ಬೀಜ ಮಾರಿ ಒಳ್ಳೆ ಹಣ ಮಾಡಿ ಜಾತ್ರೆ, ಸಿನೆಮಾ ಅಂತ ಎಂಜಾಯ್ ಮಾಡುತ್ತಿದ್ದಿದ್ದೆಲ್ಲಾ ನೆನೆಪಾಯ್ತು. ನಂಗೂ ನಿಮ್ಮ ಹಾಗೆ ಧೈರ್ಯ ಸ್ವಲ್ಪ ಕಡಿಮೆಯೇ ಬಿಡಿ.. ಆದ್ರೆ ನಿಮ್ಮ ಹಾಗೆ ಮನೆಯ ಹಿಂದೆ ಗೇರುಮರಾನೂ ಇರ್ಲಿಲ್ವೆ.. ಗೇರುಹಣ್ಣಿಗೂ ಒಳ್ಳೆಯ ಕಾಲ ಬಂದಹಾಗಿದೆ.. ಗೇರುಹಣ್ಣಿನಿಂದ ಜ್ಯೂಸ್, ಜ್ಯಾಮ್ ಗಳನ್ನು ತಯಾರಿಸಬಹುದೆಂದು ಕಾಸರಗೋಡಿನ ಗೇರು ಅಧ್ಯಯನ ಸಂಸ್ಠೆ ತೋರಿಸಿಕೊಟ್ಟಿದೆಯಂತೆ.. ಬಹುಷ ಜ್ಯೂಸ್‍ಗೆ ಫೆನ್ನಿಯದೇ ಕಿಕ್ ಇರುತ್ತೋ ಏನೋ!

Anonymous said...

Sakkath agi bardidira..
Navu swalpa dairya maadi geru hannu kadilekke bere maneganthu hogtha edvi.adre daariyali maavinahannu koda yettangadi madthidvi..
Balyada neneapugalu..yestu madura..superb..keep going