Thursday, June 18, 2009

ಈ ಸಾಫ್ಟ್ ವೇರ್ ಅಂದ್ರೆ ಏನಣ್ಣಾ ...?

ಬಹಳಷ್ಟು ಜನರಿಗೆ ’ಆಗಾಗ’ ಕಾಡುವ ಪ್ರಶ್ನೆ ಅಂದ್ರೆ ಈ ಸಾಫ್ಟ್ವೇರ್ ಇಂಜಿನಿಯರ್ ಗಳು ಏನ್ ಕೆಲಸ ಮಾಡ್ತಾರೆ ? ಅನ್ನೋದು.ನಿಜವಾಗಿ ನೋಡೋದಕ್ಕೆ ಹೋದ್ರೆ ಅವರಿಗೆಲ್ಲಾ ಕಾಡೋದು ’ಅಷ್ಟೊಂದು ಜಾಸ್ತಿ ಸಂಬಳ ಕೊಡೋ ಅಂಥ ಘನಂದಾರಿ ಕೆಲಸ ಏನ್ ಮಾಡ್ತಾರೆ? ’ ಅಂತ ! ಆದ್ರೆ ಕೆಲವರು ಸ್ವಲ್ಪ ಜಾಣತನ ಉಪಯೋಗಿಸಿ ಮೊದಲನೇ ಪ್ರಶ್ನೆ ಕೇಳಿ ಬಿಡ್ತಾರೆ !

ಎರಡನೇ ಪ್ರಶ್ನೆಗೆ ಉತ್ತರ ಸ್ವಲ್ಪ ಸರಳವಾಗಿದೆ.ಚಿಕ್ಕ ದರ್ಶಿನಿ ಹೋಟೇಲಿನಲ್ಲಿ ತಟ್ಟೆ ಎತ್ತೋನಿಗೆ ತಿಂಗಳಿಗೆ ಎರಡು ಸಾವಿರ ಕೊಡ್ತಾರೆ ಅದೇ ಪಂಚತಾರಾ ಹೋಟೇಲಿನಲ್ಲಿ ತಟ್ಟೆ ಎತ್ತಿದ್ರೆ ’ಸ್ವಲ್ಪ’ ಜಾಸ್ತಿ ಸಂಬಳ ಕೊಡಲ್ವ ಹಾಗೇ ಇದು .ಅದರ ಬಗ್ಗೆ ಜಾಸ್ತಿ ತಲೆ ಕೆಡಿಸ್ಕೊಳ್ಳಬೇಡಿ ನೀವು.

ಅಲ್ಪ ಸ್ವಲ್ಪ ಸಾಫ್ಟ್ವೇರ್ ಬಗ್ಗೆ ತಿಳ್ಕೊಂಡಿದ್ರೆ ಎಲ್ಲರಿಗೂ ಉಪಯೋಗವಾಗುತ್ತೆ ಅನ್ನೋ ಕಾರಣಕ್ಕೆ ಈ ಲೇಖನ(ಬರೆಯೋಕೆ ನನಗೆ ಬೇರೆ ವಿಷಯ ಸಿಕ್ಕಿಲ್ಲ ಅಂತ ನೀವು ತಪ್ಪು ತಿಳ್ಕೊಂಡ್ರೆ ನಾನೇನೂ ಮಾಡೋಕಾಗಲ್ಲ ಬಿಡಿ!) ಬರೀತಾ ಇದ್ದೀನಿ.

ಇಂಥ ಲೇಖನವನ್ನು ಗೆಳೆಯ ವಿಜಯ್ ರಾಜ್ ಕನ್ನಂತರವರು ಈಗಾಗಲೇ ಬರೆದಿದ್ದಾರೆ.ಅದನ್ನು ಓದದೆ ಇರೋರು,ಓದಿದ್ದರೂ ಮರೆತು ಹೋದವರು ಮತ್ತೊಮ್ಮೆ ಓದಲಿ ಅಂತ ಅಷ್ಟೆ .

ನಾನು ಸಾಫ್ಟ್ವೇರ್ ಇಂಜಿನಿಯರ್ ಅಲ್ಲ ! ನಾನು ಹಾರ್ಡ್ವೇರ್ ಇಂಜಿನಿಯರ್ ,ನಾವುಗಳು ತಯಾರಿಸಿದ ಹಾರ್ಡ್ವೇರ್ ನಲ್ಲಿ ನಮ್ಮ ಗೆಳೆಯ/ಗೆಳತಿಯರು ಬರೆದ ಸಾಫ್ಟ್ವೇರ್ ಕೆಲಸ ಮಾಡೋದು .ಇದರಿಂದ ತಿಳಿಯೋದೇನೆಂದರೆ ಹಾರ್ಡ್ವೇರ್ ಇಲ್ಲದೆ ಸಾಫ್ಟ್ವೇರ್ ಕೆಲಸ ನಡೆಯಲ್ಲ ಅಂತ.ಹಾರ್ಡ್ವೇರ್ ಅಂದ ತಕ್ಷಣ ಬಹಳಷ್ಟು ಜನರಿಗೆ ತಲೆಗೆ ಹೊಳೆಯೋದು ನಟ್ಟು ಬೋಲ್ಟು ,ಪೇಂಯ್ಟು!

ಆ ಹಾರ್ಡ್ವೇರ್ ಬೇರೆ ಸ್ವಾಮಿ .ಒಬ್ಬ ಇಂಜಿನಿಯರ್ ಗೆ ಹಾರ್ಡ್ವೇರ್ ಅಂದರೆ ಕಂಪ್ಯೂಟರ್ ಮದರ್ ಬೋರ್ಡ್ ಥರದ್ದು.ಹಾಗೆ ನೋಡೋದಕ್ಕೆ ಹೋದರೆ ಬಹಳಷ್ಟು ವಸ್ತುಗಳು ಕಂಪ್ಯೂಟರ್ ಗಳೆ.ಕಂಪ್ಯೂಟರ್ ಅನ್ನು ನಮಗೆ ಬೇಕಾದ ಕೆಲಸಕ್ಕೆ ಬಹಳ ಸುಲಭವಾಗಿ ಬಗ್ಗಿಸಬಹುದು.ಅಂದರೆ ಹಾಡು ಕೇಳಬಹುದು ಅಥವಾ ಅದೇ ಕಂಪ್ಯೂಟರ್ ನಲ್ಲಿ ಕಡತಗಳನ್ನು ಟೈಪಿಸಿ ಮುದ್ರಿಸಲೂ ಬಹುದು.

ಅದೇ ಒಂದು MP3 Player ಆದ್ರೆ ಬರೀ ಹಾಡನ್ನಷ್ಟೇ ಕೇಳಬಹುದು.ಅದರಲ್ಲೂ ಕಂಪ್ಯೂಟರ್ನಲ್ಲಿರೋ ಅಂಥದ್ದೇ ಒಂದು ಶಕ್ತಿಶಾಲಿ ಪ್ರಾಸೆಸರ್ ಇದೆ.ಆದರೆ ಅದಕ್ಕೆ ಬರೀ ಹಾಡು ಹಾಡಿಸೋದಷ್ಟೆ ಗೊತ್ತು!ಅದು ಬರೀ ಒಂದು ರೀತಿಯ ಕೆಲಸವನ್ನು ಮಾತ್ರ ಮಾಡೋದರಿಂದ ಅದರಲ್ಲಿ ಉಪಯೋಗಿಸೋ ಪ್ರಾಸೆಸರ್ ಬೆಲೆ ತುಂಬಾ ಕಮ್ಮಿ ಇರುತ್ತೆ.ಹಾಗಾಗಿ MP3 Player ಬೆಲೆ ಕಡಿಮೆ.ಕಂಪ್ಯೂಟರ್ ಬೆಲೆ ತೀರಾ ಜಾಸ್ತಿ.

ಅದೇ ರೀತಿ ವಾಷಿಂಗ್ ಮೆಶಿನ್ ನಲ್ಲೂ ಒಂದು ಪ್ರಾಸೆಸರ್ ಇದೆ.ಆದರೆ ಪಾಪ ಅದಕ್ಕೆ ಬಟ್ಟೆ ಒಗೆಯೊದು ಬಿಟ್ಟು ಬೇರೇನೂ ಗೊತ್ತಿಲ್ಲ! ಈಗೀಗ ಅದರ ಬುದ್ಧಿ ಸ್ವಲ್ಪ ಬೆಳೆದಿದೆ ಅನ್ನಿ.ಬಟ್ಟೆ ಒಗೆಯೋದಲ್ಲದೆ ಒಣಗಿಸಿಯೂ ಕೊಡುತ್ತೆ.ಟಿ.ವಿ ಯಲ್ಲೂ ಪ್ರಾಸೆಸರ್ ಇದೆ ಆದರೆ ಅದಕ್ಕೆ ವಿಡೀಯೋ ತೋರಿಸೋದು ಬಿಟ್ಟರೆ ಬೇರೇನೂ ಗೊತ್ತಿಲ್ಲ.

ಸಾರಾಂಶ ಇಷ್ಟೇ .ಈ ಎಲ್ಲಾ ವಸ್ತುಗಳೂ ಒಂದು ಮಿನಿ ಕಂಪ್ಯೂಟರ್ ಇದ್ದ ಹಾಗೆ .ಹಾಗಾಗಿ ಈ ಎಲ್ಲಾ ವಸ್ತುಗಳಲ್ಲೂ ಸಾಫ್ಟ್ವೆರ್ ಇದ್ದೇ ಇದೆ.ಕಂಪ್ಯೂಟರ್ ನಲ್ಲಿರೋ ಹಾಗೇನೇ ಈ ಟಿ.ವಿ ,ವಾಷಿಂಗ್ ಮೆಶಿನ್,ಸೆಟ್ ಟಾಪ್ ಬಾಕ್ಸ್ ,ಶೇವಿಂಗ್ ಮೆಶಿನ್,ಮಿಕ್ಸಿ ಎಲ್ಲಾದರಲ್ಲೂ ಪ್ರಾಸೆಸರ್ ,ಸಾಫ್ಟ್ವೇರ್ ಎರಡೂ ಇದ್ದೇ ಇರುತ್ತೆ .

ನಮಗೆ ಗೊತ್ತಿಲ್ಲ ಅಷ್ಟೇ !

ಮನುಷ್ಯನ ಉದಾಹರಣೆ ತಗೊಳ್ಳೋದಾದ್ರೆ ಕೈ ಒಂದು ಹಾರ್ಡ್ವೇರ್ ಅದೇ ಮೆದುಳು ಪ್ರಾಸೆಸರ್. ನಿಮಗೆ ಯಾರಿಗಾದರೂ ಹೊಡೆಯಬೇಕೆಂದರೆ.....ಬೇಡ ಬಿಡಿ ನೆಗೆಟಿವ್ ಥಿಂಕಿಂಗ್ ಬೇಡ! ನಿಮಗೆ ಯಾರನ್ನಾದರೂ ಮುಟ್ಟಬೇಕೆನಿಸಿದ ತಕ್ಷಣ ಏನಾಗುತ್ತೆ ಅಂದರೆ ಪ್ರಾಸೆಸರ್ ಆದ ಮೆದುಳಿಗೆ ಸಂಕೇತಗಳು ಹೋಗಿ ನಿಮ್ಮ ಕೈ ಯಾರನ್ನು ಮುಟ್ಟಬೇಕೋ ಅವರನ್ನು ಮುಟ್ಟುತ್ತೆ.ಇಲ್ಲಿ ಕೈ ಹಾರ್ಡ್ವೇರ್, ಮೆದುಳು ಪ್ರಾಸೆಸರ್ ,ಆದರೆ ಯಾರನ್ನು ಮುಟ್ಟಬೇಕು ,ಹೇಗೆ ಮುಟ್ಟಬೇಕು ,ಎಲ್ಲಿ ಮುಟ್ಟಬೇಕು ಅನ್ನೋ ಸಂಕೇತಗಳು ಕೊಡೋದಕ್ಕೆ ಒಂದು ಸಾಫ್ಟ್ವೇರ್ ಇದೆ.ದುರ್ದೈವವಶಾತ್ ಮಾಮೂಲಿನಂತೆ ಇಲ್ಲೂ ಸಾಫ್ಟ್ವೇರ್ ಕಣ್ಣಿಗೆ ಕಾಣಿಸಲ್ಲ!ಇಂಥ ಒಂದು ಅದ್ಭುತ ಸಾಫ್ಟ್ವೇರ್ ಬರೆದ ಇಂಜಿನಿಯರ್ ಹೆಸರು ’ದೇವರು’!

ಯಾರ್ಯಾರನ್ನೋ ಮುಟ್ಟೋದಕ್ಕೆ ನಿಮಗೆ ನಿಮ್ಮ ಪ್ರಾಸೆಸರ್ ಹೇಳಿದ್ರೆ ನಿಮ್ಮ ಸಾಫ್ಟ್ವೇರ್ ಹಾಳಾಗಿದೆ ಅಂತ ಅರ್ಥ!

ವಾಶಿಂಗ್ ಮೆಶಿನ್ ಉದಾಹರಣೆ ತಗೊಂಡ್ರೆ ಮೋಟರ್ ಎಷ್ಟು ಹೊತ್ತು ತಿರುಗಬೇಕು ,ಯಾವಾಗ ತಿರುಗೋದನ್ನು ನಿಲ್ಲಿಸಬೇಕು,ಯಾವಾಗ ಬಿಸಿಗಾಳಿ ಊದಬೇಕು ಎಲ್ಲಾದನ್ನು ನಿರ್ಧರಿಸೋದು ಸಾಫ್ಟ್ಟ್ವೇರ್ ಕೆಲಸ.

ಅದೇ ರೀತಿ ಟಿ.ವಿ ಯಲ್ಲಿ ರಿಮೋಟ್ ನಲ್ಲಿ ಬಟನ್ ಒತ್ತಿದ ತಕ್ಷಣ ಯಾವ ಚಾನೆಲ್ ಬದಲಾಯಿಸಬೇಕು ಅನ್ನೋದನ್ನು ನಿರ್ಧರಿಸೋದು ಸಾಫ್ಟ್ವೇರ್ .ಬದಲಾಯಿಸೋದು ಮಾತ್ರ ಪ್ರಾಸೆಸರ್ !ಈ ಹಾರ್ಡ್ವೇರ್ ಒಂಥರಾ ಗುಲಾಮ ಕಣ್ರಿ ಅದಕ್ಕೆ ಸಾಫ್ಟ್ವೇರ್ ಇಂಜಿನಿಯರ್ಗಳಿಗೆ ಸ್ವಲ್ಪ ಕೊಬ್ಬು ಜಾಸ್ತಿ,ಎಲ್ಲಾ ನಮ್ಮಿಂದಲೇ ಅಂತ .ಏನ್ ಮಾಡೋದು ಎಲ್ಲ ಪಡೆದು ಬಂದಿರಬೇಕು.

ಇನ್ನೊಂದು ಉದಾಹರಣೆ ತಗೊಳ್ಳೋಣ ATM ದು .ಹಣದ ವಿಚಾರ ಬಂದಾಗ ಎಲ್ಲರ ಕಿವಿಯೂ ನಿಮಿರುತ್ತೆ .ಇದು ಬರೀ ಉದಾಹರಣೆ ಮಾತ್ರ ಜಾಸ್ತಿ excite ಆಗ್ಬೇಡಿ.

ATM ನಿಂದ ನಿಮಗೆ ಒಂದು ಲಕ್ಷ ರೂಪಾಯಿ ಡ್ರಾ ಮಾಡಬೇಕು ಅಂದುಕೊಳ್ಳಿ (ಅದಕ್ಕೆ ಮೊದಲೇ ಹೇಳಿದ್ದು ಉದಾಹರಣೆ ಅಂತ)! ನೀವು ಕಾರ್ಡ್ ತುರುಕಿಸಿದ ತಕ್ಷಣ ನಿಮ್ಮ ಕಾರ್ಡ್ ನಲ್ಲಿರೋ ಮಾಹಿತಿಯನ್ನು ಓದೋದು ಹಾರ್ಡ್ವೇರ್ .ಮಾಹಿತಿ ಯನ್ನು ಹಾರ್ಡ್ವೇರ್ ಸಹಾಯದಿಂದ ಪಡೆದ ನಂತರ ಸಾಫ್ಟ್ವೇರ್ ಏನೇನೋ ಲೆಕ್ಕಾಚಾರ ಮಾಡಿ ದೂರದಲ್ಲೆಲ್ಲೋ ಇರೋ ಬ್ಯಾಂಕ್ ನ ಸರ್ವರ್ ಗೆ ಇಂಟರ್ನೆಟ್ ಮೂಲಕ ಸಂಪರ್ಕಿಸಿ ನಿಮ್ಮ ಖಾತೆಯಲ್ಲಿ ಎಷ್ಟು ಹಣ ಇದೆ,ನಿಮಗೆ ಒಂದು ಲಕ್ಷ ನೀಡಬಹುದೋ(ನಿಮ್ಮದೇ ಹಣ ಆಗಿದ್ರೂ!)ಅಂತ ನಿರ್ಧರಿಸೋದು ,ಕೊಡೋ ಹಣದಲ್ಲಿ ಸಾವಿರದ ನೋಟು ಎಷ್ಟಿರ್ಬೇಕು,ಐನೂರರ ನೋಟು ಎಷ್ಟಿರಬೇಕು ಅಂತೆಲ್ಲಾ ಲೆಕ್ಕಾಚಾರ ಮಾಡೋದು ಸಾಫ್ಟ್ವೇರ್ .ಎಲ್ಲಾ ಲೆಕ್ಕಾಚಾರ ಮಾಡಿದ ನಂತರ ಒಂದೊಂದೇ ನೋಟನ್ನು ಒಳಗಿರೋ ಒಂದು ಡಬ್ಬಿಯಿಂದ ಎತ್ತಿ ಎತ್ತಿ ಹೊರಗೆ ತಳ್ಳೋದು ಹಾರ್ಡ್ವೇರ್.

ಕಂಪ್ಯೂಟರ್ ಮೌಸ್ ಉದಾಹರಣೆ ತೊಗೊಂಡ್ರೆ ಆ ಪುಟ್ಟ ಮೌಸ್ ಒಳಗೂ ಒಂದು ಪುಟ್ಟ ಪ್ರಾಸೆಸರ್ ಇದೆ.ನೀವು ಎಡಗಡೆ ಬಟನ್ ಒತ್ತಿದ್ದೋ ಬಲಗಡೆ ಬಟನ್ ಒತ್ತಿದ್ದೋ ಅನ್ನೋದನ್ನು ಈ ಪ್ರಾಸೆಸರ್ ಗೊತ್ತು ಮಾಡಿಕೊಳ್ಳುತ್ತೆ ಮೊದಲು(ಎರಡೂ ಬಟನ್ ಒಮ್ಮೆಗೆ ಒತ್ತಿ ಪ್ರಾಸೆಸರ್ ತಲೆ ಕೆಡಿಸಬೇಡಿ ಪ್ಲೀಸ್),ಗೊತ್ತು ಮಾಡಿದ ನಂತರ ’ಈ ವ್ಯಕ್ತಿ ಎಡಗಡೆ ಮೌಸ್ ಒತ್ತಿದ್ದಾನೆ ’ ಅಂತ ಮಾಹಿತಿಯನ್ನು ಸಾಫ್ಟ್ವೇರ್ ಗೆ ವರ್ಗಾಯಿಸುತ್ತದೆ.ಯಾವ ಬಟನ್ ಒತ್ತಿದ್ದಾನೆ ಅಂತ ಗೊತ್ತಾದ ಮೇಲೆ ಸಾಫ್ಟ್ವೇರ್ ಏನೇನೋ ಲೆಕ್ಕಾಚಾರ ಹಾಕಿ ಮುಂದಿನ ಕಾರ್ಯಾಚಾರಣೆಯನ್ನು ನಿರೂಪಿಸುತ್ತದೆ.ನೀವಂದುಕೊಂಡಷ್ಟು ಸುಲಭ ಇಲ್ಲ ಬಿಡಿ ಲೆಕ್ಕಾಚಾರ! ಬ್ಲಾಗ್ ಬರೆಯುವಾಗಲೆ ನೋಡಿ ನೀವು ಎಡಗಡೆ ಬಟನ್ ಒತ್ತುತ್ತೀರ,ಆದರೆ ಆಗ ಮೌಸ್ ಪಾಯಿಂಟರ್ Publish Post ಮೇಲಿತ್ತಾ ಅಥವಾ Save Now ಮೇಲಿತ್ತಾ ಅನ್ನೋದನ್ನು ನಿರ್ಧರಿಸೋದಕ್ಕೆ ಸಾಫ್ಟ್ವೇರ್ ಸ್ವಲ್ಪ ತಲೆ ಕೆಡಿಸ್ಕೋಬೇಕಾಗುತ್ತೆ .

ಅಂದ ಹಾಗೆ ಟಾಯ್ಲೆಟ್ನಲ್ಲೂ ಈ ಹಾರ್ಡ್ವೇರ್ ಸಾಫ್ಟ್ವೇರ್ ಬಳಕೆಯಾಗುತ್ತೆ .ಟಾಯ್ಲೆಟ್ ಬೇಸಿನ್ ಮುಂದೆ ನಿಂತ ತಕ್ಷಣ ಅದರಲ್ಲಿ ಅಳವಡಿಸಿರೋ ಸೆನ್ಸರ್ ಸಾಫ್ಟ್ವೇರ್ ಗೆ ತಿಳಿಸುತ್ತೆ ’ಯಾರೋ ಟಾಯ್ಲೆಟ್ ಗಲೀಜು ಮಾಡಲು ಬಂದಿದ್ದಾನೆ ’ ಅಂತ ! ಹಾಗೆಯೇ ನೀವು ಹೋದ ತಕ್ಷಣ ’ಪಾಪಿ ನೀರು ಹಾಕದೆ ಹೋಗ್ತಿದ್ದಾನೆ ನೀರು ಹಾಕು ’ ಅಂತ ಹಾರ್ಡ್ವೇರ್ ಗೆ ತಿಳಿಸುತ್ತೆ .ಆಗ ಹಾರ್ಡ್ವೇರ್ ಸ್ವಿಚ್ ರಿಲೀಸ್ ಮಾಡಿ ನೀರು ಹೊರ ಹಾಕುತ್ತೆ.ಆದರೆ ’ಟಾಯ್ಲೆಟ್ ನಲ್ಲಿ ಉಚ್ಚೆ ಹೊಯ್ದ ಮೇಲೆ ನೀರು ಹಾಕೋ ಅಂಥ ಸಾಫ್ಟ್ವೇರ್ ಬರೆದಿದ್ದೀನಿ ನಾನು ’ ಅಂತ ಯಾವ ಸಾಫ್ಟ್ವೇರ್ ಇಂಜಿನಿಯರೂ ಹೇಳದ ಕಾರಣ ಬಹಳಷ್ಟು ಜನರಿಗೆ ಇಲ್ಲೂ ಸಾಫ್ಟ್ವೇರ್ ಬಳಕೆಯಾಗುತ್ತೆ ಅನ್ನೋ ಸತ್ಯ ಗೊತ್ತಿರಲ್ಲ !

ಇಸ್ರೋ ಉಪಗ್ರಹ ಉಡಾವಣೆ ಮಾಡೋ ಸಂದರ್ಭದಲ್ಲಂತೂ ಬಹಳಷ್ಟು ಕೆಲಸವನ್ನು ಮಾಡೋದು ಸಾಫ್ಟ್ವೇರ್.ಉಡಾವಣೆಯ ಒಂದೊಂದೇ ಹಂತವನ್ನು ಪರಿಶೀಲಿಸಿ ಎಲ್ಲಾ ಸರಿ ಇದ್ರೆ ರಾಕೆಟ್ ಬುಡಕ್ಕೆ ಬೆಂಕಿ ಹಚ್ಚುತ್ತೆ ಇಲ್ಲದಿದ್ದಲ್ಲಿ ಅಲ್ಲೆ STOP ಅನ್ನುತ್ತೆ.

ಈ ಪ್ರಾಸೆಸರ್ ಗಳಿಗೆ ಕನ್ನಡ ಅರ್ಥ ಆಗಲ್ಲ(ಇಂಗ್ಲೀಷೂ ಅರ್ಥ ಆಗಲ್ಲ ಬಿಡಿ)! ಅದರಿಂದಲೇ ಬಹಳಷ್ಟು ಜನ ಸಾಫ್ಟ್ವೇರ್ ಇಂಜಿನಿಯರ್ ಗಳು ತಮ್ಮ ಹೊಟ್ಟೆಪಾಡನ್ನು ನೋಡ್ಕೋತಾ ಇದ್ದಾರೆ! ಪ್ರಾಸೆಸರ್ ಅರ್ಥ ಆಗೋ ಭಾಷೆಯಲ್ಲಿ ಅದಕ್ಕೆ ಕೆಲಸ ಮಾಡಲು ಅಪ್ಪಣೆ ನೀಡೋದೇ ಸಾಫ್ಟ್ವೇರ್ ಕೆಲಸ.ಅಂಥ ಭಾಷೆಗಳೇ ಈ C ,C++,Java ಗಳು.ಈ ಭಾಷೆಯನ್ನು ಸಮರ್ಪಕವಾಗಿ ಬಳಸಬಲ್ಲವನೇ ಸಾಫ್ಟ್ವೇರ್ ಇಂಜಿನಿಯರ್.


ನಮಗೆಲ್ಲರಿಗೂ ಕನ್ನಡ ಬರುತ್ತೆ ಆದರೆ ಎಲ್ಲರೂ ಕನ್ನಡ ಪಂಡಿತರಾಗಲು ಸಾಧ್ಯ ಇಲ್ಲ ಅಲ್ಲವೇ? ಹಾಗೆಯೇ ಇದೂ !

24 comments:

  1. ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದಿರ

    ReplyDelete
  2. ತುಂಬಾ ಚೆನ್ನಾಗಿ ವಿವರಿಸಿದ್ದೀರಾ ಸಂದೀಪ್... ತುಂಬಾ ಸರಳ ಉದಾಹರಣೆಯೊಂದಿಗಿನ ವಿವರಣೆಯ ಜೊತೆ ಎಂದಿನಂತೆ ನಿಮ್ಮ ಸುಂದರ ಹಾಸ್ಯ ಲೇಪನ,ಓದುವಾಗ ಖುಷಿ ಕೊಡುತ್ತೆ. ಬಹುಷಃ ಇಂಜಿನಿಯರಿಂಗ್ ಶಿಕ್ಷಣದಲ್ಲೂ ಈ ರೀತಿ ವಿವರಿಸಿ ಕಲಿಸಿದರೆ, ವಿದ್ಯಾರ್ಥಿಗಳೆಲ್ಲ, ಕಲಿಯುವಿಕೆಯನ್ನು ಇಷ್ಟಪಡುತ್ತಾರೇನೋ ;-)

    ReplyDelete
  3. nimma lEKana tu0ba upayukta maahitiyannu oLago0Dide.
    tiLisiddakke. dhanyavaadagaLu. TaaylaT udaaraNeyalli naanu a0tha saafTwEr barede e0du hELidiri. neevu haarDver i0jiniyar aagi .. nanage go0dalavaaguttide.

    ReplyDelete
  4. ಧನ್ಯವಾದಗಳು ಸಂತೋಷ್ ,ಶ್ರೀನಿಧಿ,ದಿವ್ಯಾ ,ರೂಪಾ .


    @ ರೂಪಾ ,

    ಆ ವಾಕ್ಯದಲ್ಲಿ ಸ್ವಲ್ಪ ಮಿಸ್ಟೇಕ್ ಆಗಿತ್ತು! ಈಗ ಸರಿಪಡಿಸಿದೆ !

    ReplyDelete
  5. ಬಹಳ ಚೆನ್ನಾಗಿ, ಸರಳವಾಗಿ ಬರೆದಿದ್ದೀರಿ.
    [ಆದರೆ ನನ್ನ hardware(ಮೆದುಳಿ)ನಲ್ಲಿ ಅರ್ಥ ಮಾಡಿಕೊಳ್ಳುವಂಥಾ softwareಏ ಇಲ್ಲ!]

    ReplyDelete
  6. ಬಹಳ ಚೆನ್ನಾಗಿ, ತಮಾಶೆಯೊ೦ದಿಗೆ ಹೇಳಬೇಕಾದ್ದನ್ನು ಸರಳವಾಗಿ ಹೇಳಿದ್ದೀರಿ.

    ReplyDelete
  7. ತುಂಬಾ ಚೆನ್ನಾಗಿದೆ, ಸಿಂಪಲ ಆಂಡ್ ಸ್ವೀಟ್ ಅಂತಾರಲ್ಲ ಹಾಗೆ... ಟಾಯ್ಲೇಟ್ಟಿಗೆ ಸಾಫ್ಟವೇರ ಬರೆಯೊ ಉದಾಹರಣೆಗೆ ನಕ್ಕು ನಕ್ಕು ಸಾಕಾಯ್ತು, ಅದರೂ ಅದೂ ಸತ್ಯ ಅಲ್ಲೂ ಸಾಫ್ಟವೇರ ಬೇಕೇ ಬೇಕು... ನನಗೂ ಹೀಗೆ ಏನು ಕೆಲ್ಸ ಅಂತ ಪ್ರಶ್ನೆ ಕೇಳೀದಾರೆ ಆದರೆ ಅಸಲಿಗೆ ಅವರು "ಏನು ಘನಂದಾರಿ ಕೆಲ್ಸ ಮಾಡ್ತಿದಿ" ಅಂತಾನೇ ಕೇಳಿದ್ದು ಅಂತ ಈಗ ಗೊತ್ತಾಯ್ತು...

    ReplyDelete
  8. ಚೆನ್ನಾಗಿದೆ ಲೇಖನ. ನೀವು ನಟ್ಟು ಬೋಲ್ಟು ,ಪೇಂಯ್ಟು ಅಂಗ್ಡೀಲಿ ಕೆಲ್ಸ ಮಾಡ್ತೀರ ಅಂತ ಗೊತ್ತಿರ್ಲಿಲ್ಲ! ;-)

    ReplyDelete
  9. thumbaa chennagide...
    nimma lEkhana Odta nange B.G.L Swami bareda hasiru honnu nenapaythu...

    avru heege "botany" antaha subjectannoo koodaa avru tamma endina haasya mishrita shailiyalli rasavattagi barediddare...

    ReplyDelete
  10. mamu, you deleted my comments? This shows software engineers attitude. avara huLuku gottagi hoguttade anta! Be broadminded mamu.

    ReplyDelete
  11. ಹೌದು..ಎಲ್ಲರೂ 'ಪಂಡಿತ'ರಾಗಲು ಸಾಧ್ಯವಿಲ್ಲ..ಎಲ್ಲರೂ ನಿಮ್ ಥರ 'ಚ್ವೀಟಾ'ಗಿ ಬರೆಯೋಕೂ ಸಾಧ್ಯವಿಲ್ಲ ಬಿಡಿ. ಒಟ್ಟಿನಲ್ಲಿ ಒಳ್ಳೆ ಮಾಹಿತಿ. ಮುಂದುವರೆಯಲಿ.
    -ಧರಿತ್ರಿ

    ReplyDelete
  12. ಮೆಚ್ಚಿದ ಎಲ್ಲರಿಗೂ ಧನ್ಯವಾದಗಳು .

    ಮಿ.ಅನಾನಿಮಸ್ ,

    ನಾನು ಪದೇ ಪದೇ ಹೇಳ್ತಾ ಇರ್ತೀನಿ ನಾನು ಸಾಫ್ಟ್ವೇರ್ ಇಂಜಿನಿಯರ್ ಅಲ್ಲ ಅಂತ.
    ಈ ಲೇಖನದಲ್ಲೂ ಹೇಳಿದ್ದೀನಿ ಆದ್ರೂ ನೀನು ನಿನ್ನ ರಾಗ ಬದಲಾಯಿಸಲ್ಲ.ಅದಕ್ಕೆ ನಿನ್ನ ಕಮೆಂಟ್ ಗೆ ಕತ್ತರಿ ಹಾಕಿದ್ದು.

    ನಿನಗೆ ಅಷ್ಟು ಕಾಳಜಿ ಇದ್ದಲ್ಲಿ ನಿನ್ನ ನಿಜ ಹೆಸರು ಹಾಕಿಯೇ ಕಮೆಂಟ್ ಮಾಡು ,ಪ್ರಕಟಿಸ್ತೀನಿ.
    ಅದು ಬಿಟ್ಟು ಮುಂದೆ ಸಿಕ್ಕಾಗ ಚೆನ್ನಾಗಿ ಮಾತಾಡಿ ಇಲ್ಲಿ ಅನಾನಿಮಸ್ ಆಗಿ ಕಮೆಂಟ್ ಹಾಕೋ ಚಾಳಿ ಬಿಟ್ಟು ಬಿಡು.

    ReplyDelete
  13. ee software baala halataayitu. hosa soft... update maadi saahebre...chennagide baraha..
    kodsara

    ReplyDelete
  14. ಸಂದೀಪ್, ಇಲ್ಲಿ ಮೊದಲು ಓದುಗರೊಬ್ಬರು ಕಮೆಂಟ್ ಮಾಡಿ ಒಂದು ಪ್ರಶ್ನೆ ಕೇಳಿದ್ದರು. ಟಾಯ್ಲೆಟ್ ನಲ್ಲಿ ನೀರು ಹಾಕಿಕೊಳ್ಳುವುದು ಲೈಟ್ ಸೆನ್ಸರ್ ಹೊರತು ಸಾಫ್ಟ್ ವೇರ್ ನವರು ಬರೆದ ಸಾಫ್ಟ್ ವೇರಿನ ಬುದ್ದಿವಂತಿಕೆ ಏನಿಲ್ಲ ಅಂತ. ಹೌದಲ್ವೆ? ಅಲ್ಲಿ ಯಾರೂ ಏನೂ ಮಾಡದೇ ಸುಮ್ಮನೇ ನಿಂತು ಬಂದರೂ ಅದು ನೀರು ಹಾಕಿಕೊಳ್ಳತ್ತೆ. ನೀರು ಹಾಕದೇ ಹೋಗಿದ್ದಾನೆ ಅಥವಾ ಪಾಪಿ ಅವನು ಅಂತೆಲ್ಲಾ ಅದಕ್ಕೆ ತಿಳಿಯುವುದಿಲ್ಲ. :) ಸಾಫ್ಟ್ ವೇರ್ ಹಾರ್ಡ್ ವೇರ್ ಬಗ್ಗೆ ತಿಳಿಸುವ ಭರದಲ್ಲಿ ನೀವು ಬರೆದದ್ದು ಉತ್ಪ್ರೇಕ್ಷೆ ಆಗಲಿಲ್ಲವೇ?

    ReplyDelete
  15. Good one Mr.Kamath. Excellent narration...keep writing the good one...
    -- Santhosh Ananthapura

    ReplyDelete
  16. ಪ್ರಿಯ ವಿಕಾಸ್,

    ಉತ್ತರ ಕೊಡೋದು ಸ್ವಲ್ಪ ತಡ ಆಯ್ತು ಕ್ಷಮೆ ಇರಲಿ.

    "ಟಾಯ್ಲೆಟ್ ನಲ್ಲಿ ನೀರು ಹಾಕಿಕೊಳ್ಳುವುದು ಲೈಟ್ ಸೆನ್ಸರ್ ಹೊರತು ಸಾಫ್ಟ್ ವೇರ್ ನವರು ಬರೆದ ಸಾಫ್ಟ್ ವೇರಿನ ಬುದ್ದಿವಂತಿಕೆ ಏನಿಲ್ಲ ಅಂತ" ಒಬ್ಬ ಓದುಗರು ಕೇಳಿದ್ದರು .

    ಈ ಎಲ್ಲಾ ಕೆಲಸವನ್ನು ಸಾಪ್ಟ್ವೇರ‍್ ಇಲ್ಲದೆಯೂ ಮಾಡಬಹುದು ನಿಜ.software ಬರೀ ಹೈ ಫೈ ಕೆಲಸವನ್ನಷ್ಟೇ ಮಾಡುತ್ತೆ ಅನ್ನೋ ಭ್ರಮೆ ಬೇಡ ಅನ್ನೋದು ತಿಳಿಸಲು ನಾನು ಆ ಉದಾಹರಣೆ ಕೊಟ್ಟೆ ಅಷ್ಟೇ.

    ಬರೀ ಲೈಟ್ ಸೆನ್ಸರ್ ಏನೂ ಮಾಡಲ್ಲ ವಿಕಾಸ್.ಅದಕ್ಕೆ ಬರೀ ನೆರಳು ಬಿದ್ದರೆ ಒಂದು ಸಂಕೇತ ಕೊಡೋದಷ್ಟೇ ಗೊತ್ತು.Light Sensor ಸಂಕೇತ ಕೊಟ್ಟ ತಕ್ಷಣ ಒಂದು ರಿಲೇ ಆನ್ ಆಗುತ್ತೆ ನೀರು ಬಿಡೋಕೆ.

    ನೀವು ಟಾಯ್ಲೆಟ್ ಬೇಸಿನ್ ಮುಂದೇನೆ ನಿಲ್ಲಬೇಕೂಂತ ಏನೂ ಇಲ್ಲ ಅದರ ಮುಂದೆ ಸುಮ್ಮನೆ ಹಾದು ಹೋದರೂ ಸಾಕು,ಅದು ಸಂಕೇತ ಕಳಿಸುತ್ತೆ.

    ನಿಜವಾದ ಬುದ್ಧಿವಂತಿಕೆ ಇರೋದು ಯಾರಾದ್ರೂ ನಿಜವಾಗಿಯೂ ನಂ.೧ ಮಾಡಲು ನಿಂತಿದ್ದಾರೆಯೇ ಅಥವಾ ಸುಮ್ಮನೆ ಲೈಟ್ ಸೆನ್ಸರ್ ಮುಂದೆ ಹಾದು ಹೋಗಿದ್ದಾರೆ ಅನ್ನೋದನ್ನು ಪತ್ತೆ ಹಚ್ಚೋದು.
    ಬರೀ ಸೆನ್ಸರ್ ಗೆ ನೀವು ಆ ಕೆಲಸ ಕೊಟ್ರೆ ,ನೀವು ಎಲ್ಲಾ ಬೇಸಿನ್ ಮುಂದೆ ಹಾದು ಹೋದಾಗಲೂ ಅದು ಸುಮ್ ಸುಮ್ನೆ ನೀರು ಬಿಡುತ್ತೆ ಅಷ್ಟೇ!
    ಈಗ ಒಬ್ಬ ಮನುಷ್ಯ ಕನಿಷ್ಟ ಪಕ್ಷ ೪ ಸೆಕೆಂಡ್ ನಿಂತಿದ್ರೆ ಮಾತ್ರ ಕೌಂಟರ್ ಶುರು ಮಾಡೋ ಸಂಕೇತವನ್ನು ಸಾಪ್ಟ್ವೇರ್ ನೀಡುತ್ತೆ. ಈ ಕೆಲಸವನ್ನು ಸಾಫ್ಟ್ವೇರ್ ಇಲ್ಲದೆಯೂ ನಿಭಾಯಿಸಬಹುದು (resitor ,capacitor ಉಪಯೋಗಿಸಿ) ಆದ್ರೆ ನಾನು ಹೇಳಿದ್ದು ಸಾಪ್ಟ್ವೇರ್ ಅನ್ನು ಇಲ್ಲಿಯೂ ಬಳಸಬಹುದು/ಬಳಸುತ್ತಾರೆ ಅಂತ .ಅದು ಬಿಟ್ಟು ಸಾಪ್ಟ್ವೇರ್ ಇಲ್ಲದಿದ್ದರೆ ನಾವು ಉಚ್ಚೆ ಹೊಯ್ಯೋದಕ್ಕೆ ಸಾಧ್ಯವೇ ಇಲ್ಲ ಅನ್ನೋ ಮಾತಾಡಿದ್ರೆ ಅದು ಉಪ್ರೇಕ್ಷೆ ಆಗ್ತಿತ್ತು.
    ನೀವು ಹೇಳಿದ್ರಿ ಆ ಸೆನ್ಸರ್ ಮುಂದೆ ಏನೂ ಮಾಡದೆ ಸುಮ್ನೆ ನಿಂತುಕೊಂಡಿದ್ರೂ ಅದು ನೀರು ಹಾಕುತ್ತೆ ಅಂತ.ಖರ್ಚು ಕಮ್ಮಿ ಆಗಲಿ ಅಂತ ಕಂಪೆನಿಯರು ಅಂತ ಸಿಸ್ಟಮ್ ಅಳವಡಿಸಿರ್ತಾರೆ.
    ಸಾಪ್ಟ್ವೇರ್ ಮತ್ತೆ ಕ್ಯಾಮೆರಾ ಬಳಸಿ ಅಲ್ಲಿ ನಿಂತ ವ್ಯಕ್ತಿ ’ಏನೂ ಮಾಡದೇ’ ಇದ್ದಲ್ಲಿ ನೀರು ಹಾಕದೆ ಇರೋ ವ್ಯವಸ್ಥೆ ಕೂಡ ಮಾಡಬಹುದು .ಆದರೆ ಇದರ ಸಾಪ್ಟ್ವೇರ್ ದುಬಾರಿಯಾಗುತ್ತೆ .ಇಅದರಲ್ಲಿ ಇಮೇಜ್ ಪ್ರಾಸೆಸಿಂಗ್ ಕೆಲಸ ತುಂಬಾ ಕಠಿಣ .ಇದು ಸ್ವಲ್ಪ ಅಶ್ಲೀಲ ಅನಿಸಿದರೂ ನಿಜ.
    ಈಗಾಗಲೇ ನೀವು ನೋಡಿರಬಹುದು ಟ್ರಾಫಿಕ್ ಸಿಗ್ನಲ್ ಗಳಲ್ಲಿ ಕ್ಯಾಮೆರಾ ಸಿಗ್ನಲ್ ಜಂಪ್ ಮಾಡಿದವರ ವಾಹನದ ಫೋಟೋ ತೆಗೆಯುತ್ತೆ.ಅದೂ ನಂಬರ್ ಪ್ಲೇಟ್ ನ ಫೋಟೋ ತೆಗೆಯುತ್ತೆ.ಇಂಥ ಅದ್ಭುತ ಸಾಧ್ಯವಾಗಿದ್ದು ಹಾರ್ಡ್ವೇರ್ ಮತ್ತು ಸಾಪ್ಟ್ವೇರ್ ನ ಮೇಳೈಸುವಿಕೆಯಿಂದ.ನಂಬರ್ ಪ್ಲೇಟ್ ನ ಫೋಟೋ ತೆಗೆದ ತಕ್ಷಣ ಡ್ರೈವರ್ ನ ಮನೆಗೆ ಸಮನ್ಸ್ ಹೋಗೋ ಥರಾನೂ ಮಾಡಬಹುದು( ಡ್ರೈವಿಂಗ್ ಲೈಸೆನ್ಸ್ ನ ಡೇಟಾಬೇಸ್ ಇದ್ದಲ್ಲಿ).

    ಒಂದು ಕಾಲ ಇತ್ತು ವಿಕಾಸ್ ಆಗ ಬರೀ ಮೆಕ್ಯಾನಿಕಲ್ ದೇ ದರಬಾರು.ಮೊದಲ ಕಂಪ್ಯೂಟರ್ ಕೂಡ ಯಾವುದೇ ಸಾಪ್ಟ್ವೇರ್ ಇಲ್ಲದೆ ಬರೀ ಯಂತ್ರಗಳಿಂದಲೇ ಕೆಲಸ ಮಾಡುತ್ತಿತ್ತು.

    ಎಂಬೆಡ್ಡೆಡ್ ಸಾಪ್ಟ್ವೇರ್ ಅನ್ನೋದೇ ಪ್ರತ್ಯೇಕ ವಿಭಾಗ ಇದೆ.ಚಿಕ್ಕ ಚಿಕ್ಕ ಗ್ಯಾಡ್ಜೆಟ್ ಗಳು ಅಂದರೆ ಈ ಮೊಬೈಲ್ ,ಐ-ಫೋನ್ ,ಮುಂತಾದವುಗಳ ಒಳಗೆ ಇರೋದು ಇಂಥ ಎಂಬೆಡ್ಡೆಡ್ ಸಾಪ್ಟ್ವೇರ್.
    ಈ ಟಾಯ್ಲೆಟ್ ನಲ್ಲಿ ಕೂಡಾ ಇಂಥದ್ದೇ ಪುಟ್ಟ ಎಂಬೆಡ್ಡೆಡ್ ಸಾಧನ ಬಳಕೆ ಆಗುತ್ತೆ .

    ಸಾಪ್ಟ್ವೇರ್ ಇಲ್ಲದೆ ನಮ್ಮ ಬದುಕು ಅಸಹನೀಯ ವಿಕಾಸ್!

    ನಾವು ಒಪ್ಪಿದರೂ ಒಪ್ಪದಿದ್ದರೂ......!

    ReplyDelete
  17. vikaas avara prashneyi0da bEre Odugarige heccina viShayatiLida0te aayitu .. ibbarigo dhanyavaadagaLu.

    ReplyDelete
  18. For more info on software being used in toilet... microcontrollers(not microprocessors) used in robot use the software...
    http://www.techchee.com/2007/09/28/roboflush-a-lego-nxt-mindstorms-robot-that-auto-flushes-your-toilet/

    microprocessor based toilet flush pending patent
    http://www.freepatentsonline.com/5603127.html

    software can be used there also but it is not used as there are some simple electronic methods available... but in future intelligent toilet system will come...
    - manjunath

    ReplyDelete
  19. ಓಲು ಪೋತ ಮಾರಾಯ...? ಸುದ್ದಿ ಇಜ್ಜಿ... :)

    ReplyDelete
  20. Tumbane olle maahiti tumbane tamasheyaagi kottideera...:-)
    U r simply great Sandeep ;-)

    ReplyDelete
  21. sandeep tumbha ne chenagi software bhage varnisidiri sakat ista aytu hage information tumbha sigtu actually nangu e quention tale yali ittu enu madtare software engg anta ega adake ans sigttu thank u sandeep.
    tumbha tumbha enjoy madde.

    ReplyDelete
  22. ತುಂಬಾ ಧನ್ಯವಾದಗಳು ಅನಾನಿಮಸ್ ಅವರೇ!

    ReplyDelete