Sunday, August 2, 2009

ಕಲ್ಪವೃಕ್ಷದ ನೆನಪಿನ ಸುತ್ತ....

ಬೆಂಗಳೂರಿನಲ್ಲಿ ಬಹಳ ದಿನದಿಂದ ತಣ್ಣನೆಯ ವಾತಾವರಣ.ಈ ತಂಪಾದ ವಾತಾವರಣದಲ್ಲೂ ಕೆಲ ಜನರು ಎಳನೀರು ಹೀರುತ್ತಿದ್ದಿದ್ದು ನೋಡಿ ವಿಚಿತ್ರ ಅನ್ನಿಸಿತ್ತು.ಆದರೆ ಆಮೇಲೆ ಗೊತ್ತಾಯ್ತು ,ಬೆಂಗಳೂರಿನಲ್ಲಿ ಜನರು ಎಳನೀರು ಕುಡಿಯೋದು ಆರೋಗ್ಯಕ್ಕಾಗಿ ಅಂತ!ಹಾಗೆ ನೋಡಿದ್ರೆ ನಾನು ಕೂಡ ಅಪರೂಪಕ್ಕೊಮ್ಮೆ ಎಳನೀರು ಕುಡಿಯೋದು ಆರೋಗ್ಯದ ದೃಷ್ಟಿಯಿಂದಲೇ.

ಪ್ರತಿ ಸಲ ಎಳನೀರು ಕುಡಿಯುವಾಗಲೂ ಊರಿನ ನೆನಪು ಕಿತ್ತು ತಿನ್ನುವಂತೆ ಕಾಡುತ್ತದೆ.ಎಳನೀರು ಕೀಳಲೆಂದೇ ನಾನು ತೆಂಗಿನ ಮರ ಹತ್ತಲು ಕಲಿತಿದ್ದು ನೆನಪಾಗುತ್ತದೆ.ಮಂಗಳೂರಿನಲ್ಲಿದ್ದಷ್ಟು ದಿನ ಒಂದು ದಿನವೂ ಕಾಸು ಕೊಟ್ಟು ಎಳನೀರು ಕುಡಿದದ್ದು ನನಗೆ ನೆನಪಿಲ್ಲ.ಹಾಗಂತ ಬಿಟ್ಟಿ ಕುಡಿದೆ ಅಂದುಕೋಬೇಡಿ.ನಾನು ಯಾವತ್ತೂ ಕುಡೀತಾ ಇದ್ದಿದ್ದು ನಮ್ಮದೇ ತೋಟದ ,ನಾನೇ ಕಿತ್ತ ಹಚ್ಚ ಹಸುರು ಬಣ್ಣದ ತಂಪನೆಯ ಎಳನೀರು.

ನಮ್ಮ ತೋಟದಲ್ಲಿರೋ ತೆಂಗಿನ ಮರದಿಂದ ತೆಂಗಿನಕಾಯಿಗಳನ್ನು ಕೀಳಲು ಕರಿಯ ಅನ್ನೋನು ಬರ್ತಿದ್ದ. ’ದುನಿಯಾ’ ಸಿನೆಮಾಗೂ ಅವನಿಗೂ ಏನೂ ಸಂಬಂದವಿಲ್ಲ ಬಿಡಿ .ಇದು ಹನ್ನೆರಡು ವರ್ಷ ಹಿಂದಿನ ಕಥೆ!ಆಗೆಲ್ಲ ನಮಗೆ ಅವನೇ ಜೀವಂತ ಸೂಪರ್ ಮ್ಯಾನ್ .ಕೈಗೊಂದು ಹಗ್ಗ,ಕಾಲಿಗೊಂದು ಹಗ್ಗ ಕಟ್ಟಿ ಕುಪ್ಪಳಿಸುತ್ತ ಮರ ಹತ್ತುತ್ತಿದ್ದರೆ ಅದನ್ನು ನೋಡೋದೆ ದೊಡ್ಡ ಬೆರಗು ನಮಗೆ.ಆದ್ರೆ ಅವನು ತೋಟದ ಎಲ್ಲಾ ಮರಗಳಿಂದ ಕಾಯಿಗಳನ್ನು ಕಿತ್ತಾದ ಮೇಲೆ ಮಾತ್ರ ಅವನ ಮೇಲೆ ಅವನ ಪ್ರಾಣ ತೆಗ್ಯೋ ಅಷ್ಟು ಸಿಟ್ಟು ಬರ್ತಿತ್ತು ನನಗೆ.
ನಮ್ಮ ತೋಟದ ಕಂಪೌಂಡ್ ಸುತ್ತಲೂ ಹೆಂಚಿನ ಮನೆಗಳಿದ್ದವು.ಈ ಪಾಪಿ ಕರಿಯ.ಪ್ರತಿ ಮನೆಯ ಮೇಲೂ ಕನಿಷ್ಟ ಎರಡು ತೆಂಗಿನ ಕಾಯಿ ಬೀಳಿಸದೆ ಕೆಳಗೆ ಇಳೀತಿರಲಿಲ್ಲ.

ಹೀಗಾಗು ಕಾಯಿ ಕೀಳಲು ಕರಿಯ ಬಂದ ದಿನ ಸುತ್ತ ಮುತ್ತಲಿರುವ ಅಷ್ಟೂ ಮನೆಯವರಿಗೆ ’ಎಚ್ಚರಿಕೆ’ ನೀಡಿ ಬರ್ಬೇಕಿತ್ತು ನಾನು.ಅದಕ್ಕಿಂತ ದೊಡ್ಡ ತಲೆನೋವಿನ ಕೆಲಸ ಅಂದ್ರೆ ಅವರ ಮನೆಯ ಎಷ್ಟು ಹಂಚುಗಳು ಮುರಿದಿದೆ ಅನ್ನೋ ಲೆಕ್ಕ ಹಾಕಿ ಹಣ ಪಾವತಿ ಮಾಡೋ ಕೆಲಸ.ಹಲವು ಸಲ ಈ ಕರಿಯ ಬೇಕೂಂತ್ಲೇ ಆ ಮನೆಗಳ ಮೇಲೆ ಕಾಯಿ ಬೀಳಿಸ್ತಿದ್ದ ಅನ್ನೋ ಅನುಮಾನ ನನಗಿತ್ತು.ಯಾಕಂದ್ರೆ ಎಲ್ಲಾ ಮನೆಯವರೂ ಹಂಚಿನ ಮೂಲ ಬೆಲೆಗಿಂತ ಜಾಸ್ತಿ ಹಣ ಕೀಳುತ್ತಿದ್ದರು ನಮ್ಮಿಂದ!ಈ ಕರಿಯ ಆ ಮನೆಯವರ ಜೊತೆ ಸೇರಿ ’ಹಂಚು ಫಿಕ್ಸಿಂಗ್’ ಏನಾದ್ರೂ ಮಾಡಿರಬಹುದಾ ಅನ್ನೋ ಅನುಮಾನ ಯಾವಾಗ್ಲೂ ಕಾಡ್ತಾ ಇತ್ತು ನನಗೆ .

ಅವನು ತೋಟವಿಡೀ ಕಿತ್ತು ಬಿಸಾಕಿದ ಕಾಯಿಗಳನ್ನೆಲ್ಲ ಒಟ್ಟುಗೂಡಿಸಿ ಒಂದು ಕಡೆ ರಾಶಿ ಹಾಕೋ ಅಷ್ಟರಲ್ಲಿ ಪ್ರಾಣ ಹೋಗ್ತಿತ್ತು.ಆದರೆ ಎಲ್ಲಾ ಕೆಲಸ ಆದ ಮೇಲೆ ನಮಗೆಂದೇ ಕಿತ್ತ ಎಳನೀರು ಕುಡಿಯುವಾಗ ಮಾತ್ರ ಹೋದ ಪ್ರಾಣ ವಾಪಾಸ್ ಬರ್ತಿತ್ತು.

ಎಳನೀರಿನ ಅದ್ಭುತ ರುಚಿ ಸಿಕ್ಕಿದ ನನಗೆ ಕರಿಯನಿಗೋಸ್ಕರ ತಿಂಗಳು ಕಾಯೋದು ದೊಡ್ಡ ತಲೆ ನೋವಾಗಿತ್ತು.ಅದಕ್ಕಾಗೆ ತೆಂಗಿನ ಮರ ಹತ್ತಲು ಕಲಿಯೋದು ನನಗೆ ಅನಿವಾರ್ಯವಾಗಿತ್ತು .ತೆಂಗಿನ ಮರ ಹತ್ತಲು ಕಲಿಸುವ ಯಾವ ಕೋರ್ಸೂ ಇರದ ಕಾರಣ ನಾವೇ ಸ್ವಥ ಕಲೀಬೇಕಾಗಿತ್ತು ಅದನ್ನು.ಕರಿಯನ ಹಾಗೆ ಚಕ ಚಕನೆ ಹತ್ತಲು ಕಲಿಯಬೇಕು ಅನ್ನೋದು ನನ್ನ ಓರಗೆಯ ಹುಡುಗರ ದೊಡ್ಡ ಆಸೆಯಾಗಿತ್ತು ಆ ಕಾಲದಲ್ಲಿ!
ಆದರೆ ಎಷ್ಟು ಪ್ರಯತ್ನಿಸಿದರೂ ಅವನ ಕಲೆ ನಮಗೆ ಸಿದ್ಧಿಸಲೇ ಇಲ್ಲ!

ಅವನ ಆ ಚಾತುರ್ಯಕ್ಕೆ ಕಾರಣ ೭ ರೂಪಾಯಿಯ ಸಾರಾಯಿ ಪಾಕೀಟು(ನನಗೆ ರೇಟ್ ಹೇಗೆ ಗೊತ್ತು ಅಂತ ಆಶ್ಚರ್ಯ ಪಡಬೇಡಿ ಅದು ಜನರಲ್ ನಾಲೆಡ್ಜ್!) ಅಂತ ನಾವೆಲ್ಲಾ ಬಲವಾಗಿ ನಂಬಿದ್ವಿ!ಅದು ಒಂದು ರೀತಿಯಲ್ಲಿ ನಿಜವೂ ಆಗಿತ್ತು.

ದೂರದಲ್ಲಿ ನಿಂತು ನೋಡೋರಿಗೆ ತೆಂಗಿನ ಮರ ಹತ್ತೋದು ಒಂದು ಸುಲಭದ ಕೆಲಸ.ಆದರೆ ಬಲ್ಲವನೇ ಬಲ್ಲ ತೆಂಗಿನ ಮರ ಹತ್ತೋ ಕಷ್ಟವನ್ನು!
ತೆಂಗಿನ ಮರ ಹತ್ತೋದಕ್ಕೆ ಸಿಕ್ಕಾಪಟ್ಟೆ ಸ್ಟ್ಯಾಮಿನಾ ಬೇಕು.ಅದಕ್ಕಾಗೇ ಪಾಪ ಕರಿಯ ಎನರ್ಜಿ ಡ್ರಿಂಕ್ ಕುಡಿದೇ ಕೆಲಸ ಶುರು ಮಾಡ್ತಿದ್ದಿದ್ದು.

ಒಂದು ದಿನ ಅದು ಹೇಗೋ ಕಷ್ಟ ಪಟ್ಟು ಮರವನ್ನು ಅಪ್ಪಿ ಹಿಡಿದು ಒಂದೋಂದೇ ಇಂಚು ಹತ್ತಿ ಹತ್ತಿ ಅರ್ಧದಷ್ಟು ಹೋಗಿದ್ದೆ ನಾನು.ಅರ್ಧ ಮರ ಹತ್ತಿದ ಮೇಲೆ ಸುಸ್ತಾಗಿ ಹೋಗಿತ್ತು.ಸುಸ್ತಾಗಿದೆ ಅಂತ ಕೂರಲು ಸೀಟ್ ಬೇರೆ ಇರಲ್ವಲ್ಲ ಮರದಲ್ಲಿ! ಹಾಗೇ ಸುಧಾರಿಸಿ ಮುಂದುವರಿಸೋಣ ಅಂದುಕೊಂಡು ಹಾಗೇ ಮರವನ್ನು ಅಪ್ಪಿಕೊಂಡೇ ಸ್ವಲ್ಪ ಸಮಯ ಕಳೆದೆ.

ದುರಾದೃಷ್ಟವಶಾತ್ ಸುಸ್ತು ಕಡಿಮೆ ಆಗೋ ಬದಲು ಜಾಸ್ತಿ ಆಗ್ತಿತ್ತು.ಒಂದು ಹಂತದಲ್ಲಂತೂ ಕೈ ಬಿಟ್ಟೇ ಬಿಡೋಣ ಅಂತ ಕೂಡಾ ಅನ್ನಿಸಿತ್ತು !

ಕೈ ಬಿಟ್ಟಿದ್ದೆನಾ ಅಂತ ಕೇಳಬೇಡಿ.ಬಿಟ್ಟಿದ್ರೆ ನಾನೆಲ್ಲಿ ಇರ್ತಾ ಇದ್ದೆ ಈ ಬ್ಲಾಗ್ ಬರೆಯಲು !ಪ್ರಾಣ ಭಯದಿಂದ ಹಾಗೆ ಒಂದೊಂದೆ ಇಂಚು ಜಾರುತ್ತಾ ಜಾರುತ್ತಾ ನೆಲದ ಮೇಲೆ ಲ್ಯಾಂಡ್ ಆಗಿದ್ದೆ ಆ ದಿನ.ಆದರೂ ತೆಂಗಿನ ಮರ ಹತ್ತೋದನ್ನು ಕಲಿಯಲೇ ಬೇಕು ಅನ್ನೋ ಛಲ ಮೂಡಿತ್ತು ನನಗೆ.

ಅದು ಹೇಗೋ ಸತತ ಪ್ರಯತ್ನದಿಂದ ಆ ಕಲೆ ನನಗೂ ಸಿದ್ಧಿಸಿತು!(ಪಾಕೀಟಿನ ಸಹಾಯ ಇಲ್ಲದೆ!)

ಪ್ರೊಫೆಶನಲ್ ಆಗಿ ತೆಂಗಿನ ಮರ ಹತ್ತೋರು ಮರದ ತುದಿಯ ತನಕ ಹೋಗಲ್ಲ.ಮರದಲ್ಲೇ ಉದ್ದುದ್ದಕ್ಕೆ ನಿಂತು ಕಾಯಿಗಳನ್ನೆಲ್ಲಾ ಕತ್ತಿಯಿಂದ ಕಡಿದು ಕಡಿದು ಬೀಳಿಸುತ್ತಾರೆ.ಆದರೆ ನಮಗೆ ಪಾಕೀಟು ಇಲ್ಲದೇ ಇದ್ದದ್ದರಿಂದ -ಕ್ಷಮಿಸಿ ಅಷ್ಟೊಂದು ಸ್ಟ್ಯಾಮಿನಾ ಇಲ್ಲದೆ ಇದ್ದುದರಿಂದ ನಾವು ಮರದ ತುದಿ ತಲುಪಿದ ತಕ್ಷಣ ಮರದ ತುತ್ತ ತುದಿಗೆ ಹೋಗಿ ರೆಸ್ಟ್ ತಗೋತಾ ಇದ್ವಿ.ಸುಸ್ತೆಲ್ಲಾ ಕಡಿಮೆ ಆದ ಮೇಲೆ ಎಳನೀರನ್ನು ಕಿತ್ತು ಹುಷಾರಾಗಿ ನೆಲಕ್ಕೆಸೀಬೇಕು.ಸ್ವಲ್ಪ ಎಡವಟ್ಟಾದ್ರೂ ಎಳನೀರು ಒಡೆದು ಹೋಗ್ತಾ ಇತ್ತು.

ಮರ ಹತ್ತೋದೇ ದೊಡ್ಡ ಸಮಸ್ಯೆ ಅಂತ ಭಾವಿಸಿದ್ದ ನನಗೆ ಮರ ಹತ್ತಿದ ಮೇಲೆ ಒಳ್ಳೆಯ ಎಳನೀರನ್ನು ಗುರುತಿಸೋದೂ ಕಲೆ ಅಂತ ಗೊತ್ತಾಗಿದ್ದು ನಾನೂ ಮರ ಹತ್ತಲು ಕಲಿತ ಮೇಲೆ.ಕರಿಯ ಮಾತ್ರ ಕಾಯಿಗೆ ಬೆರಳಿನಿಂದ ಬಡಿದೇ ಯಾವುದು ಚೆನ್ನಾಗಿರೋ ಕಾಯಿ ಅಂತ ಗುರುತಿಸ್ತಾ ಇದ್ದ.ಅದನ್ನು ಗುರುತಿಸೋ ರಹಸ್ಯ ಹೇಳಿಕೊಡು ಅಂತ ಕೇಳಿದ್ರೆ ’ದಣಿ ಡಬ್ ಡಬ್ ಶಬ್ದ ಬಂದ್ರೆ ಚೆನ್ನಾಗಿರುತ್ತೆ ಟಕ್ ಟಕ್ ಅಂತ ಶಬ್ದ ಬಂದ್ರೆ ಅದು ಆಲ್ ಮೋಸ್ಟ್ ತೆಂಗಿನಕಾಯಿ ಅಂತ ಅರ್ಥ’ ಅಂತ ಹೇಳಿದ್ದ ಕರಿಯ.ಅದೆಷ್ಟು ಬಡಿದರೂ ನಮಗೆ ಏನೋ ಒಂದು ಶಬ್ದ ಕೇಳಿಸುತ್ತಿತ್ತೇ ವಿನಹ ಅದು ಡಬ್ ಡಬ್ ಆ ಅಥವ ಟಕ್ ಟಕ್ ಆ ಅನ್ನೋದು ಗೊತ್ತಾಗ್ತಾ ಇರ್ಲಿಲ್ಲ !ನಾನು ಹಾಗೇ ಸುಮ್ಮನೆ ನೋಡೋದಕ್ಕೆ ಗುಂಡಗಿರೋ ,ಹಸಿರಾಗಿರೋ ಎಳನೀರನ್ನು ಕಿತ್ತು ಬಿಸಾಕಿ ವಾಪಾಸ್ ಇಳಿದು ಬರ್ತಾ ಇದ್ದೆ.ಅದನ್ನು ಕುಡಿದು ನೋಡಿದ ಮೇಲೇನೇ ಗೊತ್ತಾಗೋದು ಅದು ಚೆನ್ನಾಗಿದೆಯೋ ಇಲ್ವೋ ಅನ್ನೋದು.

ಈ ತೆಂಗಿನ ಮರ ಹತ್ತೋ ವಿದ್ಯೆ ಕಲಿತ ಮೇಲೆ ನನಗೆ ಅದು ಬಹುತೇಕ ಉಪಯೋಗ ಬಿದ್ದಿದ್ದು ಪರೀಕ್ಷೆಯ ಸಮಯದಲ್ಲಿ.ಪರೀಕ್ಷೆಗೆ ಓದಲೆಂದು ಹುಡುಗರು ಕೆರೆ ದಡಕ್ಕೆ ,ಮರದ ಕೆಳಕ್ಕೆ ಅಂತ ಹೋಗ್ತಿದ್ರೆ ನಾನು ಮಾತ್ರ ಸೀದಾ ತೆಂಗಿನ ಮರ ಹತ್ತಿ ಅಲ್ಲೇ ಕೂತು ಓದ್ತಾ ಇದ್ದೆ.ಐದನೆಯ ತರಗತಿಯ ಎಲ್ಲಾ ಪರೀಕ್ಷೆಗೆ ಬಹುಷಃ ಅಲ್ಲೇ ಕೂತು ತಯಾರಿ ನಡೆಸಿದ್ದೆ.

ಬೆಂಗಳೂರಿನಲ್ಲಿ ತೆಂಗಿನ ಮರಗಳೇ ಅಪರೂಪ.ಅದೃಷ್ಟವಶಾತ್ ನಾವಿರುವ ರೂಮ್ ಹಿಂದೆ ಎರಡು ತೆಂಗಿನ ಮರಗಳಿವೆ.ಒಂದು ಮಧ್ಯರಾತ್ರಿ ಈ ಮರದ ತೆಂಗಿನಗರಿ ಕರೆಂಟ್ ವೈರ್ ಮೇಲೆ ಬಿದ್ದು ಸುಮಾರು ಎರಡು ನಿಮಿಷ ಟಪ್ ಟಪ್ ಅನ್ನೋ ಶಬ್ದ ಬಂದಿತ್ತು.ನಾವು ಎಲ್ಲೋ ಬಾಂಬ್ ಸ್ಫೋಟ ಆಗಿರ್ಬೇಕೇನೋ ಅನ್ನೋ ಆತಂಕದಿಂದ ಹೊರಗೆ ಬಂದು ನೋಡಿದಾಗಲೇ ಗೊತ್ತಾಗಿದ್ದು ನಮಗೆ ನಮ್ಮ ಕಂಪೌಂಡ್ ನಲ್ಲೇ ತೆಂಗಿನ ಮರ ಇದೆ ಅನ್ನೋದು!

ಈ ತೆಂಗಿನ ಮರ ಹತ್ತೋದಕ್ಕೆ ಮಾತ್ರ ಟ್ರೈ ಮಾಡಿಲ್ಲ ನಾನು !ಈಗ ಅಷ್ಟೊಂದು ಸ್ಟ್ಯಾಮಿನಾ ಇಲ್ಲ!(ಸರಕಾರದವರು ಮಾಡಿರೋ ಪಾಕೀಟು ಸಾರಾಯಿ ನಿಶೇಧಕ್ಕೂ ಸ್ಟ್ಯಾಮಿನಾಗೂ ಯಾವುದೇ ಸಂಬಂಧ ಕಲ್ಪಿಸಬೇಡಿ ಪ್ಲೀಸ್!)

21 comments:

  1. ತೆ೦ಗಿನ ಮರ ಹಾಗು ಮರ ಹತ್ತುವ ವೃತ್ತಾ೦ತ ತು೦ಬಾ ಚೆನ್ನಾಗಿದೆ. ಒ೦ದು ಸಾರಿ ಮರ ಹತ್ತಿ ಕೆಳಗೆ ಇಳಿದು ಬಿಟ್ರೆ, ಹೊಟ್ಟೆಯೆಲ್ಲಾ ಇಳಿದು ಹೋಗ್ತದೆ. :)

    ReplyDelete
  2. ತೆಂಗಿನ ಗಿಡ ಹತ್ತೋದು ಸಹ ೬೪ ವಿದ್ಯೆಗಳಲ್ಲಿ ಒಂದಾಗಿದೆ. ನೀವು ಅದನ್ನು ಕರಗತ ಮಾಡಿಕೊಂಡಿದ್ದು ಪ್ರಶಂಸನೀಯ.

    ReplyDelete
  3. Hats off to you Sandeep ! ತೆಂಗಿನ ಮರ ಹತ್ತುವವನಿಗಾಗಿ ಕಾಯುವ ಬದಲು, ನೀವೇ ಮರ ಹತ್ತುವುದನ್ನು ಕಲಿತದ್ದು ಗ್ರೇಟ್...
    ಎಳನೀರು ಕುಡಿದಷ್ಟೇ ಸಂತಸವಾಯಿತು - "ಕಲ್ಪವೃಕ್ಷದ ನೆನಪಿನ ಸುತ್ತ..." ಓದಿ :)

    ReplyDelete
  4. sandeep!!
    :-)
    malathi S

    ReplyDelete
  5. ಸಂದೀಪ,
    ತುಂಬಾ ಸುಂದರ ಬರಹ, ನಿಮ್ಮ ಎಳೆನೀರಿನ ಕಥೆ ಚೆನ್ನಾಗಿದೆ

    ReplyDelete
  6. ನಾನು ತೆ೦ಗಿನ ಮರ ಹತ್ತಲು ಪ್ರಯತ್ನ ಮಾಡಿ ಮಾಡಿ ಆಗದೇ ಬಿಟ್ಟು ಬಿಟ್ಟೆ ಮಾರಾಯ.... ನಾನು ಹತ್ತುತ್ತಿದ್ದುದು ಕರ್ಮಾರ ಮರಕ್ಕೆ ಮಾತ್ರ :)

    ನಿನಗೆ ಸ್ಟೆಮಿನಾ ಚೆನ್ನಾಗಿದೆ ಮಾರಾಯ...!

    ತು೦ಬಾ ಚೆನ್ನಾಗಿ ಬರೆದಿದ್ದೀಯ ಸ೦ದೀಪ್... ಓದುತ್ತಿದ್ದರೆ ನನ್ನ ಬಾಲ್ಯದ ನೆನಪುಗಳೆಲ್ಲಾ ಮನಸಿಗೆ ಬ೦ತು.... ಇ೦ತಹ ಬರಹಗಳು ಎಷ್ಟು ಖುಶಿ ಕೊಡುತ್ತದೆ...

    ReplyDelete
  7. sandy, bengalurudu edde bonda sikkunda

    ReplyDelete
  8. ಸಂದೀಪ್ ಅವರೆ,
    ಸುಂದರ ಬರಹ!! ನಿಮ್ಮೀ ಬರಹ ಓದಿ ನನ್ನ ಸೋದರತ್ತೆ ತೋಟದಲ್ಲಿ ಎಳನೀರು ಕುಡಿತಾಯಿದ್ದದ್ದು ನೆನಪಾಯ್ತು.. ಈಗ ಕುಡಿಬೇಕು ಅನ್ನಿಸ್ತಿದೆ:(

    ReplyDelete
  9. :D yenta viShya idroo adakkishitu punch sersi.. yeshtu ruchikattagi bariteeri... hats off to you

    ReplyDelete
  10. ನಿಮ್ಮ ಎಳನೀರು ಕಥೆ ಚೆನ್ನಾಗಿದೆ.
    ಒಮ್ಮೆ ನಾವು ಏನ್ ಎಸ ಎಸ ನಲ್ಲಿ ಶ್ರಮ ಧಾನ ಕ್ಕೆ ಹೋಗಿದ್ದಾಗ, ಮದ್ಯದಲ್ಲಿ ಬಾಯಾರಿಕೆ ಆಗಿ ಒಂದು ಒಂದು ತೆಂಗಿನ ತೋಟಕ್ಕೆ ನುಗ್ಗಿದ್ದೆವು, ಅಲ್ಲೇ ಒಬ್ಬರ ಹಿತ್ತಲಿ ನಿಂದ ದೋಟಿ ಯನ್ನು ಕಡ (ಕದ್ದು) ತಂದು ಕಿತ್ತೆವು, ಆದರೆ ದುರದೃಷ್ಟಕ್ಕೆ ಹೆಚ್ಚಿನ ಪಾಲು ನೆಲಕ್ಕೆ ಬಿದ್ದು ಒಡೆದು ಹೋದವು. ಕೊನೆಗೆ ನಮ್ಮಲ್ಲಿ ಒಬ್ಬನನ್ನು ಮರ ಹತ್ತಲು ಹೇಳಿದೆವು, ಅವನು ಅರ್ದ ಹತ್ತಿ ಸುಸ್ತಾಗಿ, ಮೇಲೆ ಹತ್ತಲು ಆಗದೆ, ಇಳಿಯಲು ಆಗದೆ, ಕೊನೆಗೆ ಏನೂ ಮಾಡಲಾಗದೆ ಹಾಗೆಯೇ ಮರವನ್ನು ತಬ್ಬಿಕೊಂಡು ಜಾರಿದನು. ಎದೆ ಮೇಲೆ ಗಾಯ ಆಗಿ, ೪ ದಿನ ಮಲಗಿರಬೇಕಾಯಿತು. ಓಹ್ ನಾನು ನಿಮ್ಮ ಬರಹ ಓದಿ ಸಿಕ್ಕಾಪಟ್ಟೆ ಫ್ಲಾಶ್ ಬ್ಯಾಕ್ ಹೋಗಿ ಬಿಟ್ಟೆ.
    ಲೇಖನ ಚೆನ್ನಾಗಿದೆ, ಆಮೇಲೆ ನೀವು ನಿಮ್ಮ ಕಾಂಪೌಂಡ್ ನಲ್ಲಿ ಇರುವ ತೆಂಗಿನ ಮರ ಹತ್ತಲು ಪ್ರಯತ್ನಿಸಿ, ಎಲ್ಲಾದರು ಎನರ್ಜಿ ಡ್ರಿಂಕ್ ನ ವ್ಯವಸ್ಥೆ ಮಾಡೋಣ... ಎನಂತಿರಿ?

    ReplyDelete
  11. Oh Man!
    You agree it or not but you are one hell of a writer!! Still I dont get that for what you are still hiding it from old friends :) Dont worry I will drag you out of this exile and let every one recognize the "True You"

    ReplyDelete
  12. ನಿಜ, ತೆಂಗಿನ ಮರ ಅತ್ತಿ-ಇಳಿಯಲು ತುಂಬಾ ಸ್ಟಾಮಿನ ಬೇಕು. ಇಲ್ಲದೆ ಇದ್ದರೆ, ಮರವನ್ನು ಅತ್ತಿ ನಂತರ ಇಳಿಯಲು ಆಗದೆ, ನಮ್ಮ ತಳ ಅಥವಾ ತಲೆ ಯನ್ನು ಒಡೆದು ಕೊಳ್ಳುವ ಪುರಾಣ.
    ಆಲ್ವಾ ಸಂದೀಪ್ ?

    ReplyDelete
  13. "ಸುಸ್ತಾಗಿದೆ ಅಂತ ಕೂರಲು ಸೀಟ್ ಬೇರೆ ಇರಲ್ವಲ್ಲ ಮರದಲ್ಲಿ!"

    ಸಕ್ಕತ್ತಾಗಿದೆ....

    ReplyDelete
  14. "prithiyinda shushruthanige..." lekana yaake ninna blog nalli kaanisuththilla....?

    ReplyDelete
  15. ಕಲ್ಪವೃಕ್ಷದ ನೆನಪಿನ ಸುತ್ತ...ಕಥೆ ಸಕತ್ತಾಗಿದೆ ಸಂದೀಪ್

    ReplyDelete
  16. ಕಥೆ ಚೆನ್ನಾಗಿದೆ ಸಂದೀಪ್,
    ಆದ್ರೆ ತೆಂಗಿನ ಮರ ಹತ್ತೋ ಪ್ರಯತ್ನದಲ್ಲಿ ಎದೆ ಮೇಲಿನ ಚರ್ಮ ಕಿತ್ತು ಕೊಂಡಿಲ್ವ ? ಮರವನ್ನ ಅಪ್ಪಿ ಹಿಡಿದು ಮೇಲೆ ಏರೋ ಸಮಯ ದಲ್ಲಿ , ಜಾರ್ತ ಇಳೀಬೇಕಾದ್ರೆ ನನ್ನೆದೆಯ ಚರ್ಮ ಎಲ್ಲ ಕಿತ್ತುಹೋಗಿತ್ತಪ್ಪ..
    ಮೇಲೆ ಕೂತು ಓದುತ್ತಿದ್ದೆ ಅಂದ್ಯಲ್ಲ ಇರುವೆ ಗೂಡುಗಲಿಲ್ದೆ ಇದ್ದಿದ್ದು ನಿನ್ ಪುಣ್ಯ ಮಾರಾಯ..

    ReplyDelete
  17. ನಮಸ್ಕಾರ
    ಕಲ್ಪವ್ರಕ್ಷದ ಕತೆ ಚೆನ್ನಾಗಿದೆ ನಿನ್ನ ಮೊದಲ Kinetic drive ಕತೆ ಬರಿ

    ReplyDelete
  18. ರಿಯಲಿ ಸೂಪರ್ಬ್ ಸಂದೀಪ್...

    ReplyDelete
  19. ಪ್ರತಿಕ್ರಿಯಿಸಿದ ಮಿತ್ರರಿಗೆ ಧನ್ಯವಾದಗಳು:)

    ReplyDelete