Friday, April 10, 2009

ಡಿಜಿಟಲ್ ತಂತ್ರಜ್ಞಾನ - ಏನಿದು ?

ಈಗ ಡಿಜಿಟಲ್ ಯುಗ .ಎಲ್ಲಿ ನೋಡಿದರೂ ಡಿಜಿಟಲ್ ತಂತ್ರಜ್ಞಾನದ ಬಗ್ಗೆ ಮಾತು.ಸಿನೆಮಾ ಆಗಲಿ,ಪತ್ರಿಕೋದ್ಯಮ ಆಗಲಿ ಎಲ್ಲಾ ಉದ್ಯಮದಲ್ಲೂ ಡಿಜಿಟಲ್ ತಂತ್ರಜ್ಞಾನದ ಬಗ್ಗೆ ಮಾತು ಬಂದೇ ಬರುತ್ತೆ .

ಆದರೆ ಬಹುತೇಕ ಜನರಿಗೆ ಈ ಡಿಜಿಟಲ್ ತಂತ್ರಜ್ಞಾನ ಏನು ಅನ್ನೋದು ಗೊತ್ತಿಲ್ಲ! ಗೊತ್ತಿರದೇ ಇರೋದು ತಪ್ಪೇನಲ್ಲ ಬಿಡಿ.ನಮ್ಮದಲ್ಲದ ಕೆಲಸದ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಲ್ಲ.ಆದರೆ ಈ ಡಿಜಿಟಲ್ ತಂತ್ರಜ್ಞಾನ ಏನು ಅನ್ನೋದು ಸ್ವಲ್ಪ ಗೊತ್ತಿದ್ರೆ ಒಳ್ಳೆಯದು .ಏನಂತೀರಿ?

ಹೆಸರೇ ಸೂಚಿಸುವ ಹಾಗೆ ಡಿಜಿಟಲ್ ಅಂದ್ರೆ ’ಸಂಖ್ಯೆ’ಗಳಿಗೆ ಸಂಬಂಧ ಪಟ್ಟದ್ದು ಅಂತ.ಅದರ ಅರ್ಥ ಇಷ್ಟೇ .ಯಾವುದೇ ಒಂದು ಮಾಹಿತಿಯನ್ನು ಸಂಖ್ಯೆಗಳಾಗಿ ಪರಿವರ್ತಿಸಿದರೆ ಅದೇ ಡಿಜಿಟಲ್ ತಂತ್ರಜ್ಞಾನ .

ಡಿಜಿಟಲ್ ತಂತ್ರಜ್ಞಾನ ಅಷ್ಟೊಂದು ಉಪಯುಕ್ತನಾ ಅಂತ ನಿಮಗೆಲ್ಲಾ ಸಂಶಯ ಬರಬಹುದು !

ಉತ್ತರ ’ಹೌದು’ ! ಖಂಡಿತ ಡಿಜಿಟಲ್ ತಂತ್ರಜ್ಞಾನ ತುಂಬಾನೇ ಉಪಯುಕ್ತ.ಅದಿಲ್ಲದೆ ಹೋಗಿದ್ರೆ ನಾವು ಈಗ ಅನುಭವಿಸುತ್ತಿರೋ ಎಲ್ಲಾ ಸೌಲಭ್ಯಗಳು ಮರೀಚಿಕೆಯಾಗೇ ಉಳಿಯುತ್ತಿತ್ತು.

ಡಿಜಿಟಲ್ ಬಗ್ಗೆ ಅರಿಯಬೇಕಾದ್ರೆ ಅದರ ವಿರುದ್ಧವಾದ ತಂತ್ರಜ್ಞಾನದ ಬಗ್ಗೆಯೂ ತಿಳಿಯಬೇಲ್ಲವೇ? ಆ ತಂತ್ರಜ್ಞಾನದ ಕೊರತೆಗಳ ಬಗ್ಗೆ ಅರಿವಿದ್ದರಷ್ಟೇ ಅಲ್ಲವೇ ಡಿಜಿಟಲ್ ತಂತ್ರಜ್ಞಾನದ ಉಪಯುಕ್ತತೆ ಬಗ್ಗೆ ಹೆಮ್ಮೆ ಮೂಡೋದು?

ಡಿಜಿಟಲ್ ತಂತ್ರಜ್ಞಾನಕ್ಕಿಂತ ಮುಂಚೆ ಇದ್ದ ತಂತ್ರಜ್ಞಾನ ಅಂದ್ರೆ ಅದೇ Analog ತಂತ್ರಜ್ಞಾನ.ನಮ್ಮ ತಾತ ಮುತ್ತಾತರು ಉಪಯೋಗಿಸ್ತಾ ಇದ್ದಿದ್ದು !ಡಿಜಿಟಲ್ ಇದರ ಮುಂದುವರಿದ ,ಸುಧಾರಿತ ತಂತ್ರಜ್ಞಾನ ಅಷ್ಟೇ!

ಏನು ಕನ್ಫ್ಯೂಸ್ ಮಾಡ್ತಾ ಇದ್ದೀನಾ ನಾನು? ಏನ್ ಮಾಡೋದು ಈ ವಿಷಯಾನೇ ಹಾಗೆ ! ಸ್ವಲ್ಪ ಎಡವಟ್ಟು!

ಹಿಂದೆ ಆಡಿಯೋ ಕ್ಯಾಸೆಟ್ ಇತ್ತಲ್ವ ಅದು ಅನಲಾಗ್ .ಈಗ ಐ-ಪಾಡ್ ಬಂದಿದೆ ಯಲ್ವ ಅದು ಡಿಜಿಟಲ್ ಅಷ್ಟೆ!

ಅನಾಲಾಗ್ ಸಂಕೇತಗಳನ್ನೇ ಡಿಜಿಟಲ್ ಆಗಿ ಪರಿವರ್ತಿಸೋದು ಅಷ್ಟೇ ಬೇರೆ ಇನ್ನೇನಿಲ್ಲ!

ಮೊದಲೇ ಹೇಳಿದ ಹಾಗೆ ಡಿಜಿಟಲ್ ಅಂದ್ರೆ ಸಂಖ್ಯೆಗಳಿಗೆ ಸಂಬಂಧಪಟ್ಟದ್ದು.ಅಂದ್ರೆ ಎಲ್ಲಾ ಸಂಕೇತಗಳನ್ನೂ ಸಂಖ್ಯೆಗಳಾಗಿ ಪರಿವರ್ತಿಸಿ ಶೇಖರಿಸಿಡೋದು ಅಷ್ಟೇ!

ಈ ಕಂಪ್ಯೂಟರ್ ಡಿಜಿಟಲ್ ತಂತ್ರಜ್ಞಾನಕ್ಕೆ ಅತ್ಯುತ್ತಮ ಉದಾಹರಣೆ.ಈ ಕಂಪ್ಯೂಟರ್ ನಲ್ಲಿ ಏನೇ ಶೇಖರಿಸಬೇಕಾದ್ರೂ ಅದು ಸಂಖ್ಯಾರೂಪದಲ್ಲಿರುತ್ತೆ.ನೀವೇನಾದ್ರೂ ಒಂದು MP3 ಹಾಡನ್ನು ಶೇಖರಿಸಬೇಕಾದ್ರೆ ಅದು ಸಂಖ್ಯಾರೂಪದಲ್ಲೇ ಹಾರ್ಡ್ ಡಿಸ್ಕ್ ನಲ್ಲಿ ಕೂತಿರುತ್ತೆ.ಅದನ್ನು ಸಂಖ್ಯಾರೂಪದಿಂದ ಮತ್ತೆ ಅನಲಾಗ್ ಗೆ ಪರಿವರ್ತಿಸಬೇಕು ಕೇಳಬೇಕಾದರೆ!ಹಾಗೆಯೇ ಸಿನೆಮಾನೂ ಸಂಖ್ಯಾರೂಪದಲ್ಲೇ ಇರುತ್ತೆ. ನೋಡಬೇಕಾದ್ರೆ ಅದನ್ನು ಮತ್ತೆ ಅನಲಾಗ್ ಆಗಿ ಪರಿವರ್ತಿಸಿ ನೋಡ್ತೀವಿ ಅಷ್ಟೇ !

ಹಾಗಿದ್ರೆ ಏನು ಪ್ರಯೋಜನ ಅಂತೀರಾ? ಅಲ್ಲೇ ಇರೋದು ಮಜಾ!

ಪ್ರಯೋಜನ ಅಂದ್ರೆ ತುಂಬಾ ಮಾಹಿತಿಯನ್ನು ಶೇಖರಿಸಿಡಬಹುದು.ಮತ್ತೆ ಸಂಖ್ಯಾರೂಪದಲ್ಲಿರೋ ಸಂಕೇತಗಳನ್ನು ಬೇರೆ ಬೇರೆ ರೂಪಕ್ಕೆ ಪರಿವರ್ತಿಸಬಹುದು,ಅದನ್ನು ಕುಗ್ಗಿಸಿ ಶೇಖರಿಸಿಡಬಹುದು .ಇನ್ನೂ ಏನೇನೂ ಪ್ರಯೋಜನಗಳಿವೆ.

ಈಗ ಹಾಡಿನ ಬಗ್ಗೆಯೇ ನೋಡೋಣ .ಹಾಡಂದ್ರೆ ಏನು ? ಅದು ಶಬ್ದ ಇನ್ನೇನೂ ವಿಶೇಷವಿಲ್ಲ ಹಾಡಲ್ಲಿ.

ಹೀಗಂದ್ರೆ ಸಂಗೀತಗಾರರು ಚಪ್ಪಲ್ಲಿ ಹುಡುಕ್ತಾ ಇರಬಹುದು ನನಗೆ ಹೊಡಿಯಲು!

ಆದರೆ ಶಾಂತವಾಗಿ ಯೋಚಿಸಿ ನೋಡಿ.ಹಾಂಡೆಂದರೆ ಏನು ?

ಅದು ಶಬ್ದ ! ಆದರೆ ಕ್ರಮಬದ್ಧವಾದ ಶಬ್ದ ಅಷ್ಟೇ. ಲಯವಿಲ್ಲದ ಶಬ್ದ ಕರ್ಕಶವಾಗಿರುತ್ತೆ.ಆದರೆ ಕ್ರಮಬದ್ಧವಾದ ಶಬ್ದ ಅದು ಶಬ್ದವೇ ಆಗಿದ್ದರೂ ಸಂಗೀತ ಅನ್ನಿಸಿಕೊಳ್ಳುತ್ತೆ.

ಹಳೆಯ ಕಾಲದಲ್ಲಿ ಈ ಶಬ್ದ/ಸಂಗೀತವನ್ನು ಕ್ಯಾಸೆಟ್ ಗಳಲ್ಲಿ ಶೇಖರಿಸಿಡ್ತಾ ಇದ್ದರು .ಈ ಸಂಗೀತ - ಅಂದ್ರೆ ಶಬ್ದದ ಏರಿಳಿತವನ್ನು ಹಾಗೇಯೇ ಶೇಖರಿಸಿಡ್ತಾ ಇದ್ರು ರೀಲ್ ನಲ್ಲಿ.ಹಾಗಾಗಿ ಬಹಳಷ್ಟು ಕ್ಯಾಸೆಟ್ ರೀಲ್ ಬೇಕಾಗ್ತಾ ಇತ್ತು ಶೇಖರಿಸೋದಕ್ಕೆ.ಇದೇ ಅನಲಾಗ್ ತಂತ್ರಜ್ಞಾನದ ಸಮಸ್ಯೆ.

ಆದ್ರೆ ಅದೇ ಅನಲಾಗ್ ಸಂಕೇತಗಳನ್ನು ಸಂಖ್ಯೆಗಳನ್ನಾಗಿ ಪರಿವರ್ತಿಸಿದ್ರೆ ಏನುಪಯೋಗ ತಿಳಿಯೋಣ ಬನ್ನಿ.

ನಿಮಗೆ ಒಂದು ದಿನದ ತಾಪಮಾನವನ್ನು ಅಳತೆ ಮಾಡಿ ಬರೆದಿಡಲು ನಿಮ್ಮ ಮೇಷ್ಟ್ರು ಹೇಳಿದ್ದಾರೆ ಅಂದುಕೊಳ್ಳಿ.ಆಗ ನೀವೇನು ಮಾಡಬಹುದು?

ಒಂದು ಲೇಖಕ್ ನೋಟ್ ಬುಕ್ ಹಾಗೂ ರೆನಾಲ್ಡ್ಸ್ ಪೆನ್ ತಗೊಳ್ತೀರಿ.ತಾಪಮಾನ ಬರೆಯಲು ಕೂತ್ಕೋತೀರಿ ಅಷ್ಟೇ!

ಆದ್ರೆ ಸಮಸ್ಯೆ ಅಂದ್ರೆ ತಾಪಮಾನ ಯಾವಾಗ ನೋಡಿ ಬರೆಯಬೇಕು ? ಪ್ರತಿ ಕ್ಷಣವೂ ಸೂರ್ಯನ ಶಾಖ ಬದಲಾಗುತ್ತಲೇ ಇರುತ್ತೆ.ಹಾಗಾಗಿ ನೀವು ಪ್ರತಿ ಸೆಕೆಂಡ್ ಗೆ ಒಂದು ಸಲ ಥರ್ಮೋ ಮೀಟರ್ ನೋಡಿ ತಾಪ ಮಾನ ಬರೆಯಬಹುದು.ಆದರೆ ಇಲ್ಲಿ ಒಂದು ಸಮಸ್ಯೆ ಇದೆ.ಹೀಗೆ ಪ್ರತಿ ಸೆಕೆಂಡ್ ನ ತಾಪಮಾನ ಬರೀತಾ ಇದ್ರೆ ನಿಮ್ಮ ಬಳಿ ಇರೋ ಲೇಖಕ್ ನೋಟ್ ಪುಸ್ತಕ ಹಾಗೂ ರಿಫೀಲ್ ಎರಡೂ ಒಂದೆರಡು ಘಂಟೆಯಲ್ಲಿ ಖಾಲಿಯಾಗೋದು ನಿಶ್ಚಿತ!

ಆಗ ನಿಮ್ಮ ತಲೆಗೊಂದು ಐಡಿಯಾ ಹೊಳೆಯುತ್ತೆ ! ಹೇಗೂ ಸೂರ್ಯನ ಶಾಖ ಪ್ರತಿ ಸೆಕೆಂಡ್ ಗೆ ಅಷ್ಟೊಂದು ಬದಲಾಗುವುದಿಲ್ಲ.ಹಾಗಾಗಿ ಸುಮಾರು ಒಂದು ಘಂಟೆಗೊಂದು ಸಲ ತಾಪಮಾನ ನೋಡಿ ಬರೆದುಕೊಂಡ್ರೂ ಅಷ್ಟೇನೂ ವ್ಯತ್ಯಾಸ ಬೀಳುವುದಿಲ್ಲ ಅನ್ನೋದು !

ಇದೇ ನೋಡಿ ಡಿಜಿಟಲ್ ತಲೆ !

ಅನಲಾಗ್ ಸಂಕೇತಗಳನ್ನು ಡಿಜಿಟಲ್ ಆಗಿ ಪರಿವರ್ತಿಸೋದರಲ್ಲಿ ಇಂಥದ್ದೇ ಒಂದು ಲಾಜಿಕ್ ಅಡಗಿದೆ.

ಸಂಗೀತವನ್ನು ಡಿಜಿಟಲ್ ಸಂಕೇತಗಳಾಗಿ ಹೇಗೆ ಪರಿವರ್ತಿಸಬಹುದು ಅಂತೀರಾ? ಸಿಂಪಲ್ ! ನೀವು ಸುಮ್ಮನಿದ್ದರೆ ಅದು ಸೊನ್ನೆ ಅಂದುಕೊಳ್ಳಿ. ಅದೇ ಜೋರಾಗಿ ಕಿರುಚಿದ್ರೆ ೨೦೦ ಅಂದುಕೊಳ್ಳಿ .

ಈಗ ಸೊನ್ನೆ ಮತ್ತೆ ಇನ್ನೂರರ ಮಧ್ಯೆ ಬರೋ ಸಂಖ್ಯೆಗಳೂ ಒಂದೊಂದು ಶಬ್ದದ ಏರಿಳಿತವನ್ನು ಪ್ರತಿನಿಧಿಸುತ್ತೆ. ಅಂದ್ರೆ ಸಲ್ಪ ಮೆಲ್ಲನೆ ಕಿರುಚಿದ್ರೆ ೨೦ ಅಂದುಕೊಂಡ್ರೆ ,ಅದಕ್ಕಿಂತ ತುಸು ಜೋರಾಗಿ ಕೂಗಾಡಿದ್ರೆ ೩೫ ಅಷ್ಟೇ!

ಸಂಗೀತವೂ ಇದೇ ರೀತಿ ಶಬ್ದದ ಏರಿಳಿತ.ಹಾಗಾಗಿ ಎಲ್ಲಾ ಪ್ರಕಾರದ ಸಂಗೀತವನ್ನೂ ಡಿಜಿಟಲ್ ಆಗಿ ಮಾರ್ಪಡಿಸಿ ಮೆಮೊರಿಯಲ್ಲಿ ಶೇಖರಿಸಿಡ್ತಾರೆ ಅಷ್ಟೇ.ನಿಮ್ಮ ಬಳಿ 32MB ಮೆಮೊರಿ ಇದ್ರೆ ಸುಮಾರು 3,20,00,000 ಸಂಖ್ಯೆಗಳನ್ನು ಶೇಖರಿಸಬಹುದು.

ಡಿಜಿಟಲ್ ತಂತ್ರಜ್ಞಾನದ ದೊಡ್ಡ ಲಾಭ ಅಂದ್ರೆ ಕಂಪ್ರೆಶನ್ . ಅಂದ್ರೆ ಒಂದು ದೊಡ್ಡ ಹಾಡನ್ನು ಡಿಜಿಟಲ್ ಸಂಕೇತಗಳಾಗಿ ಮಾರ್ಪಡಿಸಿದ ಮೇಲೆ ಅದರ ಸೈಜ್ ಅನ್ನು ಇನ್ನೂ ಕುಗ್ಗಿಸಬಹುದು!

ಅಸಲಿಗೆ MP3 ಅನ್ನೋದೇ ಒಂದು ಕಂಪ್ರೆಶನ್ ಟೆಕ್ನಾಲಜಿ !

ಹಾಗಿದ್ರೆ MP3 ಯ uncompressed format ಯಾವುದು ?

ಅದೇ ವೇವ್ (Wav) format.ಒಂದು ಹಾಡನ್ನು ಸಂಗೀತಗಾರ ಹಾಡುತ್ತಾ ಇರಬೇಕಾದ್ರೆ ಅದನ್ನು ಡಿಜಿಟಲ್ ಆಗಿ ಮಾರ್ಪಡಿಸಿ ಶೇಖರಿಸಿಟ್ಟಿದ್ರೆ ಅದು ವೇವ್ format ನಲ್ಲಿರುತ್ತೆ.ಅದನ್ನು ಕಂಪ್ರೆಸ್ ಮಾಡಿದ್ರೆ ಸಿಗೋದೇ MP3 Format.

ಒಂದು ಹಾಡು ವೇವ್ format ನಲ್ಲಿ 32MB memory ತಗೊಂಡ್ರೆ ಅದೇ ಹಾಡು MP3 Format ನಲ್ಲಿ ಬರೀ 5 MB ತಗೊಳ್ಳುತ್ತೆ ಆಷ್ಟೊಂದು ಕುಗ್ಗಿಸಬಹುದು ಡಿಜಿಟಲ್ ಸಂಕೇತಗಳನ್ನು !

ಹೇಗೆ ಅಂತೀರಾ? ನಿಮ್ಮ ಬಳಿ ಒಂದು ಆರು ಗಜದ ಸೀರೆ ಇದೆ ಅಂದುಕೊಳ್ಳಿ .ಅದನ್ನು ಒಣಗಿಸಬೆಕಾದ್ರೆ ತಂತಿಯಲ್ಲಿ ಹಾಕ್ತೀರಿ.ಆಗ ಬರೋಬ್ಬರಿ ಆರು ಗಜವೇ ಬೇಕಾಗುತ್ತೆ ಅದನ್ನು ಒಣಗಿಸಲು(ಇದು ವೇವ್ format)!
ಆದ್ರೆ ಅದನ್ನು ಕಪಾಟಿನಲ್ಲೀದಬೇಕಾದ್ರೆ ಚೆನ್ನಾಗಿ ಮಡಿಸಿ ಇಡ್ತೀರಾ ಅಲ್ವಾ? ಇದೇ ಡಿಜಿಟಲ್ ಕಂಪ್ರೆಶನ್ .ಈಗ ನೋಡಿ ಮಡಚಿ ಇಟ್ರೆ ಅದೆಷ್ಟು ಆರು ಗಜದ ಸೀರೆಗಳನ್ನು ಒಂದೇ ಕಪಾಟಿನಲ್ಲಿ ಶೇಖರಿಸಿಡಬಹುದು ! ಅಲ್ಲವೇ ?

ಇಂಥದ್ದೇ ಒಂದು ಕಂಪ್ರೆಶನ್ ತಂತ್ರಜ್ಞಾನವನ್ನು ಉಪಯೋಗಿಸೋದು MP3 ನಲ್ಲಿ.

ಸುಲಭವಾಗಿ ಹೇಳೋದಾದ್ರೆ ಹಾಡುಗಾರರ ಹಾಡು ರೆಕಾರ್ಡ್ ಮಾಡಬೇಕಾದ್ರೆ ಬಹಳಷ್ಟು ಅನಗತ್ಯಮಾಹಿತಿ ಅಂದರೆ ಮನುಷ್ಯರಿಗೆ ಕೇಳಿಸದ, ಉಪಯುಕ್ತವಲ್ಲದ ಮಾಹಿತಿಯೂ ರೆಕಾರ್ಡ್ ಆಗಿರುತ್ತೆ .ಈ ರೆಕಾರ್ಡ್ ಮಾಡಲ್ಪಟ್ಟ ಸಂಕೇತಗಳಿಂದ ಅನುಪಯುಕ್ತ ಮಾಹಿತಿಯನ್ನು ಅಳಿಸಿ ಬರೀ ಮನುಷ್ಯರಿಗೆ ಕೇಳಿಸುವಂಥ ಮಾಹಿತಿಯನ್ನಷ್ಟೇ ಶೇಖರಿಸಿಡೋದು MP3 ತಂತ್ರಜ್ಞಾನದ ಕೆಲಸ .

ಇದೇ ರೀತಿ ಎಲ್ಲವನ್ನೂ ಡಿಜಿಟಲ್ ಸಂಕೇತಗಳಾಗಿ ಶೇಖರಿಸಿಟ್ರೆ ಅದನ್ನು Process ಮಾಡೋದು ಸುಲಭ .ಅದೇ ಕಾರಣಕ್ಕೆ ಡಿಜಿಟಲ್ ಮಾಹಿತಿ ಅಷ್ಟೊಂದು ಪ್ರಸಿದ್ಧಿ ಆಗ್ತಾ ಇರೋದು.

ನಾವು ಬರೆಯವ ಬ್ಲಾಗ್ ,ಹಾಡು ,ಹಾಗೂ ಕಂಪ್ಯೂಟರ್ ನಲ್ಲಿರೋ ಎಲ್ಲವೂ ಕೊನೆಗೆ ಡಿಜಿಟಲ್ ಸಂಕೇತಗಳಾಗೇ ಶೇಖರಿಸಲ್ಪಡೋದು.

ಸುಮ್ಮನೆ ಒಂದು ಉದಾಹರಣೆ : ಯಾವುದೋ ಒಂದು ಶಬ್ದ ದೊಡ್ಡದಾಗಿ ಕಾಣಬೇಕಾದ್ರೆ ನೀವೇನ್ ಮಾಡ್ತೀರ ? Font Size ಹೆಚ್ಚು ಮಾಡ್ತೀರಾ ಅಲ್ವಾ?

ಅಂದರೆ ಮೊದಲಿಗೆ font size 10 ಇದ್ದು ಈಗ ನೀವು ಅದನ್ನು 15 ಮಾಡಬೇಕಾದ್ರೆ ಸುಮ್ಮನೆ 5 ಅನ್ನು add ಮಾಡಿದ್ರಾಯ್ತು ! ಇದೇ ಡಿಜಿಟಲ್ ಮಾಹಿತಿಯ ಉಪಯೋಗ.

ಮುಂಚೆ ಬರೀ ಆರು ಹಾಡುಗಳಿದ್ದ ಕ್ಯಾಸೆಟ್ ಎಷ್ಟು ದೊಡ್ಡದಾಗಿತ್ತು ಅಲ್ವಾ? ಆದ್ರೆ ಇವತ್ತು ಅದೇ ಕ್ಯಾಸೆಟ್ ಗಿಂತ ಚಿಕ್ಕದಾಗಿರೋ ಐ-ಪಾಡ್ ನಲ್ಲಿ ಸಾವಿರಾರು ಹಾಡು ಹಿಡಿಸುತ್ತೆ.

ಇದು ಸಾಧ್ಯವಾಗಿದ್ದು ಡಿಜಿಟಲ್ ತಂತ್ರಜ್ಞಾನದಿಂದ.ಇಂಥ ತಂತ್ರಜ್ಞಾನಕ್ಕೊದು ಸಲಾಂ ಹೇಳೋಣ !


ಸೂಚನೆ:ಇಲ್ಲಿ ಬರೆದಿರೋದು ಸಾಮಾನ್ಯ ಜನರಿಗೆ ಅರ್ಥವಾಗೋದಕ್ಕಷ್ಟೇ ! ಒಂದು MP3 Format ನ ಹಿಂದೆ Physics,Maths,ಹಾಗೆಯೇ ಬಹಳಷ್ಟು ವಿಜ್ಞಾನಿಗಳ,ಇಂಜಿನಿಯರ್ ಗಳ ಪರಿಶ್ರಮ ಅಡಗಿದೆ. ,ಮಾನವನ ಕಿವಿಯ ಸಾಮರ್ಥ್ಯ,ದೌರ್ಬಲ್ಯ ಗಳನ್ನೆಲ್ಲ ಅರಿತು ಈ MP3 Format ಅನ್ನು ಕಂಡು ಹುಡುಕಲಾಗಿದೆ !ಓದುಗರಿಗೆ ಅರ್ಥ ಮಾಡಿಸಲೆಂದೇ ಆದಷ್ಟು ಸರಳಗೊಳಿಸಲಾಗಿದೆ.

10 comments:

  1. ವಿಷಯವನ್ನು ಸರಳವಾಗಿ ಪಾಮರನಿಗೂ ಅರ್ಥವಾಗುವ೦ತೆ ನಿರೂಪಿಸಿದ್ದೀರಿ. ಚೆನ್ನಾಗಿದೆ

    ReplyDelete
  2. ಸಂದೀಪ್
    ಡಿಜಿಟಲ್ ತಂತ್ರಜ್ಞಾನ ವನ್ನು ಚೆನ್ನಾಗಿ ವಿವರಿಸಿದ್ದಿರ... ಆದರೆ ಈಗ ಟೆಕ್ನಾಲಜಿ ಇನ್ನು ಮುಂದೆ ಹೋಗಿದೆ.. mp3 ಎಲ್ಲ ಹಳೆಯದಗುತ್ತ ಇದೆ ಇವಾಗ mp4, WAV, PSP, AVI, MPEG ಗಳಲೆಲ್ಲ ಸ್ಟೋರ್ ಮಾಡಬಹುದು,,, ಚೀನಾ ನಲ್ಲಿ ಒಂದು DVD ಟೈಪ್ ಡಿಸ್ಕ್ ಬಂದಿದೆ , ಅದರಲ್ಲಿ more than 104 ಮೊವಿಎಸ್ ನ ಸ್ಟೋರ್ ಮಾಡಬಹದು... ಎಷ್ಟು ಫಾಸ್ಟ್ ಆಗಿ ಬೆಳಿತಾ ಇದೆ ಅಲ್ವ.. ಟೆಕ್ನಾಲಜಿ....

    ReplyDelete
  3. ಬರಹ ಚೆನ್ನಾಗಿದೆ. ತುಂಬಾ simple ಆಗಿ ಎಲ್ಲರಿಗೂ ಅರ್ಥವಾಗುವ ಹಾಗೆ ಬರೆದಿದ್ದೀರಿ.

    ReplyDelete
  4. ಕಂಡಕ್ಟರ್ ಕಟ್ಟಿಮನಿ 45EApril 11, 2009 at 4:20 PM

    ನಿಜಕ್ಕೂ ಸರಳವಾಗಿ ವಿವರಿಸಿದ್ದೀರಿ ತುಂಬಾ ಇಷ್ಟವಾಯಿತು...ದಯವಿಟ್ಟು ನಮ್ಮ ಬಸ್ ನಲ್ಲಿ ತೂಕಡಿಸಬೇಡಿ...

    ReplyDelete
  5. ಇದಕ್ಕಿಂತ ತೀರ ಸರಳವಾಗಿ ಹೇಳಲಾಗಲಿಕ್ಕಿಲ್ಲ ಬಿಡಿ, ಇದನ್ನು ಓದಿಯೂ ಇನ್ನೂ ಯಾರಿಗಾದರೂ ತಿಳಿದಿಲ್ಲ ಅಂದರೆ ಅವರು ಹಾಡು ಕೇಳಿ ಸುಮ್ಮನಾಗುವುದು ಒಳಿತು. ಸ್ವತಃ ಟೆಲಿಕಾಂ ಇಂಜನೀಯರು ನಾನು, ಈ ಅನಲಾಗ ಡಿಜಿಟಲ್ ತಂತ್ರಜ್ಞಾನಗಳೇ ಹಾಗೆ ಅಷ್ಟು ಕ್ಲಿಷ್ಟ, AM,FM,PM,PAM,PCM ಅಂತ ಎಷ್ಟೊ ವಿಧಗಳನ್ನು ಅರ್ಥ್ ಮಾಡಿಕೊಳ್ಳಲು ನೂರಾರು ಚಿತ್ರ, ಗ್ರಾಫು ಬರೆದು ನೋಡಿ ತಲೆ ಕೆಡಿಸಿಕೊಂಡಿದ್ದು ಇನ್ನೂ ನೆನಪಿದೆ. ಅದೇನೂ ಇಲ್ಲದೇ ಬರೀ ಉದಾಹರಣೆಗಳಲ್ಲೇ ಅತ್ಯಂತ ಚೆನ್ನಾಗಿ ವಿವರಿಸಿದ್ದೀರಿ.

    ReplyDelete
  6. ಸಂದೀಪ್,

    ಡಿಜಿಟಲ್ ತಂತ್ರಜ್ಞಾನದ ಉತ್ತಮವಾದ ಬರಹ...ಸುಲಭವಾಗಿ ಅರ್ಥವಾಗುತ್ತದೆ..ನನಗೆ ಉಪಯುಕ್ತವೆನಿಸುತ್ತದೆ...
    ಧನ್ಯವಾದಗಳು...

    ReplyDelete
  7. ಸಂಶಯವೇ ಇಲ್ಲ, ಡಿಜಿಟಲ್ ತಂತ್ರಜ್ಞಾನ ಬಹಳ ಮುಂದುವರಿದಿದೆ, ಇಂದಿನ ನಮ್ಮ ಆರಾಮದಾಯಕ ಜೀವನಕ್ಕೆ ಅದರ ಕೊಡುಗೆ ಅಪಾರ, ವಿವರಣೆ ಹಿಡಿಸಿತು,

    ReplyDelete
  8. ನನಗೆ ಸುಲಭವಾಗಿ ಅರ್ಥವಾಯಿತು.

    ತು೦ಬಾ ಸರಳ ಮತ್ತು ಮಾಹಿತಿಪೂರ್ಣ ಬರಹ. ಇ೦ತಹ ಬರಹಗಳು ಬರುತ್ತಿರಲಿ....

    ReplyDelete
  9. ಅಮ್ಮ ಮಾಡಿದ ಅಡುಗೆಯನ್ನು ಡಿಜಿಟಲ್ ಆಗಿ ಪರಿವರ್ತಿಸಿ ಈ-ಮೇಲ್ ಮೂಲಕ ಕಳಿಸಿ ನಾನದನ್ನು ಡೌನ್ ಲೋಡ್ ಮಾಡಿಕೊ೦ಡು ತಿನ್ನುವ೦ತಿದ್ದರೆ ಎಷ್ಟು ಚೆನ್ನಾಗಿರೋದು...

    ReplyDelete