Thursday, June 18, 2009

ಈ ಸಾಫ್ಟ್ ವೇರ್ ಅಂದ್ರೆ ಏನಣ್ಣಾ ...?

ಬಹಳಷ್ಟು ಜನರಿಗೆ ’ಆಗಾಗ’ ಕಾಡುವ ಪ್ರಶ್ನೆ ಅಂದ್ರೆ ಈ ಸಾಫ್ಟ್ವೇರ್ ಇಂಜಿನಿಯರ್ ಗಳು ಏನ್ ಕೆಲಸ ಮಾಡ್ತಾರೆ ? ಅನ್ನೋದು.ನಿಜವಾಗಿ ನೋಡೋದಕ್ಕೆ ಹೋದ್ರೆ ಅವರಿಗೆಲ್ಲಾ ಕಾಡೋದು ’ಅಷ್ಟೊಂದು ಜಾಸ್ತಿ ಸಂಬಳ ಕೊಡೋ ಅಂಥ ಘನಂದಾರಿ ಕೆಲಸ ಏನ್ ಮಾಡ್ತಾರೆ? ’ ಅಂತ ! ಆದ್ರೆ ಕೆಲವರು ಸ್ವಲ್ಪ ಜಾಣತನ ಉಪಯೋಗಿಸಿ ಮೊದಲನೇ ಪ್ರಶ್ನೆ ಕೇಳಿ ಬಿಡ್ತಾರೆ !

ಎರಡನೇ ಪ್ರಶ್ನೆಗೆ ಉತ್ತರ ಸ್ವಲ್ಪ ಸರಳವಾಗಿದೆ.ಚಿಕ್ಕ ದರ್ಶಿನಿ ಹೋಟೇಲಿನಲ್ಲಿ ತಟ್ಟೆ ಎತ್ತೋನಿಗೆ ತಿಂಗಳಿಗೆ ಎರಡು ಸಾವಿರ ಕೊಡ್ತಾರೆ ಅದೇ ಪಂಚತಾರಾ ಹೋಟೇಲಿನಲ್ಲಿ ತಟ್ಟೆ ಎತ್ತಿದ್ರೆ ’ಸ್ವಲ್ಪ’ ಜಾಸ್ತಿ ಸಂಬಳ ಕೊಡಲ್ವ ಹಾಗೇ ಇದು .ಅದರ ಬಗ್ಗೆ ಜಾಸ್ತಿ ತಲೆ ಕೆಡಿಸ್ಕೊಳ್ಳಬೇಡಿ ನೀವು.

ಅಲ್ಪ ಸ್ವಲ್ಪ ಸಾಫ್ಟ್ವೇರ್ ಬಗ್ಗೆ ತಿಳ್ಕೊಂಡಿದ್ರೆ ಎಲ್ಲರಿಗೂ ಉಪಯೋಗವಾಗುತ್ತೆ ಅನ್ನೋ ಕಾರಣಕ್ಕೆ ಈ ಲೇಖನ(ಬರೆಯೋಕೆ ನನಗೆ ಬೇರೆ ವಿಷಯ ಸಿಕ್ಕಿಲ್ಲ ಅಂತ ನೀವು ತಪ್ಪು ತಿಳ್ಕೊಂಡ್ರೆ ನಾನೇನೂ ಮಾಡೋಕಾಗಲ್ಲ ಬಿಡಿ!) ಬರೀತಾ ಇದ್ದೀನಿ.

ಇಂಥ ಲೇಖನವನ್ನು ಗೆಳೆಯ ವಿಜಯ್ ರಾಜ್ ಕನ್ನಂತರವರು ಈಗಾಗಲೇ ಬರೆದಿದ್ದಾರೆ.ಅದನ್ನು ಓದದೆ ಇರೋರು,ಓದಿದ್ದರೂ ಮರೆತು ಹೋದವರು ಮತ್ತೊಮ್ಮೆ ಓದಲಿ ಅಂತ ಅಷ್ಟೆ .

ನಾನು ಸಾಫ್ಟ್ವೇರ್ ಇಂಜಿನಿಯರ್ ಅಲ್ಲ ! ನಾನು ಹಾರ್ಡ್ವೇರ್ ಇಂಜಿನಿಯರ್ ,ನಾವುಗಳು ತಯಾರಿಸಿದ ಹಾರ್ಡ್ವೇರ್ ನಲ್ಲಿ ನಮ್ಮ ಗೆಳೆಯ/ಗೆಳತಿಯರು ಬರೆದ ಸಾಫ್ಟ್ವೇರ್ ಕೆಲಸ ಮಾಡೋದು .ಇದರಿಂದ ತಿಳಿಯೋದೇನೆಂದರೆ ಹಾರ್ಡ್ವೇರ್ ಇಲ್ಲದೆ ಸಾಫ್ಟ್ವೇರ್ ಕೆಲಸ ನಡೆಯಲ್ಲ ಅಂತ.ಹಾರ್ಡ್ವೇರ್ ಅಂದ ತಕ್ಷಣ ಬಹಳಷ್ಟು ಜನರಿಗೆ ತಲೆಗೆ ಹೊಳೆಯೋದು ನಟ್ಟು ಬೋಲ್ಟು ,ಪೇಂಯ್ಟು!

ಆ ಹಾರ್ಡ್ವೇರ್ ಬೇರೆ ಸ್ವಾಮಿ .ಒಬ್ಬ ಇಂಜಿನಿಯರ್ ಗೆ ಹಾರ್ಡ್ವೇರ್ ಅಂದರೆ ಕಂಪ್ಯೂಟರ್ ಮದರ್ ಬೋರ್ಡ್ ಥರದ್ದು.ಹಾಗೆ ನೋಡೋದಕ್ಕೆ ಹೋದರೆ ಬಹಳಷ್ಟು ವಸ್ತುಗಳು ಕಂಪ್ಯೂಟರ್ ಗಳೆ.ಕಂಪ್ಯೂಟರ್ ಅನ್ನು ನಮಗೆ ಬೇಕಾದ ಕೆಲಸಕ್ಕೆ ಬಹಳ ಸುಲಭವಾಗಿ ಬಗ್ಗಿಸಬಹುದು.ಅಂದರೆ ಹಾಡು ಕೇಳಬಹುದು ಅಥವಾ ಅದೇ ಕಂಪ್ಯೂಟರ್ ನಲ್ಲಿ ಕಡತಗಳನ್ನು ಟೈಪಿಸಿ ಮುದ್ರಿಸಲೂ ಬಹುದು.

ಅದೇ ಒಂದು MP3 Player ಆದ್ರೆ ಬರೀ ಹಾಡನ್ನಷ್ಟೇ ಕೇಳಬಹುದು.ಅದರಲ್ಲೂ ಕಂಪ್ಯೂಟರ್ನಲ್ಲಿರೋ ಅಂಥದ್ದೇ ಒಂದು ಶಕ್ತಿಶಾಲಿ ಪ್ರಾಸೆಸರ್ ಇದೆ.ಆದರೆ ಅದಕ್ಕೆ ಬರೀ ಹಾಡು ಹಾಡಿಸೋದಷ್ಟೆ ಗೊತ್ತು!ಅದು ಬರೀ ಒಂದು ರೀತಿಯ ಕೆಲಸವನ್ನು ಮಾತ್ರ ಮಾಡೋದರಿಂದ ಅದರಲ್ಲಿ ಉಪಯೋಗಿಸೋ ಪ್ರಾಸೆಸರ್ ಬೆಲೆ ತುಂಬಾ ಕಮ್ಮಿ ಇರುತ್ತೆ.ಹಾಗಾಗಿ MP3 Player ಬೆಲೆ ಕಡಿಮೆ.ಕಂಪ್ಯೂಟರ್ ಬೆಲೆ ತೀರಾ ಜಾಸ್ತಿ.

ಅದೇ ರೀತಿ ವಾಷಿಂಗ್ ಮೆಶಿನ್ ನಲ್ಲೂ ಒಂದು ಪ್ರಾಸೆಸರ್ ಇದೆ.ಆದರೆ ಪಾಪ ಅದಕ್ಕೆ ಬಟ್ಟೆ ಒಗೆಯೊದು ಬಿಟ್ಟು ಬೇರೇನೂ ಗೊತ್ತಿಲ್ಲ! ಈಗೀಗ ಅದರ ಬುದ್ಧಿ ಸ್ವಲ್ಪ ಬೆಳೆದಿದೆ ಅನ್ನಿ.ಬಟ್ಟೆ ಒಗೆಯೋದಲ್ಲದೆ ಒಣಗಿಸಿಯೂ ಕೊಡುತ್ತೆ.ಟಿ.ವಿ ಯಲ್ಲೂ ಪ್ರಾಸೆಸರ್ ಇದೆ ಆದರೆ ಅದಕ್ಕೆ ವಿಡೀಯೋ ತೋರಿಸೋದು ಬಿಟ್ಟರೆ ಬೇರೇನೂ ಗೊತ್ತಿಲ್ಲ.

ಸಾರಾಂಶ ಇಷ್ಟೇ .ಈ ಎಲ್ಲಾ ವಸ್ತುಗಳೂ ಒಂದು ಮಿನಿ ಕಂಪ್ಯೂಟರ್ ಇದ್ದ ಹಾಗೆ .ಹಾಗಾಗಿ ಈ ಎಲ್ಲಾ ವಸ್ತುಗಳಲ್ಲೂ ಸಾಫ್ಟ್ವೆರ್ ಇದ್ದೇ ಇದೆ.ಕಂಪ್ಯೂಟರ್ ನಲ್ಲಿರೋ ಹಾಗೇನೇ ಈ ಟಿ.ವಿ ,ವಾಷಿಂಗ್ ಮೆಶಿನ್,ಸೆಟ್ ಟಾಪ್ ಬಾಕ್ಸ್ ,ಶೇವಿಂಗ್ ಮೆಶಿನ್,ಮಿಕ್ಸಿ ಎಲ್ಲಾದರಲ್ಲೂ ಪ್ರಾಸೆಸರ್ ,ಸಾಫ್ಟ್ವೇರ್ ಎರಡೂ ಇದ್ದೇ ಇರುತ್ತೆ .

ನಮಗೆ ಗೊತ್ತಿಲ್ಲ ಅಷ್ಟೇ !

ಮನುಷ್ಯನ ಉದಾಹರಣೆ ತಗೊಳ್ಳೋದಾದ್ರೆ ಕೈ ಒಂದು ಹಾರ್ಡ್ವೇರ್ ಅದೇ ಮೆದುಳು ಪ್ರಾಸೆಸರ್. ನಿಮಗೆ ಯಾರಿಗಾದರೂ ಹೊಡೆಯಬೇಕೆಂದರೆ.....ಬೇಡ ಬಿಡಿ ನೆಗೆಟಿವ್ ಥಿಂಕಿಂಗ್ ಬೇಡ! ನಿಮಗೆ ಯಾರನ್ನಾದರೂ ಮುಟ್ಟಬೇಕೆನಿಸಿದ ತಕ್ಷಣ ಏನಾಗುತ್ತೆ ಅಂದರೆ ಪ್ರಾಸೆಸರ್ ಆದ ಮೆದುಳಿಗೆ ಸಂಕೇತಗಳು ಹೋಗಿ ನಿಮ್ಮ ಕೈ ಯಾರನ್ನು ಮುಟ್ಟಬೇಕೋ ಅವರನ್ನು ಮುಟ್ಟುತ್ತೆ.ಇಲ್ಲಿ ಕೈ ಹಾರ್ಡ್ವೇರ್, ಮೆದುಳು ಪ್ರಾಸೆಸರ್ ,ಆದರೆ ಯಾರನ್ನು ಮುಟ್ಟಬೇಕು ,ಹೇಗೆ ಮುಟ್ಟಬೇಕು ,ಎಲ್ಲಿ ಮುಟ್ಟಬೇಕು ಅನ್ನೋ ಸಂಕೇತಗಳು ಕೊಡೋದಕ್ಕೆ ಒಂದು ಸಾಫ್ಟ್ವೇರ್ ಇದೆ.ದುರ್ದೈವವಶಾತ್ ಮಾಮೂಲಿನಂತೆ ಇಲ್ಲೂ ಸಾಫ್ಟ್ವೇರ್ ಕಣ್ಣಿಗೆ ಕಾಣಿಸಲ್ಲ!ಇಂಥ ಒಂದು ಅದ್ಭುತ ಸಾಫ್ಟ್ವೇರ್ ಬರೆದ ಇಂಜಿನಿಯರ್ ಹೆಸರು ’ದೇವರು’!

ಯಾರ್ಯಾರನ್ನೋ ಮುಟ್ಟೋದಕ್ಕೆ ನಿಮಗೆ ನಿಮ್ಮ ಪ್ರಾಸೆಸರ್ ಹೇಳಿದ್ರೆ ನಿಮ್ಮ ಸಾಫ್ಟ್ವೇರ್ ಹಾಳಾಗಿದೆ ಅಂತ ಅರ್ಥ!

ವಾಶಿಂಗ್ ಮೆಶಿನ್ ಉದಾಹರಣೆ ತಗೊಂಡ್ರೆ ಮೋಟರ್ ಎಷ್ಟು ಹೊತ್ತು ತಿರುಗಬೇಕು ,ಯಾವಾಗ ತಿರುಗೋದನ್ನು ನಿಲ್ಲಿಸಬೇಕು,ಯಾವಾಗ ಬಿಸಿಗಾಳಿ ಊದಬೇಕು ಎಲ್ಲಾದನ್ನು ನಿರ್ಧರಿಸೋದು ಸಾಫ್ಟ್ಟ್ವೇರ್ ಕೆಲಸ.

ಅದೇ ರೀತಿ ಟಿ.ವಿ ಯಲ್ಲಿ ರಿಮೋಟ್ ನಲ್ಲಿ ಬಟನ್ ಒತ್ತಿದ ತಕ್ಷಣ ಯಾವ ಚಾನೆಲ್ ಬದಲಾಯಿಸಬೇಕು ಅನ್ನೋದನ್ನು ನಿರ್ಧರಿಸೋದು ಸಾಫ್ಟ್ವೇರ್ .ಬದಲಾಯಿಸೋದು ಮಾತ್ರ ಪ್ರಾಸೆಸರ್ !ಈ ಹಾರ್ಡ್ವೇರ್ ಒಂಥರಾ ಗುಲಾಮ ಕಣ್ರಿ ಅದಕ್ಕೆ ಸಾಫ್ಟ್ವೇರ್ ಇಂಜಿನಿಯರ್ಗಳಿಗೆ ಸ್ವಲ್ಪ ಕೊಬ್ಬು ಜಾಸ್ತಿ,ಎಲ್ಲಾ ನಮ್ಮಿಂದಲೇ ಅಂತ .ಏನ್ ಮಾಡೋದು ಎಲ್ಲ ಪಡೆದು ಬಂದಿರಬೇಕು.

ಇನ್ನೊಂದು ಉದಾಹರಣೆ ತಗೊಳ್ಳೋಣ ATM ದು .ಹಣದ ವಿಚಾರ ಬಂದಾಗ ಎಲ್ಲರ ಕಿವಿಯೂ ನಿಮಿರುತ್ತೆ .ಇದು ಬರೀ ಉದಾಹರಣೆ ಮಾತ್ರ ಜಾಸ್ತಿ excite ಆಗ್ಬೇಡಿ.

ATM ನಿಂದ ನಿಮಗೆ ಒಂದು ಲಕ್ಷ ರೂಪಾಯಿ ಡ್ರಾ ಮಾಡಬೇಕು ಅಂದುಕೊಳ್ಳಿ (ಅದಕ್ಕೆ ಮೊದಲೇ ಹೇಳಿದ್ದು ಉದಾಹರಣೆ ಅಂತ)! ನೀವು ಕಾರ್ಡ್ ತುರುಕಿಸಿದ ತಕ್ಷಣ ನಿಮ್ಮ ಕಾರ್ಡ್ ನಲ್ಲಿರೋ ಮಾಹಿತಿಯನ್ನು ಓದೋದು ಹಾರ್ಡ್ವೇರ್ .ಮಾಹಿತಿ ಯನ್ನು ಹಾರ್ಡ್ವೇರ್ ಸಹಾಯದಿಂದ ಪಡೆದ ನಂತರ ಸಾಫ್ಟ್ವೇರ್ ಏನೇನೋ ಲೆಕ್ಕಾಚಾರ ಮಾಡಿ ದೂರದಲ್ಲೆಲ್ಲೋ ಇರೋ ಬ್ಯಾಂಕ್ ನ ಸರ್ವರ್ ಗೆ ಇಂಟರ್ನೆಟ್ ಮೂಲಕ ಸಂಪರ್ಕಿಸಿ ನಿಮ್ಮ ಖಾತೆಯಲ್ಲಿ ಎಷ್ಟು ಹಣ ಇದೆ,ನಿಮಗೆ ಒಂದು ಲಕ್ಷ ನೀಡಬಹುದೋ(ನಿಮ್ಮದೇ ಹಣ ಆಗಿದ್ರೂ!)ಅಂತ ನಿರ್ಧರಿಸೋದು ,ಕೊಡೋ ಹಣದಲ್ಲಿ ಸಾವಿರದ ನೋಟು ಎಷ್ಟಿರ್ಬೇಕು,ಐನೂರರ ನೋಟು ಎಷ್ಟಿರಬೇಕು ಅಂತೆಲ್ಲಾ ಲೆಕ್ಕಾಚಾರ ಮಾಡೋದು ಸಾಫ್ಟ್ವೇರ್ .ಎಲ್ಲಾ ಲೆಕ್ಕಾಚಾರ ಮಾಡಿದ ನಂತರ ಒಂದೊಂದೇ ನೋಟನ್ನು ಒಳಗಿರೋ ಒಂದು ಡಬ್ಬಿಯಿಂದ ಎತ್ತಿ ಎತ್ತಿ ಹೊರಗೆ ತಳ್ಳೋದು ಹಾರ್ಡ್ವೇರ್.

ಕಂಪ್ಯೂಟರ್ ಮೌಸ್ ಉದಾಹರಣೆ ತೊಗೊಂಡ್ರೆ ಆ ಪುಟ್ಟ ಮೌಸ್ ಒಳಗೂ ಒಂದು ಪುಟ್ಟ ಪ್ರಾಸೆಸರ್ ಇದೆ.ನೀವು ಎಡಗಡೆ ಬಟನ್ ಒತ್ತಿದ್ದೋ ಬಲಗಡೆ ಬಟನ್ ಒತ್ತಿದ್ದೋ ಅನ್ನೋದನ್ನು ಈ ಪ್ರಾಸೆಸರ್ ಗೊತ್ತು ಮಾಡಿಕೊಳ್ಳುತ್ತೆ ಮೊದಲು(ಎರಡೂ ಬಟನ್ ಒಮ್ಮೆಗೆ ಒತ್ತಿ ಪ್ರಾಸೆಸರ್ ತಲೆ ಕೆಡಿಸಬೇಡಿ ಪ್ಲೀಸ್),ಗೊತ್ತು ಮಾಡಿದ ನಂತರ ’ಈ ವ್ಯಕ್ತಿ ಎಡಗಡೆ ಮೌಸ್ ಒತ್ತಿದ್ದಾನೆ ’ ಅಂತ ಮಾಹಿತಿಯನ್ನು ಸಾಫ್ಟ್ವೇರ್ ಗೆ ವರ್ಗಾಯಿಸುತ್ತದೆ.ಯಾವ ಬಟನ್ ಒತ್ತಿದ್ದಾನೆ ಅಂತ ಗೊತ್ತಾದ ಮೇಲೆ ಸಾಫ್ಟ್ವೇರ್ ಏನೇನೋ ಲೆಕ್ಕಾಚಾರ ಹಾಕಿ ಮುಂದಿನ ಕಾರ್ಯಾಚಾರಣೆಯನ್ನು ನಿರೂಪಿಸುತ್ತದೆ.ನೀವಂದುಕೊಂಡಷ್ಟು ಸುಲಭ ಇಲ್ಲ ಬಿಡಿ ಲೆಕ್ಕಾಚಾರ! ಬ್ಲಾಗ್ ಬರೆಯುವಾಗಲೆ ನೋಡಿ ನೀವು ಎಡಗಡೆ ಬಟನ್ ಒತ್ತುತ್ತೀರ,ಆದರೆ ಆಗ ಮೌಸ್ ಪಾಯಿಂಟರ್ Publish Post ಮೇಲಿತ್ತಾ ಅಥವಾ Save Now ಮೇಲಿತ್ತಾ ಅನ್ನೋದನ್ನು ನಿರ್ಧರಿಸೋದಕ್ಕೆ ಸಾಫ್ಟ್ವೇರ್ ಸ್ವಲ್ಪ ತಲೆ ಕೆಡಿಸ್ಕೋಬೇಕಾಗುತ್ತೆ .

ಅಂದ ಹಾಗೆ ಟಾಯ್ಲೆಟ್ನಲ್ಲೂ ಈ ಹಾರ್ಡ್ವೇರ್ ಸಾಫ್ಟ್ವೇರ್ ಬಳಕೆಯಾಗುತ್ತೆ .ಟಾಯ್ಲೆಟ್ ಬೇಸಿನ್ ಮುಂದೆ ನಿಂತ ತಕ್ಷಣ ಅದರಲ್ಲಿ ಅಳವಡಿಸಿರೋ ಸೆನ್ಸರ್ ಸಾಫ್ಟ್ವೇರ್ ಗೆ ತಿಳಿಸುತ್ತೆ ’ಯಾರೋ ಟಾಯ್ಲೆಟ್ ಗಲೀಜು ಮಾಡಲು ಬಂದಿದ್ದಾನೆ ’ ಅಂತ ! ಹಾಗೆಯೇ ನೀವು ಹೋದ ತಕ್ಷಣ ’ಪಾಪಿ ನೀರು ಹಾಕದೆ ಹೋಗ್ತಿದ್ದಾನೆ ನೀರು ಹಾಕು ’ ಅಂತ ಹಾರ್ಡ್ವೇರ್ ಗೆ ತಿಳಿಸುತ್ತೆ .ಆಗ ಹಾರ್ಡ್ವೇರ್ ಸ್ವಿಚ್ ರಿಲೀಸ್ ಮಾಡಿ ನೀರು ಹೊರ ಹಾಕುತ್ತೆ.ಆದರೆ ’ಟಾಯ್ಲೆಟ್ ನಲ್ಲಿ ಉಚ್ಚೆ ಹೊಯ್ದ ಮೇಲೆ ನೀರು ಹಾಕೋ ಅಂಥ ಸಾಫ್ಟ್ವೇರ್ ಬರೆದಿದ್ದೀನಿ ನಾನು ’ ಅಂತ ಯಾವ ಸಾಫ್ಟ್ವೇರ್ ಇಂಜಿನಿಯರೂ ಹೇಳದ ಕಾರಣ ಬಹಳಷ್ಟು ಜನರಿಗೆ ಇಲ್ಲೂ ಸಾಫ್ಟ್ವೇರ್ ಬಳಕೆಯಾಗುತ್ತೆ ಅನ್ನೋ ಸತ್ಯ ಗೊತ್ತಿರಲ್ಲ !

ಇಸ್ರೋ ಉಪಗ್ರಹ ಉಡಾವಣೆ ಮಾಡೋ ಸಂದರ್ಭದಲ್ಲಂತೂ ಬಹಳಷ್ಟು ಕೆಲಸವನ್ನು ಮಾಡೋದು ಸಾಫ್ಟ್ವೇರ್.ಉಡಾವಣೆಯ ಒಂದೊಂದೇ ಹಂತವನ್ನು ಪರಿಶೀಲಿಸಿ ಎಲ್ಲಾ ಸರಿ ಇದ್ರೆ ರಾಕೆಟ್ ಬುಡಕ್ಕೆ ಬೆಂಕಿ ಹಚ್ಚುತ್ತೆ ಇಲ್ಲದಿದ್ದಲ್ಲಿ ಅಲ್ಲೆ STOP ಅನ್ನುತ್ತೆ.

ಈ ಪ್ರಾಸೆಸರ್ ಗಳಿಗೆ ಕನ್ನಡ ಅರ್ಥ ಆಗಲ್ಲ(ಇಂಗ್ಲೀಷೂ ಅರ್ಥ ಆಗಲ್ಲ ಬಿಡಿ)! ಅದರಿಂದಲೇ ಬಹಳಷ್ಟು ಜನ ಸಾಫ್ಟ್ವೇರ್ ಇಂಜಿನಿಯರ್ ಗಳು ತಮ್ಮ ಹೊಟ್ಟೆಪಾಡನ್ನು ನೋಡ್ಕೋತಾ ಇದ್ದಾರೆ! ಪ್ರಾಸೆಸರ್ ಅರ್ಥ ಆಗೋ ಭಾಷೆಯಲ್ಲಿ ಅದಕ್ಕೆ ಕೆಲಸ ಮಾಡಲು ಅಪ್ಪಣೆ ನೀಡೋದೇ ಸಾಫ್ಟ್ವೇರ್ ಕೆಲಸ.ಅಂಥ ಭಾಷೆಗಳೇ ಈ C ,C++,Java ಗಳು.ಈ ಭಾಷೆಯನ್ನು ಸಮರ್ಪಕವಾಗಿ ಬಳಸಬಲ್ಲವನೇ ಸಾಫ್ಟ್ವೇರ್ ಇಂಜಿನಿಯರ್.


ನಮಗೆಲ್ಲರಿಗೂ ಕನ್ನಡ ಬರುತ್ತೆ ಆದರೆ ಎಲ್ಲರೂ ಕನ್ನಡ ಪಂಡಿತರಾಗಲು ಸಾಧ್ಯ ಇಲ್ಲ ಅಲ್ಲವೇ? ಹಾಗೆಯೇ ಇದೂ !

Sunday, June 7, 2009

ಗೇರ್ ಗೇರ್ ಗೇರಣ್ಣ.....

ಇವತ್ತು ಬೆಳಿಗ್ಗೆ ಬಿ.ಇ.ಎಲ್ ಕಾಲೋನಿಯ ಒಳಗೆ ಹಾಗೆ ನಡೆದು ಹೋಗ್ತಾ ಇದ್ದೆ .ನಮ್ಮ ಮನೆ ಬಿ.ಇ.ಎಲ್ ಕಾಲೋನಿಯ ಆಸು ಪಾಸಿನಲ್ಲೇ ಇರೋದ್ರಿಂದ ಆಗಾಗ ಕಾಲೋನಿಯ ಒಳಗಿರುವ ಗಣಪತಿ ದೇವಸ್ಥಾನಕ್ಕೆ ಭೇಟಿ ಕೊಡೋದು ಹವ್ಯಾಸ.ಸಕ್ಕತ್ ಕೂಲ್ ಕಾಲೋನಿ ಇದು.ಹೀಗೆ ಕಾಲೊನಿಯ ಒಳಗಡೆ ನಡೆದುಕೊಂಡು ಹೋಗ್ತಾ ಇರ್ಬೇಕಾದ್ರೆ ಟಪಕ್ ಅಂತ ಒಂದು ಗೇರು ಹಣ್ಣು ಬಿತ್ತು.ಸ್ವಲ್ಪ ಟೈಮಿಂಗ್ ಹೆಚ್ಚು ಕಮ್ಮಿ ಆಗಿದ್ದಿದ್ರೆ ನನ್ ತಲೆ ಮೇಲೇ ಬೀಳ್ತಾ ಇತ್ತು ! ಸಧ್ಯ ತಪ್ಪಿಸಿಕೊಂಡೆ.

’ ಗೇರು ಹಣ್ಣು ತಲೆ ಮೇಲೆ ಬಿದ್ರೆ ಸಾಯ್ತಾರಾ ? ಏನೀ ಹುಡುಗ ವಿಪರೀತ ಆಡ್ತಾನೆ ’ ಅಂದುಕೋಬೇಡಿ .ಸಾಯಲ್ಲ ಆದ್ರೆ ಅದು ಶರ್ಟ್ ಮೇಲೇನಾದ್ರೂ ಬಿದ್ರೆ ಅದರ ಕಲೆ ಸರ್ಫ್ ಎಕ್ಸೆಲ್ ಮತ್ತೆ ಏರಿಯಲ್ ಎರಡೂ ಮಿಕ್ಸ್ ಮಾಡಿ ಒಗೆದರೂ ಹೋಗಲ್ಲ! ಅದಕ್ಕೆ ಭಯ .

ಗೇರು ಹಣ್ಣು ಬಿದ್ದಿದ್ದೆ ತಡ ನಾನು ಯೋಚಿಸೋದಕ್ಕೆ ಶುರು ಮಾಡಿದೆ.

ಅದು ಮೇಲೆ ಹೋಗದೆ ಕೆಳಗೇ ಯಾಕೆ ಬಿತ್ತು ಅಂತ ಅಲ್ಲ ಮಾರಾಯ್ರೇ ! ಅದೆಲ್ಲ ಆ ಪಾಪಿ ನ್ಯೂಟನ್ ಮೊದಲೇ ಎಲ್ಲಾ ಸಂಶೋಧನೆ ಮಾಡಿ ಮುಗಿಸಿದ್ದಾನೆ .ನನ್ನಂಥ ಬಡಪಾಯಿಗಳಿಗೆ ಏನೂ ಉಳಿಸಿಲ್ಲ ಈ ವಿಜ್ಞಾನಿಗಳು !ನಾನು ಯೋಚಿಸತೊಡಗಿದ್ದು ಬೆಂಗಳೂರಿನಂಥ ಮಹಾನಗರಿಯಲ್ಲಿ ಗೇರು ಹಣ್ಣು ಎಲ್ಲಿಂದ ಬಿತ್ತು ಅಂತ .

ತಲೆ ಎತ್ತಿ ನೋಡಿದ್ರೆ ಗೇರು ಹಣ್ಣಿನ ಮರ.’ನೀನು ತಲೆ ಎತ್ತಿ ನೋಡೋ ಅಗತ್ಯವೇ ಇರಲಿಲ್ಲ .ಒಂದು ವೇಳೆ ಗೇರು ಹಣ್ಣು ಬಿದ್ದಿದ್ದೇ ಅದ್ರೆ ಅದು ಗೇರು ಹಣ್ಣಿನ ಮರದಿಂದಲೇ ಆಗಿರುತ್ತೆ’ ಅಂತೆಲ್ಲಾ ನೀವು ನನ್ನ ಹತ್ತಿರ ವಾದಿಸಲು ಹೊರಟಿದ್ರೆ ಸ್ವಲ್ಪ ನಿಲ್ಲಿ. ಮಹಾಸ್ವಾಮಿ ಇದು ಬೆಂಗಳೂರು .ಐಟಿ-ಬಿಟಿ ನಗರ !ಯಾರಿಗೆ ಗೊತ್ತು ಎಲ್ಲೆಲ್ಲಿಂದ ಏನೇನು ಬೀಳುತ್ತೆ ಅಂತ ! ಅದಕ್ಕೆ ಸ್ವಲ್ಪ ತಲೆ ಎತ್ತಲು ಕಷ್ಟವಾದ್ರೂ ಪರ್ವಾಗಿಲ್ಲ ಕನ್ಫರ್ಮ್ ಮಾಡೋದೇ ಒಳ್ಳೆಯದು ಅನಿಸಿತು ನನಗೆ.

ಗೇರು ಹಣ್ಣು ಬಿದ್ದಿದ್ದು ನಿಜವಾದ ಗೇರು ಮರದಿಂದಲೇ.ಅದೆಷ್ಟು ಬಾರಿ ಬಿ.ಇ.ಎಲ್ ಕಾಲೋನಿಯ ಒಳಗಡೆ ಸುತ್ತು ಹಾಕಿದ್ದೇನೋ .ಒಂದು ದಿನವೂ ಗೇರುಮರ ಗಮನಿಸಿರಲಿಲ್ಲ ನಾನು !ಗೇರು ಮರವೇನು ಇಲ್ಲಿ ಎಲ್ಲಾ ಥರದ ಮರಗಳೂ ಕಾಣ ಸಿಗುತ್ತವೆ.ಪ್ರತಿ ಮನೆಯಲ್ಲೂ ಒಂದು ಗೇರು ಅಥವ ಹಲಸು ಅಥವ ಮಾವಿನ ಮರ ಇದ್ದೇ ಇದೆ.ತುಂಬಾ ಅದೃಷ್ಟಶಾಲಿಗಳು ಈ ಕಾಲೋನಿಯವರು.ಪಾಪ ಈ ಮರಗಳನ್ನು ನೆಟ್ಟವರು ರಿಟೈರ್ಡ್ ಆಗಿ ಎಲ್ಲಿದ್ದಾರೋ ? ಆದ್ರೆ ಅದರ ಫಲ ಮಾತ್ರ ತುಂಬಾ ಈಗ ಅಲ್ಲಿರೋ ಜನರಿಗೆ ಸಿಗುತ್ತಾ ಇದೆ.ಮರಗಳ ವಿಷಯದಲ್ಲಂತೂ ಇದೇ ಗೋಳು.ನಾವು ಗಿಡ ನೆಟ್ಟರೆ ನಮಗೆ ಫಲ ಸಿಗೋದು ಅಷ್ಟರಲ್ಲೇ ಇದೆ ಅಂತೇನಾದ್ರೂ ನಮ್ಮ ಪೂರ್ವಜರು ಸುಮ್ಮನಿದ್ದರೆ ನಮಗೆ ಚಿಪ್ಪೇ ಗತಿಯಾಗ್ತಾ ಇತ್ತು(ಅಯ್ಯೋ ಚಿಪ್ಪು ಸಿಗಲೂ ತೆಂಗಿನಮರ ನೆಟ್ಟಿರಬೇಕು ಅಲ್ವಾ!).

ನನಗೆ ಗೇರು ಹಣ್ಣೆಂದ್ರೆ ತುಂಬಾ ಇಷ್ಟ.ಈ ಹಣ್ಣನ್ನು ನೋಡಿದ ತಕ್ಷಣ ಬಾಲ್ಯಕ್ಕೆ ರಿವೈಂಡ್ ಆಗುತ್ತೆ ನೆನಪುಗಳು.ಗೇರು ಹಣ್ಣು ಅಂದ್ರೆ ಇಷ್ಟ ಅಂದ ತಕ್ಷಣ ಕೆಲವರು ತಲ ಕೆರ್ಕೋತಾ ಇರಬಹುದು .’ ಏನ್ ಟೇಸ್ಟ್ ಮಾರಾಯ ಈ ಹುಡುಗನದ್ದು ’ ಅಂತ! ನಿಜ ಹೇಳಬೇಕೂಂದ್ರೆ ಆ ಹಣ್ಣಿನ ಟೇಸ್ಟೇ ನೆನಪಿಲ್ಲ ನನಗೆ .ತಿಂದ್ರೆ ತಾನೇ ನೆನಪಿರೋದು .

ನಮ್ಮನ್ನು ಚಿಕ್ಕಂದಿನಲ್ಲೇ ಬಿಸಿನೆಸ್ ಮ್ಯಾನ್ ಗಳನ್ನಾಗಿ ಮಾಡಿದ್ದಕ್ಕಷ್ಟೇ ನನಗೆ ಆ ಹಣ್ಣಿನ ಬಗ್ಗೆ ವಿಪರೀತ ಪ್ರೀತಿ ,ಗೌರವ .ಗೇರು ಹಣ್ಣು ಕಾಣಿಸಿದ ತಕ್ಷಣ ಹುಡುಗರು ಮಾಡುವ ಮೊದಲ ಕೆಲಸ ಅಂದ್ರೆ ಆ ಹಣ್ಣನ್ನು ಕಾಲಿನಿಂದ ಒತ್ತಿ ಹಿಡಿದು ಅದರ ಬೀಜವನ್ನು ಕೀಳುವುದು !ಅಲ್ಲಿಯವರೆಗೆ ಫಳ ಫಳ ಹೊಳೀತಾ ಇದ್ದ ಗೇರು ಹಣ್ಣು ಮಾತ್ರ ಈಗ ವಿಲ ವಿಲ ಒದ್ದಾಡ್ತಿರೋ ಹಾಗೆ ಕಾಣ್ಸುತ್ತೆ ! ಅಪ್ಪಿತಪ್ಪಿ ಕೂಡಾ ಆ ಹಣ್ಣಿನ ರುಚಿ ನೋಡೋದಕ್ಕೂ ಹೋಗಲ್ಲ ಯಾರೂ .ಅಷ್ಟಕ್ಕೂ ಆ ಗೋಡಂಬಿ ಬೀಜ ತರೋ ಕಾಸಿನ ರುಚಿ ಮುಂದೆ ಹಣ್ಣಿನ ರುಚಿ ಯಾರಿಗೆ ಬೇಕು ಹೇಳಿ . ಬೇರೆ ಯಾವ ಹಣ್ಣೂ ಈ ಪರಿ ಕಾಸು ತಂದು ಕೊಟ್ಟಿರಲಿಕ್ಕಿಲ್ಲ ಹುಡುಗರಿಗೆ.

ನಮ್ಮ ಮನೆಯ ಹಿಂದೆಯೇ ಒಂದು ಗೇರು ಹಣ್ಣಿನ ಮರವಿತ್ತು.ನನ್ನ ಸ್ನೇಹಿತರೆಲ್ಲ ಊರಲ್ಲಿರೋ ಯಾವ ಗೇರು ಹಣ್ಣಿನ ಮರವನ್ನೂ ಬಿಡ್ತಾ ಇರಲಿಲ್ಲ.ಆದ್ರೆ ನನಗೆ ಅವರ ಥರ ಏಟು ತಿಂದುಕೊಂಡು ಗೇರು ಬೀಜ ಸಂಗ್ರಹ ಮಾಡೋ ಹುಚ್ಚಿರಲಿಲ್ಲ(ಪರ್ಯಾಯ ಶಬ್ದ ಧೈರ್ಯ!).ಹಾಗಾಗಿ ನಾನು ನನ್ನ ಮನೆಯ ಹಿಂದಿರುವ ಗೇರು ಮರಕ್ಕಷ್ಟೇ ನಿಷ್ಠಾವಂತ ನಾಗಿ ’ಏಕ ಗೇರು ಮರ ವೃತಸ್ಥ ’ ಅನಿಸಿಕೊಂಡಿದ್ದೆ.ನನ್ನ ಕೆಲಸವೇನೂ ಸುಲಭದ್ದಾಗಿತ್ತು ಅಂದುಕೊಳ್ಳಬೇಡಿ.ಎರಡು ಬಲಿಷ್ಟ ನಾಯಿಗಳು ಆ ಗೇರುಮರದ ವಾಚ್ ಮ್ಯಾನ್(ವುಮನ್??)ಆಗಿ ನೇಮಕವಾಗಿತ್ತು.ಹಾಗಾಗಿ ಅಲ್ಲಿಂದ ಗೇರು ಹಣ್ಣನ್ನು ಎತ್ತಿ(ಕದ್ದು!) ತರೋದು ತುಂಬಾ ಚ್ಯಾಲೆಂಜಿಗ್ ಆಗಿರ್ತಾ ಇತ್ತು .

ಗೇರು ಹಣ್ಣನ್ನು ಬೀಳಿಸಲು ಕಲ್ಲೆಸೆಯಬೇಕಾದರೆ ನಮಗೆ ಬರೀ ಗೇರು ಹಣ್ಣಷ್ಟೆ ಕಾಣಿಸ್ತಾ ಇತ್ತು ! ಬೇರೇನೂ ಕಾಣಿಸ್ತಾ ಇರಲಿಲ್ಲ .ಅರ್ಜುನನಿಗಿದ್ದ ಏಕಾಗ್ರತೆ ನಮಗಿತ್ತು ಅಂತ ನೀವೇನಾದರೂ ಅಂದುಕೊಂಡಿದ್ದರೆ ಅದು ತಪ್ಪು !ನಮ್ಮ ಮನೆಯ ಕಂಪೌಂಡ್ ನಮಗಿಂತ ಎತ್ತರವಿತ್ತು .ಹಾಗಾಗಿ ಈ ಕಡೆಯಿಂದ ನಮಗೆ ಬರೀ ಮರದಲ್ಲಿರೋ ಗೇರು ಹಣ್ಣಷ್ಟೇ ಕಾಣಿಸ್ತಾ ಇತ್ತು ,ಬೇರೇನೂ ಕಾಣಿಸ್ತಾ ಇರಲಿಲ್ಲ!

’ದೇವರೇ ಮರದ ಕೆಳಗೆ ಯಾರೂ ನಡೆಯದಿರಲಿ ’ ಅಂತ ದೇವರಲ್ಲಿ ಪ್ರಾರ್ಥಿಸಿಯೇ ನಾವು ಕಲ್ಲೆಸೀತಾ ಇದ್ದಿದ್ದು.ಕೆಲವೊಂದು ಸಲ ನಾವು ಬೀಳಿಸಿದ ಗೇರು ಹಣ್ಣನ್ನು ನಮಗಿಂತ ಮೊದಲು ಆ ಹಾದಿಯಲ್ಲಿ ನಡೆದು ಹೋಗುವವರು ಎತ್ತಿ ಹೋಗೋದೂ ಇತ್ತು.Practice makes man/woman perfect ಅನ್ನೋ ಮಾತಿನ ಅರ್ಥ ನಮಗೆ ಆಗಲೇ ತಿಳಿದಿದ್ದು.ಯಾಕಂದ್ರೆ ದಿನಾ ಕಲ್ಲು ಎಸೆದು ಎಸೆದು ಗೇರು ಹಣ್ಣನ್ನು ಕೇವಲ ಒಂದೇ ಕಲ್ಲಲ್ಲಿ ಬೀಳಿಸುವ ವಿದ್ಯೆ ನಮಗೆ ಕರಗತವಾಗಿತ್ತು.ಅದೆಷ್ಟೇ ಪ್ರಯತ್ನಿಸಿದರೂ ಒಂದು ಕಲ್ಲಲ್ಲಿ ಎರಡು ಹಣ್ಣನ್ನು ಬೀಳಿಸುವ ಕಲೆ ಕರಗತವಾಗಲೇ ಇಲ್ಲ.

ನಮಗೆ ಹಣ್ಣನ್ನು ಬೀಳಿಸೋದು ದೊಡ್ಡ ಸಮಸ್ಯೆಯೇ ಆಗಿರಲಿಲ್ಲ .ಸಮಸ್ಯೆ ಇರ್ತಾ ಇದ್ದಿದ್ದೇ ಹಣ್ಣನ್ನು ಬೀಳಿಸಿದ ಮೇಲೆ ಅದನ್ನು ತರೋದ್ರಲ್ಲಿ!ಕಂಪೌಂಡ್ ನಮಗಿಂತ ಎತ್ತರವಾಗಿದ್ದರಿಂದ ದೂರದಿಂದ ಪೋಲ್ ವಾಲ್ಟ್ ಅಥ್ಲೀಟ್ ಥರ ಓಡಿ ಬಂದು ಕಂಪೌಂಡ್ ಮೇಲೆ ಲ್ಯಾಂಡ್ ಆಗ್ಬೇಕು.ಅದಾದ ಮೇಲೆ ಆ ಎರಡು ನಾಯಿಗಳು ಎಲ್ಲಿವೆ ಅನ್ನೋದನ್ನು ನೋಡಬೇಕು.ಯಾರೂ ಇಲ್ಲವೆಂದು ಖಚಿತವಾದ ಮೇಲೆ ಬಿದ್ದ ಗೇರು ಹಣ್ಣು ಎಲ್ಲಿದೆ ಅಂತ ಇಲ್ಲಿಂದಲೇ ಪತ್ತೆ ಮಾಡಬೇಕು.ಎಲ್ಲಾ ಸರಿ ಇದೆ ಅನ್ನೋದು ಖಾತ್ರಿಯಾದರೆ ಮಾತ್ರ ಚಂಗನೆ ಹಾರಿ ಗೇರು ಹಣ್ಣನ್ನು ಎತ್ತಿ ಜೋಬಿನೊಳಗೆ ಹಾಕಿ ಅದೇ ಸ್ಪೀಡಿನಲ್ಲಿ ಮತ್ತೆ ಅಥ್ಲೀಟ್ ಥರ ಚಂಗನೆ ಕಂಪೌಂಡ್ ಹಾರಿ ವಾಪಸ್ ಬರಬೇಕು.ಮೊದಲೇ ತಯಾರಿ ನಡೆಸದೆ ಅಲ್ಲಿ ಹೋಗಿ ಗೇರು ಹಣ್ಣು ಎಲ್ಲಿ ಬಿದ್ದಿದೆ ಅಂತ ಹುಡುಕ್ತಾ ಇದ್ರೆ ನಾಯಿಗಳು ಬಂದು ಚಡ್ಡಿ ಹರಿಯುತ್ತಿದ್ದವು ಅಷ್ಟೆ!

ಅಲ್ಲಿ ಎರಡು ನಾಯಿಗಳಿದ್ರೂ ಒಂದು ಮಜ ಥರೋ ಸಂಗತಿ ಇತ್ತು.ಎರಡೂ ನಾಯಿಗಳು ಸ್ನೇಹಿತರಾಗಿದ್ದರಿಂದ ಅವು ಎಲ್ಲೇ ಹೋದರೂ ಜೊತೆ ಜೊತೆಗೆ ಹೋಗುತ್ತಿದ್ದವು.ಹಾಗಾಗಿ ಅಸಲಿಗೆ ಅವು ಎರಡಾಗಿದ್ದರೂ ನಾವು ಒಂದರ ಮೇಲಷ್ಟೆ ನಿಗಾ ಇಟ್ಟರೆ ಸಾಕಾಗ್ತಾ ಇತ್ತು.ಅಷ್ಟರ ಮಟ್ಟಿಗೆ ಅವುಗಳ ಸ್ನೇಹ ನಮಗೆ ಸಹಕಾರಿಯಾಗಿತ್ತು.

ಹೀಗೆ ಬಹಳ ಕಷ್ಟಪಟ್ಟು ತಂದ ಗೇರು ಹಣ್ಣನ್ನು ಯಥಾ ಪ್ರಕಾರ ಕಾಲ ಕೆಳಗೆ ಇಟ್ಟು ಗೇರು ಬೀಜವನ್ನು ಎಳೆದು ಪಾಲೀಥೀನ್ ಚೀಲದೊಳಗೆ ಹಾಕಿ ಆ ಚೀಲದ ತೂಕವನ್ನೊಮ್ಮೆ ಕೈಯಲ್ಲೇ ತೂಗಿದಾಗಲೇ ನಮಗೆ ಸಮಾಧಾನ.ಹೀಗೆ ಎಲ್ಲಾ ಹುಡುಗರ ಆಸಕ್ತಿ ಗೇರು ಬೀಜವನ್ನು ಸಂಗ್ರಹಿಸೋದರಲ್ಲೇ ಇದ್ದಿದ್ದರಿಂದ ಮಂಗಳೂರಿನ ಹುಡುಗರಿಗೆ ಗೇರು ಹಣ್ಣಿನ ರುಚಿ ಗೊತ್ತಿರುವುದು ಸ್ವಲ್ಪ ಸಂಶಯ.ಮೊನ್ನೆ ಗೋವಾಗೆ ಹೋಗಿದ್ದಾಗ ಫೆನ್ನಿ ಕುಡಿದಾಗಲೇ ಗೇರು ಹಣ್ಣಿನ ನಿಜವಾದ ರುಚಿ ಗೊತ್ತಾಗಿದ್ದು ನನಗೆ !

ಕೆಲವು ಹುಡುಗರು ಹೀಗೆ ಕಂಡವರ ಮನೆಯ ಗೇರುಬೀಜವನ್ನು ಕದ್ದು ತಮ್ಮ ಥೈಲಿ ಭಾರ ಮಾಡುವುದಲ್ಲದೇ ಇನ್ನೊಂದು ವಿಧಾನದಿಂದಲೂ ತಮ್ಮ ಥೈಲಿಯ ಭಾರವನ್ನು ಹೆಚ್ಚಿಸುತ್ತಿದ್ದರು(ಕೆಲವೊಮ್ಮೆ ಇಳಿಸುತ್ತಿದ್ದರು!)

ಆ ಇನ್ನೊಂದು ವಿಧಾನವೇ ಗೇರು ಬೀಜದಾಟ! ಈ ಆಟದ ಬಗ್ಗೆ ಬರೆದರೆ ಅದೇ ಒಂದು ಲೇಖನವಾಗುತ್ತೆ.ತಮ್ಮಲ್ಲಿರೋ ಗೇರು ಬೀಜಗಳನ್ನು ಪ್ರತಿಸ್ಪರ್ಧಿಯ ಗೇರು ಬೀಜದೊಂದಿಗೆ ಮಣ್ಣಿನಲ್ಲಿ ನೇರ ನಿಲ್ಲಿಸಿ ಕಲ್ಲಿನಿಂದ ಅದಕ್ಕೆ ಗುರಿ ಇಟ್ಟು ಎಸೆದು...... ಹೀಗೆ ಆ ಆಟಕ್ಕೇ ದೊಡ್ಡ ನೀತಿ,ನಿಯಮಗಳಿವೆ.ಒಟ್ಟಿನಲ್ಲಿ ಆಟದ ಕೊನೆಗೆ ಒಂದೋ ನಿಮಗೆ ಪ್ರತಿಸ್ಪರ್ಧಿಯ ಗೇರು ಬೀಜಗಳು ದೊರೆಯುತ್ತವೆ ,ಅಥವಾ ನೀವು ನಿಮ್ಮ ಗೇರು ಬೀಜಗಳನ್ನು ಪ್ರತಿಸ್ಪರ್ಧಿಗೆ ಒಲ್ಲದ ಮನಸ್ಸಿನಿಂದ ವರ್ಗಾಯಿಸಬೇಕು !

ಹೀಗೆ ಇಡೀ ಗೇರು ಹಣ್ಣಿನ ಸೀಸನ್ ನಲ್ಲಿ ಗೇರು ಬೀಜಗಳನ್ನು ಸಂಗ್ರಹಿಸಿ ಅದನ್ನು ಅಂಗಡಿಗೆ ಹೊಗಿ ಮಾರಿದಾಗ ಅವನು ಕೊಡುವ ಗರಿ ಗರಿ ನೋಟು ಎಣಿಸಿದಾಗಲೇ ಹುಡುಗರಿಗೆ ಸಮಾಧಾನ.ಅವನು ನೂರು ರುಪಾಯಿಯ ಒಂದೇ ಒಂದು ನೋಟು ಕೊಟ್ರೆ ಅದಕ್ಕೂ ಸಿಟ್ಟು ಹುಡುಗರಿಗೆ! ಅದರ ಬದಲು ಹತ್ತು ರೂ ನ ಹತ್ತು ನೋಟು ಕೊಟ್ರೆ ಅದನ್ನು ಮತ್ತೆ ಮತ್ತೆ ಎಣಿಸಿ ಜೇಬಿಗಿಳಿಸೋದರಲ್ಲೇ ಮಜಾ ಇರೋದು.

ಈಗ ಬಿಡಿ ’ನಿಮ್ಮ ಸಂಬಳ ನಿಮ್ಮ ಅಕೌಂಟ್ ಗೆ ಜಮೆಯಾಗಿದೆ’ ಅಂತ ಒಂದೇ ಒಂದು SMS ಬರುತ್ತೆ ಅಷ್ಟೆ !