Saturday, February 28, 2009

ನಾನ್ಯಾಕೆ ಬಿಲ್ ಗೇಟ್ಸ್ ಆಗಿಲ್ಲ .......?



ಐದೂವರೆ ಲಕ್ಷ ಇಂಜಿನಿಯರ್ ಗಳಲ್ಲಿ ಯಾಕೆ ಒಬ್ಬರೂ ಬಿಲ್ ಗೇಟ್ಸ್ ,ಮೈಕಲ್ ಡೆಲ್ ,ಅಥವ ಸ್ಟೀವ್ ಜಾಬ್ ಆಗಿಲ್ಲ ಅನ್ನೋ ಅರ್ಥಪೂರ್ಣ ಪ್ರಶ್ನೆಯನ್ನು ಪ್ರೀತಿಯ ಪ್ರತಾಪ್ ಕೇಳಿದ್ದಾರೆ .ಕಳೆದ ವಾರ ಬರೆದದ್ದಕ್ಕಿಂತ ಉತ್ತಮವಾಗಿ ,ಅಧ್ಯಯನವನ್ನು ಮಾಡಿ ಬರೆದಿದ್ದಾರೆ ಪ್ರತಾಪ್ ಅದನ್ನು ಮೆಚ್ಚಬೇಕು.
ನನಗೂ ಈ ಪ್ರಶ್ನೆ ಆಗಾಗ ಕಾಡುತ್ತಿರುತ್ತದೆ .ನನಗೆ ನಾನೇ ಕೇಳಿಕೊಂಡಾಗ ಕಾಡುವ ಪ್ರಶ್ನೆ ಬಿಲ್ ಗೇಟ್ಸ್ ,ಮೈಕಲ್ ಡೆಲ್, ಅಥವಾ ಸ್ಟೀವ್ ಜಾಬ್ ರನ್ನು ಹುಟ್ಟು ಹಾಕುವ ಸಾಮರ್ಥ್ಯ ನಮಗಿದೆಯಾ?
ಧೀರೂಭಾಯಿ ಅಂಬಾನಿ,ಟಾಟಾ,ಬಿರ್ಲಾ ಗಳು ಹುಟ್ಟಿರೋ ದೇಶದಲ್ಲಿ ಬಿಲ್ ಗೇಟ್ಸ್ ತಯಾರಾಗೋದು ಕಷ್ಟವೇನಿಲ್ಲಬಿಡಿ.ಆದರೆ ನಮಗ್ಯಾಕೆ ನಾರಾಯಣ ಮೂರ್ತಿಗಳು,ಅಜೀಮ್ ಪ್ರೇಮ್ ಜಿ, ಅಥವ ರತನ್ ಟಾಟಾ ಬಿಲ್ ಗೇಟ್ಸ್ ರಷ್ಟೇ ಅಥವಾ ಅವರಿಗಿಂತ ಶ್ರೇಷ್ಟ ಅನ್ನಿಸಲ್ಲ? ನಾರಾಯಣ ಮೂರ್ತಿಗಳಿಂದ ಸಾಧ್ಯವಾಗದ್ದೇನನ್ನು ಬಿಲ್ ಗೇಟ್ಸ್ ಸಾಧಿಸಿದ?
ಬಿಲ್ ಗೇಟ್ಸ್ ಸಂಪಾದಿಸಿದಷ್ಟು ಹಣ ಸಂಪಾದಿಸಿಲ್ಲ ಅನ್ನೋದಷ್ಟೇ ಅಲ್ವ ಕೊರತೆ? ವಿಂಡೋಸ್ 98 ಗಿಂತ ವಿಂಡೋಸ್ ವಿಸ್ತಾ ಹೇಗೆ ಶ್ರೇಷ್ಠ ? ಯಾವ ಸೀಮೆಯ R&D ಯನ್ನು ಬಿಲ್ ಗೇಟ್ಸ್ ಮಾಡಿ ತೋರಿಸಿದ ?ತೋರಿಸಿದರೂ ಬೆಂಗಳೂರಿನ ಮೈಕ್ರೋಸಾಫ್ಟ್ ನ ಹುಡುಗ ಹುಡುಗಿಯರ ಶ್ರಮವೂ ಇದೆಯಲ್ಲ ಅಲ್ಲಿ?
ಖಂಡಿತ ನಾವು ಇನ್ನೂ ಕಾಂಪಿಟೀಟಿವ್ ಆಗೋದರ ಬಗ್ಗೆ ಯೋಚಿಸಬೇಕು .ಆದರೆ ಈ ಬಗ್ಗೆ ಚಿಂತನೆ ನಡೆಸಬೇಕಾದವರು ಯಾರು?
ಬೇರೆ ಯಾವ ಕ್ಷೇತ್ರದಲ್ಲಿ ಆ ಪರಿಯ R&D ಆಗಿದೆ ಹೇಳಿ ನೋಡೋಣ?

ಐದೂವರೆ ಲಕ್ಷ ಇಂಜಿನಿಯರ್ ಗಳಲ್ಲಿ ಒಬ್ಬನೂ ಬಿಲ್ ಗೇಟ್ಸ್ ಆಗಿಲ್ಲ ಒಪ್ಪೋಣ .ಭಾರತದಲ್ಲಿರೋ ಸಾವಿರಾರು ಹಿನ್ನೆಲೆ ಗಾಯಕಿಯರಲ್ಲ್ಯಾಕೆ ಒಬ್ಬರೂ ಲತಾ ಮಂಗೇಶ್ಕರ್ ಆಗಿಲ್ಲ?ಕನ್ನಡದಲ್ಲಿ ನೂರಾರು ನಿರ್ದೇಶಕರಿದ್ದಾರೆ ಯಾಕೆ ಇನ್ನೊಬ್ಬ ಪುಟ್ಟಣ್ಣ ಕಣಗಾಲ್ ನಮಗೆ ದೊರೆತಿಲ್ಲ?
ಬೆಂಗಳೂರಿನಲ್ಲಿ ಸಾವಿರಾರು ಹೋಟೆಲ್ ಗಳಿವೆ ಯಾಕೆ ಎಲ್ಲವೂ MTR ಆಗಿಲ್ಲ?

ಒಬ್ಬ ಬಿಲ್ ಗೇಟ್ಸ್ ಆಗಲು ಬೇಕಾದಷ್ಟು ತಾಳ್ಮೆ,ಧೈರ್ಯ,ಪ್ರೋತ್ಸಾಹ ನಮ್ಮ ಭಾರತೀಯರಲ್ಲಿಲ್ಲ ಅನ್ನೋದು ಒಂದು ಬೇಸರದ ಸಂಗತಿ.ಅಮೆರಿಕಾ ದಲ್ಲಿ ಒಬ್ಬ ಯುವಕ/ಯುವತಿ ವಯಸ್ಸಿಗೆ ಬಂದ ಕೂಡಲೇ ತಮ್ಮ ತಮ್ಮ ದಾರಿಯನ್ನು ನೋಡಿಕೊಳ್ಳುವ ಸ್ವಾತಂತ್ರ್ಯ ಅವರಿಗೆದೆ .ಭಾರತದಲ್ಲಿ ಆ ಸ್ವಾತಂತ್ರ್ಯ ಇದೆಯಾ? ಐದೂವರೆ ಲಕ್ಷ ಇಂಜಿನಿಯರ್ ಗಳಲ್ಲಿ ಅದೆಷ್ಟು ಜನ ಒತ್ತಾಯಕ್ಕೆ ಇಂಜಿನಿಯರ್ ಗಳಾಗಿಲ್ಲ? ಸೆಕೆಂಡ್ ಪಿ.ಯು.ಸಿ ಆದ ತಕ್ಷಣ ಬಿ.ಎಸ್.ಸಿ ಸೇರ್ತೀನಿ ಅನ್ನೋ ಮಗಳನ್ನು ಗದರಿಸಿ ಎಷ್ಟು ಜನ ಇಂಜಿನಿಯರಿಂಗ್ ಗೆ ಸೇರಿಸಿಲ್ಲ?ಅದೆಷ್ಟು ಜನ ಹುಡುಗರು ಪ್ರತಾಪ್ ಸಿಂಹ ಥರ ಪತ್ರಕರ್ತರಾಗಬೇಕು ಅನ್ನೋ ಆಸೆಯನ್ನು ಭಸ್ಮ ಮಾಡಿ ಸೈನ್ಸ್ ಸೇರಿಲ್ಲ.ಅದೆಷ್ಟು ಜನ ಹುಡುಗಿಯರು ಡ್ಯಾನ್ಸರ್ ಆಗಬೇಕೆಂಬ ಆಸೆ ಹತ್ತಿಕ್ಕಿ ಇಂಜಿನಿಯರ್ ಆಗಿಲ್ಲ?

ನಮಗೆ ಬೇಕಾದದ್ದನ್ನು ಪಡೆಯುವ ,ನಮಗೆ ಬೇಕಾದ ಹಾಗೆ ಬದುಕುವ ಸ್ವಾತಂತ್ರ್ಯ ಇದೆಯಾ ಭಾರತದಲ್ಲಿ?

ಅಮೆರಿಕಾಗೆ M.S ಮಾಡಲು ಹೋಗುವ ಇಂಜಿನಿಯರ್ ಅಲ್ಲಿ ಓದುವ ಜೊತೆಗೆ ಪೆಟ್ರೋಲ್ ಬಂಕ್ ನಲ್ಲೋ ,ಪಿಜಾ ಅಂಗಡಿಯಲ್ಲೋ ಕೆಲಸ ಮಾಡಿ ಓದುವ ಸುಂದರವಾದ ವಾತಾವರಣ ಇದೆ . ಭಾರತದಲ್ಲಿದೆಯ?

ಅಮೆರಿಕಾದಲ್ಲಿ ಕಾಲೇಜ್ ಡ್ರಾಪ್ ಔಟ್ ಒಬ್ಬ ಬಿಲ್ ಗೇಟ್ಸ್ ಆಗಬಲ್ಲ .ಆದ್ರೆ ಭಾರತದಲ್ಲಿ ಕಾಲೇಜ್ ಡ್ರಾಪ್ ಔಟ್ ಒಬ್ಬ ಮನೆಯ ಗೇಟ್ ದಾಟಿ ಹೊರ ಬರುವಷ್ಟೂ ಧೈರ್ಯ ,ಆತ್ಮಸ್ಥೈರ್ಯ ಬೆಳೆಸಿಕೊಂಡಿರಲ್ಲ -ಇನ್ನು ಹೇಗೆ ಸ್ವಾಮಿ ಬಿಲ್ ಗೇಟ್ಸ್ ಆಗೋದು?

ಇನ್ನು ಶಿಕ್ಷಣಕ್ಕೆ ಬರೋಣ.ನನಗೆ ಕಂಪ್ಯೂಟರ್ ಮುಟ್ಟುವ ಸೌಭಾಗ್ಯ ಸಿಕ್ಕಿದ್ದೇ ಕಾಲೇಜು ಮೆಟ್ಟಿಲೇರಿದ ಮೇಲೆ.ಅದೂ ಬ್ಲ್ಯಾಕ್ ಅಂಡ್ ವೈಟ್ ,MS DOS ಇದ್ದ ಕಂಪ್ಯೂಟರ್ .ಕಂಪ್ಯೂಟರ್ ಲ್ಯಾಬ್ ಒಳಗೆ ಹೋಕ್ಬೇದಾರೆ ಚಪ್ಪಲಿ ಹೊರಗೆ ಇಟ್ಟು ಹೋಗ್ಬೇಕಾಗಿತ್ತು.ಅಕಸ್ಮಾತ್ ಹವಾನಿಯಂತ್ರಕ ಸರಿ ಇಲ್ಲ ಅಂದ್ರೆ ಆ ದಿನ ಲ್ಯಾಬ್ ಇಲ್ಲ ! ಯಾಕಂದ್ರೆ ಹವಾ ನಿಯಂತ್ರಕ ಇಲ್ಲಾಂದ್ರೆ ಕಂಪ್ಯೂಟರ್ ಹಾಳಾಗುತ್ತೆ ಅನ್ನೋ ಭಯ ಟೀಚರ್ಗಳಿಗಿತ್ತು .ಆದ್ರೆ ನಾವು ಹವಾನಿಯಂತ್ರಕಗಳಿಲ್ಲದೆ ಕಂಪ್ಯೂಟರ್ ಗಳು ಕೆಲಸ ಮಾಡಲ್ಲ ಅನ್ನೋ ಮೂಢನಂಬಿಕೆ ಹೊಂದಿದ್ವಿ.

ಒಂದು ದಿನ ಲ್ಯಾಬ್ ನಲ್ಲಿ ಯಶವಂತ್ ಕಾನಿಟ್ಕರ್ ನ ಪುಸ್ತಕದಲ್ಲಿದ್ದ ಒಂದು ಗೇಮ್ ಪ್ರೋಗ್ರಾಮ್ ಬರೆದು ಅದನ್ನು execute ಮಾಡಲು ನೋಡ್ತಾ ಇದ್ದಾಗ ಮ್ಯಾಡಂ ಬಂದು ನೋಡಿ " ರೀ ಹೇಳಿದಷ್ಟು ಮಾಡ್ರಿ .ನಾನು To add N numbers program ಬರೀರಿ ಅಂದ್ರೆ ನೀವು ಗೇಮ್ ಪ್ರೋಗ್ರಾಮ್ ಮಾಡ್ತಾ ಇದ್ದೀರ get out I say " ಅಂದಿದ್ದು ಇಂದಿಗೂ ನೆನಪಿದೆ.
ಆಮೇಲೆ ಸಾರಿ ಕೇಳಿದ್ದಕೆ ಒಳಗೆ ಬಿಟ್ಟೂ " ರೀ ಇದೆಲ್ಲ ನೀವು ಮನೆಯಲ್ಲಿ ಮಾಡ್ಬೇಕು ಆಯ್ತಾ " ಅಂತ ಸಂತೈಸಿದ್ರು ಮ್ಯಾಡಮ್. ಮನೆಯಲ್ಲಿ ಕ್ಯಾಲ್ಕುಲೇಟರ್ ತೆಗೆಸಿಕೊಡೋದಕ್ಕೆ ಒದ್ದಾಡುವ ಕಾಲದಲ್ಲಿ ಕಂಪ್ಯೂಟರ್ ತಗೊಳ್ಳೋದು ಸಾಧ್ಯನಾ ? ಅಂತ ಕೇಳೋದಕ್ಕೆ ನನಗೆ ಧೈರ್ಯ ಸಾಲಲಿಲ್ಲ.
ಭಾರತದ ಯಾವ ಕಾಲೇಜಿನಲ್ಲಿ ಸ್ವ-ಉದ್ಯೋಗಕ್ಕೆ ಪ್ರೇರಣೆ ನೀಡಲಾಗುತ್ತೆ? ಇತ್ತೀಚೆಗೆ ಸ್ವ-ಉದ್ಯೋಗಕ್ಕೆಂದೇ ಕೆಲವು ಕಾಲೇಜುಗಳು ಶುರು ಆಗ್ತಾ ಇವೆ ಅದು ಒಳ್ಳೆಯ ಬೆಳವಣಿಗೆ .ಆಮೆರಿಕಾದಲ್ಲಿ ಸಾಫ್ಟ್ವೇರ್ ಗೆ ಇದ್ದಷ್ಟು ಬೇಡಿಕೆ ಭಾರತದಲ್ಲಿಲ್ಲ .ಅದಕ್ಕೆ ಬಹಳಷ್ಟು ಕಂಪನಿಗಳು ಭಾರತೀಯ ಮಾರುಕಟ್ಟೆಯನ್ನು ದೃಷ್ಟಿಯಲ್ಲಟ್ಟುಕೊಂಡು ಬಿಸ್ನೆಸ್ ಮಾಡ್ತಾ ಇಲ್ಲ.
ನೀವು ಭಾರತದ ಯಾವ ಮೂಲೆಗ ಹೋಗಿ ಮೆಡಿಕಲ್ ಸ್ಟೋರ್ ನವನಿಗೆ ಔಷಧಿ ಪಟ್ಟೀ ನೀಡಿ ,ಅವನು ಕರಾರುವಕ್ಕಾಗಿ ಅದೇ ಔಷಧಿಯನ್ನು ಹುಡುಕಿ ತಂದು ನಿಮಗೆ ಕೊಡ್ತಾನೆ.ಆದ್ರೆ ಅಮೆರಿಕಾದಲ್ಲಿ ಆ ಮೆಡಿಕಲ್ ಅಂಗಡಿಯವನಿಗೆ ಅದಕ್ಕೊಂದು ಸಾಫ್ಟ್ವೇರ್ ಬೇಕು! ಯಾವ ಔಷಧಿ ಎಲ್ಲಿದೆ ಅನ್ನೋದು ಅವನಿಗೆ ಹೇಳೋದೂ ಸಾಫ್ಟ್ವೇರ್ ,ಕೊನೆಗೆ ಬಿಲ್ ಪ್ರಿಂಟ್ ಮಾಡಿ ಕೊಡೋದೂ ಸಾಫ್ಟ್ವೇರ್ .
ಭಾರತದಲ್ಲಿ ಈ ಪರಿಯ ಅವಶ್ಯಕತೆ ಕಂಡು ಬಂದಿಲ್ಲದ್ದರಿಂದ ಭಾರತೀಯ ಮಾರುಕಟ್ಟೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಯಾವುದೇ ಪ್ರಾಡಕ್ಟ್ ತರೋದು ಅಷ್ಟೊಂದು ಲಾಭದಾಯಕವಲ್ಲ.ಭಾರತೀಯ ಕಂಪೆನಿಗಳಿಗೆ ತಮ್ಮದೇ ಆದ ಪ್ರಾಡಕ್ಟ್ ಗಳಿದ್ರೆ ಎಲ್ಲಾ ಸಮಸ್ಯೆಗೂ ಪರಿಹಾರ ಸಿಕ್ತಾ ಇತ್ತು ಅನ್ನೋ ನಂಬಿಕೆ ಪ್ರತಾಪ್ ರಲ್ಲಿದೆ .ನಮ್ಮ ನಾರಾಯಣ ಮೂರ್ತಿ ,ಅಜೀಮ್ ಪ್ರೇಮ್ ಜಿಯವರು R & D ಗಳಲ್ಲಿ ಸ್ವಲ್ಪ ಆಸಕ್ತಿ ತೋರಿಸಿದ್ರೆ ’ಈ ಪರಿಸ್ಥಿತಿ ’ ಬರ್ತಾ ಇರ್ಲಿಲ್ಲ ಅನ್ನೋದು ಪ್ರತಾಪ್ ಅನಿಸಿಕೆ.

ಆದ್ರೆ ಇನ್ಫೋಸಿಸ್ ,ವಿಪ್ರೋಗಳ ಬಳಿ ತಮ್ಮದೇ ಆದ ಪ್ರಾಡಕ್ಟ್ ಗಳಿದ್ರೂ ಅದಕ್ಕೆ ಮಾರುಕಟ್ಟೆ ಇಲ್ಲದ ಮೇಲೆ ಅವರದಾದರೂ ಏನ್ ಮಾಡ್ತಾರೆ ಅಲ್ವ? R & D ಏನಿದ್ರೂ ಆನೆಯನ್ನು ಸಾಕಿದ ಹಾಗೆ.ಆರ್ಥಿಕ ಹಿಂಜರಿತದ ಸಮಯದಲ್ಲಿ ಎಲ್ಲಾ ಕಂಪನಿಗಳೂ ಕತ್ತರಿ ಹಾಕೋದು ಮೊದಲು R&D ವಿಭಾಗಕ್ಕೆ .ವಿಪ್ರೋ,ಇನ್ಫೋಸಿಸ್ ಗಳ ಬಳಿ ತಮ್ಮದೇ ಆದ ಪ್ರಾಡಕ್ಟ್ ಗಳಿದ್ರೂ ಅದನ್ನು ಕಾಸು ಕೊಟ್ಟೂ ತಗೊಳ್ಳುವ ಮನಸ್ಥಿತಿ ನಮ್ಮಲ್ಲಿದೆಯೇ ?

ಯಾವ ಮನೆಯಲ್ಲಿ ಒರಿಜಿನಲ್ ವಿಂಡೋಸ್ ಇದೆ ಹೇಳಿ ನೋಡೋಣ ? ಪೈರೇಟೇಡ್ ಸಾಫ್ಟ್ವೇರ್ ಗಳನ್ನೇ ಬಳಸಿ ಅಭ್ಯಾಸವಾಗಿರುವ ನಮಗೆ ವಿಪ್ರೋ ,ಇನ್ಫೋಸಿಸ್ ಗಳ ಪ್ರಾಡಕ್ಟ್ ಗಳನ್ನು ಹಣ ಕೊಟ್ಟೂ ತಗೊಳ್ಳುವ ಮನಸ್ಸಿದೆಯೇ ?ನಾವೇನಿದ್ರೂ ಫ್ರೀ ಆಗಿರೋ ಯಾಹೂ ,ಜೀ ಮೇಲ್ ಬಳಸೋರು ! ಫ್ರೀ ಆಗಿ ಬ್ಲಾಗ್ ಸ್ಪಾಟ್ ನಲ್ಲಿ ಬ್ಲಾಗ್ ಬರಿಯೋರು .ಕಾಸು ಕೊಟ್ಟೂ ಪ್ರಾಡಕ್ಟ್ ತಗೊಳ್ಳಿ ಅಂದ್ರೆ ಯಾರು ತಗೋತಾರೆ ಸ್ವಾಮಿ ?

ನಾನು ಚಿಕ್ಕವನಿರ್ಬೇಕಾದ್ರೆ ಮುಂಗಾರು ಹಾಗೂ ಉದಯವಾಣಿ ಅಂತ ಎರಡು ಪೇಪರ್ ಗಳು ಬರ್ತಾ ಇದ್ದವು ಮನೆಗೆ. ಎರಡೂ ಕಪ್ಪು-ಬಿಳುಪಿನವು . ಇಪ್ಪತ್ತೈದು ವರ್ಷಗಳ ಮೇಲಾಯ್ತು ಕಪ್ಪು-ಬಿಳುಪು ಹೋಗಿ ಕಲರ್ ಮಾಡಿದ್ದು ಬಿಟ್ರೆ ಈ ಪತ್ರಿಕೆಗಳು ಏನು R&D ಮಾಡಿವೆ ? ಏನು ಮಹತ್ತರ ಬದಲಾವಣೆಯನ್ನು ತಂದಿವೆ?ಅದರಲ್ಲೂ ಪಾಪ ಮುಂಗಾರು ಅನ್ನೋ ಪೇಪರೇ ಇಲ್ಲ ಈಗ!

ಸಂಪಾದಕರು ಬದಲಾದರು ,ಬಣ್ಣ ಬದಲಾಯಿತು ಅಷ್ಟೇ ಮತ್ತೆನೂ ಬದಲಾಗಿಲ್ಲ.ಯಾಕಂದ್ರೆ ಪೇಪರ್ ನವರಿಗೆ R&D ಅನ್ನೋದು ನಮಗೆ ಸಂಬಂಧಪಟ್ಟದ್ದಲ್ಲ ಅನ್ನೋ ಭಾವನೆ ಬಂದಿರಬೇಕು.

India ಅಂದ್ರೆ Cost advantage ಅಷ್ಟೆ ಅಲ್ಲ lesser cost with better quality ಅನ್ನೋದು ಯಾರಿಗೂ ಮನದಟ್ಟಾಗ್ತಾನೇ ಇಲ್ಲ !

ಇಸ್ರೋ ಗೆ ಮೊನ್ನೆ ಎಂಟು ಉಪಗ್ರಹ ಉಡಾವಣೆ ಮಾಡೋ ಅವಕಾಶ ಸಿಕ್ಕಿತು.ಅಲ್ಲೂ ಕೆಲಸ ಮಾಡಿದ್ದು cost advantage ! ಆ ಉಪಗ್ರಹಗಳ ಮಾಲಕರು ’ಭಾರತದ ಕಮ್ಮಿ ಖರ್ಚಿಗೆ ಅತ್ತ್ಯುತ್ತಮ ಉಡಾವಣಾ ಸಾಮರ್ಥ್ಯದ ಮೇಲೆ ವಿಶ್ವಾಸವಿದ್ದದ್ದಕ್ಕೇ ಇಸ್ರೋ ಗೆ ಆ ಕೆಲಸ ವಹಿಸಿದ್ದು ಅನ್ನೋದು ನಮಗೆ ಅನಿಸಲ್ಲ.ಚಂದ್ರಯಾನ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಪಡೆದದ್ದು ಭಾರತೀಯ ವಿಜ್ಞಾನಿಗಳ ಸಾಮರ್ಥ್ಯದ ಜೊತೆ ಜೊತೆಗೆ ,ಅಮೆರಿಕಾ ಮಾಡೋ ಖರ್ಚಿನ ಅರ್ಧಕ್ಕಿಂತ ಕಡಿಮೆ ಖರ್ಚಿನಲ್ಲಿ ಉಡಾವಣೆ ನಡೆಸಿದ್ದು !

ಸುಹಾಸ್ ಗೋಪಿನಾಥ್ ತಮ್ಮ ಹದಿನಾಲ್ಕನೇ ವಯಸ್ಸಿಗೆ ಕಂಪೆನಿಯೊಂದರ CEO ಆಗಿ ಪ್ರಪಂಚದ ಅತ್ಯಂತ ಕಿರಿಯ CEO ಅನ್ನೋ ಖ್ಯಾತಿ ಪಡೆದವರು.ಅವರ ಕಂಪೆನಿ ಇರೋದು ಮತ್ತಿಕೆರೆಯಲ್ಲಿ ,ಆದ್ರೆ ಪಾಪ ಅವರು ಕಂಪೆನಿ ಮೊದಲಿಗೆ ಸ್ಥಾಪಿಸಿದ್ದು ಅಮೆರಿಕಾದಲ್ಲಿ! ಭಾರತ ಕಾನೂನಿನ ಕಟ್ಟುಪಾಡುಗಳು ಅವರಿಗೆ ಕಂಪೆನಿ ಸ್ಥಾಪಿಸಲು ಅವಕಾಶ ಮಾಡಿ ಕೊಟ್ಟಿಲ್ಲ.ಅದಕ್ಕೇ ಅವರು ಅಮೆರಿಕಾದಲ್ಲಿ ಅದರ ಮುಖ್ಯ ಕಚೇರಿಯನ್ನು ಸ್ಥಾಪಿಸಿದರು.ಈಗ ಹೇಳಿ ಅವರನ್ನು ಬಿಲ್ ಗೇಟ್ಸ್ ಆಗಲು ತಡೆದದ್ದು ಯಾರು?
ಇಂಜಿನಿಯರಿಂಗ್ ಮುಗಿಸಿ ಬೇಗ ಕೆಲಸ ಸಿಕ್ಕಿದ್ರೆ ಸೈ .ಇಲ್ಲಾಂದ್ರೆ ಮನೆಯವರೇ ನಮ್ಮ ನಾಮರ್ಥ್ಯದ ಬಗ್ಗೆ ಅನುಮಾನಿಸ್ತಾರೆ.ಅಂಥ ಸನ್ನಿವೇಶಗಳಲ್ಲಿ ಒಬ್ಬ ಹೇಗೆ ಬಿಲ್ ಗೇಟ್ಸ್ ಆಗುವ ಕನಸು ಕಾಣಬಲ್ಲ?

ಬೆಂಗಳೂರಿನಲ್ಲಿ ಸಾವಿರಾರು ಪತ್ರಕರ್ತರಿದ್ದಾರೆ.ಆದ್ರೆ ಅವರ್ಯಾಕೆ ತಮ್ಮ ತಮ್ಮ ಕೆಲಸಗಳಲ್ಲಿ ಸಂತುಷ್ಟರಾಗಿದ್ದಾರೆ.ಯಾಕೆ ಯಾರೊಬ್ಬನೂ ರವಿ ಬೆಳಗೆರೆಯ ಹಾಗೆ ಸ್ವತಂತ್ರವಾದ ಪತ್ರಿಕೆ ಹೊರ ತರಲು ಮುಂದಾಗಲ್ಲ?ಯಾವ ಭಯ ಅವರನ್ನು ಕಾಡುತ್ತೆ?ಬಿಲ್ ಗೇಟ್ಸ್ ಬರೀ ಸಾಫ್ಟ್ವೇರ್ ಕ್ಷೇತ್ರದಲ್ಲಷ್ಟೆ ಅಲ್ಲ ಪತ್ರಿಕೋದ್ಯಮದಲ್ಲೂ ಆಗಬಹುದಲ್ಲವೇ ?

ಅಷ್ಟಕ್ಕೂ ನಾರಾಯಣ ಮೂರ್ತಿಗಳು ಪಾಟ್ನಿ ಕಂಪ್ಯೂಟರ್ಸ್ ನ ಕೆಲಸ ಬಿಡುವ ಧೈರ್ಯ ಮಾಡಿ ಇನ್ಫೋಸಿಸ್ ಸ್ಥಾಪಿಸಿದ್ದಕ್ಕೆ ಅವರು ಭಾರತದ ಬಿಲ್ ಗೇಟ್ಸ್ ಆಗಿದ್ದು .ಇಲ್ಲಾಂದ್ರೆ ಪಾಟ್ನಿಯಲ್ಲೆ ಜೀವನ ಪರ್ಯಂತ ದುಡಿದು ನಿವೃತ್ತಾರಾಗ್ತಾ ಇದ್ರೇನೋ .ನಾರಾಯಣ ಮೂರ್ತಿಗಳು ಕಂಪೆನಿ ಸ್ಥಾಪಿಸಲು ತನು-ಮನ-ಧನ ಸಹಕಾರ ನೀಡಿದ್ದು ಸುಧಾ ಮೂರ್ತಿಯವರು.

ಬಿಲ್ ಗೇಟ್ಸ್ ಆಗೋ ಧೈರ್ಯ ,ಸಾಮರ್ಥ್ಯವನ್ನು ನೀಡುವವರು ಭಾರತದಲ್ಲಿ ತುಂಬಾ ಕಮ್ಮಿ.ಸ್ವ ಉದ್ಯೊಗಕ್ಕೆ ಕೈ ಹಾಕಿ ಕೈ ಸುಟ್ಟುಕೊಂಡ್ರೆ , " ನಾನು ಮೊದಲೇ ಹೇಳಿದ್ದೆ ವಿಪ್ರೋ ನೋ ,ಇನ್ಫೋಸಿಸ್ ಸೇರ್ಕೊ ಅಂತ ಕೇಳಿಲ್ಲ .ಬಿಲ್ ಗೇಟ್ಸ್ ಆಗ್ತೀನಿ ಅಂದ .ಈಗ ನೋಡಿ ಬಿಲ್ ಗೇಟ್ಸ್ ಬಿಡಿ ಗೇಟ್ ಮುಂದೆ ಇಷ್ಟೊಂದು ಬಿಲ್ ಗಳು ಬಿದ್ದಿವೆ ಒಂದನ್ನೂ ಕಟ್ಟೋ ಯೋಗ್ಯತೆ ಇಲ್ಲ ....." ಅಂತ ಚುಚ್ಚು ಮಾತಾಡ್ತಾರೆ.

ಎಲ್ಲರಿಗೂ ಸುಧಾಮೂರ್ತಿಯವರ ಹಾಗೆ ಒಳ್ಳೆಯ ಹೆಂಡತಿ ಸಿಗಲ್ವಲ್ಲ !

ಜಗಲಿ ಹಾರದವನು ಆಕಾಶಕ್ಕೆ ಹಾರಿಯಾನೇ ಅನ್ನೋ ಮಾತಿದೆ.ಜಗಲಿ ಹಾರಿಯಾಗಿದೆ ಇನ್ನು ಆಕಾಶಕ್ಕೆ ಏಣಿ ಇಡೋದಷ್ಟೇ ಬಾಕಿ.

Monday, February 23, 2009

ವೆಂಕಟ ಇನ್ ಸಂಕಟ....



ಬಹಳ ದಿನಗಳ ನಂತರ ಒಂದು ಹಾಸ್ಯ ಚಿತ್ರ ಮನಸ್ಸು ಬಿಚ್ಚಿ ನಗುವಂತೆ ಮಾಡಿದೆ.ಈ ಚಿತ್ರದಲ್ಲಿ ನಮ್ಮ ಮಂಗಳೂರಿನ ತುಳು ನಾಟಕರಂಗದ ಪ್ರಖ್ಯಾತ ಕಲಾವಿದರಾದ ದೇವದಾಸ್ ಕಾಪಿಕಾಡ್ ನಟಿಸಿದ್ದಾರೆ.ಬಹಳ ಚೆನ್ನಾಗಿ ನಿರ್ವಹಿಸಿದ್ದಾರೆ ತಮ್ಮ ಪಾತ್ರವನ್ನು.
ಚಿತ್ರ ನೋಡಿ ...... ಚಿತ್ರಮಂದಿರದಿಂದ ಎತ್ತಂಗಡಿಯಾಗೋ ಮುನ್ನ !


Photo Courtesy : http://movies.pz10.com

Saturday, February 21, 2009

ಪ್ರೀತಿಯಿಂದ ಪ್ರತಾಪ್ ಗೆ ...

"ಐಟಿ ಬೂಮ್ ಶುರು ಆಗಿ ಹದಿನೈದು ವರ್ಷಗಳಾದ್ರೂ ಈ ಐಟಿಯವರೇನು ಮಾಡ್ತಾರೆ ಅಂತ ಇನ್ನೂ ಜನರಿಗೆ ಗೊತ್ತಾಗಿಲ್ಲ !" ಅಂತ ಆರೋಪವನ್ನು ಪ್ರತಾಪ್ ಸಿಂಹರವರು ಹಾಕಿದ್ದಾರೆ ಈ ವಾರದ ’ಬೆತ್ತಲೆ ಜಗತ್ತಿನಲ್ಲಿ’ .ಹಿಂದೆ ಮಣಿಕಾಂತ್ ರವರು ಹಾಕಿದ್ದಕ್ಕಿಂತ ಸ್ವಲ್ಪ ಹೆಚ್ಚೇ ಆರೋಪವನ್ನೂ ಹಾಕಿದ್ದರೆ ಪ್ರತಾಪ್.
ಶಾಂತಿಸಾಗರದಲ್ಲಿ ಕ್ಯಾಶಿಯರ್ ಏನ್ ಮಾಡ್ತಾನೆ ಅಂತ ಎರಡು ನಿಮಿಷ ಅವನ ಪಕ್ಕದಲ್ಲಿ ನಿಂತುಕೊಂಡ್ರೆ ಗೊತ್ತಾಗುತ್ತೆ.ಗ್ಯಾರೇಜ್ ಗೆ ಹೋದ್ರೆ ಅವನು ಕಾರಿನ ಒಂದೊಂದೇ ಬಿಡಿ ಭಾಗಗಳನ್ನು ಬಿಚ್ಚುತ್ತಾ ಇದ್ರೆ ಆ ಬಿಡಿ ಭಾಗಗಳು ಏನು ಅಂತ ಗೊತ್ತಿಲ್ಲದಿದ್ರೂ ಅವನೇನು ಮಾಡ್ತಾ ಇದ್ದಾನೆ ಅನ್ನೋದು ಸ್ವಲ್ಪವಾದ್ರೂ ಗೊತ್ತಾಗುತ್ತೆ.
ಮನೆಯಲ್ಲಿ ಬಿಸಿ ಬಿಸಿ ಕಾಫಿ ಕುಡೀತಾ ’ವಿಜಯ ಕರ್ನಾಟಕ’ ಓದ್ತಾ ಇದ್ರೆ ಖಂಡಿತ ವಿಜಯ ಕರ್ನಾಟಕದ ಪತ್ರಕರ್ತರು ಏನು ಮಾಡಿ ಈ ಪತ್ರಿಕೆಯನ್ನು ತಯಾರಿಸಿದ್ದಾರೆ ಅನ್ನೋದು ಅರ್ಥವಾಗಲ್ಲ.ಆದ್ರೆ ವಿಶ್ವೇಶ್ವರ ಭಟ್ಟರ ಅನುಮತಿ ಪಡೆದು ಒಂದು ದಿನ ಪತ್ರಿಕೆಯ ಕಚೇರಿಗೆ ಭೇಟಿ ಕೊಟ್ಟರೆ ಪತ್ರಿಕೆಯ ರೂಪುರೇಷೆ ಯಾರು ಮಾಡ್ತಾರೆ ,ಮುಖಪುಟ ಯಾರು ರಚಿಸ್ತಾರೆ.ಫಿಲ್ಲಿಂಗ್ ನ್ಯೂಸ್ ಅಂದ್ರೆ ಏನು ? ಇತ್ಯಾದಿ ಇತ್ಯಾದಿ ’ಸ್ವಲ್ಪವಾದ್ರೂ’ ಅರ್ಥವಾಗುತ್ತೆ.
ಆದ್ರೆ ನೀವು ಇನ್ಫೋಸಿಸ್ ಗೆ ಭೇಟಿ ಕೊಡಿ .ಒಂದು ಕ್ಯೂಬಿಕಲ್ ನಲ್ಲಿ ನಾಲ್ಕು ಜನ ಕೂತಿದ್ರೆ ಆ ನಾಲ್ಕು ಜನರಿಗೆ ಪರಸ್ಪರರು ಏನು ಮಾಡ್ತಾರೆ ಆನೋದೇ ಗೊತ್ತಿರಲ್ಲ.
ಇದು ಅವರ ತಪ್ಪಾ? ತನ್ನ ಸಹೋದ್ಯೋಗಿ ಏನು ಮಾಡ್ತಾನೆ ಅನ್ನೋದರ ಅರಿವು ಅವನಿಗೆ ಇರದೇ ಇದ್ದದ್ದು ತಪ್ಪಲ್ವ?
ಖಂಡಿತ ಅಲ್ಲ ! ಪಕ್ಕದವರು ಏನು ಮಾಡ್ತಾರೆ ಅನ್ನೋದು ತಿಳಿಯೋದು ಅಷ್ಟು ಸುಲಭವೂ ಅಲ್ಲ.

ಟಿವಿ ಹಾಳಾದಾಗ ಅದನ್ನು ರಿಪೇರಿಯವನ ಬಳಿ ಎಲ್ಲರೂ ತಗೊಂಡು ಹೋಗಿರ್ತಾರೆ .ಮತ್ತೆ ಆ ರಿಪೇರಿಯವನು ’ಸಾರ್ IC ಹೋಗಿದೆ ನಾಳೆ ಬನ್ನಿ ಸರಿ ಮಾಡಿ ಕೊಡ್ತೀನಿ ’ ಅನ್ನೋದೂ ಎಲ್ಲರಿಗೂ ಗೊತ್ತು .ಆದ್ರೆ ಆ IC ಅಂದ್ರೆ ಏನು ಅನ್ನೋದು ಗೊತ್ತಾ ? ಇಲ್ಲ!
ಆ ಐಸಿಯನ್ನು ತಯಾರಿಸಲು ಬೆಂಗಳೂರಿನ ಅಷ್ಟೂ ಸೆಮಿಕಂಡಕ್ಟರ್ ಕಂಪೆನಿಗಳಲ್ಲಿ ಅತ್ಯಂತ ಪ್ರತಿಭಾವಂತ ಇಂಜಿನಿಯರ್ ಗಳು ದಿನ ರಾತ್ರಿ ದುಡಿಯೋದು ನಮಗೆ ಗೊತ್ತಿರಲ್ಲ.
ನಾವು ಅಷ್ಟೆಲ್ಲಾ ಖುಷಿಯಿಂದ ಟಿವಿ ನೋಡ್ತೀವಿ ಟಿವಿಯ ಒಂದೊಂದು ದೃಶ್ಯವೂ ಅದ್ಭುತವಾಗಿ ಕಾಣೋದಕ್ಕೆ Sony India Software ನ ಕೋರಮಂಗಲದ ಆಫೀಸಿನಲ್ಲಿ ಇಪ್ಪತ್ತೈದು ಜನ ದಿನ ರಾತ್ರಿ ಕೂತು ಸಾಫ್ಟ್ವೇರ್ ಬರೀತಾ ಇರೋದು ಜನರಿಗೆ ಗೊತ್ತಾ?
ಹಿಂದೆಲ್ಲಾ ಟಿವಿಯಲ್ಲಿ ಕಾರ್ಯಕ್ರಮ ಯಾವುದು ಅಂತ ಗೊತ್ತಾಗೋದಕ್ಕೆ ಪೇಪರ್ ನೋಡ್ಬೇಕಿತ್ತು ಆದ್ರೆ ಈಗ ಸೆಟ್ ಟಾಪ್ ಬಾಕ್ಸ್ ನ ಆವಿಷ್ಕಾರದಿಂದ ಮುಂದಿನ ಕಾರ್ಯಕ್ರಮ ಯಾವುದು ಅಂತ ಟಿವಿಯಲ್ಲೇ ಒಂದು ಬಟನ್ ಪ್ರೆಸ್ ಮಾಡಿ ನೋಡಬಹುದು.ಇಂಥ ಸಾಫ್ಟ್ವೇರ್ ನ ನಾಗಾವರದ ಟೆಕ್ ಪಾರ್ಕಿನಲ್ಲಿ ಕುಳಿತ ಐದು ಜನ ಸಾಫ್ಟ್ ವೇರ್ ಇಂಜಿನಿಯರ್ ಬರೆದಿದ್ದು ನಿಮಗೆ ಗೊತ್ತಾ? ಗೊತ್ತಿಲ್ಲ.

ಯಾಕಂದ್ರೆ ಪತ್ರಿಕೆಯ ಲೇಖನದ ಕೆಳಗೆ ಲೇಖಕನ ಹೆಸರಿರುವ ಹಾಗೆ , ’ಈ ಸಾಫ್ಟ್ ವೇರ್ ಬರೆದವರು ...’ ಅಂತ ಇಂಜಿನಿಯರ್ ನ ಹೆಸರು ಟಿವಿಯಲ್ಲಿ ಬರಲ್ವಲ್ಲ .

ಬಹಳಷ್ಟು ಫೋಟೋಗ್ರಾಫರ್ ಗಳು ಈಗ ಪ್ರಖ್ಯಾತರಾಗಿದ್ದಾರೆ .ಆದ್ರೆ ಅವರು ಫೋಟೋ ತೆಗೆಯುವ ಕ್ಯಾಮೆರಾದಲ್ಲೊಂದು ಇಮೇಜ್ ಪ್ರೊಸೆಸಿಂಗ್ ಗೆ ಸಂಬಂದ ಪಟ್ಟ ಸಾಫ್ಟ್ ವೇರ್ ಇದೆ ಅನ್ನೋದು ಅವರಿಗೇ ಗೊತ್ತಿರಲ್ಲ .ಯಾಕಂದ್ರೆ ಕ್ಯಾಮೆರಾ ಬಿಚ್ಚಿದ್ರೂ ಸಾಫ್ಟ್ವೇರ್ ಕಾಣಲ್ವಲ್ಲ!
ಫೋಟೋ ತೆಗೆದಾದ ಮೇಲೆ ಅದನ್ನು ಕಂಪ್ಯೂಟರ್ ನಲ್ಲಿ ಅಪ್ಲೋಡ್ ಮಾಡಿ Adobe Photoshop ಉಪಯೋಗಿಸಿ ಅದರ ಬಣ್ಣವನ್ನು ತಿದ್ದಿ ತೀಡಿ ಸುಂದರಗೊಳಿಸುವಾಗ Photoshop ಸಾಪ್ಟ್ವೇರ್ ಬರೆದವನು ಅದನ್ನು ಹೇಗೆ ಬರೆದಿರ್ತಾನೆ ,ಅವನಿಗೆ ಫೋಟೋಗ್ರಾಫಿಯ ಬಗ್ಗೆ ಹೇಗೆ ಗೊತ್ತು .ಅಕಸ್ಮಾತ್ ಗೊತ್ತಿಲ್ಲ ಅಂದ್ರೆ ಅವನು ಫೋಟೋ ಸುಂದರ ಕಾಣುವ ಹಾಗೆ ಮಾಡುವ ಸಾಫ್ಟ್ವೇರ್ ಹೇಗೆ ಬರೀತಾ ಇದ್ದ ಅನ್ನೋದನ್ನ ಯೋಚಿಸ್ತಾರಾ ಫೋಟೋಗ್ರಾಫರ್ ಗಳು?
ಇಲ್ಲ ! ಪೈರೇಟೇಡ್ ಸಾಫ್ಟ್ವೇರ್ ಹಾಕಿ ಅದರಿಂದ ಫೋಟೋವನ್ನು ಬೇಕಾದ ಹಾಗೆ ಮಾರ್ಪಾಡು ಮಾಡಿ . ’ನಾನೇ ತೆಗೆದಿದ್ದು ’ ಅಂತ ನಾಲ್ಕು ಜನರಿಗೆ ತೋರಿಸಿ ಹೆಸರು ಗಳಿಸ್ತಾರೆ.ಇಮೇಜ್ ಸ್ಟೆಬಿಲೈಸೇಶನ್ ಸಾಫ್ಟ್ವೇರ್ ಬರೆದವನಿಗೂ ಬೈಗುಳ ! ಫೋಟೋಶಾಪ್ ಸಾಫ್ಟ್ವೇರ್ ಬರೆದವನಿಗೂ ಬೈಗುಳ !
ಮೊನ್ನೆ ’ವಿಜಯಕರ್ನಾಟಕ’ ದ ಮುಖಪುಟ ವಿನ್ಯಾಸಗಾರರಿಗೆ ಅತ್ಯುತ್ತಮ ಮುಖಪುಟ ವಿನ್ಯಾಸ ಮಾಡಿದ್ದಕ್ಕೆ ಪ್ರಶಸ್ತಿ ಬಂತಂತೆ ,ಸಂತೋಷ!.ಮುಖಪುಟ ಬಿಡಿ ಇಡೀ ಪತ್ರಿಕೆ ಸಿದ್ಧಪಡಿಸೋದಕ್ಕೆ ಅವರೂ ಸಾಫ್ಟ್ವೇರ್ ಉಪಯೋಗಿಸಿಯೇ ಇರ್ತಾರೆ .ಮೊದಲು ಒಂದು ಹೆಡ್ಡಿಂಗ್ ಹಾಕಿ ಅದರ ಸೈಜ್ ಹಿಗ್ಗಿಸಿ ಕುಗ್ಗಿಸಿ ,ಕಲರ್ ಬದಲಾಯಿಸಿ ನೋಡುವಾಗಲೂ ಅವರಿಗೆ ’ ವಾವ್ ಈ ಸಾಫ್ಟ್ವೇರ್ ಎಷ್ಟು ಚೆನ್ನಾಗಿದೆ ! ಬರೀ ಮೌಸ್ ಉಪಯೋಗಿಸಿಯೇ ಎಷ್ಟೆಲ್ಲಾ ಆಟ ಆಡಬಹುದು ’ ಈ ಸಾಫ್ಟ್ವೇರ್ ಬರೆದವನೇನಾದ್ರೂ ಪತ್ರಿಕೆಯಲ್ಲಿ ಕೆಲಸ ಮಾಡಿದ್ದಾನಾ? ಇಲ್ಲಾಂದ್ರೆ ಅವನಿಗೆ ನನ್ನ ಅವಶ್ಯಕತೆ ಹೇಗೆ ಗೊತ್ತಾಗ್ತಾ ಇತ್ತು ’ ಅನ್ನೋ ವಿಚಾರ ತಲೆಗೆ ಬರೋದೆ ಇಲ್ಲ!
ಅವರೇನಿದ್ರೂ ’ನೋಡ್ರಿ ನನ್ನ ಡಿಸೈನು ಹೆಂಗಿದೆ ’ ಅಂತ ಸ್ವಥ ಅವರೇ ಕೂತು ಒಂದೊಂದೆ ಅಕ್ಷರದ ಬಣ್ಣವನ್ನೂ ಕಲರ್ ಪೆನ್ಸಿಲ್ ನಿಂದ ಬದಲಾಯಿಸಿದವರ ಹಾಗೆ ಖುಷಿ ಪಡ್ತಾರೆ.
ಬಿ.ಎಮ್.ಟಿ.ಸಿ ಬಸ್ಸಿನ ಕಂಡಕ್ಟರ್ ತನ್ನ ಬಳಿ ಇರೋ hand held device ನ ಒಂದೇ ಒಂದು ಬಟನ್ ಒತ್ತಿ ಆ ದಿನದ ಟ್ರಿಪ್ ಶೀಟ್ ಪ್ರಿಂಟ್ ಮಾಡ್ತಾನೆ .ಅವನೂ ಯಾವತ್ತೂ ’ಅಯ್ಯೋ ನನ್ನ ಸಮಯ ಎಷ್ಟು ಉಳಿತಾಯ ಆಯ್ತು ಇದರಿಂದ .ಈ ಉಪಕರಣವನ್ನು ಡಿಸೈನ್ ಮಾಡಿದ ಪುಣ್ಯಾತ್ಮ ಯಾರೋ ,ಒಂದೇ ಬಟನ್ ಒತ್ತಿ ಇಡೀ ಟ್ರಿಪ್ ಶೀಟ್ ಮಾಡೋ ಹಾಗೆ ಸಾಫ್ಟ್ವೇರ್ ಬರೆದ ಆ ಮನುಷ್ಯನ ಹೊಟ್ಟೆ ತಣ್ಣಗಿರಲಿ ಅಂತ ’ ಹೇಳಲ್ಲ . ’ ರೀ ಹನುಮಂತಪ್ಪ ಈ ಸಾಫ್ಟ್ವೇರ್ ಮುಳುಗೋಯ್ತಂತೆ, ಹಾಳಾದ್ದು ಹಾಗೆ ಆಗ್ಬೇಕು ಅವರಿಗೆ ’ ಅಂತಾರೆ.

ನಿಮ್ಮ ಸಂಬಂದಿಗಳಿಗೆ ಬ್ರೇನ್ ಟ್ಯೂಮರ್ ಆಗಿದೆ ಅಂತ Nimhans ಗೆ ಹೋಗ್ತೀರಾ(ಹಾಗೆ ಆಗದಿರಲಿ).ಅಲ್ಲಿ ಡಾಕ್ಟರ್ ಸ್ಕ್ಯಾನಿಂಗ್ ಮಾಡ್ಬೇಕು ಅಂತಾರೆ .ಸ್ಕ್ಯಾನಿಂಗ್ ಮಾಡ್ತಾ ಇರ್ಬೇಕಾದ್ರೆ ಟಿವಿಯಂಥ ಒಂದು ಪರದೆಯಲ್ಲಿ ಚಿತ್ರ ಮೂಡುತ್ತೆ . ’ಡಾಕ್ಟರ್ ಚಿತ್ರ ನೋಡಿ, ಈಗ್ಲೇ ತೋರ್ಸಿದ್ದು ಒಳ್ಳೆದಾಯ್ತು .ಇಲ್ಲಾಂದ್ರೆ ಪ್ರಾಣಾನೇ ಹೋಗ್ತಿತ್ತು’ ಅಂತಾರೆ.ನೀವೂ ಖುಷಿಯಾಗಿ ಡಾಕ್ಟರ್ ಕಾಲಿಗೆ ಡೈವ್ ಹೊಡೀತೀರಾ.
ಆದ್ರೆ ಯಾವೊಬ್ಬನೂ ಆ ಸ್ಕ್ಯಾನಿಂಗ್ ಮೆಶಿನ್ ಇಲ್ಲದಿದ್ರೆ ಆ ಡಾಕ್ಟರ್ ಅಲ್ಲ ಅವನ ತಾತ ಕೂಡಾ ಟ್ಯೂಮರ್ ಪತ್ತೆ ಹಚ್ಚೋದು ಸಾಧ್ಯ ಇರಲಿಲ್ಲ ಅನ್ನೋದು ಯೋಚಿಸಲ್ಲ.ಆ ಸ್ಕ್ಯಾನಿಂಗ್ ಉಪಕರಣದಲ್ಲಿ ಸ್ಪಷ್ಟವಾಗಿ ಚಿತ್ರಗಳು ಮೂಡುವಂತೆ ಸಾಫ್ಟ್ವೇರ್ ಅನ್ನು ಬರೆದ ’ನಮ್ಮ ಬೆಂಗಳೂರಿನ’ ನಾಗಾವರದ ಟೆಕ್ ಪಾರ್ಕಿನಲ್ಲಿ ಕುಳಿತ ಫಿಲಿಪ್ಸ್ ಕಂಪೆನಿಯ ತರುಣ ಹುಡುಗ ಹುಡುಗಿಯರನ್ನು ನೆನೆಸಿಕೊಳ್ಳೋದೆ ಇಲ್ಲ .ಯಾಕಂದ್ರೆ ಆ ಸ್ಕ್ಯಾನಿಂಗ್ ಚಿತ್ರ ತೋರಿಸ್ತಾ ಇರ್ಬೇಕಾದ್ರೆ ’ಈ ಟ್ಯೂಮರ್ ತೋರಿಸಲು ಸಹಕಾರಿಯಾದವನು ನಾನೇ ’ ಅಂತ ಆ ಹುಡುಗ-ಹಡುಗಿಯರ ಹೆಸರು ಕಾಣಿಸಲ್ವಲ್ಲ ಆ ಚಿತ್ರದಲ್ಲಿ.

ಸಾಫ್ಟ್ವೇರ್ ಇಂಜಿನಿಯರ್ ಗಳಿಗೆ ಸಾಫ್ಟ್ವೇರ್ ಬಿಟ್ರೆ ಬೇರೆ ಏನೂ ಕೆಲಸ ಗೊತ್ತಿಲ್ಲ ಅಂತ ಆರೋಪಿಸ್ತಾರೆ ಪ್ರತಾಪ್.ಹೌದು ಅದೊಂದೆ ಗೊತ್ತಿರೋದು ಆದ್ರೆ ಅದು ತಪ್ಪಾ?.ಒಬ್ಬ ಪತ್ರಕರ್ತನ ಕೆಲಸ ಹೋದ್ರೆ ಅವನೇನು ಮಾಡ್ತಾನೆ ? ಬೇರೆ ಪತ್ರಿಕೆಗಳಿಗೆ ತಾನೇ ಅರ್ಜಿ ಹಾಕೋದು?ಬೇರೆ ಕೆಲಸ ಮಾಡೋದಿಕ್ಕೆ ಅವರು ತಯಾರಿದ್ದಾರಾ?ಬೇರೆ ಗತ್ಯಂತರವಿಲ್ಲದೇ ಇದ್ರೆ ಯಾವ ಕೆಲಸಕ್ಕಾದರೂ ಇಳಿದೇ ಇಳೀತಾರೆ ಜನ ಅದು ಪ್ರಕೃತಿ ನಿಯಮ.ಈಗಾಗಲೇ ಒಬ್ಬ ಸಾಫ್ಟ್ವೇರ್ ಇಂಜಿನಿಯರ್ ಕೆಲಸ ಸಿಕ್ಕದೆ ಮೇರು ಟ್ಯಾಕ್ಸಿಯ ಡ್ರೈವರ್ ಆಗಿದ್ದಾನಂತೆ!

ಇಷ್ಟೆಲ್ಲ ದಿಗ್ಗಜ ಐಟಿ ಕಂಪೆನಿಗಳಿದ್ದರೂ ಪೇಟೆಂಟ್ ಗಳು ಶೂನ್ಯ ಅಂತ ಆರೋಪಿಸಿದ್ದಾರೆ.ಟೆಕ್ಸಾಸ್ ಇನ್ಸ್ಟ್ರುಮೆಂಟ್ ಅನ್ನೋ ಕಂಪೆನಿಯ ಬೆಂಗಳೂರಿನ ಶಾಖೆಯಲ್ಲಿ ವರ್ಷಕ್ಕೆ ನೂರಾರು ಪೇಟೆಂಟ್ ಗಳು
ದಾಖಲಾಗುತ್ತವೆ.ಅದು ಬಹುಷ ಪ್ರತಾಪ್ ರಿಗೆ ಗೊತ್ತಿಲ್ಲ.ಯಾಕಂದ್ರೆ ಅವರಿಗೆ ಗೊತ್ತಿರೋದು ಬರೀ ದಿಗ್ಗಜರಾದ ಇನ್ಫೋಸಿಸ್ ಹಾಗೂ ವಿಪ್ರೋ .

ಹೌದು ಐಟಿಯವರು ಅಮೆರಿಕಾದ ಕೂಲಿಗಳು. ಹಾಗೆ ನೋಡಿದ್ರೆ ಸಂಬಳ ತಗೊಳ್ಳುವರೆಲ್ಲಾ ಕೂಲಿಗಳೇ! ಏನೇ ಪತ್ರಿಕಾಧರ್ಮ ,ಅದು ಇಂದು ಅಂದುಕೊಂಡರೂ ತಿಂಗಳ ಕೊನೆಗೆ ಸಂಬಳಕ್ಕಾಗಿ ದಣಿಗಳ ಮುಂದೆ ಯಾವನಾದ್ರೂ ಕೈ ಚಾಚಲೇ ಬೇಕಲ್ವ?
ಒಟ್ಟಿನಲ್ಲಿ ಐಟಿಯವರನ್ನು ದೂಷಿಸೋದು ಕಡಿಮೆ ಆಗೋ ಯಾವ ಲಕ್ಷಣಗಳೂ ಕಾಣಿಸ್ತಾ ಇಲ್ಲ .

ಆಲ್ ದಿ ಬೆಸ್ಟ್ !

Tuesday, February 17, 2009

ಆರಡಿ X ಮೂರಡಿ !



ಆರಡಿ ಮೂರಡಿ ಅಳತೆಯ ಮನೆ ನಮ್ಮೆಲ್ಲರ ಮನೆ
ಆಸೆ ನಿರಾಸೆ ಅನುಭವಿಸುತ್ತಾ ಬದುಕಿರುವೆವು ನಾವು ಸುಮ್ಮನೆ
ಹುಟ್ಟುವುದು ಆಕಸ್ಮಿಕ ಸಾಯುವುದು ನಿಶ್ಚಿತ
ದ್ವೇಷ ,ಜಗಳ,ಅಸೂಯೆ, ಮೀರಿ ಬದುಕಿದರೆ ಸಾಕು ನಗು ನಗುತಾ ....

ಈ ಹಾಡಿನಿಂದ ಆ ಸಾಕ್ಷ್ಯಚಿತ್ರ ಮುಕ್ತಾಯವಾಗುತ್ತದೆ ! ಸಾವು - ಬದುಕಿನ ನಡುವೆ ಒಂದು ಪ್ರಪಂಚವಿದೆ ಅನ್ನೋದನ್ನು ತೋರಿಸುತ್ತದೆ ಈ ಸಾಕ್ಷ್ಯಚಿತ್ರ.

ಅದರ ಹೆಸರೇ 6 X 3

ಮೇ ಫ್ಲವರ್ ಗೆ ಹೋದಾಗ ತಗೊಂಡಿದ್ದೆ (ಕಾಸು ಕೊಟ್ಟು!) ಅದರ ಡಿವಿಡಿ .

ಕನ್ನಡಿ ಕ್ರಿಯೇಶನ್ಸ್ ರವ್ರು ನಿರ್ಮಿಸಿರುವ ಈ ಸಾಕ್ಷ್ಯಚಿತ್ರ ಬಾಹ್ಯ ಜಗತ್ತಿನಿಂದ ದೂರವಾಗಿ ಸ್ಮಶಾನದಲ್ಲೇ ಬದುಕನ್ನು ಕಂಡಿರುವ ಶಕುಂತಲಮ್ಮನ ಕಥೆ.ಶಕುಂತಲಮ್ಮ ಸ್ಮಶಾನಕ್ಕೆ ಬರುವ ಹೆಣಗಳನ್ನು ಹೂಳುವವಳು.
ಒಬ್ಬನ ನಷ್ಟ ಇನ್ನೊಬ್ಬನ ಲಾಭ ಅನ್ನುವ ಹಾಗೆ ಒಬ್ಬರು ಸತ್ತರಷ್ಟೇ ಇವಳು ಬದುಕಲು ಸಾಧ್ಯವಾಗೋದು ! ಶಕುಂತಲಮ್ಮನ ಕಥೆಯನ್ನು ಬಹಳ ಚೆನ್ನಾಗಿ ಚಿತ್ರಿಸಿದ್ದಾರೆ ’ಕನ್ನಡಿ’ಯ ರಾಘವೇಂದ್ರ ,ಸುಬ್ರಮಣಿಯವರು .

ನನಗೆ ಆರಡಿ ಮೂರಡಿ ಜಾಗದ ಬಗ್ಗೆ ಅಷ್ಟೊಂದು ವ್ಯಾಮೋಹವಿಲ್ಲ! ಯಾಕಂದ್ರೆ ನಮ್ಮ ಪದ್ದತಿಯಲ್ಲಿ ಹೆಣಗಳನ್ನು ಸುಡುತ್ತಾರೆ .ಆರಡಿ-ಮೂರಡಿ ಜಾಗ ಬರೀ ಹದಿನೆಂಟು ನಿಮಿಷಗಳಷ್ಟೇ ಸಾಕು ನನಗೆ -ಸುಟ್ಟು ಬೂದಿಯಾಗೋದಕ್ಕೆ :) ಆದರೆ ಬಹುತೇಕ ಜನರಿಗೆ ಈ ಆರಡಿ-ಮೂರಡಿ ಜಾಗದ ಮಹತ್ವ ತುಂಬಾನೇ!

ಹೆಣಗಳನ್ನು ಹೂಳುವ ಕೆಲಸ ಮಾಡಿ ಬಾಹ್ಯ ಜಗತ್ತಿನ ಸಂಪರ್ಕವೇ ಇಲ್ಲದೆ ಬದುಕುವ ಶಕುಂತಲಮ್ಮ ತನ್ನ ಮಕ್ಕಳನ್ನು ಬಹಳ ಚೆನ್ನಾಗಿ ಸಾಕಿ ,ಒಳ್ಳೆಯ ಕಡೆ ಮದುವೆ ಮಾಡಿ ಕೊಟ್ಟಿದ್ದಾರೆ.ಆ ಮಹಿಳೆಗೊಂದು ಅಭಿನಂದನೆ.

ಸಾಕ್ಷ್ಯಚಿತ್ರ ಚೆನ್ನಾಗಿದೆ.ಆದರೆ ಸಂಗೀತ ಇನ್ನೂ ಚೆನ್ನಾಗಿರಬಹುದಿತ್ತು ಅನ್ನಿಸಿತು ನನಗೆ.ಕೆಲವೊಂದು ಕಡೆ ಸಂಗೀತ ಅಷ್ಟೊಂದು ಪ್ರಭಾವ ಬೀರಿಲ್ಲ.
ಜಯಪ್ರಕಾಶ್ ಉಪ್ಪಳರ(ನನ್ನ ಊಹೆ,ಅವರ ಹೆಸರು ಎಲ್ಲೂ ನಮೂದಾಗಿಲ್ಲ) ಧ್ವನಿ ಬಹಳ ಪ್ರಭಾವಿಯಾಗಿದೆ .

ಆದರೆ ವ್ಯಾವಹಾರಿಕವಾಗಿ ನೋಡಿದ್ರೆ ಈ ಸಾಕ್ಷ್ಯಚಿತ್ರ ದುಬಾರಿ ಅನ್ನಿಸುತ್ತೆ .ಹತ್ತು ನಿಮಿಷದ ಸಾಕ್ಷ್ಯಚಿತ್ರಕ್ಕೆ ನೂರು ರೂಪಾಯಿ ತೆರುವುದು ಎಲ್ಲರಿಗೂ ಸಾಧ್ಯವಿಲ್ಲದ ಮಾತು.ಆದರೆ Support Price: Rs1೦೦ ಅಂತ ಹಾಕಿರೋದ್ರಿಂದ ಸಪೋರ್ಟ್ ಮಾಡಲೇ ಬೇಕು ಅಲ್ವಾ?

Sunday, February 15, 2009

ವಸುಧೇಂದ್ರರೊಂದಿಗೆ ಒಂದು ’ಛಂದ’ದ ಸಂಜೆ !



ಪ್ರತಿವರ್ಷದಂತೆ ಈ ವರ್ಷವೂ ವ್ಯಾಲೆಂಟೈನ್ಸ್ ಡೇ ಗೆ ಯಾವ ಹುಡುಗಿಯೂ ನನಗೆ ಪ್ರಪೋಸ್ ಮಾಡಿಲ್ಲ ! ನಾನು ಯಾರಿಗಾದ್ರೂ ಪ್ರಪೋಸ್ ಮಾಡೋಣ ಅಂದ್ರೆ ’ಯಾರಿಗೆ’ ಅನ್ನೋ ದ್ವಂದ್ವ!ಹೀಗಾಗಿ ಈ ವ್ಯಾಲೆಂಟೈನ್ಸ್ ಡೇ ಕೂಡಾ ವ್ಯರ್ಥವಾಯ್ತೇನೋ ಅಂದುಕೊಂಡೆ .

ಹಾಗಾಗಲು ’ಮೇ ಫ್ಲವರ್’ನವರು ಬಿಡಲಿಲ್ಲ !ಹಾಗಂತ ಪ್ರಪೋಸ್ ಮಾಡಲು ನನ್ಗೆ ಹುಡುಗಿ ಹುಡುಕಿ ಕೊಟ್ಟರು ಅಂದುಕೋಬೇಡಿ !
ಪ್ರೇಮಿಗಳ ದಿನದಂದೇ ನಮ್ಮ ನೆಚ್ಚಿನ ಕಥೆಗಾರ ವಸುಧೇಂದ್ರರೊಂದಿಗೆ ಒಂದು ಸುಂದರ ಸಂಜೆಯನ್ನು ಕಳೆಯುವ ಅವಕಾಶವನ್ನು ಮೇ ಫ್ಲವರ್ ನವರು ಕಲ್ಪಿಸಿದ್ರು.ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನರ ಸಂಖ್ಯೆಯೇ ಸಾಕು ವಸುಧೇಂದ್ರರ ಜನಪ್ರಿಯತೆ,ಜನರು ಅವರನ್ನು ಇಷ್ಟಪಡುತ್ತಿರೋ ಬಗೆಯನ್ನು ತಿಳಿಸಲು.

’ನನಗೆ ಚೆನ್ನಾಗಿ ಮಾತಾಡಲು ಬರೋದಿಲ್ಲ ’ ಅಂತ ಹೇಳಿಯೇ ವಸು ಪಾಪ ಒಂದೂ ಕಾಲು ಘಂಟೆಗಳ ಕಾಲ ನಿರರ್ಗಳವಾಗಿ ಸ್ವಲ್ಪವೂ ಬೋರ್ ಹೊಡೆಸದೆ ಅದ್ಭುತವಾಗಿ ಮಾತಾಡಿದ್ರು.

ಕಾರ್ಯಕ್ರಮಕ್ಕೆ ಬರದವರಂತೂ ಒಂದು ಒಳ್ಳೆಯ ಅವಕಾಶವನ್ನು ಕಳೆದುಕೊಂಡರು -ಸಾರಿ ಕಣ್ರೀ !

ಐದು ಚಂದನೆಯ ’ಹುಡುಗಿಯರು’(ಯಾರು ಅನ್ನೋದು ಸಸ್ಪೆನ್ಸ್!) ವಸುಧೇಂದ್ರರನ್ನು ಕೆಂಪು ಗುಲಾಬಿ ಕೊಟ್ಟು ಸ್ವಾಗತಿಸಿದರು.’ನನಗೆ ಅಷ್ಟು ಚೆನ್ನಾಗಿ ಮಾತಾಡೋಕೆ ಬರಲ್ಲ ಆದ್ದರಿಂದ ಒಂದು ಲೇಖನವನ್ನು ಓದಿ ಕಾರ್ಯಕ್ರಮ ಆರಂಭಿಸ್ತೀನಿ ’ ಅಂತ ವಸು ಹೇಳಿದ್ರೂ ಮೋಹನ್ ಅವರು ಒಪ್ಪದೆ ’ಮೊದಲು ಮಾತಾಡಿ ಆಮೇಲೆ ಲೇಖನ ಓದಿ’ ಅಂದಿದ್ದು ಒಳ್ಳೆಯದೇ ಆಯ್ತು.ಇಲ್ಲಾಂದ್ರೆ ಅಷ್ಟು ಮಾತಾಡೋದು ಸಾಧ್ಯ ಆಗ್ತಿರ್ಲಿಲ್ವೇನೋ!

ವಸು ತಾವು ಕಥೆ ಬರೆಯಲು ಶುರು ಮಾಡಿದ ರೀತಿ ,’ಛಂದ ಪುಸ್ತಕ’ ಹುಟ್ಟಿದ ರೀತಿ ಯನ್ನು ಚೆನ್ನಾಗಿ ವಿವರಿಸಿದರು.ಉತ್ತರ ಕರ್ನಾಟಕ flavour ಇರ್ಲಿ ಅಂತ ಅವರು ತಮ್ಮ ಪ್ರಕಾಶನಕ್ಕೆ ’ಛಂದ ’ಆನ್ನೋ ಹೆಸರಿಟ್ಟರಂತೆ .ಮೊದ ಮೊದಲು ತಮ್ಮ ಪುಸ್ತಕಗಳು ಮಾರಾಟವಾಗಲು ತಾವು ಪಟ್ಟ ಶ್ರಮವನ್ನು ಹಾಸ್ಯಭರಿತವಾಗೇ ವಿವರಿಸಿದರು.ಜೊತೆಗೆ ’ಛಂದ ಪುಸ್ತಕ’ ಕ್ಕೆ ಗೆಳೆಯ ಅಪಾರರ ಅಪಾರವಾದ ಕೊಡುಗೆಯನ್ನೂ ಮನದುಂಬಿ ಕೊಂಡಾಡಿದರು .
ತಮ್ಮ ಪುಸ್ತಕಗಳನ್ನು ಸಾಹಿತ್ಯ ಸಮ್ಮೇಳನದಲ್ಲಿ ಮಾರಾಟ ಮಾಡಲು ಹೋದಾಗ ಅನುಭವಿಸಿದ ಮುಜುಗುರದ ಪ್ರಸಂಗವನ್ನೂ ಅವರು ವಿವರಿಸಿದರು.
ಒಂದು ಕಡೆ ಸಮ್ಮೇಳನದಲ್ಲಿ ಅವರು ತಮ್ಮ ಪುಸ್ತಕ ಮಾರಾಟ ಮಾಡ್ತಿದ್ದಾಗ ಒಬ್ಬರು ಬಂದು ಅವರನ್ನೇ ’ಈ ಪುಸ್ತಕ ಹೇಗಿದೆ ?’ ಅಂತ ಕೇಳಿದ್ರಂತೆ .ಮೊದ ಮೊದಲು ,ಮುಜುಗುರ ಆಗ್ತಾ ಇದ್ರೂ ಕಾಲ ಕಳೆದಂತೆ ಅಂತ ಸಂದರ್ಭಗಳಿಗೆ ಒಗ್ಗಿಕೊಂಡ ಬಗೆಯನ್ನೂ ವಿವರಿಸಿದರು.
ಇನ್ನೊಂದು ಕಡೆ ಸಮ್ಮೇಳನದಲ್ಲಿ ಒಬ್ಬ ಹೆಂಗಸು ತಮ್ಮ ’ಚೇಳು’ ಕಥಾ ಸಂಕಲನವನ್ನು ತೋರಿಸಿ ’ಅದು ಹೇಗಿದೆ ?’ ಅಂದರಂತೆ ವಸುಧೇಂದ್ರ ಈಗಾಗಲೇ ಮಾರ್ಕೆಟಿಂಗ್ ತಂತ್ರವನ್ನು ಕಲಿತಿದ್ದರಿಂದ ’ಅದ್ಭುತವಾಗಿದೆ ಮ್ಯಾಡಂ ತಗೊಳ್ಳಿ ಅದಕ್ಕೆ ಪ್ರಶಸ್ತಿ ಬಂದಿದೆ’ ಅಂದ್ರಂತೆ .ಆದ್ರೆ ಆ ಹೆಂಗಸು ತಮ್ಮ ಪಕ್ಕದಲ್ಲಿದ್ದ ಗೆಳತಿಯ ಬಳಿ ಅಭಿಪ್ರಾಯ ಕೇಳಿದಾಗ ’ಛೇ ತಗೋಬೇಡ ಅದು ,ಮಡಿ ಯಾವುದು ಮೈಲಿಗೆ ಯಾವುದು ಗೊತ್ತಿಲ್ಲ ಆ ಕಥೆಗಳಲ್ಲಿ ’ ಅಂತ ಬೈದು ಕರ್ಕೊಂಡು ಹೋದ್ರಂತೆ! ನಾವೆಲ್ಲಾ ನಕ್ಕಿದ್ದೇ ನಕ್ಕಿದ್ದು ಅದನ್ನು ಕೇಳಿ (ನೀವೂ ನಗ್ರಿ ಫ್ರೀ ಆಗಿ!)

ನನಗೆ ವಸುಧೇಂದ್ರ ಕಥೆಗಾರರಾಗಿ ಎಷ್ಟು ಇಷ್ಟ ಆಗ್ತಿದ್ರೋ ಅವರ ಜೊತೆ ಒಂದು ಸಂಜೆ ಕಳೆದ ಮೇಲೆ ಅದರ ಎರಡು ಪಟ್ಟು ಇಷ್ಟ ಆಗ್ತಾ ಇದ್ದಾರೆ.ಬದುಕಿನ ಬಗ್ಗೆ ಅಪಾರವಾದ ಗೌರವ,ಪ್ರೀತಿ ಇದೆ ಅವರಿಗೆ.

ಬೆಂಗಳೂರಿನ ಟ್ರಾಫಿಕ್ ಬಗ್ಗೆ ಅಸಮಧಾನ ಇರದೆ ಅದನ್ನೇ ಸಕಾರಾತ್ಮಕವಾಗಿ ಬಳಸಿದ ಮೊದಲ ವ್ಯಕ್ತಿ ಬಹುಷಃ ವಸುಧೇಂದ್ರ ! ಯಾಕಂದ್ರೆ ಅವರು ತಮ್ಮ ಬಹಳಷ್ಟು ಕಥೆಗಳನ್ನು ಬರೆದಿರೋದು ಟ್ರಾಫಿಕ್ ನಲ್ಲಂತೆ! ಹಾಗಾಗಿ ತಮ್ಮ ’ಚೇಳು’ ಕಥಾಸಂಕಲನವನ್ನು ಅವರು ಬೆಂಗಳೂರಿನ ಟ್ರಾಫಿಕ್ ಜಾಮ್ ಹಾಗೂ ಅವರ ಡ್ರೈವರ್ ಗೆ ಅರ್ಪಿಸಿದ್ದಾರೆ.

ತಮ್ಮ ಬರವಣಿಗೆಗೆ ಸಹಾಯವಾದ ಶೇಶಾದ್ರಿ ವಾಸುರವರನ್ನೂ ನೆನೆಯಲು ಮರೆಯಲಿಲ್ಲ ವಸುಧೇಂದ್ರ.’ಅದೃಶ್ಯ ಕಾವ್ಯ ’ ಬ್ರೈಲ್ ಅವತರಣಿಕೆಯನ್ನು ತರೋದಿಕ್ಕೆ ಹೇಗೆ ಶೇಷಾದ್ರಿ ವಾಸುರವರು ಬರಹದಲ್ಲಿ ಬ್ರೈಲ್ ಅಳವಡಿಸಿ ತಮಗೆ ಸಹಾಯ ಮಾಡಿದ್ರು ಅನ್ನೋದನ್ನೂ ಅವರು ಹೇಳಿದ್ರು .
ಸೇರಿದ ಅಭಿಮಾನಿಗಳ ಪ್ರಶ್ನೆಗೂ ಅವರು ಬಹಳ ಚೆನ್ನಾಗಿ ಉತ್ತರಿಸಿದರು.
ಒಟ್ಟಿನಲ್ಲಿ ತಮ್ಮ ಕಥೆಗಳ ಮೂಲಕ ಬಹಳಷ್ಟು ಜನರ ಪ್ರೀತಿಯನ್ನು ಗಳಿಸಿರುವ ವಸುಧೇಂದ್ರ ಹೀಗೆ ಒಳ್ಳೊಳ್ಳೆಯ ಕಥೆಗಳನ್ನು,ಪುಸ್ತಕಗಳನ್ನು ತಮ್ಮ ’ಛಂದ ಪುಸ್ತಕ’ದ ಮೂಲಕ ನೀಡಲಿ ಅನ್ನೋದು ನಮ್ಮೆಲ್ಲರ ಹಾರೈಕೆ.

ಛಂದದ ಕಾರ್ಯಕ್ರಮ ನಡೆಸಿಕೊಟ್ಟ ಮೇ ಫ್ಲವರ್ ಬಳಗಕ್ಕೆ ಧನ್ಯವಾದಗಳು.

Thursday, February 5, 2009

ಯಾವುದು ತಪ್ಪು - ಯಾವುದು ಸರಿ ?



ದೇವಸ್ಥಾನದಲ್ಲಿ ಗೋಪಾಲ ಭಟ್ರು ತಮ್ಮ ಹಾರ್ಮೋನಿಯಂ ಅನ್ನು ನುಡಿಸುತ್ತಾ ’ತಲೆಯ ಮೆಟ್ಟಿ ಕುಣಿದಾನೋ ಕೃಷ್ಣ’ ಅಂತ ತಾರಕದಲ್ಲಿ ಹಾಡ್ತಾ ಇದ್ರೆ ಸಾಕ್ಷಾತ್ ಶ್ರೀ ಕೃಷ್ಣನೇ ಧರೆಗಿಳಿದು ಬರುತ್ತಾನೇನೋ ಅನ್ನೋ ಅನುಭವ!ಬಪ್ಪನಾಡಿನ ರಥೋತ್ಸವದಲ್ಲಿ ಹತ್ತು ರೂಪಾಯಿಯ ಚಕೋಬಾರ್ ಗೆ ಅಂಟಿಕೊಂಡಿರುವ ಕಾಗದದ ಕವರ್ ಕಿತ್ತು ಹಾಗೇ ತಿನ್ತಾ ಇದ್ರೆ ಸ್ವರ್ಗ ಸುಖ!
ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗ ನಡೀತಾ ಇರ್ಬೇಕಾದ್ರೆ ರಾಕ್ಷಸ ಬರುವಾಗ ಸಿಡಿಸುವ ಸಿಡಿಮದ್ದಿನ ಸದ್ದಿಗೆ ಚೆಲ್ಲಾಪಿಲ್ಲಿಯಾಗಿ ಓಡೋದು ಒಂದು ಸುಖ !ಮನೆಯವರ,ಊರವರ ಕಣ್ಣು ತಪ್ಪಿಸಿ ಪ್ರಶಾಂತ್ ಥಿಯೇಟರ್ ನಲ್ಲಿ ಶಕೀಲಾಳ ’ಕಿನ್ನಾರ ತುಂಬಿಗಳ್’ ಸಿನೆಮಾಗಿ ಹೋಗಿ ಸಿಕ್ಕಿ ಬೀಳೋದು ಒಂದು ಮಜಾನೇ(ಆಗ ಸಜೆಯಾಗಿದ್ರೂ ಈಗ ಮಜಾ!)

ಅಯ್ಯೋ ’ಆಟೋಗ್ರಾಫ್’ ಚಿತ್ರದ ಸವಿಸವಿ ನೆನಪು ಹಾಡು ನೆನಪಾಗ್ತಾ ಇಲ್ಲ ನನಗೆ!

ಇಂಗ್ಲೀಶ್ ನಲ್ಲಿ ಒಂದು ಮಾತಿದೆ .ಅದು ಯಾವತ್ತೂ ನನಗೆ ಪದೇ ಪದೇ ನೆನಪಿಗೆ ಬರ್ತಾ ಇರುತ್ತೆ .
" Don't think that someone is UNHAPPY just because he/she is not living his/her life ,the way you wanted to live your life !"

ಅರ್ಥ ಇಷ್ಟೇ - " ನೀವು ನಿಮ್ಮ ಬದುಕನ್ನು ಯಾವ ರೀತಿ ಬದುಕಬೇಕು ಅಂದುಕೊಂಡಿದ್ದೀರೊ ಅದೇ ರೀತಿ ಬೇರೊಬ್ಬರು ಬದುಕದಿದ್ರೆ ಅವರು ಸಂತೋಷವಾಗಿಲ್ಲ ಅಂದುಕೊಳ್ಳಬೇಡಿ !" -ಎಷ್ಟು ಸತ್ಯ ಅಲ್ವಾ?
ನಮಗೆ ಜಗಜೀತ್ ಸಿಂಗ್ ಹಾಡು ಅಂದ್ರೆ ಪಂಚಪ್ರಾಣ ಆದ್ರೆ ಸ್ನೇಹಿತೆಗೆ ಅವನಾಗಲ್ಲ .”ಅಯ್ಯೋ ಜಗಜೀತ್ ಸಿಂಗ್ ಹಾಡು ನಿನಗೆ ಇಷ್ಟ ಆಗಲ್ವ ! ಥೂ ನಿನ್ ಟೇಸ್ಟೇ ಸರಿ " ಇಲ್ಲ ಅಂತೀವಿ.
ಅದೇ ಸ್ನೇಹಿತೆಗೆ ಬ್ರ್ಯಾನ್ ಆಡಮ್ಸ್ ಹಾಡು ತುಂಬಾ ಇಷ್ಟ .ಅವಳೂ "ಬ್ರಯಾನ್ ಆಡಮ್ಸ್ ಅಂದ್ರೆ ಯಾರು ಅಂತ ನಿಂಗೆ ಗೊತ್ತಿಲ್ವ ! ನೀನೂ ವೇಸ್ಟ್ ಕಣೋ " ಅಂತಾಳೆ ! ಈಗ ನಡೀತಾ ಇರೋ ’ಭಾರತೀಯ ಸಂಸ್ಕೃತಿ’ ಯ ಬಗ್ಗೆ ವಿವಾದ/ಚರ್ಚೆ ನೋಡಿದ್ರೆ ತುಂಬಾನೇ ಬೇಜಾರಾಗುತ್ತೆ.ಭಾರತೀಯ ಸಂಸ್ಕೃತಿ ಶ್ರೇಷ್ಠ ಅನ್ನೋದನ್ನು ನಿರೂಪಿಸಲು ನಾವು ಸದಾ ಪಾಶ್ಚಾತ್ಯ ಸಂಸ್ಕೃತಿಯ ಬಗ್ಗೆ ತುಂಬ ಕೇವಲವಾಗಿ ಮಾತಾಡ್ತಾ ಇರ್ತೀವಿ.ಜಗತ್ತಿನಲ್ಲಿರೋ ಎಲ್ಲಾ ಧರ್ಮಗಳೂ ಶ್ರೇಷ್ಠ.ಎಲ್ಲದಕ್ಕೂ ಅದರದೇ ಆದ ಸೊಬಗಿದೆ ,ಅದರದೇ ಆದ ದೌರ್ಬಲ್ಯಗಳಿವೆ.
ನಮಗೆ ಪಾಶ್ಚಾತ್ಯ ಸಂಸ್ಕೃತಿ ಬೇಡ ಅಂತೀವಿ ,ಆದ್ರೆ ಪಾಶ್ಚಾತ್ಯರು ಕಂಡು ಹುಡುಕಿದ ಆಧುನಿಕ ಸೌಲಭ್ಯಗಳೆಲ್ಲಾ ಬೇಕು .ಯಾಕೆ ಅಂತ ಕೇಳಿದ್ರೆ ’ಚೆನ್ನಾಗಿರೋದೆಲ್ಲ ಇರ್ಲಿ ಕಣ್ರಿ ಕೆಟ್ಟದಾಗಿರೋದು ಬೇಡ ’ ಅಂತಾರೆ!

ಅಷ್ಟಕ್ಕೂ ಯಾವುದು ಒಳ್ಳೆಯದು ,ಯಾವುದು ಕೆಟ್ಟದು ಅಂತ ಯಾರಿಗೂ ಗೊತ್ತಿಲ್ಲ!

ಮೊಬೈಲ್ ವಿಕಿರಣಗಳಿಂದ ನಪುಂಸಕತೆ ಉಂಟಾಗುತ್ತೆ ಅಂತ ವಿಜ್ಞಾನ ಹೇಳುತ್ತೆ ಆದ್ರೆ ಅದು ಕೆಟ್ಟದು ಅಂತ ನಮಗೆ ಯಾವತ್ತೂ ಅನಿಸಿಲ್ಲ.ಒಂದು ಸಿಗರೇಟ್ ಎಳೆಯೋದ್ರಿಂದ ಆರೋಗ್ಯ ಹಾಳಾಗುತ್ತೆ ಅಂತ ತಕರಾರು ಆದ್ರೆ ಎರಡೇ ಎರಡು ನಿಮಿಷ ಕೆ .ಆರ್ ಸರ್ಕಲ್ ನಲ್ಲಿ ನಿಂತ್ರೆ ಸಿಗರೇಟ್ ಗಿಂತ ಜಾಸ್ತಿ ಹೊಗೆ ನಮ್ಮ ಶ್ವಾಸಕೋಶ ಸೇರಿರುತ್ತೆ . ಯಾವುದು ಕೆಟ್ಟದು ,ಯಾವುದು ಒಳ್ಳೇದು?

ನಮಗೆ ಗಿರೀಶ್ ಕಾಸರವಳ್ಳಿಯ ’ಗುಲಾಬಿ ಟಾಕೀಸ್’ ಅತೀವ ಆನಂದ ನೀಡುತ್ತೆ.ಅದೇ ಬೆಳಗ್ಗೆಯಿಂದ ಸಾಯಂಕಾಲದವರೆಗೆ ಅವರಿವರ ಬೈಗುಳವನ್ನೇ ತಿನ್ನುತ್ತಿದ ಕೆ ಆರ್ ಮಾರ್ಕೆಟ್ ನ ಕೂಲಿಯೊಬ್ಬನಿಗೆ ದರ್ಶನ್ ನ ಮಚ್ಚು ಲಾಂಗ್ ನ ಸಿನೆಮಾ ಇಷ್ಟ ಆಗುತ್ತೆ.ಒಬ್ಬನಿಗೆ ಶಿವಮೊಗ್ಗ ಸುಬ್ಬಣ್ಣ ’ಅನಂದಮಯ ಈ ಜಗ ಹೃದಯ’ ಹಾಡು ಕೇಳ್ತಾ ಇದ್ರೆ ಸಕ್ಕರೆ-ಹಾಲು ಕುಡಿದ ಹಾಗಿರುತ್ತೆ .ಅದೇ ಇನ್ನೊಬ್ಬನಿಗೆ ’ಸೊಂಟದ ವಿಷ್ಯ ಬ್ಯಾಡವೋ ಸಿಸ್ಯ’ ಕೇಳಿಲ್ಲ ಅಂದ್ರೆ ನಿದ್ದೇನೇ ಬರಲ್ಲ! ಯಾವುದು ಕೆಟ್ಟದು ,ಯಾವುದು ಒಳ್ಳೆಯದು?

ಒಬ್ಬರಿಗೆ ಪಬ್ಬಿಗೆ ಹೋಗಿ ಕಂಠಪೂರ್ತಿ ಕುಡಿದಿಲ್ಲ ಅಂದ್ರೆ ತಿಂದಿದ್ದು ಕರಗಲ್ಲ.ಅದೇ ಇನ್ನೊಬ್ಬನಿಗೆ ಇಸ್ಕಾನ್ ಗೆ ಹೋಗಿ ಉದ್ಧಂಡ ನಮಸ್ಕಾರ ಹಾಕಿದ್ರೇನೆ ದಿನದ ಆರಂಭ .ಅವನ ಪ್ರಕಾರ ಪಬ್ಬಿಗೆ ಹೋಗಿ ಮಜಾ ಮಾಡೋದೇ ’ಬದುಕು’ .ಇವನಿಗೆ ಇಸ್ಕಾನ್ ಗೆ ಹೋಗಿ ದೇವರ ಧ್ಯಾನ ಮಾಡುವುದೇ ಬದುಕು.
ಅವನು ಇವನಾಗೋದು ಸಾಧ್ಯ ಇಲ್ಲ .ಇವನು ಅವನಾಗೋದೂ ಕಷ್ಟ!

ಮೊನ್ನೆ ಕ್ರಿಕೆಟ್ ನೋಡ್ತಾ ಇರ್ನೇಕಾದ್ರೆ ಒಬ್ಬ ಬ್ಯಾಟಿಂಗ್ ಮಾಡ್ತಾ ಇದ್ದ.ನನಗೆ ಕ್ರಿಕೆಟ್ ಬಗ್ಗೆ ಅಷ್ಟು ಆಸಕ್ತಿ ಇಲ್ಲ ಆದ್ರೂ ನೋಡ್ತಾ ಇದ್ದೆ.ಬ್ಯಾಟ್ಸ್ ಮ್ಯಾನ್ ಚೆನ್ನಾಗಿ ಆಡ್ತಾಇರೋದ್ರಿಂದ ಯಾರು ಅನ್ನೋ ಕುತೂಹಲದಿಂದ ಗೆಳೆಯನ ಬಳಿ ಕೇಳಿದೆ .ಅವನು " ಥೂ ಅವ್ನು ಗೌತಮ್ ಗಂಭೀರ್ ಕಣೋ ಅಷ್ಟೂ ಗೊತ್ತಿಲ್ವಾ ವೇಸ್ಟ್ ನೀನು " ಅಂದ !
ನಾನು " ನಿಂಗೆ ಸ್ಟೀಫನ್ ಹಾಕಿಂಗ್ ಗೊತ್ತಾ ? " ಅಂದೆ .
"ಇಲ್ಲ " ಅಂದ !
"ಹೋಗ್ಲಿ ವಿನೋದ್ ಧಾಮ್ ಗೊತ್ತಾ ? ಸಭೀರ್ ಭಾಟಿಯಾ ಗೊತ್ತಾ? ಜಯಂತ್ ನಾರ್ಲಿಕರ್ ಗೊತ್ತಾ? " ಅಂದೆ .
"ಥೂ ಯಾರೋ ಅವರೆಲ್ಲ " ಅಂದ ಗೆಳೆಯ .
"ಅವರೆಲ್ಲಾ ಪ್ರಖ್ಯಾತರೇ ನಿನಗೆ ಗೊತ್ತಿಲ್ಲ ಅಷ್ಟೇ .ಆದ್ರೆ ನೀನು ವೇಸ್ಟ್ ಅಲ್ಲ ಯಾಕಂದ್ರೆ ನಿಂಗೆ ಗೌತಮ್ ಗಂಭೀರ್ ಗೊತ್ತಲ್ವಾ ! " ಅಂದೆ ಗೆಳೆಯ ಗಪ್ ಚುಪ್ !

ಟೀವಿ ಭಾರತೀಯ ಸಂಸ್ಕೃತಿ ಅಲ್ಲ ,ಮೊಬೈಲ್ ಭಾರತೀಯ ಸಂಸ್ಕೃತಿ ಅಲ್ಲ,ವಿಡೀಯೋ ಕ್ಯಾಮೆರಾ ಭಾರತೀಯ ಸಂಸ್ಕೃತಿ ಅಲ್ಲ, MP3 ಭಾರತೀಯ ಸಂಸ್ಕೃತಿ ಅಲ್ಲ ಆದರೂ ಇವು ನಮಗೆ ಬೇಕು . ಆದ್ರೆ ವ್ಯಾಲಂಟೈನ್ಸ್ ಡೇ ಮಾತ್ರ ಬೇಡ!
ಇಷ್ಟು ದಿನ ವ್ಯಾಲೆಂಟೈನ್ಸ್ ಡೇ ಗೆ ಯಾರಿಗೂ ಪ್ರಪೋಸ್ ಮಾಡೋ ಅವಕಾಶ ಸಿಕ್ಕಿರ್ಲಿಲ್ಲ.

ಈ ಸಲವಾದ್ರೂ ಮಾಡೋಣ ಅಂದ್ರೆ ............................ಛೇ !
.
.
.
ಶ್ರೀ ರಾಮ ಸೇನೆಯ ಭಯ ಅಲ್ಲ ಕಣ್ರಿ ಹುಡುಗೀನೆ ಸಿಕ್ಕಿಲ್ಲ ಪ್ರಪೋಸ್ ಮಾಡೋದಿಕ್ಕೆ :(


Photo Courtesy : http://www.allposters.com/