Sunday, January 23, 2011

ಚಿತ್ರರಂಗ ಮತ್ತು ಥರ್ಮೋಡೈನಾಮಿಕ್ಸ್ ನಿಯಮ !

"Energy can neither be created nor destroyed. It can only be converted from one form to another " - First law of Thermodynamics .

" ಶಕ್ತಿಯನ್ನು ಸೃಷ್ಟಿಸಲೂ ಸಾಧ್ಯವಿಲ್ಲ , ನಾಶಗೊಳಿಸಲೂ ಸಾಧ್ಯವಿಲ್ಲ. ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬದಲಾಯಿಸಬಹುದಷ್ಟೆ " - ಥರ್ಮೋ ಡೈನಾಮಿಕ್ಸ್ ಮೊದಲನೆಯ ನಿಯಮ.


"Cinema can neither be created nor destroyed, It can only be remade from one language to another " - First law of film industry .

"ಸಿನೆಮಾವನ್ನು ನಿರ್ಮಿಸಲೂ ಸಾಧ್ಯವಿಲ್ಲ ನಾಶಗೊಳಿಸಲೂ ಸಾಧ್ಯವಿಲ್ಲ , ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ರಿಮೇಕ್ ಮಾಡಬಹುದಷ್ಟೆ. " - ಚಿತ್ರರಂಗದ ಮೊದಲನೆಯ ನಿಯಮ.

Saturday, January 15, 2011

ಟಿ.ವಿ anchor ಆಗ್ತೀರಾ?

ಒಂದು ಉಚಿತ ಸಲಹೆ ಇದೆ ! ಬೇಕಾದ್ರೆ ಉಪಯೋಗಿಸಿಕೊಳ್ಳಿ ! ನೀನೆ ಯಾಕೆ ಅದನ್ನು ಉಪಯೋಗಿಸಬಾರದು ಅಂತ ಮಾತ್ರ ಕೇಳಬೇಡಿ !

ವಿಷಯ ಏನಂದ್ರೆ ಇತ್ತೀಚೆಗೆ ಕನ್ನಡ ಚ್ಯಾನೆಲ್ ಗಳು ಜಾಸ್ತಿ ಆಗಿವೆ. ಹೀಗಾಗಿ ಜಾಸ್ತಿ ಆಗಿರೋ ಚ್ಯಾನೆಲ್ ಗಳಿಗೆ anchor ಗಳ ಕೊರತೆಯೂ ಜಾಸ್ತಿ ಅಗಿವೆ. ನೀವೂ ಒಂದು ಕೈ ನೋಡ್ತೀರಾದ್ರೆ ನೋಡಿ !

ಬೆಳ್ಳಂಬೆಳಗ್ಗೆ ಬರೋ ಪ್ರೋಗ್ರಾಮ್ ಇದು. ಎಲ್ಲಾ ಚ್ಯಾನಲ್ ಗಳಲ್ಲೂ ಬರುತ್ತೆ . ಅದೇ ರಿ ಫೋನ್ ಮಾಡಿ ಹಾಡು ಕೇಳೋದು.

ನಾನು ನಿಮಗೆ ಬರೀ 4-5 ಟಿಪ್ಸ್ ಹೇಳಿ ಕೊಡ್ತೀನಿ. ಅದರಲ್ಲೇ ಪ್ರೋಗ್ರಾಮ್ ಮುಗಿಸಿ ಮನೆಗೆ ಹೋಗಬಹುದು. ಎಡವಟ್ಟಾದ್ರೆ ನಿಮ್ ಕರ್ಮ! ನನ್ನನ್ನು ಬಯ್ಯ ಬೇಡಿ ಮತ್ತೆ.

ಕೆಳಗೆ ಬರೆದಿರೋ ಥರ ಮಾಡಿ . ಉಳಿದದ್ದು ದೇವರ ಮೇಲೆ ಭಾರ ಹಾಕಿ!

ಮೊದಲ ಕಾಲರ್ :


’ಸರ್ ನಿಮ್ ಹೆಸರು ’ . ( ಸರ್ ಅಥವಾ ಮ್ಯಾಡಮ್ ಅನ್ನೊದನ್ನು ಗೊತ್ತು ಮಾಡೋದು ನಿಮ್ ಕೆಲಸ ನನ್ನದಲ್ಲ!)
ಏನೋ ಒಂದು ಹೆಸರು ಹೇಳ್ತಾರೆ . ಅಪರೂಪಕ್ಕೊಮ್ಮೆ ’ ವಾವ್ ನಿಮ್ ಹೆಸರು ತುಂಬಾ ಚೆನ್ನಾಗಿದೆ ’ ಅನ್ನಬೇಕು. ಎಲ್ಲರಿಗೂ ಹೇಳೋಕೆ ಹೋಗ್ಬೇಡಿ ಮತ್ತೆ!

ಮುಂದಿನ ಪ್ರಶ್ನೆ ’ ಸರ್ ಎಲ್ಲಿಂದ ಕಾಲ್ ಮಾಡ್ತೀರಾ ? ’ ಅನ್ನೋದು . ಕೆಲವು ಅಧಿಕ ಪ್ರಸಂಗಿಗಳು ’ಸರ್ ನಾನು ತಿಮ್ಮಣ್ಣ ಬೀದರ್ ಡಿಸ್ಟ್ರಿಕ್ಟ್ ಸುರಪುರ ತಾಲೂಕು ಪಿನ್ ಕೋಡ್ ೫೮೦೦೩೧ ಇಂದ ಕಾಲ್ ಮಾಡ್ತಾ ಇದ್ದೀನಿ’ ಅಂತ ಮೊದಲೇ ಹೇಳಿ ಬಿಡ್ತಾರೆ . ಅವರಿಗೆ ಎಲ್ಲಿಂದ ಮಾತಾಡ್ತೀರಿ ಅಂತ ಕೇಳೋಕೆ ಹೋಗ್ಬೇಡಿ!

ಆಮೇಲೆ ಮುಂದಿನ ಪ್ರಶ್ನೆ ’ಸರ್ ತಿಂಡಿ ಆಯ್ತಾ ? ’ ಅನ್ನೋದು . ನಂಗೂ ಗೊತ್ತು ನೀವು ಬೆಳಿಗ್ಗೆ ಬೇಗ ಸ್ಟುಡಿಯೋಗೆ ಬಂದಿರ್ತೀರಾ.ನಿಮ್ಮ ತಿಂಡಿ ಇನ್ನೂ ಆಗಿರಲ್ಲ .ಆದ್ರೆ ಏನ್ ಮಾಡೋದು ಹೇಳಿ ಇಂಥದ್ದೆಲ್ಲಾ ಕೇಳಲೇ ಬೇಕು :(
ಅವರು ’ಹೂಂ ಆಯ್ತು ಬಿಸಿ ಬೇಳೆ ಬಾತ್ ಮಾಡಿದ್ವಿ ’ ಅಂತಾರೆ. ನೀವು ’ಏನ್ರಿ ಒಬ್ರೇ ತಿನ್ತೀರಾ, ನಂಗಿಲ್ವಾ ? ’ ಅನ್ಬೇಕು.
ಅವರೂ ಸಂಭಾವಿತರ ಹಾಗೆ ’ಹೂಂ ಬಂದ್ ಬಿಡಿ ಮನೆಗೆ ’ ಅಂತ ಪಾಪ ಕರೀತಾರೆ.ಆಡ್ರೆಸ್ ಕೇಳಿ ಹೋಗ್ಬಿಟ್ಟೀರಾ ಮತ್ತೆ ! ಹುಷಾರು ! ಇದೆಲ್ಲಾ ಬರೀ ಫಾರ್ಮಾಲಿಟಿಗೆ ಕಣ್ರಿ!

ಇನ್ನು ಕೆಲವು ಮನೆಗಳಲ್ಲಿ ಅಪ್ಪ ಅಮ್ಮ ಕೆಲಸಕ್ಕೆ ಹೋದ ಮೇಲೆ ಮಕ್ಕಳು ಕಾಲ್ ಮಾಡಿರ್ತಾರೆ. ಒಳ್ಳೆ ತಲೆ ನೋವು . ಮಕ್ಕಳು ಅಂತ ಹಗುರ ತಗೋಬೇಡಿ. ನಿಮಗಿಂತ ಸ್ಮಾರ್ಟ್ ಆಗಿರ್ತಾರೆ ಅವರು!

ಅವರು ಖಂಡಿತ ’ಜಿಂಕೆ ಮರೀನಾ ’ , ’ಪ್ರೀತ್ಸೆ ಪ್ರೀತ್ಸೆ’ ಹಾಡುಗಳನ್ನೇ ಕೇಳೋದು. ಅವರಿಗೆ ಅಂತ ’ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನಿ ’ ಥರದ ಮಕ್ಕಳ ಹಾಡು ಹುಡುಕೋಕೆ ಹೋಗ್ಬೇಡಿ. ನಿಮ್ ಟೈಮ್ ವೇಸ್ಟ್ ಅಷ್ಟೆ !

ಕೆಲವು ತರ್ಲೆ ಕಾಲರ್ ಗಳಿರ್ತಾರೆ. ’ ಮ್ಯಾಡಮ್ ನಿಮ್ ಮನೆ ಎಲ್ಲಿ ,ಯಾವ್ ಕಾಲೇಜ್ ’ ಅಂತೆಲ್ಲಾ ಬುಡಕ್ಕೆ ಕೈ ಹಾಕಿ ಬಿಡ್ತಾರೆ! ಆಗ ನೀವು ’ ಸರ್ ನಿಮ್ ಟಿ.ವಿ ವಾಲ್ಯೂಮ್ ಮ್ಯೂಟ್ ಮಾಡಿ . ಏನೂ ಕೇಳಿಸ್ತಾ ಇಲ್ಲ ,ಹಲೋ ಹಲೋ... ಹಲೋ . ’ ಅಂತ ಕಾಲ್ ಕಟ್ ಮಾಡ್ಬಿಡಿ. ಸ್ವಲ್ಪ ಯಾಮಾರಿದ್ರೂ ನಾಳೆ ಬೆಳಿಗ್ಗೆ ನಿಮ್ ಮನೆ ಮುಂದೇನೆ ಹಾಜರ್ ಆಗಿರ್ತಾರೆ ಹುಷಾರು !

ಆಮೇಲೆ ಕೊನೆಯದಾಗಿ ’ ಯಾರಿಗೆ ವಿಶ್ ಮಾಡ್ಬೇಕಿತ್ತು ’ ಅಂತ ಕೇಳಿ. ಅವರೂ ಯಾರದ್ದೋ ಹೆಸರು ಹೇಳಿ ಯಾವತ್ತೋ ಮುಗಿದಿರೋ ಬರ್ತ್ ಡೇ ಗೆ ವಿಶ್ ಮಾಡಿ ಅಂತಾರೆ. ನೀವು ತುಟಿಕ್ ಪಿಟಿಕ್ ಅನ್ನದೆ ವಿಷ್ ಮಾಡಿ.

ನೆನಪಿಡಿ ನಿಮಗೆ ದಿನಾ ಇವರೇ ಕಾಲ್ ಮಾಡೋದು . ಹಾಗಾಗಿ handle with care !

ಇವೇ ಪ್ರಶ್ನೆಗಳನ್ನು ಹಿಂದೆ ಮುಂದೆ ಮಾಡಿ ಮುಂದಿನ ಕಾಲರ್ ಗೆ ಕೇಳಿ !

ಆಲ್ ದಿ ಬೆಸ್ಟ್ !!!

Friday, January 7, 2011

ಬೇಕಾಗಿದ್ದಾರೆ...

ಬೇಕಾಗಿದ್ದಾರೆ :

ಫೇಸ್ ಬುಕ್ ನ ಫಾರ್ಮ್ ವಿಲೆ ಥರದ್ದೇ ಒಂದು ಆಟವನ್ನು ಅಭಿವೃದ್ಧಿ ಪಡಿಸಲು ಸಾಫ್ಟ್ ವೇರ್ ಇಂಜಿನಿಯರ್ ಗಳು ಬೇಕಾಗಿದ್ದಾರೆ.

ಆಟದಲ್ಲಿ ರೈತರಿಗೆ ಬೆಳೆದ ಬೆಳೆಗೆ ತಕ್ಕ ಬೆಲೆ ಸಿಗದೆ ಅನ್ಯಾಯವಾಗುವುದು, ಮಧ್ಯವರ್ತಿಗಳ ಕಾಟ ಇತ್ಯಾದಿಗಳನ್ನು ಸಮರ್ಪಕವಾಗಿ ಅಳವಡಿಸಬೇಕು.

ರೈತರು ಆತ್ಮಹತ್ಯೆ ಮಾಡುವ ಅವಕಾಶವಿರಬೇಕು.


ಕೃಷಿ ಭೂಮಿಯನ್ನು ಅಭಿವೃದ್ಧಿಯ ಹೆಸರಲ್ಲಿ ಕಬಳಿಸುವ ಅವಕಾಶವಿರಬೇಕು.