ಇದು ಟೂ ಇನ್ ಒನ್ ಬರಹ ,ಹಾಗಾಗಿ ಬರಹದ ತಲೆಬರಹದ ತಲೆ ಬುಡ ಅರ್ಥ ಆಗಿಲ್ಲವಾದರೆ ದಯವಿಟ್ಟು ಕ್ಷಮಿಸಿ!
ನಿಮಗೆಲ್ಲ ಗೊತ್ತಿರುವ ಹಾಗೆ ’ದೇಶಕಾಲ’ದ ವಿಶೇಷ ಸಂಚಿಕೆ ಬಿಡುಗಡೆಯಾಗಿದೆ.ಈ ವಿಶೇಷ ಸಂಚಿಕೆಯಲ್ಲಿ ಎಷ್ಟು ಪುಟಗಳಿವೆ ಅಂತ ಎಣಿಸೋದಕ್ಕೇನೇ(ಪುಟಗಳ ಸಂಖ್ಯೆಯನ್ನು ಅದರಲ್ಲೇ ನಮೂದಿಸಿರುತ್ತಾರೆ ಅಂತ ನಂಗೂ ಗೊತ್ತು ಬಿಡಿ!) ಬಹಳಷ್ಟು ಸಮಯ ಬೇಕು.ಹಾಗಾಗಿ ಅವಸರವಸರದಲ್ಲಿ ದರ್ಶಿನಿ ಶೈಲಿಯಲ್ಲಿ ಇದನ್ನು ಓದಲು ಸಾಧ್ಯವೇ ಇಲ್ಲ.
ಹಾಗೆ ಸುಮ್ಮನೆ ಕಣ್ಣಾಡಿಸುವಾಗಲೇ ನನ್ನನ್ನು ಸೆಳೆದ ಒಂದು ಲೇಖನ ವೈದೇಹಿಯವರ ’ಹೋಟೆಲ್ ಪರ್ವ’!
ಇದು ವೈದೇಹಿಯವರು ಹೋಟೆಲ್ ಮಾಲಕರೊಬ್ಬರೊಂದಿಗೆ ನಡೆಸಿದ ಸಂದರ್ಶನ.ಸಂದರ್ಶನ ಕುಂದಾಪುರ ಕನ್ನಡದಲ್ಲಿದೆ.ಹೋಟಲ್ ಮಾಲಕರಿಗೆ ಸಾಕಷ್ಟು ಹಾಸ್ಯಪ್ರಜ್ಞೆ ಇದ್ದದ್ದರಿಂದ ತುಂಬಾ ತಮಾಷೆಯಾಗಿ ಆದರೆ ಅಷ್ಟೇ ಪರಿಣಾಮಕಾರಿಯಾಗಿ ಮೂಡಿ ಬಂದಿದೆ ಈ ಸಂದರ್ಶನ.ಹೋಟೇಲ್ ಮಾಲೀಕರು ಯಾರಾದರೂ(ಸಂದರ್ಶನ ಕೊಟ್ಟವರನ್ನು ಹೊರತು ಪಡಿಸಿ!) ಇದನ್ನು ಓದಿದರೆ ಸಿಟ್ಟು ಬರದೆ ಇರಲಾರದು !
ಹಾಸ್ಯಭರಿತ ಸಂದರ್ಶನ ಓದಿದ್ರೆ ಸಿಟ್ಟು ಯಾಕೆ ಅಂತೀರಾ?ಯಾಕಂದ್ರೆ ಹೋಟಲ್ ಮಾಲಕರ ಹಲವು ಟ್ರಿಕ್ಸ್ ಗಳನ್ನು ಪಾಪ ಅವರು ಈ ಸಂದರ್ಶನದಲ್ಲಿ ಹೇಳಿ ಬಿಟ್ಟಿದ್ದಾರೆ ! ಈ ಸಂದರ್ಶನ ಓದಿದಲ್ಲಿ ಖಂಡಿತ ಹೋಟಲ್ ಉದ್ಯಮದ ಕಷ್ಟ ನಷ್ಟಗಳು(ಲಾಭದ ವಿಚಾರ ಕೂಡಾ!) ತಿಳಿಯುವುದರಲ್ಲಿ ಸಂಶಯವೇ ಇಲ್ಲ.
ಇನ್ನೊಂದು ತಮಾಷೆಯ ಸಂಗತಿ ಅಂದ್ರೆ ವೈದೇಹಿಯವರ ಪ್ರಶ್ನೆಗಳು ಒಂದು ಸಾಲಿನವು,ಆದರೆ ಹೋಟಲ್ ಮಾಲೀಕರ ಉತ್ತರ ಮಾತ್ರ ಉದ್ದುದ್ದ!ಹೋಟಲ್ ಮಾಲಕರು ಮನ ಬಿಚ್ಚಿ ಮಾತಾಡಿದ್ದಕ್ಕೇ ಬಹುಷಃ ಸಂದರ್ಶನ ಅಷ್ಟು ಇಷ್ಟ ಆಗಿದ್ದು ನನಗೆ.
ಇಂಥ ಒಂದು ಸುಂದರ ಸಂದರ್ಶನ ಪ್ರಕಟಿಸಿದ್ದಕ್ಕೆ ’ದೇಶಕಾಲ’ಕ್ಕೆ ಅಭಿನಂದನೆಗಳು.ಈ ಸಂದರ್ಶನ ನಡೆಸಿದ ವೈದೇಹಿಯವರಿಗೆ ಧನ್ಯವಾದಗಳು.ಕೊನೆಯದಾಗಿ ಸಂದರ್ಶನ ನೀಡಿದ ಹೊಳ್ಳ(?!)ರಿಗೂ ಧನ್ಯವಾದಗಳು!
~~~~~~~~~~~~~~~~~~~~~~~~~~~~~~~~~~~~~~~~~~~~~~~
ಬಹಳಷ್ಟು ದಿನಗಳ ನಂತರ ಬೆಂಗಳೂರಿನಲ್ಲಿ ಶುದ್ಧ ಕನ್ನಡ ಕೇಳಲು ಸಿಕ್ಕಿತು!
FM ಚ್ಯಾನೆಲ್ ಗಳ ಕನ್ನಡ ಮಿಶ್ರಿತ ಇಂಗ್ಲೀಶ್, ಟಿ.ವಿ ಚ್ಯಾನಲ್ ರ ಇಂಗ್ಲೀಶ್ ಮಿಶ್ರಿತ ಕನ್ನಡದ ಹಾವಳಿಯ ನಡುವೆ ಅದೆಲ್ಲಿ ಶುದ್ಧ ಕನ್ನಡ ಕೇಳಿದೆ ಅಂತೀರಾ?
ವಿಜಯನಗರದ ಕರ್ನಾಟಕ ಕಲಾ ದರ್ಶಿನಿ(ರಿ)ಯವರು ಪುಟ್ಟ ಪುಟ್ಟ ಮಕ್ಕಳಿಂದ ’ಕೃಷ್ಣಾರ್ಜುನ ಕಾಳಗ’ ಅನ್ನೋ ಯಕ್ಷಗಾನ ಪ್ರಸಂಗ ಏರ್ಪಡಿಸಿದ್ದರು.ಬೆಂಗಳೂರಿನ ಮಕ್ಕಳ ಬಾಯಲ್ಲಿ ಶುದ್ಧ ಕನ್ನಡ ಕೇಳಿ ನನ್ನ ಕಿವಿಯೂ ಶುದ್ಧ ಆಯ್ತು ಅನ್ನಿ.ಹುಡುಗ/ಹುಡುಗಿಯರಲ್ಲಿ ಕೆಲವರು ಬೇಸಿಗೆ ಶಿಬಿರದ ಅಂಗವಾಗಿ ಯಕ್ಷಗಾನ ಕಲಿತರೆ ಇನ್ನು ಕೆಲವರು ಹವ್ಯಾಸವಾಗಿ ಅದನ್ನು ಕಲಿತವರು.ದಾರುಕನ ಪಾತ್ರ ಮಾಡಿದ ಹುಡುಗನಂತೂ ಅತ್ಯದ್ಭುತವಾಗಿ ಪಾತ್ರ ನಿರ್ವಹಿಸಿ ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದ.ಇನ್ನು ಅಭಿಮನ್ಯು ಪಾತ್ರದ ಹುಡುಗ ಧರ ಧರನೆ ತಿರುಗಿ ಕಡೆಗೆ ಚಂಗನೆ ನೆಗೆದು ತಾಯಿಯ ಸೊಂಟದಲ್ಲಿ ಕುಳಿತ ದೃಶ್ಯ ಮಜವಾಗಿತ್ತು.ನೆಗೆದು ಸೊಂಟದಲ್ಲಿ ಕೂತ್ಕೋ ಬೇಕಾದ್ರೆ ಎಷ್ಟು ಚಿಕ್ಕ ಹುಡುಗ ನೀವೇ ಲೆಕ್ಕ ಹಾಕಿ!
ಮಕ್ಕಳೆಲ್ಲ ಬೇಸಿಗೆ ಶಿಬಿರದ ಹೆಸರಲ್ಲಿ ಯಕ್ಷಗಾನ ಕಲಿತದ್ದು ನಿಜಕ್ಕೂ ಶ್ಲಾಘನೀಯ.ಕಲಿಯಲು ಅನುವು ಮಾಡಿಕೊಟ್ಟ ಶ್ರೀನಿವಾಸ ಸಾಸ್ತಾನ ಮತ್ತು ಆದಿಚುಂಚನಗಿರಿ ಮಠಕ್ಕೆ ಅಭಿನಂದನೆಗಳು.
Sunday, May 2, 2010
Subscribe to:
Post Comments (Atom)
3 comments:
Naanu Arjunana paatra maadidde yelane taragatiyalli..
"Arjuna babruvaahana" :)
hmmm... vaidhehiyavaru sandharshana nadesidhra! haagidhre majavaagE irutte :)
desha kaala nodilla innoo... odbeku
Post a Comment