ಒಂದು ಜಾಹೀರಾತು ಬರುತ್ತೆ. ಅದು ಚಹಾದ ಬಗ್ಗೆ. ತಂದೆ ಮಗನಿಗೆ ಚಹಾ ಕುಡಿಯಬೇಡ ಅನ್ನೋವಾಗ ತಾಯಿ ’ಯಾರು ಹೇಳಿದ್ದು ಚಹಾ ಒಳ್ಳೆಯದಲ್ಲ ಅಂತ ? ’ ಈ ಪ್ರಶ್ನೆಗೆ ತಂದೆ ನನಗೆ ಸರಿಯಾಗಿ ನೆನಪಿಲ್ಲ ಬಹುಶಃ ನನ್ನ ತಾಯಿ ಹೇಳಿರ್ಬೇಕು ಅಂತ ತಾಯಿ ಮೇಲೆ ಗೂಬೆ ಕೂರಿಸ್ತಾನೆ. ಅವನ ತಾಯಿ ಆಗ ’ ನನಗೂ ಸರಿಯಾಗಿ ನೆನಪಿಲ್ಲ ನಿನ್ನ ತಂದೆ ಹೇಳಿರ್ಬೇಕು ’ ಅಂತ ಅವಳ ಗಂಡನ ಮೇಲೆ ಗೂಬೆ ಕೂರಿಸ್ತಾಳೆ. ಕಡೆಗೂ ಚಹಾ ಕೆಟ್ಟದು ಅಂತ ಯಾರು ಹೇಳಿದ್ದು ಗೊತ್ತಾಗೋದೆ ಇಲ್ಲ!
ಈ ಜಾಹೀರಾತಿನ ಪ್ರಸ್ತಾವ ಯಾಕೆ ಬಂತು ಅಂದರೆ ನನಗೂ ಅಂಥದ್ದೇ ಒಂದು ಪ್ರಶ್ನೆ ಮನದಲ್ಲಿ ಮೂಡಿದೆ.
"ಯಾರು ಹೇಳಿದ್ದು ಕನ್ನಡ ನಶಿಸುತ್ತಿದೆ ಅಂತ ? "
ನಿಮ್ಮಲ್ಲಿ ಕೆಲವರು ಥಟ್ ಅಂತ ನನಗೆ ಅವರು ಹೇಳಿದ್ದು ನನ್ಗೆ ಆ ವೆಬ್ ಸೈಟ್ ನಲ್ಲಿ ವಿಷಯ ಸಿಕ್ಕಿತ್ತು , ಅಂತ ಥೇಟ್ ಆ ಜಾಹೀರಾತಿನ ಹಾಗೆಯೇ ಹೇಳಬಹುದು. ಆದ್ರೆ ಅದು ಸರಿನಾ?
ಕನ್ನಡಕ್ಕೆ ಸಾವಿರಾರು ಭಾಷೆಯ ಇತಿಹಾಸ ಇದೆ ಅಂತಾರೆ. ಹಾಗಾದ್ರೆ ಸಾವಿರಾರು ವರ್ಷಗಳಿಂದ ತನ್ನತನವನ್ನು ಉಳಿಸಿಕೊಂಡಿರುವ ಭಾಷೆ ಅದು ಹೇಗೆ ಸಾಯುತ್ತೆ ?
ಇಂಗ್ಲೀಷ್ ಕೊಲೆಗಡುಕ ಭಾಷೆ ಅಂತಾರೆ. ಹಾಗಾದ್ರೆ ಇಂಗ್ಲೀಷ್ ನಮ್ಮ ಕನ್ನಡವನ್ನೂ ಕೊಂದು ಬಿಡುತ್ತಾ? ಲೇಸ್ ಜಾಹೀರಾತಿನಲ್ಲಿ ಕಾರ್ ನಲ್ಲಿ ಹೋಗುತ್ತಿರುವ ಒಬ್ಬಾತ, ಹಳ್ಳಿಯಲ್ಲಿ ಕೂತ ಒಬ್ಬನ ಹತ್ರ ದೊಡ್ಡಬಳ್ಳಾಪುರಕ್ಕೆ ಹೇಗೆ ಹೋಗೋಗುದು ಅಂತ ಕೇಳಿದಾಗ ಹಳ್ಳಿಯವ ಇಂಗ್ಲೀಷ್ ನಲ್ಲೆ ಉತ್ತರಿಸುತ್ತಾನೆ. ಹಾಗೆ ನಿಜಕ್ಕೂ ಆಗುವ ಸಾಧ್ಯತೆಗಳಿದೆಯಾ?
ಪುರೋಹಿತರು ದೇವಸ್ಥಾನದಲ್ಲಿ ಇಂಗ್ಲೀಷ್ನಲ್ಲೇ ಮಂತ್ರ ಹೇಳ್ತಾರಾ ? ದೇವಸ್ಥಾನದ ಮೈಕ್ ನಲ್ಲಿ ಸುಪ್ರಭಾತವೂ ಇಂಗ್ಲೀಷ್ ನಲ್ಲೇ ಬರುತ್ತಾ? ನಮ್ಮ ವಿದ್ಯಾಭೂಷಣರು ಇಂಗ್ಲೀಷ್ ನಲ್ಲೇ 'This era is not for the truth tellers, this is the best time for wicked people ' ಅಂತ ಇಂಗ್ಲೀಷ್ ನಲ್ಲೇ ಭಜನೆ ಹಾಡ್ತಾರಾ?
ನಾನು ಚಿಕ್ಕವನಿದ್ದಾಗ ಎರಡು ದಿನ ಪತ್ರಿಕೆ ಬರುತ್ತಿತ್ತು. ಒಂದು ಮುಂಗಾರು ಇನ್ನೊಂದು ಉದಯವಾಣಿ(ಪ್ರಜಾವಾಣಿ ಮತ್ತಿತರ ಪತ್ರಿಕೆಗಳ ಬಗ್ಗೆ ನನಗೆ ಗೊತ್ತಿರಲಿಲ್ಲ). ಆದ್ರೆ ಇವತ್ತು ಎಷ್ಟು ದಿನ ಪತ್ರಿಕೆಗಳಿವೆ? ಬರೀ ಕನ್ನಡ ಚಿತ್ರರಂಗದ ಬಗ್ಗೆಯೇ ಅರಗಿಣಿ,ಚಿತ್ತಾರ,ರೂಪತಾರ ಹೀಗೆ ಹಲವು ಪತ್ರಿಕೆಗಳಿವೆ. ಸುಧಾ,ತರಂಗ ಹೀಗೆ ವೈವಿಧ್ಯಮಯ ಪತ್ರಿಕೆಗಳಿವೆ. ಈ ಪತ್ರಿಕೆಗಳೆಲ್ಲವೂ ಮಾಯ ಆಗುತ್ತಾ ?
ಆಗ ಇದ್ದಿದ್ದು ಒಂದು ದೂರದರ್ಶನ. ಅದೂ ಭಾನುವಾರ ಸಾಯಂಕಾಲ ನೋಡೋದಕ್ಕೆ ಸಿಕ್ತಾ ಇದ್ದಿದ್ದು ಒಂದೇ ಒಂದು ಕನ್ನಡ ಪಿಕ್ಚರ್ರು! ಈಗ ಕನ್ನಡ ಸಿನಿಮಾಗಳಿಗೆ ಅಂತಾನೇ ಚ್ಯಾನೆಲ್ ಇದೆ. ಉದಯ,ಈ ಟಿವಿ,ಸುವರ್ಣ, ಹೀಗೆ ಹತ್ತು ಹಲವು ಚ್ಯಾನೆಲ್ ಗಳಿವೆ.ಅಗತ್ಯವಿಲ್ಲದಿದ್ದರೂ ಬರೀ ನ್ಯೂಸ್ ಗೆ ಅಂತಲೇ ಐದು ಚ್ಯಾನೆಲ್ ಗಳಿವೆ ಇನ್ನೊಂದು ಬರಲು ಸಿದ್ಧವಾಗಿ ನಿಂತಿದೆ! ಇವೆಲ್ಲವೂ ನಿಂತು ಹೋಗುತ್ತಾ ?
ಕೆಲವು ವರ್ಷದ ಹಿಂದೆ ಇಂಟರ್ನೆಟ್ ನಲ್ಲಿ ಕನ್ನಡವನ್ನು ದುರ್ಬೀನು ಹಿಡಿದು ಹುಡುಕಬೇಕಾಗಿತ್ತು.ಆದರೆ ಈಗ ಕನ್ನಡದಲ್ಲಿ ಸಾವಿರಕ್ಕೂ ಹೆಚ್ಚು ಬರೀ ಬ್ಲಾಗ್ ಗಳಿವೆ. ಅವಧಿ,ಕೆಂಡಸಂಪಿಗೆ,thatskannada.com ನಂಥ ವೆಬ್ ಸೈಟ್ ಗಳಿವೆ. ಬಹುತೇಕ ಎಲ್ಲಾ ಪತ್ರಿಕೆಳೂ ತಮ್ಮ ಸ್ವಂತ ವೆಬ್ ಸೈಟ್ ಹೊಂದಿವೆ.
ಆದರೂ ಯಾಕೆ ನಮಗೆ ಇಂಥಾ ಆತಂಕ? ಇಂಗ್ಲೀಷ್ ನಿಜಕ್ಕೂ ಕನ್ನಡವನ್ನು ಕೊಂದು ಬಿಡುತ್ತಾ ? ಕನ್ನಡದ ಕಥೆ ಹೀಗಾದ್ರೆ ನನ್ನ ಮಾತೃಭಾಷೆಯಾದ ಕೊಂಕಣಿಯ ಗತಿ ಏನು, ನನ್ನ ಊರಿನ ಭಾಷೆಯಾದ ತುಳುವಿನ ಗತಿ ಏನು? ಕನ್ನಡಕ್ಕೆ ಕೊನೆ ಪಕ್ಷ ತನ್ನದೇ ಲಿಪಿ ಇದೆ ,ಪತ್ರಿಕೆಗಳಿವೆ,ಚ್ಯಾನೆಲ್ ಗಳಿವೆ ಆದರೆ ತುಳು ಕೊಂಕಣಿಗಳಿಗೆ ಅವೂ ಇಲ್ಲ! ಹೀಗಾದರೆ ಗತಿ ಏನು ?
ಆದರೆ ಈ ಪ್ರಶ್ನೆ ಅಷ್ಟು ಜಟಿಲ ಅಂತಲೂ ಅನಿಸುವುದಿಲ್ಲ ಕೆಲವೊಮ್ಮೆ.
ನನ್ನ ಪ್ರಕಾರ ಇಂಗ್ಲೀಷ್ ಅಂದರೆ ಮೊಬೈಲ್ ಫೋನ ಇದ್ದ ಹಾಗೆ. ಹಿಂದೆ ಮೊದಲ ಬಾರಿಗೆ ಮೊಬೈಲ್ ಫೋನ್ ಭಾರತಕ್ಕೆ ಬಂದಾಗ ಅದೊಂದು ಲಕ್ಷುರಿ ವಸ್ತು ಆಗಿತ್ತು. ಇನ್ ಕಮಿಂಗ್ ಗೆ ಇಪ್ಪತ್ತು ರೂ ಇದ್ದ ಕಾಲದಲ್ಲೆಲ್ಲಾ ಬರೀ ಶ್ರೀಮಂತರಷ್ಟೇ ಮೊಬೈಲ್ ಕೊಳ್ಳೋಕೆ ಸಾಧ್ಯ ಆಗ್ತಿತ್ತು. ’ಹೇ ಅವನ(ರ?) ಬಳಿ ಮೊಬೈಲ್ ಇದೆ ’ ಅನ್ನೋದು ತುಂಬಾ ಪ್ರತಿಷ್ಟೆಯ ವಿಷಯವಾಗಿತ್ತು.
ಆದರೆ ಈಗ ? ಮೊಬೈಲ್ ಅನ್ನೋದು ಒಂದು ಬೇಸಿಕ್ ನೀಡ್ ಆಗಿದೆ. ಯಾವುದೇ ಕೆಲಸ ಅಥವಾ ವಿಷಯ ಇರಲಿ, ಅದು ನಮಗೆ ಮಾಡಲು ಸಾಧ್ಯವಾಗದ ವಿಷಯ ಆಗಿದ್ದು ಅದನ್ನು ಬೇರೆಯವರು ಮಾಡಿದಾಗ ನಮಗೆ ಅದರ ಬಗೆಗೊಂದು ವಿಚಿತ್ರ ಬೆರಗು ಮೂಡುತ್ತೆ. ಸರ್ಕಸ್ ನಲ್ಲಿ ಒಬ್ಬಾತ ಹತ್ತು ಚೆಂಡನ್ನು ಒಮ್ಮೇಲೆ ಚಿಮ್ಮಿಸಿ ಆಟ ಆಡುವುದನ್ನು ನೋಡಿ ಬೆರಗುಗೊಂಡಂತೆ!
ಹಿಂದೆ ಇಂಗ್ಲೀಷ್ ವಿಷಯದ ಬಗೆಗೂ ಅಂಥದ್ದೇ ಒಂದು ಬೆರಗು ನಮಗಿತ್ತು! ಕನ್ನಡ ಮೀಡಿಯಂ ನಲ್ಲಿ ಕಲಿತ ಡಿಗ್ರಿ ಮುಗಿಸಿದಾತ ಕೂಡ ಇಂಗ್ಲೀಷ್ ಮೀಡಿಯಂನಲ್ಲಿ ಕಲಿತ ಐದನೆ ಕ್ಲಾಸ್ ಹುಡುಗನ ಇಂಗ್ಲೀಷ್ ನೋಡಿ ತನ್ನೊಳಗೇ ಕೀಳರಿಮೆಗೆ ಒಳಗಾಗುತ್ತಿದ್ದ ಕಾಲ ಅದು. ಯಾರಾದರೂ ಠಸ್ ಪುಸ್ ಅಂತ ಇಂಗ್ಲೀಷ್ ಮಾತಾಡ್ತಿದ್ರೆ ಅದನ್ನು ದೊಡ್ಡದೊಂದು ಬೆರಗಿನಿಂದ ನೋಡುತ್ತಿದ್ದ ಕಾಲ ಒಂದಿತ್ತು. ’ಅಳಿಯಂದ್ರು ಎಷ್ಟು ಚೆನ್ನಾಗಿ ಇಂಗ್ಲೀಷ್ ಮಾತಾಡ್ತಾರೆ ಗೊತ್ತಾ ? ’ ಅಂತ ಮಾವ ಹೇಳಿಕೊಂಡು ತಿರುಗಾಡ್ತಾ ಇದ್ದ ಕಾಲ ಅದು.
ಆದರೆ ಈಗ ಇಂಗ್ಲೀಷ್ ಬಗೆಗೆ ಯಾರಿಗೂ ಅಂಥ ಬೆರಗಿಲ್ಲ! ಬಹುತೇಕ ಎಲ್ಲರಿಗೂ ಈಗ ಇಂಗ್ಲೀಷ್ ಬರುತ್ತೆ. ಮಕ್ಕಳೂ ಈಗ ಇಂಗ್ಲೀಷ್ ಕಲಿತಿದ್ದಾರೆ. ಆದರೆ ಅವರಿಗೆ ಬರದೇ ಇರೋದು ಕನ್ನಡ ಮಾತ್ರ. ಈ ಮಕ್ಕಳು ಒಂದು ದಿನ ಕನ್ನಡವನ್ನು ಬೆರಗಿನಿಂದ ನೋಡೋ ಕಾಲ ಬಂದೇ ಬರುತ್ತೆ. ’hey see how fluent his/her Kannada is ' ಅಂತ ಹೇಳೋ ಕಾಲ ಬರುತ್ತೆ. ಆಗ ಎಲ್ಲರೂ ಕನ್ನಡವನ್ನು ಮತ್ತೆ ಪ್ರೀತಿಸಲು ಶುರು ಮಾಡ್ತಾರೆ. ಅಲ್ಲಿಯವರೆಗೆ ಕಾಯಬೇಕಷ್ಟೆ.
ನಿನ್ನದೊಂದು ಹುಚ್ಚು ಕನಸು ಅಂತೀರಾ ? ಇರಲಿ ಬಿಡಿ ಹುಚ್ಚು ಕನಸು ಕಾಣೋದ್ರಲ್ಲೂ ಒಂದು ಖುಷಿ ಇದೆ !
Sunday, March 13, 2011
Subscribe to:
Post Comments (Atom)
10 comments:
ಸರಿಯಾಗಿದೆ. ಭಾಷೆ ಸ್ವಲ್ಪ ಬೆರಕೆಯಾಗಬಹುದು. ವಿರೂಪಗೊಳ್ಳಬಹುದು. ಆದ್ರೆ ಸಾಯೋಕಂತೂ ಸಾಧ್ಯವೇ ಇಲ್ಲ!
ಬಹಳ ದಿನಗಳ ಮೇಲೆ ಬರೆದಿದ್ದೀರಿ. ಚೆನ್ನಾಗಿದೆ.
ನೀವು ಹೇಳಿದ್ದು ನೂರು ಪ್ರತಿಶತ ನಿಜ
ಹೌದು
ಸಂದೀಪ,
ಕನ್ನಡ ಉಳಿದಿದೆ, ಹಾಗು ಉಳಿದುಕೊಂಡೇ ಹೋಗಬಹುದು. ಆದರೆ ಅದು ಕನ್ನಡವಾಗಿ ಉಳಿಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
bhashe hariyuva niridda haage .... sikka patragalalli jeevantavaagi hariyuvadu adara lakshaNa ... haage namma kannaDa kooDa... kaage haritirali alva...taDegoDe yaake?
'hey see how fluent his/her Kannada is' ಅಂತ ಹೇಳೋ ಕಾಲ ಬರಲು ಹೆಚ್ಚು ಸಮಯವೇನಿಲ್ಲ.. ಆದರೆ ನೀವು ಹೇಳಿದಂತೆ ಆಗ ಕನ್ನಡವನ್ನು ಎಲ್ಲರೂ ಮತ್ತೆ ಪ್ರೀತಿಸಲು ಶುರು ಮಾಡುತ್ತಾರಾ ಅನ್ನೋದು ಮಾತ್ರ ಕಾದು ನೋಡಬೇಕು!
ಕನ್ನಡದ ಬಗ್ಗೆ ನಿಮಗಿರುವ ಕಳಕಳಿ ನಿಜಕ್ಕೂ ನಮಗೆ ತುಂಬಾ ಸಂತೋಷ ಕೊಟ್ಟಿತು. ಅದೇ ರೀತಿ ನಿಮ್ಮ ವಾದ ಸರಣಿ ತುಂಬಾ ಹಿಡಿಸ್ತು. ಇದನ್ನು ನನ್ನ ಬ್ಲಾಗ ನಲ್ಲೂ ಅಡಕ ಮಾಡಿಕೊಳ್ಳುತ್ತೇನೆ. ನಿಮ್ಮಿಂದ ಇನ್ನೂ ಅನೇಕ ಇಂಥ ಜನಪರ ಕಳಕಳಿ ಹೊಂದಿದ ಬರಹಗಳನ್ನು ಬಯಸುತ್ತೇನೆ.
ಹೋಳಿ ಶುಭಾಶಯಗಳು.
ಉಮತನಯರಾಜ
( ರಾಜೇಂದ್ರ ಪಾಟೀಲ)
೯೫೯೧೩೨೩೪೫೩
೮೭೬೨೧೪೪೫೦೮
www.nammabelagaavi.blogspot.com
www.bhaavasangama.blogspot.com
ನೀವು ಹೇಳಿದ್ದು ಸರಿ ಅ೦ತ ಅನ್ನಿಸುತ್ತಿದೆ :)
ಬರೀತಾ ಇರಿ ಮಾರಾಯ್ರೆ :)
:-) to remain sane it is good to have dreams!!
As usual you have written very nicely in your witty manner
(many thanks for the smiley in my blog)
:-)
malathi S
ha ha ha.. mast writeup...
attegondu kaala.. sosegondu kaala :)
Post a Comment