Saturday, April 16, 2011

ನೀವೇನೇ ಹೇಳಿ......

ಇಂಥದ್ದೊಂದು ಆಟವನ್ನೂ ಬಹುತೇಕ ಜನರು ತಮ್ಮ ಬಾಲ್ಯದಲ್ಲಿ ಆಡಿರ್ತಾರೆ. ನಾವು ಚಿಕ್ಕಂದಿನಲ್ಲಿ ಕಲ್ಲುಗಳನ್ನು ಜೋಡಿಸಿ ಬೆಂಕಿ ಹೊತ್ತಿಸಿ ಅದರ ಮೇಲೊಂದು ತೆಂಗಿನ ಕರಟವನ್ನಿಟ್ಟು ಅದರಲ್ಲಿ ನೀರು ಹಾಕಿ ಚಹಾ,ಕಾಫಿ ಮಾಡೋ ಅಂಥ ಆಟವೊಂದನ್ನು ಆಡ್ತಾ ಇದ್ವಿ. ಎಷ್ಟೋ ಸಲ ಮನೆ ಒಳಗಿಂದ ಚಹಾ ಪುಡಿ,ಹಾಲು,ಸಕ್ಕರೆ ತಂದು ನಿಜಕ್ಕೂ ಚಹಾ ಮಾಡೋದೂ ಇತ್ತು. ಆದರೆ ಅಮ್ಮನ ಕೈಯಲ್ಲಿ ಬಯ್ಯಿಸಿ ಕೊಳ್ಳೋದೂ ಇತ್ತು. ಅದೂ ಸಾಲದೆಂಬಂತೆ ಜೋಪಡಿ ಥರ ಮನೆಯನ್ನು ಕಟ್ಟುವ ಆಟ ಬೇರೆ ಆಡ್ತಾ ಇದ್ವಿ. ಇರೋದಿಕ್ಕೆ ಇಷ್ಟು ಒಳ್ಳೆ ಮನೆ ಇದ್ರೂ ಅದೇನು ಜೋಪಡಿ ಕಟ್ಟೋ ಆಟ ನಿಮ್ಮದು ಅಂತ ಮನೆಯವರು ಬಯ್ಯೋದೂ ಇತ್ತು!

ನಾವು ಈ ರೀತಿ ಜೊಪಡಿ ಕಟ್ಟಿ ಆಟ ಆಡೋ ಸಮಯದಲ್ಲೇ ನಿಜವಾಗಲೂ ಜೋಪಡಿಯಲ್ಲಿ ವಾಸಿಸುತ್ತಿದ್ದ ಮಕ್ಕಳು ನಮ್ಮ ಥರ ಟೆರೇಸ್ ಮನೆಯಲ್ಲಿ ವಾಸ ಮಾಡೋ ಕನಸು ಕಾಣ್ತಾ ಇದ್ರು !

ಬಹುಷಃ ಅದಕ್ಕೇ ಹೇಳಿರ್ಬೇಕು ಕವಿ - " ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ " ಅಂಥ !

ಹಿಂದೆ ಕಿಲೋ ಮೀಟರುಗಟ್ಟಲೆ ನಡೀತಾ ಇದ್ರು ನಮ್ಮ ಅಪ್ಪ,ಅಮ್ಮಂದಿರು. ಆಗ ಅವರಿಗೆ ಖಂಡಿತ ಅನ್ನಿಸ್ತಿತ್ತು ’ ಹಾಳಾದ್ದು ನಾವು ಆರಾಮಾಗಿ ಬೇಕಾದ ಕಡೆ ಹೋಗೋ ಅಂಥ ಗಾಡಿ ಒಂದಿದ್ದರೆ ಎಷ್ಟು ಚೆನ್ನಾಗಿರ್ತಿತ್ತು ’ ಅಂತ. ಆ ದೇವರೇ ತಥಾಸ್ತು ಅಂದ ಹಾಗ ಬಸ್ಸು ರೈಲು ವಿಮಾನಗಳು ಬಂದು ಬಿಟ್ಟವು. ಈಗ ’ನೀವು ಏನೇ ಹೇಳಿ ಈ ಟೆಕ್ನಾಲಜಿ ನಮ್ಮನ್ನು ಹಾಳು ಮಾಡೋದೇ ಆಯ್ತು ಕಣ್ರಿ . ಹಿಂದೇನೆ ಚೆನ್ನಾಗಿತ್ತು. ಕಿಲೋಮೀಟರುಗಟ್ಟಲೆ ನಡೀತಾ ಇದ್ವಿ ಗಟ್ಟಿ ಮುಟ್ಟಾಗಿದ್ವಿ ’ ಅಂತೀವಿ.

ಹಿಂದೆ ಒಂದು ಲೆಟರ್ ಹಾಕಿದ್ರೆ ಅದು ೧೦ ದಿನ ಆದ್ಮೇಲೆ ಬೇಕಾದವರಿಗೆ ತಲುಪಿ ಅವರು ಪೋಸ್ಟ್ ಆಫೀಸಿಗೆ ಹೋಗಿ ಇನ್ ಲ್ಯಾಂಡ್ ಲೆಟರ್ ತಗೊಂಡು ಅದರಲ್ಲಿ ಬರೆದು ಮತ್ತೆ ಪೋಸ್ಟ್ ಮಾಡಿ ನಮಗೆ ತಲುಪೋ ಅಷ್ಟರಲ್ಲಿ ತಿಂಗಳುಗಳೇ ಆಗ್ತಾ ಇತ್ತು. ಆಗಲೂ ನಮಗೆ ಅನ್ನಿಸ್ತಿತ್ತು ’ಹಾಳಾದ್ದು ಈ ಕಾಗದ ಒಂದೇ ದಿನದಲ್ಲಿ ತಲುಪೋ ಥರ ಇದ್ದಿದ್ರೆ ಎಷ್ಟು ಚೆನ್ನಾಗಿರ್ತಿತ್ತು ’ ಅಂತ. ಅದಕ್ಕೂ ಪರಿಹಾರ ಸಿಕ್ಕೇ ಬಿಡ್ತು , ಈ ಕಡೆ ಮೇಯ್ಲ್ ಹಾಕಿದ ತಕ್ಷಣ ಆ ಕಡೆಯಿಂದ ರಿಪ್ಲೈ ಬರೋ ಥರ ಟೆಕ್ನಾಲಜಿನೂ ಬಂತೂ. ಆದ್ರೂ ’ನೀವೇನೇ ಹೇಳಿ ಆ ಲೆಟರ್ ಗೋಸ್ಕರ ಪೋಸ್ಟ್ ಮ್ಯಾನ್ ಗೆ ಕಾಯೋದ್ರಲ್ಲಿ ಇರೋ ಸುಖ ಈ e-mail ಗಳಲ್ಲಿಲ್ಲ ಕಣ್ರಿ ’ ಅಂತೀವಿ ನಾವೆಲ್ಲಾ!

ಹಿಂದೆ ಒಂದು ಟೆಲಿಫೋನ್ ಕಾಲ್ ಮಾಡಬೇಕಾದಲ್ಲಿ ಟ್ರಂಕ್ ಕಾಲ್ ಮಾಡಿ ಗಂಟೆ ಗಟ್ಟಲೆ ಕಾಯ್ತಾ ಇರ್ಬೇಕಾದ್ರೆ ಎಲ್ರಿಗೂ ಖಂಡಿತಾ ಅನ್ನಿಸ್ತಿತ್ತು ’ಛೆ ಒಂದು ಟೆಲಿಫೋನ್ ಕಾಲ್ ಮಾಡೋಕೂ ಇಷ್ಟು ಕಷ್ಟ ನಾ? ನಮಗೆ ಬೇಕಾದ ಹಾಗೆ ಕಾಲ್ ಮಾಡೋಕಾದ್ರೆ ಎಷ್ಟು ಚೆನ್ನಾಗಿರ್ತಿತ್ತು ’ ಅಂತ. ಈಗ ಆ ಟ್ರಂಕ್ ಕಾಲ್ ನೆನೆಸಿನೇ ಖುಷಿ ಪಡ್ತೀವಿ ನಾವು !

ಹಿಂದೆ ರುಬ್ಬೋ ಕಲ್ಲಿನಲ್ಲಿ ರುಬ್ಬಿ ರುಬ್ಬಿ ಸುಸ್ತಾಗಿ ಹೆಂಗಸರೆಲ್ಲಾ ’ ಅಯ್ಯೋ ಚೆನ್ನಾಗಿ ರುಬ್ಬೋಕೆ ಯಾವುದಾದರೂ ಒಂದು ಮೆಶಿನ್ ಇದ್ದಿದ್ರೆ ಎಷ್ಟು ಚೆನ್ನಾಗಿರ್ತಿತ್ತು ’ ಅಂತ ಅಂದುಕೋತಾ ಇದ್ರು. ಆದ್ರೆ ಈಗ ’ನೀವೇನೆ ಹೇಳಿ ಆ ರುಬ್ಬೋ ಕಲ್ಲಿನಲ್ಲಿ ರುಬ್ಬಿ ಮಾಡಿದ ಅಡುಗೆ ರುಚಿ ಈ ಮಿಕ್ಸಿ,ಗ್ರೈಂಡರ್ ನಲ್ಲಿ ಇರಲ್ಲ ಕಣ್ರಿ ’ ಅಂತೀವಿ.

ಈ ಮೊಬೈಲ್ ಫೋನ್,ಈ-ಮೇಲ್,ಟೆಲಿಫೋನ್.ಮಿಕ್ಸಿ,ಟಿ.ವಿ,ರೇಡಿಯೋ,ವಾಶಿಂಗ್ ಮೆಶಿನ್, ಏನೇ ಬರಲಿ ಅದನ್ನು ಬಳಸುತ್ತಲೇ , ಅದಿಲ್ಲದೇ ನಮ್ಮ ಬದುಕೇ ಸಾಗದು ಅನ್ನೋ ಪರಿಸ್ಥಿತಿ ಇದ್ದಾಗಲೆ ನಮ್ಮ ಮನಸ್ಸಲ್ಲಿ ಬರೋದು ’ನೀವೇನೆ ಹೇಳಿ ಹಿಂದೇನೇ ಚೆನ್ನಾಗಿತ್ತು .....’


ನೀವೇನೇ ಹೇಳಿ -

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ............

12 comments:

Anil said...

ಸ್ಕೂಲಲ್ಲಿರುವಾಗ ಗೋಳಾಡ್ತಾ ಬರೀತಿದ್ದ ಕಾಗುಣಿತಗಳನ್ನ ಮೊನ್ನೆ ಯಾಕೋ ಬೇಜಾರಾಯ್ತು ಅಂತ ಆಫೀಸ್ನಲ್ಲಿ ಕೂತು ಬರೆದಿದ್ದಾಯ್ತು !!

Anonymous said...

ನಿಜ ನಿಜ ಹದಿನಾರಾಣೆ ನಿಜ... ಎಲ್ಲ ಕಾಲದಲ್ಲೂ ಎಲ್ಲರೂ ಹಳಹಳಿಸುವುದು, ಗೊಣಗೋದು ಹೀಗೇನೆ...

sunaath said...

ಎಲ್ಲಾ ಅನುಕೂಲಗಳು ಈಗೇನೋ ಇವೆ. ಆದರೂ ಹಳೇ ಕಾಲವೇ ಚೆನ್ನಾಗಿತ್ತು. ಸರಿಯಾಗಿ ಹೇಳಿದ್ದೀರಿ, ಸಂದೀಪ!

Sandeep K B said...

FLASHBACK ನೆನಪಿಸದಕ್ಕೆ ಧನ್ಯವಾದಗಳು ..

ದಿನಕರ ಮೊಗೇರ said...

anukulada hindene anaanuka banda kathe idu....... lifu ishTene....

Dr.D.T.Krishna Murthy. said...

ಒಟ್ಟಿನಲ್ಲಿ ಇರುವುದರ ಬಗ್ಗೆ ನಮಗೆ ಸಮಾಧಾನವಿಲ್ಲ.There is some manufacturing defect in the human mind!ನಮ್ಮ ಯೋಚನಾ ಲಹರಿಯಲ್ಲೇ ಏನೋ ಐಬಿದೆ ಎನಿಸುತ್ತದೆ!ನನ್ನ ಬ್ಲಾಗಿಗೊಮ್ಮೆ ಭೇಟಿ ಕೊಡಿ.ನಮಸ್ಕಾರ.

Anonymous said...

ಮು೦ಚೆ ಎಲ್ಲ ಇರದಿದ್ದರೂ ಎಲ್ಲವೂ ಇತ್ತು ಅ೦ತಾ ಭಾವನೆ, ನೆಮ್ಮದಿ ಇತ್ತು. ಈಗ ಎಲ್ಲ ಇದ್ದರೂ ಏನೂ ಮಿಸ್ಸಿ೦ಗ್ ಎ೦ಬಾ ವಿಚಿತ್ರ ಶೂನ್ಯಭಾವ ಕಾಡುತ್ತದೆ.

Chaithrika said...

ಇನ್ನೊಂದು ಮಾತು.
ಹಳೇದನ್ನು ಮೆಲುಕು ಹಾಕಿ "ಅದೇ ಚೆನ್ನಾಗಿತ್ತು" ಅನ್ನುವವರ ಬಳಿ ಪುನಃ ಅಂಥ ಬದುಕಿಗೆ ಹೋಗೋಣವೇ ಎಂದು ಕೇಳಿ. ಅವರು "ಬೇಡ" ಎಂದೇ ಹೇಳುತ್ತಾರೆ. ಜೀವನ ಸುಗಮವಾದಾಗ ಕಷ್ಟದ ದಿನಗಳನ್ನು ನನೆಸಿ ಥ್ರಿಲ್ ಅಂದುಕೊಳ್ಳುತ್ತೇವೆ. ಅದೇ ದಿನಗಳಿಗೆ ಮರಳುವ ಅವಕಾಶವಿದ್ದರೆ ಯಾರೂ ತಯಾರಿರುವುದಿಲ್ಲ.

ಅರುಣ said...

ಇಕ್ಕಳ

ಚಳಿಗಾಲ ಬಂದಾಗ ಎಷ್ಟು ಚಳಿಯೆಂದರು
ಬಂತಲ್ಲ ಬೇಸಿಗೆ ಕೆಟ್ಟ ಬಿಸಿಲೆಂದರು
ಮಳೆ ಬಿತ್ತೋ ಬಿಡದಲ್ಲ ಶನಿ ಎಂಬ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ

ಚಿಗುರ ಚಿನ್ನದ ನಡುವೆ ಹೂವ ಬಯಸುವರು
ಹೂಗಳ ಕಾಲದಲಿ ಹಣ್ಣ ಹೊಗಳುವರು
ಹಣ್ಣಿನ ಗಾತ್ರ ಪೀಚು ಎಂದಿವರ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ

ಓದಿರಲು ಹೇಳುವರು ಮತ್ತೊಮ್ಮೆ ಬರೆಯೋ
ಬರೆದಿಡಲು ಬೆದಕುವರು ಬರವಣಿಗೆ ಸರಿಯೋ
ಇವರ ಬಯಕೆಗಳೇನೋ ಇವರದೇ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ

ನಿಂತವರ ಕೇಳುವರು ನೀನೇಕೆ ನಿಂತೆ
ಮಲಗಿದರೆ ಗೊಣಗುವರು ನಿನಗಿಲ್ಲ ಚಿಂತೆ
ಓಡಿದರೆ ಬೆನ್ನ ಹಿಂದೆಯೇ ಇವರ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ

-ಕೆ ಎಸ್ ನ

.....ಈ ಮನುಷ್ಯ ಅಂಬೋ ಪ್ರಾಣಿನೇ ಇಷ್ಟು....!

ಸುಧೇಶ್ ಶೆಟ್ಟಿ said...

Hmmm... adanthoo nija bidi :) nice thoughts :)

ವಿ.ರಾ.ಹೆ. said...

I liked the post and Chaitrika's comment. Verymuch true..

nayna birur said...

chaithrika elodhu 100/ nija.nanpugalu nenpage edre channagiratheeee.......adru nivene eli odidha mele swlpa hale nenapaythu.thanks