Wednesday, May 20, 2015

ಆಟೋ ಮಹಾತ್ಮೆ


'ಊರಿಗೆ ಬಂದವಳು ನೀರಿಗೆ ಬರದೇ ಇರ್ತಾಳಾ?' ಅನ್ನೋ ಗಾದೆ ಥರ 'ಬೆಂಗಳೂರಿಗೆ ಬಂದವರು ಆಟೋದಲ್ಲಿ ಹೋಗದೆ ಇರ್ತಾರಾ?' ಅನ್ನೋ ಗಾದೆ ಹುಟ್ಟು ಹಾಕಬಹುದೇನೋ ಬೆಂಗಳೂರಿನಲ್ಲಿ! ಎಲ್ಲಾ ಊರಿನಲ್ಲೂ ಆಟೋ ಇದ್ದೇ ಇದೆ, ಮತ್ತೆ ಜನ ಅದನ್ನು ಬಳಸೇ ಬಳಸುತ್ತಾರೆ. ಬೆಂಗಳೂರೇನು ಸ್ಪೆಶಲ್ ಅಂಥ ನಿಮಗನಿಸಿರಬಹುದು. ಬೆಂಗಳೂರಿನಲ್ಲಿ ಬಹುತೇಕ ಜಾಗಗಳಿಗೆ ನೇರವಾದ ಬಸ್ ಇರದೇ ಇದ್ದುದರಿಂದ ಇಲ್ಲಿ ಆಟೋದಲ್ಲಿ ಹೋಗೋದು ಎಲ್ಲರಿಗೂ ಅನಿವಾರ್ಯ. ಮುಂಬಯಿಯಂಥ ಊರಿಂದ ಬೆಂಗಳೂರಿಗೆ ಬಂದ ಹಲವರಿಗೆ ಒಂದು ವಿಷಯದಲ್ಲಿ ಕೆಲವೊಮ್ಮೆ ಮುಜುಗರವಾಗುವುದುಂಟು! ಅದೇನಂದರೆ 'ಆಟೋ......' ಅಂತ ಕರೆದ ತಕ್ಷಣ ಯಾರೂ ಬರದೆ ಇರುವುದು! ಮುಂಬಯಿಯಲ್ಲಿ 'ಟ್ಯಾಕ್ಸೀ..' ಅಂದ ತಕ್ಷಣ ಕಪ್ಪು-ಹಳದಿ ಬಣ್ಣದ ಟ್ಯಾಕ್ಸಿಯೊಂದು ನಿಮ್ಮ ಮುಂದೆ ಹಾಜರಾಗುತ್ತೆ. ನೀವೂ ಟ್ಯಾಕ್ಸಿ ಹತ್ತಿ ಬೇಕಾದಲ್ಲಿ ಹೋಗುತ್ತೀರ. ಅಷ್ಟೆ! ಆದ್ರೆ ಬೆಂಗಳೂರಿನಲ್ಲಿ ಆ ಥರ ಅಲ್ಲ. ಇಲ್ಲಿ ಆ ರೀತಿ ಕರೆದರೆ ಬರುವ ಟ್ಯಾಕ್ಸಿಗಳಿಲ್ಲ! ಇಲ್ಲಿ ಇರುವುದು ಆಟೋಗಳು. ಅದೂ ಕರೆದರೆ ಬಾರದ ಆಟೋಗಳು!

ಬೆಂಗಳೂರಿನಲ್ಲಿ ಆಟೋದಲ್ಲಿ ಹೋಗೋದಕ್ಕೆ ಸ್ವಲ್ಪ ಮಟ್ಟಿನ ಅನುಭವ ಅಗತ್ಯ. ಆಟೋಗಳು ಕರೆದರೆ ಬರದೇ ಇರೋದಕ್ಕೂ ಕಾರಣ ಇದೆ. ಇಲ್ಲಿ ಆಟೋ ಹತ್ತೋದಕ್ಕೆ ಮೊದಲು ಒಂದು ಚಿಕ್ಕ ಸಂದರ್ಶನ ಇರುತ್ತೆ! ಆ ಸಂದರ್ಶನದಲ್ಲಿ ನೀವು ಯಶಸ್ವಿಯಾದರೆ ಮಾತ್ರ ನಿಮಗೆ ಆಟೊದಲ್ಲಿ ಕೂರುವ ಅವಕಾಶ! ನಿಮಗೆ ಮಲ್ಲೇಶ್ವರಂಗೆ ಹೋಗಬೇಕು ಅಂದುಕೊಳ್ಳಿ. ಮೊದಲಿಗೆ ಎಲ್ಲಾದರೂ ಖಾಲಿ ನಿಂತಿರುವ ಅಟೋ ಇದೆಯಾ ನೋಡಬೇಕು. ಖಾಲಿ ಅಂದ್ರೆ ತೀರ ಡ್ರೈವರೂ ಇರದ ಆಟೋ ಅಲ್ಲ! ಒಂದು ವೇಳೆ ಖಾಲಿ ಆಟೋ ನಿಂತಿದ್ದಲ್ಲಿ, ಡ್ರೈವರ್ ಏನು ಮಾಡುತ್ತಿದ್ದಾನೆ ಅಂತ ನೋಡಬೇಕು. ನಿಮಗೆ ಡ್ರೈವರ್ ಕಾಣದೆ ಬರೀ ಎರಡು ಕಾಲುಗಳು ಹಿಂದಿನ ಸೀಟುಗಳಿಂದ ಹೊರಗೆ ಚಾಚಿರೋದು ಕಂಡರೆ, ಆ ಕಡೆ ಹೋಗಲೇ ಬೇಡಿ. ಆ ಡ್ರೈವರ್ ಮಲಗಿದ್ದಾನೆ ಅಂತ ಅರ್ಥ! ಅವನು ಬರೋದು ಡೌಟೇ. ಹಾಗಾಗಿ ಬೇರೆ ಆಟೊ ನೋಡಿ.

ಒಂದು ವೇಳೆ ಡ್ರೈವರ್ ತನ್ನ ಸೀಟಿನಲ್ಲಿದ್ದರೆ, ಅವನ ಬಳಿ ಹೋಗಿ "ಮಲ್ಲೇಶ್ವರಂ" ಅಂತ ಹೇಳಿ. ಅಲ್ಲಿಗೆ ಸಂದರ್ಶನ ಶುರು! ಅವನು "ಮಲ್ಲೇಶ್ವರಂನಲ್ಲಿ ಎಲ್ಲಿ ?" ಅಂತ ಕೇಳ್ತಾನೆ. ನೀವು ಹೇಳಿದ ಉತ್ತರ ಅವನಿಗೆ ಇಷ್ಟ ಆದ್ರೆ ನೀವು ಸಿಲೆಕ್ಟ್ ಅಂತ ಅರ್ಥ. ಇಲ್ಲದಿದ್ದಲ್ಲಿ ಸಂದರ್ಶನ ಮುಂದುವರೆಯುತ್ತೆ! "ಮೇನ್ ರೋಡಲ್ಲೇನಾ? ಅಥವ ಒಳಗೆ ಹೋಗ್ಬೇಕಾ?", "ಎಷ್ಟು ಜನ ಇದ್ದೀರಿ, ಲಗೇಜ್ ಇದೆಯಾ" ಹೀಗೆ ಪ್ರಶ್ನೆ ಮುಂದುವರೆಯುತ್ತೆ. ನಿಜ ಹೇಳ್ಬೇಕಂದ್ರೆ ಈ ಪ್ರಶ್ನೆಗಳೆಲ್ಲ ನೆಪ ಮಾತ್ರ. ನೀವು "ಮಲ್ಲೇಶ್ವರಂ" ಅಂದಾಕ್ಷಣ ಅವನು ಏನೂ ಪ್ರಶ್ನೆ ಕೇಳಿಲ್ಲ ಅಂದರೆ ಅವನು ಮೀಟರ್ ಪ್ರಕಾರ ಬರೋದಿಕ್ಕೆ ಒಪ್ಪಿದ್ದಾನೆ ಅಂತ ಅರ್ಥ. "ಮಲ್ಲೇಶ್ವರಂನಲ್ಲಿ ಎಲ್ಲಿ. ಮೇನ್ ರೋಡಲ್ಲೇನಾ ಅಥವ ಒಳಗೆ ಹೋಗ್ಬೇಕಾ ?.." ಅಂತೆಲ್ಲಾ ಕೇಳಿದ್ರೆ ಅವನು ಮೀಟರ್ ಮೇಲೆ ಇಪ್ಪತ್ತು ರೂ ಹೆಚ್ಚಿಗೆ ಕೇಳ್ತಾನೆ ಅಂತ ಅರ್ಥ. ನೀವು ಈವರೆಗೆ ಯಾರೂ ಹೋಗದಿರುವಂಥ ಸ್ಥಳಕ್ಕೆ ಹೋಗ್ತಿದ್ದೀರಾ ಅಂತ ನಿಮ್ಮನ್ನು ನಂಬಿಸಿ, ಹೆಚ್ಚಿಗೆ ಹಣ ಕೇಳುವ ತಂತ್ರ ಇದು. ಡ್ರೈವರ್ ಜೊತೆ ಮೊದಲ ಸುತ್ತಿನ ಮಾತುಕತೆ ಮುಗಿದು ನೀವು ಆಟೋ ಹತ್ತಿದ್ರೆ ಅಲ್ಲಿಗೆ ಒಂದು ಹಂತ ತಲುಪಿದ್ರಿ ಅಂತ ಅರ್ಥ. ಈಗ ಡ್ರೈವರ್ ಮೀಟರ್ ಹಚ್ಚಿ ಡುರ್ರ್ ಡುರ್ರ್ ಅಂತ ಆಟೋ ಶುರು ಮಾಡ್ತಾನೆ.

ಇನ್ನು ಮುಂದಿನ ಹಂತ! ಸ್ವಲ್ಪ ಹೊತ್ತಿನ ನಂತರ ಮೂರು ರಸ್ತೆ ಕೂಡುವಲ್ಲಿ ಒಮ್ಮೆ ಹಿಂದೆ ತಿರುಗಿ "ಸಾರ್/ಮ್ಯಾಡಮ್ ಸ್ಯಾಂಕಿ ರೋಡ್ ಮೇಲೆ ಹೋಗ್ಲಾ ಇಲ್ಲ ಮೇಖ್ರಿ ಸರ್ಕಲ್ ಮೇಲ್ ಹೋಗ್ಲಿ?" ಅಂತ ಕೇಳ್ತಾನೆ. ಇದು ನಿಮಗೆ ಆ ಪ್ರದೇಶದ ಬಗ್ಗೆ ಎಷ್ಟು ಮಾಹಿತಿ ಇದೆ ಅನ್ನೋ ಟೆಸ್ಟ್. ಆಗಿದ್ದಾಗ್ಲಿ ಅಂತ ದೇವರ ಮೆಲೆ ಭಾರ ಹಾಕಿ ಸ್ಯಾಂಕಿ ರೋಡ್ ಅಥವಾ ಮೆಖ್ರಿ ಸರ್ಕಲ್ ಅಂತ ಹೇಳಿದ್ರೆ ನೀವು ಬಚಾವ್. ಅದು ಬಿಟ್ಟು "ನನಗೆ ಈ ಕಡೆ ಏರಿಯಾ ಅಷ್ಟಾಗಿ ಗೊತ್ತಿಲ್ಲ. ನೀವೇ ಯಾವುದು ಹತ್ತಿರ ಆ ರೋಡಲ್ಲಿ ಕರ್ಕೊಂಡು ಹೋಗಿ" ಅಂದ್ರೆ ಆಷ್ಟೆ! ಪವರ್ ಆಫ್ ಅಟಾರ್ನಿ ಬರೆದು ಕೊಟ್ಟ ಹಾಗೆ! ನೀವು ಬೆಂಗಳೂರು ದರ್ಶನ ಮಾಡಿ ಆರಾಮಾಗಿ ಹೋಗಬಹುದು!

ಆಟೋ ಹತ್ತಿದ ಮೇಲೆ ನೀವು ಮುಖ್ಯವಾಗಿ ಮಾಡಬೇಕಾದ ಕೆಲಸ ಅಂದ್ರೆ ಮೀಟರ್ ಮೇಲೆ ಒಂದು ಕಣ್ಣಿಟ್ಟಿರೋದು. ನೀವು ಗಮನಿಸಿರಬಹುದು. ಹಲವು ಸಲ ನಾವು ಬೆಳಿಗ್ಗೆ ಎಚ್ಚರ ಆದ ತಕ್ಷಣ ಒಮ್ಮೆ ಗಡಿಯಾರ ನೋಡಿ 'ಒಂದು ಹತ್ತು ನಿಮಿಷ ಮಲಗೋಣ' ಅಂದುಕೊಂಡು ಮಲಗಿದ್ರೆ ಮತ್ತೆ ಎಚ್ಚರ ಆದಾಗ ಅರ್ಧ ಗಂಟೆ ಆಗಿರುತ್ತೆ! ಆಟೋದಲ್ಲೂ ಹೀಗೇ. ನೀವು ಮೀಟರ್ ಮೇಲೆ ಕಣ್ಣಿಡದೆ ರಸ್ತೆ ಬದಿಯಲ್ಲಿ ಹೋಗ್ತಿರೊ ಹುಡುಗಿಯರನ್ನೋ, ಅಂಗಡಿಯಲ್ಲಿ ನೇತು ಹಾಕಿರೋ ಸೀರೆಗಳನ್ನೋ ನೋಡಿ ಮೈ ಮರೆತರೆ, ಆಟೋ ಮೀಟರ್ ಪೆಟ್ರೋಲ್ ಬಂಕ್ ಮೀಟರ್ ಥರ್ ಜಂಪ್ ಆಗಿರುತ್ತೆ. ಇನ್ನು ಕೆಲವು ಸಲ ನಾವು ಹತ್ತಿದ ತಕ್ಷಣ ಮೀಟರ್ ಚೇಂಜ್ ಮಾಡಿಯೇ ಇರಲ್ಲ. ಹಿಂದಿನ ಅಂಕಿಯಿಂದಲೆ ಅದು ಮುಂದುವರೆಯುತ್ತೆ!

ಕೆಲವೊಮ್ಮೆ ಆಟೋದವರು ಮೀಟರ್ ಹಾಕದೆ "ಇಪ್ಪತ್ತು ರೂ ಆಗುತ್ತೆ" ಅಂತಾರೆ. ಅಂಥ ಸಂದರ್ಭದಲ್ಲಿ ಎರಡೆರಡು ಸಲ ಇಪ್ಪತ್ತು ಅಂತ ಖಚಿತ ಮಾಡಿಯೇ ಆಟೋ ಹತ್ತಬೇಕು. ಒಮ್ಮೆ ನನಗೆ ಆಟೋದವನು "ಇಪ್ಪತ್ತು" ಅಂತ ಹೇಳಿ, ಇಳಿಯುವಾಗ ನಾನು "ಎಪ್ಪತ್ತು" ಹೇಳಿದ್ದು ಅಂತ ಜಗಳ ಮಾಡಿ ವಸೂಲಿ ಮಾಡಿದ್ದ. ಯಾವುದಕ್ಕೂ ಇಂಥ ಸಂದರ್ಭದಲ್ಲಿ ಹರ್ಬಜನ್ ಸಿಂಗ್ ಮಂಕಿ ಅಂದ ಪ್ರಕರಣ ನೆನಪಿಸಿಕೊಂಡರೆ ಒಳ್ಳೆಯದು!

ಬೆಂಗಳೂರಿನ ಆಟೋಗಳ ವಿಶೇಷತೆ ಅಂದ್ರೆ ಅವರು ಯಾವತ್ತೂ ಎಲ್ಲೇ ಕರೆದರೂ "ಬರಲ್ಲ" ಅನ್ನೋದೇ ಇಲ್ಲ! ಬದಲಾಗಿ ಡುರ್ರ್ ಅಂತ ಮುಂದೆ ಹೋಗೇ ಬಿಡ್ತಾರೆ. ಹಾಗೆ ಹೋದ್ರೆ ಬರಲ್ಲ ಅಂತ ತಾನೆ ಲೆಕ್ಕ. ಹಾಗೇನಾದ್ರೂ ಹೋಗದೆ ಅವನು ಹಿಂದಿನ ಸೀಟ್ ಕಡೆ ನೊಡಿದ್ರೆ "ಹತ್ತಿ" ಅಂತ ಅರ್ಥ! ಅದು ಬಿಟ್ಟು ಇನ್ನೂ ಏನೋ ಆಲೋಚನೆ ಮಾಡ್ತಿದ್ರೆ, ಅವನು ಸಂದರ್ಶನಕ್ಕೆ ತಯಾರಿ ನಡೆಸ್ತಾ ಇದ್ದಾನೆ ಅಂತ ಅರ್ಥ!

ಹೀಗೆ ಬೆಂಗಳೂರಿನಲ್ಲಿ ಆಟೋದಲ್ಲಿ ಹೋಗೊದಕ್ಕೂ ಸ್ವಲ್ಪ ಅನುಭವ ಅಗತ್ಯ. ನಿಮ್ಮ ಆಟೋ ಪ್ರಯಾಣ ಸುಖಕರವಾಗಲಿ ಅನ್ನೊದೇ ನನ್ನ ಹಾರೈಕೆ!

[ಈ ಪ್ರಬಂಧ ಅಮೆರಿಕಾದ ಅಕ್ಕ ವಿಶ್ವ ಕನ್ನಡ ಸಮ್ಮೇಳನ 2014ದಲ್ಲಿ ಪ್ರಕಟಗೊಂಡ 'ಹರಟೆ ಕಟ್ಟೆ' ಪ್ರಬಂಧ ಸಂಕಲನದಲ್ಲಿ ಪ್ರಕಟಗೊಂಡಿದೆ.]

Wednesday, August 29, 2012

ಬೆಂಗಳೂರೆಂಬ ಮಾಯಾನಗರಿ!ಮಾಯಾನಗರಿ ಬೆಂಗಳೂರು!

ಟಿ.ವಿ ಚ್ಯಾನಲ್ ನವರು ಆಗಾಗ್ಗೆ ಬೆಂಗಳೂರನ್ನು ಸಂಬೋಧಿಸೋದು ಹೀಗೆ! ಬಹುಶಃ ಎಲ್ಲಾ ನಗರಗಳೂ ಒಂದು ರೀತಿಯಲ್ಲಿ ಮಾಯಾನಗರಿಗಳೇ! ನಾನು ಚಿಕ್ಕವನಿದ್ದಾಗ ಬಹುತೇಕ ಜನರು ವಲಸೆ ಹೋಗುತ್ತಿದ್ದುದು ದೂರದ ಬೊಂಬಾಯಿಗೆ. ಅದೀಗ ಮುಂಬಯಿ ಆದರೂ ಮಂಗಳೂರಿನವರ ಬಾಯಲ್ಲಿ ಬೊಂಬಾಯೇ! ಬೊಂಬಾಯಿಯಿಂದ ಎರಡು ವರ್ಷಕ್ಕೊಮ್ಮೆ ಊರಿಗೆ ಬರುವವರ ಬಾಯಲ್ಲಿ ಮುಂಬಯಿಯ ರೊಚಕ ಕಥೆಗಳನ್ನು ಕೇಳಿದವರಿಗೆ ಅದು ನಿಜಕ್ಕೂ ಮಾಯಾನಗರಿಯೆ ಅನ್ನೋ ಭರವಸೆ ಮೂಡಿ ಹೋಗಿತ್ತು. ಆದರೆ ಕಾಲ ಕಳೆದಂತೆ ಮುಂಬಯಿಗೆ ವಲಸೆ ಹೋಗುವವರ ಸಂಖ್ಯೆ ಕಡಿಮೆ ಆಗಿ ಬೆಂಗಳೂರಿಗೆ ವಲಸೆ ಹೋಗೋವವರ ಸಂಖ್ಯೆ ಹೆಚ್ಚತೊಡಗಿತು. ಬಹುತೇಕ ಬೊಂಬಾಯಿ ಮಾದರಿಯ ಕಥೆಗಳೇ ಬೆಂಗಳೂರಿನ ಬಗ್ಗೆಯೂ ಕೇಳತೊಡಗಿತು. ಹೀಗೆ ಬೆಂಗಳೂರೂ ಟಾಪ್ ಟೆನ್ ಮಾಯಾನಗರಿಗಳ ಪಟ್ಟಿಗೆ ಸೇರಿ ಬಿಟ್ಟಿತು!

ಬೆಂಗಳೂರಿಗೆ ಎಂಟ್ರಿ ನೀಡುವ ಎಲ್ಲರಿಗೂ ಈ ಮಾಯಾನಗರಿ ತನ್ನ ಮಾಯೆ ತೋರಿಸಿಯೇ ಇರುವುದರಿಂದ ಬಹುಶಃ ಯಾರೂ ನನ್ನ ಮಾತನ್ನು ಅಲ್ಲಗಳೆಯಲಾರರೇನೋ. ಅದಲ್ಲದೇ ಊರಿನಿಂದ ಅಷ್ಟೇನೂ ದೂರವಿಲ್ಲದೇ ಇದ್ದುದರಿಂದ, ಊರಿಂದ ಸಾಕ್ಷಾತ್ ಬೆಂಗಳೂರಿನ ಮಾಯೆಯನ್ನು ಕಣ್ಣಾರೆ ನೋಡಲು ಬರುವವರೂ ಕಮ್ಮಿ ಇಲ್ಲ ಬಿಡಿ!

ಬೆಂಗಳೂರಿಗೆ ಕಾಲಿಡುವ ಎಲ್ಲರೂ ಮೊದಲು ಭೇಟಿ ನೀಡುವ, ನೀಡಲೇ ಬೇಕಾಗಿರುವ ಸ್ಥಳ ಮೆಜೆಸ್ಟಿಕ್. ಬೆಳ್ಳಂಬೆಳಿಗ್ಗೆ ಬಸ್ ನಿಂದ ಇಳಿದ ತಕ್ಷಣ ಮುತ್ತಿಕೊಳ್ಳುವ ಆಟೋ ಡ್ರೈವರ್ ಗಳೇ ಮೊದಲನೆ ಮಾಯೆ ತೋರಿಸುವವರು. ಮಂಗಳೂರಿನಿಂದ ಬರಲು ತಗುಲಿದಷ್ಟೇ ಕಾಸನ್ನು ಆಟೋದವರೂ ಕೇಳಿದಾಗ ಮತ್ತೆ ವಾಪಸ್ ಹೋಗೋದೇ ವಾಸಿ ಅಂತ ಬಹಳಷ್ಟು ಸಲ ಅನಿಸದೆ ಇಲ್ಲ! ಒಮ್ಮೆ ನನ್ನ ಸ್ನೇಹಿತನಿಗೆ ಮೆಜೆಸ್ಟಿಕ್ ನಿಂದ ರೈಲ್ವೆ ಸ್ಟೇಶನ್ ಗೆ ಹೊಗಬೇಕಾಗಿತ್ತು. ಮೆಜೆಸ್ಟಿಕ್ ಮುಂದೇನೇ ರೈಲ್ವೇ ಸ್ಟೇಶನ್ ಇರೋದು ಗೊತ್ತಿಲ್ಲದೇ ಇದ್ದರಿಂದ ಅವನು ಸಹಜವಾಗೇ ಆಟೋದವರೊಬ್ಬರನ್ನು ಕೇಳಿದಾಗ ಅವನು ಐವತ್ತು ರೂಪಾಯಿಗೆ ಒಪ್ಪಿದ್ದಾನೆ. ಇವನು ಹತ್ತಿದ ತಕ್ಷಣ ಎರಡೇ ಎರಡು ನಿಮಿಷದಲ್ಲಿ ರೈಲ್ವೇ ಸ್ಟೇಶನ್ ಮುಂದೆ ಇಳಿಸಿ ಐವತ್ತು ರೂಪಾಯಿ ಪೀಕಿದ್ದಾನೆ. ಆಟೋದವರು ಊರೆಲ್ಲಾ ಸುತ್ತಿಸಿ ಜಾಸ್ತಿ ದುಡ್ಡು ಲೂಟಿ ಮಾಡೋದು ಗೊತ್ತಿತ್ತು ಮಾರಾಯ. ನಿನ್ನ ಬೆಂಗಳೂರಿನ ಆಟೋದವರು ಇಷ್ಟು ಪ್ರಾಮಾಣಿಕರು ಅಂತ ಗೊತ್ತಿರಲಿಲ್ಲ ಅಂತ ಸರ್ಟಿಫಿಕೇಟ್ ಬೇರೆ ಕೊಟ್ಟು ಹೋಗಿದ್ದ ನನಗೆ ಆ ಸ್ನೇಹಿತ!

ನಾನು ಬೆಂಗಳೂರಿಗೆ ಬಂದು ಹತ್ತು ವರ್ಷವಾದರೂ ಬೆಂಗಳೂರು ಇನ್ನೂ ಒಂದು ಬೆರಗು. ಮೆಜೆಸ್ಟಿಕ್ ನ ಹೊಟೇಲ್ ನಲ್ಲಿ ಒಂದೆ ಸಲ ಐವತ್ತು ಮಾಸಾಲೆ ದೋಸೆ ತಂದು ಸುರಿಯೋದು, ವಿದ್ಯಾರ್ಥಿ ಭವನದಲ್ಲಿ ಒಂದೇ ಕೈಯಲ್ಲಿ ಹದಿನೈದು ಮಸಾಲೆದೋಸೆ ತಟ್ಟೆ ಬ್ಯಾಲೆನ್ಸ್ ಮಾಡೋದು, ಅವೆನ್ಯೂ ರೋಡಲ್ಲಿ ಪೇರಿಸಿಟ್ಟ ನೂರು ಪುಸ್ತಕಗಳ ಮಧ್ಯದಿಂದ ನಮಗೆ ಬೇಕಾದ ಒಂದು ಪುಸ್ತಕ ತೆಗೆದು ಕೊಡೋದು. ಅವೆನ್ಯೂ ರೋಡಲ್ಲಿ ಹೊಚ್ಚ ಹೊಸ ಕಾರೊಂದನ್ನು ಆ ಬದಿಯಿಂದ ಈ ಬದಿಗೆ ಎಲ್ಲಿಯೂ ತಗುಲಿಸದೆ ಡ್ರೈವ್ ಮಾಡಿಕೊಂಡು ಬರೋದು! ಎಲ್ಲವೂ ಬೆರಗಿನ ಸಂಗತಿಗಳೇ.

ಬೆಂಗಳೂರಿನ ಫುಟ್ಪಾತ್ ನಲ್ಲಿ ಯಾವುದಾದರೂ ವಸ್ತುವನ್ನು ಚೌಕಾಸಿ ಮಾಡಿ ತಗೊಂಡ್ರೆ ಆ ದಿನ ಅವರು ಬೆಂಗಳೂರಿನಲ್ಲಿ ಸೆಟ್ಲ್ ಆದರು ಅಂತ ಅರ್ಥ! ಸ್ಥಳದಲ್ಲಿಯೇ ಅವರಿಗೊಂದು ಸರ್ಟಿಫಿಕೇಟ್ ಬರೆದು ಕೊಡಬಹುದು! ನಾನೂ ಒಮ್ಮೆ ಇಂಥ ರಸ್ತೆ ಬದಿಯ ಅಂಗಡಿಯಲ್ಲಿ ಚೇತನ್ ಭಗತ್ ರ ಪುಸ್ತಕ ಒಂದನ್ನು ಕೊಂಡಿದ್ದೆ. ಅದೂ ಭರ್ಜರಿ ಚೌಕಾಸಿ ಮಾಡಿ. ಅವನು ಮೂನ್ನೂರು ರೂಪಾಯಿ ಹೇಳಿದ ಪುಸ್ತಕವನ್ನು ನಾನು ಬರೋಬ್ಬರಿ ಅರ್ಧ ಗಂಟೆ ಚೌಕಾಸಿ ಮಾಡಿ ನೂರೈವತ್ತಕ್ಕೆ ಕೊಂಡಿದ್ದೆ! ಆದರೆ ದುಖಃದ ಸಂಗತಿ ಏನೆಂದರೆ ಅದರ ಬೆಲೆ ತೊಂಬತ್ತು ರೂಪಾಯಿ ಆಗಿತ್ತೆಂದು ನನಗೆ ಎರಡು ವರ್ಷದ ಬಳಿಕ ಗೊತ್ತಾಗಿದ್ದು! ಅದೇ ಚೇತನ್ ಭಗತ್ ರ ಹೊಸ ಪುಸ್ತಕ ಕೊಳ್ಳಲು ಇಂಟರ್ನೆಟ್ ನಲ್ಲಿ ಹುಡುಕಿದಾಗ ಅವರ ಎಲ್ಲಾ ಪುಸ್ತಕಗಳಿಗೂ ತೊಂಬತ್ತು ರೂಪಾಯಿ ಇತ್ತೆಂದು ಗೊತ್ತಾಗಿದ್ದು ನನಗೆ! ಪೈರೇಟೆಡ್ ಪುಸ್ತಕ ಒಂದನ್ನು ಹೊಸ ಪುಸ್ತಕದ ಬೆಲೆಗಿಂತಲೂ ಹೆಚ್ಚಿನ ಬೆಲೆ ಕೊಟ್ಟು ಕೊಂಡ ಭೂಪ ನಾನೊಬ್ಬನೆ ಅಂತ ಹೇಳಿಕೊಳ್ಳಲು ನನಗೆ ಯಾವ ನಾಚಿಕೆಯೂ ಇಲ್ಲ ಬಿಡಿ! ನಾಚಿಕೆ ಪಡಲು ನಾನೇನು ಸದನದಲ್ಲಿ ಡಾಕ್ಯುಮೆಂಟರಿ ನೋಡಿಲ್ಲವಲ್ಲ!!

ಬೆಂಗಳೂರಿನ ನಿಜ ರುಚಿ ಸಿಗೋದು ಬಾಡಿಗೆಗೆ ಮನೆ ಹಿಡಿದಾಗ. ಮನೆ ಹುಡುಕುವವರು ಬ್ಯಾಚುಲರ್ ಆಗಿದ್ದರಂತೂ ಕೇಳೋದೇ ಬೇಡ. ಒಂದು ದಿನ ಮನೆಯಲ್ಲಿ ಟ್ರಯಲ್ ಗೋಸ್ಕರ ಇರೋದಕ್ಕೆ ಯಾರೂ ಬಿಡದೇ ಇರೋದ್ರಿಂದ ಆ ಮನೆಯಲ್ಲಿರೋ ಎಲ್ಲಾ ತೊಂದರೆಗಳೂ ನಿಮಗೆ ಮನೆ ಬದಲಾಯಿಸಿದ ಮೇಲೇಯೇ ತಿಳಿಯೋದು. ನೀವು ಮನೆ ನೋಡಲು ರಾತ್ರಿ ಹೋಗಿರ್ತೀರಾ ಹಾಗಾಗಿ ಟ್ಯೂಬ್ ಲೈಟ್ ಬೆಳಕಲ್ಲಿ ಮನೆ ಜಗಮಗ ಕಾಣಿಸುತ್ತಿರುತ್ತೆ. ಆದರೆ ಮನೆ ಬದಲಾಯಿಸಿ ಬಂದ ಮೇಲಷ್ಟೇ ನಿಮಗೆ ಗೊತ್ತಾಗೋದು, ಆ ಮನೆಯಲ್ಲಿ ಹಗಲು ಹೊತ್ತಲ್ಲೂ ನೀವು ಟ್ಯೂಬ್ ಲೈಟ್ ಹಾಕಿಯೇ ಇರಬೇಕಾಗುತ್ತೆ ಅಂತ! ಯಾಕಂದ್ರೆ ಕಿಟಕಿಗಳಿದ್ರೆ ತಾನೇ ಬೆಳಕು ಬರೋದು. ಕೆಲವು ಮನೆಗಳಿಗೆ ಕಿಟಕಿಗಳಿದ್ರೂ ಓಪನ್ ಮಾಡೋ ಹಾಗಿಲ್ಲ ಯಾಕಂದ್ರೆ ಓಪನ್ ಮಾಡಿದ್ರೆ ಇನ್ನೊಂದು ಮನೆಯ ಬೆಡ್ ರೂಮ್ ಕಾಣಿಸುತ್ತೆ. ಎರಡೂ ಮನೆಯ ಓನರ್ ಒಬ್ಬನೇ ಆದ್ದರಿಂದ ಒಂದೇ ಕಿಟಕಿ ಇಟ್ಟಿರ್ತಾನೆ. ಕೇಳಿದ್ರೆ 'ನನ್ ಮನೆ ಕಣ್ರಿ ನನ್ನಿಷ್ಟ' ಅಂತಾನೆ! ಶೌಚಾಲಯ ಅಂತೂ ಕೇಳೋದೇ ಬೇಡ. ಕೂತು ಮಾಡುವ ಕೆಲಸವನ್ನು ಕೂತೇ ಮಾಡಬೇಕು! ಅಕಸ್ಮಾತ್ ಎದ್ದು ನಿಂತರೆ ತಲೆ ಗೋಡೆಗೆ ಬಡಿಯುತ್ತೆ. ಮೆಟ್ಟಿಲ ಕೆಳಗೆ ಶೌಚಾಲಯ ಕಟ್ಟಿಸಿದ್ರೆ ಇನ್ನೇನ್ ಅಗುತ್ತೆ ಹೇಳಿ? ಬೆಂಗಳೂರಿನ ಜನರಿಗೆ ವೇಸ್ಟ್ ಮಾಡೋದು ಅಂದ್ರೆ ಸ್ವಲ್ಪಾನೂ ಆಗಲ್ಲ. ಅದಿಕ್ಕೇ ಒಂದಿಂಚೂ ಜಾಗ ವೇಸ್ಟ್ ಮಾಡದೆ ಮನೆ ಕಟ್ಟಿಸ್ತಾರೆ.

ಬೆಂಗಳೂರಿನಲ್ಲಿ ಖುಷಿ ಕೊಡುವ ಒಂದು ಸೌಲಭ್ಯ ಅಂದರೆ ಬಸ್ ಪಾಸ್. ಒಂದು ಸಾರಿ ಪಾಸ್ ಮಾಡಿಸಿಕೊಂಡರೆ ಸಾಕು, ಕಾಸು ಕೊಡೋ, ಚಿಲ್ಲರೆಗಾಗಿ ಕಾಯೋ ತೊಂದರೇನೆ ಇಲ್ಲ. ಕಂಡಕ್ಟರ್ ಟಿಕೇಟ್ ಕೇಳಿದ ತಕ್ಷಣ ಹೆಬ್ಬೆರಳನ್ನು ಮಡಚಿ ಅಂಗೈ ತೋರಿಸಿದ್ರೆ ಸಾಕು ಕಂಡಕ್ಟರ್ ಗೆ ಅರ್ಥವಾಗಿ ಬಿಡುತ್ತೆ ಪಾಸ್ ಅಂತ. ಅದಕ್ಕೂ ಮೀರಿ ಯಾರಾದ್ರೂ ಪಾಸ್ ತೋರಿಸಿ ಅಂದರೆ ಸಿನೆಮಾಗಳಲ್ಲಿ ಸಿ.ಬಿ.ಐ ಆಫೀಸರ್ ಗಳು ತಮ್ಮ ಕಾರ್ಡ್ ತೋರಿಸಿದ ಹಾಗೆ ತೆಗೆದು ತೋರಿಸಿದರೆ ಆಯ್ತು! ಈ ಪಾಸ್ ಗೆ ಅದರದ್ದೇ ಆದ ತೊಂದರೆಗಳೂ ಇವೆ. ಟಿಕೆಟ್ ತಗೊಳ್ಳುವಾಗ ಒಂದು ವೇಳೆ ಬಸ್ ಆ ಜಾಗಕ್ಕೆ ಹೋಗದೇ ಇದ್ದಲ್ಲಿ ಕಂಡಕ್ಟರ್ ಕೂಡಲೇ ನಿಮ್ಮನ್ನು ಇಳಿಸಿ ಬಿಡುತ್ತಾನೆ. ಆದರೆ ಪಾಸ್ ಇರೋರನ್ನು ಯಾರೂ ಎಲ್ಲಿಗೆ ಅಂತ ಕೇಳದೇ ಇರೋದ್ರಿಂದ ಅವರು ಎಲ್ಲೆಲ್ಲೋ ಹೋಗಿ ತಲುಪುವ ಸಾಧ್ಯತೆಗಳೇ ಹೆಚ್ಚು. ನಾನೂ ಬಹಳಷ್ಟು ಸಲ ಎಲ್ಲೆಲ್ಲೋ ತಲುಪಿದ್ದಿದೆ. ಮಂಗಳೂರಿನಲ್ಲಿದ್ದಾಗ ಈ ಸಮಸ್ಯೆ ಇರಲಿಲ್ಲ. ಎಡಕ್ಕೆ ಉಡುಪಿ ಬಲಕ್ಕೆ ಮಂಗಳೂರು. ಒಂದು ಸಲ ಮೇಯೊ ಹಾಲ್ ಬಳಿ ಮೆಜೆಸ್ಟಿಕ್ ಅನ್ನೋ ಬೋರ್ಡ್ ನೋಡಿ ಹತ್ತಿದ್ದೆ. ಹಲಸೂರು ಬಂದ ನಂತರವೇ ನನಗೆ ತಪ್ಪಿನ ಅರಿವಾಗಿದ್ದು. ಅದೂ ಅಲ್ಲದೇ ಎಲ್ಲದಕ್ಕೂ ಮೆಜೆಸ್ಟಿಕ್ಕೇ ಆರಂಭ ಮತ್ತು ಅಂತ್ಯ ಆಗಿದ್ದರಿಂದ ಏನೇ ಎಡವಟ್ಟಾದ್ರೂ ವಾಪಸ್ ಮೆಜೆಸ್ಟಿಕ್ ಗೆ ಬರಬೇಕಾಗಿತ್ತು. ಒಂದು ಸಲ ದೊಮ್ಮಲೂರಿನಿಂದ ಇಂದಿರಾನಗರಕ್ಕೆ ಬರಲು ಅದೇ ದಾರಿಯಲ್ಲಿ ಹೋಗುವ ಬಸ್ ಇದೆ ಅನ್ನೋದು ಗೊತ್ತಿರದೆ, ಮೆಜೆಸ್ಟಿಕ್ ಗೆ ಬಂದು ಮತ್ತೆ ಇಂದಿರಾನಗರಕ್ಕೆ ಹೋಗಿದ್ದೆ! ಇನ್ನೊಂದು ಸಲ ಪಾಸ್ ಇದೆ ಅನ್ನೋ ಭಂಡ ಧೈರ್ಯದಿಂದ ಹೆಸರಘಟ್ಟದ ಬಸ್ ಹತ್ತಿ ಹೋಗಿದ್ದೆ. ಹೆಸರಘಟ್ಟ ತಲುಪಿದ ಮೇಲೆ ಕಂಡಕ್ಟರ್ ಬಳಿ ಮತ್ತೆ ವಾಪಸ್ ಮೆಜೆಸ್ಟಿಕ್ ಗೆ ಯಾವಾಗ ಹೊರಡೋದು ಅಂತ ಕೇಳಿದಾಗ ಅವನು 'ನಾಳೆ ಬೆಳಿಗ್ಗೆ' ಅಂದಿದ್ದ. ಎಡವಟ್ಟಾಗಿ ಕೊನೆ ಟ್ರಿಪ್ ನ ಬಸ್ ಹತ್ತಿದ್ದೆ! ಹೇಗೊ ಕಷ್ಟಪಟ್ಟು ಯಾರದೋ ಬೈಕ್ ನಲ್ಲಿ ಮುಖ್ಯ ರಸ್ತೆಯ ತನಕ ಡ್ರಾಪ್ ಕೇಳಿ ರೂಮ್ ಗೆ ವಾಪಸ್ ಬರೋ ಅಷ್ಟರಲ್ಲಿ ಸಾಕು ಸಾಕಾಗಿತ್ತು!

ಶಾಲೆಯಲ್ಲಿದ್ದಾಗ ಬೆಂಗಳೂರಿನಲ್ಲಿ ಐಟಿಐ, ಹೆಚ್.ಎ.ಎಲ್, ಬಿ.ಎಚ್.ಇ.ಎಲ್ ನಂಥ ಕಂಪೆನಿಗಳಿವೆ ಅಂತ ಓದಿದ್ದೆ. ಆದರೆ ಇಲ್ಲಿ ಬಂದು ನೋಡಿದಾಗ ಗಗನಚುಂಬಿ ಕಟ್ಟಡಗಳು. ಎಲ್ಲಿ ನೋಡಿದರೂ ಐಟಿ, ಬಿಟಿ ಕಟ್ಟಡಗಳು. ಇಂಥ ಕಟ್ಟಡಗಳಲ್ಲಿ ಕೆಲಸ ಮಾಡೋ ಅವಕಾಶ ನನಗೂ ಸಿಗಬಹುದಾ ಅನ್ನೋ ಸಣ್ಣ ಆಸೆ. ಹೀಗೆ ಬಂದ ಹೊಸತರಲ್ಲಿ ಕೆಲಸ ಸಿಗೋ ಮುನ್ನ ಒಂದು ದಿನ ಮೆಜೆಸ್ಟಿಕ್ ಫುಟ್ಪಾತ್ ನಲ್ಲಿ ಗಾಡಿಯಲ್ಲಿ ಮಾರೋ ಚಿಕನ್ ಬಿರಿಯಾನಿ ತಿನ್ನುತ್ತಾ ಇದ್ದೆ. ಅಲ್ಲಿಗೆ ಒಬ್ಬ ಟೈ ಹಾಕಿಕೊಂಡು ಬೈಕಿನಲ್ಲಿ ಬಂದು ಇಳಿದ. ಯಾವುದೋ ದೊಡ್ಡ ಕಂಪನಿಯಲ್ಲಿ ಕೆಲಸಕ್ಕಿರಬೇಕು ಇವನ ಬಳಿ ಕೇಳಿದ್ರೆ ಯಾವುದಾದರೂ ಕೆಲಸ ಸಿಕ್ಕರೂ ಸಿಗಬಹುದು ಅನ್ನೋ ಆಸೆ ಚಿಗುರೊಡೆಯಿತು. ಅವನು ಬಂದು ಒಂದು ಪ್ಲೇಟ್ ಅನ್ನ ಸಾಂಬಾರ್ ತಗೊಂಡು ಸೀದಾ ನನ್ನ ಬಳಿಯೇ ನಿಂತ! ಒಂದೆರಡು ನಿಮಿಷ ಹಾಗೇ ಮುಖ ಮುಖ ನೋಡಿದೆವು. ಆಮೇಲೆ ಅವನೇ ಮಾತಿಗಿಳಿಸಿದ. ಅವನು ಕೇಳಿದ ಮೊದಲನೇ ಪ್ರಶ್ನೆ 'ಗುರು ಒಂದ್ ಪೀಸ್ ಚಿಕನ್ ಕೊಡ್ತೀಯಾ?' ಅನ್ನೋದು. ಅವನು ಯಾವುದೋ ಕಂಪೆನಿಯಲ್ಲಿ ಮಾರ್ಕೆಟಿಂಗ್ ಕೆಲಸಕ್ಕಿದ್ದಾನಂತೆ. ಬೈಕು, ಹಾಕಿರೋ ಡ್ರೆಸ್ ಎಲ್ಲವೂ ಕಂಪೆನಿಯದ್ದಂತೆ. ಚಿಕನ್ ತಿನ್ನದೆ ತುಂಬಾ ದಿನ ಆಗಿದ್ದರಿಂದ ಬಾಯಿಬಿಟ್ಟು ಕೇಳಿದ್ದಾನೆ. ಅದೂ ಅಲ್ಲದೆ ಮಾರ್ಕೆಟಿಂಗ್ ಕೆಲಸ ಮಾಡಿದ್ರೆ ನಾಚಿಕೆ ಎಲ್ಲಾ ಹಂಗೆ ಮಾಯ ಆಗಿ ಬಿಡುತ್ತಂತೆ!

ಬಹುಶಃ ಇದಕ್ಕೇ ಏನೋ ಬೆಂಗಳೂರು ಮಾಯಾನಗರಿ!

[ಈ ಪ್ರಬಂಧ 'ಬ್ಲಾಗಿಸು ಕನ್ನಡ ಡಿಂಡಿಮವ' ಪುಸ್ತಕದಲ್ಲಿ ಪ್ರಕಟವಾಗಿದೆ]

Saturday, May 12, 2012

ಉದರನಿಮಿತ್ತಂ...ಅದೊಂದು ಪುಟ್ಟ ಊರು. ಊರಂದ ಮೇಲೆ ಅಲ್ಲಿ ಸಲೂನು, ಹಾಲಿನ ಅಂಗಡಿ, ಜಿನಸಿ ಅಂಗಡಿ, ಹೋಟಲ್ ಇತ್ಯಾದಿ ಇದ್ದೇ ಇರುತ್ತೆ ಅಲ್ವ. ಈ ಊರಲ್ಲೂ ಪುಟ್ಟ ಹೋಟಲ್ ಒಂದಿತ್ತು. ಬಹುಷಃ ಉಡುಪಿಯ ಯಾವುದೊ ಹಳ್ಳಿಯಿಂದ ಬಂದು ಈ ಊರಲ್ಲಿ ಹೋಟಲ್ ಮಾಡಿದ್ರು ಅನ್ಸುತ್ತೆ.

ಬೆಳಿಗ್ಗೆ ಬೆಳಿಗ್ಗೆ ಬಿಸಿ ಬಿಸಿ ಇಡ್ಲಿ, ವಡಾ, ನೀರ್ ದೋಸೆ, ಮಸಾಲೆ ದೋಸೆ ಎಲ್ಲವೂ ಸಿಗುತ್ತಿತ್ತು. ಹಾಗಾಗಿ ವ್ಯಾಪಾರವೂ ಚೆನ್ನಾಗೇ ಇತ್ತು.

ಆಲ್ ಇಸ್ ವೆಲ್!

ಅದ್ಯಾವುದೋ ನಡು ರಾತ್ರಿ ಪಕ್ಕದ ಕೇರಳದಿಂದ ಮಲಯಾಳಿಯೊಬ್ಬ ಆ ಊರಿಗೆ ಕಾಲಿಟ್ಟ. ಅವನದೂ ಹೊಟ್ಟೆ ಪಾಡು ನಡೆಯಬೇಕಲ್ಲ ಅವನಿಗೆ ಗೊತ್ತಿದ್ದಿದ್ದೇ ಹೋಟಲ್ ಬಿಸಿನೆಸ್. ಸಹಜವಾಗೇ ಅವನು ಆ ಊರಲ್ಲಿ ಹೋಟಲ್ ಶುರು ಮಾಡಿದ. ಅವನು ಬೆಳಿಗ್ಗೆ ಬಿಸಿ ಬಿಸಿ ಪುಟ್ಟು, ಆಪಂ ಇತ್ಯಾದಿ ಮಲಯಾಳಿ ತಿನಿಸುಗಳನ್ನು ಮಾಡತೊಡಗಿದ. ಕೆಲವು ವಾರಗಳು ವ್ಯಾಪಾರವೇ ಇರಲಿಲ್ಲ. ಎಲ್ಲರೂ ಉಡುಪಿ ಹೋಟಲ್ ಗೆ ಹೋಗುತ್ತಿದ್ದರಿಂದ ಇವನ ಹೋಟಲ್ ಗೆ ಯಾರೂ ಬರುತ್ತಿರಲಿಲ್ಲ. ಅದೂ ಅಲ್ಲದೇ ಮಲಯಾಳಿ ತಿನಿಸು ಬೇರೆ. ಹೇಗಿರುತ್ತೆ ಅನ್ನೋ ಕಲ್ಪನೆ ಕೂಡಾ ಅಲ್ಲಿನ ಜನರಿಗಿರಲಿಲ್ಲ! ಅದ್ಯಾವುದೋ ಘಳಿಗೆಯಲ್ಲಿ ಊರಿನ ಒಬ್ಬ, ಆ ಮಲಯಾಳಿ ಹೋಟಲ್ ಗೆ ಹೋಗಿ ತಿಂಡಿ ತಿಂದ. ತಿಂದವನಿಗೆ ಬಹಳ ಇಷ್ಟವಾಗಿ ಊರಿನ ಜನರಿಗೆಲ್ಲ ತಿಳಿಸಿದ. ಊರವರೆಲ್ಲಾ ಮಲಯಾಳಿ ಹೋಟಲ್ ಗೂ ಹೋಗತೊಡಗಿದರು.

ಉಡುಪಿ ಹೋಟಲ್ ನವನು ಕಂಗಾಲಾದ.ಚೆನ್ನಾಗೇ ನಡೆಯುತ್ತಿದ್ದ ಬದುಕಿನಲ್ಲಿ ಅಚಾಕ್ ಆಗಿ ತಿರುವೊಂದು ಬಂದಿತ್ತು.

ಕಂಗಾಲಾದವನೇ ಬೇರೆ ಬೇರೆ ಸಂಘ ಸಂಸ್ಥೆಗಳ ಮೊರೆ ಹೊಕ್ಕ. ನಮ್ಮದು ಮಲಯಾಳಿ ಸಂಸ್ಕೃತಿ ಅಲ್ಲ. ಪುಟ್ಟು ನಮಗೆ ಆಗಿ ಬರಲ್ಲ. ನಮ್ಮದೇನಿದ್ದರೂ ಇಡ್ಲಿ ವಡಾ ಸಂಸ್ಕೃತಿ. ಅದೂ ಅಲ್ಲದೆ ನನ್ನದು ಸೀಮಿತ ಮಾರುಕಟ್ಟೆ. ದಯವಿಟ್ಟು ಆ ಮಲಯಾಳಿ ಹೋಟಲ್ ನವನನ್ನು ಇಲ್ಲಿಂದ ಒದ್ದೋಡಿಸಿ ಅಂತ ಎಲ್ಲರಲ್ಲೂ ಮನವಿ ಮಾಡಿದ.

ಅವನ ಮನವಿಗೆ ಸ್ಪಂದಿಸಿದ ಸಂಘ ಸಂಸ್ಥೆಯವರು ಆ ಮಲಯಾಳಿಗೆ ನೋಟಿಸ್ ಕಳಿಸಿದರು. ನೋಟಿಸ್ ಗೆ ಹೆದರಿದ ಮಲಯಾಳಿ ಹೋಟಲ್ ಮುಚ್ಚಿದ.

ಮತ್ತೆ ಉಡುಪಿ ಹೋಟಲ್ ಬಿಸಿನೆಸ್ ಭರ್ಜರಿಯಾಗಿ ನಡೆಯತೊಡಗಿತು.

ಇಲ್ಲಿಗೆ ಕಥೆ ಮುಗಿಯಲಿಲ್ಲ! ಈಗ ಇಂಟರ್ವಲ್ ............

ಕಂಗಾಲಾದ ಮಲಯಾಳಿಗೆ ಏನು ಮಾಡುವುದೆಂದೇ ತೋಚಲಿಲ್ಲ. ಅದೇ ಊರಿನ ಬಾರ್ ಒಂದರಲ್ಲಿ ಝೀರೋ ವ್ಯಾಟ್ ನ ಬಲ್ಬ್ ನ ಕೆಳಗೆ ಕಿಂಗ್ ಫಿಷರ್ ಬೀರ್ ಹೀರುವಾಗ ಅವನಿಗೆ ಏನೋ ಹೊಳೆಯಿತು. ಥಟ್ಟನೆ ಅದೇ ರಾತ್ರಿ ಬಸ್ ಹಿಡಿದು ಉಡುಪಿಗೆ ಹೋಗಿ ಅಡುಗೆ ಭಟ್ಟರೊಬ್ಬರನ್ನು ಹುಡುಕಿ ತನ್ನೊಂದಿಗೆ ಕರೆ ತಂದ.

ಮಾರನೇ ದಿನದಿಂದ ಮಲಯಾಳಿ ಹೋಟಲ್ ಮತ್ತೆ ಶುರು! ಉಡುಪಿಯ ಅಡುಗೆ ಭಟ್ಟರು ಇಡ್ಲಿ, ವಡಾ, ನೀರ್ ದೋಸೆ, ಮಸಾಲೆ ದೊಸೆ ಮಾಡಿದ್ರೆ ಮಲಯಾಳಿ ತಾನೇ ಸ್ವಥ ಪುಟ್ಟು, ಆಪಂ ಥರದ ಮಲಯಾಳಿ ತಿನಿಸು ಮಾಡತೊಡಗಿದ.

ಜನರ ಬಳಿ ಈಗ ಹೆಚ್ಚಿನ ಆಯ್ಕೆ ಇತ್ತು. ಮಲಯಾಳಿ ಹೋಟಲ್ ಗೆ ಹೋದರೆ ಎಲ್ಲವೂ ಸಿಗುತ್ತಿದ್ದರಿಂದ ಎಲ್ಲರೂ ಅಲ್ಲಿಗೇ ಹೋಗತೊಡಗಿದರು.

ಓಕೆ. ಈಗ ಕಥೆ ಮುಗಿಯಿತು. ತಾವಿನ್ನು ಹೊರಡಬಹುದು.

ಕಥೆಯ ನೀತಿ?

ಇದು ಈಸೋಪನ ಅಥವ ಪಂಚತಂತ್ರದ ಕಥೆಯಲ್ಲ ನೀತಿ ಇರಲು! ಇದು ಬಿಸಿನೆಸ್!

Thursday, December 8, 2011

ಮೂಢನಂಬಿಕೆ

ಟಿ.ವಿ ಕಾರ್ಯಕ್ರಮ................

ಬನ್ನಿ ವೀಕ್ಷಕರೆ ಈಗ ನಾವು ಮೂಢನಂಬಿಕೆಯ ಬಗ್ಗೆ ಚರ್ಚೆ ನಡೆಸೋಣ. ಯಾಕೆ ಜನ ಇನ್ನೂ ಈ ಮೂಢನಂಬಿಕೆಯನ್ನು ಮುಂದುವರೆಸುತ್ತಿದ್ದಾರೆ ಅನ್ನೋ ಚರ್ಚೆ ನಡೆಸೋಣ.

....................ಚರ್ಚೆ........ಚರ್ಚೆ............ಚರ್ಚೆ....................

ವೀಕ್ಷಕರೆ ಒಂದು ಚಿಕ್ಕ ಬ್ರೇಕ್ ನ ನಂತರ ಚರ್ಚೆ ಮುಂದುವರೆಸೋಣ.............................

....ಜಾಹೀರಾತು.....

ಸಮಸ್ಯೆಯಿಂದ ಬಳಲುತ್ತೀದ್ದೀರಾ ಕೊಳ್ಳಿರಿ ಅದೃಷ್ಟದ ಹರಳುಗಳು. ನಿಮ್ಮ ಯಾವುದೇ ಸಮಸ್ಯೆಗೆ ಇಲ್ಲಿದೆ ಪರಿಹಾರ. ಅದೃಷ್ಟದ ಹರಳುಗಳು.

ವೀಕ್ಷಕರೇ ಬ್ರೇಕ್ ನ ನಂತರ ಮತ್ತೆ ಸ್ವಾಗತ............................................


....................ಚರ್ಚೆ........ಚರ್ಚೆ............ಚರ್ಚೆ....................


ವೀಕ್ಷಕರೆ ಒಂದು ಚಿಕ್ಕ ಬ್ರೇಕ್ ನ ನಂತರ ಚರ್ಚೆ ಮುಂದುವರೆಸೋಣ.............................


....ಜಾಹೀರಾತು.....


ಸ್ತ್ರೀ ಪ್ರೇಮ, ಪುರುಷ ಪ್ರೇಮ ವಶೀಕರಣ. ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನಮ್ಮಲ್ಲಿದೆ ಪರಿಹಾರ. ಒಮ್ಮೆ ಭೇಟಿ ಕೊಡಿ.


ವೀಕ್ಷಕರೇ ಬ್ರೇಕ್ ನ ನಂತರ ಮತ್ತೆ ಸ್ವಾಗತ............................................

....................ಚರ್ಚೆ........ಚರ್ಚೆ............ಚರ್ಚೆ....................

ವೀಕ್ಷಕರೆ ಒಂದು ಚಿಕ್ಕ ಬ್ರೇಕ್ ನ ನಂತರ ಚರ್ಚೆ ಮುಂದುವರೆಸೋಣ.............................


....ಜಾಹೀರಾತು.....

ಇಲ್ಲಿದೆ ಒಂದು ವಿಚಿತ್ರ ಬಾವಿ. ಆ ಬಾವಿಯ ನೀರಿನಲ್ಲಿ ಸ್ನಾನ ಮಾಡಿದರೆ ಚರ್ಮ ರೋಗಗಳು ವಾಸಿ ಆಗ್ತಾವೆ. ಇಂಥ ವಿಸ್ಮಯ ನಡೆಯೋದಾದರೂ ಎಲ್ಲಿ. ವೀಕ್ಷಿಸಿ 'ರಹಸ್ಯ ಲೋಕದಲ್ಲಿ' ಇಂದು ರಾತ್ರಿ ೧೨.೦೦ ಘಂಟೆಗೆ.

ವೀಕ್ಷಕರೇ ಬ್ರೇಕ್ ನ ನಂತರ ಮತ್ತೆ ಸ್ವಾಗತ...........................................

....................ಚರ್ಚೆ........ಚರ್ಚೆ............ಚರ್ಚೆ....................


....................ಚರ್ಚೆ........ಚರ್ಚೆ............ಚರ್ಚೆ....................

ಚರ್ಚೆಯಲ್ಲಿ ಭಾಗವಹಿಸಿದ ತಮಗಲ್ಲರಿಗೂ ಧನ್ಯವಾದಗಳು.

ನೋಡಿದ್ರಲ್ಲ ವೀಕ್ಷಕರೇ 21 ನೇ ಶತಮಾನದಲ್ಲೂ ಎಂತೆಂಥ ಮೂಢನಂಬಿಕೆಗಳು ಉಳಿದುಕೊಂಡಿವೆ ಅಂತ! ಇಂಥ ಮೂಢನಂಬಿಕೆಗಳನ್ನು ಒದ್ದು ಓಡಿಸುವ ಕೆಲಸ 'ನಿಮ್ಮಿಂದ' ಆಗಬೇಕಾಗಿದೆ. ಮತ್ತೆ ನಾಳೆ ಬೆಳಿಗ್ಗೆ ಭೇಟಿ ಆಗೋಣ ಬೆಳಿಗ್ಗೆ ೭ ಘಂಟೆಗೆ 'ಬೃಹತ್ ಗ್ಯಾಲಕ್ಸಿ' ಕಾರ್ಯಕ್ರಮದಲ್ಲಿ.

ನಮಸ್ಕಾರ!

Tuesday, November 22, 2011

ನುಂಗಲಾಗುವ ಟ್ಯಾಬ್ಲೆಟ್ !!!

ಶ್ರೀನಿಧಿಯವರು 'ನುಂಗಲಾರದ ಟ್ಯಾಬ್ಲೆಟ್ ತಿನ್ನಲಾಗದ ಬಿಸ್ಕತ್ತು ..' ಅಂತ ಪುಸ್ತಕ ಬರೆದಿದ್ದಾರೆ.

ಆದರೆ ಗೂಗಲ್ translation ಕೃಪೆಯಿಂದಾಗಿ 'ನುಂಗಬಹುದಾದ ಟ್ಯಾಬ್ಲೆಟ್ ಗಳು' ಬಂದಿವೆ!ಅಂದ ಹಾಗೆ ಗೂಗಲ್ ನ ಕನ್ನಡ-ಇಂಗ್ಲಿಷ್, ಇಂಗ್ಲಿಷ್-ಕನ್ನಡ ಅನುವಾದ ನೋಡಿಲ್ಲವಾದರೆ ಒಂದು ಕೈ ನೋಡಿ ಬಿಡಿ.
http://translate.google.co.in/

ಅನುವಾದ ಅಷ್ಟೊಂದು ಸಮರ್ಪಕವಾಗಿಲ್ಲದಿದ್ದರೂ ಗೂಗಲ್ ನ ಈ ಪ್ರಯತ್ನ ಅಭಿನಂದನಾರ್ಹ.

ನಾವು ಕೂಡಾ ಅನುವಾದವನ್ನು ಉತ್ತಮಪಡಿಸಲು ಸಹಕರಿಸಬಹುದು.

Thursday, October 20, 2011

ಹಳೆಗನ್ನಡ, ಹೊಸಗನ್ನಡ, ಸುಲಭ ಕನ್ನಡ, ಕಷ್ಟ ಕನ್ನಡ!

ತುಂಬಾ ತಿಳಿದಿರುವವರು, ತುಂಬಾ ಓದಿರೋರು, ಪಂಡಿತರು, ಭಾಷಾ ತಜ್ಞರು ಸೇರಿ ಒಂದು ಒಳ್ಳೆಯ ನಿರ್ಧಾರಕ್ಕೆ ಬಂದಿದ್ದಾರಂತೆ! ಅದೇನೆಂದರೆ ಕನ್ನಡ ಭಾಷೆಯ ಅಕ್ಷರಗಳನ್ನು ಸರಳೀಕರಣಗೊಳ್ಳಿಸೊದು. ಕನ್ನಡಕ್ಕೆ 'ಹೆಚ್ಚಾದ' ಅಕ್ಷರಗಳನ್ನು ಎತ್ತಿ ಕಸದ ಬುಟ್ಟಿಗೆ ಬಿಸಾಕಿ, ಕಷ್ಟದ ಅಕ್ಷರಗಳನ್ನು, ಒತ್ತಕ್ಷರಗಳನ್ನು ಎರಡೂ ಬದಿಯಿಂದ ಬಡಿದು ಸರಳಗೊಳಿಸೋದು ಅವರ ಉದ್ದೇಶ. ಅವರ ಪ್ರಯತ್ನ ಸಫಲವಾಗಲಿ ಅನ್ನೊದು ಹಾರೈಕೆ.

ಹಾಗೆಯೆ ಇನ್ನೂ ಕೆಲವು ವಿಷಯಗಳನ್ನು ಸರಳೀಕರಣಗೊಳಿಸಿದರೆ ಶ್ರೀ ಸಾಮಾನ್ಯರಿಗೆ ತುಂಬಾ ಉಪಕಾರವಾಗುತ್ತಿತ್ತು.

ಈ ಐಟಿ,ಬಿಟಿಯಿಂದಾಗಿ ಪಾಪ ಕೆಲಸಕ್ಕೆ ಹೋಗೋ ಹೆಣ್ಣು ಮಕ್ಕಳಿಗೆ ಅಡುಗೆ ಮಾಡೋದೇ ಒಂದು ದೊಡ್ಡ ತಲೆ ನೋವಾಗಿಬಿಟ್ಟಿದೆ. ಆದ್ದರಿಂದ ಸ್ವಲ್ಪ ಬಲ್ಲ ಹೆಂಗಸರೆಲ್ಲಾ ಸೇರಿ ಅಡುಗೆಯ ಕೆಲಸವನ್ನು ಸರಳೀಕರಣಗೊಳಿಸಿದ್ದಲ್ಲಿ ತುಂಬಾ ಸಹಾಯವಾಗುತ್ತಿತ್ತು!

ಈ ಚಿಕನ್ ಬಿರಿಯಾನಿ ಮಾಡೋದು ಹೇಗೆ ಅಂತ ಏನಾದರು ಹುಡುಕಿದ್ರೆ ಮಾರುದ್ದ ಪಟ್ಟಿ ಸಿಗುತ್ತೆ. ಬಲ್ಲವರೆಲ್ಲಾ ಸೇರಿ ಈ ಚಿಕನ್ ಬಿರಿಯಾನಿಯನ್ನು ಸರಳೀಕರಣಗೊಳಿಸಿದ್ರೆ ಚೆನ್ನಾಗಿರ್ತಿತ್ತು. ಬರೀ ಅನ್ನಕ್ಕೆ ಒಂದೆರಡು ಚಿಕನ್ ಪೀಸ್ ಒಗೆದು ಒಂದಿಷ್ಟು ಖಾರದ ಪುಡಿ ಎರಚಿದರೆ ಚಿಕನ್ ಬಿರಿಯಾನಿ ಸಿದ್ಧ ಆಗೋ ಥರ ಯಾರಾದ್ರೂ ಮಾರ್ಪಾಡು ಮಾಡಿದ್ರೆ ತುಂಬಾ ಖುಷಿ ಆಗ್ತಿತ್ತು. ನಿಂದೊಳ್ಳೆ ಕಥೆ ಆಯ್ತು ಮಾರಾಯ ನಿನಗೆ ಬೇಕಿದ್ರೆ ಹಾಗೇ ಮಾಡಿ ತಿನ್ನು ಅಂತ ಬಯ್ಯಬೇಡಿ. ಎಲ್ಲದಕ್ಕೂ ನೀತಿ, ನಿಯಮಗಳಿರುತ್ತವೆ. ಹಾಗಾಗಿ ಆ ನೀತಿ ನಿಯಮಗಳನ್ನು ಸರಳಗೊಳಿಸಿದ್ರೇನೇ ಚೆನ್ನ!

ಎರಡನೆಯದಾಗಿ ಈ ಪರೀಕ್ಷಾ ವಿಧಾನ ಸರಳೀಕರಣ ಆಗ್ಬೇಕು. ಈ ಸಂಧಿ, ಸಮಾಸ, ಛಂದಸ್ಸು, ಎಲ್ಲವನ್ನೂ ಎತ್ತಿ ಒಗೆದು ಒಂದೇ ಒಂದು ಪ್ರಶ್ನೆ ಇರಬೇಕು ಪರೀಕ್ಷೆಗೆ.

ಅದೇನೆಂದರೆ " ನಿಮಗೆನು ಗೊತ್ತು ಬರೀರಪ್ಪ ... " ಮಾರ್ಕ್ಸ್ :೧೦೦

ಕನ್ನಡ ಸರಳೀಕರಣಗೊಂಡ ಮೇಲೆ ಇನ್ನು ನಾಲ್ಕು ಕನ್ನಡಗಳಿರುತ್ತವೆ!

ಹಳೆಗನ್ನಡ, ಹೊಸಗನ್ನಡ, ಸುಲಭ ಕನ್ನಡ ಮತ್ತು ಕಷ್ಟ ಕನ್ನಡ! (ಮಂಗಳೂರು ಕನ್ನಡ ಸಿನೆಮಾದಲ್ಲಿ ಮಾತ್ರ! ಬೆಂಗಳೂರು ಕನ್ನಡ ಬೆಂಗಳೂರಲ್ಲಿ ಮಾತ್ರ!)

ಇನು ಕನದ ಸರಲಿಕರನಗೊಲಿಸಿದರೆ ನನಗೆ ಲೆಕನ ಬರೆಯುದು ಇನು ಸುಲಬ. ನಿಮಗೆ ಒದುದು ಕಶತ ಆದರೆ ಮತರ ನನಗೆ ಬಯಬೆದಿ!!!

Saturday, October 1, 2011

ಕನ್ನಡಪ್ರಭವನ್ನು ತಲೆನೋವಿಲ್ಲದೆ ಓದುವುದು ಹೇಗೆ?

ಕನ್ನಡವಪ್ರಭವನ್ನು ತಲೆ ನೋವಿಲ್ಲದೆ ಓದುವುದು ಹೇಗೆ ಅಂತ ಶೀರ್ಷಿಕೆ ನೋಡಿ ಕನ್ನಡಪ್ರಭವನ್ನು ಓದಿದರೆ ತಲೆನೋವು ಬರುತ್ತೋ ಅನ್ನೋ ಸಂಶಯ ಬಂದಿದ್ದಲ್ಲಿ ದಯವಿಟ್ಟು ಕ್ಷಮಿಸಿ!

ನಾನು ಹೇಳಿರುವುದು ಕನ್ನಡಪ್ರಭ ಆನ್ ಲೈನ್ ಆವೃತ್ತಿಯ ಬಗ್ಗೆ. ಕನ್ನಡಪ್ರಭದ ಆನ್ ಲೈನ್ ಆವೃತ್ತಿ ಓದಬೇಕಾದರೆ ನೀವು ರಿಜಿಸ್ಟರ್ ಆಗೋದು,ಲಾಗಿನ್ ಆಗೋದು ಇಂಥ ರಗಳೆಗಳಿರುತ್ತವೆ. ಅದಕ್ಕೆ ಚಿಕ್ಕ ಉಪಾಯ ಇದೆ!

ಮೊದಲು ನೀವು ಈ ವೆಬ್ ವಿಳಾಸ ನೆನಪಿಟ್ಟುಕೊಳ್ಳಬೇಕು :

http://www.kannadaprabha.com/pdf/

ಈಗ ನಿಮಗೆ ಯಾವ ದಿನದ ಪೇಪರ್ ಬೇಕು ? ಮತ್ತೆ ಯಾವ ಪುಟ ಬೇಕು ಅಂತ ಡಿಸೈಡ್ ಮಾಡಿದರೆ ಸಾಕು.

ಉದಾ: 22/07/2010 ಪುಟ 6

http://www.kannadaprabha.com/pdf/2272010/6.pdf ಇಲ್ಲಿ 2272010 ಗಮನಿಸಿ! ತಿಂಗಳು 07 ಅನ್ನು ಬರೀ 7 ಅಂತ ಹಾಕಬೇಕು.

ನಾಳೆಯ ದಿನಾಂಕವನ್ನು ಇವತ್ತೇ ಹಾಕಿ ನೋಡಬೇಡಿ. ಕನ್ನಡಪ್ರಭದವರು ಜ್ಯೋತಿಷಿಗಳಲ್ಲ!!!