Thursday, February 5, 2009
ಯಾವುದು ತಪ್ಪು - ಯಾವುದು ಸರಿ ?
ದೇವಸ್ಥಾನದಲ್ಲಿ ಗೋಪಾಲ ಭಟ್ರು ತಮ್ಮ ಹಾರ್ಮೋನಿಯಂ ಅನ್ನು ನುಡಿಸುತ್ತಾ ’ತಲೆಯ ಮೆಟ್ಟಿ ಕುಣಿದಾನೋ ಕೃಷ್ಣ’ ಅಂತ ತಾರಕದಲ್ಲಿ ಹಾಡ್ತಾ ಇದ್ರೆ ಸಾಕ್ಷಾತ್ ಶ್ರೀ ಕೃಷ್ಣನೇ ಧರೆಗಿಳಿದು ಬರುತ್ತಾನೇನೋ ಅನ್ನೋ ಅನುಭವ!ಬಪ್ಪನಾಡಿನ ರಥೋತ್ಸವದಲ್ಲಿ ಹತ್ತು ರೂಪಾಯಿಯ ಚಕೋಬಾರ್ ಗೆ ಅಂಟಿಕೊಂಡಿರುವ ಕಾಗದದ ಕವರ್ ಕಿತ್ತು ಹಾಗೇ ತಿನ್ತಾ ಇದ್ರೆ ಸ್ವರ್ಗ ಸುಖ!
ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗ ನಡೀತಾ ಇರ್ಬೇಕಾದ್ರೆ ರಾಕ್ಷಸ ಬರುವಾಗ ಸಿಡಿಸುವ ಸಿಡಿಮದ್ದಿನ ಸದ್ದಿಗೆ ಚೆಲ್ಲಾಪಿಲ್ಲಿಯಾಗಿ ಓಡೋದು ಒಂದು ಸುಖ !ಮನೆಯವರ,ಊರವರ ಕಣ್ಣು ತಪ್ಪಿಸಿ ಪ್ರಶಾಂತ್ ಥಿಯೇಟರ್ ನಲ್ಲಿ ಶಕೀಲಾಳ ’ಕಿನ್ನಾರ ತುಂಬಿಗಳ್’ ಸಿನೆಮಾಗಿ ಹೋಗಿ ಸಿಕ್ಕಿ ಬೀಳೋದು ಒಂದು ಮಜಾನೇ(ಆಗ ಸಜೆಯಾಗಿದ್ರೂ ಈಗ ಮಜಾ!)
ಅಯ್ಯೋ ’ಆಟೋಗ್ರಾಫ್’ ಚಿತ್ರದ ಸವಿಸವಿ ನೆನಪು ಹಾಡು ನೆನಪಾಗ್ತಾ ಇಲ್ಲ ನನಗೆ!
ಇಂಗ್ಲೀಶ್ ನಲ್ಲಿ ಒಂದು ಮಾತಿದೆ .ಅದು ಯಾವತ್ತೂ ನನಗೆ ಪದೇ ಪದೇ ನೆನಪಿಗೆ ಬರ್ತಾ ಇರುತ್ತೆ .
" Don't think that someone is UNHAPPY just because he/she is not living his/her life ,the way you wanted to live your life !"
ಅರ್ಥ ಇಷ್ಟೇ - " ನೀವು ನಿಮ್ಮ ಬದುಕನ್ನು ಯಾವ ರೀತಿ ಬದುಕಬೇಕು ಅಂದುಕೊಂಡಿದ್ದೀರೊ ಅದೇ ರೀತಿ ಬೇರೊಬ್ಬರು ಬದುಕದಿದ್ರೆ ಅವರು ಸಂತೋಷವಾಗಿಲ್ಲ ಅಂದುಕೊಳ್ಳಬೇಡಿ !" -ಎಷ್ಟು ಸತ್ಯ ಅಲ್ವಾ?
ನಮಗೆ ಜಗಜೀತ್ ಸಿಂಗ್ ಹಾಡು ಅಂದ್ರೆ ಪಂಚಪ್ರಾಣ ಆದ್ರೆ ಸ್ನೇಹಿತೆಗೆ ಅವನಾಗಲ್ಲ .”ಅಯ್ಯೋ ಜಗಜೀತ್ ಸಿಂಗ್ ಹಾಡು ನಿನಗೆ ಇಷ್ಟ ಆಗಲ್ವ ! ಥೂ ನಿನ್ ಟೇಸ್ಟೇ ಸರಿ " ಇಲ್ಲ ಅಂತೀವಿ.
ಅದೇ ಸ್ನೇಹಿತೆಗೆ ಬ್ರ್ಯಾನ್ ಆಡಮ್ಸ್ ಹಾಡು ತುಂಬಾ ಇಷ್ಟ .ಅವಳೂ "ಬ್ರಯಾನ್ ಆಡಮ್ಸ್ ಅಂದ್ರೆ ಯಾರು ಅಂತ ನಿಂಗೆ ಗೊತ್ತಿಲ್ವ ! ನೀನೂ ವೇಸ್ಟ್ ಕಣೋ " ಅಂತಾಳೆ ! ಈಗ ನಡೀತಾ ಇರೋ ’ಭಾರತೀಯ ಸಂಸ್ಕೃತಿ’ ಯ ಬಗ್ಗೆ ವಿವಾದ/ಚರ್ಚೆ ನೋಡಿದ್ರೆ ತುಂಬಾನೇ ಬೇಜಾರಾಗುತ್ತೆ.ಭಾರತೀಯ ಸಂಸ್ಕೃತಿ ಶ್ರೇಷ್ಠ ಅನ್ನೋದನ್ನು ನಿರೂಪಿಸಲು ನಾವು ಸದಾ ಪಾಶ್ಚಾತ್ಯ ಸಂಸ್ಕೃತಿಯ ಬಗ್ಗೆ ತುಂಬ ಕೇವಲವಾಗಿ ಮಾತಾಡ್ತಾ ಇರ್ತೀವಿ.ಜಗತ್ತಿನಲ್ಲಿರೋ ಎಲ್ಲಾ ಧರ್ಮಗಳೂ ಶ್ರೇಷ್ಠ.ಎಲ್ಲದಕ್ಕೂ ಅದರದೇ ಆದ ಸೊಬಗಿದೆ ,ಅದರದೇ ಆದ ದೌರ್ಬಲ್ಯಗಳಿವೆ.
ನಮಗೆ ಪಾಶ್ಚಾತ್ಯ ಸಂಸ್ಕೃತಿ ಬೇಡ ಅಂತೀವಿ ,ಆದ್ರೆ ಪಾಶ್ಚಾತ್ಯರು ಕಂಡು ಹುಡುಕಿದ ಆಧುನಿಕ ಸೌಲಭ್ಯಗಳೆಲ್ಲಾ ಬೇಕು .ಯಾಕೆ ಅಂತ ಕೇಳಿದ್ರೆ ’ಚೆನ್ನಾಗಿರೋದೆಲ್ಲ ಇರ್ಲಿ ಕಣ್ರಿ ಕೆಟ್ಟದಾಗಿರೋದು ಬೇಡ ’ ಅಂತಾರೆ!
ಅಷ್ಟಕ್ಕೂ ಯಾವುದು ಒಳ್ಳೆಯದು ,ಯಾವುದು ಕೆಟ್ಟದು ಅಂತ ಯಾರಿಗೂ ಗೊತ್ತಿಲ್ಲ!
ಮೊಬೈಲ್ ವಿಕಿರಣಗಳಿಂದ ನಪುಂಸಕತೆ ಉಂಟಾಗುತ್ತೆ ಅಂತ ವಿಜ್ಞಾನ ಹೇಳುತ್ತೆ ಆದ್ರೆ ಅದು ಕೆಟ್ಟದು ಅಂತ ನಮಗೆ ಯಾವತ್ತೂ ಅನಿಸಿಲ್ಲ.ಒಂದು ಸಿಗರೇಟ್ ಎಳೆಯೋದ್ರಿಂದ ಆರೋಗ್ಯ ಹಾಳಾಗುತ್ತೆ ಅಂತ ತಕರಾರು ಆದ್ರೆ ಎರಡೇ ಎರಡು ನಿಮಿಷ ಕೆ .ಆರ್ ಸರ್ಕಲ್ ನಲ್ಲಿ ನಿಂತ್ರೆ ಸಿಗರೇಟ್ ಗಿಂತ ಜಾಸ್ತಿ ಹೊಗೆ ನಮ್ಮ ಶ್ವಾಸಕೋಶ ಸೇರಿರುತ್ತೆ . ಯಾವುದು ಕೆಟ್ಟದು ,ಯಾವುದು ಒಳ್ಳೇದು?
ನಮಗೆ ಗಿರೀಶ್ ಕಾಸರವಳ್ಳಿಯ ’ಗುಲಾಬಿ ಟಾಕೀಸ್’ ಅತೀವ ಆನಂದ ನೀಡುತ್ತೆ.ಅದೇ ಬೆಳಗ್ಗೆಯಿಂದ ಸಾಯಂಕಾಲದವರೆಗೆ ಅವರಿವರ ಬೈಗುಳವನ್ನೇ ತಿನ್ನುತ್ತಿದ ಕೆ ಆರ್ ಮಾರ್ಕೆಟ್ ನ ಕೂಲಿಯೊಬ್ಬನಿಗೆ ದರ್ಶನ್ ನ ಮಚ್ಚು ಲಾಂಗ್ ನ ಸಿನೆಮಾ ಇಷ್ಟ ಆಗುತ್ತೆ.ಒಬ್ಬನಿಗೆ ಶಿವಮೊಗ್ಗ ಸುಬ್ಬಣ್ಣ ’ಅನಂದಮಯ ಈ ಜಗ ಹೃದಯ’ ಹಾಡು ಕೇಳ್ತಾ ಇದ್ರೆ ಸಕ್ಕರೆ-ಹಾಲು ಕುಡಿದ ಹಾಗಿರುತ್ತೆ .ಅದೇ ಇನ್ನೊಬ್ಬನಿಗೆ ’ಸೊಂಟದ ವಿಷ್ಯ ಬ್ಯಾಡವೋ ಸಿಸ್ಯ’ ಕೇಳಿಲ್ಲ ಅಂದ್ರೆ ನಿದ್ದೇನೇ ಬರಲ್ಲ! ಯಾವುದು ಕೆಟ್ಟದು ,ಯಾವುದು ಒಳ್ಳೆಯದು?
ಒಬ್ಬರಿಗೆ ಪಬ್ಬಿಗೆ ಹೋಗಿ ಕಂಠಪೂರ್ತಿ ಕುಡಿದಿಲ್ಲ ಅಂದ್ರೆ ತಿಂದಿದ್ದು ಕರಗಲ್ಲ.ಅದೇ ಇನ್ನೊಬ್ಬನಿಗೆ ಇಸ್ಕಾನ್ ಗೆ ಹೋಗಿ ಉದ್ಧಂಡ ನಮಸ್ಕಾರ ಹಾಕಿದ್ರೇನೆ ದಿನದ ಆರಂಭ .ಅವನ ಪ್ರಕಾರ ಪಬ್ಬಿಗೆ ಹೋಗಿ ಮಜಾ ಮಾಡೋದೇ ’ಬದುಕು’ .ಇವನಿಗೆ ಇಸ್ಕಾನ್ ಗೆ ಹೋಗಿ ದೇವರ ಧ್ಯಾನ ಮಾಡುವುದೇ ಬದುಕು.
ಅವನು ಇವನಾಗೋದು ಸಾಧ್ಯ ಇಲ್ಲ .ಇವನು ಅವನಾಗೋದೂ ಕಷ್ಟ!
ಮೊನ್ನೆ ಕ್ರಿಕೆಟ್ ನೋಡ್ತಾ ಇರ್ನೇಕಾದ್ರೆ ಒಬ್ಬ ಬ್ಯಾಟಿಂಗ್ ಮಾಡ್ತಾ ಇದ್ದ.ನನಗೆ ಕ್ರಿಕೆಟ್ ಬಗ್ಗೆ ಅಷ್ಟು ಆಸಕ್ತಿ ಇಲ್ಲ ಆದ್ರೂ ನೋಡ್ತಾ ಇದ್ದೆ.ಬ್ಯಾಟ್ಸ್ ಮ್ಯಾನ್ ಚೆನ್ನಾಗಿ ಆಡ್ತಾಇರೋದ್ರಿಂದ ಯಾರು ಅನ್ನೋ ಕುತೂಹಲದಿಂದ ಗೆಳೆಯನ ಬಳಿ ಕೇಳಿದೆ .ಅವನು " ಥೂ ಅವ್ನು ಗೌತಮ್ ಗಂಭೀರ್ ಕಣೋ ಅಷ್ಟೂ ಗೊತ್ತಿಲ್ವಾ ವೇಸ್ಟ್ ನೀನು " ಅಂದ !
ನಾನು " ನಿಂಗೆ ಸ್ಟೀಫನ್ ಹಾಕಿಂಗ್ ಗೊತ್ತಾ ? " ಅಂದೆ .
"ಇಲ್ಲ " ಅಂದ !
"ಹೋಗ್ಲಿ ವಿನೋದ್ ಧಾಮ್ ಗೊತ್ತಾ ? ಸಭೀರ್ ಭಾಟಿಯಾ ಗೊತ್ತಾ? ಜಯಂತ್ ನಾರ್ಲಿಕರ್ ಗೊತ್ತಾ? " ಅಂದೆ .
"ಥೂ ಯಾರೋ ಅವರೆಲ್ಲ " ಅಂದ ಗೆಳೆಯ .
"ಅವರೆಲ್ಲಾ ಪ್ರಖ್ಯಾತರೇ ನಿನಗೆ ಗೊತ್ತಿಲ್ಲ ಅಷ್ಟೇ .ಆದ್ರೆ ನೀನು ವೇಸ್ಟ್ ಅಲ್ಲ ಯಾಕಂದ್ರೆ ನಿಂಗೆ ಗೌತಮ್ ಗಂಭೀರ್ ಗೊತ್ತಲ್ವಾ ! " ಅಂದೆ ಗೆಳೆಯ ಗಪ್ ಚುಪ್ !
ಟೀವಿ ಭಾರತೀಯ ಸಂಸ್ಕೃತಿ ಅಲ್ಲ ,ಮೊಬೈಲ್ ಭಾರತೀಯ ಸಂಸ್ಕೃತಿ ಅಲ್ಲ,ವಿಡೀಯೋ ಕ್ಯಾಮೆರಾ ಭಾರತೀಯ ಸಂಸ್ಕೃತಿ ಅಲ್ಲ, MP3 ಭಾರತೀಯ ಸಂಸ್ಕೃತಿ ಅಲ್ಲ ಆದರೂ ಇವು ನಮಗೆ ಬೇಕು . ಆದ್ರೆ ವ್ಯಾಲಂಟೈನ್ಸ್ ಡೇ ಮಾತ್ರ ಬೇಡ!
ಇಷ್ಟು ದಿನ ವ್ಯಾಲೆಂಟೈನ್ಸ್ ಡೇ ಗೆ ಯಾರಿಗೂ ಪ್ರಪೋಸ್ ಮಾಡೋ ಅವಕಾಶ ಸಿಕ್ಕಿರ್ಲಿಲ್ಲ.
ಈ ಸಲವಾದ್ರೂ ಮಾಡೋಣ ಅಂದ್ರೆ ............................ಛೇ !
.
.
.
ಶ್ರೀ ರಾಮ ಸೇನೆಯ ಭಯ ಅಲ್ಲ ಕಣ್ರಿ ಹುಡುಗೀನೆ ಸಿಕ್ಕಿಲ್ಲ ಪ್ರಪೋಸ್ ಮಾಡೋದಿಕ್ಕೆ :(
Photo Courtesy : http://www.allposters.com/
Subscribe to:
Post Comments (Atom)
23 comments:
>>ಗೌತಮ್ ಗಂಭೀರ್ ಕಣೋ ಅಷ್ಟೂ ಗೊತ್ತಿಲ್ವಾ ವೇಸ್ಟ್ >>ನೀನು " ಅಂದ ! ನಾನು " ನಿಂಗೆ ಸ್ಟೀಫನ್ ಹಾಕಿಂಗ್ >>ಗೊತ್ತಾ ? " ಅಂದೆ . "ಇಲ್ಲ " ಅಂದ !
>>"ಹೋಗ್ಲಿ ವಿನೋದ್ ಧಾಮ್ ಗೊತ್ತಾ ? ಸಭೀರ್
>>ಭಾಟಿಯಾ ಗೊತ್ತಾ? ಜಯಂತ್ ನಾರ್ಲಿಕರ್ ಗೊತ್ತಾ? " ಅಂದೆ .
ಹ್ಹ ಹ್ಹ :) ಚೆನ್ನಾಗಿದೆ ಸಂದೀಪ್ ಅವರೆ.
ಅಂದ್ಹಾಗೆ, ನನಗೂ ಗೌತಮ್ ಗಂಭೀರ್ ಯಾರು ಅಂತ ಗೊತ್ತಿಲ್ಲ, ಮತ್ತೆ ಮಿಕ್ಕುಳಿದವರು ಗೊತ್ತು..
ಕ್ಲೈಮಾಕ್ಸ್ ನಲ್ಲಿ ಕಹಾನಿ ಮೆ ಭಯ೦ಕರ ಟ್ವಿಸ್ಟ್ ಆಯಿತು :D
ಟಿವಿ, ಮೊಬೈಲು, ವಿಡಿಯೋ ಕ್ಯಾಮೆರಾ, MP3 ಇದಕ್ಕೂ ಸಂಸ್ಕೃತಿಗೂ ಯಾವ ಸಂಬಂಧಾನ್ರೀ ಕಾಮತ್ರೆ!! ಹಿಂದಿನ ವರ್ಷ ಒಬ್ಬರು ಇದೇ ರೀತಿ ವಾದ ಮಾಡ್ತಾ ಇದ್ದಿದ್ದು ನೆನಪಾಯ್ತು. ಕಂಪ್ಯೂಟರ ನಲ್ಲಿ ಕೆಲ್ಸ ಮಾಡೋದು ನಮ್ಮ ಸಂಸ್ಕೃತಿನಾ ಅಂತ. ಏನ್ ಭಾರತೀಯ ಸಂಸ್ಕೃತಿ ಅಂದ್ರೆ ದೇವರ ಪೂಜೆ ಮಾಡ್ಕೊಂಡು, ಊಟ ಮಾಡ್ಕೊಂಡು ಮಾತ್ರ ಇರದು ಅಂತನಾ ನಿಮ್ ಭಾವನೆ ಹಾಗಿದ್ರೆ?!!ಯಾವುದ್ಯಾವ್ದಕ್ಕೋ ಲಿಂಕ್ ಕೊಟ್ಟಿದಿರ ಸುಮ್ನೆ. ಹಾಗಂತ ಸಂಸ್ಕೃತಿ ಅಂದ್ರೆ ಏನು ಅಂತ ನಂಗೆ ಕೇಳ್ಬೇಡಿ ಮತ್ತೆ. :)
ಆದ್ರು..ನೀವು ನಿಮ್ಮ ಬದುಕನ್ನು ಯಾವ ರೀತಿ ಬದುಕಬೇಕು ಅಂದುಕೊಂಡಿದ್ದೀರೊ ಅದೇ ರೀತಿ ಬೇರೊಬ್ಬರು ಬದುಕದಿದ್ರೆ ಅವರು ಸಂತೋಷವಾಗಿಲ್ಲ ಅಂದುಕೊಳ್ಳಬೇಡಿ ! ಅನ್ನೋದು ನಿಜ .
ಪ್ರಮೋದ್, ಹಂಸಾನಂದಿ :)
ಪ್ರಿಯ ವಿಕಾಸ್,
ಬರೆದಿರೋದರಲ್ಲಿ ಒಂದಕ್ಕೊಂದು ಸಂಬಂದ ಇಲ್ಲ ಅಂತ ನನಗೂ ಗೊತ್ತು ಸುಮ್ಮನೆ ಬರೆದಿದ್ದು ಅಷ್ಟೇ!
ನಾನೂ ಅದೇ ಕೇಳ್ತಾ ಇರೋದು ಏನು ಭಾರತೀಯ ಸಂಸ್ಕೃತಿ ಅಂದ್ರೆ ?
ಬಹುಷ ಯಾರಿಗೂ ಗೊತ್ತಿಲ್ಲ ಬಿಡಿ!
chennagide,nange ista aytu :D
ಸಂದೀಪ್,
ಲೇಖನ ಮಸ್ತ್ ಮಜಾ ಮಾಡಿ ಅನ್ನೋ ತರ ಇತ್ತು...
ತತ್ವವನ್ನು ಈ ರೀತಿಯೂ[ಹಾಸ್ಯದಾಟಿಯಲ್ಲಿ]ತಿಳಿಹೇಳಬಹುದು ಅಂತ ನನಗೆ ಗೊತ್ತಾಗಿದ್ದು ಹೀಗೆ....ಕೊನೆಯ ಪಂಚ್ ಚೆನ್ನಾಗಿದೆ...
ವ್ಯಾಲೆಂಟೈನ್ಸ್ ಡೇ ದಿನ ನಿಮ್ಮಗೆ ಪ್ರಪೋಸ್ ಮಾಡಲಿಕ್ಕೆ ಹುಡುಗಿ ಸಿಗಬೇಕಾ ? ಒಂದು ಕವನ ಬರೆದುಬಿಡಿ...ಸಿಕ್ಕರೂ ಸಿಗಬಹುದು...[ನಾನು ಕೂಡ ವ್ಯಾಲೆಂಟೈನ್ಸ್ ಡೇ ಗಾಗಿ ಕವನ ಬರೆಯುತ್ತಿದ್ದೇನೆ...ಹಹ..ಹ...]
ಸಂದೀಪ್ ಸಾರೂ......ವಾಹ್! ಸೂಪರ್ರು..ನಂಗೂ ಕ್ಲೈಮಾಕ್ಸೂ ಭಾಳ ಇಷ್ಟ ಆತು. ವ್ಯಾಲೆಂಟೈನ್ಸ್ ಡೇ ದಿವಸ ಹುಡುಗಿಗೆ ಪ್ರಪೋಸ್ ಮಾಡ್ಬೇಕಾ..ಹುಡುಗಿ ಹುಡುಕಿ ಪ್ರಪೋಸ್ ಮಾಡಿ..ಸೇನೆಯವರ ಕೈಗೆ ಸಿಕ್ರೆ 'ತಾಳಿ'..ಇಲ್ಲಾಂದ್ರೆ ಸ್ವಲ್ಪ ತಾಳಿ...!
ಇರಲಿ ಬಿಡಿ ಟೆನ್ಯನ್ ಏನೂ ಮಾಡೋಕೋಬೇಡಿ..ಪ್ರಪೋಸ್ ಮಾಡೋದಾದ್ರೆ ನಾವೆಲ್ಲ 'ಬಿಗಿಭದ್ರತೆ' ಮಾಡಿಕೊಡಲಾಗುವುದು..ಅಗತ್ಯವಿದ್ದರೆ ನನ್ನ ಮೊಬೈಲ್ ನಂಬರನ್ನು ಸಂಪರ್ಕಿಸಿ...(:)))))
-ಚಿತ್ರಾಕರ್ಕೇರಾ..
ಸ್ವಾಮೀ, ಈರ್ನ ಇಲ್ ಓಲು?:) ಯಾನ್ಲಾ ಬಪ್ಪನಾಡ್ ಜಾತ್ರೆ,ಪ್ರಶಾಂತ್ ಥಿಯೇಟರ್ ದ ಗಿರಾಕಿಯೇ!:)
ನೀಲಾಂಜಲ,
ಧನ್ಯವಾದಗಳು :)
ಶಿವು,
ಧನ್ಯವಾದಗಳು ಮೆಚ್ಚಿದ್ದಕ್ಕೆ ,ಈಗೀಗ ಎಲ್ಲವನ್ನೂ ಹಾಸ್ಯದ ಧಾಟಿಯಲ್ಲೇ ಹೇಳೋಣ ಅನ್ಸುತ್ತೆ !
ಚಿತ್ರಾ,
ಅಗತ್ಯ ಬಿದ್ರೆ ಖಂಡಿತ ನಿಮ್ಮ ಸಹಾಯ ತಗೊಳ್ತೀನಿ:)
ಶ್ರೀನಿಧಿ,
ಎನ್ನ ಇಲ್ಲ್ ಮೂಲ್ಕಿ ಬೊಕ್ಕ ಪಡುಬಿದ್ರಿದ ನಡುಟ್ !
Mamu..yeerna uru Pejamadi ya
ನೀನು ಎನೇ ಬರೆದ್ರೂ ಚೆನ್ನಾಗೇ ಇರುತ್ತೆ ಸ೦ದೀಪ್...
ಇತ್ತೀಚೆಗೆ ಸ೦ಸ್ಕೃತ, ಸ೦ಪ್ರದಾಯ ಇವುಗಳ ಬಗ್ಗೆ ಸ್ವಲ್ಪ ತಲೆಕೆಡಿಸಿಕೊ೦ಡಿರುವ ಹಾಗಿದೆ:)
ಪ್ರೊಪೋಸ್ ಮಾಡಲು ಹುಡುಗಿ ಬೇಗ ಸಿಗಲಿ:)
ಸುಧೇಶ್ ,
ಪ್ರೀತಿಗೆ ಧನ್ಯವಾದಗಳು:)
ಅನಾನಿಮಸ್ ,
:)
Please read and participate
http://thepinkchaddicampaign.blogspot.com/
ಪ್ರಿಯ ಸಂದೀಪ್,
ಫೆ.೧೪ರವರೆಗೆ ಕಾಯಬೇಕೆಕೆ ನೀವು? ಬೇಗ ಶುಭಸಮಾಚಾರ ತಿಳಿಸಿ. ಅಂದಹಾಗೆ ನನಗೂ ಗೌತಮ್ ಗೊತ್ತಿಲ್ಲ ಮಾರಾಯ್ರೆ. ನನ್ನ ಲೈಫ್ ವೇಸ್ಟಾ?
ನಾಗರಾಜ್ ,
ನೀವು ಹೇಳಿದ್ದು ಸರಿ ಇವತ್ತೇ ಹುಡುಕ್ತೀನಿ ಪ್ರಪೋಸ್ ಮಾಡೋದಕ್ಕೆ ಹುಡುಗೀನ!!
ನಿಮಗೆ ಗೌತಮ್ ಗಂಭೀರ್ ಗೊತ್ತಿಲ್ಲ ಅಂದ್ರೆ ಖಂಡಿತ ನೀವು ವೇಸ್ಟು !!(ನನ್ನ ಸ್ನೇಹಿತನ ಪ್ರಕಾರ!)
Bahala, bahala chennagi bardidira ee postna. Jeevanakke bahala hattiravadaddu anta anstu.:)
ಸಂದೀಪ್,
ನಿಮ್ಮ ಈ ಬರಹ ಚೆನ್ನಾಗಿದೆ.
" Don't think that someone is UNHAPPY just because he/she is not living his/her life ,the way you wanted to live your life !"
ಬೇರೊಬ್ಬರ ಬದುಕಿನ ಬಗ್ಗೆ ಇರಬೇಕಾದ ಗೌರವ, ಭಾಷೆಯಲ್ಲಿ ತೋರಿಸಬಹುದಾದ gender neutralityಯತ್ತ (he/she ಬಳಕೆ, ಇದು ಮೂಲ ಉದ್ದೇಶ ಅಲ್ಲದಿದ್ದರೂ) ಗಮನ ಸೆಳೆದ ಕಾರಣ, ಈ ಮಾತು ಇಷ್ಟವಾಯ್ತು.
ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿರುವ ಪಾಶ್ಚಾತ್ಯ ಹಾಗೂ ಭಾರತೀಯ ಸಂಸ್ಕೃತಿಗಳ ನಡುವಿನ ಸಂಘರ್ಷಕ್ಕೆ ನೀವು ಹಾಸ್ಯದ ಲೇಪನ ಕೊಟ್ಟಿರುವುದು ಚೆನ್ನಾಗಿದೆ.
ನನಗೆ ಕೆ.ಎಸ್.ನ.ರವರ ’ಇಕ್ಕಳ’ ಪದ್ಯ ನೆನಪಾಯ್ತು..."ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ".
-ವನಿತಾ
madhoo thanks :)
ವನಿತಾ,
ಧನ್ಯವಾದಗಳು ಮೆಚ್ಚಿದ್ದಕ್ಕೆ.
ಮೂಲ ವಾಕ್ಯದಲ್ಲಿ he ಅಂತಾನೇ ಇತ್ತು ! ಕಾರ್ಪೋರೇಟ್ ಪ್ರಪಂಚದ ಗಾಳಿ ಸೋಕಿ ಹಾಗೆ ಬರೆಯೋದು ಅಭ್ಯಾಸ ಆಯ್ತು!!
ಸಂದೀಪ್ ತುಂಬಾ ಚೆಂದದ ಬರಹ. ನಿಮ್ಮ ಚಿಂತನೆ ರೀತಿ ನನಗಂತೂ ತುಂಬಾ ಇಷ್ಟವಾಯಿತು. ಆದ್ರೆ ಒಂದೇ ಒಂದು ಕರೆಕ್ಷನ್ (ನೀವು ಮಾಡಿಕೊಳ್ಳುತ್ತೀರಾ ಅಂತಾದ್ರೆ ಮಾತ್ರ)
>>>ಭಾರತೀಯ ಸಂಸ್ಕೃತಿ ಶ್ರೇಷ್ಠ ಅನ್ನೋದನ್ನು ನಿರೂಪಿಸಲು ನಾವು ಸದಾ ಪಾಶ್ಚಾತ್ಯ ಸಂಸ್ಕೃತಿಯ ಬಗ್ಗೆ ತುಂಬ ಕೇವಲವಾಗಿ ಮಾತಾಡ್ತಾ ಇರ್ತೀವಿ...
ಇದು ಸರಿಯಿಲ್ಲ. ಪಾಶ್ಚಾತ್ಯರು ನಮ್ಮ ಮೇಲೆ ದಾಳಿ ಮಾಡುತ್ತಿರುವುದರಿಂದ, ನಮ್ಮ ಧರ್ಮಕ್ಕೆ ಬನ್ನಿ ಅಂತಾ ಮನಃ ಪರಿವರ್ತನೆ ಮಾಡಲು ಶುರುವಿಟ್ಟಿರುವುದರಿಂದ ನಮಗೆ "ಭಾರತ" ಅಂದ್ರೆನು ಅಂತಾ ಅವಲೋಕಿಸಿಕೊಳ್ಳುವ ಅನಿವಾರ್ಯತೆ ಬಂದಿದೆ. ನಮ್ಮ ದೇಶದಲ್ಲಿ ಇರುವಷ್ಟು ಧಾರ್ಮಿಕ ಸ್ವತಂತ್ರ್ಯ ಮತ್ತ್ಯಾವ ದೇಶದಲ್ಲೂ ಇಲ್ಲ ಎಂಬುದು ನನ್ನ ಅನಿಸಿಕೆ. ಈ ಮಾತಿಗೆ ಸಾಕಷ್ಟು ಆಧಾರಗಳೂ ಸಿಗುತ್ತವೆ. ಮುಸ್ಲಿಂ, ಕ್ರೈಸ್ತ, ಪಾರಸಿ...ಈ ಧರ್ಮಗಳಿಗೆಲ್ಲಾ ಅದರದ್ದೇ ಆದ ಒಂದು ದೇಶವಿದೆ. ಆದರೆ ಭಾರತ ಯಾವತ್ತೂ ಅಂತಹ ಧೋರಣೆ ತಾಳಿಲ್ಲ. ಅಸ್ಸಾಂ ಗಡಿಭಾಗದಲ್ಲಿ ನೆಲೆಸಿರುವ ಬಾಂಗ್ಲಾ ನಿರಾಶ್ರಿತರು, ಮುಂಡಗೋಡು, ಬೈಲುಕುಪ್ಪೆಗಳಲ್ಲಿನ ಟಿಬೆಟ್ ಕಾಲೋನಿಗಳೇ ಅದಕ್ಕೆ ಜೀವಂತ ಸಾಕ್ಷಿ. ಈಗಿನ ಸ್ಥಿತಿ ನೋಡಿದರೆ ನಾವು ಅಂತಹ ಧೊರಣೆ ತಾಳಬೇಕಾಗುವುದೇನೋ ಅನ್ನಿಸತ್ತೆ.
ಸಾಧ್ಯವಾದರೆ ಓಶೋ ಬರೆದ ನನ್ನ ಪ್ರೀತಿಯ ಭಾರತ, ಭಾರತ ಒಂದು ಸನಾತನ ಯಾತ್ರೆ, ಸ್ತ್ರೀ ಮುಕ್ತಿ ಹೊಸದೊಂದು ದೃಷ್ಟಿಕೋನ ಇವಿಷ್ಟು ಓದಿ. ಅದಾದಾ ಮೇಲೆ ಆತನೇ ಬರೆದ ಮಾನವ ಹಕ್ಕುಗಳ ಕುರಿತಾದ ಒಂದು ಪುಸ್ತಕವಿದೆ ಅದನ್ನು ಓದಿ...
ಚರ್ಚೆಯ ದೃಷ್ಟಿಯಿಂದ ಇದನ್ನೆಲ್ಲ ಬರೆದಿಲ್ಲ. ನಿಮ್ಮ ನಿಲುವಿಗೆ ನನ್ನ ಸಹಮತವಿದೆ. ನಾನು ಹೇಳಿದ್ದು ಸರಿ ಅನ್ನಿಸಿದರೆ ಸ್ವೀಕರಿಸಿ...
ವಿನಾಯಕ ಕೋಡ್ಸರ
ವಿನಾಯಕ ನಿಮ್ಮ ಪ್ರೀತಿಗೆ ಆಭಾರಿ.
"ಭಾರತೀಯ ಸಂಸ್ಕೃತಿ ಶ್ರೇಷ್ಠ ಅನ್ನೋದನ್ನು ನಿರೂಪಿಸಲು ನಾವು ಸದಾ ಪಾಶ್ಚಾತ್ಯ ಸಂಸ್ಕೃತಿಯ ಬಗ್ಗೆ ತುಂಬ ಕೇವಲವಾಗಿ ಮಾತಾಡ್ತಾ ಇರ್ತೀವಿ..."
ಇದನ್ನು ಬಹಳ ಯೋಚಿಸಿ ಬರೆದಿರೋದು ಹಾಗಾಗಿ ಬದಲಿಸೋದು ಸಾಧ್ಯ ಇಲ್ಲ.
ಪಾಶ್ಚಾತ್ಯರು ಯಾವತ್ತೂ ತಮ್ಮ ಸಂಸೃತಿಯನ್ನು ನಮ್ಮ ಮೇಲೆ ಹೇರಿಲ್ಲ.ಮತಾಂತರವನ್ನು ಇಲ್ಲಿ ಸೇರಿಸೋದು ಬೇಡ .ಅದೊಂದು ಭಿನ್ನ ವಿಚಾರ.
ಭಾರತೀಯ ಸಂಸ್ಕೃತಿ ಅಂದರೆ ಏನು ಅಂತ ಭಾಗಶ್ಯ ಕೇಂದ್ರ ಸಚಿವೆ ರೇಣುಕಾ ಅವರಿಗೆ ಮೈಲ್ ಮಾಡಬಹುದು. :D
ಹುಡುಗಿ ಒಪ್ಪದೇ ಇದ್ರೆ ಏನಂತೆ, ಆ ಹುಡುಗಿ ಹಿಂದೆ ಸುತ್ತೋಡು, ಸೇನೆ ಅವರು ಬಂದ್ರೆ ಲವರ್ಸ್ ಅಂತ ಪುಂಗೋದು... ಅವರೇ ಪುಕ್ಕಟೆ ಮದುವೆ ಮಾಡ್ತಾರೆ. ಹಹಹ
ನನಗ್ಯಾಕೋ ಲಾಸ್ಟ್ ಲೈನ್ ಮೇಲೆ ಅನುಮಾನ ಬರ್ತಾ ಇದೆ!
ಹರೀಶ ನೀನು ಕೇಳಿದ ಮೆಲೆ ನನಗೂ ಅನುಮಾನ ಬರ್ತಾ ಇದೆ!
Post a Comment