ಶೀರ್ಶಿಕೆ ಅರ್ಥವಾಗದವರಿಗೊಂದು quick recap!
ಪಿಯುಸಿಯಲ್ಲಿದ್ದಾಗ "Just Lather, That's All" ಅನ್ನೋ ಹೆಸರಿನ ಪಾಠ ಒಂದಿತ್ತು.ಕ್ಷೌರಿಕನೊಬ್ಬನ ಮಾನಸಿಕ ತುಮುಲವನ್ನು ಸಮರ್ಪಕವಾಗಿ ಚಿತ್ರಿಸಿದ ಪಾಠ ಅದು .ಆ ದಿನಗಳಲ್ಲಿ ತುಂಬಾ ಖುಷಿ ಕೊಟ್ಟಿತು ಆ ಪಾಠ.ನಮ್ಮ ಇಂಗ್ಲೀಷ್ ಸರ್ ದತ್ತಾತ್ರೇಯ ಅನ್ನೋರು ಬಹಳ ಅದ್ಭುತವಾಗಿ ಆ ಪಾಠ ಮಾಡಿದ್ರು .ಈಗಲೂ ಸೆಲೂನ್ ಗೆ ಹೋದಾಗ ಕ್ಷೌರಿಕ ಗಡ್ಡಕ್ಕೆ ನೊರೆ ಹಚ್ಚುವಾಗ ನನಗೆ ಆ ಕತೆ ನೆನಪಿಗೆ ಬರುತ್ತೆ.
ನಾನು ಸೆಲೂನ್ ಗೆ ಹೋದಾಗ ಮೂಲಥ ನಿರುಪದ್ರವಿ.ಯಾವುದೇ ಎಕ್ಸ್ಪೆಕ್ಟೇಶನ್ ಇಲ್ಲ ಕ್ಷೌರಿಕನಿಂದ. ಅವನು ಮೊದಲು ಏನು ಹೇಳುತ್ತಾನೆ ಅದೇ ಫೈನಲ್ ! ’ಸಾರ್ ಮೀಡಿಯಂ ಇಡ್ಲಾ ’ ಅಂದ್ರೆ ’ಹೂಂ’ ! ’ಸಾರ್ ಶಾರ್ಟ್ ಇಡ್ಲಾ’ ಅಂದ್ರೆ ಅದಕ್ಕೂ ’ಹೂಂ’ !ಸಧ್ಯ ಯಾವುದೇ ಕ್ಷೌರಿಕ ’ಸಾರ್ ಬೋಳು ಮಾಡ್ಲಾ ?’ ಅಂತ ಕೇಳಲ್ಲ.
ಚಿಕ್ಕಂದಿನಿಂದಲೇ ನನಗೆ ಈ ಅಭ್ಯಾಸ .ಕಾರಣ ಏನಂದ್ರೆ ಚಿಕ್ಕಂದಿನಲ್ಲಿ ನಮ್ಮ ಊರಲ್ಲಿ ನಾನು ಸಲೂನ್ ಗೆ ಹೋದರೆ ನಾನು ಏನೇ ಹೇಳಿದ್ರೂ ಕ್ಷೌರಿಕ ಕೇಳ್ತಾನೇ ಇರಲಿಲ್ಲ.ಕೇಳೋದಿಕ್ಕೆ ಪಾಪ ಅವನಿಗೆ ಕಿವಿ ಕೇಳಿಸ್ತಾ ಇರಲಿಲ್ಲ ಮಾತೂ ಬರ್ತಾ ಇರಲಿಲ್ಲ! ನಾನು ಹೋದ ತಕ್ಷಣ ಒಂದು ಹಲಗೆಯನ್ನು ಖುರ್ಚಿಯ ಎರಡೂ ಕೈಗಳ ಮೇಲೆ ಇಟ್ಟು ನನ್ನ ಎತ್ತಿ ಅದರ ಮೇಲೆ ಕೂರಿಸಿ ಬಟ್ಟೆ ಹೊದಿಸ್ತಾ ಇದ್ದ.
ನನಗೆ ನನ್ನ ಅಣ್ಣಂದಿರೆಲ್ಲ ಭಯ ಹುಟ್ಟಿಸಿದ್ದರು ಆಗ ,ಸರಿಯಾಗಿ ಯಾವ ಸ್ಟೈಲ್ ಬೇಕು ಅಂತ ಮೊದಲೇ ಹೇಳದಿದ್ದರೆ ತಲೆ ಬೋಳು ಮಾಡಿ ಬಿಡ್ತಾರೆ ಅಂತ!
ಆ ಭಯದಿಂದ ನಾನು ಆ ಮೂಕ ಕ್ಷೌರಿಕ ಇರದೆ ಇದ್ದ ಸಮಯ ನೋಡೀನೆ ಸಲೂನ್ ಗೆ ನುಗ್ತಾ ಇದ್ದಿದ್ದು.ಆದರೆ ನಾನು ಹೋದ ತಕ್ಷಣ ಅದೆಲ್ಲಿಂದ ಪ್ರತ್ಯಕ್ಷ ಆಗ್ತಿದ್ನೋ ಅವನು ,ನನಗೆ ಮಾತ್ರ ಯಾವಾಗ್ಲೂ ಅವನೇ ತಗುಲಿ ಹಾಕ್ಕೊಳ್ತಾ ಇದ್ದ!
ಅವನು ಒಳ್ಳೆ ಕ್ಷೌರಿಕ.ಎರಡು ಸಲ ಕತ್ತರಿ ನನ್ನ ತಲೆಯ ಮೇಲಾಡಿಸಿದರೆ ಎಂಟು ಸಲ ಗಾಳಿಯಲ್ಲೇ ಕಚ ಕಚ ಅಂತ ಕತ್ತರಿಯ ಸದ್ದು ಮಾಡ್ತಾ ಇದ್ದ.ಒಳ್ಳೆ ಸಂಗೀತದ ಹಾಗೆ ಕೇಳ್ತಾ ಇತ್ತು ಅದು.ಬಹುಷ ಅದಕ್ಕೇ ಏನೋ ನನಗೆ ಕೂತಲ್ಲೇ ನಿದ್ದೆ ಬರ್ತಾ ಇತ್ತು.ಅವನಿಗೆ ಮಾತು ಬರದಿದ್ದರಿಂದ ಭಂಗಿ ಬದಲಾಯಿಸಬೇಕಾದರೆ ಕತ್ತರಿಯ ಹಿಡಿಕೆಯಿಂದಲೇ ನನ್ನ ತಲೆಗೆ ಟಕ್ ಅಂತ ಮೊಟಕುತ್ತಿದ್ದ ಅವನು.ನಾನು ಎದ್ದ ತಕ್ಷಣ ನನ್ನ ತಲೆಯನ್ನು ಹೇಗೇಗೋ ತಿರುಗಿಸಿ ಕೆಲಸ ಮುಂದುವರೆಸುತ್ತಿದ್ದ.ನಾನು ಯಥಾ ಪ್ರಕಾರ ಮತ್ತೆ ನಿದ್ದೆಗೆ ಜಾರುತ್ತಾ ಇದ್ದೆ.ಅವನು ಮತ್ತೆ ಹೊಡೆದಾಗ ವಿಪರೀತ ಸಿಟ್ಟು ಬರ್ತಾ ಇತ್ತು ನನಗೆ. ’ ಒಮ್ಮೆ ದೊಡ್ಡವನಾಗಿ ಬಿಡಲಿ ನಿನ್ನ ಕಡೆಗೆ ಬರೋದೆ ಇಲ್ಲ .ಒಳ್ಳೆ ಸಲೂನ್ ಗೆ ಹೋಗಿ ಸಕ್ಕತ್ ಆಗಿರೋ ಹೇರ್ ಸ್ಟೈಲ್ ಮಾಡಿಸಿಕೊಳ್ತೀನಿ ’ ಅಂತ ಮನಸಿನಲ್ಲೇ ಬಯ್ಕೊಳ್ತಾ ಇದ್ದೆ .
ನಾನು ಎಷ್ಟೇ ಸನ್ನೆ ಮಾಡಿ ಅವನಿಗೆ ಹೇಳಿದ್ರೂ ಅವನು ಲಾನ್ ಮೂವರ್ ನ ಹಾಗೆ ಕೆಲಸ ಮಾಡಿ ತುಂಬಾ ಚಿಕ್ಕದಾಗಿ ಇಡ್ತಾ ಇದ್ದ ಕೂದಲನ್ನು.ಅವನ ಬಳಿ ಹೋದ್ರೆ ಒಂದು ತಿಂಗಳು ಬಾಚಣಿಗೆಗೆ ಕೆಲಸವೇ ಇರ್ತಾ ಇರ್ಲಿಲ್ಲ.ನನ್ಗೆ ಆ ಹೇರ್ ಸ್ಟೈಲ್ ಇಷ್ಟ ಇರದಿದ್ದರೂ ಬೇರೆ ದಾರಿ ಇರಲಿಲ್ಲ. ಅವನು ನನ್ನ ಮೇಲೆ ಕರುಣೆ ತೋರಿಸಿ ಏನಾದರೂ ಸ್ಟೈಲ್ ಆಗಿರೋದನ್ನು ಮಾಡಿದ್ರೆ ತಂದೆ ಹೋಗಿ ದಬಾಯಿಸ್ತಾ ಇದ್ರು ಅವನಿಗೆ.
ಒಂದು ದಿನ ಹೀಗೆ ಅವನು ಇರದ ಸಮಯ ನೋಡಿ ಸಲೂನ್ ಗೆ ನುಗ್ಗಿದ್ದೆ.ಅವನ ಬದಲು ಬೇರೆಯವರ್ಯಾರೋ ಇದ್ರು.ತುಂಬಾನೇ ಖುಷಿ ಆಯ್ತು.ಸಧ್ಯ ಬಚಾವಾದೆ ಅಂದುಕೊಂಡೆ .ಅರ್ಧ ಗಂಟೆ ಆದ್ರೂ ಅವ್ನು ಬರದೇ ಇದ್ದದ್ದು ನೋಡಿ ನನಗೆ ಕಟ್ಟಿಂಗ್ ಮಾಡೋನ ಹತ್ರ ಕೇಳಿದೆ ’ಎಲ್ಲಿ ಪೊಟ್ಟಣ್ಣ ?(ಬಾಯಿ ಬರದವ್ರಿಗೆ ತುಳುವಿನಲ್ಲಿ ಪೊಟ್ಟ ಅಂತಾರೆ)’.
ಅದಕ್ಕೆ ಅವನು ’ಪೊಟ್ಟಣ್ಣ ನಿನ್ನೆ ಸತ್ತು ಹೋದ್ರು ಇನ್ನು ಮೇಲೆ ನಾನೆ ಇಲ್ಲಿ ಕೆಲಸಕ್ಕೆ ’ ಅಂದ.
ಅವನು ಇಲ್ಲದ್ದಕ್ಕೆ ಪಟ್ಟ ಖುಷಿ ಹೆಚ್ಚು ಹೊತ್ತು ಇರಲೇ ಇಲ್ಲ !
Sunday, May 17, 2009
Subscribe to:
Post Comments (Atom)
13 comments:
ಚೆನ್ನಾಗಿದೆ ಬರಹ. ನಿಮ್ಮ ಉಳಿದ ಬಹು ಬರಹದಂತೆ, ನವಿರಾದ ಹಾಸ್ಯ, ಕೊನೆಗೆ ಮಾತ್ರ ವಿಷಾದ ಭಾವ. ಇದೆ ತಾನೇ ಜೀವನ? ಬದುಕಿನಲ್ಲಿ, ಏನೇ ಆಗಲಿ, ಇರುವಾಗ ಬೇಡ ಎಂದೆನಿಸಿದರೂ, ಒಂದು ದಿನ ಅದು ಇಲ್ಲವಾದಾಗ, ಮನಸಿನಲ್ಲಿ ಅದರ ಬಗ್ಗೆ ಬೆಳೆಸಿಕೊಂಡಿರುವ attachment ಆಮೇಲೆ ಎಲ್ಲೋ ಬೇಸರದ ಛಾಯೆ ಉಳಿಸಿ ಬಿಡುತ್ತದೆ... ಅಲ್ಲವೇ?
ಕ್ಷೌರದಂತಹ ಸಣ್ಣ ವಿಷಯವೂ ಬರಹಕ್ಕೆ ಒಳಗಾಗುತ್ತದಲ್ಲ ಎಂಬ ಅಚ್ಚರಿಯಿಂದ ಓದುತ್ತಾ ಹೋದ ಹಾಗೆ ವಿಷಯ ವಿಶಾದಕ್ಕೆ ತಿರುಗಿದ ರೀತಿ ಚೆನ್ನಾಗಿದೆ.
ಸಂದೀಪ,
It is beautiful! My compliments to you!
'Just Lather Thats All' ivatthigoo nanna ishtada kathegaLallondu.
ಪುಟ್ಟ ಕಥೆಯಂತಿದೆ, ಕೊನೇಯ ವಾಕ್ಯ ಪರಿಣಾಮಕಾರಿಯಾಗಿದೆ.
ನಗಿಸಿ,
ಕೊನೆಯಲ್ಲಿ ನೋಯಿಸಿಬಿಟ್ಟಿರಿ. :(
ಸಂದೀಪ್
ತುಂಬ ಚೆನ್ನಾಗಿ ಬರೆದಿದ್ದೀರ... ಮೊದಮೊದಲು ನಿಮ್ಮ ಬಾಲ್ಯದ ಕತೆ ನೆನೆದು ನಗು ಬಂತು,,, ಹಾಗೆ ನನ್ನ ಬಾಲ್ಯಕ್ಕೂ ಜಾರಿದೆ.....
ಕೊನೆಯಲ್ಲಿ ಮನಸ್ಸಿಗೆ ಬೇಜಾರ ಆಯಿತು.....
ಕ್ಷೌರದಂತಹ ಕೆಲಸವದರೇನು ಅದು ಕೆಲಸವಲ್ಲವೇ....ಎಲ್ಲೊ ಓದಿದ್ದ ನೆನಪು,,, ಎಸ್ಟೆ ದೊಡ್ಡ ಮನುಷ್ಯರಗಿದ್ದರು, ಕ್ಷೌರ ಮಾಡುವವರ ಮುಂದೆ ತಲೆ ತಗ್ಗಿಸಬೇಕು ಅಂತ.....
ಗುರು
wow..! wat a writing... it slowly taken me to my childhood , remembered our Baabanna n Poovappanna,, grt sandeep..
better u remove tht "ನಾನು ಸಾಹಿತಿಯಲ್ಲ." now on..
istu naviraagi bareyo kale irovaaga saahiti annade irokaagalla.
Thanks for such a nice article :)
ತುಂಬಾ ದಿನಗಳಿಂದ ಆ ಕಥೆಯ ಶೀರ್ಶಿಕೆಯನ್ನು ನೆನಪಿಸಿಕ್ಕೊಳ್ಳೋಕೆ ಪ್ರಯತ್ನ ಮಾಡ್ತ ಇದ್ದೆ. ನೆನಪಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.
ನಿಮ್ಮ ಹಾಸ್ಯ ಹಾಗೂ ವಿಷಾದ ಬರಿತ ಬರಹ ಕೂಡ ಚನ್ನಾಗಿದೆ.
Thanks for both :-)
ದಿವ್ಯಾ,ಸಿಂಧು,ಸುನಾಥ್ ಜಿ,ಸುಶ್ರುತ,ಪಾಲ,ಶಿವಪ್ರಕಾಶ್,ಗುರು,ಸುಬ್ಬು,ಸಮುದ್ಯತಾ ಧನ್ಯವಾದಗಳಿ ನಿಮ್ಮ ಪ್ರೀತಿಪೂರ್ವಕ ಮೆಚ್ಚುಗೆಗೆ.
ಸುಬ್ಬು,
ನನಗೆ ಇಂಜಿನಿಯರ್ ಅನಿಸಿಕೊಳ್ಳೋದೆ ಯಾಕೋ ಖುಶಿ !
ಸಮುದ್ಯತಾ,
ನಿಮ್ಮ ಹೆಸರು ತುಂಬಾ ಚೆನ್ನಾಗಿದೆ:)
ನಾನೇನೂ ಇದು ಹಾಸ್ಯ ಬರಹ ಅಂತ ಓದ್ಕೊಂಡು ಸಾಗಿದ್ರೆ..ಕೊನೆಗೆ ಬೇಜಾರಾಯ್ತು. ಚೆನ್ನಾಗಿ ಬರೆದಿದ್ದೀರಿ ಸಂದೀಪ್
-ಧರಿತ್ರಿ
ಸಂದೀಪ್ ,
ಸಾಹಿತಿ ತಂತ್ರಜ್ಞ ಇಲ್ಲಾ ತಂತ್ರಜ್ಞ ಸಾಹಿತಿ ಅನ್ನಿಸಿ ಕೊಂಡರೆ ತಪ್ಪೇನು ಇಲ್ಲ ಬಿಡಿ..
- ಸುಬ್ಬು
ಪ್ರಪಂಚದ ಯಾವುದೊ ಮೂಲೆಯಿಂದ,ನನಗೆ ಈ ನಿನ್ನ ಸುಂದರವಾದ ಬರಹದ ಖಜಾನೆಯ ವಿಳಾಸ ಸಿಕ್ಕಿತು, ಖಂಡಿತವಾಗಿ ನಾನು ಎಣಿಸಿರಲಿಲ್ಲ ನೀನು ಇಷ್ಟು ಒಳ್ಳೆಯ ಬರಹಗಾರ ಅಂತ.. ಅದರೆ ನೀನು ಅದೆಲ್ಲವನ್ನು ಸುಳ್ಳಾಗಿಸಿದಿ.. ತುಂಬ ಸರಳವಾದ ಶಬ್ದಗಳಿಂದ , ನೈಜತೆಯನ್ನು ಬರಹಗಳ ಮೂಲಕ ಇಲ್ಲಿ ಪರಿಚಯಿಸಿದ್ದಿ.. ತುಂಬ ಖುಶಿಯಾಯಿತು ನಿನ್ನಲ್ಲಿರೊ ಅದ್ಬುತ ಕಲೆಯನ್ನು ನೋಡಿ.
-ಸುಜಿತ್
Post a Comment