Sunday, July 26, 2009

ಇನ್ನಾದರೂ ಎದ್ದೇಳಿ!

’ಎದ್ದೇಳು ಮಂಜುನಾಥ’ ಚಿತ್ರ ನೋಡಿದೆ.ಚಿತ್ರದ ವಿಮರ್ಶೆ ಬರೆಯಲು ನನಗೆ ಬರಲ್ಲ.ಬರಲ್ಲ ಅನ್ನೋದಕ್ಕಿಂತ ಬರೆಯಲು ಮನಸ್ಸಿಲ್ಲ ಅನ್ನೋದೇ ಸೂಕ್ತ.
ನಾನು ಚಿತ್ರ ಚೆನ್ನಾಗಿದೆ ಅನ್ನೋದು ಅದಕ್ಕೆ ಇನ್ನೊಬ್ಬ(ಳು) ’ಥೂ ನಿನ್ನ ಏನ್ ಕಚಡಾ ಟೇಸ್ಟ್ ನಿನ್ನದು’ ಅನ್ನೋದು.ನಾನೂ ಸೋಲೊಪ್ಪಲಾರದೆ ಸಮರ್ಥನೆ ನೀಡೋದು ,ಇಂಥ ಕಿರಿಕ್ ಗಳು ಬಹಳಷ್ಟು ಸಲ ಆಗಿವೆ.ಅದಿಕ್ಕೆ ಚಿತ್ರ ನೋಡಿ ಅಂತ ಹೇಳೋದು ತುಂಬಾ ಕಡಿಮೆ.

’ಎದ್ದೇಳು ಮಂಜುನಾಥ’ ಕೂಡಾ ನೋಡಿ ಅಂತ ಯಾರಿಗೂ ಹೇಳಲ್ಲ ನಾನು.ನಿಮ್ ದುಡ್ಡು ನೀವು ಅದನ್ನು ಯಾವ ರೀತಿ ಬೇಕಾದ್ರೂ ಖರ್ಚು ಮಾಡಿ ಸ್ವಾಮಿ ,ನಾನ್ಯಾರು ಸಲಹೆ ಕೊಡೋಕೆ ಅಲ್ವ?

ಅಷ್ಟಕ್ಕೂ ನನಗೆ ಈ ಚಿತ್ರದ ಬಗ್ಗೆ ಬರೀಬೇಕು ಅನಿಸಿದ್ದು ಯಾಕಂದ್ರೆ ಇದೊಂದು ವಿಭಿನ್ನ ರೀತಿಯ ಸಿನೆಮಾ. ಕಡಿಮೆ ಬಜೆಟ್ ನ(ಎಷ್ಟು ಅಂತ ಗೊತ್ತಿಲ್ಲ!) ಬರೀ ಸಂಭಾಷಣೆ ಮತ್ತು ಜಗ್ಗೇಶ್ ಅಭಿನಯವನ್ನು ನಂಬಿಕೊಂಡು ಮಾಡಿದ ಒಂದು ಚಿತ್ರ.ಬರೀ ಸಂಭಾಷಣೆಯಿಂದಲೂ ಚಿತ್ರ ಗೆಲ್ಲಿಸಬಹುದು ಅಂತ ನಿರೂಪಿಸಿದ ಚಿತ್ರ.

ಚಿತ್ರ ಬರೀ ಒಂದು ಲಾಡ್ಜ್ ರೂಮ್ ,ಅಥವಾ ಒಂದು ಪುಟ್ಟ ಮನೆಯಲ್ಲಿ ಮುಗಿದು ಬಿಡುತ್ತೆ.ಅದ್ಯಾಕೆ ಕೆಲವು ನಿರ್ದೇಶಕರಿಗೆ ಬ್ಯಾಂಕಾಕ್ ,ಸ್ವಿಟ್ಜರ್ಲ್ಯಾಂಡ್ ನಂಥ ಊರಿನ ಮೇಲೆ ’ಪ್ರೇಮ್’ ವೋ ಗೊತ್ತಿಲ್ಲ.ಅನಾವಶ್ಯಕ ಕೋಟಿಗಟ್ಟಲೆ ಖರ್ಚು ಮಾಡ್ತಾರೆ.ಕೇಳಿದ್ರೆ ’ ತಮಿಳು ,ತೆಲುಗಿನವರು ಮಾಡ್ತಾರೆ ಅದಕ್ಕೆ ನಾವೇನ್ ಕಮ್ಮಿ ’ ಅಂತಾರೆ.

ಅಲ್ಲಾ ನಮ್ ಶಿವಣ್ಣ ಹಳ್ಳಿಯಲ್ಲಿ ಹಾಕೋ ಅಂಥ ಪಟ್ಟಾಪಟ್ಟಿ ಚಡ್ಡಿ ಹಾಕ್ಕೊಂಡು ವಿದೇಶದಲ್ಲಿ ಹೋಗಿ ಕುಣೀತಾರೆ.ಇದರಿಂದ ಅದೇನು ಸಾಧಿಸ್ತಾರೋ ದೇವರಿಗೆ ಗೊತ್ತು.ಪಟ್ಟಾಪಟ್ಟಿ ಚಡ್ಡಿ ಡ್ಯಾನ್ಸ್ ಮಾಡ್ಲೇ ಬೇಕೂಂದ್ರೆ ಇಲ್ಲೆ ಕೆ.ಆರ್ ಮಾರ್ಕೆಟ್ ನಲ್ಲೂ ಮಾಡಬಹುದಲ್ಲ.ಅದಕ್ಕ್ಯಾಕೆ ವಿದೇಶಕ್ಕೆ ಹೋಗ್ಬೇಕು.

ಹೀಗೇನಾದ್ರೂ ಕೇಳಿದ್ರೆ ’ನಿಂಗೇನಪ್ಪ ಗೊತ್ತು ಸಿನೆಮಾ ಬಗ್ಗೆ ’ ಅಂತಾರೆ.ನಂಗೆ ಗೊತ್ತಾಗೋದೂ ಬೇಡ ಬಿಡಿ.

ಸಿದ್ಧಸೂತ್ರಗಳನ್ನು ಬಳಸದೆ ತಯಾರಿಸಿದ್ದಕ್ಕೆ ನನಗೆ ’ಎದ್ದೇಳು ’ ಇಷ್ಟ ಆಗಿದ್ದು.ಸಿನೆಮಾ ಅಂದ್ರೆ ಐದು ಸಾಂಗ್,ನಾಲ್ಕು ಫೈಟ್ ಎರಡು ರೇಪ್ ಅನ್ನೋ ಅಂಥ ರೆಡಿಮೇಡ್ ಫಾರ್ಮುಲಾಗಳನ್ನು ಬಿಟ್ಟು ರಿಸ್ಕ್ ತಗೊಂಡಿದ್ದಕ್ಕೆ ಗುರುಪ್ರಸಾದ್ ಗೆ ಅಭಿನಂದನೆಗಳು.

ನನ್ನ ಗೆಳೆಯನೊಬ್ಬನ ಬಳಿ ’ನಾನು ಜಬ್ ವಿ ಮೆಟ್ ನೋಡಿದೆ ’ ಅಂದಿದ್ದಕ್ಕೆ ’ಥೂ ನಿನ್ನಂಥವರಿರೋದ್ರಿಂದಾ ಕಣೋ ಕನ್ನಡ ಚಿತ್ರರಂಗ ಬೆಳೀತಾ ಇಲ್ಲ.ಯಾವಾಗ ನೊಡಿದ್ರೂ ಹಿಂದಿ,ತಮಿಳು ಹೀಗೇ ಬೇರೆ ಭಾಷೆಯ ಚಿತ್ರ ನೋಡ್ತೀರಾ ’ ಅಂತ ಉದ್ದುದ್ದ ಲೆಕ್ಚರ್ ಕೊಟ್ಟಿದ್ದ.

ಅವನು ಹೇಳಿದ್ದೆಲ್ಲಾ ಕೇಳಿಸ್ಕೊಂಡೆ.

ಆಮೇಲೆ ಅವನ ಹತ್ತಿರ ’ನಿನಗೆ ಪರಾಮರ್ಶಿಸು ಅನ್ನೋ ಶಬ್ದದ ಅರ್ಥ ಗೊತ್ತಾ?’ ಕೇಳಿದೆ. ’ಇಲ್ಲ ’ ಅಂದ .ಇರಲಿ ಅವಲೋಕನ ಅಂದ್ರೆ ಗೊತ್ತಾ ಅಂದೆ ’ಗೊತ್ತಿಲ್ಲ ’ ಅಂದ.

ನೋಡು ನಿನಗೆ ಕನ್ನಡದ ಎರಡೇ ಎರಡು ಶಬ್ದದ ಬಗ್ಗೆ ಕೇಳೀದೆ.ಅದನ್ನು ನೀನು ಕೇಳಿಯೇ ಇಲ್ಲ. ನಾನು ನಿನ್ನಷ್ಟು ಕನ್ನಡ ಸಿನೆಮಾ ನೋಡಿಲ್ಲ ಆದ್ರೂ ನನ್ನ ಕನ್ನಡ ಚೆನ್ನಾಗೆ ಇದೆ ’ನಿನ್ನ ಕನ್ನಡ ಪ್ರೇಮಕ್ಕೆ ನನ್ನ ಅಭಿನಂದನೆ ’ ಅಂದೆ.

ಕನ್ನಡ ಸಿನಿಮಾ ನೋಡೋದ್ರಿಂದ ಕನ್ನಡದ ಸೇವೆ ಮಾಡ್ತೀನಿ ಅಂತ ನನಗೆ ಯಾವತ್ತೂ ಅನಿಸಿಲ್ಲ.ಸಿನಿಮಾ ಗೆದ್ರೆ ಅದರಿಂದ ಆ ಸಿನೆಮಾದ ನಿರ್ದೇಶಕ ,ನಿರ್ಮಾಪಕರು ಹಣ ಮಾಡ್ತಾರಷ್ಟೇ.ಅವರು ಕನ್ನಡಕ್ಕೆ ಯಾವುದೇ ರೀತಿಯ ಕಾಣಿಕೆ ನೀಡೋದು ಸಂಶಯವೇ.ಕಾಣಿಕೆ ನೀಡಿಲ್ಲ ಅಂದ್ರೂ ಪರ್ವಾಗಿಲ್ಲ.ಅದು ಬಿಟ್ಟು ಕನ್ನಡದ ಆಸ್ತಿ ಮಾಸ್ತಿಯ ಹೆಸರಿನಲ್ಲಿ ರೌಡಿಯೊಬ್ಬನ ಸಿನೆಮಾ ತೆಗೆಯೋದಕ್ಕೆ ಹೊರಡ್ತಾರೆ.

ಬೇರೆ ಭಾಷೆಯ ಸರಕನ್ನು ಕದ್ದು ತರೋರಿಗಿಂತ ಇಲ್ಲೇ ಇದ್ದು ವಿಭಿನ್ನವಾಗಿ ಯೋಚಿಸಿ ಸಿನೆಮಾ ತೆಗೆಯೋ ಗುರುಪ್ರಸಾದ್ ಜಾಸ್ತಿ ಇಷ್ಟ ಆಗ್ತಾರೆ ನನಗೆ.

ಪತ್ರಿಕೆಗಳಲ್ಲಿ ಕೆಲವೊಮ್ಮೆ ಬರೋ ಹಾಗೆ ’ಮನೆಮಂದಿಯೆಲ್ಲಾ ಕೂತು ನೋಡೋ ಚಿತ್ರ’ ಅನ್ನೋ ಮಾತಿನ ಬಗ್ಗೆ ನನಗೆ ಅಷ್ಟೊಂದು ವಿಶ್ವಾಸವಿಲ್ಲ.ಅಂತ ಚಿತ್ರಗಳು ಹಿಂದೆ ದೂರದರ್ಶನದಲ್ಲಷ್ಟೆ ಬರ್ತಾ ಇತ್ತು.ಹಿಂದೆ ಅಂತ ಯಾಕೆ ಹೇಳಿದೆ ಗೊತ್ತಾ? ಹಿಂದೆ ಇದ್ದಿದ್ದೇ ದೂರದರ್ಶನ ಒಂದೇ.ಮನೆಮಂದಿಯೆಲ್ಲ ಇಷ್ಟ ಇಲ್ಲ ಅಂದ್ರೂ ಆ ಸಿನೆಮಾನ ಜೊತೆಯಲ್ಲಿ ಕೂತು ನೋಡಲೇ ಬೇಕಾದ ಅನಿವಾರ್ಯತೆ ಇತ್ತು.
ಚಿತ್ರದಲ್ಲಿ ರೇಪ್ ಸೀನ್ ಬಂದ್ರೂ ಪಾಪ ಮನೆಮಂದಿಯೆಲ್ಲಾ ಮುಜುಗರದಿಂದಲೇ ಅದನ್ನು ಸಹಿಸಿಕೊಳ್ಳಬೇಕಿತ್ತು.ಹಾಗಾಗಿ ಆ ಚಿತ್ರ ಹೇಗೇ ಇದ್ರೂ ಅದು ’ಮನೆಮಂದಿ ಎಲ್ಲಾ ಜೊತೆಯಾಗಿ ಕೂತು ನೋಡೋ ಚಿತ್ರ’ !

ಆದ್ರೆ ಇವತ್ತು ಅಮ್ಮ ಉದಯದಲ್ಲಿ ’ಶಾಂತಿನಿವಾಸ ’ ನೋಡ್ತಾ ಇದ್ರೆ ಮಗ ರಿಮೋಟ್ ಕಿತ್ಕೊಂಡು ’ಕಸ್ತೂರಿ’ ಯಲ್ಲಿ ಬರೋ ’ಹೊಂಗನಸು’ ನೋಡ್ತಾನೆ.

ಕನ್ನಡದ ಬಗ್ಗೆ ಅಷ್ಟೊಂದು ಅಭಿಮಾನ ಇರೋ ನಿರ್ದೇಶಕರು ಸಿನೆಮಾಗಳಿಗೆ ಹಾಡಲು ಮಾತ್ರ ಅದ್ಯಾಕೆ ಹಿಂದಿ ಗಾಯಕರನ್ನೇ ಹಾಕ್ತಾರೆ ಅನ್ನೋದು ಇನ್ನೂ ಅರ್ಥ ಆಗದ ವಿಷಯ.ಬಹುಷ ಕನ್ನಡೇತರ ಗಾಯಕರಿಗೆ ಕನ್ನಡ ಕಲಿಸುವಂಥ ’ಪುಣ್ಯ’ದ ಕೆಲಸವನ್ನು ಮಾಡ್ತಾ ಇದ್ದಾರೇನೋ ಅವರು.ಪಾಪ ನಾನೇ ಅವರನ್ನು ತಪ್ಪು ತಿಳಿದಿದ್ದೇನೆ ಅನ್ಸುತ್ತೆ!

ಕನ್ನಡದ ನಿರ್ದೇಶಕರೇ ಇನ್ನಾದರೂ ಎದ್ದೇಳಿ!

12 comments:

ಭಾರತೀಯ said...

ಕಾಮತ್ರೇ ಚೆನ್ನಾಗಿ ಬರೆದಿದ್ದೀರಾ... ಕನ್ನಡ ಸಿನೆಮಾ ನೋಡೋದ್ರಿಂದ್ಲೇ ಕನ್ನಡ ಉದ್ಧಾರವಾಗುವ ಹಾಗಿದ್ರೆ ಇಷ್ಟೊತ್ತಿಗೆ ಆಗಿರಬೇಕಿತ್ತು. . . ರಿಮೇಕ್ ಕಾಟ ಜಾಸ್ತಿ ಆಗಿದೆ.. ಶೃಜನಶೀಲತೆಯನ್ನು ಎಲ್ಲೋ ಬಿಟ್ಟು ಬಂದಿದ್ದೇವೆ....

Ittigecement said...

ಸಂದೀಪ್ ..

ವಸ್ತುನಿಷ್ಠವಾಗಿ..
ಬಹಳ ಸೊಗಸಾಗಿ ಬರೆಯುತ್ತೀರಿ...
ಸ್ನೇಹಿತ ಮಲ್ಲಿಕಾರ್ಜುನ್ ನನಗೆ ಕೆಲವು ತೆಲುಗು ಸಿನೇಮಾ ಕಳಿಸಿಕೊಟ್ಟಿದ್ದರು...
"ಆಕಾಶಮಂತೆ" ಅಂತ...
ಎಷ್ಟು ಸುಂದರವಾಗಿ ತಂದೆ ಮಗಳ ಭಾವನೆ, ಸಂಬಂಧವನ್ನು ಚಿತ್ರಿಸಿದ್ದಾರೆ ಅಂದರೆ...
ಅದನ್ನು ನೋಡಿ ..
ಬೇಡ ಬೇಡವೆಂದರೂ ಬರುವ ಕಣ್ಣೀರೇ ಸಾಕ್ಷಿ....!
ಪ್ರಕಾಶ್ ರೈ ಎಂಥಹ ನಟರೆಂದು ಅದರಲ್ಲಿ ಗೊತ್ತಾಗುತ್ತದೆ...

ಭಾವನೆಗಳೇ ಮುಖ್ಯವಾಗಿರುವಾಗ ಲೊಕೇಷನ್, ಹಣ ಅಷ್ಟು ಮುಖ್ಯವೆನಿಸುವದಿಲ್ಲ...
" ಚಿಲ್ಡ್ರನ್ ಆಫ್ ಹೇವನ್" ನೋಡಿ
ಸರಳವಾದ ಕಥೆ..
ಹೆಚ್ಚಿಗೆ ಖರ್ಚೇ ಇಲ್ಲದೆ ಮಾಡಿದ ಚಿತ್ರ...

ಪ್ರತಿಕ್ರಿಯೆ ಉದ್ದವಾಯಿತು...
ನಿಮ್ಮ ಲೇಖನ ಇಷ್ಟೆಲ್ಲ ಬರೆಸಿ ಬಿಟ್ಟಿತು...

ನಿಮ್ಮ ಬರವಣಿಗೆಗೆಗೂ ಅಭಿನಂದನೆಗಳು...

vinay said...

dhayaviTTu guruprasad nirdeshanada modala chitra "MaTa" nodi. "eddeLu" gintaloo bahaLa chennagide.

sunaath said...

ಸಂದೀಪ,
ಚಿತ್ರರಂಗದ ವಿಮರ್ಶೆಯನ್ನು ವಸ್ತುನಿಷ್ಠವಾಗಿ, ಸರಳ ಭಾಷೆಯಲ್ಲಿ, ಮಾಡಿದ್ದೀರಿ.
ಹಳೆಯ ಸಂಗತಿಯೊಂದು ನೆನಪಿಗೆ ಬರುತ್ತಿದೆ,(ಅಷ್ಟೇನೂ ಪ್ರಸ್ತುತವಲ್ಲದಿದ್ದರೂ ಸಹ):
ಬೇಂದ್ರೆಯವರ ಶಿಷ್ಯರಾದ ಶರ್ಮಾ ಅವರು ಕಮ್ಯುನಿಸ್ಟ್ ಲೇಡರ್.
ಅವರು ತಾವು ಬರೆದ ನಾಟಕವೊಂದನ್ನು ನೋಡಲು ಬೇಂದ್ರೆಯವರನ್ನು ಆಹ್ವಾನಿಸಿದ್ದರು. ಆ ನಾಟಕದಲ್ಲಿ ಮೇಲಿಂದ ಮೇಲೆ "ಎದ್ದೇಳಿ, ಎಚ್ಚರಾಗಿರಿ!" ಎನ್ನುವ ಮಾತು ಬರುತ್ತಿತ್ತು.
ಆಗ ಬೇಂದ್ರೆ ಹೇಳಿದ ಮಾತು:" ಶರ್ಮಾ, ಪ್ರೇಕ್ಷಕರೆಲ್ಲ ಎಚ್ಚರಾಗ್ಯಾರ. ಎದ್ದು ಮನೀಗೆ ಹೋಗ್ಯಾರ!"

Unknown said...

ಸಂದೀಪ್ ಸಾರ್,
ವಸ್ತುನಿಷ್ಠವಾಗಿ..
ಬಹಳ ಸೊಗಸಾಗಿ ಬರೆದಿದ್ದಿರಿ ..ನಿಮ್ಮ ಲೇಖನದ ಆಶಯ ಈಡೇರಲಿ ಎ೦ದು ಹಾರೈಸುತ್ತೇನೆ ..
@ ಪ್ರಕಾಸ್ ಸಾರ್,
"ಲಾಲಿ " ಎ೦ದು ಒ೦ದು ಚಿತ್ರವಿದೆ .. ಅದರಲ್ಲಿ ತ೦ದೆ ಹಾಗು ಮಗಳ ಸ೦ಬ೦ದದ ಬಗ್ಗೆ ದಿನೇಶ್ ಬಾಬು ಅವರ ನಿರ್ದೇಶನದಲ್ಲಿ ವಿಷ್ಣುವರ್ದನ್ ಅವರು ಮನ ತಟ್ಟು ವ೦ತೆ ಅಭಿನಯಿಸಿದ್ದಾರೆ .. ಸಮಯವಿದ್ದಾಗ ನೋಡಿ ..

Anonymous said...

sandeep.... super article...
eddeLu manjunatha chitra da bagge yaaru yEnE hELali... nanagantoo film hiDisitu...(koneya hattu nimishada bheekara draamada horataagi)

film budget 50 laksha ante.. aadre 3 varsha production yELEda kaarana baDDi duDDu seri 1 kOTi aagide ante... aadre manjunaathana modalane vaarada collection 1.25 crore...

kanndana preetisodu andre hindi tamiLu telugu dweshisodu alla annO nimma maatu noorakke nooru opteeni...nanna abhipraaya koodaa illi tanaka ade..aadre naann kela anya bhaashika snehitara hattira maatanaadidaaga nanna abhipraaya sadhyadallE badalaayisikoLLbekaagtadeno anta annista irodu vishaada aaadaroo satya..:(

Pramod said...

ಈ ವಾರ ನೋಡಲೇಬೇಕು. ತಾವರೆಕೆರೆ ಬಾಲಾಜಿ ಥಿಯೇಟರ್ನಲ್ಲಿ ನೋಡೋಣ ಅ೦ತಾ ಯೋಚಿಸುವಷ್ಟರಲ್ಲಿ ಅಲ್ಲಿ೦ದು ಎತ್ತ೦ಗಡಿ ಮಾಡಿ ಯಾವುದೋ ಡಬ್ಬಾ ರೌಡಿಸ೦ ಚಿತ್ರ ಹಾಕಿದ್ದಾರೆ. ಈಗ ಪಿವಿಆರ್ ಗತಿ..:)

ಸುಧೇಶ್ ಶೆಟ್ಟಿ said...

chennaagiththu movie...

aadre yaavaagalu ide dhaatiya movie maadtha idre janaru ishta padalla... guruprasad avru bere bere prayoga maadbeku

ಜಲನಯನ said...

ಸಂದೀಪ್ ನಿಮ್ಮ ಮಾತು ಅಕ್ಷರಶಃ ನಿಜ...ಕನ್ನಡ ಸಿನಿಮಾ ನೋಡೋದ್ರಿಂದಲೇ ಕನ್ನಡ ಬೆಳೆಯೋಹಾಗೇನೂ ಇಲ್ಲ...ಮನರಂಜನೆಗೆ ಅಂತ ಹೋಗ್ತೀವಿ, ಹಿಂದೆ ಮೂಕಿಗಳಿದ್ದಾಗಲೂ ಈಗ ಭಾಷೆ ಇರುವಾಗಲೂ, ಭಾಷೆ-ಭಾವನೆಗಳ ಮೂಲಕ ಮನರಮ್ಜನೆಯಾದರೆ ಸಾಕು..ಭಾಷೆ ಬೆಳೆಸೊಕೆ ಬೇರೆ ವಿಧಗಳಿವೆ..ವಿಧಾನಗಳಿವೆ..

PaLa said...

೭. ಅವಲೋಕನ (ಸಂ) (ನಾ) ೧ ನೋಡುವುದು ೨ ಪರಿಶೀಲನೆ ೩ ದೃಷ್ಟಿ

Anonymous said...

ತುಂಬಾ ಅರ್ಥಪೂರ್ಣ ಬರಹ ಸಂದೀಪ್. ಒಂದು ಬಾರಿ ಕನ್ನಡದ ರಕ್ಷಣೆಯ (ಭಕ್ಷಣೆ) ಹೊಣೆ ಹೊತ್ತ ಸಂಘಟನೆಯವರು ಹೀಗೆ ಹೇಳಿದಾಗ ನಾನು ಒಂದೆರಡು ಪದಗಳ ಅರ್ಥ ಕೇಳಿದ್ದೆ.. ಫಲಿತಾಂಶ ಸೊನ್ನೆ.. ಕನ್ನಡದ ರಕ್ಷಣೆ ಎಂಬುದು ಒಂದು ದಂಧೆ ಮತ್ತು ಕ್ಲೀಷೆ ಆಗಿದೆ ಅನ್ನೋದು ನನ್ ಅಭಿಪ್ರಾಯ...

Prabhuraj Moogi said...

ನಾವು ಎದ್ದೇಳಿ ಅಂತ ಮುಜಾನೆ ಅಮ್ಮ ಎದ್ದೇಳಿಸಲಿ ಕಿರುಚಿದರೂ ಎದ್ದೇಳಲ್ಲ, ಎದ್ದೇಳು ಅಂದಷ್ಟು ಇನ್ನಷ್ಟು ಮಲಗೊ ಜಾಯಮಾನದವರು. ಗುರುಪ್ರಸಾದ್ ಅವರಿಂದ ಮಠ ಚಿತ್ರದ ನಂತರ ಮತ್ತೊಂದು ಒಳ್ಳೆ ಚಿತ್ರ ಬಂದಿದೆ ಅಂತ ಆಯ್ತು ನೋಡಬೇಕು.
ನನಗಂತೂ ಈ ರಿಮೇಕ ಹಾವಳಿಯಿಂದ ಬೇಸತ್ತು ಹೋಗಿದೆ, ಯಾವುದೊ ಹಾಡು ಇಷ್ಟ ಆಯ್ತು ಅಂತಿದ್ದಂಗೆ ಅದಾ ತಂಇಲು ಪಿಲ್ಮದಪ್ಪಾ, ಯಾವುದೊ ಪೋಸ್ಟರ ನೋಡಿ ಇದು ಚೆನ್ನಗಿರಬಹುದು ಅಂತಿದ್ದಂಗೆ ಇದಾ ತೆಲಗು ಆ ಪಿಲ್ಮ ಇತ್ತಲ್ಲ ಅದರ ರಿಮೇಕು ಅಂತಿದ್ದರೆ ಬೇಜಾರಾಗುತ್ತದೆ... ಕನ್ನಡ ಚಿತ್ರ ನೋಡಿ ಬಹಳ ದಿನ ಆಯ್ತು ಯಾವುದೂ ಒಳ್ಳೆ ಸ್ವಂತಿಕೆಯ ಫಿಲ್ಮ್ ಅದೂ ಅದೇ ಹಳೆಯ ಲವ್ ಫೈಟು ವಿಚಾರ ಬಿಟ್ಟು ಬಂದಿದ್ದೇ ಗೊತ್ತಿಲ್ಲ...
ಸೈನೈಡ ಕೂಡ ಚೆನ್ನಾಗಿತ್ತು...