Thursday, October 20, 2011

ಹಳೆಗನ್ನಡ, ಹೊಸಗನ್ನಡ, ಸುಲಭ ಕನ್ನಡ, ಕಷ್ಟ ಕನ್ನಡ!

ತುಂಬಾ ತಿಳಿದಿರುವವರು, ತುಂಬಾ ಓದಿರೋರು, ಪಂಡಿತರು, ಭಾಷಾ ತಜ್ಞರು ಸೇರಿ ಒಂದು ಒಳ್ಳೆಯ ನಿರ್ಧಾರಕ್ಕೆ ಬಂದಿದ್ದಾರಂತೆ! ಅದೇನೆಂದರೆ ಕನ್ನಡ ಭಾಷೆಯ ಅಕ್ಷರಗಳನ್ನು ಸರಳೀಕರಣಗೊಳ್ಳಿಸೊದು. ಕನ್ನಡಕ್ಕೆ 'ಹೆಚ್ಚಾದ' ಅಕ್ಷರಗಳನ್ನು ಎತ್ತಿ ಕಸದ ಬುಟ್ಟಿಗೆ ಬಿಸಾಕಿ, ಕಷ್ಟದ ಅಕ್ಷರಗಳನ್ನು, ಒತ್ತಕ್ಷರಗಳನ್ನು ಎರಡೂ ಬದಿಯಿಂದ ಬಡಿದು ಸರಳಗೊಳಿಸೋದು ಅವರ ಉದ್ದೇಶ. ಅವರ ಪ್ರಯತ್ನ ಸಫಲವಾಗಲಿ ಅನ್ನೊದು ಹಾರೈಕೆ.

ಹಾಗೆಯೆ ಇನ್ನೂ ಕೆಲವು ವಿಷಯಗಳನ್ನು ಸರಳೀಕರಣಗೊಳಿಸಿದರೆ ಶ್ರೀ ಸಾಮಾನ್ಯರಿಗೆ ತುಂಬಾ ಉಪಕಾರವಾಗುತ್ತಿತ್ತು.

ಈ ಐಟಿ,ಬಿಟಿಯಿಂದಾಗಿ ಪಾಪ ಕೆಲಸಕ್ಕೆ ಹೋಗೋ ಹೆಣ್ಣು ಮಕ್ಕಳಿಗೆ ಅಡುಗೆ ಮಾಡೋದೇ ಒಂದು ದೊಡ್ಡ ತಲೆ ನೋವಾಗಿಬಿಟ್ಟಿದೆ. ಆದ್ದರಿಂದ ಸ್ವಲ್ಪ ಬಲ್ಲ ಹೆಂಗಸರೆಲ್ಲಾ ಸೇರಿ ಅಡುಗೆಯ ಕೆಲಸವನ್ನು ಸರಳೀಕರಣಗೊಳಿಸಿದ್ದಲ್ಲಿ ತುಂಬಾ ಸಹಾಯವಾಗುತ್ತಿತ್ತು!

ಈ ಚಿಕನ್ ಬಿರಿಯಾನಿ ಮಾಡೋದು ಹೇಗೆ ಅಂತ ಏನಾದರು ಹುಡುಕಿದ್ರೆ ಮಾರುದ್ದ ಪಟ್ಟಿ ಸಿಗುತ್ತೆ. ಬಲ್ಲವರೆಲ್ಲಾ ಸೇರಿ ಈ ಚಿಕನ್ ಬಿರಿಯಾನಿಯನ್ನು ಸರಳೀಕರಣಗೊಳಿಸಿದ್ರೆ ಚೆನ್ನಾಗಿರ್ತಿತ್ತು. ಬರೀ ಅನ್ನಕ್ಕೆ ಒಂದೆರಡು ಚಿಕನ್ ಪೀಸ್ ಒಗೆದು ಒಂದಿಷ್ಟು ಖಾರದ ಪುಡಿ ಎರಚಿದರೆ ಚಿಕನ್ ಬಿರಿಯಾನಿ ಸಿದ್ಧ ಆಗೋ ಥರ ಯಾರಾದ್ರೂ ಮಾರ್ಪಾಡು ಮಾಡಿದ್ರೆ ತುಂಬಾ ಖುಷಿ ಆಗ್ತಿತ್ತು. ನಿಂದೊಳ್ಳೆ ಕಥೆ ಆಯ್ತು ಮಾರಾಯ ನಿನಗೆ ಬೇಕಿದ್ರೆ ಹಾಗೇ ಮಾಡಿ ತಿನ್ನು ಅಂತ ಬಯ್ಯಬೇಡಿ. ಎಲ್ಲದಕ್ಕೂ ನೀತಿ, ನಿಯಮಗಳಿರುತ್ತವೆ. ಹಾಗಾಗಿ ಆ ನೀತಿ ನಿಯಮಗಳನ್ನು ಸರಳಗೊಳಿಸಿದ್ರೇನೇ ಚೆನ್ನ!

ಎರಡನೆಯದಾಗಿ ಈ ಪರೀಕ್ಷಾ ವಿಧಾನ ಸರಳೀಕರಣ ಆಗ್ಬೇಕು. ಈ ಸಂಧಿ, ಸಮಾಸ, ಛಂದಸ್ಸು, ಎಲ್ಲವನ್ನೂ ಎತ್ತಿ ಒಗೆದು ಒಂದೇ ಒಂದು ಪ್ರಶ್ನೆ ಇರಬೇಕು ಪರೀಕ್ಷೆಗೆ.

ಅದೇನೆಂದರೆ " ನಿಮಗೆನು ಗೊತ್ತು ಬರೀರಪ್ಪ ... " ಮಾರ್ಕ್ಸ್ :೧೦೦

ಕನ್ನಡ ಸರಳೀಕರಣಗೊಂಡ ಮೇಲೆ ಇನ್ನು ನಾಲ್ಕು ಕನ್ನಡಗಳಿರುತ್ತವೆ!

ಹಳೆಗನ್ನಡ, ಹೊಸಗನ್ನಡ, ಸುಲಭ ಕನ್ನಡ ಮತ್ತು ಕಷ್ಟ ಕನ್ನಡ! (ಮಂಗಳೂರು ಕನ್ನಡ ಸಿನೆಮಾದಲ್ಲಿ ಮಾತ್ರ! ಬೆಂಗಳೂರು ಕನ್ನಡ ಬೆಂಗಳೂರಲ್ಲಿ ಮಾತ್ರ!)

ಇನು ಕನದ ಸರಲಿಕರನಗೊಲಿಸಿದರೆ ನನಗೆ ಲೆಕನ ಬರೆಯುದು ಇನು ಸುಲಬ. ನಿಮಗೆ ಒದುದು ಕಶತ ಆದರೆ ಮತರ ನನಗೆ ಬಯಬೆದಿ!!!

6 comments:

Dr.D.T.Krishna Murthy. said...

ಚಂದದ ಬರಹ.ಇನ್ನು ಸ್ವಲ್ಪ ದಿನಗಳಲ್ಲಿ ಕನ್ನಡವನ್ನು ಸರಳೀಕರಣಗೊಳಿಸಿ ಇಂಗ್ಲೀಶ್ ಲಿಪಿಯಲ್ಲಿಯೇ ಕನ್ನಡ ಓದಬೇಕಾಗಬಹುದು!

sunaath said...

ಕನ್ನಡಿಗರಿಗೆ ಕನ್ನಡ ತಿಳಿದುಕೊಳ್ಳುವದು ಕಷ್ಟವಾಗುತ್ತದೆ ಎನ್ನುವ ಮಹೋದ್ದೇಶದಿಂದ ಕನ್ನಡವನ್ನು ಸರಳೀಕರಿಸಲಾಗುತ್ತಿದೆ ಎನ್ನುವ ಸುದ್ದಿಯನ್ನು ತಿಳಿದು ಸಂತೋಷವಾಯಿತು. ಕನ್ನಡ ಮಕ್ಕಳಿಗೆ ಗಣಿತವನ್ನು ತಿಳಿದುಕೊಳ್ಳುವದು ಇನ್ನೂ ಕಷ್ಟದ ಕೆಲಸ. ಆದುದರಿಂದ ಅಂಕಿ ಹಾಗು ಮಗ್ಗಿಗಳನ್ನು ೧ರಿಂದ ೧೦ರವರೆಗೆ ಮಾತ್ರ ಪರಿಮಿತಗೊಳಿಸಬೇಕು ಹಾಗು ಬೀಜಗಣಿತ, ಭೂಮಿತಿ ಇವುಗಳನ್ನು ಕಸದ ಬುಟ್ಟಿಗೆ ಎಸೆದು, ಕೇವಲ ಕೂಡಿಸುವ ಹಾಗು ಕಳೆಯುವ ಲೆಕ್ಕಗಳನ್ನು ಮಾತ್ರ ಇಟ್ಟುಕೊಳ್ಳಬೇಕು ಎಂದು ನಮ್ರವಾಗಿ ವಿನಂತಿಸುತ್ತೇನೆ.

Chaithrika said...

ಹ್ಹ ಹ್ಹ... ಪಂಡಿತರಿಗೆ ಕೆಲಸವಿಲ್ಲವೆಂದು ತೋರುತ್ತದೆ.

Subrahmanya said...

ಅರೆ ! ಎಂತಾ ಉಪಾಯ ಮಹರಾಯೆರೆ !. ಆದಷ್ಟು ಬೇಗ ಕನ್ನಡ, ಗಣಿತ , ವಿಗುನಾನ ಎಲ್ಲವನ್ನೂ ಸರ್ಅಳ ಮಾಡಿಬಿಡಿ. ಒಳ್ಳೇದಾಗುತ್ತೆ :)

Pramod said...

ಒ೦ದು ನಿಮಿಷದಲ್ಲಿ ಫೋಟೊ, ಒ೦ದು ನಿಮಿಷದಲ್ಲಿ ಮ್ಯಾಗಿ, ಸದ್ಯದ ಟ್ರೆ೦ಡ್ ಒ೦ದು ನಿಮಿಷದಲ್ಲಿ ಕನ್ನಡ ಕಲಿಯೋದು. ಇನ್ಸ್ಟಾ೦ಟ್ ಶಾರ್ಟ್ ಕಟ್ ಜೆನರೇಷನ್.
ಕನ್ನಡ ಸರಳೀಕರಿಸುವುದು ಈ ಕ್ಲಿಷ್ಟಕರ ವಿಧಾನ ಯಾರಿಗಾಗಿ?

Manjunatha Kollegala said...

ಅವಧಿಯಲ್ಲಿ ಹಾಕಿದ ಕಾಮೆಂಟನ್ನೇ ಇಲ್ಲಿ ಮತ್ತೆ ಹಾಕುತ್ತಿದ್ದೇನೆ:

ಅಯ್ಯೋ ಕನ್ನಡ ಕತ್ತಿ ವೀರರ ಜೊತೆ ಗುದ್ದಾಡಿ ಸಾಕಾಗಿದೆ ಸ್ವಾಮಿ. ಪ್ರವಾಹದ ವಿರುದ್ಧ ಹಾಯುವುದರ ಬದಲು ಅದರ ಜೊತೆಗೆ ತೇಲುತ್ತಾ ಅದೆಲ್ಲಿ ಎತ್ತಿಹಾಕುತ್ತೋ ಅಲ್ಲಿ ಬೀಳೋದೇ ಸರಿ ಅನ್ಸುತ್ತೆ. ಅಂದಹಾಗೇ ಹೀಗೆ ತೇಲಿ ಹೋಗೋದೇ ಆದರೆ ಇನ್ನಷ್ಟು ಸರಳೀಕರಣ ಪ್ರಯತ್ನವನ್ನಾದರೂ ಮಾಡಬಹುದು. ಕೆಲವು ಮುಖ್ಯವಾದ್ದು ಹೀಗಿದೆ:

೧) ಇವತ್ತಿನ ಮುಖ್ಯ ಕಳಕಳಿ ಮಕ್ಕಳು ಕನ್ನಡ ಕಲಿಯೊಲ್ಲ ಅಂತ ತಾನೆ? ಅದಕ್ಕೇ ತಾನೆ ಕನ್ನಡ ’ಸರಳ’ ಆಗಬೇಕು. ಸರಿಯಪ್ಪ, ಇವತ್ತಿನ ಮಕ್ಕಳನ್ನೇ ಒಂದು ಸಮೀಕ್ಷೆ ನಡೆಸೋಣ ಯಾವುದು ಕಷ್ಟ ಅಂತ. ಬಹಳಷ್ಟು ಮಕ್ಕಳು Maths ಕಿತ್ತೊಗೀರಿ ಅನ್ನದಿದ್ರೆ ಕೇಳಿ. ಅದು ತೀರ ತಪ್ಪಾತು, ತೀರ ಒಂದು subjectನೇ ಕಿತ್ತೊಗೆಯೋದು ಅಂದ್ರೆ. ಅದನ್ನೇ ತುಸು ಸರಳಗೊಳಿಸಿದರೆ ಅವೂ ಖುಷಿಯಿಂದ ಕಲಿತಾವು. ಸುಮ್ನೇ ಕೂಡೋದು ಕಳೆಯೋದು ಸಾಕಪಾ, ಅದ್ಯಾಕೆ ಗುಣಾಕಾರ, ಭಾಗಾಕಾರ ಎಲ್ಲ? 8 + 8 = 16; 8 x 8 = 16ಏ. ಹಾಗೇ 8 – 8 = 0; 8/8 = ಅದೂ ಸೊನ್ನೇನೇ. ನನ್ನ ಕೇಳಿದ್ರೆ ಈ + ಮಾರ್ಕೂ ದಂಡ. ಸುಮ್ನೇ ಒಂದು ಅಡ್ಡಗೀಟು ಹಾಕಿದ್ರೆ ಆಯ್ತು. ಪ್ಲಸ್ ಅಂದ್ರೆ ಮೈನಸ್ಸು. ಮೈನಸ್ ಅಂದ್ರೂ ಮೈನಸ್ಸೇ. ಎಲ್ಲಾ ಕಳೆದಮೇಲೆ ಕೊನೆಗೆ ಉಳಿಯೂದೂ ಸೊನ್ನೇನೇ. ವಿಷ್ಯಾ ಇಷ್ಟು ಸಿಮ್ಪಲ್ ಇರುವಾಗ ಈ ಸೈನ್ ತೀಟಾ, ಕಾಸ್ ತೀಟಾ, ಟ್ರಿಗನಾಮೆಟ್ರಿ, ಕ್ಯಾಲ್ಕುಲಸ್ಸು ಅಂದೆಲ್ಲಾ ಯಾಕೆ ಬೇಕು. ನಿಜ ಹೇಳಬೇಕು ಅಂದ್ರೆ, ಕನ್ನಡಿಗರ ಏಳಿಗೆಯನ್ನು ಸಹಿಸದೇ, ಅವರು ಮೇಲೇಳುವುದನ್ನು ತುಳಿಯಕ್ಕೋಸ್ಕರ ಆಂಗ್ಲರು ಆರ್ಯರು ಸೇರಿ ಮಾಡಿರೋ ಹುನ್ನಾರ ಇವೆಲ್ಲಾ. ಇದರಿಂದಲೇ ನಮ್ಮ ಕಂದಮ್ಮಗಳು ಸಾಲೀ ಬಿಟ್ಟು ದನ ಕಾಯೋ ಹಾಗಾದ್ದು.