Thursday, July 31, 2008

ಗುರುವಂದನೆ






ನನ್ನ ಬ್ಲಾಗಿಗೆ ಮೊದಲ ಪ್ರತಿಕ್ರಿಯೆ ಬಂದಿದ್ದು ಒಬ್ಬ ಲೇಖಕಿ / ಕವಯತ್ರಿ ಯಿಂದ !!
ತೇಜಸ್ವಿನಿ ಹೆಗಡೆಯವರು ನನ್ನ ಬ್ಲಾಗಿಗೆ ಅದರಲ್ಲೂ ನಾನು ಟೀಚರ್ ಗಳಿಗೆ ನಮನ ಸಲ್ಲಿಸಿದ ಬಗೆಗೆ ಅಬಿನಂದನೆ ಸಲ್ಲಿಸಿದ್ದಾರೆ.
ನಮಗೆ ನಿಜ ಜೀವನದಲ್ಲಂತೂ ಗುರುವಂದನೆ ಸಲ್ಲಿಸುವ ಭಾಗ್ಯ ಸಿಗೋದು ತುಂಬಾ ಕಮ್ಮಿ.
ಕೊನೇ ಪಕ್ಷ ಈ ರೀತಿಯಾದರೂ ಗುರುಗಳನ್ನು ನೆನೆಸುವ ಭಾಗ್ಯ ಸಿಕ್ಕಿರೋದು ನನ್ನ ಪುಣ್ಯ.
ನನಗೆ ಚಿಕ್ಕಂದಿನಲ್ಲಿ ಗುರುಗಳ ಬಗ್ಗೆ ಅಷ್ಟೇನೂ ಗೌರವಯುತ ಭಾವನೆ ಇರಲಿಲ್ಲ. ಇದ್ರೂ ಅದು ಕೇವಲ ಭಯದಿಂದಾಗಿತ್ತು!’ಗುರು ಬ್ರಹ್ಮ ಗುರು ವಿಷ್ಣು ’ ಸ್ತೋತ್ರಗಳೂ ಅಷ್ಟೊಂದು ನಾಟುತ್ತಿರಲಿಲ್ಲ. ಟೀಚರ್ ಗಳಿಗೆ ಸಂಬಳ ಕೊಡ್ತಾರೆ ಅದಿಕ್ಕೆ ಅವರು ಪಾಠ ಮಾಡ್ತಾರೆ ಅದರಲ್ಲೇನು ವಿಶೇಷ ಅನ್ನೊ ಉಡಾಪೆ ಮಾತನ್ನೂ ಆಡ್ತಾ ಇದ್ವಿ ನಾವೆಲ್ಲ ಸ್ನೇಹಿತರು.
ಆದ್ರೆ ಈಗಿಗ ಟೀಚರ್ ಗಳು ತುಂಬಾ ನೆನಪಾಗ್ತಾರೆ.
ಈ ಉಗ್ರಗಾಮಿಗಳಿಗೂ ನನಗೆ ಸಿಕ್ಕಿರೋ ಹಾಗೆ , ಒಳ್ಳೆಯ ಟೀಚರ್ ಗಳು ಸಿಕ್ಕಿದ್ರೆ ಎಷ್ಟು ಚೆನ್ನಾಗಿರ್ತಾ ಇತ್ತಲ್ವ ? ಅಂತಾನೂ ಅನ್ನಿಸುತ್ತೆ.
ಚಿಕ್ಕವರಿರ್ಬೇಕಾದ್ರೆ ಟೀಚರ್ ಗಳು ಕಲಿಸಿರೋ ಒಂದೊಂದು ವಿಷಯಾನೂ ಹೇಗೆ ಉಪಯೊಗಕ್ಕೆ ಬೀಳ್ತಾವೆ ಅಲ್ವ??
ನಮ್ಮೆಲ್ಲರ ಜೀವನದಲ್ಲೂ ಬಾಲ್ಯದ ಘಟನೆಗಳು ಎಷ್ಟು ಪ್ರಭಾವ ಬೀರಿರುತ್ತವೆ. ಬಹುಶ: ಅದಿಕ್ಕೆ ಇರ್ಬೇಕು ’ಮೈ ಆಟೊಗ್ರಾಫ್ ’ ಚಿತ್ರ ಆ ಪರಿ ಹಿಟ್ ಆಗಿದ್ದು.

ಎಷ್ಟೊಂದು ಹೊಡೀತಾ ಇದ್ರು ಮೇಷ್ಟ್ರು ,ಕೆಲವೊಮ್ಮೆ ಬೆಂಚ್ ಮೇಲೆ ಕೂರೋಕೆ ಆಗ್ತಾ ಇರ್ಲಿಲ್ಲ ಏಟು ತಿಂದ ಮೇಲೆ.ಬೇಜಾರಂದ್ರೆ ನಾವು ತಂದುಕೊಟ್ಟ ಬೆತ್ತದಿಂದಲೇ ನಮಗೆ ಹೊಡೀತ ಇದ್ರು.
"ಸಂದೀಪ ನಾಳೆ ನನಗೆ ಒಳ್ಳೆಯದೊಂದು ಬೆತ್ತ ತಂದುಕೊಡ್ಬೇಕು " ಅಂತ ಅಪ್ಪಣೆಯಾಗಿದ್ದೆ ತಡ, ಹುಡುಕಾಟ ಶುರು.
ರಸ್ತೆ ಬದಿಯಲ್ಲಿರೋ ಗಾಳಿಮರ ಹತ್ತಿ ಚೆನ್ನಾಗಿರೋ ಬೆತ್ತ ಕಡಿದು ಅದನ್ನು ಚೂರಿಯಿಂದ ಪಾಲಿಷ್ ಮಾಡಿ ಟೀಚರ್ ಗೆ ಕೊಟ್ರೆ ಫ್ರೆಂಡ್ಸ್ ಎಲ್ಲ ಬೈತಾ ಇದ್ರು "ಮಗನೇ ಯಾಕೋ ಇಷ್ಟು ಒಳ್ಳೇ ಬೆತ್ತ ತಂದುಕೊಟ್ಟೆ " ಅಂತ.
ಆದ್ರೆ ನನಗೆ ಏನೋ ಖುಷಿ ಟೀಚರ್ thanks ಅಂತ ಹೊಗಳಿದಾಗ.
ಆದ್ರೆ ಯಾವಾಗ ಅದೇ ಬೆತ್ತದಿಂದ ನನಗೂ ಏಟು ಬೀಳ್ತಾ ಇತ್ತೊ ಆವಾಗ ಅನ್ನಿಸ್ತಾ ಇತ್ತು ಇಷ್ಟು ಒಳ್ಳೆಯ ಬೆತ್ತ ಕೊಡ್ಬಾರ್ದಿತ್ತು ಅಂತ!!
’ನಾನೆ ಟೀಚರ್ ಬೆತ್ತ ತಂದುಕೊಟ್ಟಿದ್ದು ಸ್ವಲ್ಪ ರಿಯಾಯಿತಿ ಕೊಡಿ ’ ಅಂತ ಕೇಳೋಣ ಅಂತ ಅನ್ನಿಸ್ತಾ ಇತ್ತು . ಆದ್ರೆ ಧೈರ್ಯ ಬರ್ತಾ ಇರ್ಲಿಲ್ಲ.

ಇಂತ ಟೀಚರ್ ಗಳೇ ಅಲ್ವಾ ನಾವು ತಪ್ಪು ಮಾಡಿದಾಗ ನಮ್ಮನ್ನೆಲ್ಲ ಹೊಡೆದು ಸರಿ ಮಾಡಿದ್ದು.

ಆದ್ರೆ ಈಗ ಮಕ್ಕಳಿಗೆ ಹೊಡೆತ ತಡ್ಕೊಳ್ಳೋ ಶಕ್ತಿನೂ ಇಲ್ಲ ! ಟೀಚರ್ ಗೆ ಹೊಡಿಯೊ ಧೈರ್ಯಾನೂ ಇಲ್ಲ !!
ಫೋಟೊ ಕೃಪೆ :www.wcu.edu

Wednesday, July 30, 2008

ಸ್ನೇಹಾ ನಾ ಪ್ರೀತಿ ನಾ ???



’ಜಾನೆ ತೂ ಯಾ ಜಾನೆ ನಾ ’ ನೋಡಿದೆ. ಇಷ್ಟ ಆಯ್ತು!

ಕಥೆ ಏನಪ್ಪಾ ಅಂದ್ರೆ ಸ್ನೇಹಾನಾ ಪ್ರೀತಿನಾ ಅಂತ ಗೊತ್ತಾಗದಿರೋ ಮಾನಸಿಕ ತೊಳಲಾಟ..

ಎಲ್ಲರ ಬದುಕಿನಲ್ಲೂ ಇಂಥ ಒಂದು ಸನ್ನಿವೇಶ ಬಂದೇ ಬರುತ್ತೆ ಅಂತ ಕಾಣ್ಸುತ್ತೆ.

ಇದನ್ನು handle ಮಾಡೋದು ಅಷ್ಟೇ ಕಷ್ಟ. ಸ್ವಲ್ಪ ಎಡವಟ್ಟಾದ್ರೂ ಅತ್ತ ಪ್ರೀತಿನೂ ಇಲ್ಲ ಇತ್ತ ಸ್ನೇಹಾನೂ ಇಲ್ಲ.


ನ ಘರ್ ಕಾ ನಾ ಘಾಟ್ ಕಾ ಅಂತಾರಲ್ಲ ಆ ಪರಿಸ್ಥಿತಿ.

ನಾವು ಹುಡುಗರೇ ಹೀಗಾ? ಹುಡುಗಿಯರು ಫ್ರೆಂಡ್ ಶಿಪ್ಪಲ್ಲಿ ಎರಡು ಒಳ್ಳೆಯ ಮಾತನ್ನಾಡಿದ್ರೆ ಅದನ್ನೇ ಪ್ರೀತಿ ಅಂದ್ಕೋತೀವ??

ಅಥವಾ ಹುಡುಗಿಯರೇ ಆ ರೀತಿ ಭಾವನೆ ಉಂಟು ಮಾಡ್ತಾರಾ?? ಹೇಳೋದು ಸ್ವಲ್ಪ ಕಷ್ಟ !

ಅಷ್ಟಕ್ಕೂ ಪ್ರೀತಿ ಅಂತಾನೆ ಅಂದ್ಕೋಳ್ಳೋಣ ,ಅದನ್ನು ಹೇಳಿದ್ರೆ ಹುಡುಗಿಯರು ಯಾಕೆ ಸಿಟ್ಟು ಮಾಡ್ಕೋತಾರೆ??

"ಛೇ ನಿನ್ನನ್ನು ’ಆ’ ದೃಷ್ಟಿಯಿಂದ ನೋಡೆ ಇಲ್ಲ ಕಣೋ " ಅಂತ ಯಾಕೆ ಸಿಟ್ಟಾಗ್ತಾರೆ? ನಾವು ಅವರನ್ನು ’ಆ ದೃಷ್ಟಿಯಿಂದ ’ ನೋಡಿದ್ದೇನಾದ್ರೂ ತಪ್ಪಾ??

ಇಷ್ಟೆ ಆದ್ರೆ ಪರ್ವಾಗಿಲ್ಲ "ನೀನು ಇಷ್ಟು ಕಚಡಾ ಅಂತ ಗೊತ್ತಿರ್ಲಿಲ್ಲ " ಅಂತ ಬಯ್ಯೋ ಹುಡುಗಿಯರೂ ಇದ್ದಾರಲ್ವ? ಅವ್ರಿಗೇನನ್ನೋದು!!!

ಹಾಗೆ ನೋಡಿದ್ರೆ ಎಲ್ಲಾ ಸಂಬಂಧಗಳೂ ತುಂಬಾ ಕ್ಲಿಷ್ಟಕರ. Handle with care ಅಂತ ಎಲ್ಲಾ ಸಂಬಂಧಗಳೂ ಟ್ಯಾಗ್ ಹಾಕಿಕೊಂಡೇ ಇರುತ್ತವೆ,ನಾವು ಸರಿಯಾಗಿ ಗಮನಿಸಿರುದಿಲ್ಲ ಅಷ್ಟೆ!

’ಜಾನೆ ತೂ ’ ನಲ್ಲಿ ಇದನ್ನು ಚೆನ್ನಾಗಿ ತೊರಿಸಿದ್ದಾರೆ. ಅದಿತಿ ಪಾತ್ರ ನ ಜೆನೆಲಿಯ ತುಂಬಾ ಚೆನ್ನಾಗಿ ನಿಭಾಯಿಸಿದ್ದಾರೆ.ಆದ್ರೆ ಬೊಮ್ಮರಿಲ್ಲು ನಷ್ಟು ಚೆನ್ನಾಗಿ ಕಾಣ್ಸಲ್ಲ ಜೆನೆಲಿಯಾ :( ..

ಒಂದು ಹುಡುಗ - ಹುಡುಗಿ ’ಬರೀ’ ಫ್ರೆಂಡ್ಸ್ ಆಗಿರೋದು ಎಷ್ಟು ಕಷ್ಟ ಅಲ್ವಾ?? ನೋಡೋರ ಕಣ್ಣಿಗೆ ಯಾವತ್ತೂ ಅವರು ಲವ್ವರ್ಸ್ ಥರಾನೆ ಕಾಣಿಸ್ತಾರೆ ಆ ವಿಶ್ಯ ಬಿಡಿ.

ಒಂದೆ ಒಂದು ಖುಶಿ ಅಂದ್ರೆ ಕಾಲ ಬದಲಾಗ್ತಾ ಇದೆ ,ಜನರ ದೃಷ್ಟಿಕೋನ ಕೂಡ ಬದಲಾಗಿದೆ. ನಾವು ಬರೀ ಫ್ರೆಂಡ್ಸ್ ಅಂದ್ರೆ ನಂಬೋರು ಸಿಕ್ತಾರೆ! So sweet !

Tuesday, July 29, 2008

ನನಗೇಕೆ ಕವಿತೆಗಳು ಅರ್ಥವಾಗುವುದಿಲ್ಲ

’ನನಗೇಕೆ ಕವಿತೆಗಳು ಅರ್ಥವಾಗುವುದಿಲ್ಲ ?’- ಇಂಥ ಪ್ರಶ್ನೆಯೊಂದು ತುಂಬಾ ವರ್ಷಗಳಿಂದ ನನಗೆ ಕಾಡುತ್ತಾ ಬಂದಿದೆ. ಬಹುತೇಕ ಎಲ್ಲ ಟ್ಯಾಬ್ಲಾಯ್ಡ್ ಪತ್ರಿಕೆ, ಮಾಸ ಪತ್ರಿಕೆ ಗಳಲ್ಲಿ ಕವಿತೆಗಳು ಬಂದೇ ಬರುತ್ತವೆ.ಅದೂ ಅಲ್ದೆ ಇತ್ತೀಚೆಗೆ ಎಲ್ಲಾ ಕನ್ನಡ ಬ್ಲಾಗಿಗರೂ ತಮ್ಮ ಬ್ಲಾಗಿನಲ್ಲಿ ಸ್ವ ರಚಿತ ಕವಿತೆಗಳು ಹಾಕ್ತಿದ್ದಾರೆ.ಆದ್ರೆ ನನ್ಗೆ ಕವಿತೆಗಳು ಬರೆಯೋದು ಬಿಡಿ ,ಯಾರೊ ಬರೆದಿರೋ ಕವಿತೆಗಳನ್ನು ಓದಿ ಆನಂದ ಪಡೊ ಭಾಗ್ಯಾನೂ ಇಲ್ವೆ??ನನ್ಗೆ ಕವಿತೆಗಳಂದ್ರೆ ’ಮಾಲ್ಗುಡಿ ಡೇಸ್’ ಸೀರಿಯಲ್ ಥರ್!ಚಿಕ್ಕವನಿರ್ಬೇಕಾದ್ರೆ ತುಂಬಾ interest ನಿಂದ ಆ ಸೀರಿಯಲ್ ನೋಡೊಕೆ ಕೂತ್ಕೋತ ಇದ್ದೆ ,ಆದ್ರೆ ಅದರ ending ಎಷ್ಟು ತಲೆ ಕೆಡಿಸ್ಕೊಂಡ್ರೂ ಅರ್ಥ ಆಗ್ತಾ ಇರ್ಲಿಲ್ಲ..ಅಷ್ಟಕ್ಕೂ ಅಂಥಾ ಸೀರಿಯಲ್ ,ಕಥೆಗಳಿಗೆ ಅಂತ್ಯ ಅನ್ನೋದೆ ಇಲ್ಲ ಅಂತ ಕಾಣ್ಸುತ್ತೆ!!ಎಲ್ಲಾ ಅವರವರ ಭಾವಕ್ಕೆ ,ಅವರವರ ಭಕುತಿಗೆ.ನಾನು ಈ ವರೆಗೆ ಖರೀಸಿದಿರೋ ಒಂದೇ ಒಂದು ಕವನ ಸಂಕಲನ ಅಂದ್ರೆ ’ಮಾತು ಚಿಟ್ಟೆ ’- ಸಂಧ್ಯಾದೇವಿಯವರದ್ದು.ಪ್ರಜಾವಾಣಿಯಲ್ಲಿ ಬಂದಿರೋ review ನೋಡಿ ಅದನ್ನು ಖರೀದಿಸಿದ್ದೆ ಅಂಕಿತ ಪ್ರಕಾಶನಕ್ಕೆ ಹೋಗಿ.ಎಷ್ಟು ತಲೆ ಕೆರ್ಕೋಂಡ್ರೂ ಟೈಟಲ್ಲೇ ಅರ್ಥ ಆಗಿಲ್ಲ ನನಗೆ ,ಇನ್ನು ಕವಿತೆ ಹೇಗೆ ತಾನೆ ಅರ್ಥ ಆಗುತ್ತೆ ಅಲ್ವಾ??ಆದ್ರೆ ಅಂಕಿತ ಪ್ರಕಾಶನದವ್ರು ಪುಸ್ತಕದ ಜೊತೆ ಕ್ಯಾಲೆಂಡರ್ ಒಂದನ್ನು ಉಚಿತವಾಗಿ ಕೊಟ್ಟಿದ್ದೆ ನನಗೆ ಸಮಾಧಾನ.ಕವಿತೆಗಳು ಅರ್ಥವಾಗೋ ಅಂಥ ಸ್ನೇಹಿತರು ಇದ್ದಿದ್ರೆ ಅವರಿಗಾದರೋ gift ಕೊಡಬಹುದಿತ್ತು,ಆದ್ರೆ ಅಂಥವರ್ಯಾರೂ ಇಲ್ಲ.ಕೆಲವೊಂದು ವಿಷಯಗಳೇ ಹೀಗೆ... ಅವು ತಾನಾಗೇ ಬರಬೇಕು ..ಯಾರೂ ಹೇಳಿಕೊಟ್ಟು ಬರಲು ಸಾಧ್ಯವೇ ಇಲ್ಲ.ನನಗೆ ಜಗಜೀತ್ ಸಿಂಗ್ ಗಜಲ್ ಅಂದ್ರೆ ಇಷ್ಟ ಆದ್ರೆ ನನ್ನ ಫ್ರೆಂಡ್ ಗೆ ಲಿಂಕಿನ್ ಪಾರ್ಕ್ ಅಂದ್ರೆ ಪ್ರಾಣ..ಅದ್ಯಾಕೊ ಹಂದಿ ಓಡಿಸೋ ಸಂಗೀತ ಕೇಳ್ತೀಯಾ? ಜಗಜೀತ್ ಸಿಂಗ್ ನ ಕೇಳೊ ಅಂತ ಹೇಳೋಣ ಅಂತ ಅನ್ಸುತ್ತೆ ಆದ್ರೆ ಹೇಳಲ್ಲ..ನನಗೆ ಗೊತ್ತು ಇವತ್ತು ಅವನಿಗೆ ನಾನು ಆ ರೀತಿ ಹೇಳಿದ್ರೆ ನಾಳೆ ಇನ್ಯಾರೋ ಬಂದು ನನಗೆ ಶಾಸ್ತ್ರೀಯ ಸಂಗೀತ ಕೇಳು ಅಂತ force ಮಾಡ್ತಾರೆ !ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಅಲ್ವೆ?

Monday, July 28, 2008

ಕಪಾಟಿನೊಳಗೆ ಗೂಗಲ್ ಸರ್ಚ್



ನಮ್ಮೂರಲ್ಲೊಂದು ’ದೊಡ್ಡ’ ಲೈಬ್ರರಿ .ಆದ್ರೆ ಅಲ್ಲಿ ಇದ್ದಿದ್ದು ಒಂದೇ ಒಂದು ಗೊದ್ರೇಜ್ ಕಪಾಟು!ಇದೇನಿದು ’ದೊಡ್ಡ’ ಲೈಬ್ರರಿಯಲ್ಲಿ ಹೇಗೆ ಒಂದೇ ಕಪಾಟು ಅಂತೀರಾ? ಅದು actually ಒಂದು ಸಭಾಭವನ ;ಆದ್ರೆ ಒಂದು ಮೂಲೆನಲ್ಲಿ ಲೈಬ್ರೆರಿಗೆ ಅವಕಾಶ ಮಾಡಿ ಕೊಟ್ಟಿದ್ರು.ಇರೋ ಒಂದು ಕಪಾಟಿನ ತುಂಬಾ ಪುಸ್ತಕಗಳು.ರಾಮಾಯಣ ದರ್ಶನಂ,ಮೂಕಜ್ಜಿಯ ಕನಸುಗಳು ಇಂದ ಹಿಡಿದು ಮೋಟಾರ್ ಸೈಕಲ್ ರಿಪೇರಿ ಮಾಡೊದು ಹೇಗೆ? ಅನ್ನೊ ಬಗ್ಗೆ ಎಲ್ಲಾ ಬಗೆಯ ಪುಸ್ತಕಗಳು ಅಲ್ಲಿದ್ವು.ಹುಡುಕೊದಿಕ್ಕೆ ತಾಳ್ಮೆ ಇರ್ಬೇಕು ಅಷ್ಟೆ!ಯಾಕಂದ್ರೆ ಇದ್ದಿದ್ದು ಒಂದೇ ಕಪಾಟಾದ್ದರಿಂದ ಎಲ್ಲಾ ಪುಸ್ತಕಗಳನ್ನು ಅಡ್ಡಾದಿಡ್ಡಿ ತುಂಬಿಡೊ ಅನಿವಾರ್ಯತೆ ಗ್ರಂಥಪಾಲಕಿಗೆ.ನನ್ನ ಓದುವ ಹುಚ್ಚಿಗೆ ನೀರೆರದಿದ್ದಿದ್ದೇ ಈ ಲೈಬ್ರೆರಿ.
ನನ್ನ ಅಕ್ಕ ಆಗ ಬಿ.ಎಸ್.ಸಿ ಓದ್ತಾ ಇದ್ಲು,ಅವಳಿಗೆ ಕಾದಂಬರಿ ಓದೋ ಹುಚ್ಚು .ಆದ್ರೆ ಕಾಲೇಜ್ ಓದೂ ಇರ್ತಿದ್ದರಿಂದ ನನ್ಗೆ ಲೈಬ್ರೇರಿಗೆ ಹೊಗಿ ಅಕೆಗೆ ಬೇಕಾದ ಪುಸ್ತಕ ತರೋ ಕೆಲ್ಸ.ಮೊದ ಮೊದ್ಲು ಲೈಬ್ರೇರಿಯನ್ ನನಗೋಸ್ಕರ ಪುಸ್ತಕ ಹುಡುಕಿ ಕೊಡ್ತಾ ಇದ್ರು,ಆದ್ರೆ ಯಾವಾಗ ನಾನು ಎರಡು ದಿನಕ್ಕೊಮ್ಮೆ ವಕ್ಕರಿಸೊದಕ್ಕೆ ಶುರು ಮಾಡಿದ್ನೋ ಅವ್ರೂ ಪಾಪ ಅವ್ರ ಅಸಹಾಯಕತೆ ಹೇಳ್ಕೊಂಡ್ರು.ಆವಾಗಿಂದ ಪುಸ್ತಕ ಹುಡುಕೋ ಕೆಲ್ಸ ನನ್ನ ಮೇಲೇ ಬಿತ್ತು.ಅಕ್ಕ ಕೂಡಾ ಒಂದು ದಿನ ಸುದರ್ಶನ ದೇಸಾಯಿ ’ಹಳದಿ ಚೇಳು ’ ಕೇಳಿದ್ರೆ ಮತ್ತೊಂದು ದಿನ ಯಂಡಮೂರಿ ’ತುಲಸಿ ದಳ’ ಕೇಳ್ತಾ ಇದ್ಲು!.ಅದಾದ್ಮೇಲೆ ಷರ್ಲಾಕ್ ಹೋಮ್ಸ್ ನ ಪತ್ತೇದಾರಿ ಕಾದಂಬರಿ.ಒಂದು ಪುಸ್ತಕ ಹುಡುಕ್ಬೇಕಾದ್ರೆ ಕಪಾಟಿನಲ್ಲಿರೋ ೯೦೦ ಪುಸ್ತಕಗಳನ್ನೂ ಜಾಲಾಡ್ಬೆಕು! ಒಂದೇ ಒಂದು ಸಂತೋಷದ ಸುದ್ದಿ ಅಂದ್ರೆ ಆ ಪುಸ್ತಕ ಇದೆಯೊ ಇಲ್ವೋ ಅನ್ನೋದನ್ನು ಮಾತ್ರ ಅಲ್ಲಿರೋ ಒಂದು ದಪ್ಪ ಪುಸ್ತಕದಲ್ಲಿ ಹುಡುಕ್ಬಹುದಾಗಿತ್ತು!ಪುಸ್ತಕ ಇದೆ ಅಂತ ಗೊತ್ತಾದ್ಮೇಲೆ ಯಥಾ ಪ್ರಕಾರ ಕಪಾಟಿನೊಳಗಡೆ ಗೂಗಲ್ ಸರ್ಚ್!!ಹೀಗೆ ಅಕ್ಕನಿಗೋಸ್ಕರ ಪುಸ್ತಕ ತರ್ತಾ ಇದ್ದೋನು, ಕ್ರಮೇಣ ನಾನೂ ಒದೋದಿಕ್ಕೆ ಶುರು ಹಚ್ಕೊಂಡೆ.ಆದ್ರೆ ಲೈಬ್ರೇರಿಯನ್ ಹೆಂಗಸಾದ್ದರಿಂದ ಎಲ್ಲಾ ಥರದ ಪುಸ್ತಕಗಳನ್ನು ತಗೊಳ್ಳೊದಿಕ್ಕೆ ನಂಗೆ ಮುಜುಗರ ಆಗ್ತಾ ಇತ್ತು . ಜೇಮ್ಸ್ ಹ್ಯಾಡ್ಲಿ ಚೇಸ್ ,ಕೌಂಡಿನ್ಯ ಅಂಥ ಪುಸ್ತಕ ಏನಾದ್ರೂ ತಗೊಂಡ್ರೆ ಲೈಬ್ರೇರಿಯನ್ ಜೊತೆ ಸದಾ ಟೈಮ್ ಪಾಸ್ ಮಾಡ್ತಾ ಇದ್ದ ಹುಡುಗಿಯರು ಮುಸಿ ಮುಸಿ ನಗ್ತಾ ಇದ್ರು.ನಾನಾಗ ಏಳನೇ ಕ್ಲಾಸ್ ಹುಡುಗ .ಬಹುಶಃ ಅವರ ಕಣ್ಣಿಗೆ ನಾನಿನ್ನೂ ’ಚಿಕ್ಕ ಹುಡುಗ’!ಹೀಗಾಗಿ ಅವ್ರ ಕೆಟ್ಟ ದೃಷ್ಟಿಯಿಂದ ಬಚಾವಾಗಲು ನಾನು ’ಅಂಥ ’ ಪುಸ್ತಕಳನ್ನು ಶರ್ಟ್ ಒಳಗೆ ಬಚ್ಚಿಟ್ಟುಕೊಂಡು ತಗೊಂಡು ಹೊಗೋಕೆ ಶುರು ಮಾಡಿದೆ.ಲೈಬ್ರೆರಿಯನ್ ಗೆ ಸಂಶಯ ಬರದ ಹಾಗೆ ಮಾಡಲು ಯಾವುದೋ ಕವನ ಸಂಕಲನ ತಗೊಂಡು ಹೊಗಿ ಎಂಟ್ರಿ ಮಾಡಿಸೋದು!ಹಾಗಂತ ನಾನು ಪುಸ್ತಕಗಳನ್ನು ಕದೀತಾ ಇರಲಿಲ್ಲ ; ಓದಿ ಆದ್ಮೇಲೆ ಹಾಗೇ ಮತ್ತೆ ಶರ್ಟ್ ಒಳಗೆ ಬಚ್ಚಿಟ್ಟುಕೊಂಡು ಹಾಗೇ ವಾಪಸ್ ತಂದಿಡ್ತಾ ಇದ್ದೆ!ನಾನು ಮೊದಲೇ ಹೇಳಿದ ಹಾಗೆ ಲೈಬ್ರೆರಿ ಇದ್ದಿದ್ದು ಒಂದು ಸಭಾಭವನದಲ್ಲಿ,ಹಾಗಾಗಿ ಮದುವೆ,ಮುಂಜಿಯಂಥ ಸಮಾರಂಭಗಳಿಗೆ ಅದನ್ನು ಬಾಡಿಗೆಗೆ ಕೊಡ್ತಾ ಇದ್ರು.ಹೀಗೆ ಮದುವೆ ಇದ್ದ ದಿನ ಲೈಬ್ರೆರಿ ತುಂಬಾ ಜನ.ಊಟಕ್ಕೆ ಎಲೆ ಹಾಕೋ ತನಕ ಹೇಗಾದ್ರೂ ಟೈಂ ಪಾಸ್ ಮಾಡ್ಬೇಕಲ್ಲ.ಹಾಗೆ ಸುಧಾ,ತರಂಗ ಗಳನ್ನು ಓದ್ತಾ ಕಾಲ ಕಳೀತಾ ಇದ್ರು ಮದುವೆಗೆ ಬಂದವ್ರು.ರಜಾ ದಿನಗಳಲ್ಲಂತೂ ದಿನಕ್ಕೆ ಎರಡು ಸಲ ಹೋಗ್ತಾ ಇದ್ದೆ ಲೈಬ್ರೆರಿಗೆ. 60-70 ಪೇಜುಗಳ ಪುಸ್ತಕ ಓದೋದಿಕ್ಕೆ ಎಷ್ಟು ಹೂತ್ತು ತಾನೇ ಬೇಕು?ಕೆಲವೊಂದು ದಿನಗಳಲ್ಲಂತೂ ಗೂಗಲ್ ಸರ್ಚ್ ನಲ್ಲಿ ಸಮಯ ಕಳೆದಿದ್ದೆ ಗೊತ್ತಾಗ್ತಿರ್ಲಿಲ್ಲ.ಆಕೆ ಬಂದು ’ದಯವಿಟ್ಟು ಬರ್ತೀರಾ ಸ್ವಾಮಿ ಬೀಗ ಹಾಕ್ಬೇಕು ’ ಅಂದಾಗ್ಲೆ ಎಚ್ಚರ ಆಗ್ತಾ ಇತ್ತು ನನಗೆ..ಸುಮಾರು 2 ವರ್ಷಗಳಲ್ಲಿ ಆ ಕಪಾಟಿನಲ್ಲಿರ್‍ಓ ಎಲ್ಲಾ ಒಳ್ಳೆ ಪುಸ್ತಕಗಳನ್ನು ನಾನು ಓದಿ ಅಗಿತ್ತು.ಕೊನೆ ಕೊನೆಗೆ ಲೈಬ್ರೆರಿಯನ್ನೇ ನನ್ನ ಹತ್ತಿರ ’ಈ ಪುಸ್ತಕ ಸ್ವಲ್ಪ ಹುಡುಕಿ ಕೊಡ್ತೀಯಾ ಪ್ಲೀಸ್ ? ’ ಅಂತ ಕೇಳೋ ಅಷ್ಟು expert ಆಗ್ಬಿಟ್ಟಿದ್ದೆ ನಾನು ಪುಸ್ತಕ ಹುಡುಕೋದ್ರಲ್ಲಿ.ಹೀಗಿರ್ಬೇಕಾದ್ರೆ ಸ್ವಲ್ಪ ದಿನ ಲೈಬ್ರೆರಿ ಬಾಗಿಲು ತೆರೆಯಲೇ ಇಲ್ಲ.ಎಲ್ಲೋ ಬೇರೆ ಊರಿಗೆ ಹೋಗಿರ್ಬೆಕು ಅವ್ರು ಅಂದ್ಕೊಂಡಿದ್ದೆ ನಾನು.ಆದ್ರೆ ಓಂದು ವಾರ ಆದ್ಮೇಲೆ ಗೊತ್ತಾಯ್ತು ಲೈಬ್ರೇರಿಯನ್ ಹೃದಯಾಘಾತವಾಗಿ ತೀರಿಕೊಂಡು ಬಿಟ್ಟಿದ್ದಾರೆ ಅಂತ.ಅದಾದ ಮೇಲೆ ಒಬ್ಬಳು ಸಣ್ಣ ವಯಸ್ಸಿನ ಹುಡುಗಿ ಲೈಬ್ರೇರಿಯನ್ ಆಗಿ ಬಂದ್ಲು.ಆದ್ರೆ ಅವಳಿಗೆ ಪುಸ್ತಕಗಳ ಬಗ್ಗೆ ಪ್ರೀತಿಯೆ ಇರಲಿಲ್ಲ.ಗೆಳತಿಯರ ಜೊತೆ ಹರಟೆ ಹೊಡೆದು ಸಾಯಂಕಾಲ ಹೊರಟು ಹೊಗ್ತಾ ಇದ್ಲು ಅವ್ಳು.ಕ್ರಮೇಣ ಪುಸ್ತಕಗಳೆಲ್ಲಾ ಗೆದ್ದಲು ಹಿಡಿಯೊದಕ್ಕೆ ಶುರು ಆದವು.ಕೆಲವು ತಿಂಗಳ ನಂತರ ಲೈಬ್ರೇರಿಯನ್ ಗೂ ಮದುವೆ ಆಗಿ ಹೊರಟು ಹೋದ್ಲು.
ಅದಾದ್ಮೇಲೆ ಲೈಬ್ರೇರಿ ಬಾಗಿಲು ತೆರೆಯಲೇ ಇಲ್ಲ.ಆದ್ರೆ ಅದೃಷ್ಟವಶಾತ್ ನಾನು ಹೈ ಸ್ಕೂಲ್ ಗೆ ಪಕ್ಕದಲ್ಲಿರೋ ಊರಿಗೆ ಸೇರಿದ್ರಿಂದ ಅಲ್ಲಿರೋ ದೊಡ್ಡ ಲೈಬ್ರೆರಿ ಮೆಂಬರ್ಶಿಪ್ ಮಾಡಿಸ್ಕೊಂಡೆ.
ಅದು ದೊಡ್ಡ ಲೈಬ್ರೆರಿ,ಸಾವಿರಾರು ಬುಕ್ಸ್ ,ಅದೂ ಅಲ್ದೆ ಕತೆ,ಕಾದಂಬರಿ,ಕವನ ಸಂಕಲನ,ಪ್ರಬಂಧ ಹೀಗೆ ಬೇರೆ ಬೇರೆ Rack ಗಳು. ಯಾವ ತರಹದ ಪುಸ್ತಕಗಳು ಬೇಕಾದ್ರೂ ಅಲ್ಲಿ ಲಭ್ಯ .ಒಳ್ಳೇ ಲೈಬ್ರೇರಿಯನ್ ,ಯಾವ ಬುಕ್ ಬಗ್ಗೆ ಕೇಳಿದ್ರೂ ಚಕ್ಕನೆ ಹೇಳ್ತಾ ಇದ್ರು ಎಲ್ಲಿದೆ ಅಂತ!
ಆದ್ರೆ ನನಗೆ ಕಪಾಟಿನೊಳಗೆ ಗೂಗಲ್ ಸರ್ಚ್ ಮಾಡೊ ಅವಕಾಶ ಮಾತ್ರ ಅಲ್ಲಿ ಸಿಗಲೇ ಇಲ್ಲ!!!

ನಿನ್ನ ನೆನಪು






’ನಿನ್ನ ನೆನಪು’- ಇದು ಒಂದು ಕನ್ನಡ ಆಲ್ಬಮ್ ಹೆಸರು.ಶೀರ್ಶಿಕೆ ಎಷ್ಟು ಚೆನ್ನಾಗಿದೆಯೋ ಹಾಡುಗಳೂ ಅಷ್ಟೆ ಚೆನ್ನಾಗಿವೆ.


ಈ ಆಲ್ಬಮ್ ನಲ್ಲಿ ನನಗೆ ತುಂಬಾ ಇಷ್ಟವಾದ ಹಾಡು ’ನಿನ್ನ ನೆನಪು’ ಹಾಗೂ ’ಮೌನ’ ಅನ್ನೋ ಹಾಡುಗಳು.ಉಳಿದ ಎಲ್ಲಾ ಹಾಡುಗಳೂ ಚೆನ್ನಾಗಿವೆ ಆದ್ರೆ ಈ ಎರಡು ಹಾಡುಗಳಿಗೆ ಸ್ವಲ್ಪ sad tone ಇದೆ.ಈ ಹಾಡು ಕೇಳಿ ಕೂಡಲೆ ನಮ್ಮ ಮೂಡ್ ಅನ್ನು ’ಕಳ್ಳ ಬೆಕ್ಕಿನಂತೆ’ ಅಥವಾ ’ಜಿಂಕೆ’ ಹಾಡಿಗೆ ಟ್ಯೂನ್ ಮಾಡೋದು ಸ್ವಲ್ಪ ಕಷ್ಟ.


ಆಲ್ಬಂನಲ್ಲಿ ಒಟ್ಟು ಎಂಟು ಹಾಡುಗಳಿವೆ.ಸಂಗೀತ ಸಂಯೋಜನೆ ಎಸ್.ಆರ್ ರಾಮಕೃಷ್ಣ ಅವರದ್ದು.


"ನೂರು ಜನಗಳ ನಡುವೆ ನಕ್ಕು ನಲಿದಾಡುತಿರೆ ಧುತ್ತನೆರಗುವ ದುಗುಡ ನಿನ್ನ ನೆನಪು " ಅನ್ನೋ ಸಾಲಂತೂ ನನಗೆ ತುಂಬಾನೆ ಇಷ್ಟ ಆಯ್ತು.




ಈ CD ಸಿಕ್ಕರೆ ಖಂಡಿತ ಕೇಳಿ . ಹೆಚ್ಚಿನ ವಿಷಯಗಳಿಗೆ ಈ ಕೊಂಡಿ ನೋಡಿ :








ತಾಜ್ ಮಹಲ್



ಬೆಂಗಳೂರಿನಲ್ಲೆಡೆ ಬಾಂಬ್ ಗಲಾಟೆ! ಆದ್ರೆ ’ತಾಜ್ ಮಹಲ್’ ನೋಡಲು ವೀರೇಶ್ ಚಿತ್ರ ಮಂದಿರಕ್ಕೆ ಹೋದ್ರೆ housefull!!
ನಾನೂ ನನ್ನ ಸ್ನೇಹಿತರು ’ಮೊಗ್ಗಿನ ಮನಸ್ಸು’ ಚಿತ್ರ ನೋಡಲು ಹೊರಟವರು,ಆದ್ರೆ ಟಿಕೆಟ್ ಸಿಗದ ಕಾರಣ ’ತಾಜ್ ಮಹಲ್’ ಗೆ ಹೋಗಬೇಕಾಯಿತು ಬಂತು.ಬಾಲ್ಕನಿ ಟಿಕೆಟ್ ಗಳು ಎಲ್ಲಾ ಖಾಲಿ.ಬ್ಲ್ಯಾಕ್ ನಲ್ಲಿ ೧೦೦ ರೂ ಗೆ ಮಾರ್ತಾ ಇದ್ರು ಥಿಯೇಟರ್ ನವರೇ.ನಾವು ೭ ಜನ ಇದ್ದಿದ್ರಿಂದ ಸೆಕಂಡ್ ಕ್ಲಾಸ್ ಗೆ ತೃಪ್ತಿ ಪಡಬೇಕಾಯಿತು.
ಮೊದಲಿಗೆ ರಾಷ್ಟ್ರ ಗೀತೆ ಮೊಳಗುವಾಗ ಜನ ಚಕ್ಕನೆ ಎದ್ದು ನಿಂತ ಪರಿ ಮಾತ್ರ ಮೆಚ್ಚಬೇಕಾದದ್ದೆ.ರಾಷ್ಟ್ರಗೀತೆ ಮುಗಿದ ನಂತರ ’ಬೋಲೋ ಭಾರತ್ ಮಾತಾ ಕಿ ಜೈ’ ಅಂದಾಗ ಉಗ್ರಗಾಮಿಗಳ ಮೇಲಿನ ಸಿಟ್ಟಿನಂದಲೋ ಏನೋ ’ಜೈ’ ಅನ್ನೋ ಸದ್ದು ಸ್ವಲ್ಪ ಜೋರಾಗೇ ಕೇಳಿಸಿತು ಆ ದಿನ.
ನಂತರ ಚಿತ್ರ ಶುರು ಆಯಿತು.ಮೊದಲ ಹತ್ತು ನಿಮಿಶಗಳು ತುಂಬಾ ಚೆನ್ನಾಗಿತ್ತು. ಕ್ಯಾಮರಾ ವರ್ಕ್ ತುಂಬಾ ಚೆನ್ನಾಗಿತ್ತು.ಆದ್ರೆ ಹೀರೊ ಅಜಯ್ ಆಗಮನವಾದ ನಂತರ ಬೋರ್ ಹೊಡೆಯೋಕೆ ಶುರು ಆಯಿತು :( ಕಾಲೇಜ್ ಸೀನ್ಸ್ ಅಂದ್ರೆ ಸಾಮಾನ್ಯವಾಗಿ ಚೆನ್ನಾಗಿರುತ್ತವೆ. ಕಾಮಿಡಿ ಇರುತ್ತೆ. ಆದ್ರೆ ಇದರಲ್ಲಿ ಮಾತ್ರ ಕಾಲೇಜ್ ಸೀನ್ಸ್ ತುಂಬಾ ಡಲ್ ಆಗಿತ್ತು.
ಚಿತ್ರದ ಇಂಟರ್ವಲ್ ಮತ್ತೆ second half ಚೆನ್ನಾಗಿ ಮೂಡಿ ಬಂದಿದೆ.climax ಕೂಡಾ ಚೆನಾಗೇ ಇದೆ.
ಆದ್ರೆ ನಿರ್ದೇಶಕ ಚಂದ್ರು ಸಂದರ್ಶನ ಒಂದರಲ್ಲಿ ,ಈ ಚಿತ್ರ ಎರಡು ಕಥೆ ಒಂದು climax ಹೊಂದಿದೆ ಅಂದಿದ್ರು.ಎರಡು ಕಥೆ handle ಮಾಡೋದ್ರಲ್ಲಿ ಮಾತ್ರ ಚಂದ್ರು ಸ್ವಲ್ಪ ಎಡವಿದ್ದಾರೆ.
ಕಾಲೇಜ್ ವಾತಾವರಣಕ್ಕೆ ಮೆರುಗು ಕೊಟ್ಟ ಪಾತ್ರಗಳು ಶೇಕರ್ ಮತ್ತೆ ಸೀನಿಯರ್ ಪಾತ್ರಗಳು,ಅವರಿಂದಾಗೆ ಕಾಲೇಜಲ್ಲಿ ಸ್ವಲ್ಪ ಲವಲವಿಕೆ ಇತ್ತು.
ರಂಗಾಯಣ ರಘು ಎಂದಿನಂತೆ ತಗೊಂಡ ಕಾಸಿಗೆ ಮೋಸ ಮಾಡಿಲ್ಲ ,ಚೆನ್ನಾಗಿ ನಿಭಾಯಿಸಿದ್ದಾರೆ.
ಪೂಜಾ ಗಾಂಧಿ ಕೂಡಾ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
overall ಆಗಿ ಸಿನೆಮಾ ಚೆನ್ನಾಗಿದೆ ,ಆದ್ರೆ ಸ್ವಲ್ಪ ತಾಳ್ಮೆ ಬೇಕು ಇಂಟರ್ವಲ್ ತನಕ.....
ಶುಭವಾಗಲಿ ಚಂದ್ರು.

Thursday, July 24, 2008

ಕಡಲ ತೀರ



’ಕಡಲ ತೀರ’ - ನನ್ನ ಬಹು ದಿನಗಳ ಆಶಯ ಈ ದಿನ ನೆರವೇರುತ್ತಿದೆ! ನನ್ನದೇ ಒಂದು ಬ್ಲಾಗ್ ಇರ್ಬೇಕು ಎಂಬ ಆಸೆ ಇವತ್ತು ಈಡೇರಿದೆ.
ನನ್ನ ಬ್ಲಾಗಿನ ನಾಮಕರಣವೇ ತುಂಬಾ ಕಷ್ಟವಾಯ್ತು ನನಗೆ..ಕನ್ನಡ ಸಿನೆಮಾ ಡೈರೆಕ್ಟರ್ ಗಳು ತಮ್ಮ ಸಿನೆಮಾಗೆ ಹೆಸರಿಡಬೇಕಾದರೆ ಎಷ್ಟು ಕಷ್ಟ ಪಡ್ತಾರೆ ಎಂಬುದು ಇವತ್ತು ನನಗೆ ಮನದಟ್ಟಾಯಿತು.
ನನ್ನ ಹೆಸರು,ಸರ್ ನೇಮ್ ಗಳ ಎಲ್ಲಾ ಕಾಂಬಿನೇಶನ್ ಗಳೂ ಈಗಾಗಲೆ ರಿಜಿಸ್ಟರ್ ಆಗಿದ್ದವು.
ನನ್ನ ಹಾಡು,ಪ್ರತಿಬಿಂಬ ,ಮನಸ್ಸು ಹೀಗೆ ಚೆನ್ನಾಗಿರುವ ಎಲ್ಲಾ ಶಬ್ದಗಳೂ not available ! ಕುತೂಹಲಕ್ಕೆ ಸ್ವಾರ್ಥಿ ಅಂತ type ಮಾಡಿದ್ರೆ ಸಿಕ್ಕಿ ಬಿಡೋದೆ ಆ ಹೆಸರು.ಆದ್ರೆ ನಾನು ಸ್ವಾರ್ಥಿ ಅಂತ ಊರೆಲ್ಲಾ ಯಾಕೆ ಹೇಳ್ಕೋಬೇಕು ಅಲ್ವಾ? ನನಗೆ ಗೊತ್ತಿದ್ರೆ ಸಾಕು!
ಹೆಸರಲ್ಲೇನಿದೆ A rose called by any name is still a rose ಅಂತ ಹೇಳಿದ ಶೇಕ್ ಸ್ಪಿಯರ್ ಏನಾದ್ರೂ ಸಿಕ್ರೆ "ರಿ ಸ್ವಾಮಿ ನೀವು ಹೇಳಿದ್ದು ತಪ್ಪು ,ಬರೀ ಹೆಸರಿಗಾಗಿ ನಾನು ಎಷ್ಟು ತಲೆ ಕೆಡಿಸಿಕೊಂಡಿದ್ದೇನೆ ನೋಡ್ರಿ " ಅಂತ ವಾದ ಮಾಡ್ಬೇಕು ಅನ್ನಿಸ್ತು ನಂಗೆ.
ಗಾಳಿಪಟ ಅಂತ ಇಡೋಣ ಅಂದ್ರೆ ,ಯೋಗರಾಜ್ ಭಟ್ಟರ ಬ್ಲಾಗು ಅಂದ್ಕೊಂಡು ಬಿಟ್ಟ್ರೆ ಜನ??!!
’ಅಂದ ಹಾಗೆ ಜನ ಏನು ಬೇಕಾದ್ರೆ ಅಂದು ಕೊಳ್ಳಲಿ ,ನಾನು ಬರೆಯುತ್ತಿರೋದು ಜನರಿಗೋಸ್ಕರ ಅಲ್ಲ -ನನಗೋಸ್ಕರ’ ಅಂತ ಅನ್ನಿಸಿದ್ದೂ ಉಂಟು.ಆದ್ರೆ ಇದು ಸುಳ್ಳು ಅಂತ ನನಗೆ ಚೆನಾಗಿ ಗೊತ್ತು.ನಾನು ಬರೆದಿರೋ ಬ್ಲಾಗ್ ಯಾರೂ ಓದೋದು ಬೇಡ ,ಅದು ನನ್ನ ಆತ್ಮತೃಪ್ತಿಗೆ ಬರೆಯೋದು ಅಂತೆಲ್ಲಾ ಅಂದುಕೊಂಡ್ರೆ ಅದು ಬರೀ ನಾಟಕ,ಆತ್ಮ ವಂಚನೆ.ನಮ್ಮBlog ಹೆಚ್ಚು ಹೆಚ್ಚು ಜನ ಓದ್ಬೇಕು ,ಅದನ್ನು ಓದಿ ಅವರ ಅಭಿಪ್ರಾಯ ಹೇಳ್ಬೇಕು (ofcourse ಒಳ್ಳೆ ಅಭಿಪ್ರಾಯ :( ) ಅಂತ ಎಲ್ಲರೂ ಬಯಸ್ತಾರೆ.
ಅದಾಗ್ಯೂ ಯಾರೂ ನನ್ನ ಬ್ಲಾಗ್ ನೋಡಿಲ್ಲ ಅಂದ್ರೆ "ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ”ಅಂತ GSS ಹೇಳಿದ ಹಾಗೆ "ಎಲ್ಲ ಓದಲಿ ಎಂದು ನಾ ಬ್ಲಾಗಿಸುದಿಲ್ಲ ಬ್ಲಾಗಿಸುವುದು ಅನಿವಾರ್ಯ ಕರ್ಮ ಎನಗೆ " (GSS ಕ್ಷಮೆ ಕೋರಿ ) ಅಂತ ನನಗೆ ನಾನೇ ಸಮಾಧಾನ ಹೇಳ್ಕೋಬೇಕು!

ನನ್ನ ಈ ಬ್ಲಾಗಿಗೆ ಕಡಲ ತೀರ ಅನ್ನೋ ಹೆಸರಿಡಲು ಕಾರಣ ನಾನು ಮಂಗಳೂರಿನವನು .
ಬೆಂಗಳೂರು ದೇವರ ದಯೆಯಿಂದ ನನಗೆ ಎಲ್ಲವೂ ಕೊಟ್ಟಿದೆ.ಒಳ್ಳೆ ಕೆಲಸ,ಕೈ ತುಂಬಾ ಸಂಬಳ ,ಒಳ್ಳೆ ಗೆಳೆಯ ಗೆಳತಿಯರು - ಆದ್ರೆ ನಾನು ಬೆಂಗಳೂರಿನಲ್ಲಿ ಮಿಸ್ಸ್ ಮಾಡ್ತಾ ಇರೊದು ಒಂದೆ - ಕಡಲ ತೀರ !
ಊರಲ್ಲಿರ್ಬೇಕಾದ್ರೆ ತುಂಬಾ ದುಖ: ಅಥವಾ ಖುಶಿ ಆದಾಗ ಕಡಲ ತೀರಕ್ಕೆ ಹೋಗಿ ಒಬ್ಬನೇ ಕುಳಿತುಕೊಳ್ತಾ ಇದ್ದೆ.ಅಲೆಗಳು ದಡಕ್ಕೆ ಅಪ್ಪಳಿಸುವ ಸದ್ದಲ್ಲೇ ಒಂಥರಾ ಸಾಂತ್ವಾನ ಇರ್ತಾ ಇತ್ತು.
ಎಲ್ಲ ಪ್ರೇಮಿಗಳ ಥರ ಕಡಲ ತೀರದಲ್ಲಿ ಕುಳಿತು sweet nothing ಮಾತಾಡೊ ಸೌಭಾಗ್ಯ ನನಗೆ ಸಿಕ್ಕಿಲ್ಲವಾದ್ರೂ (ನಂಗೆ ಊರಲ್ಲಿರ್ಬೇಕಾದ್ರೆ girlfriend ಇರ್ಲಿಲ್ಲ :D ) ಕಡಲ ತೀರದ ಏಕಾಂತದಲ್ಲಿರೋ ಸುಖ ವಿವರಿಸಲಾಗದ್ದು.
Miss you - ಪ್ರೀತಿಯ ಕಡಲ ತೀರ .