Monday, July 28, 2008

ಕಪಾಟಿನೊಳಗೆ ಗೂಗಲ್ ಸರ್ಚ್



ನಮ್ಮೂರಲ್ಲೊಂದು ’ದೊಡ್ಡ’ ಲೈಬ್ರರಿ .ಆದ್ರೆ ಅಲ್ಲಿ ಇದ್ದಿದ್ದು ಒಂದೇ ಒಂದು ಗೊದ್ರೇಜ್ ಕಪಾಟು!ಇದೇನಿದು ’ದೊಡ್ಡ’ ಲೈಬ್ರರಿಯಲ್ಲಿ ಹೇಗೆ ಒಂದೇ ಕಪಾಟು ಅಂತೀರಾ? ಅದು actually ಒಂದು ಸಭಾಭವನ ;ಆದ್ರೆ ಒಂದು ಮೂಲೆನಲ್ಲಿ ಲೈಬ್ರೆರಿಗೆ ಅವಕಾಶ ಮಾಡಿ ಕೊಟ್ಟಿದ್ರು.ಇರೋ ಒಂದು ಕಪಾಟಿನ ತುಂಬಾ ಪುಸ್ತಕಗಳು.ರಾಮಾಯಣ ದರ್ಶನಂ,ಮೂಕಜ್ಜಿಯ ಕನಸುಗಳು ಇಂದ ಹಿಡಿದು ಮೋಟಾರ್ ಸೈಕಲ್ ರಿಪೇರಿ ಮಾಡೊದು ಹೇಗೆ? ಅನ್ನೊ ಬಗ್ಗೆ ಎಲ್ಲಾ ಬಗೆಯ ಪುಸ್ತಕಗಳು ಅಲ್ಲಿದ್ವು.ಹುಡುಕೊದಿಕ್ಕೆ ತಾಳ್ಮೆ ಇರ್ಬೇಕು ಅಷ್ಟೆ!ಯಾಕಂದ್ರೆ ಇದ್ದಿದ್ದು ಒಂದೇ ಕಪಾಟಾದ್ದರಿಂದ ಎಲ್ಲಾ ಪುಸ್ತಕಗಳನ್ನು ಅಡ್ಡಾದಿಡ್ಡಿ ತುಂಬಿಡೊ ಅನಿವಾರ್ಯತೆ ಗ್ರಂಥಪಾಲಕಿಗೆ.ನನ್ನ ಓದುವ ಹುಚ್ಚಿಗೆ ನೀರೆರದಿದ್ದಿದ್ದೇ ಈ ಲೈಬ್ರೆರಿ.
ನನ್ನ ಅಕ್ಕ ಆಗ ಬಿ.ಎಸ್.ಸಿ ಓದ್ತಾ ಇದ್ಲು,ಅವಳಿಗೆ ಕಾದಂಬರಿ ಓದೋ ಹುಚ್ಚು .ಆದ್ರೆ ಕಾಲೇಜ್ ಓದೂ ಇರ್ತಿದ್ದರಿಂದ ನನ್ಗೆ ಲೈಬ್ರೇರಿಗೆ ಹೊಗಿ ಅಕೆಗೆ ಬೇಕಾದ ಪುಸ್ತಕ ತರೋ ಕೆಲ್ಸ.ಮೊದ ಮೊದ್ಲು ಲೈಬ್ರೇರಿಯನ್ ನನಗೋಸ್ಕರ ಪುಸ್ತಕ ಹುಡುಕಿ ಕೊಡ್ತಾ ಇದ್ರು,ಆದ್ರೆ ಯಾವಾಗ ನಾನು ಎರಡು ದಿನಕ್ಕೊಮ್ಮೆ ವಕ್ಕರಿಸೊದಕ್ಕೆ ಶುರು ಮಾಡಿದ್ನೋ ಅವ್ರೂ ಪಾಪ ಅವ್ರ ಅಸಹಾಯಕತೆ ಹೇಳ್ಕೊಂಡ್ರು.ಆವಾಗಿಂದ ಪುಸ್ತಕ ಹುಡುಕೋ ಕೆಲ್ಸ ನನ್ನ ಮೇಲೇ ಬಿತ್ತು.ಅಕ್ಕ ಕೂಡಾ ಒಂದು ದಿನ ಸುದರ್ಶನ ದೇಸಾಯಿ ’ಹಳದಿ ಚೇಳು ’ ಕೇಳಿದ್ರೆ ಮತ್ತೊಂದು ದಿನ ಯಂಡಮೂರಿ ’ತುಲಸಿ ದಳ’ ಕೇಳ್ತಾ ಇದ್ಲು!.ಅದಾದ್ಮೇಲೆ ಷರ್ಲಾಕ್ ಹೋಮ್ಸ್ ನ ಪತ್ತೇದಾರಿ ಕಾದಂಬರಿ.ಒಂದು ಪುಸ್ತಕ ಹುಡುಕ್ಬೇಕಾದ್ರೆ ಕಪಾಟಿನಲ್ಲಿರೋ ೯೦೦ ಪುಸ್ತಕಗಳನ್ನೂ ಜಾಲಾಡ್ಬೆಕು! ಒಂದೇ ಒಂದು ಸಂತೋಷದ ಸುದ್ದಿ ಅಂದ್ರೆ ಆ ಪುಸ್ತಕ ಇದೆಯೊ ಇಲ್ವೋ ಅನ್ನೋದನ್ನು ಮಾತ್ರ ಅಲ್ಲಿರೋ ಒಂದು ದಪ್ಪ ಪುಸ್ತಕದಲ್ಲಿ ಹುಡುಕ್ಬಹುದಾಗಿತ್ತು!ಪುಸ್ತಕ ಇದೆ ಅಂತ ಗೊತ್ತಾದ್ಮೇಲೆ ಯಥಾ ಪ್ರಕಾರ ಕಪಾಟಿನೊಳಗಡೆ ಗೂಗಲ್ ಸರ್ಚ್!!ಹೀಗೆ ಅಕ್ಕನಿಗೋಸ್ಕರ ಪುಸ್ತಕ ತರ್ತಾ ಇದ್ದೋನು, ಕ್ರಮೇಣ ನಾನೂ ಒದೋದಿಕ್ಕೆ ಶುರು ಹಚ್ಕೊಂಡೆ.ಆದ್ರೆ ಲೈಬ್ರೇರಿಯನ್ ಹೆಂಗಸಾದ್ದರಿಂದ ಎಲ್ಲಾ ಥರದ ಪುಸ್ತಕಗಳನ್ನು ತಗೊಳ್ಳೊದಿಕ್ಕೆ ನಂಗೆ ಮುಜುಗರ ಆಗ್ತಾ ಇತ್ತು . ಜೇಮ್ಸ್ ಹ್ಯಾಡ್ಲಿ ಚೇಸ್ ,ಕೌಂಡಿನ್ಯ ಅಂಥ ಪುಸ್ತಕ ಏನಾದ್ರೂ ತಗೊಂಡ್ರೆ ಲೈಬ್ರೇರಿಯನ್ ಜೊತೆ ಸದಾ ಟೈಮ್ ಪಾಸ್ ಮಾಡ್ತಾ ಇದ್ದ ಹುಡುಗಿಯರು ಮುಸಿ ಮುಸಿ ನಗ್ತಾ ಇದ್ರು.ನಾನಾಗ ಏಳನೇ ಕ್ಲಾಸ್ ಹುಡುಗ .ಬಹುಶಃ ಅವರ ಕಣ್ಣಿಗೆ ನಾನಿನ್ನೂ ’ಚಿಕ್ಕ ಹುಡುಗ’!ಹೀಗಾಗಿ ಅವ್ರ ಕೆಟ್ಟ ದೃಷ್ಟಿಯಿಂದ ಬಚಾವಾಗಲು ನಾನು ’ಅಂಥ ’ ಪುಸ್ತಕಳನ್ನು ಶರ್ಟ್ ಒಳಗೆ ಬಚ್ಚಿಟ್ಟುಕೊಂಡು ತಗೊಂಡು ಹೊಗೋಕೆ ಶುರು ಮಾಡಿದೆ.ಲೈಬ್ರೆರಿಯನ್ ಗೆ ಸಂಶಯ ಬರದ ಹಾಗೆ ಮಾಡಲು ಯಾವುದೋ ಕವನ ಸಂಕಲನ ತಗೊಂಡು ಹೊಗಿ ಎಂಟ್ರಿ ಮಾಡಿಸೋದು!ಹಾಗಂತ ನಾನು ಪುಸ್ತಕಗಳನ್ನು ಕದೀತಾ ಇರಲಿಲ್ಲ ; ಓದಿ ಆದ್ಮೇಲೆ ಹಾಗೇ ಮತ್ತೆ ಶರ್ಟ್ ಒಳಗೆ ಬಚ್ಚಿಟ್ಟುಕೊಂಡು ಹಾಗೇ ವಾಪಸ್ ತಂದಿಡ್ತಾ ಇದ್ದೆ!ನಾನು ಮೊದಲೇ ಹೇಳಿದ ಹಾಗೆ ಲೈಬ್ರೆರಿ ಇದ್ದಿದ್ದು ಒಂದು ಸಭಾಭವನದಲ್ಲಿ,ಹಾಗಾಗಿ ಮದುವೆ,ಮುಂಜಿಯಂಥ ಸಮಾರಂಭಗಳಿಗೆ ಅದನ್ನು ಬಾಡಿಗೆಗೆ ಕೊಡ್ತಾ ಇದ್ರು.ಹೀಗೆ ಮದುವೆ ಇದ್ದ ದಿನ ಲೈಬ್ರೆರಿ ತುಂಬಾ ಜನ.ಊಟಕ್ಕೆ ಎಲೆ ಹಾಕೋ ತನಕ ಹೇಗಾದ್ರೂ ಟೈಂ ಪಾಸ್ ಮಾಡ್ಬೇಕಲ್ಲ.ಹಾಗೆ ಸುಧಾ,ತರಂಗ ಗಳನ್ನು ಓದ್ತಾ ಕಾಲ ಕಳೀತಾ ಇದ್ರು ಮದುವೆಗೆ ಬಂದವ್ರು.ರಜಾ ದಿನಗಳಲ್ಲಂತೂ ದಿನಕ್ಕೆ ಎರಡು ಸಲ ಹೋಗ್ತಾ ಇದ್ದೆ ಲೈಬ್ರೆರಿಗೆ. 60-70 ಪೇಜುಗಳ ಪುಸ್ತಕ ಓದೋದಿಕ್ಕೆ ಎಷ್ಟು ಹೂತ್ತು ತಾನೇ ಬೇಕು?ಕೆಲವೊಂದು ದಿನಗಳಲ್ಲಂತೂ ಗೂಗಲ್ ಸರ್ಚ್ ನಲ್ಲಿ ಸಮಯ ಕಳೆದಿದ್ದೆ ಗೊತ್ತಾಗ್ತಿರ್ಲಿಲ್ಲ.ಆಕೆ ಬಂದು ’ದಯವಿಟ್ಟು ಬರ್ತೀರಾ ಸ್ವಾಮಿ ಬೀಗ ಹಾಕ್ಬೇಕು ’ ಅಂದಾಗ್ಲೆ ಎಚ್ಚರ ಆಗ್ತಾ ಇತ್ತು ನನಗೆ..ಸುಮಾರು 2 ವರ್ಷಗಳಲ್ಲಿ ಆ ಕಪಾಟಿನಲ್ಲಿರ್‍ಓ ಎಲ್ಲಾ ಒಳ್ಳೆ ಪುಸ್ತಕಗಳನ್ನು ನಾನು ಓದಿ ಅಗಿತ್ತು.ಕೊನೆ ಕೊನೆಗೆ ಲೈಬ್ರೆರಿಯನ್ನೇ ನನ್ನ ಹತ್ತಿರ ’ಈ ಪುಸ್ತಕ ಸ್ವಲ್ಪ ಹುಡುಕಿ ಕೊಡ್ತೀಯಾ ಪ್ಲೀಸ್ ? ’ ಅಂತ ಕೇಳೋ ಅಷ್ಟು expert ಆಗ್ಬಿಟ್ಟಿದ್ದೆ ನಾನು ಪುಸ್ತಕ ಹುಡುಕೋದ್ರಲ್ಲಿ.ಹೀಗಿರ್ಬೇಕಾದ್ರೆ ಸ್ವಲ್ಪ ದಿನ ಲೈಬ್ರೆರಿ ಬಾಗಿಲು ತೆರೆಯಲೇ ಇಲ್ಲ.ಎಲ್ಲೋ ಬೇರೆ ಊರಿಗೆ ಹೋಗಿರ್ಬೆಕು ಅವ್ರು ಅಂದ್ಕೊಂಡಿದ್ದೆ ನಾನು.ಆದ್ರೆ ಓಂದು ವಾರ ಆದ್ಮೇಲೆ ಗೊತ್ತಾಯ್ತು ಲೈಬ್ರೇರಿಯನ್ ಹೃದಯಾಘಾತವಾಗಿ ತೀರಿಕೊಂಡು ಬಿಟ್ಟಿದ್ದಾರೆ ಅಂತ.ಅದಾದ ಮೇಲೆ ಒಬ್ಬಳು ಸಣ್ಣ ವಯಸ್ಸಿನ ಹುಡುಗಿ ಲೈಬ್ರೇರಿಯನ್ ಆಗಿ ಬಂದ್ಲು.ಆದ್ರೆ ಅವಳಿಗೆ ಪುಸ್ತಕಗಳ ಬಗ್ಗೆ ಪ್ರೀತಿಯೆ ಇರಲಿಲ್ಲ.ಗೆಳತಿಯರ ಜೊತೆ ಹರಟೆ ಹೊಡೆದು ಸಾಯಂಕಾಲ ಹೊರಟು ಹೊಗ್ತಾ ಇದ್ಲು ಅವ್ಳು.ಕ್ರಮೇಣ ಪುಸ್ತಕಗಳೆಲ್ಲಾ ಗೆದ್ದಲು ಹಿಡಿಯೊದಕ್ಕೆ ಶುರು ಆದವು.ಕೆಲವು ತಿಂಗಳ ನಂತರ ಲೈಬ್ರೇರಿಯನ್ ಗೂ ಮದುವೆ ಆಗಿ ಹೊರಟು ಹೋದ್ಲು.
ಅದಾದ್ಮೇಲೆ ಲೈಬ್ರೇರಿ ಬಾಗಿಲು ತೆರೆಯಲೇ ಇಲ್ಲ.ಆದ್ರೆ ಅದೃಷ್ಟವಶಾತ್ ನಾನು ಹೈ ಸ್ಕೂಲ್ ಗೆ ಪಕ್ಕದಲ್ಲಿರೋ ಊರಿಗೆ ಸೇರಿದ್ರಿಂದ ಅಲ್ಲಿರೋ ದೊಡ್ಡ ಲೈಬ್ರೆರಿ ಮೆಂಬರ್ಶಿಪ್ ಮಾಡಿಸ್ಕೊಂಡೆ.
ಅದು ದೊಡ್ಡ ಲೈಬ್ರೆರಿ,ಸಾವಿರಾರು ಬುಕ್ಸ್ ,ಅದೂ ಅಲ್ದೆ ಕತೆ,ಕಾದಂಬರಿ,ಕವನ ಸಂಕಲನ,ಪ್ರಬಂಧ ಹೀಗೆ ಬೇರೆ ಬೇರೆ Rack ಗಳು. ಯಾವ ತರಹದ ಪುಸ್ತಕಗಳು ಬೇಕಾದ್ರೂ ಅಲ್ಲಿ ಲಭ್ಯ .ಒಳ್ಳೇ ಲೈಬ್ರೇರಿಯನ್ ,ಯಾವ ಬುಕ್ ಬಗ್ಗೆ ಕೇಳಿದ್ರೂ ಚಕ್ಕನೆ ಹೇಳ್ತಾ ಇದ್ರು ಎಲ್ಲಿದೆ ಅಂತ!
ಆದ್ರೆ ನನಗೆ ಕಪಾಟಿನೊಳಗೆ ಗೂಗಲ್ ಸರ್ಚ್ ಮಾಡೊ ಅವಕಾಶ ಮಾತ್ರ ಅಲ್ಲಿ ಸಿಗಲೇ ಇಲ್ಲ!!!

3 comments:

ರಜನಿ ಹತ್ವಾರ್ said...

ನಮಸ್ತೆ ತುಂಬ ಚೆನ್ನಾಗಿದೆ ಲೇಖನ ಶೈಲಿ. ವಿಷಯ ಅಂಥ ಮಹತ್ವದ್ದಲ್ಲದಿದ್ರು ತುಂಬ interesting ಆಗಿ ಹೇಳ್ಕೊಂಡು ಹೋಗಿದಿರ. ಉಳಿದ ಲೇಖನಗಳನ್ನು ಓದಿದೆ. ಸರಳ, ಸಹಜ ಶೈಲಿ ನಿಮ್ಮದು, ಅದಿಕ್ಕೆ ಇಷ್ಟ ಆಗಿದ್ದು. ಇನ್ಮೇಲೆ regular attendence ಹಾಕ್ತೀನಿ. ಶುಭ ಹಾರೈಕೆಗಳು.

ಸಂದೀಪ್ ಕಾಮತ್ said...

Thank u Rajani,

ಈ ಲೇಖನ ಚೆನ್ನಾಗಿದೆ ಅಂತ ಯಾರೂ ಹೇಳಿರಲಿಲ್ಲ ನಂಗೆ..ನೀವೇ ಫಸ್ಟ್ !!
ಹೀಗೆ ವಾಕಿಂಗ್ ಬರ್ತಾ ಇರಿ ’ಕಡಲತೀರ’ಕ್ಕೆ.

Anonymous said...

ಸಂದೀಪ್, ರಜನಿ ಫಸ್ಟ್.. ನಾನು ಸೆಕೆಂಡ್ .