Thursday, July 31, 2008

ಗುರುವಂದನೆ


ನನ್ನ ಬ್ಲಾಗಿಗೆ ಮೊದಲ ಪ್ರತಿಕ್ರಿಯೆ ಬಂದಿದ್ದು ಒಬ್ಬ ಲೇಖಕಿ / ಕವಯತ್ರಿ ಯಿಂದ !!
ತೇಜಸ್ವಿನಿ ಹೆಗಡೆಯವರು ನನ್ನ ಬ್ಲಾಗಿಗೆ ಅದರಲ್ಲೂ ನಾನು ಟೀಚರ್ ಗಳಿಗೆ ನಮನ ಸಲ್ಲಿಸಿದ ಬಗೆಗೆ ಅಬಿನಂದನೆ ಸಲ್ಲಿಸಿದ್ದಾರೆ.
ನಮಗೆ ನಿಜ ಜೀವನದಲ್ಲಂತೂ ಗುರುವಂದನೆ ಸಲ್ಲಿಸುವ ಭಾಗ್ಯ ಸಿಗೋದು ತುಂಬಾ ಕಮ್ಮಿ.
ಕೊನೇ ಪಕ್ಷ ಈ ರೀತಿಯಾದರೂ ಗುರುಗಳನ್ನು ನೆನೆಸುವ ಭಾಗ್ಯ ಸಿಕ್ಕಿರೋದು ನನ್ನ ಪುಣ್ಯ.
ನನಗೆ ಚಿಕ್ಕಂದಿನಲ್ಲಿ ಗುರುಗಳ ಬಗ್ಗೆ ಅಷ್ಟೇನೂ ಗೌರವಯುತ ಭಾವನೆ ಇರಲಿಲ್ಲ. ಇದ್ರೂ ಅದು ಕೇವಲ ಭಯದಿಂದಾಗಿತ್ತು!’ಗುರು ಬ್ರಹ್ಮ ಗುರು ವಿಷ್ಣು ’ ಸ್ತೋತ್ರಗಳೂ ಅಷ್ಟೊಂದು ನಾಟುತ್ತಿರಲಿಲ್ಲ. ಟೀಚರ್ ಗಳಿಗೆ ಸಂಬಳ ಕೊಡ್ತಾರೆ ಅದಿಕ್ಕೆ ಅವರು ಪಾಠ ಮಾಡ್ತಾರೆ ಅದರಲ್ಲೇನು ವಿಶೇಷ ಅನ್ನೊ ಉಡಾಪೆ ಮಾತನ್ನೂ ಆಡ್ತಾ ಇದ್ವಿ ನಾವೆಲ್ಲ ಸ್ನೇಹಿತರು.
ಆದ್ರೆ ಈಗಿಗ ಟೀಚರ್ ಗಳು ತುಂಬಾ ನೆನಪಾಗ್ತಾರೆ.
ಈ ಉಗ್ರಗಾಮಿಗಳಿಗೂ ನನಗೆ ಸಿಕ್ಕಿರೋ ಹಾಗೆ , ಒಳ್ಳೆಯ ಟೀಚರ್ ಗಳು ಸಿಕ್ಕಿದ್ರೆ ಎಷ್ಟು ಚೆನ್ನಾಗಿರ್ತಾ ಇತ್ತಲ್ವ ? ಅಂತಾನೂ ಅನ್ನಿಸುತ್ತೆ.
ಚಿಕ್ಕವರಿರ್ಬೇಕಾದ್ರೆ ಟೀಚರ್ ಗಳು ಕಲಿಸಿರೋ ಒಂದೊಂದು ವಿಷಯಾನೂ ಹೇಗೆ ಉಪಯೊಗಕ್ಕೆ ಬೀಳ್ತಾವೆ ಅಲ್ವ??
ನಮ್ಮೆಲ್ಲರ ಜೀವನದಲ್ಲೂ ಬಾಲ್ಯದ ಘಟನೆಗಳು ಎಷ್ಟು ಪ್ರಭಾವ ಬೀರಿರುತ್ತವೆ. ಬಹುಶ: ಅದಿಕ್ಕೆ ಇರ್ಬೇಕು ’ಮೈ ಆಟೊಗ್ರಾಫ್ ’ ಚಿತ್ರ ಆ ಪರಿ ಹಿಟ್ ಆಗಿದ್ದು.

ಎಷ್ಟೊಂದು ಹೊಡೀತಾ ಇದ್ರು ಮೇಷ್ಟ್ರು ,ಕೆಲವೊಮ್ಮೆ ಬೆಂಚ್ ಮೇಲೆ ಕೂರೋಕೆ ಆಗ್ತಾ ಇರ್ಲಿಲ್ಲ ಏಟು ತಿಂದ ಮೇಲೆ.ಬೇಜಾರಂದ್ರೆ ನಾವು ತಂದುಕೊಟ್ಟ ಬೆತ್ತದಿಂದಲೇ ನಮಗೆ ಹೊಡೀತ ಇದ್ರು.
"ಸಂದೀಪ ನಾಳೆ ನನಗೆ ಒಳ್ಳೆಯದೊಂದು ಬೆತ್ತ ತಂದುಕೊಡ್ಬೇಕು " ಅಂತ ಅಪ್ಪಣೆಯಾಗಿದ್ದೆ ತಡ, ಹುಡುಕಾಟ ಶುರು.
ರಸ್ತೆ ಬದಿಯಲ್ಲಿರೋ ಗಾಳಿಮರ ಹತ್ತಿ ಚೆನ್ನಾಗಿರೋ ಬೆತ್ತ ಕಡಿದು ಅದನ್ನು ಚೂರಿಯಿಂದ ಪಾಲಿಷ್ ಮಾಡಿ ಟೀಚರ್ ಗೆ ಕೊಟ್ರೆ ಫ್ರೆಂಡ್ಸ್ ಎಲ್ಲ ಬೈತಾ ಇದ್ರು "ಮಗನೇ ಯಾಕೋ ಇಷ್ಟು ಒಳ್ಳೇ ಬೆತ್ತ ತಂದುಕೊಟ್ಟೆ " ಅಂತ.
ಆದ್ರೆ ನನಗೆ ಏನೋ ಖುಷಿ ಟೀಚರ್ thanks ಅಂತ ಹೊಗಳಿದಾಗ.
ಆದ್ರೆ ಯಾವಾಗ ಅದೇ ಬೆತ್ತದಿಂದ ನನಗೂ ಏಟು ಬೀಳ್ತಾ ಇತ್ತೊ ಆವಾಗ ಅನ್ನಿಸ್ತಾ ಇತ್ತು ಇಷ್ಟು ಒಳ್ಳೆಯ ಬೆತ್ತ ಕೊಡ್ಬಾರ್ದಿತ್ತು ಅಂತ!!
’ನಾನೆ ಟೀಚರ್ ಬೆತ್ತ ತಂದುಕೊಟ್ಟಿದ್ದು ಸ್ವಲ್ಪ ರಿಯಾಯಿತಿ ಕೊಡಿ ’ ಅಂತ ಕೇಳೋಣ ಅಂತ ಅನ್ನಿಸ್ತಾ ಇತ್ತು . ಆದ್ರೆ ಧೈರ್ಯ ಬರ್ತಾ ಇರ್ಲಿಲ್ಲ.

ಇಂತ ಟೀಚರ್ ಗಳೇ ಅಲ್ವಾ ನಾವು ತಪ್ಪು ಮಾಡಿದಾಗ ನಮ್ಮನ್ನೆಲ್ಲ ಹೊಡೆದು ಸರಿ ಮಾಡಿದ್ದು.

ಆದ್ರೆ ಈಗ ಮಕ್ಕಳಿಗೆ ಹೊಡೆತ ತಡ್ಕೊಳ್ಳೋ ಶಕ್ತಿನೂ ಇಲ್ಲ ! ಟೀಚರ್ ಗೆ ಹೊಡಿಯೊ ಧೈರ್ಯಾನೂ ಇಲ್ಲ !!
ಫೋಟೊ ಕೃಪೆ :www.wcu.edu

4 comments:

ತೇಜಸ್ವಿನಿ ಹೆಗಡೆ said...

ಸಂದೀಪ್,

ಮೊದಲಿಗೆ.. ನನ್ನ ಪ್ರತಿಕ್ರಿಯೆಯೇ ನಿಮ್ಮ ಬ್ಲಾಗಿಗೆ ಮೊದಲನೆಯದೆಂದು ತಿಳಿದು ತುಂಬಾ ಸಂತೋಷವಾಯಿತು. ನಿಮ್ಮ ಬರವಣಿಗೆಗಳು ನಿರಾತಂಕವಾಗಿ ಸಾಗಲಿ ಎಂದು ಹಾರೈಸುವೆ.

ಇನ್ನು ಪ್ರಸ್ತುತ ಬರವಣಿಗೆಯ ಕುರಿತು..

"ಆದ್ರೆ ಈಗ ಮಕ್ಕಳಿಗೆ ಹೊಡೆತ ತಡ್ಕೊಳ್ಳೋ ಶಕ್ತಿನೂ ಇಲ್ಲ ! ಟೀಚರ್ ಗೆ ಹೊಡಿಯೊ ಧೈರ್ಯಾನೂ ಇಲ್ಲ !!"

ಈ ಮೇಲಿನ ನಿಮ್ಮ ಹೇಳಿಕೆಯನ್ನು ನಾನು ಪೂರ್ಣವಾಗಿ ಸಮ್ಮತಿಸುವುದಿಲ್ಲ. ಹಿಂದಿನ ಶಿಕ್ಷಕರು ಶಿಕ್ಷೆಕೊಡುವುದಕ್ಕೋಸ್ಕರ ಮಾತ್ರ ಹೊಡೆಯುತ್ತಿರಲಿಲ್ಲ. ಅವರ, ಪೆಟ್ಟು/ಬೈಗುಳಗಳಲ್ಲೂ ಒಂದು ರೀತಿಯ ಪ್ರೀತಿಯಿತ್ತು. ತಿದ್ದುವಿಕೆಯ ಗುರಿಯಿತ್ತು. ಆದರೆ ಈಗಿನ ಕೆಲವು ಶಿಕ್ಷಕರು ತಾವು ಶಿಕ್ಷೆಕೊಡುವುದೇ ಒಂದು ಮಹತ್ಕಾರ್ಯ ಅದೇ ತಮ್ಮ ಗುರಿ/ಹಕ್ಕು ಎಂದು ಎಣಿಸಿ ಹಿಂಸಾತ್ಮಕವಾಗಿ ನಡೆದುಕೊಳ್ಳುವುದರಿಂದ ವಿದ್ಯಾರ್ಥಿಗಳು ಬಂಡೇಳುವಂತಾಗಿರುವುದು. ಅದರಿಂದಲೇ ಬಹುಶಃ ಎಲ್ಲಾ ಶಿಕ್ಷಕರು ತುಸು ಶಿಕ್ಷಿಸಲೂ ಹೆದರುತ್ತಿರುವುದು.

ಸಂದೀಪ್ ಕಾಮತ್ said...

@ ತೇಜಸ್ವಿನಿ,

ನನ್ನ ತಂದೆ ಟೀಚರ್ ಗಳೇನಾದ್ರೂ ದಾರಿಯಲ್ಲಿ ಸಿಕ್ರೆ ಹೇಳ್ತಿದ್ದಿದ್ದು ಒಂದೇ ಮಾತು ’ ಅವ್ನು ತಂಟೆ ಮಾಡಿದ್ರೆ ಎರಡ್ಡು ಬಿಡಿ ’ ಅಂತ !
ಈಗಿನ ಪೋಷಕರಿಗೆ ಆ ರೀತಿ ಹೇಳೊ ಧೈರ್ಯ ಇಲ್ಲ .ಯಾಕಂದ್ರೆ ಒಬ್ಬಳೆ ಮಗಳು/ಮಗ ಮುದ್ದಾಗಿ ಬೆಳೆಸಿರ್ತಾರೆ.
ಶಿಕ್ಷಕರು ಹೆದರೋದಕ್ಕೆ ಇನ್ನೊಂದು ಕಾರಣ ಅಂದ್ರೆ ,ಪೋಷಕರು ಸಾವಿರಾರು ರುಪಾಯಿ ಫೀಸ್ ಕೊಟ್ಟಿರ್ತಾರೆ .ಹಾಗಾಗಿ ಮಕ್ಕಳನ್ನು ’ಚೆನ್ನಾಗಿ ’ ನೋಡಿಕೊಳ್ಳೋದು ಟೀಚರ್ ಗಳ ಕರ್ತವ್ಯ.

ತೇಜಸ್ವಿನಿ ಹೆಗಡೆ said...

ಸಂದೀಪ್,

ಹಿಂದೆ ಗುರು - ಶಿಷ್ಯ ಸಂಬಧದೊಳಗೆ ಒಂದು ರೀತಿಯ ಪ್ರೀತಿ, ಮಮತೆ, ಗೌರವ, ಭಕ್ತಿ, ಭಯ ಎಲ್ಲಾ ಇತ್ತು. ಆದರೆ ಈಗ ಎಲ್ಲಾ ಸಂಬಂಧಗಳೂ ವ್ಯಾವಹಾರಿಕವಾಗಿರುವಾಗ, ಈ ಸಂಬಂಧದಲ್ಲಿ ಉಂಟಾಗಿರುವ ಬದಲಾವಣೆ ಆಶ್ಚರ್ಯ ತರದು.... ಹಿಂದೆಯೂ ಮಕ್ಕಳನ್ನು ಹೆತ್ತವರು ಪ್ರೀತಿಸುತ್ತಿದ್ದರು. ಆದರೆ ಅಲ್ಲಿ ಗುರುವಿನ ಬಗ್ಗೆ ಹೆಚ್ಚಿನ ನಂಬಿಕೆ ಇತ್ತು. ಈಗ ಅದು ಹೊರಟುಹೋಗಿದೆ(ಎಲ್ಲಾ ಗುರುಗಳನ್ನು/ ಎಲ್ಲಾ ಪೋಷಕರನ್ನು ಉದ್ದೇಶಿಸಿ ಖಂಡಿತ ಹೇಳುತ್ತಿಲ್ಲ).

ವಿದ್ಯಾರ್ಥಿಗಳೂ ಅಷ್ಟೇ ಶಾಲೆಗೆ ಸೇರುವ ಮೊದಲೇ ಇಷ್ಟೋ ವಿಷಯಗಳನ್ನು ಮೊದಲೇ ಅರಿತಿರುವ ಸವಲತ್ತು ಈಗಿರುತ್ತದೆ. ಹಾಗಾಗಿ ಗುರು-ಶಿಷ್ಯರ ನಡುವಿನ ಸಂಬಂಧ ಮತ್ತೂ ನಾಜೂಕಾಗಿ ಹೋಗಿದೆ.

ಆದರೂ ದಕ್ಷಿಣ ಕನ್ನಡದಲ್ಲಿ ಇನ್ನೂ ಆ ಎಳೆಯ ತಂತು ಹೆಚ್ಚು ಉಳಿದುಕೊಂಡಿದೆ ಎನ್ನ ಬಹುದೇನೋ. ಅಲ್ಲಿ ವಿದ್ಯೆಗೆ ಹಾಗೂ ವಿದ್ಯಾರ್ಥಿಗಳಿಗೆ ಸಿಗುತ್ತಿರುವ ಪ್ರಾಮುಖ್ಯತೆ ಇನ್ನೆಲ್ಲೂ ಅಷ್ಟೊಂದು (ಅದರಲ್ಲೂ ಬೆಂಗಳೂರಿಗೆ ಹೋಲಿಸಿದರೆ) ಸಿಗುತ್ತಿಲ್ಲವೇನೋ ಅನ್ನಿಸಿದೆ.(ನಾನೂ ಅಲ್ಲೇ ಬೆಳೆದುದ್ದರಿಂದ..ನನ್ನ ಅನುಭವದಿಂದ ಹೇಳುತ್ತಿರುವುದು) ಅಲ್ಲಿ ಇನ್ನೂ ವಿದ್ಯೆ ಇಲ್ಲಿಯಷ್ಟು ಕಮರ್ಷಿಯಲ್ ಗೊಂಡಿಲ್ಲ ಅನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ.

ಎಲ್ಲದಕ್ಕೂ ಕಾಲಾಯ ತಸ್ಮೈ ನಮಃ ಎನ್ನೋಣವೇ?!

Anonymous said...

ಬಿಸಿಯಾಗದೆ ಬೆಣ್ಣೆ ಕರಗದು.
ದೋಸ್ತ್
Reading ur blog in between office work. :-)