Thursday, November 20, 2008

ಈ ಪುಸ್ತಕ ಅವರಿಗಿಷ್ಟ.ಕಳೆದ ಶನಿವಾರ ನನ್ನ ಬಳಿ ಎರಡು ಆಯ್ಕೆಗಳಿದ್ದವು.
ಒಂದು : ಸ್ನೇಹಿತರ ಜೊತೆ ಉಪೇಂದ್ರನ ’ಬುದ್ಧಿವಂತ’ ಕ್ಕೆ ಹೋಗೋದು .
ಎರಡು : ಮೇ ಫ್ಲವರ್ ನ ’ಈ ಪುಸ್ತಕ ನಂಗಿಷ್ಟ ’ ಕಾರ್ಯಕ್ರಮಕ್ಕೆ ಹೋಗೋದು .
ನಾನು ’ಬುದ್ಧಿವಂತ’ಕ್ಕೆ ಹೋಗಿ ದಡ್ಡನಾಗದೆ ಮೇ ಫ್ಲವರ್ ಗೆ ಹೋಗಿ ಬುದ್ಧಿವಂತನಾದೆ!

’ಈ ಪುಸ್ತಕ ನಂಗಿಷ್ಟ’ ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು .ಸಾಹಿತ್ಯಿಕ ವಲಯಕ್ಕೆ ಸಂಬಂದ ಪಟ್ಟ ಬಹಳಷ್ಟು ಜನ ತಮಗೆ ಇಷ್ಟವಾದ ಪುಸ್ತಕದ ಬಗ್ಗೆ ಮಾತಾಡೋದಕ್ಕೆ ಅಂತ ’ಈ ಪುಸ್ತಕ ನಂಗಿಷ್ಟ ’ ಕಾರ್ಯಕ್ರಮ ಆಯೋಜಿಸಿತ್ತು ’ಮೇ ಫ್ಲವರ್’.

ಕಾರ್ಯಕ್ರಮ ಶುರುವಾಗೋದಕ್ಕೆ ಅರ್ಧ ಗಂಟೆ ಮೊದಲೇ ಹೋಗಿದ್ದೆ ನಾನು.ಹೇಗೂ ಗೊತ್ತಿತ್ತು ಮೇ ಫ್ಲವರ್ ನಲ್ಲಿ ಟೈಂ ಪಾಸ್ ಮಾಡೋದಂತೂ ಕಷ್ಟ ಏನಲ್ಲ .ಯಾಕಂದ್ರೆ ನಾನು ವರ್ಷ ಇಡೀ ಕೂತು ಓದಿದ್ರೂ ಮುಗಿಯದಷ್ಟು ಪುಸ್ತಕಗಳು ಅಲ್ಲಿವೆ .ಬಿಟ್ಟಿಯಾಗಿ ಯಾವುದನ್ನು ಬೇಕಾದ್ರೂ ಎತ್ತಿಕೊಂಡು ಓದಬಹುದು !

ಹೇಗೂ ಕಾರ್ಯಕ್ರಮ ಶುರು ಆಗೋದಕ್ಕೆ ಸಮಯ ಇತ್ತಲ್ವ ,ಅದಿಕ್ಕೆ ಅಲ್ಲೇ ಇಟ್ಟಿದ್ದ ವಿಜಯ ಕರ್ನಾಟಕ ದೀಪಾವಳಿ ವಿಶೇಷಾಂಕ ಎತ್ತಿಕೊಂಡೆ.ಬಹಳ ಚೆನ್ನಾಗಿತ್ತು ವಿಶೇಷಾಂಕ .ಅದರಲ್ಲಿ ನನ್ನ ನೆಚ್ಚಿನ

ಇಂದುಶ್ರೀ ಹಾಗೂ ಅವಳ ಮಾತನಾಡುವ ಗೊಂಬೆ ಡಿಂಕು
ಬಗ್ಗೆ ಲೇಖನ ಪ್ರಕಟವಾಗಿತ್ತು .ಸುಧನ್ವಾ ದೇರಾಜೆ ಬರೆದಿದ್ರು ಅದನ್ನು.ಓದಿ ಪುಟ ತಿರುಗಿಸೋದರ ಒಳಗೆ ಸುಧನ್ವಾನೇ ಪ್ರತ್ಯಕ್ಷ ಆಗ್ಬೇಕಾ!

ಕಾರ್ಯಕ್ರಮದಲ್ಲಿ ಮೊದಲು ಮಾತನಾಡಿದವರು ಸುಬ್ಬು ಹೊಲೆಯಾರ್ .ಲಂಕೇಶ್ ರ್ ’ ಕಲ್ಲು ಕರಗುವ ಸಮಯ ’ ಅವರ ನೆಚ್ಚಿನ ಪುಸ್ತಕ.ಲಂಕೇಶರ ಜೊತೆಗಿದ್ದ ತಮ್ಮ ಒಡನಾಟ ,ತಮಗೆ ಯಾಕೆ ಈ ಪುಸ್ತಕ ಇಷ್ಟ ಅನ್ನೋದರ ಬಗ್ಗೆ ತುಂಬ ಸರಳವಾಗಿ,ಸುಂದರವಾಗಿ ಮಾತನಾಡಿದರು ಸುಬ್ಬು.

ನಂತರ ಮಂಜುನಾಥ ಸ್ವಾಮಿ ’ಬರ್ಕ್ವೈಟ್ ಕಂಡ ಭಾರತ ’ ಪುಸ್ತಕದ ಬಗ್ಗೆ ಮಾತನಾಡಿದ್ರು.

ಟೀನಾ ರವರ ನೆಚ್ಚಿನ ಪುಸ್ತಕ THE ADVENTURES OF DUNNO AND HIS FRIENDS ಇದೊಂದು ರಷ್ಯಾ ಮೂಲದ ಪುಸ್ತಕ . ಟೀನಾ ಇದರ ಬಗ್ಗೆ ಮಾಡಿದ ವರ್ಣನೆ ಕೇಳಿದ ನಂತರವಂತೂ ಈ ಪುಸ್ತಕದ ಬಗ್ಗೆ ತುಂಬಾ ಕುತೂಹಲ ಇತ್ತು ನಂಗೆ .ಅವರು ಹೇಳಿದ ಹಾಗೆ ಈ ಪುಸ್ತಕದಲ್ಲಿ illustrations ಗಳಂತೂ ಅದ್ಭುತವಾಗಿವೆ.

ಸುಧನ್ವಾ ದೇರಾಜೆ ಪುತ್ತೂರಿನ ಸಂಧ್ಯಾದೇವಿಯವರ ‘ಮಾತು ಚಿಟ್ಟೆ -ಬೆಂಕಿ ಬೆರಳು-ಮುರಿದ ಮುಳ್ಳಿನಂತೆ ಜ್ಞಾನ’ ಪುಸ್ತಕದ ಬಗ್ಗೆ ಮಾತಾಡಿದರು.
ಈ ಪುಸ್ತಕದ ಬಗ್ಗೆ ನನಗೂ ತುಂಬಾ ಪ್ರೀತಿ! ನಾನು ತೆಗೆದುಕೊಂಡ ಮೊದಲ ಕವನ ಸಂಕಲನ ಇದು.ನಾನು ಕಾವ್ಯಲೋಕದಿಂದ ತುಂಬಾ ದೂರ,ಆದರೂ ಪ್ರಜಾವಾಣಿಯಲ್ಲೋ ಯಾವುದರಲ್ಲೋ ಬಂದ ವಿಮರ್ಷೆ ನೋಡಿ ಅಂಕಿತ ಪುಸ್ತಕದ ಅಂಗಡಿಗೆ ಹೋಗಿ ತೆಗೆದುಕೊಂಡ ಪುಸ್ತಕ ಇದು.

ಸುಳ್ಯದ ಹರೀಶ್ ಕೇರ ’ಬೆಂಕಿಯ ನೆನಪು’ ಪುಸ್ತಕದ ಬಗ್ಗೆ ಬಹಳ ಸೊಗಸಾಗಿ ಮಾತನಾಡಿದರು.ಎಡುವರ್ಡೋ ಗೆಲಿಯಾನೋ ನ Memory of Fire ನ ಕನ್ನಡಾನುವಾದ ಇದು .ಬಹಳ ಚೆನ್ನಾಗಿ ಮಾತಾಡ್ತಾರೆ ಹರೀಶ್.

ವಿ ಆರ್ ಕಾರ್ಪೆಂಟರ್ ಅವರು ’ಟೀಕೆ -ಟಿಪ್ಪಣಿ’ ಪುಸ್ತಕದ ಬಗ್ಗೆ ಮಾತಾಡಿದ್ರು.

ಕೊನೆಯದಾಗಿ ವಿದ್ಯಾರಶ್ಮಿ ಪೆಲತಡ್ಕ ಅವರು ’ಗಾಂಧಿ ಬಂದಾಗ’ ( ಅದರ ಲೇಖಕಿಯ ಹೆಸರೂ ಮರೆತು ಹೋಯ್ತು ನಂಗೆ!) ಪುಸ್ತಕದ ಬಗ್ಗೆ ಮಾತಾಡಿದ್ರು. ನಂಗೆ ತುಂಬಾ ಇಷ್ಟ ಆಯ್ತು ಅವರ ವಿವರಣೆ.ಅದಕ್ಕೆ ಕಾರವೂ ಇದೆ! ’ಗಾಂಧಿ ಬಂದಾಗ’ ಪುಸ್ತಕ ಮಂಗಳೂರಿಗೆ ಸಂಬಂಧಪಟ್ಟ ಕಥೆ .ಈ ಪುಸ್ತಕದಲ್ಲಿ ತುಳುನಾಡಿನ ಸೊಗಡನ್ನು ಎಷ್ಟು ಚೆನ್ನಾಗಿ ಚಿತ್ರಿಸಿದ್ದಾರೋ ಅಷ್ಟೇ ಸೊಗಸಾಗಿ ಅದರ ಚಿತ್ರಣವನ್ನು ವಿದ್ಯಾರಶ್ಮಿ ಅಲ್ಲಿ ಕಟ್ಟಿಕೊಟ್ಟರು.

ಜೋಜಿಗ ಹಾಗೂ ದೀಪಿಕಾರ ಅನುಪಸ್ಥಿತಿ ಎದ್ದು ಕಾಣಿಸ್ತಾ ಇತ್ತು(ನನಗೆ ಮಾತ್ರ!) ಆದ್ರೆ ಅವರ ಗೆಳತಿ ಮಾತ್ರ ’ನೀವು ಬ್ಲಾಗ್ ನಲ್ಲಿ ಏನು ಬೇಕಾದ್ರೂ ಬರೆಯಿರಿ ಫೊಟೋ ತೆಗೆಯೋದು ಮಾತ್ರ ನನ್ನ ಜನ್ಮಸಿದ್ಧ ಹಕ್ಕು ’ ಅನ್ನೊ ಹಾಗೆ ಅವರ ’ಕರ್ತವ್ಯವನ್ನು ನಿರ್ವಹಿಸ್ತಾ ಇದ್ರು.

ಒಟ್ಟಿನಲ್ಲಿ ಬಹಳ ಸುಂದರ ಕಾರ್ಯಕ್ರಮ .ಥ್ಯಾಂಕ್ಸ್ ಮೇ ಪ್ಲವರ್ ಟೀಮ್ !

ಫೋಟೋ : ’ಅವಧಿ’ಯಿಂದ ಲಪಟಾಯಿಸಿದ್ದು.

Wednesday, November 19, 2008

ತಂತ್ರೋಪದೇಶ !’ಚುರುಮುರಿ ’ ಬ್ಲಾಗ್ ತಂಡ ಮೊನ್ನೆ ಮಕ್ಕಳ ದಿನಾಚರಣೆಯಂದು ಒಂದು ಸ್ಪರ್ಧೆ ನಡೆಸಿತ್ತು.

"Children's Day Caption Contest " ಅಂತ!

ದೇವೇಗೌಡರು ಮತ್ತೆ ಕುಮಾರಸ್ವಾಮಿಯ ಫೋಟೋ ಗೆ ಒಂದು caption ನೀಡೋ ಸ್ಪರ್ಧೆ ಅದು.

ಅದರಲ್ಲಿ ನನ್ನನ್ನು ವಿಜೇತ ಅಂತ ಘೋಷಿಸಿದ್ದಾರೆ :)

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೋಡಿ.

ಸ್ಪರ್ಧೆಯ ಬಹುಮಾನವಾಗಿ ದೇವೇಗೌಡರ ರಾಜಕೀಯ ’ತಂತ್ರೋಪದೇಶ’ದ ಕೋರ್ಸ್ ಗೆ ಉಚಿತ ನೋಂದಾವಣೆ!

Photo Courtesy : http://churumuri.wordpress.com

Tuesday, November 11, 2008

ಬಿಳಿ ಹುಲಿಯ ಕಪ್ಪು ಬಣ್ಣ!’ವೈಟ್ ಟೈಗರ್ ’ ಗೆ ಬೂಕರ್ ಪ್ರಶಸ್ತಿ ಸಿಕ್ಕಿತಂತೆ.ಅರವಿಂದ ಅಡಿಗ ಕನ್ನಡಿಗರಂತೆ(ಅದರಲ್ಲೂ ಮಂಗಳೂರು ಅಂದ ತಕ್ಷಣ ಎರಡು ಕಿವಿಗಳು ಒಂದೇ ಸಲ ನಿಮಿರುತ್ತವೆ) !ಇಷ್ಟು ದಿನ ಇದೇ ಸಂಭ್ರಮದಲ್ಲಿದ್ದೆ .ಆದ್ರೆ ಪುಸ್ತಕದ ಬಗ್ಗೆ ವಿಮರ್ಷೆಗಳನ್ನು ನೋಡಿದ ಮೇಲೆ ಯಾಕೋ ಸಂತೋಷಕ್ಕೆ ತಣ್ಣೀರೆರಚಿದ ಹಾಗಾಗಿದೆ.

ಅಡಿಗರು ಹೇಳಿದ್ದು ’ನಗ್ನ ಸತ್ಯ ’ವಂತೆ ! ಭಾರತದ ಇನ್ನೊಂದು ಮುಖ ತೋರಿಸಿದ್ದಾರಂತೆ !

ಇನ್ನೊಂದು ಮುಖ ತೋರಿಸಿದ್ದಾರಾ?? ಯಾವ ಮುಖ ????

ಓಹ್ ಅದಾ ! ಭಾರತ ಒಂದು ಭ್ರಷ್ಟರ ಕೂಪ,ಇಲ್ಲಿ ವಿದ್ಯುತ್ ಕೊರತೆ ಯಾವಾಗಲೂ ,ಇಲ್ಲಿನ ಎಡುಕೇಶನ್ ಸರಿ ಇಲ್ಲ (ಅದಕ್ಕೆ ಆಕ್ಸ್ಫರ್ಡ್ ನಲ್ಲಿ ಓದಿದ್ದು),ಇಲ್ಲಿನ ಟ್ರಾಫಿಕ್ ಸರಿ ಇಲ್ಲ,ಇಲ್ಲಿನ ಜನರಿಗೆ ಶಿಸ್ತಿಲ್ಲ ,ಇಲ್ಲಿ ಜಾತಿಗಳ ಹೆಸರಲ್ಲಿ ಮಾರಣ ಹೋಮವೇ ನಡೆಯುತ್ತೆ, etc etc etc .......

ಈ ಮುಖ ’ಪ್ರತಿಯೊಬ್ಬ ಭಾರತೀಯ ’ನಿಗೂ ಗೊತ್ತಿರುವಂಥದ್ದೇ ! ಅದರಲ್ಲೇನ್ರಿ ಬಂತು??

ಇನ್ನೂ ಶಾಲೆಯ ಮುಖವನ್ನೇ ನೋಡದ, ಗೊಣ್ಣೆ ಒರಸಿಕೊಂಡು ಒಂದು ಕೈಯಲ್ಲಿ ಜಾರುತ್ತಿರುವ ಚಡ್ಡಿ ಮೇಲಕ್ಕೇರಿಸ್ತಾ ಆಟ ಆಡಲು ಓಡೋ ಪುಟ್ಟ ಮಗುವಿಗೂ ಗೊತ್ತು ಈ ’ನಗ್ನ ಸತ್ಯ’. ಅದನ್ನು ’ನಮಗೆ ’ಹೇಳಲು ಅಡಿಗರು ಬರಬೇಕಿತ್ತಾ????

ಓಹ್ ಇಲ್ಲೇ ಅಲ್ವಾ ನಾನು ಎಡವಿದ್ದು ! ಅಡಿಗರಿಗೂ ಗೊತ್ತು ಅವರು ಏನೂ ಹೊಸದನ್ನ ಹೇಳ್ತಾ ಇಲ್ಲ ಅಂತ .ಅದಿಕ್ಕೇ ಅವರು ಹಳೆಯದನ್ನೇ ’ಹೊಸಬರಿಗೆ’ ಹೇಳಲು ನಿಶ್ಚಯಿಸಿದ್ದು.
ಭಾರತೀಯರೆಲ್ಲರಿಗೂ ಗೊತ್ತು ಭಾರತ ಎಷ್ಟು ಭ್ರಷ್ಟ ಅಂತ ,ಇನ್ನು ಜಗತ್ತಿಗೆಲ್ಲಾ ಹೇಳೋಣ ಈ ಸತ್ಯ ಅಂತ ಅನ್ನಿಸಿರ್ಬೇಕು ಅವರಿಗೆ.ಬಹುಷ: ಅಡಿಗರು ಅಬ್ದುಲ್ ಕಲಾಂ ರ ಪತ್ರ ವನ್ನು ಓದಿಲ್ಲ ಅಂತ ಕಾಣ್ಸುತ್ತೆ! ಓದಿದ್ರೆ ಬಹುಷ: ಇಂಥ ಪುಸ್ತಕ ಬರೀತಾ ಇರ್ಲಿಲ್ಲ.

ಭಾರತ ಹಾವಾಡಿಗರ ದೇಶ ,ಭಿಕ್ಷುಕರ ದೇಶ ಅನ್ನೋ ತಪ್ಪು ಕಲ್ಪನೆಯನ್ನು ನಿವಾರಿಸಲು ಪಾಪ ವರ್ಷಗಳೇ ಹಿಡಿಯಿತು ನಮಗೆ.ಇನ್ನು ಅಡಿಗರು ಹೇಳಿದ್ದು ತಪ್ಪು ಅಂತ ಸಾಧಿಸಲು ಅದೆಷ್ಟು ವರ್ಷಗಳು ಹಿಡಿಯುತ್ತೋ??

ಅಡಿಗರು ಹೇಳಿದ್ದು ಖಂಡಿತ ತಪ್ಪಲ್ಲ -ಅದು ಕಟು ವಾಸ್ತವ ....ಆದ್ರೆ ಅದನ್ನು ಜಗತ್ತಿಗೆಲ್ಲಾ ಸಾರಿ ಹೇಳುವ ಅಗತ್ಯ ಇತ್ತಾ?

ಮನೆಗೆ ಯಾರೋ ನಿಮ್ಮ ಪರಿಚಯದವರು ಬರ್ತಾರೆ .ನೀವು ಅವರಿಗೆ ಮನೆ ಎಲ್ಲಾ ತೋರಿಸ್ತೀರ .ಹೆಂಡತಿ ಮಕ್ಕಳನ್ನು ಪರಿಚಯಿಸ್ತೀರ.ಚೆನ್ನಾಗಿ ಊಟ ಉಪಚಾರ ಮಾಡಿ ಕಳಿಸ್ತೀರ .ಅದು ಬಿಟ್ಟು "ನೋಡಿ ಈ ಜಾಗ actually ನನ್ನ ಅಣ್ಣಂದು ನಾನು ಮೋಸ ಮಾಡಿ ನನ್ನ ಹೆಸರಿಗೆ ಮಾಡಿಸಿಕೊಂಡೆ. ನೋಡಿ ಇವ್ಳು ನನ್ನ ಹೆಂಡತಿ ,ಇವಳಿಗೆ ಯಾರ್ದೋ ಜೊತೆ ಅನೈತಿಕ ಸಂಬಂದ ಇದೆ.ಇನ್ನು ಮಗಳ ವಿಷಯ ಕೇಳಲೇ ಬೇಡಿ ,ದಿನಕ್ಕೊಂದು ಹುಡುಗರ ಜೊತೆ ಸುತ್ತಾಡ್ತಾಳೆ " ಅಂತ ಯಾವತ್ತೂ ಹೇಳಲ್ಲ.

ಮೇಲಿನದೆಲ್ಲ ’ಕಟು ವಾಸ್ತವ ’ ಆದ್ರೂ!

ಊರಿಂದ ಯಾರೋ ಬೆಂಗಳೂರಿಗೆ ಬಂದ್ರೆ ಅವರನ್ನು ಕಬ್ಬನ್ ಪಾರ್ಕ್ ,ಲಾಲ್ ಬಾಗ್ ವಿಧಾನ ಸೌಧ ಅಂತ ಒಳ್ಳೊಳ್ಳೆ ಸ್ಥಳಗಳನ್ನು ತೋರಿಸಿ ಖುಷಿ ಖುಷಿಯಾಗಿ ಊರಿಗೆ ವಾಪಾಸ್ ಕಳಿಸ್ತೀವಿ.
ಅದು ಬಿಟ್ಟು ಅವರನ್ನು ಕಬ್ಬನ್ ಪಾರ್ಕ್ ನ ಪೊದೆಗಳ ಹಿಂದೆ ಕರೆದುಕೊಂಡು ಹೋಗಿ "ನೋಡ್ತಾ ಇರಿ ಇಲ್ಲಿ ಈಗ ಹೇಗೆ ವೇಶ್ಯಾವಾಟಿಕೆ ನಡೆಯುತ್ತೆ ನೋಡ್ತಾ ಇರಿ " ಅನ್ನಲ್ಲ.
ಕೆ.ಆರ್ ಮಾರ್ಕೆಟ್ ನ ಹಿಂದೆ ಇರೋ ಕಸದ ತೊಟ್ಟಿ ತೋರಿಸಿ "ನೋಡಿ ಇಲ್ಲೇ ಎಲ್ಲಾ ಕಸ ಹಾಕೋದು, ಮಾರ್ಕೆಟ್ ಸ್ವಲ್ಪ ಗಬ್ಬು -ಇಲ್ಲಾಂದ್ರೆ ಇದೂ ಒಳ್ಳೆಯ ಟೂರಿಸ್ಟ್ ಪ್ಲೇಸು " ಅನ್ನಲ್ಲ.
ಚೆನ್ನಾಗಿರೋ ಹೋಟೆಲ್ ಗೆ ಕರ್ಕೊಂಡು ಹೋಗಿ ಚೆನ್ನಾಗಿರೋ ಊಟಾನೇ ಕೊಡಿಸ್ತೇವೇ ವಿನಹ ,ರಸ್ತೆ ಬದಿಯಲ್ಲಿ ಯ ಕಬಾಬ್ ಕೊಡಿಸಿ "ರೋಗದಿಂದ ಸತ್ತಿರೋ ಕೋಳಿ ಎಲ್ಲಾ ಹಾಕ್ತಾರೆ ಇಲ್ಲಾಂದ್ರೆ ಟೇಸ್ಟ್ ಇನ್ನೂ ಚೆನ್ನಾಗಿರುತ್ತೆ ಇಲ್ಲಿ " ಅನ್ನಲ್ಲ.

ನಮ್ಮ ಬದುಕಿನಲ್ಲಿ ಅದೆಷ್ಟೊ ’ಕಟು ವಾಸ್ತವ’ಗಳಿವೆ ಆದ್ರೂ ಅದನ್ನು ಎಲ್ಲರಿಗೂ ನಾವು ಹೇಳಲ್ಲ/ಹೇಳೋಕಾಗಲ್ಲ/ಹೇಳಲೂ ಬಾರದು.

ಈಗ ಹೇಳಿ ಅಡಿಗರು ಮಾಡಿದ್ದು ಸರಿ ನಾ??
ಸರಿ ತಪ್ಪು ಡಿಸೈಡ್ ಮಾಡೋದಕ್ಕೆ ನಾನ್ಯಾರು ಅಲ್ವ?ನನ್ನ ದೇಶದ ಬಗ್ಗೆ ಕಿಂಚಿತ್ ಅಪವಾದ ಹಾಕಿದ್ರೂ ಯಾಕೋ ತುಂಬಾ ಬೇಜಾರಾಗುತ್ತೆ.

ಖಂಡಿತ ಭಾರತದಲ್ಲಿ ಭ್ರಷ್ಟಾಚಾರದ ಸಮಸ್ಯೆ ತುಂಬಾ ಇದೆ .ಭಾರತ 74 ನೇ ಸ್ಥಾನದಲ್ಲಿದೆಯಂತೆ ಭ್ರಷ್ಟಾಚಾರದಲ್ಲಿ ! ಅದೇನೋ ಸರಿ ಆದ್ರೆ ಇನ್ನೂ 73 ದೇಶಗಳಿಲ್ವಾ ನಮಗಿಂತ ಮುಂದೆ?? ಅಮೆರಿಕಾದ ಸ್ಥಾನ 20 !!! ಬ್ರಿಟನ್ ನ ಸ್ಥಾನ 13 !!
ಭಾರತದಲ್ಲಿ ಜಾತಿವಾದ ದೊಡ್ಡ ಪಿಡುಗು ಒಪ್ತೀನಿ. ಆದ್ರೆ ಕಪ್ಪು ಜನಾಂಗದವರ ಮೇಲೆ ಅಮೆರಿಕಾದಲ್ಲಿ ನಡೆಯುತ್ತಿದ್ದ(ರುವ?) ದೌರ್ಜನ್ಯ ???

ಭಾರತ ಆರ್ಥಿಕ ಸ್ಥಿತಿ ಅಷ್ಟು ಉತ್ತಮವಾಗಿಲ್ಲ .ಹೌದು ಅದಕ್ಕೇನಿಗ?? ಎಲ್ಲಾ ರೀತಿಯಲ್ಲೂ ಸಬಲರಾಗಿದ್ದ ಅಮೆರಿಕಾ ಯಾಕೆ ಅಲುಗಾಡ್ತಾ ಇದೆ?
ಭಾರತದಲ್ಲಿ ಸೆಕ್ಯುರಿಟಿ ನೇ ಇಲ್ಲ ಕಣ್ರಿ ’ಯಾವಾಗ ಎಲ್ಲಿ ಬಾಂಬ್ ಬೀಳುತ್ತೋ ಗೊತ್ತಿಲ್ಲ!’ -ಇದೂ ಸರೀನೆ!! ಆದ್ರೆ ಇರುವೆ ಕೂಡ ಅನುಮತಿ ಇಲ್ಲದೆ ನುಸುಳಲಾಗದ ಅಮೆರಿಕಾಗೆ ಹೋಗಿ ,ಅವರದ್ದೇ ವಿಮಾನ ಅಪಹರಿಸಿ ,ಅವರ ಪ್ರತಿಷ್ಟಿತ ಕಟ್ಟಡವನ್ನು ಉರುಳಿಸಿಲ್ವಾ??
BMTC ಬಸ್ ’ಪ್ರಪಂಚದಲ್ಲೆ’ ಸಕ್ಕತ್ ರಶ್ ಅಂತ ಅಂದುಕೊಂಡಿದ್ದೆ ನಾನು ! ಮೊನ್ನೆ ಚೈನಾ ದ ರೈಲಿನ ವೀಡಿಯೋ ನೋಡಿದೆ .ಕುರಿ ತುಂಬಿದ ಹಾಗೆ ತುಂಬ್ತಾ ಇದ್ರು ಜನರನ್ನ .ಅದನ್ನು ನೋಡಿದ ಮೇಲೆ BMTC ನೇ ವಾಸಿ ಅನ್ನಿಸಿದೆ ನಂಗೆ.
ಭಾರತದಲ್ಲಿ ಅದೆಷ್ಟೋ ಮಕ್ಕಳಿಗೆ ಶಿಕ್ಷಣ ದೊರೀತಿಲ್ವಂತೆ .ತುಂಬಾ ಬೇಸರದ ವಿಷಯ ,ಆದ್ರೆ ಮೊನ್ನೆ ಯಾವುದೋ ಫೋಟೋದಲ್ಲಿ ನೋಡಿದೆ ಹೊಟ್ಟಿಗಿಲ್ಲದ ಮಗು ಈಗ ಸಾಯುತ್ತೆ ಅಂತ ಗಿಡುಗವೊಂದು ದೂರದಲ್ಲಿ ಕಾಯ್ತಾ ಇತ್ತು!ಅದಕ್ಕಿಂತ ವಾಸಿ ಅಲ್ಲ ಭಾರತ??
ತಾಲಿಬಾನ್ ನಲ್ಲಿ ಮಕ್ಕಳಿಗೆ a,b,c,d ಕಲಿಸುವ ಬದಲು ಬಂದೂಕು ಚಲಾಯಿಸೋದು ಹೇಗೆ ಅಂತ ಹೇಳಿ ಕೊಡ್ತಾರಂತೆ .ಅದಕ್ಕಿಂತ ವಾಸಿ ಅಲ್ಲ ಭಾರತ??

ಭಾರತದ ಯಾವುದೇ ಸಮಸ್ಯೆ ತಗೊಂಡ್ರೂ ಅದಕ್ಕಿಂತ ಎರಡು ಪಟ್ಟು ಹೆಚ್ಚಾಗಿರೋ ಸಮಸ್ಯೆ ಪ್ರಪಂಚದ ಬೇರೆ ದೇಶದಲ್ಲಿರೋದು ಕಂಡು ಬರುತ್ತದೆ.ಆದ್ರೂ ನಾವು ಕೊರಗೋದು ಬಿಟ್ಟಿಲ್ಲ.

ಇಷ್ಟೆಲ್ಲಾ ಭ್ರಷ್ಟಾಚಾರ ಇದ್ರೂ ಇನ್ಫೋಸಿಸ್ ಪ್ರಗತಿ ಹೊಂದುತ್ತೆ.ಇಷ್ಟೆಲ್ಲಾ ವೈರುಧ್ಯಗಳಿದ್ರೂ ಅಂಬಾನಿ ಸಹೋದರರು ಪ್ರಪಂಚದ ಶ್ರೀಮಂತರ ಪಟ್ಟಿಯಲ್ಲಿ ಹೆಸರು ಗಳಿಸುತ್ತಾರೆ.ಇಷ್ಟೆಲ್ಲ ನ್ಯೂನತೆಗಳಿದ್ರೂ ಇಸ್ರೋದ ವಿಜ್ಞಾನಿಗಳು ಚಂದ್ರಯಾನ-2 ರ ಕನಸನ್ನು ಮರೆತಿಲ್ಲ.

...............ಇದು ನಿಜವಾದ ಭಾರತ ...............

It is better to light a candle than curse darkness .