Tuesday, August 26, 2008

ಫೂಂಕ್ ಮತ್ತೆ ಭೂತದ ಕೋಲ !ಈ ಭಾನುವಾರ ’ಫೂಂಕ್’ ಚಿತ್ರ ನೋಡಲು ಹೋಗಿದ್ದೆ . ಚಿತ್ರ ಚೆನ್ನಾಗಿತ್ತು .ತೀರಾ ಭಯಾನಕವಾಗಿಲ್ಲವಾದ್ರೂ ನೋಡುವಂತಿತ್ತು.
ಚಿಕ್ಕ ಹುಡುಗಿ ಮತ್ತೆ ಕುರುಡ ತಾಂತ್ರಿಕನ ಅಭಿನಯವಂತೂ ಸೂಪರ್.

ಅಂದ ಹಾಗೆ ಫೂಂಕ್ ನೋಡಿದಾಗ ನಂಗೆ ಮೊದಲಿಗೆ ನೆನಪಿಗೆ ಬಂದಿದ್ದು ನಮ್ಮೂರ ಕೋಲ !
ಸ್ವಾಮಿ ಕೋಲ ಅಂದ್ರೆ ಕೋಕಾಕೋಲಾ ಅಲ್ಲ. ಮಂಗಳೂರಿನಲ್ಲಿ ನಡೆಯೋ ಭೂತಾರಾಧನೆಗೆ ಭೂತದ ಕೋಲ ಅಂತಾರೆ ತುಳುವಿನಲ್ಲಿ.

ನಾವು ದೇವರು ,ದೈವಗಳನ್ನು ಎಷ್ಟು ನಂಬ್ತೀವೋ ಬಿಡ್ತೀವೋ ,ಆದ್ರೆ ಅವುಗಳು ಇರೋದಂತೂ ನಿಜ!

ನಮ್ಮ ದೈತ್ಯ ಬರಹಗಾರರು(ಸಾರಿ ವಿಕಾಸ್ ಕಾಪಿ ರೈಟ್ ನಿನ್ ಹತ್ರ ಇದ್ರೆ ಈ ಶಬ್ದಕ್ಕೆ!) ’ನಾನು ದೇವರನ್ನು ನಂಬೊಲ್ಲ ಅಂತ ಹೇಳ್ತಾನೆ ,ನನ್ನ ಪುಸ್ತಕ ಬಿಡುಗಡೆ ಇದೆ ನೀವೆಲ್ಲ ಹರಸಬೇಕು ’ ಅಂತಾರೆ.
ಹಾರೈಕೆ ಮೇಲೆ ಅಷ್ಟು ವಿಶ್ವಾಸ ಇಟ್ಟಿರೋರು ದೇವರಿದ್ದಾನೆ ಅಂತ ಯಾಕೆ ಅಲ್ಲಗಳೆಯುತ್ತಾರೆ??ದೇವರನ್ನು ಸ್ವತಃ ನೋಡಿಲ್ಲ ಅಂತಾನಾ?
ಯಾವುದೋ ಕಾಮಿಡಿ ಚಿತ್ರದಲ್ಲಿ ಒಬ್ಬ ಕೇಳ್ತಾನೆ ’ನೀನು ಜಪಾನ್ ನೋಡಿದ್ದೀಯಾ ?’ ಅಂತ ಇನ್ನೊಬ್ಬ ’ಇಲ್ಲ’ ಅಂತಾನೆ ’;’
ನೀನು ಜಪಾನ್ ನೋಡಿಲ್ಲ ಅಂದ ಮಾತ್ರಕ್ಕೆ ಜಪಾನ್ ಈ ಪ್ರಪಂಚದಲ್ಲೇ ಇಲ್ಲ ಅನ್ನೋದು ತಪ್ಪಲ್ವ ?’ ಅಂತಾನೆ ಮೊದಲನೆಯವನು!!

ಎಷ್ಟು ನಿಜ ಅಲ್ವಾ? ಈ ವಾದ !

ಅದೆಲ್ಲ ಬಿಡಿ ಈಗ ವಿಷಯಕ್ಕೆ ಬರೋಣ . ಸ್ಟೋರಿ ಏಮಂಟೆ ......ಫೂಂಕ್ ಚಿತ್ರದಲ್ಲಿ ಚಿಕ್ಕ ಹುಡುಗಿಯ ಮೇಲೆ ಪ್ರೇತಾತ್ಮ ಬರುತ್ತಲ್ಲ ,ಅದೇ ರೀತಿ ಮೈ ಮೇಲೆ ಬಂದ ಪ್ರೇತಾತ್ಮಗಳನ್ನು ಬಿಡಿಸಲು ನಮ್ಮೂರಿನ ಭೂತದ ಹತ್ತಿರ ಬರುತ್ತಿದ್ದರು ತುಂಬಾ ಜನ.

ಇದೆಲ್ಲ ನಾಟಕ ಅಂತೆಲ್ಲಾ ನಿಮ್ಮ ವಾದ ಆಗಿದ್ರೆ ಬನ್ನಿ ನಮ್ಮೂರಿಗೆ ತೋರಿಸ್ತೀನಿ !
ಭೂತದ ವೇಷಧಾರಿನ ನೋಡಿದ್ರೆ ದೊಡ್ಡವರೇ ಭಯ ಪಡಬೇಕು ಆ ರೀತಿ ಇರುತ್ತೆ.ಅಂಥದ್ದರಲ್ಲಿ ಪುಟ್ಟ ಮಕ್ಕಳು ಭೂತಕ್ಕೆ ಚ್ಯಾಲೆಂಜ್ ಹಾಕೋ ದೃಶ್ಯ ಮಾತ್ರ ರೋಮಾಂಚನಕಾರಿ.


ಹೀಗೆ ಒಂದು ವರ್ಷ ,ಒಂದು ಪುಟ್ಟ ಮಗುವಿಗೆ ಮೈ ಮೇಲೆ ದೆವ್ವ ಬಂದಿತ್ತು .ಅದನ್ನು ಬಿಡಿಸಲು ನಮ್ಮೂರಿನ ಭೂತದ ಕೋಲಕ್ಕೆ ತರಲಾಗಿತ್ತು .
ಆ ಭೂತವನ್ನು ಬಿಡಿಸಲು 2 ಘಂಟೆ ಹಿಡಿಯಿತು ದೈವಕ್ಕೇ !!!
ಕೇವಲ ನಾಲಕ್ಕನೇ ಕ್ಲಾಸ್ ಹುಡುಗ ಆ ರೀತಿ ಪ್ರಭುದ್ದವಾಗಿ ಮಾತಾಡೋದು ಸಾಧ್ಯಾನೇ ಇಲ್ಲ. ಎಷ್ಟೇ ಮನಶ್ಶಾಸ್ತ್ರ ,ಸುಪ್ತ ಮನಸ್ಸು ಅಂದ್ರೂ ಅದನ್ನು ನಂಬೋಕೆ ಸಾಧ್ಯವಿಲ್ಲ.

ಅಷ್ಟಕ್ಕೂ ಆಗಿದ್ದೇನಂದ್ರೆ ಆ ನಾಲಕ್ಕನೆ ಕ್ಲಾಸ್ ಹುಡುಗ ಕ್ರಿಕೆಟ್ ಆಡ್ತಿರ್ಬೇಕಾದ್ರೆ ಯಾವುದೋ ಕಲ್ಲಿನ ಮೇಲೆ ನಿಂತಿದ್ದನಂತೆ !

ಆ ಕಲ್ಲಿನ ಓನರ್ ಪ್ರೇತಾತ್ಮಕ್ಕೆ ಸಿಟ್ತು ಬಂದು ಹುಡುಗನ ಮೈ ಮೇಲೆ ಬಂದಿತ್ತು !!

ಈ ಪ್ರೇತಾತ್ಮಗಳ ಬಾಯಿ ಬಿಡಿಸೋದೆ ದೊಡ್ಡ ಸವಾಲು ನಮ್ಮ ಭೂತಕ್ಕೆ .ಮೊದಲ ಅರ್ಧ ಗಂಟೆಯಂತೂ ನೀನು ಯಾರು ,ಯಾಕೆ ಈ ಹುಡುಗನ ಮೇಲೆ ಬಂದೆ ಅಂತ enquiery ಮಾಡೋದೆ ಕಷ್ಟದ ಕೆಲಸ.
ಟಿ.ಎನ್ ಸೀತಾರಾಂ ಏನಾದ್ರೂ ನಮ್ಮ ಭೂತ ವಾದ ಮಾಡೊ style ಏನಾದ್ರೂ ನೋಡಿಬಿಟ್ರೆ ದಂಗಾಗಿ ಬಿಡ್ತಾರೆ.

ಬಹಳ ಕಷ್ಟ ಪಟ್ಟು ಬಾಯಿ ಬಿಡಿಸಿದಾಗ ಪ್ರೇತದ ಕಲ್ಲಿನ ಒನರ್ ಹೇಳಿದ್ದಿಷ್ಟು " ಆಟದ ನೆಪದಲ್ಲಿ ಹುಡುಗರು ನನ್ನ ಮೇಲೆ ಕುಣಿದಾಡ್ತಾರೆ ,ಮನೆಯರು ನನಗೆ ನೀಡಬೇಕಾದ ಗೌರವ ನೀಡ್ತಾ ಇಲ್ಲ ,ಅದನ್ನು ಹೇಳೊದಕ್ಕೆ ನಾನು ಈ ಹುಡುಗನ ಮೇಲೆ ಬಂದೆ.ಇದ್ದಿದ್ರಲ್ಲೇ ಪೋಲಿ ಹುಡುಗ ಇವನು ನನ್ನನ್ನು ಕಂಡ್ರೆ ಇವನಿಗೆ ಅಷ್ಟಕ್ಕಷ್ಟೆ !" ಅಂತ ಪಾಪ ಆ ಹುಡುಗನೇ ಅವನ ಬಾಯಿಯಿಂದ ಹೇಳ್ತಾ ಇದ್ರೆ ನಗು ಬರುತ್ತೆ.

ನಿನಗೆ ಕೊಡಬೇಕಾದ ಗೌರವ ಕೊಡಿಸ್ತೀನಿ ಬಿಟ್ಟು ಹೋಗು ಅಂದಾಗ ,"ಹೋಗಲ್ಲ ಏನ್ ಮಾಡ್ತೀಯಾ? " ಅಂತ ಭೂತಕ್ಕೇ ಚೋಟುದ್ದ ಹುಡುಗ ಸವಾಲು ಹಾಕಿದಾಗ್ ,ಇದು ಖಂಡಿತ ನಾಟಕ ಅಲ್ಲ ಅನ್ನೋದು ಮನದಟ್ಟಾಗುತ್ತೆ.

ಹಾಗೂ ಹೀಗೂ ಪ್ರೇತವನ್ನು convince ಮಾಡಿ ಒಂದು ತೆಂಗಿನಕಾಯಿಯಲ್ಲಿ ಬಂಧಿ ಮಾಡಿದ ಮೇಲೆ ಸುಖಾಂತ್ಯ!

ಇಷ್ಟೆ ಅಲ್ಲದೆ ಭೂತದ ಪಾತ್ರಧಾರಿ ಅಷ್ಟು ಸುಲಲಿತವಾಗಿ ಬೆಳಿಗ್ಗೆ ತನಕ ಮಾತಾಡೋದು ಒಂದು ಅದ್ಭುತ! ಇದು ಒಂದು ಕಲೇನೂ ಹೌದು .

ನಂಬುವುದು ಬಿಡುವುದು ಅವರವರಿಗೆ ಬಿಟ್ಟಿದ್ದು ಅಲ್ವ??

"ಆಪ್ ಅಗರ್ ಭಗವಾನ್ ಕೋ ಮಾನ್ ತೇ ಹೆಂ ತೋ ಶೈತಾನ್ ಕೋ ಭಿ ಮಾನ್ ನಾ ಪಡೆಗಾ " ಅನ್ನೋದು ಹಳೆಯ ಸಂಗತಿ .

ಫೂಂಕ್ ನಲ್ಲಿ ಹೇಳೊದು " ಬಿನಾ ಜಾನೆ ಹಿ ಇಸ್ ಮೆ ಕ್ಯಾ ಹೈ, ಅಗರ್ ಕ್ರೋಸಿನ್ ಕೋ ಮಾನ್ ತೇ ಹೋ ತೊ ಭಗವಾನ್ ಕೋ ಮಾನ್ ನೇ ಮೇ ಕ್ಯಾ ಹರ್ಝ್ ಹೈ "

ಭೂತದ ಕೋಲ ಏನೆಂದೇ ಗೊತ್ತಿಲ್ಲದವರು ಇದನ್ನು ನೋಡಿ .
http://www.youtube.com/watch?v=yU2dfJusI1c&feature=related

ಚಿತ್ರ ಕೃಪೆ : As usual ಕದ್ದದ್ದು ನಿಮಗೇನು ಪ್ರಾಬ್ಲೆಮ್?

Tuesday, August 19, 2008

ಭಾಮಿನಿ ಷಟ್ಪದಿ


’ಭಾಮಿನಿ ಷಟ್ಪದಿ’ ಕಥೆ ನಾ ಅಥವಾ ಕವನ ಸಂಕಲನ ನಾ ಅಂತ ಟೀನಾ ಹತ್ರ ಕೇಳಿದ್ದೆ. ಇವತ್ತು ಬಿಡುಗಡೆ ಅಗುತ್ತಲ್ವಾ ನೀವೆ ಬಂದು ನೋಡಿ ಅಂದ್ರು ಟೀನಾ.ವಾರಕ್ಕೆ ಏಳು ದಿನ ತಪ್ಪದೆ ಸೆಂಟ್ರಲ್ ಕಾಲೇಜಿನ ಪಕ್ಕದ ಕಟ್ಟಡಕ್ಕೆ ಭೇಟಿ ನೀಡುವ ಅನಿವಾರ್ಯತೆ ನನ್ನದಾಗಿದ್ದರೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗುತ್ತೆ ಅನ್ನೋ ಭರವಸೆ ನನಗಿರಲಿಲ್ಲ !!

ಆದ್ರೂ ಸಾಧ್ಯವಾಯಿತು .’ ಥ್ಯಾಂಕ್ ಯೂ ’ ದೇವ್ರೆ!

ಬೆಂಗಳೂರಿಗೆ ಬಂದು ಆರು ವರ್ಷಗಳಾಗಿದ್ರೂ ಇಂಥ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ ನಂಗೆ.ಎರಡು ವರ್ಷದ ಹಿಂದೆ ರವಿ ಬೆಳಗೆರೆ ಆಫೀಸಿನಲ್ಲಿ ರವಿ ನ ನೋಡಿದ್ದು ಬಿಟ್ರೆ (ಬಾಂಬ್ ಎಸ್ಸೈ ಗಿರೀಶ್ ಮಟ್ಟೆಣ್ಣನವರ್ ನ ಅವಾಂತರದಿಂದ!) ಬೇರೆ ಯಾವ ಸಾಹಿತಿಗಳನ್ನೂ ನಾನು ಮುಖತಃ ನೋಡಿರ್ಲಿಲ್ಲ.

ನಿನ್ನೆ ಕೆಲವರನ್ನು ನೋಡೊದಿಕ್ಕೆ ಸಾಧ್ಯವಾಯಿತು. ಥಾಂಕ್ಸ್ ಟು ಚೇತನಾ !

ಚೇತನಾ ರ ಯಾವುದೇ ಬರಹಗಳನ್ನು ನಾನು ಓದಿರಲಿಲ್ಲ .ಆರ್ಕುಟ್ ನಲ್ಲಿ ತುಂಬಾ ಕಮ್ಮ್ಯೂನಿಟಿಗಳಲ್ಲಿ ವಾದ ಮಾಡಿ ಹಲವಾರು ’ಶತ್ರು’ಗಳನ್ನು ಗಳಿಸಿಕೊಂಡ ಮೇಲೆ ಇಂಟರ್ನೆಟ್ ,ಚಾಟ್ ಸಹವಾಸಾನೇ ಬೇಡ ಅಂತ ದೂರವಿದ್ದೆ.ಆದ್ರೆ ಸ್ವಲ್ಪ ದಿನಗಳ ಹಿಂದೆ ಮತ್ತೆ ಸೆಳೆಯಿತು ಮಾಯಾಜಾಲ .

ನಿನ್ನೆ ರಾತ್ರಿ ಒಂದು ಗಂಟೆಯ ತನಕ ಕೂತು ಭಾಮಿನಿ ಷಟ್ಪದಿ ಓದಿ ನೇ ಮಲಗಿದ್ದು ನಾನು .
ಹೇಗಿದೆ ಅಂತ ಕೇಳ್ತೀರಾ???????
.
.
.
ರೀ ಸ್ವಾಮಿ ಎಲ್ಲಾ ಬಿಟ್ಟಿನೇ ಗೊತ್ತಾಗ್ಬೇಕಾ ನಿಮ್ ಗೆ ? ಐವತ್ತು ರೂಪಾಯಿ ಕೊಟ್ಕೊಂಡು ಓದ್ರಿ !
.
.
.

ನನಗೂ ಕವಿತೆಗಳಿಗೂ ಆಗಿ ಬರಲ್ಲ ! ಅಂಥಾದ್ರಲ್ಲಿ ಮತ್ತೆ ಕವನ ಸಂಕಲನ ತಗೊಂಬಿಟ್ ನಾ ಅನ್ನೋ ದಿಗಿಲು ಉಂಟಾಯ್ತು.

ಆದ್ರೇನಂತೆ ಕವನ ಸಂಕಲನ ಆಗಿದ್ರೂ ಏನೂ ಬೇಜಾರಿಲ್ಲ ,ಹೇಗೂ ಕಪಾಟಿನಲ್ಲಿ ಸಂಧ್ಯಾದೇವಿಯವರ ’ಮಾತು ,ಚಿಟ್ಟೆ ’ ಬೆಚ್ಚಗೆ ಕೂತಿತ್ತು . ಅದಕ್ಕೂ ಒಂದು ಜೋಡಿ ಅಂತ ಆಗುತ್ತೆ ,ಅಂತ ನನಗೆ ನಾನೆ ಸಮಾಧಾನ ಮಾಡ್ಕೊಂಡೆ.

ಸಮಾರಂಭ ತುಂಬಾನೆ ಚೆನ್ನಾಗಿತ್ತು .ಮೋಹನ್ ತುಂಬಾನೇ ಚೆನ್ನಾಗಿ ಮಾತಾಡಿದ್ರು .ಚೇತನಾ ಹಾಗೂ ಟೀನಾ ಕೂಡ ಸುಂದರವಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ್ರು .ಬೇಜಾರಂದ್ರೆ ಕೊನೆ ತನಕ ಇರೋದಿಕ್ಕೆ ಸಾಧ್ಯ ಆಗಿಲ್ಲ .ಅದಿಕ್ಕೇ ಚೇತನಾ ಆಟೋಗ್ರಾಫ್ ತಗೊಳ್ಳೋದಿಕ್ಕೆ ಆಗಿಲ್ಲ !

ಆದ್ರೇನಂತೆ ಪಕ್ಕದಲ್ಲೇ ವಸುಧೇಂದ್ರ ಕೂತಿದ್ರು ಅವರ ಹತ್ರ ಕೇಳಿದೆ ’ಸರ್ ,ಆಟೊಗ್ರಾಫ್ ಕೊಡಿ ’ .

ಅದಿಕ್ಕೆ ಪಾಪ ಅವ್ರು ’ಹೇ ಚೇತನಾದಲ್ವ ತಗೋಬೇಕು ಆಟೊಗ್ರಾಫ್’ ಅಂದ್ರು !

’ಅವರದ್ದೂ ತಗೋತೀನಿ ಸರ್ ಅಮೇಲೆ ,ನೀವು ಹಾಕಿ ’ ಅಂದೆ . ಕೊನೆ ಪೇಜ್ ನಲ್ಲಿ ಹಾಕಿದ್ರು ಕಡೆಗೂ........

ಅವರ ಪಕ್ಕದಲ್ಲೇ ಅಪಾರ ಕೂತಿದ್ರು .ಆದ್ರೆ ಅವರ ಮೇಲೆ ಸಿಟ್ಟಿತ್ತು ನನಗೆ ! ವೇದಿಕೆಯಲ್ಲಿ ಹಾಕಿರೋ ವಿನೈಲ್ ಪೋಸ್ಟರ್ನಲ್ಲಿರೋ ಚಿತ್ರ ಪುಸ್ತಕದಲ್ಲಿ ಇರ್ಲೇ ಇಲ್ಲ!!! ಅದಿಕ್ಕೆ ಅಪಾರ ಜೊತೆ ಟೂ ....

ಅಲ್ಲೇ ಮುಂದೆ ಜೋಗಿ ಕೂತಿದ್ರು ,ಅವರ ಹಿಂದೆ ಇಬ್ರು ಹುಡುಗೀರು ಕೂತಿದ್ರು(ವಯಸ್ಸಾಗಿತ್ತು ,ಆದ್ರೂ ಜೀನ್ಸ್ ಹಾಕಿ ಯಂಗ್ ಕಾಣಿಸ್ತಿದ್ದಿದ್ರಿಂದ ಹುಡುಗೀರು ಅನ್ಬಹುದು !).ಜೋಗಿ ಪಕ್ಕದಲ್ಲಿ ಇರೋರ್ ಜೊತೆ ಮಾತಾಡ್ತಾ ಇದ್ದಿದ್ರಿಂದ ಹತ್ತಿರ ಜೀನ್ಸ್ ಮ್ಯಾಡಮ್ ನ ಕರೆದು ಹೇಳಿದೆ ’ಮ್ಯಾಡಮ್ ಸ್ವಲ್ಪ ಆಟೊಗ್ರಾಫ್ ತಗೊಂಡು ಕೊಡ್ತೀರಾ ?’ ಅಂತ ಜೋಗಿನಾ ತೋರಿಸ್ದೆ .

ಅವ್ರು ’ಯಾರ್ದು ಜೋಗಿ ದಾ ಅಂದ್ರು !’
’ಇನ್ನೇನು ನಿಮ್ ದಾ ’ ಅನ್ನೋಣ ಅನ್ನಿಸ್ತು. ಆದ್ರೆ ಸುಮ್ಮನೆ ತಲೆ ಆಡಿಸಿದೆ .ಪಾಪ ಅವರು ಪುಸ್ತಕನ ಜೋಗಿ ಕೈಗೆ ಕೊಟ್ಟು ’ಆಟೊಗ್ರಾಫ್ ’ ಬೇಕಂತೆ ಅಂತ ನನ್ನನ್ನು ತೋರಿಸಿದ್ರು .

ಪುಸ್ತಕ ತಗೊಂಡ ಜೋಗಿ ,ಕೊನೇ ಪೇಜ್ ನಲ್ಲಿ ವಸುಧೇಂದ್ರ ಬರೆದ ಕೆಳಗೇ ಬರೆದ್ರು .

"ಕವಿತೆ ಚಿರಾಯುವಾಗಲಿ -ಜೋಗಿ (180808 ) "

ಇದಾದ ಸ್ವಲ್ಪ ಹೊತ್ತಲ್ಲಿ ,ಯಾರಿಗೋ ಹೂ ಗುಚ್ಚ ಕೊಡೊದಿಕ್ಕೆ ಮಮತಾ ಸಾಗರ್ ಬರ್ಬೇಕು ಅಂದ್ರು . ಪಕ್ಕದಲ್ಲೆ ಕೂತಿದ್ದ ಜೀನ್ಸ್ ಮ್ಯಾಡಮ್ ಎದ್ದು ಹೋಗೋದಾ!!!!!!!!!

ಧಸಕ್ ಅಂತು ಎದೆ !

ಒಹ್ ಇವ್ರೂ ಯಾರೋ ಲೇಖಕಿ ಇರ್ಬೇಕು ! ಅದಿಕ್ಕೆ ಆಟೊಗ್ರಾಫ್ ಯಾರ್ದು ಅಂತ ಕೇಳಿದ್ದು !
ಮಮತಾ ಸಾಗರ್ ಹೆಸರು ನೋಟ್ ಮಾಡ್ಕೊಂಡೆ .ನಾಳೆ ಬೆಳಿಗ್ಗೆ ಆಫೀಸಿಗೆ ಹೋದ ತಕ್ಷಣ ದೊಡ್ಡಣ್ಣನ (Google) ಹತ್ರ ಕೇಳ್ಬೇಕು ಮಮತಾ ಸಾಗರ್ ಯಾರು ಅಂತ !

ಗೂಗಲ್ ನಲ್ಲಿ ಹುಡುಕಿದಾಗ ಗೊತ್ತಾಯ್ತು ಮಮತಾ ಸಾಗರ್ ಒಬ್ಬ ಪ್ರಖ್ಯಾತ ಬರಹಗಾರ್ತಿ ಅಂತ .
ಸಾರಿ ಮಮತಾ ಜಿ !!!!!!!

ವಿವೇಕ್ ರೈಗಳು ಮಾತಾಡೋದು ಕೇಳ್ಬೇಕು ಅಂತ ಆಸೆ ಇತ್ತು .ಹಾಗೇ ಚೇತನಾ ಆಟೊಗ್ರಾಫ್ ತಗೋಬೇಕು ಅಂತ .
ಆದ್ರೆ ಅರ್ಜಂಟ್ ಆಗಿ ಹೋಗ್ಲೇ ಬೇಕಿತ್ತು ನಾನು .

ಬೇಸರದಿಂದ ಹೊರಟೆ ಅಲ್ಲಿಂದ ...


ರಾತ್ರಿ ಕೂತು ಪುಸ್ತಕ ಓದಿ ಮುಗಿಸಿದಾಗ guilty feel ಆಯ್ತು. ಅರೇ ಇದೇನಿದು”ಕುಂಬಳ ಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡೀದ ’ಅಂದಂಗಾಯ್ತಲ್ಲ ಅನ್ನಿಸಿತು !
ಅಂದ ಹಾಗೆ ನನ್ನ ಪಾಪ ಪ್ರಜ್ಞೆಗೆ ಕಾರಣ ಪುಸ್ತಕಕ್ಕೆ ಕಾರಣರಾದ ಗಂಡಸರಲ್ಲಿ ನಾನೂ ಒಬ್ಬನಲ್ವಾ??
’ಗಂಡಸರು’ ಅಂತ ಜನರಲೈಸ್ ಮಾಡಿ ಬರೆಯೋದು ತಪ್ಪಾದ್ರೂ ,ನಾವು ಬಹುತೇಕ ಗಂಡಸರು ಇರೋದೇ ಹೀಗಲ್ವಾ??
ಆಗ್ಲೇ ನಿರ್ಧಾರ ಮಾಡಿದೆ .ನಾನು ’ಅಂಥ’ ಗಂಡಸಾಗ್ಬಾರ್ದು . ’ಭಾಮಿನಿ ಷಟ್ಪದಿ -ಭಾಗ 2 'ಕ್ಕೆ ಅವಕಾಶ ಮಾಡಿಕೊಡೋ ಗಂಡಸು ನಾನಾಗ್ಬಾರ್ದ್ರು !!!

ಪುಸ್ತಕದಲ್ಲಿದ್ದ ಬರಹಗಳು ಎಷ್ಟು ಅರ್ಥವಾಯಿತು ,ಅಥವಾ ಎಷ್ಟು ’ಅಪಾರ್ಥ’ವಾಯಿತು ಅನ್ನೋದು ಗೊತ್ತಿಲ್ಲ !!! ಆದ್ರೆ ಹುಡುಗಿಯರ ಮಾನಸಿಕ ತುಮುಲದ ಅರಿವು ಸ್ವಲ್ಪ ಮಟ್ಟಿಗೆ ನನಗಾಯ್ತು !

ಅಷ್ಟರ ಮಟ್ಟಿಗೆ ನಾನು ಚೇತನಾಗೆ ಋಣಿ !!!!
ಚಿತ್ರ ಕೃಪೆ : ’ಅವಧಿ’ ಯಿಂದ ಹೈಜಾಕ್ ಮಾಡಿದ್ದು .

Wednesday, August 13, 2008

ಲಾಫಿಂಗ್ ಬುದ್ಧ
"ಸೂರಿ ಒಂದು ಹುಡುಗಿ ಫ್ರೆಂಡ್ ಆಗಿದ್ದಾಳೋ ಚಾಟ್ ನಲ್ಲಿ .ತುಂಬಾ ಒಳ್ಳೆಯವಳು .ಅವಳ ಹತ್ರ ಮಾತಾಡ್ತಾ ಇದ್ರೆ ಸಮಯ ಕಳೆದಿದ್ದೇ ಗೊತ್ತಾಗಲ್ಲ ! ಈಗಂತೂ ಬರೀ ಚಾಟಿಂಗು, ಎಸ್ಸೆಮ್ಮೆಸ್ಸು ,ಫೋನಲ್ಲೇ ದಿನ ಕಳೀತಾ ಇದ್ದೀವಿ ನಾವು !"


"ರವಿ, ಸಕ್ಕತ್ ಲಕ್ಕಿ ಕಣೊ ನೀನು ಯಾವಾಗ್ ಮೀಟ್ ಆಗ್ತಾಳಂತೆ? ಬೇಗ ಪಟಾಯಿಸ್ಕೊಳ್ಳೋ ,ಸಿಕ್ಕಿರೋ ಚಾನ್ಸ್ ಮಿಸ್ಸ್ ಮಾಡ್ಕೋಬೇಡ "


"ಸಧ್ಯಕ್ಕಂತೂ ಮೀಟ್ ಆಗೊ ಅವಶ್ಯಕತೆ ನಂಗೆ ಕಾಣಿಸ್ತಾ ಇಲ್ಲ ಸೂರಿ .ಹೀಗೆ ಸ್ವಲ್ಪ ದಿನ ಒಳ್ಳೆ ಫ್ರೆಂಡ್ ಆಗಿರೋಣ ಅಂತಿದ್ದೀನಿ. ಈ ಕಾಲದಲ್ಲಿ ಒಳ್ಳೆ ಫ್ರೆಂಡ್ಸ್ ಸಿಗೋದೆ ಕಷ್ಟ ಆಗ್ಬಿಟ್ಟಿದೆ ,ಅಂಥಾದ್ರಲ್ಲಿ ಸಿಕ್ಕಿರೋ ಗೆಳತೀನ ಕಳ್ಕೊಳ್ಳೋಕೆ ಇಷ್ಟ ಇಲ್ಲ ನಂಗೆ "


"ಥೂ ನಿನ್ನ ಏನೊ ರವಿ 21st century ನಲ್ಲಿದ್ದು ಒಳ್ಳೆ ಸನ್ಯಾಸಿ ಥರ ಮಾತಾಡ್ತಿಯಲ್ಲೋ ? ಏನೋ ಆಗಿದೆ ನಿಂಗೆ? ನೋಡು ಸಿಕ್ಕಿರೋ ಚಾನ್ಸ್ ಮಿಸ್ಸ್ ಮಾಡ್ಕೋಬಾರ್ದು . Never miss an oppertunity ಅಂತ ಸ್ಪೈಸ್ ಜಾಹೀರಾತು ನೋಡಿಲ್ವ? ಈಗ್ಲೆ ಮಜಾ ಮಾಡ್ಬೇಕು "


"ಹಾಗಂತೀಯಾ ಸೂರಿ .ಹಾಗಿದ್ರೆ ನಾನೇನ್ ಮಾಡ್ಬೇಕು ಹೇಳೋ ..."


"ಏನಿಲ್ಲ ರವಿ ಸ್ವಲ್ಪ ದಿನಾ ಹಾಗೆ ಅವಳ ವಿಶ್ವಾಸ ಗಳಿಸ್ಕೋ .ಆಮೇಲೆ ಒಂದು ದಿನ ಎಲ್ಲಾದ್ರೂ ಸಿನೆಮಾಗೆ ಕರ್ಕೊಂಡು ಹೋಗು.ಹಾಗೆ ಸ್ವಲ್ಪ ದಿನ ಆದ್ಮೇಲೆ ರೂಮ್ ಗೇ ಕರ್ಕೊಂಡು ಹೋಗಿ ’ಕೆಲಸ’ ಮುಗಿಸ್ಬಿಡು. ಆಮೇಲೆ ಯಾವುದಾದ್ರೂ ಗಿಫ್ಟ್ ತಗೊ. ಹುಡ್ಗೀರ್ಗೆ ಗಿಫ್ಟ್ ಕೊಟ್ರೆ ಹಾಗೆ ಕರಗ್ ಹೋಗ್ತಾರೆ "


"ಸೂರಿ ಥ್ಯಾಂಕ್ಸ್ ಕಣೊ ತುಂಬಾ ಒಳ್ಳೆ ಸಲಹೆ ಕೊಟ್ಟೆ ,ಇಲ್ಲಾಂದ್ರೆ ಸಿಕ್ಕಿರೋ ಚಾನ್ಸ್ ಮಿಸ್ಸ್ ಮಾಡ್ಕೋತಾ ಇದ್ದೆ."


------------------------------------*****************************---------------------------


"ಹೇ ರವಿ ಏನಾಯ್ತೋ ಎಲ್ಲಿ ತನಕ ಬಂತು ನಿನ್ ’ಲವ್ ಸ್ಟೋರಿ’ ? ಮಾಡಿದ್ಯಾ ಏನಾದ್ರೂ ?? "


"ಸೂಪರ್ ಕಣೊ ಸೂರಿ .ನೀನ್ ಹೇಳಿದ್ ಹಾಗೇನೆ ಮಾಡಿದೆ ಕಣೊ. ತುಂಬಾನೇ ಲಕ್ಕಿ ನಿನ್ನಂಥ ಗೆಳೆಯ ಸಿಕ್ಕಿದ್ದಕ್ಕೆ. "


"ಗುಡ್ . ಅಂದ ಹಾಗೆ ಏನ್ ಗಿಫ್ಟ್ ಕೊಟ್ಟೆ?"


"ಒಂದು ಲಾಫಿಂಗ್ ಬುದ್ಧ ಮೂರ್ತಿ ಕೊಟ್ಟಿದ್ದೀನಿ. ಹಾಳಾದ್ದು 500 ರುಪಾಯಿ ಖರ್ಚಾಯ್ತು!! ಆದ್ರೂ ಪರ್ವಾಗಿಲ್ಲ ಸಕ್ಕತ್ ಮಜಾ ಸಿಕ್ತು!"


"ಬಾಯ್ ಕಣೊ ಲೇಟ್ ಆಯ್ತು ,ಮನೆಗೆ ಹೋಗಿ ಶಟಲ್ ಆಡ್ಬೇಕು .."


"ಸರಿ ಕಣೊ ಬಾಯ್ "

-------------------------------------------*************************-------------------------


ಮನೆಗೆ ಬಂದ ಸೂರಿ ಸೀದಾ ತಂಗಿ ಶೃತಿ ರೂಮ್ ಗೆ ನುಗ್ಗಿದ ಶಟಲ್ ಬ್ಯಾಟ್ ತಗೊಳ್ಳೋಕೆ ..

ಶೃತಿ ಕಂಪ್ಯೂಟರ್ ಮಾನಿಟರ್ ಮೇಲೆ ಹೊಸ ’ಲಾಫಿಂಗ್ ಬುದ್ಧ ’ನ ಮೂರ್ತಿ ಕೂತಿತ್ತು.


ಹೊಟ್ಟೆ ಸವರುತ್ತ ತನ್ನನ್ನೇ ನೋಡಿ ನಕ್ಕಂತಾಯ್ತು ಸೂರಿಗೆ !


------------------------------------------*************************--------------------------
Wednesday, August 6, 2008

ಸುಮ್ ಸುಮ್ನೆ ಗೀಚಿದ್ದು !

ಕನ್ನಡ ಮಾಧ್ಯಮ ನಾ ಇಂಗ್ಲೀಷ್ ಮಾಧ್ಯಮ ನಾ?? ಅನ್ನೊ ಬಗ್ಗೆ ಬಹುತೇಕ ದಿನಗಳಿಂದ ಚರ್ಚೆ ನಡೀತಾನೆ ಇದೆ .
ನನಗೆ ಈ ಚರ್ಚೆಯಲ್ಲಿ ಭಾಗವಹಿಸೋದಕ್ಕೆ ಯಾವ ಯೋಗ್ಯತೇನೂ ಇಲ್ಲ.

ನಾನು ’ಬುಧ್ಧಿ ಜೀವಿ’ಯಲ್ಲ ! ಕೊನೆಪಕ್ಷ ನನ್ಗೆ ಎರಡು ಮಕ್ಕಳಿದ್ದಿದ್ರೆ ನನ್ನ ಮಕ್ಕಳನ್ನು ಯಾವ ಮಾಧ್ಯಮದಲ್ಲಿ ಕಲಿಸ್ಬೇಕು ಅಂತ ಅಭಿಪ್ರಾಯ ಆದ್ರೂ ಹೇಳ್ಬೋದಿತ್ತು - ಆದ್ರೆ ಇನ್ನೂ ಮದುವೆ ಆಗಿಲ್ಲ ನನಗೆ :(

ಆದ್ರೂ ಈ ವಿಷಯದ ಬಗ್ಗೆ ನನ್ನ ಬ್ಲಾಗ್ ನಲ್ಲಿ ಬರೆಯಲು ಒಂದೇ ಕಾರಣ - ನಾನೂ ಕನ್ನಡ ಮಾಧ್ಯಮದಲ್ಲಿ ಓದಿದ್ದು .
ನನ್ನ ಮನೆಯವರೆಲ್ಲ (ಮನೆ ಬಿಡಿ ಊರವ್ರೆಲ್ಲಾ!) ಕನ್ನಡ ಮೀಡಿಯಂನಲ್ಲೇ ಓದಿದ್ದು. ಕನ್ನಡ ಪ್ರೀತಿ ಅಂತ ಅಲ್ಲ ! ಇದ್ದಿದ್ದೆ ಕನ್ನಡ ಮೀಡಿಯಂ ಸ್ಕೂಲ್ ಆದ್ರೆ ಇಂಗ್ಲೀಷ್ ಹೆಂಗಪ್ಪಾ ಓದೋದು??

ಕನ್ನಡ ಮೀಡಿಯಂ ನಲ್ಲಿ ಓದಿದ್ದಕ್ಕೆ ಮುಂದೆ ಕಾಲೇಜ್ ನಲ್ಲಿ ತುಂಬಾನೆ ಕಷ್ಟ ಪಡ್ಬೇಕಾಯ್ತು ನಾನು..

ಆದ್ರೂ............................... ನಾನು ತುಂಬಾ ಅದೃಷ್ಟವಂತ ಕನ್ನಡ ಮೀಡಿಯಂನಲ್ಲಿ ಓದಿದ್ದಕ್ಕೆ. ಅಷ್ಟು ಓಳ್ಳೆಯ ಟೀಚರ್ಸ್ ನನಗೆ ಸಿಕ್ಕಿದ್ದಕ್ಕೆ!

ನಾನು ಕನ್ನಡ ಮಾಧ್ಯಮದಲ್ಲಿ ಓದಿರೋದಕ್ಕೇ ಈಗ ಇಂಗ್ಲೀಷ್ನಲ್ಲೂ ಚೆನ್ನಾಗಿ ಓದಬಲ್ಲೆ,ಮಾತಡಬಲ್ಲೆ ಹಾಗೂ ಬರೆಯಬಲ್ಲೆ.
ಆದ್ರೆ ನಾನು ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ರೆ ಬಹುಶಃ ಕನ್ನಡದಲ್ಲಿ ಇಷ್ಟು ಚೆನ್ನಾಗಿ ಓದೋದು,ಬರೆಯೋದು ಸಾಧ್ಯ ಆಗ್ತಾ ಇರ್ಲಿಲ್ಲ.

ಕನ್ನಡ ಸಾಹಿತ್ಯವನ್ನು ತುಂಬಾ ಓದಲು ಸಾಧ್ಯವಾಗಿಲ್ಲವಾದ್ರೂ ಅಲ್ಪ ಸ್ವಲ್ಪ ಓದೋದಕ್ಕಾದ್ರೂ ಕನ್ನಡ ಮಾಧ್ಯಮ ಸಹಕಾರಿಯಾಯ್ತು.

ಗೋಪಾಲಕೃಷ್ಣ ಅಡಿಗರ ’ಯಾವ ಮೋಹನ ಮುರಳಿ’ ಬಿಟ್ರೆ ಬೇರೆ ಯಾವ ಗೀತೆಯ ಬಗ್ಗೆ ನನಗೆ ಗೊತ್ತಿಲ್ಲವಾದ್ರೂ ಅಡಿಗರು ನಮ್ಮ ನಾಡಿನ ಹೆಮ್ಮೆಯ ಕವಿ ಅಂತ ತಿಳಿಯೋದಕ್ಕಾದ್ರೂ ಕನ್ನಡ ಮಾಧ್ಯಮ ಸಹಕಾರಿಯಾಯ್ತು!
ಅ.ನ. ಕೃ ಅವರ ಯಾವೂದೇ ಕಾದಂಬರಿ ಓದಿಲ್ಲವಾದ್ರೂ ಅವರೊಬ್ಬ ಶ್ರೇಷ್ಠ ಕಾದಂಬರಿಕಾರ ಅನ್ನೋದು ಗೊತ್ತುಪಡಿಸಿದ್ದು ಕನ್ನಡ ಮೀಡಿಯಮ್ಮು ,ಅದೇ ಕನ್ನಡ ಟೀಚರ್ ಗಳು!

ಆದ್ರೆ ಪಾಪ ಈಗಿನ ಕಾನ್ವೆಂಟ್ ಹುಡುಗರಿಗೆ ಅಡಿಗರು ಗೊತ್ತಾ ? ಅಂದ್ರೆ - " ಗೊತ್ತಿಲ್ಲಾ ಗುರು ಆದ್ರೆ ’ಅಡಿಗಾಸ್ ’ ಗೊತ್ತು ತುಂಬಾ ಚೆನ್ನಾಗಿದೆ ಫುಡ್ ಅಲ್ಲಿ" ಅಂತಾರೆ !!

ಆದ್ರೆ ಯಾರನ್ನು ಬಯ್ಯೋದು ಅಲ್ವ?? ಪೋಷಕರಿಗೆ ತಮ್ಮ ತಮ್ಮ ಮಕ್ಕಳು ಚೆನ್ನಾಗಿ ಓದಿ ’ಉದ್ಧಾರ’ ಆಗ್ಬೇಕು ಅನ್ನೊದಷ್ಟೇ ಗೊತ್ತು .

ನಾನು ಇಂಗ್ಲೀಷ್ ಅಕ್ಷರಮಾಲೆ ಕಲಿತದ್ದೆ 5 ನೇ ಕ್ಲಾಸ್ ನಲ್ಲಿ. ಆದ್ರೆ ಮನೆಗೆ ಬರ್ತಾ ಇದ್ದ ಕಸಿನ್(ಬಾಂಬೆಯಿಂದ) ಆಗ್ಲೇ ’ಟಿಂಟಿನ್’ ಕಾರ್ಟೂನ್ ಪುಸ್ತಕ ಓದ್ತಾ ಇದ್ರೆ ಹೊಟ್ಟೆ ಚುರು ಚುರು ಅನ್ತಾ ಇತ್ತು ಅಯ್ಯೋ ಇಂಗ್ಲೀಷ್ ಬರಲ್ವಲ್ಲ ಅಂತಾ!ಆದ್ರೆ ಆ ಪುಣ್ಯಾತ್ಮ ನನ್ಗೆ ಇಂಗ್ಲೀಷ್ ಬರಲ್ಲ ಅಂತ ಮುಸಿ ಮುಸಿ ನಗೋ ಬದಲು ಅದೇ ಕಾರ್ಟೂನ್ ಗಳನ್ನು ಕೊಂಕಣಿಯಲ್ಲಿ ಅರ್ಥ ಮಾಡಿಸ್ತಿದ್ದ,ಅಷ್ಟರ ಮಟ್ಟಿಗೆ ನಾನು ಅವನಿಗೆ ಕೃತಜ್ಞ .

5 ನೇ ಕ್ಲಾಸ್ ನಲ್ಲಿ A B C D ಕಲ್ತು ,ಬೇಸಿಕ್ ಇಂಗ್ಲೀಷ್ ಕಲಿಯೋ ಅಷ್ಟರಲ್ಲಿ ಹೈ ಸ್ಕೂಲ್ ಮೆಟ್ಟಿಲಿ ಹತ್ತಿದ್ವಿ.
ಅಲ್ಲಿ ಅಲ್ಪ ಸ್ವಲ್ಪ ಇಂಗ್ಲೀಷ್ ಕಲಿಯೋದರೊಳಗೆ S.S.L.C ನೇ ಮುಗಿದು ಹೋಯ್ತು.

ಆದ್ರೆ ಯಾವಾಗ ಕಾಲೇಜ್ನಲ್ಲಿ science ತಗೊಂಡ್ನೊ ಆಗ ಗೊತ್ತಾಯ್ತು ಇಂಗ್ಲೀಷ್ ಮಹಾತ್ಮೆ!

ಸೈನ್ ತೀಟಾ, ಕಾಸ್ ತೀಟಾಗಳ ಗಲಾಟೆ ಮಧ್ಯೆ ಏನೂ ಅರ್ಥ ಆಗದೆ ಪಕ್ಕದ ರೋ ನಲ್ಲಿ ಕೂತಿರ್ತಿದ್ದ ಮಲಯಾಳಿ ಹುಡುಗಿಯರನ್ನು ನೋಡಿ ಟೈಂ ಪಾಸ್ ಮಾಡಿದ್ದೇ ಹೆಚ್ಚು .

ನಾವು ಹೈ ಸ್ಕೂಲ್ ನಲ್ಲಿ ಕಲಿತ ವಿಷಯಗಳೇ ಮತ್ತೆ ರಿಪೀಟ್ ಆಗಿದ್ದೂ ಗೊತ್ತಾಗಿಲ್ಲ ನನ್ನಂಥ ಗೂಬೆಗಳಿಗೆ !!

ಹೇಗೆ ತಾನೇ ಗೊತ್ತಾಗ್ಬೇಕು ?? ಹೈ ಸ್ಕೂಲ್ ನಲ್ಲಿ ’ಅಚ್ಚ ಕನ್ನಡದಲ್ಲಿ ಕಲಿತ ರೋಧ,ವೇಗೋತ್ಕರ್ಷ, ವಿದ್ಯುನ್ಮಂಡಲಗಳೇ resistance,velocity ,circuit ಗಳು ಅಂತ ????

ಇಂಗ್ಲೀಷ್ ಮಾಧ್ಯಮದಲ್ಲಿ ಕಲಿತ ಸಹಪಾಟಿಗಳಿಗೆ ಇದು ಅಂತಹ ಕಷ್ಟ ಅನ್ನಿಸ್ಲಿಲ್ಲ.ಅವರ ಆರ್ಭಟದಲ್ಲಿ ನಾವೆಲ್ಲ ವರ್ಷ ಇಡೀ ಮಲಯಾಳಿ ಹುಡುಗಿಯರ ಅಂದ ಸವಿದದ್ದೇ ಬಂತು.

ಆದ್ರೆ ಖುಷಿ ಪಡಲೇಬೇಕಾದ ಒಂದು ವಿಷಯ ಏನಂದ್ರೆ , ಪಿ.ಯು.ಸಿ ಆಗ್ಲಿ ಸಿ.ಇ.ಟಿ ಆಗ್ಲಿ ಎರಡರಲ್ಲೂ ಫಸ್ಟ್ ಬರ್ತಾ ಇದ್ದಿದ್ದು ಇವೇ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು !

ನನಗೂ ಇಂಗ್ಲೀಷ್ ಕಲಿಯಬೇಕೆಂಬ ಉತ್ಸಾಹ ಇತ್ತು.. ಆದ್ರೆ ಅದು ಕಾಲೇಜ್ ಓದಿಗೆ ಸಹಾಯ ಆಗ್ಲಿ ಅಂತ ಅಲ್ಲ!ಮನೆಯಲ್ಲಿ ಅಣ್ಣ ಹಾಸಿಗೆ ಅಡಿ ಬಚ್ಚಿಡುತ್ತಿದ್ದ ’ಡೆಬೊನೇರ್’ನಲ್ಲಿ ಬರ್ತಿದ್ದ ಪೋಲಿ ಕಥೆಗಳನ್ನು ಓದಲು !
ಕಷ್ಟ ಪಟ್ಟು ಒಂದೊಂದೇ ಪದಗಳನ್ನು ’ಗದಗ ಪಬ್ಲಿಕೇಶನ ’ ದ ಡಿಕ್ಷನರಿಯಲ್ಲಿ ಹುಡುಕಿ ಓದ್ತಾ ಇದ್ದೆ .ಆದ್ರೆ ದುರದೃಷ್ಟವಶಾತ್ ಕಥೆಗಳಲ್ಲಿ ಬರ್ತಿದ್ದ ಪದಗಳು ಡಿಕ್ಷನರಿನಲ್ಲಿ ಇರ್ತಾ ಇರ್ಲಿಲ್ಲ ! !
ಇದಾದ ಮೇಲೆ ಇಂಜಿನಿಯರಿಂಗ್ ಕೂಡ ಅಷ್ಟೇನೂ ಕಷ್ಟ ಆಗ್ಲಿಲ್ಲ.ಈಗಾಗ್ಲೇ ಇಂಗ್ಲೀಷ್ ಜೊತೆ ಹೆಣಗಾಡೋದು ಕಲ್ತಿದ್ದೆ.

ಮತ್ತೆ ಇಂಗ್ಲೀಷ್ ಪೆಡಂಭೂತವಾಗಿ ಕಾಡಿದ್ದು ಕೆಲಸ ಹುಡುಕೋ ಸಂದರ್ಭದಲ್ಲಿ .

ಸಂದರ್ಶನದಲ್ಲಿ ಮೊದಲನೇ ಪ್ರಶ್ನೆ ಯಾವತ್ತೂ "Tell me about yourself " ಆಗಿರ್ತಾ ಇತ್ತು.ಈ ಪ್ರಶ್ನೆಗೆ ಎಷ್ಟೇ ಕಷ್ಟ ಪಟ್ಟೂ ಉತ್ತರ ಸಿದ್ಧ ಪಡಿಸಿದ್ದರೂ ಹೇಳೊದಕ್ಕೆ ತಿಣುಕ್ತಾ ಇದ್ದೆ.

ಈಗ ಹಳೆಯದನೆಲ್ಲಾ ನೆನೆಸಿಕೊಂಡ್ರೆ ನಗು ಬರುತ್ತೆ.

ನಾನಿರೋದು ಟೆಕ್ನಿಕಲ್ ಫೀಲ್ಡ್ . ಇಲ್ಲಿ ಎಲ್ಲಾ ಕಡೆಯಿಂದ ಬಂದಿರೋ ಜನಗಳಿದ್ದಾರೆ . ನಾವೆಲ್ಲ ಯಾವುದೆ ವಿಷಯ ಚರ್ಚಿಸೋದಕ್ಕೆ ಇಂಗ್ಲೀಷೇ ಬಳಸ್ಬೇಕು.ಹೀಗಾಗಿ ಇಂಜಿನಿಯರಿಂಗ್ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿತಿದ್ದು ತುಂಬಾನೆ ಸಹಕಾರಿ ಆಯ್ತು ನನ್ಗೆ.

ಆದ್ರೆ ಈಗೀಗ ತಾಂತ್ರಿಕ ಶಿಕ್ಷಣವನ್ನೂ ಕನ್ನಡದಲ್ಲಿ ಕೊಡಬೇಕೆಂಬ ಕೂಗು ಕೇಳಿ ಬರುತ್ತಿದೆ.
ನನಗ್ಯಾಕೋ ಇದು ಸರಿ ಅನ್ನಿಸ್ತಿಲ್ಲ. ಹಾಲ್ದೊಡ್ಡೇರಿ ಸುಧೀಂದ್ರ ರಂತವರು ಕನ್ನಡದಲ್ಲೇ ವೈಜ್ಞಾನಿಕ ಬರಹಗಳನ್ನು ಬರೀತಾ ಬಂದಿದ್ದಾರೆ. ಇದು ನಮ್ಮ ಸಮಾಧಾನಕ್ಕಷ್ಟೇ!

ಕೆಲಸಕ್ಕೆ ಸೇರಿಕೊಂಡ ಮೇಲೆ ಎಲ್ಲರೂ ಇಂಗ್ಲೀಷ್ ನಲ್ಲೇ ತಾನೆ ವಿಚಾರ ವಿನಿಮಯ ಮಾಡ್ಕೋಳ್ಳೋದು? ಅಲ್ಲಿ ಕನ್ನಡದಲ್ಲಿ ತಾಂತ್ರಿಕ ವಿಷಯಗಳನ್ನು ವಿವರಿಸೋದು ಸಾಧ್ಯವೇ ಇಲ್ಲ. ಹಾಗೆಂದ ಮೇಲೆ ತಾಂತ್ರಿಕ ವಿಷಯಗಳನ್ನು ಇಂಗ್ಲೀಷ್ ನಲ್ಲೆ ಕಲಿಸಬೇಕೆಂಬುದು ನನ್ನ ಅನಿಸಿಕೆ.

ಕನ್ನಡ ಪ್ರೇಮಕ್ಕೋಸ್ಕರ ತಾಂತ್ರಿಕ ಶಿಕ್ಷಣವನ್ನು ಕನ್ನಡದಲ್ಲಿ ಪಡೆದು ,ಕೆಲಸಕ್ಕೋಸ್ಕರ ಅದನ್ನೇ ಇಂಗ್ಲೀಷಿನಲ್ಲಿ ಕಲಿಯೊದು ಕಷ್ಟ ಸಾಧ್ಯ .

ಇಷ್ಟೆಲ್ಲಾ ಇಲ್ಲಿ ಕುಯ್ದ್ರೂ ನನ್ನ ಕೊನೆಯ ಅಭಿಪ್ರಾಯ ಏನೆಂದು ಮಾತ್ರ ಕೇಳಬೇಡಿ !!!!

ನನಗೂ ಗೊತ್ತಿಲ್ಲ! ನನಗಂತೂ ಕನ್ನಡ ಮಾಧ್ಯಮದಲ್ಲಿ ಕಲಿತದ್ದು ಒಳ್ಳೇದೆ ಆಯ್ತು.ಕನ್ನಡ ಭಾಷೆಯ ,ಕನ್ನಡ ಸಾಹಿತ್ಯದ ಪರಿಚಯ ಸ್ವಲ್ಪಾನಾದ್ರೂ ಆಯ್ತು.

ಆದ್ರೆ ನನ್ನದೇ ಕೆಲವು ಪ್ರತಿಭಾವಂತ ಗೆಳೆಯರು ಕನ್ನಡ ಮಾಧ್ಯಮದಿಂದ ಇಂಗ್ಲೀಷ್ ಮಾಧ್ಯಮಕ್ಕೆ ಒಗ್ಗಿಕೊಳ್ಳದೆ ಫಸ್ಟ್ ಪಿ.ಯು.ಸಿ ನಲ್ಲೇ ಫೇಲ್ ಆಗಿ ಅರ್ಧಕ್ಕೇ ಕಾಲೇಜು ಬಿಟ್ಟು ,xerox ಅಂಗಡಿ ,ಜನರಲ್ ಸ್ಟೋರ್ ಗಳಲ್ಲಿ ಕೆಲಸಕ್ಕೆ ಸೇರಿಕೊಂಡವರಿದ್ದಾರೆ!

ಅಂಥ ಪರಿಸ್ಥಿತಿ ಮಾತ್ರ ಬರಬಾರದು ಯಾರಿಗೂ.


ಫೋಟೊ ಕೃಪೆ : http://www.kaverionline.org/

Friday, August 1, 2008

ಪತ್ರ ಬರೆಯಲಾ ಇಲ್ಲ ....????
ಹೀಗೆ ಸ್ವಲ್ಪ ದಿನ ಮುಂಚೆ ’ಜಾನಕಿ ’ ,’ಹಾಯ್ ಬೆಂಗಳೂರ್’ ನಲ್ಲಿ ,ಪತ್ರದಲ್ಲಿರೋ ಆಪ್ಯಾಯಮಾನತೆ ಈ-ಮೇಲ್ ಅಥವಾ ಇನ್ನ್ಯಾವುದೋ ಮಾಧ್ಯಮದಲ್ಲಿ ಸಿಗೊದಿಲ್ಲ ಅನ್ನೊ ಧಾಟಿಯಲ್ಲಿ ಬರೆದಿದ್ದರು. ಬಹಳಷ್ಟು ಜನರ ಅಭಿಪ್ರಾಯನೂ ಅದೇ ಆಗಿತ್ತು.
ಆದ್ರೆ ನನಗನ್ನಿಸೋ ಪ್ರಕಾರ ಎರಡರ ಅನುಭವ ಬೇರೆನೇ ! ಈ ಎರಡೂ ಮಾಧ್ಯಮಗಳ ಅನುಭೂತಿ ಬೇರೇನೆ !

ನಾನು P.U.C ನಲ್ಲಿರ್ಬೇಕಾದ್ರೆ ಒಬ್ಳು ಗೆಳತಿ ಇದ್ಲು. ಪತ್ರ ಮಿತ್ರೆ! ಆಗ ಮಂಗಳ ಪತ್ರಿಕೆಯಲ್ಲಿ ’ಸ್ನೇಹ ಸೇತು’ ಅನ್ನೋ ಒಂದು ಅಂಕಣ ಬರ್ತಾ ಇತ್ತು .ಅದರಲ್ಲಿ ಒಬ್ಬಳ ಹೆಸರು ,ವಿಳಾಸ ಸಿಕ್ಕಿ ಅವಳಿಗೆ ಪತ್ರ ಬರೆದಿದ್ದೆ.
ಅವಳೂ ಅದಿಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ಲು. ಹೀಗೆ ಪ್ರಾರಂಭವಾಯಿತು ನಮ್ಮ ಸ್ನೇಹ.ಪತ್ರ ಬರೀತಾ ಬರೀತಾ ತುಂಬಾನೆ ಹತ್ತಿರವಾಗಿ ಬಿಟ್ಟಿದ್ವಿ. ನಮ್ಮಿಬ್ಬರ ಅಭಿರುಚಿಗಳೂ ಸುಮಾರಾಗಿ ಒಂದೆ ಆಗಿದ್ವು!
ನನಗೆ ಯಂಡಮೂರಿ ,ರವಿ ಬೆಳಗೆರೆ ಅಂದ್ರೆ ತುಂಬಾ ಇಷ್ಟ -ಹಾಗೇ ಅವಳ ಫೇವರೆಟ್ ಕೂಡಾ!
ಆದ್ರೆ ನನಗೆ ಲವ್ ಲವಿಕೆ ಸ್ವಲ್ಪಾನೂ ಇಷ್ಟ ಆಗ್ತ ಇರ್ಲಿಲ್ಲ. ಆದ್ರೆ ಅವ್ಳಿಗೆ ಅದಂದ್ರೆ ಪ್ರಾಣ.
ಯಾರೋ ಯಾರಿಗೋ ಬರೆದಿರೊ ಪ್ರೇಮಪತ್ರ ಓದೋದು ಲವ್ ಲವಿಕೆ ಓದೋದಂದ್ರೆ ಅನ್ನೋ ಭಾವನೆ ನನ್ನಲ್ಲಿತ್ತು.ಅದೂ ಅಲ್ದೆ ಅದರಲ್ಲಿ ಇರ್ತಾ ಇದ್ದ ಕೆಲವು ಹಿಂದಿ ಹಾಡುಗಳು ನನ್ನ ಮನಸ್ಸಿಗೆ ಅಷ್ಟೊಂದು ಹಿಡಿಸುತ್ತಿರಲಿಲ್ಲ.
ನಾನು ಅವಳಿಗೆ ಪುಟಗಟ್ಟಲೆ ಪತ್ರ ಬರೀತಾ ಇದ್ದೆ .32 A4 size ನ ಪುಟಗಳು ತುಂಬಿಸಿದ್ದೂ ಉಂಟು ಒಂದೊಂದು ಸಲ.

’ನಿನ್ನ ಪತ್ರ ಓದ್ತಾ ಇದ್ರೆ ನೀನೆ ಮುಂದೆ ಕೂತು ಏನೊ ಹೇಳ್ತಾ ಇರೋ ಹಾಗೆ ಅನ್ಸುತ್ತೋ ’ ಅಂತ ಅವಳು ಹೇಳಿದಾಗ ತುಂಬಾನೆ ಖುಷಿ ಆಗ್ತಾ ಇತ್ತು.

ಆದ್ರೆ ಒಂದೇ ಬೇಜಾರಂದ್ರೆ ಅವಳು ನನಗೆ ಕೇವಲ ಮೂರು ಪುಟದ inland letter ನಲ್ಲಿ ಬರೀತಾ ಇದ್ಲು! ಅವಳೂ ತುಂಬಾ ಬರೀಬೇಕು ,ನಾನೂ ಅದನ್ನು ಓದ್ಬೇಕು ಅನ್ನೊ ಆಸೆ ತುಂಬಾನೆ ಇತ್ತು ನನಗೆ. ಆದ್ರೆ ಪಾಪ ಅವಳು ಪರಾವಲಂಬಿ ,20 Rs stamp ಹಾಕೋ ಅಷ್ಟು ಸಾಮರ್ಥ್ಯ ಇರಲಿಲ್ಲ. ಆದ್ರೂ ಚಿಕ್ಕದಾಗಿ ಚೊಕ್ಕದಾಗಿ ಬರೀತಾ ಇದ್ಲು.
ಒಂದು ಪತ್ರದಲ್ಲಿ ನಾನು ಯಂಡಮೂರಿಯ ಕಾದಂಬರಿಯ ಒಂದು sentence ಕದ್ದು ಹಾಗೆ ಬರೆದಿದ್ದೆ.
"ನನ್ನ ಜೀವನ ಅನ್ನೋದು ಈರುಳ್ಳಿಯ ಹಾಗೆ ,ಸಿಪ್ಪೆ ಸುಲೀತಾ ಹೋದಂತೆ ಖಾಲಿ ಖಾಲಿ ,ಅಮೇಲೆ ಏನೂ ಉಳಿಯೋದಿಲ್ಲ " ಅಂತ ,ಅದಿಕ್ಕೆ ಅವಳು " ಉಳಿಯೊದು ಓಂದಿದೆ ಸಂದೀಪ್ ,ಅದು ಕಣ್ಣೀರು !!" ಅಂತ reply ಮಾಡಿದ್ಲು..
ಆ ದಿನ ತುಂಬಾನೆ impress ಆಗಿದ್ದೆ ಅವಳ ಮಾತು ಕೇಳಿ.
ತುಂಬಾ ಉತ್ಸುಕತೆಯಿಂದ ಕಾಯ್ತಾ ಇದ್ದೆ ಅವಳ ಪತ್ರಕ್ಕೆ . ಕೆಲವೊಮ್ಮೆ ನಾನೇ ಪೋಸ್ಟ್ ಆಫೀಸಿಗೆ ಹೋಗಿ ಪೋಸ್ಟ್ ಮ್ಯಾನ್ ತಲೆ ತಿನ್ತಾ ಇದ್ದಿದ್ದೂ ಉಂಟು!

ಕೊನೆಗೊಂದು ದಿನ ಪತ್ರ ಬರೆಯೋದೆ ನಿಲ್ಲಿಸಿ ಬಿಟ್ಲು ಅವಳು ,ಮನೆಯವರ ತಕರಾರಿನಿಂದ.
ತುಂಬಾನೆ miss ಮಾಡ್ತಾ ಇದ್ದೆ ಅವಳ ಪತ್ರಗಳನ್ನ.ಆದ್ರೆ ಕಾಲ ಕಳೆದಂತೆ ಎಲ್ಲಾ ಸರಿ ಹೋಯ್ತು.

ಅಮೇಲೆ ನಾನು ನನ್ನ ಪಾಡಿಗೆ ಓದು ಮುಗಿಸಿ ಕೆಲಸಕ್ಕೆ ಸೇರ್ಕೊಂಡೆ. ಆಫೀಸ್ ನಲ್ಲಿ ಇಂಟರ್ ನೆಟ್ ,ಈ-ಮೇಲ್, ಚಾಟ್ ನಂತ ಹೊಸ ಜಗತ್ತಿನ ಅನಾವರಣವಾಯ್ತು.
ಹಾಗೇ ಯಾಹೂ ಗ್ರೂಪ್ನಲ್ಲಿ ಗೆಳತಿಯೊಬ್ಬಳ ಪರಿಚಯವಾಯ್ತು. ಗಂಟೆಗಟ್ಟಲೆ chat ಮಾಡ್ತಾ ಇದ್ವಿ ನಾವು.
ಯಾಹೂ ಮೆಸೆಂಜರ್ ನಲ್ಲಿ ಅವಳು ಆನ್ ಲೈನ್ ಇದ್ದಾಳೆ ಅಂತ ಗೊತ್ತಾದ ಕೂಡಲೆ ಖುಷಿ ಆಗ್ತಾ ಇತ್ತು. ಆ ಹಳದಿ ಬಣ್ಣದ ನಗುಮುಖದ symbol (onile indication ) ನೋಡಿದ ತಕ್ಷಣ ಏನೋ ಒಂಥರಾ ಆನಂದ.

mail inbox ನಲ್ಲಿ ಅವಳ ಹೆಸರಿನ e-mail ನೋಡಿದಾಕ್ಷಣ ,ಹಿಂದೆ ಪೋಸ್ಟ್ ಮ್ಯಾನ್ ನನ್ನ ಕೈಯಲ್ಲಿ ’ಅವಳ’ ಪತ್ರ ಕೊಟ್ಟಾಕ್ಷಣ ಎಷ್ಟು ಖುಷಿ ಆಗ್ತಾ ಇತ್ತೋ ಅಷ್ಟೇ ಖುಷಿ ಆಗ್ತಿತ್ತು.
ಈ-ಮೇಲ್ ನಲ್ಲಿ ಅವಳು ಚಿಕ್ಕ ಮಕ್ಕಳ ಹಾಗೆ ಚಿತ್ರ ವಿಚಿತ್ರ fontಗಳು ,ಬಗೆ ಬಗೆಯ smileyಗಳನ್ನು ಹಾಕಿ ಬರೆದ mail ನೋಡಿ ತುಂಬಾ ಖುಷಿ ಆಗ್ತಾ ಇತ್ತು.

ಯಾಕೋ ದೇವರ ದಯೆಯಿಂದ ಪೋಸ್ಟ್ ನಿಂದ ಈ-ಮೇಲ್ ಗೆ transition ನನಗೇನೂ ಕಷ್ಟ ಅನ್ನಿಸಿಲ್ಲ.
ಬದಲಾಗಿ ಅವಳು ಆ ಕಡೆ ಕೂತು send ಬಟನ್ ಒತ್ತಿದ ತಕ್ಷಣ ಈ ಕಡೆ inbox ನಲ್ಲಿ ಮೇಲ್ ಬಂದು ಬೀಳುತ್ತಿದ್ದ ಪರಿ ಕಂಡು -"ಛೇ ಈ e-mail ಸೌಲಭ್ಯ ನನ್ನ ಹಳೇ ಗೆಳತಿಗೂ ಇದ್ದಿದ್ದ್ರೆ ಎಷ್ಟು ಚೆನ್ನಾಗಿರ್ತಾ ಇತ್ತಲ್ವಾ?!" ಅನ್ನೋ ಕೊರಗು ಉಂಟಾಗ್ತಾ ಇತ್ತು.

ಪತ್ರ ಹಾಗೂ e-mail ಈ ಎರಡೂ ಮಾಧ್ಯಮಗಳ ಸುಂದರ ಅನುಭೂತಿ ನನಗೆ ಸಿಕ್ಕಿದ್ದಕ್ಕೆ ತುಂಬಾ ಲಕ್ಕಿ ಅನ್ನಿಸ್ತಾ ಇದೆ .ಹಾಗೇ ನನ್ನ generation ಕೂಡಾ !