Wednesday, August 6, 2008

ಸುಮ್ ಸುಮ್ನೆ ಗೀಚಿದ್ದು !

ಕನ್ನಡ ಮಾಧ್ಯಮ ನಾ ಇಂಗ್ಲೀಷ್ ಮಾಧ್ಯಮ ನಾ?? ಅನ್ನೊ ಬಗ್ಗೆ ಬಹುತೇಕ ದಿನಗಳಿಂದ ಚರ್ಚೆ ನಡೀತಾನೆ ಇದೆ .
ನನಗೆ ಈ ಚರ್ಚೆಯಲ್ಲಿ ಭಾಗವಹಿಸೋದಕ್ಕೆ ಯಾವ ಯೋಗ್ಯತೇನೂ ಇಲ್ಲ.

ನಾನು ’ಬುಧ್ಧಿ ಜೀವಿ’ಯಲ್ಲ ! ಕೊನೆಪಕ್ಷ ನನ್ಗೆ ಎರಡು ಮಕ್ಕಳಿದ್ದಿದ್ರೆ ನನ್ನ ಮಕ್ಕಳನ್ನು ಯಾವ ಮಾಧ್ಯಮದಲ್ಲಿ ಕಲಿಸ್ಬೇಕು ಅಂತ ಅಭಿಪ್ರಾಯ ಆದ್ರೂ ಹೇಳ್ಬೋದಿತ್ತು - ಆದ್ರೆ ಇನ್ನೂ ಮದುವೆ ಆಗಿಲ್ಲ ನನಗೆ :(

ಆದ್ರೂ ಈ ವಿಷಯದ ಬಗ್ಗೆ ನನ್ನ ಬ್ಲಾಗ್ ನಲ್ಲಿ ಬರೆಯಲು ಒಂದೇ ಕಾರಣ - ನಾನೂ ಕನ್ನಡ ಮಾಧ್ಯಮದಲ್ಲಿ ಓದಿದ್ದು .
ನನ್ನ ಮನೆಯವರೆಲ್ಲ (ಮನೆ ಬಿಡಿ ಊರವ್ರೆಲ್ಲಾ!) ಕನ್ನಡ ಮೀಡಿಯಂನಲ್ಲೇ ಓದಿದ್ದು. ಕನ್ನಡ ಪ್ರೀತಿ ಅಂತ ಅಲ್ಲ ! ಇದ್ದಿದ್ದೆ ಕನ್ನಡ ಮೀಡಿಯಂ ಸ್ಕೂಲ್ ಆದ್ರೆ ಇಂಗ್ಲೀಷ್ ಹೆಂಗಪ್ಪಾ ಓದೋದು??

ಕನ್ನಡ ಮೀಡಿಯಂ ನಲ್ಲಿ ಓದಿದ್ದಕ್ಕೆ ಮುಂದೆ ಕಾಲೇಜ್ ನಲ್ಲಿ ತುಂಬಾನೆ ಕಷ್ಟ ಪಡ್ಬೇಕಾಯ್ತು ನಾನು..

ಆದ್ರೂ............................... ನಾನು ತುಂಬಾ ಅದೃಷ್ಟವಂತ ಕನ್ನಡ ಮೀಡಿಯಂನಲ್ಲಿ ಓದಿದ್ದಕ್ಕೆ. ಅಷ್ಟು ಓಳ್ಳೆಯ ಟೀಚರ್ಸ್ ನನಗೆ ಸಿಕ್ಕಿದ್ದಕ್ಕೆ!

ನಾನು ಕನ್ನಡ ಮಾಧ್ಯಮದಲ್ಲಿ ಓದಿರೋದಕ್ಕೇ ಈಗ ಇಂಗ್ಲೀಷ್ನಲ್ಲೂ ಚೆನ್ನಾಗಿ ಓದಬಲ್ಲೆ,ಮಾತಡಬಲ್ಲೆ ಹಾಗೂ ಬರೆಯಬಲ್ಲೆ.
ಆದ್ರೆ ನಾನು ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ರೆ ಬಹುಶಃ ಕನ್ನಡದಲ್ಲಿ ಇಷ್ಟು ಚೆನ್ನಾಗಿ ಓದೋದು,ಬರೆಯೋದು ಸಾಧ್ಯ ಆಗ್ತಾ ಇರ್ಲಿಲ್ಲ.

ಕನ್ನಡ ಸಾಹಿತ್ಯವನ್ನು ತುಂಬಾ ಓದಲು ಸಾಧ್ಯವಾಗಿಲ್ಲವಾದ್ರೂ ಅಲ್ಪ ಸ್ವಲ್ಪ ಓದೋದಕ್ಕಾದ್ರೂ ಕನ್ನಡ ಮಾಧ್ಯಮ ಸಹಕಾರಿಯಾಯ್ತು.

ಗೋಪಾಲಕೃಷ್ಣ ಅಡಿಗರ ’ಯಾವ ಮೋಹನ ಮುರಳಿ’ ಬಿಟ್ರೆ ಬೇರೆ ಯಾವ ಗೀತೆಯ ಬಗ್ಗೆ ನನಗೆ ಗೊತ್ತಿಲ್ಲವಾದ್ರೂ ಅಡಿಗರು ನಮ್ಮ ನಾಡಿನ ಹೆಮ್ಮೆಯ ಕವಿ ಅಂತ ತಿಳಿಯೋದಕ್ಕಾದ್ರೂ ಕನ್ನಡ ಮಾಧ್ಯಮ ಸಹಕಾರಿಯಾಯ್ತು!
ಅ.ನ. ಕೃ ಅವರ ಯಾವೂದೇ ಕಾದಂಬರಿ ಓದಿಲ್ಲವಾದ್ರೂ ಅವರೊಬ್ಬ ಶ್ರೇಷ್ಠ ಕಾದಂಬರಿಕಾರ ಅನ್ನೋದು ಗೊತ್ತುಪಡಿಸಿದ್ದು ಕನ್ನಡ ಮೀಡಿಯಮ್ಮು ,ಅದೇ ಕನ್ನಡ ಟೀಚರ್ ಗಳು!

ಆದ್ರೆ ಪಾಪ ಈಗಿನ ಕಾನ್ವೆಂಟ್ ಹುಡುಗರಿಗೆ ಅಡಿಗರು ಗೊತ್ತಾ ? ಅಂದ್ರೆ - " ಗೊತ್ತಿಲ್ಲಾ ಗುರು ಆದ್ರೆ ’ಅಡಿಗಾಸ್ ’ ಗೊತ್ತು ತುಂಬಾ ಚೆನ್ನಾಗಿದೆ ಫುಡ್ ಅಲ್ಲಿ" ಅಂತಾರೆ !!

ಆದ್ರೆ ಯಾರನ್ನು ಬಯ್ಯೋದು ಅಲ್ವ?? ಪೋಷಕರಿಗೆ ತಮ್ಮ ತಮ್ಮ ಮಕ್ಕಳು ಚೆನ್ನಾಗಿ ಓದಿ ’ಉದ್ಧಾರ’ ಆಗ್ಬೇಕು ಅನ್ನೊದಷ್ಟೇ ಗೊತ್ತು .

ನಾನು ಇಂಗ್ಲೀಷ್ ಅಕ್ಷರಮಾಲೆ ಕಲಿತದ್ದೆ 5 ನೇ ಕ್ಲಾಸ್ ನಲ್ಲಿ. ಆದ್ರೆ ಮನೆಗೆ ಬರ್ತಾ ಇದ್ದ ಕಸಿನ್(ಬಾಂಬೆಯಿಂದ) ಆಗ್ಲೇ ’ಟಿಂಟಿನ್’ ಕಾರ್ಟೂನ್ ಪುಸ್ತಕ ಓದ್ತಾ ಇದ್ರೆ ಹೊಟ್ಟೆ ಚುರು ಚುರು ಅನ್ತಾ ಇತ್ತು ಅಯ್ಯೋ ಇಂಗ್ಲೀಷ್ ಬರಲ್ವಲ್ಲ ಅಂತಾ!ಆದ್ರೆ ಆ ಪುಣ್ಯಾತ್ಮ ನನ್ಗೆ ಇಂಗ್ಲೀಷ್ ಬರಲ್ಲ ಅಂತ ಮುಸಿ ಮುಸಿ ನಗೋ ಬದಲು ಅದೇ ಕಾರ್ಟೂನ್ ಗಳನ್ನು ಕೊಂಕಣಿಯಲ್ಲಿ ಅರ್ಥ ಮಾಡಿಸ್ತಿದ್ದ,ಅಷ್ಟರ ಮಟ್ಟಿಗೆ ನಾನು ಅವನಿಗೆ ಕೃತಜ್ಞ .

5 ನೇ ಕ್ಲಾಸ್ ನಲ್ಲಿ A B C D ಕಲ್ತು ,ಬೇಸಿಕ್ ಇಂಗ್ಲೀಷ್ ಕಲಿಯೋ ಅಷ್ಟರಲ್ಲಿ ಹೈ ಸ್ಕೂಲ್ ಮೆಟ್ಟಿಲಿ ಹತ್ತಿದ್ವಿ.
ಅಲ್ಲಿ ಅಲ್ಪ ಸ್ವಲ್ಪ ಇಂಗ್ಲೀಷ್ ಕಲಿಯೋದರೊಳಗೆ S.S.L.C ನೇ ಮುಗಿದು ಹೋಯ್ತು.

ಆದ್ರೆ ಯಾವಾಗ ಕಾಲೇಜ್ನಲ್ಲಿ science ತಗೊಂಡ್ನೊ ಆಗ ಗೊತ್ತಾಯ್ತು ಇಂಗ್ಲೀಷ್ ಮಹಾತ್ಮೆ!

ಸೈನ್ ತೀಟಾ, ಕಾಸ್ ತೀಟಾಗಳ ಗಲಾಟೆ ಮಧ್ಯೆ ಏನೂ ಅರ್ಥ ಆಗದೆ ಪಕ್ಕದ ರೋ ನಲ್ಲಿ ಕೂತಿರ್ತಿದ್ದ ಮಲಯಾಳಿ ಹುಡುಗಿಯರನ್ನು ನೋಡಿ ಟೈಂ ಪಾಸ್ ಮಾಡಿದ್ದೇ ಹೆಚ್ಚು .

ನಾವು ಹೈ ಸ್ಕೂಲ್ ನಲ್ಲಿ ಕಲಿತ ವಿಷಯಗಳೇ ಮತ್ತೆ ರಿಪೀಟ್ ಆಗಿದ್ದೂ ಗೊತ್ತಾಗಿಲ್ಲ ನನ್ನಂಥ ಗೂಬೆಗಳಿಗೆ !!

ಹೇಗೆ ತಾನೇ ಗೊತ್ತಾಗ್ಬೇಕು ?? ಹೈ ಸ್ಕೂಲ್ ನಲ್ಲಿ ’ಅಚ್ಚ ಕನ್ನಡದಲ್ಲಿ ಕಲಿತ ರೋಧ,ವೇಗೋತ್ಕರ್ಷ, ವಿದ್ಯುನ್ಮಂಡಲಗಳೇ resistance,velocity ,circuit ಗಳು ಅಂತ ????

ಇಂಗ್ಲೀಷ್ ಮಾಧ್ಯಮದಲ್ಲಿ ಕಲಿತ ಸಹಪಾಟಿಗಳಿಗೆ ಇದು ಅಂತಹ ಕಷ್ಟ ಅನ್ನಿಸ್ಲಿಲ್ಲ.ಅವರ ಆರ್ಭಟದಲ್ಲಿ ನಾವೆಲ್ಲ ವರ್ಷ ಇಡೀ ಮಲಯಾಳಿ ಹುಡುಗಿಯರ ಅಂದ ಸವಿದದ್ದೇ ಬಂತು.

ಆದ್ರೆ ಖುಷಿ ಪಡಲೇಬೇಕಾದ ಒಂದು ವಿಷಯ ಏನಂದ್ರೆ , ಪಿ.ಯು.ಸಿ ಆಗ್ಲಿ ಸಿ.ಇ.ಟಿ ಆಗ್ಲಿ ಎರಡರಲ್ಲೂ ಫಸ್ಟ್ ಬರ್ತಾ ಇದ್ದಿದ್ದು ಇವೇ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು !

ನನಗೂ ಇಂಗ್ಲೀಷ್ ಕಲಿಯಬೇಕೆಂಬ ಉತ್ಸಾಹ ಇತ್ತು.. ಆದ್ರೆ ಅದು ಕಾಲೇಜ್ ಓದಿಗೆ ಸಹಾಯ ಆಗ್ಲಿ ಅಂತ ಅಲ್ಲ!ಮನೆಯಲ್ಲಿ ಅಣ್ಣ ಹಾಸಿಗೆ ಅಡಿ ಬಚ್ಚಿಡುತ್ತಿದ್ದ ’ಡೆಬೊನೇರ್’ನಲ್ಲಿ ಬರ್ತಿದ್ದ ಪೋಲಿ ಕಥೆಗಳನ್ನು ಓದಲು !
ಕಷ್ಟ ಪಟ್ಟು ಒಂದೊಂದೇ ಪದಗಳನ್ನು ’ಗದಗ ಪಬ್ಲಿಕೇಶನ ’ ದ ಡಿಕ್ಷನರಿಯಲ್ಲಿ ಹುಡುಕಿ ಓದ್ತಾ ಇದ್ದೆ .ಆದ್ರೆ ದುರದೃಷ್ಟವಶಾತ್ ಕಥೆಗಳಲ್ಲಿ ಬರ್ತಿದ್ದ ಪದಗಳು ಡಿಕ್ಷನರಿನಲ್ಲಿ ಇರ್ತಾ ಇರ್ಲಿಲ್ಲ ! !
ಇದಾದ ಮೇಲೆ ಇಂಜಿನಿಯರಿಂಗ್ ಕೂಡ ಅಷ್ಟೇನೂ ಕಷ್ಟ ಆಗ್ಲಿಲ್ಲ.ಈಗಾಗ್ಲೇ ಇಂಗ್ಲೀಷ್ ಜೊತೆ ಹೆಣಗಾಡೋದು ಕಲ್ತಿದ್ದೆ.

ಮತ್ತೆ ಇಂಗ್ಲೀಷ್ ಪೆಡಂಭೂತವಾಗಿ ಕಾಡಿದ್ದು ಕೆಲಸ ಹುಡುಕೋ ಸಂದರ್ಭದಲ್ಲಿ .

ಸಂದರ್ಶನದಲ್ಲಿ ಮೊದಲನೇ ಪ್ರಶ್ನೆ ಯಾವತ್ತೂ "Tell me about yourself " ಆಗಿರ್ತಾ ಇತ್ತು.ಈ ಪ್ರಶ್ನೆಗೆ ಎಷ್ಟೇ ಕಷ್ಟ ಪಟ್ಟೂ ಉತ್ತರ ಸಿದ್ಧ ಪಡಿಸಿದ್ದರೂ ಹೇಳೊದಕ್ಕೆ ತಿಣುಕ್ತಾ ಇದ್ದೆ.

ಈಗ ಹಳೆಯದನೆಲ್ಲಾ ನೆನೆಸಿಕೊಂಡ್ರೆ ನಗು ಬರುತ್ತೆ.

ನಾನಿರೋದು ಟೆಕ್ನಿಕಲ್ ಫೀಲ್ಡ್ . ಇಲ್ಲಿ ಎಲ್ಲಾ ಕಡೆಯಿಂದ ಬಂದಿರೋ ಜನಗಳಿದ್ದಾರೆ . ನಾವೆಲ್ಲ ಯಾವುದೆ ವಿಷಯ ಚರ್ಚಿಸೋದಕ್ಕೆ ಇಂಗ್ಲೀಷೇ ಬಳಸ್ಬೇಕು.ಹೀಗಾಗಿ ಇಂಜಿನಿಯರಿಂಗ್ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿತಿದ್ದು ತುಂಬಾನೆ ಸಹಕಾರಿ ಆಯ್ತು ನನ್ಗೆ.

ಆದ್ರೆ ಈಗೀಗ ತಾಂತ್ರಿಕ ಶಿಕ್ಷಣವನ್ನೂ ಕನ್ನಡದಲ್ಲಿ ಕೊಡಬೇಕೆಂಬ ಕೂಗು ಕೇಳಿ ಬರುತ್ತಿದೆ.
ನನಗ್ಯಾಕೋ ಇದು ಸರಿ ಅನ್ನಿಸ್ತಿಲ್ಲ. ಹಾಲ್ದೊಡ್ಡೇರಿ ಸುಧೀಂದ್ರ ರಂತವರು ಕನ್ನಡದಲ್ಲೇ ವೈಜ್ಞಾನಿಕ ಬರಹಗಳನ್ನು ಬರೀತಾ ಬಂದಿದ್ದಾರೆ. ಇದು ನಮ್ಮ ಸಮಾಧಾನಕ್ಕಷ್ಟೇ!

ಕೆಲಸಕ್ಕೆ ಸೇರಿಕೊಂಡ ಮೇಲೆ ಎಲ್ಲರೂ ಇಂಗ್ಲೀಷ್ ನಲ್ಲೇ ತಾನೆ ವಿಚಾರ ವಿನಿಮಯ ಮಾಡ್ಕೋಳ್ಳೋದು? ಅಲ್ಲಿ ಕನ್ನಡದಲ್ಲಿ ತಾಂತ್ರಿಕ ವಿಷಯಗಳನ್ನು ವಿವರಿಸೋದು ಸಾಧ್ಯವೇ ಇಲ್ಲ. ಹಾಗೆಂದ ಮೇಲೆ ತಾಂತ್ರಿಕ ವಿಷಯಗಳನ್ನು ಇಂಗ್ಲೀಷ್ ನಲ್ಲೆ ಕಲಿಸಬೇಕೆಂಬುದು ನನ್ನ ಅನಿಸಿಕೆ.

ಕನ್ನಡ ಪ್ರೇಮಕ್ಕೋಸ್ಕರ ತಾಂತ್ರಿಕ ಶಿಕ್ಷಣವನ್ನು ಕನ್ನಡದಲ್ಲಿ ಪಡೆದು ,ಕೆಲಸಕ್ಕೋಸ್ಕರ ಅದನ್ನೇ ಇಂಗ್ಲೀಷಿನಲ್ಲಿ ಕಲಿಯೊದು ಕಷ್ಟ ಸಾಧ್ಯ .

ಇಷ್ಟೆಲ್ಲಾ ಇಲ್ಲಿ ಕುಯ್ದ್ರೂ ನನ್ನ ಕೊನೆಯ ಅಭಿಪ್ರಾಯ ಏನೆಂದು ಮಾತ್ರ ಕೇಳಬೇಡಿ !!!!

ನನಗೂ ಗೊತ್ತಿಲ್ಲ! ನನಗಂತೂ ಕನ್ನಡ ಮಾಧ್ಯಮದಲ್ಲಿ ಕಲಿತದ್ದು ಒಳ್ಳೇದೆ ಆಯ್ತು.ಕನ್ನಡ ಭಾಷೆಯ ,ಕನ್ನಡ ಸಾಹಿತ್ಯದ ಪರಿಚಯ ಸ್ವಲ್ಪಾನಾದ್ರೂ ಆಯ್ತು.

ಆದ್ರೆ ನನ್ನದೇ ಕೆಲವು ಪ್ರತಿಭಾವಂತ ಗೆಳೆಯರು ಕನ್ನಡ ಮಾಧ್ಯಮದಿಂದ ಇಂಗ್ಲೀಷ್ ಮಾಧ್ಯಮಕ್ಕೆ ಒಗ್ಗಿಕೊಳ್ಳದೆ ಫಸ್ಟ್ ಪಿ.ಯು.ಸಿ ನಲ್ಲೇ ಫೇಲ್ ಆಗಿ ಅರ್ಧಕ್ಕೇ ಕಾಲೇಜು ಬಿಟ್ಟು ,xerox ಅಂಗಡಿ ,ಜನರಲ್ ಸ್ಟೋರ್ ಗಳಲ್ಲಿ ಕೆಲಸಕ್ಕೆ ಸೇರಿಕೊಂಡವರಿದ್ದಾರೆ!

ಅಂಥ ಪರಿಸ್ಥಿತಿ ಮಾತ್ರ ಬರಬಾರದು ಯಾರಿಗೂ.


ಫೋಟೊ ಕೃಪೆ : http://www.kaverionline.org/

9 comments:

ಸಿಂಧು ಭಟ್. said...

ಸುಮ್ ಸುಮ್ನೆ ಗೀಚಿದ್ದರಿಂದ ಹಲವು ಅರ್ಥಗಳನ್ನ ನೀಡಿದಿರಿ,ನನ್ನ ಇಂಥಾ ಕಮೆಂಟ್ ಗೆ ದಾರಿ ಮಾಡಿದಿರಿ.ನಾನು ನಿಮ್ಮಂತೇ...ಕನ್ನಡ ಮಾಧ್ಯಮದಲ್ಲಿ ಓದಿದವಳು. ಪಿಯುಸಿ ಯಲ್ಲಿ ಎಲ್ಲರಿಗೂ ಇರುವ ಗೀಳಿನಂತೆ ನಾನು ವಿಜ್ಱಾನ ವಿಷಯ ಇಂಗ್ಲಿಷ್ ನಲ್ಲಿ ಅರಗಿಸಿಕೊಳ್ಳಲಾಗದೆ ಹೇಗೆ ಹೇಗೋ ಪಾಸಾದೆ.ನಂತರ ಕಲಾ ವಿಷಯ, ಕನ್ನಡದಲ್ಲೇ ಮುಂದುವರಿದೆ.ಬುದ್ದಿ ಇರುವ, ಇಲ್ಲದೇ ಇರುವ "ಬುದ್ದಿಜೀವಿ"ಗಳ ಬಗ್ಗೆ ಅನಗತ್ಯ ಅಧ್ಯಯನ ಮಾಡಿದೆ.ಕುವೆಂಪು,ಬೇಂದ್ರೆ,ಅಡಿಗರ ಕವನಗಳು ಅರ್ಥವಾಗದಿದ್ದರೂ ಪದವಿಯೊಂದು ಸಿಕ್ಕಿತು.ಈಗ ಕನ್ನಡವೇ ಇಲ್ಲದ ಇನ್ನಾವುದೋ ಊರಲ್ಲಿ ಬದುಕು. ಕೊನೆಪಕ್ಷ ಇಂಗ್ಲಿಷ್ ಸಾಹಿತ್ಯ ಅಭ್ಯಾಸ ಮಾಡಿದ್ದರೆ ಎಲ್ಲಾದರೂ ಕೆಲಸ ಸಿಗುವ ಭರವಸೆಯಾದರೂ ಇರುತ್ತಿತ್ತೇನೋ?ಇಂಗ್ಲಿಷ್ ನ ಅಗಾಧವಾದ ಸಾಹಿತ್ಯವಾದರೂ ಪರಿಚಯವಾಗುತ್ತಿತ್ತೆನೋ,ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಷೇಕ್ಸಪಿಯರ್ ಎಂಬ ಬರಹಗಾರನಿದ್ದ ಎಂಬುದೊಂದು ತಿಳಿದಿದೆ ಹೊರತು ಅದಕ್ಕಿಂತ ಹೆಚ್ಚಿನದೇನು ತಿಳಿದಿದೆ?
ಕೊನೆಯ ಪಾರ -ನಿಮ್ಮ ಪ್ರತಿಭಾವಂತ ಗೆಳಯರು ಫೈಲ್ ಆಗಿ xerox ಅಂಗಡಿ ಇಟ್ಟದ್ದಕ್ಕೆ ಬೇಸರಿಸುವ ಅಗತ್ಯವಿಲ್ಲ. ಇನ್ನಾವುದೋ ಉಪಯೋಗವಿಲ್ಲದ ಪದವಿ ಪಡೆದು ಕೆಲಸವಿಲ್ಲದೆ ಪಾಡು ಪಡುವ ಬದಲು ಆಗಲೇ ಬದುಕಿಗೊಂದು ದಾರಿ ಆಗಲೇ ಕಂಡುಕೊಂಡರು. ಶಾಲಾ, ಕಾಲೇಜಿನಲ್ಲಿ ಓದೋ ಆಳಸಿತನಗಳಿಗೊಂದು ಸಹಾಯ! ಅಷ್ಟಕ್ಕೂ ಮನುಷ್ಯ ಅಂತಿಮವಾಗಿ ಬದುಕೋದು ಹೊಟ್ಟೆಪಾಡಿನ ದುಡ್ಡಿಗಾಗಿಯಲ್ಲಾ? ಸಮಯ ಉಳಿದರೆ ಮಾತ್ರ ಜ್ಞಾನಕ್ಕೊ,ನೆಮ್ಮದಿಗೋ ಸಾಹಿತ್ಯ, ವಿಜ್ಞಾನ ....ಗಳನ್ನ ಕನ್ನಡ, ಇಂಗ್ಲಿಶ್,ಅಥವಾ ಇನ್ನಾವುದೋ ಮಾಧ್ಯಮದಲ್ಲಿ ಓದು.

ಸಂದೀಪ್ ಕಾಮತ್ said...

ಧನ್ಯವಾದಗಳು ಸಿಂಧು ಪ್ರತಿಕ್ರಿಯಿಸಿದ್ದಕ್ಕೆ!

ನಮ್ಮೆಲ್ಲ ಆಸೆ ಆಕಾಂಕ್ಷೆಗಳಿಗೆ ಅಡಿಗರ ಒಂದೇ ಒಂದು ಸಾಲು ಉತ್ತರ ನೀಡುತ್ತೆ!

"ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ .."

ನನಗೆ ಕವಿತಗಳು ಅರ್ಥವಾಗಲ್ಲ ! ಆದ್ರೂ ಈ ಒಂದೇ ಒಂದು ಸಾಲು ತುಂಬಾನೇ ಇಷ್ಟ.ಇಡೀ ಜೀವನದ ಸಾರವೇ ಈ ಸಾಲಲ್ಲಿದೆ.
ಇಂಜಿನಿಯರಿಂಗ್ ಮಾಡಿದವರಿಗೆ ಹಳ್ಳಿಯಲ್ಲಿ ಕೃಷಿ ಮಾಡ್ತಾ ಇರೋನೆ ಸುಖಿ ಅನ್ಸುತ್ತೆ!
ಮೆಡಿಕಲ್ ಕಲ್ತವನಿಗೆ ಸಾಫ್ಟ್ ವೇರ್ ಇಂಜಿನಿಯರ್ ಕೆಲಸ ಒಳ್ಳೇದು ಅನ್ಸುತ್ತೆ!
ಪತ್ರಿಕೆಯಲ್ಲಿ ಕೆಲಸ ಮಾಡ್ತಿರೋನಿಗೆ ,ಯಾರಪ್ಪ ಕತ್ತೆ ತರಹ ದುಡಿಯೋದು ಇಷ್ಟೇ ಕೆಲಸ ಎಲ್ಲಾದ್ರೂ ಕಾಲ್ ಸೆಂಟರ್ ನಲ್ಲಿ ಮಾಡಿದ್ರೆ ಚೆನ್ನಾಗಿ ಕಾಸು ಮಾಡಬಹುದಿತ್ತು ಅನ್ಸುತ್ತೆ!
ದೂರದ ಅಮೇರಿಕಾದಲ್ಲಿ ಲಕ್ಷ ಲಕ್ಷ ದುಡೀತಾ ಇದ್ದ ಸಾಫ್ಟ್ ವೇರ್ ಇಂಜಿನೀರ್ ಗೆ ಬೆಂಗಳೂರಿಗೆ ಬಂದು ಸಿನೆಮಾದಲ್ಲಿ ಹಾಡೊದೆ ಒಳ್ಳೆ ಕೆಲ್ಸ ಅನ್ಸುತ್ತೆ.

"ಇರುವುದೆಲ್ಲ ಬಿಟ್ಟು ಇರದುದ್ದರ ಬಗ್ಗೆ ಕೊರಗುವುದೇ ಜೀವನ!" -ಅಡಿಗರ ಕ್ಷಮೆ ಕೋರಿ .

-ಸಂದೀಪ್ ಕಾಮತ್

ARUN MANIPAL said...

;)

armanikanth said...

Akkareya sandeep,
Nimma Blog Chennagide.
Dayavittu avagavaaga Mail maadtaa iri.
Nimma Barahagalannui odi matte Mail maadtene.
Thanx very Very Much.
Manikanth.

ಸಂದೀಪ್ ಕಾಮತ್ said...

ಪ್ರಿಯ ಮಣಿಕಾಂತ್,

ನನ್ನ ಬ್ಲಾಗ್ ಓದುವುದರಿಂದ ಬರೀ ಟೈಂ ಪಾಸ್ ಅಗುತ್ತೆ.
ಆದ್ರೆ ನಿಮ್ಮ ಬರಹಗಳನ್ನು ವಿಜಯ ಕರ್ನಾಟಕದಲ್ಲಿ ಓದಿ ತುಂಬಾ ಜನ ತಮ್ಮ ಜೀವನವನ್ನು ಸುಧಾರಿಸ್ಕೋತಾರೆ ,ಅದು ನಿಜಕ್ಕೂ ಗ್ರೇಟ್ !

ಪ್ರೀತಿಯಿಂದ ,
ಸಂದೀಪ್ ಕಾಮತ್

ವಿ.ರಾ.ಹೆ. said...

ಸಿಂಧು ಭಟ್ ರವರೇ, ಇವತ್ತು ಕರ್ನಾಟಕದಲ್ಲಿ ಇಂಗ್ಲೀಷು ಸಾಹಿತ್ಯ ಓದಿಕೊಂಡಿರೋರು, ಅದರಲ್ಲೇ ಪದವಿ ಪಡೆದವರು, ಇಂಗ್ಲೀಶ್ ಪ್ರೊಫೆಸರ್ ಗಳು, ಶೇಕ್ಸ್ ಪಿಯರ್, ಟೆನ್ನಿಸನ್ ನನ್ನ ಅರೆದು ಕುಡಿದವರು ಎಲ್ಲರೂ ಓದಿದ್ದು ’ಕನ್ನಡ ಮಾಧ್ಯಮ’ದಲ್ಲಿ ಮತ್ತು ಹೆಚ್ಚಿನವರು ಹಳ್ಳಿಯ, ಸರ್ಕಾರಿ ಶಾಲೆಯ ಹಿನ್ನೆಲೆಯವರು ಎಂಬುದನ್ನು ತಿಳಿದುಕೊಳ್ಳಿ.
ಇಂಗ್ಲೀಷಿನ ’ಅಗಾಧ’ವಾದ ಸಾಹಿತ್ಯವನ್ನು ಈಗಲೂ ಪರಿಚಯ ಮಾಡಿಕೊಳ್ಳಿ . ಅದಕ್ಕೆ ನೀವು ಯಾವ ಮಾಧ್ಯಮದಲ್ಲಿ ಓದಿದ್ದಿರಿ ಎಂಬುದು ಮುಖ್ಯ ಆಗೋಲ್ಲ, ನಿಮ್ಮ ಆಸಕ್ತಿ ಮತ್ತು ಬುದ್ದಿವಂತಿಕೆ ಮುಖ್ಯ. ನಿಮಗೆ ವಿಜ್ಞಾನ ವಿಷ್ಯ ಇಂಗ್ಲೀಷನಲ್ಲಿ ಅರಗಿಸಿಕೊಳ್ಳಲಾರದೇ ಇದ್ದದ್ದು ನಿಮ್ಮ ಬುದ್ಧಿವಂತಿಕೆಗೆ ಸಂಬಂಧಿಸಿದ್ದೇ ಹೊರತು ಬೇರೇನಲ್ಲ. ಯಾಕೆಂದರೆ ಕನ್ನಡ ಮಾಧ್ಯಮದಲ್ಲೆ ಕಲಿತು ಪಿ.ಯು.ಸಿನಲ್ಲಿ ಚೆನ್ನಾಗಿ ಓದಿರುವವರು ಓದುತ್ತಿರುವವರು ಲಕ್ಷಾಂತರ ಮಂದಿ ಇದ್ದಾರೆ.
ಕನ್ನಡ ಮಾಧ್ಯಮದವರಿಗೆ ಶೇಕ್ಸ್ ಪಿಯರ್ ನಂತ ಬರಹಗಾರನಿದ್ದ ಎಂಬುದಾದರೂ ತಿಳಿದಿದೆ ಮತ್ತು ಅಶ್ಟು ಸಾಕು ಕೂಡ. ಆದರೆ ಇಂಗ್ಲೀಶ್ ಮಾಧ್ಯಮದವರಿಗೆ ಏನೇನೂ ಗೊತ್ತಿರುವುದಿಲ್ಲವಲ್ಲ. ಇಂಗ್ಲೀಷ್ ಸಾಹಿತ್ಯ ಓದಿ ಪದವಿ ಪಡೆಯುವುದಕ್ಕೂ, ಇಂಗ್ಲೀಷ್ ಮಾಧ್ಯಮದಲ್ಲಿ ಓದಿವುದಕ್ಕೂ ವ್ಯತ್ಯಾಸವಿದೆ. ಎರಡನ್ನೂ ಸೇರಿಸಿ ಜೆನೆರಲೈಸ್ ಮಾಡಬೇಡಿ.

@ಸಂದೀಪ
ಈ ತಾಂತ್ರಿಕ ಶಿಕ್ಷಣಕ್ಕೆ ಕನ್ನಡವನ್ನು ಇದೇ ಪರಿಸ್ಥಿತಿಯಲ್ಲಿ ಅಳವಡಿಸುವುದು ನನಗೂ ಸರಿಕಾಣುವುದಿಲ್ಲ. ಸುಮ್ ಸುಮ್ನೆ ಗೀಚಿದ್ದು ಚೆನ್ನಾಗಿದೆ.

Harisha - ಹರೀಶ said...

@ಸಿಂಧು,
ಆಂಗ್ಲ ಮಾಧ್ಯಮದಲ್ಲಿ ಓದಿದ ಎಷ್ಟೋ ಜನರಿಗೆ ಅತ್ತ ಕನ್ನಡವೂ ಬರದೇ ಇತ್ತ ಆಂಗ್ಲವೂ ಬರದೇ ಎಡಬಿಡಂಗಿಗಳಾಗುತ್ತಾರೆ. ಎಷ್ಟೋ ಪದಗಳ ಸರಿಯಾದ ಉಚ್ಚಾರಣೆ ಅವರಿಗೆ ತಿಳಿದಿರುವುದಿಲ್ಲ. ಇದಕ್ಕೆ ನೀವು ಬ್ಲಾಗ್ ಲೋಕವನ್ನೇ ಉದಾಹರಣೆಯನ್ನಾಗಿ ತೆಗೆದುಕೊಳ್ಳಬಹುದು.

ದಿನಸಿ ಅಂಗಡಿಗೆ ಹೋಗಿ "ಹುಳ" ಎಂಬ ಪದ ನೆನಪಿಗೆ ಬರದೇ "rice ಅಲ್ಲಿ ಇರುತ್ತಲ್ಲ ಅದು.. ಅದು" ಎಂದು ಹೇಳಿದ ಮಗುವಿನ ಬಗ್ಗೆ ಇನ್ನೊಮ್ಮೆ ಯಾವಾಗಲಾದರೂ ಬರೆಯುತ್ತೇನೆ.

ನಾನೂ ಏಳನೆಯ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ್ದೇನೆ. ಅದರ ಬಗ್ಗೆ ನನಗೆ ಎಳ್ಳಷ್ಟೂ ದುಃಖವಿಲ್ಲ. ನೀವು ಇಷ್ಟು ಚೆನ್ನಾಗಿ ಕನ್ನಡದಲ್ಲಿ ಪ್ರತಿಕ್ರಿಯಿಸಿದ್ದೀರಿ ಎಂದರೆ ಅದಕ್ಕೆ ನೀವು ಓದಿದ ಕನ್ನಡ ಮಾಧ್ಯಮವೂ ಕಾರಣವಲ್ಲವೇ?

@ಸಂದೀಪ್, ವೇಗೋತ್ಕರ್ಷ ಅಂದ್ರೆ acceleration ಅಲ್ವಾ? velocity ಗೆ ಜವ ಅಂತ ಕೇಳಿದ ನೆನಪು...

ಸಂದೀಪ್ ಕಾಮತ್ said...

@ ಹರೀಶ
ಹರೀಶ ನೀನು ಹೇಳಿದ್ದು ಸರಿ ಕಣೊ ! velocity ಅಂದ್ರೆ ಜವ! ಅದಿಕ್ಕೆ ಇರ್ಬೇಕು ನಂಗೆ ಮಾರ್ಕ್ಸ್ ಕಮ್ಮಿ ಬಂದಿದ್ದು:(
ಇನ್ನೊಂದು ವಿಷಯ!ನನ್ನನ್ನ ನೀನು ಅಂತ ಕರಿ .ನೀವು ಅಂದ್ರೆ ಯಾಕೋ ಗ್ಯಾಪ್ ಇದ್ದ ಹಾಗೆ ಅನ್ಸುತ್ತೆ ಗೆಳೆತನದಲ್ಲಿ.

Anonymous said...

Sandeep
As far as i know both ur Kannada as well as English are superb
:-)
ms