Saturday, January 31, 2009
ಸಾರ್ .... ವಸುಧೇಂದ್ರ ಬಂದ್ರು !
ಕಳೆದ ಶನಿವಾರ ಮೇ ಫ್ಲವರ್ ನಿಂದ ’ಹಂಪಿ ಎಕ್ಸ್ ಪ್ರೆಸ್ ’ ಕೊಂಡು ತಂದಿದ್ದೆ.ಬಹಳ ಅದ್ಭುತವಾದ ಕಥೆಗಳಿದ್ದವು ಅದರಲ್ಲಿ.ಅದರ ಕಿಕ್ಕು ಇಳಿಯುವ ಮೊದಲೇ ಇನ್ನಷ್ಟು ಪೆಗ್ಗು ಏರಿಸೋಣ ಅಂತ ಮನಸ್ಸು ಮಾಡಿ ಅಂಕಿತಕ್ಕೆ ಹೋದೆ,ವಸುಧೇಂದ್ರರ ಇನ್ನಷ್ಟು ಪುಸ್ತಕಗಳನ್ನು ಕೊಳ್ಳಲು!
ನಮ್ಮ ಮನೆಗೆ ಸಪ್ನಾ ಬುಕ್ ಹೌಸ್ ಹತ್ತಿರ.ಆದ್ರೂ ನಾನು ಯಾಕೆ ಅಂಕಿತಕ್ಕೇ ಹೋಗ್ತೀನಿ ಅಂತ ನನಗೇ ಗೊತ್ತಿಲ್ಲ! ಪುಸ್ತಕದ ಜೊತೆ ಒಂದು ಕ್ಯಾಲೆಂಡರ್ ಕೊಡ್ತಾರೆ ಅನ್ನೋದೂ ಒಂದು ಕಾರಣ ಇದ್ದಿರಬಹುದು.ನಮ್ಮ ರೂಮಿನ ಗೋಡೆಯ ಮೊಳೆಗೆ ಬೇರೆ ಕ್ಯಾಲೆಂಡರ್ ಅಂದ್ರೆ ಸ್ವಲ್ಪ ಅಲರ್ಜಿ!
ಅಂಕಿತಕ್ಕೇ ಹೋದವನೇ ಸೀದ ಒಳಗೆ ಹೋಗಿ ಅಲ್ಲಿ ಕೂತಿದ್ದ ಹುಡುಗಿಯ ಹತ್ತಿರ ’ ಮೇಡಂ ವಸುಧೇಂದ್ರ ರ ಪುಸ್ತಕಗಳು ಎಲ್ಲಿವೆ ?’ ಅಂತಲೇ ಕೇಳಿದೆ.
ಅದಕ್ಕೆ ಆ ಹುಡುಗಿ ನಗುತ್ತಾ ’ಈಗ ತಾನೆ ಆಚೆ ಹೋದ್ರು ವಸುಧೇಂದ್ರ ಇಷ್ಟು ಹೊತ್ತು ಇಲ್ಲೇ ಇದ್ರು ’ ಅಂದಳು.
ನನಗೆ ಆಶ್ಚರ್ಯ ಆಯ್ತು. ಇದೇನು ವಸುಧೇಂದ್ರ ಅವರು ತಮ್ಮ ಪುಸ್ತಕ ಮಾರಲು ಖುದ್ದಾಗಿ ಅಂಕಿತಕ್ಕೇ ಬರುತ್ತಾರೇನೋ ಅನ್ನೋ ಡೌಟು ಬಂತು.ಹಾಗೆಯೇ ’ಅಂಕಿತಕ್ಕೆ ಬಹಳಷ್ಟು ಜನ ಲೇಖಕರು ಭೇಟಿ ಕೊಡ್ತಾರೆ,ಅಲ್ಲಿಯೇ ಬಹಳ ಹೊತ್ತು ಕಳೀತಾರೆ ’ ಅಂತ ಎಲ್ಲೋ ಓದಿರೋದು ನೆನಪಾಯಿತು.
ಆಮೇಲೆ ಆ ಹುಡುಗಿ ನನ್ನನ್ನು ವಸುಧೇಂದ್ರರ ಪುಸ್ತಕಗಳನ್ನು ಜೋಡಿಸಿಟ್ಟ ಜಾಗಕ್ಕೆ ಕರೆದುಕೊಂಡು ಹೋದಳು.
’ಹಂಪಿ ಎಕ್ಸ್ ಪ್ರೆಸ್’ ಆಗಲೆ ಕೊಂಡು ಓದಿರೋದ್ರಿಂದ ’ಯುಗಾದಿ’ ,’ಮನೀಷೆ’ ಮತ್ತೆ ’ಕೋತಿಗಳು ಸಾರ್ ಕೋತಿಗಳು ’ ಪುಸ್ತಕಗಳನ್ನು ಎತ್ತಿಕೊಂಡೆ.
ಹುಡುಗಿ ’ವಸುಧೇಂದ್ರ ನಿಮಗೆ ಗೊತ್ತಾ ?’ ಕೇಳಿದಳು.
’ಹೂಂ ಗೊತ್ತು ಆದ್ರೆ ಅವರಿಗೆ ನಾನು ಗೊತ್ತಿಲ್ಲ !’ ಅಂದೆ.
’ಇರಿ ಸರ್ ಮತ್ತೆ ಬರ್ತಾರೆ ಅವರು ಇಲ್ಲೇ ಹೋಗಿರ್ತಾರೆ ’ ಅಂದ್ಲು.
ಹೇಗೂ ಈಗ ಬರ್ತಾರೆ ಅನ್ನೋ ಆಶ್ವಾಸನೆ ಕೊಟ್ಟಿದ್ದಾಳೆ ಹುಡುಗಿ ,ಅಲ್ಲಿ ತನಕ ಬೇರೆ ಪುಸ್ತಕಗಳನ್ನು ನೋಡೋಣ ಅಂದುಕೊಂಡೆ. ವಿಜಯಕರ್ನಾಟಕದ ದೀಪಾವಳಿ ವಿಶೇಷಾಂಕದಲ್ಲಿ ವಿವೇಕ್ ಶಾನುಭಾಗರ ಒಂದು ನಾಟಕ ಬಂದಿತ್ತು ಅದನ್ನೇ ಕೊಳ್ಳೋಣ ಅಂದುಕೊಂಡು ’ರೀ ಮೇಡಂ ವಿವೇಕ್ ಶಾನುಭಾಗರ ’ಹುಲಿ.... ’ ಅಂತ ಏನೋ ನಾಟಕ ಇದೆಯಲ್ಲ ಅದು ಇದೆಯಾ ’ ಅಂತ ಕೇಳಿದೆ.
ನನಗೆ ಆ ನಾಟಕದ ಹೆಸರೇ ಮರೆತು ಹೋಗಿತ್ತು.ನಾನು ದೊಡ್ಡ ಮರೆಗುಳಿ ಹಾಗಾಗಿ ನನಗೆ ಬಹಳಷ್ಟು ವಿಷಯಗಳು ನೆನಪಿಗೆ ಬರೋದೇ ಇಲ್ಲ.ಹಿಂದೊಮ್ಮೆ ಯಾರೋ ದೇವುಡುರವರ ’ಮಹಾಬ್ರಾಹ್ಮಣ ’ ಓದಿ ಚೆನ್ನಾಗಿದೆ ಅಂದಿದ್ರು.ನಾನು ಪುಸ್ತಕದ ಅಂಗಡಿಗೆ ಹೋಗಿ ’ಸರ್ ಡೇವಿಡ್ ರ ’ಮಹಾಬ್ರಾಹ್ಮಣ ’ ಇದೆಯಾ?’ ಅಂತ ಕೇಳಿ ಅವರ ಕೆಂಗಣ್ಣಿಗೆ ಗುರಿಯಾಗಿದ್ದೆ.
ಬ್ರಾಹ್ಮಣ ಅನ್ನೋ ಶಬ್ದ ಕೇಳಿದ್ರೆ ಎಲ್ಲರ ಕಣ್ಣೂ ಕೆಂಪಾಗುತ್ತೆ ಏನ್ ಮಾಡೋದು!
ಅಂಕಿತದ ಹುಡುಗಿ ’ ಸಾರ್ ಅದು ’ಹುಲಿ ಸವಾರಿ’ ಅನ್ನೋ ಪುಸ್ತಕ .ಆದ್ರೆ ಅದಿಲ್ಲ ’ಬಹುಮುಖಿ’ ಇದೆ ತಗೊಳ್ಳಿ ’ಅಂದ್ಲು.
’ಬಹುಮುಖಿ’ಯ ಬಗ್ಗೆ ಅಷ್ಟು ಆಸಕ್ತಿ ಇರದಿದ್ದರಿಂದ ಸುಮ್ಮನೆ ಬೇರೆ ಪುಸ್ತಕಗಳ ಮೇಲೆ ಕಣ್ಣು ಹಾಯಿಸಲೆಂದು ಆಚೆ ಕಡೆ ಹೋದೆ.
ಅಲ್ಲೇ ಮೂಲೆಯಲ್ಲಿ ಒಂದು ಪುಸ್ತಕ ಕಣ್ಣಿಗೆ ಬಿತ್ತು .’ಲೈಂಗಿಕತೆಯ ಬಗ್ಗೆ ನಿಮ್ಮ ಅರಿವು ಹೆಚ್ಚಿಸಿಕೊಳ್ಳಿ ’ ಅನ್ನೋ ಪುಸ್ತಕ ಅದು!
ಅವಕಾಶ ಸಿಕ್ಕರೆ ಯಾವಾಗಲೂ ಅರಿವನ್ನು ಹೆಚ್ಚಿಸಿಕೊಳ್ಳಬೇಕು ಅನ್ನೋ ಹಿರಿಯರ ಮಾತು ನೆನಪಾಯ್ತು!
ಆ ಕಡೆ ಈ ಕಡೆ ಒಮ್ಮೆ ಕಣ್ಣು ಹಾಯಿಸಿದೆ.ಅಂಗಡಿಯಲ್ಲಿ ಬೇರೆ ಯಾರೂ ಇರಲಿಲ್ಲ.ಹುಡುಗಿ ತನ್ನ ಪಾಡಿಗೆ ಪುಸ್ತಕಗಳನ್ನು ಜೋಡಿಸ್ತಾ ಇದ್ಲು.
ಆಸೆಯಿಂದ ಪುಸ್ತಕ ಕೈಗೆತ್ತಿ ಪುಟ ತಿರುವಿದೆ .ಅಷ್ಟರಲ್ಲಿ ಹುಡುಗಿ ನನ್ನ ಬಳಿ ಓಡೋಡ್ತಾ ಬಂದ್ಲು.
ನಾನು ಪುಸ್ತಕ ಅಲ್ಲೇ ಓದಲು ಪ್ರಾರಂಭಿಸಿರುವ ಬಗ್ಗೆ ಆಕ್ಷೇಪ ಎತ್ತಲು ಆ ಹುಡುಗಿ ಬರ್ತಾ ಇದ್ದಾಳೇನೋ ಅನ್ನಿಸಿ ಗಾಬರಿಯಾಯ್ತು ನಂಗೆ.
ಹಿಂದೊಮ್ಮೆ ಮಂಗಳೂರಿನ ಪುಸ್ತಕ ಪ್ರದರ್ಶನದಲ್ಲೊಮ್ಮೆ ಹೀಗೆ ಫ್ರೀ ಆಗಿ ’ಅಂಥ’ ಪುಸ್ತಕ ಸ್ಕ್ಯಾನ್ ಮಾಡ್ತಾ ಇದ್ದಾಗ ಸ್ಟಾಲ್ ನ ಮಾಲಕ ನನ್ನಿಂದ ಪುಸ್ತಕ ಕಿತ್ತುಕೊಂಡು ’ ನಿಮಗೆ ಇದನ್ನು ಮನೆಗೆ ತಗೊಂಡು ಹೋಗಿ ಓದೋ ಅಷ್ಟು ಧೈರ್ಯ ಇಲ್ಲ .ಎಲ್ಲಾ ಇಲ್ಲೆ ಮುಗಿಸಿಬಿಡ್ತೀರ ’ ಅಂತ ಉಗಿದಿದ್ದು ನೆನಪಾಯ್ತು!
ಹುಡುಗಿ ನನ್ನ ಬಳಿ ಬಂದು ’ಸಾರ್ ....’ ಅಂದ್ಲು .
’ಏನು ’ ಅಂದೆ ನಾನು ಗಾಬರಿಯಿಂದ !
’ಸಾರ್ .... ವಸುಧೇಂದ್ರ ಬಂದ್ರು !’ ಅಂದ್ಲು ಹುಡುಗಿ.
ಸಧ್ಯ ಬದುಕಿದೆ ಅಂದುಕೊಂಡು ಕ್ಯಾಶ್ ಕೌಂಟರ್ ಗೆ ಹೋದೆ ,ಅಲ್ಲಿ ವಸುಧೇಂದ್ರ ಮತ್ತೆ ಅಪಾರ ,ಪ್ರಕಾಶ್ ಕಂಬತ್ತಳಿಯವರೊಡನೆ ಮಾತಾಡಿಕೊಂಡು ನಿಂತಿದ್ರು !
ನಾನು ಕ್ಯಾಶ್ ಕೌಂಟರ್ ಬಳಿ ಹೋಗಿ ಟೇಬಲ್ ಮೇಲೆ ಪುಸ್ತಕಗಳನ್ನಿಟ್ಟೆ .ಅಷ್ಟರಲ್ಲಿ ವಸುಧೇಂದ್ರ ,ಅಪಾರ ಹೊರಟು ನಿಂತರು.
’ಸರ್.... ಆಟೋಗ್ರಾಫ್ ಪ್ಲೀಸ್ ’ ಅಂದೆ .
ವಸುಧೇಂದ್ರ ನಗುತ್ತಾ ಕೈ ಚಾಚಿ ’ಏನ್ ಹೆಸರು ’ ಅಂದ್ರು .
ಸಂದೀಪ್ ಕಾಮತ್ ಅಂದೆ. ಥಟ್ಟನೆ ’ಒಹ್ ನೀನಾ ಸಂದೀಪ್ ಕಾಮತ್ ! ನೀನು ’ಹಂಪಿ ಎಕ್ಸ್ಪ್ರೆಸ್’ ಬಗ್ಗೆ ನಂಗೆ ಮೇಲ್ ಮಾಡಿದ್ದೆ ಅಲ್ವಾ ?’ ಅಂತ ಕೇಳಿದ್ರು.
’ಹೌದು ಸರ್, ಅದು ನಾನೆ ’ ಅಂದೆ .
’ಹಂಪಿ ಎಕ್ಸ್ ಪ್ರೆಸ್’ ತುಂಬಾ ಇಷ್ಟ ಆಯ್ತು ಅಂತ ವಸುಧೇಂದ್ರರಿಗೆ ಮೇಲ್ ಮಾಡಿದ್ದೆ ನಾನು.ಜೊತೆಗೆ ಅದರಲ್ಲಿ ’ ಸರ್ ಕಥೆಗಾರರಾದ ನೀವು ಬ್ರಹ್ಮ-ವಿಷ್ಣು-ಮಹೇಶ್ವರ ಮೂರೂ ಆಗಿರ್ತೀರಾ .ಮತ್ತೆ ಯಾಕೆ ಸರ್ ಸುಜಾಳ ಗಂಡ ಶ್ರೀನಿವಾಸ ನಂಬೂದರಿಯ ಕೊಲೆ ಮಾಡಿದ್ರಿ ’ನೀವು’ ? ನಿಜ ಜೀವನದಲ್ಲಂತೂ ಬರೀ ಟ್ರಾಜೆಡಿಗಳೇ ಇರೋದು ಕೊನೆಪಕ್ಷ ಕಥೆಗಳಲ್ಲಾದ್ರೂ ಸುಖಾಂತ್ಯ ಮಾಡೋದಲ್ವಾ ? ಅಂತ ಗಂಭೀರವಾದ ಕೊಲೆ ಆರೋಪವನ್ನೂ ಹಾಕಿದ್ದೆ ಅವರ ಮೇಲೆ!
’ಹಂಪಿ ಎಕ್ಸ್ ಪ್ರೆಸ್’ ನ ’ಕ್ಷಮೆಯಿಲ್ಲದೂರಿನಲ್ಲಿ’ ಅನ್ನೋ ಕಥೆಯಲ್ಲಿ ಸುಜಾಳ ಗಂಡನ ಕೊಲೆ ಆಗುತ್ತೆ .ಅಂಥ ಟ್ರಾಜೆಡಿ ಅಂತ್ಯದ ಬಗ್ಗೆ ನನಗೆ ಅಸಮಧಾನವಿತ್ತು.ಅದನ್ನೇ ಅವರಿಗೆ ಮೇಲ್ ನಲ್ಲಿ ಬರೆದಿದ್ದೆ.ಬರೆದ ಮೇಲೆ ’ಛೇ ಕಥೆಗಾರರಿಗೆ ಅಂಥ ನಿರ್ಬಂಧ ಹಾಕಿದ್ರೆ ಸರಿ ಅಲ್ಲ ’ ಅಂತ ಬೇಜಾರಾಗಿತ್ತು ನಂಗೆ.
ಪಾಪ ಅವರು ಅದರ ಬಗ್ಗೆ ಏನೂ ಪ್ರಸ್ತಾವ ಮಾಡಿಲ್ಲ .ಆದ್ರೆ ಹಿಂದೊಮ್ಮೆ ’ಭಾಮಿನಿ ಷಟ್ಪದಿ’ಯ ಬಿಡುಗಡೆ ಸಂದರ್ಭದಲ್ಲಿ ಅವರ ಆಟೋಗ್ರಾಫ್ ಪಡೆದದ್ದು,ಅದರ ಬಗ್ಗೆ ಬ್ಲಾಗ್ ನಲ್ಲಿ ಬರೆದಿದ್ದು ನೆನಪಿತ್ತು ಅವರಿಗೆ! ’ಅದೇ ಸಂದೀಪ್ ಅಲ್ವಾ ನೀನು ’ ಅಂದ್ರು ಮತ್ತೆ.
ನಾನು ಮತ್ತೆ ಕ್ಲೋಸ್ ಅಪ್ ಸ್ಮೈಲ್ ಕೊಟ್ಟೆ.
ನಾನು ಕೊಂಡ ನಾಲ್ಕೂ ಪುಸ್ತಕದಲ್ಲಿ ಆಟೊಗ್ರಾಫ್ ಹಾಕಲು ನಿಂತರು ವಸುಧೇಂದ್ರ .
ಅಷ್ಟರಲ್ಲೆ ಒಬ್ಬ ಮಹನೀಯರು ಕೌಂಟರ್ ಗೆ ಬಂದ್ರು. ಕೌಂಟರ್ ನಲ್ಲಿದ್ದ ’ಕೋತಿಗಳು ಸಾರ್ ಕೋತಿಗಳು ’ ಪುಸ್ತಕ ನೋಡಿ ’ಓಹ್ ಇದೇ ಅಲ್ವ ಸಿನೆಮಾ ಆಗಿರೋದು’ ಅಂತ ವಸುಧೇಂದ್ರರನ್ನೇ ಕೇಳೋದಾ !!
ವಸುಧೇಂದ್ರ ನಗುತ್ತಾ ’ ಅಲ್ಲ ಸರ್ ಇದು ಬೇರೆ ಪುಸ್ತಕ ’ ಅಂದ್ರು . ನಾನೂ ದನಿ ಸೇರಿಸುತ್ತಾ ’ ಆ ಕೋತಿ ಬೇರೆ ,ಈ ಕೋತಿ ಬೇರೆ ಸರ್ ’ ಅಂದೆ ಅ ಮಹನೀಯರಿಗೆ!
ಎಲ್ಲಾ ಪುಸ್ತಕಕ್ಕೂ ಆಟೋಗ್ರಾಫ್ ಹಾಕಿ ’ ಓದಿ ಮೇಲ್ ಮಾಡು’ ಅಂತ ಹೇಳಿ ಹೊರಟರು ವಸುಧೇಂದ್ರ,ಅಪಾರ.
ಅವರು ಹೋದ ಮೇಲೆ ಆ ಮಹನೀಯರು ’ಓಹ್ ಅವರೂ ಲೇಖಕರಾ ’ ಅಂದ್ರು .
ನಾನು ’ ಇನ್ನೇನ್ ಮತ್ತೆ ಈ ನಾಲ್ಕೂ ಪುಸ್ತಕ ಅವರದ್ದೇ ಗೊತ್ತಾ? ’ ಅಂದೆ.
ಪ್ರಕಾಶ್ ಕಂಬತ್ತಳಿಯವರೂ ದನಿಗೂಡಿಸುತ್ತಾ ’ ಅವರು ಕನ್ನಡದ ಬಹಳ ಪ್ರಸಿದ್ಧ ಲೇಖಕರು ಟಾಪ್ ಟೆನ್ ನಲ್ಲಿ ಒಂದನೇ ಸ್ಥಾನದಲ್ಲಿದೆ ಅವರ ’ಹಂಪಿ ಎಕ್ಸ್ ಪ್ರೆಸ್’ ಅಂದ್ರು.
ಪ್ರಸಿದ್ಧ ಲೇಖಕರನ್ನು ಮುಖತಃ ನೋಡಿದ ಖುಷಿ ಕಾಣಿಸಿತು ಆ ಮಹನೀಯರ ಮುಖದಲ್ಲಿ.
ನನ್ನ ಖುಷಿಯೂ ಕಡಿಮೆ ಏನಿರಲಿಲ್ಲ !
Sunday, January 25, 2009
ಮೇ ಫ್ಲವರ್ ನಲ್ಲೊಂದು ಸಂವಾದ .
ಸಂದರ್ಶಕ:ಸರ್ ಮೇ ಫ್ಲವರ್ ಗೆ ’ಸ್ಲಂ ಡಾಗ್ ಮಿಲೆನಿಯರ್’ ಸಂವಾದಕ್ಕೆ ಹೋಗಿದ್ರಿ ಅಂತ ತಿಳೀತು ಆದ್ರೆ ನೀವು ಆ ಚಿತ್ರವನ್ನು ನೋಡೆ ಇಲ್ಲ ಅಂತ ನನಗೆ ಗೊತ್ತಿದೆ! ಮತ್ತೆ ಯಾಕೆ ಸರ್ ಸಂವಾದಕ್ಕೆ ಹೋದ್ರಿ?
ಸಂದೀಪ್: ಹೆ ಹೆ ಏನೋ ಇದು ಯಾವಾಗ್ಲೂ ಮಗಾ ಅಂತ ಕರೀತಾ ಇದ್ದವನು ಇವತ್ತು ಸರ್ ಅಂತಾ ಇದ್ದೀಯ? ಓಹ್ ಇಂಟರ್ವೂ ಅಂತಾನಾ?? ಇರ್ಲಿ ಬಿಡೋ ಮಾಮೂಲಾಗಿ ’ನೀನು ’ ಅಂತ ಕರಿ ಪರ್ವಾಗಿಲ್ಲ. .
ಸಂದರ್ಶಕ:ಓಕೆ ನೀನು ಸಿನೆಮಾ ನೋಡಿಲ್ಲ ಅಂತ ನಂಗೆ ಗೊತ್ತು .ಮತ್ತೆ ಯಾಕೆ ಸಂವಾದದಲ್ಲಿ ಭಾಗಿಯಾದೆ?ಭಾಗಿಯಾಗೋದಲ್ಲದೆ ಏನೇನೋ ಚರ್ಚೆ ಬೇರೆ ಮಾಡಿದ್ದೀಯಂತೆ ಯಾಕೆ?
ಸಂದೀಪ್:ಹೌದು ನಾನು ಸಿನೆಮಾ ನೋಡಿಲ್ಲ .ಏನಿವಾಗ?ಸಿನೆಮಾ ನೋಡಿಲ್ಲ ಅಂದ್ರೆ ಅದರ ಬಗ್ಗೆ ಮಾತಾಡಬರ್ದಾ?ಹಾಗೆ ನೋಡಿದ್ರೆ ನಾನು ’ವೈಟ್ ಟೈಗರ್ ’ಕೂಡಾ ಓದಿಲ್ಲ ಆದ್ರೆ ಬ್ಲಾಗ್ ನಲ್ಲಿ ಅದರ ಬಗ್ಗೆ ಉಗಿದು ಬರೆದಿಲ್ವ?
ಸಂದರ್ಶಕ:ನಂಗ್ಯಾಕೊ ನೀನು ಸಿನೆಮಾ ನೋಡದೇ ಅದರ ಬಗ್ಗೆ ಮಾತಾಡಿದ್ದು ಇಷ್ಟ ಆಗಿಲ್ಲಪ್ಪ.
ಸಂದೀಪ್:ಲೋ ಗೂಬೆ ! ’ ನಾನು ಸ್ಲಂ ಡಾಗ್ ಸಿನೆಮಾ ನೋಡಿಲ್ಲ ,ಅದ್ದರಿಂದ ಸಂವಾದ ಮುಂದಿನ ವಾರ ಇಟ್ಕೊಳ್ಳಿ ,ಅಷ್ಟರ ಒಳಗೆ ಸಿನೆಮಾ ನೋಡಿ ರೆಡಿ ಅಗಿರ್ತೀನಿ’ ಅಂದ್ರೆ ಮೋಹನ್ ಅವ್ರು ಉಗಿಯಲ್ವೇನೋ?
ಸಂದರ್ಶಕ:ಸಿನೆಮಾ ನೋಡಿಲ್ಲ ಅಂದ್ರೆ ನೀನು ಮೇ ಫ್ಲವರ್ ಗೆ ಹೋಗ್ಲೆ ಬಾರ್ದಿತ್ತು ಕಣೋ.
ಸಂದೀಪ್:ಹೆ ಹೆ .ಮೇ ಫ್ಲವರ್ ಒಂದು ಶಾಪಿಂಗ್ ಕಾಂಪ್ಲೆಕ್ಸ್ ಇದ್ದ ಹಾಗೆ ಕಣ್ಲ .ಅಲ್ಲಿ ಸುಮ್ಮನೆ ಹೋಗಿ ಏನೂ ಮಾಡದೆ.ಮಾತಾಡದೆ ,ಹಂಗೆ ಬಿಟ್ಟಿ ಪುಸ್ತಕಗಳನ್ನು ಓದ್ಕೊಂಡು ಬರಬಹುದು.ಅಂದ ಹಾಗೆ ನಾನು ಶ್ರೀರಾಂ ಪುರದ ಸ್ಲಂ ನೋಡಿದ್ದೀನಿ,ಡಾಗ್ ನೋಡಿದ್ದೀನಿ ,ಬೆಂಗಳೂರಿನಲ್ಲಿ ಬಹಳಷ್ಟು ಮಿಲೆನಿಯರ್ ಗಳನ್ನೂ ನೋಡಿದ್ದೀನಿ.ಹಾಗಾಗಿ ನಾನು ಸ್ಲಂ+ಡಾಗ್+ಮಿಲೆನಿಯರ್ ನೋಡಿದ್ದೀನಿ ಅಂತಾಯ್ತಲ್ವ?
ಸಂದರ್ಶಕ:ನಿನ್ ತಲೆ .ಮೂರನ್ನೂ ಒಟ್ಟಿಗೆ ನೋಡಿದ್ದೀಯಾ?
ಸಂದೀಪ್:ಇಲ್ಲ.
ಸಂದರ್ಶಕ:ಮತ್ತೆ ? ನಿನಗೆ ಸಿನೆಮಾ ಬಗ್ಗೆ ಏನ್ ಗೊತ್ತು.ಎಡಿಟಿಂಗ್,ಕೊರಿಯಾಗ್ರಾಫಿ,ಮಿಕ್ಸಿಂಗು,ಕ್ಯಾಮೆರಾ ವರ್ಕು ಅದು ಇದು ಅಂತ ಎಷ್ಟು ಕಷ್ಟ ಇದೆ ಗೊತ್ತಾ? ಸುಮ್ನೆ ಹೋಗಿ ಸ್ಲಂ ಡಾಗ್ ಇಷ್ಟ ಆಗಿಲ್ಲ ಅಂದ್ಯಲ್ಲ .ತಲೆ ಇದೆಯಾ ನಿಂಗೆ?
ಸಂದೀಪ್:ನಿಂಗೆ ಅಡಿಗೆ ಮಾಡೋದಕ್ಕೆ ಗೊತ್ತಾ?
ಸಂದರ್ಶಕ:ಇಲ್ಲ!
ಸಂದೀಪ್:ಮತ್ತೆ ಮೊನ್ನೆ ಶಾಂತಿಸಾಗರದಲ್ಲಿ ವೆಜ್ ಪಲಾವ್ ಸರಿಯಾಗಿಲ್ಲ .ಇಷ್ಟ ಆಗಿಲ್ಲ ಅಂತ ಉಗೀತಾ ಇದ್ದೆ ಯಾರನ್ನೋ.ಪಲಾವ್ ಮಾಡೊದು ಎಷ್ಟು ಕಷ್ಟ ಅಂತ ಗೊತ್ತಾ ನಿಂಗೆ? ಮೊದಲು ರೈಸ್ ಮಾಡ್ಬೇಕು,ಆಮೇಲೆ......
ಸಂದರ್ಶಕ:ತಪ್ಪಾಯ್ತು ಗುರುವೇ!.....ಅದಿರ್ಲಿ ನಿಂಗೆ ಸ್ಲಂ ಡಾಗ್ ಅಂದ್ರೆ ಯಾಕೆ ಸಿಟ್ಟು?ಅದರಲ್ಲಿ ’ನಿಜವಾದ’ ಭಾರತ ತೋರಿಸಿದ್ದಾರೇ ಅಂತಾನಾ?
ಸಂದೀಪ್:ಹೇ ಸಿಟ್ಟೇನಿಲ್ಲ ಮಾರಾಯಾ ಒಂದು ಸಾತ್ವಿಕವಾದ ಬೇಸರ ಅಷ್ಟೆ.ಆ ಸಿನೆಮಾ ನೋಡಿ ’ಯಾರಾದ್ರೂ’ ಭಾರತದ ಬಗ್ಗೆ ತಪ್ಪು ತಿಳ್ಕೋತಾರೇನೋ ಅಂತ ಬೇಸರ ಅಷ್ಟೇ.ಸ್ಲಂ ಡಾಗ್ ಗೆ ಅವಾರ್ಡ್ ಬಂದಿದ್ದರಿಂದ ಅದೆಷ್ಟೊ ವಿದೇಶಿಯರು ಭಾರತದ ಬಗ್ಗೆ ತಪ್ಪು ತಿಳ್ಕೋತಾರೇನೋ ಅಂತ ಭಯ!
ಸಂದರ್ಶಕ:ತಪ್ಪು ತಿಳ್ಕೊಂಡ್ರೆ ನಿಮ್ಮಪ್ಪನ್ ಗಂಟೇನು ಹೋಗುತ್ತೆ?
ಸಂದೀಪ್:ನಮ್ಮಪ್ಪನ್ ಗಂಟೇನೂ ಹೋಗಲ್ಲ.ಆದ್ರೆ ನಮ್ಮನೆ ದೋಸೆ ತೂತು ಅಂತ ಯಾರಿಗೂ ಗೊತ್ತಾಗ್ಬಾರ್ದು ಅಂತ :)
ಸಂದರ್ಶಕ:ಇದೊಳ್ಳೆ ಕಥೆಯಾಯ್ತಲ್ಲ ! ಎಲ್ಲರ ಮನೆ ದೋಸೆ ತೂತು ಅಂತ ಕೇಳಿಲ್ವಾ ನೀನು!
ಸಂದೀಪ್:ಇರಬಹುದು.ಆದ್ರೆ ನಮ್ಮನೆ ದೋಸೆ ತೂತು ಎಷ್ಟು ’ದೊಡ್ಡದು’ ಅಂತ ಬೇರೆಯವ್ರಿಗೆ ಗೊತ್ತಾಗಬಾರದು ಅಷ್ಟೆ.
ಸಂದರ್ಶಕ:ಒಹ್ ಹಾಗಾ? ಯಾರಾದ್ರೂ ವಿದೇಶಿಯರು ನಿನ್ ಹತ್ರ ಬಂದು ಕೇಳ್ತಾರೇನೋ ಭಾರತದ ಬಗ್ಗೆ.
ಸಂದೀಪ್:ಯಾಕೆ ಕೇಳಲ್ಲ? ನಿಂಗೆ ಗೊತ್ತಿಲ್ವಾ? ನಂ ಆಫೀಸ್ ಗೆ ತಿಂಗಳಿಗೆ ಎಷ್ಟು ಫಾರಿನರ್ಸ್ ಬರ್ತಾರೆ ಅಂತ. ಆ ಪೋಲೋ ಚೈನಾದಿಂದ ಬಂದಾಗ ಅವನು ಕಲಾಸಿಪಾಳ್ಯ ನೋಡಿ ಮೂಗು ಮುರಿದಾಗ ನಂಗೆ ಎಷ್ಟು ಕಷ್ಟ ಆಗಿತ್ತು ಗೊತ್ತಿಲ್ವ ನಿಂಗೆ?
ಸಂದರ್ಶಕ:ನಿಂದು ವಿಪರೀತ ಆಯ್ತು ಮಾರಾಯ.ಯಾವುದೆ ಸಿನೆಮಾ ನೋಡಿ ಜನ ತಮ್ಮ ಅಭಿಪ್ರಾಯ ನಿರೂಪಿಸಿಕೊಳ್ಳಲ್ಲ ಅಷ್ಟೇ.ಅದು ನಿನ್ನ ಭ್ರಮೆ!
ಸಂದೀಪ್:ಓಹ್ ಹಾಗ .ನೀನು ಅಮೆರಿಕಾ ನೋಡಿಲ್ಲ ಅಲ್ವ.ಮತ್ತೆ ಯಾಕೆ ನಿಂಗೆ ಅಮೆರಿಕ ಅಂದ್ರೆ ಸಿಡಿಮಿಡಿ.ಅಲ್ಲಿಯ ಸಂಸ್ಕೃತಿ ಸರಿ ಇಲ್ಲ ಅಂತ ಯಾಕೆ ಯಾವಾಗ್ಲೂ ಗೊಣಗ್ತಾ ಇರ್ತೀಯಾ?
ಸಂದರ್ಶಕ: ಅದು F TV ನೋಡಿದ್ರೆ ಗೊತ್ತಾಗುತ್ತೆ ಬಿಡು! ಆಮೇಲೆ ಅವರ ಇಂಗ್ಲೀಷ್ ಸಿನೆಮಾ ನೋಡಿದ್ರೆ ಗೊತ್ತಾಗುತ್ತೆ .ಸಿನೆಮ ಶುರು ಆದ್ರೆ ಸಾಕು-ಕಿಸ್ಸು .ಹತ್ತು ನಿಮಿಷಕ್ಕೊಂದು ಕಿಸ್ಸಿಲ್ಲ ಅಂದ್ರೆ ಅವರ ಸಿನೆಮಾ ಮುಂದೆ ಹೋಗಲ್ಲ.ಮತ್ತೆ ಅಲ್ಲಿ ಅಪ್ಪ ಅಮ್ಮ ಅಂದ್ರೆ ಮರ್ಯಾದೆ ಇಲ್ಲ ಕಣೋ.ವಿಚಿತ್ರ ದೇಶ ಅದು.ಅಲ್ಲಿನ ಸಂಸ್ಕೃತಿನೇ ಸರಿ ಇಲ್ಲ ಕಣೋ!
ಸಂದೀಪ್:ಒಹ್ ಅಮೆರಿಕಾ ಗೆ ಹೋಗದೇನೆ ಬರೀ F TV ,ಇಂಗ್ಲೀಷ್ ಸಿನೆಮಾ ನೋಡಿನೇ ಅಂಥ ದೇಶದ ಬಗ್ಗೆ ನೀನು ಅಭಿಪ್ರಾಯ ನಿರೂಪಿಸಿಕೊಂಡೆ ಅಲ್ಲಾ?ಆಮೇಲೆ ನಂಗೆ ಹೇಳ್ತೀಯ ’ಬರೀ’ ಸಿನೆಮಾದಿಂದ ಏನೂ ಆಗಲ್ಲ ಅಂತ! ಒಳ್ಳೇ ಆಸಾಮಿ ಕಣಯ್ಯ ನೀನು!
ಸಂದರ್ಶಕ:ಹಾಗೆನಿಲ್ಲ ಆ ದೇಶದ ಬಗ್ಗೆ ಒಳ್ಳೆಯ ಸಿನೆಮಾನೂ ನೋಡಿದ್ದೀನಿ .ಹಾಗಾಗಿ ಆ ದೇಶದ ಬಗ್ಗೆ ಒಳ್ಳೆ ಅಭಿಪ್ರಾಯಾನೂ ಇದೆ ನಂಗೆ.
ಸಂದೀಪ್:ಓಕೆ ಹಾಗಿದ್ರೆ ಭಾರತದ ಬಗ್ಗೆ ಒಳ್ಳೆ ಅಭಿಪ್ರಾಯ ಬರೊ ಹಾಗೆ ಇರೊ ಸಿನೆಮಾ ಅವರು ನೋಡ್ತಾರೆ ಅಂತೀಯಾ ನೀನು.
ಸಂದರ್ಶಕ:ಹೌದು ಯಾಕೆ ನೋಡಲ್ಲ? ಸ್ಲಂ ಡಾಗ್ ನೋಡಿಲ್ವ ಅವರು ಹಾಗೆ ಬೇರೆ ಸಿನೆಮಾನೂ ನೋಡ್ತಾರೆ.
ಸಂದೀಪ್:ಸ್ಲಮ್ ಡಾಗ್ ಗೆ ಅವಾರ್ಡ್ ಬಂದಿದೆ ಅದಕ್ಕೆ ಎಲ್ಲರೂ ನೋಡಿದ್ದಾರೆ ಅವಾರ್ಡ್ ಬಂದಿಲ್ಲ ನೋಡ್ತಾರಾ?
ಸಂದರ್ಶಕ:ನಿನ್ನ So called ಪ್ರಕಾಶಿಸುತ್ತಿರೋ ಭಾರತದ ಬಗ್ಗೆ ಒಳ್ಳೆ ಸಿನೆಮಾ ತೆಗೆದು ಅವಾರ್ಡ್ ತಗೊಳ್ಳಯ್ಯ ನೋಡ್ತಾರೆ ಎಲ್ಲ!
ಸಂದೀಪ್:ಬಿಟ್ಟಿ ಸಲಹೆಗೇನೋ ಕೊರತೆ ಇಲ್ಲ ನಿನ್ ಹತ್ರ ! ಇರ್ಲಿ ಬಿಡು ನೋಡೋಣ ಅಂಥ ಸಿನೆಮಾ ಬರುತ್ತೇನೋ ಅಂತ:(ಒಳ್ಳೆ ಸಿನೆಮಾ ಬಂದ್ರೂ ಅವಾರ್ಡ್ ಬರೋದು,ಅವರು ಅದನ್ನು ನೋಡೋದು ಅಷ್ಟರಲ್ಲೇ ಇದೆ ಬಿಡು.
ಸಂದರ್ಶಕ:ನೀನು ಯಾವಾಗ ನೋಡಿದ್ರೂ ’ಅವರು ಏನಂದುಕೋತಾರೋ ,ಇವರು ಏನಂದುಕೋತಾರೋ ’ ಅಂತ ಬದುಕ್ತಿರ್ತೀಯ .ಕಮಾನ್ ಮ್ಯಾನ್ ಅಂದುಕೊಳ್ಳುವವರು ಅಂದುಕೊಳ್ಳಲ್ಲಿ ಬಿಡು .ಭಾರತ ದರಿದ್ರ ದೇಶ ,ಕೊಳಕು ದೇಶ ಇಲ್ಲಿ ಏನೂ ಸರಿ ಇಲ್ಲ ಅಂತ .ನಿಂಗೇನು ಪ್ರಾಬ್ಲೆಮ್ ?
ಸಂದೀಪ್:ಆಯ್ತಪ್ಪ ನಂಗೇನೂ ಪ್ರಾಬ್ಲೆಮ್ ಇಲ್ಲ ಬಿಡು.ಈಗ ಹೇಳು ಆ ಸಿನೆಮಾದಿಂದ ಧಾರಾವಿ ಸ್ಲಂ ಜನರಿಗೆ ಏನು ಲಾಭ ಆಯ್ತು? A R Rehaman ಗೆ ಅವಾರ್ಡ್ ಬಂತು .ಡ್ಯಾನಿಗೂ ಅವಾರ್ಡ್ ಬಂತು.ಲತಿಕಾ ಗೆ ನೆಕ್ಸ್ಟ್ ಫಿಲಂ ಗೆ ಚಾನ್ಸ್ ಸಿಕ್ತು.ಅನಿಲ್ ಕಪೂರ್ ಗೆ ಏನೂ ಸಿಕ್ಕಿಲ್ಲ ಆದ್ರೂ ಪುಣ್ಯಾತ್ಮ ಖುಷಿಯಾಗಿದ್ದಾನೆ! ಈಗ ಹೇಳು ರಿಯಲ್ ಸ್ಲಂ ಡಾಗ್ ಗಳಿಗೆ ಏನ್ ಸಿಕ್ತು?
ಸಂದರ್ಶಕ:ಡ್ಯಾನಿ ಏನೂ ಚ್ಯಾರಿಟಿ ಸಂಸ್ಥೆ ಇಟ್ಟಿಲ್ಲ ಸ್ಲಂ ಜನಗಳಿಗೆ ಸಹಾಯ ಮಾಡಲು.ಅವನ ಕೆಲಸ ಫಿಲಂ ಮಾಡೋದು .ಫಿಲಂ ಆದ ಮೇಲೆ ಅದನ್ನು ಅವಾರ್ಡ್ ಗೆ ಕಳಿಸೋದು.ಅವಾರ್ಡ್ ಬಂದ್ರೆ ಅದನ್ನು ತಗೊಂಡು ತಾಜ್ ಹೋಟ್ಲಲ್ಲಿ ಪಾರ್ಟಿ ಮಾಡೋದು.ಅದು ಬಿಟ್ರೆ ಅವನೇನು ಮಾಡೊಕಾಗುತ್ತೆ?ಓಹ್ ಮೇ ಫ್ಲವರ್ ನಲ್ಲಿ ಯಾರೋ ’ನಾವು ನೈಜ ಪರಿಸ್ಥಿತಿಯ ಬಗ್ಗೆ ಬೇಸರ ಪಡೊದಕ್ಕಿಂತ ಸ್ಲಂ ಜನರ ಬದುಕನ್ನು ಅಭಿವೃದ್ಧಿ ಪಡಿಸೋಣ ’ ಅಂದಿದ್ದಕ್ಕೆ ಸಿಟ್ಟು ಬಂತಾ?
ಸಂದೀಪ್:ಇನ್ನೇನ್ ಮತ್ತೆ ಸಿನೆಮ ಮಾಡೊರು ಯಾವತ್ತಾದ್ರೂ ಒಳ್ಳೆ ಉದ್ದೇಶದಿಂದ ಸಿನೆಮಾ ಮಾಡಿದ್ದು ನೋಡಿದ್ದೀಯ?
ಸಂದರ್ಶಕ:ನಿಂದೊಳ್ಳೆ ಗೋಳಾಯ್ತು ಮಾರಾಯ! ಸಿನೆಮ ಅಂದ್ರೆ ಮನರಂಜನೆ .ನೋಡ್ಬೆಕು -ಮರೀಬೇಕು ಅಷ್ಟೆ.
ಸಂದೀಪ್:ಓಹ್ ಹಾಗಾ! ಇನ್ನು ಮುಂದೆ ಟ್ರೈ ಮಾಡ್ತೀನಿ ಕಣ್ಲಾ ಸಿನೆಮಾನ ಸಿನೆಮಾ ಥರ ನೆ ನೋಡೋದಕ್ಕೆ.
ಸಂದರ್ಶಕ:ಈಗ ಹೇಳು ಸಂವಾದ ಹೇಗಿತ್ತು ?
ಸಂದೀಪ್:ಬಹಳ ಚೆನ್ನಾಗಿತ್ತು !ಪರಮೇಶ್ವರ್ ಅದ್ಭುತವಾಗಿ ಮಾತಾಡಿದ್ರು.ಆರತಿ,ಸುಘೋಷ್,ಶ್ರೀಜಾ,ಲೀಲಾ ಸಂಪಿಗೆ ,ಶ್ರೀ,ವಿಕಾಸ್,ಮಂಜುನಾಥ್ ,ಮೋಹನ್ ಎಲ್ಲಾ ಚೆನ್ನಾಗೇ ಮಾತಾಡಿದ್ರು.
ಸಂದರ್ಶಕ:ಹಾಗಿದ್ರೆ ಸ್ಲಂ ಡಾಗ್ ಬಗ್ಗೆ ನಿನ್ನ ಅಭಿಪ್ರಾಯ ಬದಲಾಯ್ತು ಅನ್ನು!
ಸಂದೀಪ್:No Way!! ಡ್ಯಾನಿಯ ಬಗ್ಗೆ ಸಿಟ್ಟಿಲ್ಲ .ಆದ್ರೆ ಏನೋ ಬೇರೆ ರೀತಿಯ ಬೇಸರ ಇದೆ :(
ಸಂದರ್ಶಕ:ಏನು ಬೇಸರ ಹೇಳಪ್ಪ.
ಸಂದೀಪ್:ನನ್ನ ಭಾರತವನ್ನು ಸುಂದರವಾಗಿ ತೋರಿಸಲಾಗಲಿಲ್ಲವಲ್ಲ ಅನ್ನೋ ಬೇಸರ ! ನನ್ನ ಭಾರತದಲ್ಲಿ ಇಷ್ಟೊಂದು ತೊಂದರೆಗಳಿವೆಯಲ್ಲಾ ಅನ್ನೋ ಬೇಸರ ! ನನ್ನ ಬಗ್ಗೆಯೆ ಬೇಸರ!
Monday, January 19, 2009
ಬಂಗುಡೆ ಮೀನಿನ ಫ್ರೈ ಮತ್ತೆ ಐಟಿ ವಿರೋಧಿಗಳು!
ನಿನ್ನೆ ಬಂಗುಡೆ ಮೀನಿನ ಫ್ರೈ ಮಾಡೋಣ ಅನ್ನಿಸಿತು ರೂಮ್ ನಲ್ಲಿ.ಮನೆಗೆ ತಂದು ಫ್ರೈ ಮಾಡೋಣ ಚೆನ್ನಾಗಿರುತ್ತೆ ಅಂದೆ ಸ್ನೇಹಿತನಿಗೆ.ಆದ್ರೆ ಅವನದ್ದು ಒಂದು ಪ್ರಾಬ್ಲೆಮ್ಮು!
ಅವನಿಗೆ ಬಂಗುಡೆ ಮೀನೇನೋ ಚಪ್ಪರಿಸಿ ತಿನ್ನಲು ಇಷ್ಟ ,ಆದ್ರೆ ಅದನ್ನು ಮನೆಗೆ ತಂದು ಮಾಡಬಾರದಂತೆ.ಯಾಕೆ ಅಂತ ಕೇಳಿದ್ರೆ ’ಮೀನೇನೋ ಚೆನ್ನಾಗಿರುತ್ತೆ ಆದ್ರೆ ಸಿಕ್ಕಾಪಟ್ಟೆ ವಾಸನೆ ಮಾರಾಯ’ ಅನ್ನೋದಾ!!!
ಅವನ ವಿಚಾರಧಾರೆ ಕೇಳಿ ಮತ್ತೆ ಐಟಿ ವಿರೋಧಿಗಳ ನೆನಪಾಯ್ತು ನಂಗೆ.
ಅವನಿಗೆ ಚಪ್ಪರಿಸಿ ತಿನ್ನಲು ಬಂಗುಡೆ ಮೀನಿನ ಫ್ರೈ ಬೇಕು ಆದ್ರೆ ಅದರ ವಾಸನೆ ಆಗಲ್ಲ!
ಹಾಗೇ ನಮ್ಮ ಐಟಿ ವಿರೋಧಿ ಸ್ನೇಹಿತರಿಗೆ ಇಂಟರ್ನೆಟ್ ನಲ್ಲಿ ಸರ್ಚ್ ಮಾಡಲು ಗೂಗಲ್ ಬೇಕು ಆದ್ರೆ ಗೂಗಲ್ ಆಫೀಸ್ ಬೆಂಗಳೂರಿನಲ್ಲಿರೋದು ಬೇಡ!
ಮೈಲ್ ಮಾಡಲು ಯಾಹೂ ಬೇಕು ಆದ್ರೆ ಯಾಹೂ ಆಫೀಸು ಮಾತ್ರ ದಯವಿಟ್ಟು ಹೈದರಾಬಾದ್ ನಲ್ಲಿರ್ಲಿ ಅಂತಾರೆ.
ಮಾತಾಡಲು ನೋಕಿಯಾ ಫೋನೇ ಬೇಕು ಆದ್ರೆ ನೋಕಿಯಾ ಆಫೀಸ್ ಏನಾದ್ರೂ ಇಲ್ಲಿ ಮಾಡೋಣ್ವಾ ಅಂದ್ರೆ ’ನೋಓಓಓ ’ !
ಸುಮ್ಮನೆ ಹೇಳಿದೆ ಮಾರಾಯ್ರೆ ಬಯ್ಯಬೇಡಿ !
ನಂಗೆ ಗೊತ್ತು ನಾವೆಲ್ರೂ ಪಟಾಕಿ ಇಷ್ಟಪಡ್ತೀವಿ ಆದ್ರೆ ಪಟಾಕಿ ಫ್ಯಾಕ್ಟರಿ ಮಾತ್ರ ಶಿವಕಾಶಿಯಲ್ಲೇ ಇರ್ಲಿ ಅಂತೀವಿ ಅಂತ....!!!
ಆದ್ರೆ ಈ ವಿಷಯದಲ್ಲಿ ಮಾತ್ರ ನಾನು ರಾಜೀವ್ ದೀಕ್ಷೀತ್ ನ ಇಷ್ಟ ಪಡ್ತೀನಿ .ಯಾಕಂದ್ರೆ ಅವರು ಮೊದಲು ಬಂಗುಡೆ ಮೀನು ತಿನ್ನೋದೇ ಬಿಡ್ತಾರೆ ,ಆಮೇಲೆ ಮೀನು ಬೇಡ ಅಂತಾರೆ.
ಇರ್ಲಿ ಬಿಡಿ ಎಲ್ಲರಿಗೂ ಅವರ ಹಾಗೆ ಇರೋಕಾಗುತ್ತಾ??
ಅವನಿಗೆ ಬಂಗುಡೆ ಮೀನೇನೋ ಚಪ್ಪರಿಸಿ ತಿನ್ನಲು ಇಷ್ಟ ,ಆದ್ರೆ ಅದನ್ನು ಮನೆಗೆ ತಂದು ಮಾಡಬಾರದಂತೆ.ಯಾಕೆ ಅಂತ ಕೇಳಿದ್ರೆ ’ಮೀನೇನೋ ಚೆನ್ನಾಗಿರುತ್ತೆ ಆದ್ರೆ ಸಿಕ್ಕಾಪಟ್ಟೆ ವಾಸನೆ ಮಾರಾಯ’ ಅನ್ನೋದಾ!!!
ಅವನ ವಿಚಾರಧಾರೆ ಕೇಳಿ ಮತ್ತೆ ಐಟಿ ವಿರೋಧಿಗಳ ನೆನಪಾಯ್ತು ನಂಗೆ.
ಅವನಿಗೆ ಚಪ್ಪರಿಸಿ ತಿನ್ನಲು ಬಂಗುಡೆ ಮೀನಿನ ಫ್ರೈ ಬೇಕು ಆದ್ರೆ ಅದರ ವಾಸನೆ ಆಗಲ್ಲ!
ಹಾಗೇ ನಮ್ಮ ಐಟಿ ವಿರೋಧಿ ಸ್ನೇಹಿತರಿಗೆ ಇಂಟರ್ನೆಟ್ ನಲ್ಲಿ ಸರ್ಚ್ ಮಾಡಲು ಗೂಗಲ್ ಬೇಕು ಆದ್ರೆ ಗೂಗಲ್ ಆಫೀಸ್ ಬೆಂಗಳೂರಿನಲ್ಲಿರೋದು ಬೇಡ!
ಮೈಲ್ ಮಾಡಲು ಯಾಹೂ ಬೇಕು ಆದ್ರೆ ಯಾಹೂ ಆಫೀಸು ಮಾತ್ರ ದಯವಿಟ್ಟು ಹೈದರಾಬಾದ್ ನಲ್ಲಿರ್ಲಿ ಅಂತಾರೆ.
ಮಾತಾಡಲು ನೋಕಿಯಾ ಫೋನೇ ಬೇಕು ಆದ್ರೆ ನೋಕಿಯಾ ಆಫೀಸ್ ಏನಾದ್ರೂ ಇಲ್ಲಿ ಮಾಡೋಣ್ವಾ ಅಂದ್ರೆ ’ನೋಓಓಓ ’ !
ಸುಮ್ಮನೆ ಹೇಳಿದೆ ಮಾರಾಯ್ರೆ ಬಯ್ಯಬೇಡಿ !
ನಂಗೆ ಗೊತ್ತು ನಾವೆಲ್ರೂ ಪಟಾಕಿ ಇಷ್ಟಪಡ್ತೀವಿ ಆದ್ರೆ ಪಟಾಕಿ ಫ್ಯಾಕ್ಟರಿ ಮಾತ್ರ ಶಿವಕಾಶಿಯಲ್ಲೇ ಇರ್ಲಿ ಅಂತೀವಿ ಅಂತ....!!!
ಆದ್ರೆ ಈ ವಿಷಯದಲ್ಲಿ ಮಾತ್ರ ನಾನು ರಾಜೀವ್ ದೀಕ್ಷೀತ್ ನ ಇಷ್ಟ ಪಡ್ತೀನಿ .ಯಾಕಂದ್ರೆ ಅವರು ಮೊದಲು ಬಂಗುಡೆ ಮೀನು ತಿನ್ನೋದೇ ಬಿಡ್ತಾರೆ ,ಆಮೇಲೆ ಮೀನು ಬೇಡ ಅಂತಾರೆ.
ಇರ್ಲಿ ಬಿಡಿ ಎಲ್ಲರಿಗೂ ಅವರ ಹಾಗೆ ಇರೋಕಾಗುತ್ತಾ??
Monday, January 12, 2009
ಐಟಿ ಜಗತ್ತು ...
ಹಲವು ವರ್ಷಗಳಿಂದ ಐಟಿ ಉದ್ಯಮದ ಬಗ್ಗೆ ,ಐಟಿ ಉದ್ಯೋಗಿಗಳ ಬಗ್ಗೆ ಹತ್ತು ಹಲವು ಆರೋಪಗಳು ಕೇಳ್ತಾನೇ ಇವೆ.ನಾನ್ಯಾವತ್ತೂ ಅದರ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ .ಆದರೆ ಈಗ ಈ ಸತ್ಯಂ ಅವಾಂತರದಿಂದ ಜನರಿಗೆ ದೂಷಿಸಲು ಹೊಸ ಹುರುಪು ಬಂದಿದೆ!
ನಾನು ಸತ್ಯಂ ಬಗ್ಗೆ ಬರೆಯಲು ಹೊರಟಿಲ್ಲ .ಅದರ ಬಗ್ಗೆ ಈಗ ಮಾತಾಡೋದೂ ಕಷ್ಟ .Amount ಸ್ವಲ್ಪ ದೊಡ್ಡದಲ್ವ!!
ಹಿಂದೊಮ್ಮೆ ಶಶಿಧರ್ ಭಟ್ ಅವರ ಬ್ಲಾಗ್ ನಲ್ಲಿ ’ಪತ್ರಿಕೋದ್ಯಮ ಅಂದ್ರೆ ಐಟಿ-ಬಿಟಿಯಲ್ಲಿ ಕೆಲಸ ಮಾಡಿದ ಹಾಗಲ್ಲ .ಅದಕ್ಕೆ ಅಪಾರ ಕ್ರಿಯಾಶೀಲತೆ ಬೇಕು ’ ಅಂತ ಇಷ್ಟುದ್ದ ಬರೆದಿದ್ರು.ಅವರು ಬರೆದಿದ್ದು ಕಿರಿಯ ಪತ್ರಕರ್ತರಿಗೆ ಬುದ್ಧಿ ಹೇಳಲು. ಒಳ್ಳೆಯ ವಿಚಾರ!
ಆದರೆ ಐಟಿ-ಬಿಟಿ ಯನ್ನು ಯಾಕೆ ಉದಾಹರಣೆಯಾಗಿ ತಗೊಂಡ್ರು ? ಗೊತ್ತಿಲ್ಲ!ಐಟಿ ಜನರಿಗೆ ಪತ್ರಕರ್ತರಷ್ಟು ಕ್ರಿಯಾಶೀಲತೆ ಬೇಕಿಲ್ಲ ಅಂತ ಅವರಿಗೆ ಅನ್ನಿಸಿತೆ? ಅದೂ ಗೊತ್ತಿಲ್ಲ !
ಇದಾದ ಮೇಲೆ ಪ್ರೀತಿಯ ಮಣಿಕಾಂತ್ ’ಸಾಫ್ಟ್ ವೇರ್ ಬಂಧುಗಳಿಗೊಂದು ಪತ್ರ ’ ಅಂತ ತಮ್ಮ ವಿಜಯಕರ್ನಾಟಕದಲ್ಲಿ ಸಿಂಪ್ಲಿಸಿಟಿ ಪೇಜ್ ನಲ್ಲಿ ಬರೆದಿದ್ರು.ಮಣಿಕಾಂತ್ ಬರಹ ನಂಗೆ ತುಂಬಾ ಇಷ್ಟ . ಮಣಿಕಾಂತ್ ರವರದ್ದು ಅಪಾರ ಸ್ಫೂರ್ತಿದಾಯಕ ಬರಹಗಳು.ಅವರ ಬರಹಗಳನ್ನು ಓದಿ ಅದೆಷ್ಟೋ ನೊಂದ ಜೀವಗಳು ಸಾಂತ್ವನ ಪಡೆಯುತ್ತವೆ.ಆದರೆ ಅದೆ ಆಗಿರೋದು ಪ್ರಾಬ್ಲೆಮ್ ಈಗ .ಅವರ ಬರಹ ಓದಿದ ಮೇಲಂತೂ ಜನರು ಐಟಿ ಉದ್ಯೋಗಿಗಳಿಗೆ ಹಿಡಿ ಶಾಪ ಹಾಕೋದಂತೂ ಸತ್ಯ!
ಮಣಿಕಾಂತ್ ರವರು ಸಾಫ್ಟ್ ವೇರ್ ಬಂಧುಗಳಿಗೆ ಬರೆದ ಪತ್ರವನ್ನು ಸಾವಕಾಶವಾಗಿ ಓದಿದೆ .ಸಾಫ್ಟ್ವೇರ್ ಜನರ ಬಗ್ಗೆ ಇರುವ ’ಮಾಮೂಲಿ’ ಅಪವಾದಗಳನ್ನು ಅವರೂ ಹಾಕಿದ್ರು .ಅದೇ,’ ನಿಮ್ಮಿಂದ ಸೈಟ್ ಬೆಲೆ ಜಾಸ್ತಿ ಆಯ್ತು,ಪಬ್ ಸಂಸ್ಕೃತಿ ಶುರು ಆಯ್ತ’ etc etc.
ಇದೆಲ್ಲ ನಂಗೆ ಬೇಜಾರು ತರಿಸಿಲ್ಲ .ಯಾಕಂದ್ರೆ ಈಗ ಚರ್ಮ ಸ್ವಲ್ಪ ದಪ್ಪ ಆಗಿದೆ ಕೇಳಿ ಕೇಳಿ.
ಆದರೆ ಯಾವಾಗ ’ಈ ಸಾಫ್ಟ್ವೇರ್ ಪುಣ್ಯಾತ್ಮರಿಂದ ಅಕ್ಕಿಯ ಬೆಲೆ Rs 35 ಆಯ್ತು ’ ಅಂತ ಬರೆದ್ರೋ, ತಡೆಯೋದಕ್ಕೆ ಆಗಿಲ್ಲ.
ಇದು ಅಕ್ಕಿಯ ಬೆಲೆಯ ಪ್ರಶ್ನೆ ಅಲ್ಲ. ಜನರು ಐಟಿ ಜಗತ್ತಿನ ಬಗ್ಗೆ ಅದೆಷ್ಟು ತಪ್ಪು ಕಲ್ಪನೆ ಇಟ್ಟುಕೊಂಡಿದ್ದಾರೆ ಅನ್ನೋದು ಪ್ರಶ್ನೆ ಇಲ್ಲಿ .
ಅಕ್ಕಿಯ ಬೆಲೆ ಯಾಕೆ Rs35 ಆಯ್ತು ಅನ್ನೋದರ ಬಗ್ಗೆ ಅವರದ್ದೇ ವಿಜಯ ಕರ್ನಾಟಕದಲ್ಲಿ ೨ನೇ ತಾರಿಕಿನಂದು ಒಂದು ಸವಿಸ್ತಾರ ಲೇಖನ ಬಂದಿತ್ತು .ಅದೇ ಸರಕಾರ ಏನೋ ಲೆವಿ ದರ ಹೆಚ್ಚಿಸಿದ್ದರಿಂದಲೋ ಏನೋ -ನಂಗೂ ಸರಿಯಾಗಿ ನೆನಪಿಲ್ಲ ಕಾರಣ! ಆದರೆ ಪ್ರೀತಿಯ ಮಣಿಕಾಂತ್ ಅದನ್ನು ಓದಿಲ್ಲ ಅಂತ ಕಾಣ್ಸುತ್ತೆ.ಅಷ್ಟಕ್ಕೂ ಅಕ್ಕಿಯ ಬೆಲೆ ಬರೀ ಬೆಂಗಳೂರಲ್ಲಷ್ಟೇ ಜಾಸ್ತಿ ಆಗಿದ್ದಿದ್ರೆ ಇದು ಐಟಿಯವರದ್ದೇ ಕರಾಮತ್ತು ಅನ್ನಬಹುದಿತ್ತು .
ನಂಗೆ ಮಣಿಕಾಂತ್ ಬಗ್ಗೆ ಸಿಟ್ಟಿಲ್ಲ.ಆದ್ರೆ ಯಾಕೆ ಜನರು ಸಿಕ್ಕ ಸಿಕ್ಕದ್ದಕ್ಕೆಲ್ಲಾ ಐಟಿ ಜನರನ್ನು ದೂಷಿಸ್ತಾರೆ? ಯಾಕೆ ಐಟಿ ಜನರ ಬಗ್ಗೆ ಏನೂ ಗೊತ್ತಿಲ್ಲದಿದ್ದರೂ ಅಷ್ಟು ಹಗುರವಾಗಿ ಮಾತಾಡ್ತಾರೆ?
ಒಬ್ಬ ಆಟೋ ಚಾಲಕ ಹೇಳ್ತಾ ಇದ್ದ ’ಈ ಬಡ್ಡಿ ಮಕ್ಕಳು ಇಲ್ಲಿಗೆ ಬಂದಿರೋದ್ರಿಂದಾನೇ ಬೆಂಗಳೂರು ಈ ಪರಿ ಹಾಳಾಗಿರೋದು ’ ಅಂತ!
ಅವನ ಸಿಟ್ಟಿಗೆ ಕಾರಣ ಇದೆ ನಿಜ .ಆದರೆ ಅದೇ ಜನರೇ ಅಲ್ವ ಅವನಿಗೊಂದು ತುತ್ತಿಗೆ ಅವಕಾಶ ಮಾಡಿಕೊಟ್ಟಿರೋದು,ಇಲ್ಲಾಂದ್ರೆ ಆಟೋದಲ್ಲೇನು ಎಳನೀರು ಮಾರ್ತಾ ಇದ್ನಾ ಅವನು?
ಬಹಳಷ್ಟು ಜನರಿಗೆ ಗೊತ್ತಿಲ್ಲದ ಒಂದು ವಿಷಯ ಇದೆ .ಅದೇನಂದ್ರೆ ಬೆಂಗಳೂರಿನಲ್ಲಿ ಐಟಿ ಉದ್ಯಮಕ್ಕಿಂತ ಗಾರ್ಮೆಂಟ್ ಉದ್ಯಮ ಪ್ರಾಬಲ್ಯ ಪಡೆದಿದೆ.ಇಲ್ಲಿರೋ ಐಟಿ ಜನರು ಅಷ್ಟೂ ಜನಸಂಖ್ಯೆಯ ತೀರಾ ಚಿಕ್ಕ ಪ್ರಮಾಣಕ್ಕೆ ಸೇರ್ತಾರೆ ಅನ್ನೋದು.ಆದ್ರೂ ಜನ ಯಾಕೆ ಐಟಿ ಜನರ ಬಗ್ಗೇನೇ ಮಾತಾಡ್ತಾರೆ?ಅವರಿಗೆ ಸಿಗೋ ಸಂಬಳದಿಂದಾಗಾ?
ಐಟಿ ಉದ್ಯೋಗಿಯೊಬ್ಬನಿಗೆ ಅಬ್ಬಬ್ಬಾ ಅಂದ್ರೆ 20,000Rs ಸಿಗುತ್ತೆ ಅಂದುಕೊಳ್ಳಿ. ದೊಡ್ಡ ಸಂಬಳಾನೇ .ಆದ್ರೆ ಬರೀ ಒಂದು ಸಿನೆಮಾಗೆ ನಟಿಸಿದ್ರೆ ಗಣೇಶ್ ಗೆ ೫೦ ಲಕ್ಷ ಸಿಗಲ್ವ? ಇನ್ನೂ ಮೀಸೆ ಸರಿಯಾಗೆ ಬರದೇ ಇದ್ರೂ ಪ್ರಜ್ವಲ್ ದೇವರಾಜ್ ಲಕ್ಷ ಲಕ್ಷ ಎಣಿಸ್ತಾ ಇಲ್ವ?
ಬರೀ ಒಂದು ಮ್ಯಾಚ್ ಆಡಿ ಅಥವಾ ಒಂದು ಜಾಹೀರಾತಿನಲ್ಲಿ ಮುಖ ತೋರಿಸಿ ದ್ರಾವಿಡ್ ಕೋಟಿ ಕೋಟಿ ಎಣಿಸಲ್ವ?ಬರೀ ಹೋಟೆಲ್ ಇಟ್ಟು ಅಡಿಗರು ಲಕ್ಷ ಲಕ್ಷ ಎಣಿಸಲ್ವ? ಬರೀ ಒಂದು ಪುಸ್ತಕ ಬರೆದು ಅರವಿಂದ ಅಡಿಗ ಲಕ್ಷಾಧಿಪತಿ ಆಗಿಲ್ವ?
ಮೆಜೆಸ್ಟಿಕ್ ನಲ್ಲಿ ಕಬ್ಬಿನ ಹಾಲು ಮಾರಿಯೆ ಅದೆಷ್ಟು ಜನ ದಿನಕ್ಕೆ ಸಾವಿರ ಗಳಿಸಲ್ಲ? ಯಶವಂತಪುರದ ಬಾರ್ ಒಂದರಲ್ಲಿ ಅದೆಷ್ಟು ಸಾವಿರ ದಿನಗಳಿಕೆ ಆಗಲ್ಲ?ಕೆ.ಅರ್ ಮಾರ್ಕೆಟ್ ನಲ್ಲಿ ಪೈರೇಟೆಡ್ ಸಿಡಿ,ಡಿವಿಡಿ ಮಾರಿ ಅದೆಷ್ಟು ಜನ ಶ್ರೀಮಂತರಾಗಿಲ್ಲ ?
ಉಳಿದ ಉದ್ಯೋಗಗಳಲ್ಲೂ ಸಾವಿರಾರು ಜನರು ಲಕ್ಷಾಂತರ ರೂ ಗಳನ್ನು ಗಳಿಸ್ತಾರೆ.ಅದರ ಮುಂದೆ ಐಟಿ ಉದ್ಯೋಗಿಗಳು ಪುಟಗೋಸಿಗೆ ಸಮಾನ!
ಆದ್ರೂ ಜನರಿಗೆ ಬರೀ ಐಟಿಯವರ ಬಗ್ಗೆ ಅಸಮಧಾನ!
ಮಲ್ಟಿಪ್ಲೆಕ್ಸ್ ಸಂಸ್ಕೃತಿಯಿಂದ ಬೆಂಗಳೂರು ಹಾಳಾಯ್ತು ಅನ್ನೋದು ಎಲ್ಲರ ಆರೋಪ.ಆದ್ರೆ ಯಾವುದೇ ಮಲ್ಟಿಪ್ಲೆಕ್ಸ್ ಗೆ ಹೋಗಿ ನೋಡಿ. ಅಲ್ಲಿ ಸಾಫ್ಟ್ವೇರ್ ಅದ್ಯೋಗಿಗಳು ಕಡಿಮೆ ದೇಶದ ಯುವಶಕ್ತಿಯಾದ ಕಾಲೇಜು ವಿದ್ಯಾರ್ಥಿಗಳೇ ಜಾಸ್ತಿ ಕಾಣ್ತಾರೆ.ಆದ್ರೆ ಅವರನ್ನು ಯಾರೂ ಗಮನಿಸಲ್ಲ -ಪಾಪ ಚಿಕ್ಕವ್ರಲ್ಲ!
ಅಷ್ಟಕ್ಕೂ ಐಟಿ ಉದ್ಯೋಗಿಗಳು ತಮ್ಮ ಸ್ವಂತ ದುಡಿಮೆಯನ್ನಲ್ವ ಉಡಾಯಿಸೋದು ,ಸ್ವಲ್ಪ ಹುಶಾರಾಗೇ ಉಡಾಯಿಸ್ತಾರೆ! ಆದ್ರೆ ’ಅಪ್ಪನ ಕಾಸನ್ನು ಉಡಾಯಿಸೊದ್ರಲ್ಲಿರೋ ಮಜಾ ಬೇರೇನೇ’ ಅಂದುಕೊಂಡಿರೋ ವಿದ್ಯಾರ್ಥಿಗಳ ಬಗ್ಗೆ ಯಾರಿಗೂ ಕಂಪ್ಲೇಂಟ್ ಇಲ್ಲ.ಯಾಕಂದ್ರೆ ನಮಗೆ ಐಟಿಯವರಿದ್ದಾರಲ್ವ ದೂರೋದಕ್ಕೆ!
’ಬೆಂಗಳೂರಿನಲ್ಲಿ ಸೈಟ್ ಬೆಲೆ ತೀರಾ ಕಮ್ಮಿ ಇತ್ತು ,ಆದ್ರೆ ನಿಮ್ಮಿಂದಾಗಿ ಈ ಬೆಲೆ ಗಗನಕ್ಕೇರಿದೆ ’ಅನ್ನೋ ಆರೋಪವನ್ನೂ ನಾವೇ ಭರಿಸಬೇಕು!
ಆದ್ರೆ ಮುಂಬೈಗೇನಾಗಿದೆ ಅಲ್ಲಿ ಐಟಿ ಧೂರ್ತರಿಲ್ವಲ್ಲ? ಅಲ್ಲೂ ಯಾಕೆ ಸೈಟ್ ಬೆಲೆ ಅಷ್ಟು ದುಬಾರಿ?
’ನೀವು ಐಟಿಯವರು ಕೇಳಿದಷ್ಟು ದುಡ್ಡು ಕೊಡ್ತೀರಾ ಅದಕ್ಕೇ ಈ ರೀತಿ ಆಗಿದ್ದು ’ ಅಂತಾರೆ -ಆದ್ರೆ ಅದರಿಂದ ಲಾಭ ಆಗಿದ್ದು ಯಾರಿಗೆ?
ಜಯನಗರದಲ್ಲಿ ನಾಲಕ್ಕು ಸೈಟ್ ಇದೆ ಅಂದುಕೊಳ್ಳಿ.ಪಾಪ ಮಧ್ಯಮ ವರ್ಗದ ಕುಟುಂಬ .ಆ ನಾಲ್ಕು ಸೈಟ್ ಕೊಳ್ಳಲು ನಾಲ್ಕು ಜನ ಐಟಿ ಧೂರ್ತರು ಆಸೆ ಪಡ್ತಾರೆ ಅಂದುಕೊಳ್ಳಿ.
ಹಾಗೆ ಅವರು ಸೈಟ್ ತಗೊಂಡ್ರೆ ಏನಾಗುತ್ತೆ ? ಜಯನಗರದ ಮಧ್ಯಮವರ್ಗದ ನಾಲಕ್ಕು ಜನ ರಾತ್ರೋ ರಾತ್ರಿ ಶ್ರೀಮಂತ ವರ್ಗಕ್ಕೆ ಸೇರ್ತಾರೆ. ಅದೇ ಶ್ರೀಮಂತ ವರ್ಗಕ್ಕೆ ಸೇರಿದ್ದಾರೆ ಅಂತ ನಾವು ಅಂದುಕೊಂಡ ನಾಲ್ಕು ಐಟಿ ಧೂರ್ತರಿಗೆ ರಾತ್ರೋ ರಾತ್ರಿ ತಲಾ ಅರವತ್ತು ಲಕ್ಷ ಸಾಲದ ಹೊರೆ! ಅದೂ ಒಂದೆರಡು ವರ್ಷ ಅಲ್ಲ - ಇಪ್ಪತ್ತು ವರ್ಷ !! ಈಗ ಹೇಳಿ ಯಾರಿಗೆ ಒಳಿತಾಯ್ತು?
ನೆಲಮಂಗಲದಲ್ಲಿ ಪಟ್ಟಾಪಟ್ಟಿ ಚಡ್ಡಿ ಹಾಕ್ಕೊಂಡು ಆಲದ ಮರದ ಕೆಳಗೆ ಟೈಂ ಪಾಸ್ ಮಾಡ್ತಾ ಇದ್ದ ಗೌಡ್ರೂ ಈಗ ಶ್ರೀಮಂತರಾಗಿದ್ದಾರೆ .ಆದ್ರೆ ಅವರ ಜಾಗದಲ್ಲಿ ಅಪಾರ್ಟ್ಮೆಂಟ್ ಕೊಂಡ ನಮ್ಮ ಸಾಫ್ಟ್ವೇರ್ ಹೀರೋಗೆ ಇಪ್ಪತ್ತು ವರ್ಷ ಸಾಲದ ಹೊರೆ!
ಐಟಿಯಿಂದ ನಾಲಕ್ಕು ಜನ ಮಧ್ಯಮ ವರ್ಗದವ್ರಿಗೆ ಸೈಟ್ ಕೊಳ್ಳದೇ ಇರೋ ಹಾಗೆ ಆಗಿದೆ ನಿಜ.ಆದ್ರೆ ಅದರ ಜೊತೆಗೆ ನಾಲಕ್ಕು ಮಧ್ಯಮ ವರ್ಗದವರನ್ನು ರಾತ್ರೊ ರಾತ್ರಿ ಶ್ರೀಮಂತರನ್ನಾಗಿಸಿದ್ದೂ ಅಷ್ಟೇ ನಿಜ!ಐಟಿ ಜನರಿಂದಾಗಿ ಕಡಿಮೆ ಬಾಡಿಗೆಗೆ ಮನೆ ಸಿಗದೇ ಇರೋದು ಎಷ್ಟು ನಿಜವೋ ,ಇದೇ ಐಟಿ ಜನರಿಗೆ ದುಬಾರಿ ಬೆಲೆಗೆ ಮನೆ ಬಾಡಿಗೆಗೆ ನೀಡಿ ಅದೆಷ್ಟೋ ಮಧ್ಯಮ ವರ್ಗದವರು ಏನೂ ಕೆಲಸ ಮಾಡದೆ ಮನೇಲೇ ಕೂತು ಮಜಾ ಮಾಡ್ತಾ ಇರೋದೂ ಅಷ್ಟೇ ನಿಜ!
ನಾವು ಅನಾವಶ್ಯಕವಾಗಿ ಯಾವಾಗ್ಲೂ ಐಟಿಯವರನ್ನು ದೂರ್ತಾ ಇರ್ತೀವಿ.ಅವರಿಗಿಂತ ವೈಭವೋಪೇತ ಜೀವನ ನಡೆಸ್ತಾ ಇರೋರು ಅದೆಷ್ಟೋ ಜನ ಇದ್ದಾರೆ .ನಮಗವರು ಕಾಣಿಸೋದೇ ಇಲ್ಲ.
ಒಬ್ಬ ಸಾಫ್ಟ್ವೇರ್ ಉದ್ಯೋಗಿ ವಾರಾಂತ್ಯದಲ್ಲಿ ಮಲ್ಟಿಪ್ಲೆಕ್ಸ್ ಗೆ ಹೋಗಿ ಮಜಾ ಉಡಾಯಿಸಿದ ಅಂತಾನೇ ಅಂದುಕೊಳ್ಳೋಣ.ಆದ್ರೆ ಅವನಿಗಿಂತ ಜಾಸ್ತಿ ದುಡ್ಡು ಖರ್ಚು ಮಾಡೋರು ನಮ್ಮ ಲೋಕಲ್ ಬಾರಲ್ಲೇ ಸಿಗ್ತಾರೆ.ಅವರು ನಮಗೆ ಕಾಣಿಸಲ್ಲ.ಮಾದೇಶ ಚಿತ್ರದ ನಿರ್ಮಾಪಕ ಗೋವರ್ಧನ್ಮೂರ್ತಿ ದಿನಕ್ಕೆ ಎರಡು ಲಕ್ಷ ಖರ್ಚು ಮಾಡ್ತಾ ಇದ್ನಂತೆ ! ಆದ್ರೆ ನಮಗೆ ಅದರ ಬಗ್ಗೆ ಆಸಕ್ತಿ ಇಲ್ಲ .
ಅಷ್ಟಕ್ಕೂ ನಮಗೆ ಸಾಫ್ಟ್ ವೇರ್ ಹುಡುಗ ಪಿವಿಅರ್ ಗೆ ಹೋಗಿ ಐನೂರು ರುಪಾಯಿಯ ಸಿನೆಮಾ ನೋಡಿದ ಅನ್ನೋದರ ಬಗ್ಗೆ ಆಕ್ಷೇಪ ಇದೆ.ಆದರೆ ಮಟ ಮಟ ಮಧ್ಯಾಹ್ನ ಸಾಗರ್ ಥಿಯೇಟರ್ ನಲ್ಲಿ ’ಹಾಗೆ ಸುಮ್ಮನೆ ’ ಚಿತ್ರಕ್ಕೆ ’ಬಾಲ್ಕನಿ ನೂರೈವತ್ತು ,ಬಾಲ್ಕನಿ ನೂರೈವತ್ತು’ ಅನ್ನುವವನ ಬಗ್ಗೆ ಆಕ್ಷೇಪ ಇಲ್ಲ .ಯಾಕಂದ್ರೆ ಪಾಪ ಬಡವರಲ್ವ ಬ್ಲ್ಯಾಕ್ ನಲ್ಲಿ ಮಾರೋರು!
ನೀವು ಪಿವಿಅರ್ ಗೆ ಹೋಗಿ ನೂರು ರುಪಾಯಿಯಲ್ಲಿ ಸಿನೆಮಾ ನೋಡಬಹುದು. ಆದ್ರೆ ಸಾಗರ್ ನಲ್ಲಿ ರವಿವಾರ ಹೋಗಿ ನೋಡಿ ,ನೂರೈವತ್ತಕ್ಕೆ ಕಮ್ಮಿಯಲ್ಲಿ ಟಿಕೆಟ್ ಸಿಕ್ರೆ ಆಮೇಲೆ ಹೇಳಿ.
ಈ ಎಲ್ಲಾ ಅಧ್ವಾನಕ್ಕೆ ಕಾರಣ ಐಟಿಯವರು ಗಳಿಸುತ್ತಿರುವ ಸಂಬಳ ಅಂದುಕೊಂಡಿದ್ದೆ ನಾನು .ಆದರೆ ಕಾರಣ ಅದಲ್ಲ ! ಕಾರಣ ಏನೂಂತ ನಂಗೂ ಗೊತ್ತಿಲ್ಲ! ಗೊತ್ತಿದ್ರೆ ನೀವು ಹೇಳಿ !
ಬಹಳಷ್ಟು ಜನರಿಗೆ ಐಟಿ ಕಂಪೆನಿಗಳ ಬಗ್ಗೆ ಸರಿಯಾಗಿ ಗೊತ್ತಿರದೇ ಇರೋದೇ ಬಹುಷಃ ಒಂದು ಕಾರಣ ಅನ್ಸುತ್ತೆ.
ಐಟಿ ಅಂದ್ರೆ ಬರೀ ಇಂಜಿನಿಯರ್ಸ್ ಅಲ್ಲ.ಅಲ್ಲಿ ಇಂಜಿನಿಯರಗಳಷ್ಟೇ ಬೇರೆ ವಿಭಾಗದ ಜನರು ಕೆಲಸ ಮಾಡ್ತಾರೆ ಅನ್ನೋದು ಬಹಳಷ್ಟು ಜನರಿಗೆ ಗೊತ್ತಿಲ್ಲ.
ಎಲ್ಲಾ ಐಟಿ ಕಂಪೆನಿಗಳಲ್ಲೂ finance department,HR Department ,Travels Department ಗಳೆಲ್ಲಾ ಇವೆ.ಈ ವಿಭಾಗಗಳಲ್ಲಿ ಕೆಲಸ ಮಾಡೋರು ಯಾರೂ ಇಂಜಿನಿಯರ್ಗಳಲ್ಲ-ಆದ್ರೂ ಅವರು ಇಂಜಿನಿಯರ್ಗಳಷ್ಟೇ ಸಂಬಳ ಪಡೀತಾರೆ.
ಒಂದು ಐಟಿ ಕಂಪೆನಿಯಲ್ಲಿ ಸಾವಿರ ಜನ ಇಂಜಿನಿಯರ್ ಗಳಿದ್ರೆ .ಅವರು ಓಡಾಡೋದಿಕ್ಕೆ ವಾಹನಗಳ ಡ್ರೈವರ್ ಗಳು,ಬಿಲ್ಡಿಂಗ್ ಸೆಕ್ಯೂರಿಟಿ,ಕ್ಯಾಂಟೀನ್,ಆಫಿಸ್ ನಿರ್ವಹಣೆಗೆ ಅಂತೆಲ್ಲ ಸೇರಿಸಿದ್ರೆ ಇಂಜಿನಿಯರ್ಗಳಿಗಿಂತ ಜಾಸ್ತಿ ಅವಕಾಶಗಳಿವೆ.
ಡಿಗ್ರಿ ಮುಗಿಸಿ ಕೆಲ್ಸ ಸಿಗದೆ ಅದೆಷ್ಟೋ ಜನ ಇಂಥ ಐಟಿ ಕಂಪೆನಿಗಳಲ್ಲಿ ಸೆಕ್ಯೂರಿಟಿ ಕೆಲ್ಸ ಮಾಡ್ತಾ ಇದ್ದಾರೆ.ತುಂಬಾ ಬೇಸರದ ಸಂಗತಿ .ಆದ್ರೆ ಖುಷಿ ಪಡೋ ಸಂಗತಿ ಅಂದ್ರೆ ಅದಾದ್ರೂ ಸಿಗ್ತಲ್ವ ಈ ಐಟಿಯಿಂದಾಗಿ ಅನ್ನೋದು.ಇಲ್ಲಾಂದ್ರೆ ಮನೆಯಲ್ಲಿ ತಾನೆ ಇರ್ಬೇಕು ಡಿಗ್ರಿ ಮುಗಿಸಿದ್ರೂ?
ಐಟಿ ಕಂಪೆನಿಗಳಲ್ಲಿ ಉದ್ಯೋಗಿಗಳು ಮುಖ-ತಿಕ ಒರೆಸೋ ಟಿಷ್ಯೂ ಪೇಪರ್ ತಯಾರಿಸಿ/ಮಾರಿಯೇ ಅದೆಷ್ಟು ಚಿಕ್ಕ ಪುಟ್ಟ ಕಂಪೆನಿಗಳು ಲಾಭ ಮಾಡ್ತಾವೆ ಗೊತ್ತಾ?
ಇನ್ಫೋಸಿಸ್ ಒಂದನ್ನೇ ನಂಬಿ ಅದೆಷ್ಟು ಡ್ರೈವರ್ ಗಳು ನೆಮ್ಮದಿಯ ಜೀವನ ಸಾಗಿಸ್ತಾ ಇಲ್ಲ ?
ಈ ಐಟಿ ಉದ್ಯಮ ಐಟಿ ಉದ್ಯೋಗಿಗಳಿಗೆ ಎಷ್ಟು ನೆಮ್ಮದಿ ಕೊಟ್ಟಿದೆಯೋ ಅಷ್ಟೇ ನೆಮ್ಮದಿ ಅದನ್ನು ಪರೋಕ್ಷವಾಗಿ ನಂಬಿಕೊಂಡಿರುವ ಇತರರಿಗೂ ನೀಡಿದೆ.
ಈ ಐಟಿ ನಮಗೆ ನೀಡಿರುವ ಸವಲತ್ತುಗಳನ್ನು ನಾವು ನೆನೆಯದಿದ್ರೆ ಕೃತಘ್ನರಾಗ್ತೀವಿ ಅಷ್ಟೆ.
ಗೂಗಲ್,ಯಾಹೂ ,ಕೆಂಡಸಂಪಿಗೆ,ಸಂಪದ,ಬ್ಲಾಗ್ಸ್ಪಾಟ್, ವರ್ಡ್ ಪ್ರೆಸ್ಸ್ ಇವುಗಳೆಲ್ಲಾ ಐಟಿ ಜಗತ್ತಿನ ಕೊಡುಗೆ.ನಾವು ಬಳಸೋ ಟಿ.ವಿ ,ರೇಡಿಯೋ ,ಮೈಕ್ರೋವೇವ್ ಓವನ್,ಫ್ರಿಡ್ಜ್ , ಇವು ಎಲ್ಲಾ ಕೆಲಸ ಮಾಡೋದೂ ಸಾಫ್ಟ್ ವೇರ್ ನಿಂದಾಗೇ.
ಅಷ್ಟೆಲ್ಲ ಬಿಡಿ ಪಲ್ಸರ್ ಬೈಕ್ ನಲ್ಲಿ ಇಂಜಿನ್ ಗೆ ಎಷ್ಟು ಹನಿ ಪೆಟ್ರೋಲ್ ಕಳಿಸಬೇಕು ಅನ್ನೋದನ್ನು ನಿರ್ಧರಿಸೋದೂ ಅದರಲ್ಲಿರೋ ಸಾಫ್ಟ್ ವೇರ್!
ಆಸ್ಪತ್ರೆಗಳಿಗೆ ಹೋದ್ರೆ ಅಲ್ಲಿರೋ ಎಲ್ಲಾ ಉಪಕರಣಗಳೂ ಸಾಫ್ಟ್ ವೇರ್ ನಿಂದ ನಿಯಂತ್ರಿಸಲ್ಪಡೋದು.ಭಾರತದ ಡಾಕ್ಟರ್ ಗಳು ಇಷ್ಟು ನಿಪುಣರಾಗಿರೋದಕ್ಕೆ ವೈದ್ಯಕೀಯ ರಂಗದಲ್ಲಿ ಉಪಯೋಗಿಸಲ್ಪಡುವ ಸಾಫ್ಟ್ ವೇರ್ ಗಳ ಪಾಲೂ ಮಹತ್ವವಾದದ್ದು.
ಗುರುಕಿರಣ್ ಅಷ್ಟು ಸುಮಧುರವಾದ ಸಂಗೀತ ನೀಡಲು ಕಾರಣ ಕೂಡಾ ಸಾಫ್ಟ್ ವೇರ್ ! ನಂಬಿಕೆ ಬಂದಿಲ್ಲ ಅಂದ್ರೆ ಅವರನ್ನ ಕೇಳಿ.ಸಾಫ್ಟ್ ವೇರ್ ಬಳಸಿ ಅತ್ಯದ್ಭುತವಾಗಿ ಸಂಗೀತಕ್ಕೊಂದು ರೂಪ ಕೊಡಬಹುದು.
ಮೊನ್ನೆ ಇಸ್ರೋದವರು ಕಳಿಸಿದ ಚಂದ್ರಯಾನದ ಒಂದೊಂದು ಹೆಜ್ಜೆಯನ್ನ ನಿಯಂತ್ರಿಸಿದ್ದೂ ಸಾಫ್ಟ್ ವೇರ್ .ಇನ್ನು ಮೇಲೆ ನಿಯಂತ್ರಿಸುವುದೂ ಸಾಫ್ಟ್ ವೇರ್. ನಮಗೆ ಗೊತ್ತಿಲ್ಲ ಅಷ್ಟೇ !
ಪತ್ರಿಕಾ ರಂಗದಲ್ಲಿ ಇಷ್ಟೊಂದು ಕ್ರಾಂತಿ ಉಂಟಾಗೋದಕ್ಕೂ ಕಾರಣ ಇದೇ ಸಾಫ್ಟ್ ವೇರ್ ಅಲ್ವೇ? ಇಲ್ಲಂದ್ರೆ ಇವತ್ತಿಗೂ ಮೊಳೆ ಜೋಡಿಸಿಯೇ ಇರ್ಬೇಕಾಗಿತ್ತು !
ಸಾಫ್ಟ್ ವೇರ್ ಎಲ್ಲವನ್ನೂ ಮಾಡಲ್ಲ ಆದ್ರೆ ಬಹಳಷ್ಟನ್ನು ಮಾಡುತ್ತೆ .ನಮ್ಮ ಬದುಕನ್ನು ಮತ್ತಷ್ಟು ಮಧುರಗೊಳಿಸಿದ ಈ ಸಾಫ್ಟ್ ವೇರ್ ಜಗತ್ತನ್ನು,ಸಾಫ್ಟ್ ವೇರ್ ಉದ್ಯೋಗಿಗಳನ್ನು ನಾವು ಹೊಗಳದಿದ್ರೂ ಪರ್ವಾಗಿಲ್ಲ -ತೆಗಳೋದು ತಪ್ಪಲ್ವಾ??
ದಯವಿಟ್ಟು ಯೋಚಿಸಿ !
Thursday, January 8, 2009
ನಾನು ಕವಿಯಲ್ಲ ...!!
ನಾನು ಕವಿಯಲ್ಲ...
ನಾಲ್ಕು ತುಂಡು ಮಾಡಿದರೆ ಗದ್ಯ
ಅದಾಗುವುದು ಪದ್ಯ !!
ನನಗೂ ಈ ರಹಸ್ಯ ಗೊತ್ತಿರಲಿಲ್ಲ..
ಪ್ರತಾಪ್ ಸಿಂಹ ಹೇಳಿದರು ಸಧ್ಯ......
ಇದು ನಾನು ಕವಿ ಅಂತ ತಪ್ಪು ತಿಳಿದಿರುವ ಹರೀಶ್ ಮತ್ತು ಚೇತನಾರಿಗೆ ಸ್ಪಷ್ಟೀಕರಣ!!
ನಾಲ್ಕು ತುಂಡು ಮಾಡಿದರೆ ಗದ್ಯ
ಅದಾಗುವುದು ಪದ್ಯ !!
ನನಗೂ ಈ ರಹಸ್ಯ ಗೊತ್ತಿರಲಿಲ್ಲ..
ಪ್ರತಾಪ್ ಸಿಂಹ ಹೇಳಿದರು ಸಧ್ಯ......
ಇದು ನಾನು ಕವಿ ಅಂತ ತಪ್ಪು ತಿಳಿದಿರುವ ಹರೀಶ್ ಮತ್ತು ಚೇತನಾರಿಗೆ ಸ್ಪಷ್ಟೀಕರಣ!!
Tuesday, January 6, 2009
ಏಕಾಂಗಿ...
पेहलॆ कभी तनहाई सॆ बच्नॆ कॆ लिऎ पिया कर्तॆ थॆ हम...
आज पीनॆ कॆ लिऎ ही तनहा तनहा रहतॆं हैं ॥
-संदीप कामत
ಹಿಂದೆ ಏಕಾಂತವ ಕಳೆಯಲೆಂದು ಕುಡಿಯುತ್ತಿದ್ದೆ ....
ಇಂದು ಕುಡಿಯಲೆಂದೇ ಏಕಾಂಗಿಯಾಗಿರುವೆ.......
-ಸಂದೀಪ್ ಕಾಮತ್
आज पीनॆ कॆ लिऎ ही तनहा तनहा रहतॆं हैं ॥
-संदीप कामत
ಹಿಂದೆ ಏಕಾಂತವ ಕಳೆಯಲೆಂದು ಕುಡಿಯುತ್ತಿದ್ದೆ ....
ಇಂದು ಕುಡಿಯಲೆಂದೇ ಏಕಾಂಗಿಯಾಗಿರುವೆ.......
-ಸಂದೀಪ್ ಕಾಮತ್
Monday, January 5, 2009
ಆಸೆ...
तॆरी इन गहरी आंखॊं मॆ तैरनॆ की चाह हे
डर्ता हूं कहीन डूब ना जावूं
तुम से मोहब्बत कर्नॆ की आस हे
डर्ता हूं कहीन पत्नी सॆ मार न खावूं ॥
-संदीप कामत
ನಿನ್ನ ಆ ಕಂಗಳಲ್ಲಿ ತೇಲುವ ಆಸೆ ಇದೆ
ಹೆದರುವೆ ಎಲ್ಲಿ ಮುಳುಗುವೆನೆಂದು,
ನಿನ್ನ ಮನತುಂಬಾ ಪ್ರೀತಿಸಲು ಮನಸ್ಸಿದೆ
ಹೆದರುವೆ ಹೆಂಡತಿ ಗದರುವಳೆಂದು ॥
-ಸಂದೀಪ್ ಕಾಮತ್
डर्ता हूं कहीन डूब ना जावूं
तुम से मोहब्बत कर्नॆ की आस हे
डर्ता हूं कहीन पत्नी सॆ मार न खावूं ॥
-संदीप कामत
ನಿನ್ನ ಆ ಕಂಗಳಲ್ಲಿ ತೇಲುವ ಆಸೆ ಇದೆ
ಹೆದರುವೆ ಎಲ್ಲಿ ಮುಳುಗುವೆನೆಂದು,
ನಿನ್ನ ಮನತುಂಬಾ ಪ್ರೀತಿಸಲು ಮನಸ್ಸಿದೆ
ಹೆದರುವೆ ಹೆಂಡತಿ ಗದರುವಳೆಂದು ॥
-ಸಂದೀಪ್ ಕಾಮತ್
ನಿನ್ನ ಈ ತುಂಟ ನಗು...
ನಿನ್ನ ಈ ತುಂಟ ನಗು ಅದೆಷ್ಟು ಜನರನ್ನು ಕೊಂದಿದೆ
ಸಧ್ಯ ಬದುಕಿದೆ ನಾ
ನೀ ನನ್ನ ನೋಡಿ ನಗುವುದೇ ಇಲ್ಲ ......
ಸಧ್ಯ ಬದುಕಿದೆ ನಾ
ನೀ ನನ್ನ ನೋಡಿ ನಗುವುದೇ ಇಲ್ಲ ......
Saturday, January 3, 2009
ಕಣ್ಣೀರು.......
मॆरि आसूंवॊं की हर एक बूंद मॆं
तॆरी तस्वीर नझर आती हॊ
ज्ब भी तुम्हॆ दॆखनॆ की चाह हॊ
यूं ही आसूं बह जाती हॆ ॥
-संदीप कामत
ನನ್ನ ಕಣ್ಣೀರಿನ ಪ್ರತಿ ಹನಿಗಳಲ್ಲೂ ನಿನ್ನ ಚಿತ್ರವಿದೆ....
ನಿನ್ನ ನೋಡಬೇಕಿನಿಸಿದಾಗಲೆಲ್ಲ ಅಳುವೆ ನಾನದಕೆ .....
-ಸಂದೀಪ್ ಕಾಮತ್
ಚಿತ್ರ ಕೃಪೆ :http://www.flickr.com/photos/almaha/8512554/
Thursday, January 1, 2009
ಜಗವೆಲ್ಲ ಮಲಗಿರಲು........
ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ....
ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ............
ಯಾಕಂದ್ರೆ ಅವನು ಕಾಲ್ ಸೆಂಟರ್ ನಲ್ಲಿ ಕೆಲಸಕ್ಕಿದ್ದ.......
-ಸಂದೀಪ್ ಕಾಮತ್.
ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ............
ಯಾಕಂದ್ರೆ ಅವನು ಕಾಲ್ ಸೆಂಟರ್ ನಲ್ಲಿ ಕೆಲಸಕ್ಕಿದ್ದ.......
-ಸಂದೀಪ್ ಕಾಮತ್.
Subscribe to:
Posts (Atom)