Monday, January 12, 2009

ಐಟಿ ಜಗತ್ತು ...ಹಲವು ವರ್ಷಗಳಿಂದ ಐಟಿ ಉದ್ಯಮದ ಬಗ್ಗೆ ,ಐಟಿ ಉದ್ಯೋಗಿಗಳ ಬಗ್ಗೆ ಹತ್ತು ಹಲವು ಆರೋಪಗಳು ಕೇಳ್ತಾನೇ ಇವೆ.ನಾನ್ಯಾವತ್ತೂ ಅದರ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ .ಆದರೆ ಈಗ ಈ ಸತ್ಯಂ ಅವಾಂತರದಿಂದ ಜನರಿಗೆ ದೂಷಿಸಲು ಹೊಸ ಹುರುಪು ಬಂದಿದೆ!
ನಾನು ಸತ್ಯಂ ಬಗ್ಗೆ ಬರೆಯಲು ಹೊರಟಿಲ್ಲ .ಅದರ ಬಗ್ಗೆ ಈಗ ಮಾತಾಡೋದೂ ಕಷ್ಟ .Amount ಸ್ವಲ್ಪ ದೊಡ್ಡದಲ್ವ!!

ಹಿಂದೊಮ್ಮೆ ಶಶಿಧರ್ ಭಟ್ ಅವರ ಬ್ಲಾಗ್ ನಲ್ಲಿ ’ಪತ್ರಿಕೋದ್ಯಮ ಅಂದ್ರೆ ಐಟಿ-ಬಿಟಿಯಲ್ಲಿ ಕೆಲಸ ಮಾಡಿದ ಹಾಗಲ್ಲ .ಅದಕ್ಕೆ ಅಪಾರ ಕ್ರಿಯಾಶೀಲತೆ ಬೇಕು ’ ಅಂತ ಇಷ್ಟುದ್ದ ಬರೆದಿದ್ರು.ಅವರು ಬರೆದಿದ್ದು ಕಿರಿಯ ಪತ್ರಕರ್ತರಿಗೆ ಬುದ್ಧಿ ಹೇಳಲು. ಒಳ್ಳೆಯ ವಿಚಾರ!
ಆದರೆ ಐಟಿ-ಬಿಟಿ ಯನ್ನು ಯಾಕೆ ಉದಾಹರಣೆಯಾಗಿ ತಗೊಂಡ್ರು ? ಗೊತ್ತಿಲ್ಲ!ಐಟಿ ಜನರಿಗೆ ಪತ್ರಕರ್ತರಷ್ಟು ಕ್ರಿಯಾಶೀಲತೆ ಬೇಕಿಲ್ಲ ಅಂತ ಅವರಿಗೆ ಅನ್ನಿಸಿತೆ? ಅದೂ ಗೊತ್ತಿಲ್ಲ !

ಇದಾದ ಮೇಲೆ ಪ್ರೀತಿಯ ಮಣಿಕಾಂತ್ ’ಸಾಫ್ಟ್ ವೇರ್ ಬಂಧುಗಳಿಗೊಂದು ಪತ್ರ ’ ಅಂತ ತಮ್ಮ ವಿಜಯಕರ್ನಾಟಕದಲ್ಲಿ ಸಿಂಪ್ಲಿಸಿಟಿ ಪೇಜ್ ನಲ್ಲಿ ಬರೆದಿದ್ರು.ಮಣಿಕಾಂತ್ ಬರಹ ನಂಗೆ ತುಂಬಾ ಇಷ್ಟ . ಮಣಿಕಾಂತ್ ರವರದ್ದು ಅಪಾರ ಸ್ಫೂರ್ತಿದಾಯಕ ಬರಹಗಳು.ಅವರ ಬರಹಗಳನ್ನು ಓದಿ ಅದೆಷ್ಟೋ ನೊಂದ ಜೀವಗಳು ಸಾಂತ್ವನ ಪಡೆಯುತ್ತವೆ.ಆದರೆ ಅದೆ ಆಗಿರೋದು ಪ್ರಾಬ್ಲೆಮ್ ಈಗ .ಅವರ ಬರಹ ಓದಿದ ಮೇಲಂತೂ ಜನರು ಐಟಿ ಉದ್ಯೋಗಿಗಳಿಗೆ ಹಿಡಿ ಶಾಪ ಹಾಕೋದಂತೂ ಸತ್ಯ!
ಮಣಿಕಾಂತ್ ರವರು ಸಾಫ್ಟ್ ವೇರ್ ಬಂಧುಗಳಿಗೆ ಬರೆದ ಪತ್ರವನ್ನು ಸಾವಕಾಶವಾಗಿ ಓದಿದೆ .ಸಾಫ್ಟ್ವೇರ್ ಜನರ ಬಗ್ಗೆ ಇರುವ ’ಮಾಮೂಲಿ’ ಅಪವಾದಗಳನ್ನು ಅವರೂ ಹಾಕಿದ್ರು .ಅದೇ,’ ನಿಮ್ಮಿಂದ ಸೈಟ್ ಬೆಲೆ ಜಾಸ್ತಿ ಆಯ್ತು,ಪಬ್ ಸಂಸ್ಕೃತಿ ಶುರು ಆಯ್ತ’ etc etc.
ಇದೆಲ್ಲ ನಂಗೆ ಬೇಜಾರು ತರಿಸಿಲ್ಲ .ಯಾಕಂದ್ರೆ ಈಗ ಚರ್ಮ ಸ್ವಲ್ಪ ದಪ್ಪ ಆಗಿದೆ ಕೇಳಿ ಕೇಳಿ.

ಆದರೆ ಯಾವಾಗ ’ಈ ಸಾಫ್ಟ್ವೇರ್ ಪುಣ್ಯಾತ್ಮರಿಂದ ಅಕ್ಕಿಯ ಬೆಲೆ Rs 35 ಆಯ್ತು ’ ಅಂತ ಬರೆದ್ರೋ, ತಡೆಯೋದಕ್ಕೆ ಆಗಿಲ್ಲ.

ಇದು ಅಕ್ಕಿಯ ಬೆಲೆಯ ಪ್ರಶ್ನೆ ಅಲ್ಲ. ಜನರು ಐಟಿ ಜಗತ್ತಿನ ಬಗ್ಗೆ ಅದೆಷ್ಟು ತಪ್ಪು ಕಲ್ಪನೆ ಇಟ್ಟುಕೊಂಡಿದ್ದಾರೆ ಅನ್ನೋದು ಪ್ರಶ್ನೆ ಇಲ್ಲಿ .
ಅಕ್ಕಿಯ ಬೆಲೆ ಯಾಕೆ Rs35 ಆಯ್ತು ಅನ್ನೋದರ ಬಗ್ಗೆ ಅವರದ್ದೇ ವಿಜಯ ಕರ್ನಾಟಕದಲ್ಲಿ ೨ನೇ ತಾರಿಕಿನಂದು ಒಂದು ಸವಿಸ್ತಾರ ಲೇಖನ ಬಂದಿತ್ತು .ಅದೇ ಸರಕಾರ ಏನೋ ಲೆವಿ ದರ ಹೆಚ್ಚಿಸಿದ್ದರಿಂದಲೋ ಏನೋ -ನಂಗೂ ಸರಿಯಾಗಿ ನೆನಪಿಲ್ಲ ಕಾರಣ! ಆದರೆ ಪ್ರೀತಿಯ ಮಣಿಕಾಂತ್ ಅದನ್ನು ಓದಿಲ್ಲ ಅಂತ ಕಾಣ್ಸುತ್ತೆ.ಅಷ್ಟಕ್ಕೂ ಅಕ್ಕಿಯ ಬೆಲೆ ಬರೀ ಬೆಂಗಳೂರಲ್ಲಷ್ಟೇ ಜಾಸ್ತಿ ಆಗಿದ್ದಿದ್ರೆ ಇದು ಐಟಿಯವರದ್ದೇ ಕರಾಮತ್ತು ಅನ್ನಬಹುದಿತ್ತು .
ನಂಗೆ ಮಣಿಕಾಂತ್ ಬಗ್ಗೆ ಸಿಟ್ಟಿಲ್ಲ.ಆದ್ರೆ ಯಾಕೆ ಜನರು ಸಿಕ್ಕ ಸಿಕ್ಕದ್ದಕ್ಕೆಲ್ಲಾ ಐಟಿ ಜನರನ್ನು ದೂಷಿಸ್ತಾರೆ? ಯಾಕೆ ಐಟಿ ಜನರ ಬಗ್ಗೆ ಏನೂ ಗೊತ್ತಿಲ್ಲದಿದ್ದರೂ ಅಷ್ಟು ಹಗುರವಾಗಿ ಮಾತಾಡ್ತಾರೆ?

ಒಬ್ಬ ಆಟೋ ಚಾಲಕ ಹೇಳ್ತಾ ಇದ್ದ ’ಈ ಬಡ್ಡಿ ಮಕ್ಕಳು ಇಲ್ಲಿಗೆ ಬಂದಿರೋದ್ರಿಂದಾನೇ ಬೆಂಗಳೂರು ಈ ಪರಿ ಹಾಳಾಗಿರೋದು ’ ಅಂತ!
ಅವನ ಸಿಟ್ಟಿಗೆ ಕಾರಣ ಇದೆ ನಿಜ .ಆದರೆ ಅದೇ ಜನರೇ ಅಲ್ವ ಅವನಿಗೊಂದು ತುತ್ತಿಗೆ ಅವಕಾಶ ಮಾಡಿಕೊಟ್ಟಿರೋದು,ಇಲ್ಲಾಂದ್ರೆ ಆಟೋದಲ್ಲೇನು ಎಳನೀರು ಮಾರ್ತಾ ಇದ್ನಾ ಅವನು?

ಬಹಳಷ್ಟು ಜನರಿಗೆ ಗೊತ್ತಿಲ್ಲದ ಒಂದು ವಿಷಯ ಇದೆ .ಅದೇನಂದ್ರೆ ಬೆಂಗಳೂರಿನಲ್ಲಿ ಐಟಿ ಉದ್ಯಮಕ್ಕಿಂತ ಗಾರ್ಮೆಂಟ್ ಉದ್ಯಮ ಪ್ರಾಬಲ್ಯ ಪಡೆದಿದೆ.ಇಲ್ಲಿರೋ ಐಟಿ ಜನರು ಅಷ್ಟೂ ಜನಸಂಖ್ಯೆಯ ತೀರಾ ಚಿಕ್ಕ ಪ್ರಮಾಣಕ್ಕೆ ಸೇರ್ತಾರೆ ಅನ್ನೋದು.ಆದ್ರೂ ಜನ ಯಾಕೆ ಐಟಿ ಜನರ ಬಗ್ಗೇನೇ ಮಾತಾಡ್ತಾರೆ?ಅವರಿಗೆ ಸಿಗೋ ಸಂಬಳದಿಂದಾಗಾ?

ಐಟಿ ಉದ್ಯೋಗಿಯೊಬ್ಬನಿಗೆ ಅಬ್ಬಬ್ಬಾ ಅಂದ್ರೆ 20,000Rs ಸಿಗುತ್ತೆ ಅಂದುಕೊಳ್ಳಿ. ದೊಡ್ಡ ಸಂಬಳಾನೇ .ಆದ್ರೆ ಬರೀ ಒಂದು ಸಿನೆಮಾಗೆ ನಟಿಸಿದ್ರೆ ಗಣೇಶ್ ಗೆ ೫೦ ಲಕ್ಷ ಸಿಗಲ್ವ? ಇನ್ನೂ ಮೀಸೆ ಸರಿಯಾಗೆ ಬರದೇ ಇದ್ರೂ ಪ್ರಜ್ವಲ್ ದೇವರಾಜ್ ಲಕ್ಷ ಲಕ್ಷ ಎಣಿಸ್ತಾ ಇಲ್ವ?
ಬರೀ ಒಂದು ಮ್ಯಾಚ್ ಆಡಿ ಅಥವಾ ಒಂದು ಜಾಹೀರಾತಿನಲ್ಲಿ ಮುಖ ತೋರಿಸಿ ದ್ರಾವಿಡ್ ಕೋಟಿ ಕೋಟಿ ಎಣಿಸಲ್ವ?ಬರೀ ಹೋಟೆಲ್ ಇಟ್ಟು ಅಡಿಗರು ಲಕ್ಷ ಲಕ್ಷ ಎಣಿಸಲ್ವ? ಬರೀ ಒಂದು ಪುಸ್ತಕ ಬರೆದು ಅರವಿಂದ ಅಡಿಗ ಲಕ್ಷಾಧಿಪತಿ ಆಗಿಲ್ವ?
ಮೆಜೆಸ್ಟಿಕ್ ನಲ್ಲಿ ಕಬ್ಬಿನ ಹಾಲು ಮಾರಿಯೆ ಅದೆಷ್ಟು ಜನ ದಿನಕ್ಕೆ ಸಾವಿರ ಗಳಿಸಲ್ಲ? ಯಶವಂತಪುರದ ಬಾರ್ ಒಂದರಲ್ಲಿ ಅದೆಷ್ಟು ಸಾವಿರ ದಿನಗಳಿಕೆ ಆಗಲ್ಲ?ಕೆ.ಅರ್ ಮಾರ್ಕೆಟ್ ನಲ್ಲಿ ಪೈರೇಟೆಡ್ ಸಿಡಿ,ಡಿವಿಡಿ ಮಾರಿ ಅದೆಷ್ಟು ಜನ ಶ್ರೀಮಂತರಾಗಿಲ್ಲ ?

ಉಳಿದ ಉದ್ಯೋಗಗಳಲ್ಲೂ ಸಾವಿರಾರು ಜನರು ಲಕ್ಷಾಂತರ ರೂ ಗಳನ್ನು ಗಳಿಸ್ತಾರೆ.ಅದರ ಮುಂದೆ ಐಟಿ ಉದ್ಯೋಗಿಗಳು ಪುಟಗೋಸಿಗೆ ಸಮಾನ!

ಆದ್ರೂ ಜನರಿಗೆ ಬರೀ ಐಟಿಯವರ ಬಗ್ಗೆ ಅಸಮಧಾನ!

ಮಲ್ಟಿಪ್ಲೆಕ್ಸ್ ಸಂಸ್ಕೃತಿಯಿಂದ ಬೆಂಗಳೂರು ಹಾಳಾಯ್ತು ಅನ್ನೋದು ಎಲ್ಲರ ಆರೋಪ.ಆದ್ರೆ ಯಾವುದೇ ಮಲ್ಟಿಪ್ಲೆಕ್ಸ್ ಗೆ ಹೋಗಿ ನೋಡಿ. ಅಲ್ಲಿ ಸಾಫ್ಟ್ವೇರ್ ಅದ್ಯೋಗಿಗಳು ಕಡಿಮೆ ದೇಶದ ಯುವಶಕ್ತಿಯಾದ ಕಾಲೇಜು ವಿದ್ಯಾರ್ಥಿಗಳೇ ಜಾಸ್ತಿ ಕಾಣ್ತಾರೆ.ಆದ್ರೆ ಅವರನ್ನು ಯಾರೂ ಗಮನಿಸಲ್ಲ -ಪಾಪ ಚಿಕ್ಕವ್ರಲ್ಲ!
ಅಷ್ಟಕ್ಕೂ ಐಟಿ ಉದ್ಯೋಗಿಗಳು ತಮ್ಮ ಸ್ವಂತ ದುಡಿಮೆಯನ್ನಲ್ವ ಉಡಾಯಿಸೋದು ,ಸ್ವಲ್ಪ ಹುಶಾರಾಗೇ ಉಡಾಯಿಸ್ತಾರೆ! ಆದ್ರೆ ’ಅಪ್ಪನ ಕಾಸನ್ನು ಉಡಾಯಿಸೊದ್ರಲ್ಲಿರೋ ಮಜಾ ಬೇರೇನೇ’ ಅಂದುಕೊಂಡಿರೋ ವಿದ್ಯಾರ್ಥಿಗಳ ಬಗ್ಗೆ ಯಾರಿಗೂ ಕಂಪ್ಲೇಂಟ್ ಇಲ್ಲ.ಯಾಕಂದ್ರೆ ನಮಗೆ ಐಟಿಯವರಿದ್ದಾರಲ್ವ ದೂರೋದಕ್ಕೆ!
’ಬೆಂಗಳೂರಿನಲ್ಲಿ ಸೈಟ್ ಬೆಲೆ ತೀರಾ ಕಮ್ಮಿ ಇತ್ತು ,ಆದ್ರೆ ನಿಮ್ಮಿಂದಾಗಿ ಈ ಬೆಲೆ ಗಗನಕ್ಕೇರಿದೆ ’ಅನ್ನೋ ಆರೋಪವನ್ನೂ ನಾವೇ ಭರಿಸಬೇಕು!
ಆದ್ರೆ ಮುಂಬೈಗೇನಾಗಿದೆ ಅಲ್ಲಿ ಐಟಿ ಧೂರ್ತರಿಲ್ವಲ್ಲ? ಅಲ್ಲೂ ಯಾಕೆ ಸೈಟ್ ಬೆಲೆ ಅಷ್ಟು ದುಬಾರಿ?

’ನೀವು ಐಟಿಯವರು ಕೇಳಿದಷ್ಟು ದುಡ್ಡು ಕೊಡ್ತೀರಾ ಅದಕ್ಕೇ ಈ ರೀತಿ ಆಗಿದ್ದು ’ ಅಂತಾರೆ -ಆದ್ರೆ ಅದರಿಂದ ಲಾಭ ಆಗಿದ್ದು ಯಾರಿಗೆ?

ಜಯನಗರದಲ್ಲಿ ನಾಲಕ್ಕು ಸೈಟ್ ಇದೆ ಅಂದುಕೊಳ್ಳಿ.ಪಾಪ ಮಧ್ಯಮ ವರ್ಗದ ಕುಟುಂಬ .ಆ ನಾಲ್ಕು ಸೈಟ್ ಕೊಳ್ಳಲು ನಾಲ್ಕು ಜನ ಐಟಿ ಧೂರ್ತರು ಆಸೆ ಪಡ್ತಾರೆ ಅಂದುಕೊಳ್ಳಿ.
ಹಾಗೆ ಅವರು ಸೈಟ್ ತಗೊಂಡ್ರೆ ಏನಾಗುತ್ತೆ ? ಜಯನಗರದ ಮಧ್ಯಮವರ್ಗದ ನಾಲಕ್ಕು ಜನ ರಾತ್ರೋ ರಾತ್ರಿ ಶ್ರೀಮಂತ ವರ್ಗಕ್ಕೆ ಸೇರ್ತಾರೆ. ಅದೇ ಶ್ರೀಮಂತ ವರ್ಗಕ್ಕೆ ಸೇರಿದ್ದಾರೆ ಅಂತ ನಾವು ಅಂದುಕೊಂಡ ನಾಲ್ಕು ಐಟಿ ಧೂರ್ತರಿಗೆ ರಾತ್ರೋ ರಾತ್ರಿ ತಲಾ ಅರವತ್ತು ಲಕ್ಷ ಸಾಲದ ಹೊರೆ! ಅದೂ ಒಂದೆರಡು ವರ್ಷ ಅಲ್ಲ - ಇಪ್ಪತ್ತು ವರ್ಷ !! ಈಗ ಹೇಳಿ ಯಾರಿಗೆ ಒಳಿತಾಯ್ತು?

ನೆಲಮಂಗಲದಲ್ಲಿ ಪಟ್ಟಾಪಟ್ಟಿ ಚಡ್ಡಿ ಹಾಕ್ಕೊಂಡು ಆಲದ ಮರದ ಕೆಳಗೆ ಟೈಂ ಪಾಸ್ ಮಾಡ್ತಾ ಇದ್ದ ಗೌಡ್ರೂ ಈಗ ಶ್ರೀಮಂತರಾಗಿದ್ದಾರೆ .ಆದ್ರೆ ಅವರ ಜಾಗದಲ್ಲಿ ಅಪಾರ್ಟ್ಮೆಂಟ್ ಕೊಂಡ ನಮ್ಮ ಸಾಫ್ಟ್ವೇರ್ ಹೀರೋಗೆ ಇಪ್ಪತ್ತು ವರ್ಷ ಸಾಲದ ಹೊರೆ!
ಐಟಿಯಿಂದ ನಾಲಕ್ಕು ಜನ ಮಧ್ಯಮ ವರ್ಗದವ್ರಿಗೆ ಸೈಟ್ ಕೊಳ್ಳದೇ ಇರೋ ಹಾಗೆ ಆಗಿದೆ ನಿಜ.ಆದ್ರೆ ಅದರ ಜೊತೆಗೆ ನಾಲಕ್ಕು ಮಧ್ಯಮ ವರ್ಗದವರನ್ನು ರಾತ್ರೊ ರಾತ್ರಿ ಶ್ರೀಮಂತರನ್ನಾಗಿಸಿದ್ದೂ ಅಷ್ಟೇ ನಿಜ!ಐಟಿ ಜನರಿಂದಾಗಿ ಕಡಿಮೆ ಬಾಡಿಗೆಗೆ ಮನೆ ಸಿಗದೇ ಇರೋದು ಎಷ್ಟು ನಿಜವೋ ,ಇದೇ ಐಟಿ ಜನರಿಗೆ ದುಬಾರಿ ಬೆಲೆಗೆ ಮನೆ ಬಾಡಿಗೆಗೆ ನೀಡಿ ಅದೆಷ್ಟೋ ಮಧ್ಯಮ ವರ್ಗದವರು ಏನೂ ಕೆಲಸ ಮಾಡದೆ ಮನೇಲೇ ಕೂತು ಮಜಾ ಮಾಡ್ತಾ ಇರೋದೂ ಅಷ್ಟೇ ನಿಜ!

ನಾವು ಅನಾವಶ್ಯಕವಾಗಿ ಯಾವಾಗ್ಲೂ ಐಟಿಯವರನ್ನು ದೂರ್ತಾ ಇರ್ತೀವಿ.ಅವರಿಗಿಂತ ವೈಭವೋಪೇತ ಜೀವನ ನಡೆಸ್ತಾ ಇರೋರು ಅದೆಷ್ಟೋ ಜನ ಇದ್ದಾರೆ .ನಮಗವರು ಕಾಣಿಸೋದೇ ಇಲ್ಲ.
ಒಬ್ಬ ಸಾಫ್ಟ್ವೇರ್ ಉದ್ಯೋಗಿ ವಾರಾಂತ್ಯದಲ್ಲಿ ಮಲ್ಟಿಪ್ಲೆಕ್ಸ್ ಗೆ ಹೋಗಿ ಮಜಾ ಉಡಾಯಿಸಿದ ಅಂತಾನೇ ಅಂದುಕೊಳ್ಳೋಣ.ಆದ್ರೆ ಅವನಿಗಿಂತ ಜಾಸ್ತಿ ದುಡ್ಡು ಖರ್ಚು ಮಾಡೋರು ನಮ್ಮ ಲೋಕಲ್ ಬಾರಲ್ಲೇ ಸಿಗ್ತಾರೆ.ಅವರು ನಮಗೆ ಕಾಣಿಸಲ್ಲ.ಮಾದೇಶ ಚಿತ್ರದ ನಿರ್ಮಾಪಕ ಗೋವರ್ಧನ್ಮೂರ್ತಿ ದಿನಕ್ಕೆ ಎರಡು ಲಕ್ಷ ಖರ್ಚು ಮಾಡ್ತಾ ಇದ್ನಂತೆ ! ಆದ್ರೆ ನಮಗೆ ಅದರ ಬಗ್ಗೆ ಆಸಕ್ತಿ ಇಲ್ಲ .
ಅಷ್ಟಕ್ಕೂ ನಮಗೆ ಸಾಫ್ಟ್ ವೇರ್ ಹುಡುಗ ಪಿವಿಅರ್ ಗೆ ಹೋಗಿ ಐನೂರು ರುಪಾಯಿಯ ಸಿನೆಮಾ ನೋಡಿದ ಅನ್ನೋದರ ಬಗ್ಗೆ ಆಕ್ಷೇಪ ಇದೆ.ಆದರೆ ಮಟ ಮಟ ಮಧ್ಯಾಹ್ನ ಸಾಗರ್ ಥಿಯೇಟರ್ ನಲ್ಲಿ ’ಹಾಗೆ ಸುಮ್ಮನೆ ’ ಚಿತ್ರಕ್ಕೆ ’ಬಾಲ್ಕನಿ ನೂರೈವತ್ತು ,ಬಾಲ್ಕನಿ ನೂರೈವತ್ತು’ ಅನ್ನುವವನ ಬಗ್ಗೆ ಆಕ್ಷೇಪ ಇಲ್ಲ .ಯಾಕಂದ್ರೆ ಪಾಪ ಬಡವರಲ್ವ ಬ್ಲ್ಯಾಕ್ ನಲ್ಲಿ ಮಾರೋರು!
ನೀವು ಪಿವಿಅರ್ ಗೆ ಹೋಗಿ ನೂರು ರುಪಾಯಿಯಲ್ಲಿ ಸಿನೆಮಾ ನೋಡಬಹುದು. ಆದ್ರೆ ಸಾಗರ್ ನಲ್ಲಿ ರವಿವಾರ ಹೋಗಿ ನೋಡಿ ,ನೂರೈವತ್ತಕ್ಕೆ ಕಮ್ಮಿಯಲ್ಲಿ ಟಿಕೆಟ್ ಸಿಕ್ರೆ ಆಮೇಲೆ ಹೇಳಿ.

ಈ ಎಲ್ಲಾ ಅಧ್ವಾನಕ್ಕೆ ಕಾರಣ ಐಟಿಯವರು ಗಳಿಸುತ್ತಿರುವ ಸಂಬಳ ಅಂದುಕೊಂಡಿದ್ದೆ ನಾನು .ಆದರೆ ಕಾರಣ ಅದಲ್ಲ ! ಕಾರಣ ಏನೂಂತ ನಂಗೂ ಗೊತ್ತಿಲ್ಲ! ಗೊತ್ತಿದ್ರೆ ನೀವು ಹೇಳಿ !

ಬಹಳಷ್ಟು ಜನರಿಗೆ ಐಟಿ ಕಂಪೆನಿಗಳ ಬಗ್ಗೆ ಸರಿಯಾಗಿ ಗೊತ್ತಿರದೇ ಇರೋದೇ ಬಹುಷಃ ಒಂದು ಕಾರಣ ಅನ್ಸುತ್ತೆ.

ಐಟಿ ಅಂದ್ರೆ ಬರೀ ಇಂಜಿನಿಯರ್ಸ್ ಅಲ್ಲ.ಅಲ್ಲಿ ಇಂಜಿನಿಯರಗಳಷ್ಟೇ ಬೇರೆ ವಿಭಾಗದ ಜನರು ಕೆಲಸ ಮಾಡ್ತಾರೆ ಅನ್ನೋದು ಬಹಳಷ್ಟು ಜನರಿಗೆ ಗೊತ್ತಿಲ್ಲ.
ಎಲ್ಲಾ ಐಟಿ ಕಂಪೆನಿಗಳಲ್ಲೂ finance department,HR Department ,Travels Department ಗಳೆಲ್ಲಾ ಇವೆ.ಈ ವಿಭಾಗಗಳಲ್ಲಿ ಕೆಲಸ ಮಾಡೋರು ಯಾರೂ ಇಂಜಿನಿಯರ್ಗಳಲ್ಲ-ಆದ್ರೂ ಅವರು ಇಂಜಿನಿಯರ್ಗಳಷ್ಟೇ ಸಂಬಳ ಪಡೀತಾರೆ.
ಒಂದು ಐಟಿ ಕಂಪೆನಿಯಲ್ಲಿ ಸಾವಿರ ಜನ ಇಂಜಿನಿಯರ್ ಗಳಿದ್ರೆ .ಅವರು ಓಡಾಡೋದಿಕ್ಕೆ ವಾಹನಗಳ ಡ್ರೈವರ್ ಗಳು,ಬಿಲ್ಡಿಂಗ್ ಸೆಕ್ಯೂರಿಟಿ,ಕ್ಯಾಂಟೀನ್,ಆಫಿಸ್ ನಿರ್ವಹಣೆಗೆ ಅಂತೆಲ್ಲ ಸೇರಿಸಿದ್ರೆ ಇಂಜಿನಿಯರ್ಗಳಿಗಿಂತ ಜಾಸ್ತಿ ಅವಕಾಶಗಳಿವೆ.
ಡಿಗ್ರಿ ಮುಗಿಸಿ ಕೆಲ್ಸ ಸಿಗದೆ ಅದೆಷ್ಟೋ ಜನ ಇಂಥ ಐಟಿ ಕಂಪೆನಿಗಳಲ್ಲಿ ಸೆಕ್ಯೂರಿಟಿ ಕೆಲ್ಸ ಮಾಡ್ತಾ ಇದ್ದಾರೆ.ತುಂಬಾ ಬೇಸರದ ಸಂಗತಿ .ಆದ್ರೆ ಖುಷಿ ಪಡೋ ಸಂಗತಿ ಅಂದ್ರೆ ಅದಾದ್ರೂ ಸಿಗ್ತಲ್ವ ಈ ಐಟಿಯಿಂದಾಗಿ ಅನ್ನೋದು.ಇಲ್ಲಾಂದ್ರೆ ಮನೆಯಲ್ಲಿ ತಾನೆ ಇರ್ಬೇಕು ಡಿಗ್ರಿ ಮುಗಿಸಿದ್ರೂ?

ಐಟಿ ಕಂಪೆನಿಗಳಲ್ಲಿ ಉದ್ಯೋಗಿಗಳು ಮುಖ-ತಿಕ ಒರೆಸೋ ಟಿಷ್ಯೂ ಪೇಪರ್ ತಯಾರಿಸಿ/ಮಾರಿಯೇ ಅದೆಷ್ಟು ಚಿಕ್ಕ ಪುಟ್ಟ ಕಂಪೆನಿಗಳು ಲಾಭ ಮಾಡ್ತಾವೆ ಗೊತ್ತಾ?
ಇನ್ಫೋಸಿಸ್ ಒಂದನ್ನೇ ನಂಬಿ ಅದೆಷ್ಟು ಡ್ರೈವರ್ ಗಳು ನೆಮ್ಮದಿಯ ಜೀವನ ಸಾಗಿಸ್ತಾ ಇಲ್ಲ ?
ಈ ಐಟಿ ಉದ್ಯಮ ಐಟಿ ಉದ್ಯೋಗಿಗಳಿಗೆ ಎಷ್ಟು ನೆಮ್ಮದಿ ಕೊಟ್ಟಿದೆಯೋ ಅಷ್ಟೇ ನೆಮ್ಮದಿ ಅದನ್ನು ಪರೋಕ್ಷವಾಗಿ ನಂಬಿಕೊಂಡಿರುವ ಇತರರಿಗೂ ನೀಡಿದೆ.
ಈ ಐಟಿ ನಮಗೆ ನೀಡಿರುವ ಸವಲತ್ತುಗಳನ್ನು ನಾವು ನೆನೆಯದಿದ್ರೆ ಕೃತಘ್ನರಾಗ್ತೀವಿ ಅಷ್ಟೆ.
ಗೂಗಲ್,ಯಾಹೂ ,ಕೆಂಡಸಂಪಿಗೆ,ಸಂಪದ,ಬ್ಲಾಗ್ಸ್ಪಾಟ್, ವರ್ಡ್ ಪ್ರೆಸ್ಸ್ ಇವುಗಳೆಲ್ಲಾ ಐಟಿ ಜಗತ್ತಿನ ಕೊಡುಗೆ.ನಾವು ಬಳಸೋ ಟಿ.ವಿ ,ರೇಡಿಯೋ ,ಮೈಕ್ರೋವೇವ್ ಓವನ್,ಫ್ರಿಡ್ಜ್ , ಇವು ಎಲ್ಲಾ ಕೆಲಸ ಮಾಡೋದೂ ಸಾಫ್ಟ್ ವೇರ್ ನಿಂದಾಗೇ.
ಅಷ್ಟೆಲ್ಲ ಬಿಡಿ ಪಲ್ಸರ್ ಬೈಕ್ ನಲ್ಲಿ ಇಂಜಿನ್ ಗೆ ಎಷ್ಟು ಹನಿ ಪೆಟ್ರೋಲ್ ಕಳಿಸಬೇಕು ಅನ್ನೋದನ್ನು ನಿರ್ಧರಿಸೋದೂ ಅದರಲ್ಲಿರೋ ಸಾಫ್ಟ್ ವೇರ್!
ಆಸ್ಪತ್ರೆಗಳಿಗೆ ಹೋದ್ರೆ ಅಲ್ಲಿರೋ ಎಲ್ಲಾ ಉಪಕರಣಗಳೂ ಸಾಫ್ಟ್ ವೇರ್ ನಿಂದ ನಿಯಂತ್ರಿಸಲ್ಪಡೋದು.ಭಾರತದ ಡಾಕ್ಟರ್ ಗಳು ಇಷ್ಟು ನಿಪುಣರಾಗಿರೋದಕ್ಕೆ ವೈದ್ಯಕೀಯ ರಂಗದಲ್ಲಿ ಉಪಯೋಗಿಸಲ್ಪಡುವ ಸಾಫ್ಟ್ ವೇರ್ ಗಳ ಪಾಲೂ ಮಹತ್ವವಾದದ್ದು.
ಗುರುಕಿರಣ್ ಅಷ್ಟು ಸುಮಧುರವಾದ ಸಂಗೀತ ನೀಡಲು ಕಾರಣ ಕೂಡಾ ಸಾಫ್ಟ್ ವೇರ್ ! ನಂಬಿಕೆ ಬಂದಿಲ್ಲ ಅಂದ್ರೆ ಅವರನ್ನ ಕೇಳಿ.ಸಾಫ್ಟ್ ವೇರ್ ಬಳಸಿ ಅತ್ಯದ್ಭುತವಾಗಿ ಸಂಗೀತಕ್ಕೊಂದು ರೂಪ ಕೊಡಬಹುದು.
ಮೊನ್ನೆ ಇಸ್ರೋದವರು ಕಳಿಸಿದ ಚಂದ್ರಯಾನದ ಒಂದೊಂದು ಹೆಜ್ಜೆಯನ್ನ ನಿಯಂತ್ರಿಸಿದ್ದೂ ಸಾಫ್ಟ್ ವೇರ್ .ಇನ್ನು ಮೇಲೆ ನಿಯಂತ್ರಿಸುವುದೂ ಸಾಫ್ಟ್ ವೇರ್. ನಮಗೆ ಗೊತ್ತಿಲ್ಲ ಅಷ್ಟೇ !
ಪತ್ರಿಕಾ ರಂಗದಲ್ಲಿ ಇಷ್ಟೊಂದು ಕ್ರಾಂತಿ ಉಂಟಾಗೋದಕ್ಕೂ ಕಾರಣ ಇದೇ ಸಾಫ್ಟ್ ವೇರ್ ಅಲ್ವೇ? ಇಲ್ಲಂದ್ರೆ ಇವತ್ತಿಗೂ ಮೊಳೆ ಜೋಡಿಸಿಯೇ ಇರ್ಬೇಕಾಗಿತ್ತು !
ಸಾಫ್ಟ್ ವೇರ್ ಎಲ್ಲವನ್ನೂ ಮಾಡಲ್ಲ ಆದ್ರೆ ಬಹಳಷ್ಟನ್ನು ಮಾಡುತ್ತೆ .ನಮ್ಮ ಬದುಕನ್ನು ಮತ್ತಷ್ಟು ಮಧುರಗೊಳಿಸಿದ ಈ ಸಾಫ್ಟ್ ವೇರ್ ಜಗತ್ತನ್ನು,ಸಾಫ್ಟ್ ವೇರ್ ಉದ್ಯೋಗಿಗಳನ್ನು ನಾವು ಹೊಗಳದಿದ್ರೂ ಪರ್ವಾಗಿಲ್ಲ -ತೆಗಳೋದು ತಪ್ಪಲ್ವಾ??

ದಯವಿಟ್ಟು ಯೋಚಿಸಿ !

15 comments:

Pramod said...

ಸತ್ಯ, ಸತ್ಯ, 1೦೦% ಸತ್ಯ. ಬೆ೦ಗಳೂರಿಗೆ ಹಣದ ಹೊಳೆ ಹರಿಸಿದ್ದೇ ಐಟಿ.

Anonymous said...

Ouch!!! somebody touched a raw nerve or what?
People just need a reason to blame somebody da.So IT comes foremost to the mind.
Possibly they know the perks, they have not heard of 'pink slips' and layoffs'
very sensitively put
:-)
dost

Anonymous said...

ನನಗೆ ಐಟಿ ಇಂದ ಆಗಿರೋ ಒಳ್ಳೆಯದರ ಬಗ್ಗೆ ಸಹಮತ ಇದೆ. ಆದ್ರೆ ನೀವು ಹೇಳಿರೋ trickle down effect ಬಗ್ಗೆ ಅಂತಾ ಒಳ್ಳೆ ಅಭಿಪ್ರಾಯ ಇಲ್ಲ. ಒಂದಿಷ್ಟು ಜನ ಸೈಟ್ ಇರೋವ್ರನ್ನ ಅದು ಶ್ರೀಮಂತರನ್ನಾಗಿ ಮಾಡ್ತು, ಮಧ್ಯಮ ವರ್ಗದ ಹಲವರು ಬಾಡಿಗೆಯಲ್ಲೆ ದುಡ್ಡು ಮಾಡಿದ್ರು ಅನ್ನೋದು ಇವತ್ತು ಸಾಮಾನ್ಯರ ಆರ್ಥಿಕ ಪರಿಸ್ಥಿತಿಗೆ ಕೊಡೊ ಒಳ್ಳೆ ಉದಾಹರಣೆ ಅಲ್ಲ ಅನ್ಸತ್ತೆ. ಆದ್ರು ಹಲವರ ಆರ್ಥಿಕ ಪರಿಸ್ಥಿತಿ ಒಳ್ಳೇದಾಯ್ತು ಅನ್ನೋದು ಮಾತ್ರ ನಿಜ, ಆದರೆ ಇದರಿಂದ ಮೊದಲಿಂದಲೂ ಇದ್ದ ಸಾಮಾಜಿಕ ಅಸಮಾನತೆ ಜಾಸ್ತಿ ಆಯ್ತು ಅನ್ನೋದು ಕಹಿ ಸತ್ಯ. ಆದ್ರೆ ನೀವು ಹೇಳಿದಂತೆ ಇದಕ್ಕೆ ಐಟಿ ಮಾತ್ರ ಕಾರಣ ಅಲ್ಲ, ನಮಗಿಂತ ಲೆಕ್ಕಕ್ಕಿಲ್ಲದಷ್ಟು ದುಡ್ಡು ಮಾಡೋರು ಬೆಂಗಳೂರಿನಲ್ಲಿ ಬೇಕಾದಷ್ಟಿದ್ದಾರೆ.
ಆದ್ರೆ ಸಾಫ್ಟ್ವೇರ್ ಇಂಜಿನೀಯರ್‍ ಅಂದ್ರೆ ವೀಕೆಂಡ್ ಮಜಾ ಮಾಡೊವ್ರು, ದುಡ್ಡು ಅಂದ್ರೆ ಯೋಚ್ನೆ ಮಾಡ್ದ್ರೆ ಖರ್ಚು ಮಾಡೊವ್ರು, ಇದೆಲ್ಲ ಬರೀ ನಾಣ್ಯದ ಒಂದೇ ಮುಖ ಅಷ್ಟೇ (ಒಂದೂ ಅಲ್ಲ, ಅರ್ಧ ಮುಖ ಅಷ್ಟೇ). ಇದನ್ನ ಓದಿದ ಮೇಲೆ ಸಂಪದದಲ್ಲಿ ಈ ಲೇಖನ ಓದಿದೆ. ಇರೋ ಸಾಫ್ಟ್‍ವೇರ್ ಇಂಜಿನಿಯರುನರುಗಳೆಲ್ಲ ಗುಂಡು ತುಂಡು ಏರ್ಸ್ಕೊಂಡು ರಿಸಾರ್ಟ್ಗಳಲ್ಲಿ ಮಜಾ ಮಾಡೋವ್ರು ಅಂತ ಅಂದ್ಕೊಂಡಿದಾರೆ. ನಾನೂ ಕುಡಿತೀನಿ, ಹುಟ್ಟಿದಾಗಿಂದ ಮಾಂಸಾಹಾರವನ್ನು ತಿಂತೀನಿ, ಆದ್ರೆ ಅದಕ್ಕೆ ಅಂತ ನಾನು ಪಬ್ಬು ರಿಸಾರ್ಟ್ಗಳಲ್ಲಿ ಬಿದ್ದಿರೋದಿಲ್ಲ, ಅಥವಾ ಪ್ರತೀ ವೀಕೆಂಡು ಕುಡ್ಕೊಂಡು ತೂರಾಡೋದಿಲ್ಲ. ಕುಡಿದೇ ಇರೊವ್ರಿಗೆ ಕುಡಿಯೋವ್ರು ಮಹಾ ಪಾಪಿಗಳು ಅನ್ನೋ ಅಭಿಪ್ರಾಯ, ಏನೂ ಮಾಡೊದಿಕ್ಕೆ ಆಗೋದಿಲ್ಲ. ನನ್ನ ಥಿಯರಿ ಸಿಂಪಲ್, ಜೀವನದಲ್ಲಿ ಒಳ್ಳೇದು ಅಂದ್ರೆ ಯಾವ್ದೋ ಋಷಿ ಮಹಾಶಯನೋ, ಪ್ರವಾದಿನೋ ಅಥವಾ ದೇವಪುತ್ರನೋ ಆ ಕಾಲಕ್ಕೆ ಬೇಕಾಗಿದ್ದನ್ನು ಹೇಳಿದ್ದನ್ನು ಬರೆದಿಟ್ಟಿರೋ ಧರ್ಮಗ್ರಂಥಗಳನ್ನು ಪಾಲಿಸೋದಲ್ಲ. ನಮಗೆ ಹಾಗೂ ಇನ್ನೊಬ್ಬರಿಗೆ ತೊಂದರೆ ಆಗದಂತೆ ಬದುಕೋದೆ ಜೀವನ. ಅದೇ ಕುಡಿಯೋ ಉದಾಹರಣೆ ತಗೊಂಡ್ರೆ, ಅತಿಯಾಗಿ ಕುಡಿಯೋದು ನನ್ನ ಅರೋಗ್ಯಕ್ಕೆ ಹಾಗೂ ನನ್ನ ಸರಿಯಾಗಿ ಯೋಚನೆ ಮಾಡೋ ಶಕ್ತಿಗೆ ಒಳ್ಳೆದಲ್ಲ, ಅದಕ್ಕೆ ಅದು ತಪ್ಪು (ಯಾವ್ದೋ ಧರ್ಮ ಹೇಳುತ್ತೆ ಅಂತ ಅಲ್ಲ, ಅಥವ ಯಾವ್ದೇ moral valuesಗೆ ಅಲ್ಲ). ಹಾಗೇ ಇತರ ವಿಷಯಗಳಲ್ಲು ಅಪ್ಪ ಅಮ್ಮನಿಗೆ ಅಥವಾ ಸ್ನೇಹಿತರಿಗೆ, ಇಥವ ಇನ್ನು ಕೆಲವು ವಿಚಾರಗಳಲ್ಲಿ ಸಮುದಾಯಕ್ಕೆ ಅಥವ ದೇಶಕ್ಕೆ ಅಥವಾ ಪ್ರಕೃತಿಗೆ ತೊಂದರೆ ಆಗದಂತೆ ನಡೆಯೋದೇ ಜೀವನ.
ಎಲ್ಲಿಂದ ಎಲ್ಲಿಗೋ ಹೋಯ್ತು, ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ :)

Anonymous said...

Mamu...superb

ಪಲ್ಲವಿ ಎಸ್‌. said...

ಸೊಗಸಾಗಿ ಬರೆದಿದ್ದೀರಿ ಸಂದೀಪ್‌. ಅದುಮಿಟ್ಟ ಸಿಟ್ಟು ಚೆನ್ನಾಗಿಯೇ ಹೊರಬಂದಿದೆ. ಐಟಿ ಜನರನ್ನೇಕೆ ದೂಷಿಸುತ್ತಾರೆ ಎಂಬ ಪ್ರಶ್ನೆಗೆ ಒಂದು ಸರಳ ಉತ್ತರ ಇದೆ: ಅಸೂಯೆ.

ತುಂಬ ಜನರಿಗೆ ಐಟಿ ಜನರನ್ನು ಕಂಡರೆ ಅಸೂಯೆ ಇದೆ. ತಾವು ಗಳಿಸಲು ಆಗದ್ದಕ್ಕೆ, ತಮಗಿಂತ ಚಿಕ್ಕವರು ಅದನ್ನು ಸಾಧ್ಯವಾಗಿಸಿದ್ದಕ್ಕೆ, ತಾವು ಪ್ರಯತ್ನಿಸಿದರೂ ಅವರಂತೆ ಆಗಲಾರೆವು ಎಂಬ ವಾಸ್ತವಕ್ಕೆ ಇಂಥ ಪ್ರತಿಕ್ರಿಯೆಗಳು ಹುಟ್ಟುತ್ತವೆ. ನಿಮ್ಮ ಜಾಗದಲ್ಲಿ ಅವರಿದ್ದರೆ ಏನು ಮಾಡುತ್ತಿದ್ದರು?

ಅವರ ವಾದ ಹೇಗಿದೆ ಎಂದರೆ, ಇಂಗ್ಲಿಷ್‌ ಬರಲ್ಲ ಎಂಬ ಕಾರಣಕ್ಕೆ ಕನ್ನಡಾಭಿಮಾನಿ ಆದಂತೆ. ಕನ್ನಡಾಭಿಮಾನ ಖಂಡಿತ ಸ್ವಾಗತಾರ್ಹ. ಆದರೆ, ಅದು ಇಂಗ್ಲಿಷ್‌ ದ್ವೇಷದಿಂದ ಹುಟ್ಟಬೇಕಿಲ್ಲ. ಹಾಗೆ ಹುಟ್ಟಿದ್ದೇ ಆದರೆ ಅದು ಖಂಡಿತವಾಗಿಯೂ ಕನ್ನಡಾಭಿಮಾನವಲ್ಲ.

ನೀವು ಸರಿಯಾಗಿ ಬರೆದಿದ್ದೀರಿ. ಖುಷಿಯಾಯಿತು.

- ಪಲ್ಲವಿ ಎಸ್‌.

guruve said...

ಬಹಳಷ್ಟು ದಿನಗಳಿಂದ ನಡೆಯುತ್ತಿರುವ ಈ ಚರ್ಚೆಗೆ ತರ್ಕದಿಂದ ಕೂಡಿರುವ ನಿಮ್ಮ ಸವಿಸ್ತಾರ ಲೇಖನ ಸತ್ಯವನ್ನು ಸಾರುತ್ತದೆ.

ವಿ.ರಾ.ಹೆ. said...

ಸಂದೀಪ್, ನೀವು ಬರೆದದ್ದು ಒಂದೇ ಉಸಿರಿಗೆ ಹಾಗೆ ಓದಿಕೊಂಡು ಹೋದರೆ ಮೇಲ್ನೋಟಕ್ಕೆ ನಿಜವೆನೆಸಿದರೂ ಇದಕ್ಕೆ ವಿರುದ್ಧವಾದ ಕಾರಣಗಳೂ ಇವೆ.

ಮೊದಲನೆಯದಾಗಿ, ಭಾರತದ ಸಾಫ್ಟ್ ವೇರ್ ಫೀಲ್ಡು ಅಷ್ಟೆಲ್ಲಾ technology oriented ಕೆಲಸಗಳನ್ನು ಮಾಡುತ್ತಿಲ್ಲ. ನಿಮಗೆ ಗೊತ್ತಿರಬಹುದು ಮುಕ್ಕಾಲು ಭಾಗ ಸಾಫ್ಟ್ ವೇರ್ ಕಂಪನಿಗಳಲ್ಲಿ ಮಾಡುತ್ತಿರುವುದು ಒಂದು ರೀತಿ service ಕೆಲಸ, ಇತ್ಯಾದಿ. ಅಂದರೆ ಅದಕ್ಕೆ ೧೦ ನೇ ಕ್ಲಾಸ್ ಹುಡುಗರಿಗೆ ೩ ತಿಂಗಳು ತರಬೇತಿ ಕೊಟ್ಟು ಮಾಡಿಸಬಹುದಾದಂತಹ ಕೆಲಸ. ಶಶಿಧರ ಭಟ್ರು ಅದಕ್ಕೋಸ್ಕರವೆ ಆ ರೀತಿ ಜೆನೆರಲೈಸ್ ಮಾಡಿ ಹೇಳಿರಬಹುದು. ಅಂದರೆ ಐ.ಟಿ ಯವರಿಗೆ ಹೇಳಿದ್ದನ್ನು ಸರಿಯಾಗಿ ಮಾಡುವುದು ಗೊತ್ತಿದ್ದರೆ ಸಾಕು, ಸ್ವಂತ ಕ್ರಿಯಾಶೀಲತೆಯ ಅಗತ್ಯವಿಲ್ಲ ಎಂಬುದು.

ಎಲ್ಲರಿಗೂ ಸಾಫ್ಟ್ ವೇರ್ ಮೇಲೆ ಕಣ್ಣು ಕುಕ್ಕಲು ಕಾರಣಗಳೆಂದರೆ ಸಂಖ್ಯೆ, ಸಂಬಳ. ಅಂದರೆ ಇಲ್ಲಿರುವಷ್ಟು ಅವಕಾಶಗಳು ಬೇರೆಲ್ಲೂ ಸಿಗುವುದಿಲ್ಲ. ಹೋಟೆಲ್ಲು, ಸಿನೆಮಾ, ಕ್ರಿಕೆಟ್ಟು ಇತ್ಯಾದಿಗಳಲ್ಲಿ ಅಷ್ಟು ಜನಕ್ಕೆ ಅವಕಾಶ ಇರೋಲ್ಲ. ಕೆಲವೇ ಕೆಲವರು ಅದರಲ್ಲೆಲ್ಲಾ ಕ್ಲಿಕ್ ಆಗಲು ಸಾಧ್ಯವಿರತ್ತೆ. ಎರಡನೆಯದಾಗಿ ಸಂಬಳ. ಬೇರೆ ಫೀಲ್ದಿನಲ್ಲಿ ಎಷ್ಟು ಕಷ್ಟ ಪಟ್ಟು ದುಡಿದರೂ ಸಿಗದಷ್ಟು ದುಡ್ಡು ಇಲ್ಲಿ ಫ್ರೆಶರ್ ಗಳಿಗೇ ಸಿಕ್ಕಿಬಿಡುತ್ತದೆ. ಅದು ಸಹಜವಾಗಿ ಕಣ್ಣು ಕುಕ್ಕುತ್ತದೆ.

ಹೀಗೆ ಸಿಗುವ ಹಣವು ಹಲವಾರು ವಿಷಯಗಳ ಮೇಲೆ ಪರಿಣಾಮ ಬೀರುತ್ತದೆ. ಕೊಳ್ಳುಬಾಕತನ, ಜೀವನಶೈಲಿ ಬದಲಾವಣೆಗಳು, ಸಮಾಜದಲ್ಲಿ ಅಸಮಾನತೆ ಹುಟ್ಟು ಹಾಕುತ್ತವೆ. ಅವು ನೇರವಾಗಿ ಆಗದಿರಬಹುದು, ಆದರೆ ವಸ್ತುಗಳ ಬೆಲೆ ಏರಿಕೆ, ಭೂಮಿ ಮನೆ ಬೆಲೆ ಏರಿಕೆಗಳ ಮೇಲೆ ಪರಿಣಾಮ ಬೀರುತ್ತವೆ. ಈಗ ಆಗಿರುವುದೇ ಅದು. ಎಲ್ಲಾ ನಗರಗಳ ಸ್ಥಿತಿಯೇ ಇದು. ಮುಂಬೈಯಲ್ಲಿ ಬೇರೆ ಯಾವುದೋ ಕಾರಣದಿಂದ ಆದರೆ ಬೆಂಗಳೂರಿನಲ್ಲಿ ಐ.ಟಿ. ಕಾರಣದಿಂದಲೇ ಮುಖ್ಯವಾಗಿ ಆದದ್ದು. ಅದಕ್ಕೇ ಎಲ್ಲರೂ ಅವರನ್ನೇ ಬೈಯುತ್ತಾರೆ. ಹುಬ್ಬಳ್ಳಿಯಲ್ಲಿ ಜನರಿಲ್ವಾ,ಹೋಟೆಲ್ ಗಳಿಲ್ವಾ, ಕಾಲೇಜ್ ಇಲ್ವಾ, ಕೋಟ್ಯಾಧಿಪತಿಗಳಿಲ್ವಾ, ಸಿನೆಮಾ ಇಲ್ವಾ, ಆದ್ರೂ ಅಲ್ಯಾಕೆ ದುಬಾರಿ ಲೈಫಿಲ್ಲ? ಕಾರಣ ಅಲ್ಲಿ ಆ ರೀತಿ ಖರ್ಚು ಮಾಡುವವರು ’ಜಾಸ್ತಿ’ ಜನರಿಲ್ಲ. ಬರೀ ಹಣ ಜಾಸ್ತಿ ಬರುವುದರಿಂದ ಬದುಕು ಉದ್ದಾರವಾಗುತ್ತದೆ ಅಂತಿದ್ರೆ, ಮಧ್ಯಮ ವರ್ಗದವರ ಮನೆಗೆ ಬೆಲೆ ಜಾಸ್ತಿ ಸಿಕ್ಕು ಅವರು ಮೇಲ್ಮಧ್ಯಮ ವರ್ಗಕ್ಕೆ ಸೇರಿದರು ಎಂಬುದೇ ಸಾಫ್ಟ್ ವೇರಿನ ಸಾಧನೆ ಎಂಬಂತೆ ಬಿಂಬಿಸುವುದಾದರೆ ಇದರ ಬಹಳ ವ್ಯತಿರಿಕ್ತ ಪರಿಣಾಮಗಳನ್ನೂ ಕೂಡ ಹೈಲೈಟು ಮಾಡಿ ಸಾಫ್ಟ್ ವೇರಿಗರನ್ನು ತೆಗಳಬಹುದು.

ಸಾಫ್ಟ್ ವೇರಿಗರಿಗೆ ಸದ್ಯಕ್ಕೆ ಇಡೀ ದೇಶವನ್ನು ಹಾಳು ಮಾಡಲು ಸಾಧ್ಯವಾಗದಿದ್ದರೂ ಕೆಲವು ಊರುಗಳನ್ನಂತೂ ಹಾಳು ಮಾಡುವಷ್ಟು ತಾಕತ್ತಿದೆ ಬಿಡ್ರಿ. ಏನೇ ಆದ್ರೂ ಸಾಫ್ಟ್ ವೇರಿನವ್ರಿಗೆ ಬೈಯೋಕೆ ಒಳ್ಳೇ ಮಜಾ ಸಿಗತ್ತೆ :) ಚೆನ್ನಾಗಿ ಬರ್ದಿದೀರ. ಜೈ.

ಸಂದೀಪ್ ಕಾಮತ್ said...

ವಿಕಾಸ್ ,
ನೀವು ಹೇಳಿದ್ದೂ ಸರಿಯಾಗಿದೆ.ಬಹಳಷ್ಟು ಅನಾಹುತಗಳು ಐಟಿ ಯಿಂದಾಗಿ ಆಗಿದ್ರೂ ಅದನ್ನು ಹಾಗೇ ಬ್ಯಾಲೆನ್ಸ್ ಮಾಡಿದ್ದೂ ಐಟಿ ಫೀಲ್ಡು.
ಈ ಐಟಿ ಜಗತ್ತಿನ ಕಾರ್ಯ ವೈಖರಿಯನ್ನು ಬೇರೆಯವರಿಗೆ ತಿಳಿ ಹೇಳೋದು ಸ್ವಲ್ಪ ಕಷ್ಟ ಸಾಧ್ಯ,ಆದ್ದರಿಂದಲೇ ಜನರಿಗೆ ಐಟಿ ಕಂಪೆನಿಯಲ್ಲಿ ಏನ್ ಮಾಡ್ತಾರೆ ಮಾಹಾ ಆದ್ರೆ ಸಂಬಳ ಮಾತ್ರ ಜಾಸ್ತಿ ಅನ್ನೋ ಭಾವನೆ ಇದೆ.
ಐಟಿ ಅಂದರೆ ಭಾರತದಲ್ಲಿ ಸ್ವಲ್ಪ ತಪ್ಪಾಗಿ ವರ್ಗೀಕರಣ ಮಾಡಿದ್ದಾರೆ.
ಇನ್ಫೋಸಿಸ್ ಮಾಡೋ ಕೆಲಸ ಇಂಟೆಲ್ ಹಾಗೂ ನಮ್ಮ ಕಂಪೆನಿ ಮಾಡೋ ಕೆಲಸಕ್ಕಿಂತ ಸಂಪೂರ್ಣ ಭಿನ್ನವಾಗಿದೆ.ಹಾಗಾಗಿ ಇದೇ ಥರದ ಕೆಲಸ ಇವರು ಮಾಡ್ತಾರೆ ಅನ್ನೋದಕ್ಕ್ಕೆ ಸಾಧ್ಯ ಆಗಲ್ಲ.
ನಿನ್ನೆ ರವಿ ಬೆಳಗೆರೆ ಲೇಖನ ಓದಿದೆ .ಅಮೆರಿಕಾದಲ್ಲಿ ೫೦೦ ಡಾಲರ್ ಗೆ ಮಾಡುವ ಕೆಲಸ ಭಾರತದಲ್ಲಿ ೧೦೦ ಡಾಲರ್ ಗೆ ಮಾಡಿ ಕೊಡ್ತಾರೆ ಅಂತ ಬರೆದಿದ್ರು.ಇದು ಬಹಳಷ್ಟು ನಿಜವಾದ್ರೂ ಅಮೆರಿಕಾ ದವ್ರು ಭಾರತವನ್ನು ಆಯ್ಕೆ ಮಾಡೋದಕ್ಕೆ ಬೇರೆ ಕಾರಣಗಳೂ ಇವೆ.

ನಿಮಗೆ ಗೊತ್ತಿದೆಯೋ ಗೊತ್ತಿಲ್ಲ ಮೊದಲ ಬಾರಿಗೆ ಇಂಟೆಲ್ ನವರು ಸಂಪೂರ್ಣವಾಗಿ ಭಾರತದಲ್ಲೇ Six Core Processor ಅನ್ನು ತಯಾರಿಸಿದ್ದಾರೆ .ಅಂಥ ಹೊಣೆಗಾರಿಕೆಯ ಕೆಲಸವನ್ನು ಪ್ರವೀಣ್ ವಿಷಕಂಠಯ್ಯರ ನೇತೃತ್ವದಲ್ಲಿ ಇಂಟೆಲ್ ನ ಇಂಜಿನಿಯರ್ ಗಳು ಮಾಡಿ ,ಇಡೀ ಪ್ರಪಂಚಕ್ಕೆ ಭಾರತದ ಸಾಮರ್ಥ್ಯವನ್ನು ತೋರಿಸಿದ್ದಾರೆ.
ಇದೊಂದು ಚಿಕ್ಕ ಉದಾಹರಣೆ ಅಷ್ಟೆ.ಹೀಗೆ ಭಾರತೀಯ ಕಂಪೆನಿಗಳ ಸಾಮರ್ಥ್ಯ ದಿನದಿಂದ ದಿನಕ್ಕೆ ಬೆಳೀತಾ ಇದೆ.

ಐಟಿ ಕಂಪೆನಿಗಳಲ್ಲಿ ನಮ್ಮ ಪಕ್ಕದಲ್ಲೇ ಕೂತಿರೋನಿಗೆ ನಾವು ಏನು ಮಾಡ್ತಾ ಇದ್ದೀವಿ ಅನ್ನೋದು ಅರ್ಥ ಆಗಲ್ಲ.ಈ ಫೀಲ್ಡ್ ಅಷ್ಟೊಂದು ವೈವಿಧ್ಯಮಯವಾಗಿದೆ.ಹಾಗಾಗಿ ಸಂಬಳದಲ್ಲೂ ತಾರತಮ್ಯ ಐಟಿ ಕಂಪೆನಿಗಳ ಒಳಗೇ ಇದೆ .

ಈಗಂತೂ Times Of India ದಂಥ ಪತ್ರಿಕೆಗಳೂ ತಮ್ಮ ಪತ್ರಕರ್ತರಿಗೆ ಐಟಿಯವರಷ್ಟೇ ಸಂಬಳ ಕೊಡ್ತಾರೆ.ಹಾಗಂತ ಅವರ ವಯಸ್ಸಿಗೆ ಯೋಗ್ಯತೆ ಆ ಸಂಬಳ ಜಾಸ್ತಿ ಆಯ್ತು ಅನ್ನೋದಕ್ಕಾಗುತ್ತಾ?
ರವಿ ಬೆಳಗೆರೆ ಪಾಪ ನೇರವಾಗಿ ಅವರ ಮಗಳಿಗೆ ಎಷ್ಟು ಸಂಬಳ ಅಂತಾ ಹಾಕಿದ್ದಾರೆ ’ಹಾಯ್’ ನಲ್ಲಿ ಅವರಿಗ್ಯಾಕೆ ಆ ಸಂಬಳ ಅವರ ಮಗಳ ವಯಸ್ಸಿಗೆ ಜಾಸ್ತಿ ಆಯ್ತು ಅಂತ ಅನ್ನಿಸಿಲ್ಲ?
ಇನ್ನು ಭಾರತದಲ್ಲಂತೂ ಸಂಬಳ ಅನ್ನೋ ಶಬ್ದಕ್ಕೆ ಸರಿಯಾದ ಅರ್ಥವೇ ಇಲ್ಲ ಬಿಡೀ!
ಟೈಂಸ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡೋನಿಗೂ ಅದೇ ಸಂಸ್ಥೆಯ ವಿಜಯ ಕರ್ನಾಟಕದಲ್ಲಿ ಕೆಲಸ ಮಾಡುವವನಿಗೂ ಸಂಬಳದಲ್ಲಿ ತಾರತಮ್ಯ ಇದ್ದೇ ಇರುತ್ತೆ.

"ಬೇರೆ ಫೀಲ್ದಿನಲ್ಲಿ ಎಷ್ಟು ಕಷ್ಟ ಪಟ್ಟು ದುಡಿದರೂ ಸಿಗದಷ್ಟು ದುಡ್ಡು ಇಲ್ಲಿ ಫ್ರೆಶರ್ ಗಳಿಗೇ ಸಿಕ್ಕಿಬಿಡುತ್ತದೆ" ಅಂದ್ರಿ .ಇದೂ ನಿಜಾನೇ .ಆದ್ರೆ ಅಲ್ಲಿ ಫ್ರೆಶರ್ ಗಳದ್ದು ಅವರದ್ದೇ ಗೋಳಿದೆ.
ಗೂಗಲ್ನಲ್ಲಿ ಹಾಗೂ ಮೈಕ್ರೋಸಾಫ್ಟ್ ಗಳಲ್ಲಿ ಒಬ್ಬ ಫ್ರೆಶರ್ ಗೆ ಸಿಗೋ ಸಂಬಳ ಇನ್ಫೊಸಿಸ್ ನಂಥ ಕಂಪೆನಿಗಳಲ್ಲಿ ಮ್ಯಾನೇಜರ್ ಗಳಿಗೆ ಸಿಗುತ್ತೆ.
ವಿಜಯ್ ಮಲ್ಯ ತನ್ನ ಮಗನಿಗೆ ಐದು ಸಾವಿರ ಪಾಕೆಟ್ ಮನಿ ನೀಡ್ತಾನೆ ಅಂತ ಎಲ್ಲರಿಗೂ ನೀಡೋಕಾಗುತ್ತ ಆ ರೀತಿ!

ನಾಗತಿಹಳ್ಳಿ ಕೂಡ ತಮ್ಮ ಲೇಖನದಲ್ಲಿ ’ಯಾಕೆ ಎಲ್ಲರೂ ಸಾಫ್ಟ್ವೇರ್ ಇಂಜಿನಿಯರ್ ಆಗೋದಿಕ್ಕೆ ಬಯಸ್ತಾರೆ.ಯಾಕೆ ಯಾರೊ ಮೀನು ಹಿಡಿಯುವವನಾಗಲು ,ಶಿಲ್ಪಿಯಾಗಲು ಬಯಸೋದಿಲ್ಲ ’ ಅಂತ ದೂರಿದ್ರು .
ಅದೇ ಪ್ರಶ್ನೆ ನಾನೂ ಕೇಳಬಹುದಲ್ಲ ಯಾಕೆ ಎಲ್ಲರೂ ನಾಗತಿಹಳ್ಳಿಯ ಥರ ಸಿನೆಮಾ ರಂಗಕ್ಕೆ ಹೋಗ್ತಾರೆ .ಯಾಕೆ ಮೀನು ಹಿಡಿಯುವವ ಅಥವ ಶಿಲ್ಪಿ ಆಗೋದಿಲ್ಲ ಅಂತ!

ಭಾರತ ಕಮ್ಮಿ ಕೂಲಿಯ ದೇಶ ಮಾತ್ರ ಅಲ್ಲ.ತುಂಬಾ ಅದ್ಭುತವಾದ ಸಾಮರ್ಥ್ಯವಿರುವ ದೇಶ .ಒಂದು ದಿನ ನಾವು ಸೂಪರ್ ಪವರ್ ಆಗ್ತೀವಿ ಅನ್ನೋ ಭರವಸೆ ನಮಗಿದೆ.

ಐಟಿ ಜಗತ್ತನ್ನು ನಾವಿ ಕಡೆಗಣಿಸಲು ಸಾಧ್ಯವೇ ಇಲ್ಲ ಬಿಡಿ.ದಿನದಿಂದ ದಿನಕ್ಕೆ ಐಟಿಯ ಅಗತ್ಯ ಜಾಸ್ತಿ ಆಗ್ತಾ ಇದೆಯೆ ವಿನಹ ಕಮ್ಮಿ ಆಗ್ತಾ ಇಲ್ಲ.

ಐಟಿ ಅಪಾರ ಉದ್ಯೋಗಾವಕಾಶ ಮಾಡಿ ಕೊಟ್ಟಿದೆ .ಇನ್ನೂ ಮಾಡಿಕೊಡುತ್ತದೆ(ಈ ಆರ್ಥಿಕ ಮುಗ್ಗಟ್ಟು ಕಳೆದ ಮೇಲೆ).ನಾವು ಇದನ್ನು ಬಳಸಿಕೊಳ್ಳಬೇಕಷ್ಟೆ.ನಾವು ಬಳಸಿಕೊಂಡಿಲ್ಲ ಅಂದ್ರೆ ಚೀನ ಅಥವ ಫಿಲಿಫೈನ್ಸ್ ನಂಥ ದೇಶದವರು ಬಳಸಿಕೊಳ್ತಾರೆ ಅಷ್ಟೆ!

ಐಟಿಯವರು ವೀಕೆಂಡ್ ಗಳಲ್ಲಷ್ಟೇ ಪಬ್ ಗೆ ಹೋದರೆ ,ಬೆಂಗಳೂರಿನ ಅಷ್ಟೂ ಬಾರ್ ಗೆ ಹೋಗಿ ನೋಡಿ ದಿನ ನಿತ್ಯ ಮಧ್ಯಮ ವರ್ಗದವರು,ಬಡವರಿಂದ ತುಂಬಿರುತ್ತೆ ಬಾರ್ ಗಳು.ಸಂಸ್ಕೃತಿ ನಾಶ ಎಲ್ಲರಿಂದಲೂ ಆಗುತ್ತೆ ಅದಕ್ಕೆ ಭೇದ ಭಾವ ಇಲ್ಲ.

ನಿಮ್ಮ ಮನೆಯಲ್ಲಿ ’ವೈಟ್ ಟೈಗರ್’ ಪುಸ್ತಕ ಇರದಿದ್ರೂ ಅರವಿಂದ ಅಡಿಗ ಅದನ್ನು ಬರೆದಿರೋದು ಅಂತ ನಿಮಗೆ ಗೊತ್ತಿರುತ್ತೆ.
ಆದ್ರೆ ನಿಮ್ಮ ಕೈಲಿರೋ ನೋಕಿಯ N95 ನ ಅತ್ಯದ್ಭುತ ಸಾಫ್ಟ್ವೇರ್ ಬರೆದಿರೋದು ಯಾರು ಅಂತ ನಿಮಗೆ ಗೊತ್ತಿರಲ್ಲ,ನಾನು ಬಳಸ್ತಾ ಇರೋ ಬ್ಲಾಗ್ ಸ್ಪಾಟ್ ಅನ್ನ್ಯ್ ಯಾವ ಸಾಫ್ಟ್ವೇರ್ ಇಂಜಿನಿಯರ್ ಬರೆದ ಅಂತ ನಂಗೂ ಗೊತ್ತಿರಲ್ಲ !
ಅದೇ ವ್ಯತ್ಯಾಸ ಐಟಿ ಗೂ ಇತರ ಫೀಲ್ಡ್ ಗೂ!

Anonymous said...

sandeep,
bengalore haalagalu halavu kaaragalive. adaralli it kooda ondu annuvudaralli anumaanavilla...
rice soop anta hotelnavaru annada tili kottaru 25ru needi kudidu baruva samskruti bandiddu it inadale! mangana kaiyalli maanikya kotta haage anta ondu gaade ideyalla haage aayitu namma ityavarige adika sambala sikkiddu!
any way, chintanaatmaka lekhana...
vinayaka kodsara

Harisha - ಹರೀಶ said...

ಸಂದೀಪ್, ಐಟಿ ಹಾಳು ಮಾಡಿದಷ್ಟೇ ಸಹಾಯ ಮಾಡಿದೆ ಅನ್ನೋ ಮಾತನ್ನ ನಾನು ಒಪ್ಪೋದಿಲ್ಲ. ಹಾಳು ಮಾಡಿರುವ ಕಾಲು ಭಾಗದಷ್ಟೂ ಸಹಾಯ ಮಾಡಿಲ್ಲ.

ಆಟೋದವರ ಬಗ್ಗೆ ಹೇಳಿದ್ರಿ.. ನಿಜ, ಆಟೋದವರಿಗೆ ಸಹಾಯ ಆಗಿದೆ. ಆದರೆ ಬಸ್ಸಿನಲ್ಲಿ ಹೋಗೋ ಜಾಗಕ್ಕೆ ಆಟೋ ಹತ್ತೋರು ಯಾರು? ಮೀಟರ್ ಮೇಲೆ ೨೦-೨೫ ಕೇಳಿದ್ರೆ ಹಿಂದೆ ಮುಂದೆ ನೀಡೋರು ಯಾರು? ಒಂದು ಸಲ ಈ ರೀತಿ ಕೇಳಿದಷ್ಟು ದುಡ್ಡು ತೊಗೊಂಡು ರೂಢಿ ಆದ್ಮೇಲೆ ಆಟೋದವರು ಕಮ್ಮಿ ರೇಟಿಗೆ ಬರ್ತಾರಾ? ಅಗತ್ಯ ಇರೋ ಜನಕ್ಕೆ ಆಟೋದವರ ನಖರಾ ಮುಂದೆ ಏನ್ ಮಾಡೋಕ್ಕಾಗುತ್ತೆ? ಆಟೋದವನೊಬ್ಬನಿಗೆ ಸಹಾಯ ಆಗಿರಬಹುದು, ಆದ್ರೆ ಅದರಿಂದ ೧೦೦ ಜನ ಬಡವರಿಗೆ ಆಟೋ ಗಗನಕುಸುಮ ಅನ್ನೋ ಹಾಗಾಗ್ಲಿಲ್ವಾ?

ಇನ್ನು ಚೌಕಾಶಿ ಮಾಡುವುದು ತಮ್ಮ ಉದ್ಯೋಗಕ್ಕೆ ಅವಮಾನ ಅಂತ ಅಂದುಕೊಳ್ಳೋರು ಯಾರು? ಊರಲ್ಲಿ ೫೦-೧೦೦ ರೂ. ಚಪ್ಪಲಿ ಹಾಕಿ ಆರಾಮಾಗಿ ನಡೆಯೋ ನಮಗೆ ಬೆಂಗಳೂರಲ್ಲಿ ಯಾಕೆ ೩೦೦೦ ರೂಪಾಯಿ ಫಿಕ್ಸೆಡ್ ರೇಟ್ ಇರೋ ಬ್ರಾಂಡೆಡ್ ಶೂನೇ ಯಾಕೆ ಬೇಕು? ಮಾಮೂಲು ಚಪ್ಪಲಿ ಹಾಕಿ ನಡೆದರೆ ಕಾಲು ಸವೆದು ಹೋಗುತ್ತಾ?

ಸಿನಿಮಾದವರ ಬಗ್ಗೆ ಹೇಳಿದ್ರಿ... ಅವರನ್ನ ಸೆಲೆಬ್ರಿಟಿ ಅಂತ ಕರ್ಯೋದು ಯಾಕೆ? ಇಡೀ ನಾಡು ನೋಡುತ್ತೆ ಅವರ ಸಿನಿಮಾಗಳನ್ನ.. ಎಲ್ಲರಿಗೂ ಕುತೂಹಲ ಇರುತ್ತೆ ಅವರ ಜೀವನದ ಬಗ್ಗೆ. ಐಟಿಯವರಂತೆ ಎ.ಸಿ.ಯಲ್ಲಿ ಕೂತು ಕೆಲಸ ಮಾಡೋ ಸೌಲಭ್ಯ ಅವರಿಗೆ ಇದ್ಯಾ? ಇಷ್ಟಾಗ್ಯೂ ಇಂಥ ಸೆಲೆಬ್ರಿಟಿಗಳು ತಮ್ಮ ಕಾರಿನಲ್ಲೇ ಓಡಾಡ್ತಾರೆ. ಆಟೋದವರಿಗೆ ಮೀಟರ್ ಮೇಲೆ ೨೦ ಕೊಟ್ಟು ಅಭ್ಯಾಸ ಮಾಡ್ಸಲ್ಲ.

ಸಂದೀಪ್ ಕಾಮತ್ said...

ಪ್ರತಿಕ್ರಿಯಿಸಿದ ಹಾಗೂ ಪ್ರತಿಕ್ರಿಯಿಸದೆ ಇದ್ದ ಎಲ್ಲರಿಗೂ ಧನ್ಯವಾದಗಳು.
ನಾನು ಐಟಿ ಜಗತ್ತಿನ ಬಗ್ಗೆ ಇಷ್ಟೆಲ್ಲಾ ಬರೆದರೂ ,ಐಟಿ ಕಂಪೆನಿಯಲ್ಲೇ ಕೆಲಸಕ್ಕಿದ್ದರೂ ಒಂದು ಹೇಳ್ತೀನಿ ಕೇಳಿ ನಾನು ಸಾಫ್ಟ್ವೇರ್ ಇಂಜಿನಿಯರ್ ಅಲ್ಲ! ಐಟಿ ಅಂದ್ರೆ ಬರೀ ಸಾಫ್ಟ್ವೇರ್ ಅಷ್ಟೇ ಅಂತ ಜನ ನಂಬಿದ್ದಾರೆ, ಅದಿಕ್ಕೇ ಹೇಳಿದ್ದು ಐಟಿ ಅಂತ ಜನರಲೈಸ್ ಮಾಡೋದೆ ಒಂದು ತಪ್ಪು.
ಇನ್ನೊಂದು ವಿಷಯ ಅಂದ್ರೆ ಇಷ್ಟು ವರ್ಷಗಳಾದ್ರೂ ನಂಗೆ ಒಂದು ಬೈಕ್ ಬಿಡಿ ಸೈಕಲ್ ತಗೊಳ್ಳೋದಕ್ಕೂ ಸಾಧ್ಯ ಆಗಿಲ್ಲ! ಇದೇ ಬಿ.ಎಮ್ .ಟಿ .ಸಿ ಬಸ್ ನಲ್ಲಿ ನೇತಾಡಿಕೊಂಡೇ ನಾನು ಏಳು ವರ್ಷ ಇಲ್ಲಿ ಕಳೆದಿದ್ದೇನೆ.ಮೆಜೆಸ್ಟಿಕ್ ನ ಫುಟ್ಪಾತ್ನಲ್ಲಿ ಸಿಗುವ ಚಿಕನ್ ಬಿರಿಯಾನಿಯಿಂದ ಹಿಡಿದು ಲೀಲಾ ಪ್ಯಾಲೇಸ್ ನ ಊಟ ಸವಿಯುವ ಸೌಭಾಗ್ಯವೂ ನನಗೆ ಸಿಕ್ಕಿದ್ರಿಂದ ಎಲ್ಲ ಥರದ ಜನರ ಕಷ್ಟ ಸುಖಗಳು ನನಗೆ ಗೊತ್ತಿದೆ.

ಹಿಂದೆ ಬೆಂಗಳೂರು ’ನಿವೃತ್ತರ ಸ್ವರ್ಗ’ ಆಗಿತ್ತಂತೆ !ಬಹುಷ ಇಲ್ಲಿ ಪ್ರತಿಕ್ರಿಯಿಸಿರುವ ಬಹುತೇಕ ಜನರ ಆಸೆ ಬೆಂಗಳೂರು ನಗರ ಬೆಳೆಯದೆ ಹಾಗೆ ಮೊದಲಿನ ಹಾಗೆ ಇರಬೇಕು ಅಂತ ಅನಿಸುತ್ತದೆ.ಒಂದು ವೇಳೆ ಹಾಗೇ ಇರ್ತಿದ್ರೆ ಖಂಡಿತ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಹೆಸರು ಮಾಡೋಕೆ ಸಾಧ್ಯ ಆಗ್ತಾ ಇರ್ಲಿಲ್ಲ.

ಐಟಿ ಯಾರಿಗೆ ಏನು ಕೊಡದಿದ್ದರೂ ಪರವಾಗಿಲ್ಲ ಲಕ್ಷಾಂತರ ಜನರಿಗೆ ಪ್ರತ್ಯಕ್ಷ/ಪರೊಕ್ಷ ಉದ್ಯೋಗ ಕೊಟ್ಟಿದೆಯಲ್ಲ ಅಷ್ಟು ಸಾಕು .
ಬೆಂಗಳೂರಿನ ಜನಸಂಖ್ಯೆ ಸುಮಾರು ಎಪ್ಪತ್ತೈದು ಲಕ್ಷ.ಖಂಡಿತವಾಗಿಯೂ ಐಟಿ ಜನರು ಹತ್ತು ಲಕ್ಷ ಇರೋದೂ ನಂಗೆ ಸಂಶಯ.ಇಷ್ಟು ಚಿಕ್ಕ ಪ್ರಮಾಣದಲ್ಲಿರೋ ಜನರಿಂದ ಬೆಂಗಳೂರು ಹಾಳಾಗಿದೆ ಅನ್ನೋದು ನನಗಂತೂ ಸಂಶಯ .ಇಷ್ಟು ಜನ ಒಕ್ಕೊರಲಿನಿಂದ ಹೇಳ್ತಾ ಇರೋದ್ರಿಂದ ಬಹುಷ: ನಿಜ ಇರಬಹುದೇನೋ!

ಶ್ರೀಹರ್ಷ Salimath said...

ಪತ್ರಕರ್ತರಿಗೆ ಐಟಿ ಯವರನ್ನು ಕಂಡರೆ ಹೊಟ್ಟೆಕಿಚ್ಚು ಅಷ್ಟೆ. ಬೆಂಗಳೂರಲ್ಲಿ ಕ್ರೈಂ ರೇಟ್ ಜಾಸ್ತಿ ಆಗೋದಕ್ಕೆ ಟೆಕ್ಕಿಗಳು ಹೇಗೆ ಕಾರಣ ಅಂತ ಗೊತ್ತಾಗ್ತಿಲ್ಲ. ದುಡಿಯೋದೆ ತಪ್ಪಾ ? ರೇವಾ ಪಾರ್ಟಿಗಳಲ್ಲಿ ಎಷ್ಟು ಜನ ಟೆಕ್ಕಿಗಳು ಸಿಕ್ಕಿಬಿದ್ದಿದ್ದಾರೆ? ನಾನು ನೋಡಿರುವ ಹಾಗೆ ಮುಕ್ಕಾಲು ಪಾಲು ಜನ ನನ್ನ ಸಹೋದ್ಯೋಗಿಗಳು ಕುಡಿಯುವುದಿಲ್ಲ. ವಿ.ಭಟ್, ರವಿ ಬೆಳಗೆರೆಯಂತಹ ಅನುವಾದಕರ ನಡುವೆ ನಲುಗುತ್ತಿರುವ ಕನ್ನಡ ಸಾಹಿತ್ಯಕ್ಕೆ ತಮ್ಮ ಬ್ಲಾಗ್ ಗಳ ಮೂಲಕ ಮುಲಾಮು ಹಚ್ಚುತ್ತಿರುವ ಬಹುತೇಕರು ಟೆಕ್ಕಿಗಳು. ಇತ್ತೀಚಿಗೆ ಕಂಪನಿಗಳಲ್ಲಿ ರಾಜ್ಯೋತ್ಸವ ಹಾಗೂ ಇತರೆ ರಾಷ್ಟ್ರೀಯ ಹಬ್ಬಗಳನ್ನು ಆಚರಿಸಲಾಗುತ್ತಿದೆ. ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣ ಎಂದು ಎಲ್ಲದಕ್ಕೂ ಟೆಕ್ಕಿ ಗಳನ್ನು ದೂರುವುದು ಸರಿಯಲ್ಲ. ಪಾನಿಪುರಿಯವನ ಮಗ ಇಂದು ಲಕ್ಷ ಗಳಿಸಿ ಅಪ್ಪನನ್ನು ಸಾಕುತ್ತಿದ್ದಾನೆಂದರೆ ಅದಕ್ಕೆ ಐ ಟಿ ಕೊಡುಗೆ ಇದೆ. ಪಕ್ವತೆ ಬರದ ವಯಸ್ಸಿನಲ್ಲೇ ಹಣದ ಹೊಳೆ ನೋಡುತ್ತಿರುವುದು ಟೆಕ್ಕಿಗಳ ಮತ್ತು ಅವರಿಂದ ಆಗುತ್ತಿರುವ ಸಮಸ್ಯೆಗೆ ಮೂಲ ಅಷ್ಟೆ. ಸಂಸ್ಕೃತಿ ಟೆಕ್ಕಿ ಗಳಿಂದ ಹಾಳಾಯಿತು ಎನ್ನುವುದು ಶುದ್ಧ ಸುಳ್ಳು. ನಿತ್ಯ ಸಂಧ್ಯಾವಂದನೆ ಮಾಡುವವರ, ಶಾಸ್ತ್ರೀಯ ಸಂಗೀತ ಪ್ರೇಮಿಗಳ, ಪುಸ್ತಕ ಪ್ರಿಯರ ಗುಂಪುಗಳನ್ನೇ ತೋರಿಸಬಲ್ಲೆ. ಪ್ರವಚನಗಳಲ್ಲಿ ಹರಿಕತೆ ಸಂಗೀತ ಸಭೆಗಳಲ್ಲಿ ಟೆಕ್ಕಿಗಳು ಇವರಿಗೆ ಕಾಣುವುದಿಲ್ಲವೇ ?
ಅದಿರಲಿ ಈಗ ಐ ಟಿ ಬಿದ್ದು ಎಲ್ಲರೂ ಸಂತೋಷ ಪಡುತ್ತಿದ್ದಾರೆ. ಟೆಕ್ಕಿಗಳ ಕಷ್ಟವನ್ನು ಚರ್ವಿತ ಚರ್ವಣವಾಗಿ ವಿವರಿಸುತ್ತಾರೆ. ಪೇಪರ್ ನಲ್ಲಿ ಬರೆಯುವಷ್ಟು ಕೆಟ್ಟದಾಗಿ ಏನೂ ಪರಿಸ್ತಿತಿ ಇಲ್ಲ. ಐ ಟಿ ಬಿದ್ದರೆ ಬೀದಿಗೆ ಬರುವವರು ಟೆಕ್ಕಿಗಳು ಮಾತ್ರವಲ್ಲ. ಅವರಿಗಿಂತ ಮೊದಲು ಅವರನ್ನೇ ನಂಬಿಕೊಂಡಿರುವ ಮನೆಗೆಲಸದವರು, ಡ್ರೈವರ್ ಗಳು, ಶೇರ್ ಬ್ರೋಕರ್ ಗಳು, ಬ್ಯಾಂಕ್ ಏಜೆಂಟ್ ಗಳು ಅಷ್ಟೆ ಏಕೆ ಇಂಜಿನಿಯರಿಂಗ್ ಕಾಲೇಜ್ ಗಳ ಮ್ಯಾನೇಜ್ಮೆಂಟ್ ನವರು, ಉಪನ್ಯಾಸಕರು ನಷ್ಟ ಅನುಭವಿಸುತ್ತಾರೆ.
ಇವರಿಗೆ ಟೆಕ್ಕಿ ಗಳಿಂದಲೇ ಪರಿಸರ ನಾಶ ಆಗುತ್ತಿದೆ ಎನ್ನಿಸಿದ್ದರೆ ಕಾರನ್ನು ಒಬ್ಬರೇ ಚಲಾಯಿಸುವುದನ್ನು ನಿಷೇಧಿಸಿ, ಪ್ರತಿ ಎ.ಸಿ ಗೂ ಟ್ಯಾಕ್ಸ್ ಹಾಕಿ, ಗಾಜಿನ ಕಟ್ಟಡಗಳನ್ನು ನಿಷೇಧಿಸಿ, ತಿಂಗಳಿಗೆ ಇಷ್ಟೇ ವಿದ್ಯುತ್ ಕೊಡುವುದು ಎಂದು ಪ್ರತಿಬಂಧಿಸಿ ಅಥವಾ ಇಷ್ಟು ಕ್ರಮ ಕೈಗೊಳ್ಳಲು ಸರ್ಕಾರವನ್ನು ಒತ್ತಾಯಿಸಲಿ. ವಾಯುಮಾಲಿನ್ಯ ತಡೆಗೆ ಸೈಕಲ್ ಜಾಥ ಹಮ್ಮಿಕೊಂಡಿದ್ದು ಟೆಕ್ಕಿ ಗಳೇ ಎಂಬುದನ್ನೂ ನೆನಪಿಡಿ. ಸುಮ್ಮನೆ ಬಯ್ಯುವುದಲ್ಲ. ಕೆಂದ್ರ ಸರ್ಕಾರ ಬಿಟ್ರೆ ಲಕ್ಷಕ್ಕಿಂತ ಹೆಚ್ಚು ಜನರಿಗೆ ಕೆಲಸ ಕೊಡುವ ತಾಕತ್ತಿರುವುದು ನಾರಾಯಣಮೂರ್ತಿ ಮತ್ತು ಟಾಟಾ ರಂಥವರಿಗೆ ಎಂಬುದು ಗೊತ್ತಿರಲಿ. ಇವರಿಗೆಲ್ಲ ಸಾಫ್ ವೇರ್ ಬೇಡ ಆದರೆ ತಮ್ಮ ಮಗ/ಳು ಸಾಫ್ಟ್ ವೇರ್ ಇಂಜಿನಿಯರೇ ಆಗಬೇಕು. ಮಗಳನ್ನು ಮಾಡುವೆ ಆಗುವ ಅಳಿಯ ಸಾಫ್ಟ್ವೆರಿಗನೆ ಆಗಬೇಕು.... ಎಂಥ ವಿಪರ್ಯಾಸ!!
ಸಾಫ್ಟ್ ವೇರ್ ಬೇಡ ಎಂದರೆ ಎ.ಟಿ.ಎಂ ಯಾಕೆ ಉಪಯೋಗಿಸಬೇಕು ಇವರು ? ಯಾವ ಮೂಲೆಯಿಂದಲೂ ಎಲ್ಲಿಗೆ ಬೇಕಾದರೂ ರೈಲ್ವೆ ಬಸ್ ಟಿಕೆಟ್ ಬುಕ್ ಮಾಡಬಹುದು. ಕೂತಲ್ಲೇ ಮನೆಗೆ ಹಣ ಕಳಿಸಬಹುದು, ಇವರು ಮಾಧ್ಯಮಗಳಲಿ ಉಪಯೋಗಿಸುವ ಆಡಿಯೋ ವಿಡಿಯೋ ಕಂಪ್ರೆಶನ್ ಕೋಡಿಂಗ್ ಗಳೆಲ್ಲ ಟೆಕ್ಕಿ ಗಳು ಬರೆದಿದ್ದು. ಇದನ್ನು ಯಾರೂ ಹೇಳಲ್ಲ...ಏಕೆಂದರೆ ಇವರಿಗೆ ನಾವು ಗಳಿಸುವ ಹಣದ ಮೇಲೆ ಕಣ್ಣು ... ನಾವು ಕಷ್ಟಪಟ್ಟು ದುಡಿತಿವಿ ಬಳಸ್ತಿವಿ ಇವರ್ಯಾರು ಕೇಳೋಕೆ ? ತಾಕತ್ತಿದ್ದರೆ ದುಡೀಲಿ. ಈ ಬಾರಿ ಅತಿ ಹೆಚ್ಚು ಇನ್ ಕಂ ಟ್ಯಾಕ್ಸ್ ಕಲೆಕ್ಟ್ ಆಗಿದೆ..ಬಹು ಪಾಲು ಟೆಕ್ಕಿ ಗಳದು , ನಾವು ಖರ್ಚು ಮಾಡುವ ಹಣ ಎಕಾನಮಿ ಯಂತ್ರದಲ್ಲಿ ವೇಗವಾಗಿ ಕೈಬದಲಾಗುತ್ತಿದೆ. ಇದು ಹೆಚ್ಚಿನ ಆದಾಯಕ್ಕೆ ಕಾರಣವಾಗುತ್ತಿದೆ. ಇನ್ ಕಂ ಟ್ಯಾಕ್ಸ್ ಕದಿಯದ ಜನ ಟೆಕ್ಕಿ ಗಳು. ಟ್ಯಾಕ್ಸ್ ಹಾಲಿಡೆ ಇರೋದು ಕಂಪನಿಗಳಿಗೆ ಉದ್ಯೋಗಿಗಳಿಗಲ್ಲ..ಇದಕ್ಕೆ ಕಾರಣ ಸರ್ಕಾರ.. ಅವರನ್ನು ಕೇಳಿ.

NADIPREETI said...

ಇವನ್ಯಾರಪ್ಪ ಸೂಪರ್ ಆಗಿದೆ ಗುರೂ ಅಂದಿದ್ದು ಅಂತ ನೋಡಿದರೆ ನೀವು.
ಪ್ರೀತಿಗೆ ಸಲಾಮ್.
ನಿಮ್ಮ ಬರಹ ಓದಲಿಲ್ಲ. ಕಮೆಂಟ್ ಓದಿದೆ. ಇಷ್ಟ ಆಯ್ತು.
ಮುಂದಾ? ಇನ್ನಷ್ಟು ಬರೀರ್ರಿ.

Anonymous said...

ಈ ಎಲ್ಲಾ ಅಧ್ವಾನಕ್ಕೆ ಕಾರಣ ಐಟಿಯವರು ಗಳಿಸುತ್ತಿರುವ ಸಂಬಳ ಅಂದುಕೊಂಡಿದ್ದೆ ನಾನು .ಆದರೆ ಕಾರಣ ಅದಲ್ಲ ! ಕಾರಣ ಏನೂಂತ ನಂಗೂ ಗೊತ್ತಿಲ್ಲ! ಗೊತ್ತಿದ್ರೆ ನೀವು ಹೇಳಿ !
envy

nagathihalliramesh said...

sadeepa neenu matthu ninna alemari hudukaata haageye kalajila barahagalu eshtavayithu kaanoo