Friday, January 22, 2010

ಸ್ವಮೇಕ್----ರಿಮೇಕ್----ಕಿರಿಕ್....!

~~~~~~~~~~~~~~~~~~~~~~~ಸ್ವಮೇಕ್~~~~~~~~~~~~~~~~~~~~~~
'ರಾಮ್’ ತೆಲುಗಿನ ’ರೆಡಿ’ಯ ರಿಮೇಕ್ ಅಂತೆ. ’ಸೂರ್ಯಕಾಂತಿ’ ತೆಲುಗಿನ ’ಅತಿಥಿ’ಯ ಹಾಗೇ ಇದೆಯಂತೆ.ಗಣೇಶ್ ’ತ್ರೀ ಈಡಿಯಟ್ಸ್ ’ ಮಾಡ್ತಾರಂತೆ.ಈ ಸುದ್ದಿಗಳನ್ನೆಲ್ಲಾ ಕೇಳ್ತಾ ಇದ್ರೆ ನಖಶಿಖಾಂತ ಉರಿಯುತ್ತೆ.ಎಷ್ಟು ಅಂತ ಸಹಿಸೋದು ?

ಪರಭಾಷಾ ಚಿತ್ರಗಳ ಹಾವಳಿ ಬಗ್ಗೆ ನಮ್ಮ ಕನ್ನಡ ಚಿತ್ರರಂಗದವರು ಅಸಮಧಾನ ವ್ಯಕ್ತ ಪಡಿಸ್ತಾನೆ ಇರ್ತಾರೆ.ಆದ್ರೆ ಅವರಿಗೆ ರಿಮೇಕ್ ಮಾಡಲು ಪರಭಾಷಾ ಚಿತ್ರಗಳೇ ಬೇಕು.

ಮೊನ್ನೆ ಲೂಸ್ ಮಾದನ ಹೊಸ(?) ಚಿತ್ರ ’ರಾವಣ’ದ ಬಗ್ಗೆ ಚಿತ್ರದ ನಿರ್ಮಾಪಕರು ತಮ್ಮ ಅಭಿಪ್ರಾಯ ಹೇಳ್ತಾ ’ತಮಿಳಿನ ಧನುಷ್ ಗಿಂತ ನಮ್ಮ ಯೋಗೇಶ್ ಚೆನ್ನಾಗಿ ಮಾಡಿದ್ದಾನೆ ’ ಅಂದುಬಿಡೋದಾ?ಕನ್ನಡದ ಧನುಷ್ ಅಂತ ಹೆಸರು ಪಡೆದುಕೊಂಡಿದ್ದಕ್ಕೆ ಒಂದರ ಮೇಲೊಂದು ಧನುಷ್ ನ ಚಿತ್ರಗಳನ್ನು ಭಟ್ಟಿ ಇಳಿಸ್ತಾ ಇದ್ದಾನೆ ಯೋಗೀಶ !

ಸಧ್ಯದ ಮಟ್ಟಿಗೆ ಖುಶಿ ಪಡಲು ಒಂದೇ ಕಾರಣ ಚಲನಚಿತ್ರಗಳ ಸಂಗೀತ ! ಸಧ್ಯ ನಮ್ಮ ಸಂಗೀತ ನಿರ್ದೇಶಕರೇ ನಾವೆಲ್ಲಾ ಕೊಂಚ ತಲೆ ಎತ್ತಿ ಗರ್ವದಿಂದ ಓಡಾಡೋ ಹಾಗೆ ಮಾಡಿದ್ದಾರೆ.ಅವರಿಗೆ ಅಭಿನಂದನೆಗಳು.

ಕನ್ನಡ ನಿರ್ದೇಶಕರ ಬಳಿ ಕೇಳಿದ್ರೆ ’ ಕಥೆ ಇಲ್ಲ ಸ್ವಾಮಿ ’ ಅಂತಾರೆ.ನಾವೇನು ಕನ್ನಡದ್ದೇ ಕಥೆ ಬೇಕು ಅಂದಿದ್ದೀವಾ? ಯವುದೋ ಜಪಾನೀಸ್ ಭಾಷೆಯ ಕಥೆಯ ಅಧರಿತ ಚಿತ್ರವನ್ನೂ ಸೂಕ್ತ ತಿದ್ದುಪಡಿ ಮಾಡಿ ಬಳಸಬಹುದು.ಕನ್ನಡದಲ್ಲಿ ಬೇಕಾದಷ್ಟು ಕಥೆಗಾರರಿದ್ದಾರೆ.ಆದರೂ ಹಿತ್ತಲ ಗಿಡ ಮದ್ದಲ್ಲ ಅನ್ನೋದೆ ನಮ್ಮ ಅನಿಸಿಕೆ ಆದ್ರೆ ಬೇರೆ ಹಿತ್ತಲಿನ ಗಿಡವನ್ನು ಬಳಸಿ ಮದ್ದು ಮಾಡಿ.ಯಾಕೆ ಮದ್ದನ್ನೆ ತಗೊಂಡು ಬರ್ತೀರಾ?ತಮಿಳು ಕಥೆಯೇ ಬೇಕಿದ್ರೆ ತಮಿಳುನಾಡಿನ ಯಾವುದೋ ಕತೆಯನ್ನೆ ಚಿತ್ರ ಮಾಡಬಹುದು(ಕದಿಯೋದಲ್ಲ,ಕಥೆಗಾರನಿಗೆ ಸೂಕ್ತ ಸಂಭಾವನೆ ಕೊಟ್ಟು!).ಈ ರೀತಿ ಹೇಳಿದ್ರೆ ನಮ್ಮ ಬಳಿ ಅವರಿಗೆ ಕೊಡೋಕೆ ಕಾಸಿಲ್ಲ ಅಂತಾರೆ.

ಎಲ್ಲೋ ಫಾರಿನ್ ಗೆ ಹೋಗಿ ಅಲ್ಲಿ ಪಟ್ಟಾ ಪಟ್ಟಿ ಚಡ್ಡಿ ಹಾಕಿ ಡ್ಯಾನ್ಸ್ ಶೂಟ್ ಮಾಡೋಕೆ ಕಾಸಿದೆ. ಆದ್ರೆ ಕಥೆಗೆ ಕಾಸಿಲ್ಲ!!!

ಏನ್ ಮಾಡೋದ್ ಹೇಳಿ ನಮ್ ಹಣೆ ಬರಹ!

~~~~~~~~~~~~~~~~~~~~~~~ರಿಮೇಕ್~~~~~~~~~~~~~~~~~~~~~~
ಈ ಜನ ಯಾಕೆ ರಿಮೇಕ್ ಬಗ್ಗೆ ಕಿಡಿ ಕಾರ್ತಾರೋ ಗೊತ್ತಿಲ್ಲ ಕಣ್ರಿ!ನೋಡಿ ನಮಗೆ ಎಲ್ಲಾ ಭಾಷೆಗಳು ಅರ್ಥ ಆಗಲ್ಲ.ಹಾಗಾಗಿ ನಾವು ಆ ಭಾಷೆಯಲ್ಲಿ ತಯಾರಾಗಿರೋ ಸಿನೆಮಾ ನೋಡೋ ಸಾಧ್ಯತೆಗಳು ತೀರಾ ಕಮ್ಮಿ.ಅಂಥದ್ದರಲ್ಲಿ ನಮ್ಮ ಚಿತ್ರ ನಿರ್ಮಾಪಕರು ಪಾಪ ಅನ್ಯ ಭಾಷೆಯ ಬರೀ ಹಿಟ್ ಆಗಿರೋ ಚಿತ್ರಗಳನ್ನಷ್ಟೇ ನಮಗೆ ರಿಮೇಕ್ ಮಾಡಿ ತೋರಿಸಿದ್ರೆ ಏನ್ ನಷ್ಟ ಅಂತ ನಂಗೆ ಗೊತ್ತಾಗ್ತಿಲ್ಲ! ಅವರು ಆ ರೀತಿ ಮಾಡಿದ್ರಿಂದಲೇನಮಗೆ ’ಆಟೋಗ್ರಾಫ್’ ,’ಹುಚ್ಚ’ ,ಮುಂತಾದ ಒಳ್ಳೆಯ ಸಿನೆಮಾಗಳು ನೋಡೋಕೆ ಸಾಧ್ಯ ಆಗಿದ್ದು.

ನಮಗೆ ಗೋಬಿ ಮಂಚೂರಿ ತಿನ್ನೋವಾಗ ಅದು ರಿಮೇಕ್ ಅನ್ಸೋದೇ ಇಲ್ಲ! ನೂಡಲ್ಸ್ ತಿನ್ನೋವಾಗ್ಲೂ ’ಅದು ಚೈನಿಸ್ ಆಗಿರ್ಬಹುದು ಆದ್ರೆ ಮಾಡಿರೋದು ನಮ್ಮ ’ಅಡಿಗಾಸ್’ ನವ್ರೇ ತಾನೇ ’ಅಂತ ಬಾಯಿ ಚಪ್ಪರಿಸಿ ತಿಂತೀವಿ.ಯಾಕೆ ಗೋಬಿ ,ನೂಡಲ್ಸ್ ಗಳು ಚೈನೀಸ್ ನಮಗೆ ರಿಮೇಕ್ ಥರ ಅನ್ಸಲ್ಲ?ಹಾಗೇ ನೋಡೋದಕ್ಕೆ ಹೋದ್ರೆ ಕಾಫಿ,ಟೀ ಕೂಡ ನಮ್ಮ ದೇಶದ್ದಲ್ಲ.ಯಾರೋ ಕೊಟ್ಟ ರಿಮೇಕ್ ಸರಕು! ರೇಶ್ಮೆ ಕೂಡ ಎಲ್ಲಿಂದಲೋ ಭಾರತಕ್ಕೆ ಬಂದಿದ್ದು.ಆದ್ರೂ ನಾವು ಅದನ್ನು ಪ್ರೀತಿಯಿಂದಲೆ ಸ್ವೀಕರಿಸಿದ್ದೀವಿ.

ರಿಮೇಕ್ ಚಿತ್ರಗಳ ಬಗ್ಗೆ ಈ ಮುನಿಸು ತರವೇ?

~~~~~~~~~~~~~~~~~~~~~~~ಕಿರಿಕ್~~~~~~~~~~~~~~~~~~~~~~

ಎರಡೂ ನಾನೇ ಬರೆದಿದ್ದು ! ದಯವಿಟ್ಟು ಹೊಡೆಯೋಕೆ ಕೋಲು ಹುಡುಕ್ಬೇಡಿ!

ನಿಮಗೆ ಯಾವುದು ಬೇಕೋ ಅದನ್ನು ಮಾತ್ರ ಸ್ವೀಕರಿಸಿ .

Monday, January 4, 2010

ರಣ್...ಮತ್ತೊಂದು ಹಿಂದಿ ಚಿತ್ರ ತುಂಬಾ ನಿರೀಕ್ಷೆಯನ್ನು ಹುಟ್ಟಿಸಿದೆ!

’ರಣ್ ’ ಚಿತ್ರ ಬಿಡುಗಡೆಯಾಗೋದನ್ನೇ ಕಾಯ್ತಾ ಇದ್ದೀನಿ ನಾನು.ಚಿತ್ರದ trailers ತುಂಬಾ ಕುತೂಹಲ ಹುಟ್ಟಿಸಿದೆ.'Next time when you watch News ,think again ' ಅನ್ನೋ ಬುದ್ಧಿಮಾತು ಕೂಡಾ ಬರ್ತಾ ಇದೆ ಟ್ರೇಲರ್ ನಲ್ಲಿ.ರಣ್ ಚಿತ್ರ ಸುದ್ದಿ ಮಾಧ್ಯಮದ ಹುಳುಕುಗಳನ್ನು ತೋರಿಸುವಲ್ಲಿ ಬಹುಷಃ ಯಶಸ್ವಿಯಾಗಬಹುದೇನೋ.

ಅಮಿತಾಬ್ ನಟಿಸಿರೋದ್ರಿಂದ ಕೊಟ್ಟ ಕಾಸಿಗೇನೂ ಮೋಸವಾಗಲಾರದು!ಚಿತ್ರದ ಇನ್ನೊಂದು ಆಕರ್ಷಣೆ ’ನಮ್ಮ’ ಸುದೀಪ್! ’ಫೂಂಕ್’ ಚಿತ್ರದಲ್ಲಿ ತಮ್ಮ ಉತ್ತಮ ಅಭಿನಯದಿಂದ ಎಲ್ಲರ ಮನ ಗೆದ್ದಿರೋ ಕಿಚ್ಚ ’ರಣ್’ ಸಿನೆಮಾದಿಂದ ಖಾಯಂ ಆಗಿ ಬಾಲಿವುಡ್ ಕಡೆ ವಲಸೆ ಹೋಗದಿರಲಿ ಅನ್ನೋದೇ ಹಾರೈಕೆ(ಹಾರೈಕೆ ಕೆಟ್ಟದಾ ಒಳ್ಳೆಯದಾ ಗೊತ್ತಾಗ್ತಿಲ್ಲ!)

ಚಿತ್ರದ ಟೈಟಲ್ ಹಾಡಿನ ಬಗ್ಗೆ ಮಾತ್ರ ನಂದೂ ತಕರಾರಿದೆ.ರಾಷ್ಟ್ರಗೀತೆ ಯನ್ನು ತಿರುಚುವ ಹಾಳು ಐಡಿಯಾ ಅದ್ಯಾವನು ಕೊಟ್ಟನೋ ದೇವರಿಗೇ ಗೊತ್ತು !ಇದನ್ನೇ ನ್ಯೂಸ್ ಚ್ಯಾನೆಲ್ ಗಳು ಅಸ್ತ್ರವಾಗಿ ಬಳಸುವ ಸಾಧ್ಯತೆಗಳಿವೆ.

ಬಾಲಿವುಡ್ ನ ಜನ ಸದಾ ಕಾಂಟ್ರೋವರ್ಶಿಯಲ್ ವಸ್ತುಗಳನ್ನಿಟ್ಟುಕೊಂಡು ಸಿನೆಮಾ ಮಾಡ್ತಾ ಇರ್ತಾರೆ.ಹಾಗಾಗಿ ನಮಗೆ ಕೆಲವು ಕರಾಳ ಮುಖಗಳ ದರ್ಶನ ಆಗ್ತಾ ಇರುತ್ತೆ.ಆದ್ರೆ ನಮ್ಮಲ್ಲಿ ಪಾಪ ’ ಮಠ ’ ದ ಗುರುಪ್ರಸಾದ್ ಕಾಂಟ್ರೋವರ್ಷಿಯಲ್ ಸಬ್ಜೆಕ್ಟ್ ಕೈಗೆತ್ತಿ ಕೊಂಡಾಗಲೇ ಹೀರೋ ಎಸ್ಕೇಪ್ ಅಂದು ಬಿಟ್ಟಿದ್ದಾರೆ.ಆದರೆ ಗುರು ಹಿಂಜರಿದಿಲ್ಲ.

'ಡೈರೆಕ್ಟರ್ ಸ್ಪೆಷಲ್ ’ ನ ಡೈರೆಕ್ಟರ್ ಇನ್ನೂ ಸ್ಪೆಶಲ್!

Photo Courtesy :http://www.moviethread.com/