Sunday, December 28, 2008

ಪರಕೀಯರು !

किसी बॆगानॆ कॊ अप्ना बनानॆ कॆ लियॆ अप्नॊ कॊं बॆगाना किया
किसी बॆगानॆ कॊ अप्ना बनानॆ कॆ लियॆ अप्नॊ कॊं बॆगाना किया........

बॆगानॆ तॊ बॆगानॆ ही रहॆ .... अप्नॆ भी बॆगानॆ हुये............
-संदीप कामत

ಯಾರೋ ಪರಕೀಯರನ್ನು ನನ್ನವರನ್ನಾಗಿಸಲು ನನ್ನವರನ್ನು ಪರಕೀಯರನ್ನಾಗಿಸಿದೆ ......
ಯಾರೋ ಪರಕೀಯರನ್ನು ನನ್ನವರನ್ನಾಗಿಸಲು ನನ್ನವರನ್ನು ಪರಕೀಯರನ್ನಾಗಿಸಿದೆ ...............
ಪರಕೀಯರು ಪರಕೀಯರಾಗೇ ಉಳಿದರು......ಜೊತೆಗೆ ನನ್ನವರೂ ಪರಕೀಯರಾದರು......................

-ಸಂದೀಪ್ ಕಾಮತ್

Friday, December 12, 2008

ಅಖಂಡ ಭಾರತ ? ? ?



ಕೆಲ ವರ್ಷದ ಹಿಂದೆ ಶೇಶಾದ್ರಿಪುರಂ ಕಾಲೇಜಿನಲ್ಲಿ ಒಂದು ಉಪನ್ಯಾಸ ಮಾಲಿಕೆ ಇತ್ತು .’ಭಾರತ ದರ್ಶನ ’ ಉಪನ್ಯಾಸ ಮಾಲಿಕೆ ಅದು.ಶ್ರೀ ವಿದ್ಯಾನಂದ ಶೆಣೈ ಅವರು ದೊಡ್ದ ’ಅಖಂಡ ಭಾರತ’ದ ಭೂಪಟವನ್ನು ತೋರಿಸಿ ಭಾಷಣ ಮಾಡ್ತಾ ಇದ್ರೆ ಮೈಯೆಲ್ಲಾ ರೋಮಾಂಚನಗೊಂಡಿತ್ತು .

ನಿನ್ನೆ ಒಂದು ಮೈಲ್ ಬಂದಿತ್ತು .ಅದನ್ನು ನೋಡಿದ ಮೇಲಂತೂ ಶ್ರೀ ವಿದ್ಯಾನಂದ ಶೆಣೈಯವರ ನೆನಪು ಕಾಡುತ್ತಿದೆ.ಆ ಮೈಲ್ ನಲ್ಲಿ ಪಾಕಿಸ್ತಾನ 2020ರಲ್ಲಿ ಪ್ರಪಂಚದ ಭೂಪಟದಲ್ಲಿ ಪಾಕಿಸ್ತಾನ ಹೇಗಿರುತ್ತದೆ ಅನ್ನೋದನ್ನು ಹಾಕಿದ್ದಾರೆ.ವಿದ್ಯಾನಂದ ಶೆಣೈಯವರಂತೂ ಆ ಅಖಂಡ ಭಾರತದ ಭೂಪಟವನ್ನು ಹಿಡಿದುಕೊಂಡು ಕರ್ನಾಟಕದಾದ್ಯಂತ ’ಭಾರತ ದರ್ಶನ’ ಉಪನ್ಯಾಸ ಮಾಲಿಕೆಯನ್ನು ನೀಡಿದ್ದರು.ಅವರ ಅಖಂಡ ಭಾರತದ ಕನಸನ್ನು ಈಗ ಪಾಕಿಸ್ತಾನಿಗಳು ನಿಜ ಮಾಡಲು ಹೊರಟಿದ್ದಾರೆ , ಭಾರತದ ಮುಕ್ಕಾಲು ಭಾಗವನ್ನು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನದಲ್ಲಿ ಸೇರಿಸಿ !

ಹಿರಿಯ ಪತ್ರಕರ್ತರೊಬ್ಬರು "ಪಾಕಿಸ್ಥಾನ ಪ್ರಚೋದಿತ ಭಯೋತ್ಪಾದಕ ಚಟುವಟಿಕೆಯನ್ನು ಧರ್ಮವನ್ನು ಹೊರತುಪಡಿಸಿ ನೋಡುವುದಕ್ಕೆ ನಮ್ಮ ವೈಚಾರಿಕ ವರ್ಗಕ್ಕೂ ಯಾಕೆ ಸಾಧ್ಯವಾಗುತ್ತಿಲ್ಲ ?
ಈ ಭಯೋತ್ಪಾದಕ ಚಟುವಟಿಕೆಯನ್ನು ಭಯೋತ್ಪಾದಕ ಚಟುವಟಿಕೆಯನ್ನಾಗಿ ನಾವು ನೋಡಬೇಕು. ಇದು ಮುಸ್ಲಿಂ ರಾಷ್ಟ್ರವೊಂದರಿಂದ ಪ್ರಚೋದಿತ ಎಂಬುದು ನಿಜವಾದರೂ ಅದು ಮುಖ್ಯವಲ್ಲ " ಅಂತ ಬರೆದಿದ್ದಾರೆ.

ಅದು ಹೇಗೆ ಸಾಧ್ಯ ಅನ್ನೋದು ನನಗೆ ಇನ್ನೂ ಅರ್ಥ ಆಗಿಲ್ಲ! ಪಾಕಿಸ್ತಾನ ಅನ್ನೋದೇ ಧರ್ಮ .ಅಲ್ಲಿ ನಡೆಯೋದೆಲ್ಲ ಧರ್ಮಕ್ಕೆ ಸಂಬಂಧ ಪಟ್ಟದ್ದೇ.ಹೀಗಿದ್ರೂ ನಾವು ಭಯೋತ್ಪಾದನೆಯನ್ನು ಧರ್ಮದಿಂದ ಪ್ರತ್ಯೇಕಿಸಿ ನೋಡಬೇಕಂತೆ!
ತಾಜ್ ಹೋಟೇಲಿಗೆ ಬಂದ ಉಗ್ರರು ತಾಜ್ ನಲ್ಲಿದ್ದ ಸಂಪತ್ತನ್ನು ಲೂಟಿ ಮಾಡಲು ಬಂದಿದ್ರೆ ಬಹುಶಃ ಆ ಕೃತ್ಯವನ್ನು ಧರ್ಮದಿಂದ ಪ್ರತ್ಯೇಕಿಸಿ ನೋಡಬಹುದಿತ್ತೇನೋ .ಆದರೆ ಹಾಗಾಗಿಲ್ಲ.

ನಾವೆಲ್ಲರೂ ಇದನ್ನು ಮುಸ್ಲಿಂ ಉಗ್ರವಾದ ಅನ್ನೋದಕ್ಕೆ ತಯಾರಿಲ್ಲ ,ಯಾಕಂದ್ರೆ ನಮ್ಮನ್ನು ಬೇರೆಯವರು ತಪ್ಪು ತಿಳಿದುಕೋತಾರೇನೊ ಅನ್ನೋ ಭಯ.ಭಯೋತ್ಪಾದಕ ಕೃತ್ಯ ನಡೆಸುವವರೇ ಇದನ್ನು ’ಧರ್ಮಯುದ್ಧ’ ಅಂತ ಘಂಟಾಘೋಶವಾಗಿ ಹೇಳಿದ್ದಾರೆ .ಆದರೆ ನಮ್ಮ ಬುದ್ಧಿಜೀವಿಗಳಿಗೆ ಇದು ಧರ್ಮಕ್ಕೆ ಸಂಬಂದ ಪಟ್ಟದ್ದಲ್ಲ!

ಯಾರೋ ಮತಾಂಧ ಮುಸ್ಲಿಂ ಈ ರೀತಿಯ ಕೃತ್ಯ ಎಸಗಿದ್ದಾನೆ ಅಂದ ಮಾತ್ರಕ್ಕೆ ನಾವೇನೂ ಎಲ್ಲ ಮುಸ್ಲಿಮರ ಬಗ್ಗೆ ಅನುಮಾನದಿಂದ ನೋಡುತ್ತಿಲ್ಲ -ನೋಡೋದೂ ಇಲ್ಲ .ಹೀಗೆ ನೋಡ್ತಾ ಇದ್ದೀವಿ ಅನ್ನೋದು ಭ್ರಮೆ !

ನಮ್ಮ ಬಾಲಿವುಡ್ ನಲ್ಲಂತೂ ಮುಸ್ಲಿಂ ಜನಾಂಗದವರ ಕೊಡುಗೆ ಅಪಾರ.ಮುಸ್ಲಿಂ ಕವಿ ಜಾವೆದ್ ಅಖ್ತರ್ ಬರೆದ ಭಜನೆಗೆ (ರಾಧ ಕೈಸೆ ನ ಜಲೇ) ಮುಸ್ಲಿಂ ಸಂಗೀತ ನಿರ್ದೇಶಕ ರಹಮಾನ್ ಸಂಗೀತ ನಿರ್ದೇಶಿಸಿ ಮುಸ್ಲಿಂ ಹೀರೋ ಆ ಹಾಡಿನಲ್ಲಿ ನಟಿಸ್ತಾನೆ ಅನ್ನೋದಾದ್ರೆ ಅದು ಬರೀ ಭಾರತದಲ್ಲಷ್ಟೇ ಸಾಧ್ಯ.

ಹಿಂದೂ ಧರ್ಮಕ್ಕೆ ವಯಸ್ಸಾಯ್ತು .ಅದು ಕಾಲಕ್ಕೆ ತಕ್ಕಂತೆ ವಿಕಸಿತಗೊಳ್ತಾ ಇಲ್ಲ ಅನ್ನೋದು ಕೆಲವರ ಕಂಪ್ಲೇಂಟು.ನನಗಂತೂ ಹಾಗೆ ಅನ್ನಿಸಿಲ್ಲ ಯಾವತ್ತೂ.
ಕಾಲ ಬದಲಾಯಿತು ಐಟಿ-ಬಿಟಿ ಬಂತು ಇಂಟರ್ನೆಟ್ ಬಂತು ಇನ್ನೇನು ಧರ್ಮ ತನ್ನ ಮಹತ್ವ ಕಳ್ಕೊಳ್ಳುತ್ತೆ ಅಂತ ವಾದ ಮಾಡಿದ್ರು ಕೆಲವರು .ಆದರೆ ಏನಾಯ್ತು ಇಂಟರ್ನೆಟ್ ಬಂತು ಅದೇ ಇಂಟರ್ನೆಟ್ ನಿಂದ ಆನ್ಲೈನ್ ದೇವರ ದರ್ಶನ ಮಾಡೋಕೆ ಶುರು ಮಾಡಿದ್ವಿ ! ಚ್ಯಾನೆಲ್ಗಳು ವಿಪರೀತವಾದವು,ಆದರೆ ಆಧ್ಯಾತ್ಮಕ್ಕೆಂದೇ ಪ್ರತ್ಯೇಕ ಚ್ಯಾನೆಲ್ ಗಳು ಹುಟ್ಟಿಕೊಂಡವು.

ಸಾಫ್ಟ್ವೇರ್ ಬೂಮ್ ಬಂತು -ಆದ್ರೆ ಜಾತಕ ಬರೆಯೊದಕ್ಕೆಂದೆ ಆ ಸಾಫ್ಟ್ವೇರ್ ನ ಉಪಯೋಗಿಸಿದ್ವಿ ನಾವು!

ವೀಣಾ ಅನ್ನೋರು ಅಂದು ಸಲ ಬೇಸರದಿಂದ ಬರೆದಿದ್ದರು "ಸಂದೀಪ್ ನಿಮ್ಮ ಬ್ಲಾಗ್ ಯಾವಾಗ್ಲೂ ಓದ್ತಾ ಇದ್ದೆ ಆದ್ರೆ ಯಾವಾಗ ನೀವು ಧರ್ಮದ ಬಗ್ಗೆ ಬರೆಯೋದಕ್ಕೆ ಶುರು ಮಾಡಿದ್ರೋ ಅಂದಿನಿಂದ ಓದೋದು ಬಿಟ್ಟೆ " ಅಂತ.ಆದ್ರೆ ಈ ಪಾಕಿಸ್ತಾನದ ’ಅಖಂಡ ಭಾರತ (ಸಾರಿ ಅಖಂಡ ಪಾಕಿಸ್ತಾನ!) ’ ದ ನಕ್ಷೆ ನೋಡಿದ ಮೇಲಂತೂ ಬರೆಯದೆ ಇರೋಕೆ ಸಾಧ್ಯ ಆಗಿಲ್ಲ.

ಹೇಗೆ ತಾಜ್ ಮೇಲೆ ದಾಳಿ ಮಾಡಲು ಧರ್ಮ ಕಾರಣವೋ ,ಲಕ್ಷಾಂತರ ಭಾರತೀಯರು ದೇವರ ಮೇಲಿನ ಭಯದಿಂದ ಯಾವುದೇ ತಪ್ಪೆಸಗದೆ ಸುಮ್ಮನಿರೋದಕ್ಕೂ ಧರ್ಮವೆ ಕಾರಣ.

ಯಾರೋ ತಲೆ ಮಾಸಿದ ಧರ್ಮಾಂಧ ಉಗ್ರ, ಧರ್ಮದ ಹೆಸರಲ್ಲಿ ರಕ್ತದೋಕುಳಿ ನಡೆಸಿದ ಮಾತ್ರಕ್ಕೆ ಧರ್ಮವನ್ನು ಬಿಟ್ಟು ಬನ್ನಿ ಅಂತ ಹೇಳೋದು ಸರಿಯಲ್ಲ.

ಏನಂತೀರಾ?


ಚಿತ್ರ ಕೃಪೆ : ಲಷ್ಕರೆ ತಯ್ಬ

Sunday, December 7, 2008

ಅಗ್ನಿದಿವ್ಯ



ನಿನ್ನೆ ಶನಿವಾರ ನಾನು ಮಾಡಿದ ಎಡವಟ್ಟಿನಿಂದಾಗಿ ಒಂದು ಕವಿಗೋಷ್ಠಿಯಲ್ಲಿ ಸಿಲುಕಿಕೊಂಡ ಘಟನೆ ನಡೆಯಿತು.ಎಡವಟ್ಟು ನಾನೇ ಮಾಡಿಕೊಂಡ್ರು ಅದಕ್ಕೆ ಹಲವು ಜನರು ಕಾರಣಕರ್ತೃರು ಇದ್ದಾರೆ!

ಏನಾಯ್ತು ಅಂದ್ರೆ ಕೆಲ ದಿನಗಳ ಹಿಂದೆ ’ಅವಧಿ’ಯಲ್ಲಿ ’ಗಾಂಧಿ ಸಾಹಿತ್ಯಸಂಘ’ದವರು ನಡೆಸಿಕೊಡಲಿರುವ ಜಿ.ಪಿ ರಾಜರತ್ನಂ ಜನ್ಮಶತಾಬ್ದಿ ಆಚರಣೆಯ ಬಗ್ಗೆ ಒಂದು ಕಾರ್ಯಕ್ರಮದ ಬಗ್ಗೆ ಒಂದು ಪ್ರಕಟಣೆ ಬಂದಿತ್ತು.ಅದರಲ್ಲಿ ನನಗೆ ಗಮನ ಸೆಳೆದದ್ದು ಸಂಧ್ಯಾದೇವಿಯವರ ಹೆಸರು.ಅವರನ್ನು ಮುಖತ ನೋಡಬೇಕೆಂಬ ಆಸೆ ಬಹಳ ದಿನಗಳಿಂದ ಇತ್ತು ನಂಗೆ.ಆದ್ರೆ ಕಾರ್ಯಕ್ರಮ ಶುಕ್ರವಾರವಾದ್ದರಿಂದ ಹೋಗಲು ಖಂಡಿತ ಸಾಧ್ಯವಿಲ್ಲ ಅನ್ನೋ ನಿರಾಸೆಯಲ್ಲಿ ನಾನಿದ್ದೆ ,ಹಾಗೆಯೆ ಅದನ್ನು ಮರೆತಿದ್ದೆ ಕೂಡಾ.
ಆದ್ರೆ ಶನಿವಾರ ಎಂದಿನಂತೆ ಬೆಳಿಗ್ಗೆ ಹ್ಯಾಂಗೋವರ್ ಇಳಿದ ನಂತರ ’ವಿಜಯಕರ್ನಾಟಕ’ ಓದ್ಬೇಕಾದ್ರೆ ಅದರಲ್ಲಿ ಗಾಂಧಿಸಾಹಿತ್ಯ ಸಂಘದ ಕಾರ್ಯಕ್ರಮದ ಬಗ್ಗೆ ’ಈ ದಿನದ ಕಾರ್ಯಕ್ರಮ’ದ ಪಟ್ಟಿಯಲ್ಲಿ ಹಾಕಿದ್ರು.ಸಾಲದ್ದಕ್ಕೆ ಬಿಡುಗಡೆಯಾಗುವ ಪುಸ್ತಕಗಳು ಅಂತ ಸಂಧ್ಯಾದೇವಿಯವರ ’ಅಗ್ನಿದಿವ್ಯ’ದ ಬಗ್ಗೆ ಪ್ರಸ್ತಾವಿಸಿದ್ದರು.

ಹೇಗೂ ನನ್ನ ಜ್ಞಾಪಕ ಶಕ್ತಿಯ ಬಗ್ಗೆ ನನಗೇ ಕಾನ್ಫಿಡೆನ್ಸ್ ಇಲ್ಲ ! ಹಾಗಾಗಿ ನಾನು ’ಅವಧಿ’ಯಲ್ಲಿ ನೋಡಿದ ದಿನಾಂಕ ತಪ್ಪಿರಬಹುದು ಅಂತ ಖುಶಿಯಿಂದ ಸಾಯಂಕಾಲ ಕಾರ್ಯಕ್ರಮಕ್ಕೆ ಹೋಗುವ ನಿರ್ಧಾರ ಮಾಡಿದೆ.

ಹೇಗೂ ಸಂಧ್ಯಾದೇವಿಯವರನ್ನು ನೋಡ್ಬೇಕಿತ್ತು ನಂಗೆ ,ಅದೂ ಅಲ್ಲದೆ ಎರಡು ವರ್ಷಗಳಿಂದ ಕಪಾಟಿನಲ್ಲಿ ಬೆಚ್ಚಗೆ ಕುಳಿತಿರುವ ’ಮಾತು ಚಿಟ್ಟೆ-ಬೆಂಕಿ ಬೆರಳು’ ಪುಸ್ತಕದ್ದು ಒಂದೇ ಕಂಪ್ಲೇಂಟು - ’ನಂಗೆ ಯಾರೂ ಕಂಪೆನಿ ಇಲ್ಲ ಇಲ್ಲಿ.ಆ ಚೇತನ್ ಭಗತ್ ನ ’One Night At Call Center ' ತಿಕ್ಕಲು ತಿಕ್ಕಲಾಗಿ ಮಾತಾಡ್ತಾವೆ ನನ್ ಹತ್ರ !ನಂಗೆ ಯಾವುದಾದ್ರೂ ಒಳ್ಳೆಯ ಕಂಪೆನಿ ಕೊಡಿಸು ’ ಅಂತ!ಅದಕ್ಕೆ ಕಂಪೆನಿ ಕೊಡಲಾದ್ರೂ ’ಅಗ್ನಿದಿವ್ಯ’ ತಗೊಳ್ಳಬೇಕಿತ್ತು ನಾನು.

ಸಂಜೆ ಗಾಂಧಿಸಾಹಿತ್ಯ ಸಂಘ ಹುಡುಕಿಕೊಂಡು ಒಳಗೆ ಹೊಕ್ಕು ಕೂತೆ.ಆಗ ತಾನೇ ಪ್ರಾರಂಭ ಆಗಿತ್ತು ಕಾರ್ಯಕ್ರಮ .ಅಕ್ಕಪಕ್ಕ ನೋಡಿ ಸ್ವಲ್ಪ ಬೇಜಾರಾಯ್ತು !ಯಾಕಂದ್ರೆ ಇದ್ದಿದ್ದೆ ಹತ್ತೆನ್ನರಡು ಜನ!ಅದರಲ್ಲೂ ನನ್ನನ್ನು ಬಿಟ್ರೆ ಎಲ್ಲ ಹಿರಿ ತಲೆಗಳು.ಅಪ್ಪಿ ತಪ್ಪಿ ಏನಾದ್ರೂ ಹಿರಿಯನಾಗರಿಕರ ಕಾರ್ಯಕ್ರಮಕ್ಕೇನಾದ್ರೂ ಬಂದ್ನೇನೋ ಅಂತ ಭಯ ಆಯ್ತು.ಆದರೂ ನಂಗೆ ನಾನೇ ಸಮಾಧಾನ ಮಾಡ್ಕೊಂಡೆ.ಯಾಕಂದ್ರೆ ಹಿಂದಿನ ದಿನ ಮೆಸೇಜ್ ಬಂದಿತ್ತು .ಬಾಬ್ರಿ ಮಸೀದಿಯ ಕರಾಳ ನೆನಪಿಗೆ ಉಗ್ರರು ದುಷ್ಕೃತ್ಯ ಎರಗೋ ಸಾಧ್ಯತೆಗಳಿವೆ .ಹಾಗಾಗಿ ಜನನಿಭಿಡ ಪ್ರದೇಶಗಳಿಗೆ ಹೋಗ್ಬೇಡಿ ಅಂತ.

ಗಾಂಧಿ ಸಾಹಿತ್ಯಸಂಘದಲ್ಲಿ ಅಷ್ಟೇನೂ ಜನನಿಭಿಡತೆ ಕಾಣದ್ದರಿಂದ ಸ್ವಲ್ಪ ’ಸಮಾಧಾನ’ ಆಯ್ತು!

ಕಾರ್ಯಕ್ರಮದ ಮುಗಿದ ಮೇಲೇನೆ ಗೊತ್ತಾಗಿದ್ದು ನಂಗೆ ನಾನು ಎಡವಟ್ಟು ಮಾಡ್ಕೊಂಡಿರೋದು.ಕೊನೆ ತನಕ ಸಂಧ್ಯಾದೇವಿಯವರು ಬರಲೆ ಇಲ್ಲ!(ಹಿಂದಿನ ದಿನ ಅಲ್ವ ಇದ್ದಿದ್ದು ಪುಸ್ತಕ ಬಿಡುಗಡೆ ಕಾರ್ಯಕ್ರಮ ಅವರೆಲ್ಲಿಂದ ಬರ್ತಾರೆ!).

ಆದ್ರೆ ಈ ಕಾರ್ಯಕ್ರಮದಲ್ಲಿ ಭಾಗವಸಿದ್ದಕ್ಕೆ ಏನೂ ಬೇಜಾರಾಗಿಲ್ಲ ನಂಗೆ.ತುಂಬಾನೇ ಚೆನ್ನಾಗಿತ್ತು .ಕಾರ್ಯಕ್ರಮ ಮುಗಿದ ಮೇಲೆ ನನಗನಿಸಿತು - ’ನನಗೂ ಕವಿತೆಗಳು ಅ(ಪಾ?)ರ್ಥವಾಗತ್ತವೆ ’!

ಕವಿಗೋಷ್ಠಿಯ ಅಧ್ಯಕ್ಷತೆಯನ್ನು ’ಅಪರಂಜಿ’ ಶಿವಕುಮಾರ್ ವಹಿಸಿದ್ದರು.ಕವಿ ಗೋಷ್ಟಿಯಲ್ಲಿ ಸುಮಾರು ಏಳೆಂಟು ಜನ ಕವಿಗಳು/ಕವಯತ್ರಿಯರು ತಮ್ಮ ಕವನ ,ಹಾಗೂ ಜಿ.ಪಿ ರಾಜರತ್ನಂರವರ ಕವನಗಳನ್ನು ವಾಚಿಸಿದರು.

ಮೊದಲಿಗೆ ಭಾರತಿದೇವಿಯವರ ಸರದಿಯಾಗಿತ್ತು .ಕೆಲವೊಂದು ಕವನಗಳು ನಂಗೆ ಬೌನ್ಸರ್ ಗಳಾದ್ರೂ ,ಕೆಲವೊಂದು ಅರ್ಥವಾಯ್ತು.ತಮಿಳು ಕವಯತ್ರಿಯೊಬ್ಬರ ಕವನದ ಕನ್ನಡಾನುವಾದ ತುಂಬಾ ಚೆನ್ನಾಗಿತ್ತು.ಕವಿತೆಯ ಶೀರ್ಷಿಕೆ ’ರಕ್ತದಲ್ಲಿ ಬರೆದ ಟಿಪ್ಪಣಿಗಳು’ .ಇನ್ನೊಂದು ಕವನ ಕೂಡಾ ಚೆನ್ನಾಗಿತ್ತು .ಆದ್ರೆ ಶೀರ್ಷಿಕೆ ನೆನಪಿಲ್ಲ ! ಕೊನೆಯ ವಾಕ್ಯ ಮಾತ್ರ ಸೊಗಸಾಗಿತ್ತು ." ಕೋಗಿಲೆ ಮನೆ ಕಟ್ಟುವುದಿಲ್ಲ ,ಅದಕ್ಕೇ ಅದು ಹಾಡುತ್ತದೆ !" .

ಎಲ್ ಜಿ ಮೀರಾರ ’ಅಡುಗೆ ಮನೆ ಸಾಹಿತ್ಯ’ ಕವನ ಹಿಡಿಸಿತು ನಂಗೆ.ಹಾಗೇ ಯಲ್ಲಪ್ಪರವರೂ ಕೆಲವು ಒಳ್ಳೆಯ ಕವನಗಳನ್ನು ವಾಚಿಸಿದರು.ರಾಮಚಂದ್ರ ರಾಯರೆಂಬ ಕವಿ ಜಿ ಪಿ ರಾಜರತ್ನಂ ಬಗ್ಗೆ ಕುಸುಮ ಷಟ್ಪದಿಯಲ್ಲಿರೋ ಒಂದು ಕವನ ವಾಚಿಸಿದರು.

ಇನ್ನಿಬ್ಬರು ಮಹನೀಯರು ಎರಡು ಒಳ್ಳೆಯ ಕವಿತೆಗಳನ್ನು ವಾಚಿಸಿದರು .ಆದ್ರೆ ಅವರ ಹೆಸರುಗಳು ಮಾತ್ರ ಎಷ್ಟು ತಲೆ ಕೆರ್ಕೋಂಡ್ರೂ ನೆನಪಾಗ್ತಿಲ್ಲ ಸಾರಿ!( ಬರೀ ಹೆಂಗಸರ/ಹೆಣ್ಣುಮಕ್ಕಳ ಹೆಸರು ನೆನಪಿರುತ್ತೆ ನಿಂಗೆ ಬಯ್ತೀರಾ ಅಂತ ಗೊತ್ತು ನಂಗೆ I can't help it!).

ಅಧ್ಯಕ್ಷತೆ ವಹಿಸಿದ ಶಿವಕುಮಾರ್ ಅವ್ರೂ ರಾಜರತ್ನಂ ಅವರ ಕೆಲವು ಕವಿತೆಗಳನ್ನು ಹೇಳಿದ್ರು.ಬಹಳ ಸೊಗಸಾಗಿತ್ತು ಅವು ಹಾಸ್ಯಭರಿತ.

’ಅಭಿನವ’ದ ರವಿಕುಮಾರ್ ಮಗ ಸೂರ್ಯವಂಶಿ ಕೂಡಾ ಒಂದು ಹಾಡು ಹಾಡಿದ್ದ .’ಹಬ್ಬದ ದಿನವೇ ಸುಬ್ಬನ ಮನೆಗೊಂದ್ ಆನೆ ಬಂದಿತ್ತು ’ ಅಂತ! ತಾರಕದಲ್ಲಿ ಹಾಡಿದ್ದ ಹುಡುಗ ಪಾಪ.ಕಾರ್ಯಕ್ರಮ ಮುಗಿದ ಮೇಲೆ ಅವನ ಹತ್ರ ಮಾತಾಡಿದ್ದೆ ನಾನು ."ಅಂಕಲ್ ನಿನ್ನೇನೆ ಹಾಡ್ ಬೇಕಿತ್ತು ನಾನು ಅಪ್ಪ ಮೋಸ ಮಾಡಿದ್ರು,ಅದಿಕ್ಕೆ ಇವತ್ತು ಬಿಡ್ಲೇ ಇಲ್ಲ ,ಹಾಡೇ ಬಿಟ್ಟೆ ! ನಂಗೆ ಇನ್ನೂ ಐವತ್ತು ಕನ್ನಡ ಹಾಡುಗಳು ಬರುತ್ತೆ ಹಾಡ್ಲಾ " ಅಂದ ! ಇಂಗ್ಲೀಷ್ ಮೀಡಿಯಂ ಹುಡುಗ -ಐವತ್ತು ಕನ್ನಡ ಹಾಡುಗಳು ! ಅಬ್ಬ!

’ಸಂಚಯ’ ದ ಪ್ರಹ್ಲಾದ್ ಸುಂದರವಾಗಿ ನಿರೂಪಣೆ ಮಾಡಿದ್ರು.(ಹೊರಗಡೆ ಪುಸ್ತಕ ಮಾರುತ್ತಿದ್ದವನ ಹತ್ರ ಕೇಳಿದ್ದು ,ಒಳಗೆ ಜುಬ್ಬ ಧರಿಸಿ ಮಾತಾಡ್ತಾ ಇದ್ರಲ್ಲ ಅವರ್ಯಾರು ಅಂತ .ಅವನು ’ಅದು ಪ್ರಹ್ಲಾದ್ ಸರ್ ’ಅಂದ -ತಪ್ಪಾಗಿದ್ರೆ ನಾನು ಜವಾಬ್ದಾರನಲ್ಲ!)

ಹೊರಗೆ ಬಂದು ಸೀದಾ ಪುಸ್ತಕ ಮಾರುತ್ತಿದ್ದವನ ಬಳಿ ’ಅಗ್ನಿದಿವ್ಯ’ ಕೊಡಿ ಅಂತ ಕೇಳಿ ಪಡೆದೆ.ಮೂವತ್ತು ರೂಪಾಯಿಯ ಪುಸ್ತಕಕ್ಕೆ ಐದು ರೂಪಾಯಿ ಡಿಸ್ಕೌಂಟ್ ! ಆದ್ರೆ ಅದೇ ಮಲ್ಯನ ಟಿನ್ ಬಿಯರ್ ಗೆ ಕೂಡ ಮೂವತ್ತೆಂಟು ರೂಪಾಯಿ ಈಗ -ಛೇ ಎಂಥ ಕಲಿಗಾಲ ಬಂತು!

Monday, December 1, 2008

ಸಂದೀಪನಿಂದ ಸಂದೀಪನಿಗೆ ......


ಯಾಕೋ ಮುಂಬೈ ಘಟನೆ ಬಗ್ಗೆ ಏನೂ ಬರೆಯಲೇಬಾರದು ಅಂತ ನಿರ್ಧರಿಸಿದ್ದೆ .ಆದರೆ ಈ ಸಂದೀಪನ ಫೋಟೊ ನೋಡಿದ ಮೇಲಂತೂ ಬರೆಯದೆ ಇರಲು ಸಾಧ್ಯವೇ ಆಗಿಲ್ಲ ನಂಗೆ!

ಈ ಸಂದೀಪನ ಕಣ್ಣುಗಳಂತೂ ನೆನ್ನೆಯಿಂದ ಬಹಳ ಕಾಡುತ್ತಿವೆ.ಈತನ ಬೇರೆ ಫೋಟೋಗಳನ್ನೂ ನೋಡಿದೆ ನಾನು, ಆದರೆ ಈ ಫೋಟೋದಲ್ಲಿ ಏನೋ ತುಂಬಾ ಧೃಡ ಸಂಕಲ್ಪ ಹೊಂದಿರುವ ಹಾಗೆ ಕಾಣ್ತಾನೆ ಸಂದೀಪ.

ದೇಶಕ್ಕಾಗಿ ಹುತಾತ್ಮರಾಗುವ ಸೌಭಾಗ್ಯ ಬಹಳ ಕಡಿಮೆ ಜನರಿಗೆ ಸಿಗುತ್ತದೆ.ಅಂಥ ಅದೃಷ್ಟಶಾಲಿ(?) ಗಳಲ್ಲಿ ಸಂದೀಪನೂ ಒಬ್ಬ(ಈ ವಾಕ್ಯ ಸ್ವಲ್ಪ ಮುಜುಗರ ತರಿಸುವಂತಿದ್ದರೂ ನೀವು ಒಬ್ಬ ಸೈನಿಕನ ಬಳಿ ಎರಡನೇ ಅಭಿಪ್ರಾಯ ಕೇಳಬಹುದು).

ನಿನ್ನ ಈ ಫೋಟೋದಲ್ಲಿರುವ ಅಗ್ರೆಸ್ಸಿವ್ ನೆಸ್ಸ್ ತುಂಬಾ ದಿನಗಳವರೆಗೆ ನಮಗೆ ಕಾಡುತ್ತಿರುತ್ತೆ ಸಂದೀಪ್ .

We miss you.


ಫೊಟೋ ಸೌಜನ್ಯ : ’ ಉಗ್ರಗಾಮಿಗಳು :( ’

Thursday, November 20, 2008

ಈ ಪುಸ್ತಕ ಅವರಿಗಿಷ್ಟ.



ಕಳೆದ ಶನಿವಾರ ನನ್ನ ಬಳಿ ಎರಡು ಆಯ್ಕೆಗಳಿದ್ದವು.
ಒಂದು : ಸ್ನೇಹಿತರ ಜೊತೆ ಉಪೇಂದ್ರನ ’ಬುದ್ಧಿವಂತ’ ಕ್ಕೆ ಹೋಗೋದು .
ಎರಡು : ಮೇ ಫ್ಲವರ್ ನ ’ಈ ಪುಸ್ತಕ ನಂಗಿಷ್ಟ ’ ಕಾರ್ಯಕ್ರಮಕ್ಕೆ ಹೋಗೋದು .
ನಾನು ’ಬುದ್ಧಿವಂತ’ಕ್ಕೆ ಹೋಗಿ ದಡ್ಡನಾಗದೆ ಮೇ ಫ್ಲವರ್ ಗೆ ಹೋಗಿ ಬುದ್ಧಿವಂತನಾದೆ!

’ಈ ಪುಸ್ತಕ ನಂಗಿಷ್ಟ’ ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು .ಸಾಹಿತ್ಯಿಕ ವಲಯಕ್ಕೆ ಸಂಬಂದ ಪಟ್ಟ ಬಹಳಷ್ಟು ಜನ ತಮಗೆ ಇಷ್ಟವಾದ ಪುಸ್ತಕದ ಬಗ್ಗೆ ಮಾತಾಡೋದಕ್ಕೆ ಅಂತ ’ಈ ಪುಸ್ತಕ ನಂಗಿಷ್ಟ ’ ಕಾರ್ಯಕ್ರಮ ಆಯೋಜಿಸಿತ್ತು ’ಮೇ ಫ್ಲವರ್’.

ಕಾರ್ಯಕ್ರಮ ಶುರುವಾಗೋದಕ್ಕೆ ಅರ್ಧ ಗಂಟೆ ಮೊದಲೇ ಹೋಗಿದ್ದೆ ನಾನು.ಹೇಗೂ ಗೊತ್ತಿತ್ತು ಮೇ ಫ್ಲವರ್ ನಲ್ಲಿ ಟೈಂ ಪಾಸ್ ಮಾಡೋದಂತೂ ಕಷ್ಟ ಏನಲ್ಲ .ಯಾಕಂದ್ರೆ ನಾನು ವರ್ಷ ಇಡೀ ಕೂತು ಓದಿದ್ರೂ ಮುಗಿಯದಷ್ಟು ಪುಸ್ತಕಗಳು ಅಲ್ಲಿವೆ .ಬಿಟ್ಟಿಯಾಗಿ ಯಾವುದನ್ನು ಬೇಕಾದ್ರೂ ಎತ್ತಿಕೊಂಡು ಓದಬಹುದು !

ಹೇಗೂ ಕಾರ್ಯಕ್ರಮ ಶುರು ಆಗೋದಕ್ಕೆ ಸಮಯ ಇತ್ತಲ್ವ ,ಅದಿಕ್ಕೆ ಅಲ್ಲೇ ಇಟ್ಟಿದ್ದ ವಿಜಯ ಕರ್ನಾಟಕ ದೀಪಾವಳಿ ವಿಶೇಷಾಂಕ ಎತ್ತಿಕೊಂಡೆ.ಬಹಳ ಚೆನ್ನಾಗಿತ್ತು ವಿಶೇಷಾಂಕ .ಅದರಲ್ಲಿ ನನ್ನ ನೆಚ್ಚಿನ

ಇಂದುಶ್ರೀ ಹಾಗೂ ಅವಳ ಮಾತನಾಡುವ ಗೊಂಬೆ ಡಿಂಕು
ಬಗ್ಗೆ ಲೇಖನ ಪ್ರಕಟವಾಗಿತ್ತು .ಸುಧನ್ವಾ ದೇರಾಜೆ ಬರೆದಿದ್ರು ಅದನ್ನು.ಓದಿ ಪುಟ ತಿರುಗಿಸೋದರ ಒಳಗೆ ಸುಧನ್ವಾನೇ ಪ್ರತ್ಯಕ್ಷ ಆಗ್ಬೇಕಾ!

ಕಾರ್ಯಕ್ರಮದಲ್ಲಿ ಮೊದಲು ಮಾತನಾಡಿದವರು ಸುಬ್ಬು ಹೊಲೆಯಾರ್ .ಲಂಕೇಶ್ ರ್ ’ ಕಲ್ಲು ಕರಗುವ ಸಮಯ ’ ಅವರ ನೆಚ್ಚಿನ ಪುಸ್ತಕ.ಲಂಕೇಶರ ಜೊತೆಗಿದ್ದ ತಮ್ಮ ಒಡನಾಟ ,ತಮಗೆ ಯಾಕೆ ಈ ಪುಸ್ತಕ ಇಷ್ಟ ಅನ್ನೋದರ ಬಗ್ಗೆ ತುಂಬ ಸರಳವಾಗಿ,ಸುಂದರವಾಗಿ ಮಾತನಾಡಿದರು ಸುಬ್ಬು.

ನಂತರ ಮಂಜುನಾಥ ಸ್ವಾಮಿ ’ಬರ್ಕ್ವೈಟ್ ಕಂಡ ಭಾರತ ’ ಪುಸ್ತಕದ ಬಗ್ಗೆ ಮಾತನಾಡಿದ್ರು.

ಟೀನಾ ರವರ ನೆಚ್ಚಿನ ಪುಸ್ತಕ THE ADVENTURES OF DUNNO AND HIS FRIENDS ಇದೊಂದು ರಷ್ಯಾ ಮೂಲದ ಪುಸ್ತಕ . ಟೀನಾ ಇದರ ಬಗ್ಗೆ ಮಾಡಿದ ವರ್ಣನೆ ಕೇಳಿದ ನಂತರವಂತೂ ಈ ಪುಸ್ತಕದ ಬಗ್ಗೆ ತುಂಬಾ ಕುತೂಹಲ ಇತ್ತು ನಂಗೆ .ಅವರು ಹೇಳಿದ ಹಾಗೆ ಈ ಪುಸ್ತಕದಲ್ಲಿ illustrations ಗಳಂತೂ ಅದ್ಭುತವಾಗಿವೆ.

ಸುಧನ್ವಾ ದೇರಾಜೆ ಪುತ್ತೂರಿನ ಸಂಧ್ಯಾದೇವಿಯವರ ‘ಮಾತು ಚಿಟ್ಟೆ -ಬೆಂಕಿ ಬೆರಳು-ಮುರಿದ ಮುಳ್ಳಿನಂತೆ ಜ್ಞಾನ’ ಪುಸ್ತಕದ ಬಗ್ಗೆ ಮಾತಾಡಿದರು.
ಈ ಪುಸ್ತಕದ ಬಗ್ಗೆ ನನಗೂ ತುಂಬಾ ಪ್ರೀತಿ! ನಾನು ತೆಗೆದುಕೊಂಡ ಮೊದಲ ಕವನ ಸಂಕಲನ ಇದು.ನಾನು ಕಾವ್ಯಲೋಕದಿಂದ ತುಂಬಾ ದೂರ,ಆದರೂ ಪ್ರಜಾವಾಣಿಯಲ್ಲೋ ಯಾವುದರಲ್ಲೋ ಬಂದ ವಿಮರ್ಷೆ ನೋಡಿ ಅಂಕಿತ ಪುಸ್ತಕದ ಅಂಗಡಿಗೆ ಹೋಗಿ ತೆಗೆದುಕೊಂಡ ಪುಸ್ತಕ ಇದು.

ಸುಳ್ಯದ ಹರೀಶ್ ಕೇರ ’ಬೆಂಕಿಯ ನೆನಪು’ ಪುಸ್ತಕದ ಬಗ್ಗೆ ಬಹಳ ಸೊಗಸಾಗಿ ಮಾತನಾಡಿದರು.ಎಡುವರ್ಡೋ ಗೆಲಿಯಾನೋ ನ Memory of Fire ನ ಕನ್ನಡಾನುವಾದ ಇದು .ಬಹಳ ಚೆನ್ನಾಗಿ ಮಾತಾಡ್ತಾರೆ ಹರೀಶ್.

ವಿ ಆರ್ ಕಾರ್ಪೆಂಟರ್ ಅವರು ’ಟೀಕೆ -ಟಿಪ್ಪಣಿ’ ಪುಸ್ತಕದ ಬಗ್ಗೆ ಮಾತಾಡಿದ್ರು.

ಕೊನೆಯದಾಗಿ ವಿದ್ಯಾರಶ್ಮಿ ಪೆಲತಡ್ಕ ಅವರು ’ಗಾಂಧಿ ಬಂದಾಗ’ ( ಅದರ ಲೇಖಕಿಯ ಹೆಸರೂ ಮರೆತು ಹೋಯ್ತು ನಂಗೆ!) ಪುಸ್ತಕದ ಬಗ್ಗೆ ಮಾತಾಡಿದ್ರು. ನಂಗೆ ತುಂಬಾ ಇಷ್ಟ ಆಯ್ತು ಅವರ ವಿವರಣೆ.ಅದಕ್ಕೆ ಕಾರವೂ ಇದೆ! ’ಗಾಂಧಿ ಬಂದಾಗ’ ಪುಸ್ತಕ ಮಂಗಳೂರಿಗೆ ಸಂಬಂಧಪಟ್ಟ ಕಥೆ .ಈ ಪುಸ್ತಕದಲ್ಲಿ ತುಳುನಾಡಿನ ಸೊಗಡನ್ನು ಎಷ್ಟು ಚೆನ್ನಾಗಿ ಚಿತ್ರಿಸಿದ್ದಾರೋ ಅಷ್ಟೇ ಸೊಗಸಾಗಿ ಅದರ ಚಿತ್ರಣವನ್ನು ವಿದ್ಯಾರಶ್ಮಿ ಅಲ್ಲಿ ಕಟ್ಟಿಕೊಟ್ಟರು.

ಜೋಜಿಗ ಹಾಗೂ ದೀಪಿಕಾರ ಅನುಪಸ್ಥಿತಿ ಎದ್ದು ಕಾಣಿಸ್ತಾ ಇತ್ತು(ನನಗೆ ಮಾತ್ರ!) ಆದ್ರೆ ಅವರ ಗೆಳತಿ ಮಾತ್ರ ’ನೀವು ಬ್ಲಾಗ್ ನಲ್ಲಿ ಏನು ಬೇಕಾದ್ರೂ ಬರೆಯಿರಿ ಫೊಟೋ ತೆಗೆಯೋದು ಮಾತ್ರ ನನ್ನ ಜನ್ಮಸಿದ್ಧ ಹಕ್ಕು ’ ಅನ್ನೊ ಹಾಗೆ ಅವರ ’ಕರ್ತವ್ಯವನ್ನು ನಿರ್ವಹಿಸ್ತಾ ಇದ್ರು.

ಒಟ್ಟಿನಲ್ಲಿ ಬಹಳ ಸುಂದರ ಕಾರ್ಯಕ್ರಮ .ಥ್ಯಾಂಕ್ಸ್ ಮೇ ಪ್ಲವರ್ ಟೀಮ್ !

ಫೋಟೋ : ’ಅವಧಿ’ಯಿಂದ ಲಪಟಾಯಿಸಿದ್ದು.

Wednesday, November 19, 2008

ತಂತ್ರೋಪದೇಶ !



’ಚುರುಮುರಿ ’ ಬ್ಲಾಗ್ ತಂಡ ಮೊನ್ನೆ ಮಕ್ಕಳ ದಿನಾಚರಣೆಯಂದು ಒಂದು ಸ್ಪರ್ಧೆ ನಡೆಸಿತ್ತು.

"Children's Day Caption Contest " ಅಂತ!

ದೇವೇಗೌಡರು ಮತ್ತೆ ಕುಮಾರಸ್ವಾಮಿಯ ಫೋಟೋ ಗೆ ಒಂದು caption ನೀಡೋ ಸ್ಪರ್ಧೆ ಅದು.

ಅದರಲ್ಲಿ ನನ್ನನ್ನು ವಿಜೇತ ಅಂತ ಘೋಷಿಸಿದ್ದಾರೆ :)

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೋಡಿ.

ಸ್ಪರ್ಧೆಯ ಬಹುಮಾನವಾಗಿ ದೇವೇಗೌಡರ ರಾಜಕೀಯ ’ತಂತ್ರೋಪದೇಶ’ದ ಕೋರ್ಸ್ ಗೆ ಉಚಿತ ನೋಂದಾವಣೆ!

Photo Courtesy : http://churumuri.wordpress.com

Tuesday, November 11, 2008

ಬಿಳಿ ಹುಲಿಯ ಕಪ್ಪು ಬಣ್ಣ!



’ವೈಟ್ ಟೈಗರ್ ’ ಗೆ ಬೂಕರ್ ಪ್ರಶಸ್ತಿ ಸಿಕ್ಕಿತಂತೆ.ಅರವಿಂದ ಅಡಿಗ ಕನ್ನಡಿಗರಂತೆ(ಅದರಲ್ಲೂ ಮಂಗಳೂರು ಅಂದ ತಕ್ಷಣ ಎರಡು ಕಿವಿಗಳು ಒಂದೇ ಸಲ ನಿಮಿರುತ್ತವೆ) !ಇಷ್ಟು ದಿನ ಇದೇ ಸಂಭ್ರಮದಲ್ಲಿದ್ದೆ .ಆದ್ರೆ ಪುಸ್ತಕದ ಬಗ್ಗೆ ವಿಮರ್ಷೆಗಳನ್ನು ನೋಡಿದ ಮೇಲೆ ಯಾಕೋ ಸಂತೋಷಕ್ಕೆ ತಣ್ಣೀರೆರಚಿದ ಹಾಗಾಗಿದೆ.

ಅಡಿಗರು ಹೇಳಿದ್ದು ’ನಗ್ನ ಸತ್ಯ ’ವಂತೆ ! ಭಾರತದ ಇನ್ನೊಂದು ಮುಖ ತೋರಿಸಿದ್ದಾರಂತೆ !

ಇನ್ನೊಂದು ಮುಖ ತೋರಿಸಿದ್ದಾರಾ?? ಯಾವ ಮುಖ ????

ಓಹ್ ಅದಾ ! ಭಾರತ ಒಂದು ಭ್ರಷ್ಟರ ಕೂಪ,ಇಲ್ಲಿ ವಿದ್ಯುತ್ ಕೊರತೆ ಯಾವಾಗಲೂ ,ಇಲ್ಲಿನ ಎಡುಕೇಶನ್ ಸರಿ ಇಲ್ಲ (ಅದಕ್ಕೆ ಆಕ್ಸ್ಫರ್ಡ್ ನಲ್ಲಿ ಓದಿದ್ದು),ಇಲ್ಲಿನ ಟ್ರಾಫಿಕ್ ಸರಿ ಇಲ್ಲ,ಇಲ್ಲಿನ ಜನರಿಗೆ ಶಿಸ್ತಿಲ್ಲ ,ಇಲ್ಲಿ ಜಾತಿಗಳ ಹೆಸರಲ್ಲಿ ಮಾರಣ ಹೋಮವೇ ನಡೆಯುತ್ತೆ, etc etc etc .......

ಈ ಮುಖ ’ಪ್ರತಿಯೊಬ್ಬ ಭಾರತೀಯ ’ನಿಗೂ ಗೊತ್ತಿರುವಂಥದ್ದೇ ! ಅದರಲ್ಲೇನ್ರಿ ಬಂತು??

ಇನ್ನೂ ಶಾಲೆಯ ಮುಖವನ್ನೇ ನೋಡದ, ಗೊಣ್ಣೆ ಒರಸಿಕೊಂಡು ಒಂದು ಕೈಯಲ್ಲಿ ಜಾರುತ್ತಿರುವ ಚಡ್ಡಿ ಮೇಲಕ್ಕೇರಿಸ್ತಾ ಆಟ ಆಡಲು ಓಡೋ ಪುಟ್ಟ ಮಗುವಿಗೂ ಗೊತ್ತು ಈ ’ನಗ್ನ ಸತ್ಯ’. ಅದನ್ನು ’ನಮಗೆ ’ಹೇಳಲು ಅಡಿಗರು ಬರಬೇಕಿತ್ತಾ????

ಓಹ್ ಇಲ್ಲೇ ಅಲ್ವಾ ನಾನು ಎಡವಿದ್ದು ! ಅಡಿಗರಿಗೂ ಗೊತ್ತು ಅವರು ಏನೂ ಹೊಸದನ್ನ ಹೇಳ್ತಾ ಇಲ್ಲ ಅಂತ .ಅದಿಕ್ಕೇ ಅವರು ಹಳೆಯದನ್ನೇ ’ಹೊಸಬರಿಗೆ’ ಹೇಳಲು ನಿಶ್ಚಯಿಸಿದ್ದು.
ಭಾರತೀಯರೆಲ್ಲರಿಗೂ ಗೊತ್ತು ಭಾರತ ಎಷ್ಟು ಭ್ರಷ್ಟ ಅಂತ ,ಇನ್ನು ಜಗತ್ತಿಗೆಲ್ಲಾ ಹೇಳೋಣ ಈ ಸತ್ಯ ಅಂತ ಅನ್ನಿಸಿರ್ಬೇಕು ಅವರಿಗೆ.ಬಹುಷ: ಅಡಿಗರು ಅಬ್ದುಲ್ ಕಲಾಂ ರ ಪತ್ರ ವನ್ನು ಓದಿಲ್ಲ ಅಂತ ಕಾಣ್ಸುತ್ತೆ! ಓದಿದ್ರೆ ಬಹುಷ: ಇಂಥ ಪುಸ್ತಕ ಬರೀತಾ ಇರ್ಲಿಲ್ಲ.

ಭಾರತ ಹಾವಾಡಿಗರ ದೇಶ ,ಭಿಕ್ಷುಕರ ದೇಶ ಅನ್ನೋ ತಪ್ಪು ಕಲ್ಪನೆಯನ್ನು ನಿವಾರಿಸಲು ಪಾಪ ವರ್ಷಗಳೇ ಹಿಡಿಯಿತು ನಮಗೆ.ಇನ್ನು ಅಡಿಗರು ಹೇಳಿದ್ದು ತಪ್ಪು ಅಂತ ಸಾಧಿಸಲು ಅದೆಷ್ಟು ವರ್ಷಗಳು ಹಿಡಿಯುತ್ತೋ??

ಅಡಿಗರು ಹೇಳಿದ್ದು ಖಂಡಿತ ತಪ್ಪಲ್ಲ -ಅದು ಕಟು ವಾಸ್ತವ ....ಆದ್ರೆ ಅದನ್ನು ಜಗತ್ತಿಗೆಲ್ಲಾ ಸಾರಿ ಹೇಳುವ ಅಗತ್ಯ ಇತ್ತಾ?

ಮನೆಗೆ ಯಾರೋ ನಿಮ್ಮ ಪರಿಚಯದವರು ಬರ್ತಾರೆ .ನೀವು ಅವರಿಗೆ ಮನೆ ಎಲ್ಲಾ ತೋರಿಸ್ತೀರ .ಹೆಂಡತಿ ಮಕ್ಕಳನ್ನು ಪರಿಚಯಿಸ್ತೀರ.ಚೆನ್ನಾಗಿ ಊಟ ಉಪಚಾರ ಮಾಡಿ ಕಳಿಸ್ತೀರ .ಅದು ಬಿಟ್ಟು "ನೋಡಿ ಈ ಜಾಗ actually ನನ್ನ ಅಣ್ಣಂದು ನಾನು ಮೋಸ ಮಾಡಿ ನನ್ನ ಹೆಸರಿಗೆ ಮಾಡಿಸಿಕೊಂಡೆ. ನೋಡಿ ಇವ್ಳು ನನ್ನ ಹೆಂಡತಿ ,ಇವಳಿಗೆ ಯಾರ್ದೋ ಜೊತೆ ಅನೈತಿಕ ಸಂಬಂದ ಇದೆ.ಇನ್ನು ಮಗಳ ವಿಷಯ ಕೇಳಲೇ ಬೇಡಿ ,ದಿನಕ್ಕೊಂದು ಹುಡುಗರ ಜೊತೆ ಸುತ್ತಾಡ್ತಾಳೆ " ಅಂತ ಯಾವತ್ತೂ ಹೇಳಲ್ಲ.

ಮೇಲಿನದೆಲ್ಲ ’ಕಟು ವಾಸ್ತವ ’ ಆದ್ರೂ!

ಊರಿಂದ ಯಾರೋ ಬೆಂಗಳೂರಿಗೆ ಬಂದ್ರೆ ಅವರನ್ನು ಕಬ್ಬನ್ ಪಾರ್ಕ್ ,ಲಾಲ್ ಬಾಗ್ ವಿಧಾನ ಸೌಧ ಅಂತ ಒಳ್ಳೊಳ್ಳೆ ಸ್ಥಳಗಳನ್ನು ತೋರಿಸಿ ಖುಷಿ ಖುಷಿಯಾಗಿ ಊರಿಗೆ ವಾಪಾಸ್ ಕಳಿಸ್ತೀವಿ.
ಅದು ಬಿಟ್ಟು ಅವರನ್ನು ಕಬ್ಬನ್ ಪಾರ್ಕ್ ನ ಪೊದೆಗಳ ಹಿಂದೆ ಕರೆದುಕೊಂಡು ಹೋಗಿ "ನೋಡ್ತಾ ಇರಿ ಇಲ್ಲಿ ಈಗ ಹೇಗೆ ವೇಶ್ಯಾವಾಟಿಕೆ ನಡೆಯುತ್ತೆ ನೋಡ್ತಾ ಇರಿ " ಅನ್ನಲ್ಲ.
ಕೆ.ಆರ್ ಮಾರ್ಕೆಟ್ ನ ಹಿಂದೆ ಇರೋ ಕಸದ ತೊಟ್ಟಿ ತೋರಿಸಿ "ನೋಡಿ ಇಲ್ಲೇ ಎಲ್ಲಾ ಕಸ ಹಾಕೋದು, ಮಾರ್ಕೆಟ್ ಸ್ವಲ್ಪ ಗಬ್ಬು -ಇಲ್ಲಾಂದ್ರೆ ಇದೂ ಒಳ್ಳೆಯ ಟೂರಿಸ್ಟ್ ಪ್ಲೇಸು " ಅನ್ನಲ್ಲ.
ಚೆನ್ನಾಗಿರೋ ಹೋಟೆಲ್ ಗೆ ಕರ್ಕೊಂಡು ಹೋಗಿ ಚೆನ್ನಾಗಿರೋ ಊಟಾನೇ ಕೊಡಿಸ್ತೇವೇ ವಿನಹ ,ರಸ್ತೆ ಬದಿಯಲ್ಲಿ ಯ ಕಬಾಬ್ ಕೊಡಿಸಿ "ರೋಗದಿಂದ ಸತ್ತಿರೋ ಕೋಳಿ ಎಲ್ಲಾ ಹಾಕ್ತಾರೆ ಇಲ್ಲಾಂದ್ರೆ ಟೇಸ್ಟ್ ಇನ್ನೂ ಚೆನ್ನಾಗಿರುತ್ತೆ ಇಲ್ಲಿ " ಅನ್ನಲ್ಲ.

ನಮ್ಮ ಬದುಕಿನಲ್ಲಿ ಅದೆಷ್ಟೊ ’ಕಟು ವಾಸ್ತವ’ಗಳಿವೆ ಆದ್ರೂ ಅದನ್ನು ಎಲ್ಲರಿಗೂ ನಾವು ಹೇಳಲ್ಲ/ಹೇಳೋಕಾಗಲ್ಲ/ಹೇಳಲೂ ಬಾರದು.

ಈಗ ಹೇಳಿ ಅಡಿಗರು ಮಾಡಿದ್ದು ಸರಿ ನಾ??
ಸರಿ ತಪ್ಪು ಡಿಸೈಡ್ ಮಾಡೋದಕ್ಕೆ ನಾನ್ಯಾರು ಅಲ್ವ?ನನ್ನ ದೇಶದ ಬಗ್ಗೆ ಕಿಂಚಿತ್ ಅಪವಾದ ಹಾಕಿದ್ರೂ ಯಾಕೋ ತುಂಬಾ ಬೇಜಾರಾಗುತ್ತೆ.

ಖಂಡಿತ ಭಾರತದಲ್ಲಿ ಭ್ರಷ್ಟಾಚಾರದ ಸಮಸ್ಯೆ ತುಂಬಾ ಇದೆ .ಭಾರತ 74 ನೇ ಸ್ಥಾನದಲ್ಲಿದೆಯಂತೆ ಭ್ರಷ್ಟಾಚಾರದಲ್ಲಿ ! ಅದೇನೋ ಸರಿ ಆದ್ರೆ ಇನ್ನೂ 73 ದೇಶಗಳಿಲ್ವಾ ನಮಗಿಂತ ಮುಂದೆ?? ಅಮೆರಿಕಾದ ಸ್ಥಾನ 20 !!! ಬ್ರಿಟನ್ ನ ಸ್ಥಾನ 13 !!
ಭಾರತದಲ್ಲಿ ಜಾತಿವಾದ ದೊಡ್ಡ ಪಿಡುಗು ಒಪ್ತೀನಿ. ಆದ್ರೆ ಕಪ್ಪು ಜನಾಂಗದವರ ಮೇಲೆ ಅಮೆರಿಕಾದಲ್ಲಿ ನಡೆಯುತ್ತಿದ್ದ(ರುವ?) ದೌರ್ಜನ್ಯ ???

ಭಾರತ ಆರ್ಥಿಕ ಸ್ಥಿತಿ ಅಷ್ಟು ಉತ್ತಮವಾಗಿಲ್ಲ .ಹೌದು ಅದಕ್ಕೇನಿಗ?? ಎಲ್ಲಾ ರೀತಿಯಲ್ಲೂ ಸಬಲರಾಗಿದ್ದ ಅಮೆರಿಕಾ ಯಾಕೆ ಅಲುಗಾಡ್ತಾ ಇದೆ?
ಭಾರತದಲ್ಲಿ ಸೆಕ್ಯುರಿಟಿ ನೇ ಇಲ್ಲ ಕಣ್ರಿ ’ಯಾವಾಗ ಎಲ್ಲಿ ಬಾಂಬ್ ಬೀಳುತ್ತೋ ಗೊತ್ತಿಲ್ಲ!’ -ಇದೂ ಸರೀನೆ!! ಆದ್ರೆ ಇರುವೆ ಕೂಡ ಅನುಮತಿ ಇಲ್ಲದೆ ನುಸುಳಲಾಗದ ಅಮೆರಿಕಾಗೆ ಹೋಗಿ ,ಅವರದ್ದೇ ವಿಮಾನ ಅಪಹರಿಸಿ ,ಅವರ ಪ್ರತಿಷ್ಟಿತ ಕಟ್ಟಡವನ್ನು ಉರುಳಿಸಿಲ್ವಾ??
BMTC ಬಸ್ ’ಪ್ರಪಂಚದಲ್ಲೆ’ ಸಕ್ಕತ್ ರಶ್ ಅಂತ ಅಂದುಕೊಂಡಿದ್ದೆ ನಾನು ! ಮೊನ್ನೆ ಚೈನಾ ದ ರೈಲಿನ ವೀಡಿಯೋ ನೋಡಿದೆ .ಕುರಿ ತುಂಬಿದ ಹಾಗೆ ತುಂಬ್ತಾ ಇದ್ರು ಜನರನ್ನ .ಅದನ್ನು ನೋಡಿದ ಮೇಲೆ BMTC ನೇ ವಾಸಿ ಅನ್ನಿಸಿದೆ ನಂಗೆ.
ಭಾರತದಲ್ಲಿ ಅದೆಷ್ಟೋ ಮಕ್ಕಳಿಗೆ ಶಿಕ್ಷಣ ದೊರೀತಿಲ್ವಂತೆ .ತುಂಬಾ ಬೇಸರದ ವಿಷಯ ,ಆದ್ರೆ ಮೊನ್ನೆ ಯಾವುದೋ ಫೋಟೋದಲ್ಲಿ ನೋಡಿದೆ ಹೊಟ್ಟಿಗಿಲ್ಲದ ಮಗು ಈಗ ಸಾಯುತ್ತೆ ಅಂತ ಗಿಡುಗವೊಂದು ದೂರದಲ್ಲಿ ಕಾಯ್ತಾ ಇತ್ತು!ಅದಕ್ಕಿಂತ ವಾಸಿ ಅಲ್ಲ ಭಾರತ??
ತಾಲಿಬಾನ್ ನಲ್ಲಿ ಮಕ್ಕಳಿಗೆ a,b,c,d ಕಲಿಸುವ ಬದಲು ಬಂದೂಕು ಚಲಾಯಿಸೋದು ಹೇಗೆ ಅಂತ ಹೇಳಿ ಕೊಡ್ತಾರಂತೆ .ಅದಕ್ಕಿಂತ ವಾಸಿ ಅಲ್ಲ ಭಾರತ??

ಭಾರತದ ಯಾವುದೇ ಸಮಸ್ಯೆ ತಗೊಂಡ್ರೂ ಅದಕ್ಕಿಂತ ಎರಡು ಪಟ್ಟು ಹೆಚ್ಚಾಗಿರೋ ಸಮಸ್ಯೆ ಪ್ರಪಂಚದ ಬೇರೆ ದೇಶದಲ್ಲಿರೋದು ಕಂಡು ಬರುತ್ತದೆ.ಆದ್ರೂ ನಾವು ಕೊರಗೋದು ಬಿಟ್ಟಿಲ್ಲ.

ಇಷ್ಟೆಲ್ಲಾ ಭ್ರಷ್ಟಾಚಾರ ಇದ್ರೂ ಇನ್ಫೋಸಿಸ್ ಪ್ರಗತಿ ಹೊಂದುತ್ತೆ.ಇಷ್ಟೆಲ್ಲಾ ವೈರುಧ್ಯಗಳಿದ್ರೂ ಅಂಬಾನಿ ಸಹೋದರರು ಪ್ರಪಂಚದ ಶ್ರೀಮಂತರ ಪಟ್ಟಿಯಲ್ಲಿ ಹೆಸರು ಗಳಿಸುತ್ತಾರೆ.ಇಷ್ಟೆಲ್ಲ ನ್ಯೂನತೆಗಳಿದ್ರೂ ಇಸ್ರೋದ ವಿಜ್ಞಾನಿಗಳು ಚಂದ್ರಯಾನ-2 ರ ಕನಸನ್ನು ಮರೆತಿಲ್ಲ.

...............ಇದು ನಿಜವಾದ ಭಾರತ ...............

It is better to light a candle than curse darkness .

Tuesday, October 28, 2008

ಯಾರು ಹಿತವರು ’ನಮಗೆ’ ???



ಹೈಸ್ಕೂಲ್ ನಲ್ಲಿ ಓದುತ್ತಿರ್ಬೇಕಾದ್ರೆ ಒಬ್ರಿದ್ರು ಶಶಿಕಲಾ ಟೀಚರ್ ಅಂತ.ಕನ್ನಡ ಟೀಚರ್ಅವ್ರು.ಕನ್ನಡದ ಪ್ರಖ್ಯಾತ ಸಾಹಿತಿಗಳ ಬಗ್ಗೆ ,ಕವಿಗಳ ಬಗ್ಗೆ ,ಲೇಖಕರ ಬಗ್ಗೆ ಯಾವಾಗ್ಲೂ ತಿಳಿಸ್ತಾ ಇದ್ರು ನಮಗೆ.ಕವಿ ಕಾವ್ಯ ಪರಿಚಯ ಅಂತ ಬರುತ್ತಲ್ಲ ಒಂದು ಪ್ರಶ್ನೆ ಅದಕ್ಕೋಸ್ಕರ ಅಂತಾನೇ ನಾವು ಕುತೂಹಲದಿಂದ ಕೇಳ್ತಾ ಇದ್ವಿ ಅವರು ಹೇಳಿದ್ದೆಲ್ಲಾ!ಅವರೂ ಪಾಪ ಹೊಗಳಿದ್ದೇ ಹೊಗಳಿದ್ದು
ಲೇಖಕರ ಬಗ್ಗೆ ,ಸಾಹಿತಿಗಳ ಬಗ್ಗೆ .ಅಪ್ಪಿ ತಪ್ಪಿಯೂ ಆ ಟೀಚರ್ , ಈ ಸಾಹಿತಿ ಸಿಡುಕ ,ಆ ಲೇಖಕ ಆರೆಸ್ಸೆಸ್ಸು ಅವರು ಬರೆದಿದ್ದು ಸರಿ ಇರಲ್ಲ ,ಈ ಕಾದಂಬರಿಕಾರ ಸ್ತ್ರೀ ಪರ ಸಾಹಿತ್ಯ ಬರೆದರೂ ಮನೆಯಲ್ಲಿ ಹೆಂಡ್ತಿಗೆ ಹೊಡೀತಾನೆ ,ಆ ಕಾದಂಬರಿಕಾರ ಕಮ್ಯುನಿಸ್ಟು ಅಂತೆಲ್ಲ ಯಾವತ್ತೂ ಹೇಳಿಲ್ಲ .ಅವರು ಯಾವತ್ತೂ ಹೇಳಿದ್ದು,ಕನ್ನಡ ಸಾಹಿತ್ಯ ಶ್ರೇಷ್ಠ ಸಾಹಿತ್ಯ .ಕನ್ನಡ ಸಾಹಿತಿಗಳೆಲ್ಲ ಶ್ರೇಷ್ಠರು .ಕನ್ನಡಕ್ಕೆ ಇಷ್ಟು ಜ್ಞಾನಪೀಠ ಬಂದಿದೆ ,ಅಷ್ಟು ಕೇಂದ್ರ ಸಾಹಿತ್ಯ ಅಕೆಡಮಿ ಪ್ರಶಸ್ತಿ ಬಂದಿದೆ ಅಂತ!

ಇಷ್ಟು ದಿನ ಅದನ್ನೇ ನಂಬಿಕೊಂಡು ಬಂದಿದ್ದೆ ನಾನೂ.ಆದ್ರೆ ಈಗ ಗೊತ್ತಾಯ್ತು ಟೀಚರ್ ಯಾಮಾರಿಸಿದ್ದಾರೆ ಅಂತ!

ಕನ್ನಡ ಸಾಹಿತ್ಯವೇನೋ ಶ್ರೇಷ್ಠ ಆದ್ರೆ ಸಾಹಿತಿಗಳು ?????

ಪಾಪ ಟೀಚರ್ ದೇನೂ ತಪ್ಪಿಲ್ಲ ಅಲ್ವಾ?? ಆಗ ನಾವೆಲ್ಲ ಸ್ಕೂಲ್ ಹುಡುಗರು ’ಹೇಗೆ ಹೇಳೋಕಾಗುತ್ತೆ ಅಂಥ ’ಸತ್ಯ’ ??ಪಿ.ಯು.ಸಿ ಗೆ ಬಂದ ತಕ್ಷಣ ಸ್ಕೋರಿಂಗ್ ಸಬ್ಜೆಕ್ಟ್ ಅಂತ ಹಿಂದಿ ತಗೊಂಡಿದ್ದೆ .ಇಲ್ಲಾಂದ್ರೆ ಕೊನೆಪಕ್ಷ ಕಾಲೇಜಿನಲ್ಲಾದ್ರೂ ಗೊತ್ತಾಗ್ತಾ ಇತ್ತು ಕೆಲವರ ಬಂಡವಾಳ !!

ವಿಷಯ ಏನಿಲ್ಲ ಸಾಹಿತಿಗಳು ಮತಾಂತರದ ಬಗ್ಗೆ ಸಂವಾದದ ನೆಪದಲ್ಲಿ ಕೆಸರೆರಚಾಟ ಮಾಡೋದು ನೋಡಿ ಬೇಸರವಾಯ್ತು :(
ನಾನು ಯಾವತ್ತೂ ಶ್ರೇಷ್ಠ ಸಾಹಿತ್ಯದ ಹಿಂದೆ ಬಿದ್ದಿರಲಿಲ್ಲ.ಕೈಗೆ ಸಿಕ್ಕಿದ್ದೆಲ್ಲ ಓದೋ ಅಭ್ಯಾಸ ಇದ್ದವನು ನಾನು .ನನ್ನ ಅಕ್ಕನಿಗೆ ಓದುವ ಹುಚ್ಚಿದ್ದರಿಂದ ಮನೆಗೆ ಬೇಕಾದಷ್ಟು ಪುಸ್ತಕಗಳು ಬರುತ್ತಿದ್ದವು.ಸುಧಾ,ತರಂಗ,ಕಸ್ತೂರಿ ,ಮಯೂರಿ .ಯಾವತ್ತೂ ಬರೆದ ಕಂಟೆಂಟ್ ಬಗ್ಗೆ ತಲೆ ಕೆಡಿಸಿಕೊಳ್ತಾ ಇದ್ದೆ ಯಾರು ಬರೆದಿದ್ದರು ಅನ್ನೋ ಬಗ್ಗೆ ತಲೇನೇ ಕೆಡಿಸ್ಕೋತಾ ಇರ್ಲಿಲ್ಲ .ತರಂಗದ ಸಂಪಾದಕರು stylish ಆಗಿ ಅವರ ಹೆಸರು ಪ್ರಕಟಿಸ್ತಾ ಇದ್ದಿದ್ರಿಂದ ಅವರು ಸಂಪಾದಕರೆಂಬುದು ತಿಳಿದಿತ್ತು !ಅದು ಬಿಟ್ಟು ಉಳಿದ ಯಾವ ಸಾಹಿತಿಗಳ ಬಗ್ಗೆಯೂ ನನ್ಗೆ ಗೊತ್ತಿರ್ಲಿಲ್ಲ.ಆದ್ದರಿಂದ ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೆ ಓದೋದಕ್ಕೆ ನಂಗೆ ಸಾಧ್ಯ ಆಗ್ತಾ ಇತ್ತು.
ನಂಗೆ ಮೊಟ್ಟ ಮೊದಲಿಗೆ ಸಾಹಿತ್ಯ ಮನುಷ್ಯನ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಅನ್ನೋದರ ಪರಿಚಯ ಆಗಿದ್ದು ’ಹಾಯ್ ಬೆಂಗಳೂರ್’ ಓದಿ.ಅದರಲ್ಲಿ ರವಿ ಬೆಳಗೆರೆ ಭೈರಪ್ಪನವರ,ಖುಶ್ವಂತ್ ಸಿಂಗ್ ರ ಹಾಗೂ ಇತರರ ಸಾಹಿತ್ಯದ ಬಗ್ಗೆ ಬಹಳ ಮನಮುಟ್ಟುವ ಹಾಗೆ ಬರೀತಾ ಇದ್ರು. ಭೈರಪ್ಪನವರ ’ನಿರಾಕರಣ’ ಓದಿ ರವಿ ಹಿಮಾಲಯಕ್ಕೆ ಹೋದ ಕಥೆ ಕೇಳಿದ ಮೇಲಂತೂ ನಿಜಕ್ಕೂ ಶಾಕ್ ಆಗಿತ್ತು .’ಛೇ ಇಷ್ಟೊಂದು ಶಕ್ತಿ ಇದೆಯಾ ಆ ಕಾದಂಬರಿಗೆ ’ ಅಂದುಕೊಂಡು ನಾನೂ ಲೈಬ್ರೆರಿಗೆ ಹೋಗಿ ಹುಡುಕಿ ತಂದು ಓದಿದ್ದೆ ಆ ಕಾದಂಬರಿಯನ್ನು! ಓದುವಾಗ ಸ್ವಲ್ಪ ಮಟ್ಟಿಗೆ ಭಯ ಆಗ್ತಾ ಇತ್ತು ನಂಗೆ .ಈ ಕಾದಂಬರಿ ಓದಿ ಒಂದು ವೇಳೆ ’ನಾನೂ ಹಿಮಾಲಯಕ್ಕೆ ಹೋಗ್ಬೇಕು’ ಅಂತ ಏನಾದ್ರೂ ಮನಸ್ಸಾದ್ರೆ ಏನು ಗತಿ ಅಂದುಕೊಳ್ತಾ!ಅದೃಷ್ಟವಶಾತ್ ಅಂಥದ್ದೇನೂ ಆಗಲಿಲ್ಲ
ಅದಾದ ಮೇಲೆ ನಾನೂ ಸಾಹಿತ್ಯ -ಸಾಹಿತಿಗಳ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ .ಯಥಾ ಪ್ರಕಾರ ಕೈಗೆ ಸಿಕ್ಕಿದ್ದು ಓದ್ತಾ ಇದ್ದೆ.ಮೋಜು-ಗೋಜು ಓದ್ತಾ ಇದ್ದಷ್ಟೆ intense ಆಗಿ ಯಂಡಮೂರಿಯ ಕಾದಂಬರಿ ಓದ್ತಾ ಇದ್ದೆ .ರವಿ ಬೆಳಗೆರೆಯ ’ಹೇಳಿ ಹೋಗು ಕಾರಣ’ಓದುವಾಗ ಇದ್ದಷ್ಟು ಕುತೂಹಲ ’ಶೇರು ಮಾರುಕಟ್ಟೆಯಲ್ಲಿ ಹಣ ಗಳಿಸುವುದು ಹೇಗೆ ’ ಓದುವಾಗ್ಲೂ ಇರ್ತಾ ಇತ್ತು.ಹಾಗಾಗಿ ನಂಗೆ ಯಾವತ್ತೂ ಪ್ರಾಬ್ಲೆಮ್ ಆಗ್ಲಿಲ್ಲ.
ಯಾವಾಗ ’ಹಾಯ್ ಬೆಂಗಳೂರಿನಲ್ಲಿ ’ಒಬ್ಬ ಓದುಗರ ಪತ್ರ ಓದಿದ್ನೋ ಆಗ ಗೊತ್ತಾಯ್ತು ಲೇಖಕರ ಪವರ್! "ಅಣ್ಣಾ ,ಹಾಯ್ ಬೆಂಗಳೂರಿನಲ್ಲಿ ’ಈ ವಿಷ್ಯದ’ ಬಗ್ಗೆ (ಯಾವ ವಿಷಯ ಅನ್ನೋದು ಬೇಡ) ನಿನ್ನ ಅಭಿಪ್ರಾಯ ಏನೂಂತ ತಿಳಿದು ನನ್ನ ಅಭಿಪ್ರಾಯ ರೂಪಿಸಿಕೊಳ್ಳುವ ಅಂತ ಕಾಯ್ತ ಇದ್ದೆ ,ಸರಿಯಾದ ಟೈಮ್ ಗೆ ಲೇಖನ ಹಾಕಿದ್ದೀಯಾ " ಅಂತ ಬರೆದಿದ್ದ ಆತ .ಎಷ್ಟು ಶಕ್ತಿ ಇದೆ ಅಲ್ವಾ ಲೇಖನಿಗೆ?ಸಾವಿರಾರು ಜನ ತನ್ನ ನೆಚ್ಚಿನ ಲೇಖಕ ಹೇಳಿದ್ದೇ ಸರಿ ಅನ್ನೋ ಅಭಿಪ್ರಾಯ ಮೂಡಿಸಿಕೊಳ್ಳಬೇಕಾದ್ರೆ ಎಂಥ ಶಕ್ತಿ ಇದೆ ಅವರ ಬರಹಕ್ಕೆ!!!
ಆದ್ರೆ ಈ ಶಕ್ತಿಯ ದುರುಪಯೋಗ ಸರೀನಾ?ನಾನು ಬರೆದಿದ್ದನ್ನ ಸಾವಿರಾರು ಜನ ಓದ್ತಾರೆ ಅನ್ನೋ ಒಂದೇ ಕಾರಣಕ್ಕೆ ತಾನು ಶ್ರೇಷ್ಠ ಅಂದುಕೊಳ್ಳೋದು ಸರೀನಾ?

ವಿಜಯ ಕರ್ನಾಟಕದಲ್ಲಿ ಭೈರಪ್ಪ ಲೇಖನ ಬರೆದಿದ್ರು ಅವರ ಫೋಟೊ ಹಾಕಿದ್ರು !ಮಾರನೇ ದಿನ ರಾಮಚಂದ್ರ ಶೆಣೈ ಅಂತ ಒಬ್ಬರು ಬರೆದಿದ್ರು ಅವ್ರ ಫೋಟೊ ಇರ್ಲಿಲ್ಲ!ಮತ್ತೆ ರವಿ ಬೆಳಗೆರೆ ಬರೆದರು ಫೋಟೊ ಸಹಿತ ,ಆದ್ರೆ ಬೇರೊಬ್ಬ ಸಾಮಾನ್ಯ ವ್ಯಕ್ತಿ ಬರೆದ್ರು without photo!ಎಲ್ಲಾ ಜನರ ಫೋಟೊ ಪತ್ರಿಕೆಯ ಡೇಟಾಬೇಸ್ ನಲ್ಲಿ ಇರಲ್ಲ,ಆ ಮಾತು ಒಪ್ಪತಕ್ಕದ್ದೆ .ಆದ್ರೆ ಒಬ್ಬ ಸಾಮಾನ್ಯ ಮನುಷ್ಯ ಬರೆದರೆ ಅದಕ್ಕೆ ಅಷ್ಟೊಂದು ಪ್ರಾತಿನಿಧ್ಯ ಸಿಗಲ್ಲ.ಅದೇ ಹೆಸರಾಂತ ಸಾಹಿತಿಗಳು ಬರೆದರೆ ಮುಖಪುಟದಲ್ಲಿ ಸ್ಥಾನ!!

ಅಷ್ಟಕ್ಕೂ ಸಾಹಿತ್ಯ ಅನ್ನೋದು ಅದ್ಯಾಕೆ ಶ್ರೇಷ್ಠ ಅಂತ ನಂಗೆ ಇನ್ನೂ ಗೊತ್ತಾಗಿಲ್ಲ.ಫಿಲಿಪ್ಸ್ ನಲ್ಲಿ ಕೂತು ಒಬ್ಬ ಇಂಜಿನಿಯರ್ ತಯಾರಿಸಿದ ಮೆಡಿಕಲ್ ಉಪಕರಣ ಹಾಸ್ಪಿಟಲ್ ನಲ್ಲಿ ತಣ್ಣಗೆ ಕೂತು ಸಾವಿರಾರು ಜನರ ಪ್ರಾಣ ಕಾಪಾಡ್ತಾ ಇರುತ್ತೆ .ಅಂಥ ಇಂಜಿನಿಯರ್ ಗೆ ಗೌರವ ಸಿಗಲ್ಲ.ಅವನ ಹತ್ರ ಯಾರೂ ’ಮಂತಾಂತರದ ಬಗ್ಗೆ ನಿಮ್ಮ ಅಭಿಪ್ರಾಯ ಹೇಳಿ ’ ಅಂತ ಕೇಳಲ್ಲ! ಬದಲಾಗಿ ’ಕಳ್ ನನ್ ಮಗ ಎಷ್ಟು ಸಾವಿರ ದುಡೀತಾನೋ ,ಬೆಂಗಳೂರಿನ ಸಂಸ್ಕೃತಿ ಹಾಳು ಮಾಡಿ ಪಬ್ ಸಂಸ್ಕೃತಿ ತಂದಿದ್ದು ಇವ್ರೇ ಕಣ್ರಿ ’ ಅಂತಾರೆ.ನೋಕಿಯಾದಲ್ಲಿ ರಾತ್ರಿ ಹಗಲು ದುಡಿದು ಮೊಬೈಲ್ ಫೋನ್ ಅಭಿವೃದ್ಧಿ ಪಡಿಸಿದ ಇಂಜಿನಿಯರ್ ನನ್ನೂ ಯಾರೂ ಕೇಳಲ್ಲ ,ಬದಲಾಗಿ ಅದೇ ಕಂಪೆನಿಯ ಮೊಬೈಲ್ ಜೇಬಲ್ಲಿಟ್ಟುಕೊಂಡು ’ನೋಡಿ ಅವನದ್ದೇ ಕಂಪೆನಿಯಲ್ಲಿ ಮೊನ್ನೆ ಹುಡುಗಿ ಸುಸೈಡ್ ಮಾಡಿದ್ದು’ ಅಂತಾರೆ! ಯಾರೋ ಬರೆದ ಪುಸ್ತಕಕ್ಕೆ ಬೂಕರ್ ಬರುತ್ತೆ ,ನಾಳೆ ಅವನ ಅಭಿಪ್ರಾಯಕ್ಕೂ ಸಕ್ಕತ್ ಮರ್ಯಾದೆ ,ಆದ್ರೆ ATMನಲ್ಲಿ ಚಕ ಚಕ ಅಂತ ಕಾಸು ಹೊರಬರೋ ಥರ ಸಾಫ್ಟ್ ವೇರ್ ಬರೆದವನಿಗೆ ಪೂಕರ್ ಪ್ರಶಸ್ತಿ ಕೂಡ ಸಿಗಲ್ಲ ,ಯಾಕಂದ್ರೆ ಅವನಿಗೆ ನಾಲ್ಕು ಜನರು ಮೆಚ್ಚೋ ಥರ ಬರೆಯೋಕೆ ಬರಲ್ಲ!

ಒಂದು ಟ್ಯಾಬ್ಲಾಯ್ಡ್ ಪತ್ರಿಕೆಯ ಸಂಪಾದಕ ಅನ್ನೋ ಕಾರಣಕ್ಕೆ ಬರೆದದ್ದು ಫೋಟೊ ಸಹಿತ ಪ್ರಕಟ ಆಗುತ್ತೆ ,ಆದ್ರೆ ಚಂದ್ರಯಾನ ಯಶಸ್ವಿಯಾಗಿ ಉಡಾಯಿಸಿದ ವಿಜ್ಞಾನಿಗಳನ್ನು ಮಾತ್ರ ಯಾರೂ ಕೇಳಲ್ಲ ’ಮತಾಂತರದ ಬಗ್ಗೆ ನಿಮ್ಮ ಅಭಿಪ್ರಾಯ ಏನು ’ ಅಂತ ,ಯಾಕಂದ್ರೆ ಅವರಿಗೂ ತಮ್ಮ ಅಭಿಪ್ರಾಯ ಬರೆಯೋದಕ್ಕೆ ಬರಲ್ಲ!
ಕನ್ನಡಕ್ಕೆ ಏಳು ಜ್ಞಾನಪೀಠ ಪ್ರಶಸ್ತಿ ಸಿಕ್ಕಿದೆ ಅಂತ ಎಲ್ಲರಿಗೂ ಗೊತ್ತು ಆದ್ರೆ ಕರ್ನಾಟಕದ ಎಷ್ಟು ಜನರಿಗೆ ಪರಮವೀರ ಚಕ್ರ ಸಿಕ್ಕಿದೆ ಅನ್ನೋದು ಯಾರಿಗೂ ಗೊತ್ತಿಲ್ಲ.ಯಾಕಂದ್ರೆ ಅವರಿಗೆ ಬರೆಯೋದು ಗೊತ್ತಿಲ್ವಲ್ಲ!

ಇಷ್ಟೊಂದು ಗೌರವ ಸಿಕ್ತಾ ಇರೋದಕ್ಕೆ ತಾನೇ ಸಾಹಿತಿಗಳು ತಮ್ಮನ್ನು ತಾವು ಶ್ರೇಷ್ಠ ಅಂದುಕೊಂಡು ಕಿತ್ತಾಡ್ತಾ ಇರೋದು??ಕೇವಲ ಭೈರಪ್ಪನವರು ಬರೆದಿದ್ದಾರೆ ಅನ್ನೋ ಕಾರಣಕ್ಕೇ ಜನ ಅವರ ವಿರುದ್ಧ ,ಅವರ ಲೇಖನದ ವಿರುದ್ಧ ಸಾಕ್ಷಿ ಒಟ್ಟುಗೂಡಿಸ್ತಾ ಇದ್ದಾರೆ.ಯಡಿಯೂರಪ್ಪ ಹೇಳಿದ್ದಕ್ಕೇನಾದ್ರೂ ಯೆಸ್ ಅಂದು ಬಿಟ್ರೆ ಸರಕಾರ ಚೆನ್ನಾಗಿ ಕೆಲಸ ಮಾಡ್ತಾ ಇದೆ ಅಂತೇನಾದ್ರೂ ಜನ ತಿಳ್ಕೊಂಡು ಬಿಟ್ರೆ ಅಂತ ಪ್ರತಿಪಕ್ಷದವ್ರು ಎಲ್ಲಾದಕ್ಕೂ oppose ಮಾಡ್ತಾರಲ್ಲ ಹಾಗಾಯ್ತು ಸಾಹಿತಿಗಳ ಪರಿಸ್ಥಿತಿ !ಈ ಥರ ಆದ್ರೆ ಒಂದು ಬಣದವರಿಗೆ ಏನೂ ನಷ್ಟ ಆಗಲ್ಲ .ಯಾಕಂದ್ರೆ ಅವರು ಬರೀ ಒಂದು ಬಣದವರದ್ದಷ್ಟೆ ಓದೋ ಅಂಥವರು ! ಆದ್ರೆ ನಿಜವಾದ ನಷ್ಟ ಎರಡೂ ಬಣದವರನ್ನು ಇಷ್ಟ ಪಡೋರಿಗೆ!ತನ್ನ ಒಬ್ಬ ನೆಚ್ಚಿನ ಸಾಹಿತಿಯ ಬಗ್ಗೆ ಇನ್ನೊಬ್ಬ ನೆಚ್ಚಿನ ಸಾಹಿತಿ ಕೆಟ್ಟದಾಗಿ ಬರೆದ್ರೆ ಬೇಜಾರಾಗಲ್ವ??ಈ ಬೇಜಾರನ್ನು ಇಟ್ಕೊಂಡೇ ಮತ್ತೆ ಅವರು ಬರೆದದ್ದನ್ನು ಓದೋಕೆ ಸಾಧ್ಯ ಆಗುತ್ತಾ??ಅವರ ಸಂಕುಚಿತ ಮನೋಭಾವದ ಬಗ್ಗೆ ಗೊತ್ತಾಗಿಯೂ ಅವರನ್ನು ಗೌರವಿಸಲು ಸಾಧ್ಯಾ ಆಗುತ್ತಾ??

ಬಹುಷಃ ಆಗುತ್ತೇನೋ ?? ಯಾಕಂದ್ರೆ ಸಲ್ಮಾನ್ ಖಾನ್ ಅಷ್ಟು ಜನರ ಮೇಲೆ ಗಾಡಿ ಹರಿಸೀನೂ ಇನ್ನೂ ಸ್ಟಾರ್ ಅಗಿಲ್ವ?? ಮೈಕಲ್ ಜಾಕ್ಸನ್ ಏನೇ ಎಡವಟ್ಟು ಮಾಡ್ಕೊಂಡ್ರೂ ಜನ ಅವರನ್ನು ಪ್ರೀತಿಸಲ್ವ??

All the best ಸಾಹಿತಿಗಳೇ .............

Wednesday, October 22, 2008

ಚಂದ್ರಯಾನ -ಚಂದ್ರನತ್ತ ಪಯಣ.



ಚಂದ್ರನತ್ತ ಪಯಣದ ಮೊದಲ ಹಂತ ಯಶಸ್ವಿಯಾಗಿದೆ.ಭಾರತದ ವಿಜ್ಞಾನಿಗಳ ಸಾಮರ್ಥ್ಯವನ್ನು ಜಗತ್ತಿಗೇ ತೋರಿಸುವಲ್ಲಿ ಈ ಯಶಸ್ಸು ತುಂಬಾ ಪ್ರಮುಖ ಪಾತ್ರ ವಹಿಸಿದೆ. ಈ ಯಶಸ್ಸಿನಲ್ಲಿ ಭಾಗಿಯಾದ ಸಮಸ್ತರಿಗೂ ನಮ್ಮ ಅಭಿನಂದನೆ ತಿಳಿಸೋಣ.ಸಾವಿರಾರು ಕೆ.ಜಿ ತೂಕದ ಉಪಕರಣಗಳನ್ನು ಚಂದ್ರ ಮೇಲೆ ಇಳಿಸೋದು ಹುಡುಗಾಟದ ಕೆಲಸವಲ್ಲ.ಇದರ ಹಿಂದೆ ಸಾವಿರಾರು ಜನರ (ಬರೀ ವಿಜ್ಞಾನಿಗಳ ಅಂದ್ರೆ ತಪ್ಪಾಗುತ್ತೆ !) ,ಹಲವಾರು ವರ್ಷಗಳ ಪರಿಶ್ರಮವಿದೆ.
ಸುಮಾರು ಐದು ವರ್ಷಗಳ ಹಿಂದೆ ನನಗೂ ಇಸ್ರೋದ ಬೆಂಗಳೂರು ಶಾಖೆಯಲ್ಲಿ ಅಪ್ರೆಂಟಿಸ್ ಆಗಿ ಕೆಲಸ ಮಾಡುವ ಸೌಭಾಗ್ಯ ಸಿಕ್ಕಿದ್ದರಿಂದ ಆ ವಿಜ್ಞಾನಿಗಳ ಕಾರ್ಯವೈಖರಿಯನ್ನು ಹತ್ತಿರದಿಂದ ನೋಡುವ ಅವಕಾಶ ನನಗೆ ಸಿಕ್ಕಿತ್ತು! ಬಾಹ್ಯಾಕಾಶ ಪ್ರಾಜೆಕ್ಟ್ ಗಳು ಕೆಲಸದ ದೃಷ್ಟಿಯಿಂದ ನೋಡಿದ್ರೆ ತುಂಬಾನೆ ಕಷ್ಟ ಹಾಗೂ risky .ಇಲ್ಲಿ ನಿಮಗೆ ಸಿಗೋದೇ ಒಂದು ಅವಕಾಶ .’ಛೆ! ಅಲ್ಲಿ ಸ್ವಲ್ಪ ಎಡವಟ್ಟಾಗಿತ್ತು ನೆಕ್ಸ್ಟ್ ಟೈಮ್ ಸರಿ ಮಾಡ್ತೀನಿ ’ಅನ್ನೋದಕ್ಕೆ ಇಲ್ಲಿ ಆಸ್ಪದವೇ ಇಲ್ಲ.ಹಾಗಾಗಿ ಇಲ್ಲಿ ಇರುವಷ್ಟು ಚ್ಯಾಲೆಂಜ್ ಬೇರೆ ಯಾವ ವೃತ್ತಿಯಲ್ಲೂ ಇಲ್ಲ ಎಂಬುದು ನನ್ನ ಅನಿಸಿಕೆ.
ಉಡಾವಣೆಯ ಸಂದರ್ಭದಲ್ಲಿ ಉಂಟಾಗುವ ಶಾಖದಿಂದ ಉಪಗ್ರಹವನ್ನು ರಕ್ಷಿಸೋದೆ ಒಂದು ದೊಡ್ಡ ಸಾಹಸ.ಹೀಗಾಗಿ ಉಪಗ್ರಹದಲ್ಲಿ ಉಪಯೋಗಿಸುವ ಒಂದೊಂದು ಬಿಡಿ ಭಾಗವೂ ಅತ್ಯಂತ ದುಬಾರಿ .S.P roadನಲ್ಲಿ ಸಿಗುವ ಮಾಮೂಲಿ ಐದು ರೂಪಾಯಿಯ ಬಿಡಿಭಾಗವೂ ಸ್ಪೇಸ್ ಗ್ರೇಡ್ ನಲ್ಲಿ ಸಾವಿರಾರು ರೂಪಾಯಿ ಬೆಲೆ ಬಾಳುತ್ತವೆ.ಒಂದೇ ಒಂದು ಕಡೆ ಎಡವಟ್ಟಾಯ್ತೋ ಕೋಟ್ಯಾಂತರ ರೂಪಾಯಿ ನೀರುಪಾಲು!ಹಣದ ಮನೆ ಹಾಳಾಗ್ಲಿ ಅಷ್ಟು ವರ್ಷದ ಶ್ರಮ ವ್ಯರ್ಥ ಆಗ್ಬಿಡುತ್ತೆ.
ಅಂದ ಹಾಗೆ ಚಂದ್ರಯಾನದ ಮುಖ್ಯ ಉದ್ದೇಶ ಚಂದ್ರನ ಅಧ್ಯಯನ.ಆದ್ರೆ ಅದಕ್ಕಿಂತ ಮುಖ್ಯ ಉದ್ದೇಶ ಚಂದ್ರನಲ್ಲಿರುವ ಹೀಲಿಯಮ್ ನಿಕ್ಷೇಪದ ಬಗ್ಗೆ ತಿಳಿಯೋದು.ಒಂದು ಟನ್ ಹೀಲಿಯಂ ಸಿಕ್ಕಿದ್ರೆ ಒಂದು ವರ್ಷ ವಿದ್ಯುತ್ ಪಡೆಯಬಹುದಂತೆ.ಹೀಲಿಯಮ್ ಇದೆ ಅಂತ ಗೊತ್ತಾದ್ರೆ ನಮ್ಮ ರೆಡ್ಡಿಗಳು ಚಂದ್ರನಲ್ಲೂ ಗಣಿಗಾರಿಕೆ ಶುರು ಮಾಡೋದಂತೂ ಗ್ಯಾರಂಟಿ!
ಇವತ್ತು ನಮ್ಮ ದೇಶದ ಐದು ಉಪಕರಣಗಳಲ್ಲದೆ ನಾಸಾ ಹಾಗೂ ಯುರೋಪಿಯನ್ ಸ್ಪೇಸ್ ಏಜನ್ಸಿಯ ಆರು ಉಪಕರಣಗಳನ್ನೂ ಕಳಿಸಿದ್ದಾರೆ.ನೋಡಿ ಭಾರತದ ಉಡಾವಣಾ ಸಾಮರ್ಥ್ಯದ ಮೇಲೆ ಬೇರೆ ದೇಶದವರಿಗೂ ಎಷ್ಟು ವಿಶ್ವಾಸವಿದೆ ಅಂತ..
ಇಷ್ಟೆಲ್ಲದರ ನಡುವೆ ಕೆಲವ್ರದ್ದು ಒಂದು ತಕರಾರು! ’ ಸುಮ್ಮನೆ ಚಂದ್ರನ ಮೇಲೆ ಏನೋ ಕಳಿಸೋದಕ್ಕೆ ಕೋಟ್ಯಂತರ ರೂಪಾಯಿ ವ್ಯಯಿಸೋದಕ್ಕಿಂತ ಇದೇ ಹಣವನ್ನು ಬೇರೆ ಒಳ್ಳೆಯ(?) ಕಾರ್ಯಗಳಿಗೆ ಉಪಯೋಗಿಸಬಹುದಿತ್ತು ’ ಅಂತ.
ಅವರಿಗೆ ’ಸಾರ್ ನಿಮ್ಮ ಮಗಳ ಮದುವೇನ ಸಿಂಪಲ್ ಆಗಿ ರಿಜಿಸ್ಟರ್ ಆಫೀಸ್ ನಲ್ಲಿ ಮಾಡಿಸೋದು ಬಿಟ್ಟು ಅದ್ಯಾಕೆ ಧಾಂ ಧೂಮ್ ಅಂತ ಛತ್ರದಲ್ಲಿ ಮಾಡಿಸಿದ್ರಿ ? ’ ಅಂದ್ರೆ ’ಹೆ ಹೆ ಇರೋದು ಒಬ್ಳೆ ಮಗಳು ಕಣ್ರಿ ಅದಿಕ್ಕೆ ’ ಅಂತಾರೆ!!!”
ಇರ್ಲಿ ಬಿಡಿ ಕಾರ್ ಯಾಕೆ ಇಟ್ಕೊಂಡಿದ್ದೀರಾ? ಸಿಂಪಲ್ ಆಗಿ ಬಿ ಎಮ್ ಟಿ ಸಿ ಬಸ್ ನಲ್ಲೆ ಓಡಾಡಬಹುದಲ್ಲ ,ನೀವು ಹಾಕೋ ಪೆಟ್ರೋಲ್ ಕಾಸಲ್ಲಿ ನಾಲ್ಕು ಜನ ಬಡವ್ರು ಊಟ ಮಾಡಬಹುದು ’ಅಂದ್ರೆ ,ಅದಕ್ಕೂ ಅದೇ ಮೀಸೆಯಡಿಯಲ್ಲಿ ಮೋನಾಲೀಸಾ ಸ್ಮೈಲ್ ಕೊಟ್ಟು ’ಬಿ ಎಮ್ ಟಿ ಸಿ ಸಕ್ಕತ್ ರಶ್ಶು ಸಾರ್ ಅದಿಕ್ಕೆ ’ ಅಂತಾರೆ ಯಜಮಾನ್ರು!!!
ಇಂಥ ಉಡಾವಣೆಗಳು ವೈಜ್ಞಾನಿಕ ಸಂಶೋಧನೆಗಳಿಗೆ ಸಹಕರಿಸೋದೇನೋ ನಿಜ ,ಆದ್ರೆ ಅದಕ್ಕಿಂತ ಹೆಚ್ಚು ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಪ್ರತಿಷ್ಟೆ ಹೆಚ್ಚಿಸೋದೂ ಅಷ್ಟೇ ಸತ್ಯ.ಪೋಖರಾನ್ ಟೆಸ್ಟ್ ಆದ್ಮೆಲೆ ತಾನೆ ನಾವೇನು ಅಂತ ಬೇರೆಯರಿಗೆ ತಿಳಿದದ್ದು??

ಚಂದ್ರಯಾನದ ಮೊದಲ ಹಂತ ಏನೋ ಯಶಸ್ವಿಯಾಗಿದೆ .ಆದ್ರೆ ಇನ್ನಿರೋದೆ ನಿಜವಾದ ಚ್ಯಾಲೆಂಜ್ .ಕಳಿಸಿರೋ ಎಲ್ಲ ಉಪಕರಣಗಳೂ ಚಂದ್ರ ಮೇಲೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸಲಿ ಅಂತ ದೇವರಲ್ಲಿ ಬೇಡಿಕೊಳ್ಳೋಣ .

ಇಸ್ರೋ ತಂಡದ ಎಲ್ಲರಿಗೂ ಅಭಿನಂದನೆಗಳು.

Friday, October 17, 2008

ನೀವೂ ಓದಿ ’ನರೇಂದ್ರ ಮೋದಿ-ಯಾರೂ ತುಳಿಯದ ಹಾದಿ ’



’ ನರೇಂದ್ರ ಮೋದಿ- ಯಾರೂ ತುಳಿಯದ ಹಾದಿ ’ . ಕೆಲವು ದಿನಗಳ ಹಿಂದಷ್ಟೆ ಈ ಪುಸ್ತಕ ತಗೊಂಡಿದ್ದೆ.ಓದಲು ಸಮಯ ಸಿಗಲ್ಲ ಅಂತ ಗೊತ್ತಿದ್ರಿಂದ ಸದಾ ಬ್ಯಾಗ್ ನಲ್ಲೇ ಇಟ್ಟುಕೊಂಡಿರ್ತಿದ್ದೆ, ಬಸ್ ನಲ್ಲಿ ಹೋಗ್ತಾ ಇರ್ಬೇಕಾದ್ರೆ ಓದೋದಿಕ್ಕೆ ಅಂತ!ನನ್ನ ಬ್ಯಾಗ್ ನಲ್ಲಿ ಈ ಪುಸ್ತಕ ನೋಡಿ ಬಹಳಷ್ಟು ಗೆಳೆಯರು ಹೇಳ್ತಾ ಇದ್ದಿದ್ದು " ಓಹ್ ನೀನು ಮೋದಿ ಫ್ಯಾನಾ....??? "
ನಾನು ಯಾರ ಫ್ಯಾನೂ ಅಲ್ಲ ಬೀಸಣಿಕೆನೂ ಅಲ್ಲ ಅಂದೆ ಅವರಿಗೆಲ್ಲ .ಹಿಂದೆ ಯಾವುದೋ ಒಂದು ವಿಷಘಳಿಗೆಯಲ್ಲಿ ಉಪೇಂದ್ರನ ಅಭಿಮಾನಿ ಅಂತ ಹೇಳಿದ್ದೆ ನನ್ನ ಗೆಳತಿಯೊಡನೆ ,ಅದೇ ಕೊನೆ ಅದಾದ್ ಮೇಲೆ ನಾನು ಯಾರದೇ ಫ್ಯಾನ್ ಅನ್ನೋದಕ್ಕೆ ನಂಗೆ ಮನಸ್ಸೆ ಬಂದಿಲ್ಲ!
ಉಪೇಂದ್ರನ ಫ್ಯಾನ್ ಅನ್ನಿಸಿಕೊಂಡಿದ್ದಕ್ಕೆ ಅವಳು ನನ್ ಹತ್ರ ಮಾತಾಡೋದೇ ಬಿಟ್ಟಿದ್ಲು ಕೆಲ ದಿನ .ಆಗ ಅಷ್ಟೊಂದು ಮಾನಸಿಕವಾಗಿ ಪ್ರಬುದ್ಧನಾಗಿಲ್ಲದ್ದರಿಂದ(ಈಗಲೂ ಆಗಿಲ್ಲ ಅನ್ನೋದು ಕೆಲವರ ಅನಿಸಿಕೆ!) ಬಹುಷ ಉಪೇಂದ್ರನ ಮಂಗ ಚೇಷ್ಟೆಗಳೆಲ್ಲ ಇಷ್ಟವಾಗ್ತಾ ಇತ್ತು .ಈಗ ಆಗಲ್ಲಾ ಬಿಡಿ !
ಈಗ ಫ್ಯಾನ್ ,A.C ,ಬೀಸಣಿಕೆ ಯಾವುದೂ ಇಲ್ಲ.ಇಷ್ಟ ಆದ್ರೆ ಇಷ್ಟ ಆಯ್ತು ಅನ್ನೋದು ,ಇಲ್ಲಾಂದ್ರೆ ಇಲ್ಲ.ಯಾರದೆ ಅಭಿಮಾನಿ ಅಂತ ಬ್ರಾಂಡ್ ಆಗಿಬಿಟ್ರೆ ಆಮೇಲೆ ಅವರು ಮಾಡಿದ್ದೆಲ್ಲ ಚೆನ್ನಾಗಿದೆ ಅಂತ ಅನ್ಸೋಕೆ ಪ್ರಾರಂಭ ಆಗಿಬಿಡುತ್ತೆ . ನಂಗೆ ಆರ್ಕುಟ್ ನಲ್ಲಿ ’ದೈತ್ಯ ಬರಹಗಾರರ’ ಫ್ಯಾನ್ ಕ್ಲಬ್ ನಲ್ಲಿ ಅಂಥ ಅನುಭವ ಆಗಿದೆ.

ಥತ್ ನರೇಂದ್ರ ಮೋದಿ ಪುಸ್ತಕದ ಬಗ್ಗೆ ಬರೆಯಲು ಹೊರಟವನು ಇದೇನು ಉಪೇಂದ್ರನ ಬಗ್ಗೆ ಬರೀತಾ ಇದ್ದೀನಿ:(

ಪ್ರತಾಪ್ ಸಿಂಹರ ’ನರೇಂದ್ರ ಮೋದಿ’ ಪುಸ್ತಕ ಓದಿದ ಮೇಲಂತೂ ಮೋದಿ ಫ್ಯಾನ್ ಆಗಿಬಿಡೋಣ ಅಂತ ಅನ್ನಿಸಿದ್ದು ನಿಜ! ಆದ್ರೆ ಇನ್ನು ಮುಂದೆ ಯಾರದೇ ಫ್ಯಾನ್ ಅಗ್ಬಾರ್ದು ಅಂಥ ನಿರ್ಧಾರ ಮಾಡಿ ಆಗಿದೆ . ಆದ್ದರಿಂದ ಅಭಿಮಾನವಷ್ಟೆ ಸಾಕು ಅಭಿಮಾನಿಯಾಗೋದು ಬೇಡ ಅಲ್ವ?

ಈ ಪುಸ್ತಕ ಓದೋ ತನಕ ನರೇಂದ್ರ ಮೋದಿಯ ಬಗ್ಗೆ ನನಗೆ ಏನೂ ಗೊತ್ತಿರ್ಲಿಲ್ಲ .ಸುಮಾರು ಆರು ತಿಂಗಳು ನಾನೂ ಗುಜರಾತ್ ನಲ್ಲಿ ಕೆಲಸ ಮಾಡಿದ್ರೂ ನಂಗೆ ಮೋದಿಯ ಬಗ್ಗೆ ನನಗೆ ಅಷ್ಟು ಕುತೂಹಲ ಇರ್ಲಿಲ್ಲ .ಗುಜರಾತ್ ನಲ್ಲಿ ನಾನು ನೋಡಿದ್ದು ಭೂಕಂಪದ ಸಮಯದಲ್ಲಿ ಬಿರುಕು ಬಿಟ್ಟ ಕಟ್ಟಡಗಳು ,ಅಹಮದಾಬಾದ್ ನ ಚೆಂದುಳ್ಳಿ ಚೆಲುವೆಯರ ಗರ್ಭಾ ನೃತ್ಯ ಅಷ್ಟೇ !

ಪ್ರತಾಪ್ ಸಿಂಹರ ಲೇಖನಗಳು ನಂಗೆ ಮೊದಲಿಂದಲೂ ತುಂಬಾ ಇಷ್ಟ .ಬಿಜೆಪಿ ,ಕಾಂಗ್ರೆಸ್ ,ಜೆ ಡಿ ಎಸ್ ಅನ್ನೋ ಬೇಧ ಭಾವ ಇಲ್ಲದೆ ಎಲ್ಲರ ಮುಖಕ್ಕೆ ಮಂಗಳಾರತಿ ಮಾಡುವ ರೀತಿ ಸೂಪರ್ಬ್!ಅದೂ ಅಲ್ಲದೆ ಅಂಕಿ ಅಂಶಗಳನ್ನು ಒದಗಿಸಿಯೇ ಲೇಖನ ಬರೆಯೋದ್ರಿಂದ ಅನುಮಾನಿಸೋದಕ್ಕೆ ಆಸ್ಪದವೆ ಇಲ್ಲ(ಅದಾಗ್ಯೂ ಅನುಮಾನಿಸೋರಿದ್ದಾರೆ ಅದು ಬೇರೆ ವಿಷಯ!) ಇಂಥ ಪ್ರತಾಪ್ ಸಿಂಹ ಬರೆದ ಪುಸ್ತಕ ಓದ್ಬೇಕು ಅಂತ ತುಂಬಾ ಆಸೆ ಪಟ್ಟಿದ್ದೆ .ಇವತ್ತು ಈಡೇರಿತು.

ಗುಜರಾತ್ ಮಾದರಿ ಅಂದ ತಕ್ಷಣ ಗೋಧ್ರಾ ಘಟನೆ ನೆನಪಿಸಿ ಕೊಳ್ಳೋ ಜನರು ಎಂಥ ನೆಗೆಟಿವ್ ಥಿಂಕರ್ಸ್ ಅನ್ನೋದರ ಬಗ್ಗೆ ಇಲ್ಲಿ ಚರ್ಚೆ ಮಾಡೋದು ವೇಸ್ಟ್ .ಆದ್ರೆ ಗುಜರಾತ್ ಮೋದಿಯಿಂದಾಗಿ ನಂಬರ್ ಒನ್ ರಾಜ್ಯ ಆಗಿದ್ದು ಮಾತ್ರ ನಗ್ನ ಸತ್ಯ.
ಮೊನ್ನೆ ’ಆಜ್ ತಕ್’ನಲ್ಲಿ ಮೋದಿ ಸಂದರ್ಶನ ಮಾಡ್ತಾ ಇದ್ರು ಪ್ರಭು ಚಾವ್ಲಾ .ಪ್ರಭು ಚಾವ್ಲಾ as usual ಅದೇ ಕೃತಕ ನಗು ಮುಖದಿಂದ ಮೋದಿಯನ್ನು ಇಕ್ಕಟ್ಟಿಗೆ ಸಿಲುಕಿಸುವ ಮಾಡ್ತಾ ಇದ್ರು.ಆದ್ರೆ ಅಮೆರಿಕಾ ವೀಸಾ ಬಗ್ಗೆ ಪ್ರಭು ಕೇಳಿದ ಪ್ರಶ್ನೆಗೆ ಮೋದಿ ನೀಡಿದ ಉತ್ತರ ಮಾತ್ರ ತುಂಬಾ ಇಷ್ಟ ಆಯ್ತು ನಂಗೆ.
ನರೇಂದ್ರ ಮೋದಿ ಹೇಳಿದ್ದು ಇಷ್ಟು "ನೋಡಿ ಹಿಂದೆ ಒಂದು ಸಲ ನಾನು ವೀಸಾ ಕೇಳಿದಾಗ ಅವರು ನಿರಾಕರಿಸಿದ್ದೇನೋ ನಿಜ ಆದ್ರೆ ಈ ಸಲ ನಾನು ಕೇಳೆ ಇಲ್ಲ ಅವರೆ ವಿನಾ ಕಾರಣ ಅಪಪ್ರಚಾರ ಮಾಡ್ತಾ ಇದ್ದಾರೆ "
ಅದಿಕ್ಕೆ ಚಾವ್ಲಾ "ಹಾಗಿದ್ರೆ ನೀವು ವೀಸಾ ಕೇಳಲ್ವ ? " ಅಂದಿದ್ದಕ್ಕೆ "ನಾನ್ಯಾಕ್ರಿ ಕೇಳ್ಬೇಕು .ಅಮೆರಿಕಾದವರೇ ಭಾರತದ ವೀಸಾ ಗೆ ಕ್ಯೂ ನಿಲ್ಲಬೇಕು ,ಆ ರೀತಿ ಮಾಡೋಣ ನಮ್ಮ ದೇಶವನ್ನು ".

ಇಂಥ ಸ್ವಾಭಿಮಾನ ಎಲ್ಲರಿಗೂ ಇದ್ದಿದ್ರೆ ಎಷ್ಟು ಚೆನ್ನಾಗಿರ್ತಾ ಇತ್ತು ಅಲ್ವ??

ಪುಸ್ತಕ ಓದಿದ ಮೇಲೆ ಮೋದಿಯ ಮೇಲೆ ಈಗಾಗಲೇ ಇದ್ದ ಅಭಿಮಾನ ಇಮ್ಮಡಿಯಾದದ್ದಂತೂ ನಿಜ . ಪ್ರತಾಪ್ ಸಿಂಹ ಅದಕ್ಕಾಗಿ ಧನ್ಯವಾದಗಳು ನಿಮಗೆ.

ನೀವೂ ಓದಿ -ನರೇಂದ್ರ ಮೋದಿ- ಯಾರೂ ತುಳಿಯದ ಹಾದಿ .
ಕಾಸು ಕೊಟ್ಟು ಓದೋದಿಕ್ಕೆ ಇಷ್ಟ ಇಲ್ವ ? ಪರ್ವಾಗಿಲ್ಲ ಅದಕ್ಕೊ ಪ್ರತಾಪ್ ವ್ಯವಸ್ಥೆ ಮಾಡಿದ್ದಾರೆ ಪ್ರತಾಪ್ !

ಇಲ್ಲಿಂದ ಓದಿ ಅಷ್ಟೆ http://pratapsimha.com/books/narendra-modi.pdf

ಅಂದ ಹಾಗೆ ಪ್ರತಾಪ್ ವಿಜಯ ಕರ್ನಾಟಕದಲ್ಲಿ ನಿರ್ಭಿಡೆಯಿಂದ ಬರೆಯಲು ಸದಾ ಬೆಂಗಾವಲಾಗಿರುವ ವಿಶ್ವೇಶ್ವರ ಭಟ್ ರಿಗೂ ಒಂದು ಥ್ಯಾಂಕ್ಸ್ ಹೇಳೋಣ -ಏನಂತೀರಾ??


ಚಿತ್ರಕೃಪೆ : ಪ್ರತಾಪ್ ಸಿಂಹರ ತಾಣದಿಂದ ಹೈಜಾಕ್ ಮಾಡಿದ್ದು .

Thursday, October 9, 2008

ಅನಾಮಿಕಾ



"A rose by any other name would smell as sweet" ಅಂತ ಶೇಕ್ ಸ್ಪಿಯರ್ ರೋಮಿಯೋ ಜೂಲಿಯಟ್ ನಲ್ಲಿ ಹೇಳಿದ್ದನಂತೆ ,ಅದನ್ನೆ ಗಟ್ಟಿಯಾಗಿ ಹಿಡಿದುಕೊಂಡು ಬಿಟ್ಟಿದ್ದಾರೆ ಕೆಲವು ಜನಗಳು!
ಶೇಕ್ ಸ್ಪಿಯರ್ ಏನೋ ಮಾತಿಗೆ ಆ ರೀತಿ ಬರೆದಿರಬಹುದು ,ಆದ್ರೆ ನಿಜ ಜೀವನದಲ್ಲಿ ಅವನೇನಾದ್ರೂ ಹೆಸರಿಗೆ ಅಷ್ಟು ಪ್ರಾಮುಖ್ಯತೆ ಕೊಡದೇ ಹೋಗಿದ್ರೆ ,ಅವನು ಬರೆದ ಎಷ್ಟೊ ನಾಟಕಗಳನ್ನು ಬೇರೆಯವರು ತಮ್ಮದಾಗಿಸ್ತಿದ್ರೇನೋ ?

ಹೊಸದಾಗಿ ಇಂಟರ್ನೆಟ್ ಲೋಕಕ್ಕೆ ಪರಿಚಯವಾದಾಗ ಹೀಗೆ ಸಮಯ ಕಳೆಯಲು ಚಾಟ್ ರೂಮ್ ಗೆ ಎಡತಾಕುವ ಅಭ್ಯಾಸ ಇತ್ತು.ಎಲ್ಲರೂ ಮಾಮೂಲಾಗೇ ಕೇಳುವ ಪ್ರಶ್ನೆ ಹೆಸರೇನು(Age Sex Location),ಎಲ್ಲಿರೋದು ಇತ್ಯಾದಿ.
ಇಂಟರ್ನೆಟ್ ನಲ್ಲಿ ಅಷ್ಟು ಸುಲಭವಾಗಿ ನಮ್ಮ ಪರಿಚಯ ಮಾಡ್ಕೋಬಾರದು ಅನ್ನೋ ಅರಿವು ಬಹಳಷ್ಟು ಜನರಿಗೆ ಇದ್ದುದರಿಂದ ಯಾರೂ ಈ ಪ್ರಶ್ನೆ ಗೆ ನಿಜ ಉತ್ತರ ನೀಡ್ತಾ ಇರ್ಲಿಲ್ಲ.
ಆಗ ಬಹಳಷ್ಟು ಜನರ ನೆರವಿಗೆ ಬರ್ತಾ ಇದ್ದಿದ್ದೇ
ಶೇಕ್ ಸ್ಪಿಯರ್ ನ ಈ ವಾಕ್ಯ "A rose by any other name would smell as sweet" . ಹೆಸರ್ಲ್ಲೇನಿದೆ ??? !!! ಅಂತ.
ಆದ್ರೆ ರೋಸ್ ಅನ್ನೋದೇ ಒಂದು identity ಅಲ್ವ? ರೋಸ್ ನ ಜಾಸ್ಮಿನ್ ಅಂತ ಕರೆದಿದ್ರೆ ಅದೇ ಸುವಾಸನೆ ಇರುತ್ತೇನೋ ಆದ್ರೆ ಆ ಆಪ್ಯಾಯಮಾನತೆ??
ನನ್ನ ಗೆಳತಿಯೊಬ್ಬಳು ಹೀಗೆ ಇಂಟರ್ನೆಟ್ ನಲ್ಲಿ ಪರಿಚಯ ಆಗಿದ್ಲು ನಂಗೆ .ಮಾಯಾ ಅನ್ನೋ ಹೆಸರಲ್ಲಿ ಅವಳು ಚಾಟ್ ಮಾಡ್ತಾ ಇದ್ಲು .ಅವಳ ನಿಜ ಹೆಸರೂ ಅದೇ ಅಂತ ಹೇಳಿದ್ಲು. ಆದ್ರೆ ಸುಮಾರು ಒಂದು ವರ್ಷದ ನಂತರ 'ಸಂದೀಪ್ ಸಾರಿ ಕಣೋ ನನ್ನ ಹೆಸರು ಮಾಯಾ ಅಲ್ಲ ರಶ್ಮಿ ’ಅಂದ್ಲು!!!!
ಸಕ್ಕತ್ ಬೇಜಾರಾಗಿತ್ತು ಆ ದಿನ :(
ಎಷ್ಟು ಕಷ್ಟ ಅಲ್ವ ಒಂದು identity ನ ಭಿನ್ನವಾಗಿ ನೋಡೋದಕ್ಕೆ??
ಒಂದು ಹೆಸರು,ವ್ಯಕ್ತಿ ಯ ಬಗ್ಗೆ ಏನೇನೋ ಕಲ್ಪನೆ ಇರುತ್ತೆ .ಅದನ್ನು ಸಡನ್ ಆಗಿ ಬದಲಾಯಿಸೋದು ತುಂಬಾ ಕಷ್ಟ . ಹೇಳೊದೇನೋ ಹೇಳಿ ಬಿಡ್ತಾರೆ ಹೆಸರಲ್ಲೇನಿದೆ ಮಣ್ಣಾಂಗಟ್ಟಿ ಅಂತ -ಆದ್ರೆ ಅದೇ ವ್ಯಕ್ತಿಯ ಹೆಸರು ಬಿಡಿ, initial ತಪ್ಪಾಗಿ ಹೇಳಿದ್ರೂ ದುರುಗುಟ್ಟಿ ನೋಡ್ತಾರೆ.

VVS Laxman ನ ಬದಲು PVS Laxman ಅಂತೇನಾದ್ರೂ ಅಪ್ಪಿ ತಪ್ಪಿ ಕರೆದ್ರೋ ನಿಮ್ಮ ತಿಥಿ ಗ್ಯಾರಂಟಿ!

ನನ್ನ ಬ್ಲಾಗ್ ಗೆ ಪ್ರತಿಕ್ರಿಯಿಸುತ್ತ ಒಬ್ಬರು "ಸಂದೀಪ್ ನಾಯಕ್ರೇ ಚೆನ್ನಾಗಿ ಬರೆದಿದ್ದೀರ " ಅಂದಿದ್ರು .ಇರ್ಲಿ ಪರ್ವಾಗಿಲ್ಲ ತಪ್ಪಿ ಬರೆದಿದ್ದಾರೆ ಅಂತ ನಂಗೇ ನಾನೇ ಸಮಾಧಾನ ಮಾಡ್ಕೊಂಡ್ರೂ ಮನಸ್ಸು ಒಪ್ಪಲಿಲ್ಲ -ಹೇಳಿಯೇ ಬಿಟ್ಟೆ ’ ಮ್ಯಾಡಂ ನನ್ನ ಸರ್ ನೇಮ್ ಕಾಮತ್ ನಾಯಕ್ ಅಲ್ಲ ’ ಅಂತ! ಸರ್ ನೇಮ್ ತಪ್ಪಾಗಿ ಹೇಳೋದು ಬಿಡಿ Kamath ನ Kamat ಅಂತ ಬರೆದ್ರೂ ಮೈ ಎಲ್ಲಾ ಉರಿಯುತ್ತೆ ನಂಗೆ! ’ಅದು ಹೋಟೇಲ್ ಕಾಮತ್ ಕಣ್ರಿ ನಮ್ಮದು ಬೇರೆ ಅಂತೀನಿ’ !

ಇಷ್ಟೆಲ್ಲ ಯಾಕೆ ಬರೆದೆ ಅಂದ್ರೆ ಈಗಿಗ ಬ್ಲಾಗಿಗರೂ ಅನಾಮಿಕರಾಗತೊಡಗಿದ್ದಾರೆ! .ಕೆಲವು ಬ್ಲಾಗಿಗರು ’ಅನಾಮಿಕ’ರಾಗೇ ಇರಲು ಬಯಸ್ತಾರಂತೆ! ನಾವು ’ಇದು ಯಾರಿರಬಹುದು ,ಹುಡುಗ ನಾ ಹುಡುಗಿ ನಾ ’ ಅಂತೆಲ್ಲ ತಲೆ ಕೆಡಿಸ್ಕೊಂಡ್ರೇನೆ ಅವರಿಗೆ ಸಮಾಧಾನವೇನೋ . ಅಥವಾ ಇದೂ ಒಂದು ಮಾರ್ಕೆಟಿಂಗ್ strategy ನಾ??

ಎಷ್ಟು ದಿನ ಅಂತ ಅನಾಮಿಕರಾಗಿ ಇರಲು ಸಾಧ್ಯ ಅಲ್ವೇನ್ರಿ?ದಿನದಿಂದ ದಿನಕ್ಕೆ ಬ್ಲಾಗ್ ವಿಸಿಟಿಗರ ಸಂಖ್ಯೆ ಜಾಸ್ತಿ ಆದ್ರೆ , ಪಕ್ಕದಲ್ಲೇ ಯಾರಾದ್ರೂ ಅವರ ಬಗ್ಗೆ ’ಎಷ್ಟು ಚೆನ್ನಾಗಿ ಬರೀತಾನ್ರಿ/ಳ್ರಿ ಇವನು/ಳು ಅಂತ ಹೇಳ್ತಾ ಇದ್ರೆ ’ಅದು ನಾನೇ ಕಣ್ರೋ ! ’ ಅಂತ ಹೇಳಲಾರದ ಪರಿಸ್ಥಿತಿ!

ಉಫ್ ನಂಗಂತೂ ಸಾಧ್ಯಾನೇ ಇಲ್ಲ !

’ಹಾಯ್ ಬೆಂಗಳೂರಿನಲ್ಲಿ ’ ಜೋಗಿ ’ಜಾನಕಿ ಅಂಕಣ ಬರೀತಾ ಅನಾಮಿಕರಾಗಿದ್ದ ಕಾಲದಲ್ಲಿ ,ಆರ್ಕುಟ್ ನಲ್ಲಿ ಹೀಗೆ ಒಂದು ಚರ್ಚೆ ಪ್ರಾರಂಭ ಆಗಿತ್ತು ’ಜಾನಕಿ ಯಾರು ?’ ಅಂತ .ನಾನೂ ತುಂಬಾ ಇಷ್ಟ ಪಟ್ಟು ಓದ್ತಾ ಇದ್ದೆ ’ಜಾನಕಿ ’ ಕಾಲಂ ನ. ಜಾನಕಿ ಅಂತ ಹೆಸರು ಇಟ್ಟಿದ್ರಿಂದ ಇದನ್ನು ಬರೆಯೋರು ಯಾರೋ ಹೆಂಗಸು ಅನ್ನೋ strong feeling ನಂದಾಗಿತ್ತು. ಬೇರೆಯವ್ರು ತಮ್ಮ ತಮ್ಮ ಅಭಿಪ್ರಾಯ ಹೇಳಿದ್ರು ಅಲ್ಲಿ.

ಅವರಲ್ಲಿ ಯಾರೋ ಒಬ್ರು ಜಾನಕಿ ಬೇರೆ ಯಾರೂ ಅಲ್ಲ ಅದು ’ಜೋಗಿ’ ! ಅವರ ನಿಜ ಹೆಸರು ಗಿರೀಶ್ ರಾವ್ ಅಂತ ಬೇರೆ ಹೇಳಿದ್ರು.
ದುರದೃಷ್ಟ ಅಂದ್ರೆ ನಂಗೆ ಆಗ ಜೋಗಿ ಯಾರು ಅಂತಾನೇ ಗೊತ್ತಿರ್ಲಿಲ್ಲ .ಹಾಗಾಗಿ ನಂಗೆ ಆ ಉತ್ತರ ಸಮಂಜಸ ಅನ್ನಿಸಿರ್ಲಿಲ್ಲ.

ನಂದೆಲ್ಲಿಡ್ಲಿ ಅನ್ನೋ ಹಾಗೆ ನಾನು, ’ ಜಾನಕಿ ಅನ್ನೋರು ಬಹುಷ ವೈದೇಹಿ ಇರಬಹುದೇನೋ ಅವರ ನಿಜ ಹೆಸರು ಜಾನಕಿ ಅಂತೆ ’ ಅಂದಿದ್ದೆ .ನನ್ನದು ಅಧಿಕ ಪ್ರಸಂಗವಾಗಿತ್ತು ಯಾಕಂದ್ರೆ ನಂಗೆ ಜೋಗಿ ಯಾರು ಅಂತಾನೇ ಗೊತ್ತಿರ್ಲಿಲ್ಲ ,ಅದೂ ಅಲ್ಲದೆ ವೈದೇಹಿ ಯವರ ಬಗ್ಗೇನೂ ಜಾಸ್ತಿ ಗೊತ್ತಿರ್ಲಿಲ್ಲ :(

ಇದಾದ ನಂತರ ಜೋಗಿಯವರು ’ಜೋಗಿ ಕಥೆಗಳು’ ಪ್ರಕಟಿಸಿದ ನಂತರ ’ಜಾನಕಿ’ ಯಾರು ಅನ್ನೋದು ಜಗಜ್ಜಾಹೀರಾಯ್ತು.

ನನ್ನ ಹಾಗೆಯೇ ಜಾನಕಿಯ ಬಗ್ಗೆ ಬೇರೆಯವರ ಕಲ್ಪನೆಗಳೂ ಛಿದ್ರವಾದವಾ?????? ಯಾರಿಗೆ ಗೊತ್ತು!

ಇದೇ ರೀತಿ ಈ ಹೊಸ ’ಅನಾಮಿಕ ’ ಬ್ಲಾಗಿಗರಿಗೆ ಒಂದು ದಿನ lime light ಗೆ ಬರುವ ಆಸೆ ಆದ್ರೆ ನಮ್ಮಂಥವರ ಗತಿ ಏನು? ನಮ್ಮ ಕಲ್ಪನೆಗಳ ರೆಕ್ಕೆ ಪುಕ್ಕ ಎಲ್ಲ ಮುರಿಯುವಾಗ ನೋವಾಗಲ್ವ?
ಯಂಡಮೂರಿಯವರ’ ಬೆಳದಿಂಗಳ ಬಾಲೆ’ ಕೊನೆಯವರೆಗೆ ನಮಗೆ ಕಾಣೋದೆ ಇಲ್ಲ ! ಹಾಗಾಗಿಯೇ ನಂಗೆ ಅದು ಬಹಳ ಇಷ್ಟ ಆಯ್ತು !
ಅದು ಬಿಟ್ಟು ಕೊನೆಗೆ ’ಛೆ ನಾನಂದು ಕೊಂಡ ಬೆಳದಿಂಗಳ ಬಾಲೆ ಇವಳಲ್ಲ ’-ಅನ್ನೋ conclusion ಗೆ ಬರೋದು ಎಂಥ ಯಾತನೆ ಅಲ್ವ?
ಅದೂ ಅಲ್ಲದೇ ಅನಾಮಿಕರು ಅನಾಮಿಕರಾಗೇ ಉಳಿಯೋದು ಸಾಧ್ಯ ನಾ??
ಹ್ಯಾರಿ ಪೋಟರ್ ಲೇಖಕಿ ಹೆಂಗಸು ಅಂತ ಗೊತ್ತಾಗಬಾರದು ಅಂತ ಪಾಪ ಪ್ರಕಾಶಕರು ಅವಳ ಹೆಸರನ್ನು ಶಾರ್ಟ್ ಫಾರ್ಮ್ ನಲ್ಲಿ ಬರೀತಾ ಇದ್ರಂತೆ . ಎಂಥ ಸಂಕಟ ಅಲ್ವ ಅವಳಿಗೆ?


ಮೇರಿ ಭೀಗಿ ಭೀಗಿ ಸಿ ಪಲ್ಕೋಂ ಪೇ ರೆಹ್ ಗಯೆ,
ಜೈಸೆ ಮೆರೆ ಸಪನೆ ಭಿಕರ್ ಕೇ ......................
ಜಲೆ ಮನ್ ತೇರಾ ಭಿ ಕಿಸಿಕೆ ಮಿಲನ್ ಪರ್ ,
ಅನಾಮಿಕಾ ತು ಭಿ ತರಸೇ .................................!!!

Tuesday, September 30, 2008

ಧರ್ಮ ಮತ್ತು ವಿಜ್ಞಾನ .



" ರಾಮಾಯಣ,ಮಹಾಭಾರತ,ಬೈಬಲ್,ಕುರಾನ್-ಇವೆಲ್ಲಾ ನನ್ನ ಮಟ್ಟಿಗೆ ಕೇವಲ literature texts.
ವೈಜ್ನಾನಿಕ ಸತ್ಯಗಳನ್ನು ಕಂಡುಕೊಂಡವರಿಗೆ ಅದರ ಅಗತ್ಯವಿಲ್ಲ ಅಂದುಕೊಂಡಿದ್ದೇನೆ "

ಹೀಗಂತ ಗೆಳತಿಯೊಬ್ಬರು ನನ್ನ ಲೇಖನಕ್ಕೆ ಪ್ರತಿಕ್ರಿಯಿಸುತ್ತಾ ಬರೆದಿದ್ರು !ಬೈಬಲ್ ,ಕುರಾನ್ ಬಗ್ಗೆ ನಾನು ಓದಿಲ್ಲವಾದ್ದರಿಂದ ನನ್ಗೆ ಆ ಬಗ್ಗೆ ಮಾತಾಡೋದು ಕಷ್ಟ.ಆದ್ರೆ ರಾಮಾಯಣ ,ಮಹಾಭಾರತದ ಬಗ್ಗೆ ನನಗೆ ಮೊದಲಿನಿಂದಲೂ ಒಂದು ಬೆರಗಿದೆ ,ಗೌರವವಿದೆ.

ಈ ಎರಡನ್ನೂ ನಾನು ಓದಿಲ್ಲ! ಬರೀ ನೋಡಿದ್ದಷ್ಟೆ(ಟಿ.ವಿ ಯಲ್ಲಿ ಮಾರಾಯ್ರೆ, ಹಸ್ತಿನಾವತಿ,ಅಯೋಧ್ಯೆಗೆ ಹೋಗಿಲ್ಲ ಇನ್ನೂ!)

ಮೇಲೆ ಹೇಳಿದ ಪ್ರಕಾರ ರಾಮಾಯಣ ,ಮಹಾಭಾರತಗಳು ’ಬರೀ’ literature texts ಗಳಾಗಿದ್ದಿದ್ರೆ ನಾನಂತೂ ತುಂಬಾ ಖುಶಿ ಪಡ್ತೀನಿ! ಒಂದು ವೇಳೆ ಇದೊಂದು ಸತ್ಯ ಕಥೆ ಆಗಿದ್ರೆ ಟುಸ್ಸ್ ಸ್ಸ್ ಸ್ಸ್ ಸ್ಸ್ ಸ್ಸ್ ಪಟಾಕಿ!!!!

ಯಾಕೆ ಅಂತೀರಾ?? ಸತ್ಯ ಕಥೆ ಬರೆಯೋದೇನ್ರಿ ದೊಡ್ದ ವಿಷಯ?? ಎಲ್ಲೋ ಏನೋ ಆಗಿರುತ್ತೆ ಅದನ್ನು ನಿಮಗೆ ’ಯಾರೋ ’ ಹೇಳಿರ್ತಾರೆ ನೀವು ಅದನ್ನು ಚಾಚೂ ತಪ್ಪದೆ ಬರ್ದಿರ್ತೀರ .ಅದರಲ್ಲೇನು greatness? ನಿಮಗೆ ಕೂಲಿ ಕೊಟ್ಟು,.ಅರ್ಧ ಟೀ (ಬೆಂಗಳೊರ್ರಿನಲ್ಲಾದ್ರೆ ಮಾತ್ರ!) ಕುಡಿಸಿ ಕಳಿಸೋದು.ಆಮೇಲೆ ಯಾವುದಾದ್ರೂ ಪಬ್ಲಿಷರ್ ಹಿಡ್ಕೊಂಡು ಪ್ರಕಟಿಸೋದು ಅದ್ರಲ್ಲೇನು ವಿಶೇಷ ಅಲ್ವಾ??

ಆದ್ರೆ ಸ್ವಲ್ಪ ಯೋಚಿಸಿ ನೋಡಿ -ಈ ರಾಮಾಯಣ ,ಮಹಾಭಾರತಗಳು ಕಟ್ಟುಕಥೆಗಳೇ ಆಗಿದ್ದಿದ್ರೆ..........????
ಎಷ್ಟು ಬುದ್ಧಿವಂತನಾಗಿದ್ದಿರಬಹುದು ಅದರ ಲೇಖಕ??ಕಥೆ ಬಿಡ್ರಿ ಆ ಕಥೆಗಳಲ್ಲಿ ಬರೋ ಸಾವಿರಾರು ಪಾತ್ರದ ಹೆಸರುಗಳನ್ನು ಯೋಚಿಸಲೇ ಎಷ್ಟು ತಲೆ ಓಡಿಸಿರ್ಬೇಕು ಆ ಲೇಖಕ?? ನನ್ನ ಜುಜುಬಿ ಬ್ಲಾಗ್ ಗೆ ಒಂದು ಹೆಸರಿಡಲು ಎಷ್ಟು ತಲೆ ಕೆರ್ಕೊಂಡ್ರೂ ಹೊಸ ಹೆಸರು ಹೊಳೀಲಿಲ್ಲ!
ನಮ್ಮ ಮಕ್ಕಳಿಗೆ ಹೆಸರಿಡ್ಬೇಕಾದ್ರೆ ಎಷ್ಟೇ ಒರಿಜಿನಲ್ ಇಡೊದಕ್ಕೆ try ಮಾಡಿದ್ರೂ ಅದು ಎಲ್ಲೊ use ಆಗಿರುತ್ತೆ!
ಇಂಥ ಒಂದು ಕಟ್ಟು ಕಥೆ ತಯಾರು ಮಾಡ್ಬೇಕಾದ್ರೆ ಆ ಲೇಖಕರು ಎಷ್ಟು ಒದ್ದಾಡಿರ್ಬೇಕು ಅಲ್ವ?? ಒಂದು ಕಡೆ ಬಂದ ಹೆಸರು ಇನ್ನೊಂದು ಕಡೆ ಇಲ್ಲ.ಕಥೆಯಲ್ಲಿ twistಗಳ ಮೇಲೆ twistಗಳು .ಕಾಮಿಡಿ ಇದೆ,ಸಸ್ಪೆನ್ಸ್ ಇದೆ ,horror ಇದೆ ,ಎಲ್ಲ ಇದೆ!!
ಆಮೇಲೆ ಈ ಮಹಾಭಾರತ,ರಾಮಾಯಣಗಳನ್ನು ವೈಜ್ಞಾನಿಕ ದೃಷ್ಟಿಯಿಂದ ನೋಡಿ ಅಂತ ಹೇಳೋಮಂದಿನೂ ಸಿಗ್ತಾರೆ !
ನಾವು ಯಾರ್ರಿ ವಿಜ್ಞಾನದ ಬಗ್ಗೆ ಮಾತಾಡೊದಕ್ಕೆ ಅಧಿಕಾರ ಉಳ್ಳವರು?? ಹೊಸದಾಗಿ ಕಂಡು ಹುಡುಕೋದು ಬಿಡಿ ಯಾವತ್ತೋ ನ್ಯೂಟನ್ ಕಂಡು ಹುಡುಕಿದ ನಿಯಮಗಳನ್ನೇ 5 marks ಗೆ ಆಗೋ ಅಷ್ಟು ಬರೆಯೋ ಯೋಗ್ಯತೆ ನಮಗಿಲ್ಲ(ನನ್ನಂಥ ಸಾಮನ್ಯ ಜನರಿಗೆ)!
ಈ ವಿಜ್ಞಾನಿಗಳೂ ಪಾಪ ಒಂದು ದಿನ ಭೂಮಿ ಚಪ್ಪಟೆ ಅಂತಾರೆ! ಮಾರನೇ ದಿನ ಭೂಮಿ ಗುಂಡಗಿದೆ ಅಂತಾರೆ.ನಾಳೆ ಭೂಮಿ ಚೌಕವಾಗಿದೆ ಅಂದ್ರೂ ಅನ್ನಬಹುದು!
ನಾನು ವಿಜ್ಞಾನಿಗಳನ್ನು ಅವಮಾನಿಸಲು ಈ ರೀತಿ ಬರೆದಿಲ್ಲ .ಅವರ ಬಗ್ಗೆ ಅಪಾರ ಗೌರವವಿದೆ ನನಗೆ. ಆದ್ರೆ ವಿಜ್ಞಾನದ ಸಿದ್ಧಾಂತಗಳೂ ಕಾಲ ಕಾಲಕ್ಕೆ ಬದಲಾಗೋದಂತೂ ನಿಜ.The ultimate truth ! ಅನ್ನೋ ಅಂಥದ್ದು ವಿಜ್ಞಾನದಲ್ಲೂ ಇಲ್ಲ,ಅಲ್ವ??
ಒಂದು ದಿನ ಮೊಟ್ಟೆ ಸಸ್ಯಾಹಾರಿ ಅಂತಾರೆ ,ಆಮೇಲೆ ಯಾವುದೋ ಲೇಖನದಲ್ಲಿ ಮಾಂಸಾಹಾರ ಅಂತಾರೆ.ಒಬ್ಬ ಕೊಪರ್ನಿಕಸ್ ಅಂದದ್ದೇ ಸರಿ ಅಂತಾನೆ,ಇನ್ನೊಬ್ಬ ಗೆಲಿಲಿಯೊ ಅಂದಿದ್ದೇ ಸರಿ ಅಂತಾನೆ.ಮತ್ತೊಬ್ಬ ಎಲ್ಲರದ್ದೂ ತಪ್ಪು ’ನಾನು ಹೇಳಿದ್ದೆ ಸರಿ ’ ಅಂತಾನೆ(ನನ್ ಥರ ಪಾರ್ಟಿ!).

ಈಗ ವೈಜ್ಞಾನಿಕ ದೃಷ್ಟಿಯಿಂದಲೇ ನೋಡೋಣ ರಾಮಾಯಣ ,ಮಹಾಭಾರತಗಳನ್ನು:-

ರಾವಣ ಪುಷ್ಪಕ ವಿಮಾನದಲ್ಲಿ ಬಂದು ಸೀತೆಯನ್ನು ಅಪಹರಿಸಿದ ಅಂತ ಮೇಷ್ಟ್ರು ಹೇಳ್ತಾ ಇದ್ರೆ ಕೊನೆ ಬೆಂಚಲ್ಲಿ ಕೂತು ಮಕ್ಕಳು ಮುಸಿ ಮುಸಿ ನಗ್ತಾರೆ! ಏನಪ್ಪ ಜೋಕ್ ಮಾಡ್ತಾರೆ ಮೇಷ್ಟ್ರು! ,ಆ ಕಾಲದಲ್ಲಿ ವಿಮಾನ ಇತ್ತಂತೆ ,ಅದೂ ಹಾರ್ತಾ ಇತ್ತಂತೆ!!
ಆದ್ರೆ ಮನಮೋಹನ್ ಸಿಂಗ್ ಕಿಂಗ್ ಫಿಶರ್ airlines ನಲ್ಲಿ ಇನ್ನು ಅರ್ಧ ಗಂಟೆಯಲ್ಲಿ ಬೆಂಗಳೂರಿಗೆ ಬರ್ತಾರಂತೆ ಅಂದ್ರೆ ಹಾರ,ತುರಾಯಿ ತಗೊಂಡು ವಿಮಾನ ನಿಲ್ದಾಣಕ್ಕೆ ಧಾವಿಸ್ತಾರೆ ಜನ -ಆಗ ನಗಲ್ಲ!!!!!!

ಸಂಜಯ ಯುದ್ಧಭೂಮಿಯಲ್ಲಿ ಏನಾಗ್ತಾ ಇತ್ತು ಅಂತ ಇಲ್ಲೇ ಕುಳಿತು ಧೃತರಾಷ್ಟ್ರನಿಗೆ ವಿವರಿಸ್ತಾ ಇದ್ದ ಅಂತ lecturer ಹೇಳ್ತಾ ಇದ್ರೆ ಅಸಡ್ಡೆಯಿಂದ ಮುಂದಿನ ಬೆಂಚಿನಲ್ಲಿ ಕೂತ ಹುಡುಗಿಯ ಜಡೆ ಜೊತೆ ಆಟ ಆಡ್ತಾನೆ ಕಾಲೇಜ್ ಹುಡುಗ!
ಆದ್ರೆ ದೂರದಲ್ಲೆಲ್ಲೋ ಸೌತ್ ಆಫ್ರಿಕಾದಲ್ಲಿ ಅಗೋ ಮ್ಯಾಚ್ ಬಗ್ಗೆ ,ರವಿಶಾಸ್ರಿ ಇಲ್ಲೇ ದೆಹಲಿ ಸ್ಟೇಡಿಯಂ ನಲ್ಲಿ ಕೂತು ಕಮೆಂಟ್ರಿ ಕೊಡ್ತಾ ಇದ್ರೆ ಅದನ್ನು laysಗೆ ಸ್ವಲ್ಪ ಉಪ್ಪಿನಕಾಯಿ ಹಾಕಿ ತಿನ್ತಾ ಚಪ್ಪರಿಸಿ ಮ್ಯಾಚ್ ನೋಡ್ತಾನೆ ಅದೇ ಕಾಲೇಜಿನ ಪಡ್ದೆ ಹುಡುಗ!

ಇದು ವಿಜ್ಞಾನ - ಅದು ಅಜ್ಞಾನ !!!

ಋಷಿ ಮುನಿಗಳು ತಮ್ಮ ದಿವ್ಯ ಜ್ಞಾನದಿಂದ ದೂರದ್ಲ್ಲಿದ್ದ ಇನ್ನೊಬ್ಬರ ಬಳಿ ಸಂವಹನ ನಡೆಸ್ತಾ ಇದ್ರು ಅಂತ ಹೇಳಿದ್ರೆ ನಂಬೋಕೆ ಆಗಲ್ಲ ನಮಗೆ.
ಆದ್ರೆ ಇಲ್ಲಿಂದ U.K ನಲ್ಲಿರೋ ಮಗಳ ಹತ್ರ ಮೊಬೈಲ್ ನಲ್ಲಿ ಮಾತಾಡ್ತೀನಿ ಅಂದ್ರೆ ನಗಲ್ಲ ಬದಲಾಗಿ ’ಎಷ್ಟು ಬೀಳುತ್ತೆ ಮಿನಿಟಿಗೆ ’ ಅಂತ ಪ್ರಶ್ಶ್ನಿಸ್ತಾರೆ!!!!

ಘಟೋತ್ಕಚ ದೈತ್ಯ ದೇಹಿಯಾಗಿದ್ದ ಅಂದ್ರೆ ಖಂಡಿತ ನಂಬಲ್ಲ ! ಆದ್ರೆ ದ ಗ್ರೇಟ್ ಖಲಿ WWE ನಲ್ಲಿ ಪೈಟ್ ಮಾಡ್ತಾ ಇದ್ರೆ ’ಏನು ಕಟ್ಟು ಮಸ್ತಾದ ಜೀವ ಕಣ್ರಿ ’ ಅಂತೀವಿ! ಡೈನೋಸರ್ ಬಗ್ಗೆ ಬಂದ ’ಜುರಾಸಿಕ್ ಪಾರ್ಕ್ ’ ನೋಡಿ ಖುಷಿ ಪಡ್ತೀವಿ!

ಕುಂತಿ ಕೇವಲ ದೇವರ ಪ್ರಾರ್ಥನೆಯಿಂದ ಗರ್ಭವತಿ ಆದ್ಲು ಅಂದ್ರೆ ನಂಬಲ್ಲ!

’ಪಕ್ಕದ ಮನೆ ಆಂಟಿಯ ಗಂಡ ಸತ್ತು ಮೂರು ವರ್ಷ ಆಯ್ತು ,ಆದ್ರೆ ವೀರ್ಯಾಣು ಫ್ರಿಜ್ ನಲ್ಲಿ ಜೋಪಾನವಾಗಿಟ್ಟಿದ್ರಿಂದ In vitro fertilization ಮಾಡಿ ಈಗ ಗರ್ಭವತಿ ಆದ್ರು ಅಂದ್ರೆ -ವಾವ್ ಇದು ನೋಡ್ರಿ ವಿಜ್ಞಾನ ಅಂದ್ರೆ! ’ಅಂತ ಖುಷಿ ಪಡ್ತೀವಿ!

ಅರ್ಜುನ ಬಿಟ್ಟ ಬಾಣ ಟಾರ್ಗೆಟ್ ನ ಹುಡುಕಿಕೊಂಡು ಹೋಗಿ ದಾಳಿ ನಡೆಸುತ್ತೆ ಅಂದ್ರೆ ನಂಬಲ್ಲ!
ಆದ್ರೆ ಅಬ್ದುಲ್ ಕಲಾಂ ಡಿಸೈನ್ ಮಾಡಿದ ’guide missile' targetನ ಹುಡುಕಿಕೊಂಡು ಹೋಗಿ ದಾಳಿ ಮಾಡುತ್ತೆ ಅಂದ್ರೆ ’ಗ್ರೇಟ್ ಕಣ್ರಿ ಅಬ್ದುಲ್ ಕಲಾಂ’ .Brilliant scientist ಅಂತೀವಿ!!!!!

ಅಬ್ದುಲ್ ಕಲಾಂರದ್ದು ವೈಜ್ಞಾನಿಕ ಸತ್ಯ - ಅರ್ಜುನ ಮಾಡಿದ್ದು ’literature text '????

ಇಷ್ಟೊಂದು ಬೆರಗುಗಳನ್ನು ಕೂಡಿದ ರಾಮಾಯಣ ,ಮಹಾಭಾರತ ನಮಗೆ just literature texts!!

ಅದೇ ವರ್ಷಕ್ಕೊಂದು ಹೆಂಡತಿಯರನ್ನು ಬದಲಾಯಿಸುವ ಸಲ್ಮಾನ್ ರಶ್ದಿ ಬರೆದಿರೋ ’Midnight’s Children' ಸಾರ್ವಕಾಲಿಕ ಶ್ರೇಷ್ಠ ಬೂಕರ್ ಕೃತಿ!

ರಾಮಾಯಣ ,ಮಹಾಭಾರತಗಳು ಏನಾದ್ರೂ ನಿಜ ಕಥೆಗಳೇ ಆಗಿದ್ರೆ -’ಛೇ ,ಬೇಜಾರು.......’

ಇವುಗಳೇನಾದ್ರೂ ಕಾಲ್ಪನಿಕ ಕಥೆಗಳೇ ಆಗಿದ್ರೆ - ಪ್ರೀತಿಯ ರಾಮಾಯಣ ,ಮಹಾಭಾರತದ ಲೇಖಕರೇ ನೀವು ನಿಜಕ್ಕೊ ಗ್ರೇಟ್ !

Thursday, September 18, 2008

ಎದೆ ತಟ್ಟಿ ಹೇಳು ನಾನೊಬ್ಬ ಹಿಂದು !


ಹೀಗೆ ವಿಜಯ್ ರಾಜ್ ರ ಕುಂದಾಪ್ರ ಕನ್ನಡ ಬ್ಲಾಗ್ ನೋಡ್ತಾ ಇದ್ದೆ .ದಕ್ಷಿಣ ಕನ್ನಡ(ಅವಿಭಜಿತ) ’ಬುದ್ಧಿವಂತರ ನಾಡು ’ಅಂತ ಹೆಸರು ಪಡೆದುಕೊಂಡಿದ್ದು ,ಈಗ ನಡೆಯುತ್ತಿರೋ ಕೋಮು ಗಲಬೆಯಿಂದ ಈ ಪಟ್ಟ ಹೋಗೋ ಸಂಭವವಿದೆ ಅನ್ನೋ ಭಯ ಅವರಿಗೆ .ಅವರ ಬ್ಲಾಗ್ ನಲ್ಲೇ ಈ ಬಗ್ಗೆ ಕಮೆಂಟಿಸೋಣ ಅಂದುಕೊಂಡಿದ್ದೆ ಆದ್ರೆ ನನಗೆ ’ಹೇಳಲಿಕ್ಕಿನ್ನೂ ತುಂಬಾ ಇದೆ ’ ಆದ್ದರಿಂದ ಎಲ್ಲಾ ಇಲ್ಲೇ ಬರೆಯೋಣ ಅನ್ನಿಸಿತು.
ನಂಗೆ ಕುಂದಾಪ್ರ ಕನ್ನಡ ಬರಲ್ಲ .ಆದ್ರೆ ಅರ್ಥ ಆಗುತ್ತೆ. ವಿಜಯ್ ಲೇಖನ ತುಂಬಾ ಚೆನ್ನಾಗಿದೆ - Food for thought .

ಆದ್ರೆ..........................
There is always other side of story.
ಮಂಗಳೂರಿನ ವಿಷಯದಲ್ಲಿ ರಾಜಕಾರಣ ನುಸುಳಿರುವುದು ಸ್ವಲ್ಪ ಮಟ್ಟಿಗೆ ಸತ್ಯ ಇರಬಹುದು .ಆದ್ರೆ ರಾಜಕಾರಣ ಎಲ್ಲಿಲ್ಲ ಹೇಳಿ ?
ಮುಖ್ಯಮಂತ್ರಿ ಹೆಣ್ಣುಮಕ್ಕಳಿಗೆ ಸೈಕಲ್ ಕೊಟ್ರೆ ಅದು ರಾಜಕೀಯ ,ಹುಡುಗರಿಗೆ ಕೊಟ್ಟಿಲ್ಲ ಅಂದ್ರೆ ಅದೂ ರಾಜಕೀಯ!
ವಿತ್ತ ಸಚಿವರು ಒಳ್ಳೆಯ ಬಜೆಟ್ ಮಂಡಿಸಿದ್ರೆ ಅದು ರಾಜಕೀಯ ,ಕೆಟ್ಟ ಬಜೆಟ್ ಮಂಡಿಸಿದ್ರೆ ಅದೂ ರಾಜಕೀಯ.ಹಜ್ ಗೆ ಸಬ್ಸಿಡಿ ಕೊಟ್ರೆ ಅದೂ ರಾಜಕೀಯಕ್ಕೆ ,ಅಮರನಾಥ ಯಾತ್ರೆ ಗೆ ಭೂಮಿ ಕೊಟ್ಟಿಲ್ಲ ಅಂದ್ರೆ ಅದೂ ರಾಜಕಾರಣ.ಎಲ್ಲಾ ರಾಜಕಾರಣಿಗಳು ಒಳ್ಳೆಯ ಕೆಲಸ ಮಾಡೋದು ರಾಜಕೀಯಕ್ಕೆ !ಕೆಟ್ಟ ಕೆಲಸ ಮಾಡೋದು ರಾಜಕೀಯಕ್ಕೆ !
ವಿಜಯ್ ಹೇಳ್ತಾ ಇದ್ರು ಮತಾಂತರದ ವಿಷಯವನ್ನು ಕಾನೂನು ಪ್ರಕಾರ ಬಗೆಹರಿಸ್ಬೇಕಿತ್ತು ಅಂತ!ಒಳ್ಳೆಯ ವಿಚಾರ ಆದ್ರೆ ಇದು ಎಷ್ಟರ ಮಟ್ಟಿಗೆ ಸಾಧ್ಯ ? ಕಾನೂನನ್ನು ಕೈಗೆ ತಗೊಳ್ಳೊದು ತಪ್ಪು ನಿಜ ,ಆದ್ರೆ ಒಂದು ಹೇಳಿ ನಿಮ್ಮ ಆಫೀಸುಗಳಿಗೆ ವಾಚ್ ಮ್ಯಾನ್ ಯಾಕೆ ಇಡ್ತೀರ? ಯಾರಾದ್ರೂ attack ಮಾಡಿದ್ರೆ ,ಅಥವ ಏನಾದ್ರೂ ಕಳವು ಆದ್ರೆ ’ಆಮೇಲೆ ಕಾನೂನಿನ ಪ್ರಕಾರ ಕ್ರಮ ಕೈ ತಗೊಳ್ ಬಹುದು ಅಲ್ವ?? ’ ಆದ್ರೆ ನೀವು security ಇಡ್ತೀರ ,ಅದೂ ನಿಮ್ ಗೆ ಗ್ರೂಪ್ ಫೋರ್ ನಂಥ security agency ನೇ ಬೇಕು?? ಯಾಕೆ?
ಈಗ ನಡೆದಿರೋ ಸಂಗತಿಗಳಿಂದ ಈ ಮತಾಂತರದ ವಿಷಯ ಜಗಜ್ಜಾಹೀರಾಗಿದೆ ,ಆದ್ರೆ ಸುಮ್ಮನೆ ಮತಾಂತರದ ಬಗ್ಗೆ ಸುಮ್ಮನೆ ಒಂದು complaint ಕೊಟ್ಟು ಮನೆಗೆ ಬಂದು ಬೆಚ್ಚಗೆ ಮಲಗಿದ್ರೆ NDTVಯವ್ರು ಈ ಬಗ್ಗೆ ಕಾರ್ಯಕ್ರಮ ನಡೆಸ್ತಿದ್ರ?? ಅಥವಾ ನೀವು/ನಾನು ಬ್ಲಾಗ್ ನಲ್ಲಿ ಈ ಬಗ್ಗೆ ಬರೀತಿದ್ವ??

ನನ್ಗೆ ಮಂಗಳೂರಿನ ರೋಮನ್ ಕ್ಯಾಥೋಲಿಕ್ ಸಮುದಾಯದ ಬಗ್ಗೆ ಅಪಾರ ಗೌರವವಿದೆ .ಯಾಕಂದ್ರೆ ನಾನೂ ಕಾನ್ವೆಂಟ್ ನಲ್ಲಿ ಓದಿರೋನು .ನಮ್ಮ ಟೀಚರುಗಳು,ಸಿಸ್ಟರ್ ಗಳು ಎಲ್ಲ ಕ್ರಿಶ್ಚಿಯನ್ ಸಮುದಾಯದವ್ರು.ಆದ್ರೆ ಯಾವತ್ತೂ ಅವರು ಹಿಂದೂ ಧರ್ಮದ ಬಗ್ಗೆ ಅವಮಾನಿಸಿ ಮಾತಾಡಿಲ್ಲ .ನನ್ನಲ್ಲಿ ಸ್ವಲ್ಪ ಒಳ್ಳೆಯ ಗುಣಗಳು ಮೂಡಿದ್ರೆ ಅದರಲ್ಲಿ ಅವರ ಕೊಡುಗೆ ಅಪಾರ.
ಎಲ್ಲೋ ಕೆಲವೊಂದು ಶಾಲೆಗಳಲ್ಲಿ ಹಿಂದೂ ಧರ್ಮದ ಸಂಕೇತಗಳಾದ ಹೂ,ಕುಂಕುಮ ಗಳಿಗೆ ನಿಷೇಧ ಹೇರಿದ್ದು ಬಿಟ್ರೆ (ಇದು ಗಂಭೀರ ಅಪರಾಧ ಆದ್ರೂ ಅದನ್ನು ಸರಿ ಪಡಿಸಿದ್ದಾರೆ,ಲಂಡನ್ ನಲ್ಲೇ ಸಿಖ್ ಗಳು ಟರ್ಬನ್ ಧರಿಸೋದನ್ನು ನಿಷೇಧಿಸಿದರ ಬಗ್ಗೆ ಪ್ರತಿಭಟನೆ ನಡೆಸ್ತಾರೆ ಆದ್ರೆ ನಾವು?) ಹಿಂದೂ ಧರ್ಮಕ್ಕೆ ಅಪಚಾರ ಆಗೋ ಅಂಥ ಕೆಲಸ ಅವ್ರು ಯಾವತ್ತೂ ಮಾಡಿಲ್ಲ ,ಮಾಡೋದೂ ಇಲ್ಲ .
ಆದ್ರೆ ಈಗ ಕೆಲವು ದುರುದ್ದೇಶ ಪ್ರೇರಿತ ಸಂಘಟನೆಗಳು ಮತಾಂತರಕ್ಕೆ ಕುಮ್ಮಕ್ಕು ನೀಡಿದ್ದು ಸತ್ಯ.ಇದಕ್ಕೆಲ್ಲ ಹಣ ಎಲ್ಲಿಂದ ಬರುತ್ತೆ ಅನ್ನೋದೂ ರಹಸ್ಯವಾಗೇನೂ ಉಳಿದಿಲ್ಲ.
ನನ್ನ ಹಲವಾರು ಸ್ನೇಹಿತರು ಕೇಳ್ತಾರೆ "ಅಲ್ಲಪ್ಪ ಬೇರೆ ಮತಕ್ಕೆ ಹೋಗೋದು ಅವರಿಷ್ಟ ,ಅದನ್ಯಾಕೆ ನಾವು ವಿರೋಧಿಸ್ಬೇಕು " ಅಂತ !!

ಹೌದಲ್ಲ?? ಯಾಕೆ ನಾವು ತಲೆ ಕೆಡಿಸ್ಕೋಬೇಕು ???

ಅದೆಲ್ಲ ಇರ್ಲಿ ,ನಿಮಗೊಂದು ಪುಟ್ಟ ಮಗು ಇದೆ ಅಂತ ತಿಳ್ಕೊಳ್ಳಿ! ನಿಮಗೆ ಬರೋದು ಎರಡು ಸಾವಿರ ಸಂಬಳ .ನಿಮ್ಮ ಶಕ್ತಿ ಪ್ರಕಾರ ಯಾವುದೋ ಒಂದು ಸರಕಾರಿ ಶಾಲೆಗೆ ಮಗುವನ್ನು ಸೇರಿಸಿ ನಿಮ್ಮ ಶಕ್ತಿ ಮೀರಿ ಬೆಳೆಸ್ತೀರ.
ಒಂದು ದಿನ ಒಬ್ಬ ಶ್ರೀಮಂತ ಸಾಫ್ಟ್ ವೇರ್ ಇಂಜಿನಿಯರ್ ಬಂದು " ಮಗು, ನಿನ್ ಅಪ್ಪಂಗೆ ಬರೀ ಎರಡು ಸಾವಿರ ಸಂಬಳ ,ಅವನಿಂದ ನಿನ್ನನ್ನು ’ಚೆನ್ನಾಗಿ’ ಸಾಕೋ ಯೋಗ್ಯತೆ ಇಲ್ಲ .ನನ್ ಜೊತೆ ಬಾ ,ಯಾವುದಾದ್ರೂ ಒಳ್ಳೆ ಕಾನ್ವೆಂಟ್ ಗೆ ನಿನ್ನ ಸೇರಿಸ್ತೀನಿ ,ದಿನಾ ಹಾರ್ಲಿಕ್ಸ್ ಕೊಡಿಸ್ತೀನಿ ,ಹ್ಯಾರಿ ಪೊಟರ್ ಸಿನೆಮಾ ತೋರಿಸ್ತೀನಿ " ಅಂತ ಪುಸಲಾಯಿಸಿ ಕರ್ಕೊಂಡು ಹೋದ್ರೆ ಏನ್ ಮಾಡ್ತೀರಾ??

ನೀವನ್ ಬಹುದು ಮಗು ಆ ಥರ ಹೋಗಲ್ಲ ಅಂತ !

21st century ಮಗು ಕಣ್ರಿ ಅದು ಏನೂ ಹೇಳೋಕಾಗಲ್ಲ ಹೋದ್ರೂ ಹೋಗ್ ಬಹುದು ! ಆಗ ಏನನ್ನಿಸುತ್ತೆ ನಿಮಗೆ?
ಓಕೆ ಮಗು ಮೈನರ್ . ಅದು ಹೋದ್ರೂ ವಾಪಸ್ ತರ್ಸೋಕೆ ಕಾನೂನು ಇದೆ.
ಇದೇ ಕೆಲಸ ಹೆಂಡತಿ ಮಾಡಿದ್ರೆ ?? "ನಿನ್ ಗಂಡನಿಗೆ ಸಂಬಳ ಚೆನ್ನಾಗಿಲ್ಲ ,ನಾನು ಚೆನ್ನಾಗಿ ಸಾಕ್ತೀನಿ " ಅಂತ ಯಾರಾದ್ರೂ ಪುಸಲಾಯಿಸಿದ್ರೆ ಏನನ್ಸುತ್ತೆ? ಮಗು ಏನೊ ಮೈನರ್ ,ಆದ್ರೆ ಹೆಂಡತಿ ಮೇಜರ್ ಅಲ್ವ? ಡೈವೋರ್ಸ್ ಕೊಟ್ಟೇ ಹೋಗಬಹುದು?

ಈಗ ಹೇಳಿ ತಪ್ಪು ಯಾರ್ದು?

ಯಾರೊ ಒಬ್ಬ ನಡುರಾತ್ರಿಯಲ್ಲಿ ಮನೆಯಲ್ಲಿ ಮಲಗಿದ್ದಾಗ, ಖೇತಾನ್ ಫ್ಯಾನ್ ಕೆಳಗೆ ಜ್ಞಾನೋದಯ ಆಗಿ ಸೀದ ಚರ್ಚಿಗೆ ಹೋಗಿ ’ಫಾದರ್ ನಾನೂ ಕ್ರಿಶ್ಚಿಯನ್ ಆಗ್ಬೇಕು ನನಗೆ ದೀಕ್ಷೆ ಕೊಡಿ ’ಅಂತ ಹೇಳಿದ್ರೆ ಅದು fine ,ಅದು ಅವನಿಷ್ಟ . ಆದ್ರೆ ’ಬೇರೆ ಯಾರೋ ’ಅವನ ಮನೆಗೆ ಬಂದು ಪುಸಲಾಯಿಸಿದ್ರೆ ತಪ್ಪು ಯಾರದ್ದು?
ಸುವರ್ಣ ಚ್ಯಾನೆಲ್ ನಲ್ಲಿ ಈ ಬಗ್ಗೆ ಚರ್ಚೆ ನಡೀತ ಇತ್ತು . ಶಶಿಧರ್ ಭಟ್ ಮತ್ತೆ ಇನ್ನೊಬ್ರು ಸೇರಿಕೊಂಡು ಒಬ್ಬ ಹೆಗ್ಗಡೆಯವರ ಮೇಲೆ ವಾಗ್ದಾಳಿ ನಡೆಸ್ತಾ ಇದ್ರು .ಇದು ಸರಿ ನಾ??
ಶಶಿಧರ್ ಭಟ್ ಅಲ್ಲಿ neutral ಆಗಿರ್ಬೇಕಿತ್ತಲ್ಲ?? ಕೊನೆಗೆ ಭಟ್ರು ’ಕುವೆಂಪು ಹೇಳಿದ್ದಾರೆ ಎಲ್ಲ ದೇವರನ್ನು ಬೀದಿಗೆಸೀರಿ ’ ಅಂತಾನೂ ಹೇಳಿದ್ರೂ .
ಸರಿ ಎಲ್ಲ ಬಿಟ್ಟು ಬಿಡೊಣ ,ಆದ್ರೆ ಭಟ್ ,ಕಾಮತ್ ಅನ್ನೋ ಜಾತಿ ಸೂಚಕಗಳನ್ಯಾಕೆ ನಾವು ಬೀದಿಗೆಸೆಯೋಕೆ ತಯಾರಿಲ್ಲ?? ಅಷ್ಟು ಸುಲಭ ನಾ ಅದು?

’ಎದೆ ತಟ್ಟಿ ಹೇಳು ನಾನೊಬ್ಬ ಹಿಂದು ’ ಅನ್ನೋ ಸ್ಲೋಗನ್ ಇದೆ ಅದನ್ನು ಮಂಗಳೂರಿನಲ್ಲಿದ್ದಾಗ ಕೇಳಿದ್ರೆ ನಗು ಬರ್ತಾ ಇತ್ತು . ಛೇ ! ನಾನೊಬ್ಬ ಹಿಂದು ಅಂತ ಎದೆ ತಟ್ಟಿ ಹೇಳೊದ್ರಲ್ಲಿ ಏನಿದೆ ವಿಶೇಷ ಅಂತ !!

ಆದ್ರೆ ಈಗ ಗೊತ್ತಾಗ್ತಾ ಇದೆ ಅಷ್ಟು ಸುಲಭವಿಲ್ಲ ಎದೆ ತಟ್ಟಿ ಹೇಳೋದು ! ಶಶಿಧರ್ ಭಟ್ರು ,ಹೆಗ್ಡೆಯವ್ರಿಗೆ ಪದೇ ಪದೇ "ನೀವು ಹಿಂದುಗಳು ","ನೀವು ಹಿಂದುಗಳು " ಅಂತ ಉದ್ದೇಶಿಸೀನೇ ಮಾತಾಡ್ತಾ ಇದ್ರು; ಅವ್ರ್ಯಾಕೆ "ನಾವು ಹಿಂದುಗಳು " ಅನ್ನೋ ರೀತಿ ಮಾತಾಡಿಲ್ಲ?? ಯಾಕಂದ್ರೆ ಆ ಕ್ರಿಶ್ಚಿಯನ್ ಹಿರಿಯರು ತಪ್ಪು ತಿಳ್ಕೋತಾರೇನೋ ಭಯ ”ಹೆಗಡೆಯವ್ರಿಗೆ ,ಭಜರಂಗ ದಳದವ್ರಿಗೆ ಸಪೋರ್ಟ್ ಮಾಡ್ತಾ ಇದ್ದೀನಿ ’ ಅಂತ ವೀಕ್ಷಕರು ತಿಳೀಬಹುದೇನೋ ಅನ್ನೊ ಭಯ !
ಎಂಥ ವಿಪರ್ಯಾಸ ?.....
ನಾನು ಅಹಮದಾಬಾದ್ ನಲ್ಲಿ ಸ್ವಲ್ಪ ಕೆಲಸ ಮಾಡ್ತಾ ಇದ್ದೆ .ಸಾಬರಮತೀ ನದಿಯ ಈ ಕಡೆ ಹಿಂದೂಗಳು ,ಆ ಕಡೆ ಮುಸ್ಲಿಮರು ! ಅಂಥ ವಿಚಿತ್ರವಾದ ಏರಿಯಾ ಅದು! ಕೋಳಿ ಮಾಂಸ ನದಿಯ ಆ ಕಡೇನೆ ಸಿಗೋದ್ರಿಂದ ನಾನೂ ನನ್ನ ಫ್ರೆಂಡ್ಸ್ ನಾನ್ ವೆಜ್ ತಿನ್ನೋಕೆ ಅಂತ ’ಆ ಕಡೆ ’ ಹೋಗಿದ್ವಿ . ಮಂಗಳೂರಿನ style ನಲ್ಲಿ ಉದ್ದನೆ ಕುಂಕುಮ ನಾಮ ಬೇರೆ ಹಾಕಿದ್ವಿ (ಅಲ್ಲಿದ್ದಾಗ ಯಾಕೋ ದೈವ ಭಕ್ತಿ ಜಾಸ್ತಿನೇ ಉಕ್ಕಿ ಬಂದಿತ್ತು !).ಅಲ್ಲಿ ಒಂದು ಗಲ್ಲಿ ಇತ್ತು ,ಬಟ್ಟೆ ಬರೆ ಮಾರೋರ್ದು . ದೊಡ್ಡ ಗಲ್ಲಿ ,ಆ ಗಲ್ಲಿಯ ಒಳಗೆ ಹೋದ್ರೆ ಹೊರಗೆ ಬರೋದಕ್ಕೇ ಗೊತ್ತಾಗಿಲ್ಲ ನಮಗೆ .ಒಳಗೆ ನೋಡಿದ್ರೆ ಎಲ್ಲ ಮುಸಲ್ಮಾನ ವರ್ತಕರು.ಎಲ್ಲಾ ನಮ್ಮನ್ನೇ ನೋಡಿ ಗುರಾಯಿಸ್ತಾ ಇದ್ರು .ಯಾಕೆ ಏನೂ ಅಂತ ನಮಗೂ ಗೊತ್ತಾಗಿಲ್ಲ . ಅಲ್ಲಿ ಚೆನ್ನಾಗಿ ಸುತ್ತಾಡಿ ,ಕೋಳಿ ,ಮೀನು ತಿಂದು ಆಫೀಸಿಗೆ ವಾಪಾಸಾದ್ವಿ.
ಆಫೀಸಿನಲ್ಲಿ ಕಲೀಗ್ಸ್ ’ಎಲ್ಲಪ್ಪ ಹೋಗಿದ್ರಿ ,ಏನ್ ಮಾಡಿದ್ರಿ ’ ಅಂತ ಕೇಳಿದ್ರು .
ನಾವು ಎಲ್ಲ ಹೇಳಿ ,’ಅಲ್ಲಿ ನಮ್ಮನ್ನು ಜನ ಗುರಾಯಿಸ್ತಿದ್ದರು ಯಾಕೆ ಅಂತ ಗೊತ್ತಾಗಿಲ್ಲ ’ ಅಂದ್ವಿ .
ಅದಕ್ಕೆ ಆಫೀಸಿನವ್ರು ನಮ್ಮನ್ನೇ ಗದರಿಸೋದಾ?? " ಏನ್ರಪ್ಪ ಈ ರೀತಿ ಬಜರಂಗ ದಳದವ್ರ ಹಾಗೆ ನಾಮ ಇಟ್ಕೊಂಡು ಅಲ್ಲೆಲ್ಲ ಸುತ್ತಾಡೊದಾ ನೀವು? ಜೀವಂತ ವಾಪಸ್ ಬಂದಿದ್ದೆ ಪುಣ್ಯ ಕಣ್ರಯ್ಯ ನೀವು ,ಆ ಗಲ್ಲಿಯಲ್ಲಿ ನಿಮ್ಮನ್ನು ಕತ್ತರಿಸಿ ಬಿಸಾಡಿದ್ರೆ ಎಲ್ಲ ನಂ ತಲೆ ಮೇಲೆ ಬರ್ತಿತ್ತು " ಅಂತ !!!!

ಈಗ ಹೇಳಿ ಇದೆಯ ಧೈರ್ಯ ,ಎದೆ ತಟ್ಟಿ ಹೇಳೊಕೆ ನಾನೊಬ್ಬ ಹಿಂದು ಅಂತ??

ನಾನು ಹೇಳಿರೋದೆಲ್ಲ ಸಿನೆಮಾ ಕಥೆ ಥರ ಅನ್ನಿಸಬಹುದು ,ಆದ್ರೆ ಇದು ನಿಜ .

ಮಂಗಳೂರಿನಲ್ಲಿ ಮತಾಂತರ ಆದ್ರೆ ನಮಗೇನು ಪ್ರಾಬ್ಲೆಮ್ ಅಂತ ಅನ್ನಿಸಬಹುದು ನಿಮಗೆ.!
ಇಲ್ಲಿ ಬೆಂಗಳೂರಿನಲ್ಲಿ ಚಿಕನ್ ಗುನ್ಯ ಬಂದಾಗ ಮಂಗಳೂರಿನವ್ರಿಗೂ ಹಾಗೇ ಅನ್ನಿಸಿತ್ತು .ಅಲ್ಲಿ ಚಿಕನ್ ಗುನ್ಯ ಬಂದ್ರೆ ನಮಗೇನು ಅಂತ .ಆದ್ರೆ ಪುತ್ತೂರಲ್ಲಿ ಬಂದು ಹಾಸಿಗೆ ಹಿಡಿದು ಮಲಗಿದಾಗಲೇ ಗೊತ್ತಾಗಿದ್ದು ಅದರ ಕಷ್ಟ !!

ಹೀಗೆ ಮತಾಂತರ ಮುಂದುವರೀತ ಇದ್ರೆ ಪ್ರತ್ಯೇಕ ಕ್ರಿಶ್ಚಿಯನ್ ರಾಜ್ಯ/ರಾಷ್ಟ್ರಗಳಿಗೆ ಬೇಡಿಕೆ ಬರೋದಂತೂ ನಿಜ.ಬೇಡಿಕೆ ಬಂದ್ರೇನಂತೆ ಕೊಡೋಣ ಅಂತೀರಾ ಅಲ್ವ??
ಒಂದು ಕಾಶ್ಮೀರದ ಸಮಸ್ಯೇನೆ ಇನ್ನೂ ಬಗೆ ಹರಿದಿಲ್ಲ ಗೊತ್ತಲ್ವ??
ಹಿಂದಿಯಲ್ಲಿ ಒಂದು ಶಾಯರಿ ಇದೆ .

"ಹಮೇ ತೊ ಅಪ್ನೋನೆ ಲೂಟಾ ,ಗೈರೋಂ ಮೇ ಕಹಾಂ ದಮ್ ಥಾ .....
ಹಮೇ ತೊ ಅಪ್ನೋನೆ ಲೂಟಾ ,ಗೈರೋಂ ಮೇ ಕಹಾಂ ದಮ್ ಥಾ .....
ಜಹಾಂ ಮೇರಿ ಕಶ್ತೀ ಡೂಬಿ ಪಾನೀ ವಹಾಂ ಕಮ್ ಥಾ............."

ಹಿಂದುಗಳೇ ಹಿಂದುಗಳ ಶತ್ರುಗಳಾಗಿರೋದು ಶೋಚನೀಯ!!!!!

Photo Courtesy : http://www.sciy.org/

Tuesday, September 16, 2008

ಉದ್ಯೊಗಂ ಪುರುಷ ಲಕ್ಷಣಂ !



’ಪುರುಷರಿಗಾಗಿ ಮಾತ್ರ ’ ಅಂತ ಒಂದು ಪತ್ರಿಕೆ ಬರುತ್ತೆ ,ಟೈಟಲ್ ಕೆಳಗೆ ಪುರುಷರನ್ನು ಪ್ರೀತಿಸುವ ಮಹಿಳೆಯರೂ ಓದಬಹುದು ! ಅಂತ caption ಇದೆ .ಅದೇ ರೀತಿ ’ಉದ್ಯೋಗಂ ಪುರುಷ ಲಕ್ಷಣಂ ’ ಅನ್ನೋದು ಬರೀ ಟೈಟಲ್ಲು ! ಉದ್ಯೊಗದಲ್ಲಿರೋ ಮಹಿಳೆಯರೂ ಧಾರಾಳವಾಗಿ ಓದಬಹುದು ಇದನ್ನು !ರೆಡಿಮೇಡ್ ಆಗಿ ಸಿಗುತ್ತಲ್ವ ಇಂಥ ಟೈಟಲ್ ಅದಿಕ್ಕೆ ಉಪಯೋಗಿಸಿದ್ದೀನಿ ,ಮಹಿಳೆಯರು ಬೇಜಾರು ಮಾಡ್ಕೋಬಾರ್ದು .
ಅಂದ ಹಾಗೆ ವಿಷಯ ಅಷ್ಟೆನೂ ಗಂಭೀರ ಇಲ್ಲ ! ಯಾವುದೇ ಥರದ ವಾದಗಳನ್ನಿಲ್ಲಿ ಹುಟ್ಟು ಹಾಕ್ತಾ ಇಲ್ಲ ನಾನು . ಒಂದು ಚಿಕ್ಕ ಪ್ರಾಬ್ಲೆಮ್ಮು ಮಾರಾಯ್ರೆ .ಅದು ನಂದು ಮಾತ್ರ ಅಲ್ಲ ಬಹುತೇಕ ಜನರ ಪ್ರಾಬ್ಲೆಮ್ ಕೂಡಾ .
ವಿಷಯ ಏನಂದ್ರೆ , ಕಷ್ಟಪಟ್ಟು ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿಗೆ ಬಂದಿರ್ತೀರ . ಹೇಗೋ ದೇವರ ದಯೆಯಿಂದ ಇಂಟೆಲ್ ಅಂಥ ಒಳ್ಳೆ (?) ಕಂಪೆನಿಯಲ್ಲಿ ಕೈ ತುಂಬಾ ಸಂಬಳ ಇರೋ ಕೆಲಸಾನೂ ಸಿಕ್ಕಿ ಬಿಡುತ್ತೆ .ಇನ್ನೇನು ನಾನೇ ಕಿಂಗು ,ಕ್ವೀನ್ ಸಿಗೋದೊಂದೇ ಬಾಕಿ ಅಂತ ಖುಶಿಯಿಂದ ಬೀಗ್ತಿರ್ತೀರ. ಹಂಗೆ ಸೀರೆ ,ಸ್ವೀಟ್ಸು ಅಂತೆಲ್ಲ ಕಟ್ಟಿಕೊಂಡು ಊರಿಗೆ ಹೋಗಿ ಮನೆಯವರಿಗೆಲ್ಲ ಹಂಚ್ತೀರ .
ನಿಮ್ಮ ಗಲಾಟೆ ಕೇಳಿ ಪಕ್ಕದ ಮನೆಯವ್ರು ಬಂದು ’ಏನಪ್ಪ ಹೆಂಗಿದ್ದೀಯ?? ಕೆಲ್ಸ ಸಿಗ್ತಾ?? ಯಾವ ಕಂಪೆನಿ ? ’ ಅಂತ ಕೇಳ್ತಾರೆ.
ನೀವೂ ಖುಷಿಯಿಂದ ,’ಹೌದು ಸಿಗ್ತು ಇಂಟೆಲ್ ಅಂತ ಬೆಂಗ್ಳೂರಲ್ಲಿ ’ ಅಂತೀರ .ನಿಮ್ಮ ಪ್ರಕಾರ ಇಂಟೆಲ್ ಬಿಲಿಯನ್ ಡಾಲರ್ ಕಂಪೆನಿ .ನೆಕ್ಸ್ಟ್ ಪೆಂಟಿಯಮ್ ಪ್ರೊಸೆಸರ್ ನಾನೇ ಡಿಸೈನ್ ಮಾಡೊದು ಅನ್ನೊ ರೀತಿಯ ಉತ್ಸಾಹ !

ಅವರು ಅದಿಕ್ಕೆ ’ಇಂಟೆಲ್ ಆ??....... ಛೆ ಯಾಕಪ್ಪಾ ಇನ್ಫೋಸಿಸ್ ಟ್ರೈ ಮಾಡಿಲ್ವ ’....... ಅಂತಾರೆ.ಅದೂ ಸಾಲದು ಅನ್ನೋ ಹಾಗೆ ವಿಪ್ರೋ ಗೂ ಒಂದು ಅರ್ಜಿ ಹಾಕಿ ನೋಡು ಅಂತಾರೆ .
.
.
ಟುಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್ಸ್
.
.
ಬಲೂನು ಹಂಗೇ ಒಡೆದು ನಿಧಾನಕ್ಕೆ ತೇಲಿಕೊಂಡು ಭೂಮಿಗೆ ಇಳೀತೀರ .. ಹೆಂಗಿತ್ತು ಆಕಾಶಯಾನ??
ಎಲ್ಲರಿಗೂ ಒಂದು ಆಸೆ ಇರುತ್ತೆ (ಅದಿಕ್ಕೆ ಹೇಳೊದು ಉಪ್ಪು,ಹುಳಿ,ಖಾರ ಸ್ವಲ್ಪ ಕಮ್ಮಿ ತಿನ್ನಿ ಅಂತ) ನಮ್ಮ ಪ್ರಗತಿ ಕಂಡು ಮನೆಯವ್ರು,ಊರವ್ರು ಹೆಮ್ಮೆ ಪಡಬೇಕು ,ಹೊಗಳ್ಬೇಕು ಅಂತ .ಆದ್ರೆ ಇಲ್ಲಿ ನೋಡಿದ್ರೆ ಎಲ್ಲ ಎಡವಟ್ಟು :(
ಹೀಗೆ ಸ್ವಲ್ಪ ದಿನ ಹಿಂದೆ ಊರಿಗೆ ಹೋಗಿದ್ದೆ .ಅಲ್ಲಿ ಪರಿಚಯಸ್ತರೊಬ್ರು ಸಿಕ್ಕಿದ್ರು ,ಅವರಿಗೆ ಚಕ್ಕುಲಿ,ಕೋಡುಬಳೆ ಮುಂತಾದ ಕುರ್ಕಲು ತಿಂಡಿ ಮಾರೋ ವ್ಯವಹಾರ.ಅವರೂ as usual ’ಓಹ್ ಸಂದೀಪ ಏನಪ್ಪ ಹೇಗಿದ್ದೀಯಾ ,ಎಲ್ಲಿ ಕೆಲಸ ’ ಅಂದ್ರು .
’ನಂದು Conexant ಅಂತ ಕಂಪೆನಿ ಹೆಸ್ರು ’ ಅಂದೆ .ಅವ್ರು’ಓಹ್ ಕನೆಕ್ಶನಾ ’ ಅಂದ್ರು .
’ಅಲ್ಲ ,ಕನೆಕ್ಶನ್ ಅಲ್ಲ Conexant ಅಮೆರಿಕಾದ ಕಂಪೆನಿ ’ ಅಂದೆ .
ಅವರು ಮತ್ತೆ ’ಗೊತ್ತಾಯ್ತು ಬಿಡು ಕನೆಕ್ಶನ್ನು’!!! ಅಂದ್ರು . ಇನ್ನೇನ್ ಮಾಡೋದು ’ಹೌದು’ ಅಂತ ಗೋಣಾಡಿಸಿದೆ .
’ಅದಿರ್ಲಿ ಏನು ಕೆಲಸ ಮಾಡ್ತೀರ ಅಲ್ಲಿ ’ ಸುಂಯ್ ಅಂತ ಬಂತು ಎರಡನೇ ಪ್ರಶ್ನೆ !!
ಸಾಫ್ಟ್ ವೇರ್ ಇಂಜಿನಿಯರ್ ಅಂತ ಹೇಳಿ ಎಸ್ಕೇಪ್ ಆಗೋಣ ಅಂತಿದ್ದೆ .ಆದ್ರೆ ಮನಸ್ಸು ಯಾಕೋ ಒಪ್ಪಲಿಲ್ಲ .ಯಾಕಂದ್ರೆ ನಂದು ಸಾಫ್ಟ್ವೇರ್ ಅಲ್ಲ ! ಹಾರ್ಡ್ ವೇರ್ ಕೆಲಸ!!
ಸಿಂಪಲ್ ಆಗಿ ಹೇಳೋಣ ಅಂತ ’ ಅದೂ ನಂದು ಕಂಪ್ಯೂಟರಲ್ಲಿ ಕೆಲಸ ’ ಅಂದೆ .

ಅದಿಕ್ಕೆ ಅವ್ರು ’ ಥೂ ನಿನ್ನ ಅದಕ್ಯಾಕೋ ಬೆಂಗಳೂರಿಗೆ ಹೋಗ್ಬೇಕು ?? ಇಲ್ಲೆ ಪಕ್ಕದೂರಿನಲ್ಲಿ ನಾಯಕ್ ರ ಮಗ ಏನೊ ಸೈಬರ್ ಅಂತ ಇಟ್ಟಿದ್ದಾನೆ . ಬೇಕಾದ್ರೆ ಕೇಳಿ ನೋಡ್ತೀನಿ ಕೆಲಸ ಇದೆಯಾ ’ ಅಂದ್ರು.
ಅವರ ಕಾಳಜಿ ನೋಡಿ ಏನೋ ಖುಷಿ ಆಯ್ತು . ಆದ್ರೆ ’ನಾನು ಏನು ’ ಅಂತ ಕಡೆಗೂ ಅವರಿಗೆ ಅರ್ಥ ಆಗಿಲ್ವಲ್ಲ ಅಂತ ಬೇಜಾರಾಯ್ತು.ಸಧ್ಯ ಬಚಾವಾದೆ ನಂದು ಸಾಫ್ಟ್ ವೇರಲ್ಲ ಹಾರ್ಡ್ ವೇರು ಅಂತ ಗೊತ್ತಾಗಿದ್ರೆ ನಟ್ಟು ,ಬೋಲ್ಟು ,ಅಂಗಡಿಯವ್ರೂ ಗೊತ್ತು ಅಂತಿದ್ರೇನೋ ಪಾಪ!

ಹಾಗೆ ಬೀಚು,ಅದೂ ಇದೂ ಅಂತ ಸುತ್ತಾಡಿ ಮನೆಗೆ ವಾಪಸ್ ಆಗ್ಬೇಕಾದ್ರೆ ಇನ್ನೊಬ್ರು ಪರಿಚಯದವ್ರು ಸಿಕ್ಕಿದ್ರು ! ಮತ್ತೆ ಇವರಿಂದ ಮುಖಭಂಗ ಆಗೋದು ಬೇಡ ಅಂತ ಎಸ್ಕೇಪ್ ಆಗೋಣ ಅನ್ನೊ ಅಷ್ಟರಲ್ಲಿ ಹಿಡಿದು ಬಿಟ್ರು .....
’ಸಂದೀಪ.................’
’ಬೆಂಗ್ಳೂರಲ್ವ ಈಗ ,ಹೇಗಿದ್ದೀಯ ’ಅಂದ್ರು .’ಚೆನ್ನಾಗಿದ್ದೀನಿ ಅಂಕಲ್ ಎಲ್ಲಾ ನಿಮ್ಮ ಆಶೀರ್ವಾದ ’ ಅಂದೆ.
ಅದಿಕ್ಕೆ ಅವ್ರು ’ನೀನು ಇಲೆಕ್ಟಾನಿಕ್ಸ್ ಡಿಪ್ಲೋಮಾ ಅಲ್ವಾ ಓದಿರೋದು ’ .ಸಕ್ಕತ್ ಖುಶಿ ಅಯ್ತು .
ನಾನು ಏನು ಓದಿದ್ದೀನಿ ಅಂತ ಇವ್ರಿಗೆ ಗೊತ್ತಿದ್ದ ಮೇಲೆ ಖಂಡಿತ ಇವ್ರಿಗೆ ’ನಾನು ಏನು’ ಅಂಥ ಅರ್ಥ ಆಗುತ್ತೆ ಅಂದುಕೊಂಡೆ.
’ಏನಿಲ್ಲ ಸಂದೀಪ ನಂದೊಂದು ಟಿ.ವಿ ರಿಪೇರಿ ಆಗ್ಬೇಕಿತ್ತು ,ಮಾಡ್ ಕೊಡೋಕಾಗುತ್ತಾ ?????’

ಮತ್ತೆ ಟುಸ್ಸ್ ಸ್ ಸ್ ಸ್ ಸ್ ಸ್..............
’ಸಾರಿ ಅಂಕಲ್ ನಂಗೆ ಬರಲ್ಲ ಅದೆಲ್ಲ ’ ಅಂದೆ . ಸಿಟ್ಟಾಗ್ಬಿಟ್ರು ಅಂಕಲ್ಲು !!!!
’ಇನ್ನ್ಯಾವ್ ಸೀಮೆ ಇಲೆಕ್ಟ್ರಾನಿಕ್ಸ್ ಕಲಿತೆ ಕಣಯ್ಯ ನೀನು ? ಒಂದು ಟಿವಿ ರಿಪೇರಿ ಬರಲ್ಲ ಅಂತೀಯ ’ ಶುರು ಹಚ್ಚಿಕೊಂಡ್ರು .
’ಅದು ಹಾಗಲ್ಲ ಅಂಕಲ್ ,ಬರುತ್ತೆ ಆದ್ರೆ ಅದಿಕ್ಕೆ ಮಲ್ಟಿಮೀಟರ್ ಅಂತ ಬೇಕು ,ಅದು ಬೆಂಗಳೂರಲ್ಲೇ ಬಿಟ್ಟು ಬಂದಿದ್ದೀನಿ .ನೆಕ್ಸ್ಟ್ ಟೈಮ್ ಬಂದಾಗ ಖಂಡಿತ ತರ್ತೀನಿ .ಸಾರಿ ’ ಅಂತ ಹಲ್ಲು ಕಿಸಿದೆ.
’ಹೋ ಹಾಗ ಮೊದಲೇ ಹೇಳೊದಲ್ವೇನೊ .ಇಂಥದ್ದೆಲ್ಲ ಬ್ಯಾಗ್ ನಲ್ಲೇ ಇಟ್ಕೊಂಡಿರ್ಬೇಕಯ್ಯ ’ ಅಂತ ಬುದ್ಧಿವಾದ ಬೇರೆ .

ಪರಿ ಪರಿ ಶಾಸ್ತ್ರವನೋದಿದರೇನು ವ್ಯರ್ಥವಾಯ್ತು ಡಿಗ್ರಿ -ಅಂತ ನನ್ನ ನಾನೇ ಬಯ್ ಕೋತಾ ಕಳಚಿಕೊಂಡೆ ಅಲ್ಲಿಂದ.

ನಂಗೇನಾದ್ರೂ ’ಆಪಲ್ ’ ಕಂಪೆನಿಯಲ್ಲಿ ಕೆಲಸ ಸಿಕ್ಕಿದ್ದಿದ್ರೆ ಏನ್ ಗತಿ ಅಂತ ನೆನೆಸಿಕೊಂಡ್ರೇನೆ ಭಯ ಆಗುತ್ತೆ. Apple ಬಿಲಿಯನ್ ಡಾಲರ್ ಕಂಪೆನಿ .Apple iPod,iPhone ತುಂಬಾನೇ ಫೇಮಸ್ಸು !
ಆದ್ರೇ ಊರಿಗೆ ಹೋಗಿ ’apple' ನಲ್ಲಿ ಕೆಲಸ ಅಂದ್ರೆ ,’ಯಾಕೋ ಹಲಸಿನ ಹಣ್ಣು ,ಮಾವಿನ ಹಣ್ಣು ಅಂತ ಕಂಪೆನಿ ಇಲ್ವ ಅಲ್ಲಿ ’ ಅಂತ ಹೇಳಿಸ್ಕೋಬೇಕಾಗಿತ್ತು. ಅಷ್ಟರ ಮಟ್ಟಿಗೆ ಲಕ್ಕಿ ನಾನು !

ರೀ,ಇನ್ಫೋಸಿಸ್ ,ವಿಪ್ರೊ ,ಅಥವ TCS ಈ ಮೂರರಲ್ಲಿ ಕೆಲಸ ಇದ್ರೆ ಹೇಳ್ತೀರಾ ಪ್ಲೀಸ್ .....

Monday, September 1, 2008

ಡುಂಡಿರಾಜರೊಡನೆ ಒಂದು ಸಂಜೆ



ಬೆಂಗಳೂರಿಗೆ ಬಂದು ಆರು ವರ್ಷ ನಾಲ್ಕು ತಿಂಗಳಾಯ್ತು .ಇದರಲ್ಲಿ ನಾನು ಸರಿಯಾಗಿ ಒಳ್ಳೆಯ ಕಾರ್ಯಕ್ರಮಗಳಲ್ಲಿ ಭಾಗವಸಿದ್ದು ಬೆರಳೆಣಿಕೆಯಷ್ಟು !

ಎಲ್ಲೋ ಗಣೇಶ ಹಬ್ಬದಲ್ಲಿ ಆರ್ಕೆಷ್ಟ್ರಾ ಆಗ್ತ್ರಿಬೇಕಾದ್ರೆ ಹಿಂದೆ ಟಪ್ಪಾಂಗ್ಗುಚ್ಚಿ ಹಾಕಿದ್ದು ಬಿಟ್ರೆ ಅಂಥ ಘನಂದಾರಿ ಕೆಲಸ ಏನೂ ಮಾಡಿರ್ಲಿಲ್ಲ ನಾನು.

ಆದ್ರೆ ಈ ಶನಿವಾರ ಒಂದು ಒಳ್ಳೆಯ ಕಾರ್ಯಕ್ರಮದಲ್ಲಿ ಭಾಗವಹಿಸೋ ಅವಕಾಶ ಸಿಕ್ತು ನಂಗೆ .ಥ್ಯಾಂಕ್ಸ್ ಟು ಮೇ ಫ್ಲವರ್ !

ಈ ಶನಿವಾರ ಸೆಂಟ್ರಲ್ ಕಾಲೇಜಿನ ಪಕ್ಕದ ಕೆಂಪು ಕಟ್ಟಡದಲ್ಲಿ ಕರೆಂಟ್ ಇಲ್ಲದಿದ್ದರಿಂದ ನನಗೆ ’ಫಿಶ್ ಮಾರ್ಕೆಟ್’ ಗೆ ಹೋಗಿ ಡುಂಡಿರಾಜ್ ರನ್ನು ಭೇಟಿ ಆಗೋ ಸೌಭಾಗ್ಯ ಸಿಕ್ತು !.ಕೆಂಪು ಕಟ್ಟಡದಲ್ಲಿ ಕರೆಂಟು ಇಲ್ಲದ್ದಕ್ಕೂ ನಾನು ’ಫಿಶ್ ಮಾರ್ಕೆಟ್’ ಕಾರ್ಯಕ್ರಮಕ್ಕೆ ಹೋಗೋದಕ್ಕೂ ಏನು ಸಂಬಂಧ ಅಂತ ಕೇಳ್ತೀರಾ??

ಕೇಳ್ಬೇಡಿ ನಾನು ಹೇಳಲ್ಲ ಅದು ಪರ್ಸನಲ್ !!

ಡುಂಡಿರಾಜ್ ನನ್ನ ನೆಚ್ಚಿನ ಲೇಖಕ/ಕವಿ . ಎಂಥಾ ಹಾಸ್ಯ ಪ್ರಜ್ಞೆ ಅವರಿಗೆ ! ಬರೆಯೊದ್ರಲ್ಲಿ ಮಾತ್ರ ಅಲ್ಲ ಮಾತಾಡೋದು ಅಷ್ಟೇ ತಮಾಷೆಯಾಗಿ ! ನಮ್ಮ ಮೋಹನ್ ಅವ್ರಿಗೂ ಒಳ್ಳೆ ಹಾಸ್ಯ ಪ್ರಜ್ಞೆ ಇದೆ ತುಂಬಾ ಚೆನ್ನಾಗಿ ಮಾತಾಡ್ತಾರೆ ಅವ್ರೂ . ಬಹುಶ: ಮಂಗಳೂರಿನ ಗಾಳಿ ಬೀಸಿದವ್ರೆಲ್ಲಾ ಹಾಗೇ ಏನೋ??

ಕಾರ್ಯಕ್ರಮಕ್ಕೆ ಫಿಶ್ ಮಾರ್ಕೆಟ್ ಅಂತ ಯಾಕೆ ಹೆಸರಿಟ್ಟಿದ್ದು ಅಂತ ಮೋಹನ್ ಮತ್ತೆ ಸಮಜಾಯಿಷಿ ನೀಡಬೇಕಾಯಿತು .ನನಗ್ಯಾಕೋ ಅನ್ನಿಸುತ್ತೆ ಇನ್ನೂ ಬಹಳಷ್ಟು ಸಲ ಹೀಗೇ ಸಮಜಾಯಿಷಿ ನೀಡ್ಬೇಕಾಗಿ ಬರುತ್ತೋ ಏನೋ?

ನಾನೂ ಚಿಕ್ಕಂದಿನಲ್ಲಿ ಮೀನು ತರಲು ಫಿಶ್ ಮಾರ್ಕೆಟ್ ಗೆ ಹೋಗ್ತಾ ಇದ್ದೆ ,ಆದ್ರೆ ಮೀನು ಮಾರುವ ಹೆಂಗಸರ ಕಾಟ ವಿಪರೀತವಾಗಿತ್ತು ! ನನ್ನ ಚೀಲವನ್ನು ಕಿತ್ತುಕೊಂಡು ಅವರ ಹತ್ರ ಇರೋ ಮೀನನ್ನು ಬಲವಂತವಾಗಿ ತುರುಕಿ ಹಣ ಕಿತ್ತು ಕಳಿಸ್ತಾ ಇದ್ರು !!

ಆದ್ರೆ ಈ ಫಿಶ್ ಮಾರ್ಕೆಟ್ ನಲ್ಲಿದ್ದ ಹೆಂಗಸರೆಲ್ಲಾ ತುಂಬಾನೆ ಒಳ್ಳೆಯವರಿದ್ರು! ಎರಡು(?) ಜನ ಹುಡುಗಿಯರು ಇದ್ದ ೫೦ ಜನರ ಎಲ್ಲಾ ಭಂಗಿಯ ಫೋಟೊ ತೆಗೆದದ್ದು ಬಿಟ್ರೆ (ಎಲ್ಲಿ ದೇವೇಗೌಡರ ಥರ ಆಕಳಿಸೋ ಫೋಟೊ ತೆಗೀತಾರೊ ಅಂತ ಭಯ ಇತ್ತು !) ಏನೂ ಕಾಟ ಕೊಡ್ಲಿಲ್ಲ ,ಬದಲಾಗಿ ಕಾಫಿ ತಿಂಡಿ ಅಂತ ಸತ್ಕಾರ ಮಾಡಿದ್ರು . ಅವರಿಗೂ ಅಭಿನಂದನೆಗಳು.

ಡುಂಡಿರಾಜ್ ರವರು ತುಂಬಾ ಚೆನ್ನಾಗಿ ತಮ್ಮ ಹನಿಗವನ,ಗಂಭೀರ ಕವನಗಳನ್ನು ವಾಚಿಸಿದರು . ಅವರ ಬಗ್ಗೆ ಎಷ್ಟೋ ತಿಳಿಯದ ವಿಷಯಗಳು ತಿಳಿದವು ನಮಗೆ .
ನನಗೆ ತುಂಬಾ ಇಷ್ಟವಾದ ಹನಿಗವನವನ್ನೂ ಅವರು ಹೇಳಿದ್ರು ! ಅದೇ ಹನಿಗವನಗಳಲ್ಲಿ Punch ಇರಲೇಬೆಕು Punchಏ ಇರದಿದ್ದರೆ ಅವಮಾನ ಅನ್ನೋ ಅರ್ಥದ್ದು ! ಈ ಹನಿಗವನ ಕೇಳಿದಾಗೆಲ್ಲ ನಂಗೆ ಪಾಪ ಹರಿಕೃಷ್ಣ ಪುನರೂರು ಅವರ ನೆನಪಾಗುತ್ತೆ !ಯಾಕೆ ಅಂತೀರಾ ?
ಅವರು ನಮ್ಮ ಶಾಲೆಯ (ಮೂಲ್ಕಿಯಲ್ಲಿ) ಅಭಿವೃದ್ಧಿ ಸಂಘಕ್ಕೆ ಅಧ್ಯಕ್ಷರಾಗಿದ್ದರು ಅದಿಕ್ಕೆ!(ಅವರ ಪಂಚೆ ಎಳೆದ ಘಟನೆಯಿಂದಾಗಿ ಅಂತ ನೀವು ತಿಳ್ಕೊಂಡ್ರೆ ನನ್ನ ತಪ್ಪಲ್ಲ!).

ಡುಂಡಿರಾಜ್ ಅವರು ತಮ್ಮ ಕಾಲೇಜ್ ಜೀವನದಲ್ಲಿ ಬರೆತಿದ್ದ ಕವನಗಳ ಬಗ್ಗೆ ,ಅವ್ರಿಗೆ ಯಾಕೆ ಆಗ ಬಂಡಾಯ ಸಾಹಿತ್ಯ ಇಷ್ಟ ಆಗ್ತಿತ್ತು ಅನ್ನೋದರ ಬಗ್ಗೆ ತುಂಬಾ ಹಾಸ್ಯಮಯವಾಗಿ ಮಾತಾಡಿದ್ರು .

ದೇವರ ದಯೆಯಿಂದ ಅವರು ಹಾಸ್ಯ ಲೇಖಕ/ಕವಿ ಆಗಿದ್ದೇ ಒಳ್ಳೇದಾಯ್ತು.ಯಾಕಂದ್ರೆ ,ನಗೋದು ಸುಲಭ ಆದ್ರೆ ನಗಿಸೋದು ತುಂಬಾ ಕಷ್ಟ ! ಈ ನಗಿಸೋ ಅಂಥ ಕಷ್ಟದ ಕೆಲಸಕ್ಕೆ ಅವರು ಕೈ ಹಾಕಿದ್ದು ಒಳ್ಳೇದೇ ಆಯ್ತು .ಈಗೀಗ ಯಾವ ಪತ್ರಿಕೆಗಳನ್ನು,ಬ್ಲಾಗ್ ಗಳನ್ನು ನೋಡಿದ್ರೂ ಬರೀ ಗಂಭೀರ ಸಾಹಿತ್ಯ/ಕವಿತೆಗಳೆ ಇರೋದು .ಇಂಥ ಕವಿತೆಗಳನ್ನು ಬರಿಯೋರು ಹತ್ತು ಜನ ಆದ್ರೆ ,ಅರ್ಥ ಆಗೋದು ಬರೆ ಇಬ್ರಿಗೆ.
ನಮಗೆಲ್ಲ ಅರ್ಥ ಆಗಿಲ್ಲ ಅಂದ್ರೂ ಗೋಣಾಡಿಸೋ ಪರಿಸ್ಥಿತಿ !

ಅದಕ್ಕಿಂತ ಡುಂಡಿರಾಜ್ ಅಂಥವರು ಒಬ್ರೇ ಇದ್ರೂ ಹತ್ತು ಜನರನ್ನು ನಗಿಸೋ ಕೆಲಸ ಮಾಡ್ತಾರಲ್ಲ ಅದೂ ನಿಜಕ್ಕೂ ಪ್ರಶಂಸನೀಯ.
ಇವರು ಬರೀ ಹನಿಗವನಗಳನ್ನಲ್ಲದೇ ಲಲಿತ ಪ್ರಬಂಧಗಳನ್ನೂ ಬರೆಯತೊಡಗಿದ್ದು ನಮ್ಮೆಲ್ಲರ ಸೌಭಾಗ್ಯ .ಡುಂಡಿರಾಜ್ ರ ಅಂಕಣಗಳನ್ನು ಓದ್ತಾ ಇದ್ರೆ ಈ ಯಾಂತ್ರಿಕ ಜೀವನದ ಜಂಜಾಟಗಳಿಂದ ಸ್ವಲ್ಪನಾದ್ರೂ ರಿಲೀಫ್ ಸಿಗೋದು ಸತ್ಯ.

ಡುಂಡಿರಾಜ್ ರ ಶೈಲಿಯನ್ನು ಕಾಪಿ ಮಾಡೋರಂತೂ ಬಹಳ ಜನ ಸಿಗ್ತಾರೆ .ಆದ್ರೆ ಅದಕ್ಕಿಂತ ದುಖ:ದ ಸಂಗತಿ ಅಂದ್ರೆ ಕೆಲ ಜನರು ಅವರ ಕವನಗಳನ್ನು ಯಥಾಪ್ರಕಾರ ಓದಿ ಹಾಸ್ಯ ಕಾರ್ಯಕ್ರಮಗಳಲ್ಲಿ ಚಪ್ಪಾಳೆ ಗಿಟ್ಟಿಸ್ಕೋತಾರೆ! ಇದಕ್ಕೆ ಒಬ್ಬನೇ ಅಪವಾದ ಅಂದ್ರೆ ಗೋಲ್ಡನ್ ಸ್ಟಾರ್ ಗಣೇಶ್ !

ಈ ಗಣೇಶ್ ಕಾಮಿಡಿ ಟೈಮ್ ಗಣೇಶ್ ಆಗಿದ್ದಾಗ ಕಾಮಿಡಿ ಟೈಮ್ ನಲ್ಲಿ ಇವರ ಹನಿಗವನಗಳನ್ನು ಓದ್ತಾ ಇದ್ದ,ಆದ್ರೆ ಓದೋದಕ್ಕಿಂತ ಮುಂಚೆ ಡುಂಡಿರಾಜ್ ರ ಹನಿಗವನ ಅಂತ ಹೇಳಿ ಓದ್ತಾ ಇದ್ದ .ಬರೀ ಕಾಮಿಡಿ ಟೈಮ್ ನಲ್ಲಿ ಅಲ್ಲದೆ ಬೇರೆ ಬೇರೆ ಸ್ಟೇಜ್ ಷೋ ಗಳಲ್ಲೂ ಹೇಳ್ತಾ ಇದ್ದ(ಮೊದಲೇ ಹೇಳಿದ್ನಲ್ಲ ಗಣೇಶ ಹಬ್ಬದಲ್ಲಿ ಟಪ್ಪಾಗ್ಗುಂಚಿ ಹಾಕ್ತಾ ಇದ್ದೆ ಅಂತ ಅಲ್ಲೇ ಸಿಕ್ಕಿದ್ದು ಗಣೇಶ್ !)
ಅಂತೂ ಫಿಶ್ ಮಾರ್ಕೆಟ್ ಕಾರ್ಯಕ್ರಮ ಅಂತೂ ಅದ್ಭುತವಾಗಿತ್ತು .ಮೇ ಫ್ಲವರ್ ಬಳಗದವರ ಕೆಲಸ ಅಭಿನಂದನೀಯ .ಅಷ್ಟು ಒಳ್ಳೆಯ ಕಾರ್ಯಕ್ರಮ ಆಯೋಜಿಸೋದಲ್ಲದೆ ಕಾಫಿ ತಿಂಡಿ ಬೇರೆ ಕೊಟ್ಟಿದ್ರು ! ಉಂಡೂ ಹೋದ ಕೊಂಡೂ ಹೋದ ಅನ್ನೋ ಹಾಗಾಯ್ತು ನನ್ನ ಪರಿಸ್ಥಿತಿ .

ಆದ್ರೆ ಆಶ್ಚರ್ಯ ಅಂದ್ರೆ ಅಷ್ಟೆಲ್ಲ ಪಬ್ಲಿಸಿಟಿ ಕೊಟ್ರೂ ಮೋಹನ್ ಅವ್ರು ,ಭಾಗವಹಿಸೋ ಜನ ಮಾತ್ರ ಕಮ್ಮಿ.ಬಹುಶ: ಬಂದಿದ್ದ 50+ ಜನಾನೇ ಜಾಸ್ತಿ ಇರಬಹುದೇನೋ ಮೋಹನ್ ಅವ್ರೇ ಹೇಳ್ಬೇಕು ,ಯಾಕಂದ್ರೆ ನಾನು ಇಂಥ ಕಾರ್ಯಕ್ರಮಕ್ಕೆ ಹೋಗಿದ್ದು ತೀರಾ ಕಮ್ಮಿ .ಇರ್ಲಿ ಬಿಡಿ ಜಾಸ್ತಿ ಜನ ಬಂದ್ರೆ ಅಲ್ಲಿ ಕೂರೋಕೂ ಆಗ್ತಾ ಇರ್ಲಿಲ್ಲ .

Quality of audience is better than quantity ! ಅಲ್ವ??

ಕಾರ್ಯಕ್ರಮದಲ್ಲಿ ಜೋಜಿಗ ಅನ್ನೋ ಒಂದು ಹೆಸರು ಕೇಳಿ ಬಂತು !

ಆ ಹೆಸರಿನ ಅರ್ಥ ಏನೆಂಬುದೇ ಸೋಜಿಗ ನನಗೆ !


ಫೋಟೊ ಕೃಪೆ : ’ಎರಡು(?) ಹುಡುಗಿಯರು ’

Tuesday, August 26, 2008

ಫೂಂಕ್ ಮತ್ತೆ ಭೂತದ ಕೋಲ !



ಈ ಭಾನುವಾರ ’ಫೂಂಕ್’ ಚಿತ್ರ ನೋಡಲು ಹೋಗಿದ್ದೆ . ಚಿತ್ರ ಚೆನ್ನಾಗಿತ್ತು .ತೀರಾ ಭಯಾನಕವಾಗಿಲ್ಲವಾದ್ರೂ ನೋಡುವಂತಿತ್ತು.
ಚಿಕ್ಕ ಹುಡುಗಿ ಮತ್ತೆ ಕುರುಡ ತಾಂತ್ರಿಕನ ಅಭಿನಯವಂತೂ ಸೂಪರ್.

ಅಂದ ಹಾಗೆ ಫೂಂಕ್ ನೋಡಿದಾಗ ನಂಗೆ ಮೊದಲಿಗೆ ನೆನಪಿಗೆ ಬಂದಿದ್ದು ನಮ್ಮೂರ ಕೋಲ !
ಸ್ವಾಮಿ ಕೋಲ ಅಂದ್ರೆ ಕೋಕಾಕೋಲಾ ಅಲ್ಲ. ಮಂಗಳೂರಿನಲ್ಲಿ ನಡೆಯೋ ಭೂತಾರಾಧನೆಗೆ ಭೂತದ ಕೋಲ ಅಂತಾರೆ ತುಳುವಿನಲ್ಲಿ.

ನಾವು ದೇವರು ,ದೈವಗಳನ್ನು ಎಷ್ಟು ನಂಬ್ತೀವೋ ಬಿಡ್ತೀವೋ ,ಆದ್ರೆ ಅವುಗಳು ಇರೋದಂತೂ ನಿಜ!

ನಮ್ಮ ದೈತ್ಯ ಬರಹಗಾರರು(ಸಾರಿ ವಿಕಾಸ್ ಕಾಪಿ ರೈಟ್ ನಿನ್ ಹತ್ರ ಇದ್ರೆ ಈ ಶಬ್ದಕ್ಕೆ!) ’ನಾನು ದೇವರನ್ನು ನಂಬೊಲ್ಲ ಅಂತ ಹೇಳ್ತಾನೆ ,ನನ್ನ ಪುಸ್ತಕ ಬಿಡುಗಡೆ ಇದೆ ನೀವೆಲ್ಲ ಹರಸಬೇಕು ’ ಅಂತಾರೆ.
ಹಾರೈಕೆ ಮೇಲೆ ಅಷ್ಟು ವಿಶ್ವಾಸ ಇಟ್ಟಿರೋರು ದೇವರಿದ್ದಾನೆ ಅಂತ ಯಾಕೆ ಅಲ್ಲಗಳೆಯುತ್ತಾರೆ??ದೇವರನ್ನು ಸ್ವತಃ ನೋಡಿಲ್ಲ ಅಂತಾನಾ?
ಯಾವುದೋ ಕಾಮಿಡಿ ಚಿತ್ರದಲ್ಲಿ ಒಬ್ಬ ಕೇಳ್ತಾನೆ ’ನೀನು ಜಪಾನ್ ನೋಡಿದ್ದೀಯಾ ?’ ಅಂತ ಇನ್ನೊಬ್ಬ ’ಇಲ್ಲ’ ಅಂತಾನೆ ’;’
ನೀನು ಜಪಾನ್ ನೋಡಿಲ್ಲ ಅಂದ ಮಾತ್ರಕ್ಕೆ ಜಪಾನ್ ಈ ಪ್ರಪಂಚದಲ್ಲೇ ಇಲ್ಲ ಅನ್ನೋದು ತಪ್ಪಲ್ವ ?’ ಅಂತಾನೆ ಮೊದಲನೆಯವನು!!

ಎಷ್ಟು ನಿಜ ಅಲ್ವಾ? ಈ ವಾದ !

ಅದೆಲ್ಲ ಬಿಡಿ ಈಗ ವಿಷಯಕ್ಕೆ ಬರೋಣ . ಸ್ಟೋರಿ ಏಮಂಟೆ ......ಫೂಂಕ್ ಚಿತ್ರದಲ್ಲಿ ಚಿಕ್ಕ ಹುಡುಗಿಯ ಮೇಲೆ ಪ್ರೇತಾತ್ಮ ಬರುತ್ತಲ್ಲ ,ಅದೇ ರೀತಿ ಮೈ ಮೇಲೆ ಬಂದ ಪ್ರೇತಾತ್ಮಗಳನ್ನು ಬಿಡಿಸಲು ನಮ್ಮೂರಿನ ಭೂತದ ಹತ್ತಿರ ಬರುತ್ತಿದ್ದರು ತುಂಬಾ ಜನ.

ಇದೆಲ್ಲ ನಾಟಕ ಅಂತೆಲ್ಲಾ ನಿಮ್ಮ ವಾದ ಆಗಿದ್ರೆ ಬನ್ನಿ ನಮ್ಮೂರಿಗೆ ತೋರಿಸ್ತೀನಿ !
ಭೂತದ ವೇಷಧಾರಿನ ನೋಡಿದ್ರೆ ದೊಡ್ಡವರೇ ಭಯ ಪಡಬೇಕು ಆ ರೀತಿ ಇರುತ್ತೆ.ಅಂಥದ್ದರಲ್ಲಿ ಪುಟ್ಟ ಮಕ್ಕಳು ಭೂತಕ್ಕೆ ಚ್ಯಾಲೆಂಜ್ ಹಾಕೋ ದೃಶ್ಯ ಮಾತ್ರ ರೋಮಾಂಚನಕಾರಿ.


ಹೀಗೆ ಒಂದು ವರ್ಷ ,ಒಂದು ಪುಟ್ಟ ಮಗುವಿಗೆ ಮೈ ಮೇಲೆ ದೆವ್ವ ಬಂದಿತ್ತು .ಅದನ್ನು ಬಿಡಿಸಲು ನಮ್ಮೂರಿನ ಭೂತದ ಕೋಲಕ್ಕೆ ತರಲಾಗಿತ್ತು .
ಆ ಭೂತವನ್ನು ಬಿಡಿಸಲು 2 ಘಂಟೆ ಹಿಡಿಯಿತು ದೈವಕ್ಕೇ !!!
ಕೇವಲ ನಾಲಕ್ಕನೇ ಕ್ಲಾಸ್ ಹುಡುಗ ಆ ರೀತಿ ಪ್ರಭುದ್ದವಾಗಿ ಮಾತಾಡೋದು ಸಾಧ್ಯಾನೇ ಇಲ್ಲ. ಎಷ್ಟೇ ಮನಶ್ಶಾಸ್ತ್ರ ,ಸುಪ್ತ ಮನಸ್ಸು ಅಂದ್ರೂ ಅದನ್ನು ನಂಬೋಕೆ ಸಾಧ್ಯವಿಲ್ಲ.

ಅಷ್ಟಕ್ಕೂ ಆಗಿದ್ದೇನಂದ್ರೆ ಆ ನಾಲಕ್ಕನೆ ಕ್ಲಾಸ್ ಹುಡುಗ ಕ್ರಿಕೆಟ್ ಆಡ್ತಿರ್ಬೇಕಾದ್ರೆ ಯಾವುದೋ ಕಲ್ಲಿನ ಮೇಲೆ ನಿಂತಿದ್ದನಂತೆ !

ಆ ಕಲ್ಲಿನ ಓನರ್ ಪ್ರೇತಾತ್ಮಕ್ಕೆ ಸಿಟ್ತು ಬಂದು ಹುಡುಗನ ಮೈ ಮೇಲೆ ಬಂದಿತ್ತು !!

ಈ ಪ್ರೇತಾತ್ಮಗಳ ಬಾಯಿ ಬಿಡಿಸೋದೆ ದೊಡ್ಡ ಸವಾಲು ನಮ್ಮ ಭೂತಕ್ಕೆ .ಮೊದಲ ಅರ್ಧ ಗಂಟೆಯಂತೂ ನೀನು ಯಾರು ,ಯಾಕೆ ಈ ಹುಡುಗನ ಮೇಲೆ ಬಂದೆ ಅಂತ enquiery ಮಾಡೋದೆ ಕಷ್ಟದ ಕೆಲಸ.
ಟಿ.ಎನ್ ಸೀತಾರಾಂ ಏನಾದ್ರೂ ನಮ್ಮ ಭೂತ ವಾದ ಮಾಡೊ style ಏನಾದ್ರೂ ನೋಡಿಬಿಟ್ರೆ ದಂಗಾಗಿ ಬಿಡ್ತಾರೆ.

ಬಹಳ ಕಷ್ಟ ಪಟ್ಟು ಬಾಯಿ ಬಿಡಿಸಿದಾಗ ಪ್ರೇತದ ಕಲ್ಲಿನ ಒನರ್ ಹೇಳಿದ್ದಿಷ್ಟು " ಆಟದ ನೆಪದಲ್ಲಿ ಹುಡುಗರು ನನ್ನ ಮೇಲೆ ಕುಣಿದಾಡ್ತಾರೆ ,ಮನೆಯರು ನನಗೆ ನೀಡಬೇಕಾದ ಗೌರವ ನೀಡ್ತಾ ಇಲ್ಲ ,ಅದನ್ನು ಹೇಳೊದಕ್ಕೆ ನಾನು ಈ ಹುಡುಗನ ಮೇಲೆ ಬಂದೆ.ಇದ್ದಿದ್ರಲ್ಲೇ ಪೋಲಿ ಹುಡುಗ ಇವನು ನನ್ನನ್ನು ಕಂಡ್ರೆ ಇವನಿಗೆ ಅಷ್ಟಕ್ಕಷ್ಟೆ !" ಅಂತ ಪಾಪ ಆ ಹುಡುಗನೇ ಅವನ ಬಾಯಿಯಿಂದ ಹೇಳ್ತಾ ಇದ್ರೆ ನಗು ಬರುತ್ತೆ.

ನಿನಗೆ ಕೊಡಬೇಕಾದ ಗೌರವ ಕೊಡಿಸ್ತೀನಿ ಬಿಟ್ಟು ಹೋಗು ಅಂದಾಗ ,"ಹೋಗಲ್ಲ ಏನ್ ಮಾಡ್ತೀಯಾ? " ಅಂತ ಭೂತಕ್ಕೇ ಚೋಟುದ್ದ ಹುಡುಗ ಸವಾಲು ಹಾಕಿದಾಗ್ ,ಇದು ಖಂಡಿತ ನಾಟಕ ಅಲ್ಲ ಅನ್ನೋದು ಮನದಟ್ಟಾಗುತ್ತೆ.

ಹಾಗೂ ಹೀಗೂ ಪ್ರೇತವನ್ನು convince ಮಾಡಿ ಒಂದು ತೆಂಗಿನಕಾಯಿಯಲ್ಲಿ ಬಂಧಿ ಮಾಡಿದ ಮೇಲೆ ಸುಖಾಂತ್ಯ!

ಇಷ್ಟೆ ಅಲ್ಲದೆ ಭೂತದ ಪಾತ್ರಧಾರಿ ಅಷ್ಟು ಸುಲಲಿತವಾಗಿ ಬೆಳಿಗ್ಗೆ ತನಕ ಮಾತಾಡೋದು ಒಂದು ಅದ್ಭುತ! ಇದು ಒಂದು ಕಲೇನೂ ಹೌದು .

ನಂಬುವುದು ಬಿಡುವುದು ಅವರವರಿಗೆ ಬಿಟ್ಟಿದ್ದು ಅಲ್ವ??

"ಆಪ್ ಅಗರ್ ಭಗವಾನ್ ಕೋ ಮಾನ್ ತೇ ಹೆಂ ತೋ ಶೈತಾನ್ ಕೋ ಭಿ ಮಾನ್ ನಾ ಪಡೆಗಾ " ಅನ್ನೋದು ಹಳೆಯ ಸಂಗತಿ .

ಫೂಂಕ್ ನಲ್ಲಿ ಹೇಳೊದು " ಬಿನಾ ಜಾನೆ ಹಿ ಇಸ್ ಮೆ ಕ್ಯಾ ಹೈ, ಅಗರ್ ಕ್ರೋಸಿನ್ ಕೋ ಮಾನ್ ತೇ ಹೋ ತೊ ಭಗವಾನ್ ಕೋ ಮಾನ್ ನೇ ಮೇ ಕ್ಯಾ ಹರ್ಝ್ ಹೈ "

ಭೂತದ ಕೋಲ ಏನೆಂದೇ ಗೊತ್ತಿಲ್ಲದವರು ಇದನ್ನು ನೋಡಿ .
http://www.youtube.com/watch?v=yU2dfJusI1c&feature=related

ಚಿತ್ರ ಕೃಪೆ : As usual ಕದ್ದದ್ದು ನಿಮಗೇನು ಪ್ರಾಬ್ಲೆಮ್?

Tuesday, August 19, 2008

ಭಾಮಿನಿ ಷಟ್ಪದಿ


’ಭಾಮಿನಿ ಷಟ್ಪದಿ’ ಕಥೆ ನಾ ಅಥವಾ ಕವನ ಸಂಕಲನ ನಾ ಅಂತ ಟೀನಾ ಹತ್ರ ಕೇಳಿದ್ದೆ. ಇವತ್ತು ಬಿಡುಗಡೆ ಅಗುತ್ತಲ್ವಾ ನೀವೆ ಬಂದು ನೋಡಿ ಅಂದ್ರು ಟೀನಾ.ವಾರಕ್ಕೆ ಏಳು ದಿನ ತಪ್ಪದೆ ಸೆಂಟ್ರಲ್ ಕಾಲೇಜಿನ ಪಕ್ಕದ ಕಟ್ಟಡಕ್ಕೆ ಭೇಟಿ ನೀಡುವ ಅನಿವಾರ್ಯತೆ ನನ್ನದಾಗಿದ್ದರೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗುತ್ತೆ ಅನ್ನೋ ಭರವಸೆ ನನಗಿರಲಿಲ್ಲ !!

ಆದ್ರೂ ಸಾಧ್ಯವಾಯಿತು .’ ಥ್ಯಾಂಕ್ ಯೂ ’ ದೇವ್ರೆ!

ಬೆಂಗಳೂರಿಗೆ ಬಂದು ಆರು ವರ್ಷಗಳಾಗಿದ್ರೂ ಇಂಥ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ ನಂಗೆ.ಎರಡು ವರ್ಷದ ಹಿಂದೆ ರವಿ ಬೆಳಗೆರೆ ಆಫೀಸಿನಲ್ಲಿ ರವಿ ನ ನೋಡಿದ್ದು ಬಿಟ್ರೆ (ಬಾಂಬ್ ಎಸ್ಸೈ ಗಿರೀಶ್ ಮಟ್ಟೆಣ್ಣನವರ್ ನ ಅವಾಂತರದಿಂದ!) ಬೇರೆ ಯಾವ ಸಾಹಿತಿಗಳನ್ನೂ ನಾನು ಮುಖತಃ ನೋಡಿರ್ಲಿಲ್ಲ.

ನಿನ್ನೆ ಕೆಲವರನ್ನು ನೋಡೊದಿಕ್ಕೆ ಸಾಧ್ಯವಾಯಿತು. ಥಾಂಕ್ಸ್ ಟು ಚೇತನಾ !

ಚೇತನಾ ರ ಯಾವುದೇ ಬರಹಗಳನ್ನು ನಾನು ಓದಿರಲಿಲ್ಲ .ಆರ್ಕುಟ್ ನಲ್ಲಿ ತುಂಬಾ ಕಮ್ಮ್ಯೂನಿಟಿಗಳಲ್ಲಿ ವಾದ ಮಾಡಿ ಹಲವಾರು ’ಶತ್ರು’ಗಳನ್ನು ಗಳಿಸಿಕೊಂಡ ಮೇಲೆ ಇಂಟರ್ನೆಟ್ ,ಚಾಟ್ ಸಹವಾಸಾನೇ ಬೇಡ ಅಂತ ದೂರವಿದ್ದೆ.ಆದ್ರೆ ಸ್ವಲ್ಪ ದಿನಗಳ ಹಿಂದೆ ಮತ್ತೆ ಸೆಳೆಯಿತು ಮಾಯಾಜಾಲ .

ನಿನ್ನೆ ರಾತ್ರಿ ಒಂದು ಗಂಟೆಯ ತನಕ ಕೂತು ಭಾಮಿನಿ ಷಟ್ಪದಿ ಓದಿ ನೇ ಮಲಗಿದ್ದು ನಾನು .
ಹೇಗಿದೆ ಅಂತ ಕೇಳ್ತೀರಾ???????
.
.
.
ರೀ ಸ್ವಾಮಿ ಎಲ್ಲಾ ಬಿಟ್ಟಿನೇ ಗೊತ್ತಾಗ್ಬೇಕಾ ನಿಮ್ ಗೆ ? ಐವತ್ತು ರೂಪಾಯಿ ಕೊಟ್ಕೊಂಡು ಓದ್ರಿ !
.
.
.

ನನಗೂ ಕವಿತೆಗಳಿಗೂ ಆಗಿ ಬರಲ್ಲ ! ಅಂಥಾದ್ರಲ್ಲಿ ಮತ್ತೆ ಕವನ ಸಂಕಲನ ತಗೊಂಬಿಟ್ ನಾ ಅನ್ನೋ ದಿಗಿಲು ಉಂಟಾಯ್ತು.

ಆದ್ರೇನಂತೆ ಕವನ ಸಂಕಲನ ಆಗಿದ್ರೂ ಏನೂ ಬೇಜಾರಿಲ್ಲ ,ಹೇಗೂ ಕಪಾಟಿನಲ್ಲಿ ಸಂಧ್ಯಾದೇವಿಯವರ ’ಮಾತು ,ಚಿಟ್ಟೆ ’ ಬೆಚ್ಚಗೆ ಕೂತಿತ್ತು . ಅದಕ್ಕೂ ಒಂದು ಜೋಡಿ ಅಂತ ಆಗುತ್ತೆ ,ಅಂತ ನನಗೆ ನಾನೆ ಸಮಾಧಾನ ಮಾಡ್ಕೊಂಡೆ.

ಸಮಾರಂಭ ತುಂಬಾನೆ ಚೆನ್ನಾಗಿತ್ತು .ಮೋಹನ್ ತುಂಬಾನೇ ಚೆನ್ನಾಗಿ ಮಾತಾಡಿದ್ರು .ಚೇತನಾ ಹಾಗೂ ಟೀನಾ ಕೂಡ ಸುಂದರವಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ್ರು .ಬೇಜಾರಂದ್ರೆ ಕೊನೆ ತನಕ ಇರೋದಿಕ್ಕೆ ಸಾಧ್ಯ ಆಗಿಲ್ಲ .ಅದಿಕ್ಕೇ ಚೇತನಾ ಆಟೋಗ್ರಾಫ್ ತಗೊಳ್ಳೋದಿಕ್ಕೆ ಆಗಿಲ್ಲ !

ಆದ್ರೇನಂತೆ ಪಕ್ಕದಲ್ಲೇ ವಸುಧೇಂದ್ರ ಕೂತಿದ್ರು ಅವರ ಹತ್ರ ಕೇಳಿದೆ ’ಸರ್ ,ಆಟೊಗ್ರಾಫ್ ಕೊಡಿ ’ .

ಅದಿಕ್ಕೆ ಪಾಪ ಅವ್ರು ’ಹೇ ಚೇತನಾದಲ್ವ ತಗೋಬೇಕು ಆಟೊಗ್ರಾಫ್’ ಅಂದ್ರು !

’ಅವರದ್ದೂ ತಗೋತೀನಿ ಸರ್ ಅಮೇಲೆ ,ನೀವು ಹಾಕಿ ’ ಅಂದೆ . ಕೊನೆ ಪೇಜ್ ನಲ್ಲಿ ಹಾಕಿದ್ರು ಕಡೆಗೂ........

ಅವರ ಪಕ್ಕದಲ್ಲೇ ಅಪಾರ ಕೂತಿದ್ರು .ಆದ್ರೆ ಅವರ ಮೇಲೆ ಸಿಟ್ಟಿತ್ತು ನನಗೆ ! ವೇದಿಕೆಯಲ್ಲಿ ಹಾಕಿರೋ ವಿನೈಲ್ ಪೋಸ್ಟರ್ನಲ್ಲಿರೋ ಚಿತ್ರ ಪುಸ್ತಕದಲ್ಲಿ ಇರ್ಲೇ ಇಲ್ಲ!!! ಅದಿಕ್ಕೆ ಅಪಾರ ಜೊತೆ ಟೂ ....

ಅಲ್ಲೇ ಮುಂದೆ ಜೋಗಿ ಕೂತಿದ್ರು ,ಅವರ ಹಿಂದೆ ಇಬ್ರು ಹುಡುಗೀರು ಕೂತಿದ್ರು(ವಯಸ್ಸಾಗಿತ್ತು ,ಆದ್ರೂ ಜೀನ್ಸ್ ಹಾಕಿ ಯಂಗ್ ಕಾಣಿಸ್ತಿದ್ದಿದ್ರಿಂದ ಹುಡುಗೀರು ಅನ್ಬಹುದು !).ಜೋಗಿ ಪಕ್ಕದಲ್ಲಿ ಇರೋರ್ ಜೊತೆ ಮಾತಾಡ್ತಾ ಇದ್ದಿದ್ರಿಂದ ಹತ್ತಿರ ಜೀನ್ಸ್ ಮ್ಯಾಡಮ್ ನ ಕರೆದು ಹೇಳಿದೆ ’ಮ್ಯಾಡಮ್ ಸ್ವಲ್ಪ ಆಟೊಗ್ರಾಫ್ ತಗೊಂಡು ಕೊಡ್ತೀರಾ ?’ ಅಂತ ಜೋಗಿನಾ ತೋರಿಸ್ದೆ .

ಅವ್ರು ’ಯಾರ್ದು ಜೋಗಿ ದಾ ಅಂದ್ರು !’
’ಇನ್ನೇನು ನಿಮ್ ದಾ ’ ಅನ್ನೋಣ ಅನ್ನಿಸ್ತು. ಆದ್ರೆ ಸುಮ್ಮನೆ ತಲೆ ಆಡಿಸಿದೆ .ಪಾಪ ಅವರು ಪುಸ್ತಕನ ಜೋಗಿ ಕೈಗೆ ಕೊಟ್ಟು ’ಆಟೊಗ್ರಾಫ್ ’ ಬೇಕಂತೆ ಅಂತ ನನ್ನನ್ನು ತೋರಿಸಿದ್ರು .

ಪುಸ್ತಕ ತಗೊಂಡ ಜೋಗಿ ,ಕೊನೇ ಪೇಜ್ ನಲ್ಲಿ ವಸುಧೇಂದ್ರ ಬರೆದ ಕೆಳಗೇ ಬರೆದ್ರು .

"ಕವಿತೆ ಚಿರಾಯುವಾಗಲಿ -ಜೋಗಿ (180808 ) "

ಇದಾದ ಸ್ವಲ್ಪ ಹೊತ್ತಲ್ಲಿ ,ಯಾರಿಗೋ ಹೂ ಗುಚ್ಚ ಕೊಡೊದಿಕ್ಕೆ ಮಮತಾ ಸಾಗರ್ ಬರ್ಬೇಕು ಅಂದ್ರು . ಪಕ್ಕದಲ್ಲೆ ಕೂತಿದ್ದ ಜೀನ್ಸ್ ಮ್ಯಾಡಮ್ ಎದ್ದು ಹೋಗೋದಾ!!!!!!!!!

ಧಸಕ್ ಅಂತು ಎದೆ !

ಒಹ್ ಇವ್ರೂ ಯಾರೋ ಲೇಖಕಿ ಇರ್ಬೇಕು ! ಅದಿಕ್ಕೆ ಆಟೊಗ್ರಾಫ್ ಯಾರ್ದು ಅಂತ ಕೇಳಿದ್ದು !
ಮಮತಾ ಸಾಗರ್ ಹೆಸರು ನೋಟ್ ಮಾಡ್ಕೊಂಡೆ .ನಾಳೆ ಬೆಳಿಗ್ಗೆ ಆಫೀಸಿಗೆ ಹೋದ ತಕ್ಷಣ ದೊಡ್ಡಣ್ಣನ (Google) ಹತ್ರ ಕೇಳ್ಬೇಕು ಮಮತಾ ಸಾಗರ್ ಯಾರು ಅಂತ !

ಗೂಗಲ್ ನಲ್ಲಿ ಹುಡುಕಿದಾಗ ಗೊತ್ತಾಯ್ತು ಮಮತಾ ಸಾಗರ್ ಒಬ್ಬ ಪ್ರಖ್ಯಾತ ಬರಹಗಾರ್ತಿ ಅಂತ .
ಸಾರಿ ಮಮತಾ ಜಿ !!!!!!!

ವಿವೇಕ್ ರೈಗಳು ಮಾತಾಡೋದು ಕೇಳ್ಬೇಕು ಅಂತ ಆಸೆ ಇತ್ತು .ಹಾಗೇ ಚೇತನಾ ಆಟೊಗ್ರಾಫ್ ತಗೋಬೇಕು ಅಂತ .
ಆದ್ರೆ ಅರ್ಜಂಟ್ ಆಗಿ ಹೋಗ್ಲೇ ಬೇಕಿತ್ತು ನಾನು .

ಬೇಸರದಿಂದ ಹೊರಟೆ ಅಲ್ಲಿಂದ ...


ರಾತ್ರಿ ಕೂತು ಪುಸ್ತಕ ಓದಿ ಮುಗಿಸಿದಾಗ guilty feel ಆಯ್ತು. ಅರೇ ಇದೇನಿದು”ಕುಂಬಳ ಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡೀದ ’ಅಂದಂಗಾಯ್ತಲ್ಲ ಅನ್ನಿಸಿತು !
ಅಂದ ಹಾಗೆ ನನ್ನ ಪಾಪ ಪ್ರಜ್ಞೆಗೆ ಕಾರಣ ಪುಸ್ತಕಕ್ಕೆ ಕಾರಣರಾದ ಗಂಡಸರಲ್ಲಿ ನಾನೂ ಒಬ್ಬನಲ್ವಾ??
’ಗಂಡಸರು’ ಅಂತ ಜನರಲೈಸ್ ಮಾಡಿ ಬರೆಯೋದು ತಪ್ಪಾದ್ರೂ ,ನಾವು ಬಹುತೇಕ ಗಂಡಸರು ಇರೋದೇ ಹೀಗಲ್ವಾ??
ಆಗ್ಲೇ ನಿರ್ಧಾರ ಮಾಡಿದೆ .ನಾನು ’ಅಂಥ’ ಗಂಡಸಾಗ್ಬಾರ್ದು . ’ಭಾಮಿನಿ ಷಟ್ಪದಿ -ಭಾಗ 2 'ಕ್ಕೆ ಅವಕಾಶ ಮಾಡಿಕೊಡೋ ಗಂಡಸು ನಾನಾಗ್ಬಾರ್ದ್ರು !!!

ಪುಸ್ತಕದಲ್ಲಿದ್ದ ಬರಹಗಳು ಎಷ್ಟು ಅರ್ಥವಾಯಿತು ,ಅಥವಾ ಎಷ್ಟು ’ಅಪಾರ್ಥ’ವಾಯಿತು ಅನ್ನೋದು ಗೊತ್ತಿಲ್ಲ !!! ಆದ್ರೆ ಹುಡುಗಿಯರ ಮಾನಸಿಕ ತುಮುಲದ ಅರಿವು ಸ್ವಲ್ಪ ಮಟ್ಟಿಗೆ ನನಗಾಯ್ತು !

ಅಷ್ಟರ ಮಟ್ಟಿಗೆ ನಾನು ಚೇತನಾಗೆ ಋಣಿ !!!!
ಚಿತ್ರ ಕೃಪೆ : ’ಅವಧಿ’ ಯಿಂದ ಹೈಜಾಕ್ ಮಾಡಿದ್ದು .

Wednesday, August 13, 2008

ಲಾಫಿಂಗ್ ಬುದ್ಧ




"ಸೂರಿ ಒಂದು ಹುಡುಗಿ ಫ್ರೆಂಡ್ ಆಗಿದ್ದಾಳೋ ಚಾಟ್ ನಲ್ಲಿ .ತುಂಬಾ ಒಳ್ಳೆಯವಳು .ಅವಳ ಹತ್ರ ಮಾತಾಡ್ತಾ ಇದ್ರೆ ಸಮಯ ಕಳೆದಿದ್ದೇ ಗೊತ್ತಾಗಲ್ಲ ! ಈಗಂತೂ ಬರೀ ಚಾಟಿಂಗು, ಎಸ್ಸೆಮ್ಮೆಸ್ಸು ,ಫೋನಲ್ಲೇ ದಿನ ಕಳೀತಾ ಇದ್ದೀವಿ ನಾವು !"


"ರವಿ, ಸಕ್ಕತ್ ಲಕ್ಕಿ ಕಣೊ ನೀನು ಯಾವಾಗ್ ಮೀಟ್ ಆಗ್ತಾಳಂತೆ? ಬೇಗ ಪಟಾಯಿಸ್ಕೊಳ್ಳೋ ,ಸಿಕ್ಕಿರೋ ಚಾನ್ಸ್ ಮಿಸ್ಸ್ ಮಾಡ್ಕೋಬೇಡ "


"ಸಧ್ಯಕ್ಕಂತೂ ಮೀಟ್ ಆಗೊ ಅವಶ್ಯಕತೆ ನಂಗೆ ಕಾಣಿಸ್ತಾ ಇಲ್ಲ ಸೂರಿ .ಹೀಗೆ ಸ್ವಲ್ಪ ದಿನ ಒಳ್ಳೆ ಫ್ರೆಂಡ್ ಆಗಿರೋಣ ಅಂತಿದ್ದೀನಿ. ಈ ಕಾಲದಲ್ಲಿ ಒಳ್ಳೆ ಫ್ರೆಂಡ್ಸ್ ಸಿಗೋದೆ ಕಷ್ಟ ಆಗ್ಬಿಟ್ಟಿದೆ ,ಅಂಥಾದ್ರಲ್ಲಿ ಸಿಕ್ಕಿರೋ ಗೆಳತೀನ ಕಳ್ಕೊಳ್ಳೋಕೆ ಇಷ್ಟ ಇಲ್ಲ ನಂಗೆ "


"ಥೂ ನಿನ್ನ ಏನೊ ರವಿ 21st century ನಲ್ಲಿದ್ದು ಒಳ್ಳೆ ಸನ್ಯಾಸಿ ಥರ ಮಾತಾಡ್ತಿಯಲ್ಲೋ ? ಏನೋ ಆಗಿದೆ ನಿಂಗೆ? ನೋಡು ಸಿಕ್ಕಿರೋ ಚಾನ್ಸ್ ಮಿಸ್ಸ್ ಮಾಡ್ಕೋಬಾರ್ದು . Never miss an oppertunity ಅಂತ ಸ್ಪೈಸ್ ಜಾಹೀರಾತು ನೋಡಿಲ್ವ? ಈಗ್ಲೆ ಮಜಾ ಮಾಡ್ಬೇಕು "


"ಹಾಗಂತೀಯಾ ಸೂರಿ .ಹಾಗಿದ್ರೆ ನಾನೇನ್ ಮಾಡ್ಬೇಕು ಹೇಳೋ ..."


"ಏನಿಲ್ಲ ರವಿ ಸ್ವಲ್ಪ ದಿನಾ ಹಾಗೆ ಅವಳ ವಿಶ್ವಾಸ ಗಳಿಸ್ಕೋ .ಆಮೇಲೆ ಒಂದು ದಿನ ಎಲ್ಲಾದ್ರೂ ಸಿನೆಮಾಗೆ ಕರ್ಕೊಂಡು ಹೋಗು.ಹಾಗೆ ಸ್ವಲ್ಪ ದಿನ ಆದ್ಮೇಲೆ ರೂಮ್ ಗೇ ಕರ್ಕೊಂಡು ಹೋಗಿ ’ಕೆಲಸ’ ಮುಗಿಸ್ಬಿಡು. ಆಮೇಲೆ ಯಾವುದಾದ್ರೂ ಗಿಫ್ಟ್ ತಗೊ. ಹುಡ್ಗೀರ್ಗೆ ಗಿಫ್ಟ್ ಕೊಟ್ರೆ ಹಾಗೆ ಕರಗ್ ಹೋಗ್ತಾರೆ "


"ಸೂರಿ ಥ್ಯಾಂಕ್ಸ್ ಕಣೊ ತುಂಬಾ ಒಳ್ಳೆ ಸಲಹೆ ಕೊಟ್ಟೆ ,ಇಲ್ಲಾಂದ್ರೆ ಸಿಕ್ಕಿರೋ ಚಾನ್ಸ್ ಮಿಸ್ಸ್ ಮಾಡ್ಕೋತಾ ಇದ್ದೆ."


------------------------------------*****************************---------------------------


"ಹೇ ರವಿ ಏನಾಯ್ತೋ ಎಲ್ಲಿ ತನಕ ಬಂತು ನಿನ್ ’ಲವ್ ಸ್ಟೋರಿ’ ? ಮಾಡಿದ್ಯಾ ಏನಾದ್ರೂ ?? "


"ಸೂಪರ್ ಕಣೊ ಸೂರಿ .ನೀನ್ ಹೇಳಿದ್ ಹಾಗೇನೆ ಮಾಡಿದೆ ಕಣೊ. ತುಂಬಾನೇ ಲಕ್ಕಿ ನಿನ್ನಂಥ ಗೆಳೆಯ ಸಿಕ್ಕಿದ್ದಕ್ಕೆ. "


"ಗುಡ್ . ಅಂದ ಹಾಗೆ ಏನ್ ಗಿಫ್ಟ್ ಕೊಟ್ಟೆ?"


"ಒಂದು ಲಾಫಿಂಗ್ ಬುದ್ಧ ಮೂರ್ತಿ ಕೊಟ್ಟಿದ್ದೀನಿ. ಹಾಳಾದ್ದು 500 ರುಪಾಯಿ ಖರ್ಚಾಯ್ತು!! ಆದ್ರೂ ಪರ್ವಾಗಿಲ್ಲ ಸಕ್ಕತ್ ಮಜಾ ಸಿಕ್ತು!"


"ಬಾಯ್ ಕಣೊ ಲೇಟ್ ಆಯ್ತು ,ಮನೆಗೆ ಹೋಗಿ ಶಟಲ್ ಆಡ್ಬೇಕು .."


"ಸರಿ ಕಣೊ ಬಾಯ್ "

-------------------------------------------*************************-------------------------


ಮನೆಗೆ ಬಂದ ಸೂರಿ ಸೀದಾ ತಂಗಿ ಶೃತಿ ರೂಮ್ ಗೆ ನುಗ್ಗಿದ ಶಟಲ್ ಬ್ಯಾಟ್ ತಗೊಳ್ಳೋಕೆ ..

ಶೃತಿ ಕಂಪ್ಯೂಟರ್ ಮಾನಿಟರ್ ಮೇಲೆ ಹೊಸ ’ಲಾಫಿಂಗ್ ಬುದ್ಧ ’ನ ಮೂರ್ತಿ ಕೂತಿತ್ತು.


ಹೊಟ್ಟೆ ಸವರುತ್ತ ತನ್ನನ್ನೇ ನೋಡಿ ನಕ್ಕಂತಾಯ್ತು ಸೂರಿಗೆ !


------------------------------------------*************************--------------------------




Wednesday, August 6, 2008

ಸುಮ್ ಸುಮ್ನೆ ಗೀಚಿದ್ದು !





ಕನ್ನಡ ಮಾಧ್ಯಮ ನಾ ಇಂಗ್ಲೀಷ್ ಮಾಧ್ಯಮ ನಾ?? ಅನ್ನೊ ಬಗ್ಗೆ ಬಹುತೇಕ ದಿನಗಳಿಂದ ಚರ್ಚೆ ನಡೀತಾನೆ ಇದೆ .
ನನಗೆ ಈ ಚರ್ಚೆಯಲ್ಲಿ ಭಾಗವಹಿಸೋದಕ್ಕೆ ಯಾವ ಯೋಗ್ಯತೇನೂ ಇಲ್ಲ.

ನಾನು ’ಬುಧ್ಧಿ ಜೀವಿ’ಯಲ್ಲ ! ಕೊನೆಪಕ್ಷ ನನ್ಗೆ ಎರಡು ಮಕ್ಕಳಿದ್ದಿದ್ರೆ ನನ್ನ ಮಕ್ಕಳನ್ನು ಯಾವ ಮಾಧ್ಯಮದಲ್ಲಿ ಕಲಿಸ್ಬೇಕು ಅಂತ ಅಭಿಪ್ರಾಯ ಆದ್ರೂ ಹೇಳ್ಬೋದಿತ್ತು - ಆದ್ರೆ ಇನ್ನೂ ಮದುವೆ ಆಗಿಲ್ಲ ನನಗೆ :(

ಆದ್ರೂ ಈ ವಿಷಯದ ಬಗ್ಗೆ ನನ್ನ ಬ್ಲಾಗ್ ನಲ್ಲಿ ಬರೆಯಲು ಒಂದೇ ಕಾರಣ - ನಾನೂ ಕನ್ನಡ ಮಾಧ್ಯಮದಲ್ಲಿ ಓದಿದ್ದು .
ನನ್ನ ಮನೆಯವರೆಲ್ಲ (ಮನೆ ಬಿಡಿ ಊರವ್ರೆಲ್ಲಾ!) ಕನ್ನಡ ಮೀಡಿಯಂನಲ್ಲೇ ಓದಿದ್ದು. ಕನ್ನಡ ಪ್ರೀತಿ ಅಂತ ಅಲ್ಲ ! ಇದ್ದಿದ್ದೆ ಕನ್ನಡ ಮೀಡಿಯಂ ಸ್ಕೂಲ್ ಆದ್ರೆ ಇಂಗ್ಲೀಷ್ ಹೆಂಗಪ್ಪಾ ಓದೋದು??

ಕನ್ನಡ ಮೀಡಿಯಂ ನಲ್ಲಿ ಓದಿದ್ದಕ್ಕೆ ಮುಂದೆ ಕಾಲೇಜ್ ನಲ್ಲಿ ತುಂಬಾನೆ ಕಷ್ಟ ಪಡ್ಬೇಕಾಯ್ತು ನಾನು..

ಆದ್ರೂ............................... ನಾನು ತುಂಬಾ ಅದೃಷ್ಟವಂತ ಕನ್ನಡ ಮೀಡಿಯಂನಲ್ಲಿ ಓದಿದ್ದಕ್ಕೆ. ಅಷ್ಟು ಓಳ್ಳೆಯ ಟೀಚರ್ಸ್ ನನಗೆ ಸಿಕ್ಕಿದ್ದಕ್ಕೆ!

ನಾನು ಕನ್ನಡ ಮಾಧ್ಯಮದಲ್ಲಿ ಓದಿರೋದಕ್ಕೇ ಈಗ ಇಂಗ್ಲೀಷ್ನಲ್ಲೂ ಚೆನ್ನಾಗಿ ಓದಬಲ್ಲೆ,ಮಾತಡಬಲ್ಲೆ ಹಾಗೂ ಬರೆಯಬಲ್ಲೆ.
ಆದ್ರೆ ನಾನು ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ರೆ ಬಹುಶಃ ಕನ್ನಡದಲ್ಲಿ ಇಷ್ಟು ಚೆನ್ನಾಗಿ ಓದೋದು,ಬರೆಯೋದು ಸಾಧ್ಯ ಆಗ್ತಾ ಇರ್ಲಿಲ್ಲ.

ಕನ್ನಡ ಸಾಹಿತ್ಯವನ್ನು ತುಂಬಾ ಓದಲು ಸಾಧ್ಯವಾಗಿಲ್ಲವಾದ್ರೂ ಅಲ್ಪ ಸ್ವಲ್ಪ ಓದೋದಕ್ಕಾದ್ರೂ ಕನ್ನಡ ಮಾಧ್ಯಮ ಸಹಕಾರಿಯಾಯ್ತು.

ಗೋಪಾಲಕೃಷ್ಣ ಅಡಿಗರ ’ಯಾವ ಮೋಹನ ಮುರಳಿ’ ಬಿಟ್ರೆ ಬೇರೆ ಯಾವ ಗೀತೆಯ ಬಗ್ಗೆ ನನಗೆ ಗೊತ್ತಿಲ್ಲವಾದ್ರೂ ಅಡಿಗರು ನಮ್ಮ ನಾಡಿನ ಹೆಮ್ಮೆಯ ಕವಿ ಅಂತ ತಿಳಿಯೋದಕ್ಕಾದ್ರೂ ಕನ್ನಡ ಮಾಧ್ಯಮ ಸಹಕಾರಿಯಾಯ್ತು!
ಅ.ನ. ಕೃ ಅವರ ಯಾವೂದೇ ಕಾದಂಬರಿ ಓದಿಲ್ಲವಾದ್ರೂ ಅವರೊಬ್ಬ ಶ್ರೇಷ್ಠ ಕಾದಂಬರಿಕಾರ ಅನ್ನೋದು ಗೊತ್ತುಪಡಿಸಿದ್ದು ಕನ್ನಡ ಮೀಡಿಯಮ್ಮು ,ಅದೇ ಕನ್ನಡ ಟೀಚರ್ ಗಳು!

ಆದ್ರೆ ಪಾಪ ಈಗಿನ ಕಾನ್ವೆಂಟ್ ಹುಡುಗರಿಗೆ ಅಡಿಗರು ಗೊತ್ತಾ ? ಅಂದ್ರೆ - " ಗೊತ್ತಿಲ್ಲಾ ಗುರು ಆದ್ರೆ ’ಅಡಿಗಾಸ್ ’ ಗೊತ್ತು ತುಂಬಾ ಚೆನ್ನಾಗಿದೆ ಫುಡ್ ಅಲ್ಲಿ" ಅಂತಾರೆ !!

ಆದ್ರೆ ಯಾರನ್ನು ಬಯ್ಯೋದು ಅಲ್ವ?? ಪೋಷಕರಿಗೆ ತಮ್ಮ ತಮ್ಮ ಮಕ್ಕಳು ಚೆನ್ನಾಗಿ ಓದಿ ’ಉದ್ಧಾರ’ ಆಗ್ಬೇಕು ಅನ್ನೊದಷ್ಟೇ ಗೊತ್ತು .

ನಾನು ಇಂಗ್ಲೀಷ್ ಅಕ್ಷರಮಾಲೆ ಕಲಿತದ್ದೆ 5 ನೇ ಕ್ಲಾಸ್ ನಲ್ಲಿ. ಆದ್ರೆ ಮನೆಗೆ ಬರ್ತಾ ಇದ್ದ ಕಸಿನ್(ಬಾಂಬೆಯಿಂದ) ಆಗ್ಲೇ ’ಟಿಂಟಿನ್’ ಕಾರ್ಟೂನ್ ಪುಸ್ತಕ ಓದ್ತಾ ಇದ್ರೆ ಹೊಟ್ಟೆ ಚುರು ಚುರು ಅನ್ತಾ ಇತ್ತು ಅಯ್ಯೋ ಇಂಗ್ಲೀಷ್ ಬರಲ್ವಲ್ಲ ಅಂತಾ!ಆದ್ರೆ ಆ ಪುಣ್ಯಾತ್ಮ ನನ್ಗೆ ಇಂಗ್ಲೀಷ್ ಬರಲ್ಲ ಅಂತ ಮುಸಿ ಮುಸಿ ನಗೋ ಬದಲು ಅದೇ ಕಾರ್ಟೂನ್ ಗಳನ್ನು ಕೊಂಕಣಿಯಲ್ಲಿ ಅರ್ಥ ಮಾಡಿಸ್ತಿದ್ದ,ಅಷ್ಟರ ಮಟ್ಟಿಗೆ ನಾನು ಅವನಿಗೆ ಕೃತಜ್ಞ .

5 ನೇ ಕ್ಲಾಸ್ ನಲ್ಲಿ A B C D ಕಲ್ತು ,ಬೇಸಿಕ್ ಇಂಗ್ಲೀಷ್ ಕಲಿಯೋ ಅಷ್ಟರಲ್ಲಿ ಹೈ ಸ್ಕೂಲ್ ಮೆಟ್ಟಿಲಿ ಹತ್ತಿದ್ವಿ.
ಅಲ್ಲಿ ಅಲ್ಪ ಸ್ವಲ್ಪ ಇಂಗ್ಲೀಷ್ ಕಲಿಯೋದರೊಳಗೆ S.S.L.C ನೇ ಮುಗಿದು ಹೋಯ್ತು.

ಆದ್ರೆ ಯಾವಾಗ ಕಾಲೇಜ್ನಲ್ಲಿ science ತಗೊಂಡ್ನೊ ಆಗ ಗೊತ್ತಾಯ್ತು ಇಂಗ್ಲೀಷ್ ಮಹಾತ್ಮೆ!

ಸೈನ್ ತೀಟಾ, ಕಾಸ್ ತೀಟಾಗಳ ಗಲಾಟೆ ಮಧ್ಯೆ ಏನೂ ಅರ್ಥ ಆಗದೆ ಪಕ್ಕದ ರೋ ನಲ್ಲಿ ಕೂತಿರ್ತಿದ್ದ ಮಲಯಾಳಿ ಹುಡುಗಿಯರನ್ನು ನೋಡಿ ಟೈಂ ಪಾಸ್ ಮಾಡಿದ್ದೇ ಹೆಚ್ಚು .

ನಾವು ಹೈ ಸ್ಕೂಲ್ ನಲ್ಲಿ ಕಲಿತ ವಿಷಯಗಳೇ ಮತ್ತೆ ರಿಪೀಟ್ ಆಗಿದ್ದೂ ಗೊತ್ತಾಗಿಲ್ಲ ನನ್ನಂಥ ಗೂಬೆಗಳಿಗೆ !!

ಹೇಗೆ ತಾನೇ ಗೊತ್ತಾಗ್ಬೇಕು ?? ಹೈ ಸ್ಕೂಲ್ ನಲ್ಲಿ ’ಅಚ್ಚ ಕನ್ನಡದಲ್ಲಿ ಕಲಿತ ರೋಧ,ವೇಗೋತ್ಕರ್ಷ, ವಿದ್ಯುನ್ಮಂಡಲಗಳೇ resistance,velocity ,circuit ಗಳು ಅಂತ ????

ಇಂಗ್ಲೀಷ್ ಮಾಧ್ಯಮದಲ್ಲಿ ಕಲಿತ ಸಹಪಾಟಿಗಳಿಗೆ ಇದು ಅಂತಹ ಕಷ್ಟ ಅನ್ನಿಸ್ಲಿಲ್ಲ.ಅವರ ಆರ್ಭಟದಲ್ಲಿ ನಾವೆಲ್ಲ ವರ್ಷ ಇಡೀ ಮಲಯಾಳಿ ಹುಡುಗಿಯರ ಅಂದ ಸವಿದದ್ದೇ ಬಂತು.

ಆದ್ರೆ ಖುಷಿ ಪಡಲೇಬೇಕಾದ ಒಂದು ವಿಷಯ ಏನಂದ್ರೆ , ಪಿ.ಯು.ಸಿ ಆಗ್ಲಿ ಸಿ.ಇ.ಟಿ ಆಗ್ಲಿ ಎರಡರಲ್ಲೂ ಫಸ್ಟ್ ಬರ್ತಾ ಇದ್ದಿದ್ದು ಇವೇ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು !

ನನಗೂ ಇಂಗ್ಲೀಷ್ ಕಲಿಯಬೇಕೆಂಬ ಉತ್ಸಾಹ ಇತ್ತು.. ಆದ್ರೆ ಅದು ಕಾಲೇಜ್ ಓದಿಗೆ ಸಹಾಯ ಆಗ್ಲಿ ಅಂತ ಅಲ್ಲ!ಮನೆಯಲ್ಲಿ ಅಣ್ಣ ಹಾಸಿಗೆ ಅಡಿ ಬಚ್ಚಿಡುತ್ತಿದ್ದ ’ಡೆಬೊನೇರ್’ನಲ್ಲಿ ಬರ್ತಿದ್ದ ಪೋಲಿ ಕಥೆಗಳನ್ನು ಓದಲು !
ಕಷ್ಟ ಪಟ್ಟು ಒಂದೊಂದೇ ಪದಗಳನ್ನು ’ಗದಗ ಪಬ್ಲಿಕೇಶನ ’ ದ ಡಿಕ್ಷನರಿಯಲ್ಲಿ ಹುಡುಕಿ ಓದ್ತಾ ಇದ್ದೆ .ಆದ್ರೆ ದುರದೃಷ್ಟವಶಾತ್ ಕಥೆಗಳಲ್ಲಿ ಬರ್ತಿದ್ದ ಪದಗಳು ಡಿಕ್ಷನರಿನಲ್ಲಿ ಇರ್ತಾ ಇರ್ಲಿಲ್ಲ ! !
ಇದಾದ ಮೇಲೆ ಇಂಜಿನಿಯರಿಂಗ್ ಕೂಡ ಅಷ್ಟೇನೂ ಕಷ್ಟ ಆಗ್ಲಿಲ್ಲ.ಈಗಾಗ್ಲೇ ಇಂಗ್ಲೀಷ್ ಜೊತೆ ಹೆಣಗಾಡೋದು ಕಲ್ತಿದ್ದೆ.

ಮತ್ತೆ ಇಂಗ್ಲೀಷ್ ಪೆಡಂಭೂತವಾಗಿ ಕಾಡಿದ್ದು ಕೆಲಸ ಹುಡುಕೋ ಸಂದರ್ಭದಲ್ಲಿ .

ಸಂದರ್ಶನದಲ್ಲಿ ಮೊದಲನೇ ಪ್ರಶ್ನೆ ಯಾವತ್ತೂ "Tell me about yourself " ಆಗಿರ್ತಾ ಇತ್ತು.ಈ ಪ್ರಶ್ನೆಗೆ ಎಷ್ಟೇ ಕಷ್ಟ ಪಟ್ಟೂ ಉತ್ತರ ಸಿದ್ಧ ಪಡಿಸಿದ್ದರೂ ಹೇಳೊದಕ್ಕೆ ತಿಣುಕ್ತಾ ಇದ್ದೆ.

ಈಗ ಹಳೆಯದನೆಲ್ಲಾ ನೆನೆಸಿಕೊಂಡ್ರೆ ನಗು ಬರುತ್ತೆ.

ನಾನಿರೋದು ಟೆಕ್ನಿಕಲ್ ಫೀಲ್ಡ್ . ಇಲ್ಲಿ ಎಲ್ಲಾ ಕಡೆಯಿಂದ ಬಂದಿರೋ ಜನಗಳಿದ್ದಾರೆ . ನಾವೆಲ್ಲ ಯಾವುದೆ ವಿಷಯ ಚರ್ಚಿಸೋದಕ್ಕೆ ಇಂಗ್ಲೀಷೇ ಬಳಸ್ಬೇಕು.ಹೀಗಾಗಿ ಇಂಜಿನಿಯರಿಂಗ್ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿತಿದ್ದು ತುಂಬಾನೆ ಸಹಕಾರಿ ಆಯ್ತು ನನ್ಗೆ.

ಆದ್ರೆ ಈಗೀಗ ತಾಂತ್ರಿಕ ಶಿಕ್ಷಣವನ್ನೂ ಕನ್ನಡದಲ್ಲಿ ಕೊಡಬೇಕೆಂಬ ಕೂಗು ಕೇಳಿ ಬರುತ್ತಿದೆ.
ನನಗ್ಯಾಕೋ ಇದು ಸರಿ ಅನ್ನಿಸ್ತಿಲ್ಲ. ಹಾಲ್ದೊಡ್ಡೇರಿ ಸುಧೀಂದ್ರ ರಂತವರು ಕನ್ನಡದಲ್ಲೇ ವೈಜ್ಞಾನಿಕ ಬರಹಗಳನ್ನು ಬರೀತಾ ಬಂದಿದ್ದಾರೆ. ಇದು ನಮ್ಮ ಸಮಾಧಾನಕ್ಕಷ್ಟೇ!

ಕೆಲಸಕ್ಕೆ ಸೇರಿಕೊಂಡ ಮೇಲೆ ಎಲ್ಲರೂ ಇಂಗ್ಲೀಷ್ ನಲ್ಲೇ ತಾನೆ ವಿಚಾರ ವಿನಿಮಯ ಮಾಡ್ಕೋಳ್ಳೋದು? ಅಲ್ಲಿ ಕನ್ನಡದಲ್ಲಿ ತಾಂತ್ರಿಕ ವಿಷಯಗಳನ್ನು ವಿವರಿಸೋದು ಸಾಧ್ಯವೇ ಇಲ್ಲ. ಹಾಗೆಂದ ಮೇಲೆ ತಾಂತ್ರಿಕ ವಿಷಯಗಳನ್ನು ಇಂಗ್ಲೀಷ್ ನಲ್ಲೆ ಕಲಿಸಬೇಕೆಂಬುದು ನನ್ನ ಅನಿಸಿಕೆ.

ಕನ್ನಡ ಪ್ರೇಮಕ್ಕೋಸ್ಕರ ತಾಂತ್ರಿಕ ಶಿಕ್ಷಣವನ್ನು ಕನ್ನಡದಲ್ಲಿ ಪಡೆದು ,ಕೆಲಸಕ್ಕೋಸ್ಕರ ಅದನ್ನೇ ಇಂಗ್ಲೀಷಿನಲ್ಲಿ ಕಲಿಯೊದು ಕಷ್ಟ ಸಾಧ್ಯ .

ಇಷ್ಟೆಲ್ಲಾ ಇಲ್ಲಿ ಕುಯ್ದ್ರೂ ನನ್ನ ಕೊನೆಯ ಅಭಿಪ್ರಾಯ ಏನೆಂದು ಮಾತ್ರ ಕೇಳಬೇಡಿ !!!!

ನನಗೂ ಗೊತ್ತಿಲ್ಲ! ನನಗಂತೂ ಕನ್ನಡ ಮಾಧ್ಯಮದಲ್ಲಿ ಕಲಿತದ್ದು ಒಳ್ಳೇದೆ ಆಯ್ತು.ಕನ್ನಡ ಭಾಷೆಯ ,ಕನ್ನಡ ಸಾಹಿತ್ಯದ ಪರಿಚಯ ಸ್ವಲ್ಪಾನಾದ್ರೂ ಆಯ್ತು.

ಆದ್ರೆ ನನ್ನದೇ ಕೆಲವು ಪ್ರತಿಭಾವಂತ ಗೆಳೆಯರು ಕನ್ನಡ ಮಾಧ್ಯಮದಿಂದ ಇಂಗ್ಲೀಷ್ ಮಾಧ್ಯಮಕ್ಕೆ ಒಗ್ಗಿಕೊಳ್ಳದೆ ಫಸ್ಟ್ ಪಿ.ಯು.ಸಿ ನಲ್ಲೇ ಫೇಲ್ ಆಗಿ ಅರ್ಧಕ್ಕೇ ಕಾಲೇಜು ಬಿಟ್ಟು ,xerox ಅಂಗಡಿ ,ಜನರಲ್ ಸ್ಟೋರ್ ಗಳಲ್ಲಿ ಕೆಲಸಕ್ಕೆ ಸೇರಿಕೊಂಡವರಿದ್ದಾರೆ!

ಅಂಥ ಪರಿಸ್ಥಿತಿ ಮಾತ್ರ ಬರಬಾರದು ಯಾರಿಗೂ.


ಫೋಟೊ ಕೃಪೆ : http://www.kaverionline.org/

Friday, August 1, 2008

ಪತ್ರ ಬರೆಯಲಾ ಇಲ್ಲ ....????




ಹೀಗೆ ಸ್ವಲ್ಪ ದಿನ ಮುಂಚೆ ’ಜಾನಕಿ ’ ,’ಹಾಯ್ ಬೆಂಗಳೂರ್’ ನಲ್ಲಿ ,ಪತ್ರದಲ್ಲಿರೋ ಆಪ್ಯಾಯಮಾನತೆ ಈ-ಮೇಲ್ ಅಥವಾ ಇನ್ನ್ಯಾವುದೋ ಮಾಧ್ಯಮದಲ್ಲಿ ಸಿಗೊದಿಲ್ಲ ಅನ್ನೊ ಧಾಟಿಯಲ್ಲಿ ಬರೆದಿದ್ದರು. ಬಹಳಷ್ಟು ಜನರ ಅಭಿಪ್ರಾಯನೂ ಅದೇ ಆಗಿತ್ತು.
ಆದ್ರೆ ನನಗನ್ನಿಸೋ ಪ್ರಕಾರ ಎರಡರ ಅನುಭವ ಬೇರೆನೇ ! ಈ ಎರಡೂ ಮಾಧ್ಯಮಗಳ ಅನುಭೂತಿ ಬೇರೇನೆ !

ನಾನು P.U.C ನಲ್ಲಿರ್ಬೇಕಾದ್ರೆ ಒಬ್ಳು ಗೆಳತಿ ಇದ್ಲು. ಪತ್ರ ಮಿತ್ರೆ! ಆಗ ಮಂಗಳ ಪತ್ರಿಕೆಯಲ್ಲಿ ’ಸ್ನೇಹ ಸೇತು’ ಅನ್ನೋ ಒಂದು ಅಂಕಣ ಬರ್ತಾ ಇತ್ತು .ಅದರಲ್ಲಿ ಒಬ್ಬಳ ಹೆಸರು ,ವಿಳಾಸ ಸಿಕ್ಕಿ ಅವಳಿಗೆ ಪತ್ರ ಬರೆದಿದ್ದೆ.
ಅವಳೂ ಅದಿಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ಲು. ಹೀಗೆ ಪ್ರಾರಂಭವಾಯಿತು ನಮ್ಮ ಸ್ನೇಹ.ಪತ್ರ ಬರೀತಾ ಬರೀತಾ ತುಂಬಾನೆ ಹತ್ತಿರವಾಗಿ ಬಿಟ್ಟಿದ್ವಿ. ನಮ್ಮಿಬ್ಬರ ಅಭಿರುಚಿಗಳೂ ಸುಮಾರಾಗಿ ಒಂದೆ ಆಗಿದ್ವು!
ನನಗೆ ಯಂಡಮೂರಿ ,ರವಿ ಬೆಳಗೆರೆ ಅಂದ್ರೆ ತುಂಬಾ ಇಷ್ಟ -ಹಾಗೇ ಅವಳ ಫೇವರೆಟ್ ಕೂಡಾ!
ಆದ್ರೆ ನನಗೆ ಲವ್ ಲವಿಕೆ ಸ್ವಲ್ಪಾನೂ ಇಷ್ಟ ಆಗ್ತ ಇರ್ಲಿಲ್ಲ. ಆದ್ರೆ ಅವ್ಳಿಗೆ ಅದಂದ್ರೆ ಪ್ರಾಣ.
ಯಾರೋ ಯಾರಿಗೋ ಬರೆದಿರೊ ಪ್ರೇಮಪತ್ರ ಓದೋದು ಲವ್ ಲವಿಕೆ ಓದೋದಂದ್ರೆ ಅನ್ನೋ ಭಾವನೆ ನನ್ನಲ್ಲಿತ್ತು.ಅದೂ ಅಲ್ದೆ ಅದರಲ್ಲಿ ಇರ್ತಾ ಇದ್ದ ಕೆಲವು ಹಿಂದಿ ಹಾಡುಗಳು ನನ್ನ ಮನಸ್ಸಿಗೆ ಅಷ್ಟೊಂದು ಹಿಡಿಸುತ್ತಿರಲಿಲ್ಲ.
ನಾನು ಅವಳಿಗೆ ಪುಟಗಟ್ಟಲೆ ಪತ್ರ ಬರೀತಾ ಇದ್ದೆ .32 A4 size ನ ಪುಟಗಳು ತುಂಬಿಸಿದ್ದೂ ಉಂಟು ಒಂದೊಂದು ಸಲ.

’ನಿನ್ನ ಪತ್ರ ಓದ್ತಾ ಇದ್ರೆ ನೀನೆ ಮುಂದೆ ಕೂತು ಏನೊ ಹೇಳ್ತಾ ಇರೋ ಹಾಗೆ ಅನ್ಸುತ್ತೋ ’ ಅಂತ ಅವಳು ಹೇಳಿದಾಗ ತುಂಬಾನೆ ಖುಷಿ ಆಗ್ತಾ ಇತ್ತು.

ಆದ್ರೆ ಒಂದೇ ಬೇಜಾರಂದ್ರೆ ಅವಳು ನನಗೆ ಕೇವಲ ಮೂರು ಪುಟದ inland letter ನಲ್ಲಿ ಬರೀತಾ ಇದ್ಲು! ಅವಳೂ ತುಂಬಾ ಬರೀಬೇಕು ,ನಾನೂ ಅದನ್ನು ಓದ್ಬೇಕು ಅನ್ನೊ ಆಸೆ ತುಂಬಾನೆ ಇತ್ತು ನನಗೆ. ಆದ್ರೆ ಪಾಪ ಅವಳು ಪರಾವಲಂಬಿ ,20 Rs stamp ಹಾಕೋ ಅಷ್ಟು ಸಾಮರ್ಥ್ಯ ಇರಲಿಲ್ಲ. ಆದ್ರೂ ಚಿಕ್ಕದಾಗಿ ಚೊಕ್ಕದಾಗಿ ಬರೀತಾ ಇದ್ಲು.
ಒಂದು ಪತ್ರದಲ್ಲಿ ನಾನು ಯಂಡಮೂರಿಯ ಕಾದಂಬರಿಯ ಒಂದು sentence ಕದ್ದು ಹಾಗೆ ಬರೆದಿದ್ದೆ.
"ನನ್ನ ಜೀವನ ಅನ್ನೋದು ಈರುಳ್ಳಿಯ ಹಾಗೆ ,ಸಿಪ್ಪೆ ಸುಲೀತಾ ಹೋದಂತೆ ಖಾಲಿ ಖಾಲಿ ,ಅಮೇಲೆ ಏನೂ ಉಳಿಯೋದಿಲ್ಲ " ಅಂತ ,ಅದಿಕ್ಕೆ ಅವಳು " ಉಳಿಯೊದು ಓಂದಿದೆ ಸಂದೀಪ್ ,ಅದು ಕಣ್ಣೀರು !!" ಅಂತ reply ಮಾಡಿದ್ಲು..
ಆ ದಿನ ತುಂಬಾನೆ impress ಆಗಿದ್ದೆ ಅವಳ ಮಾತು ಕೇಳಿ.
ತುಂಬಾ ಉತ್ಸುಕತೆಯಿಂದ ಕಾಯ್ತಾ ಇದ್ದೆ ಅವಳ ಪತ್ರಕ್ಕೆ . ಕೆಲವೊಮ್ಮೆ ನಾನೇ ಪೋಸ್ಟ್ ಆಫೀಸಿಗೆ ಹೋಗಿ ಪೋಸ್ಟ್ ಮ್ಯಾನ್ ತಲೆ ತಿನ್ತಾ ಇದ್ದಿದ್ದೂ ಉಂಟು!

ಕೊನೆಗೊಂದು ದಿನ ಪತ್ರ ಬರೆಯೋದೆ ನಿಲ್ಲಿಸಿ ಬಿಟ್ಲು ಅವಳು ,ಮನೆಯವರ ತಕರಾರಿನಿಂದ.
ತುಂಬಾನೆ miss ಮಾಡ್ತಾ ಇದ್ದೆ ಅವಳ ಪತ್ರಗಳನ್ನ.ಆದ್ರೆ ಕಾಲ ಕಳೆದಂತೆ ಎಲ್ಲಾ ಸರಿ ಹೋಯ್ತು.

ಅಮೇಲೆ ನಾನು ನನ್ನ ಪಾಡಿಗೆ ಓದು ಮುಗಿಸಿ ಕೆಲಸಕ್ಕೆ ಸೇರ್ಕೊಂಡೆ. ಆಫೀಸ್ ನಲ್ಲಿ ಇಂಟರ್ ನೆಟ್ ,ಈ-ಮೇಲ್, ಚಾಟ್ ನಂತ ಹೊಸ ಜಗತ್ತಿನ ಅನಾವರಣವಾಯ್ತು.
ಹಾಗೇ ಯಾಹೂ ಗ್ರೂಪ್ನಲ್ಲಿ ಗೆಳತಿಯೊಬ್ಬಳ ಪರಿಚಯವಾಯ್ತು. ಗಂಟೆಗಟ್ಟಲೆ chat ಮಾಡ್ತಾ ಇದ್ವಿ ನಾವು.
ಯಾಹೂ ಮೆಸೆಂಜರ್ ನಲ್ಲಿ ಅವಳು ಆನ್ ಲೈನ್ ಇದ್ದಾಳೆ ಅಂತ ಗೊತ್ತಾದ ಕೂಡಲೆ ಖುಷಿ ಆಗ್ತಾ ಇತ್ತು. ಆ ಹಳದಿ ಬಣ್ಣದ ನಗುಮುಖದ symbol (onile indication ) ನೋಡಿದ ತಕ್ಷಣ ಏನೋ ಒಂಥರಾ ಆನಂದ.

mail inbox ನಲ್ಲಿ ಅವಳ ಹೆಸರಿನ e-mail ನೋಡಿದಾಕ್ಷಣ ,ಹಿಂದೆ ಪೋಸ್ಟ್ ಮ್ಯಾನ್ ನನ್ನ ಕೈಯಲ್ಲಿ ’ಅವಳ’ ಪತ್ರ ಕೊಟ್ಟಾಕ್ಷಣ ಎಷ್ಟು ಖುಷಿ ಆಗ್ತಾ ಇತ್ತೋ ಅಷ್ಟೇ ಖುಷಿ ಆಗ್ತಿತ್ತು.
ಈ-ಮೇಲ್ ನಲ್ಲಿ ಅವಳು ಚಿಕ್ಕ ಮಕ್ಕಳ ಹಾಗೆ ಚಿತ್ರ ವಿಚಿತ್ರ fontಗಳು ,ಬಗೆ ಬಗೆಯ smileyಗಳನ್ನು ಹಾಕಿ ಬರೆದ mail ನೋಡಿ ತುಂಬಾ ಖುಷಿ ಆಗ್ತಾ ಇತ್ತು.

ಯಾಕೋ ದೇವರ ದಯೆಯಿಂದ ಪೋಸ್ಟ್ ನಿಂದ ಈ-ಮೇಲ್ ಗೆ transition ನನಗೇನೂ ಕಷ್ಟ ಅನ್ನಿಸಿಲ್ಲ.
ಬದಲಾಗಿ ಅವಳು ಆ ಕಡೆ ಕೂತು send ಬಟನ್ ಒತ್ತಿದ ತಕ್ಷಣ ಈ ಕಡೆ inbox ನಲ್ಲಿ ಮೇಲ್ ಬಂದು ಬೀಳುತ್ತಿದ್ದ ಪರಿ ಕಂಡು -"ಛೇ ಈ e-mail ಸೌಲಭ್ಯ ನನ್ನ ಹಳೇ ಗೆಳತಿಗೂ ಇದ್ದಿದ್ದ್ರೆ ಎಷ್ಟು ಚೆನ್ನಾಗಿರ್ತಾ ಇತ್ತಲ್ವಾ?!" ಅನ್ನೋ ಕೊರಗು ಉಂಟಾಗ್ತಾ ಇತ್ತು.

ಪತ್ರ ಹಾಗೂ e-mail ಈ ಎರಡೂ ಮಾಧ್ಯಮಗಳ ಸುಂದರ ಅನುಭೂತಿ ನನಗೆ ಸಿಕ್ಕಿದ್ದಕ್ಕೆ ತುಂಬಾ ಲಕ್ಕಿ ಅನ್ನಿಸ್ತಾ ಇದೆ .ಹಾಗೇ ನನ್ನ generation ಕೂಡಾ !




Thursday, July 31, 2008

ಗುರುವಂದನೆ






ನನ್ನ ಬ್ಲಾಗಿಗೆ ಮೊದಲ ಪ್ರತಿಕ್ರಿಯೆ ಬಂದಿದ್ದು ಒಬ್ಬ ಲೇಖಕಿ / ಕವಯತ್ರಿ ಯಿಂದ !!
ತೇಜಸ್ವಿನಿ ಹೆಗಡೆಯವರು ನನ್ನ ಬ್ಲಾಗಿಗೆ ಅದರಲ್ಲೂ ನಾನು ಟೀಚರ್ ಗಳಿಗೆ ನಮನ ಸಲ್ಲಿಸಿದ ಬಗೆಗೆ ಅಬಿನಂದನೆ ಸಲ್ಲಿಸಿದ್ದಾರೆ.
ನಮಗೆ ನಿಜ ಜೀವನದಲ್ಲಂತೂ ಗುರುವಂದನೆ ಸಲ್ಲಿಸುವ ಭಾಗ್ಯ ಸಿಗೋದು ತುಂಬಾ ಕಮ್ಮಿ.
ಕೊನೇ ಪಕ್ಷ ಈ ರೀತಿಯಾದರೂ ಗುರುಗಳನ್ನು ನೆನೆಸುವ ಭಾಗ್ಯ ಸಿಕ್ಕಿರೋದು ನನ್ನ ಪುಣ್ಯ.
ನನಗೆ ಚಿಕ್ಕಂದಿನಲ್ಲಿ ಗುರುಗಳ ಬಗ್ಗೆ ಅಷ್ಟೇನೂ ಗೌರವಯುತ ಭಾವನೆ ಇರಲಿಲ್ಲ. ಇದ್ರೂ ಅದು ಕೇವಲ ಭಯದಿಂದಾಗಿತ್ತು!’ಗುರು ಬ್ರಹ್ಮ ಗುರು ವಿಷ್ಣು ’ ಸ್ತೋತ್ರಗಳೂ ಅಷ್ಟೊಂದು ನಾಟುತ್ತಿರಲಿಲ್ಲ. ಟೀಚರ್ ಗಳಿಗೆ ಸಂಬಳ ಕೊಡ್ತಾರೆ ಅದಿಕ್ಕೆ ಅವರು ಪಾಠ ಮಾಡ್ತಾರೆ ಅದರಲ್ಲೇನು ವಿಶೇಷ ಅನ್ನೊ ಉಡಾಪೆ ಮಾತನ್ನೂ ಆಡ್ತಾ ಇದ್ವಿ ನಾವೆಲ್ಲ ಸ್ನೇಹಿತರು.
ಆದ್ರೆ ಈಗಿಗ ಟೀಚರ್ ಗಳು ತುಂಬಾ ನೆನಪಾಗ್ತಾರೆ.
ಈ ಉಗ್ರಗಾಮಿಗಳಿಗೂ ನನಗೆ ಸಿಕ್ಕಿರೋ ಹಾಗೆ , ಒಳ್ಳೆಯ ಟೀಚರ್ ಗಳು ಸಿಕ್ಕಿದ್ರೆ ಎಷ್ಟು ಚೆನ್ನಾಗಿರ್ತಾ ಇತ್ತಲ್ವ ? ಅಂತಾನೂ ಅನ್ನಿಸುತ್ತೆ.
ಚಿಕ್ಕವರಿರ್ಬೇಕಾದ್ರೆ ಟೀಚರ್ ಗಳು ಕಲಿಸಿರೋ ಒಂದೊಂದು ವಿಷಯಾನೂ ಹೇಗೆ ಉಪಯೊಗಕ್ಕೆ ಬೀಳ್ತಾವೆ ಅಲ್ವ??
ನಮ್ಮೆಲ್ಲರ ಜೀವನದಲ್ಲೂ ಬಾಲ್ಯದ ಘಟನೆಗಳು ಎಷ್ಟು ಪ್ರಭಾವ ಬೀರಿರುತ್ತವೆ. ಬಹುಶ: ಅದಿಕ್ಕೆ ಇರ್ಬೇಕು ’ಮೈ ಆಟೊಗ್ರಾಫ್ ’ ಚಿತ್ರ ಆ ಪರಿ ಹಿಟ್ ಆಗಿದ್ದು.

ಎಷ್ಟೊಂದು ಹೊಡೀತಾ ಇದ್ರು ಮೇಷ್ಟ್ರು ,ಕೆಲವೊಮ್ಮೆ ಬೆಂಚ್ ಮೇಲೆ ಕೂರೋಕೆ ಆಗ್ತಾ ಇರ್ಲಿಲ್ಲ ಏಟು ತಿಂದ ಮೇಲೆ.ಬೇಜಾರಂದ್ರೆ ನಾವು ತಂದುಕೊಟ್ಟ ಬೆತ್ತದಿಂದಲೇ ನಮಗೆ ಹೊಡೀತ ಇದ್ರು.
"ಸಂದೀಪ ನಾಳೆ ನನಗೆ ಒಳ್ಳೆಯದೊಂದು ಬೆತ್ತ ತಂದುಕೊಡ್ಬೇಕು " ಅಂತ ಅಪ್ಪಣೆಯಾಗಿದ್ದೆ ತಡ, ಹುಡುಕಾಟ ಶುರು.
ರಸ್ತೆ ಬದಿಯಲ್ಲಿರೋ ಗಾಳಿಮರ ಹತ್ತಿ ಚೆನ್ನಾಗಿರೋ ಬೆತ್ತ ಕಡಿದು ಅದನ್ನು ಚೂರಿಯಿಂದ ಪಾಲಿಷ್ ಮಾಡಿ ಟೀಚರ್ ಗೆ ಕೊಟ್ರೆ ಫ್ರೆಂಡ್ಸ್ ಎಲ್ಲ ಬೈತಾ ಇದ್ರು "ಮಗನೇ ಯಾಕೋ ಇಷ್ಟು ಒಳ್ಳೇ ಬೆತ್ತ ತಂದುಕೊಟ್ಟೆ " ಅಂತ.
ಆದ್ರೆ ನನಗೆ ಏನೋ ಖುಷಿ ಟೀಚರ್ thanks ಅಂತ ಹೊಗಳಿದಾಗ.
ಆದ್ರೆ ಯಾವಾಗ ಅದೇ ಬೆತ್ತದಿಂದ ನನಗೂ ಏಟು ಬೀಳ್ತಾ ಇತ್ತೊ ಆವಾಗ ಅನ್ನಿಸ್ತಾ ಇತ್ತು ಇಷ್ಟು ಒಳ್ಳೆಯ ಬೆತ್ತ ಕೊಡ್ಬಾರ್ದಿತ್ತು ಅಂತ!!
’ನಾನೆ ಟೀಚರ್ ಬೆತ್ತ ತಂದುಕೊಟ್ಟಿದ್ದು ಸ್ವಲ್ಪ ರಿಯಾಯಿತಿ ಕೊಡಿ ’ ಅಂತ ಕೇಳೋಣ ಅಂತ ಅನ್ನಿಸ್ತಾ ಇತ್ತು . ಆದ್ರೆ ಧೈರ್ಯ ಬರ್ತಾ ಇರ್ಲಿಲ್ಲ.

ಇಂತ ಟೀಚರ್ ಗಳೇ ಅಲ್ವಾ ನಾವು ತಪ್ಪು ಮಾಡಿದಾಗ ನಮ್ಮನ್ನೆಲ್ಲ ಹೊಡೆದು ಸರಿ ಮಾಡಿದ್ದು.

ಆದ್ರೆ ಈಗ ಮಕ್ಕಳಿಗೆ ಹೊಡೆತ ತಡ್ಕೊಳ್ಳೋ ಶಕ್ತಿನೂ ಇಲ್ಲ ! ಟೀಚರ್ ಗೆ ಹೊಡಿಯೊ ಧೈರ್ಯಾನೂ ಇಲ್ಲ !!
ಫೋಟೊ ಕೃಪೆ :www.wcu.edu

Wednesday, July 30, 2008

ಸ್ನೇಹಾ ನಾ ಪ್ರೀತಿ ನಾ ???



’ಜಾನೆ ತೂ ಯಾ ಜಾನೆ ನಾ ’ ನೋಡಿದೆ. ಇಷ್ಟ ಆಯ್ತು!

ಕಥೆ ಏನಪ್ಪಾ ಅಂದ್ರೆ ಸ್ನೇಹಾನಾ ಪ್ರೀತಿನಾ ಅಂತ ಗೊತ್ತಾಗದಿರೋ ಮಾನಸಿಕ ತೊಳಲಾಟ..

ಎಲ್ಲರ ಬದುಕಿನಲ್ಲೂ ಇಂಥ ಒಂದು ಸನ್ನಿವೇಶ ಬಂದೇ ಬರುತ್ತೆ ಅಂತ ಕಾಣ್ಸುತ್ತೆ.

ಇದನ್ನು handle ಮಾಡೋದು ಅಷ್ಟೇ ಕಷ್ಟ. ಸ್ವಲ್ಪ ಎಡವಟ್ಟಾದ್ರೂ ಅತ್ತ ಪ್ರೀತಿನೂ ಇಲ್ಲ ಇತ್ತ ಸ್ನೇಹಾನೂ ಇಲ್ಲ.


ನ ಘರ್ ಕಾ ನಾ ಘಾಟ್ ಕಾ ಅಂತಾರಲ್ಲ ಆ ಪರಿಸ್ಥಿತಿ.

ನಾವು ಹುಡುಗರೇ ಹೀಗಾ? ಹುಡುಗಿಯರು ಫ್ರೆಂಡ್ ಶಿಪ್ಪಲ್ಲಿ ಎರಡು ಒಳ್ಳೆಯ ಮಾತನ್ನಾಡಿದ್ರೆ ಅದನ್ನೇ ಪ್ರೀತಿ ಅಂದ್ಕೋತೀವ??

ಅಥವಾ ಹುಡುಗಿಯರೇ ಆ ರೀತಿ ಭಾವನೆ ಉಂಟು ಮಾಡ್ತಾರಾ?? ಹೇಳೋದು ಸ್ವಲ್ಪ ಕಷ್ಟ !

ಅಷ್ಟಕ್ಕೂ ಪ್ರೀತಿ ಅಂತಾನೆ ಅಂದ್ಕೋಳ್ಳೋಣ ,ಅದನ್ನು ಹೇಳಿದ್ರೆ ಹುಡುಗಿಯರು ಯಾಕೆ ಸಿಟ್ಟು ಮಾಡ್ಕೋತಾರೆ??

"ಛೇ ನಿನ್ನನ್ನು ’ಆ’ ದೃಷ್ಟಿಯಿಂದ ನೋಡೆ ಇಲ್ಲ ಕಣೋ " ಅಂತ ಯಾಕೆ ಸಿಟ್ಟಾಗ್ತಾರೆ? ನಾವು ಅವರನ್ನು ’ಆ ದೃಷ್ಟಿಯಿಂದ ’ ನೋಡಿದ್ದೇನಾದ್ರೂ ತಪ್ಪಾ??

ಇಷ್ಟೆ ಆದ್ರೆ ಪರ್ವಾಗಿಲ್ಲ "ನೀನು ಇಷ್ಟು ಕಚಡಾ ಅಂತ ಗೊತ್ತಿರ್ಲಿಲ್ಲ " ಅಂತ ಬಯ್ಯೋ ಹುಡುಗಿಯರೂ ಇದ್ದಾರಲ್ವ? ಅವ್ರಿಗೇನನ್ನೋದು!!!

ಹಾಗೆ ನೋಡಿದ್ರೆ ಎಲ್ಲಾ ಸಂಬಂಧಗಳೂ ತುಂಬಾ ಕ್ಲಿಷ್ಟಕರ. Handle with care ಅಂತ ಎಲ್ಲಾ ಸಂಬಂಧಗಳೂ ಟ್ಯಾಗ್ ಹಾಕಿಕೊಂಡೇ ಇರುತ್ತವೆ,ನಾವು ಸರಿಯಾಗಿ ಗಮನಿಸಿರುದಿಲ್ಲ ಅಷ್ಟೆ!

’ಜಾನೆ ತೂ ’ ನಲ್ಲಿ ಇದನ್ನು ಚೆನ್ನಾಗಿ ತೊರಿಸಿದ್ದಾರೆ. ಅದಿತಿ ಪಾತ್ರ ನ ಜೆನೆಲಿಯ ತುಂಬಾ ಚೆನ್ನಾಗಿ ನಿಭಾಯಿಸಿದ್ದಾರೆ.ಆದ್ರೆ ಬೊಮ್ಮರಿಲ್ಲು ನಷ್ಟು ಚೆನ್ನಾಗಿ ಕಾಣ್ಸಲ್ಲ ಜೆನೆಲಿಯಾ :( ..

ಒಂದು ಹುಡುಗ - ಹುಡುಗಿ ’ಬರೀ’ ಫ್ರೆಂಡ್ಸ್ ಆಗಿರೋದು ಎಷ್ಟು ಕಷ್ಟ ಅಲ್ವಾ?? ನೋಡೋರ ಕಣ್ಣಿಗೆ ಯಾವತ್ತೂ ಅವರು ಲವ್ವರ್ಸ್ ಥರಾನೆ ಕಾಣಿಸ್ತಾರೆ ಆ ವಿಶ್ಯ ಬಿಡಿ.

ಒಂದೆ ಒಂದು ಖುಶಿ ಅಂದ್ರೆ ಕಾಲ ಬದಲಾಗ್ತಾ ಇದೆ ,ಜನರ ದೃಷ್ಟಿಕೋನ ಕೂಡ ಬದಲಾಗಿದೆ. ನಾವು ಬರೀ ಫ್ರೆಂಡ್ಸ್ ಅಂದ್ರೆ ನಂಬೋರು ಸಿಕ್ತಾರೆ! So sweet !

Tuesday, July 29, 2008

ನನಗೇಕೆ ಕವಿತೆಗಳು ಅರ್ಥವಾಗುವುದಿಲ್ಲ

’ನನಗೇಕೆ ಕವಿತೆಗಳು ಅರ್ಥವಾಗುವುದಿಲ್ಲ ?’- ಇಂಥ ಪ್ರಶ್ನೆಯೊಂದು ತುಂಬಾ ವರ್ಷಗಳಿಂದ ನನಗೆ ಕಾಡುತ್ತಾ ಬಂದಿದೆ. ಬಹುತೇಕ ಎಲ್ಲ ಟ್ಯಾಬ್ಲಾಯ್ಡ್ ಪತ್ರಿಕೆ, ಮಾಸ ಪತ್ರಿಕೆ ಗಳಲ್ಲಿ ಕವಿತೆಗಳು ಬಂದೇ ಬರುತ್ತವೆ.ಅದೂ ಅಲ್ದೆ ಇತ್ತೀಚೆಗೆ ಎಲ್ಲಾ ಕನ್ನಡ ಬ್ಲಾಗಿಗರೂ ತಮ್ಮ ಬ್ಲಾಗಿನಲ್ಲಿ ಸ್ವ ರಚಿತ ಕವಿತೆಗಳು ಹಾಕ್ತಿದ್ದಾರೆ.ಆದ್ರೆ ನನ್ಗೆ ಕವಿತೆಗಳು ಬರೆಯೋದು ಬಿಡಿ ,ಯಾರೊ ಬರೆದಿರೋ ಕವಿತೆಗಳನ್ನು ಓದಿ ಆನಂದ ಪಡೊ ಭಾಗ್ಯಾನೂ ಇಲ್ವೆ??ನನ್ಗೆ ಕವಿತೆಗಳಂದ್ರೆ ’ಮಾಲ್ಗುಡಿ ಡೇಸ್’ ಸೀರಿಯಲ್ ಥರ್!ಚಿಕ್ಕವನಿರ್ಬೇಕಾದ್ರೆ ತುಂಬಾ interest ನಿಂದ ಆ ಸೀರಿಯಲ್ ನೋಡೊಕೆ ಕೂತ್ಕೋತ ಇದ್ದೆ ,ಆದ್ರೆ ಅದರ ending ಎಷ್ಟು ತಲೆ ಕೆಡಿಸ್ಕೊಂಡ್ರೂ ಅರ್ಥ ಆಗ್ತಾ ಇರ್ಲಿಲ್ಲ..ಅಷ್ಟಕ್ಕೂ ಅಂಥಾ ಸೀರಿಯಲ್ ,ಕಥೆಗಳಿಗೆ ಅಂತ್ಯ ಅನ್ನೋದೆ ಇಲ್ಲ ಅಂತ ಕಾಣ್ಸುತ್ತೆ!!ಎಲ್ಲಾ ಅವರವರ ಭಾವಕ್ಕೆ ,ಅವರವರ ಭಕುತಿಗೆ.ನಾನು ಈ ವರೆಗೆ ಖರೀಸಿದಿರೋ ಒಂದೇ ಒಂದು ಕವನ ಸಂಕಲನ ಅಂದ್ರೆ ’ಮಾತು ಚಿಟ್ಟೆ ’- ಸಂಧ್ಯಾದೇವಿಯವರದ್ದು.ಪ್ರಜಾವಾಣಿಯಲ್ಲಿ ಬಂದಿರೋ review ನೋಡಿ ಅದನ್ನು ಖರೀದಿಸಿದ್ದೆ ಅಂಕಿತ ಪ್ರಕಾಶನಕ್ಕೆ ಹೋಗಿ.ಎಷ್ಟು ತಲೆ ಕೆರ್ಕೋಂಡ್ರೂ ಟೈಟಲ್ಲೇ ಅರ್ಥ ಆಗಿಲ್ಲ ನನಗೆ ,ಇನ್ನು ಕವಿತೆ ಹೇಗೆ ತಾನೆ ಅರ್ಥ ಆಗುತ್ತೆ ಅಲ್ವಾ??ಆದ್ರೆ ಅಂಕಿತ ಪ್ರಕಾಶನದವ್ರು ಪುಸ್ತಕದ ಜೊತೆ ಕ್ಯಾಲೆಂಡರ್ ಒಂದನ್ನು ಉಚಿತವಾಗಿ ಕೊಟ್ಟಿದ್ದೆ ನನಗೆ ಸಮಾಧಾನ.ಕವಿತೆಗಳು ಅರ್ಥವಾಗೋ ಅಂಥ ಸ್ನೇಹಿತರು ಇದ್ದಿದ್ರೆ ಅವರಿಗಾದರೋ gift ಕೊಡಬಹುದಿತ್ತು,ಆದ್ರೆ ಅಂಥವರ್ಯಾರೂ ಇಲ್ಲ.ಕೆಲವೊಂದು ವಿಷಯಗಳೇ ಹೀಗೆ... ಅವು ತಾನಾಗೇ ಬರಬೇಕು ..ಯಾರೂ ಹೇಳಿಕೊಟ್ಟು ಬರಲು ಸಾಧ್ಯವೇ ಇಲ್ಲ.ನನಗೆ ಜಗಜೀತ್ ಸಿಂಗ್ ಗಜಲ್ ಅಂದ್ರೆ ಇಷ್ಟ ಆದ್ರೆ ನನ್ನ ಫ್ರೆಂಡ್ ಗೆ ಲಿಂಕಿನ್ ಪಾರ್ಕ್ ಅಂದ್ರೆ ಪ್ರಾಣ..ಅದ್ಯಾಕೊ ಹಂದಿ ಓಡಿಸೋ ಸಂಗೀತ ಕೇಳ್ತೀಯಾ? ಜಗಜೀತ್ ಸಿಂಗ್ ನ ಕೇಳೊ ಅಂತ ಹೇಳೋಣ ಅಂತ ಅನ್ಸುತ್ತೆ ಆದ್ರೆ ಹೇಳಲ್ಲ..ನನಗೆ ಗೊತ್ತು ಇವತ್ತು ಅವನಿಗೆ ನಾನು ಆ ರೀತಿ ಹೇಳಿದ್ರೆ ನಾಳೆ ಇನ್ಯಾರೋ ಬಂದು ನನಗೆ ಶಾಸ್ತ್ರೀಯ ಸಂಗೀತ ಕೇಳು ಅಂತ force ಮಾಡ್ತಾರೆ !ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಅಲ್ವೆ?

Monday, July 28, 2008

ಕಪಾಟಿನೊಳಗೆ ಗೂಗಲ್ ಸರ್ಚ್



ನಮ್ಮೂರಲ್ಲೊಂದು ’ದೊಡ್ಡ’ ಲೈಬ್ರರಿ .ಆದ್ರೆ ಅಲ್ಲಿ ಇದ್ದಿದ್ದು ಒಂದೇ ಒಂದು ಗೊದ್ರೇಜ್ ಕಪಾಟು!ಇದೇನಿದು ’ದೊಡ್ಡ’ ಲೈಬ್ರರಿಯಲ್ಲಿ ಹೇಗೆ ಒಂದೇ ಕಪಾಟು ಅಂತೀರಾ? ಅದು actually ಒಂದು ಸಭಾಭವನ ;ಆದ್ರೆ ಒಂದು ಮೂಲೆನಲ್ಲಿ ಲೈಬ್ರೆರಿಗೆ ಅವಕಾಶ ಮಾಡಿ ಕೊಟ್ಟಿದ್ರು.ಇರೋ ಒಂದು ಕಪಾಟಿನ ತುಂಬಾ ಪುಸ್ತಕಗಳು.ರಾಮಾಯಣ ದರ್ಶನಂ,ಮೂಕಜ್ಜಿಯ ಕನಸುಗಳು ಇಂದ ಹಿಡಿದು ಮೋಟಾರ್ ಸೈಕಲ್ ರಿಪೇರಿ ಮಾಡೊದು ಹೇಗೆ? ಅನ್ನೊ ಬಗ್ಗೆ ಎಲ್ಲಾ ಬಗೆಯ ಪುಸ್ತಕಗಳು ಅಲ್ಲಿದ್ವು.ಹುಡುಕೊದಿಕ್ಕೆ ತಾಳ್ಮೆ ಇರ್ಬೇಕು ಅಷ್ಟೆ!ಯಾಕಂದ್ರೆ ಇದ್ದಿದ್ದು ಒಂದೇ ಕಪಾಟಾದ್ದರಿಂದ ಎಲ್ಲಾ ಪುಸ್ತಕಗಳನ್ನು ಅಡ್ಡಾದಿಡ್ಡಿ ತುಂಬಿಡೊ ಅನಿವಾರ್ಯತೆ ಗ್ರಂಥಪಾಲಕಿಗೆ.ನನ್ನ ಓದುವ ಹುಚ್ಚಿಗೆ ನೀರೆರದಿದ್ದಿದ್ದೇ ಈ ಲೈಬ್ರೆರಿ.
ನನ್ನ ಅಕ್ಕ ಆಗ ಬಿ.ಎಸ್.ಸಿ ಓದ್ತಾ ಇದ್ಲು,ಅವಳಿಗೆ ಕಾದಂಬರಿ ಓದೋ ಹುಚ್ಚು .ಆದ್ರೆ ಕಾಲೇಜ್ ಓದೂ ಇರ್ತಿದ್ದರಿಂದ ನನ್ಗೆ ಲೈಬ್ರೇರಿಗೆ ಹೊಗಿ ಅಕೆಗೆ ಬೇಕಾದ ಪುಸ್ತಕ ತರೋ ಕೆಲ್ಸ.ಮೊದ ಮೊದ್ಲು ಲೈಬ್ರೇರಿಯನ್ ನನಗೋಸ್ಕರ ಪುಸ್ತಕ ಹುಡುಕಿ ಕೊಡ್ತಾ ಇದ್ರು,ಆದ್ರೆ ಯಾವಾಗ ನಾನು ಎರಡು ದಿನಕ್ಕೊಮ್ಮೆ ವಕ್ಕರಿಸೊದಕ್ಕೆ ಶುರು ಮಾಡಿದ್ನೋ ಅವ್ರೂ ಪಾಪ ಅವ್ರ ಅಸಹಾಯಕತೆ ಹೇಳ್ಕೊಂಡ್ರು.ಆವಾಗಿಂದ ಪುಸ್ತಕ ಹುಡುಕೋ ಕೆಲ್ಸ ನನ್ನ ಮೇಲೇ ಬಿತ್ತು.ಅಕ್ಕ ಕೂಡಾ ಒಂದು ದಿನ ಸುದರ್ಶನ ದೇಸಾಯಿ ’ಹಳದಿ ಚೇಳು ’ ಕೇಳಿದ್ರೆ ಮತ್ತೊಂದು ದಿನ ಯಂಡಮೂರಿ ’ತುಲಸಿ ದಳ’ ಕೇಳ್ತಾ ಇದ್ಲು!.ಅದಾದ್ಮೇಲೆ ಷರ್ಲಾಕ್ ಹೋಮ್ಸ್ ನ ಪತ್ತೇದಾರಿ ಕಾದಂಬರಿ.ಒಂದು ಪುಸ್ತಕ ಹುಡುಕ್ಬೇಕಾದ್ರೆ ಕಪಾಟಿನಲ್ಲಿರೋ ೯೦೦ ಪುಸ್ತಕಗಳನ್ನೂ ಜಾಲಾಡ್ಬೆಕು! ಒಂದೇ ಒಂದು ಸಂತೋಷದ ಸುದ್ದಿ ಅಂದ್ರೆ ಆ ಪುಸ್ತಕ ಇದೆಯೊ ಇಲ್ವೋ ಅನ್ನೋದನ್ನು ಮಾತ್ರ ಅಲ್ಲಿರೋ ಒಂದು ದಪ್ಪ ಪುಸ್ತಕದಲ್ಲಿ ಹುಡುಕ್ಬಹುದಾಗಿತ್ತು!ಪುಸ್ತಕ ಇದೆ ಅಂತ ಗೊತ್ತಾದ್ಮೇಲೆ ಯಥಾ ಪ್ರಕಾರ ಕಪಾಟಿನೊಳಗಡೆ ಗೂಗಲ್ ಸರ್ಚ್!!ಹೀಗೆ ಅಕ್ಕನಿಗೋಸ್ಕರ ಪುಸ್ತಕ ತರ್ತಾ ಇದ್ದೋನು, ಕ್ರಮೇಣ ನಾನೂ ಒದೋದಿಕ್ಕೆ ಶುರು ಹಚ್ಕೊಂಡೆ.ಆದ್ರೆ ಲೈಬ್ರೇರಿಯನ್ ಹೆಂಗಸಾದ್ದರಿಂದ ಎಲ್ಲಾ ಥರದ ಪುಸ್ತಕಗಳನ್ನು ತಗೊಳ್ಳೊದಿಕ್ಕೆ ನಂಗೆ ಮುಜುಗರ ಆಗ್ತಾ ಇತ್ತು . ಜೇಮ್ಸ್ ಹ್ಯಾಡ್ಲಿ ಚೇಸ್ ,ಕೌಂಡಿನ್ಯ ಅಂಥ ಪುಸ್ತಕ ಏನಾದ್ರೂ ತಗೊಂಡ್ರೆ ಲೈಬ್ರೇರಿಯನ್ ಜೊತೆ ಸದಾ ಟೈಮ್ ಪಾಸ್ ಮಾಡ್ತಾ ಇದ್ದ ಹುಡುಗಿಯರು ಮುಸಿ ಮುಸಿ ನಗ್ತಾ ಇದ್ರು.ನಾನಾಗ ಏಳನೇ ಕ್ಲಾಸ್ ಹುಡುಗ .ಬಹುಶಃ ಅವರ ಕಣ್ಣಿಗೆ ನಾನಿನ್ನೂ ’ಚಿಕ್ಕ ಹುಡುಗ’!ಹೀಗಾಗಿ ಅವ್ರ ಕೆಟ್ಟ ದೃಷ್ಟಿಯಿಂದ ಬಚಾವಾಗಲು ನಾನು ’ಅಂಥ ’ ಪುಸ್ತಕಳನ್ನು ಶರ್ಟ್ ಒಳಗೆ ಬಚ್ಚಿಟ್ಟುಕೊಂಡು ತಗೊಂಡು ಹೊಗೋಕೆ ಶುರು ಮಾಡಿದೆ.ಲೈಬ್ರೆರಿಯನ್ ಗೆ ಸಂಶಯ ಬರದ ಹಾಗೆ ಮಾಡಲು ಯಾವುದೋ ಕವನ ಸಂಕಲನ ತಗೊಂಡು ಹೊಗಿ ಎಂಟ್ರಿ ಮಾಡಿಸೋದು!ಹಾಗಂತ ನಾನು ಪುಸ್ತಕಗಳನ್ನು ಕದೀತಾ ಇರಲಿಲ್ಲ ; ಓದಿ ಆದ್ಮೇಲೆ ಹಾಗೇ ಮತ್ತೆ ಶರ್ಟ್ ಒಳಗೆ ಬಚ್ಚಿಟ್ಟುಕೊಂಡು ಹಾಗೇ ವಾಪಸ್ ತಂದಿಡ್ತಾ ಇದ್ದೆ!ನಾನು ಮೊದಲೇ ಹೇಳಿದ ಹಾಗೆ ಲೈಬ್ರೆರಿ ಇದ್ದಿದ್ದು ಒಂದು ಸಭಾಭವನದಲ್ಲಿ,ಹಾಗಾಗಿ ಮದುವೆ,ಮುಂಜಿಯಂಥ ಸಮಾರಂಭಗಳಿಗೆ ಅದನ್ನು ಬಾಡಿಗೆಗೆ ಕೊಡ್ತಾ ಇದ್ರು.ಹೀಗೆ ಮದುವೆ ಇದ್ದ ದಿನ ಲೈಬ್ರೆರಿ ತುಂಬಾ ಜನ.ಊಟಕ್ಕೆ ಎಲೆ ಹಾಕೋ ತನಕ ಹೇಗಾದ್ರೂ ಟೈಂ ಪಾಸ್ ಮಾಡ್ಬೇಕಲ್ಲ.ಹಾಗೆ ಸುಧಾ,ತರಂಗ ಗಳನ್ನು ಓದ್ತಾ ಕಾಲ ಕಳೀತಾ ಇದ್ರು ಮದುವೆಗೆ ಬಂದವ್ರು.ರಜಾ ದಿನಗಳಲ್ಲಂತೂ ದಿನಕ್ಕೆ ಎರಡು ಸಲ ಹೋಗ್ತಾ ಇದ್ದೆ ಲೈಬ್ರೆರಿಗೆ. 60-70 ಪೇಜುಗಳ ಪುಸ್ತಕ ಓದೋದಿಕ್ಕೆ ಎಷ್ಟು ಹೂತ್ತು ತಾನೇ ಬೇಕು?ಕೆಲವೊಂದು ದಿನಗಳಲ್ಲಂತೂ ಗೂಗಲ್ ಸರ್ಚ್ ನಲ್ಲಿ ಸಮಯ ಕಳೆದಿದ್ದೆ ಗೊತ್ತಾಗ್ತಿರ್ಲಿಲ್ಲ.ಆಕೆ ಬಂದು ’ದಯವಿಟ್ಟು ಬರ್ತೀರಾ ಸ್ವಾಮಿ ಬೀಗ ಹಾಕ್ಬೇಕು ’ ಅಂದಾಗ್ಲೆ ಎಚ್ಚರ ಆಗ್ತಾ ಇತ್ತು ನನಗೆ..ಸುಮಾರು 2 ವರ್ಷಗಳಲ್ಲಿ ಆ ಕಪಾಟಿನಲ್ಲಿರ್‍ಓ ಎಲ್ಲಾ ಒಳ್ಳೆ ಪುಸ್ತಕಗಳನ್ನು ನಾನು ಓದಿ ಅಗಿತ್ತು.ಕೊನೆ ಕೊನೆಗೆ ಲೈಬ್ರೆರಿಯನ್ನೇ ನನ್ನ ಹತ್ತಿರ ’ಈ ಪುಸ್ತಕ ಸ್ವಲ್ಪ ಹುಡುಕಿ ಕೊಡ್ತೀಯಾ ಪ್ಲೀಸ್ ? ’ ಅಂತ ಕೇಳೋ ಅಷ್ಟು expert ಆಗ್ಬಿಟ್ಟಿದ್ದೆ ನಾನು ಪುಸ್ತಕ ಹುಡುಕೋದ್ರಲ್ಲಿ.ಹೀಗಿರ್ಬೇಕಾದ್ರೆ ಸ್ವಲ್ಪ ದಿನ ಲೈಬ್ರೆರಿ ಬಾಗಿಲು ತೆರೆಯಲೇ ಇಲ್ಲ.ಎಲ್ಲೋ ಬೇರೆ ಊರಿಗೆ ಹೋಗಿರ್ಬೆಕು ಅವ್ರು ಅಂದ್ಕೊಂಡಿದ್ದೆ ನಾನು.ಆದ್ರೆ ಓಂದು ವಾರ ಆದ್ಮೇಲೆ ಗೊತ್ತಾಯ್ತು ಲೈಬ್ರೇರಿಯನ್ ಹೃದಯಾಘಾತವಾಗಿ ತೀರಿಕೊಂಡು ಬಿಟ್ಟಿದ್ದಾರೆ ಅಂತ.ಅದಾದ ಮೇಲೆ ಒಬ್ಬಳು ಸಣ್ಣ ವಯಸ್ಸಿನ ಹುಡುಗಿ ಲೈಬ್ರೇರಿಯನ್ ಆಗಿ ಬಂದ್ಲು.ಆದ್ರೆ ಅವಳಿಗೆ ಪುಸ್ತಕಗಳ ಬಗ್ಗೆ ಪ್ರೀತಿಯೆ ಇರಲಿಲ್ಲ.ಗೆಳತಿಯರ ಜೊತೆ ಹರಟೆ ಹೊಡೆದು ಸಾಯಂಕಾಲ ಹೊರಟು ಹೊಗ್ತಾ ಇದ್ಲು ಅವ್ಳು.ಕ್ರಮೇಣ ಪುಸ್ತಕಗಳೆಲ್ಲಾ ಗೆದ್ದಲು ಹಿಡಿಯೊದಕ್ಕೆ ಶುರು ಆದವು.ಕೆಲವು ತಿಂಗಳ ನಂತರ ಲೈಬ್ರೇರಿಯನ್ ಗೂ ಮದುವೆ ಆಗಿ ಹೊರಟು ಹೋದ್ಲು.
ಅದಾದ್ಮೇಲೆ ಲೈಬ್ರೇರಿ ಬಾಗಿಲು ತೆರೆಯಲೇ ಇಲ್ಲ.ಆದ್ರೆ ಅದೃಷ್ಟವಶಾತ್ ನಾನು ಹೈ ಸ್ಕೂಲ್ ಗೆ ಪಕ್ಕದಲ್ಲಿರೋ ಊರಿಗೆ ಸೇರಿದ್ರಿಂದ ಅಲ್ಲಿರೋ ದೊಡ್ಡ ಲೈಬ್ರೆರಿ ಮೆಂಬರ್ಶಿಪ್ ಮಾಡಿಸ್ಕೊಂಡೆ.
ಅದು ದೊಡ್ಡ ಲೈಬ್ರೆರಿ,ಸಾವಿರಾರು ಬುಕ್ಸ್ ,ಅದೂ ಅಲ್ದೆ ಕತೆ,ಕಾದಂಬರಿ,ಕವನ ಸಂಕಲನ,ಪ್ರಬಂಧ ಹೀಗೆ ಬೇರೆ ಬೇರೆ Rack ಗಳು. ಯಾವ ತರಹದ ಪುಸ್ತಕಗಳು ಬೇಕಾದ್ರೂ ಅಲ್ಲಿ ಲಭ್ಯ .ಒಳ್ಳೇ ಲೈಬ್ರೇರಿಯನ್ ,ಯಾವ ಬುಕ್ ಬಗ್ಗೆ ಕೇಳಿದ್ರೂ ಚಕ್ಕನೆ ಹೇಳ್ತಾ ಇದ್ರು ಎಲ್ಲಿದೆ ಅಂತ!
ಆದ್ರೆ ನನಗೆ ಕಪಾಟಿನೊಳಗೆ ಗೂಗಲ್ ಸರ್ಚ್ ಮಾಡೊ ಅವಕಾಶ ಮಾತ್ರ ಅಲ್ಲಿ ಸಿಗಲೇ ಇಲ್ಲ!!!

ನಿನ್ನ ನೆನಪು






’ನಿನ್ನ ನೆನಪು’- ಇದು ಒಂದು ಕನ್ನಡ ಆಲ್ಬಮ್ ಹೆಸರು.ಶೀರ್ಶಿಕೆ ಎಷ್ಟು ಚೆನ್ನಾಗಿದೆಯೋ ಹಾಡುಗಳೂ ಅಷ್ಟೆ ಚೆನ್ನಾಗಿವೆ.


ಈ ಆಲ್ಬಮ್ ನಲ್ಲಿ ನನಗೆ ತುಂಬಾ ಇಷ್ಟವಾದ ಹಾಡು ’ನಿನ್ನ ನೆನಪು’ ಹಾಗೂ ’ಮೌನ’ ಅನ್ನೋ ಹಾಡುಗಳು.ಉಳಿದ ಎಲ್ಲಾ ಹಾಡುಗಳೂ ಚೆನ್ನಾಗಿವೆ ಆದ್ರೆ ಈ ಎರಡು ಹಾಡುಗಳಿಗೆ ಸ್ವಲ್ಪ sad tone ಇದೆ.ಈ ಹಾಡು ಕೇಳಿ ಕೂಡಲೆ ನಮ್ಮ ಮೂಡ್ ಅನ್ನು ’ಕಳ್ಳ ಬೆಕ್ಕಿನಂತೆ’ ಅಥವಾ ’ಜಿಂಕೆ’ ಹಾಡಿಗೆ ಟ್ಯೂನ್ ಮಾಡೋದು ಸ್ವಲ್ಪ ಕಷ್ಟ.


ಆಲ್ಬಂನಲ್ಲಿ ಒಟ್ಟು ಎಂಟು ಹಾಡುಗಳಿವೆ.ಸಂಗೀತ ಸಂಯೋಜನೆ ಎಸ್.ಆರ್ ರಾಮಕೃಷ್ಣ ಅವರದ್ದು.


"ನೂರು ಜನಗಳ ನಡುವೆ ನಕ್ಕು ನಲಿದಾಡುತಿರೆ ಧುತ್ತನೆರಗುವ ದುಗುಡ ನಿನ್ನ ನೆನಪು " ಅನ್ನೋ ಸಾಲಂತೂ ನನಗೆ ತುಂಬಾನೆ ಇಷ್ಟ ಆಯ್ತು.




ಈ CD ಸಿಕ್ಕರೆ ಖಂಡಿತ ಕೇಳಿ . ಹೆಚ್ಚಿನ ವಿಷಯಗಳಿಗೆ ಈ ಕೊಂಡಿ ನೋಡಿ :








ತಾಜ್ ಮಹಲ್



ಬೆಂಗಳೂರಿನಲ್ಲೆಡೆ ಬಾಂಬ್ ಗಲಾಟೆ! ಆದ್ರೆ ’ತಾಜ್ ಮಹಲ್’ ನೋಡಲು ವೀರೇಶ್ ಚಿತ್ರ ಮಂದಿರಕ್ಕೆ ಹೋದ್ರೆ housefull!!
ನಾನೂ ನನ್ನ ಸ್ನೇಹಿತರು ’ಮೊಗ್ಗಿನ ಮನಸ್ಸು’ ಚಿತ್ರ ನೋಡಲು ಹೊರಟವರು,ಆದ್ರೆ ಟಿಕೆಟ್ ಸಿಗದ ಕಾರಣ ’ತಾಜ್ ಮಹಲ್’ ಗೆ ಹೋಗಬೇಕಾಯಿತು ಬಂತು.ಬಾಲ್ಕನಿ ಟಿಕೆಟ್ ಗಳು ಎಲ್ಲಾ ಖಾಲಿ.ಬ್ಲ್ಯಾಕ್ ನಲ್ಲಿ ೧೦೦ ರೂ ಗೆ ಮಾರ್ತಾ ಇದ್ರು ಥಿಯೇಟರ್ ನವರೇ.ನಾವು ೭ ಜನ ಇದ್ದಿದ್ರಿಂದ ಸೆಕಂಡ್ ಕ್ಲಾಸ್ ಗೆ ತೃಪ್ತಿ ಪಡಬೇಕಾಯಿತು.
ಮೊದಲಿಗೆ ರಾಷ್ಟ್ರ ಗೀತೆ ಮೊಳಗುವಾಗ ಜನ ಚಕ್ಕನೆ ಎದ್ದು ನಿಂತ ಪರಿ ಮಾತ್ರ ಮೆಚ್ಚಬೇಕಾದದ್ದೆ.ರಾಷ್ಟ್ರಗೀತೆ ಮುಗಿದ ನಂತರ ’ಬೋಲೋ ಭಾರತ್ ಮಾತಾ ಕಿ ಜೈ’ ಅಂದಾಗ ಉಗ್ರಗಾಮಿಗಳ ಮೇಲಿನ ಸಿಟ್ಟಿನಂದಲೋ ಏನೋ ’ಜೈ’ ಅನ್ನೋ ಸದ್ದು ಸ್ವಲ್ಪ ಜೋರಾಗೇ ಕೇಳಿಸಿತು ಆ ದಿನ.
ನಂತರ ಚಿತ್ರ ಶುರು ಆಯಿತು.ಮೊದಲ ಹತ್ತು ನಿಮಿಶಗಳು ತುಂಬಾ ಚೆನ್ನಾಗಿತ್ತು. ಕ್ಯಾಮರಾ ವರ್ಕ್ ತುಂಬಾ ಚೆನ್ನಾಗಿತ್ತು.ಆದ್ರೆ ಹೀರೊ ಅಜಯ್ ಆಗಮನವಾದ ನಂತರ ಬೋರ್ ಹೊಡೆಯೋಕೆ ಶುರು ಆಯಿತು :( ಕಾಲೇಜ್ ಸೀನ್ಸ್ ಅಂದ್ರೆ ಸಾಮಾನ್ಯವಾಗಿ ಚೆನ್ನಾಗಿರುತ್ತವೆ. ಕಾಮಿಡಿ ಇರುತ್ತೆ. ಆದ್ರೆ ಇದರಲ್ಲಿ ಮಾತ್ರ ಕಾಲೇಜ್ ಸೀನ್ಸ್ ತುಂಬಾ ಡಲ್ ಆಗಿತ್ತು.
ಚಿತ್ರದ ಇಂಟರ್ವಲ್ ಮತ್ತೆ second half ಚೆನ್ನಾಗಿ ಮೂಡಿ ಬಂದಿದೆ.climax ಕೂಡಾ ಚೆನಾಗೇ ಇದೆ.
ಆದ್ರೆ ನಿರ್ದೇಶಕ ಚಂದ್ರು ಸಂದರ್ಶನ ಒಂದರಲ್ಲಿ ,ಈ ಚಿತ್ರ ಎರಡು ಕಥೆ ಒಂದು climax ಹೊಂದಿದೆ ಅಂದಿದ್ರು.ಎರಡು ಕಥೆ handle ಮಾಡೋದ್ರಲ್ಲಿ ಮಾತ್ರ ಚಂದ್ರು ಸ್ವಲ್ಪ ಎಡವಿದ್ದಾರೆ.
ಕಾಲೇಜ್ ವಾತಾವರಣಕ್ಕೆ ಮೆರುಗು ಕೊಟ್ಟ ಪಾತ್ರಗಳು ಶೇಕರ್ ಮತ್ತೆ ಸೀನಿಯರ್ ಪಾತ್ರಗಳು,ಅವರಿಂದಾಗೆ ಕಾಲೇಜಲ್ಲಿ ಸ್ವಲ್ಪ ಲವಲವಿಕೆ ಇತ್ತು.
ರಂಗಾಯಣ ರಘು ಎಂದಿನಂತೆ ತಗೊಂಡ ಕಾಸಿಗೆ ಮೋಸ ಮಾಡಿಲ್ಲ ,ಚೆನ್ನಾಗಿ ನಿಭಾಯಿಸಿದ್ದಾರೆ.
ಪೂಜಾ ಗಾಂಧಿ ಕೂಡಾ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
overall ಆಗಿ ಸಿನೆಮಾ ಚೆನ್ನಾಗಿದೆ ,ಆದ್ರೆ ಸ್ವಲ್ಪ ತಾಳ್ಮೆ ಬೇಕು ಇಂಟರ್ವಲ್ ತನಕ.....
ಶುಭವಾಗಲಿ ಚಂದ್ರು.