Saturday, November 6, 2010

ಹೀಗೊಂದು ಪ್ರಸಂಗ...

ಕನ್ನಡ ಪದ್ಯ ಬಾಯಿಪಾಠ ಮಾಡಿಕೊಂಡು ಬರದ್ದಕ್ಕೆ ಮೇಷ್ಟ್ರು ಮಹೇಶನಿಗೆ ಕುಂಡೆಗೆ ಬಾಸುಂಡೆ ಬರೋ ಹಾಗೆ ಹೊಡೆದಿದ್ದರು.

ಮಹೇಶ ಮನೆ ಬಿಟ್ಟು ಓಡಿ ಪೆರ್ಡೂರು ಯಕ್ಷಗಾನ ಮೇಳ ಸೇರಿದ.

ಈಗ ಮಹೇಶನಿಗೆ ಇಡೀ ಕೃಷ್ಣಾರ್ಜುನ ಕಾಳಗ ಪ್ರಸಂಗ ಬಾಯಿಪಾಠ ಬರುತ್ತೆ.....

Monday, November 1, 2010

ಹೀಗೂ ಉಂಟು !

ಕೆಲವರು ಇಲಿ ಪಾಷಾಣ ತಿಂದು ಸಾಯುತ್ತಾರೆ...

ಇನ್ನು ಕೆಲವರು ಇಲಿ ಪಾಷಾಣ ಮಾರಿಯೇ ಬದುಕುತ್ತಾರೆ ....

Monday, October 11, 2010

ಗೂಗಲ್ ಕಾರ್ ...

’ ಗೂಗಲ್ ನಿಂದ ಚಾಲಕರಹಿತ ಕಾರ್ - ಸುದ್ದಿ ’

ಗೂಗಲ್ ಚಾಲಕ ರಹಿತ ಕಾರ್ ಅಭಿವೃದ್ಧಿಗೊಳಿಸುತ್ತಾ ಇದೆ. ಭಾರತದಿಂದಲೂ ಬೇಡಿಕೆ ಬಂದಿರುವುದರಿಂದ ಹಾಗೂ ಅಮೆರಿಕಾದ ಮಾಡೆಲ್ ಭಾರತಕ್ಕೆ ಸರಿ ಹೊಂದದ ಕಾರಣ ಭಾರತ ಮೂಲದ ಕಂಪನಿಯೊಂದು ಚಾಲಕ ರಹಿತ ವಾಹನವನ್ನು ಕೆಲವು ಮಾರ್ಪಾಡುಗಳೊಂದಿಗೆ ಮಾರುಕಟ್ಟೆಗೆ ತರಲು ತಯಾರಿ ನಡೆಸುತ್ತಿದೆ!

ಈ ಚಾಲಕರಹಿತ ಕಾರ್ ನ ಕೆಲವು ಫೀಚರ್ ಗಳು :

ಸಿಗ್ನಲ್ ಜಂಪಿಂಗ್ : ಎಲ್ಲರಿಗೂ ಈಗ ಸಿಗ್ನಲ್ ಜಂಪ್ ಮಾಡಿ ರೂಢಿ ಆಗಿರುವುದರಿಂದ ಈ ಕಾರ್ ನಲ್ಲಿ ’ಸಿಗ್ನಲ್ ಜಂಪಿಂಗ್’ ತಂತ್ರಾಂಶವನ್ನು ಅಳವಡಿಸಲಾಗಿದೆ. ಈ ಕಾರು ಕೆಂಪು ಸಿಗ್ನಲ್ ಬಿದ್ದ ಮೇಲೂ ೩ ಸೆಕೆಂಡ್ ,ಹಾಗೂ ಹಸಿರು ಸಿಗ್ನಲ್ ಬೀಳುವ ೩ ಸೆಕೆಂಡು ಮೊದಲೇ ಚಲಿಸುವ ರೀತಿಯಲ್ಲಿ ತಂತ್ರಾಂಶವನ್ನು ಅಬ್ಭಿವೃದ್ಧಿಗೊಳಿಸಲಾಗಿದೆ.

ಜಗಳ ಮೇಕರ್ (ವರ್ಶನ್ 2.1) : ’ ಜಗಳ ಮೇಕರ್ ’ ತುಂಬಾ ಉಪಯುಕ್ತ ತಂತ್ರಾಂಶ. ಅಕಸ್ಮಾತ್ ಬೇರೆ ವಾಹನಗಳಿಂದ ತೊಂದರೆ ಉಂಟಾದಲ್ಲಿ ಆ ವಾಹನವನ್ನು ಓವರ್ ಟೇಕ್ ಮಾಡಿ,ಆ ವಾಹನದ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ಬಯ್ಯಲಾಗುತ್ತದೆ. 50 ಪ್ರಿ ರೆಕಾರ್ಡೆಡ್ ಅಶ್ಲೀಲ ಬಯ್ಗುಳಗಳನ್ನು ಈಗಾಗಲೇ ಅಳವಡಿಸಲಾಗಿದೆ. ವರ್ಶನ್ 2.2 ನಲ್ಲಿ ಎಲ್ಲಾ ಭಾರತೀಯ ಭಾಷೆಗಳನ್ನು ಅಳವಡಿಸುವುದಲ್ಲದೇ ಎದುರಾಳಿ ಚಾಲಕನನ್ನು ತದಕುವ ಸೌಲಭ್ಯವೂ ದೊರಕುತ್ತದೆ.

ಲಂಚೇಶ : ಅಕಸ್ಮಾತ್ ಟ್ರಾಫಿಕ್ ಪೋಲಿಸರು ಹಿಡಿದಲ್ಲಿ ಅವರಿಗೆ ಲಂಚ ಕೊಡಲು ATM ಥರದ ಸೌಲಭ್ಯವನ್ನು ಅಳವಡಿಸಲಾಗಿದೆ.
ವಿ.ಸೂ : ಕೇವಲ ನೂರು ರೂ ನೋಟುಗಳನ್ನಷ್ಟೇ ಇಡಿ ,ಪೋಲಿಸರು ಲಂಚಕ್ಕೆ ಚಿಲ್ಲರೆ ವಾಪಾಸ್ ನೀಡುವುದಿಲ್ಲ !

ಪಂಚರಂಗಿ ಪಾಂ ಪಾಂ : ಈ ತಂತ್ರಾಂಶ ಕರ್ಕಶವಾದ ಹಾರ್ನ್ ಮಾಡಿ ಜನರನ್ನು ಬೆಚ್ಚಿ ಬೀಳಿಸುತ್ತದೆ. ಸಧ್ಯಕ್ಕೆ ಐದು ಥರದ ಕರ್ಕಶ ಸದ್ದುಗಳು ಲಭ್ಯವಿದೆ. ಜೊತೆಗೆ ಕಣ್ಣು ಕೋರೈಸುವ ಹೆಡ್ ಲೈಟ್ ಸೌಲಭ್ಯವೂ ಇದೆ.

ಡಿಸೆಂಬರ್ ಹೊತ್ತಲ್ಲಿ ಈ ಚಾಲಕ ರಹಿತ ಕಾರು ಮಾರುಕಟ್ಟೆಗೆ ಲಗ್ಗೆ ಇಡುತ್ತದೆ. ಕಾದು ನೋಡಿ !

Wednesday, October 6, 2010

ದಿನಕ್ಕೊಂದು ಸಿರೀಸ್ ..

' ದಿನಕ್ಕೊಂದು ಕಥೆ ’ , ಲೇ:ಡಾ||ಅನುಪಮಾ ನಿರಂಜನ , ರೂ:20


' ದಿನಕ್ಕೊಂದು ಹಗರಣ ’ , ಲೇ:ಡಾ||ಬಿ.ಎಸ್.ವೈ , ರೂ:420

Friday, September 24, 2010

ಸೆಟ್ಟೇರದ ಚಿತ್ರ ...

ಅವನು ’ಮೈ ಆಟೋಗ್ರಾಫ್ ’ ಥರದ್ದೇ ಒಂದು ಚಿತ್ರ ಮಾಡಲು ಹೊರಟಿದ್ದ ....


ಆದರೆ ಒಂದನೇ ಕ್ಲಾಸ್ ನ ಸಹಪಾಠಿಗಳಿಂದ ಹಿಡಿದು ಈಗಿನ ಸಹೋದ್ಯೋಗಿಗಳವರೆಗೆ ,ಎಲ್ಲರೂ ಫೇಸ್ ಬುಕ್ ನಲ್ಲಿ ಸಿಕ್ಕಿರೋದ್ರಿಂದ ಫಿಲಮ್ ಐಡಿಯಾ ಕೈ ಬಿಟ್ಟ!!!

Monday, September 6, 2010

ಕಾರ್ ಪೂ(ಫೂ)ಲಿಂಗ್...

ಐಟಿ ಕಂಪೆನಿಯಲ್ಲಿ ಮ್ಯಾನೇಜರ್ ಆಗಿರುವ ಶ್ರೀಕಂಠಮೂರ್ತಿಗಳು ದಿನಾಲೂ ತಮ್ಮ ಕಾರಿನಲ್ಲಿ ಟೆಕ್ ಪಾರ್ಕಿನ ಕೆಲವು ಉದ್ಯೋಗಿಗಳನ್ನು ಜೊತೆಯಲ್ಲಿ ಕರೆದೊಯ್ದು ಕಾರ್ ಪೂಲಿಂಗ್ ಮಾಡಿದ್ದಕ್ಕೆ ’ಐಟಿ ಕಾರ್ ಪೂಲಿಂಗ್ ಸಂಘ’ದವರು ಸಾವಿರ ರೂ.ನ ಸೊಡೆಕ್ಸೊ ಕೂಪನ್ ಕೊಟ್ಟು ಸನ್ಮಾನ ಮಾಡಿದರು.

ಅದೇ ಟೆಕ್ ಪಾರ್ಕ್ ನಲ್ಲಿರೋ ಕಾಲ್ ಸೆಂಟರ್ ನ ಕ್ಯಾಬ್ ಡ್ರೈವರ್ ಕೃಷ್ಣಪ್ಪ ,ಖಾಲಿ ಕಾರ್ ನಲ್ಲಿ ಹೋಗೋ ಬದಲು ಕೆಲವರನ್ನು ಪಿಕಪ್ ಮಾಡಿದ್ದಕ್ಕೆ ಹೆಬ್ಬಾಳ ಪೋಲಿಸರು ಐನೂರು ರೂ ದಂಡ ವಿಧಿಸಿದರು.

Tuesday, June 29, 2010

ಕೈ (ಹಣೆ) ಬರಹ ...

ಮಕ್ಕಳ ಕೈ ಬರಹ ಸುಂದರವಾಗಲೆಂದು ದಿನಾ ಒಂದು ಪುಟ ಕಾಪಿ ಬರೆಯಲು ಕನ್ನಡ ಟೀಚರು ಹೇಳಿದ್ದರು.

ಗುಂಡು ಗುಂಡಗೆ ಬರೆದ ಸುರೇಶನಿಗೆ ಟೀಚರು ಹತ್ತರಲ್ಲಿ ಹತ್ತು ಅಂಕ ನೀಡೋದಲ್ಲದೆ ಲ್ಯಾಕ್ಟೋ ಕಿಂಗ್ ಚಾಕಲೇಟ್ ಬೇರೆ ಕೊಟ್ಟಿದ್ದರು.

ಕಾಗೆ ಕಾಲಿನ ಅಕ್ಷರವಿರುವ ಶ್ರೀಧರನಿಗೆ ಯಥಾ ಪ್ರಕಾರ ಛೀಮಾರಿ ಹಾಕಿದ್ದರು !

ಶ್ರೀಧರ ಈಗ ಅಮೆರಿಕಾದಲ್ಲಿ ಸಾಫ್ಟ್ವೇರ್ ಇಂಜಿನಿಯರ್ .

ಸುರೇಶನಿಗೆ ರಾಜಕಾರಣಿಗಳು ಸುಂದರವಾಗಿ, ಗುಂಡ ಗುಂಡಗೆ ತಮ್ಮ ಪಕ್ಷದ ಬ್ಯಾನರ್ ಬರೆಯುವ ಕೆಲಸ ನೀಡಿದ್ದಾರೆ.

Tuesday, May 11, 2010

ಮಕ್ಕಳಲ್ಲದ ಮಕ್ಕಳು!

ನನ್ನ ಆಲ್ ಟೈಮ್ ಫೇವರೇಟ್ ಲೇಖಕ ವಸುಧೇಂದ್ರ ರ ಹೊಸ ಪುಸ್ತಕವನ್ನಷ್ಟೇ ಕೊಳ್ಳಬೇಕು ಅಂತ ಅಂದುಕೊಂಡ ನಾನು ಜಯಂತ್ ಕಾಯ್ಕಿಣಿ ಪುಟ್ಟ ಹುಡುಗ ಪೂರ್ಣನ ಬಗ್ಗೆ ಹೇಳುತ್ತಾ ಅವನ ಕೆಲವು ಕವಿತೆಗಳನ್ನು ಓದಿದಾಗ ಅದನ್ನು ಕೊಳ್ಳದೆ ಇರಲಾಗಲಿಲ್ಲ.ಪುಟ್ಟ ಪೂರ್ಣನ ಮುಗ್ಧ ಕವಿತೆಗಳು ಓದಿ ಯಾಕೋ ಖುಷಿ ದುಖಃ ಎರಡೂ ಆಯ್ತು.

ಮಕ್ಕಳ ಪದ್ಯಗಳ ಸಾಲಿಗೆ ಮತ್ತೊಂದು ಪುಸ್ತಕ ’ಹಲೋ ಹಲೋ ಚಂದಮಾಮ’ ಸೇರ್ಪಡೆ ಯಾಯ್ತು.ಅದನ್ನು ಎಷ್ಟು ಮಕ್ಕಳು ಓದ್ತಾರೆ ಅನ್ನೋದು ಗೊತ್ತಿಲ್ಲ.ಮಕ್ಕಳನ್ನು ಮಕ್ಕಳಾಗಿರಲು ನಾವೂ ಬಿಟ್ಟಿಲ್ಲ .ಅವರಾದರೂ ಪಾಪ ಏನು ಮಾಡಿಯಾರು?

’ಅಜ್ಜನ ಕೋಲಿದು ನನ್ನಯ ಕುದುರೆ’ ಕಾಲ ಹೋಯ್ತು,ಈಗ ಹತ್ತು ರೂಪಾಯಿ ಕೊಟ್ರೆ ಮಕ್ಕಳನ್ನು ನಿಜವಾದ ಕುದುರೆ ಮೇಲೆಯೇ ಕೂರಿಸಬಹುದು.ನಾವು ಬಾಯಲ್ಲೇ ಡುರ್ ಡುರ್ ಅಂತ ಕಾರ್ ಓಡಿಸುತ್ತಾ ಖುಷಿ ಪಡ್ತಿದ್ದ ಕಾಲವೂ ಈಗಿಲ್ಲ.ಮಕ್ಕಳು ಹುಟ್ಟುವಾಗಲೇ ನಿಜವಾದ ಕಾರಲ್ಲೆ ಸುತ್ತಾಡಿ ಬೆಳೆಯುತ್ತಿದ್ದಾರೆ.

ಇಂಥದ್ದರಲ್ಲಿ ನಮ್ಮ ಬಾಲ್ಯದಲ್ಲಿ ನಮಗಿದ್ದದ್ದು ಮುಗ್ಧತೆಯಾ ,ಅಥವ ಅವಕಾಶದ ಕೊರತೆಯಾ ? ಒಂದೂ ತಿಳಿಯುತ್ತಿಲ್ಲ.

ನಾವು ಶಾಲೆಯಲ್ಲಿದ್ದಾಗ ಮಕ್ಕಳ ಡ್ಯಾನ್ಸ್ ಅಂದರೆ ಹತ್ತು ಮಕ್ಕಳಿದ್ದಲ್ಲಿ ಒಬ್ಬೊಬ್ಬರದ್ದೂ ಒಂದೊಂದು ದಿಕ್ಕಿನಲ್ಲಿ ಕೈ,ಕಾಲು.ಹಾಡಿಗೂ ನೃತ್ಯಕ್ಕೂ ಸಂಬಂಧವೇ ಇಲ್ಲ.ಈಗ ಅಷ್ಟೇ ಚಿಕ್ಕ ಮಕ್ಕಳು ಮೈಕಲ್ ಜಾಕ್ಸನ್ ನ ಸ್ಟೆಪ್ಸ್ ಹಾಕ್ತಾರೆ.ನಮ್ಮ ಹಾಡು ಅಂದರೆ ತಾಳ,ರಾಗ ಯಾವುದೂ ಇಲ್ಲದ ಗದ್ಯ ವಾಚನವಾಗಿತ್ತು.ಈಗ ಪುಟ್ಟ ಮಕ್ಕಳು ಸ್ಟಾರ್ ಸಿಂಗರ್ ಗಳಾಗಿದ್ದಾರೆ.’ಶ್ರೀ ಮಂಜುನಾಥ’ ದ ಕಠಿಣವಾದ ಹಾಡನ್ನು ಹಾಡಿ ಎಸ್.ಪಿ.ಬಿ ಯವರಿಗೇ ನಡುಕ ಹುಟ್ಟಿಸ್ತಾರೆ.

ಅಪ್ಪ ಅಮ್ಮಂದಿರಿಗೆ ಮೊಬೈಲ್ ಬಳಸಲು ಹೇಳಿ ಕೊಡೋದೇ ಮಕ್ಕಳು.ಇಂಟರ್ನೆಟ್ ನಲ್ಲಿ ಆರ್ಕುಟ್ ಬಳಸೋದು ಹೇಳಿ ಕೊಡೋದೂ ಮಕ್ಕಳೇ.ಟಿ.ವಿ ಯಲ್ಲಿ ಪ್ರಸಾರವಾಗ್ತಿರೊ ಸಿನೆಮಾದ ಹೀರೋ ಯಾರು ಅಂತ ಹೇಳೋದೂ ಅದೇ ಪುಟ್ಟ ಮಗು.ಆ ಸಿನೆಮಾದ ಹಾಡನ್ನೂ ಗುಣುಗುಣಿಸೋದು ಅದೇ ಪುಟ್ಟ ಮಗು.

ಪರಿಸ್ಥಿತಿ ಹೀಗಿದ್ದಾಗ ಮಕ್ಕಳಲ್ಲಿ ಮುಗ್ಧತೆಯನ್ನು ಎಲ್ಲಿ ಹುಡುಕೋದು?

ಛಂದ ಪುಸ್ತಕ ಬಿಡುಗಡೆಯ ಸಮಾರಂಭಕ್ಕೆ ಮುಖ್ಯ ಅಥಿತಿಯಾಗಿ ಬಂದಿದ್ದ ಮುದ್ದು ತೀರ್ಥಹಳಿ ಅನ್ನೋ ಏಳನೇ ಕ್ಲಾಸಿನ ಹುಡುಗಿ ಹೇಗೆ ಮಕ್ಕಳು ಹಳೆಯ ಮಕ್ಕಳ ಪದ್ಯಗಳನ್ನು ಕೇಳಿ ಕೇಳಿ ಬೋರ್ ಆಗಿದ್ದಾರೆ ಅನ್ನೊ ಬಗ್ಗೆ ಮಾತಾಡಿದ್ಲು.ಆದರೆ ಅವಳು ಕೆಂಡಸಂಪಿಗೆಯಲ್ಲಿ ಬರೆದ ಕವಿತೆಗಳನ್ನು ನೋಡಿದ್ರೆ ಅವಳು ಪುಟ್ಟ ಹುಡುಗಿ ಅಲ್ಲ ಅನ್ನೋದು ಗೊತ್ತಾಗಿ ಬಿಡುತ್ತೆ.

ಅದೇ ಸಮಾರಂಭದ ಮತ್ತೊಬ್ಬ ಮುಖ್ಯ ಅತಿಥಿ ಹತ್ತನೆ ಕ್ಲಾಸ್ ಹುಡುಗ ಕೀರ್ತಿರಾಜ ಬರೆದಿರೋದು ಬೇಟೆಯ ಬಗೆಗಿನ ಪುಸ್ತಕ!

ಯಾವುದೇ ಪುಟ್ಟ ಮಗುವನ್ನು ಕರೆದು ಒಂದು ಹಾಡು ಹೇಳಪ್ಪ ಅಂದ್ರೆ ಅವನು ’ಧೂಮ್ ಮಚಾಲೇ ’ ಅಥವಾ ’ಝರಾ ಝರಾ ಟಚ್ ಮಿ ಕಿಸ್ ಮಿ ’ ಹಾಡನ್ನು ತಪ್ಪಿಲ್ಲದೆ ಹಾಡ್ತಾನೆ.ಕನ್ನಡ ಹಾಡು ಅಂದ್ರೆ ’ಹೊಡಿ ಮಗ ಹೊಡಿ ಮಗ’ ಹಾಡ್ತಾನೆ .ಇಂಥ ಸನ್ನಿವೇಶದಲ್ಲಿ ಮಕ್ಕಳ ಪದ್ಯ ಯಾರು ಓದ್ತಾರೆ?

ಕೆಲವೊಮ್ಮೆ ಮಕ್ಕಳು ಈ ಪರಿ ಬುದ್ಧಿವಂತರಾಗಿರೋದಕ್ಕೆ ಖುಷಿ ಅನ್ಸುತ್ತೆ.ಆದರೆ ಅದೇ ಸಮಯಕ್ಕೆ ’ಮಗುವಿನಷ್ಟು ಮುಗ್ಧ’ ಅನ್ನೋ ಶಬ್ದದ ಅರ್ಥವೆ ಕಳೆದು ಹೋಗುತ್ತಿದೆಯಲ್ಲ ಅನ್ನೋ ಆತಂಕವೂ ಆಗುತ್ತೆ!

ಇದು ಆತಂಕವೋ ಅಥವ ಮಕ್ಕಳು ಇನ್ನು ಮೇಲೆ ನಮ್ಮ ಬಳಿ ಏನೂ ಕೇಳಲ್ಲ(ನಾವೇ ಅವರ ಹತ್ತಿರ ಕಲೀಬೇಕು!) ಅನ್ನೋ ಭಯವೋ ಗೊತ್ತಿಲ್ಲ!

Sunday, May 2, 2010

ದೇಶಕಾಲ,ವೈದೇಹಿ,ಯಕ್ಷಗಾನ...

ಇದು ಟೂ ಇನ್ ಒನ್ ಬರಹ ,ಹಾಗಾಗಿ ಬರಹದ ತಲೆಬರಹದ ತಲೆ ಬುಡ ಅರ್ಥ ಆಗಿಲ್ಲವಾದರೆ ದಯವಿಟ್ಟು ಕ್ಷಮಿಸಿ!

ನಿಮಗೆಲ್ಲ ಗೊತ್ತಿರುವ ಹಾಗೆ ’ದೇಶಕಾಲ’ದ ವಿಶೇಷ ಸಂಚಿಕೆ ಬಿಡುಗಡೆಯಾಗಿದೆ.ಈ ವಿಶೇಷ ಸಂಚಿಕೆಯಲ್ಲಿ ಎಷ್ಟು ಪುಟಗಳಿವೆ ಅಂತ ಎಣಿಸೋದಕ್ಕೇನೇ(ಪುಟಗಳ ಸಂಖ್ಯೆಯನ್ನು ಅದರಲ್ಲೇ ನಮೂದಿಸಿರುತ್ತಾರೆ ಅಂತ ನಂಗೂ ಗೊತ್ತು ಬಿಡಿ!) ಬಹಳಷ್ಟು ಸಮಯ ಬೇಕು.ಹಾಗಾಗಿ ಅವಸರವಸರದಲ್ಲಿ ದರ್ಶಿನಿ ಶೈಲಿಯಲ್ಲಿ ಇದನ್ನು ಓದಲು ಸಾಧ್ಯವೇ ಇಲ್ಲ.

ಹಾಗೆ ಸುಮ್ಮನೆ ಕಣ್ಣಾಡಿಸುವಾಗಲೇ ನನ್ನನ್ನು ಸೆಳೆದ ಒಂದು ಲೇಖನ ವೈದೇಹಿಯವರ ’ಹೋಟೆಲ್ ಪರ್ವ’!

ಇದು ವೈದೇಹಿಯವರು ಹೋಟೆಲ್ ಮಾಲಕರೊಬ್ಬರೊಂದಿಗೆ ನಡೆಸಿದ ಸಂದರ್ಶನ.ಸಂದರ್ಶನ ಕುಂದಾಪುರ ಕನ್ನಡದಲ್ಲಿದೆ.ಹೋಟಲ್ ಮಾಲಕರಿಗೆ ಸಾಕಷ್ಟು ಹಾಸ್ಯಪ್ರಜ್ಞೆ ಇದ್ದದ್ದರಿಂದ ತುಂಬಾ ತಮಾಷೆಯಾಗಿ ಆದರೆ ಅಷ್ಟೇ ಪರಿಣಾಮಕಾರಿಯಾಗಿ ಮೂಡಿ ಬಂದಿದೆ ಈ ಸಂದರ್ಶನ.ಹೋಟೇಲ್ ಮಾಲೀಕರು ಯಾರಾದರೂ(ಸಂದರ್ಶನ ಕೊಟ್ಟವರನ್ನು ಹೊರತು ಪಡಿಸಿ!) ಇದನ್ನು ಓದಿದರೆ ಸಿಟ್ಟು ಬರದೆ ಇರಲಾರದು !

ಹಾಸ್ಯಭರಿತ ಸಂದರ್ಶನ ಓದಿದ್ರೆ ಸಿಟ್ಟು ಯಾಕೆ ಅಂತೀರಾ?ಯಾಕಂದ್ರೆ ಹೋಟಲ್ ಮಾಲಕರ ಹಲವು ಟ್ರಿಕ್ಸ್ ಗಳನ್ನು ಪಾಪ ಅವರು ಈ ಸಂದರ್ಶನದಲ್ಲಿ ಹೇಳಿ ಬಿಟ್ಟಿದ್ದಾರೆ ! ಈ ಸಂದರ್ಶನ ಓದಿದಲ್ಲಿ ಖಂಡಿತ ಹೋಟಲ್ ಉದ್ಯಮದ ಕಷ್ಟ ನಷ್ಟಗಳು(ಲಾಭದ ವಿಚಾರ ಕೂಡಾ!) ತಿಳಿಯುವುದರಲ್ಲಿ ಸಂಶಯವೇ ಇಲ್ಲ.

ಇನ್ನೊಂದು ತಮಾಷೆಯ ಸಂಗತಿ ಅಂದ್ರೆ ವೈದೇಹಿಯವರ ಪ್ರಶ್ನೆಗಳು ಒಂದು ಸಾಲಿನವು,ಆದರೆ ಹೋಟಲ್ ಮಾಲೀಕರ ಉತ್ತರ ಮಾತ್ರ ಉದ್ದುದ್ದ!ಹೋಟಲ್ ಮಾಲಕರು ಮನ ಬಿಚ್ಚಿ ಮಾತಾಡಿದ್ದಕ್ಕೇ ಬಹುಷಃ ಸಂದರ್ಶನ ಅಷ್ಟು ಇಷ್ಟ ಆಗಿದ್ದು ನನಗೆ.

ಇಂಥ ಒಂದು ಸುಂದರ ಸಂದರ್ಶನ ಪ್ರಕಟಿಸಿದ್ದಕ್ಕೆ ’ದೇಶಕಾಲ’ಕ್ಕೆ ಅಭಿನಂದನೆಗಳು.ಈ ಸಂದರ್ಶನ ನಡೆಸಿದ ವೈದೇಹಿಯವರಿಗೆ ಧನ್ಯವಾದಗಳು.ಕೊನೆಯದಾಗಿ ಸಂದರ್ಶನ ನೀಡಿದ ಹೊಳ್ಳ(?!)ರಿಗೂ ಧನ್ಯವಾದಗಳು!


~~~~~~~~~~~~~~~~~~~~~~~~~~~~~~~~~~~~~~~~~~~~~~~

ಬಹಳಷ್ಟು ದಿನಗಳ ನಂತರ ಬೆಂಗಳೂರಿನಲ್ಲಿ ಶುದ್ಧ ಕನ್ನಡ ಕೇಳಲು ಸಿಕ್ಕಿತು!

FM ಚ್ಯಾನೆಲ್ ಗಳ ಕನ್ನಡ ಮಿಶ್ರಿತ ಇಂಗ್ಲೀಶ್, ಟಿ.ವಿ ಚ್ಯಾನಲ್ ರ ಇಂಗ್ಲೀಶ್ ಮಿಶ್ರಿತ ಕನ್ನಡದ ಹಾವಳಿಯ ನಡುವೆ ಅದೆಲ್ಲಿ ಶುದ್ಧ ಕನ್ನಡ ಕೇಳಿದೆ ಅಂತೀರಾ?

ವಿಜಯನಗರದ ಕರ್ನಾಟಕ ಕಲಾ ದರ್ಶಿನಿ(ರಿ)ಯವರು ಪುಟ್ಟ ಪುಟ್ಟ ಮಕ್ಕಳಿಂದ ’ಕೃಷ್ಣಾರ್ಜುನ ಕಾಳಗ’ ಅನ್ನೋ ಯಕ್ಷಗಾನ ಪ್ರಸಂಗ ಏರ್ಪಡಿಸಿದ್ದರು.ಬೆಂಗಳೂರಿನ ಮಕ್ಕಳ ಬಾಯಲ್ಲಿ ಶುದ್ಧ ಕನ್ನಡ ಕೇಳಿ ನನ್ನ ಕಿವಿಯೂ ಶುದ್ಧ ಆಯ್ತು ಅನ್ನಿ.ಹುಡುಗ/ಹುಡುಗಿಯರಲ್ಲಿ ಕೆಲವರು ಬೇಸಿಗೆ ಶಿಬಿರದ ಅಂಗವಾಗಿ ಯಕ್ಷಗಾನ ಕಲಿತರೆ ಇನ್ನು ಕೆಲವರು ಹವ್ಯಾಸವಾಗಿ ಅದನ್ನು ಕಲಿತವರು.ದಾರುಕನ ಪಾತ್ರ ಮಾಡಿದ ಹುಡುಗನಂತೂ ಅತ್ಯದ್ಭುತವಾಗಿ ಪಾತ್ರ ನಿರ್ವಹಿಸಿ ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದ.ಇನ್ನು ಅಭಿಮನ್ಯು ಪಾತ್ರದ ಹುಡುಗ ಧರ ಧರನೆ ತಿರುಗಿ ಕಡೆಗೆ ಚಂಗನೆ ನೆಗೆದು ತಾಯಿಯ ಸೊಂಟದಲ್ಲಿ ಕುಳಿತ ದೃಶ್ಯ ಮಜವಾಗಿತ್ತು.ನೆಗೆದು ಸೊಂಟದಲ್ಲಿ ಕೂತ್ಕೋ ಬೇಕಾದ್ರೆ ಎಷ್ಟು ಚಿಕ್ಕ ಹುಡುಗ ನೀವೇ ಲೆಕ್ಕ ಹಾಕಿ!

ಮಕ್ಕಳೆಲ್ಲ ಬೇಸಿಗೆ ಶಿಬಿರದ ಹೆಸರಲ್ಲಿ ಯಕ್ಷಗಾನ ಕಲಿತದ್ದು ನಿಜಕ್ಕೂ ಶ್ಲಾಘನೀಯ.ಕಲಿಯಲು ಅನುವು ಮಾಡಿಕೊಟ್ಟ ಶ್ರೀನಿವಾಸ ಸಾಸ್ತಾನ ಮತ್ತು ಆದಿಚುಂಚನಗಿರಿ ಮಠಕ್ಕೆ ಅಭಿನಂದನೆಗಳು.

Monday, April 19, 2010

ಖುಷಿ - ಬೇಸರ !



ಮೊಟ್ಟ ಮೊದಲ ಬಾರಿಗೆ (ಸಧ್ಯ ಕೊನೆಯ ಬಾರಿಗೆ ಅಲ್ಲ;)) ಸ್ಟೇಡಿಯಂ ಗೆ ಹೋಗಿ IPL match ನೋಡಿ ಬಂದದ್ದಕ್ಕೆ ಖುಷಿ.

ಆದರೆ ಅದೇ ಸಮಯದಲ್ಲಿ ಬಾಂಬ್ ಸ್ಫೊಟದಿಂದ ಜನರಿಗೆ ನೋವುಂಟಾಗಿದ್ದು,ಮ್ಯಾಚ್ ನಲ್ಲಿ ನಮ್ಮ ರಾಯಲ್ ಚ್ಯಾಲೆಂಜರ್ಸ್ ಸೋತಿದ್ದಕ್ಕೆ ಬೇಸರ

ಸಮಯಪ್ರಜ್ಞೆ ಬಳಸಿ ಮ್ಯಾಚ್ ಮುಂದುವರೆಸಿ ಕಾಲ್ತುಳಿತವನ್ನು ತಪ್ಪಿಸಿದ ಶಂಕರ ಬಿದರಿಯವರ ಬಗ್ಗೆ ಖುಷಿ .

ಆದರೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಮ್ಯಾಚ್ ಗಳನ್ನು ಭದ್ರತೆಯ ನೆಪ ಒಡ್ಡಿ ಸ್ಥಳಾಂತರಿಸಿದ್ದು ಬೇಸರ.

ರಾಯಲ್ ಚ್ಯಾಲೆಂಜರ್ಸ್ ಸೆಮಿ ಫೈನಲ್ ಗೆ ತಲುಪಿದ್ದು ಖುಷಿ.

ಸೆಮಿಫೈನಲ್ ನೋಡಲು ಮತ್ತೊಮ್ಮೆ ಹೋಗಬೇಕೆಂದಿದ್ದ ಆಸೆ ನಿರಾಸೆಯಾಗಿದ್ದಕ್ಕೆ ಬೇಸರ .

ಆಲ್ ದಿ ಬೆಸ್ಟ್ ರಾಯಲ್ ಚ್ಯಾಲೆಂಜರ್ಸ್ ಬೆಂಗಳೂರು !

ಆಲ್ ದಿ ಬೆಸ್ಟ್ ಮುಂಬೈ ಕಮಿಷನರ್ !!

Wednesday, March 31, 2010

ಪಿ. ಲಂಕೇಶ್ ಮತ್ತು ಲಿನಕ್ಸ್ !!!


ನೀವೆಲ್ಲಾ ಲಂಕೇಶ್ ರ ಪುಸ್ತಕಗಳನ್ನು ಓದೇ ಇರ್ತೀರ.ಆದರೆ ನೀವು ಓದದೇ ಇದ್ದ ಲಂಕೇಶರ ಪುಸ್ತಕ ಒಂದಿದೆ!

ಲಿನಕ್ಸ್ ಬಗ್ಗೆ ಪಿ.ಲಂಕೇಶ್ ಬರೆದ ಪುಸ್ತಕ !

ಚಿತ್ರ ನೋಡಿ.

Sunday, March 14, 2010

ಬದುಕು ಎತ್ತಿನ ಬಂಡಿ...

ಕನ್ನಡದ ಒಂದು ಪ್ರಸಿದ್ಧ ಟಿ.ವಿ ವಾಹಿನಿಯೊಂದಕ್ಕೆ ’ಬದುಕು ಎತ್ತಿನ ಬಂಡಿ’ ಅನ್ನೋ ರಿಯಾಲಿಟಿ ಶೋ ಒಂದನ್ನು ನಿರ್ಮಿಸುವ ಸಲುವಾಗಿ ಹಲವು ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ನಿರೂಪಕಿ:ಈ ಹುದ್ದೆ ಕೇವಲ ಮಹಿಳೆಯರಿಗೆ ಮೀಸಲು.ಪುರುಷರೇ ದಯವಿಟ್ಟು ಕ್ಷಮಿಸಿ.ನೀವು ಕೇವಲ ರಾಜಕಾಣಿಗಳ ಪಿತ್ತ ನೆತ್ತಿಗೇರೋ ಅಂಥ ಪ್ರಶ್ನೆಗಳನ್ನು ಕೇಳಿ ಕೇಳಿ ಜನರ ಪಿತ್ತವೂ ನೆತ್ತಿಗೇರೋ ಹಾಗೆ ಮಾಡಿದ್ದರಿಂದ ನಿಮ್ಮನ್ನು ಈ ಹುದ್ದೆಗೆ ಪರಿಗಣಿಸಲಾಗುವುದಿಲ್ಲ.ಇಲ್ಲಿ ಏನಿದ್ದರೂ ಭಾವನೆಗಳನ್ನು ಕೆದಕೋ ,ಕೆದಕಿ ಕೆದಕಿ ಕಣ್ಣೀರು ತರಿಸೋ ನಿಷ್ಣಾತರ ಅಗತ್ಯವಿದೆ.
ನಿರೂಪಕಿಯರು ಮಾಜಿ ಚಿತ್ರ ನಟಿಯರಾಗಿದ್ದಲ್ಲಿ ಆದ್ಯತೆ.ಗ್ಲಿಸರಿನ್ ಹಾಕದೆ ಅಳುವ ಸಾಮರ್ಥ್ಯವಿದ್ದಲ್ಲಿ ಅದು ಪ್ಲಸ್ ಪಾಯಿಂಟ್.ವೀಕ್ಷಕರನ್ನು ಅಳಿಸಲು ಗ್ಲಿಸರಿನ್ ಉಪಯೋಗಿಸಲು ಸಾಧ್ಯವಿಲ್ಲದೇ ಇದ್ದದ್ದರಿಂದ ಆ ಕೆಲಸವನ್ನು ನಿರೂಪಕಿಯರೇ ಮಾಡತಕ್ಕದ್ದು.

ಈ ಕಾರ್ಯಕ್ರಮದಲ್ಲಿ ಮಾಮೂಲಾಗಿ ಎರಡು ಕುಟುಂಬದವರನ್ನು ಕರೆಸಿ ಜಗಳ ಮಾಡಿಸಲಾಗೋದ್ರಿಂದ ತಮ್ಮ ರಕ್ಷಣೆ ತಾವೇ ಮಾಡಿಕೊಳ್ಳಲು ಗೊತ್ತಿರಬೇಕು.ಎರಡು ಕುಟುಂಬದ ಜಗಳಗಂಟಿ ಹೆಂಗಸರು ಪರಸ್ಪರ ಜಡೆ ಎಳೆದು ಜಗಳವಾಡೋ ಸಮಯದಲ್ಲಿ ನಿಧಾನಕ್ಕೆ ಯಾರಿಗೂ ಕಾಣದೆ ಎಸ್ಕೇಪ್ ಆಗೋ ಕಲೆ ತಮಗೆ ಗೊತ್ತಿದ್ರೆ ಅದು ಪ್ಲಸ್ ಪಾಯಿಂಟ್.ಗೊತ್ತಿಲ್ಲದೇ ಇದ್ದರೂ ಪರ್ವಾಗಿಲ್ಲ ಆ ಬಗ್ಗೆ ತರಬೇತಿ ನೀಡಲಾಗುವುದು.

ಸ್ಕ್ರಿಪ್ಟ್ ಲೇಖಕರು
: ಕೌಟುಂಬಿಕ ಕಲಹದ ಬಗ್ಗೆ ಕಥೆ,ಕಾದಂಬರಿ ಬರೆದಿದ್ದರೆ ಆದ್ಯತೆ.ಎರಡೂ ಕುಟುಂಬದ ಇಡೀ ಕಥೆಯನ್ನು ನಿಮಗೆ ವಿವರಿಸಲಾಗುವುದು.ಆ ಮಾರುದ್ದ ಕಥೆಯಲ್ಲಿ ಸ್ಟೂಡಿಯೋದಲ್ಲಿ ಜಗಳ ಮಾಡಿಸಬಲ್ಲ ಅಂಶಗಳನ್ನು ನೋಟ್ ಮಾಡಿ,ಅಂಥ ಪ್ರಶ್ನೆಗಳನ್ನು ಮಾತ್ರ ನಿರೂಪಕಿಯರು ಕೇಳೋ ಹಾಗೆ ಸ್ಕ್ರಿಪ್ಟ್ ಬರೆಯಬೇಕಾಗಿರೋದು ನಿಮ್ಮ ಕೆಲಸ.ಈ ಕೆಲಸ ತುಂಬಾ ಚ್ಯಾಲೆಂಜಿಂಗ್!ಒಂದು ವೇಳೆ "ಪರ್ವಾಗಿಲ್ವೆ ಇವರ ಸಂಸಾರ ಚೆನ್ನಾಗಿದೆ " ಅನ್ನೋ ಭಾವನೆ ಬರೋ ಅಂಥ ಅಂಶಗಳೇನಾದ್ರೂ ಇದ್ರೆ ಅದನ್ನು ಹುಷಾರಾಗಿ ಸ್ಕ್ರಿಪ್ಟ್ ನಿಂದ ತೆಗೆದು ಹಾಕಬೇಕಾಗುತ್ತದೆ.ನೀವೇನಾದ್ರೂ ’ಬಾಬಾ ಬಾಂಡು ’ ಅಥವ ’ಚಿಲ್ಲಿ ಚಲ್ಲಿ’ ಅಂಥ ಸೀರಿಯಲ್ ಗಳಿಗೇನಾದ್ರೂ ಕೆಲಸ ಮಾಡಿದ್ದಲ್ಲಿ ದಯವಿಟ್ಟು ಅರ್ಜಿ ಗುಜರಾಯಿಸದಿರಿ.ಇಲ್ಲಿ ನಗಿಸುವವರಿಗೆ ಕೆಲಸವಿಲ್ಲ.

ಕ್ಯಾಮರಾಮ್ಯಾನ್(ವುಮನ್):ಇದು ಕಾರ್ಯಕ್ರಮದ ಅತ್ಯಂತ ಜವಾಬ್ದಾರಿಯುತ ಕೆಲಸ.ಇಡೀ ಕಾರ್ಯಕ್ರಮದ ಯಶಸ್ಸು ನಿಮ್ಮ ಕೈಯಲ್ಲಿರುತ್ತದೆ.ಇಡೀ ಕಾರ್ಯಕ್ರಮದಲ್ಲಿ ನಿರೂಪಕಿಯ ಕಣ್ಣಿರನ್ನು ಮಾತ್ರವಲ್ಲದೇ ಅಲ್ಲಿಗೆ ಬಂದ ವೀಕ್ಷಕರ ಕಣ್ಣೀರನ್ನೂ ಸೆರೆ ಹಿಡಿಯಬೇಕಾಗುತ್ತದೆ.ಜಗಳಗಂಟಿ ಹೆಂಗಸರು ಜಡೆ ಎಳೆಯೋ ದೃಶ್ಯವನ್ನು ಮಾತ್ರ ಅತ್ಯಂತ ನೈಜವಾಗಿ ಚಿತ್ರಿಸಬೆಕಾಗುತ್ತದೆ.ಅಕಸ್ಮಾತ್ ಯಾರಾದ್ರೂ ಪಿತ್ತ ನೆತ್ತಿಗೇರಿ ನಿರೂಪಕಿಯರಿಗೇನಾದ್ರೂ ಹೊಡೆಯಲು ಹೋದ್ರೆ ಅದನ್ನು ಚಿತ್ರಿಸತಕ್ಕದ್ದಲ್ಲ.ಕೆಲವು ಗಂಡಸರು ಸ್ಪೂರ್ಥಿಗಾಗಿ ಎರಡು(ಅಂದಾಜು) ಪೆಗ್ ಏರಿಸಿ ಬಂದಿದ್ರೆ ಅವರಿಂದ ಹುಷಾರಾಗಿರತಕ್ಕದ್ದು.ಅವರು ಮುನಿದು ನಿಮ್ಮ ಕ್ಯಾಮೆರಾ ಮೆಲೇರಿ ಬಂದರೆ ,ಕ್ಯಾಮೆರಾ ಹಾನಿಗೊಳಗಾದೇ ಅದನ್ನು ರಕ್ಷಿಸೋ ಜವಾಬ್ದಾರಿ ನಿಮ್ಮದೇ!

ಹಿನ್ನೆಲೆ ಸಂಗೀತ ನಿರ್ದೇಶಕರು:ನಮ್ಮ ಅನುಭವಿ ನಿರೂಪಕಿಯರು ಎಷ್ಟೇ ಕಷ್ಟ ಪಟ್ಟು ತಮ್ಮ ಕೆಲಸ ನಿರ್ವಹಿಸಿದರೂ ,ವೀಕ್ಷಕರ ಕಣ್ಣಲ್ಲಿ ಕಣ್ಣಿರು ಬರಿಸಲು ಹಿನ್ನೆಲೆ ಸಂಗೀತದ ಮಹತ್ವ ಬಹಳ.ಕಣ್ಣೀರು ಹಾಕುವಾಗ ಪಿಟೀಲಿನ ಧ್ವನಿಯನ್ನು ಬಳಸೋದು ಈಗಾಗಲೇ ಬಹಳಷ್ಟು ಯಶಸ್ಸು ಕಂಡಿರೋದ್ರಿಂದ ಸಂಗೀತ ನಿರ್ದೇಶಕರಿಗೆ ಪಿಟೀಲನ್ನು ಅತ್ಯಂತ ಸಮರ್ಪಕವಾಗಿ ಬಳಸಲು ಗೊತ್ತಿರಬೇಕು.ಬರೀ ಪೀಟೀಲಲ್ಲದೆ ಕೊಳಲು,ವೀಣೆ ಇನ್ನಿತರ ಪರಿಕರಗಳಿಂದಲೂ ಕಣ್ಣೀರು ತರಿಸುವ ಪ್ರತಿಭೆ ಇದ್ದಲ್ಲಿ ನಿಮ್ಮ ಆಯ್ಕೆ ಗ್ಯಾರಂಟಿ!

ಆಸಕ್ತರು badukuettinabandi@ettinabandi.com ಗೆ ಅರ್ಜಿ ಸಲ್ಲಿಸುವುದು.

Monday, March 1, 2010

ಬಡವನ ಗುಡಿಸಲಲಿ...

ಒಬ್ಬ ಕನ್ನಡದ ದೈತ್ಯ ಬರಹಗಾರರರು! ಅವರ ಬರಹಗಳನ್ನು ನಾನು ಬಹಳಷ್ಟು ಮೆಚ್ಚಿ ಓದ್ತಾ ಇದ್ದೆ.ಲೇಖಕರು ಹಿಂದೆ ಪಟ್ಟಿದ್ದ ಪಾಡು,ಬಡತನದಲ್ಲಿ ಬೆಂದು ಮೇಲೆ ಬಂದ ಬಗೆ ಇದೆಲ್ಲಾ ತುಂಬ ಹೃದಯಸ್ಪರ್ಶಿ,ಆಪ್ಯಾಯಮಾನವಾಗಿತ್ತು ಆಗ ನನಗೆ.ಬಹಳಷ್ಟು ಸಲ ಪ್ರೇರಣಾ ಶಕ್ತಿಯೂ ಆಗಿತ್ತು.

ಆದ್ರೆ ಈಗೀಗ ಹಿಡಿಸ್ತಾ ಇಲ್ಲ!ಕಾರಣ ಗೊತ್ತಿಲ್ಲ.

ನಾವು ಬಹುಷಃ ಬಡತನವನ್ನು ಇಷ್ಟಪಡದಿದ್ದರೂ ಬಡತನದ ಬಗ್ಗೆ ಕಥೆ,ಕವನಗಳನ್ನ ತುಂಬಾ ಇಷ್ಟ ಪಡ್ತೀವೇನೋ ಅನ್ಸುತ್ತೆ.ಒಬ್ಬ ಲೇಖಕ ತಾನು ಕೊಂಡ ದುಬಾರಿ ಕಾರಿನ ಬಗ್ಗೆ ಏನಾದ್ರೂ ಬರೆದ್ರೆ ನಮಗೆ ಬಹುಷಃ ಹಿಡಿಸದೆ ಹೋದೀತೇನೋ.ಆದ್ರೆ ಅದೇ ಲೇಖಕ ತಾನು ಹೊಟ್ಟೆಗಿಲ್ಲದೆ,ಕೆಲಸ ಇಲ್ಲದೆ, ಪಟ್ಟ ಪಾಡೇನಾದ್ರೂ ಬರೆದ್ರೆ ತುಂಬಾ ಇಷ್ಟ ಪಟ್ಟು ಓದ್ತೀವಿ.

ನಾವು ಬಡವರಾಗಿರಲು ಖಂಡಿತ ಇಷ್ಟಪಡದಿದ್ದರೂ ’ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು ’ ಕವಿತೆ ಇಷ್ಟ ಪಡ್ತೀವಿ( ಕವಿತೆಯ ಆಶಯ ಅದಲ್ಲ ಅಂತ ಬಯ್ಯಬೇಡಿ ದಯವಿಟ್ಟು!)

ಲೇಖಕ ಊಟಕ್ಕೆ ಕಾಸಿಲ್ಲದೆ ಇದ್ದಾಗ ಕಮ್ಮಿ ಖರ್ಚಿಗೆ ಜಾಸ್ತಿ ತಿನ್ನೋಕೆ ಸಿಗುತ್ತೆ ಅನ್ನೋ ಕಾರಣಕ್ಕೆ ಶಿವಾಜಿನಗರಕ್ಕೆ ಹೋಗಿ ದನದ ಮಾಂಸ ತಿಂದ ಘಟನೆಯನ್ನು ಬರೆದಾಗ ಓದೋ ಖುಷಿ(ಖುಷಿ ಅಂದ್ರೆ ಬಹುಷಃ ಸರಿ ಆಗಲ್ಲ!) ’ನನ್ನ ಅಳಿಯ ಒಂದು ಕೋಟಿ ಖರ್ಚಿ ಮಾಡಿ ಜಿಮ್ ಮಾಡಿದ್ದಾನೆ ’ ಅನ್ನೋದನ್ನು ಬರೆದಾಗ ಯಾಕೆ ಆಗಲ್ಲ ?

ಹೊಸ ಫ್ರಾಕ್ ಕೊಡಿಸಲು ಅಪ್ಪನ ಬಳಿ ಕಾಸಿಲ್ಲದೇ ಇದ್ದಾಗ ಮಗಳು ಹಳೇ ಫ್ರಾಕ್ ಹಾಕ್ಕೊಂಡು ಹೋಗ್ತೀನಿ ಅಂತ ಹೇಳಿದ್ದನ್ನು ಬರೆದಾಗ ಓದಿದಷ್ಟು ಇಂಟೆನ್ಸ್ ಆಗಿ ’ಮಗಳಿಗೆ ಈಗ ಐದಂಕಿ ಸಂಬಳ ’ ಅಂತ ಲೇಖಕ ಹೆಮ್ಮೆಯಿಂದ ಬರೆದಾಗ ಯಾಕೆ ಓದಿಸಿಕೊಂಡು ಹೋಗಲ್ಲ?

ಕಾಸಿಲ್ಲದೆ ಇದ್ದದ್ದಕ್ಕೆ ಸಣ್ಣ ಸಣ್ಣ ಪುಸ್ತಕಗಳನ್ನು ಅಂಗಡಿಯಲ್ಲೇ ಓದ್ತಿದ್ದೆ ಅನ್ನೋದನ್ನು ಲೇಖಕ ಬರೆದಾಗ ಆಗೋ ಖುಷಿ ’ನಾನು ಕಾದಂಬರಿಗಳನ್ನು ಅಮೆಝಾನ್ ಕಿಂಡಲ್ ನಲ್ಲೇ ಓದೋದು ’ ಅಂತ ಹೇಳಿದಾಗ ಯಾಕೆ ಆಗಲ್ಲ?

’ಮುಕ್ತ ಮುಕ್ತ ’ದ ಪೆದ್ದು ಪೆದ್ದಾಗಿ ಮಾತಾಡೋ ಶಾರದತ್ತೆ ಇಷ್ಟ ಆದಷ್ಟು ’ಕ್ಯೋಂಕಿ ಸಾಸ್ ಭಿ ’ ಸೀರಿಯಲ್ ನ ಜರತಾರಿ ಸೀರೆಯ ಆಂಟಿಯರು ಯಾಕೆ ಇಷ್ಟ ಆಗಲ್ಲ?

ಎಲ್ಲೋ ನಮಗೆ ಶ್ರೀಮಂತರು ಅಂದ್ರೆ ಸರಿ ಇಲ್ಲ,ಅವರಿಗೆ ಸಂವೇದನೆಗಳೇ ಇಲ್ಲ ಅನ್ನೋ ಭಾವನೆ ಮೂಡಿದೆ ಅನ್ಸುತ್ತೆ.ಅಥವಾ ನಮಗೆ ಬೆರೆಯವರ ಉನ್ನತಿ,ಶ್ರೀಮಂತಿಕೆ ಮೆಚ್ಚೋದಕ್ಕೆ ಆಗಲ್ವೇನೋ!

ನಾನೂ ಶ್ರೀಮಂತ,ಅವಳೂ ಶ್ರೀಮಂತೆ , ಮರ್ಸಿಡಿಸ್ ನಲ್ಲೇ ನಮ್ಮ ಓಡಾಟ ಅನ್ನೋ ಥರ ಕವಿತೆಗಳು ನಮಗೆ ಇಷ್ಟವಾಗೋದೇ ಇಲ್ವೇನೋ?

ಗುಲಾಬಿ ಟಾಕೀಸ್ ನ ಗುಲಾಬಿ ಒಂದು ವೇಳೆ ಶ್ರೀಮಂತೆ ಆಗಿದ್ರೆ ನಾವು ಅವಳನ್ನು ಈಗ ಇಷ್ಟ ಪಟ್ಟಷ್ಟೇ ಇಷ್ಟ ಪಡ್ತಿದ್ವಾ?ಬಡತನದಲ್ಲಿ ಬೆಂದದ್ದಕ್ಕೇ ಉಮಾಶ್ರೀಯವರಿಗೆ ಅಂಥ ಮನೋಜ್ಞ ಅಭಿನಯ ನೀಡೋದಕ್ಕೆ ಸಾಧ್ಯ ಆಯ್ತಾ?

ಇದು ಹ್ಯೂಮನ್ ಸೈಕಾಲಜಿ ಗೆ ಸಂಬಂಧ ಪಟ್ಟಿದ್ದಾ?

Sunday, February 14, 2010

ಸಂಸ್ಕೃತಿ ,ಸಭ್ಯತೆ....

ವ್ಯಾಲೆಂಟೈನ್ಸ್ ದಿನದ ಆಚರಣೆಯ ಪರ ವಿರೋಧದ ಚರ್ಚೆಯನ್ನು ನೋಡುತ್ತಾ ಇದ್ರೆ ತಲೆ ಕೆಟ್ಟೇ ಹೋಯ್ತು!ವ್ಯಾಲೆಂಟೈನ್ಸ್ ದಿನದ ಆಚರಣೆ ನಮ್ಮ ಭಾರತೀಯ ಸಂಸ್ಕೃತಿ ಅಲ್ಲ ಅನ್ನೋದು ತಡವಾಗಿ ಜನರ ಗಮನಕ್ಕೆ ಬಂದ ಹಾಗಿದೆ.ವ್ಯಾಲೆಂಟೈನ್ಸ್ ದಿನದಂಥ ಕ್ಷುಲ್ಲಕ ವಿಷಯದ ಬಗ್ಗೆ ತಲೆ ಕೆಡಿಸಿಕೊಳ್ಳೋದಕ್ಕಿಂತ ನೈಸ್ ರೋಡ್ ನಿಂದಾಗಿ ರೈತರಿಗಾದ ಅನ್ಯಾಯದ ಬಗ್ಗೆ ದನಿ ಎತ್ತಿದ್ರೆ ಯಾರಿಗಾದ್ರೂ ಅಲ್ಪ ಸ್ವಲ್ಪ ಸಹಾಯವಾದ್ರೂ ಅಗ್ತಿತ್ತು.

ಅದ್ರೆ ಇದು ಸಾಧ್ಯ ಇಲ್ಲ ! ಛೇ ದೇವೇಗೌಡ್ರಿಗೆ ಸಪೋರ್ಟ್ ಮಾಡೋದಾ? (ವಿಶ್ವೇಶ್ವರ ಭಟ್ರಿಗೆ ಮಂಡೆ ಸಮ ಇಲ್ಲ!)

ಪ್ರೀತಿಯನ್ನು ಒಪ್ಪದೇ ಇದ್ದದ್ದಕ್ಕೆ acid ದಾಳಿಗೆ ತುತ್ತಾದ ಯುವತಿಯರ ಬೆಂಬಲ ನೀಡಲು ಈ ಸಂಘಟನೆಗಳಿಗೆ ಪುರುಸೊತ್ತಿದೆಯಾ ಅದೂ ಇಲ್ಲ.
ಇವರಿಗೆ ಸಿಕ್ಕಿದ್ದು ವರ್ಷಕ್ಕೊಂದು ದಿನ ಆಚರಿಸೋ ವ್ಯಾಲೆಂಟೈನ್ಸ್ ದಿನ.

ವ್ಯಾಲೆಂಟೈನ್ಸ್ ದಿನದ ಆಚರಣೆಯಿಂದ ಭಾರತೀಯ ಸಂಸ್ಕೃತಿಗೆ ಹೇಗೆ ಧಕ್ಕೆ ಉಂಟಾಗ್ತಿದೆಯೋ ಗೊತ್ತಾಗ್ತಿಲ್ಲ.ಗ್ರೀಟಿಂಗ್ಸ್ ಕಾರ್ಡ್ ಕಂಪೆನಿಗಳದ್ದೇ ಶಡ್ಯಂತ್ರ ಈ ವ್ಯಾಲೆಂಟೈನ್ಸ್ ಡೇ ಅನ್ನೋದು ಕೆಲವರ ಅಭಿಪ್ರಾಯ.ಅದನ್ನು ಒಪ್ಪಿದರೂ ಭಾರತೀಯ ಸಂಸೃತಿಗೆ ಧಕ್ಕೆ ಅಗೋ ಅಂಥದ್ದು ಏನೂ ಕಾಣಲ್ಲ.ನಾಳೆ ದೀಪಾವಳಿಗೆ ಗ್ರೀಟಿಂಗ್ಸ್ ಹೆಚ್ಚಾಗಿ ಖರ್ಚಾಗುತ್ತೆ ಅನ್ನೋ ರಿಪೋರ್ಟ್ ಬಂದ್ರೆ ಅದನ್ನೂ ಗ್ರೀಟಿಂಗ್ಸ್ ಕಾರ್ಡ್ ಮಾಫಿಯಾ ಅನ್ನೋಕಾಗುತ್ತಾ?ನಾಳೆ ಯಾರಾದ್ರೂ ಸತ್ತರೆ ಅವರ ಮನೆಯವರಿಗೆ ಶೋಕ ವ್ಯಕ್ತಪಡಿಸೋ ಅಂಥ ಗ್ರೀಟಿಂಗ್ಸ್(ಗ್ರೀಟ್ ಅನ್ನೋದು ತಪ್ಪಾಗುತ್ತೆ!)ಕಾರ್ಡ್ ಏನಾದ್ರೂ ಬಂದ್ರೆ ಅದನ್ನೂ ಮಾರ್ತಾರೆ ಈ ಕಂಪೆನಿಯವರು.

ಕೆಲವೊಂದು ಸಲ ಈ ವ್ಯಾಲೆಂಟೈನ್ಸ್ ಡೇ ಹಿಂದೆ ಗುಲಾಬಿ ತೋಟದವರ ಕೈವಾಡ ಇದ್ರೂ ಇರಬಹುದು ಅನ್ಸುತ್ತೆ ! ಯಾಕಂದ್ರೆ ತಮ್ಮ ಗುಲಾಬಿಗಳು ಖರ್ಚಾಗ್ಲಿ ಅನ್ನೋ ಕಾರಣಕ್ಕೇನಾದ್ರೂ ಈ ರೈತರು ಇಂಥ ದಿನವನ್ನು ಹುಟ್ಟು ಹಾಕಿರಬಹುದೇ? ’ಮುಕ್ತ ಮುಕ್ತದ’ ಶಶಿಯಂಥವರು ಹಾರಿಕಲ್ಚರ್ ಶುರು ಮಾಡಿದ ಹಾಗೆ,ಲಾಭ ಗಳಿಸೋದಕ್ಕೋಸ್ಕರ ಆಧುನಿಕ ರೈತರು ಇಂಥ ಗಿಮಿಕ್ ಏನಾದ್ರೂ ಶುರು ಮಾಡಿರಬಹುದೇ ? ಹಾಗಿದ್ರೆ ಅಂತ ರೈತರ ಹೊಟ್ಟೆ ತಣ್ಣಗಿರಲಿ ಪಾಪ.ಯಾವಾಗ್ಲೂ ರೈತರು ನಷ್ಟದಲ್ಲೇ ಇರೋದು.ಈ ವ್ಯಾಲೆಂಟೈನ್ಸ್ ಡೇ ನೆಪದಲ್ಲಾದ್ರೂ ಲಾಭ ಮಾಡಿಕೊಳ್ಳಲಿ ಬಿಡಿ.

ವ್ಯಾಲೆಂಟೈನ್ಸ್ ಡೇ ದಿನ ಸ್ವೇಚ್ಛೆ ಸಿಗುತ್ತೆ ಅನ್ನೋದು ಬಹಳಷ್ಟು ಜನರ ಕಂಪ್ಲೇಂಟು.ಆದರೆ ಹೆಬ್ಬಾಳ ಪಾರ್ಕ್ ,ಕಬ್ಬನ್ ಪಾರ್ಕ್ ಅಥವಾ ಬೆಂಗಳೂರಿನ ಯಾವುದೇ ಪಾರ್ಕ್ ಗೆ ಹೋದ್ರೂ ನಿತ್ಯ ಇಂಥ ಸ್ವೇಚ್ಛಾಚಾರಗಳೇ ನೋಡೋದಕ್ಕೆ ಸಿಗುತ್ತೆ.ಈ ಒಂದು ದಿನ ಅಂಥ ಅನಾಹುತ ಏನಾಗುತ್ತೋ ದೇವರೇ ಬಲ್ಲ.ಬಹುಷಃ ’ವ್ಯಾಲೆಂಟೈನ್ಸ್ ಡೇ ಆದ ಒಂಬತ್ತು ತಿಂಗಳ ನಂತರ ಚಿಲ್ಡ್ರನ್ಸ್ ಡೇ ಬರುತ್ತೆ’ ಅನ್ನೋ ಜೋಕನ್ನೇ ಪಾಪ ಇವರು ಸೀರಿಯಸ್ ಆಗಿ ತಗೊಂಡ್ರೋ ಏನೋ?

ನಮ್ಮ ಊರಲ್ಲೊಬ್ಬ ಸ್ನೆಹಿತರಿದ್ದಾರೆ.ಅವರಿಗೆ ರಕ್ಷಾಬಂಧನ ಮಾಡೋ ಬಿಸಿನೆಸ್!RSS ನವರೇ ಹೆಚ್ಚಾಗಿ ಬಳಸುವ ಕೇಸರಿ ಬಣ್ಣದ ರಕ್ಷಾಬಂಧನ ಅದು.ವರ್ಷಕ್ಕೆ ಒಂದು ದಿನ ಬರೋ ಈ ರಕ್ಷಾಬಂಧನ ಹಬ್ಬಕ್ಕೆ ಪಾಪ ಅವರು ವರ್ಷಪೂರ್ತಿ ತಯಾರಿ ನಡೆಸ್ತಾರೆ.
ನಮಗೆ ರಕ್ಷಾಬಂಧನ ಸಂಸ್ಕೃತಿ .ಆದರೆ ಪಾಪ ಅವರಿಗೆ ಅದು ಹೊಟ್ಟೆಪಾಡು,ಬಿಸಿನೆಸ್ ! ನಮಗೆ ದೇವಸ್ಥಾನಕ್ಕೆ ಹೋಗೋದು ಸಂಸ್ಕೃತಿ ಆದರೆ ಅರ್ಚಕರಿಗೆ ಅದು ಹೊಟ್ಟೆಪಾಡು.ಚಪ್ಪಲಿ ಹೊರಬಿಟ್ಟು ದೇವಸ್ಥಾನದ ಒಳಗೆ ಹೋಗೋದು ನಮ್ಮ ಸಂಸ್ಕೃತಿ ಆದ್ರೆ ಹೊರಗೆ ಚಪ್ಪಲಿ ಕಾಯೋ ಬಡ ಹುಡುಗನಿಗೆ ಅದು ಹೊಟ್ಟೆ ಪಾಡು.ಒಳಗೆ ಹಣ್ಣು ಕಾಯಿ ಮಾಡಿಸೋದು ನಮಗೆ ಸಂಸ್ಕೃತಿ ಆದರೆ ಹೊರಗೆ ಅದನ್ನು ಮಾರೋನಿಗೆ ಅದು ಹೊಟ್ಟೆಪಾಡು.ಮದುವೆಗೆ ವಾಲಗ ಊದಿಸೋದು ನಮ್ಮ ಸಂಸ್ಕೃತಿ,ವಾಲಗ ಊದೋನಿಗೆ ಅದು ಹೊಟ್ಟೆಪಾಡು.

ಹಿಂದೆ ಗ್ರಾಮಾಫೋನ್ ತಟ್ಟೆಯ ಭಕ್ತಿ ಗೀತೆ ಹಾಕುತ್ತಿದ್ದ ದೇವಸ್ಥಾನಗಳಿಗೆ ಇವತ್ತು MP3 ಪ್ಲೇಯರ್ ಗಳು ಬಂದಿವೆ.ನಗಾರಿ ಬಾರಿಸಲು ಜನ ಸಿಗದೆ(?) ಮೋಟರೈಸ್ಡ್ ನಗಾರಿ,ಜಾಗಟೆ ಬಂದಿದೆ.ಅರ್ಚಕರು ತಮ್ಮದೇ ಆದ ಮೊಬೈಲ್ ನೆಟ್ ವರ್ಕ್ ಇಟ್ಟುಕೊಂಡಿದ್ದಾರೆ.ದೇವಸ್ಥಾನಗಳೂ ISO certified ಆಗಿವೆ!

ಯಾವುದೇ ದೇಶದ ಸಂಸ್ಕೃತಿಯೂ ಒಂದು ದಿನದಲ್ಲಿ ಉದಯವಾಗಿಲ್ಲ,ಹಾಗೆಯೇ ಒಂದು ದಿನದಲ್ಲಿ ಹಾಳೂ ಆಗಿಲ್ಲ.ಕಾಲ ಕಾಲಕ್ಕೆ ಸಂಸ್ಕೃತಿ ಬದಲಾಗಿದೆ,ಬದಲಾಗುತ್ತೆ ಅಷ್ಟೇ.ನಮಗೆ ಇಷ್ಟ ಇರಲಿ ಇಲ್ಲದೇ ಇರಲಿ!

ಪರಸ್ಪರ ಇಷ್ಟ ಇದ್ದು ತಬ್ಬಿಕೊಳ್ಳೋ ಪ್ರೇಮಿಗಳಿಂದ ಸಂಸ್ಕೃತಿ ಹಾಳಾಗ್ತಾ ಇದೆ ಅನ್ನೋ ನಮಗೆ ಅದೆಷ್ಟೊ ಹೆಂಗಸರು ಗಾರ್ಮೆಂಟ್ ಮತ್ತಿತರ ಕಂಪೆನಿಗಳಲ್ಲಿ ಲೈಂಗಿಕ ದೌರ್ಜನ್ಯಕ್ಕೀಡಾಗೋದು ಅರಿವಾಗೋದೇ ಇಲ್ಲ!ಮುಂಬೈನ ಕಾಮಾಟಿಪುರದಲ್ಲಿ ’ಇಷ್ಟ ಇಲ್ಲದೇ ಇದ್ರೂ’ ಮೈ ಮಾರಿ ಕೊಳ್ಳೋ ಹೆಂಗಸರು ಕಾಣಿಸೋದೇ ಇಲ್ಲ!

ಯಾಕಂದ್ರೆ ಅಂಥ ಸಮಸ್ಯೆಗಳು ದಿನಾ ಇರುತ್ತೆ.ವ್ಯಾಲೆಂಟೈನ್ಸ್ ಡೇ ಥರ ವರ್ಷಕ್ಕೊಂದು ಸಲ ಅಲ್ವಲ್ಲ!

Friday, January 22, 2010

ಸ್ವಮೇಕ್----ರಿಮೇಕ್----ಕಿರಿಕ್....!

~~~~~~~~~~~~~~~~~~~~~~~ಸ್ವಮೇಕ್~~~~~~~~~~~~~~~~~~~~~~
'ರಾಮ್’ ತೆಲುಗಿನ ’ರೆಡಿ’ಯ ರಿಮೇಕ್ ಅಂತೆ. ’ಸೂರ್ಯಕಾಂತಿ’ ತೆಲುಗಿನ ’ಅತಿಥಿ’ಯ ಹಾಗೇ ಇದೆಯಂತೆ.ಗಣೇಶ್ ’ತ್ರೀ ಈಡಿಯಟ್ಸ್ ’ ಮಾಡ್ತಾರಂತೆ.ಈ ಸುದ್ದಿಗಳನ್ನೆಲ್ಲಾ ಕೇಳ್ತಾ ಇದ್ರೆ ನಖಶಿಖಾಂತ ಉರಿಯುತ್ತೆ.ಎಷ್ಟು ಅಂತ ಸಹಿಸೋದು ?

ಪರಭಾಷಾ ಚಿತ್ರಗಳ ಹಾವಳಿ ಬಗ್ಗೆ ನಮ್ಮ ಕನ್ನಡ ಚಿತ್ರರಂಗದವರು ಅಸಮಧಾನ ವ್ಯಕ್ತ ಪಡಿಸ್ತಾನೆ ಇರ್ತಾರೆ.ಆದ್ರೆ ಅವರಿಗೆ ರಿಮೇಕ್ ಮಾಡಲು ಪರಭಾಷಾ ಚಿತ್ರಗಳೇ ಬೇಕು.

ಮೊನ್ನೆ ಲೂಸ್ ಮಾದನ ಹೊಸ(?) ಚಿತ್ರ ’ರಾವಣ’ದ ಬಗ್ಗೆ ಚಿತ್ರದ ನಿರ್ಮಾಪಕರು ತಮ್ಮ ಅಭಿಪ್ರಾಯ ಹೇಳ್ತಾ ’ತಮಿಳಿನ ಧನುಷ್ ಗಿಂತ ನಮ್ಮ ಯೋಗೇಶ್ ಚೆನ್ನಾಗಿ ಮಾಡಿದ್ದಾನೆ ’ ಅಂದುಬಿಡೋದಾ?ಕನ್ನಡದ ಧನುಷ್ ಅಂತ ಹೆಸರು ಪಡೆದುಕೊಂಡಿದ್ದಕ್ಕೆ ಒಂದರ ಮೇಲೊಂದು ಧನುಷ್ ನ ಚಿತ್ರಗಳನ್ನು ಭಟ್ಟಿ ಇಳಿಸ್ತಾ ಇದ್ದಾನೆ ಯೋಗೀಶ !

ಸಧ್ಯದ ಮಟ್ಟಿಗೆ ಖುಶಿ ಪಡಲು ಒಂದೇ ಕಾರಣ ಚಲನಚಿತ್ರಗಳ ಸಂಗೀತ ! ಸಧ್ಯ ನಮ್ಮ ಸಂಗೀತ ನಿರ್ದೇಶಕರೇ ನಾವೆಲ್ಲಾ ಕೊಂಚ ತಲೆ ಎತ್ತಿ ಗರ್ವದಿಂದ ಓಡಾಡೋ ಹಾಗೆ ಮಾಡಿದ್ದಾರೆ.ಅವರಿಗೆ ಅಭಿನಂದನೆಗಳು.

ಕನ್ನಡ ನಿರ್ದೇಶಕರ ಬಳಿ ಕೇಳಿದ್ರೆ ’ ಕಥೆ ಇಲ್ಲ ಸ್ವಾಮಿ ’ ಅಂತಾರೆ.ನಾವೇನು ಕನ್ನಡದ್ದೇ ಕಥೆ ಬೇಕು ಅಂದಿದ್ದೀವಾ? ಯವುದೋ ಜಪಾನೀಸ್ ಭಾಷೆಯ ಕಥೆಯ ಅಧರಿತ ಚಿತ್ರವನ್ನೂ ಸೂಕ್ತ ತಿದ್ದುಪಡಿ ಮಾಡಿ ಬಳಸಬಹುದು.ಕನ್ನಡದಲ್ಲಿ ಬೇಕಾದಷ್ಟು ಕಥೆಗಾರರಿದ್ದಾರೆ.ಆದರೂ ಹಿತ್ತಲ ಗಿಡ ಮದ್ದಲ್ಲ ಅನ್ನೋದೆ ನಮ್ಮ ಅನಿಸಿಕೆ ಆದ್ರೆ ಬೇರೆ ಹಿತ್ತಲಿನ ಗಿಡವನ್ನು ಬಳಸಿ ಮದ್ದು ಮಾಡಿ.ಯಾಕೆ ಮದ್ದನ್ನೆ ತಗೊಂಡು ಬರ್ತೀರಾ?ತಮಿಳು ಕಥೆಯೇ ಬೇಕಿದ್ರೆ ತಮಿಳುನಾಡಿನ ಯಾವುದೋ ಕತೆಯನ್ನೆ ಚಿತ್ರ ಮಾಡಬಹುದು(ಕದಿಯೋದಲ್ಲ,ಕಥೆಗಾರನಿಗೆ ಸೂಕ್ತ ಸಂಭಾವನೆ ಕೊಟ್ಟು!).ಈ ರೀತಿ ಹೇಳಿದ್ರೆ ನಮ್ಮ ಬಳಿ ಅವರಿಗೆ ಕೊಡೋಕೆ ಕಾಸಿಲ್ಲ ಅಂತಾರೆ.

ಎಲ್ಲೋ ಫಾರಿನ್ ಗೆ ಹೋಗಿ ಅಲ್ಲಿ ಪಟ್ಟಾ ಪಟ್ಟಿ ಚಡ್ಡಿ ಹಾಕಿ ಡ್ಯಾನ್ಸ್ ಶೂಟ್ ಮಾಡೋಕೆ ಕಾಸಿದೆ. ಆದ್ರೆ ಕಥೆಗೆ ಕಾಸಿಲ್ಲ!!!

ಏನ್ ಮಾಡೋದ್ ಹೇಳಿ ನಮ್ ಹಣೆ ಬರಹ!

~~~~~~~~~~~~~~~~~~~~~~~ರಿಮೇಕ್~~~~~~~~~~~~~~~~~~~~~~
ಈ ಜನ ಯಾಕೆ ರಿಮೇಕ್ ಬಗ್ಗೆ ಕಿಡಿ ಕಾರ್ತಾರೋ ಗೊತ್ತಿಲ್ಲ ಕಣ್ರಿ!ನೋಡಿ ನಮಗೆ ಎಲ್ಲಾ ಭಾಷೆಗಳು ಅರ್ಥ ಆಗಲ್ಲ.ಹಾಗಾಗಿ ನಾವು ಆ ಭಾಷೆಯಲ್ಲಿ ತಯಾರಾಗಿರೋ ಸಿನೆಮಾ ನೋಡೋ ಸಾಧ್ಯತೆಗಳು ತೀರಾ ಕಮ್ಮಿ.ಅಂಥದ್ದರಲ್ಲಿ ನಮ್ಮ ಚಿತ್ರ ನಿರ್ಮಾಪಕರು ಪಾಪ ಅನ್ಯ ಭಾಷೆಯ ಬರೀ ಹಿಟ್ ಆಗಿರೋ ಚಿತ್ರಗಳನ್ನಷ್ಟೇ ನಮಗೆ ರಿಮೇಕ್ ಮಾಡಿ ತೋರಿಸಿದ್ರೆ ಏನ್ ನಷ್ಟ ಅಂತ ನಂಗೆ ಗೊತ್ತಾಗ್ತಿಲ್ಲ! ಅವರು ಆ ರೀತಿ ಮಾಡಿದ್ರಿಂದಲೇನಮಗೆ ’ಆಟೋಗ್ರಾಫ್’ ,’ಹುಚ್ಚ’ ,ಮುಂತಾದ ಒಳ್ಳೆಯ ಸಿನೆಮಾಗಳು ನೋಡೋಕೆ ಸಾಧ್ಯ ಆಗಿದ್ದು.

ನಮಗೆ ಗೋಬಿ ಮಂಚೂರಿ ತಿನ್ನೋವಾಗ ಅದು ರಿಮೇಕ್ ಅನ್ಸೋದೇ ಇಲ್ಲ! ನೂಡಲ್ಸ್ ತಿನ್ನೋವಾಗ್ಲೂ ’ಅದು ಚೈನಿಸ್ ಆಗಿರ್ಬಹುದು ಆದ್ರೆ ಮಾಡಿರೋದು ನಮ್ಮ ’ಅಡಿಗಾಸ್’ ನವ್ರೇ ತಾನೇ ’ಅಂತ ಬಾಯಿ ಚಪ್ಪರಿಸಿ ತಿಂತೀವಿ.ಯಾಕೆ ಗೋಬಿ ,ನೂಡಲ್ಸ್ ಗಳು ಚೈನೀಸ್ ನಮಗೆ ರಿಮೇಕ್ ಥರ ಅನ್ಸಲ್ಲ?ಹಾಗೇ ನೋಡೋದಕ್ಕೆ ಹೋದ್ರೆ ಕಾಫಿ,ಟೀ ಕೂಡ ನಮ್ಮ ದೇಶದ್ದಲ್ಲ.ಯಾರೋ ಕೊಟ್ಟ ರಿಮೇಕ್ ಸರಕು! ರೇಶ್ಮೆ ಕೂಡ ಎಲ್ಲಿಂದಲೋ ಭಾರತಕ್ಕೆ ಬಂದಿದ್ದು.ಆದ್ರೂ ನಾವು ಅದನ್ನು ಪ್ರೀತಿಯಿಂದಲೆ ಸ್ವೀಕರಿಸಿದ್ದೀವಿ.

ರಿಮೇಕ್ ಚಿತ್ರಗಳ ಬಗ್ಗೆ ಈ ಮುನಿಸು ತರವೇ?

~~~~~~~~~~~~~~~~~~~~~~~ಕಿರಿಕ್~~~~~~~~~~~~~~~~~~~~~~

ಎರಡೂ ನಾನೇ ಬರೆದಿದ್ದು ! ದಯವಿಟ್ಟು ಹೊಡೆಯೋಕೆ ಕೋಲು ಹುಡುಕ್ಬೇಡಿ!

ನಿಮಗೆ ಯಾವುದು ಬೇಕೋ ಅದನ್ನು ಮಾತ್ರ ಸ್ವೀಕರಿಸಿ .

Monday, January 4, 2010

ರಣ್...



ಮತ್ತೊಂದು ಹಿಂದಿ ಚಿತ್ರ ತುಂಬಾ ನಿರೀಕ್ಷೆಯನ್ನು ಹುಟ್ಟಿಸಿದೆ!

’ರಣ್ ’ ಚಿತ್ರ ಬಿಡುಗಡೆಯಾಗೋದನ್ನೇ ಕಾಯ್ತಾ ಇದ್ದೀನಿ ನಾನು.ಚಿತ್ರದ trailers ತುಂಬಾ ಕುತೂಹಲ ಹುಟ್ಟಿಸಿದೆ.'Next time when you watch News ,think again ' ಅನ್ನೋ ಬುದ್ಧಿಮಾತು ಕೂಡಾ ಬರ್ತಾ ಇದೆ ಟ್ರೇಲರ್ ನಲ್ಲಿ.ರಣ್ ಚಿತ್ರ ಸುದ್ದಿ ಮಾಧ್ಯಮದ ಹುಳುಕುಗಳನ್ನು ತೋರಿಸುವಲ್ಲಿ ಬಹುಷಃ ಯಶಸ್ವಿಯಾಗಬಹುದೇನೋ.

ಅಮಿತಾಬ್ ನಟಿಸಿರೋದ್ರಿಂದ ಕೊಟ್ಟ ಕಾಸಿಗೇನೂ ಮೋಸವಾಗಲಾರದು!ಚಿತ್ರದ ಇನ್ನೊಂದು ಆಕರ್ಷಣೆ ’ನಮ್ಮ’ ಸುದೀಪ್! ’ಫೂಂಕ್’ ಚಿತ್ರದಲ್ಲಿ ತಮ್ಮ ಉತ್ತಮ ಅಭಿನಯದಿಂದ ಎಲ್ಲರ ಮನ ಗೆದ್ದಿರೋ ಕಿಚ್ಚ ’ರಣ್’ ಸಿನೆಮಾದಿಂದ ಖಾಯಂ ಆಗಿ ಬಾಲಿವುಡ್ ಕಡೆ ವಲಸೆ ಹೋಗದಿರಲಿ ಅನ್ನೋದೇ ಹಾರೈಕೆ(ಹಾರೈಕೆ ಕೆಟ್ಟದಾ ಒಳ್ಳೆಯದಾ ಗೊತ್ತಾಗ್ತಿಲ್ಲ!)

ಚಿತ್ರದ ಟೈಟಲ್ ಹಾಡಿನ ಬಗ್ಗೆ ಮಾತ್ರ ನಂದೂ ತಕರಾರಿದೆ.ರಾಷ್ಟ್ರಗೀತೆ ಯನ್ನು ತಿರುಚುವ ಹಾಳು ಐಡಿಯಾ ಅದ್ಯಾವನು ಕೊಟ್ಟನೋ ದೇವರಿಗೇ ಗೊತ್ತು !ಇದನ್ನೇ ನ್ಯೂಸ್ ಚ್ಯಾನೆಲ್ ಗಳು ಅಸ್ತ್ರವಾಗಿ ಬಳಸುವ ಸಾಧ್ಯತೆಗಳಿವೆ.

ಬಾಲಿವುಡ್ ನ ಜನ ಸದಾ ಕಾಂಟ್ರೋವರ್ಶಿಯಲ್ ವಸ್ತುಗಳನ್ನಿಟ್ಟುಕೊಂಡು ಸಿನೆಮಾ ಮಾಡ್ತಾ ಇರ್ತಾರೆ.ಹಾಗಾಗಿ ನಮಗೆ ಕೆಲವು ಕರಾಳ ಮುಖಗಳ ದರ್ಶನ ಆಗ್ತಾ ಇರುತ್ತೆ.ಆದ್ರೆ ನಮ್ಮಲ್ಲಿ ಪಾಪ ’ ಮಠ ’ ದ ಗುರುಪ್ರಸಾದ್ ಕಾಂಟ್ರೋವರ್ಷಿಯಲ್ ಸಬ್ಜೆಕ್ಟ್ ಕೈಗೆತ್ತಿ ಕೊಂಡಾಗಲೇ ಹೀರೋ ಎಸ್ಕೇಪ್ ಅಂದು ಬಿಟ್ಟಿದ್ದಾರೆ.ಆದರೆ ಗುರು ಹಿಂಜರಿದಿಲ್ಲ.

'ಡೈರೆಕ್ಟರ್ ಸ್ಪೆಷಲ್ ’ ನ ಡೈರೆಕ್ಟರ್ ಇನ್ನೂ ಸ್ಪೆಶಲ್!

Photo Courtesy :http://www.moviethread.com/