ವ್ಯಾಲೆಂಟೈನ್ಸ್ ದಿನದ ಆಚರಣೆಯ ಪರ ವಿರೋಧದ ಚರ್ಚೆಯನ್ನು ನೋಡುತ್ತಾ ಇದ್ರೆ ತಲೆ ಕೆಟ್ಟೇ ಹೋಯ್ತು!ವ್ಯಾಲೆಂಟೈನ್ಸ್ ದಿನದ ಆಚರಣೆ ನಮ್ಮ ಭಾರತೀಯ ಸಂಸ್ಕೃತಿ ಅಲ್ಲ ಅನ್ನೋದು ತಡವಾಗಿ ಜನರ ಗಮನಕ್ಕೆ ಬಂದ ಹಾಗಿದೆ.ವ್ಯಾಲೆಂಟೈನ್ಸ್ ದಿನದಂಥ ಕ್ಷುಲ್ಲಕ ವಿಷಯದ ಬಗ್ಗೆ ತಲೆ ಕೆಡಿಸಿಕೊಳ್ಳೋದಕ್ಕಿಂತ ನೈಸ್ ರೋಡ್ ನಿಂದಾಗಿ ರೈತರಿಗಾದ ಅನ್ಯಾಯದ ಬಗ್ಗೆ ದನಿ ಎತ್ತಿದ್ರೆ ಯಾರಿಗಾದ್ರೂ ಅಲ್ಪ ಸ್ವಲ್ಪ ಸಹಾಯವಾದ್ರೂ ಅಗ್ತಿತ್ತು.
ಅದ್ರೆ ಇದು ಸಾಧ್ಯ ಇಲ್ಲ ! ಛೇ ದೇವೇಗೌಡ್ರಿಗೆ ಸಪೋರ್ಟ್ ಮಾಡೋದಾ? (ವಿಶ್ವೇಶ್ವರ ಭಟ್ರಿಗೆ ಮಂಡೆ ಸಮ ಇಲ್ಲ!)
ಪ್ರೀತಿಯನ್ನು ಒಪ್ಪದೇ ಇದ್ದದ್ದಕ್ಕೆ acid ದಾಳಿಗೆ ತುತ್ತಾದ ಯುವತಿಯರ ಬೆಂಬಲ ನೀಡಲು ಈ ಸಂಘಟನೆಗಳಿಗೆ ಪುರುಸೊತ್ತಿದೆಯಾ ಅದೂ ಇಲ್ಲ.
ಇವರಿಗೆ ಸಿಕ್ಕಿದ್ದು ವರ್ಷಕ್ಕೊಂದು ದಿನ ಆಚರಿಸೋ ವ್ಯಾಲೆಂಟೈನ್ಸ್ ದಿನ.
ವ್ಯಾಲೆಂಟೈನ್ಸ್ ದಿನದ ಆಚರಣೆಯಿಂದ ಭಾರತೀಯ ಸಂಸ್ಕೃತಿಗೆ ಹೇಗೆ ಧಕ್ಕೆ ಉಂಟಾಗ್ತಿದೆಯೋ ಗೊತ್ತಾಗ್ತಿಲ್ಲ.ಗ್ರೀಟಿಂಗ್ಸ್ ಕಾರ್ಡ್ ಕಂಪೆನಿಗಳದ್ದೇ ಶಡ್ಯಂತ್ರ ಈ ವ್ಯಾಲೆಂಟೈನ್ಸ್ ಡೇ ಅನ್ನೋದು ಕೆಲವರ ಅಭಿಪ್ರಾಯ.ಅದನ್ನು ಒಪ್ಪಿದರೂ ಭಾರತೀಯ ಸಂಸೃತಿಗೆ ಧಕ್ಕೆ ಅಗೋ ಅಂಥದ್ದು ಏನೂ ಕಾಣಲ್ಲ.ನಾಳೆ ದೀಪಾವಳಿಗೆ ಗ್ರೀಟಿಂಗ್ಸ್ ಹೆಚ್ಚಾಗಿ ಖರ್ಚಾಗುತ್ತೆ ಅನ್ನೋ ರಿಪೋರ್ಟ್ ಬಂದ್ರೆ ಅದನ್ನೂ ಗ್ರೀಟಿಂಗ್ಸ್ ಕಾರ್ಡ್ ಮಾಫಿಯಾ ಅನ್ನೋಕಾಗುತ್ತಾ?ನಾಳೆ ಯಾರಾದ್ರೂ ಸತ್ತರೆ ಅವರ ಮನೆಯವರಿಗೆ ಶೋಕ ವ್ಯಕ್ತಪಡಿಸೋ ಅಂಥ ಗ್ರೀಟಿಂಗ್ಸ್(ಗ್ರೀಟ್ ಅನ್ನೋದು ತಪ್ಪಾಗುತ್ತೆ!)ಕಾರ್ಡ್ ಏನಾದ್ರೂ ಬಂದ್ರೆ ಅದನ್ನೂ ಮಾರ್ತಾರೆ ಈ ಕಂಪೆನಿಯವರು.
ಕೆಲವೊಂದು ಸಲ ಈ ವ್ಯಾಲೆಂಟೈನ್ಸ್ ಡೇ ಹಿಂದೆ ಗುಲಾಬಿ ತೋಟದವರ ಕೈವಾಡ ಇದ್ರೂ ಇರಬಹುದು ಅನ್ಸುತ್ತೆ ! ಯಾಕಂದ್ರೆ ತಮ್ಮ ಗುಲಾಬಿಗಳು ಖರ್ಚಾಗ್ಲಿ ಅನ್ನೋ ಕಾರಣಕ್ಕೇನಾದ್ರೂ ಈ ರೈತರು ಇಂಥ ದಿನವನ್ನು ಹುಟ್ಟು ಹಾಕಿರಬಹುದೇ? ’ಮುಕ್ತ ಮುಕ್ತದ’ ಶಶಿಯಂಥವರು ಹಾರಿಕಲ್ಚರ್ ಶುರು ಮಾಡಿದ ಹಾಗೆ,ಲಾಭ ಗಳಿಸೋದಕ್ಕೋಸ್ಕರ ಆಧುನಿಕ ರೈತರು ಇಂಥ ಗಿಮಿಕ್ ಏನಾದ್ರೂ ಶುರು ಮಾಡಿರಬಹುದೇ ? ಹಾಗಿದ್ರೆ ಅಂತ ರೈತರ ಹೊಟ್ಟೆ ತಣ್ಣಗಿರಲಿ ಪಾಪ.ಯಾವಾಗ್ಲೂ ರೈತರು ನಷ್ಟದಲ್ಲೇ ಇರೋದು.ಈ ವ್ಯಾಲೆಂಟೈನ್ಸ್ ಡೇ ನೆಪದಲ್ಲಾದ್ರೂ ಲಾಭ ಮಾಡಿಕೊಳ್ಳಲಿ ಬಿಡಿ.
ವ್ಯಾಲೆಂಟೈನ್ಸ್ ಡೇ ದಿನ ಸ್ವೇಚ್ಛೆ ಸಿಗುತ್ತೆ ಅನ್ನೋದು ಬಹಳಷ್ಟು ಜನರ ಕಂಪ್ಲೇಂಟು.ಆದರೆ ಹೆಬ್ಬಾಳ ಪಾರ್ಕ್ ,ಕಬ್ಬನ್ ಪಾರ್ಕ್ ಅಥವಾ ಬೆಂಗಳೂರಿನ ಯಾವುದೇ ಪಾರ್ಕ್ ಗೆ ಹೋದ್ರೂ ನಿತ್ಯ ಇಂಥ ಸ್ವೇಚ್ಛಾಚಾರಗಳೇ ನೋಡೋದಕ್ಕೆ ಸಿಗುತ್ತೆ.ಈ ಒಂದು ದಿನ ಅಂಥ ಅನಾಹುತ ಏನಾಗುತ್ತೋ ದೇವರೇ ಬಲ್ಲ.ಬಹುಷಃ ’ವ್ಯಾಲೆಂಟೈನ್ಸ್ ಡೇ ಆದ ಒಂಬತ್ತು ತಿಂಗಳ ನಂತರ ಚಿಲ್ಡ್ರನ್ಸ್ ಡೇ ಬರುತ್ತೆ’ ಅನ್ನೋ ಜೋಕನ್ನೇ ಪಾಪ ಇವರು ಸೀರಿಯಸ್ ಆಗಿ ತಗೊಂಡ್ರೋ ಏನೋ?
ನಮ್ಮ ಊರಲ್ಲೊಬ್ಬ ಸ್ನೆಹಿತರಿದ್ದಾರೆ.ಅವರಿಗೆ ರಕ್ಷಾಬಂಧನ ಮಾಡೋ ಬಿಸಿನೆಸ್!RSS ನವರೇ ಹೆಚ್ಚಾಗಿ ಬಳಸುವ ಕೇಸರಿ ಬಣ್ಣದ ರಕ್ಷಾಬಂಧನ ಅದು.ವರ್ಷಕ್ಕೆ ಒಂದು ದಿನ ಬರೋ ಈ ರಕ್ಷಾಬಂಧನ ಹಬ್ಬಕ್ಕೆ ಪಾಪ ಅವರು ವರ್ಷಪೂರ್ತಿ ತಯಾರಿ ನಡೆಸ್ತಾರೆ.
ನಮಗೆ ರಕ್ಷಾಬಂಧನ ಸಂಸ್ಕೃತಿ .ಆದರೆ ಪಾಪ ಅವರಿಗೆ ಅದು ಹೊಟ್ಟೆಪಾಡು,ಬಿಸಿನೆಸ್ ! ನಮಗೆ ದೇವಸ್ಥಾನಕ್ಕೆ ಹೋಗೋದು ಸಂಸ್ಕೃತಿ ಆದರೆ ಅರ್ಚಕರಿಗೆ ಅದು ಹೊಟ್ಟೆಪಾಡು.ಚಪ್ಪಲಿ ಹೊರಬಿಟ್ಟು ದೇವಸ್ಥಾನದ ಒಳಗೆ ಹೋಗೋದು ನಮ್ಮ ಸಂಸ್ಕೃತಿ ಆದ್ರೆ ಹೊರಗೆ ಚಪ್ಪಲಿ ಕಾಯೋ ಬಡ ಹುಡುಗನಿಗೆ ಅದು ಹೊಟ್ಟೆ ಪಾಡು.ಒಳಗೆ ಹಣ್ಣು ಕಾಯಿ ಮಾಡಿಸೋದು ನಮಗೆ ಸಂಸ್ಕೃತಿ ಆದರೆ ಹೊರಗೆ ಅದನ್ನು ಮಾರೋನಿಗೆ ಅದು ಹೊಟ್ಟೆಪಾಡು.ಮದುವೆಗೆ ವಾಲಗ ಊದಿಸೋದು ನಮ್ಮ ಸಂಸ್ಕೃತಿ,ವಾಲಗ ಊದೋನಿಗೆ ಅದು ಹೊಟ್ಟೆಪಾಡು.
ಹಿಂದೆ ಗ್ರಾಮಾಫೋನ್ ತಟ್ಟೆಯ ಭಕ್ತಿ ಗೀತೆ ಹಾಕುತ್ತಿದ್ದ ದೇವಸ್ಥಾನಗಳಿಗೆ ಇವತ್ತು MP3 ಪ್ಲೇಯರ್ ಗಳು ಬಂದಿವೆ.ನಗಾರಿ ಬಾರಿಸಲು ಜನ ಸಿಗದೆ(?) ಮೋಟರೈಸ್ಡ್ ನಗಾರಿ,ಜಾಗಟೆ ಬಂದಿದೆ.ಅರ್ಚಕರು ತಮ್ಮದೇ ಆದ ಮೊಬೈಲ್ ನೆಟ್ ವರ್ಕ್ ಇಟ್ಟುಕೊಂಡಿದ್ದಾರೆ.ದೇವಸ್ಥಾನಗಳೂ ISO certified ಆಗಿವೆ!
ಯಾವುದೇ ದೇಶದ ಸಂಸ್ಕೃತಿಯೂ ಒಂದು ದಿನದಲ್ಲಿ ಉದಯವಾಗಿಲ್ಲ,ಹಾಗೆಯೇ ಒಂದು ದಿನದಲ್ಲಿ ಹಾಳೂ ಆಗಿಲ್ಲ.ಕಾಲ ಕಾಲಕ್ಕೆ ಸಂಸ್ಕೃತಿ ಬದಲಾಗಿದೆ,ಬದಲಾಗುತ್ತೆ ಅಷ್ಟೇ.ನಮಗೆ ಇಷ್ಟ ಇರಲಿ ಇಲ್ಲದೇ ಇರಲಿ!
ಪರಸ್ಪರ ಇಷ್ಟ ಇದ್ದು ತಬ್ಬಿಕೊಳ್ಳೋ ಪ್ರೇಮಿಗಳಿಂದ ಸಂಸ್ಕೃತಿ ಹಾಳಾಗ್ತಾ ಇದೆ ಅನ್ನೋ ನಮಗೆ ಅದೆಷ್ಟೊ ಹೆಂಗಸರು ಗಾರ್ಮೆಂಟ್ ಮತ್ತಿತರ ಕಂಪೆನಿಗಳಲ್ಲಿ ಲೈಂಗಿಕ ದೌರ್ಜನ್ಯಕ್ಕೀಡಾಗೋದು ಅರಿವಾಗೋದೇ ಇಲ್ಲ!ಮುಂಬೈನ ಕಾಮಾಟಿಪುರದಲ್ಲಿ ’ಇಷ್ಟ ಇಲ್ಲದೇ ಇದ್ರೂ’ ಮೈ ಮಾರಿ ಕೊಳ್ಳೋ ಹೆಂಗಸರು ಕಾಣಿಸೋದೇ ಇಲ್ಲ!
ಯಾಕಂದ್ರೆ ಅಂಥ ಸಮಸ್ಯೆಗಳು ದಿನಾ ಇರುತ್ತೆ.ವ್ಯಾಲೆಂಟೈನ್ಸ್ ಡೇ ಥರ ವರ್ಷಕ್ಕೊಂದು ಸಲ ಅಲ್ವಲ್ಲ!
Sunday, February 14, 2010
Subscribe to:
Posts (Atom)