Tuesday, May 11, 2010

ಮಕ್ಕಳಲ್ಲದ ಮಕ್ಕಳು!

ನನ್ನ ಆಲ್ ಟೈಮ್ ಫೇವರೇಟ್ ಲೇಖಕ ವಸುಧೇಂದ್ರ ರ ಹೊಸ ಪುಸ್ತಕವನ್ನಷ್ಟೇ ಕೊಳ್ಳಬೇಕು ಅಂತ ಅಂದುಕೊಂಡ ನಾನು ಜಯಂತ್ ಕಾಯ್ಕಿಣಿ ಪುಟ್ಟ ಹುಡುಗ ಪೂರ್ಣನ ಬಗ್ಗೆ ಹೇಳುತ್ತಾ ಅವನ ಕೆಲವು ಕವಿತೆಗಳನ್ನು ಓದಿದಾಗ ಅದನ್ನು ಕೊಳ್ಳದೆ ಇರಲಾಗಲಿಲ್ಲ.ಪುಟ್ಟ ಪೂರ್ಣನ ಮುಗ್ಧ ಕವಿತೆಗಳು ಓದಿ ಯಾಕೋ ಖುಷಿ ದುಖಃ ಎರಡೂ ಆಯ್ತು.

ಮಕ್ಕಳ ಪದ್ಯಗಳ ಸಾಲಿಗೆ ಮತ್ತೊಂದು ಪುಸ್ತಕ ’ಹಲೋ ಹಲೋ ಚಂದಮಾಮ’ ಸೇರ್ಪಡೆ ಯಾಯ್ತು.ಅದನ್ನು ಎಷ್ಟು ಮಕ್ಕಳು ಓದ್ತಾರೆ ಅನ್ನೋದು ಗೊತ್ತಿಲ್ಲ.ಮಕ್ಕಳನ್ನು ಮಕ್ಕಳಾಗಿರಲು ನಾವೂ ಬಿಟ್ಟಿಲ್ಲ .ಅವರಾದರೂ ಪಾಪ ಏನು ಮಾಡಿಯಾರು?

’ಅಜ್ಜನ ಕೋಲಿದು ನನ್ನಯ ಕುದುರೆ’ ಕಾಲ ಹೋಯ್ತು,ಈಗ ಹತ್ತು ರೂಪಾಯಿ ಕೊಟ್ರೆ ಮಕ್ಕಳನ್ನು ನಿಜವಾದ ಕುದುರೆ ಮೇಲೆಯೇ ಕೂರಿಸಬಹುದು.ನಾವು ಬಾಯಲ್ಲೇ ಡುರ್ ಡುರ್ ಅಂತ ಕಾರ್ ಓಡಿಸುತ್ತಾ ಖುಷಿ ಪಡ್ತಿದ್ದ ಕಾಲವೂ ಈಗಿಲ್ಲ.ಮಕ್ಕಳು ಹುಟ್ಟುವಾಗಲೇ ನಿಜವಾದ ಕಾರಲ್ಲೆ ಸುತ್ತಾಡಿ ಬೆಳೆಯುತ್ತಿದ್ದಾರೆ.

ಇಂಥದ್ದರಲ್ಲಿ ನಮ್ಮ ಬಾಲ್ಯದಲ್ಲಿ ನಮಗಿದ್ದದ್ದು ಮುಗ್ಧತೆಯಾ ,ಅಥವ ಅವಕಾಶದ ಕೊರತೆಯಾ ? ಒಂದೂ ತಿಳಿಯುತ್ತಿಲ್ಲ.

ನಾವು ಶಾಲೆಯಲ್ಲಿದ್ದಾಗ ಮಕ್ಕಳ ಡ್ಯಾನ್ಸ್ ಅಂದರೆ ಹತ್ತು ಮಕ್ಕಳಿದ್ದಲ್ಲಿ ಒಬ್ಬೊಬ್ಬರದ್ದೂ ಒಂದೊಂದು ದಿಕ್ಕಿನಲ್ಲಿ ಕೈ,ಕಾಲು.ಹಾಡಿಗೂ ನೃತ್ಯಕ್ಕೂ ಸಂಬಂಧವೇ ಇಲ್ಲ.ಈಗ ಅಷ್ಟೇ ಚಿಕ್ಕ ಮಕ್ಕಳು ಮೈಕಲ್ ಜಾಕ್ಸನ್ ನ ಸ್ಟೆಪ್ಸ್ ಹಾಕ್ತಾರೆ.ನಮ್ಮ ಹಾಡು ಅಂದರೆ ತಾಳ,ರಾಗ ಯಾವುದೂ ಇಲ್ಲದ ಗದ್ಯ ವಾಚನವಾಗಿತ್ತು.ಈಗ ಪುಟ್ಟ ಮಕ್ಕಳು ಸ್ಟಾರ್ ಸಿಂಗರ್ ಗಳಾಗಿದ್ದಾರೆ.’ಶ್ರೀ ಮಂಜುನಾಥ’ ದ ಕಠಿಣವಾದ ಹಾಡನ್ನು ಹಾಡಿ ಎಸ್.ಪಿ.ಬಿ ಯವರಿಗೇ ನಡುಕ ಹುಟ್ಟಿಸ್ತಾರೆ.

ಅಪ್ಪ ಅಮ್ಮಂದಿರಿಗೆ ಮೊಬೈಲ್ ಬಳಸಲು ಹೇಳಿ ಕೊಡೋದೇ ಮಕ್ಕಳು.ಇಂಟರ್ನೆಟ್ ನಲ್ಲಿ ಆರ್ಕುಟ್ ಬಳಸೋದು ಹೇಳಿ ಕೊಡೋದೂ ಮಕ್ಕಳೇ.ಟಿ.ವಿ ಯಲ್ಲಿ ಪ್ರಸಾರವಾಗ್ತಿರೊ ಸಿನೆಮಾದ ಹೀರೋ ಯಾರು ಅಂತ ಹೇಳೋದೂ ಅದೇ ಪುಟ್ಟ ಮಗು.ಆ ಸಿನೆಮಾದ ಹಾಡನ್ನೂ ಗುಣುಗುಣಿಸೋದು ಅದೇ ಪುಟ್ಟ ಮಗು.

ಪರಿಸ್ಥಿತಿ ಹೀಗಿದ್ದಾಗ ಮಕ್ಕಳಲ್ಲಿ ಮುಗ್ಧತೆಯನ್ನು ಎಲ್ಲಿ ಹುಡುಕೋದು?

ಛಂದ ಪುಸ್ತಕ ಬಿಡುಗಡೆಯ ಸಮಾರಂಭಕ್ಕೆ ಮುಖ್ಯ ಅಥಿತಿಯಾಗಿ ಬಂದಿದ್ದ ಮುದ್ದು ತೀರ್ಥಹಳಿ ಅನ್ನೋ ಏಳನೇ ಕ್ಲಾಸಿನ ಹುಡುಗಿ ಹೇಗೆ ಮಕ್ಕಳು ಹಳೆಯ ಮಕ್ಕಳ ಪದ್ಯಗಳನ್ನು ಕೇಳಿ ಕೇಳಿ ಬೋರ್ ಆಗಿದ್ದಾರೆ ಅನ್ನೊ ಬಗ್ಗೆ ಮಾತಾಡಿದ್ಲು.ಆದರೆ ಅವಳು ಕೆಂಡಸಂಪಿಗೆಯಲ್ಲಿ ಬರೆದ ಕವಿತೆಗಳನ್ನು ನೋಡಿದ್ರೆ ಅವಳು ಪುಟ್ಟ ಹುಡುಗಿ ಅಲ್ಲ ಅನ್ನೋದು ಗೊತ್ತಾಗಿ ಬಿಡುತ್ತೆ.

ಅದೇ ಸಮಾರಂಭದ ಮತ್ತೊಬ್ಬ ಮುಖ್ಯ ಅತಿಥಿ ಹತ್ತನೆ ಕ್ಲಾಸ್ ಹುಡುಗ ಕೀರ್ತಿರಾಜ ಬರೆದಿರೋದು ಬೇಟೆಯ ಬಗೆಗಿನ ಪುಸ್ತಕ!

ಯಾವುದೇ ಪುಟ್ಟ ಮಗುವನ್ನು ಕರೆದು ಒಂದು ಹಾಡು ಹೇಳಪ್ಪ ಅಂದ್ರೆ ಅವನು ’ಧೂಮ್ ಮಚಾಲೇ ’ ಅಥವಾ ’ಝರಾ ಝರಾ ಟಚ್ ಮಿ ಕಿಸ್ ಮಿ ’ ಹಾಡನ್ನು ತಪ್ಪಿಲ್ಲದೆ ಹಾಡ್ತಾನೆ.ಕನ್ನಡ ಹಾಡು ಅಂದ್ರೆ ’ಹೊಡಿ ಮಗ ಹೊಡಿ ಮಗ’ ಹಾಡ್ತಾನೆ .ಇಂಥ ಸನ್ನಿವೇಶದಲ್ಲಿ ಮಕ್ಕಳ ಪದ್ಯ ಯಾರು ಓದ್ತಾರೆ?

ಕೆಲವೊಮ್ಮೆ ಮಕ್ಕಳು ಈ ಪರಿ ಬುದ್ಧಿವಂತರಾಗಿರೋದಕ್ಕೆ ಖುಷಿ ಅನ್ಸುತ್ತೆ.ಆದರೆ ಅದೇ ಸಮಯಕ್ಕೆ ’ಮಗುವಿನಷ್ಟು ಮುಗ್ಧ’ ಅನ್ನೋ ಶಬ್ದದ ಅರ್ಥವೆ ಕಳೆದು ಹೋಗುತ್ತಿದೆಯಲ್ಲ ಅನ್ನೋ ಆತಂಕವೂ ಆಗುತ್ತೆ!

ಇದು ಆತಂಕವೋ ಅಥವ ಮಕ್ಕಳು ಇನ್ನು ಮೇಲೆ ನಮ್ಮ ಬಳಿ ಏನೂ ಕೇಳಲ್ಲ(ನಾವೇ ಅವರ ಹತ್ತಿರ ಕಲೀಬೇಕು!) ಅನ್ನೋ ಭಯವೋ ಗೊತ್ತಿಲ್ಲ!

Sunday, May 2, 2010

ದೇಶಕಾಲ,ವೈದೇಹಿ,ಯಕ್ಷಗಾನ...

ಇದು ಟೂ ಇನ್ ಒನ್ ಬರಹ ,ಹಾಗಾಗಿ ಬರಹದ ತಲೆಬರಹದ ತಲೆ ಬುಡ ಅರ್ಥ ಆಗಿಲ್ಲವಾದರೆ ದಯವಿಟ್ಟು ಕ್ಷಮಿಸಿ!

ನಿಮಗೆಲ್ಲ ಗೊತ್ತಿರುವ ಹಾಗೆ ’ದೇಶಕಾಲ’ದ ವಿಶೇಷ ಸಂಚಿಕೆ ಬಿಡುಗಡೆಯಾಗಿದೆ.ಈ ವಿಶೇಷ ಸಂಚಿಕೆಯಲ್ಲಿ ಎಷ್ಟು ಪುಟಗಳಿವೆ ಅಂತ ಎಣಿಸೋದಕ್ಕೇನೇ(ಪುಟಗಳ ಸಂಖ್ಯೆಯನ್ನು ಅದರಲ್ಲೇ ನಮೂದಿಸಿರುತ್ತಾರೆ ಅಂತ ನಂಗೂ ಗೊತ್ತು ಬಿಡಿ!) ಬಹಳಷ್ಟು ಸಮಯ ಬೇಕು.ಹಾಗಾಗಿ ಅವಸರವಸರದಲ್ಲಿ ದರ್ಶಿನಿ ಶೈಲಿಯಲ್ಲಿ ಇದನ್ನು ಓದಲು ಸಾಧ್ಯವೇ ಇಲ್ಲ.

ಹಾಗೆ ಸುಮ್ಮನೆ ಕಣ್ಣಾಡಿಸುವಾಗಲೇ ನನ್ನನ್ನು ಸೆಳೆದ ಒಂದು ಲೇಖನ ವೈದೇಹಿಯವರ ’ಹೋಟೆಲ್ ಪರ್ವ’!

ಇದು ವೈದೇಹಿಯವರು ಹೋಟೆಲ್ ಮಾಲಕರೊಬ್ಬರೊಂದಿಗೆ ನಡೆಸಿದ ಸಂದರ್ಶನ.ಸಂದರ್ಶನ ಕುಂದಾಪುರ ಕನ್ನಡದಲ್ಲಿದೆ.ಹೋಟಲ್ ಮಾಲಕರಿಗೆ ಸಾಕಷ್ಟು ಹಾಸ್ಯಪ್ರಜ್ಞೆ ಇದ್ದದ್ದರಿಂದ ತುಂಬಾ ತಮಾಷೆಯಾಗಿ ಆದರೆ ಅಷ್ಟೇ ಪರಿಣಾಮಕಾರಿಯಾಗಿ ಮೂಡಿ ಬಂದಿದೆ ಈ ಸಂದರ್ಶನ.ಹೋಟೇಲ್ ಮಾಲೀಕರು ಯಾರಾದರೂ(ಸಂದರ್ಶನ ಕೊಟ್ಟವರನ್ನು ಹೊರತು ಪಡಿಸಿ!) ಇದನ್ನು ಓದಿದರೆ ಸಿಟ್ಟು ಬರದೆ ಇರಲಾರದು !

ಹಾಸ್ಯಭರಿತ ಸಂದರ್ಶನ ಓದಿದ್ರೆ ಸಿಟ್ಟು ಯಾಕೆ ಅಂತೀರಾ?ಯಾಕಂದ್ರೆ ಹೋಟಲ್ ಮಾಲಕರ ಹಲವು ಟ್ರಿಕ್ಸ್ ಗಳನ್ನು ಪಾಪ ಅವರು ಈ ಸಂದರ್ಶನದಲ್ಲಿ ಹೇಳಿ ಬಿಟ್ಟಿದ್ದಾರೆ ! ಈ ಸಂದರ್ಶನ ಓದಿದಲ್ಲಿ ಖಂಡಿತ ಹೋಟಲ್ ಉದ್ಯಮದ ಕಷ್ಟ ನಷ್ಟಗಳು(ಲಾಭದ ವಿಚಾರ ಕೂಡಾ!) ತಿಳಿಯುವುದರಲ್ಲಿ ಸಂಶಯವೇ ಇಲ್ಲ.

ಇನ್ನೊಂದು ತಮಾಷೆಯ ಸಂಗತಿ ಅಂದ್ರೆ ವೈದೇಹಿಯವರ ಪ್ರಶ್ನೆಗಳು ಒಂದು ಸಾಲಿನವು,ಆದರೆ ಹೋಟಲ್ ಮಾಲೀಕರ ಉತ್ತರ ಮಾತ್ರ ಉದ್ದುದ್ದ!ಹೋಟಲ್ ಮಾಲಕರು ಮನ ಬಿಚ್ಚಿ ಮಾತಾಡಿದ್ದಕ್ಕೇ ಬಹುಷಃ ಸಂದರ್ಶನ ಅಷ್ಟು ಇಷ್ಟ ಆಗಿದ್ದು ನನಗೆ.

ಇಂಥ ಒಂದು ಸುಂದರ ಸಂದರ್ಶನ ಪ್ರಕಟಿಸಿದ್ದಕ್ಕೆ ’ದೇಶಕಾಲ’ಕ್ಕೆ ಅಭಿನಂದನೆಗಳು.ಈ ಸಂದರ್ಶನ ನಡೆಸಿದ ವೈದೇಹಿಯವರಿಗೆ ಧನ್ಯವಾದಗಳು.ಕೊನೆಯದಾಗಿ ಸಂದರ್ಶನ ನೀಡಿದ ಹೊಳ್ಳ(?!)ರಿಗೂ ಧನ್ಯವಾದಗಳು!


~~~~~~~~~~~~~~~~~~~~~~~~~~~~~~~~~~~~~~~~~~~~~~~

ಬಹಳಷ್ಟು ದಿನಗಳ ನಂತರ ಬೆಂಗಳೂರಿನಲ್ಲಿ ಶುದ್ಧ ಕನ್ನಡ ಕೇಳಲು ಸಿಕ್ಕಿತು!

FM ಚ್ಯಾನೆಲ್ ಗಳ ಕನ್ನಡ ಮಿಶ್ರಿತ ಇಂಗ್ಲೀಶ್, ಟಿ.ವಿ ಚ್ಯಾನಲ್ ರ ಇಂಗ್ಲೀಶ್ ಮಿಶ್ರಿತ ಕನ್ನಡದ ಹಾವಳಿಯ ನಡುವೆ ಅದೆಲ್ಲಿ ಶುದ್ಧ ಕನ್ನಡ ಕೇಳಿದೆ ಅಂತೀರಾ?

ವಿಜಯನಗರದ ಕರ್ನಾಟಕ ಕಲಾ ದರ್ಶಿನಿ(ರಿ)ಯವರು ಪುಟ್ಟ ಪುಟ್ಟ ಮಕ್ಕಳಿಂದ ’ಕೃಷ್ಣಾರ್ಜುನ ಕಾಳಗ’ ಅನ್ನೋ ಯಕ್ಷಗಾನ ಪ್ರಸಂಗ ಏರ್ಪಡಿಸಿದ್ದರು.ಬೆಂಗಳೂರಿನ ಮಕ್ಕಳ ಬಾಯಲ್ಲಿ ಶುದ್ಧ ಕನ್ನಡ ಕೇಳಿ ನನ್ನ ಕಿವಿಯೂ ಶುದ್ಧ ಆಯ್ತು ಅನ್ನಿ.ಹುಡುಗ/ಹುಡುಗಿಯರಲ್ಲಿ ಕೆಲವರು ಬೇಸಿಗೆ ಶಿಬಿರದ ಅಂಗವಾಗಿ ಯಕ್ಷಗಾನ ಕಲಿತರೆ ಇನ್ನು ಕೆಲವರು ಹವ್ಯಾಸವಾಗಿ ಅದನ್ನು ಕಲಿತವರು.ದಾರುಕನ ಪಾತ್ರ ಮಾಡಿದ ಹುಡುಗನಂತೂ ಅತ್ಯದ್ಭುತವಾಗಿ ಪಾತ್ರ ನಿರ್ವಹಿಸಿ ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದ.ಇನ್ನು ಅಭಿಮನ್ಯು ಪಾತ್ರದ ಹುಡುಗ ಧರ ಧರನೆ ತಿರುಗಿ ಕಡೆಗೆ ಚಂಗನೆ ನೆಗೆದು ತಾಯಿಯ ಸೊಂಟದಲ್ಲಿ ಕುಳಿತ ದೃಶ್ಯ ಮಜವಾಗಿತ್ತು.ನೆಗೆದು ಸೊಂಟದಲ್ಲಿ ಕೂತ್ಕೋ ಬೇಕಾದ್ರೆ ಎಷ್ಟು ಚಿಕ್ಕ ಹುಡುಗ ನೀವೇ ಲೆಕ್ಕ ಹಾಕಿ!

ಮಕ್ಕಳೆಲ್ಲ ಬೇಸಿಗೆ ಶಿಬಿರದ ಹೆಸರಲ್ಲಿ ಯಕ್ಷಗಾನ ಕಲಿತದ್ದು ನಿಜಕ್ಕೂ ಶ್ಲಾಘನೀಯ.ಕಲಿಯಲು ಅನುವು ಮಾಡಿಕೊಟ್ಟ ಶ್ರೀನಿವಾಸ ಸಾಸ್ತಾನ ಮತ್ತು ಆದಿಚುಂಚನಗಿರಿ ಮಠಕ್ಕೆ ಅಭಿನಂದನೆಗಳು.