Sunday, December 28, 2008

ಪರಕೀಯರು !

किसी बॆगानॆ कॊ अप्ना बनानॆ कॆ लियॆ अप्नॊ कॊं बॆगाना किया
किसी बॆगानॆ कॊ अप्ना बनानॆ कॆ लियॆ अप्नॊ कॊं बॆगाना किया........

बॆगानॆ तॊ बॆगानॆ ही रहॆ .... अप्नॆ भी बॆगानॆ हुये............
-संदीप कामत

ಯಾರೋ ಪರಕೀಯರನ್ನು ನನ್ನವರನ್ನಾಗಿಸಲು ನನ್ನವರನ್ನು ಪರಕೀಯರನ್ನಾಗಿಸಿದೆ ......
ಯಾರೋ ಪರಕೀಯರನ್ನು ನನ್ನವರನ್ನಾಗಿಸಲು ನನ್ನವರನ್ನು ಪರಕೀಯರನ್ನಾಗಿಸಿದೆ ...............
ಪರಕೀಯರು ಪರಕೀಯರಾಗೇ ಉಳಿದರು......ಜೊತೆಗೆ ನನ್ನವರೂ ಪರಕೀಯರಾದರು......................

-ಸಂದೀಪ್ ಕಾಮತ್

Friday, December 12, 2008

ಅಖಂಡ ಭಾರತ ? ? ?ಕೆಲ ವರ್ಷದ ಹಿಂದೆ ಶೇಶಾದ್ರಿಪುರಂ ಕಾಲೇಜಿನಲ್ಲಿ ಒಂದು ಉಪನ್ಯಾಸ ಮಾಲಿಕೆ ಇತ್ತು .’ಭಾರತ ದರ್ಶನ ’ ಉಪನ್ಯಾಸ ಮಾಲಿಕೆ ಅದು.ಶ್ರೀ ವಿದ್ಯಾನಂದ ಶೆಣೈ ಅವರು ದೊಡ್ದ ’ಅಖಂಡ ಭಾರತ’ದ ಭೂಪಟವನ್ನು ತೋರಿಸಿ ಭಾಷಣ ಮಾಡ್ತಾ ಇದ್ರೆ ಮೈಯೆಲ್ಲಾ ರೋಮಾಂಚನಗೊಂಡಿತ್ತು .

ನಿನ್ನೆ ಒಂದು ಮೈಲ್ ಬಂದಿತ್ತು .ಅದನ್ನು ನೋಡಿದ ಮೇಲಂತೂ ಶ್ರೀ ವಿದ್ಯಾನಂದ ಶೆಣೈಯವರ ನೆನಪು ಕಾಡುತ್ತಿದೆ.ಆ ಮೈಲ್ ನಲ್ಲಿ ಪಾಕಿಸ್ತಾನ 2020ರಲ್ಲಿ ಪ್ರಪಂಚದ ಭೂಪಟದಲ್ಲಿ ಪಾಕಿಸ್ತಾನ ಹೇಗಿರುತ್ತದೆ ಅನ್ನೋದನ್ನು ಹಾಕಿದ್ದಾರೆ.ವಿದ್ಯಾನಂದ ಶೆಣೈಯವರಂತೂ ಆ ಅಖಂಡ ಭಾರತದ ಭೂಪಟವನ್ನು ಹಿಡಿದುಕೊಂಡು ಕರ್ನಾಟಕದಾದ್ಯಂತ ’ಭಾರತ ದರ್ಶನ’ ಉಪನ್ಯಾಸ ಮಾಲಿಕೆಯನ್ನು ನೀಡಿದ್ದರು.ಅವರ ಅಖಂಡ ಭಾರತದ ಕನಸನ್ನು ಈಗ ಪಾಕಿಸ್ತಾನಿಗಳು ನಿಜ ಮಾಡಲು ಹೊರಟಿದ್ದಾರೆ , ಭಾರತದ ಮುಕ್ಕಾಲು ಭಾಗವನ್ನು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನದಲ್ಲಿ ಸೇರಿಸಿ !

ಹಿರಿಯ ಪತ್ರಕರ್ತರೊಬ್ಬರು "ಪಾಕಿಸ್ಥಾನ ಪ್ರಚೋದಿತ ಭಯೋತ್ಪಾದಕ ಚಟುವಟಿಕೆಯನ್ನು ಧರ್ಮವನ್ನು ಹೊರತುಪಡಿಸಿ ನೋಡುವುದಕ್ಕೆ ನಮ್ಮ ವೈಚಾರಿಕ ವರ್ಗಕ್ಕೂ ಯಾಕೆ ಸಾಧ್ಯವಾಗುತ್ತಿಲ್ಲ ?
ಈ ಭಯೋತ್ಪಾದಕ ಚಟುವಟಿಕೆಯನ್ನು ಭಯೋತ್ಪಾದಕ ಚಟುವಟಿಕೆಯನ್ನಾಗಿ ನಾವು ನೋಡಬೇಕು. ಇದು ಮುಸ್ಲಿಂ ರಾಷ್ಟ್ರವೊಂದರಿಂದ ಪ್ರಚೋದಿತ ಎಂಬುದು ನಿಜವಾದರೂ ಅದು ಮುಖ್ಯವಲ್ಲ " ಅಂತ ಬರೆದಿದ್ದಾರೆ.

ಅದು ಹೇಗೆ ಸಾಧ್ಯ ಅನ್ನೋದು ನನಗೆ ಇನ್ನೂ ಅರ್ಥ ಆಗಿಲ್ಲ! ಪಾಕಿಸ್ತಾನ ಅನ್ನೋದೇ ಧರ್ಮ .ಅಲ್ಲಿ ನಡೆಯೋದೆಲ್ಲ ಧರ್ಮಕ್ಕೆ ಸಂಬಂಧ ಪಟ್ಟದ್ದೇ.ಹೀಗಿದ್ರೂ ನಾವು ಭಯೋತ್ಪಾದನೆಯನ್ನು ಧರ್ಮದಿಂದ ಪ್ರತ್ಯೇಕಿಸಿ ನೋಡಬೇಕಂತೆ!
ತಾಜ್ ಹೋಟೇಲಿಗೆ ಬಂದ ಉಗ್ರರು ತಾಜ್ ನಲ್ಲಿದ್ದ ಸಂಪತ್ತನ್ನು ಲೂಟಿ ಮಾಡಲು ಬಂದಿದ್ರೆ ಬಹುಶಃ ಆ ಕೃತ್ಯವನ್ನು ಧರ್ಮದಿಂದ ಪ್ರತ್ಯೇಕಿಸಿ ನೋಡಬಹುದಿತ್ತೇನೋ .ಆದರೆ ಹಾಗಾಗಿಲ್ಲ.

ನಾವೆಲ್ಲರೂ ಇದನ್ನು ಮುಸ್ಲಿಂ ಉಗ್ರವಾದ ಅನ್ನೋದಕ್ಕೆ ತಯಾರಿಲ್ಲ ,ಯಾಕಂದ್ರೆ ನಮ್ಮನ್ನು ಬೇರೆಯವರು ತಪ್ಪು ತಿಳಿದುಕೋತಾರೇನೊ ಅನ್ನೋ ಭಯ.ಭಯೋತ್ಪಾದಕ ಕೃತ್ಯ ನಡೆಸುವವರೇ ಇದನ್ನು ’ಧರ್ಮಯುದ್ಧ’ ಅಂತ ಘಂಟಾಘೋಶವಾಗಿ ಹೇಳಿದ್ದಾರೆ .ಆದರೆ ನಮ್ಮ ಬುದ್ಧಿಜೀವಿಗಳಿಗೆ ಇದು ಧರ್ಮಕ್ಕೆ ಸಂಬಂದ ಪಟ್ಟದ್ದಲ್ಲ!

ಯಾರೋ ಮತಾಂಧ ಮುಸ್ಲಿಂ ಈ ರೀತಿಯ ಕೃತ್ಯ ಎಸಗಿದ್ದಾನೆ ಅಂದ ಮಾತ್ರಕ್ಕೆ ನಾವೇನೂ ಎಲ್ಲ ಮುಸ್ಲಿಮರ ಬಗ್ಗೆ ಅನುಮಾನದಿಂದ ನೋಡುತ್ತಿಲ್ಲ -ನೋಡೋದೂ ಇಲ್ಲ .ಹೀಗೆ ನೋಡ್ತಾ ಇದ್ದೀವಿ ಅನ್ನೋದು ಭ್ರಮೆ !

ನಮ್ಮ ಬಾಲಿವುಡ್ ನಲ್ಲಂತೂ ಮುಸ್ಲಿಂ ಜನಾಂಗದವರ ಕೊಡುಗೆ ಅಪಾರ.ಮುಸ್ಲಿಂ ಕವಿ ಜಾವೆದ್ ಅಖ್ತರ್ ಬರೆದ ಭಜನೆಗೆ (ರಾಧ ಕೈಸೆ ನ ಜಲೇ) ಮುಸ್ಲಿಂ ಸಂಗೀತ ನಿರ್ದೇಶಕ ರಹಮಾನ್ ಸಂಗೀತ ನಿರ್ದೇಶಿಸಿ ಮುಸ್ಲಿಂ ಹೀರೋ ಆ ಹಾಡಿನಲ್ಲಿ ನಟಿಸ್ತಾನೆ ಅನ್ನೋದಾದ್ರೆ ಅದು ಬರೀ ಭಾರತದಲ್ಲಷ್ಟೇ ಸಾಧ್ಯ.

ಹಿಂದೂ ಧರ್ಮಕ್ಕೆ ವಯಸ್ಸಾಯ್ತು .ಅದು ಕಾಲಕ್ಕೆ ತಕ್ಕಂತೆ ವಿಕಸಿತಗೊಳ್ತಾ ಇಲ್ಲ ಅನ್ನೋದು ಕೆಲವರ ಕಂಪ್ಲೇಂಟು.ನನಗಂತೂ ಹಾಗೆ ಅನ್ನಿಸಿಲ್ಲ ಯಾವತ್ತೂ.
ಕಾಲ ಬದಲಾಯಿತು ಐಟಿ-ಬಿಟಿ ಬಂತು ಇಂಟರ್ನೆಟ್ ಬಂತು ಇನ್ನೇನು ಧರ್ಮ ತನ್ನ ಮಹತ್ವ ಕಳ್ಕೊಳ್ಳುತ್ತೆ ಅಂತ ವಾದ ಮಾಡಿದ್ರು ಕೆಲವರು .ಆದರೆ ಏನಾಯ್ತು ಇಂಟರ್ನೆಟ್ ಬಂತು ಅದೇ ಇಂಟರ್ನೆಟ್ ನಿಂದ ಆನ್ಲೈನ್ ದೇವರ ದರ್ಶನ ಮಾಡೋಕೆ ಶುರು ಮಾಡಿದ್ವಿ ! ಚ್ಯಾನೆಲ್ಗಳು ವಿಪರೀತವಾದವು,ಆದರೆ ಆಧ್ಯಾತ್ಮಕ್ಕೆಂದೇ ಪ್ರತ್ಯೇಕ ಚ್ಯಾನೆಲ್ ಗಳು ಹುಟ್ಟಿಕೊಂಡವು.

ಸಾಫ್ಟ್ವೇರ್ ಬೂಮ್ ಬಂತು -ಆದ್ರೆ ಜಾತಕ ಬರೆಯೊದಕ್ಕೆಂದೆ ಆ ಸಾಫ್ಟ್ವೇರ್ ನ ಉಪಯೋಗಿಸಿದ್ವಿ ನಾವು!

ವೀಣಾ ಅನ್ನೋರು ಅಂದು ಸಲ ಬೇಸರದಿಂದ ಬರೆದಿದ್ದರು "ಸಂದೀಪ್ ನಿಮ್ಮ ಬ್ಲಾಗ್ ಯಾವಾಗ್ಲೂ ಓದ್ತಾ ಇದ್ದೆ ಆದ್ರೆ ಯಾವಾಗ ನೀವು ಧರ್ಮದ ಬಗ್ಗೆ ಬರೆಯೋದಕ್ಕೆ ಶುರು ಮಾಡಿದ್ರೋ ಅಂದಿನಿಂದ ಓದೋದು ಬಿಟ್ಟೆ " ಅಂತ.ಆದ್ರೆ ಈ ಪಾಕಿಸ್ತಾನದ ’ಅಖಂಡ ಭಾರತ (ಸಾರಿ ಅಖಂಡ ಪಾಕಿಸ್ತಾನ!) ’ ದ ನಕ್ಷೆ ನೋಡಿದ ಮೇಲಂತೂ ಬರೆಯದೆ ಇರೋಕೆ ಸಾಧ್ಯ ಆಗಿಲ್ಲ.

ಹೇಗೆ ತಾಜ್ ಮೇಲೆ ದಾಳಿ ಮಾಡಲು ಧರ್ಮ ಕಾರಣವೋ ,ಲಕ್ಷಾಂತರ ಭಾರತೀಯರು ದೇವರ ಮೇಲಿನ ಭಯದಿಂದ ಯಾವುದೇ ತಪ್ಪೆಸಗದೆ ಸುಮ್ಮನಿರೋದಕ್ಕೂ ಧರ್ಮವೆ ಕಾರಣ.

ಯಾರೋ ತಲೆ ಮಾಸಿದ ಧರ್ಮಾಂಧ ಉಗ್ರ, ಧರ್ಮದ ಹೆಸರಲ್ಲಿ ರಕ್ತದೋಕುಳಿ ನಡೆಸಿದ ಮಾತ್ರಕ್ಕೆ ಧರ್ಮವನ್ನು ಬಿಟ್ಟು ಬನ್ನಿ ಅಂತ ಹೇಳೋದು ಸರಿಯಲ್ಲ.

ಏನಂತೀರಾ?


ಚಿತ್ರ ಕೃಪೆ : ಲಷ್ಕರೆ ತಯ್ಬ

Sunday, December 7, 2008

ಅಗ್ನಿದಿವ್ಯನಿನ್ನೆ ಶನಿವಾರ ನಾನು ಮಾಡಿದ ಎಡವಟ್ಟಿನಿಂದಾಗಿ ಒಂದು ಕವಿಗೋಷ್ಠಿಯಲ್ಲಿ ಸಿಲುಕಿಕೊಂಡ ಘಟನೆ ನಡೆಯಿತು.ಎಡವಟ್ಟು ನಾನೇ ಮಾಡಿಕೊಂಡ್ರು ಅದಕ್ಕೆ ಹಲವು ಜನರು ಕಾರಣಕರ್ತೃರು ಇದ್ದಾರೆ!

ಏನಾಯ್ತು ಅಂದ್ರೆ ಕೆಲ ದಿನಗಳ ಹಿಂದೆ ’ಅವಧಿ’ಯಲ್ಲಿ ’ಗಾಂಧಿ ಸಾಹಿತ್ಯಸಂಘ’ದವರು ನಡೆಸಿಕೊಡಲಿರುವ ಜಿ.ಪಿ ರಾಜರತ್ನಂ ಜನ್ಮಶತಾಬ್ದಿ ಆಚರಣೆಯ ಬಗ್ಗೆ ಒಂದು ಕಾರ್ಯಕ್ರಮದ ಬಗ್ಗೆ ಒಂದು ಪ್ರಕಟಣೆ ಬಂದಿತ್ತು.ಅದರಲ್ಲಿ ನನಗೆ ಗಮನ ಸೆಳೆದದ್ದು ಸಂಧ್ಯಾದೇವಿಯವರ ಹೆಸರು.ಅವರನ್ನು ಮುಖತ ನೋಡಬೇಕೆಂಬ ಆಸೆ ಬಹಳ ದಿನಗಳಿಂದ ಇತ್ತು ನಂಗೆ.ಆದ್ರೆ ಕಾರ್ಯಕ್ರಮ ಶುಕ್ರವಾರವಾದ್ದರಿಂದ ಹೋಗಲು ಖಂಡಿತ ಸಾಧ್ಯವಿಲ್ಲ ಅನ್ನೋ ನಿರಾಸೆಯಲ್ಲಿ ನಾನಿದ್ದೆ ,ಹಾಗೆಯೆ ಅದನ್ನು ಮರೆತಿದ್ದೆ ಕೂಡಾ.
ಆದ್ರೆ ಶನಿವಾರ ಎಂದಿನಂತೆ ಬೆಳಿಗ್ಗೆ ಹ್ಯಾಂಗೋವರ್ ಇಳಿದ ನಂತರ ’ವಿಜಯಕರ್ನಾಟಕ’ ಓದ್ಬೇಕಾದ್ರೆ ಅದರಲ್ಲಿ ಗಾಂಧಿಸಾಹಿತ್ಯ ಸಂಘದ ಕಾರ್ಯಕ್ರಮದ ಬಗ್ಗೆ ’ಈ ದಿನದ ಕಾರ್ಯಕ್ರಮ’ದ ಪಟ್ಟಿಯಲ್ಲಿ ಹಾಕಿದ್ರು.ಸಾಲದ್ದಕ್ಕೆ ಬಿಡುಗಡೆಯಾಗುವ ಪುಸ್ತಕಗಳು ಅಂತ ಸಂಧ್ಯಾದೇವಿಯವರ ’ಅಗ್ನಿದಿವ್ಯ’ದ ಬಗ್ಗೆ ಪ್ರಸ್ತಾವಿಸಿದ್ದರು.

ಹೇಗೂ ನನ್ನ ಜ್ಞಾಪಕ ಶಕ್ತಿಯ ಬಗ್ಗೆ ನನಗೇ ಕಾನ್ಫಿಡೆನ್ಸ್ ಇಲ್ಲ ! ಹಾಗಾಗಿ ನಾನು ’ಅವಧಿ’ಯಲ್ಲಿ ನೋಡಿದ ದಿನಾಂಕ ತಪ್ಪಿರಬಹುದು ಅಂತ ಖುಶಿಯಿಂದ ಸಾಯಂಕಾಲ ಕಾರ್ಯಕ್ರಮಕ್ಕೆ ಹೋಗುವ ನಿರ್ಧಾರ ಮಾಡಿದೆ.

ಹೇಗೂ ಸಂಧ್ಯಾದೇವಿಯವರನ್ನು ನೋಡ್ಬೇಕಿತ್ತು ನಂಗೆ ,ಅದೂ ಅಲ್ಲದೆ ಎರಡು ವರ್ಷಗಳಿಂದ ಕಪಾಟಿನಲ್ಲಿ ಬೆಚ್ಚಗೆ ಕುಳಿತಿರುವ ’ಮಾತು ಚಿಟ್ಟೆ-ಬೆಂಕಿ ಬೆರಳು’ ಪುಸ್ತಕದ್ದು ಒಂದೇ ಕಂಪ್ಲೇಂಟು - ’ನಂಗೆ ಯಾರೂ ಕಂಪೆನಿ ಇಲ್ಲ ಇಲ್ಲಿ.ಆ ಚೇತನ್ ಭಗತ್ ನ ’One Night At Call Center ' ತಿಕ್ಕಲು ತಿಕ್ಕಲಾಗಿ ಮಾತಾಡ್ತಾವೆ ನನ್ ಹತ್ರ !ನಂಗೆ ಯಾವುದಾದ್ರೂ ಒಳ್ಳೆಯ ಕಂಪೆನಿ ಕೊಡಿಸು ’ ಅಂತ!ಅದಕ್ಕೆ ಕಂಪೆನಿ ಕೊಡಲಾದ್ರೂ ’ಅಗ್ನಿದಿವ್ಯ’ ತಗೊಳ್ಳಬೇಕಿತ್ತು ನಾನು.

ಸಂಜೆ ಗಾಂಧಿಸಾಹಿತ್ಯ ಸಂಘ ಹುಡುಕಿಕೊಂಡು ಒಳಗೆ ಹೊಕ್ಕು ಕೂತೆ.ಆಗ ತಾನೇ ಪ್ರಾರಂಭ ಆಗಿತ್ತು ಕಾರ್ಯಕ್ರಮ .ಅಕ್ಕಪಕ್ಕ ನೋಡಿ ಸ್ವಲ್ಪ ಬೇಜಾರಾಯ್ತು !ಯಾಕಂದ್ರೆ ಇದ್ದಿದ್ದೆ ಹತ್ತೆನ್ನರಡು ಜನ!ಅದರಲ್ಲೂ ನನ್ನನ್ನು ಬಿಟ್ರೆ ಎಲ್ಲ ಹಿರಿ ತಲೆಗಳು.ಅಪ್ಪಿ ತಪ್ಪಿ ಏನಾದ್ರೂ ಹಿರಿಯನಾಗರಿಕರ ಕಾರ್ಯಕ್ರಮಕ್ಕೇನಾದ್ರೂ ಬಂದ್ನೇನೋ ಅಂತ ಭಯ ಆಯ್ತು.ಆದರೂ ನಂಗೆ ನಾನೇ ಸಮಾಧಾನ ಮಾಡ್ಕೊಂಡೆ.ಯಾಕಂದ್ರೆ ಹಿಂದಿನ ದಿನ ಮೆಸೇಜ್ ಬಂದಿತ್ತು .ಬಾಬ್ರಿ ಮಸೀದಿಯ ಕರಾಳ ನೆನಪಿಗೆ ಉಗ್ರರು ದುಷ್ಕೃತ್ಯ ಎರಗೋ ಸಾಧ್ಯತೆಗಳಿವೆ .ಹಾಗಾಗಿ ಜನನಿಭಿಡ ಪ್ರದೇಶಗಳಿಗೆ ಹೋಗ್ಬೇಡಿ ಅಂತ.

ಗಾಂಧಿ ಸಾಹಿತ್ಯಸಂಘದಲ್ಲಿ ಅಷ್ಟೇನೂ ಜನನಿಭಿಡತೆ ಕಾಣದ್ದರಿಂದ ಸ್ವಲ್ಪ ’ಸಮಾಧಾನ’ ಆಯ್ತು!

ಕಾರ್ಯಕ್ರಮದ ಮುಗಿದ ಮೇಲೇನೆ ಗೊತ್ತಾಗಿದ್ದು ನಂಗೆ ನಾನು ಎಡವಟ್ಟು ಮಾಡ್ಕೊಂಡಿರೋದು.ಕೊನೆ ತನಕ ಸಂಧ್ಯಾದೇವಿಯವರು ಬರಲೆ ಇಲ್ಲ!(ಹಿಂದಿನ ದಿನ ಅಲ್ವ ಇದ್ದಿದ್ದು ಪುಸ್ತಕ ಬಿಡುಗಡೆ ಕಾರ್ಯಕ್ರಮ ಅವರೆಲ್ಲಿಂದ ಬರ್ತಾರೆ!).

ಆದ್ರೆ ಈ ಕಾರ್ಯಕ್ರಮದಲ್ಲಿ ಭಾಗವಸಿದ್ದಕ್ಕೆ ಏನೂ ಬೇಜಾರಾಗಿಲ್ಲ ನಂಗೆ.ತುಂಬಾನೇ ಚೆನ್ನಾಗಿತ್ತು .ಕಾರ್ಯಕ್ರಮ ಮುಗಿದ ಮೇಲೆ ನನಗನಿಸಿತು - ’ನನಗೂ ಕವಿತೆಗಳು ಅ(ಪಾ?)ರ್ಥವಾಗತ್ತವೆ ’!

ಕವಿಗೋಷ್ಠಿಯ ಅಧ್ಯಕ್ಷತೆಯನ್ನು ’ಅಪರಂಜಿ’ ಶಿವಕುಮಾರ್ ವಹಿಸಿದ್ದರು.ಕವಿ ಗೋಷ್ಟಿಯಲ್ಲಿ ಸುಮಾರು ಏಳೆಂಟು ಜನ ಕವಿಗಳು/ಕವಯತ್ರಿಯರು ತಮ್ಮ ಕವನ ,ಹಾಗೂ ಜಿ.ಪಿ ರಾಜರತ್ನಂರವರ ಕವನಗಳನ್ನು ವಾಚಿಸಿದರು.

ಮೊದಲಿಗೆ ಭಾರತಿದೇವಿಯವರ ಸರದಿಯಾಗಿತ್ತು .ಕೆಲವೊಂದು ಕವನಗಳು ನಂಗೆ ಬೌನ್ಸರ್ ಗಳಾದ್ರೂ ,ಕೆಲವೊಂದು ಅರ್ಥವಾಯ್ತು.ತಮಿಳು ಕವಯತ್ರಿಯೊಬ್ಬರ ಕವನದ ಕನ್ನಡಾನುವಾದ ತುಂಬಾ ಚೆನ್ನಾಗಿತ್ತು.ಕವಿತೆಯ ಶೀರ್ಷಿಕೆ ’ರಕ್ತದಲ್ಲಿ ಬರೆದ ಟಿಪ್ಪಣಿಗಳು’ .ಇನ್ನೊಂದು ಕವನ ಕೂಡಾ ಚೆನ್ನಾಗಿತ್ತು .ಆದ್ರೆ ಶೀರ್ಷಿಕೆ ನೆನಪಿಲ್ಲ ! ಕೊನೆಯ ವಾಕ್ಯ ಮಾತ್ರ ಸೊಗಸಾಗಿತ್ತು ." ಕೋಗಿಲೆ ಮನೆ ಕಟ್ಟುವುದಿಲ್ಲ ,ಅದಕ್ಕೇ ಅದು ಹಾಡುತ್ತದೆ !" .

ಎಲ್ ಜಿ ಮೀರಾರ ’ಅಡುಗೆ ಮನೆ ಸಾಹಿತ್ಯ’ ಕವನ ಹಿಡಿಸಿತು ನಂಗೆ.ಹಾಗೇ ಯಲ್ಲಪ್ಪರವರೂ ಕೆಲವು ಒಳ್ಳೆಯ ಕವನಗಳನ್ನು ವಾಚಿಸಿದರು.ರಾಮಚಂದ್ರ ರಾಯರೆಂಬ ಕವಿ ಜಿ ಪಿ ರಾಜರತ್ನಂ ಬಗ್ಗೆ ಕುಸುಮ ಷಟ್ಪದಿಯಲ್ಲಿರೋ ಒಂದು ಕವನ ವಾಚಿಸಿದರು.

ಇನ್ನಿಬ್ಬರು ಮಹನೀಯರು ಎರಡು ಒಳ್ಳೆಯ ಕವಿತೆಗಳನ್ನು ವಾಚಿಸಿದರು .ಆದ್ರೆ ಅವರ ಹೆಸರುಗಳು ಮಾತ್ರ ಎಷ್ಟು ತಲೆ ಕೆರ್ಕೋಂಡ್ರೂ ನೆನಪಾಗ್ತಿಲ್ಲ ಸಾರಿ!( ಬರೀ ಹೆಂಗಸರ/ಹೆಣ್ಣುಮಕ್ಕಳ ಹೆಸರು ನೆನಪಿರುತ್ತೆ ನಿಂಗೆ ಬಯ್ತೀರಾ ಅಂತ ಗೊತ್ತು ನಂಗೆ I can't help it!).

ಅಧ್ಯಕ್ಷತೆ ವಹಿಸಿದ ಶಿವಕುಮಾರ್ ಅವ್ರೂ ರಾಜರತ್ನಂ ಅವರ ಕೆಲವು ಕವಿತೆಗಳನ್ನು ಹೇಳಿದ್ರು.ಬಹಳ ಸೊಗಸಾಗಿತ್ತು ಅವು ಹಾಸ್ಯಭರಿತ.

’ಅಭಿನವ’ದ ರವಿಕುಮಾರ್ ಮಗ ಸೂರ್ಯವಂಶಿ ಕೂಡಾ ಒಂದು ಹಾಡು ಹಾಡಿದ್ದ .’ಹಬ್ಬದ ದಿನವೇ ಸುಬ್ಬನ ಮನೆಗೊಂದ್ ಆನೆ ಬಂದಿತ್ತು ’ ಅಂತ! ತಾರಕದಲ್ಲಿ ಹಾಡಿದ್ದ ಹುಡುಗ ಪಾಪ.ಕಾರ್ಯಕ್ರಮ ಮುಗಿದ ಮೇಲೆ ಅವನ ಹತ್ರ ಮಾತಾಡಿದ್ದೆ ನಾನು ."ಅಂಕಲ್ ನಿನ್ನೇನೆ ಹಾಡ್ ಬೇಕಿತ್ತು ನಾನು ಅಪ್ಪ ಮೋಸ ಮಾಡಿದ್ರು,ಅದಿಕ್ಕೆ ಇವತ್ತು ಬಿಡ್ಲೇ ಇಲ್ಲ ,ಹಾಡೇ ಬಿಟ್ಟೆ ! ನಂಗೆ ಇನ್ನೂ ಐವತ್ತು ಕನ್ನಡ ಹಾಡುಗಳು ಬರುತ್ತೆ ಹಾಡ್ಲಾ " ಅಂದ ! ಇಂಗ್ಲೀಷ್ ಮೀಡಿಯಂ ಹುಡುಗ -ಐವತ್ತು ಕನ್ನಡ ಹಾಡುಗಳು ! ಅಬ್ಬ!

’ಸಂಚಯ’ ದ ಪ್ರಹ್ಲಾದ್ ಸುಂದರವಾಗಿ ನಿರೂಪಣೆ ಮಾಡಿದ್ರು.(ಹೊರಗಡೆ ಪುಸ್ತಕ ಮಾರುತ್ತಿದ್ದವನ ಹತ್ರ ಕೇಳಿದ್ದು ,ಒಳಗೆ ಜುಬ್ಬ ಧರಿಸಿ ಮಾತಾಡ್ತಾ ಇದ್ರಲ್ಲ ಅವರ್ಯಾರು ಅಂತ .ಅವನು ’ಅದು ಪ್ರಹ್ಲಾದ್ ಸರ್ ’ಅಂದ -ತಪ್ಪಾಗಿದ್ರೆ ನಾನು ಜವಾಬ್ದಾರನಲ್ಲ!)

ಹೊರಗೆ ಬಂದು ಸೀದಾ ಪುಸ್ತಕ ಮಾರುತ್ತಿದ್ದವನ ಬಳಿ ’ಅಗ್ನಿದಿವ್ಯ’ ಕೊಡಿ ಅಂತ ಕೇಳಿ ಪಡೆದೆ.ಮೂವತ್ತು ರೂಪಾಯಿಯ ಪುಸ್ತಕಕ್ಕೆ ಐದು ರೂಪಾಯಿ ಡಿಸ್ಕೌಂಟ್ ! ಆದ್ರೆ ಅದೇ ಮಲ್ಯನ ಟಿನ್ ಬಿಯರ್ ಗೆ ಕೂಡ ಮೂವತ್ತೆಂಟು ರೂಪಾಯಿ ಈಗ -ಛೇ ಎಂಥ ಕಲಿಗಾಲ ಬಂತು!

Monday, December 1, 2008

ಸಂದೀಪನಿಂದ ಸಂದೀಪನಿಗೆ ......


ಯಾಕೋ ಮುಂಬೈ ಘಟನೆ ಬಗ್ಗೆ ಏನೂ ಬರೆಯಲೇಬಾರದು ಅಂತ ನಿರ್ಧರಿಸಿದ್ದೆ .ಆದರೆ ಈ ಸಂದೀಪನ ಫೋಟೊ ನೋಡಿದ ಮೇಲಂತೂ ಬರೆಯದೆ ಇರಲು ಸಾಧ್ಯವೇ ಆಗಿಲ್ಲ ನಂಗೆ!

ಈ ಸಂದೀಪನ ಕಣ್ಣುಗಳಂತೂ ನೆನ್ನೆಯಿಂದ ಬಹಳ ಕಾಡುತ್ತಿವೆ.ಈತನ ಬೇರೆ ಫೋಟೋಗಳನ್ನೂ ನೋಡಿದೆ ನಾನು, ಆದರೆ ಈ ಫೋಟೋದಲ್ಲಿ ಏನೋ ತುಂಬಾ ಧೃಡ ಸಂಕಲ್ಪ ಹೊಂದಿರುವ ಹಾಗೆ ಕಾಣ್ತಾನೆ ಸಂದೀಪ.

ದೇಶಕ್ಕಾಗಿ ಹುತಾತ್ಮರಾಗುವ ಸೌಭಾಗ್ಯ ಬಹಳ ಕಡಿಮೆ ಜನರಿಗೆ ಸಿಗುತ್ತದೆ.ಅಂಥ ಅದೃಷ್ಟಶಾಲಿ(?) ಗಳಲ್ಲಿ ಸಂದೀಪನೂ ಒಬ್ಬ(ಈ ವಾಕ್ಯ ಸ್ವಲ್ಪ ಮುಜುಗರ ತರಿಸುವಂತಿದ್ದರೂ ನೀವು ಒಬ್ಬ ಸೈನಿಕನ ಬಳಿ ಎರಡನೇ ಅಭಿಪ್ರಾಯ ಕೇಳಬಹುದು).

ನಿನ್ನ ಈ ಫೋಟೋದಲ್ಲಿರುವ ಅಗ್ರೆಸ್ಸಿವ್ ನೆಸ್ಸ್ ತುಂಬಾ ದಿನಗಳವರೆಗೆ ನಮಗೆ ಕಾಡುತ್ತಿರುತ್ತೆ ಸಂದೀಪ್ .

We miss you.


ಫೊಟೋ ಸೌಜನ್ಯ : ’ ಉಗ್ರಗಾಮಿಗಳು :( ’