Tuesday, October 28, 2008

ಯಾರು ಹಿತವರು ’ನಮಗೆ’ ???



ಹೈಸ್ಕೂಲ್ ನಲ್ಲಿ ಓದುತ್ತಿರ್ಬೇಕಾದ್ರೆ ಒಬ್ರಿದ್ರು ಶಶಿಕಲಾ ಟೀಚರ್ ಅಂತ.ಕನ್ನಡ ಟೀಚರ್ಅವ್ರು.ಕನ್ನಡದ ಪ್ರಖ್ಯಾತ ಸಾಹಿತಿಗಳ ಬಗ್ಗೆ ,ಕವಿಗಳ ಬಗ್ಗೆ ,ಲೇಖಕರ ಬಗ್ಗೆ ಯಾವಾಗ್ಲೂ ತಿಳಿಸ್ತಾ ಇದ್ರು ನಮಗೆ.ಕವಿ ಕಾವ್ಯ ಪರಿಚಯ ಅಂತ ಬರುತ್ತಲ್ಲ ಒಂದು ಪ್ರಶ್ನೆ ಅದಕ್ಕೋಸ್ಕರ ಅಂತಾನೇ ನಾವು ಕುತೂಹಲದಿಂದ ಕೇಳ್ತಾ ಇದ್ವಿ ಅವರು ಹೇಳಿದ್ದೆಲ್ಲಾ!ಅವರೂ ಪಾಪ ಹೊಗಳಿದ್ದೇ ಹೊಗಳಿದ್ದು
ಲೇಖಕರ ಬಗ್ಗೆ ,ಸಾಹಿತಿಗಳ ಬಗ್ಗೆ .ಅಪ್ಪಿ ತಪ್ಪಿಯೂ ಆ ಟೀಚರ್ , ಈ ಸಾಹಿತಿ ಸಿಡುಕ ,ಆ ಲೇಖಕ ಆರೆಸ್ಸೆಸ್ಸು ಅವರು ಬರೆದಿದ್ದು ಸರಿ ಇರಲ್ಲ ,ಈ ಕಾದಂಬರಿಕಾರ ಸ್ತ್ರೀ ಪರ ಸಾಹಿತ್ಯ ಬರೆದರೂ ಮನೆಯಲ್ಲಿ ಹೆಂಡ್ತಿಗೆ ಹೊಡೀತಾನೆ ,ಆ ಕಾದಂಬರಿಕಾರ ಕಮ್ಯುನಿಸ್ಟು ಅಂತೆಲ್ಲ ಯಾವತ್ತೂ ಹೇಳಿಲ್ಲ .ಅವರು ಯಾವತ್ತೂ ಹೇಳಿದ್ದು,ಕನ್ನಡ ಸಾಹಿತ್ಯ ಶ್ರೇಷ್ಠ ಸಾಹಿತ್ಯ .ಕನ್ನಡ ಸಾಹಿತಿಗಳೆಲ್ಲ ಶ್ರೇಷ್ಠರು .ಕನ್ನಡಕ್ಕೆ ಇಷ್ಟು ಜ್ಞಾನಪೀಠ ಬಂದಿದೆ ,ಅಷ್ಟು ಕೇಂದ್ರ ಸಾಹಿತ್ಯ ಅಕೆಡಮಿ ಪ್ರಶಸ್ತಿ ಬಂದಿದೆ ಅಂತ!

ಇಷ್ಟು ದಿನ ಅದನ್ನೇ ನಂಬಿಕೊಂಡು ಬಂದಿದ್ದೆ ನಾನೂ.ಆದ್ರೆ ಈಗ ಗೊತ್ತಾಯ್ತು ಟೀಚರ್ ಯಾಮಾರಿಸಿದ್ದಾರೆ ಅಂತ!

ಕನ್ನಡ ಸಾಹಿತ್ಯವೇನೋ ಶ್ರೇಷ್ಠ ಆದ್ರೆ ಸಾಹಿತಿಗಳು ?????

ಪಾಪ ಟೀಚರ್ ದೇನೂ ತಪ್ಪಿಲ್ಲ ಅಲ್ವಾ?? ಆಗ ನಾವೆಲ್ಲ ಸ್ಕೂಲ್ ಹುಡುಗರು ’ಹೇಗೆ ಹೇಳೋಕಾಗುತ್ತೆ ಅಂಥ ’ಸತ್ಯ’ ??ಪಿ.ಯು.ಸಿ ಗೆ ಬಂದ ತಕ್ಷಣ ಸ್ಕೋರಿಂಗ್ ಸಬ್ಜೆಕ್ಟ್ ಅಂತ ಹಿಂದಿ ತಗೊಂಡಿದ್ದೆ .ಇಲ್ಲಾಂದ್ರೆ ಕೊನೆಪಕ್ಷ ಕಾಲೇಜಿನಲ್ಲಾದ್ರೂ ಗೊತ್ತಾಗ್ತಾ ಇತ್ತು ಕೆಲವರ ಬಂಡವಾಳ !!

ವಿಷಯ ಏನಿಲ್ಲ ಸಾಹಿತಿಗಳು ಮತಾಂತರದ ಬಗ್ಗೆ ಸಂವಾದದ ನೆಪದಲ್ಲಿ ಕೆಸರೆರಚಾಟ ಮಾಡೋದು ನೋಡಿ ಬೇಸರವಾಯ್ತು :(
ನಾನು ಯಾವತ್ತೂ ಶ್ರೇಷ್ಠ ಸಾಹಿತ್ಯದ ಹಿಂದೆ ಬಿದ್ದಿರಲಿಲ್ಲ.ಕೈಗೆ ಸಿಕ್ಕಿದ್ದೆಲ್ಲ ಓದೋ ಅಭ್ಯಾಸ ಇದ್ದವನು ನಾನು .ನನ್ನ ಅಕ್ಕನಿಗೆ ಓದುವ ಹುಚ್ಚಿದ್ದರಿಂದ ಮನೆಗೆ ಬೇಕಾದಷ್ಟು ಪುಸ್ತಕಗಳು ಬರುತ್ತಿದ್ದವು.ಸುಧಾ,ತರಂಗ,ಕಸ್ತೂರಿ ,ಮಯೂರಿ .ಯಾವತ್ತೂ ಬರೆದ ಕಂಟೆಂಟ್ ಬಗ್ಗೆ ತಲೆ ಕೆಡಿಸಿಕೊಳ್ತಾ ಇದ್ದೆ ಯಾರು ಬರೆದಿದ್ದರು ಅನ್ನೋ ಬಗ್ಗೆ ತಲೇನೇ ಕೆಡಿಸ್ಕೋತಾ ಇರ್ಲಿಲ್ಲ .ತರಂಗದ ಸಂಪಾದಕರು stylish ಆಗಿ ಅವರ ಹೆಸರು ಪ್ರಕಟಿಸ್ತಾ ಇದ್ದಿದ್ರಿಂದ ಅವರು ಸಂಪಾದಕರೆಂಬುದು ತಿಳಿದಿತ್ತು !ಅದು ಬಿಟ್ಟು ಉಳಿದ ಯಾವ ಸಾಹಿತಿಗಳ ಬಗ್ಗೆಯೂ ನನ್ಗೆ ಗೊತ್ತಿರ್ಲಿಲ್ಲ.ಆದ್ದರಿಂದ ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೆ ಓದೋದಕ್ಕೆ ನಂಗೆ ಸಾಧ್ಯ ಆಗ್ತಾ ಇತ್ತು.
ನಂಗೆ ಮೊಟ್ಟ ಮೊದಲಿಗೆ ಸಾಹಿತ್ಯ ಮನುಷ್ಯನ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಅನ್ನೋದರ ಪರಿಚಯ ಆಗಿದ್ದು ’ಹಾಯ್ ಬೆಂಗಳೂರ್’ ಓದಿ.ಅದರಲ್ಲಿ ರವಿ ಬೆಳಗೆರೆ ಭೈರಪ್ಪನವರ,ಖುಶ್ವಂತ್ ಸಿಂಗ್ ರ ಹಾಗೂ ಇತರರ ಸಾಹಿತ್ಯದ ಬಗ್ಗೆ ಬಹಳ ಮನಮುಟ್ಟುವ ಹಾಗೆ ಬರೀತಾ ಇದ್ರು. ಭೈರಪ್ಪನವರ ’ನಿರಾಕರಣ’ ಓದಿ ರವಿ ಹಿಮಾಲಯಕ್ಕೆ ಹೋದ ಕಥೆ ಕೇಳಿದ ಮೇಲಂತೂ ನಿಜಕ್ಕೂ ಶಾಕ್ ಆಗಿತ್ತು .’ಛೇ ಇಷ್ಟೊಂದು ಶಕ್ತಿ ಇದೆಯಾ ಆ ಕಾದಂಬರಿಗೆ ’ ಅಂದುಕೊಂಡು ನಾನೂ ಲೈಬ್ರೆರಿಗೆ ಹೋಗಿ ಹುಡುಕಿ ತಂದು ಓದಿದ್ದೆ ಆ ಕಾದಂಬರಿಯನ್ನು! ಓದುವಾಗ ಸ್ವಲ್ಪ ಮಟ್ಟಿಗೆ ಭಯ ಆಗ್ತಾ ಇತ್ತು ನಂಗೆ .ಈ ಕಾದಂಬರಿ ಓದಿ ಒಂದು ವೇಳೆ ’ನಾನೂ ಹಿಮಾಲಯಕ್ಕೆ ಹೋಗ್ಬೇಕು’ ಅಂತ ಏನಾದ್ರೂ ಮನಸ್ಸಾದ್ರೆ ಏನು ಗತಿ ಅಂದುಕೊಳ್ತಾ!ಅದೃಷ್ಟವಶಾತ್ ಅಂಥದ್ದೇನೂ ಆಗಲಿಲ್ಲ
ಅದಾದ ಮೇಲೆ ನಾನೂ ಸಾಹಿತ್ಯ -ಸಾಹಿತಿಗಳ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ .ಯಥಾ ಪ್ರಕಾರ ಕೈಗೆ ಸಿಕ್ಕಿದ್ದು ಓದ್ತಾ ಇದ್ದೆ.ಮೋಜು-ಗೋಜು ಓದ್ತಾ ಇದ್ದಷ್ಟೆ intense ಆಗಿ ಯಂಡಮೂರಿಯ ಕಾದಂಬರಿ ಓದ್ತಾ ಇದ್ದೆ .ರವಿ ಬೆಳಗೆರೆಯ ’ಹೇಳಿ ಹೋಗು ಕಾರಣ’ಓದುವಾಗ ಇದ್ದಷ್ಟು ಕುತೂಹಲ ’ಶೇರು ಮಾರುಕಟ್ಟೆಯಲ್ಲಿ ಹಣ ಗಳಿಸುವುದು ಹೇಗೆ ’ ಓದುವಾಗ್ಲೂ ಇರ್ತಾ ಇತ್ತು.ಹಾಗಾಗಿ ನಂಗೆ ಯಾವತ್ತೂ ಪ್ರಾಬ್ಲೆಮ್ ಆಗ್ಲಿಲ್ಲ.
ಯಾವಾಗ ’ಹಾಯ್ ಬೆಂಗಳೂರಿನಲ್ಲಿ ’ಒಬ್ಬ ಓದುಗರ ಪತ್ರ ಓದಿದ್ನೋ ಆಗ ಗೊತ್ತಾಯ್ತು ಲೇಖಕರ ಪವರ್! "ಅಣ್ಣಾ ,ಹಾಯ್ ಬೆಂಗಳೂರಿನಲ್ಲಿ ’ಈ ವಿಷ್ಯದ’ ಬಗ್ಗೆ (ಯಾವ ವಿಷಯ ಅನ್ನೋದು ಬೇಡ) ನಿನ್ನ ಅಭಿಪ್ರಾಯ ಏನೂಂತ ತಿಳಿದು ನನ್ನ ಅಭಿಪ್ರಾಯ ರೂಪಿಸಿಕೊಳ್ಳುವ ಅಂತ ಕಾಯ್ತ ಇದ್ದೆ ,ಸರಿಯಾದ ಟೈಮ್ ಗೆ ಲೇಖನ ಹಾಕಿದ್ದೀಯಾ " ಅಂತ ಬರೆದಿದ್ದ ಆತ .ಎಷ್ಟು ಶಕ್ತಿ ಇದೆ ಅಲ್ವಾ ಲೇಖನಿಗೆ?ಸಾವಿರಾರು ಜನ ತನ್ನ ನೆಚ್ಚಿನ ಲೇಖಕ ಹೇಳಿದ್ದೇ ಸರಿ ಅನ್ನೋ ಅಭಿಪ್ರಾಯ ಮೂಡಿಸಿಕೊಳ್ಳಬೇಕಾದ್ರೆ ಎಂಥ ಶಕ್ತಿ ಇದೆ ಅವರ ಬರಹಕ್ಕೆ!!!
ಆದ್ರೆ ಈ ಶಕ್ತಿಯ ದುರುಪಯೋಗ ಸರೀನಾ?ನಾನು ಬರೆದಿದ್ದನ್ನ ಸಾವಿರಾರು ಜನ ಓದ್ತಾರೆ ಅನ್ನೋ ಒಂದೇ ಕಾರಣಕ್ಕೆ ತಾನು ಶ್ರೇಷ್ಠ ಅಂದುಕೊಳ್ಳೋದು ಸರೀನಾ?

ವಿಜಯ ಕರ್ನಾಟಕದಲ್ಲಿ ಭೈರಪ್ಪ ಲೇಖನ ಬರೆದಿದ್ರು ಅವರ ಫೋಟೊ ಹಾಕಿದ್ರು !ಮಾರನೇ ದಿನ ರಾಮಚಂದ್ರ ಶೆಣೈ ಅಂತ ಒಬ್ಬರು ಬರೆದಿದ್ರು ಅವ್ರ ಫೋಟೊ ಇರ್ಲಿಲ್ಲ!ಮತ್ತೆ ರವಿ ಬೆಳಗೆರೆ ಬರೆದರು ಫೋಟೊ ಸಹಿತ ,ಆದ್ರೆ ಬೇರೊಬ್ಬ ಸಾಮಾನ್ಯ ವ್ಯಕ್ತಿ ಬರೆದ್ರು without photo!ಎಲ್ಲಾ ಜನರ ಫೋಟೊ ಪತ್ರಿಕೆಯ ಡೇಟಾಬೇಸ್ ನಲ್ಲಿ ಇರಲ್ಲ,ಆ ಮಾತು ಒಪ್ಪತಕ್ಕದ್ದೆ .ಆದ್ರೆ ಒಬ್ಬ ಸಾಮಾನ್ಯ ಮನುಷ್ಯ ಬರೆದರೆ ಅದಕ್ಕೆ ಅಷ್ಟೊಂದು ಪ್ರಾತಿನಿಧ್ಯ ಸಿಗಲ್ಲ.ಅದೇ ಹೆಸರಾಂತ ಸಾಹಿತಿಗಳು ಬರೆದರೆ ಮುಖಪುಟದಲ್ಲಿ ಸ್ಥಾನ!!

ಅಷ್ಟಕ್ಕೂ ಸಾಹಿತ್ಯ ಅನ್ನೋದು ಅದ್ಯಾಕೆ ಶ್ರೇಷ್ಠ ಅಂತ ನಂಗೆ ಇನ್ನೂ ಗೊತ್ತಾಗಿಲ್ಲ.ಫಿಲಿಪ್ಸ್ ನಲ್ಲಿ ಕೂತು ಒಬ್ಬ ಇಂಜಿನಿಯರ್ ತಯಾರಿಸಿದ ಮೆಡಿಕಲ್ ಉಪಕರಣ ಹಾಸ್ಪಿಟಲ್ ನಲ್ಲಿ ತಣ್ಣಗೆ ಕೂತು ಸಾವಿರಾರು ಜನರ ಪ್ರಾಣ ಕಾಪಾಡ್ತಾ ಇರುತ್ತೆ .ಅಂಥ ಇಂಜಿನಿಯರ್ ಗೆ ಗೌರವ ಸಿಗಲ್ಲ.ಅವನ ಹತ್ರ ಯಾರೂ ’ಮಂತಾಂತರದ ಬಗ್ಗೆ ನಿಮ್ಮ ಅಭಿಪ್ರಾಯ ಹೇಳಿ ’ ಅಂತ ಕೇಳಲ್ಲ! ಬದಲಾಗಿ ’ಕಳ್ ನನ್ ಮಗ ಎಷ್ಟು ಸಾವಿರ ದುಡೀತಾನೋ ,ಬೆಂಗಳೂರಿನ ಸಂಸ್ಕೃತಿ ಹಾಳು ಮಾಡಿ ಪಬ್ ಸಂಸ್ಕೃತಿ ತಂದಿದ್ದು ಇವ್ರೇ ಕಣ್ರಿ ’ ಅಂತಾರೆ.ನೋಕಿಯಾದಲ್ಲಿ ರಾತ್ರಿ ಹಗಲು ದುಡಿದು ಮೊಬೈಲ್ ಫೋನ್ ಅಭಿವೃದ್ಧಿ ಪಡಿಸಿದ ಇಂಜಿನಿಯರ್ ನನ್ನೂ ಯಾರೂ ಕೇಳಲ್ಲ ,ಬದಲಾಗಿ ಅದೇ ಕಂಪೆನಿಯ ಮೊಬೈಲ್ ಜೇಬಲ್ಲಿಟ್ಟುಕೊಂಡು ’ನೋಡಿ ಅವನದ್ದೇ ಕಂಪೆನಿಯಲ್ಲಿ ಮೊನ್ನೆ ಹುಡುಗಿ ಸುಸೈಡ್ ಮಾಡಿದ್ದು’ ಅಂತಾರೆ! ಯಾರೋ ಬರೆದ ಪುಸ್ತಕಕ್ಕೆ ಬೂಕರ್ ಬರುತ್ತೆ ,ನಾಳೆ ಅವನ ಅಭಿಪ್ರಾಯಕ್ಕೂ ಸಕ್ಕತ್ ಮರ್ಯಾದೆ ,ಆದ್ರೆ ATMನಲ್ಲಿ ಚಕ ಚಕ ಅಂತ ಕಾಸು ಹೊರಬರೋ ಥರ ಸಾಫ್ಟ್ ವೇರ್ ಬರೆದವನಿಗೆ ಪೂಕರ್ ಪ್ರಶಸ್ತಿ ಕೂಡ ಸಿಗಲ್ಲ ,ಯಾಕಂದ್ರೆ ಅವನಿಗೆ ನಾಲ್ಕು ಜನರು ಮೆಚ್ಚೋ ಥರ ಬರೆಯೋಕೆ ಬರಲ್ಲ!

ಒಂದು ಟ್ಯಾಬ್ಲಾಯ್ಡ್ ಪತ್ರಿಕೆಯ ಸಂಪಾದಕ ಅನ್ನೋ ಕಾರಣಕ್ಕೆ ಬರೆದದ್ದು ಫೋಟೊ ಸಹಿತ ಪ್ರಕಟ ಆಗುತ್ತೆ ,ಆದ್ರೆ ಚಂದ್ರಯಾನ ಯಶಸ್ವಿಯಾಗಿ ಉಡಾಯಿಸಿದ ವಿಜ್ಞಾನಿಗಳನ್ನು ಮಾತ್ರ ಯಾರೂ ಕೇಳಲ್ಲ ’ಮತಾಂತರದ ಬಗ್ಗೆ ನಿಮ್ಮ ಅಭಿಪ್ರಾಯ ಏನು ’ ಅಂತ ,ಯಾಕಂದ್ರೆ ಅವರಿಗೂ ತಮ್ಮ ಅಭಿಪ್ರಾಯ ಬರೆಯೋದಕ್ಕೆ ಬರಲ್ಲ!
ಕನ್ನಡಕ್ಕೆ ಏಳು ಜ್ಞಾನಪೀಠ ಪ್ರಶಸ್ತಿ ಸಿಕ್ಕಿದೆ ಅಂತ ಎಲ್ಲರಿಗೂ ಗೊತ್ತು ಆದ್ರೆ ಕರ್ನಾಟಕದ ಎಷ್ಟು ಜನರಿಗೆ ಪರಮವೀರ ಚಕ್ರ ಸಿಕ್ಕಿದೆ ಅನ್ನೋದು ಯಾರಿಗೂ ಗೊತ್ತಿಲ್ಲ.ಯಾಕಂದ್ರೆ ಅವರಿಗೆ ಬರೆಯೋದು ಗೊತ್ತಿಲ್ವಲ್ಲ!

ಇಷ್ಟೊಂದು ಗೌರವ ಸಿಕ್ತಾ ಇರೋದಕ್ಕೆ ತಾನೇ ಸಾಹಿತಿಗಳು ತಮ್ಮನ್ನು ತಾವು ಶ್ರೇಷ್ಠ ಅಂದುಕೊಂಡು ಕಿತ್ತಾಡ್ತಾ ಇರೋದು??ಕೇವಲ ಭೈರಪ್ಪನವರು ಬರೆದಿದ್ದಾರೆ ಅನ್ನೋ ಕಾರಣಕ್ಕೇ ಜನ ಅವರ ವಿರುದ್ಧ ,ಅವರ ಲೇಖನದ ವಿರುದ್ಧ ಸಾಕ್ಷಿ ಒಟ್ಟುಗೂಡಿಸ್ತಾ ಇದ್ದಾರೆ.ಯಡಿಯೂರಪ್ಪ ಹೇಳಿದ್ದಕ್ಕೇನಾದ್ರೂ ಯೆಸ್ ಅಂದು ಬಿಟ್ರೆ ಸರಕಾರ ಚೆನ್ನಾಗಿ ಕೆಲಸ ಮಾಡ್ತಾ ಇದೆ ಅಂತೇನಾದ್ರೂ ಜನ ತಿಳ್ಕೊಂಡು ಬಿಟ್ರೆ ಅಂತ ಪ್ರತಿಪಕ್ಷದವ್ರು ಎಲ್ಲಾದಕ್ಕೂ oppose ಮಾಡ್ತಾರಲ್ಲ ಹಾಗಾಯ್ತು ಸಾಹಿತಿಗಳ ಪರಿಸ್ಥಿತಿ !ಈ ಥರ ಆದ್ರೆ ಒಂದು ಬಣದವರಿಗೆ ಏನೂ ನಷ್ಟ ಆಗಲ್ಲ .ಯಾಕಂದ್ರೆ ಅವರು ಬರೀ ಒಂದು ಬಣದವರದ್ದಷ್ಟೆ ಓದೋ ಅಂಥವರು ! ಆದ್ರೆ ನಿಜವಾದ ನಷ್ಟ ಎರಡೂ ಬಣದವರನ್ನು ಇಷ್ಟ ಪಡೋರಿಗೆ!ತನ್ನ ಒಬ್ಬ ನೆಚ್ಚಿನ ಸಾಹಿತಿಯ ಬಗ್ಗೆ ಇನ್ನೊಬ್ಬ ನೆಚ್ಚಿನ ಸಾಹಿತಿ ಕೆಟ್ಟದಾಗಿ ಬರೆದ್ರೆ ಬೇಜಾರಾಗಲ್ವ??ಈ ಬೇಜಾರನ್ನು ಇಟ್ಕೊಂಡೇ ಮತ್ತೆ ಅವರು ಬರೆದದ್ದನ್ನು ಓದೋಕೆ ಸಾಧ್ಯ ಆಗುತ್ತಾ??ಅವರ ಸಂಕುಚಿತ ಮನೋಭಾವದ ಬಗ್ಗೆ ಗೊತ್ತಾಗಿಯೂ ಅವರನ್ನು ಗೌರವಿಸಲು ಸಾಧ್ಯಾ ಆಗುತ್ತಾ??

ಬಹುಷಃ ಆಗುತ್ತೇನೋ ?? ಯಾಕಂದ್ರೆ ಸಲ್ಮಾನ್ ಖಾನ್ ಅಷ್ಟು ಜನರ ಮೇಲೆ ಗಾಡಿ ಹರಿಸೀನೂ ಇನ್ನೂ ಸ್ಟಾರ್ ಅಗಿಲ್ವ?? ಮೈಕಲ್ ಜಾಕ್ಸನ್ ಏನೇ ಎಡವಟ್ಟು ಮಾಡ್ಕೊಂಡ್ರೂ ಜನ ಅವರನ್ನು ಪ್ರೀತಿಸಲ್ವ??

All the best ಸಾಹಿತಿಗಳೇ .............

Wednesday, October 22, 2008

ಚಂದ್ರಯಾನ -ಚಂದ್ರನತ್ತ ಪಯಣ.



ಚಂದ್ರನತ್ತ ಪಯಣದ ಮೊದಲ ಹಂತ ಯಶಸ್ವಿಯಾಗಿದೆ.ಭಾರತದ ವಿಜ್ಞಾನಿಗಳ ಸಾಮರ್ಥ್ಯವನ್ನು ಜಗತ್ತಿಗೇ ತೋರಿಸುವಲ್ಲಿ ಈ ಯಶಸ್ಸು ತುಂಬಾ ಪ್ರಮುಖ ಪಾತ್ರ ವಹಿಸಿದೆ. ಈ ಯಶಸ್ಸಿನಲ್ಲಿ ಭಾಗಿಯಾದ ಸಮಸ್ತರಿಗೂ ನಮ್ಮ ಅಭಿನಂದನೆ ತಿಳಿಸೋಣ.ಸಾವಿರಾರು ಕೆ.ಜಿ ತೂಕದ ಉಪಕರಣಗಳನ್ನು ಚಂದ್ರ ಮೇಲೆ ಇಳಿಸೋದು ಹುಡುಗಾಟದ ಕೆಲಸವಲ್ಲ.ಇದರ ಹಿಂದೆ ಸಾವಿರಾರು ಜನರ (ಬರೀ ವಿಜ್ಞಾನಿಗಳ ಅಂದ್ರೆ ತಪ್ಪಾಗುತ್ತೆ !) ,ಹಲವಾರು ವರ್ಷಗಳ ಪರಿಶ್ರಮವಿದೆ.
ಸುಮಾರು ಐದು ವರ್ಷಗಳ ಹಿಂದೆ ನನಗೂ ಇಸ್ರೋದ ಬೆಂಗಳೂರು ಶಾಖೆಯಲ್ಲಿ ಅಪ್ರೆಂಟಿಸ್ ಆಗಿ ಕೆಲಸ ಮಾಡುವ ಸೌಭಾಗ್ಯ ಸಿಕ್ಕಿದ್ದರಿಂದ ಆ ವಿಜ್ಞಾನಿಗಳ ಕಾರ್ಯವೈಖರಿಯನ್ನು ಹತ್ತಿರದಿಂದ ನೋಡುವ ಅವಕಾಶ ನನಗೆ ಸಿಕ್ಕಿತ್ತು! ಬಾಹ್ಯಾಕಾಶ ಪ್ರಾಜೆಕ್ಟ್ ಗಳು ಕೆಲಸದ ದೃಷ್ಟಿಯಿಂದ ನೋಡಿದ್ರೆ ತುಂಬಾನೆ ಕಷ್ಟ ಹಾಗೂ risky .ಇಲ್ಲಿ ನಿಮಗೆ ಸಿಗೋದೇ ಒಂದು ಅವಕಾಶ .’ಛೆ! ಅಲ್ಲಿ ಸ್ವಲ್ಪ ಎಡವಟ್ಟಾಗಿತ್ತು ನೆಕ್ಸ್ಟ್ ಟೈಮ್ ಸರಿ ಮಾಡ್ತೀನಿ ’ಅನ್ನೋದಕ್ಕೆ ಇಲ್ಲಿ ಆಸ್ಪದವೇ ಇಲ್ಲ.ಹಾಗಾಗಿ ಇಲ್ಲಿ ಇರುವಷ್ಟು ಚ್ಯಾಲೆಂಜ್ ಬೇರೆ ಯಾವ ವೃತ್ತಿಯಲ್ಲೂ ಇಲ್ಲ ಎಂಬುದು ನನ್ನ ಅನಿಸಿಕೆ.
ಉಡಾವಣೆಯ ಸಂದರ್ಭದಲ್ಲಿ ಉಂಟಾಗುವ ಶಾಖದಿಂದ ಉಪಗ್ರಹವನ್ನು ರಕ್ಷಿಸೋದೆ ಒಂದು ದೊಡ್ಡ ಸಾಹಸ.ಹೀಗಾಗಿ ಉಪಗ್ರಹದಲ್ಲಿ ಉಪಯೋಗಿಸುವ ಒಂದೊಂದು ಬಿಡಿ ಭಾಗವೂ ಅತ್ಯಂತ ದುಬಾರಿ .S.P roadನಲ್ಲಿ ಸಿಗುವ ಮಾಮೂಲಿ ಐದು ರೂಪಾಯಿಯ ಬಿಡಿಭಾಗವೂ ಸ್ಪೇಸ್ ಗ್ರೇಡ್ ನಲ್ಲಿ ಸಾವಿರಾರು ರೂಪಾಯಿ ಬೆಲೆ ಬಾಳುತ್ತವೆ.ಒಂದೇ ಒಂದು ಕಡೆ ಎಡವಟ್ಟಾಯ್ತೋ ಕೋಟ್ಯಾಂತರ ರೂಪಾಯಿ ನೀರುಪಾಲು!ಹಣದ ಮನೆ ಹಾಳಾಗ್ಲಿ ಅಷ್ಟು ವರ್ಷದ ಶ್ರಮ ವ್ಯರ್ಥ ಆಗ್ಬಿಡುತ್ತೆ.
ಅಂದ ಹಾಗೆ ಚಂದ್ರಯಾನದ ಮುಖ್ಯ ಉದ್ದೇಶ ಚಂದ್ರನ ಅಧ್ಯಯನ.ಆದ್ರೆ ಅದಕ್ಕಿಂತ ಮುಖ್ಯ ಉದ್ದೇಶ ಚಂದ್ರನಲ್ಲಿರುವ ಹೀಲಿಯಮ್ ನಿಕ್ಷೇಪದ ಬಗ್ಗೆ ತಿಳಿಯೋದು.ಒಂದು ಟನ್ ಹೀಲಿಯಂ ಸಿಕ್ಕಿದ್ರೆ ಒಂದು ವರ್ಷ ವಿದ್ಯುತ್ ಪಡೆಯಬಹುದಂತೆ.ಹೀಲಿಯಮ್ ಇದೆ ಅಂತ ಗೊತ್ತಾದ್ರೆ ನಮ್ಮ ರೆಡ್ಡಿಗಳು ಚಂದ್ರನಲ್ಲೂ ಗಣಿಗಾರಿಕೆ ಶುರು ಮಾಡೋದಂತೂ ಗ್ಯಾರಂಟಿ!
ಇವತ್ತು ನಮ್ಮ ದೇಶದ ಐದು ಉಪಕರಣಗಳಲ್ಲದೆ ನಾಸಾ ಹಾಗೂ ಯುರೋಪಿಯನ್ ಸ್ಪೇಸ್ ಏಜನ್ಸಿಯ ಆರು ಉಪಕರಣಗಳನ್ನೂ ಕಳಿಸಿದ್ದಾರೆ.ನೋಡಿ ಭಾರತದ ಉಡಾವಣಾ ಸಾಮರ್ಥ್ಯದ ಮೇಲೆ ಬೇರೆ ದೇಶದವರಿಗೂ ಎಷ್ಟು ವಿಶ್ವಾಸವಿದೆ ಅಂತ..
ಇಷ್ಟೆಲ್ಲದರ ನಡುವೆ ಕೆಲವ್ರದ್ದು ಒಂದು ತಕರಾರು! ’ ಸುಮ್ಮನೆ ಚಂದ್ರನ ಮೇಲೆ ಏನೋ ಕಳಿಸೋದಕ್ಕೆ ಕೋಟ್ಯಂತರ ರೂಪಾಯಿ ವ್ಯಯಿಸೋದಕ್ಕಿಂತ ಇದೇ ಹಣವನ್ನು ಬೇರೆ ಒಳ್ಳೆಯ(?) ಕಾರ್ಯಗಳಿಗೆ ಉಪಯೋಗಿಸಬಹುದಿತ್ತು ’ ಅಂತ.
ಅವರಿಗೆ ’ಸಾರ್ ನಿಮ್ಮ ಮಗಳ ಮದುವೇನ ಸಿಂಪಲ್ ಆಗಿ ರಿಜಿಸ್ಟರ್ ಆಫೀಸ್ ನಲ್ಲಿ ಮಾಡಿಸೋದು ಬಿಟ್ಟು ಅದ್ಯಾಕೆ ಧಾಂ ಧೂಮ್ ಅಂತ ಛತ್ರದಲ್ಲಿ ಮಾಡಿಸಿದ್ರಿ ? ’ ಅಂದ್ರೆ ’ಹೆ ಹೆ ಇರೋದು ಒಬ್ಳೆ ಮಗಳು ಕಣ್ರಿ ಅದಿಕ್ಕೆ ’ ಅಂತಾರೆ!!!”
ಇರ್ಲಿ ಬಿಡಿ ಕಾರ್ ಯಾಕೆ ಇಟ್ಕೊಂಡಿದ್ದೀರಾ? ಸಿಂಪಲ್ ಆಗಿ ಬಿ ಎಮ್ ಟಿ ಸಿ ಬಸ್ ನಲ್ಲೆ ಓಡಾಡಬಹುದಲ್ಲ ,ನೀವು ಹಾಕೋ ಪೆಟ್ರೋಲ್ ಕಾಸಲ್ಲಿ ನಾಲ್ಕು ಜನ ಬಡವ್ರು ಊಟ ಮಾಡಬಹುದು ’ಅಂದ್ರೆ ,ಅದಕ್ಕೂ ಅದೇ ಮೀಸೆಯಡಿಯಲ್ಲಿ ಮೋನಾಲೀಸಾ ಸ್ಮೈಲ್ ಕೊಟ್ಟು ’ಬಿ ಎಮ್ ಟಿ ಸಿ ಸಕ್ಕತ್ ರಶ್ಶು ಸಾರ್ ಅದಿಕ್ಕೆ ’ ಅಂತಾರೆ ಯಜಮಾನ್ರು!!!
ಇಂಥ ಉಡಾವಣೆಗಳು ವೈಜ್ಞಾನಿಕ ಸಂಶೋಧನೆಗಳಿಗೆ ಸಹಕರಿಸೋದೇನೋ ನಿಜ ,ಆದ್ರೆ ಅದಕ್ಕಿಂತ ಹೆಚ್ಚು ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಪ್ರತಿಷ್ಟೆ ಹೆಚ್ಚಿಸೋದೂ ಅಷ್ಟೇ ಸತ್ಯ.ಪೋಖರಾನ್ ಟೆಸ್ಟ್ ಆದ್ಮೆಲೆ ತಾನೆ ನಾವೇನು ಅಂತ ಬೇರೆಯರಿಗೆ ತಿಳಿದದ್ದು??

ಚಂದ್ರಯಾನದ ಮೊದಲ ಹಂತ ಏನೋ ಯಶಸ್ವಿಯಾಗಿದೆ .ಆದ್ರೆ ಇನ್ನಿರೋದೆ ನಿಜವಾದ ಚ್ಯಾಲೆಂಜ್ .ಕಳಿಸಿರೋ ಎಲ್ಲ ಉಪಕರಣಗಳೂ ಚಂದ್ರ ಮೇಲೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸಲಿ ಅಂತ ದೇವರಲ್ಲಿ ಬೇಡಿಕೊಳ್ಳೋಣ .

ಇಸ್ರೋ ತಂಡದ ಎಲ್ಲರಿಗೂ ಅಭಿನಂದನೆಗಳು.

Friday, October 17, 2008

ನೀವೂ ಓದಿ ’ನರೇಂದ್ರ ಮೋದಿ-ಯಾರೂ ತುಳಿಯದ ಹಾದಿ ’



’ ನರೇಂದ್ರ ಮೋದಿ- ಯಾರೂ ತುಳಿಯದ ಹಾದಿ ’ . ಕೆಲವು ದಿನಗಳ ಹಿಂದಷ್ಟೆ ಈ ಪುಸ್ತಕ ತಗೊಂಡಿದ್ದೆ.ಓದಲು ಸಮಯ ಸಿಗಲ್ಲ ಅಂತ ಗೊತ್ತಿದ್ರಿಂದ ಸದಾ ಬ್ಯಾಗ್ ನಲ್ಲೇ ಇಟ್ಟುಕೊಂಡಿರ್ತಿದ್ದೆ, ಬಸ್ ನಲ್ಲಿ ಹೋಗ್ತಾ ಇರ್ಬೇಕಾದ್ರೆ ಓದೋದಿಕ್ಕೆ ಅಂತ!ನನ್ನ ಬ್ಯಾಗ್ ನಲ್ಲಿ ಈ ಪುಸ್ತಕ ನೋಡಿ ಬಹಳಷ್ಟು ಗೆಳೆಯರು ಹೇಳ್ತಾ ಇದ್ದಿದ್ದು " ಓಹ್ ನೀನು ಮೋದಿ ಫ್ಯಾನಾ....??? "
ನಾನು ಯಾರ ಫ್ಯಾನೂ ಅಲ್ಲ ಬೀಸಣಿಕೆನೂ ಅಲ್ಲ ಅಂದೆ ಅವರಿಗೆಲ್ಲ .ಹಿಂದೆ ಯಾವುದೋ ಒಂದು ವಿಷಘಳಿಗೆಯಲ್ಲಿ ಉಪೇಂದ್ರನ ಅಭಿಮಾನಿ ಅಂತ ಹೇಳಿದ್ದೆ ನನ್ನ ಗೆಳತಿಯೊಡನೆ ,ಅದೇ ಕೊನೆ ಅದಾದ್ ಮೇಲೆ ನಾನು ಯಾರದೇ ಫ್ಯಾನ್ ಅನ್ನೋದಕ್ಕೆ ನಂಗೆ ಮನಸ್ಸೆ ಬಂದಿಲ್ಲ!
ಉಪೇಂದ್ರನ ಫ್ಯಾನ್ ಅನ್ನಿಸಿಕೊಂಡಿದ್ದಕ್ಕೆ ಅವಳು ನನ್ ಹತ್ರ ಮಾತಾಡೋದೇ ಬಿಟ್ಟಿದ್ಲು ಕೆಲ ದಿನ .ಆಗ ಅಷ್ಟೊಂದು ಮಾನಸಿಕವಾಗಿ ಪ್ರಬುದ್ಧನಾಗಿಲ್ಲದ್ದರಿಂದ(ಈಗಲೂ ಆಗಿಲ್ಲ ಅನ್ನೋದು ಕೆಲವರ ಅನಿಸಿಕೆ!) ಬಹುಷ ಉಪೇಂದ್ರನ ಮಂಗ ಚೇಷ್ಟೆಗಳೆಲ್ಲ ಇಷ್ಟವಾಗ್ತಾ ಇತ್ತು .ಈಗ ಆಗಲ್ಲಾ ಬಿಡಿ !
ಈಗ ಫ್ಯಾನ್ ,A.C ,ಬೀಸಣಿಕೆ ಯಾವುದೂ ಇಲ್ಲ.ಇಷ್ಟ ಆದ್ರೆ ಇಷ್ಟ ಆಯ್ತು ಅನ್ನೋದು ,ಇಲ್ಲಾಂದ್ರೆ ಇಲ್ಲ.ಯಾರದೆ ಅಭಿಮಾನಿ ಅಂತ ಬ್ರಾಂಡ್ ಆಗಿಬಿಟ್ರೆ ಆಮೇಲೆ ಅವರು ಮಾಡಿದ್ದೆಲ್ಲ ಚೆನ್ನಾಗಿದೆ ಅಂತ ಅನ್ಸೋಕೆ ಪ್ರಾರಂಭ ಆಗಿಬಿಡುತ್ತೆ . ನಂಗೆ ಆರ್ಕುಟ್ ನಲ್ಲಿ ’ದೈತ್ಯ ಬರಹಗಾರರ’ ಫ್ಯಾನ್ ಕ್ಲಬ್ ನಲ್ಲಿ ಅಂಥ ಅನುಭವ ಆಗಿದೆ.

ಥತ್ ನರೇಂದ್ರ ಮೋದಿ ಪುಸ್ತಕದ ಬಗ್ಗೆ ಬರೆಯಲು ಹೊರಟವನು ಇದೇನು ಉಪೇಂದ್ರನ ಬಗ್ಗೆ ಬರೀತಾ ಇದ್ದೀನಿ:(

ಪ್ರತಾಪ್ ಸಿಂಹರ ’ನರೇಂದ್ರ ಮೋದಿ’ ಪುಸ್ತಕ ಓದಿದ ಮೇಲಂತೂ ಮೋದಿ ಫ್ಯಾನ್ ಆಗಿಬಿಡೋಣ ಅಂತ ಅನ್ನಿಸಿದ್ದು ನಿಜ! ಆದ್ರೆ ಇನ್ನು ಮುಂದೆ ಯಾರದೇ ಫ್ಯಾನ್ ಅಗ್ಬಾರ್ದು ಅಂಥ ನಿರ್ಧಾರ ಮಾಡಿ ಆಗಿದೆ . ಆದ್ದರಿಂದ ಅಭಿಮಾನವಷ್ಟೆ ಸಾಕು ಅಭಿಮಾನಿಯಾಗೋದು ಬೇಡ ಅಲ್ವ?

ಈ ಪುಸ್ತಕ ಓದೋ ತನಕ ನರೇಂದ್ರ ಮೋದಿಯ ಬಗ್ಗೆ ನನಗೆ ಏನೂ ಗೊತ್ತಿರ್ಲಿಲ್ಲ .ಸುಮಾರು ಆರು ತಿಂಗಳು ನಾನೂ ಗುಜರಾತ್ ನಲ್ಲಿ ಕೆಲಸ ಮಾಡಿದ್ರೂ ನಂಗೆ ಮೋದಿಯ ಬಗ್ಗೆ ನನಗೆ ಅಷ್ಟು ಕುತೂಹಲ ಇರ್ಲಿಲ್ಲ .ಗುಜರಾತ್ ನಲ್ಲಿ ನಾನು ನೋಡಿದ್ದು ಭೂಕಂಪದ ಸಮಯದಲ್ಲಿ ಬಿರುಕು ಬಿಟ್ಟ ಕಟ್ಟಡಗಳು ,ಅಹಮದಾಬಾದ್ ನ ಚೆಂದುಳ್ಳಿ ಚೆಲುವೆಯರ ಗರ್ಭಾ ನೃತ್ಯ ಅಷ್ಟೇ !

ಪ್ರತಾಪ್ ಸಿಂಹರ ಲೇಖನಗಳು ನಂಗೆ ಮೊದಲಿಂದಲೂ ತುಂಬಾ ಇಷ್ಟ .ಬಿಜೆಪಿ ,ಕಾಂಗ್ರೆಸ್ ,ಜೆ ಡಿ ಎಸ್ ಅನ್ನೋ ಬೇಧ ಭಾವ ಇಲ್ಲದೆ ಎಲ್ಲರ ಮುಖಕ್ಕೆ ಮಂಗಳಾರತಿ ಮಾಡುವ ರೀತಿ ಸೂಪರ್ಬ್!ಅದೂ ಅಲ್ಲದೆ ಅಂಕಿ ಅಂಶಗಳನ್ನು ಒದಗಿಸಿಯೇ ಲೇಖನ ಬರೆಯೋದ್ರಿಂದ ಅನುಮಾನಿಸೋದಕ್ಕೆ ಆಸ್ಪದವೆ ಇಲ್ಲ(ಅದಾಗ್ಯೂ ಅನುಮಾನಿಸೋರಿದ್ದಾರೆ ಅದು ಬೇರೆ ವಿಷಯ!) ಇಂಥ ಪ್ರತಾಪ್ ಸಿಂಹ ಬರೆದ ಪುಸ್ತಕ ಓದ್ಬೇಕು ಅಂತ ತುಂಬಾ ಆಸೆ ಪಟ್ಟಿದ್ದೆ .ಇವತ್ತು ಈಡೇರಿತು.

ಗುಜರಾತ್ ಮಾದರಿ ಅಂದ ತಕ್ಷಣ ಗೋಧ್ರಾ ಘಟನೆ ನೆನಪಿಸಿ ಕೊಳ್ಳೋ ಜನರು ಎಂಥ ನೆಗೆಟಿವ್ ಥಿಂಕರ್ಸ್ ಅನ್ನೋದರ ಬಗ್ಗೆ ಇಲ್ಲಿ ಚರ್ಚೆ ಮಾಡೋದು ವೇಸ್ಟ್ .ಆದ್ರೆ ಗುಜರಾತ್ ಮೋದಿಯಿಂದಾಗಿ ನಂಬರ್ ಒನ್ ರಾಜ್ಯ ಆಗಿದ್ದು ಮಾತ್ರ ನಗ್ನ ಸತ್ಯ.
ಮೊನ್ನೆ ’ಆಜ್ ತಕ್’ನಲ್ಲಿ ಮೋದಿ ಸಂದರ್ಶನ ಮಾಡ್ತಾ ಇದ್ರು ಪ್ರಭು ಚಾವ್ಲಾ .ಪ್ರಭು ಚಾವ್ಲಾ as usual ಅದೇ ಕೃತಕ ನಗು ಮುಖದಿಂದ ಮೋದಿಯನ್ನು ಇಕ್ಕಟ್ಟಿಗೆ ಸಿಲುಕಿಸುವ ಮಾಡ್ತಾ ಇದ್ರು.ಆದ್ರೆ ಅಮೆರಿಕಾ ವೀಸಾ ಬಗ್ಗೆ ಪ್ರಭು ಕೇಳಿದ ಪ್ರಶ್ನೆಗೆ ಮೋದಿ ನೀಡಿದ ಉತ್ತರ ಮಾತ್ರ ತುಂಬಾ ಇಷ್ಟ ಆಯ್ತು ನಂಗೆ.
ನರೇಂದ್ರ ಮೋದಿ ಹೇಳಿದ್ದು ಇಷ್ಟು "ನೋಡಿ ಹಿಂದೆ ಒಂದು ಸಲ ನಾನು ವೀಸಾ ಕೇಳಿದಾಗ ಅವರು ನಿರಾಕರಿಸಿದ್ದೇನೋ ನಿಜ ಆದ್ರೆ ಈ ಸಲ ನಾನು ಕೇಳೆ ಇಲ್ಲ ಅವರೆ ವಿನಾ ಕಾರಣ ಅಪಪ್ರಚಾರ ಮಾಡ್ತಾ ಇದ್ದಾರೆ "
ಅದಿಕ್ಕೆ ಚಾವ್ಲಾ "ಹಾಗಿದ್ರೆ ನೀವು ವೀಸಾ ಕೇಳಲ್ವ ? " ಅಂದಿದ್ದಕ್ಕೆ "ನಾನ್ಯಾಕ್ರಿ ಕೇಳ್ಬೇಕು .ಅಮೆರಿಕಾದವರೇ ಭಾರತದ ವೀಸಾ ಗೆ ಕ್ಯೂ ನಿಲ್ಲಬೇಕು ,ಆ ರೀತಿ ಮಾಡೋಣ ನಮ್ಮ ದೇಶವನ್ನು ".

ಇಂಥ ಸ್ವಾಭಿಮಾನ ಎಲ್ಲರಿಗೂ ಇದ್ದಿದ್ರೆ ಎಷ್ಟು ಚೆನ್ನಾಗಿರ್ತಾ ಇತ್ತು ಅಲ್ವ??

ಪುಸ್ತಕ ಓದಿದ ಮೇಲೆ ಮೋದಿಯ ಮೇಲೆ ಈಗಾಗಲೇ ಇದ್ದ ಅಭಿಮಾನ ಇಮ್ಮಡಿಯಾದದ್ದಂತೂ ನಿಜ . ಪ್ರತಾಪ್ ಸಿಂಹ ಅದಕ್ಕಾಗಿ ಧನ್ಯವಾದಗಳು ನಿಮಗೆ.

ನೀವೂ ಓದಿ -ನರೇಂದ್ರ ಮೋದಿ- ಯಾರೂ ತುಳಿಯದ ಹಾದಿ .
ಕಾಸು ಕೊಟ್ಟು ಓದೋದಿಕ್ಕೆ ಇಷ್ಟ ಇಲ್ವ ? ಪರ್ವಾಗಿಲ್ಲ ಅದಕ್ಕೊ ಪ್ರತಾಪ್ ವ್ಯವಸ್ಥೆ ಮಾಡಿದ್ದಾರೆ ಪ್ರತಾಪ್ !

ಇಲ್ಲಿಂದ ಓದಿ ಅಷ್ಟೆ http://pratapsimha.com/books/narendra-modi.pdf

ಅಂದ ಹಾಗೆ ಪ್ರತಾಪ್ ವಿಜಯ ಕರ್ನಾಟಕದಲ್ಲಿ ನಿರ್ಭಿಡೆಯಿಂದ ಬರೆಯಲು ಸದಾ ಬೆಂಗಾವಲಾಗಿರುವ ವಿಶ್ವೇಶ್ವರ ಭಟ್ ರಿಗೂ ಒಂದು ಥ್ಯಾಂಕ್ಸ್ ಹೇಳೋಣ -ಏನಂತೀರಾ??


ಚಿತ್ರಕೃಪೆ : ಪ್ರತಾಪ್ ಸಿಂಹರ ತಾಣದಿಂದ ಹೈಜಾಕ್ ಮಾಡಿದ್ದು .

Thursday, October 9, 2008

ಅನಾಮಿಕಾ



"A rose by any other name would smell as sweet" ಅಂತ ಶೇಕ್ ಸ್ಪಿಯರ್ ರೋಮಿಯೋ ಜೂಲಿಯಟ್ ನಲ್ಲಿ ಹೇಳಿದ್ದನಂತೆ ,ಅದನ್ನೆ ಗಟ್ಟಿಯಾಗಿ ಹಿಡಿದುಕೊಂಡು ಬಿಟ್ಟಿದ್ದಾರೆ ಕೆಲವು ಜನಗಳು!
ಶೇಕ್ ಸ್ಪಿಯರ್ ಏನೋ ಮಾತಿಗೆ ಆ ರೀತಿ ಬರೆದಿರಬಹುದು ,ಆದ್ರೆ ನಿಜ ಜೀವನದಲ್ಲಿ ಅವನೇನಾದ್ರೂ ಹೆಸರಿಗೆ ಅಷ್ಟು ಪ್ರಾಮುಖ್ಯತೆ ಕೊಡದೇ ಹೋಗಿದ್ರೆ ,ಅವನು ಬರೆದ ಎಷ್ಟೊ ನಾಟಕಗಳನ್ನು ಬೇರೆಯವರು ತಮ್ಮದಾಗಿಸ್ತಿದ್ರೇನೋ ?

ಹೊಸದಾಗಿ ಇಂಟರ್ನೆಟ್ ಲೋಕಕ್ಕೆ ಪರಿಚಯವಾದಾಗ ಹೀಗೆ ಸಮಯ ಕಳೆಯಲು ಚಾಟ್ ರೂಮ್ ಗೆ ಎಡತಾಕುವ ಅಭ್ಯಾಸ ಇತ್ತು.ಎಲ್ಲರೂ ಮಾಮೂಲಾಗೇ ಕೇಳುವ ಪ್ರಶ್ನೆ ಹೆಸರೇನು(Age Sex Location),ಎಲ್ಲಿರೋದು ಇತ್ಯಾದಿ.
ಇಂಟರ್ನೆಟ್ ನಲ್ಲಿ ಅಷ್ಟು ಸುಲಭವಾಗಿ ನಮ್ಮ ಪರಿಚಯ ಮಾಡ್ಕೋಬಾರದು ಅನ್ನೋ ಅರಿವು ಬಹಳಷ್ಟು ಜನರಿಗೆ ಇದ್ದುದರಿಂದ ಯಾರೂ ಈ ಪ್ರಶ್ನೆ ಗೆ ನಿಜ ಉತ್ತರ ನೀಡ್ತಾ ಇರ್ಲಿಲ್ಲ.
ಆಗ ಬಹಳಷ್ಟು ಜನರ ನೆರವಿಗೆ ಬರ್ತಾ ಇದ್ದಿದ್ದೇ
ಶೇಕ್ ಸ್ಪಿಯರ್ ನ ಈ ವಾಕ್ಯ "A rose by any other name would smell as sweet" . ಹೆಸರ್ಲ್ಲೇನಿದೆ ??? !!! ಅಂತ.
ಆದ್ರೆ ರೋಸ್ ಅನ್ನೋದೇ ಒಂದು identity ಅಲ್ವ? ರೋಸ್ ನ ಜಾಸ್ಮಿನ್ ಅಂತ ಕರೆದಿದ್ರೆ ಅದೇ ಸುವಾಸನೆ ಇರುತ್ತೇನೋ ಆದ್ರೆ ಆ ಆಪ್ಯಾಯಮಾನತೆ??
ನನ್ನ ಗೆಳತಿಯೊಬ್ಬಳು ಹೀಗೆ ಇಂಟರ್ನೆಟ್ ನಲ್ಲಿ ಪರಿಚಯ ಆಗಿದ್ಲು ನಂಗೆ .ಮಾಯಾ ಅನ್ನೋ ಹೆಸರಲ್ಲಿ ಅವಳು ಚಾಟ್ ಮಾಡ್ತಾ ಇದ್ಲು .ಅವಳ ನಿಜ ಹೆಸರೂ ಅದೇ ಅಂತ ಹೇಳಿದ್ಲು. ಆದ್ರೆ ಸುಮಾರು ಒಂದು ವರ್ಷದ ನಂತರ 'ಸಂದೀಪ್ ಸಾರಿ ಕಣೋ ನನ್ನ ಹೆಸರು ಮಾಯಾ ಅಲ್ಲ ರಶ್ಮಿ ’ಅಂದ್ಲು!!!!
ಸಕ್ಕತ್ ಬೇಜಾರಾಗಿತ್ತು ಆ ದಿನ :(
ಎಷ್ಟು ಕಷ್ಟ ಅಲ್ವ ಒಂದು identity ನ ಭಿನ್ನವಾಗಿ ನೋಡೋದಕ್ಕೆ??
ಒಂದು ಹೆಸರು,ವ್ಯಕ್ತಿ ಯ ಬಗ್ಗೆ ಏನೇನೋ ಕಲ್ಪನೆ ಇರುತ್ತೆ .ಅದನ್ನು ಸಡನ್ ಆಗಿ ಬದಲಾಯಿಸೋದು ತುಂಬಾ ಕಷ್ಟ . ಹೇಳೊದೇನೋ ಹೇಳಿ ಬಿಡ್ತಾರೆ ಹೆಸರಲ್ಲೇನಿದೆ ಮಣ್ಣಾಂಗಟ್ಟಿ ಅಂತ -ಆದ್ರೆ ಅದೇ ವ್ಯಕ್ತಿಯ ಹೆಸರು ಬಿಡಿ, initial ತಪ್ಪಾಗಿ ಹೇಳಿದ್ರೂ ದುರುಗುಟ್ಟಿ ನೋಡ್ತಾರೆ.

VVS Laxman ನ ಬದಲು PVS Laxman ಅಂತೇನಾದ್ರೂ ಅಪ್ಪಿ ತಪ್ಪಿ ಕರೆದ್ರೋ ನಿಮ್ಮ ತಿಥಿ ಗ್ಯಾರಂಟಿ!

ನನ್ನ ಬ್ಲಾಗ್ ಗೆ ಪ್ರತಿಕ್ರಿಯಿಸುತ್ತ ಒಬ್ಬರು "ಸಂದೀಪ್ ನಾಯಕ್ರೇ ಚೆನ್ನಾಗಿ ಬರೆದಿದ್ದೀರ " ಅಂದಿದ್ರು .ಇರ್ಲಿ ಪರ್ವಾಗಿಲ್ಲ ತಪ್ಪಿ ಬರೆದಿದ್ದಾರೆ ಅಂತ ನಂಗೇ ನಾನೇ ಸಮಾಧಾನ ಮಾಡ್ಕೊಂಡ್ರೂ ಮನಸ್ಸು ಒಪ್ಪಲಿಲ್ಲ -ಹೇಳಿಯೇ ಬಿಟ್ಟೆ ’ ಮ್ಯಾಡಂ ನನ್ನ ಸರ್ ನೇಮ್ ಕಾಮತ್ ನಾಯಕ್ ಅಲ್ಲ ’ ಅಂತ! ಸರ್ ನೇಮ್ ತಪ್ಪಾಗಿ ಹೇಳೋದು ಬಿಡಿ Kamath ನ Kamat ಅಂತ ಬರೆದ್ರೂ ಮೈ ಎಲ್ಲಾ ಉರಿಯುತ್ತೆ ನಂಗೆ! ’ಅದು ಹೋಟೇಲ್ ಕಾಮತ್ ಕಣ್ರಿ ನಮ್ಮದು ಬೇರೆ ಅಂತೀನಿ’ !

ಇಷ್ಟೆಲ್ಲ ಯಾಕೆ ಬರೆದೆ ಅಂದ್ರೆ ಈಗಿಗ ಬ್ಲಾಗಿಗರೂ ಅನಾಮಿಕರಾಗತೊಡಗಿದ್ದಾರೆ! .ಕೆಲವು ಬ್ಲಾಗಿಗರು ’ಅನಾಮಿಕ’ರಾಗೇ ಇರಲು ಬಯಸ್ತಾರಂತೆ! ನಾವು ’ಇದು ಯಾರಿರಬಹುದು ,ಹುಡುಗ ನಾ ಹುಡುಗಿ ನಾ ’ ಅಂತೆಲ್ಲ ತಲೆ ಕೆಡಿಸ್ಕೊಂಡ್ರೇನೆ ಅವರಿಗೆ ಸಮಾಧಾನವೇನೋ . ಅಥವಾ ಇದೂ ಒಂದು ಮಾರ್ಕೆಟಿಂಗ್ strategy ನಾ??

ಎಷ್ಟು ದಿನ ಅಂತ ಅನಾಮಿಕರಾಗಿ ಇರಲು ಸಾಧ್ಯ ಅಲ್ವೇನ್ರಿ?ದಿನದಿಂದ ದಿನಕ್ಕೆ ಬ್ಲಾಗ್ ವಿಸಿಟಿಗರ ಸಂಖ್ಯೆ ಜಾಸ್ತಿ ಆದ್ರೆ , ಪಕ್ಕದಲ್ಲೇ ಯಾರಾದ್ರೂ ಅವರ ಬಗ್ಗೆ ’ಎಷ್ಟು ಚೆನ್ನಾಗಿ ಬರೀತಾನ್ರಿ/ಳ್ರಿ ಇವನು/ಳು ಅಂತ ಹೇಳ್ತಾ ಇದ್ರೆ ’ಅದು ನಾನೇ ಕಣ್ರೋ ! ’ ಅಂತ ಹೇಳಲಾರದ ಪರಿಸ್ಥಿತಿ!

ಉಫ್ ನಂಗಂತೂ ಸಾಧ್ಯಾನೇ ಇಲ್ಲ !

’ಹಾಯ್ ಬೆಂಗಳೂರಿನಲ್ಲಿ ’ ಜೋಗಿ ’ಜಾನಕಿ ಅಂಕಣ ಬರೀತಾ ಅನಾಮಿಕರಾಗಿದ್ದ ಕಾಲದಲ್ಲಿ ,ಆರ್ಕುಟ್ ನಲ್ಲಿ ಹೀಗೆ ಒಂದು ಚರ್ಚೆ ಪ್ರಾರಂಭ ಆಗಿತ್ತು ’ಜಾನಕಿ ಯಾರು ?’ ಅಂತ .ನಾನೂ ತುಂಬಾ ಇಷ್ಟ ಪಟ್ಟು ಓದ್ತಾ ಇದ್ದೆ ’ಜಾನಕಿ ’ ಕಾಲಂ ನ. ಜಾನಕಿ ಅಂತ ಹೆಸರು ಇಟ್ಟಿದ್ರಿಂದ ಇದನ್ನು ಬರೆಯೋರು ಯಾರೋ ಹೆಂಗಸು ಅನ್ನೋ strong feeling ನಂದಾಗಿತ್ತು. ಬೇರೆಯವ್ರು ತಮ್ಮ ತಮ್ಮ ಅಭಿಪ್ರಾಯ ಹೇಳಿದ್ರು ಅಲ್ಲಿ.

ಅವರಲ್ಲಿ ಯಾರೋ ಒಬ್ರು ಜಾನಕಿ ಬೇರೆ ಯಾರೂ ಅಲ್ಲ ಅದು ’ಜೋಗಿ’ ! ಅವರ ನಿಜ ಹೆಸರು ಗಿರೀಶ್ ರಾವ್ ಅಂತ ಬೇರೆ ಹೇಳಿದ್ರು.
ದುರದೃಷ್ಟ ಅಂದ್ರೆ ನಂಗೆ ಆಗ ಜೋಗಿ ಯಾರು ಅಂತಾನೇ ಗೊತ್ತಿರ್ಲಿಲ್ಲ .ಹಾಗಾಗಿ ನಂಗೆ ಆ ಉತ್ತರ ಸಮಂಜಸ ಅನ್ನಿಸಿರ್ಲಿಲ್ಲ.

ನಂದೆಲ್ಲಿಡ್ಲಿ ಅನ್ನೋ ಹಾಗೆ ನಾನು, ’ ಜಾನಕಿ ಅನ್ನೋರು ಬಹುಷ ವೈದೇಹಿ ಇರಬಹುದೇನೋ ಅವರ ನಿಜ ಹೆಸರು ಜಾನಕಿ ಅಂತೆ ’ ಅಂದಿದ್ದೆ .ನನ್ನದು ಅಧಿಕ ಪ್ರಸಂಗವಾಗಿತ್ತು ಯಾಕಂದ್ರೆ ನಂಗೆ ಜೋಗಿ ಯಾರು ಅಂತಾನೇ ಗೊತ್ತಿರ್ಲಿಲ್ಲ ,ಅದೂ ಅಲ್ಲದೆ ವೈದೇಹಿ ಯವರ ಬಗ್ಗೇನೂ ಜಾಸ್ತಿ ಗೊತ್ತಿರ್ಲಿಲ್ಲ :(

ಇದಾದ ನಂತರ ಜೋಗಿಯವರು ’ಜೋಗಿ ಕಥೆಗಳು’ ಪ್ರಕಟಿಸಿದ ನಂತರ ’ಜಾನಕಿ’ ಯಾರು ಅನ್ನೋದು ಜಗಜ್ಜಾಹೀರಾಯ್ತು.

ನನ್ನ ಹಾಗೆಯೇ ಜಾನಕಿಯ ಬಗ್ಗೆ ಬೇರೆಯವರ ಕಲ್ಪನೆಗಳೂ ಛಿದ್ರವಾದವಾ?????? ಯಾರಿಗೆ ಗೊತ್ತು!

ಇದೇ ರೀತಿ ಈ ಹೊಸ ’ಅನಾಮಿಕ ’ ಬ್ಲಾಗಿಗರಿಗೆ ಒಂದು ದಿನ lime light ಗೆ ಬರುವ ಆಸೆ ಆದ್ರೆ ನಮ್ಮಂಥವರ ಗತಿ ಏನು? ನಮ್ಮ ಕಲ್ಪನೆಗಳ ರೆಕ್ಕೆ ಪುಕ್ಕ ಎಲ್ಲ ಮುರಿಯುವಾಗ ನೋವಾಗಲ್ವ?
ಯಂಡಮೂರಿಯವರ’ ಬೆಳದಿಂಗಳ ಬಾಲೆ’ ಕೊನೆಯವರೆಗೆ ನಮಗೆ ಕಾಣೋದೆ ಇಲ್ಲ ! ಹಾಗಾಗಿಯೇ ನಂಗೆ ಅದು ಬಹಳ ಇಷ್ಟ ಆಯ್ತು !
ಅದು ಬಿಟ್ಟು ಕೊನೆಗೆ ’ಛೆ ನಾನಂದು ಕೊಂಡ ಬೆಳದಿಂಗಳ ಬಾಲೆ ಇವಳಲ್ಲ ’-ಅನ್ನೋ conclusion ಗೆ ಬರೋದು ಎಂಥ ಯಾತನೆ ಅಲ್ವ?
ಅದೂ ಅಲ್ಲದೇ ಅನಾಮಿಕರು ಅನಾಮಿಕರಾಗೇ ಉಳಿಯೋದು ಸಾಧ್ಯ ನಾ??
ಹ್ಯಾರಿ ಪೋಟರ್ ಲೇಖಕಿ ಹೆಂಗಸು ಅಂತ ಗೊತ್ತಾಗಬಾರದು ಅಂತ ಪಾಪ ಪ್ರಕಾಶಕರು ಅವಳ ಹೆಸರನ್ನು ಶಾರ್ಟ್ ಫಾರ್ಮ್ ನಲ್ಲಿ ಬರೀತಾ ಇದ್ರಂತೆ . ಎಂಥ ಸಂಕಟ ಅಲ್ವ ಅವಳಿಗೆ?


ಮೇರಿ ಭೀಗಿ ಭೀಗಿ ಸಿ ಪಲ್ಕೋಂ ಪೇ ರೆಹ್ ಗಯೆ,
ಜೈಸೆ ಮೆರೆ ಸಪನೆ ಭಿಕರ್ ಕೇ ......................
ಜಲೆ ಮನ್ ತೇರಾ ಭಿ ಕಿಸಿಕೆ ಮಿಲನ್ ಪರ್ ,
ಅನಾಮಿಕಾ ತು ಭಿ ತರಸೇ .................................!!!