Thursday, December 8, 2011

ಮೂಢನಂಬಿಕೆ

ಟಿ.ವಿ ಕಾರ್ಯಕ್ರಮ................

ಬನ್ನಿ ವೀಕ್ಷಕರೆ ಈಗ ನಾವು ಮೂಢನಂಬಿಕೆಯ ಬಗ್ಗೆ ಚರ್ಚೆ ನಡೆಸೋಣ. ಯಾಕೆ ಜನ ಇನ್ನೂ ಈ ಮೂಢನಂಬಿಕೆಯನ್ನು ಮುಂದುವರೆಸುತ್ತಿದ್ದಾರೆ ಅನ್ನೋ ಚರ್ಚೆ ನಡೆಸೋಣ.

....................ಚರ್ಚೆ........ಚರ್ಚೆ............ಚರ್ಚೆ....................

ವೀಕ್ಷಕರೆ ಒಂದು ಚಿಕ್ಕ ಬ್ರೇಕ್ ನ ನಂತರ ಚರ್ಚೆ ಮುಂದುವರೆಸೋಣ.............................

....ಜಾಹೀರಾತು.....

ಸಮಸ್ಯೆಯಿಂದ ಬಳಲುತ್ತೀದ್ದೀರಾ ಕೊಳ್ಳಿರಿ ಅದೃಷ್ಟದ ಹರಳುಗಳು. ನಿಮ್ಮ ಯಾವುದೇ ಸಮಸ್ಯೆಗೆ ಇಲ್ಲಿದೆ ಪರಿಹಾರ. ಅದೃಷ್ಟದ ಹರಳುಗಳು.

ವೀಕ್ಷಕರೇ ಬ್ರೇಕ್ ನ ನಂತರ ಮತ್ತೆ ಸ್ವಾಗತ............................................


....................ಚರ್ಚೆ........ಚರ್ಚೆ............ಚರ್ಚೆ....................


ವೀಕ್ಷಕರೆ ಒಂದು ಚಿಕ್ಕ ಬ್ರೇಕ್ ನ ನಂತರ ಚರ್ಚೆ ಮುಂದುವರೆಸೋಣ.............................


....ಜಾಹೀರಾತು.....


ಸ್ತ್ರೀ ಪ್ರೇಮ, ಪುರುಷ ಪ್ರೇಮ ವಶೀಕರಣ. ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನಮ್ಮಲ್ಲಿದೆ ಪರಿಹಾರ. ಒಮ್ಮೆ ಭೇಟಿ ಕೊಡಿ.


ವೀಕ್ಷಕರೇ ಬ್ರೇಕ್ ನ ನಂತರ ಮತ್ತೆ ಸ್ವಾಗತ............................................

....................ಚರ್ಚೆ........ಚರ್ಚೆ............ಚರ್ಚೆ....................

ವೀಕ್ಷಕರೆ ಒಂದು ಚಿಕ್ಕ ಬ್ರೇಕ್ ನ ನಂತರ ಚರ್ಚೆ ಮುಂದುವರೆಸೋಣ.............................


....ಜಾಹೀರಾತು.....

ಇಲ್ಲಿದೆ ಒಂದು ವಿಚಿತ್ರ ಬಾವಿ. ಆ ಬಾವಿಯ ನೀರಿನಲ್ಲಿ ಸ್ನಾನ ಮಾಡಿದರೆ ಚರ್ಮ ರೋಗಗಳು ವಾಸಿ ಆಗ್ತಾವೆ. ಇಂಥ ವಿಸ್ಮಯ ನಡೆಯೋದಾದರೂ ಎಲ್ಲಿ. ವೀಕ್ಷಿಸಿ 'ರಹಸ್ಯ ಲೋಕದಲ್ಲಿ' ಇಂದು ರಾತ್ರಿ ೧೨.೦೦ ಘಂಟೆಗೆ.

ವೀಕ್ಷಕರೇ ಬ್ರೇಕ್ ನ ನಂತರ ಮತ್ತೆ ಸ್ವಾಗತ...........................................

....................ಚರ್ಚೆ........ಚರ್ಚೆ............ಚರ್ಚೆ....................


....................ಚರ್ಚೆ........ಚರ್ಚೆ............ಚರ್ಚೆ....................

ಚರ್ಚೆಯಲ್ಲಿ ಭಾಗವಹಿಸಿದ ತಮಗಲ್ಲರಿಗೂ ಧನ್ಯವಾದಗಳು.

ನೋಡಿದ್ರಲ್ಲ ವೀಕ್ಷಕರೇ 21 ನೇ ಶತಮಾನದಲ್ಲೂ ಎಂತೆಂಥ ಮೂಢನಂಬಿಕೆಗಳು ಉಳಿದುಕೊಂಡಿವೆ ಅಂತ! ಇಂಥ ಮೂಢನಂಬಿಕೆಗಳನ್ನು ಒದ್ದು ಓಡಿಸುವ ಕೆಲಸ 'ನಿಮ್ಮಿಂದ' ಆಗಬೇಕಾಗಿದೆ. ಮತ್ತೆ ನಾಳೆ ಬೆಳಿಗ್ಗೆ ಭೇಟಿ ಆಗೋಣ ಬೆಳಿಗ್ಗೆ ೭ ಘಂಟೆಗೆ 'ಬೃಹತ್ ಗ್ಯಾಲಕ್ಸಿ' ಕಾರ್ಯಕ್ರಮದಲ್ಲಿ.

ನಮಸ್ಕಾರ!

Tuesday, November 22, 2011

ನುಂಗಲಾಗುವ ಟ್ಯಾಬ್ಲೆಟ್ !!!

ಶ್ರೀನಿಧಿಯವರು 'ನುಂಗಲಾರದ ಟ್ಯಾಬ್ಲೆಟ್ ತಿನ್ನಲಾಗದ ಬಿಸ್ಕತ್ತು ..' ಅಂತ ಪುಸ್ತಕ ಬರೆದಿದ್ದಾರೆ.

ಆದರೆ ಗೂಗಲ್ translation ಕೃಪೆಯಿಂದಾಗಿ 'ನುಂಗಬಹುದಾದ ಟ್ಯಾಬ್ಲೆಟ್ ಗಳು' ಬಂದಿವೆ!ಅಂದ ಹಾಗೆ ಗೂಗಲ್ ನ ಕನ್ನಡ-ಇಂಗ್ಲಿಷ್, ಇಂಗ್ಲಿಷ್-ಕನ್ನಡ ಅನುವಾದ ನೋಡಿಲ್ಲವಾದರೆ ಒಂದು ಕೈ ನೋಡಿ ಬಿಡಿ.
http://translate.google.co.in/

ಅನುವಾದ ಅಷ್ಟೊಂದು ಸಮರ್ಪಕವಾಗಿಲ್ಲದಿದ್ದರೂ ಗೂಗಲ್ ನ ಈ ಪ್ರಯತ್ನ ಅಭಿನಂದನಾರ್ಹ.

ನಾವು ಕೂಡಾ ಅನುವಾದವನ್ನು ಉತ್ತಮಪಡಿಸಲು ಸಹಕರಿಸಬಹುದು.

Thursday, October 20, 2011

ಹಳೆಗನ್ನಡ, ಹೊಸಗನ್ನಡ, ಸುಲಭ ಕನ್ನಡ, ಕಷ್ಟ ಕನ್ನಡ!

ತುಂಬಾ ತಿಳಿದಿರುವವರು, ತುಂಬಾ ಓದಿರೋರು, ಪಂಡಿತರು, ಭಾಷಾ ತಜ್ಞರು ಸೇರಿ ಒಂದು ಒಳ್ಳೆಯ ನಿರ್ಧಾರಕ್ಕೆ ಬಂದಿದ್ದಾರಂತೆ! ಅದೇನೆಂದರೆ ಕನ್ನಡ ಭಾಷೆಯ ಅಕ್ಷರಗಳನ್ನು ಸರಳೀಕರಣಗೊಳ್ಳಿಸೊದು. ಕನ್ನಡಕ್ಕೆ 'ಹೆಚ್ಚಾದ' ಅಕ್ಷರಗಳನ್ನು ಎತ್ತಿ ಕಸದ ಬುಟ್ಟಿಗೆ ಬಿಸಾಕಿ, ಕಷ್ಟದ ಅಕ್ಷರಗಳನ್ನು, ಒತ್ತಕ್ಷರಗಳನ್ನು ಎರಡೂ ಬದಿಯಿಂದ ಬಡಿದು ಸರಳಗೊಳಿಸೋದು ಅವರ ಉದ್ದೇಶ. ಅವರ ಪ್ರಯತ್ನ ಸಫಲವಾಗಲಿ ಅನ್ನೊದು ಹಾರೈಕೆ.

ಹಾಗೆಯೆ ಇನ್ನೂ ಕೆಲವು ವಿಷಯಗಳನ್ನು ಸರಳೀಕರಣಗೊಳಿಸಿದರೆ ಶ್ರೀ ಸಾಮಾನ್ಯರಿಗೆ ತುಂಬಾ ಉಪಕಾರವಾಗುತ್ತಿತ್ತು.

ಈ ಐಟಿ,ಬಿಟಿಯಿಂದಾಗಿ ಪಾಪ ಕೆಲಸಕ್ಕೆ ಹೋಗೋ ಹೆಣ್ಣು ಮಕ್ಕಳಿಗೆ ಅಡುಗೆ ಮಾಡೋದೇ ಒಂದು ದೊಡ್ಡ ತಲೆ ನೋವಾಗಿಬಿಟ್ಟಿದೆ. ಆದ್ದರಿಂದ ಸ್ವಲ್ಪ ಬಲ್ಲ ಹೆಂಗಸರೆಲ್ಲಾ ಸೇರಿ ಅಡುಗೆಯ ಕೆಲಸವನ್ನು ಸರಳೀಕರಣಗೊಳಿಸಿದ್ದಲ್ಲಿ ತುಂಬಾ ಸಹಾಯವಾಗುತ್ತಿತ್ತು!

ಈ ಚಿಕನ್ ಬಿರಿಯಾನಿ ಮಾಡೋದು ಹೇಗೆ ಅಂತ ಏನಾದರು ಹುಡುಕಿದ್ರೆ ಮಾರುದ್ದ ಪಟ್ಟಿ ಸಿಗುತ್ತೆ. ಬಲ್ಲವರೆಲ್ಲಾ ಸೇರಿ ಈ ಚಿಕನ್ ಬಿರಿಯಾನಿಯನ್ನು ಸರಳೀಕರಣಗೊಳಿಸಿದ್ರೆ ಚೆನ್ನಾಗಿರ್ತಿತ್ತು. ಬರೀ ಅನ್ನಕ್ಕೆ ಒಂದೆರಡು ಚಿಕನ್ ಪೀಸ್ ಒಗೆದು ಒಂದಿಷ್ಟು ಖಾರದ ಪುಡಿ ಎರಚಿದರೆ ಚಿಕನ್ ಬಿರಿಯಾನಿ ಸಿದ್ಧ ಆಗೋ ಥರ ಯಾರಾದ್ರೂ ಮಾರ್ಪಾಡು ಮಾಡಿದ್ರೆ ತುಂಬಾ ಖುಷಿ ಆಗ್ತಿತ್ತು. ನಿಂದೊಳ್ಳೆ ಕಥೆ ಆಯ್ತು ಮಾರಾಯ ನಿನಗೆ ಬೇಕಿದ್ರೆ ಹಾಗೇ ಮಾಡಿ ತಿನ್ನು ಅಂತ ಬಯ್ಯಬೇಡಿ. ಎಲ್ಲದಕ್ಕೂ ನೀತಿ, ನಿಯಮಗಳಿರುತ್ತವೆ. ಹಾಗಾಗಿ ಆ ನೀತಿ ನಿಯಮಗಳನ್ನು ಸರಳಗೊಳಿಸಿದ್ರೇನೇ ಚೆನ್ನ!

ಎರಡನೆಯದಾಗಿ ಈ ಪರೀಕ್ಷಾ ವಿಧಾನ ಸರಳೀಕರಣ ಆಗ್ಬೇಕು. ಈ ಸಂಧಿ, ಸಮಾಸ, ಛಂದಸ್ಸು, ಎಲ್ಲವನ್ನೂ ಎತ್ತಿ ಒಗೆದು ಒಂದೇ ಒಂದು ಪ್ರಶ್ನೆ ಇರಬೇಕು ಪರೀಕ್ಷೆಗೆ.

ಅದೇನೆಂದರೆ " ನಿಮಗೆನು ಗೊತ್ತು ಬರೀರಪ್ಪ ... " ಮಾರ್ಕ್ಸ್ :೧೦೦

ಕನ್ನಡ ಸರಳೀಕರಣಗೊಂಡ ಮೇಲೆ ಇನ್ನು ನಾಲ್ಕು ಕನ್ನಡಗಳಿರುತ್ತವೆ!

ಹಳೆಗನ್ನಡ, ಹೊಸಗನ್ನಡ, ಸುಲಭ ಕನ್ನಡ ಮತ್ತು ಕಷ್ಟ ಕನ್ನಡ! (ಮಂಗಳೂರು ಕನ್ನಡ ಸಿನೆಮಾದಲ್ಲಿ ಮಾತ್ರ! ಬೆಂಗಳೂರು ಕನ್ನಡ ಬೆಂಗಳೂರಲ್ಲಿ ಮಾತ್ರ!)

ಇನು ಕನದ ಸರಲಿಕರನಗೊಲಿಸಿದರೆ ನನಗೆ ಲೆಕನ ಬರೆಯುದು ಇನು ಸುಲಬ. ನಿಮಗೆ ಒದುದು ಕಶತ ಆದರೆ ಮತರ ನನಗೆ ಬಯಬೆದಿ!!!

Saturday, October 1, 2011

ಕನ್ನಡಪ್ರಭವನ್ನು ತಲೆನೋವಿಲ್ಲದೆ ಓದುವುದು ಹೇಗೆ?

ಕನ್ನಡವಪ್ರಭವನ್ನು ತಲೆ ನೋವಿಲ್ಲದೆ ಓದುವುದು ಹೇಗೆ ಅಂತ ಶೀರ್ಷಿಕೆ ನೋಡಿ ಕನ್ನಡಪ್ರಭವನ್ನು ಓದಿದರೆ ತಲೆನೋವು ಬರುತ್ತೋ ಅನ್ನೋ ಸಂಶಯ ಬಂದಿದ್ದಲ್ಲಿ ದಯವಿಟ್ಟು ಕ್ಷಮಿಸಿ!

ನಾನು ಹೇಳಿರುವುದು ಕನ್ನಡಪ್ರಭ ಆನ್ ಲೈನ್ ಆವೃತ್ತಿಯ ಬಗ್ಗೆ. ಕನ್ನಡಪ್ರಭದ ಆನ್ ಲೈನ್ ಆವೃತ್ತಿ ಓದಬೇಕಾದರೆ ನೀವು ರಿಜಿಸ್ಟರ್ ಆಗೋದು,ಲಾಗಿನ್ ಆಗೋದು ಇಂಥ ರಗಳೆಗಳಿರುತ್ತವೆ. ಅದಕ್ಕೆ ಚಿಕ್ಕ ಉಪಾಯ ಇದೆ!

ಮೊದಲು ನೀವು ಈ ವೆಬ್ ವಿಳಾಸ ನೆನಪಿಟ್ಟುಕೊಳ್ಳಬೇಕು :

http://www.kannadaprabha.com/pdf/

ಈಗ ನಿಮಗೆ ಯಾವ ದಿನದ ಪೇಪರ್ ಬೇಕು ? ಮತ್ತೆ ಯಾವ ಪುಟ ಬೇಕು ಅಂತ ಡಿಸೈಡ್ ಮಾಡಿದರೆ ಸಾಕು.

ಉದಾ: 22/07/2010 ಪುಟ 6

http://www.kannadaprabha.com/pdf/2272010/6.pdf ಇಲ್ಲಿ 2272010 ಗಮನಿಸಿ! ತಿಂಗಳು 07 ಅನ್ನು ಬರೀ 7 ಅಂತ ಹಾಕಬೇಕು.

ನಾಳೆಯ ದಿನಾಂಕವನ್ನು ಇವತ್ತೇ ಹಾಕಿ ನೋಡಬೇಡಿ. ಕನ್ನಡಪ್ರಭದವರು ಜ್ಯೋತಿಷಿಗಳಲ್ಲ!!!

Sunday, August 28, 2011

ವಿಚಿತ್ರ!


ವಿಚಿತ್ರ!

ಶಾಲೆಯ ಆವರಣದ 100 ಮೀಟರ್ ಆಸುಪಾಸಿನಲ್ಲಿ ತಂಬಾಕು ಮಾರಾಟ ನಿಶೇಧಿಸಲಾಗಿದೆ. ತಪ್ಪಿದಲ್ಲಿ ಅದು ಶಿಕ್ಷಾರ್ಹ ಅಪರಾಧ!

ಆದರೆ ತಂಬಾಕು ಮಾರುವ ಅಂಗಡಿಯ ಸಮೀಪ ಶಾಲೆಯನ್ನು ಕಟ್ಟಬಹುದು!

Sunday, July 17, 2011

ನಂಗಿಷ್ಟ ಆಗಿದ್ದು..

ಇದನ್ನು ಕೇಳಿದ ಮೇಲೆ share ಮಾಡದೇ ಇರಲು ಮನಸಾಗಲಿಲ್ಲ!ಮತ್ತೆ ಇದೂ !ನಿಮ್ಮಿಂದ ಇನ್ನೂ ಇಂತಹ ಸುಂದರ ಹಾಡುಗಳು ಬರಲಿ ಅಶ್ವಿನಿ.


ಥ್ಯಾಂಕ್ಸ್ !

Friday, May 20, 2011

ಸಂದೀಪ್ Weds ದಿವ್ಯಾ !


ದಿನ ಉರುಳಿ ಯುಗವಾಗಿ
ಮನವೆರಡು ಒಂದಾಗಿ
ಪಿಸುಮಾತು ನುಡಿಯಾಗಿ
ಕನಸೊಂದು ನನಸಾಗಿದೆ..

ಚೈತ್ರವು ಚಿಗುರಾಗಿದೆ
ಮಾಮರವು ಕೊನರಿದೆ
ಭೂಮಿ ಕಾದು ನಿಂತಿದೆ
ಆಗಸದ ಮಿಲನಕೆ...

ಕಡಲು ಭೋರ್ಗರೆಯುತಿದೆ
ತೀರದ ಸೆಳೆತವಿದೆ
ನದಿಯು ಓಡೋಡಿ ಸಾಗುತಿದೆ
ಭಾವ ಜೀವ ತಳೆಯಲು - ಕಡಲ ತೀರದಲಿ!!!

---------------------------------------------------

ಸ್ನೇಹಿತರೆ,

ಹೊಸ ಬದುಕಿನ ಹೊಸ ಆರಂಭಕೆ
ಮುನ್ನುಡಿ ಬರೆಯುತಿಹೆವು,
ಅಲ್ಲೊಂದು ಖುಷಿಯಿದೆ, ವಚನವಿದೆ
ಸಡಗರವಿದೆ, ಸಂತಸವಿದೆ, ಊಟವಿದೆ :)

ಸತಿ ಪತಿಗಳಾಗುತಿಹೆವು,
ಜೂನ್ ೫, ೨೦೧೧ - ಆದಿತ್ಯವಾರದಂದು
೧೨.೨೮ರ ಅಭಿಜಿನ್ ಲಗ್ನದ ಸುಮುಹೂರ್ತದಲ್ಲಿ
ಉಡುಪಿಯ ಶಾರದಾ ಕಲ್ಯಾಣ ಮಂಟಪದಲ್ಲಿ

ನೀವು ಬರಬೇಕು, ನಮ್ಮೊಂದಿಗಿರಬೇಕು, ನಮ್ಮನ್ನು ಹರಸಬೇಕು
ನಮ್ಮ ಆತಿಥ್ಯವನ್ನು ಸ್ವೀಕರಿಸಬೇಕು..

ನಿಮ್ಮ ಆಗಮನದ ನಿರೀಕ್ಷೆಯಲ್ಲಿ...
ಸಂದೀಪ್ ಮತ್ತು ದಿವ್ಯಾ

Thursday, May 5, 2011

ಸೊಳ್ಳೆ...

ನಿಮ್ಮ ಬಳಿ ಒಳ್ಳೆಯ ಕ್ಯಾಮೆರಾ ಇದ್ರೆ ಸೊಳ್ಳೆಯ ಒಂದು ಫೋಟೋ ತೆಗೆದು ನೋಡಿ!

ಎಷ್ಟು ಸುಂದರ ಕಾಣ್ಸತ್ತೆ ಸೊಳ್ಳೆ. ಕಡುಗಪ್ಪು ಬಣ್ಣ. ಸುಂದರ ಕಾಲುಗಳು. ಕೆಂಪನೆ ಡುಮ್ಮ ಹೊಟ್ಟೆ. ಫಳ ಫಳ ಹೊಳೆಯೋ ಮೊನಚಾಗಿರೋ ಎರಡು ಸೂಜಿ.

ನೋಡ್ತಾ ನೋಡ್ತಾ ಪಾಪ ಅನಿಸಿಬಿಡುತ್ತೆ. ಛೇ ಈ ಸೊಳ್ಳೆಯನ್ಯಾಕೆ ನಾವು ಅಷ್ಟು ದ್ವೇಷಿಸ್ತೀವಿ? ಪಾಪ ಅದೂ ತನ್ನ ಹೊಟ್ಟೆಪಾಡಿಗೆ ತಾನೇ ರಕ್ತ ಹೀರೋದು. ಅದು ಅದರ ಹವ್ಯಾಸ ಅಲ್ವಲ್ಲ!ಅಲ್ಲದೆ ಎಲ್ಲಾ ಸೊಳ್ಳೆಗಳೂ ಕೆಟ್ಟವೇನಲ್ಲ. ಕೆಲವು ಪಾಪದ ಸೊಳ್ಳೆಗಳೂ ಇರುತ್ತೆ!

ಹೀಗೆ ಸೊಳ್ಳೆಯ ಮೇಲೂ ನಮಗೆ ಪ್ರೀತಿ ಉಕ್ಕುತ್ತೆ ಒಮ್ಮೊಮ್ಮೆ!

ಆದರೆ ರಾತ್ರಿ ಮಲಗಿದಾಗ ಸೊಳ್ಳೆ ಗುಂಯ್ ಅನ್ನುತ್ತಾ ಕೆನ್ನೆ ಮೇಲೆ ಏನಾದ್ರೂ ಕೂತ್ರೆ ಟಪ್ ಅಂತ ಒಂದು ಶಬ್ದ ಕೇಳುತ್ತೆ!

ಒಂದೇ ಏಟು ಸೊಳ್ಳೆ ಖಲಾಸ್!

ಅಂದ ಹಾಗೆ ಈ ಪಾಕಿಸ್ತಾನ ಒಂದು ಸೊಳ್ಳೆ !

Wednesday, April 20, 2011

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ -ಭಾಗ ೩

’ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರೂಪಾಯಿ’ ಅಂತ ಕೆ.ಎಸ್.ನ ಬರೆದಿದ್ದರು. ಆದರೆ ಬಹಳಷ್ಟು ಜನರಿಗೆ ಹೆಂಡತಿ ಮನೆಯೊಳಗಿದ್ದರಷ್ಟೇ ಕೋಟಿ ರೂಪಾಯಿ. ಹೆಂಡತಿ ತನಗೆ ಸರಿ ಸಮನಾಗಿ, ಕೆಲವೊಮ್ಮೆ ತನಗಿಂತ ಹೆಚ್ಚು ಬುದ್ಧಿವಂತಳಾಗಿರೋದು, ಸಂಪಾದಿಸೋದು ಬಹಳಷ್ಟು ಜನರಿಗೆ ಭಯ ಹುಟ್ಟಿಸೋ ವಿಷಯ! ಖಂಡಿತಾ ಇದು ಮೇಲ್ ಈಗೋ ವಿಷಯ. ಅಂದರೆ ಫೀಮೇಲ್ ಮೇಲ್ ಗಿಂತ ಮೇಲಾಗೋ ಭಯ ಮೇಲ್ ಗೆ ಹುಟ್ಟೋ ವಿಷಯ! ಇಂಥ ಸಮಾಜದಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಹೆಂಡತಿಯನ್ನು ಹುರಿದುಂಬಿಸುವವರು, ಹೆಂಡತಿಯ ಬುದ್ಧಿಮತ್ತೆಯನ್ನು ಮನಸಾರೆ ಹೊಗಳುವವರೂ ಸಿಗುತ್ತಾರೆ. ಮೊನ್ನೆ ಅಮೆರಿಕಾದ ಪ್ರಥಮ ಪ್ರಜೆ ಬರಾಕ್ ಒಬಾಮ ಹೆಂಡತಿ ಮಿಶೆಲ್ ಳನ್ನು ಮನಸಾರೆ ಹೊಗಳಿದ್ದನ್ನೂ ಇಲ್ಲಿ ಸ್ಮರಿಸಬಹುದು. ಆದರೆ ಒಬಾಮ ಹೆಂಡತಿಗೆ ಹೆದರಿಯೇ ಹೊಗಳಿದ್ದು ಅನ್ನೋ ವಾದವನ್ನೂ ಮಾಡುವವರಿದ್ದಾರೆ.

ತನಗಿಂತ ಬುದ್ಧಿವಂತ ಬೇರೊಬ್ಬರು ಇದ್ದಾರೆ ಅನ್ನೋದನ್ನು ಒಪ್ಪಿಕೊಳ್ಳೋದೆ ಮನುಷ್ಯನಿಗೆ ಅತ್ಯಂತ ಕಷ್ಟದ ಕೆಲಸ. ಅದರಲ್ಲೂ ಆ ’ಬೇರೆಯವರು’ ಹೆಂಡತಿ ಆಗಿದ್ದರಂತೂ ಕೇಳೋದೇ ಬೇಡ. ಹೆಂಡತಿ ಅನ್ನೋ ಶಬ್ದ ಕೇಳಿದ ತಕ್ಷಣವೆ ಕೆಲವರಿಗೆ ಹಿನ್ನೆಲೆಯಲ್ಲಿ ’ಕಾರ್ಯೇಶು ದಾಸಿ, ಶಯನೇಶು ರಂಭಾ ’ ಅನ್ನೋದು ರಾಗವಾಗಿ ಕೇಳತೊಡಗುತ್ತದೆ. ಇದರಲ್ಲೂ ಕಾರ್ಯೇಶು ಮೊದಲೋ ಶಯನೇಷು ಮೊದಲೊ ಅನ್ನೋದು ಅವರವರ preference ಮೇಲೆ ಬದಲಾಗುತ್ತಿರುತ್ತದೆ! ಗಂಡ ಬಹುಷಃ ಮನಸಾರೆ ಹೊಗಳೋದು ಹೆಂಡತಿಯ ಅಡುಗೆಯನ್ನು ಮಾತ್ರ.

ಹೆಂಡತಿಯ ಆಯ್ಕೆಯ ವಿಷಯ ಬಂದಾಗಲೂ ಹುಡುಗಿಯ ವಯಸ್ಸು ತನಗಿಂತ ಕಡಿಮೆ ಇರಬೇಕು, ವಿದ್ಯಾರ್ಹತೆ ಕಡಿಮೆ ಇರಬೇಕು, ಎತ್ತರ ಕಡಿಮೆ ಇರಬೇಕು ಅನ್ನೋದು ಅಘೋಶಿತ ನಿಯಮವೇ ಆಗಿ ಬಿಟ್ಟಿದೆ. ಇಷ್ಟೆಲ್ಲಾ ವಿಷಯಗಳು ಕಡಿಮೆ ಇರುವಾಗ ಬುದ್ಧಿವಂತಿಕೆಯೂ ತನಗಿಂತ ಕಮ್ಮಿ ಇದ್ದೇ ಇರುತ್ತೆ ಅನ್ನೋದು ಹುಡುಗನ ಲೆಕ್ಕಾಚಾರ! ಕಾಲ ಬದಲಾದಂತೆ ಎಲ್ಲವೂ ಬದಲಾಗಿದೆ. ಹೆಂಗಸರಂತೂ ಎಲ್ಲಾ ಕ್ಷೇತ್ರದಲ್ಲೂ ಮಿಂಚಿದ್ದಾರೆ. ಇನ್ನು ಏನಿದ್ದರೂ ’ಕಾರ್ಯೇಶು CEO ' ಅನ್ನಬೆಕಷ್ಟೆ!

***********************************************************************************
’ಹೆಂಡತಿಯೊಬ್ಬಳು ಮನೆಯೊಳಗಿದ್ದರೆ -ಭಾಗ ೩ ’ ಅಂತ ಯಾಕೆ ಹೆಸರಿಟ್ಟೆ ಅಂತ ನಿಮಗೆಲ್ಲ ಅನಿಸಿರಬೇಕು. ನಿಜ, ಭಾಗ ಒಂದು ಅಥವಾ ಎರಡು ನಾನು ಬರೆದಿಲ್ಲ !

ನಾನು ಈ ಲೇಖನವನ್ನು ತುಂಬಾ ಹಿಂದೆ ಪತ್ರಿಕೆಯೊಂದಕ್ಕೆ ಬರೆದಿದ್ದೆ. As usual ಅಲ್ಲಿ ಪ್ರಕಟ ಆಗಿರಲಿಲ್ಲ! ಬ್ಲಾಗ್ ಗೆ ಹಾಕೋದಿಕ್ಕೆ ಮರೆತಿದ್ದೆ! ಈಗ ಅನು ಅನ್ನೋರ ಬ್ಲಾಗ್ ಲೇಖನ ನೋಡಿ ನೆನಪಾಯ್ತು. ಅವರು ಸಿಂಹ ಅನ್ನೋರ ಬ್ಲಾಗ್ ನೋಡಿ ಅದಕ್ಕೆ ಉತ್ತರವಾಗಿ ಬರೆದದ್ದಂತೆ!

Saturday, April 16, 2011

ನೀವೇನೇ ಹೇಳಿ......

ಇಂಥದ್ದೊಂದು ಆಟವನ್ನೂ ಬಹುತೇಕ ಜನರು ತಮ್ಮ ಬಾಲ್ಯದಲ್ಲಿ ಆಡಿರ್ತಾರೆ. ನಾವು ಚಿಕ್ಕಂದಿನಲ್ಲಿ ಕಲ್ಲುಗಳನ್ನು ಜೋಡಿಸಿ ಬೆಂಕಿ ಹೊತ್ತಿಸಿ ಅದರ ಮೇಲೊಂದು ತೆಂಗಿನ ಕರಟವನ್ನಿಟ್ಟು ಅದರಲ್ಲಿ ನೀರು ಹಾಕಿ ಚಹಾ,ಕಾಫಿ ಮಾಡೋ ಅಂಥ ಆಟವೊಂದನ್ನು ಆಡ್ತಾ ಇದ್ವಿ. ಎಷ್ಟೋ ಸಲ ಮನೆ ಒಳಗಿಂದ ಚಹಾ ಪುಡಿ,ಹಾಲು,ಸಕ್ಕರೆ ತಂದು ನಿಜಕ್ಕೂ ಚಹಾ ಮಾಡೋದೂ ಇತ್ತು. ಆದರೆ ಅಮ್ಮನ ಕೈಯಲ್ಲಿ ಬಯ್ಯಿಸಿ ಕೊಳ್ಳೋದೂ ಇತ್ತು. ಅದೂ ಸಾಲದೆಂಬಂತೆ ಜೋಪಡಿ ಥರ ಮನೆಯನ್ನು ಕಟ್ಟುವ ಆಟ ಬೇರೆ ಆಡ್ತಾ ಇದ್ವಿ. ಇರೋದಿಕ್ಕೆ ಇಷ್ಟು ಒಳ್ಳೆ ಮನೆ ಇದ್ರೂ ಅದೇನು ಜೋಪಡಿ ಕಟ್ಟೋ ಆಟ ನಿಮ್ಮದು ಅಂತ ಮನೆಯವರು ಬಯ್ಯೋದೂ ಇತ್ತು!

ನಾವು ಈ ರೀತಿ ಜೊಪಡಿ ಕಟ್ಟಿ ಆಟ ಆಡೋ ಸಮಯದಲ್ಲೇ ನಿಜವಾಗಲೂ ಜೋಪಡಿಯಲ್ಲಿ ವಾಸಿಸುತ್ತಿದ್ದ ಮಕ್ಕಳು ನಮ್ಮ ಥರ ಟೆರೇಸ್ ಮನೆಯಲ್ಲಿ ವಾಸ ಮಾಡೋ ಕನಸು ಕಾಣ್ತಾ ಇದ್ರು !

ಬಹುಷಃ ಅದಕ್ಕೇ ಹೇಳಿರ್ಬೇಕು ಕವಿ - " ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ " ಅಂಥ !

ಹಿಂದೆ ಕಿಲೋ ಮೀಟರುಗಟ್ಟಲೆ ನಡೀತಾ ಇದ್ರು ನಮ್ಮ ಅಪ್ಪ,ಅಮ್ಮಂದಿರು. ಆಗ ಅವರಿಗೆ ಖಂಡಿತ ಅನ್ನಿಸ್ತಿತ್ತು ’ ಹಾಳಾದ್ದು ನಾವು ಆರಾಮಾಗಿ ಬೇಕಾದ ಕಡೆ ಹೋಗೋ ಅಂಥ ಗಾಡಿ ಒಂದಿದ್ದರೆ ಎಷ್ಟು ಚೆನ್ನಾಗಿರ್ತಿತ್ತು ’ ಅಂತ. ಆ ದೇವರೇ ತಥಾಸ್ತು ಅಂದ ಹಾಗ ಬಸ್ಸು ರೈಲು ವಿಮಾನಗಳು ಬಂದು ಬಿಟ್ಟವು. ಈಗ ’ನೀವು ಏನೇ ಹೇಳಿ ಈ ಟೆಕ್ನಾಲಜಿ ನಮ್ಮನ್ನು ಹಾಳು ಮಾಡೋದೇ ಆಯ್ತು ಕಣ್ರಿ . ಹಿಂದೇನೆ ಚೆನ್ನಾಗಿತ್ತು. ಕಿಲೋಮೀಟರುಗಟ್ಟಲೆ ನಡೀತಾ ಇದ್ವಿ ಗಟ್ಟಿ ಮುಟ್ಟಾಗಿದ್ವಿ ’ ಅಂತೀವಿ.

ಹಿಂದೆ ಒಂದು ಲೆಟರ್ ಹಾಕಿದ್ರೆ ಅದು ೧೦ ದಿನ ಆದ್ಮೇಲೆ ಬೇಕಾದವರಿಗೆ ತಲುಪಿ ಅವರು ಪೋಸ್ಟ್ ಆಫೀಸಿಗೆ ಹೋಗಿ ಇನ್ ಲ್ಯಾಂಡ್ ಲೆಟರ್ ತಗೊಂಡು ಅದರಲ್ಲಿ ಬರೆದು ಮತ್ತೆ ಪೋಸ್ಟ್ ಮಾಡಿ ನಮಗೆ ತಲುಪೋ ಅಷ್ಟರಲ್ಲಿ ತಿಂಗಳುಗಳೇ ಆಗ್ತಾ ಇತ್ತು. ಆಗಲೂ ನಮಗೆ ಅನ್ನಿಸ್ತಿತ್ತು ’ಹಾಳಾದ್ದು ಈ ಕಾಗದ ಒಂದೇ ದಿನದಲ್ಲಿ ತಲುಪೋ ಥರ ಇದ್ದಿದ್ರೆ ಎಷ್ಟು ಚೆನ್ನಾಗಿರ್ತಿತ್ತು ’ ಅಂತ. ಅದಕ್ಕೂ ಪರಿಹಾರ ಸಿಕ್ಕೇ ಬಿಡ್ತು , ಈ ಕಡೆ ಮೇಯ್ಲ್ ಹಾಕಿದ ತಕ್ಷಣ ಆ ಕಡೆಯಿಂದ ರಿಪ್ಲೈ ಬರೋ ಥರ ಟೆಕ್ನಾಲಜಿನೂ ಬಂತೂ. ಆದ್ರೂ ’ನೀವೇನೇ ಹೇಳಿ ಆ ಲೆಟರ್ ಗೋಸ್ಕರ ಪೋಸ್ಟ್ ಮ್ಯಾನ್ ಗೆ ಕಾಯೋದ್ರಲ್ಲಿ ಇರೋ ಸುಖ ಈ e-mail ಗಳಲ್ಲಿಲ್ಲ ಕಣ್ರಿ ’ ಅಂತೀವಿ ನಾವೆಲ್ಲಾ!

ಹಿಂದೆ ಒಂದು ಟೆಲಿಫೋನ್ ಕಾಲ್ ಮಾಡಬೇಕಾದಲ್ಲಿ ಟ್ರಂಕ್ ಕಾಲ್ ಮಾಡಿ ಗಂಟೆ ಗಟ್ಟಲೆ ಕಾಯ್ತಾ ಇರ್ಬೇಕಾದ್ರೆ ಎಲ್ರಿಗೂ ಖಂಡಿತಾ ಅನ್ನಿಸ್ತಿತ್ತು ’ಛೆ ಒಂದು ಟೆಲಿಫೋನ್ ಕಾಲ್ ಮಾಡೋಕೂ ಇಷ್ಟು ಕಷ್ಟ ನಾ? ನಮಗೆ ಬೇಕಾದ ಹಾಗೆ ಕಾಲ್ ಮಾಡೋಕಾದ್ರೆ ಎಷ್ಟು ಚೆನ್ನಾಗಿರ್ತಿತ್ತು ’ ಅಂತ. ಈಗ ಆ ಟ್ರಂಕ್ ಕಾಲ್ ನೆನೆಸಿನೇ ಖುಷಿ ಪಡ್ತೀವಿ ನಾವು !

ಹಿಂದೆ ರುಬ್ಬೋ ಕಲ್ಲಿನಲ್ಲಿ ರುಬ್ಬಿ ರುಬ್ಬಿ ಸುಸ್ತಾಗಿ ಹೆಂಗಸರೆಲ್ಲಾ ’ ಅಯ್ಯೋ ಚೆನ್ನಾಗಿ ರುಬ್ಬೋಕೆ ಯಾವುದಾದರೂ ಒಂದು ಮೆಶಿನ್ ಇದ್ದಿದ್ರೆ ಎಷ್ಟು ಚೆನ್ನಾಗಿರ್ತಿತ್ತು ’ ಅಂತ ಅಂದುಕೋತಾ ಇದ್ರು. ಆದ್ರೆ ಈಗ ’ನೀವೇನೆ ಹೇಳಿ ಆ ರುಬ್ಬೋ ಕಲ್ಲಿನಲ್ಲಿ ರುಬ್ಬಿ ಮಾಡಿದ ಅಡುಗೆ ರುಚಿ ಈ ಮಿಕ್ಸಿ,ಗ್ರೈಂಡರ್ ನಲ್ಲಿ ಇರಲ್ಲ ಕಣ್ರಿ ’ ಅಂತೀವಿ.

ಈ ಮೊಬೈಲ್ ಫೋನ್,ಈ-ಮೇಲ್,ಟೆಲಿಫೋನ್.ಮಿಕ್ಸಿ,ಟಿ.ವಿ,ರೇಡಿಯೋ,ವಾಶಿಂಗ್ ಮೆಶಿನ್, ಏನೇ ಬರಲಿ ಅದನ್ನು ಬಳಸುತ್ತಲೇ , ಅದಿಲ್ಲದೇ ನಮ್ಮ ಬದುಕೇ ಸಾಗದು ಅನ್ನೋ ಪರಿಸ್ಥಿತಿ ಇದ್ದಾಗಲೆ ನಮ್ಮ ಮನಸ್ಸಲ್ಲಿ ಬರೋದು ’ನೀವೇನೆ ಹೇಳಿ ಹಿಂದೇನೇ ಚೆನ್ನಾಗಿತ್ತು .....’


ನೀವೇನೇ ಹೇಳಿ -

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ............

Monday, April 11, 2011

ಬಸ್ ಡೇ ...

’ ಬಸ್ ಡೇ ’ ಆಚರಿಸುವ ಉತ್ಸಾಹದಲ್ಲಿ ಐಟಿ ಬಿಟಿ ಜನರೆಲ್ಲಾ ಬಸ್ ಏರಿದರು.

ಬಸ್ ತುಂಬಿ ತುಳುಕಿದ್ದರಿಂದ ಬಸ್ ಡ್ರೈವರ್ ಮಹದೇವಪ್ಪ ಪೀಣ್ಯ ಸೆಕಂಡ್ ಸ್ಟೇಜ್ ನಲ್ಲಿ ಬಸ್ ನಿಲ್ಲಿಸಲೇ ಇಲ್ಲ.

ದಿನಾ ಬಸ್ ನಲ್ಲೇ ಹೋಗುತ್ತಿದ್ದ ಕೇಶವ ರಾಯರು ಆ ದಿನ ನೂರು ರೂ ಕೊಟ್ಟು ಆಟೋದಲ್ಲಿ ಹೋಗಬೇಕಾಯಿತು.

Friday, April 1, 2011

ಏರ್ ಟೆಲ್ ಸೂಪರ್ ಸಿಂಗರ್...

ಏರ್ ಟೆಲ್ ಸೂಪರ್ ಸಿಂಗರ್ ಸಂಗೀತ ಕಾರ್ಯಕ್ರಮ ಇನ್ನು ಮುಂದೆ ಐಡಿಯಾ ಸೂಪರ್ ಸಿಂಗರ್ ಅಂತ ಆಗುತ್ತೆ ......


ಮೊಬೈಲ್ ನಂಬರ್ ಪೋರ್ಟೇಬಿಲಿಟಿ ಬಂದಿದೆ Get Idea Sir Ji !!

Sunday, March 13, 2011

ಇಂಗ್ಲೀಷ್ ಮತ್ತು ಮೊಬೈಲ್ ಫೋನ್ !

ಒಂದು ಜಾಹೀರಾತು ಬರುತ್ತೆ. ಅದು ಚಹಾದ ಬಗ್ಗೆ. ತಂದೆ ಮಗನಿಗೆ ಚಹಾ ಕುಡಿಯಬೇಡ ಅನ್ನೋವಾಗ ತಾಯಿ ’ಯಾರು ಹೇಳಿದ್ದು ಚಹಾ ಒಳ್ಳೆಯದಲ್ಲ ಅಂತ ? ’ ಈ ಪ್ರಶ್ನೆಗೆ ತಂದೆ ನನಗೆ ಸರಿಯಾಗಿ ನೆನಪಿಲ್ಲ ಬಹುಶಃ ನನ್ನ ತಾಯಿ ಹೇಳಿರ್ಬೇಕು ಅಂತ ತಾಯಿ ಮೇಲೆ ಗೂಬೆ ಕೂರಿಸ್ತಾನೆ. ಅವನ ತಾಯಿ ಆಗ ’ ನನಗೂ ಸರಿಯಾಗಿ ನೆನಪಿಲ್ಲ ನಿನ್ನ ತಂದೆ ಹೇಳಿರ್ಬೇಕು ’ ಅಂತ ಅವಳ ಗಂಡನ ಮೇಲೆ ಗೂಬೆ ಕೂರಿಸ್ತಾಳೆ. ಕಡೆಗೂ ಚಹಾ ಕೆಟ್ಟದು ಅಂತ ಯಾರು ಹೇಳಿದ್ದು ಗೊತ್ತಾಗೋದೆ ಇಲ್ಲ!

ಈ ಜಾಹೀರಾತಿನ ಪ್ರಸ್ತಾವ ಯಾಕೆ ಬಂತು ಅಂದರೆ ನನಗೂ ಅಂಥದ್ದೇ ಒಂದು ಪ್ರಶ್ನೆ ಮನದಲ್ಲಿ ಮೂಡಿದೆ.

"ಯಾರು ಹೇಳಿದ್ದು ಕನ್ನಡ ನಶಿಸುತ್ತಿದೆ ಅಂತ ? "

ನಿಮ್ಮಲ್ಲಿ ಕೆಲವರು ಥಟ್ ಅಂತ ನನಗೆ ಅವರು ಹೇಳಿದ್ದು ನನ್ಗೆ ಆ ವೆಬ್ ಸೈಟ್ ನಲ್ಲಿ ವಿಷಯ ಸಿಕ್ಕಿತ್ತು , ಅಂತ ಥೇಟ್ ಆ ಜಾಹೀರಾತಿನ ಹಾಗೆಯೇ ಹೇಳಬಹುದು. ಆದ್ರೆ ಅದು ಸರಿನಾ?

ಕನ್ನಡಕ್ಕೆ ಸಾವಿರಾರು ಭಾಷೆಯ ಇತಿಹಾಸ ಇದೆ ಅಂತಾರೆ. ಹಾಗಾದ್ರೆ ಸಾವಿರಾರು ವರ್ಷಗಳಿಂದ ತನ್ನತನವನ್ನು ಉಳಿಸಿಕೊಂಡಿರುವ ಭಾಷೆ ಅದು ಹೇಗೆ ಸಾಯುತ್ತೆ ?

ಇಂಗ್ಲೀಷ್ ಕೊಲೆಗಡುಕ ಭಾಷೆ ಅಂತಾರೆ. ಹಾಗಾದ್ರೆ ಇಂಗ್ಲೀಷ್ ನಮ್ಮ ಕನ್ನಡವನ್ನೂ ಕೊಂದು ಬಿಡುತ್ತಾ? ಲೇಸ್ ಜಾಹೀರಾತಿನಲ್ಲಿ ಕಾರ್ ನಲ್ಲಿ ಹೋಗುತ್ತಿರುವ ಒಬ್ಬಾತ, ಹಳ್ಳಿಯಲ್ಲಿ ಕೂತ ಒಬ್ಬನ ಹತ್ರ ದೊಡ್ಡಬಳ್ಳಾಪುರಕ್ಕೆ ಹೇಗೆ ಹೋಗೋಗುದು ಅಂತ ಕೇಳಿದಾಗ ಹಳ್ಳಿಯವ ಇಂಗ್ಲೀಷ್ ನಲ್ಲೆ ಉತ್ತರಿಸುತ್ತಾನೆ. ಹಾಗೆ ನಿಜಕ್ಕೂ ಆಗುವ ಸಾಧ್ಯತೆಗಳಿದೆಯಾ?

ಪುರೋಹಿತರು ದೇವಸ್ಥಾನದಲ್ಲಿ ಇಂಗ್ಲೀಷ್ನಲ್ಲೇ ಮಂತ್ರ ಹೇಳ್ತಾರಾ ? ದೇವಸ್ಥಾನದ ಮೈಕ್ ನಲ್ಲಿ ಸುಪ್ರಭಾತವೂ ಇಂಗ್ಲೀಷ್ ನಲ್ಲೇ ಬರುತ್ತಾ? ನಮ್ಮ ವಿದ್ಯಾಭೂಷಣರು ಇಂಗ್ಲೀಷ್ ನಲ್ಲೇ 'This era is not for the truth tellers, this is the best time for wicked people ' ಅಂತ ಇಂಗ್ಲೀಷ್ ನಲ್ಲೇ ಭಜನೆ ಹಾಡ್ತಾರಾ?

ನಾನು ಚಿಕ್ಕವನಿದ್ದಾಗ ಎರಡು ದಿನ ಪತ್ರಿಕೆ ಬರುತ್ತಿತ್ತು. ಒಂದು ಮುಂಗಾರು ಇನ್ನೊಂದು ಉದಯವಾಣಿ(ಪ್ರಜಾವಾಣಿ ಮತ್ತಿತರ ಪತ್ರಿಕೆಗಳ ಬಗ್ಗೆ ನನಗೆ ಗೊತ್ತಿರಲಿಲ್ಲ). ಆದ್ರೆ ಇವತ್ತು ಎಷ್ಟು ದಿನ ಪತ್ರಿಕೆಗಳಿವೆ? ಬರೀ ಕನ್ನಡ ಚಿತ್ರರಂಗದ ಬಗ್ಗೆಯೇ ಅರಗಿಣಿ,ಚಿತ್ತಾರ,ರೂಪತಾರ ಹೀಗೆ ಹಲವು ಪತ್ರಿಕೆಗಳಿವೆ. ಸುಧಾ,ತರಂಗ ಹೀಗೆ ವೈವಿಧ್ಯಮಯ ಪತ್ರಿಕೆಗಳಿವೆ. ಈ ಪತ್ರಿಕೆಗಳೆಲ್ಲವೂ ಮಾಯ ಆಗುತ್ತಾ ?

ಆಗ ಇದ್ದಿದ್ದು ಒಂದು ದೂರದರ್ಶನ. ಅದೂ ಭಾನುವಾರ ಸಾಯಂಕಾಲ ನೋಡೋದಕ್ಕೆ ಸಿಕ್ತಾ ಇದ್ದಿದ್ದು ಒಂದೇ ಒಂದು ಕನ್ನಡ ಪಿಕ್ಚರ್ರು! ಈಗ ಕನ್ನಡ ಸಿನಿಮಾಗಳಿಗೆ ಅಂತಾನೇ ಚ್ಯಾನೆಲ್ ಇದೆ. ಉದಯ,ಈ ಟಿವಿ,ಸುವರ್ಣ, ಹೀಗೆ ಹತ್ತು ಹಲವು ಚ್ಯಾನೆಲ್ ಗಳಿವೆ.ಅಗತ್ಯವಿಲ್ಲದಿದ್ದರೂ ಬರೀ ನ್ಯೂಸ್ ಗೆ ಅಂತಲೇ ಐದು ಚ್ಯಾನೆಲ್ ಗಳಿವೆ ಇನ್ನೊಂದು ಬರಲು ಸಿದ್ಧವಾಗಿ ನಿಂತಿದೆ! ಇವೆಲ್ಲವೂ ನಿಂತು ಹೋಗುತ್ತಾ ?

ಕೆಲವು ವರ್ಷದ ಹಿಂದೆ ಇಂಟರ್ನೆಟ್ ನಲ್ಲಿ ಕನ್ನಡವನ್ನು ದುರ್ಬೀನು ಹಿಡಿದು ಹುಡುಕಬೇಕಾಗಿತ್ತು.ಆದರೆ ಈಗ ಕನ್ನಡದಲ್ಲಿ ಸಾವಿರಕ್ಕೂ ಹೆಚ್ಚು ಬರೀ ಬ್ಲಾಗ್ ಗಳಿವೆ. ಅವಧಿ,ಕೆಂಡಸಂಪಿಗೆ,thatskannada.com ನಂಥ ವೆಬ್ ಸೈಟ್ ಗಳಿವೆ. ಬಹುತೇಕ ಎಲ್ಲಾ ಪತ್ರಿಕೆಳೂ ತಮ್ಮ ಸ್ವಂತ ವೆಬ್ ಸೈಟ್ ಹೊಂದಿವೆ.

ಆದರೂ ಯಾಕೆ ನಮಗೆ ಇಂಥಾ ಆತಂಕ? ಇಂಗ್ಲೀಷ್ ನಿಜಕ್ಕೂ ಕನ್ನಡವನ್ನು ಕೊಂದು ಬಿಡುತ್ತಾ ? ಕನ್ನಡದ ಕಥೆ ಹೀಗಾದ್ರೆ ನನ್ನ ಮಾತೃಭಾಷೆಯಾದ ಕೊಂಕಣಿಯ ಗತಿ ಏನು, ನನ್ನ ಊರಿನ ಭಾಷೆಯಾದ ತುಳುವಿನ ಗತಿ ಏನು? ಕನ್ನಡಕ್ಕೆ ಕೊನೆ ಪಕ್ಷ ತನ್ನದೇ ಲಿಪಿ ಇದೆ ,ಪತ್ರಿಕೆಗಳಿವೆ,ಚ್ಯಾನೆಲ್ ಗಳಿವೆ ಆದರೆ ತುಳು ಕೊಂಕಣಿಗಳಿಗೆ ಅವೂ ಇಲ್ಲ! ಹೀಗಾದರೆ ಗತಿ ಏನು ?

ಆದರೆ ಈ ಪ್ರಶ್ನೆ ಅಷ್ಟು ಜಟಿಲ ಅಂತಲೂ ಅನಿಸುವುದಿಲ್ಲ ಕೆಲವೊಮ್ಮೆ.

ನನ್ನ ಪ್ರಕಾರ ಇಂಗ್ಲೀಷ್ ಅಂದರೆ ಮೊಬೈಲ್ ಫೋನ ಇದ್ದ ಹಾಗೆ. ಹಿಂದೆ ಮೊದಲ ಬಾರಿಗೆ ಮೊಬೈಲ್ ಫೋನ್ ಭಾರತಕ್ಕೆ ಬಂದಾಗ ಅದೊಂದು ಲಕ್ಷುರಿ ವಸ್ತು ಆಗಿತ್ತು. ಇನ್ ಕಮಿಂಗ್ ಗೆ ಇಪ್ಪತ್ತು ರೂ ಇದ್ದ ಕಾಲದಲ್ಲೆಲ್ಲಾ ಬರೀ ಶ್ರೀಮಂತರಷ್ಟೇ ಮೊಬೈಲ್ ಕೊಳ್ಳೋಕೆ ಸಾಧ್ಯ ಆಗ್ತಿತ್ತು. ’ಹೇ ಅವನ(ರ?) ಬಳಿ ಮೊಬೈಲ್ ಇದೆ ’ ಅನ್ನೋದು ತುಂಬಾ ಪ್ರತಿಷ್ಟೆಯ ವಿಷಯವಾಗಿತ್ತು.

ಆದರೆ ಈಗ ? ಮೊಬೈಲ್ ಅನ್ನೋದು ಒಂದು ಬೇಸಿಕ್ ನೀಡ್ ಆಗಿದೆ. ಯಾವುದೇ ಕೆಲಸ ಅಥವಾ ವಿಷಯ ಇರಲಿ, ಅದು ನಮಗೆ ಮಾಡಲು ಸಾಧ್ಯವಾಗದ ವಿಷಯ ಆಗಿದ್ದು ಅದನ್ನು ಬೇರೆಯವರು ಮಾಡಿದಾಗ ನಮಗೆ ಅದರ ಬಗೆಗೊಂದು ವಿಚಿತ್ರ ಬೆರಗು ಮೂಡುತ್ತೆ. ಸರ್ಕಸ್ ನಲ್ಲಿ ಒಬ್ಬಾತ ಹತ್ತು ಚೆಂಡನ್ನು ಒಮ್ಮೇಲೆ ಚಿಮ್ಮಿಸಿ ಆಟ ಆಡುವುದನ್ನು ನೋಡಿ ಬೆರಗುಗೊಂಡಂತೆ!

ಹಿಂದೆ ಇಂಗ್ಲೀಷ್ ವಿಷಯದ ಬಗೆಗೂ ಅಂಥದ್ದೇ ಒಂದು ಬೆರಗು ನಮಗಿತ್ತು! ಕನ್ನಡ ಮೀಡಿಯಂ ನಲ್ಲಿ ಕಲಿತ ಡಿಗ್ರಿ ಮುಗಿಸಿದಾತ ಕೂಡ ಇಂಗ್ಲೀಷ್ ಮೀಡಿಯಂನಲ್ಲಿ ಕಲಿತ ಐದನೆ ಕ್ಲಾಸ್ ಹುಡುಗನ ಇಂಗ್ಲೀಷ್ ನೋಡಿ ತನ್ನೊಳಗೇ ಕೀಳರಿಮೆಗೆ ಒಳಗಾಗುತ್ತಿದ್ದ ಕಾಲ ಅದು. ಯಾರಾದರೂ ಠಸ್ ಪುಸ್ ಅಂತ ಇಂಗ್ಲೀಷ್ ಮಾತಾಡ್ತಿದ್ರೆ ಅದನ್ನು ದೊಡ್ಡದೊಂದು ಬೆರಗಿನಿಂದ ನೋಡುತ್ತಿದ್ದ ಕಾಲ ಒಂದಿತ್ತು. ’ಅಳಿಯಂದ್ರು ಎಷ್ಟು ಚೆನ್ನಾಗಿ ಇಂಗ್ಲೀಷ್ ಮಾತಾಡ್ತಾರೆ ಗೊತ್ತಾ ? ’ ಅಂತ ಮಾವ ಹೇಳಿಕೊಂಡು ತಿರುಗಾಡ್ತಾ ಇದ್ದ ಕಾಲ ಅದು.

ಆದರೆ ಈಗ ಇಂಗ್ಲೀಷ್ ಬಗೆಗೆ ಯಾರಿಗೂ ಅಂಥ ಬೆರಗಿಲ್ಲ! ಬಹುತೇಕ ಎಲ್ಲರಿಗೂ ಈಗ ಇಂಗ್ಲೀಷ್ ಬರುತ್ತೆ. ಮಕ್ಕಳೂ ಈಗ ಇಂಗ್ಲೀಷ್ ಕಲಿತಿದ್ದಾರೆ. ಆದರೆ ಅವರಿಗೆ ಬರದೇ ಇರೋದು ಕನ್ನಡ ಮಾತ್ರ. ಈ ಮಕ್ಕಳು ಒಂದು ದಿನ ಕನ್ನಡವನ್ನು ಬೆರಗಿನಿಂದ ನೋಡೋ ಕಾಲ ಬಂದೇ ಬರುತ್ತೆ. ’hey see how fluent his/her Kannada is ' ಅಂತ ಹೇಳೋ ಕಾಲ ಬರುತ್ತೆ. ಆಗ ಎಲ್ಲರೂ ಕನ್ನಡವನ್ನು ಮತ್ತೆ ಪ್ರೀತಿಸಲು ಶುರು ಮಾಡ್ತಾರೆ. ಅಲ್ಲಿಯವರೆಗೆ ಕಾಯಬೇಕಷ್ಟೆ.

ನಿನ್ನದೊಂದು ಹುಚ್ಚು ಕನಸು ಅಂತೀರಾ ? ಇರಲಿ ಬಿಡಿ ಹುಚ್ಚು ಕನಸು ಕಾಣೋದ್ರಲ್ಲೂ ಒಂದು ಖುಷಿ ಇದೆ !

Tuesday, February 22, 2011

ಹೊಚ್ಚ ಹೊಸ ಚ್ಯಾನಲ್ , ಹೊಚ್ಚ ಹೊಸ ಕಾರ್ಯಕ್ರಮ !

ಹೊಚ್ಚ ಹೊಸ ಚ್ಯಾನಲ್ ಒಂದಕ್ಕೆ ಹೊಚ್ಚ ಹೊಸ ಕಾರ್ಯಕ್ರಗಳನ್ನು ಮಾಡಿಕೊಡುವವರು ಬೇಕಾಗಿದ್ದಾರೆ. ಅಂದ ಹಾಗೆ ಬೇಕಾಗಿರೋ ಕಾರ್ಯಕ್ರಮಗಳ ಪಟ್ಟಿ ಈ ರೀತಿ ಇವೆ :

ಸಿಕ್ಸರ್ ,ಬೌಂಡರಿ ಲೈನ್ ಥರದ ಆದರೆ ವಿಭಿನ್ನವಾದ 365 ದಿನವೂ ಇರೋ ಕ್ರೀಡಾ ಕಾರ್ಯಕ್ರಮ .

ಲೇಡಿಸ್ ಕ್ಲಬ್ ಥರದ ಆದರೆ ವಿಭಿನ್ನವಾದ ಗಂಡಸರೇ ಜಾಸ್ತಿ ನೋಡೋ ಹೆಂಗಸರ ಕಾರ್ಯಕ್ರಮ.

ಹೀಗೂ ಉಂಟೆ , ಅಗೋಚರ ಥರದ್ದೇ ಆದರೆ ವಿಭಿನ್ನವಾದ ಯಾವುದಾದರೂ ಹೆದರಿಸೋ,ಬೆದರಿಸೋ ಕಾರ್ಯಕ್ರಮ .

ಕೇಳ್ರಪ್ಪೋ ಕೇಳಿ , ಸಿಂಗ್ರಿ ರೌಂಡ್ಸ್ ಥರದ್ದೇ ಆದರೆ ವಿಭಿನ್ನವಾದ ಮಿಮಿಕ್ರಿ ಕಾರ್ಯಕ್ರಮ.

ಚಕ್ರವ್ಯೂಹ , ಟಾರ್ಗೆಟ್ ಥರದ್ದೆ ಆದರೆ ವಿಭಿನ್ನವಾದ ಟಾಕ್ ಶೋ .

ಯೂ ಟ್ಯೂಬ್ ವಿಡಿಯೋಗಳನ್ನು ಎಗರಿಸಿ ಕನ್ನಡ ಕಮೆಂಟರಿ ಕೊಡೋ ಯೂ ಟ್ಯೂಬ್ ಮಸಾಲಾ ಥರದ ಕಾರ್ಯಕ್ರಮ.

ವಾರಂಟ್ , ಕ್ರೈಂ ಬೀಟ್ ಥರದ ಆದರೆ ವಿಭಿನ್ನವಾದ ಪೋಲೀಸ್ ಸ್ಟೇಶನ್ ಕಾರ್ಯಕ್ರಮ .


ಕ್ರಿಯೇಟಿವ್ ಆಗಿರೋ ಜನರು ಮಾತ್ರ ಅರ್ಜಿ ಸಲ್ಲಿಸಿ.

Sunday, January 23, 2011

ಚಿತ್ರರಂಗ ಮತ್ತು ಥರ್ಮೋಡೈನಾಮಿಕ್ಸ್ ನಿಯಮ !

"Energy can neither be created nor destroyed. It can only be converted from one form to another " - First law of Thermodynamics .

" ಶಕ್ತಿಯನ್ನು ಸೃಷ್ಟಿಸಲೂ ಸಾಧ್ಯವಿಲ್ಲ , ನಾಶಗೊಳಿಸಲೂ ಸಾಧ್ಯವಿಲ್ಲ. ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬದಲಾಯಿಸಬಹುದಷ್ಟೆ " - ಥರ್ಮೋ ಡೈನಾಮಿಕ್ಸ್ ಮೊದಲನೆಯ ನಿಯಮ.


"Cinema can neither be created nor destroyed, It can only be remade from one language to another " - First law of film industry .

"ಸಿನೆಮಾವನ್ನು ನಿರ್ಮಿಸಲೂ ಸಾಧ್ಯವಿಲ್ಲ ನಾಶಗೊಳಿಸಲೂ ಸಾಧ್ಯವಿಲ್ಲ , ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ರಿಮೇಕ್ ಮಾಡಬಹುದಷ್ಟೆ. " - ಚಿತ್ರರಂಗದ ಮೊದಲನೆಯ ನಿಯಮ.

Saturday, January 15, 2011

ಟಿ.ವಿ anchor ಆಗ್ತೀರಾ?

ಒಂದು ಉಚಿತ ಸಲಹೆ ಇದೆ ! ಬೇಕಾದ್ರೆ ಉಪಯೋಗಿಸಿಕೊಳ್ಳಿ ! ನೀನೆ ಯಾಕೆ ಅದನ್ನು ಉಪಯೋಗಿಸಬಾರದು ಅಂತ ಮಾತ್ರ ಕೇಳಬೇಡಿ !

ವಿಷಯ ಏನಂದ್ರೆ ಇತ್ತೀಚೆಗೆ ಕನ್ನಡ ಚ್ಯಾನೆಲ್ ಗಳು ಜಾಸ್ತಿ ಆಗಿವೆ. ಹೀಗಾಗಿ ಜಾಸ್ತಿ ಆಗಿರೋ ಚ್ಯಾನೆಲ್ ಗಳಿಗೆ anchor ಗಳ ಕೊರತೆಯೂ ಜಾಸ್ತಿ ಅಗಿವೆ. ನೀವೂ ಒಂದು ಕೈ ನೋಡ್ತೀರಾದ್ರೆ ನೋಡಿ !

ಬೆಳ್ಳಂಬೆಳಗ್ಗೆ ಬರೋ ಪ್ರೋಗ್ರಾಮ್ ಇದು. ಎಲ್ಲಾ ಚ್ಯಾನಲ್ ಗಳಲ್ಲೂ ಬರುತ್ತೆ . ಅದೇ ರಿ ಫೋನ್ ಮಾಡಿ ಹಾಡು ಕೇಳೋದು.

ನಾನು ನಿಮಗೆ ಬರೀ 4-5 ಟಿಪ್ಸ್ ಹೇಳಿ ಕೊಡ್ತೀನಿ. ಅದರಲ್ಲೇ ಪ್ರೋಗ್ರಾಮ್ ಮುಗಿಸಿ ಮನೆಗೆ ಹೋಗಬಹುದು. ಎಡವಟ್ಟಾದ್ರೆ ನಿಮ್ ಕರ್ಮ! ನನ್ನನ್ನು ಬಯ್ಯ ಬೇಡಿ ಮತ್ತೆ.

ಕೆಳಗೆ ಬರೆದಿರೋ ಥರ ಮಾಡಿ . ಉಳಿದದ್ದು ದೇವರ ಮೇಲೆ ಭಾರ ಹಾಕಿ!

ಮೊದಲ ಕಾಲರ್ :


’ಸರ್ ನಿಮ್ ಹೆಸರು ’ . ( ಸರ್ ಅಥವಾ ಮ್ಯಾಡಮ್ ಅನ್ನೊದನ್ನು ಗೊತ್ತು ಮಾಡೋದು ನಿಮ್ ಕೆಲಸ ನನ್ನದಲ್ಲ!)
ಏನೋ ಒಂದು ಹೆಸರು ಹೇಳ್ತಾರೆ . ಅಪರೂಪಕ್ಕೊಮ್ಮೆ ’ ವಾವ್ ನಿಮ್ ಹೆಸರು ತುಂಬಾ ಚೆನ್ನಾಗಿದೆ ’ ಅನ್ನಬೇಕು. ಎಲ್ಲರಿಗೂ ಹೇಳೋಕೆ ಹೋಗ್ಬೇಡಿ ಮತ್ತೆ!

ಮುಂದಿನ ಪ್ರಶ್ನೆ ’ ಸರ್ ಎಲ್ಲಿಂದ ಕಾಲ್ ಮಾಡ್ತೀರಾ ? ’ ಅನ್ನೋದು . ಕೆಲವು ಅಧಿಕ ಪ್ರಸಂಗಿಗಳು ’ಸರ್ ನಾನು ತಿಮ್ಮಣ್ಣ ಬೀದರ್ ಡಿಸ್ಟ್ರಿಕ್ಟ್ ಸುರಪುರ ತಾಲೂಕು ಪಿನ್ ಕೋಡ್ ೫೮೦೦೩೧ ಇಂದ ಕಾಲ್ ಮಾಡ್ತಾ ಇದ್ದೀನಿ’ ಅಂತ ಮೊದಲೇ ಹೇಳಿ ಬಿಡ್ತಾರೆ . ಅವರಿಗೆ ಎಲ್ಲಿಂದ ಮಾತಾಡ್ತೀರಿ ಅಂತ ಕೇಳೋಕೆ ಹೋಗ್ಬೇಡಿ!

ಆಮೇಲೆ ಮುಂದಿನ ಪ್ರಶ್ನೆ ’ಸರ್ ತಿಂಡಿ ಆಯ್ತಾ ? ’ ಅನ್ನೋದು . ನಂಗೂ ಗೊತ್ತು ನೀವು ಬೆಳಿಗ್ಗೆ ಬೇಗ ಸ್ಟುಡಿಯೋಗೆ ಬಂದಿರ್ತೀರಾ.ನಿಮ್ಮ ತಿಂಡಿ ಇನ್ನೂ ಆಗಿರಲ್ಲ .ಆದ್ರೆ ಏನ್ ಮಾಡೋದು ಹೇಳಿ ಇಂಥದ್ದೆಲ್ಲಾ ಕೇಳಲೇ ಬೇಕು :(
ಅವರು ’ಹೂಂ ಆಯ್ತು ಬಿಸಿ ಬೇಳೆ ಬಾತ್ ಮಾಡಿದ್ವಿ ’ ಅಂತಾರೆ. ನೀವು ’ಏನ್ರಿ ಒಬ್ರೇ ತಿನ್ತೀರಾ, ನಂಗಿಲ್ವಾ ? ’ ಅನ್ಬೇಕು.
ಅವರೂ ಸಂಭಾವಿತರ ಹಾಗೆ ’ಹೂಂ ಬಂದ್ ಬಿಡಿ ಮನೆಗೆ ’ ಅಂತ ಪಾಪ ಕರೀತಾರೆ.ಆಡ್ರೆಸ್ ಕೇಳಿ ಹೋಗ್ಬಿಟ್ಟೀರಾ ಮತ್ತೆ ! ಹುಷಾರು ! ಇದೆಲ್ಲಾ ಬರೀ ಫಾರ್ಮಾಲಿಟಿಗೆ ಕಣ್ರಿ!

ಇನ್ನು ಕೆಲವು ಮನೆಗಳಲ್ಲಿ ಅಪ್ಪ ಅಮ್ಮ ಕೆಲಸಕ್ಕೆ ಹೋದ ಮೇಲೆ ಮಕ್ಕಳು ಕಾಲ್ ಮಾಡಿರ್ತಾರೆ. ಒಳ್ಳೆ ತಲೆ ನೋವು . ಮಕ್ಕಳು ಅಂತ ಹಗುರ ತಗೋಬೇಡಿ. ನಿಮಗಿಂತ ಸ್ಮಾರ್ಟ್ ಆಗಿರ್ತಾರೆ ಅವರು!

ಅವರು ಖಂಡಿತ ’ಜಿಂಕೆ ಮರೀನಾ ’ , ’ಪ್ರೀತ್ಸೆ ಪ್ರೀತ್ಸೆ’ ಹಾಡುಗಳನ್ನೇ ಕೇಳೋದು. ಅವರಿಗೆ ಅಂತ ’ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನಿ ’ ಥರದ ಮಕ್ಕಳ ಹಾಡು ಹುಡುಕೋಕೆ ಹೋಗ್ಬೇಡಿ. ನಿಮ್ ಟೈಮ್ ವೇಸ್ಟ್ ಅಷ್ಟೆ !

ಕೆಲವು ತರ್ಲೆ ಕಾಲರ್ ಗಳಿರ್ತಾರೆ. ’ ಮ್ಯಾಡಮ್ ನಿಮ್ ಮನೆ ಎಲ್ಲಿ ,ಯಾವ್ ಕಾಲೇಜ್ ’ ಅಂತೆಲ್ಲಾ ಬುಡಕ್ಕೆ ಕೈ ಹಾಕಿ ಬಿಡ್ತಾರೆ! ಆಗ ನೀವು ’ ಸರ್ ನಿಮ್ ಟಿ.ವಿ ವಾಲ್ಯೂಮ್ ಮ್ಯೂಟ್ ಮಾಡಿ . ಏನೂ ಕೇಳಿಸ್ತಾ ಇಲ್ಲ ,ಹಲೋ ಹಲೋ... ಹಲೋ . ’ ಅಂತ ಕಾಲ್ ಕಟ್ ಮಾಡ್ಬಿಡಿ. ಸ್ವಲ್ಪ ಯಾಮಾರಿದ್ರೂ ನಾಳೆ ಬೆಳಿಗ್ಗೆ ನಿಮ್ ಮನೆ ಮುಂದೇನೆ ಹಾಜರ್ ಆಗಿರ್ತಾರೆ ಹುಷಾರು !

ಆಮೇಲೆ ಕೊನೆಯದಾಗಿ ’ ಯಾರಿಗೆ ವಿಶ್ ಮಾಡ್ಬೇಕಿತ್ತು ’ ಅಂತ ಕೇಳಿ. ಅವರೂ ಯಾರದ್ದೋ ಹೆಸರು ಹೇಳಿ ಯಾವತ್ತೋ ಮುಗಿದಿರೋ ಬರ್ತ್ ಡೇ ಗೆ ವಿಶ್ ಮಾಡಿ ಅಂತಾರೆ. ನೀವು ತುಟಿಕ್ ಪಿಟಿಕ್ ಅನ್ನದೆ ವಿಷ್ ಮಾಡಿ.

ನೆನಪಿಡಿ ನಿಮಗೆ ದಿನಾ ಇವರೇ ಕಾಲ್ ಮಾಡೋದು . ಹಾಗಾಗಿ handle with care !

ಇವೇ ಪ್ರಶ್ನೆಗಳನ್ನು ಹಿಂದೆ ಮುಂದೆ ಮಾಡಿ ಮುಂದಿನ ಕಾಲರ್ ಗೆ ಕೇಳಿ !

ಆಲ್ ದಿ ಬೆಸ್ಟ್ !!!

Friday, January 7, 2011

ಬೇಕಾಗಿದ್ದಾರೆ...

ಬೇಕಾಗಿದ್ದಾರೆ :

ಫೇಸ್ ಬುಕ್ ನ ಫಾರ್ಮ್ ವಿಲೆ ಥರದ್ದೇ ಒಂದು ಆಟವನ್ನು ಅಭಿವೃದ್ಧಿ ಪಡಿಸಲು ಸಾಫ್ಟ್ ವೇರ್ ಇಂಜಿನಿಯರ್ ಗಳು ಬೇಕಾಗಿದ್ದಾರೆ.

ಆಟದಲ್ಲಿ ರೈತರಿಗೆ ಬೆಳೆದ ಬೆಳೆಗೆ ತಕ್ಕ ಬೆಲೆ ಸಿಗದೆ ಅನ್ಯಾಯವಾಗುವುದು, ಮಧ್ಯವರ್ತಿಗಳ ಕಾಟ ಇತ್ಯಾದಿಗಳನ್ನು ಸಮರ್ಪಕವಾಗಿ ಅಳವಡಿಸಬೇಕು.

ರೈತರು ಆತ್ಮಹತ್ಯೆ ಮಾಡುವ ಅವಕಾಶವಿರಬೇಕು.


ಕೃಷಿ ಭೂಮಿಯನ್ನು ಅಭಿವೃದ್ಧಿಯ ಹೆಸರಲ್ಲಿ ಕಬಳಿಸುವ ಅವಕಾಶವಿರಬೇಕು.