Thursday, December 31, 2009
Saturday, December 26, 2009
ಶಿಶಿರದ ಜೊತೆಯಲಿ ತ್ರೀ ಈಡಿಯಟ್ಸ್...
ಈ ಶುಕ್ರವಾರ ಮೂರು ಚಲನಚಿತ್ರ ನೋಡಿದೆ !
ಬೆಳಗಿನ ಶೋ ’ಶಿಶಿರ’.ಮ್ಯಾಟನಿ ಶೋ ’ಮಳೆಯಲಿ ಜೊತೆಯಲಿ’ ರಾತ್ರಿ ಶೋ ’ತ್ರೀ ಈಡಿಯಟ್ಸ್’!!!
’ಶಿಶಿರ’ ತುಂಬಾ ಉತ್ತಮ ಪ್ರಯತ್ನ.ಛಾಯಾಗ್ರಹಣ,ನಿರ್ದೇಶನ,ಸಂಗೀತ, ನಾಯಕ ಯಶಸ್ ನ ನಟನೆ ಎಲ್ಲವೂ ಚೆನ್ನಾಗಿತ್ತು.ಚಿತ್ರಕಥೆಯೊಂದನ್ನು ಬಿಟ್ಟು:( ಸಸ್ಪೆನ್ಸ್ ಚಿತ್ರಕ್ಕಿರಬೇಕಾದ ಕೆಲವು ಅಂಶಗಳು ಕಡಿಮೆ ಆಗಿದ್ದೇ ಎಡವಟ್ಟು.ನಿರ್ದೇಶಕರು ಮುಂದಿನ ಪ್ರಯತ್ನದಲ್ಲಿ ಖಂಡಿತ ಯಶಸ್ವಿಯಾಗ್ತಾರೆ ಅನ್ನೋ ಭರವಸೆ ನನಗಿದೆ.
ಬಹುನಿರೀಕ್ಷಿತ ’ತ್ರೀ ಈಡಿಯಟ್ಸ್ ’ ಮಾತ್ರ ನಿರೀಕ್ಷೆಗೆ ಮೀರಿ ಚೆನ್ನಾಗಿದೆ.ತುಂಬಾನೇ ಖುಷಿ ಕೊಟ್ಟಿತು ಇಡೀ ಚಿತ್ರ.ಒಂದೇ ಒಂದು ನಿಮಿಷ ಬೋರ್ ಹೊಡೆಸಿಲ್ಲ.ಅದ್ಭುತ ನಿರ್ದೇಶನ,ಅದ್ಭುತ ಕಥೆ,ಅದ್ಭುತ ಹಾಡುಗಳು ಹಾಗೆಯೇ ತುಂಬಾ ಒಳ್ಳೆಯ ಸಂದೇಶ.
ಬೊಮನ್ ಇರಾನಿ ಸಂಪೂರ್ಣ ವಿಭಿನ್ನವಾಗಿ ನಟಿಸಿದ್ದಾರೆ.ಬಾಡಿ ಲ್ಯಾಂಗ್ವೇಜ್ ಆಗಲಿ,ಡೈಲಾಗ್ ಡೆಲಿವರಿಯಾಗಲಿ ಎಲ್ಲವೂ ಸೂಪರ್! ಬೊಮನ್ ರ ನಟನೆ ’ಮುನ್ನಾಭಾಯಿಯ’ ಥರದ್ದೇ ಇರಬಹುದೇನೊ ಅಂದುಕೊಂಡವರಿಗೆ ದೊಡ್ಡ ಅಚ್ಚರಿ ಕೊಡ್ತಾರೆ ಅವರು.
ಚೇತನ್ ಭಗತ್ ರ ಕಾದಂಬರಿಯ ಎಳೆಯನ್ನಷ್ಟೇ ಹಿಡಿದು ಚಿತ್ರ ಮಾಡಿದರೂ ಕಾದಂಬರಿಯ ಆಶಯಕ್ಕೆ ಒಂದಿಷ್ಟೂ ಚ್ಯುತಿ ಬಂದಿಲ್ಲ ಬದಲಾಗಿ ಸರಿಯಾದ ನ್ಯಾಯ ದೊರಕಿದೆ.ಭಾರತದ ಶಿಕ್ಷಣ ವ್ಯವಸ್ಥೆಯ ಬಗ್ಗೆ ಎಲ್ಲರೂ ಮತ್ತೊಮ್ಮೆ ಯೋಚಿಸುವಂತೆ ಮಾಡುತ್ತೆ ಈ ಚಿತ್ರ.
ಆಮೀರ್ ,ಶರ್ಮನ್ ಜೋಷಿ,ಮಾಧವನ್,ಬೊಮನ್,ಕರೀನಾ ಗೆ ಸರಿ ಸಾಟಿಯಾಗಿ ಓಮಿ ಅನ್ನೊ ನಟ ಅದ್ಭುತವಾಗಿ ನಟಿಸಿದ್ದಾನೆ.ಚಿತ್ರದುದ್ದಕ್ಕೂ ನಕ್ಕು ನಲಿಸುವ ಸಂಭಾಷಣೆಗಳು.
ಶಿಕ್ಷಣ ಬರೀ ಮಾರ್ಕ್ಸ್ ಗಳಿಸೋದಷ್ಟೇ ಕಲಿಸುತ್ತೆ ,ಬದುಕುವುದನ್ನಲ್ಲ!
Sunday, December 20, 2009
ತ್ರೀ ಈಡಿಯಟ್ಸ್...
Five Point Some One-What not to do at IIT ಇದು ಚೇತನ್ ಭಗತ್ ರ ಚೊಚ್ಚಲ ಕೃತಿ.ಇದರ ಕಥಾವಸ್ತು ದೇಶದಲ್ಲೇ ಅತ್ತ್ಯುತ್ತಮ ಇಂಜಿನಿಯರಿಂಗ್ ಕಾಲೇಜ್ ಅನಿಸಿಕೊಂಡಿರುವ ಐಐಟಿ ದಿಲ್ಲಿಯ ಮೂರು ಹುಡುಗರು.ಲೇಖಕರೇ ಹೇಳುವಂತೆ ಈ ಕೃತಿ ಐಐಟಿಗೆ ಯಾವ ರೀತಿ ಸೇರಬಹುದು ಅನ್ನೋದರ ಬಗ್ಗೆ ಖಂಡಿತ ಅಲ್ಲ.ಈ ಕೃತಿ ಆ ಮೂರು ಹುಡುಗರು ಐಐಟಿಯಲ್ಲಿ ತಮ್ಮ ಜೀವನದ ಪ್ರಮುಖ ಘಟ್ಟವೊಂದನ್ನು ದಾಟಲು ಯಾವ ರೀತಿ ಹೆಣಗಿದರು ,ನಮ್ಮ ದೇಶದ ಶೈಕ್ಷಣಿಕ ಪದ್ದತಿ ಯಾವ ರೀತಿ ವಿದ್ಯಾರ್ಥಿಗಳ ಜೀವನವನ್ನು ರೂಪಿಸುವುರಲ್ಲಿ ಎಡವುತ್ತಿದೆ ಅನ್ನೋದರ ಬಗ್ಗೆ ಬೆಳಕು ಚೆಲ್ಲುತ್ತದೆ.ಇಡೀ ಕಥಾವಸ್ತು ನವಿರಾದ ಹಾಸ್ಯವನ್ನೊಳಗೋಂಡಿರುವುದರಿಂದ ಯುವ ಜನರ ಮನಸ್ಸನ್ನು ಗೆಲ್ಲುವುದರಲ್ಲಿ ಯಶಸ್ವಿಯಾಗಿದೆ.ಐಐಟಿಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಮರ್ಥ್ಯವನ್ನು GPA ಗಳಲ್ಲಿ ಅಳೆಯುತ್ತಾರೆ .ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯ GPA ಒಂಭತ್ತು ಮತ್ತೆ ಹತ್ತರ ಮಧ್ಯೆ ಇರುತ್ತದೆ.ನಮ್ಮ ಕಥಾನಾಯಕರ GPA ಯಾವತ್ತೂ ಐದರ ಆಸು ಪಾಸಿರುವುದರಿಂದ ಅವರು ಐಐಟಿಗಳಲ್ಲಿ five pointers ಅನ್ನಿಸಿಕೊಳ್ಳುತ್ತಾರೆ.
ಐಐಟಿಗಳಿಗೆ ದಾಖಲಾಗುವ ಪ್ರತಿ ವಿದ್ಯಾರ್ಥಿಯೂ ಅತ್ಯಂತ ಪ್ರತಿಭಾವಂತರಾಗಿರುತ್ತಾನೆ.ಅದಾಗ್ಯೂ ಈ ವಿದ್ಯಾರ್ಥಿಗಳು ಅಷ್ಟು ಕಷ್ಟ ಪಡಲು ಕಾರಣವೇನು ಅನ್ನೋದೇ ಕಥೆಯ ತಿರುಳು.ಈ ಕಥೆ ಹರಿ ,ಆಲೋಕ್ ಹಾಗೂ ರಯಾನ್ ಒಬೆರಾಯ್ ಅನ್ನೋ ಮೂವರು ಹುಡುಗರ ಸುತ್ತಲೇ ಸುತ್ತುತ್ತದೆ.ಹರಿ ಈ ಕಥೆಯ ಸೂತ್ರಧಾರ,ನೋಡೋದಕ್ಕೆ ಡುಮ್ಮನೆ ಅಷ್ಟೇನೂ ಚೆನ್ನಾಗಿರೋದಿಲ್ಲ.ಇವನಿಗೆ ಯಾವಾಗಲೂ ತನ್ನ ಬಗ್ಗೆ ಕೀಳರಿಮೆ .ಗೆಳೆಯ ರಯಾನ್ ಥರ ಧೈರ್ಯಶಾಲಿಯಾಗ್ಬೇಕು ,ಅವನೆ ರೀತಿ ಪರ್ಸನಾಲಿಟಿ ಬೆಳೆಸಿಕೊಳ್ಳಬೇಕು ಅನ್ನೋ ಆಸೆ!ರಯಾನ್ ಒಬೆರಾಯ್ ಶ್ರೀಮಂತರ ಮಗ.ಸಾಂಪ್ರದಾಯಿಕ ಶಿಕ್ಷಣ ಪದ್ದತಿಯ ಬಗ್ಗೆ ಯಾವಗಲೂ ಇವನಿಗೆ ಅಸಮಧಾನ.ಅವನದ್ದೇ ಶೈಲಿಯಲ್ಲಿ ಬದುಕುವವನು.ಗೆಳೆತನದ ವಿಷಯಕ್ಕೆ ಬಂದರೆ ಮಾತ್ರ ಜೀವಕ್ಕೆ ಜೀವ ಕೊಡುವಂಥ ಗೆಳೆಯ .ಯಾವತ್ತೂ ಗೆಳೆಯರಾದ ಹರಿ ಮತ್ತೆ ಆಲೋಕ್ ಕಷ್ಟದಲ್ಲಿದ್ದರೆ ಇವನು ಅಲ್ಲಿ ಹಾಜರ್!ಆಲೋಕ್ ತುಂಬಾ ಬುದ್ಧಿವಂತ ಹುಡುಗ.ಬಡ ಕುಟುಂಬದಿಂದ ಬಂದಿರುತ್ತಾನೆ.ಇವನ ತಂದೆ ಪಾರ್ಶ್ವವಾಯು ಪೀಡಿತರಾಗಿದ್ದರಿಂದ ಕುಟುಂಬದ ಹೊಣೆಯನ್ನು ಆಲೋಕ್ ನ ತಾಯಿ ನೋಡಿಕೊಳ್ಳುತ್ತಿರುತ್ತಾರೆ.ಆಲೋಕ್ ಬೇಗ ಐಐಟಿಯಿಂದ ಡಿಗ್ರಿ ಮುಗಿಸಿ ಕೆಲಸಕ್ಕೆ ಸೇರಿಕೊಂಡು ತನ್ನ ತಂಗಿಯ ಮದುವೆ ನಡೆಸಿಕೊಡಲಿ,ತಂದೆ ಆರೋಗ್ಯದ ಖರ್ಚು ನೋಡಿಕೊಳ್ಳಲಿ ಅನ್ನೋದು ಅವನ ತಾಯಿಯ ಆಸೆ.
ಈ ಮೂವರು ವಿದ್ಯಾರ್ಥಿಗಳು ತಮ್ಮ GPA ಉತ್ತಮಪಡಿಸಲು ಹೆಣಗಾಡೋದು,ಹಾಸ್ಟೆಲ್ ಜಗತ್ತಿನ ರೋಚಕ ಘಟನೆಗಳು.ಹರಿ ತನ್ನ ಪ್ರೊಫೆಸರ್ ಚೆರಿಯನ್ ರ ಮಗಳನ್ನು ಪ್ರೀತಿಸೋದು,ಪ್ರಶ್ನೆ ಪತ್ರಿಕೆ ಕದಿಯಲು ಹೋಗಿ ಸಿಕ್ಕಿ ಬೀಳೋದು ಮುಂತಾವುದನ್ನು ಚೇತನ್ ಭಗತ್ ನವಿರಾದ ಹಾಸ್ಯದೊಂದಿಗೆ ಚಿತ್ರಿಸಿದ್ದಾರೆ.
ಈ ಪುಸ್ತಕ ಈಗ ಹಿಂದಿಯಲ್ಲಿ ಚಲನಚಿತ್ರವಾಗಿ ಬರ್ತಾ ಇದೆ ’ತ್ರೀ ಈಡಿಯಟ್ಸ್ ’ ಅನ್ನೋ ಹೆಸರಲ್ಲಿ .ಆಮೀರ್ ಖಾನ್ ನಟನೆಯ ಈ ಚಿತ್ರ ಬೆಂಗಳೂರಿನ ಐಐಎಮ್ ನಲ್ಲಿ ಚಿತ್ರೀಕರಣಗೊಂಡಿದೆ.
ಈ ಪುಸ್ತಕ ನಾನು ಫುಟ್ ಪಾತ್ ನಲ್ಲಿ ತಗೊಂಡಿದ್ದೆ.ಪೈರೇಟೆಡ್ ಪುಸ್ತಕಗಳ ಬಗ್ಗೆ ನನಗೆ ಅಷ್ಟಾಗಿ ಗೊತ್ತಿರಲಿಲ್ಲ.ಎಲ್ಲರೂ ತಮ್ಮ ಆರ್ಕುಟ್ ಪ್ರೊಫೈಲ್ ನಲ್ಲಿ ಚೇತನ್ ಭಗತ್ ರ ಈ ಪುಸ್ತಕದ ಉಲ್ಲೇಖ ಮಾಡಿದ್ದರಿಂದ ನಾನೂ ಈ ಪುಸ್ತಕ ಕೊಳ್ಳಲು ಉತ್ಸುಕನಾಗಿದ್ದೆ.ಬೆಲೆ ಎಷ್ಟು ಅಂತ ಕೇಳಿದ್ದಕ್ಕೆ 300Rs ಅಂದಿದ್ದ ಮಾರುವವ.ಬಹಳ ಚರ್ಚೆ ಮಾಡಿ 150Rs ಗೆ ತಗೊಂಡಿದ್ದೆ ಪುಸ್ತಕವನ್ನು(ಅದೂ ಪೈರೇಟೆಡ್).
ಚೇತನ್ ಭಗತ್ ರ ಎರಡನೇ ಪುಸ್ತಕ ಕೊಂಡ ಮೇಲಷ್ಟೇ ನನಗೆ ಗೊತ್ತಾಗಿದ್ದು ಚೇತನ್ ರ ಎಲ್ಲಾ ಪುಸ್ತಕಗಳ ಬೆಲೆ 95Rs ಅನ್ನೋದು!
ಕುತೂಹಲದಿಂದ ಕಾಯ್ತಾ ಇದ್ದೇನೆ ಚಿತ್ರ ಬಿಡುಗಡೆಗೆ.
Subscribe to:
Posts (Atom)