’ಎದ್ದೇಳು ಮಂಜುನಾಥ’ ಚಿತ್ರ ನೋಡಿದೆ.ಚಿತ್ರದ ವಿಮರ್ಶೆ ಬರೆಯಲು ನನಗೆ ಬರಲ್ಲ.ಬರಲ್ಲ ಅನ್ನೋದಕ್ಕಿಂತ ಬರೆಯಲು ಮನಸ್ಸಿಲ್ಲ ಅನ್ನೋದೇ ಸೂಕ್ತ.
ನಾನು ಚಿತ್ರ ಚೆನ್ನಾಗಿದೆ ಅನ್ನೋದು ಅದಕ್ಕೆ ಇನ್ನೊಬ್ಬ(ಳು) ’ಥೂ ನಿನ್ನ ಏನ್ ಕಚಡಾ ಟೇಸ್ಟ್ ನಿನ್ನದು’ ಅನ್ನೋದು.ನಾನೂ ಸೋಲೊಪ್ಪಲಾರದೆ ಸಮರ್ಥನೆ ನೀಡೋದು ,ಇಂಥ ಕಿರಿಕ್ ಗಳು ಬಹಳಷ್ಟು ಸಲ ಆಗಿವೆ.ಅದಿಕ್ಕೆ ಚಿತ್ರ ನೋಡಿ ಅಂತ ಹೇಳೋದು ತುಂಬಾ ಕಡಿಮೆ.
’ಎದ್ದೇಳು ಮಂಜುನಾಥ’ ಕೂಡಾ ನೋಡಿ ಅಂತ ಯಾರಿಗೂ ಹೇಳಲ್ಲ ನಾನು.ನಿಮ್ ದುಡ್ಡು ನೀವು ಅದನ್ನು ಯಾವ ರೀತಿ ಬೇಕಾದ್ರೂ ಖರ್ಚು ಮಾಡಿ ಸ್ವಾಮಿ ,ನಾನ್ಯಾರು ಸಲಹೆ ಕೊಡೋಕೆ ಅಲ್ವ?
ಅಷ್ಟಕ್ಕೂ ನನಗೆ ಈ ಚಿತ್ರದ ಬಗ್ಗೆ ಬರೀಬೇಕು ಅನಿಸಿದ್ದು ಯಾಕಂದ್ರೆ ಇದೊಂದು ವಿಭಿನ್ನ ರೀತಿಯ ಸಿನೆಮಾ. ಕಡಿಮೆ ಬಜೆಟ್ ನ(ಎಷ್ಟು ಅಂತ ಗೊತ್ತಿಲ್ಲ!) ಬರೀ ಸಂಭಾಷಣೆ ಮತ್ತು ಜಗ್ಗೇಶ್ ಅಭಿನಯವನ್ನು ನಂಬಿಕೊಂಡು ಮಾಡಿದ ಒಂದು ಚಿತ್ರ.ಬರೀ ಸಂಭಾಷಣೆಯಿಂದಲೂ ಚಿತ್ರ ಗೆಲ್ಲಿಸಬಹುದು ಅಂತ ನಿರೂಪಿಸಿದ ಚಿತ್ರ.
ಚಿತ್ರ ಬರೀ ಒಂದು ಲಾಡ್ಜ್ ರೂಮ್ ,ಅಥವಾ ಒಂದು ಪುಟ್ಟ ಮನೆಯಲ್ಲಿ ಮುಗಿದು ಬಿಡುತ್ತೆ.ಅದ್ಯಾಕೆ ಕೆಲವು ನಿರ್ದೇಶಕರಿಗೆ ಬ್ಯಾಂಕಾಕ್ ,ಸ್ವಿಟ್ಜರ್ಲ್ಯಾಂಡ್ ನಂಥ ಊರಿನ ಮೇಲೆ ’ಪ್ರೇಮ್’ ವೋ ಗೊತ್ತಿಲ್ಲ.ಅನಾವಶ್ಯಕ ಕೋಟಿಗಟ್ಟಲೆ ಖರ್ಚು ಮಾಡ್ತಾರೆ.ಕೇಳಿದ್ರೆ ’ ತಮಿಳು ,ತೆಲುಗಿನವರು ಮಾಡ್ತಾರೆ ಅದಕ್ಕೆ ನಾವೇನ್ ಕಮ್ಮಿ ’ ಅಂತಾರೆ.
ಅಲ್ಲಾ ನಮ್ ಶಿವಣ್ಣ ಹಳ್ಳಿಯಲ್ಲಿ ಹಾಕೋ ಅಂಥ ಪಟ್ಟಾಪಟ್ಟಿ ಚಡ್ಡಿ ಹಾಕ್ಕೊಂಡು ವಿದೇಶದಲ್ಲಿ ಹೋಗಿ ಕುಣೀತಾರೆ.ಇದರಿಂದ ಅದೇನು ಸಾಧಿಸ್ತಾರೋ ದೇವರಿಗೆ ಗೊತ್ತು.ಪಟ್ಟಾಪಟ್ಟಿ ಚಡ್ಡಿ ಡ್ಯಾನ್ಸ್ ಮಾಡ್ಲೇ ಬೇಕೂಂದ್ರೆ ಇಲ್ಲೆ ಕೆ.ಆರ್ ಮಾರ್ಕೆಟ್ ನಲ್ಲೂ ಮಾಡಬಹುದಲ್ಲ.ಅದಕ್ಕ್ಯಾಕೆ ವಿದೇಶಕ್ಕೆ ಹೋಗ್ಬೇಕು.
ಹೀಗೇನಾದ್ರೂ ಕೇಳಿದ್ರೆ ’ನಿಂಗೇನಪ್ಪ ಗೊತ್ತು ಸಿನೆಮಾ ಬಗ್ಗೆ ’ ಅಂತಾರೆ.ನಂಗೆ ಗೊತ್ತಾಗೋದೂ ಬೇಡ ಬಿಡಿ.
ಸಿದ್ಧಸೂತ್ರಗಳನ್ನು ಬಳಸದೆ ತಯಾರಿಸಿದ್ದಕ್ಕೆ ನನಗೆ ’ಎದ್ದೇಳು ’ ಇಷ್ಟ ಆಗಿದ್ದು.ಸಿನೆಮಾ ಅಂದ್ರೆ ಐದು ಸಾಂಗ್,ನಾಲ್ಕು ಫೈಟ್ ಎರಡು ರೇಪ್ ಅನ್ನೋ ಅಂಥ ರೆಡಿಮೇಡ್ ಫಾರ್ಮುಲಾಗಳನ್ನು ಬಿಟ್ಟು ರಿಸ್ಕ್ ತಗೊಂಡಿದ್ದಕ್ಕೆ ಗುರುಪ್ರಸಾದ್ ಗೆ ಅಭಿನಂದನೆಗಳು.
ನನ್ನ ಗೆಳೆಯನೊಬ್ಬನ ಬಳಿ ’ನಾನು ಜಬ್ ವಿ ಮೆಟ್ ನೋಡಿದೆ ’ ಅಂದಿದ್ದಕ್ಕೆ ’ಥೂ ನಿನ್ನಂಥವರಿರೋದ್ರಿಂದಾ ಕಣೋ ಕನ್ನಡ ಚಿತ್ರರಂಗ ಬೆಳೀತಾ ಇಲ್ಲ.ಯಾವಾಗ ನೊಡಿದ್ರೂ ಹಿಂದಿ,ತಮಿಳು ಹೀಗೇ ಬೇರೆ ಭಾಷೆಯ ಚಿತ್ರ ನೋಡ್ತೀರಾ ’ ಅಂತ ಉದ್ದುದ್ದ ಲೆಕ್ಚರ್ ಕೊಟ್ಟಿದ್ದ.
ಅವನು ಹೇಳಿದ್ದೆಲ್ಲಾ ಕೇಳಿಸ್ಕೊಂಡೆ.
ಆಮೇಲೆ ಅವನ ಹತ್ತಿರ ’ನಿನಗೆ ಪರಾಮರ್ಶಿಸು ಅನ್ನೋ ಶಬ್ದದ ಅರ್ಥ ಗೊತ್ತಾ?’ ಕೇಳಿದೆ. ’ಇಲ್ಲ ’ ಅಂದ .ಇರಲಿ ಅವಲೋಕನ ಅಂದ್ರೆ ಗೊತ್ತಾ ಅಂದೆ ’ಗೊತ್ತಿಲ್ಲ ’ ಅಂದ.
ನೋಡು ನಿನಗೆ ಕನ್ನಡದ ಎರಡೇ ಎರಡು ಶಬ್ದದ ಬಗ್ಗೆ ಕೇಳೀದೆ.ಅದನ್ನು ನೀನು ಕೇಳಿಯೇ ಇಲ್ಲ. ನಾನು ನಿನ್ನಷ್ಟು ಕನ್ನಡ ಸಿನೆಮಾ ನೋಡಿಲ್ಲ ಆದ್ರೂ ನನ್ನ ಕನ್ನಡ ಚೆನ್ನಾಗೆ ಇದೆ ’ನಿನ್ನ ಕನ್ನಡ ಪ್ರೇಮಕ್ಕೆ ನನ್ನ ಅಭಿನಂದನೆ ’ ಅಂದೆ.
ಕನ್ನಡ ಸಿನಿಮಾ ನೋಡೋದ್ರಿಂದ ಕನ್ನಡದ ಸೇವೆ ಮಾಡ್ತೀನಿ ಅಂತ ನನಗೆ ಯಾವತ್ತೂ ಅನಿಸಿಲ್ಲ.ಸಿನಿಮಾ ಗೆದ್ರೆ ಅದರಿಂದ ಆ ಸಿನೆಮಾದ ನಿರ್ದೇಶಕ ,ನಿರ್ಮಾಪಕರು ಹಣ ಮಾಡ್ತಾರಷ್ಟೇ.ಅವರು ಕನ್ನಡಕ್ಕೆ ಯಾವುದೇ ರೀತಿಯ ಕಾಣಿಕೆ ನೀಡೋದು ಸಂಶಯವೇ.ಕಾಣಿಕೆ ನೀಡಿಲ್ಲ ಅಂದ್ರೂ ಪರ್ವಾಗಿಲ್ಲ.ಅದು ಬಿಟ್ಟು ಕನ್ನಡದ ಆಸ್ತಿ ಮಾಸ್ತಿಯ ಹೆಸರಿನಲ್ಲಿ ರೌಡಿಯೊಬ್ಬನ ಸಿನೆಮಾ ತೆಗೆಯೋದಕ್ಕೆ ಹೊರಡ್ತಾರೆ.
ಬೇರೆ ಭಾಷೆಯ ಸರಕನ್ನು ಕದ್ದು ತರೋರಿಗಿಂತ ಇಲ್ಲೇ ಇದ್ದು ವಿಭಿನ್ನವಾಗಿ ಯೋಚಿಸಿ ಸಿನೆಮಾ ತೆಗೆಯೋ ಗುರುಪ್ರಸಾದ್ ಜಾಸ್ತಿ ಇಷ್ಟ ಆಗ್ತಾರೆ ನನಗೆ.
ಪತ್ರಿಕೆಗಳಲ್ಲಿ ಕೆಲವೊಮ್ಮೆ ಬರೋ ಹಾಗೆ ’ಮನೆಮಂದಿಯೆಲ್ಲಾ ಕೂತು ನೋಡೋ ಚಿತ್ರ’ ಅನ್ನೋ ಮಾತಿನ ಬಗ್ಗೆ ನನಗೆ ಅಷ್ಟೊಂದು ವಿಶ್ವಾಸವಿಲ್ಲ.ಅಂತ ಚಿತ್ರಗಳು ಹಿಂದೆ ದೂರದರ್ಶನದಲ್ಲಷ್ಟೆ ಬರ್ತಾ ಇತ್ತು.ಹಿಂದೆ ಅಂತ ಯಾಕೆ ಹೇಳಿದೆ ಗೊತ್ತಾ? ಹಿಂದೆ ಇದ್ದಿದ್ದೇ ದೂರದರ್ಶನ ಒಂದೇ.ಮನೆಮಂದಿಯೆಲ್ಲ ಇಷ್ಟ ಇಲ್ಲ ಅಂದ್ರೂ ಆ ಸಿನೆಮಾನ ಜೊತೆಯಲ್ಲಿ ಕೂತು ನೋಡಲೇ ಬೇಕಾದ ಅನಿವಾರ್ಯತೆ ಇತ್ತು.
ಚಿತ್ರದಲ್ಲಿ ರೇಪ್ ಸೀನ್ ಬಂದ್ರೂ ಪಾಪ ಮನೆಮಂದಿಯೆಲ್ಲಾ ಮುಜುಗರದಿಂದಲೇ ಅದನ್ನು ಸಹಿಸಿಕೊಳ್ಳಬೇಕಿತ್ತು.ಹಾಗಾಗಿ ಆ ಚಿತ್ರ ಹೇಗೇ ಇದ್ರೂ ಅದು ’ಮನೆಮಂದಿ ಎಲ್ಲಾ ಜೊತೆಯಾಗಿ ಕೂತು ನೋಡೋ ಚಿತ್ರ’ !
ಆದ್ರೆ ಇವತ್ತು ಅಮ್ಮ ಉದಯದಲ್ಲಿ ’ಶಾಂತಿನಿವಾಸ ’ ನೋಡ್ತಾ ಇದ್ರೆ ಮಗ ರಿಮೋಟ್ ಕಿತ್ಕೊಂಡು ’ಕಸ್ತೂರಿ’ ಯಲ್ಲಿ ಬರೋ ’ಹೊಂಗನಸು’ ನೋಡ್ತಾನೆ.
ಕನ್ನಡದ ಬಗ್ಗೆ ಅಷ್ಟೊಂದು ಅಭಿಮಾನ ಇರೋ ನಿರ್ದೇಶಕರು ಸಿನೆಮಾಗಳಿಗೆ ಹಾಡಲು ಮಾತ್ರ ಅದ್ಯಾಕೆ ಹಿಂದಿ ಗಾಯಕರನ್ನೇ ಹಾಕ್ತಾರೆ ಅನ್ನೋದು ಇನ್ನೂ ಅರ್ಥ ಆಗದ ವಿಷಯ.ಬಹುಷ ಕನ್ನಡೇತರ ಗಾಯಕರಿಗೆ ಕನ್ನಡ ಕಲಿಸುವಂಥ ’ಪುಣ್ಯ’ದ ಕೆಲಸವನ್ನು ಮಾಡ್ತಾ ಇದ್ದಾರೇನೋ ಅವರು.ಪಾಪ ನಾನೇ ಅವರನ್ನು ತಪ್ಪು ತಿಳಿದಿದ್ದೇನೆ ಅನ್ಸುತ್ತೆ!
ಕನ್ನಡದ ನಿರ್ದೇಶಕರೇ ಇನ್ನಾದರೂ ಎದ್ದೇಳಿ!
Sunday, July 26, 2009
Subscribe to:
Posts (Atom)