Sunday, April 26, 2009

ಕಲಾಕ್ಷೇತ್ರದಲ್ಲಿ ಪ್ರಕಾಶ್ ರೈ.

ಪ್ರೀತಿಯ ಮಣಿಕಾಂತ್ ಗೆ ಒಂದು ಥ್ಯಾಂಕ್ಸ್ ಹೇಳಲೇ ಬೇಕು. ’ಅಮ್ಮ ಹೇಳಿದ ಎಂಟು ಸುಳ್ಳುಗಳು’ ಪುಸ್ತಕದ ಬಿಡುಗಡೆಯ ನೆಪದಲ್ಲಿ ಅಷ್ಟೊಂದು ಚೆಂದನೆಯ ಕಾರ್ಯಕ್ರಮ ಆಯೋಜಿಸಿದ್ದಕ್ಕೆ.

ದೈತ್ಯ ಬರಹಗಾರ ರವಿ ಬೆಳಗೆರೆ ಅದ್ಭುತವಾಗಿ ಮಾತಾಡುತ್ತರಾದರೂ ಅವರ ಮಾತನ್ನು ನಾವು ಆಗಾಗ್ಗೆ ಕೇಳಲು ಅವರದ್ದೇ ಪುಸ್ತಕ ಬಿಡುಗಡೆಯ ಸಮಾರಂಭಗಳು ಅನುವು ಮಾಡಿ ಕೊಡುತ್ತೆ.ಹಾಗೆ ವಿಶ್ವೇಶ್ವರ ಭಟ್ರೂ ಬರೆಯುವಷ್ಟೇ ಚೆನ್ನಾಗಿ ಮಾತಾಡುತ್ತರಾದರೂ ಅವರ ಮಾತುಗಳನ್ನು ಕೇಳಲು ಬಹಳಷ್ಟು ಅವಕಾಶಗಳು ಸಿಗುತ್ತವೆ ನಮಗೆ.ಕೃಷ್ಣೇಗೌಡರ ಅದ್ಭುತ ಮಾತಿನ ವೈಖರಿಯನ್ನು ನಾನು ಮೊದಲ ಬಾರಿಗೆ ಕೇಳಿದೆನಾದರೂ ಅವರು ನಮ್ಮವರೇ.

ಅದರೆ ನನಗೆ ಕಾರ್ಯಕ್ರಮ ವೈಯುಕ್ತಿಕವಾಗಿ ಖುಷಿ ಕೊಟ್ಟಿದ್ದು ಪ್ರಕಾಶ್ ರೈ ಉಪಸ್ಥಿತಿ.ಪ್ರಕಾಶ್ ರೈ ಅವರನ್ನು ಈ ಕಾರ್ಯಕ್ರಮದ ನೆಪದಲ್ಲಿ ಭೇಟಿ ಮಾಡಿಸಿದ ಮಣಿಕಾಂತ್ (ಹಾಗೂ ಬಿ.ಸುರೇಶ್) ಅವರಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು !

ರವಿ ಬೆಳಗೆರೆ ಹೇಳಿದ ಹಾಗೆ ಕನ್ನಡ ಚಿತ್ರ ರಂಗವೊಂದನ್ನು ಬಿಟ್ಟು ದಕ್ಷಿಣ ಭಾರತದಲ್ಲಿ ಅತ್ಯಂತ ಜನಪ್ರಿಯರಾದ ನಟ ಪ್ರಕಾಶ್ ರೈ .ವಿಶ್ವೇಶ್ವರ ಭಟ್ರ ಮಾತಲ್ಲಿ ಹೇಳುವುದಾದರೆ ’ಎಲ್ಲಾ ಥರದ ಒಳ್ಳೆಯ ಪಾತ್ರಕ್ಕೆ ಸೈ -ಪ್ರಕಾಶ್ ರೈ ’!

ಪ್ರಕಾಶ್ ರೈ ಯನ್ನು ನೋಡುತ್ತಿದ್ರೆ ಕನ್ನಡ ಚಿತ್ರರಂಗ ಎಷ್ಟು ಒಳ್ಳೆಯ ನಟನನ್ನು ಕಳಕೊಂಡಿದೆ ಅನ್ನೋ ದುಖಃ ಯಾವಾಗಲೂ ಕಾಡುತ್ತೆ.ಎಷ್ಟಾದರೂ ಆ ಪುಸ್ತಕ ಬಿಡುಗಡೆಯ ಕಾರ್ಯಕ್ರಮವೇ ಭಾವುಕವಾದ್ದರಿಂದ ಈ ನೋವೂ ನಮ್ಮ ಕಣ್ಣನ್ನು ತೇವಗೊಳಿಸಲಿ ಬಿಡಿ.
ಪ್ರಕಾಶ್ ರ ಅತ್ಯಂತ ಸ್ವಚ್ಛ ಕನ್ನಡ ನನಗೆ ತುಂಬಾ ಖುಷಿ ಕೊಡ್ತು.ಅವರು ಹೇಳಿದ ಒಂದೊಂದು ಮಾತು ಕೂಡಾ!

ಕೃಷ್ಣೇಗೌಡ್ರ ಮಾತನ್ನು ನಾನು ಮೊದಲ ಬಾರಿಗೆ ಕೇಳಿದ್ದು ನಿನ್ನೆ ! ಅದ್ಭುತವಾಗಿ ಮಾತಾಡಿದ್ರು ಕೃಷ್ಣೇಗೌಡ್ರು.ಅವರ ಮಾತುಗಳನ್ನು ಕೇಳಿ ’ನಮಗೂ ಇಂಥ ಒಂದು ಮೇಷ್ಟ್ರು ಇದ್ದಿದ್ರೆ!’ ಅನ್ನೋ ಭಾವನೆ ನನಗೆ ಮೂಡಿದ್ದು ಸುಳ್ಳಲ್ಲ.ಕೃಷ್ಣೇಗೌಡ್ರು ಯಾವ ಸಬ್ಜೆಕ್ಟ್ ಕಲಿಸುತ್ತಾರೆ ಅನ್ನೋದೂ ನನಗೆ ಗೊತ್ತಿಲ್ಲ .ಆದ್ರೂ ಕೃಷ್ಣೇಗೌಡ್ರೇ ನೀವು ನಮಗೆ ಮೇಷ್ಟ್ರಾಗಬೇಕಿತ್ತು ಕಣ್ರಿ !

ಮಣಿಕಾಂತ್ ಪುಸ್ತಕದ ಬಗ್ಗೆ ,ಅದರಲ್ಲಿರೋ ಬರಹಗಳ ಬಗ್ಗೆ ,ಅಮ್ಮಂದಿರ ಬಗ್ಗೆ ,ಮಕ್ಕಳ ಬಗ್ಗೆ ತುಂಬಾ ಚೆನ್ನಾಗಿ ಮಾತಾಡಿದ್ರೂ ಕೃಷ್ಣೇಗೌಡ್ರು. ಅವರ ಸಾಮಾಜಿಕ ಕಳಕಳಿ ತುಂಬಾನೇ ಇಷ್ಟವಾಯ್ತು ನನಗೆ.ಅದರಲ್ಲೂ ಈಗಿನ ಸಮಾಜ ವೇಗದೋಟದಲ್ಲಿ ಬಿದ್ದು ವ್ಯವಧಾನದಿಂದ ಬದುಕುವುದನ್ನೇ ಮರೆತಿರೋದರ ಬಗ್ಗೆ ಅವರ ಕಾಳಜಿ ತುಂಬಾ ಅಭಿನಂದನೀಯ.

ರವಿ ಬೆಳಗೆರೆ ಮಾತಾಡೋದನ್ನೇ ಕಾಯುತ್ತಾ ಕುಳಿತಿದ್ದವರು ಅದೆಷ್ಟೋ ಜನ.ಸಮಾರಂಭಕ್ಕೆ ಅಷ್ಟೊಂದು ಜನರು ಬಂದಿರೋದಕ್ಕೆ ರವಿ ಬೆಳಗೆರೆಯ ಆಕರ್ಷಣೆಯೂ ಪ್ರಮುಖ ಕಾರಣ ಅಂದರೂ ತಪ್ಪಾಗಲಾರದು.ರವಿ ತಮ್ಮ ಎಂದಿನ ಧಾಟಿಯಲ್ಲಿ ಅಪ್ಪ-ಮಕ್ಕಳು(+ಸೊಸೆ+ಮೊಮ್ಮಕ್ಕಳನ್ನು)ಅದೆಲ್ಲಿಂದಲೋ ಎಳೆ ತಂದು ,ಮಾಮೂಲಿನಂತೆ ಜನರನ್ನು ನಗೆ ಗಡಲಲ್ಲಿ ತೇಲಿಸಿದರು.ಅದೇನು ಹೇಳಿದರು ಅಂತ ಇಲ್ಲಿ ಬರೆಯೋದು ಸ್ವಲ್ಪ ಕಷ್ಟ ! ಅವರ ಮೇಲೆ ಅಪ್ಪ-ಮಕ್ಕಳು ಕೇಸ್ ಹಾಕಿದ್ರೆ ಅವರು ಅದನ್ನು ನಿಭಾಯಿಸಬಹುದು ,ಆದರೆ ನನ್ನಂತ ಬಡಪಾಯಿಗೆ ಅದು ಸಾಧ್ಯ ಇಲ್ಲ.ಹಾಗಾಗಿ ರವಿ ಬೆಳಗೆರೆ ಸಿಡಿಸಿದ ಅಪ್ಪ-ಮಕ್ಕಳ ರೋಚಕ ಜೋಕ್ ಗಳಿಗೆ ನೀವು ನನ್ನನ್ನು ಅಥವಾ ಕಾರ್ಯಕ್ರಮದಲ್ಲಿ ಭಾಗಿಯಾದ ಇನ್ನಿತರರನ್ನು ಖುದ್ದಾಗಿ ಕೇಳೋದೇ ವಾಸಿ ಅನ್ನಿಸುತ್ತೆ!

ಪ್ರಕಾಶ್ ರೈ ತುಂಬಾ ಭಾವುಕರಾಗಿ ಮಾತಾಡಿದರು.ಕಲಾಕ್ಷೇತ್ರದೊಂದಿಗೆ ಅವರಿರುವ ನಂಟನ್ನು,ರಂಗಭೂಮಿಯಿಂದ ದೊರೆತ ಕಲಿಕೆಯನ್ನು ಅವರು ನೆನೆಸಿಕೊಂಡರು. ’ಕನ್ನಡ ರಂಗಭೂಮಿ/ಚಿತ್ರರಂಗದಲ್ಲಿ ಪಳಗಿಸಿಕೊಂಡ ಕಲೆಯ ಫಲವನ್ನು ತಮಿಳು,ತೆಲುಗಿನ ಜನ ಈಗ ನೋಡುತ್ತಿದ್ದಾರೆ ’ ಅನ್ನೋ ಮಾತು ನನ್ನನ್ನಂತೂ ತುಂಬಾ ಕಲಕಿತು.ನನಗೆ ಪ್ರಕಾಶ್ ರೈ ಯ ಧ್ವನಿಯೇ ತುಂಬಾ ಇಷ್ಟ .ಆ ಗಡಸು ಧ್ವನಿಯಲ್ಲಿ ಮಾತಾಡೋದು ಕೇಳೋದಂತೂ ಇನ್ನೂ ಇಷ್ಟ .ಜೊತೆಗೆ ಆ ಮಾತುಗಳು ಹೃದಯಕ್ಕೆ ತಟ್ಟುವಂತದ್ದಾಗಿದ್ದರೆ ಕೇಳಬೇಕೇ?

ಮಣಿಕಾಂತ್ ಬರಹದಲ್ಲಿ ಮಾತ್ರ ಭಾವುಕರಲ್ಲ ಮಾತಲ್ಲೂ ,ಕೃತಿಯಲ್ಲೂ ತುಂಬಾ ಭಾವುಕರು ಅನ್ನೋದು ಅವರ ಮಾತಿನಿಂದಲೇ ತಿಳಿಯುತ್ತಿತ್ತು.ತಮಗೆ ಕನ್ನಡ ಹೇಳಿಕೊಟ್ಟ ಟೀಚರ್ ಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿದ್ದು ನಿಜಕ್ಕೂ ಅಭಿನಂದನೀಯ.

ವಿಶ್ವೇಶ್ವರ ಭಟ್ರೂ ತಮ್ಮ ಎಂದಿನ ಧಾಟಿಯಲ್ಲಿ ಜೋಕುಗಳನ್ನು ಸಿಡಿಸುತ್ತಾ ,ಜನರನ್ನು ನಗಿಸುತ್ತಾ ಮಣಿಕಾಂತ್ ಬಗ್ಗೆ ಚೆನ್ನಾಗಿರೋ ನಾಲಕ್ಕು ಮಾತನ್ನಾಡಿದರು.ಮಣಿಕಾಂತ್ ತಮಗೆ ಬರಿದಿರೋ ಒಂದು ಕಾಗದವನ್ನು ಇವತ್ತಿಗೂ ಎತ್ತಿಟ್ಟಿರೋದರ ಬಗ್ಗೆ ಭಾವುಕರಾಗಿ ವಿವರಿಸಿದರು ಭಟ್ರು.

ಈ ಎಲ್ಲಾ ಕಾರ್ಯಕ್ರಮಕ್ಕೆ ಇನ್ನಷ್ಟು ಸೊಬಗು ತಂದದ್ದು ಉಪಾಸನಾ ತಂಡ. ಕಾರ್ಯಕ್ರಮದ ಶುರುವಿನಲ್ಲೇ ಬಹಳಷ್ಟು ಒಳ್ಳೆಯ ,ಸುಮಧುರ ಭಾವಗೀತೆಗಳನ್ನು ನಮಗೆಲ್ಲಾ ಕೇಳಪಡಿಸಿದ್ದು ಉಪಾಸನಾ ತಂಡ.ನಾಡಗೀತೆ ’ಜಯ ಭಾರತ ಜನನಿಯ ತನುಜಾತೆ’ ಕೇಳುವಾಗಲಂತೂ ರೋಮಾಂಚನಗೊಂಡಿದ್ದು ಸುಳ್ಳಲ್ಲ. ಅಷ್ಟು ಅದ್ಭುತವಾಗಿ ಹಾಡಿದ್ರು ಉಪಾಸನಾ ಮೋಹನ್ ತಂಡ.

ಮತ್ತೊಂದು ಗೀತೆ ’ಜಾಲಿ ಬಾರಿನಲ್ಲಿ ಕೂತು ಪೋಲಿ ಗೆಳೆಯರು ’ ಹಾಡೂ ಫ್ರೀ ಯಾಗಿ ಒಂದಿಷ್ಟು ಕಿಕ್ ನೀಡಿತ್ತು!ಆದರೆ ಇಂಥ ಸಭೆಯಲ್ಲಿ ’ಅತ್ತಿತ್ತ ನೋಡದಿರು ’ಅನ್ನೋ ಜೋಗುಳ ಹಾಡಿದ್ರೆ ಸುಧಾರಿಸೋದು ಸ್ವಲ್ಪ ಕಷ್ಟ .ತಾಯಿಯ ಮಡಿಲಲ್ಲಿದ್ದ ಕಂದಮ್ಮಗಳೇನೋ ಹಾಗೇ ನಿದ್ದೆಗೆ ಜಾರಿದವು ! ಬಡಪಾಯಿಗಳಾದ ನಾವು ಏನ್ ಮಾಡೋದು ಸ್ವಾಮಿ?

’ಕಾರ್ಯಕ್ರಮ ಮುಗಿದ ಮೇಲೆ ಹಾಡಿನ ದಿಬ್ಬಣ ಮುಂದುವರೆಯುತ್ತೆ’ ಅಂತ ನಿರೂಪಕರು ಹೇಳಿದ್ದರೂ ಹಸಿದ ಸಭಿಕರು ಆಗಲೇ ಎದ್ದೇಳತೊಡಗಿದ್ದರಿಂದ ದಿಬ್ಬಣ ಹೊರಡಲೇ ಇಲ್ಲ! ಕಾರ್ಯಕ್ರಮ ಸ್ವಲ್ಪ ಬೇಗನೆ ಶುರುವಾಗಿದ್ದರೆ ಈ ತೊಂದರೆ ತಪ್ಪುತ್ತಿತ್ತೇನೋ .ಆದರೆ ಏನು ಮಾಡೋದು ? ಕಾರ್ಯಕ್ರಮ ಬೇಗನೆ ಇಟ್ರೆ ಭಾನುವಾರ ಲೇಟ್ ಆಗಿ ಏಳೋ ನನ್ನಂಥವರಿಗೆ ತೊಂದರೆ ಆಗುತ್ತೆ ಅನ್ನೋ ಕಾಳಜಿ ಇರಬೇಕು ಮಣಿಕಾಂತ್ ಗೆ!

ಪುಸ್ತಕದ ಜೊತೆಗೆ ಉಪಾಸನಾದ ಕೆಲವು ಸಿ.ಡಿ ಗಳನ್ನೂ ಕೊಂಡು ತಂದೆ ನಾನು.ಇನ್ನು ಮೇಲೆ ದಿನಾ ಜಾಲಿ ಬಾರಿನಲ್ಲಿ ಕೂತು ಹಾಡು ಕೇಳಬಹುದು!

Saturday, April 25, 2009

ಬಾತ್ ರೂಮ್ ಸಿಂಗರ್ಸ್.....

ನನ್ನನ್ನೂ ಸೇರಿದಂತೆ ಬಹುತೇಕ ಜನರಿಗೆ ಸಂಗೀತವೆಂದರೆ ಪ್ರಾಣ.ಬಹಳಷ್ಟು ಜನರು ಒಳ್ಳೆಯ ಹಾಡುಗಾರರಾದರೂ ಅವಕಾಶದ ಕೊರತೆಯಿಂದ ತಮ್ಮ ಪ್ರತಿಭೆಯನ್ನು ಹೊರ ಜಗತ್ತಿಗೆ ತೋರಿಸಲು ಅವರಿಗೆ ಸಾಧ್ಯವಾಗುವುದಿಲ್ಲ.ಇದೇ ಕಾರಣಕ್ಕಾಗಿ ’ನನಗಂತೂ ಅವಕಾಶ ಸಿಗಲಿಲ್ಲ ,ನನ್ನ ಮಗ/ಮಗಳಿಗೆ ಈ ರೀತಿ ಆಗಬಾರದು ’ ಅನ್ನೋ ಒಂದೇ ಕಾರಣಕ್ಕೆ ಪಾಪ ತಮ್ಮ ಪುಟ್ಟ ಮಕ್ಕಳನ್ನು ಬೆಳ್ಳಂಬೆಳಿಗ್ಗೆ ಸಂಗೀತ ಕ್ಲಾಸ್ ಗೆ ಅಟ್ಟುತ್ತಾರೆ ಕೆಲ ಪೋಷಕರು!

ಅದಷ್ಟವಶಾತ್ ಈಗಿನ ಮಕ್ಕಳಿಗೆ ಬಹಳಷ್ಟು ಅವಕಾಶಗಳು ದೊರೆಯುತ್ತಿವೆ ಹಾಗಾಗಿ ನಾವು ಅಷ್ಟೊಂದು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ.ಆದರೆ ನಾವು ದೊಡ್ಡವರೇನು ಮಾಡೋದು ಅಂತೀರಾ ? ಹಿಂದಾದರೇ ಇದೇ ರೀತಿಯ ಹಾಡುವ ಚಟವನ್ನು ಬಾತ್ ರೂಮ್ ನಲ್ಲಿ ತೀರಿಸಿಕೊಳ್ಳಬಹುದಿತ್ತು.
ಆದರೆ ಬೆಂಗಳೂರಿನಲ್ಲಿ ಮನೆಗಳು ಒಂದಕ್ಕೊಂದು ತಾಗಿಕೊಂಡೇ ಇರೋದರಿಂದ ಹಿಂದಿನಂತೆ ಬಾತ್ ರೂಮ್ ನಲ್ಲೂ ಹಾಡೋ ಹಾಗಿಲ್ಲ.ಹಾಗೇನಾದರೂ ಹಾಡಿದರೆ ಮಾರನೇ ದಿನ ಮನೆ ಓನರ್ ವಾರ್ನಿಂಗ್ ಕೊಡಲು ಬಂದ್ರೂ ಬರಬಹುದು.ನೀವು ಬ್ಯಾಚುಲರ್ ಆಗಿದ್ದರಂತೂ extra precaution ತಗೊಳ್ಳಿ .ಪಕ್ಕದ ಮನೆಯ ಹುಡುಗಿಯನ್ನು ಪಟಾಯಿಸಲೇ ನೀವು ಜೋರಾಗಿ ಹಾಡುತ್ತೀರಿ ಅಂತ ನಿಮ್ಮ ಮೇಲೆ ವೃಥಾ ಆರೋಪ ಬರಬಹುದು!

ಆ ಉಸಾಬರಿಯೇ ಬೇಡ ಅನ್ನೋರಿಗೆ ಈ Muziboo ವರದಾನ.ಹಾಡನ್ನು ತಮ್ಮ ಪಾಡಿಗೆ ರೆಕಾರ್ಡ್ ಮಾಡಿ ಅಪ್ ಲೋಡ್ ಮಾಡಿದ್ರೆ ಸಾಕು.ನಿಜವಾಗಿಯೂ ಪ್ರತಿಭೆ ಇದ್ರೆ ಬಹಳಷ್ಟು ಜನರು ನಿಮ್ಮ ಹಾಡನ್ನು ಮೆಚ್ಚಿ ಪ್ರತಿಕ್ರಿಯಿಸುತ್ತಾರೆ.

ಇಲ್ಲಿ ಹಳೆಯ ,ಹೊಸ ಗೀತೆಗಳನ್ನು ಹವ್ಯಾಸಿ ಹಾಡುಗಾರರ ಧ್ವನಿಯಲ್ಲಿ ನೀವು ಕೇಳಬಹುದು .ನಿಮ್ಮ ಬಳಿ ಯಾವುದಾದರೂ ಹಾಡಿನ ಕರೋಕೆ ಇದ್ದರೆ ನೀವೂ ಒಂದು ಕೈ/ಬಾಯಿ ನೋಡಬಹುದು.ಯಾವಾಗಲೂ ಅದೇ ಸೋನು ನಿಗಮ್,ಕುನಾಲ್ ಗಾಂಜಾವಾಲಾ ಧ್ವನಿಯಲ್ಲಿ ಹಾಡುಗಳನ್ನು ಕೇಳಿ ಕೇಳಿ ಬೋರ್ ಆದವರಿಗೆ ಇದೊಂದು ರೀತಿಯ ಹೊಸ ಅನುಭವ .


ಹೀಗೆ ನೀವು ಅಪ್ ಲೋಡ್ ಮಾಡಿದ ಹಾಡನ್ನು ಅಪ್ಪಿ ತಪ್ಪಿ ಗುರುಕಿರಣ್ ಏನಾದ್ರೂ ಕೇಳಿ ಖುಷಿಯಾದರೆ ನಿಮಗೆ ಮುಂದಿನ ಸಿನೆಮಾದಲ್ಲಿ ಚಾನ್ಸ್ ಕೊಟ್ಟರೂ ಕೊಡಬಹುದು(ಅವರಿಗೆ ಮುಂದಿನ ಸಿನೆಮಾ ಸಿಗಬೇಕಷ್ಟೇ!)

ಜಾಸ್ತಿ ಹಗಲು ಕನಸು ಕಾಣಬೇಡಿ ,ಸುಮ್ಮನೆ ಮಾತಿಗೆ ಹೇಳಿದೆ!

ಸೂಚನೆ ೧ : ನೀವು ಕ್ಲಿಕ್ ಮಾಡಿದ ತಕ್ಷಣ ಹೋಮ್ ಪೇಜ್ ಗೆ ಹೋಗ್ತೀರಿ ಅಲ್ಲಿ ಸುಮ್ಮನೆ ಯಾವುದಾದರೂ ಹಾಡನ್ನು ಹುಡುಕಿ.ಉದಾ:anisutide
ಸೂಚನೆ ೨ : ಬಹಳಷ್ಟು ಜನರಿಗೆ ಈ ಸೈಟ್ ಈಗಾಗಲೇ ಪರಿಚಿತ.ಇದು ಗೊತ್ತಿಲ್ಲದವರಿಗೆ ಗೊತ್ತು ಮಾಡುವ ,ಹಾಗೆಯೆ ಈ ಮೂಲಕ ಭಾರತೀಯ Start Up ಕಂಪೆನಿಗಳಿಗೆ ಪ್ರೋತ್ಸಾಹ ನೀಡುವ ಒಂದು ಪುಟ್ಟ ಪ್ರಯತ್ನ.

Monday, April 20, 2009

ಕಾರ್ಪೋರೇಟ್ ಶೈಲಿ ..

ದೂರದಲ್ಲಿ ಪುಟ್ನಂಜ ಬರೋದು ಕಾಣಿಸಿತು.ಪಾಪ ಪ್ರತಿ ವರ್ಷ ಎಲೆಕ್ಶನ್ ಬಂದ್ರೆ ಹಬ್ಬ ಪುಟ್ನಂಜನಿಗೆ.ಇರೋ ಬರೋ ಅಭ್ಯರ್ಥಿಗಳ ಎಲೆಕ್ಷನ್ ಬ್ಯಾನರ್ ಗಳೆಲ್ಲಾ ನಮ್ ಪುಟ್ನಂಜನೇ ಹಾಕೋದು.ಆದ್ರೆ ಈ ಸಲ ಚುನಾವಣಾ ನೀತಿ ಸಂಹಿತೆಯ ಗುಮ್ಮ !

ಪಾಪ ನಾವು ಐಟಿಯವರಿಗೆಲ್ಲ ರಿಸೆಶನ್ ಬಂದ್ರೆ ಈ ಪುಟ್ನಂಜಂಗೂ ರಿಸೆಶನ್ ಬರೋದಾ ಅಂತ ನಾನು ಮನಸಲ್ಲೇ ಕೊರಗ್ತಾ ಇದ್ದೆ.

’ನಮಸ್ಕಾರ ಸಾರ್ ’ ಅಂದ ಪುಟ್ನಂಜ .

’ಪರ್ವಾಗಿಲ್ಲ ಪುಟ್ನಂಜ ಈ ಚುನಾವಣಾ ನೀತಿ ಸಂಹಿತೆಯಿಂದ ನಿನಗೆ ತುಂಬಾ ಪ್ರಾಬ್ಲೆಮ್ ಆಗಿದೆ ಅಂತ ನಾನಂದುಕೊಂಡಿದ್ರೆ ನೀನು ಮಾತ್ರ ನಗ್ ನಗ್ತಾ ಇದ್ದೀಯಾ ಏನ್ ಸಮಾಚಾರ ಆರ್ಟ್ ಆಫ್ ಲಿವಿಂಗ್ ಏನಾದ್ರೂ ಸೇರ್ಕೊಂಡಿಯಾ ’

’ಹೆ ಹೆ ಹಾಗೇನಿಲ್ಲ ಸಾರ್ ವ್ಯಾಪಾರ ಜೋರಾಗೇ ಐತೆ .ನನಗೇನೂ ಪ್ರಾಬ್ಲೆಮ್ ಆಗಿಲ್ಲ ’

’ಏನೋ ಪುಟ್ನಂಜ ಈ ನೀತಿ ಸಂಹಿತೆ ಅಂತ ಎಲ್ಲಾ ರಾಜಕೀಯ ಪಕ್ಷದವರೂ ತಲೆ ಕೆಡಿಸ್ಕೊಂಡಿದ್ರೆ ನೀನು ವ್ಯಾಪಾರ ಜೋರಾಗೇ ಇದೆ ಅಂತಿಯಲ್ಲ ಏನ್ ಸಮಾಚಾರ ? ’

’ಏನಿಲ್ಲ ಸಾರ್ ಈ ಸಲ ಸ್ವಲ್ಪ ಕಾರ್ಪೋರೇಟ್ ಸ್ಟೈಲ್ ನಲ್ಲಿ ಬಿಸಿನೆಸ್ ಮಾಡ್ತಾ ಇದ್ದೀನಿ . ಎರಡು ಟೀಮ್ ಮಾಡಿದ್ದೀನಿ ಸಾರ್ ,ಬೇರೆ ಬೇರೆ ಹೆಸರಿನಲ್ಲಿ . ಒಂದು ಟೀಮ್ ರಾಜಕೀಯ ಪಕ್ಷದವ್ರ ಹಿಂದೆ ಸುತ್ತಾಡುತ್ತೆ ,ಅವರು ಹೇಳಿದ ಕಡೆ ಬ್ಯಾನರ್ ಗಳನ್ನ ಹಾಕುತ್ತೆ . ಇನ್ನೊಂದು ಟೀಮ್ ಬಿ.ಬಿ.ಎಂ.ಪಿ ಗೋಸ್ಕರ ಕೆಲಸ ಮಾಡುತ್ತೆ .ಯಾರ್ಯಾರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸ್ತಾ ಇದ್ದಾರೆ ಅನ್ನೋದನ್ನು ಪತ್ತೆ ಹಚ್ಚಿ (ನಾವೇ ಹಾಕಿದ್ದಲ್ವ!) ಅವರು ಹಾಕಿದ ಬ್ಯಾನರ್ ಕಿತ್ತುಕೊಂಡು ಹೋಗುತ್ತೆ . ಬ್ಯಾನರ್ ಹಾಕಿದ್ದಕ್ಕೆ ಇನ್ನೂರು ,ಬ್ಯಾನರ್ ಕಿತ್ತು ಹಾಕಿದ್ದಕ್ಕೆ ನೂರು !’

Thursday, April 16, 2009

ಹಳೆ ಪಾತ್ರೆ,ಹಳೆ ಕಬ್ಬಿಣ .....

ಬೆಳಿಗ್ಗೆ ಬೆಳಿಗ್ಗೆ ಮನೆಯ ಕರೆಗಂಟೆ ಟ್ರಿಣ್ ಅಂದಿತು .ಶಪಿಸುತ್ತಾ ಎದ್ದು ನೋಡಿದ್ರೆ ಮಾದೇಶ.ಮಾದೇಶ ಹಳೇ ಪಾತ್ರೆ,ಪೇಪರ್ ತಗೊಳ್ಳೋನು.

"ಏನ್ ಮಾದೇಶ ಯಾವಾಗ್ಲೂ ದಾರೀಲಿ ಕಿರುಚಿ ನಿದ್ದೆ ಹಾಳು ಮಾಡೋನು ಇವತ್ತು ಸೀದಾ ಮನೆಯೊಳಗೆ ಬಂದು ನಿದ್ದೆ ಕೆಡಿಸಿದೆಯಲ್ಲಾ ,ಹೆಂಗೈತೆ ಮೈಗೆ " ಅಂದೆ ಸಿಟ್ಟಿನಿಂದ.

"ಏನಿಲ್ಲಾ ಸ್ವಾಮಿ ಒಂದು ಸಹಾಯ ಆಗಬೇಕಿತ್ತು ನಿಮ್ಮಿಂದ "

"ಏಯ್ ಕಾಸೆಲ್ಲಾ ಕೊಡಕ್ಕಾಗಲ್ಲ .ತಿಂಗಳ ಕೊನೆ ಬೇರೆ " ಗದರಿಸಿದೆ ನಾನು .

"ಕಾಸೇನೂ ಬೇಡ ಸ್ವಾಮಿ.ನಿಮಗೆ ಸಿನೆಮಾದವರೆಲ್ಲ ಗೊತ್ತಲ್ವ ಹಂಗೆ ಒಂದು ಸಹಾಯ ಆಗ್ಬೇಕಿತ್ತು ದಣಿ "

"ಏನೋ ಸಿನೆಮಾ ಹೀರೋ ಆಗ್ತಿಯೇನೋ " ಅಂದೆ ತಮಾಷೆಗೆ .

"ಇಲ್ಲಾ ಬುದ್ದಿ ’ಜಂಗ್ಲಿ ’ ಸಿನೆಮಾ ನೋಡಿದ್ದೀರಲ್ವ ಅದರಲ್ಲಿ ಒಂದು ಹಾಡು ಬರುತ್ತಲ್ವ ’ಹಳೇ ಪಾತ್ರೆ ,ಹಳೆ ಕಬ್ಬಿಣ ’ ಅದನ್ನು ಬರೆದೋರ ನಂಬರ್ ಬೇಕಿತ್ತು ಸ್ವಾಮಿ "

"ಅಯ್ಯೋ ದೇವ್ರೆ ಅದು ಯೋಗರಾಜ್ ಭಟ್ರು ಬರೆದಿರೋದು ಕಣ್ಲಾ .ನಿನಗ್ಯಾಕೆ ಅವರ ನಂಬರು ?"

"ಬುದ್ದಿ ಏನಿಲ್ಲ ಆ ಹಾಡು ಸ್ವಲ್ಪ ಬದಲಾಯಿಸಿ ಕೊಡ್ಬೇಕಿತ್ತು.ನಾನು ಎಂಗೂ ಹಳೆ ಪಾತ್ರೆ ,ಹಲೆ ಕಬ್ಬಿಣ ತಗೊಳ್ಳೋನಲ್ವ ನನಗೂ ದಿನಾ ರಸ್ತೆಯಲ್ಲಿ ’ಹಳೆ ಪಾತ್ರೆ ,ಕಬ್ಬಿಣ ಅಂತ ಕಿರುಚಿ ಕಿರುಚಿ ಸುಸ್ತಾಗಿ ಬಿಟ್ಟಿದೆ. ಅವರು ಸ್ವಲ್ಪ ಹಾಡು ಬದಲಾಯಿಸಿ ಬರೆದ್ರೆ ,ನಾನು ಅದನ್ನೆ ಮತ್ತೆ ಹಾಡಿಸಿ ಕ್ಯಾಸೆಟ್ ನ ನನ್ ಗಾಡಿನಲ್ಲಿ ಜೋರಾಗಿ ಹಾಕ್ಕೊಂಡು ಹೋಗ್ತೀನಿ. ಒಸಿ ವ್ಯಾಪಾರನೂ ಜೋರಾಗುತ್ತೆ ಅಲ್ವ ಬುದ್ದಿ ?"

"ಐಡಿಯಾ ಏನೋ ಜೋರಾಗಯ್ತೆ ಮಾದೇಶ ,ಆದ್ರೆ ಹಾಡು ಯಾಕೆ ಬದಲಾಯಿಸ್ಬೇಕು .ಹಂಗೆ ಚೆನ್ನಾಗಿದೆಯಲ್ಲ ? "

"ಚೆನ್ನಾಗೇನೋ ಬುದ್ದಿ ! ಆದ್ರೆ ಪ್ರೀತಿ ಗೀತಿ ಎಲ್ಲ ಬೇಡ ಇನ್ನೂ ಸ್ವಲ್ಪ ನಮ್ಮವೇ ಐಟಂಗಳನ್ನು ಸೇರಿಸ್ಬೇಕಿತ್ತು.ಹಳೇ ಪಾತ್ರೆ,ಕಬ್ಬಿಣ,ಸೀಸ ,ಬಟ್ಟೆ ,ಚಪ್ಪಲಿ,ಚೊಂಬು ,ಕೊಡ ,ಬಾಲ್ಟಿ ಹೀಗೆ .ಸ್ವಲ್ಪ ಚೆನ್ನಾಗಿ ಬರ್ ಕೊಟ್ರೆ ನಂಗೂ ಒಸಿ ಸಹಾಯ ಆಗ್ತಿತ್ತು.ಮತ್ತೆ ಆ ಹಾಡು ಹಾಡಿರೋರ್ ನಂಬರೂ ಕೊಡಿ ಬುದ್ದಿ ಸಕ್ಕತ್ತಾಗಿ ಹೊಂದುತ್ತೆ ನಂ ಬಿಸ್ನೆಸ್ ಗೆ ,ಅವರಿಂದಾನೇ ಹಾಡಿಸ್ಬೆಕು ಅಂತಿವ್ನಿ .ಬುದ್ದಿ ಇದೇನಾದ್ರೂ ಐಡಿಯಾ ಕಿಲಿಕ್ ಆಗ್ಬುಟ್ರೆ ನಮ್ಮ ಸಿದ್ದೇಶಂಗೂ ಒಂದು ಹಾಡು ಮಾಡಿ ಬೇಕಾಗುತ್ತೆ .ಅವನು ತರಕಾರಿ ಮಾರ್ತಾನಲ್ವ ..."

ಸೂಚನೆ:ಇದೊಂದು ಕಾಲ್ಪನಿಕ ಹಾಸ್ಯ ಲೇಖನ .

Wednesday, April 15, 2009

ಕಳ್ಳ - ಪೋಲಿಸ್ !

ಈ ಲೇಖನದ ಹೆಸರು ಕಳ್ಳ-ಪೋಲಿಸ್ ಅಂತ ಇಟ್ಟಿದ್ದು ನೋಡಿ ನಿಮಗೆಲ್ಲರಿಗೂ ಬಾಲ್ಯದ ನೆನಪು ಬಂದಿರುತ್ತೆ ಬಹುಷ! ಆದ್ರೆ ಚಿಕ್ಕಂದಿನಲ್ಲಿ ಆಡುತ್ತಿದ್ದ ಕಳ್ಳ-ಪೋಲೀಸ್ ಆಟದ ಬಗ್ಗೆ ಅಲ್ಲ ಸ್ವಾಮಿ ಈ ಲೇಖನ !ನಿಮ್ಮ ಬಾಲ್ಯದ ನೆನಪನ್ನು ಅನಗತ್ಯವಾಗಿ ಮೆಲುಕು ಹಾಕಿಸಿದ್ದರೆ ಕ್ಷಮೆ ಇರಲಿ .

ಇದೊಂದು ನಿಮ್ಮ ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವಂಥ ಲೇಖನ.ಆದರೆ ಯಾರಾದ್ರೂ ಹಿಂದಿ ಸಿನೆಮಾ ಹಾಡುಗಳ ’ಕಟ್ಟಾ’ ಅಭಿಮಾನಿಗಳು,ಸಂಗೀತ ನಿರ್ದೇಶಕರ ಫೋಟೋ ಇಟ್ಟು ಪೂಜಿಸುವಂಥವರಿದ್ರೆ ದಯವಿಟ್ಟು ಮುಂದೆ ಓದಬೇಡೀ .ಹಂಗೇ ಬಂದ ದಾರಿಗೆ ಸುಂಕವಿಲ್ಲ ಅಂತ ನನಗೆ ಶಪಿಸಿ ವಾಪಾಸ್ ಹೋಗಿ ಬಿಡಿ!

ಈಗ ವಿಷಯಕ್ಕೆ ಬರೋಣ.ನಾವೆಲ್ಲ ಹಿಂದಿ ಸಿನೆಮಾ ನೋಡಿರ್ತೀವಿ ಹಾಗೇ ಹಾಡುಗಳನ್ನೂ ಕೇಳೇ ಕೇಳಿರ್ತೀವಿ . ಸಿನೆಮಾ ನಿರ್ದೇಶಕರು ಕಥೆಗಳನ್ನು ಕದಿಯೋದು ಮಾಮೂಲಿ.ಹಾಗೆ ಸಂಗೀತ ನಿರ್ದೇಶಕರೂ ಕೂಡಾ ತಮ್ಮ ಹಾಡಿನ ಟ್ಯೂನ್ ಗಳನ್ನು ಎಲ್ಲೆಲ್ಲೆಂದಲೋ ಕಷ್ಟ ಪಟ್ಟು ಕದ್ದಿರ್ತಾರೆ. ಓಹ್ ಸಾರಿ ಎಲ್ಲಿಂದಲೋ ಪ್ರೇರಿತರಾಗಿ ಹಾಡಿನ ಟ್ಯೂನ್ ರಚಿಸಿರ್ತಾರೆ.

ಇಂಥ ಕದ್ದಿರೋ ,ಓಹ್ ಕ್ಷಮಿಸಿ ಎಲ್ಲಿಂದಲೋ ಪ್ರೇರಿತರಾಗಿರೋ ಟ್ಯೂನ್ ಗಳ ಮೂಲ ಹುಡುಕುವುದಕ್ಕೆಂದೇ ಒಂದು ವೆಬ್ ಸೈಟ್ ಇದೆ .ಈ ಲೇಖನ ಆ ನಿಮ್ಮನ್ನು ಆ ವೆಬ್ ಸೈಟ್ ಗೆ ಪರಿಚಯಿಸೋದು.

ಅಂಥ ಒಂದು ವೆಬ್ ಸೈಟ್ ನ ಹೆಸರೇ.... ಹೀಗೂ ಉಂಟೆ . ಓಹ್ ಸಾರಿ ಎಲ್ಲಾ TV 9 ಪ್ರಭಾವ.

ಅಂಥ ಒಂದು ವೆಬ್ ಸೈಟ್ ನ ಹೆಸರು ItwoFS

ಈ ವೆಬ್ ಸೈಟ್ ಗೆ ItwoFS ಅಂಥ ಹೆಸರು ಯಾಕೆ ಬಂತು ಅಂತೀರಾ ? ItwoFS ಅಂದ್ರೆ Inspirations in Indian Film Songs!

ಈ ವೆಬ್ ಸೈಟ್ ನಲ್ಲಿ ಯಾವ್ಯಾವ ಸಂಗೀತ ನಿರ್ದೇಶಕರು ಯಾವ್ಯಾವ ಭಾಷೆಯ ಹಾಡನ್ನು ಕದ್ದು ಟ್ಯೂನ್ ಕೊಟ್ಟಿದ್ದಾರೆ ಅನ್ನೋದನ್ನ ಸಾಕ್ಷಿ ಸಮೇತ ಕೊಟ್ಟಿದ್ದಾರೆ.ಅದಕ್ಕೆ ಈ ಲೇಖನದ ಹೆಸರು ಕಳ್ಳ ಪೋಲಿಸ್ ಅಂತ ಇಟ್ಟಿರೋದು!

ಆ ವೆಬ್ ಸೈಟ್ ನಲ್ಲಿ ಬಹುತೇಕ ಎಲ್ಲಾ ಹಿಂದಿ ಸಂಗೀತ ನಿರ್ದೇಶಕರ ಕದಿಯುವಿಕೆಯನ್ನು ಸಾಕ್ಷಿ ಸಮೇತ ಕೊಟ್ಟಿದ್ದಾರೆ.ಕೆಲವೊಮ್ಮೆ ನಮ್ಮ ನೆಚ್ಚಿನ ಹಾಡು ಎಲ್ಲಿಂದಲೋ ಕದ್ದಿರೋದು ಅನ್ನೋದು ಗೊತ್ತಾದಾಗ ತುಂಬಾನೇ ಬೇಜಾರಾಗುತ್ತೆ.ಆದ್ರೆ ಹಾಗಂತ ಸತ್ಯವನ್ನು ಅಲ್ಲಗಳೆಯಲಾಗದು ಅಲ್ವೆ?

ಈ ಪ್ರಪಂಚದಲ್ಲಿ ಯಾರೂ ಕಳ್ಳರಲ್ಲ ...... ಸಿಕ್ಕಿ ಬೀಳದ ಹೊರತು!

Friday, April 10, 2009

ಡಿಜಿಟಲ್ ತಂತ್ರಜ್ಞಾನ - ಏನಿದು ?

ಈಗ ಡಿಜಿಟಲ್ ಯುಗ .ಎಲ್ಲಿ ನೋಡಿದರೂ ಡಿಜಿಟಲ್ ತಂತ್ರಜ್ಞಾನದ ಬಗ್ಗೆ ಮಾತು.ಸಿನೆಮಾ ಆಗಲಿ,ಪತ್ರಿಕೋದ್ಯಮ ಆಗಲಿ ಎಲ್ಲಾ ಉದ್ಯಮದಲ್ಲೂ ಡಿಜಿಟಲ್ ತಂತ್ರಜ್ಞಾನದ ಬಗ್ಗೆ ಮಾತು ಬಂದೇ ಬರುತ್ತೆ .

ಆದರೆ ಬಹುತೇಕ ಜನರಿಗೆ ಈ ಡಿಜಿಟಲ್ ತಂತ್ರಜ್ಞಾನ ಏನು ಅನ್ನೋದು ಗೊತ್ತಿಲ್ಲ! ಗೊತ್ತಿರದೇ ಇರೋದು ತಪ್ಪೇನಲ್ಲ ಬಿಡಿ.ನಮ್ಮದಲ್ಲದ ಕೆಲಸದ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಲ್ಲ.ಆದರೆ ಈ ಡಿಜಿಟಲ್ ತಂತ್ರಜ್ಞಾನ ಏನು ಅನ್ನೋದು ಸ್ವಲ್ಪ ಗೊತ್ತಿದ್ರೆ ಒಳ್ಳೆಯದು .ಏನಂತೀರಿ?

ಹೆಸರೇ ಸೂಚಿಸುವ ಹಾಗೆ ಡಿಜಿಟಲ್ ಅಂದ್ರೆ ’ಸಂಖ್ಯೆ’ಗಳಿಗೆ ಸಂಬಂಧ ಪಟ್ಟದ್ದು ಅಂತ.ಅದರ ಅರ್ಥ ಇಷ್ಟೇ .ಯಾವುದೇ ಒಂದು ಮಾಹಿತಿಯನ್ನು ಸಂಖ್ಯೆಗಳಾಗಿ ಪರಿವರ್ತಿಸಿದರೆ ಅದೇ ಡಿಜಿಟಲ್ ತಂತ್ರಜ್ಞಾನ .

ಡಿಜಿಟಲ್ ತಂತ್ರಜ್ಞಾನ ಅಷ್ಟೊಂದು ಉಪಯುಕ್ತನಾ ಅಂತ ನಿಮಗೆಲ್ಲಾ ಸಂಶಯ ಬರಬಹುದು !

ಉತ್ತರ ’ಹೌದು’ ! ಖಂಡಿತ ಡಿಜಿಟಲ್ ತಂತ್ರಜ್ಞಾನ ತುಂಬಾನೇ ಉಪಯುಕ್ತ.ಅದಿಲ್ಲದೆ ಹೋಗಿದ್ರೆ ನಾವು ಈಗ ಅನುಭವಿಸುತ್ತಿರೋ ಎಲ್ಲಾ ಸೌಲಭ್ಯಗಳು ಮರೀಚಿಕೆಯಾಗೇ ಉಳಿಯುತ್ತಿತ್ತು.

ಡಿಜಿಟಲ್ ಬಗ್ಗೆ ಅರಿಯಬೇಕಾದ್ರೆ ಅದರ ವಿರುದ್ಧವಾದ ತಂತ್ರಜ್ಞಾನದ ಬಗ್ಗೆಯೂ ತಿಳಿಯಬೇಲ್ಲವೇ? ಆ ತಂತ್ರಜ್ಞಾನದ ಕೊರತೆಗಳ ಬಗ್ಗೆ ಅರಿವಿದ್ದರಷ್ಟೇ ಅಲ್ಲವೇ ಡಿಜಿಟಲ್ ತಂತ್ರಜ್ಞಾನದ ಉಪಯುಕ್ತತೆ ಬಗ್ಗೆ ಹೆಮ್ಮೆ ಮೂಡೋದು?

ಡಿಜಿಟಲ್ ತಂತ್ರಜ್ಞಾನಕ್ಕಿಂತ ಮುಂಚೆ ಇದ್ದ ತಂತ್ರಜ್ಞಾನ ಅಂದ್ರೆ ಅದೇ Analog ತಂತ್ರಜ್ಞಾನ.ನಮ್ಮ ತಾತ ಮುತ್ತಾತರು ಉಪಯೋಗಿಸ್ತಾ ಇದ್ದಿದ್ದು !ಡಿಜಿಟಲ್ ಇದರ ಮುಂದುವರಿದ ,ಸುಧಾರಿತ ತಂತ್ರಜ್ಞಾನ ಅಷ್ಟೇ!

ಏನು ಕನ್ಫ್ಯೂಸ್ ಮಾಡ್ತಾ ಇದ್ದೀನಾ ನಾನು? ಏನ್ ಮಾಡೋದು ಈ ವಿಷಯಾನೇ ಹಾಗೆ ! ಸ್ವಲ್ಪ ಎಡವಟ್ಟು!

ಹಿಂದೆ ಆಡಿಯೋ ಕ್ಯಾಸೆಟ್ ಇತ್ತಲ್ವ ಅದು ಅನಲಾಗ್ .ಈಗ ಐ-ಪಾಡ್ ಬಂದಿದೆ ಯಲ್ವ ಅದು ಡಿಜಿಟಲ್ ಅಷ್ಟೆ!

ಅನಾಲಾಗ್ ಸಂಕೇತಗಳನ್ನೇ ಡಿಜಿಟಲ್ ಆಗಿ ಪರಿವರ್ತಿಸೋದು ಅಷ್ಟೇ ಬೇರೆ ಇನ್ನೇನಿಲ್ಲ!

ಮೊದಲೇ ಹೇಳಿದ ಹಾಗೆ ಡಿಜಿಟಲ್ ಅಂದ್ರೆ ಸಂಖ್ಯೆಗಳಿಗೆ ಸಂಬಂಧಪಟ್ಟದ್ದು.ಅಂದ್ರೆ ಎಲ್ಲಾ ಸಂಕೇತಗಳನ್ನೂ ಸಂಖ್ಯೆಗಳಾಗಿ ಪರಿವರ್ತಿಸಿ ಶೇಖರಿಸಿಡೋದು ಅಷ್ಟೇ!

ಈ ಕಂಪ್ಯೂಟರ್ ಡಿಜಿಟಲ್ ತಂತ್ರಜ್ಞಾನಕ್ಕೆ ಅತ್ಯುತ್ತಮ ಉದಾಹರಣೆ.ಈ ಕಂಪ್ಯೂಟರ್ ನಲ್ಲಿ ಏನೇ ಶೇಖರಿಸಬೇಕಾದ್ರೂ ಅದು ಸಂಖ್ಯಾರೂಪದಲ್ಲಿರುತ್ತೆ.ನೀವೇನಾದ್ರೂ ಒಂದು MP3 ಹಾಡನ್ನು ಶೇಖರಿಸಬೇಕಾದ್ರೆ ಅದು ಸಂಖ್ಯಾರೂಪದಲ್ಲೇ ಹಾರ್ಡ್ ಡಿಸ್ಕ್ ನಲ್ಲಿ ಕೂತಿರುತ್ತೆ.ಅದನ್ನು ಸಂಖ್ಯಾರೂಪದಿಂದ ಮತ್ತೆ ಅನಲಾಗ್ ಗೆ ಪರಿವರ್ತಿಸಬೇಕು ಕೇಳಬೇಕಾದರೆ!ಹಾಗೆಯೇ ಸಿನೆಮಾನೂ ಸಂಖ್ಯಾರೂಪದಲ್ಲೇ ಇರುತ್ತೆ. ನೋಡಬೇಕಾದ್ರೆ ಅದನ್ನು ಮತ್ತೆ ಅನಲಾಗ್ ಆಗಿ ಪರಿವರ್ತಿಸಿ ನೋಡ್ತೀವಿ ಅಷ್ಟೇ !

ಹಾಗಿದ್ರೆ ಏನು ಪ್ರಯೋಜನ ಅಂತೀರಾ? ಅಲ್ಲೇ ಇರೋದು ಮಜಾ!

ಪ್ರಯೋಜನ ಅಂದ್ರೆ ತುಂಬಾ ಮಾಹಿತಿಯನ್ನು ಶೇಖರಿಸಿಡಬಹುದು.ಮತ್ತೆ ಸಂಖ್ಯಾರೂಪದಲ್ಲಿರೋ ಸಂಕೇತಗಳನ್ನು ಬೇರೆ ಬೇರೆ ರೂಪಕ್ಕೆ ಪರಿವರ್ತಿಸಬಹುದು,ಅದನ್ನು ಕುಗ್ಗಿಸಿ ಶೇಖರಿಸಿಡಬಹುದು .ಇನ್ನೂ ಏನೇನೂ ಪ್ರಯೋಜನಗಳಿವೆ.

ಈಗ ಹಾಡಿನ ಬಗ್ಗೆಯೇ ನೋಡೋಣ .ಹಾಡಂದ್ರೆ ಏನು ? ಅದು ಶಬ್ದ ಇನ್ನೇನೂ ವಿಶೇಷವಿಲ್ಲ ಹಾಡಲ್ಲಿ.

ಹೀಗಂದ್ರೆ ಸಂಗೀತಗಾರರು ಚಪ್ಪಲ್ಲಿ ಹುಡುಕ್ತಾ ಇರಬಹುದು ನನಗೆ ಹೊಡಿಯಲು!

ಆದರೆ ಶಾಂತವಾಗಿ ಯೋಚಿಸಿ ನೋಡಿ.ಹಾಂಡೆಂದರೆ ಏನು ?

ಅದು ಶಬ್ದ ! ಆದರೆ ಕ್ರಮಬದ್ಧವಾದ ಶಬ್ದ ಅಷ್ಟೇ. ಲಯವಿಲ್ಲದ ಶಬ್ದ ಕರ್ಕಶವಾಗಿರುತ್ತೆ.ಆದರೆ ಕ್ರಮಬದ್ಧವಾದ ಶಬ್ದ ಅದು ಶಬ್ದವೇ ಆಗಿದ್ದರೂ ಸಂಗೀತ ಅನ್ನಿಸಿಕೊಳ್ಳುತ್ತೆ.

ಹಳೆಯ ಕಾಲದಲ್ಲಿ ಈ ಶಬ್ದ/ಸಂಗೀತವನ್ನು ಕ್ಯಾಸೆಟ್ ಗಳಲ್ಲಿ ಶೇಖರಿಸಿಡ್ತಾ ಇದ್ದರು .ಈ ಸಂಗೀತ - ಅಂದ್ರೆ ಶಬ್ದದ ಏರಿಳಿತವನ್ನು ಹಾಗೇಯೇ ಶೇಖರಿಸಿಡ್ತಾ ಇದ್ರು ರೀಲ್ ನಲ್ಲಿ.ಹಾಗಾಗಿ ಬಹಳಷ್ಟು ಕ್ಯಾಸೆಟ್ ರೀಲ್ ಬೇಕಾಗ್ತಾ ಇತ್ತು ಶೇಖರಿಸೋದಕ್ಕೆ.ಇದೇ ಅನಲಾಗ್ ತಂತ್ರಜ್ಞಾನದ ಸಮಸ್ಯೆ.

ಆದ್ರೆ ಅದೇ ಅನಲಾಗ್ ಸಂಕೇತಗಳನ್ನು ಸಂಖ್ಯೆಗಳನ್ನಾಗಿ ಪರಿವರ್ತಿಸಿದ್ರೆ ಏನುಪಯೋಗ ತಿಳಿಯೋಣ ಬನ್ನಿ.

ನಿಮಗೆ ಒಂದು ದಿನದ ತಾಪಮಾನವನ್ನು ಅಳತೆ ಮಾಡಿ ಬರೆದಿಡಲು ನಿಮ್ಮ ಮೇಷ್ಟ್ರು ಹೇಳಿದ್ದಾರೆ ಅಂದುಕೊಳ್ಳಿ.ಆಗ ನೀವೇನು ಮಾಡಬಹುದು?

ಒಂದು ಲೇಖಕ್ ನೋಟ್ ಬುಕ್ ಹಾಗೂ ರೆನಾಲ್ಡ್ಸ್ ಪೆನ್ ತಗೊಳ್ತೀರಿ.ತಾಪಮಾನ ಬರೆಯಲು ಕೂತ್ಕೋತೀರಿ ಅಷ್ಟೇ!

ಆದ್ರೆ ಸಮಸ್ಯೆ ಅಂದ್ರೆ ತಾಪಮಾನ ಯಾವಾಗ ನೋಡಿ ಬರೆಯಬೇಕು ? ಪ್ರತಿ ಕ್ಷಣವೂ ಸೂರ್ಯನ ಶಾಖ ಬದಲಾಗುತ್ತಲೇ ಇರುತ್ತೆ.ಹಾಗಾಗಿ ನೀವು ಪ್ರತಿ ಸೆಕೆಂಡ್ ಗೆ ಒಂದು ಸಲ ಥರ್ಮೋ ಮೀಟರ್ ನೋಡಿ ತಾಪ ಮಾನ ಬರೆಯಬಹುದು.ಆದರೆ ಇಲ್ಲಿ ಒಂದು ಸಮಸ್ಯೆ ಇದೆ.ಹೀಗೆ ಪ್ರತಿ ಸೆಕೆಂಡ್ ನ ತಾಪಮಾನ ಬರೀತಾ ಇದ್ರೆ ನಿಮ್ಮ ಬಳಿ ಇರೋ ಲೇಖಕ್ ನೋಟ್ ಪುಸ್ತಕ ಹಾಗೂ ರಿಫೀಲ್ ಎರಡೂ ಒಂದೆರಡು ಘಂಟೆಯಲ್ಲಿ ಖಾಲಿಯಾಗೋದು ನಿಶ್ಚಿತ!

ಆಗ ನಿಮ್ಮ ತಲೆಗೊಂದು ಐಡಿಯಾ ಹೊಳೆಯುತ್ತೆ ! ಹೇಗೂ ಸೂರ್ಯನ ಶಾಖ ಪ್ರತಿ ಸೆಕೆಂಡ್ ಗೆ ಅಷ್ಟೊಂದು ಬದಲಾಗುವುದಿಲ್ಲ.ಹಾಗಾಗಿ ಸುಮಾರು ಒಂದು ಘಂಟೆಗೊಂದು ಸಲ ತಾಪಮಾನ ನೋಡಿ ಬರೆದುಕೊಂಡ್ರೂ ಅಷ್ಟೇನೂ ವ್ಯತ್ಯಾಸ ಬೀಳುವುದಿಲ್ಲ ಅನ್ನೋದು !

ಇದೇ ನೋಡಿ ಡಿಜಿಟಲ್ ತಲೆ !

ಅನಲಾಗ್ ಸಂಕೇತಗಳನ್ನು ಡಿಜಿಟಲ್ ಆಗಿ ಪರಿವರ್ತಿಸೋದರಲ್ಲಿ ಇಂಥದ್ದೇ ಒಂದು ಲಾಜಿಕ್ ಅಡಗಿದೆ.

ಸಂಗೀತವನ್ನು ಡಿಜಿಟಲ್ ಸಂಕೇತಗಳಾಗಿ ಹೇಗೆ ಪರಿವರ್ತಿಸಬಹುದು ಅಂತೀರಾ? ಸಿಂಪಲ್ ! ನೀವು ಸುಮ್ಮನಿದ್ದರೆ ಅದು ಸೊನ್ನೆ ಅಂದುಕೊಳ್ಳಿ. ಅದೇ ಜೋರಾಗಿ ಕಿರುಚಿದ್ರೆ ೨೦೦ ಅಂದುಕೊಳ್ಳಿ .

ಈಗ ಸೊನ್ನೆ ಮತ್ತೆ ಇನ್ನೂರರ ಮಧ್ಯೆ ಬರೋ ಸಂಖ್ಯೆಗಳೂ ಒಂದೊಂದು ಶಬ್ದದ ಏರಿಳಿತವನ್ನು ಪ್ರತಿನಿಧಿಸುತ್ತೆ. ಅಂದ್ರೆ ಸಲ್ಪ ಮೆಲ್ಲನೆ ಕಿರುಚಿದ್ರೆ ೨೦ ಅಂದುಕೊಂಡ್ರೆ ,ಅದಕ್ಕಿಂತ ತುಸು ಜೋರಾಗಿ ಕೂಗಾಡಿದ್ರೆ ೩೫ ಅಷ್ಟೇ!

ಸಂಗೀತವೂ ಇದೇ ರೀತಿ ಶಬ್ದದ ಏರಿಳಿತ.ಹಾಗಾಗಿ ಎಲ್ಲಾ ಪ್ರಕಾರದ ಸಂಗೀತವನ್ನೂ ಡಿಜಿಟಲ್ ಆಗಿ ಮಾರ್ಪಡಿಸಿ ಮೆಮೊರಿಯಲ್ಲಿ ಶೇಖರಿಸಿಡ್ತಾರೆ ಅಷ್ಟೇ.ನಿಮ್ಮ ಬಳಿ 32MB ಮೆಮೊರಿ ಇದ್ರೆ ಸುಮಾರು 3,20,00,000 ಸಂಖ್ಯೆಗಳನ್ನು ಶೇಖರಿಸಬಹುದು.

ಡಿಜಿಟಲ್ ತಂತ್ರಜ್ಞಾನದ ದೊಡ್ಡ ಲಾಭ ಅಂದ್ರೆ ಕಂಪ್ರೆಶನ್ . ಅಂದ್ರೆ ಒಂದು ದೊಡ್ಡ ಹಾಡನ್ನು ಡಿಜಿಟಲ್ ಸಂಕೇತಗಳಾಗಿ ಮಾರ್ಪಡಿಸಿದ ಮೇಲೆ ಅದರ ಸೈಜ್ ಅನ್ನು ಇನ್ನೂ ಕುಗ್ಗಿಸಬಹುದು!

ಅಸಲಿಗೆ MP3 ಅನ್ನೋದೇ ಒಂದು ಕಂಪ್ರೆಶನ್ ಟೆಕ್ನಾಲಜಿ !

ಹಾಗಿದ್ರೆ MP3 ಯ uncompressed format ಯಾವುದು ?

ಅದೇ ವೇವ್ (Wav) format.ಒಂದು ಹಾಡನ್ನು ಸಂಗೀತಗಾರ ಹಾಡುತ್ತಾ ಇರಬೇಕಾದ್ರೆ ಅದನ್ನು ಡಿಜಿಟಲ್ ಆಗಿ ಮಾರ್ಪಡಿಸಿ ಶೇಖರಿಸಿಟ್ಟಿದ್ರೆ ಅದು ವೇವ್ format ನಲ್ಲಿರುತ್ತೆ.ಅದನ್ನು ಕಂಪ್ರೆಸ್ ಮಾಡಿದ್ರೆ ಸಿಗೋದೇ MP3 Format.

ಒಂದು ಹಾಡು ವೇವ್ format ನಲ್ಲಿ 32MB memory ತಗೊಂಡ್ರೆ ಅದೇ ಹಾಡು MP3 Format ನಲ್ಲಿ ಬರೀ 5 MB ತಗೊಳ್ಳುತ್ತೆ ಆಷ್ಟೊಂದು ಕುಗ್ಗಿಸಬಹುದು ಡಿಜಿಟಲ್ ಸಂಕೇತಗಳನ್ನು !

ಹೇಗೆ ಅಂತೀರಾ? ನಿಮ್ಮ ಬಳಿ ಒಂದು ಆರು ಗಜದ ಸೀರೆ ಇದೆ ಅಂದುಕೊಳ್ಳಿ .ಅದನ್ನು ಒಣಗಿಸಬೆಕಾದ್ರೆ ತಂತಿಯಲ್ಲಿ ಹಾಕ್ತೀರಿ.ಆಗ ಬರೋಬ್ಬರಿ ಆರು ಗಜವೇ ಬೇಕಾಗುತ್ತೆ ಅದನ್ನು ಒಣಗಿಸಲು(ಇದು ವೇವ್ format)!
ಆದ್ರೆ ಅದನ್ನು ಕಪಾಟಿನಲ್ಲೀದಬೇಕಾದ್ರೆ ಚೆನ್ನಾಗಿ ಮಡಿಸಿ ಇಡ್ತೀರಾ ಅಲ್ವಾ? ಇದೇ ಡಿಜಿಟಲ್ ಕಂಪ್ರೆಶನ್ .ಈಗ ನೋಡಿ ಮಡಚಿ ಇಟ್ರೆ ಅದೆಷ್ಟು ಆರು ಗಜದ ಸೀರೆಗಳನ್ನು ಒಂದೇ ಕಪಾಟಿನಲ್ಲಿ ಶೇಖರಿಸಿಡಬಹುದು ! ಅಲ್ಲವೇ ?

ಇಂಥದ್ದೇ ಒಂದು ಕಂಪ್ರೆಶನ್ ತಂತ್ರಜ್ಞಾನವನ್ನು ಉಪಯೋಗಿಸೋದು MP3 ನಲ್ಲಿ.

ಸುಲಭವಾಗಿ ಹೇಳೋದಾದ್ರೆ ಹಾಡುಗಾರರ ಹಾಡು ರೆಕಾರ್ಡ್ ಮಾಡಬೇಕಾದ್ರೆ ಬಹಳಷ್ಟು ಅನಗತ್ಯಮಾಹಿತಿ ಅಂದರೆ ಮನುಷ್ಯರಿಗೆ ಕೇಳಿಸದ, ಉಪಯುಕ್ತವಲ್ಲದ ಮಾಹಿತಿಯೂ ರೆಕಾರ್ಡ್ ಆಗಿರುತ್ತೆ .ಈ ರೆಕಾರ್ಡ್ ಮಾಡಲ್ಪಟ್ಟ ಸಂಕೇತಗಳಿಂದ ಅನುಪಯುಕ್ತ ಮಾಹಿತಿಯನ್ನು ಅಳಿಸಿ ಬರೀ ಮನುಷ್ಯರಿಗೆ ಕೇಳಿಸುವಂಥ ಮಾಹಿತಿಯನ್ನಷ್ಟೇ ಶೇಖರಿಸಿಡೋದು MP3 ತಂತ್ರಜ್ಞಾನದ ಕೆಲಸ .

ಇದೇ ರೀತಿ ಎಲ್ಲವನ್ನೂ ಡಿಜಿಟಲ್ ಸಂಕೇತಗಳಾಗಿ ಶೇಖರಿಸಿಟ್ರೆ ಅದನ್ನು Process ಮಾಡೋದು ಸುಲಭ .ಅದೇ ಕಾರಣಕ್ಕೆ ಡಿಜಿಟಲ್ ಮಾಹಿತಿ ಅಷ್ಟೊಂದು ಪ್ರಸಿದ್ಧಿ ಆಗ್ತಾ ಇರೋದು.

ನಾವು ಬರೆಯವ ಬ್ಲಾಗ್ ,ಹಾಡು ,ಹಾಗೂ ಕಂಪ್ಯೂಟರ್ ನಲ್ಲಿರೋ ಎಲ್ಲವೂ ಕೊನೆಗೆ ಡಿಜಿಟಲ್ ಸಂಕೇತಗಳಾಗೇ ಶೇಖರಿಸಲ್ಪಡೋದು.

ಸುಮ್ಮನೆ ಒಂದು ಉದಾಹರಣೆ : ಯಾವುದೋ ಒಂದು ಶಬ್ದ ದೊಡ್ಡದಾಗಿ ಕಾಣಬೇಕಾದ್ರೆ ನೀವೇನ್ ಮಾಡ್ತೀರ ? Font Size ಹೆಚ್ಚು ಮಾಡ್ತೀರಾ ಅಲ್ವಾ?

ಅಂದರೆ ಮೊದಲಿಗೆ font size 10 ಇದ್ದು ಈಗ ನೀವು ಅದನ್ನು 15 ಮಾಡಬೇಕಾದ್ರೆ ಸುಮ್ಮನೆ 5 ಅನ್ನು add ಮಾಡಿದ್ರಾಯ್ತು ! ಇದೇ ಡಿಜಿಟಲ್ ಮಾಹಿತಿಯ ಉಪಯೋಗ.

ಮುಂಚೆ ಬರೀ ಆರು ಹಾಡುಗಳಿದ್ದ ಕ್ಯಾಸೆಟ್ ಎಷ್ಟು ದೊಡ್ಡದಾಗಿತ್ತು ಅಲ್ವಾ? ಆದ್ರೆ ಇವತ್ತು ಅದೇ ಕ್ಯಾಸೆಟ್ ಗಿಂತ ಚಿಕ್ಕದಾಗಿರೋ ಐ-ಪಾಡ್ ನಲ್ಲಿ ಸಾವಿರಾರು ಹಾಡು ಹಿಡಿಸುತ್ತೆ.

ಇದು ಸಾಧ್ಯವಾಗಿದ್ದು ಡಿಜಿಟಲ್ ತಂತ್ರಜ್ಞಾನದಿಂದ.ಇಂಥ ತಂತ್ರಜ್ಞಾನಕ್ಕೊದು ಸಲಾಂ ಹೇಳೋಣ !


ಸೂಚನೆ:ಇಲ್ಲಿ ಬರೆದಿರೋದು ಸಾಮಾನ್ಯ ಜನರಿಗೆ ಅರ್ಥವಾಗೋದಕ್ಕಷ್ಟೇ ! ಒಂದು MP3 Format ನ ಹಿಂದೆ Physics,Maths,ಹಾಗೆಯೇ ಬಹಳಷ್ಟು ವಿಜ್ಞಾನಿಗಳ,ಇಂಜಿನಿಯರ್ ಗಳ ಪರಿಶ್ರಮ ಅಡಗಿದೆ. ,ಮಾನವನ ಕಿವಿಯ ಸಾಮರ್ಥ್ಯ,ದೌರ್ಬಲ್ಯ ಗಳನ್ನೆಲ್ಲ ಅರಿತು ಈ MP3 Format ಅನ್ನು ಕಂಡು ಹುಡುಕಲಾಗಿದೆ !ಓದುಗರಿಗೆ ಅರ್ಥ ಮಾಡಿಸಲೆಂದೇ ಆದಷ್ಟು ಸರಳಗೊಳಿಸಲಾಗಿದೆ.

Sunday, April 5, 2009

ಒಂದು ಸಂತೋಷದ ಸುದ್ದಿ !

ಆರಂಭಿಕ ಎಚ್ಚರಿಕೆ : ನೀವು ತೀರಾ ಮಡಿವಂತ ಹುಡುಗಿ/ಮಹಿಳೆಯಾಗಿದ್ದಲ್ಲಿ ಈ ಲೇಖನ ಓದದೇ ಇರುವುದು ಒಳ್ಳೆಯದು.ಹಾಗೆಯೇ ತೀರಾ ಮಡಿವಂತ ಹುಡುಗರು/ಗಂಡಸರು ಬ್ಲಾಗ್ ಲೋಕದಲ್ಲಿಲ್ಲ ಅನ್ನೋ ಸತ್ಯ ನನಗೆ ಅರಿವಾಗಿರೋದರಿಂದ ಗಂಡಸರಿಗೆ ಈ ಎಚ್ಚರಿಕೆ ಅನ್ವಯಿಸುವುದಿಲ್ಲ.

ನಾನು ಈಗ ಬರೆಯ ಹೊರಟಿರುವುದು ತೀರಾ ಗಂಭೀರವಾದ ವಿಚಾರವೇನೋ ಅಲ್ಲ.ಆದರೂ ಕೆಲವರಿಗೆ ,ಕೆಲವು ಸಲ ಈ ವಿಚಾರ ತೀರಾ ಗಂಭೀರ ಪ್ರಮಾಣದಲ್ಲಿ ಕಾಡಿರುವ ನಿದರ್ಶನಗಳಿವೆ!

ಹುಡುಗಿಯರು ತೀರಾ ಸಾಮಾನ್ಯವಾಗಿ ಗಂಡಸರ ಬಗ್ಗೆ ಆಕ್ಷೇಪ ಎತ್ತೋದು ಗಂಡಸರ ತೀರಾ ಸಾಮಾನ್ಯವಾದ ಒಂದು ಅಭ್ಯಾಸದ ಬಗ್ಗೆ.

ರಸ್ತೆ ಬದಿಯಲ್ಲಿ,ತೆರೆದ ಬಯಲಲ್ಲಿ,ಲೈಟು ಕಂಬದ ಹಿಂದೆ ,ಮನೆಯ ಗೋಡೆಯ ಮುಂದೆ -ಇನ್ನೂ ನೇರವಾಗಿ ಆರೋಪಿಸೋದಾದರೆ ’ಎಲ್ಲೆಂದರಲ್ಲಿ ’ ಸೂಸು ಮಾಡುವ ’ಕೆಟ್ಟ(?) ಅಭ್ಯಾಸ ಗಂಡಸರಿಗಿದೆ ಅನ್ನೋದು ಜಗತ್ತಿನಲ್ಲಿರುವ ಎಲ್ಲಾ ಮಹಿಳೆಯರು ಬಡಪಾಯಿ ಗಂಡಸರ ಮೇಲೆ ಹಾಕುವ ಆರೋಪ.

’ಗಂಡಸರಿಗಿರುವಂಥ ಅನುಕೂಲಕರ ಸೌಲಭ್ಯ ಒಂದು ವೇಳೆ ನೀವು ಹೆಂಗಸರಿಗಿದ್ದಿದ್ದರೆ , ನೀವೂ ನಮ್ಮ ಹಾಗೆಯೇ ವರ್ತಿಸ್ತಾ ಇದ್ರಿ.ನಿಮಗೆ ಆ ಸ್ವಾತಂತ್ರ್ಯ ,ದೈಹಿಕ ಅನುಕೂಲ ಇಲ್ಲದೇ ಇದ್ದದ್ದರಿಂದ ನೀವು ತುಂಬಾ ಒಳ್ಳೆಯವರಾಗಿದ್ದೀರಿ ! ’ ಅನ್ನೋದು ನನ್ನ ಯಾವತ್ತಿನ ವಾದ .ಅದಕ್ಕಾಗಿ ಬಹಳಷ್ಟು ಜನ ಕೋಪಿಸಿಕೊಂಡಿದ್ದೂ ಇದೆ.Honesty is lack of opportunity ಅನ್ನೋ ಮಾತು ಬೇರೆ ಇದೆಯಲ್ವ ಅದೇ ರೀತಿ ! ಇರಲಿ ಬಿಡಿ ಹೆಂಗಸರನ್ನು ತೀರಾ ಕೆರಳಿಸೋದು ಅಪಾಯ ಅನ್ನೋ ಅರಿವಿದ್ದಿದ್ದರಿಂದ ’ಸರಿ ಮ್ಯಾಡಂ ನಾವು ಗಂಡಸ್ರು ಪರಮ ಕೊಳಕರು ಸರಿ ನಾ ?’ ಅನ್ನೋ ಅರ್ಥದ ಮಾತಾಡಿ ಯಾವಾಗಲೂ ವಾದಕ್ಕೆ ಮಂಗಳ ಹಾಡೋದು ನನ್ನ ಅಭ್ಯಾಸ.

ಈಗ ನನಗೆ ಒಂದು ಖುಷಿಯಾದ ಸುದ್ದಿ ಗೊತ್ತಾಗಿದೆ ! ಈ ಸುದ್ದಿ ಪಾಪ ಹುಡುಗಿಯರಿಗೆ/ಮಹಿಳೆಯರಿಗೆ ಖುಶಿ ಥರೋದಾಗಬೇಕಿತ್ತು .ಆದರೆ ಕಾರಣಾಂತರಗಳಿಂದ ಪಾಪ ನಮ್ಮ ಭಾರತೀಯ ನಾರಿಯರಿಗೆ ಇದು ಅಷ್ಟೊಂದು ಸಂತಸದ ಸುದ್ದಿ ಅಲ್ಲ! ಆದರೂ ಬಹಳಷ್ಟು ಪಾಶ್ಚಾತ್ಯ ಹುಡುಗಿಯರಿಗೆ ಇದು ಸಂತೋಷದ ಸುದ್ದಿಯಂತೆ (?)!

ಸುದ್ದಿ ಏನಂದ್ರೆ ಇನ್ನು ಮುಂದೆ ಹುಡುಗಿಯರೂ ನಮ್ಮ ಹಾಗೆ ಎಲ್ಲೆಂದರಲ್ಲಿ ನಿಂತು ಸೂಸು ಮಾಡುವಂಥ ಒಂದು ವಸ್ತುವನ್ನು ಪಾಶ್ಚಾತ್ಯರು ಕಂಡು ಹುಡುಕಿದ್ದಾರೆ. P-Mate ಅನ್ನೋ ಈ ಸಾಧನದಿಂದ ಇನ್ನು ಮುಂದೆ ಹುಡುಗಿಯರೂ ನಮ್ಮಂಥ ಕೊಳಕು ಹುಡುಗರಿಗೆ ಸಡ್ಡು ಹೊಡೆಯಬಹುದು!

ಇಲ್ಲಿ ತನಕ ’ನೀವು ಹುಡುಗಿಯರು ಯಾವುದರಲ್ಲಿ ಬೇಕಾದರೂ ಗಂಡಸರನ್ನು ಅನುಕರಿಸಬಲ್ಲಿರಿ ,ಆದರೆ ’ಒಂದ’ನ್ನು ಬಿಟ್ಟು !’ ಅನ್ನೋ ಗರ್ವದ ಮಾತು ಆಡಿಕೊಳ್ಳುತ್ತಾ ಇದ್ವಿ.

ಇನ್ನು ಮುಂದೆ ಆ ಮಾತು ಆಡೋ ಹಾಗಿಲ್ಲ :(

ಆದರೆ ಖುಶಿಯಾಗೋ ಸಂಗತಿ ಅಂದ್ರೆ ಇನ್ನು ಮುಂದೆ ’ಬರೀ ಗಂಡಸರಷ್ಟೇ ಕೊಳಕರು ’ ಅನ್ನೋ ಹೆಂಗಸರ ತಪ್ಪು ತಿಳುವಳಿಕೆ ಹೋಗಲಿದೆ.ಹಾಗೆಯೇ ’ರಸ್ತೆ ಬದಿಯಲ್ಲಿ ಸೂಸೂ ಮಾಡುವವರ ಸಂಘ’(ರ.ಬ.ಸೂ.ಮಾ.ಸಂ)ಕ್ಕೆ ಇನ್ನು ಮುಂದೆ ಹುಡುಗಿಯರಿಗೂ ಅರ್ಜಿ ಗುಜರಾಯಿಸಬಹುದು !

ಇಂಥ ಒಂದು ವಸ್ತು ಭಾರತೀಯ ಮಹಿಳೆಯರಿಗೆ ಉಪಯೋಗಿಯಾಗೋದು ಸಂಶಯವೇ .ಆದರೆ ಪ್ರಪಂಚದಾದ್ಯಂತ ಜನರು ಎಷ್ಟು ಕ್ರಿಯೇಟಿವ್ ಆಗಿ ಯೋಚಿಸ್ತಾರೆ ಅನ್ನೋದಕ್ಕೆ ಇದೊಂದು ಒಳ್ಳೆಯ ನಿದರ್ಶನ.

ಮಹಿಳಾ ಸ್ವಾತಂತ್ರ್ಯಕ್ಕೆ ಜೈ ಹೋ .....

Wednesday, April 1, 2009

ತಪ್ಪು ಮಾಡದವರು ಯಾರವ್ರೇ !

" ನಿನ್ನೆ ರಾತ್ರಿ ನನ್ನಿಂದ ಒಂದು ತಪ್ಪು ನಡೆದು ಹೋಯ್ತು ...." ಹೀಗೆ ಶುರುವಾಗುತ್ತೆ ಆ ಜಾಹೀರಾತು .ಏನಪ್ಪಾ ಅಂಥ ಮಾಡಬಾರದ ತಪ್ಪು ಅಂತ ಕುತೂಹಲದಿಂದ ಮುಂದೆ ನೋಡಿದರೆ ... " ನಿನ್ನೆ ರಾತ್ರಿ ನಾನು ಪ್ರಿಕಾಶನ್ ತಗೊಳ್ಳೋದು ಮರೆತು ಹೋದೆ .... " ಅಂತಾಳೆ ಹೆಂಡತಿ(!?) .

"ರೀ ನಾನು ಅಡಿಗೆಗೆ ಉಪ್ಪು ಹಾಕೋದು ಮರೆತು ಹೋದೆ " ಅಷ್ಟೇ ಸಲೀಸಾಗಿ "ನಾನು ಪ್ರಿಕಾಶನ್ ತಗೊಳ್ಳೋದು ಮರೆತು ಹೋದೆ " ಅನ್ನೋ ಕಾಲ ಬಂತಾ? ಅಯ್ಯೋ ವಿಧಿಯೆ !

ಇಲ್ಲಿ ಒಂದು ಕುತೂಹಲಕರವಾದ ಸಂಗತಿ ಅಂದರೆ ಆ ಜಾಹೀರಾತಿನಲ್ಲಿ ಹೆಂಡತಿ ಅಂತ ಬರ್ತಾಳಾದ್ರೂ ಅದು ಹೆಂಡತಿಯರಿಗಲ್ಲ !

ಗೆಳತಿ ,ಗರ್ಲ್ ಫ್ರೆಂಡ್ ಆ ಮಾತು ಹೇಳೋ ಥರ ಜಾಹೀರಾತು ಬರುವಷ್ಟು ಭಾರತ ಇನ್ನೂ ಮುಂದುವರೆದಿಲ್ಲ (ಕಡೆ ಪಕ್ಷ ಟಿ.ವಿ ಯಲ್ಲಿ!).ಹೆಂಡತಿಯರು ಅಂಥಾ ವಿಷಯದಲ್ಲಿ ಎಡವುತ್ತಾರೆ ಅನ್ನೋದು ನನಗಂತೂ ನಂಬಲಾರದ ವಿಷಯ .ನಾನು ಇನ್ನೂ ಮದುವೆ ಆಗದ ಕಾರಣ ನನಗಿನ್ನೂ ಆ ಬಗ್ಗೆ ಜಾಸ್ತಿ ಗೊತ್ತಿಲ್ಲ!

ಈ Unwanted-72 ,Mistake ಥರದ ಮಾತ್ರೆಗಳು ಯುವ ಜನತೆಯನ್ನೇ ಗಮನದಲ್ಲಿಟ್ಟುಕೊಂಡು ಮಾಡಿರೋದು ಅನ್ನೋದಂತೂ ಸತ್ಯ.ಇಂಥ ಮಾತ್ರೆಗಳ ಬಗ್ಗೆ ಅರಿವಿರದ ಯುವ ಜನತೆ ಈ ಥರದ ಮಾತ್ರೆಗಳನ್ನು ಗರ್ಭನಿರೋಧಕ ಮಾತ್ರೆಗಳಿಗೆ ಪರ್ಯಾಯವಾಗಿ ತೆಗೆದುಕೊಳ್ಳುತ್ತಾ ಇರೋದೂ ಅಷ್ಟೇ ನಿಜ.ಕಾಲೇಜು ಮೆಟ್ಟಿಲೇರಿದ ಯುವ ಜನತೆ ಇಂಥ ದುಸ್ಸಾಹಸಕ್ಕೆ ತೊಡಗೋದು ಸಾಮಾನ್ಯ .ಇದಕ್ಕೂ ಭಾರತೀಯ ಸಂಸ್ಕೃತಿಗೂ ಥಳುಕು ಹಾಕೋದೂ ಕಷ್ಟಸಾಧ್ಯ . ಅದೇ ಕಾರಣಕ್ಕೆ ನನಗೆ ನಟಿ ಖುಷ್ಬೂ ಹೇಳಿಕೆ ಕೊಂಚ ಮಟ್ಟಿಗೆ ವಾಸ್ತವಕ್ಕೆ ಹತ್ತಿರ ಅನ್ನಿಸುತ್ತೆ.

ಇಂಥ ಮಾತ್ರೆಗಳಿಂದಾಗೋ ದುಷ್ಪರಿಣಾಮಗಳನ್ನೂ ಹೇಳಿಕೊಡುವ ಪ್ರಯತ್ನ ಎಲ್ಲೂ ಆಗ್ತಾ ಇಲ್ಲ.ಬಹುಷಃ ಇಂಥ ಮಾತ್ರೆಗಳನ್ನು ಮಾರುತ್ತಿರುವ ಬಹುರಾಷ್ಟ್ರೀಯ ಕಂಪೆನಿಗಳಿಗೂ ಈ ಮಾತ್ರೆಗಳ ದುಷ್ಪರಿಣಾಮಗಳನ್ನು ಹೇಳುವ ಅಗತ್ಯ ಕಾಣಿಸ್ತಾ ಇಲ್ಲ.ಎಲ್ಲಾ ಕುರುಡು ಕಾಂಚಾಣದ ಮಹಿಮೆ.ಈ ಕುರುಡು ಕಾಂಚಾಣ ಬರೀ ಸಾಫ್ಟ್ವೇರ್ ಮಂದಿಯನ್ನಷ್ಟೇ ಹಾಳು ಮಾಡಿರುವುದು ಅಂದುಕೊಂಡಿದ್ದೆ ನಾನು !

ಈ ವಿಷಯ ಹೇಗೆ ನೆನಪಾಯ್ತು ಅಂದರೆ ,ಮೊನ್ನೆ ಹುಡುಗರಿಬ್ಬರು ಮಾತಾಡಿಕೊಳ್ತಾ ಇದ್ರು ’ಮಜಾ ಮಾಡೋದು ಮಗಾ ,ಎಡವಟ್ಟಾದ್ರೆ ಇದ್ದೇ ಇದೆಯಲ್ಲ Unwanted -72 ಅಂಥ ’ !

ತಪ್ಪು ಮಾಡುವುದೇ ಆದರೆ ತೊಂದರೆಗೀಡಾಗದ ಹಾಗೆ ತಪ್ಪು ಮಾಡಿ ಎಂದು ಬಹುಷ: ಯುವಜನತೆಗೆ ಹೇಳುವ ಕಾಲ ಬಂದಿದೆ.

ಅಂದ ಹಾಗೆ ನೀವು ತಪ್ಪು ಮಾಡಬೇಡಿ !

ಅಷ್ಟಕ್ಕೂ ಅಪ್ಪಿ ತಪ್ಪಿ ತಪ್ಪು ಮಾಡಿದರೆ ಇದ್ದೇ ಇದೆಯಲ್ಲ ................

Unwanted-72 ಅಲ್ಲ !

’ಮಠ’ ಚಿತ್ರದ ಹಾಡು ‘ತಪ್ಪು ಮಾಡದವರು ಯಾರವ್ರೇ, ತಪ್ಪೇ ಮಾಡದವರು ಎಲ್ಲವ್ರೇ ...’ !