
ಐದೂವರೆ ಲಕ್ಷ ಇಂಜಿನಿಯರ್ ಗಳಲ್ಲಿ ಯಾಕೆ ಒಬ್ಬರೂ ಬಿಲ್ ಗೇಟ್ಸ್ ,ಮೈಕಲ್ ಡೆಲ್ ,ಅಥವ ಸ್ಟೀವ್ ಜಾಬ್ ಆಗಿಲ್ಲ ಅನ್ನೋ ಅರ್ಥಪೂರ್ಣ ಪ್ರಶ್ನೆಯನ್ನು ಪ್ರೀತಿಯ ಪ್ರತಾಪ್ ಕೇಳಿದ್ದಾರೆ .ಕಳೆದ ವಾರ ಬರೆದದ್ದಕ್ಕಿಂತ ಉತ್ತಮವಾಗಿ ,ಅಧ್ಯಯನವನ್ನು ಮಾಡಿ ಬರೆದಿದ್ದಾರೆ ಪ್ರತಾಪ್ ಅದನ್ನು ಮೆಚ್ಚಬೇಕು.
ನನಗೂ ಈ ಪ್ರಶ್ನೆ ಆಗಾಗ ಕಾಡುತ್ತಿರುತ್ತದೆ .ನನಗೆ ನಾನೇ ಕೇಳಿಕೊಂಡಾಗ ಕಾಡುವ ಪ್ರಶ್ನೆ ಬಿಲ್ ಗೇಟ್ಸ್ ,ಮೈಕಲ್ ಡೆಲ್, ಅಥವಾ ಸ್ಟೀವ್ ಜಾಬ್ ರನ್ನು ಹುಟ್ಟು ಹಾಕುವ ಸಾಮರ್ಥ್ಯ ನಮಗಿದೆಯಾ?
ಧೀರೂಭಾಯಿ ಅಂಬಾನಿ,ಟಾಟಾ,ಬಿರ್ಲಾ ಗಳು ಹುಟ್ಟಿರೋ ದೇಶದಲ್ಲಿ ಬಿಲ್ ಗೇಟ್ಸ್ ತಯಾರಾಗೋದು ಕಷ್ಟವೇನಿಲ್ಲಬಿಡಿ.ಆದರೆ ನಮಗ್ಯಾಕೆ ನಾರಾಯಣ ಮೂರ್ತಿಗಳು,ಅಜೀಮ್ ಪ್ರೇಮ್ ಜಿ, ಅಥವ ರತನ್ ಟಾಟಾ ಬಿಲ್ ಗೇಟ್ಸ್ ರಷ್ಟೇ ಅಥವಾ ಅವರಿಗಿಂತ ಶ್ರೇಷ್ಟ ಅನ್ನಿಸಲ್ಲ? ನಾರಾಯಣ ಮೂರ್ತಿಗಳಿಂದ ಸಾಧ್ಯವಾಗದ್ದೇನನ್ನು ಬಿಲ್ ಗೇಟ್ಸ್ ಸಾಧಿಸಿದ?
ಬಿಲ್ ಗೇಟ್ಸ್ ಸಂಪಾದಿಸಿದಷ್ಟು ಹಣ ಸಂಪಾದಿಸಿಲ್ಲ ಅನ್ನೋದಷ್ಟೇ ಅಲ್ವ ಕೊರತೆ? ವಿಂಡೋಸ್ 98 ಗಿಂತ ವಿಂಡೋಸ್ ವಿಸ್ತಾ ಹೇಗೆ ಶ್ರೇಷ್ಠ ? ಯಾವ ಸೀಮೆಯ R&D ಯನ್ನು ಬಿಲ್ ಗೇಟ್ಸ್ ಮಾಡಿ ತೋರಿಸಿದ ?ತೋರಿಸಿದರೂ ಬೆಂಗಳೂರಿನ ಮೈಕ್ರೋಸಾಫ್ಟ್ ನ ಹುಡುಗ ಹುಡುಗಿಯರ ಶ್ರಮವೂ ಇದೆಯಲ್ಲ ಅಲ್ಲಿ?
ಖಂಡಿತ ನಾವು ಇನ್ನೂ ಕಾಂಪಿಟೀಟಿವ್ ಆಗೋದರ ಬಗ್ಗೆ ಯೋಚಿಸಬೇಕು .ಆದರೆ ಈ ಬಗ್ಗೆ ಚಿಂತನೆ ನಡೆಸಬೇಕಾದವರು ಯಾರು?
ಬೇರೆ ಯಾವ ಕ್ಷೇತ್ರದಲ್ಲಿ ಆ ಪರಿಯ R&D ಆಗಿದೆ ಹೇಳಿ ನೋಡೋಣ?
ಐದೂವರೆ ಲಕ್ಷ ಇಂಜಿನಿಯರ್ ಗಳಲ್ಲಿ ಒಬ್ಬನೂ ಬಿಲ್ ಗೇಟ್ಸ್ ಆಗಿಲ್ಲ ಒಪ್ಪೋಣ .ಭಾರತದಲ್ಲಿರೋ ಸಾವಿರಾರು ಹಿನ್ನೆಲೆ ಗಾಯಕಿಯರಲ್ಲ್ಯಾಕೆ ಒಬ್ಬರೂ ಲತಾ ಮಂಗೇಶ್ಕರ್ ಆಗಿಲ್ಲ?ಕನ್ನಡದಲ್ಲಿ ನೂರಾರು ನಿರ್ದೇಶಕರಿದ್ದಾರೆ ಯಾಕೆ ಇನ್ನೊಬ್ಬ ಪುಟ್ಟಣ್ಣ ಕಣಗಾಲ್ ನಮಗೆ ದೊರೆತಿಲ್ಲ?
ಬೆಂಗಳೂರಿನಲ್ಲಿ ಸಾವಿರಾರು ಹೋಟೆಲ್ ಗಳಿವೆ ಯಾಕೆ ಎಲ್ಲವೂ MTR ಆಗಿಲ್ಲ?
ಒಬ್ಬ ಬಿಲ್ ಗೇಟ್ಸ್ ಆಗಲು ಬೇಕಾದಷ್ಟು ತಾಳ್ಮೆ,ಧೈರ್ಯ,ಪ್ರೋತ್ಸಾಹ ನಮ್ಮ ಭಾರತೀಯರಲ್ಲಿಲ್ಲ ಅನ್ನೋದು ಒಂದು ಬೇಸರದ ಸಂಗತಿ.ಅಮೆರಿಕಾ ದಲ್ಲಿ ಒಬ್ಬ ಯುವಕ/ಯುವತಿ ವಯಸ್ಸಿಗೆ ಬಂದ ಕೂಡಲೇ ತಮ್ಮ ತಮ್ಮ ದಾರಿಯನ್ನು ನೋಡಿಕೊಳ್ಳುವ ಸ್ವಾತಂತ್ರ್ಯ ಅವರಿಗೆದೆ .ಭಾರತದಲ್ಲಿ ಆ ಸ್ವಾತಂತ್ರ್ಯ ಇದೆಯಾ? ಐದೂವರೆ ಲಕ್ಷ ಇಂಜಿನಿಯರ್ ಗಳಲ್ಲಿ ಅದೆಷ್ಟು ಜನ ಒತ್ತಾಯಕ್ಕೆ ಇಂಜಿನಿಯರ್ ಗಳಾಗಿಲ್ಲ? ಸೆಕೆಂಡ್ ಪಿ.ಯು.ಸಿ ಆದ ತಕ್ಷಣ ಬಿ.ಎಸ್.ಸಿ ಸೇರ್ತೀನಿ ಅನ್ನೋ ಮಗಳನ್ನು ಗದರಿಸಿ ಎಷ್ಟು ಜನ ಇಂಜಿನಿಯರಿಂಗ್ ಗೆ ಸೇರಿಸಿಲ್ಲ?ಅದೆಷ್ಟು ಜನ ಹುಡುಗರು ಪ್ರತಾಪ್ ಸಿಂಹ ಥರ ಪತ್ರಕರ್ತರಾಗಬೇಕು ಅನ್ನೋ ಆಸೆಯನ್ನು ಭಸ್ಮ ಮಾಡಿ ಸೈನ್ಸ್ ಸೇರಿಲ್ಲ.ಅದೆಷ್ಟು ಜನ ಹುಡುಗಿಯರು ಡ್ಯಾನ್ಸರ್ ಆಗಬೇಕೆಂಬ ಆಸೆ ಹತ್ತಿಕ್ಕಿ ಇಂಜಿನಿಯರ್ ಆಗಿಲ್ಲ?
ನಮಗೆ ಬೇಕಾದದ್ದನ್ನು ಪಡೆಯುವ ,ನಮಗೆ ಬೇಕಾದ ಹಾಗೆ ಬದುಕುವ ಸ್ವಾತಂತ್ರ್ಯ ಇದೆಯಾ ಭಾರತದಲ್ಲಿ?
ಅಮೆರಿಕಾಗೆ M.S ಮಾಡಲು ಹೋಗುವ ಇಂಜಿನಿಯರ್ ಅಲ್ಲಿ ಓದುವ ಜೊತೆಗೆ ಪೆಟ್ರೋಲ್ ಬಂಕ್ ನಲ್ಲೋ ,ಪಿಜಾ ಅಂಗಡಿಯಲ್ಲೋ ಕೆಲಸ ಮಾಡಿ ಓದುವ ಸುಂದರವಾದ ವಾತಾವರಣ ಇದೆ . ಭಾರತದಲ್ಲಿದೆಯ?
ಅಮೆರಿಕಾದಲ್ಲಿ ಕಾಲೇಜ್ ಡ್ರಾಪ್ ಔಟ್ ಒಬ್ಬ ಬಿಲ್ ಗೇಟ್ಸ್ ಆಗಬಲ್ಲ .ಆದ್ರೆ ಭಾರತದಲ್ಲಿ ಕಾಲೇಜ್ ಡ್ರಾಪ್ ಔಟ್ ಒಬ್ಬ ಮನೆಯ ಗೇಟ್ ದಾಟಿ ಹೊರ ಬರುವಷ್ಟೂ ಧೈರ್ಯ ,ಆತ್ಮಸ್ಥೈರ್ಯ ಬೆಳೆಸಿಕೊಂಡಿರಲ್ಲ -ಇನ್ನು ಹೇಗೆ ಸ್ವಾಮಿ ಬಿಲ್ ಗೇಟ್ಸ್ ಆಗೋದು?
ಇನ್ನು ಶಿಕ್ಷಣಕ್ಕೆ ಬರೋಣ.ನನಗೆ ಕಂಪ್ಯೂಟರ್ ಮುಟ್ಟುವ ಸೌಭಾಗ್ಯ ಸಿಕ್ಕಿದ್ದೇ ಕಾಲೇಜು ಮೆಟ್ಟಿಲೇರಿದ ಮೇಲೆ.ಅದೂ ಬ್ಲ್ಯಾಕ್ ಅಂಡ್ ವೈಟ್ ,MS DOS ಇದ್ದ ಕಂಪ್ಯೂಟರ್ .ಕಂಪ್ಯೂಟರ್ ಲ್ಯಾಬ್ ಒಳಗೆ ಹೋಕ್ಬೇದಾರೆ ಚಪ್ಪಲಿ ಹೊರಗೆ ಇಟ್ಟು ಹೋಗ್ಬೇಕಾಗಿತ್ತು.ಅಕಸ್ಮಾತ್ ಹವಾನಿಯಂತ್ರಕ ಸರಿ ಇಲ್ಲ ಅಂದ್ರೆ ಆ ದಿನ ಲ್ಯಾಬ್ ಇಲ್ಲ ! ಯಾಕಂದ್ರೆ ಹವಾ ನಿಯಂತ್ರಕ ಇಲ್ಲಾಂದ್ರೆ ಕಂಪ್ಯೂಟರ್ ಹಾಳಾಗುತ್ತೆ ಅನ್ನೋ ಭಯ ಟೀಚರ್ಗಳಿಗಿತ್ತು .ಆದ್ರೆ ನಾವು ಹವಾನಿಯಂತ್ರಕಗಳಿಲ್ಲದೆ ಕಂಪ್ಯೂಟರ್ ಗಳು ಕೆಲಸ ಮಾಡಲ್ಲ ಅನ್ನೋ ಮೂಢನಂಬಿಕೆ ಹೊಂದಿದ್ವಿ.
ಒಂದು ದಿನ ಲ್ಯಾಬ್ ನಲ್ಲಿ ಯಶವಂತ್ ಕಾನಿಟ್ಕರ್ ನ ಪುಸ್ತಕದಲ್ಲಿದ್ದ ಒಂದು ಗೇಮ್ ಪ್ರೋಗ್ರಾಮ್ ಬರೆದು ಅದನ್ನು execute ಮಾಡಲು ನೋಡ್ತಾ ಇದ್ದಾಗ ಮ್ಯಾಡಂ ಬಂದು ನೋಡಿ " ರೀ ಹೇಳಿದಷ್ಟು ಮಾಡ್ರಿ .ನಾನು To add N numbers program ಬರೀರಿ ಅಂದ್ರೆ ನೀವು ಗೇಮ್ ಪ್ರೋಗ್ರಾಮ್ ಮಾಡ್ತಾ ಇದ್ದೀರ get out I say " ಅಂದಿದ್ದು ಇಂದಿಗೂ ನೆನಪಿದೆ.
ಆಮೇಲೆ ಸಾರಿ ಕೇಳಿದ್ದಕೆ ಒಳಗೆ ಬಿಟ್ಟೂ " ರೀ ಇದೆಲ್ಲ ನೀವು ಮನೆಯಲ್ಲಿ ಮಾಡ್ಬೇಕು ಆಯ್ತಾ " ಅಂತ ಸಂತೈಸಿದ್ರು ಮ್ಯಾಡಮ್. ಮನೆಯಲ್ಲಿ ಕ್ಯಾಲ್ಕುಲೇಟರ್ ತೆಗೆಸಿಕೊಡೋದಕ್ಕೆ ಒದ್ದಾಡುವ ಕಾಲದಲ್ಲಿ ಕಂಪ್ಯೂಟರ್ ತಗೊಳ್ಳೋದು ಸಾಧ್ಯನಾ ? ಅಂತ ಕೇಳೋದಕ್ಕೆ ನನಗೆ ಧೈರ್ಯ ಸಾಲಲಿಲ್ಲ.
ಭಾರತದ ಯಾವ ಕಾಲೇಜಿನಲ್ಲಿ ಸ್ವ-ಉದ್ಯೋಗಕ್ಕೆ ಪ್ರೇರಣೆ ನೀಡಲಾಗುತ್ತೆ? ಇತ್ತೀಚೆಗೆ ಸ್ವ-ಉದ್ಯೋಗಕ್ಕೆಂದೇ ಕೆಲವು ಕಾಲೇಜುಗಳು ಶುರು ಆಗ್ತಾ ಇವೆ ಅದು ಒಳ್ಳೆಯ ಬೆಳವಣಿಗೆ .ಆಮೆರಿಕಾದಲ್ಲಿ ಸಾಫ್ಟ್ವೇರ್ ಗೆ ಇದ್ದಷ್ಟು ಬೇಡಿಕೆ ಭಾರತದಲ್ಲಿಲ್ಲ .ಅದಕ್ಕೆ ಬಹಳಷ್ಟು ಕಂಪನಿಗಳು ಭಾರತೀಯ ಮಾರುಕಟ್ಟೆಯನ್ನು ದೃಷ್ಟಿಯಲ್ಲಟ್ಟುಕೊಂಡು ಬಿಸ್ನೆಸ್ ಮಾಡ್ತಾ ಇಲ್ಲ.
ನೀವು ಭಾರತದ ಯಾವ ಮೂಲೆಗ ಹೋಗಿ ಮೆಡಿಕಲ್ ಸ್ಟೋರ್ ನವನಿಗೆ ಔಷಧಿ ಪಟ್ಟೀ ನೀಡಿ ,ಅವನು ಕರಾರುವಕ್ಕಾಗಿ ಅದೇ ಔಷಧಿಯನ್ನು ಹುಡುಕಿ ತಂದು ನಿಮಗೆ ಕೊಡ್ತಾನೆ.ಆದ್ರೆ ಅಮೆರಿಕಾದಲ್ಲಿ ಆ ಮೆಡಿಕಲ್ ಅಂಗಡಿಯವನಿಗೆ ಅದಕ್ಕೊಂದು ಸಾಫ್ಟ್ವೇರ್ ಬೇಕು! ಯಾವ ಔಷಧಿ ಎಲ್ಲಿದೆ ಅನ್ನೋದು ಅವನಿಗೆ ಹೇಳೋದೂ ಸಾಫ್ಟ್ವೇರ್ ,ಕೊನೆಗೆ ಬಿಲ್ ಪ್ರಿಂಟ್ ಮಾಡಿ ಕೊಡೋದೂ ಸಾಫ್ಟ್ವೇರ್ .
ಭಾರತದಲ್ಲಿ ಈ ಪರಿಯ ಅವಶ್ಯಕತೆ ಕಂಡು ಬಂದಿಲ್ಲದ್ದರಿಂದ ಭಾರತೀಯ ಮಾರುಕಟ್ಟೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಯಾವುದೇ ಪ್ರಾಡಕ್ಟ್ ತರೋದು ಅಷ್ಟೊಂದು ಲಾಭದಾಯಕವಲ್ಲ.ಭಾರತೀಯ ಕಂಪೆನಿಗಳಿಗೆ ತಮ್ಮದೇ ಆದ ಪ್ರಾಡಕ್ಟ್ ಗಳಿದ್ರೆ ಎಲ್ಲಾ ಸಮಸ್ಯೆಗೂ ಪರಿಹಾರ ಸಿಕ್ತಾ ಇತ್ತು ಅನ್ನೋ ನಂಬಿಕೆ ಪ್ರತಾಪ್ ರಲ್ಲಿದೆ .ನಮ್ಮ ನಾರಾಯಣ ಮೂರ್ತಿ ,ಅಜೀಮ್ ಪ್ರೇಮ್ ಜಿಯವರು R & D ಗಳಲ್ಲಿ ಸ್ವಲ್ಪ ಆಸಕ್ತಿ ತೋರಿಸಿದ್ರೆ ’ಈ ಪರಿಸ್ಥಿತಿ ’ ಬರ್ತಾ ಇರ್ಲಿಲ್ಲ ಅನ್ನೋದು ಪ್ರತಾಪ್ ಅನಿಸಿಕೆ.
ಆದ್ರೆ ಇನ್ಫೋಸಿಸ್ ,ವಿಪ್ರೋಗಳ ಬಳಿ ತಮ್ಮದೇ ಆದ ಪ್ರಾಡಕ್ಟ್ ಗಳಿದ್ರೂ ಅದಕ್ಕೆ ಮಾರುಕಟ್ಟೆ ಇಲ್ಲದ ಮೇಲೆ ಅವರದಾದರೂ ಏನ್ ಮಾಡ್ತಾರೆ ಅಲ್ವ? R & D ಏನಿದ್ರೂ ಆನೆಯನ್ನು ಸಾಕಿದ ಹಾಗೆ.ಆರ್ಥಿಕ ಹಿಂಜರಿತದ ಸಮಯದಲ್ಲಿ ಎಲ್ಲಾ ಕಂಪನಿಗಳೂ ಕತ್ತರಿ ಹಾಕೋದು ಮೊದಲು R&D ವಿಭಾಗಕ್ಕೆ .ವಿಪ್ರೋ,ಇನ್ಫೋಸಿಸ್ ಗಳ ಬಳಿ ತಮ್ಮದೇ ಆದ ಪ್ರಾಡಕ್ಟ್ ಗಳಿದ್ರೂ ಅದನ್ನು ಕಾಸು ಕೊಟ್ಟೂ ತಗೊಳ್ಳುವ ಮನಸ್ಥಿತಿ ನಮ್ಮಲ್ಲಿದೆಯೇ ?
ಯಾವ ಮನೆಯಲ್ಲಿ ಒರಿಜಿನಲ್ ವಿಂಡೋಸ್ ಇದೆ ಹೇಳಿ ನೋಡೋಣ ? ಪೈರೇಟೇಡ್ ಸಾಫ್ಟ್ವೇರ್ ಗಳನ್ನೇ ಬಳಸಿ ಅಭ್ಯಾಸವಾಗಿರುವ ನಮಗೆ ವಿಪ್ರೋ ,ಇನ್ಫೋಸಿಸ್ ಗಳ ಪ್ರಾಡಕ್ಟ್ ಗಳನ್ನು ಹಣ ಕೊಟ್ಟೂ ತಗೊಳ್ಳುವ ಮನಸ್ಸಿದೆಯೇ ?ನಾವೇನಿದ್ರೂ ಫ್ರೀ ಆಗಿರೋ ಯಾಹೂ ,ಜೀ ಮೇಲ್ ಬಳಸೋರು ! ಫ್ರೀ ಆಗಿ ಬ್ಲಾಗ್ ಸ್ಪಾಟ್ ನಲ್ಲಿ ಬ್ಲಾಗ್ ಬರಿಯೋರು .ಕಾಸು ಕೊಟ್ಟೂ ಪ್ರಾಡಕ್ಟ್ ತಗೊಳ್ಳಿ ಅಂದ್ರೆ ಯಾರು ತಗೋತಾರೆ ಸ್ವಾಮಿ ?
ನಾನು ಚಿಕ್ಕವನಿರ್ಬೇಕಾದ್ರೆ ಮುಂಗಾರು ಹಾಗೂ ಉದಯವಾಣಿ ಅಂತ ಎರಡು ಪೇಪರ್ ಗಳು ಬರ್ತಾ ಇದ್ದವು ಮನೆಗೆ. ಎರಡೂ ಕಪ್ಪು-ಬಿಳುಪಿನವು . ಇಪ್ಪತ್ತೈದು ವರ್ಷಗಳ ಮೇಲಾಯ್ತು ಕಪ್ಪು-ಬಿಳುಪು ಹೋಗಿ ಕಲರ್ ಮಾಡಿದ್ದು ಬಿಟ್ರೆ ಈ ಪತ್ರಿಕೆಗಳು ಏನು R&D ಮಾಡಿವೆ ? ಏನು ಮಹತ್ತರ ಬದಲಾವಣೆಯನ್ನು ತಂದಿವೆ?ಅದರಲ್ಲೂ ಪಾಪ ಮುಂಗಾರು ಅನ್ನೋ ಪೇಪರೇ ಇಲ್ಲ ಈಗ!
ಸಂಪಾದಕರು ಬದಲಾದರು ,ಬಣ್ಣ ಬದಲಾಯಿತು ಅಷ್ಟೇ ಮತ್ತೆನೂ ಬದಲಾಗಿಲ್ಲ.ಯಾಕಂದ್ರೆ ಪೇಪರ್ ನವರಿಗೆ R&D ಅನ್ನೋದು ನಮಗೆ ಸಂಬಂಧಪಟ್ಟದ್ದಲ್ಲ ಅನ್ನೋ ಭಾವನೆ ಬಂದಿರಬೇಕು.
India ಅಂದ್ರೆ Cost advantage ಅಷ್ಟೆ ಅಲ್ಲ lesser cost with better quality ಅನ್ನೋದು ಯಾರಿಗೂ ಮನದಟ್ಟಾಗ್ತಾನೇ ಇಲ್ಲ !
ಇಸ್ರೋ ಗೆ ಮೊನ್ನೆ ಎಂಟು ಉಪಗ್ರಹ ಉಡಾವಣೆ ಮಾಡೋ ಅವಕಾಶ ಸಿಕ್ಕಿತು.ಅಲ್ಲೂ ಕೆಲಸ ಮಾಡಿದ್ದು cost advantage ! ಆ ಉಪಗ್ರಹಗಳ ಮಾಲಕರು ’ಭಾರತದ ಕಮ್ಮಿ ಖರ್ಚಿಗೆ ಅತ್ತ್ಯುತ್ತಮ ಉಡಾವಣಾ ಸಾಮರ್ಥ್ಯದ ಮೇಲೆ ವಿಶ್ವಾಸವಿದ್ದದ್ದಕ್ಕೇ ಇಸ್ರೋ ಗೆ ಆ ಕೆಲಸ ವಹಿಸಿದ್ದು ಅನ್ನೋದು ನಮಗೆ ಅನಿಸಲ್ಲ.ಚಂದ್ರಯಾನ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಪಡೆದದ್ದು ಭಾರತೀಯ ವಿಜ್ಞಾನಿಗಳ ಸಾಮರ್ಥ್ಯದ ಜೊತೆ ಜೊತೆಗೆ ,ಅಮೆರಿಕಾ ಮಾಡೋ ಖರ್ಚಿನ ಅರ್ಧಕ್ಕಿಂತ ಕಡಿಮೆ ಖರ್ಚಿನಲ್ಲಿ ಉಡಾವಣೆ ನಡೆಸಿದ್ದು !
ಸುಹಾಸ್ ಗೋಪಿನಾಥ್ ತಮ್ಮ ಹದಿನಾಲ್ಕನೇ ವಯಸ್ಸಿಗೆ ಕಂಪೆನಿಯೊಂದರ CEO ಆಗಿ ಪ್ರಪಂಚದ ಅತ್ಯಂತ ಕಿರಿಯ CEO ಅನ್ನೋ ಖ್ಯಾತಿ ಪಡೆದವರು.ಅವರ ಕಂಪೆನಿ ಇರೋದು ಮತ್ತಿಕೆರೆಯಲ್ಲಿ ,ಆದ್ರೆ ಪಾಪ ಅವರು ಕಂಪೆನಿ ಮೊದಲಿಗೆ ಸ್ಥಾಪಿಸಿದ್ದು ಅಮೆರಿಕಾದಲ್ಲಿ! ಭಾರತ ಕಾನೂನಿನ ಕಟ್ಟುಪಾಡುಗಳು ಅವರಿಗೆ ಕಂಪೆನಿ ಸ್ಥಾಪಿಸಲು ಅವಕಾಶ ಮಾಡಿ ಕೊಟ್ಟಿಲ್ಲ.ಅದಕ್ಕೇ ಅವರು ಅಮೆರಿಕಾದಲ್ಲಿ ಅದರ ಮುಖ್ಯ ಕಚೇರಿಯನ್ನು ಸ್ಥಾಪಿಸಿದರು.ಈಗ ಹೇಳಿ ಅವರನ್ನು ಬಿಲ್ ಗೇಟ್ಸ್ ಆಗಲು ತಡೆದದ್ದು ಯಾರು?
ಇಂಜಿನಿಯರಿಂಗ್ ಮುಗಿಸಿ ಬೇಗ ಕೆಲಸ ಸಿಕ್ಕಿದ್ರೆ ಸೈ .ಇಲ್ಲಾಂದ್ರೆ ಮನೆಯವರೇ ನಮ್ಮ ನಾಮರ್ಥ್ಯದ ಬಗ್ಗೆ ಅನುಮಾನಿಸ್ತಾರೆ.ಅಂಥ ಸನ್ನಿವೇಶಗಳಲ್ಲಿ ಒಬ್ಬ ಹೇಗೆ ಬಿಲ್ ಗೇಟ್ಸ್ ಆಗುವ ಕನಸು ಕಾಣಬಲ್ಲ?
ಬೆಂಗಳೂರಿನಲ್ಲಿ ಸಾವಿರಾರು ಪತ್ರಕರ್ತರಿದ್ದಾರೆ.ಆದ್ರೆ ಅವರ್ಯಾಕೆ ತಮ್ಮ ತಮ್ಮ ಕೆಲಸಗಳಲ್ಲಿ ಸಂತುಷ್ಟರಾಗಿದ್ದಾರೆ.ಯಾಕೆ ಯಾರೊಬ್ಬನೂ ರವಿ ಬೆಳಗೆರೆಯ ಹಾಗೆ ಸ್ವತಂತ್ರವಾದ ಪತ್ರಿಕೆ ಹೊರ ತರಲು ಮುಂದಾಗಲ್ಲ?ಯಾವ ಭಯ ಅವರನ್ನು ಕಾಡುತ್ತೆ?ಬಿಲ್ ಗೇಟ್ಸ್ ಬರೀ ಸಾಫ್ಟ್ವೇರ್ ಕ್ಷೇತ್ರದಲ್ಲಷ್ಟೆ ಅಲ್ಲ ಪತ್ರಿಕೋದ್ಯಮದಲ್ಲೂ ಆಗಬಹುದಲ್ಲವೇ ?
ಅಷ್ಟಕ್ಕೂ ನಾರಾಯಣ ಮೂರ್ತಿಗಳು ಪಾಟ್ನಿ ಕಂಪ್ಯೂಟರ್ಸ್ ನ ಕೆಲಸ ಬಿಡುವ ಧೈರ್ಯ ಮಾಡಿ ಇನ್ಫೋಸಿಸ್ ಸ್ಥಾಪಿಸಿದ್ದಕ್ಕೆ ಅವರು ಭಾರತದ ಬಿಲ್ ಗೇಟ್ಸ್ ಆಗಿದ್ದು .ಇಲ್ಲಾಂದ್ರೆ ಪಾಟ್ನಿಯಲ್ಲೆ ಜೀವನ ಪರ್ಯಂತ ದುಡಿದು ನಿವೃತ್ತಾರಾಗ್ತಾ ಇದ್ರೇನೋ .ನಾರಾಯಣ ಮೂರ್ತಿಗಳು ಕಂಪೆನಿ ಸ್ಥಾಪಿಸಲು ತನು-ಮನ-ಧನ ಸಹಕಾರ ನೀಡಿದ್ದು ಸುಧಾ ಮೂರ್ತಿಯವರು.
ಬಿಲ್ ಗೇಟ್ಸ್ ಆಗೋ ಧೈರ್ಯ ,ಸಾಮರ್ಥ್ಯವನ್ನು ನೀಡುವವರು ಭಾರತದಲ್ಲಿ ತುಂಬಾ ಕಮ್ಮಿ.ಸ್ವ ಉದ್ಯೊಗಕ್ಕೆ ಕೈ ಹಾಕಿ ಕೈ ಸುಟ್ಟುಕೊಂಡ್ರೆ , " ನಾನು ಮೊದಲೇ ಹೇಳಿದ್ದೆ ವಿಪ್ರೋ ನೋ ,ಇನ್ಫೋಸಿಸ್ ಸೇರ್ಕೊ ಅಂತ ಕೇಳಿಲ್ಲ .ಬಿಲ್ ಗೇಟ್ಸ್ ಆಗ್ತೀನಿ ಅಂದ .ಈಗ ನೋಡಿ ಬಿಲ್ ಗೇಟ್ಸ್ ಬಿಡಿ ಗೇಟ್ ಮುಂದೆ ಇಷ್ಟೊಂದು ಬಿಲ್ ಗಳು ಬಿದ್ದಿವೆ ಒಂದನ್ನೂ ಕಟ್ಟೋ ಯೋಗ್ಯತೆ ಇಲ್ಲ ....." ಅಂತ ಚುಚ್ಚು ಮಾತಾಡ್ತಾರೆ.
ಎಲ್ಲರಿಗೂ ಸುಧಾಮೂರ್ತಿಯವರ ಹಾಗೆ ಒಳ್ಳೆಯ ಹೆಂಡತಿ ಸಿಗಲ್ವಲ್ಲ !
ಜಗಲಿ ಹಾರದವನು ಆಕಾಶಕ್ಕೆ ಹಾರಿಯಾನೇ ಅನ್ನೋ ಮಾತಿದೆ.ಜಗಲಿ ಹಾರಿಯಾಗಿದೆ ಇನ್ನು ಆಕಾಶಕ್ಕೆ ಏಣಿ ಇಡೋದಷ್ಟೇ ಬಾಕಿ.