ಒಬ್ಬ ಕನ್ನಡದ ದೈತ್ಯ ಬರಹಗಾರರರು! ಅವರ ಬರಹಗಳನ್ನು ನಾನು ಬಹಳಷ್ಟು ಮೆಚ್ಚಿ ಓದ್ತಾ ಇದ್ದೆ.ಲೇಖಕರು ಹಿಂದೆ ಪಟ್ಟಿದ್ದ ಪಾಡು,ಬಡತನದಲ್ಲಿ ಬೆಂದು ಮೇಲೆ ಬಂದ ಬಗೆ ಇದೆಲ್ಲಾ ತುಂಬ ಹೃದಯಸ್ಪರ್ಶಿ,ಆಪ್ಯಾಯಮಾನವಾಗಿತ್ತು ಆಗ ನನಗೆ.ಬಹಳಷ್ಟು ಸಲ ಪ್ರೇರಣಾ ಶಕ್ತಿಯೂ ಆಗಿತ್ತು.
ಆದ್ರೆ ಈಗೀಗ ಹಿಡಿಸ್ತಾ ಇಲ್ಲ!ಕಾರಣ ಗೊತ್ತಿಲ್ಲ.
ನಾವು ಬಹುಷಃ ಬಡತನವನ್ನು ಇಷ್ಟಪಡದಿದ್ದರೂ ಬಡತನದ ಬಗ್ಗೆ ಕಥೆ,ಕವನಗಳನ್ನ ತುಂಬಾ ಇಷ್ಟ ಪಡ್ತೀವೇನೋ ಅನ್ಸುತ್ತೆ.ಒಬ್ಬ ಲೇಖಕ ತಾನು ಕೊಂಡ ದುಬಾರಿ ಕಾರಿನ ಬಗ್ಗೆ ಏನಾದ್ರೂ ಬರೆದ್ರೆ ನಮಗೆ ಬಹುಷಃ ಹಿಡಿಸದೆ ಹೋದೀತೇನೋ.ಆದ್ರೆ ಅದೇ ಲೇಖಕ ತಾನು ಹೊಟ್ಟೆಗಿಲ್ಲದೆ,ಕೆಲಸ ಇಲ್ಲದೆ, ಪಟ್ಟ ಪಾಡೇನಾದ್ರೂ ಬರೆದ್ರೆ ತುಂಬಾ ಇಷ್ಟ ಪಟ್ಟು ಓದ್ತೀವಿ.
ನಾವು ಬಡವರಾಗಿರಲು ಖಂಡಿತ ಇಷ್ಟಪಡದಿದ್ದರೂ ’ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು ’ ಕವಿತೆ ಇಷ್ಟ ಪಡ್ತೀವಿ( ಕವಿತೆಯ ಆಶಯ ಅದಲ್ಲ ಅಂತ ಬಯ್ಯಬೇಡಿ ದಯವಿಟ್ಟು!)
ಲೇಖಕ ಊಟಕ್ಕೆ ಕಾಸಿಲ್ಲದೆ ಇದ್ದಾಗ ಕಮ್ಮಿ ಖರ್ಚಿಗೆ ಜಾಸ್ತಿ ತಿನ್ನೋಕೆ ಸಿಗುತ್ತೆ ಅನ್ನೋ ಕಾರಣಕ್ಕೆ ಶಿವಾಜಿನಗರಕ್ಕೆ ಹೋಗಿ ದನದ ಮಾಂಸ ತಿಂದ ಘಟನೆಯನ್ನು ಬರೆದಾಗ ಓದೋ ಖುಷಿ(ಖುಷಿ ಅಂದ್ರೆ ಬಹುಷಃ ಸರಿ ಆಗಲ್ಲ!) ’ನನ್ನ ಅಳಿಯ ಒಂದು ಕೋಟಿ ಖರ್ಚಿ ಮಾಡಿ ಜಿಮ್ ಮಾಡಿದ್ದಾನೆ ’ ಅನ್ನೋದನ್ನು ಬರೆದಾಗ ಯಾಕೆ ಆಗಲ್ಲ ?
ಹೊಸ ಫ್ರಾಕ್ ಕೊಡಿಸಲು ಅಪ್ಪನ ಬಳಿ ಕಾಸಿಲ್ಲದೇ ಇದ್ದಾಗ ಮಗಳು ಹಳೇ ಫ್ರಾಕ್ ಹಾಕ್ಕೊಂಡು ಹೋಗ್ತೀನಿ ಅಂತ ಹೇಳಿದ್ದನ್ನು ಬರೆದಾಗ ಓದಿದಷ್ಟು ಇಂಟೆನ್ಸ್ ಆಗಿ ’ಮಗಳಿಗೆ ಈಗ ಐದಂಕಿ ಸಂಬಳ ’ ಅಂತ ಲೇಖಕ ಹೆಮ್ಮೆಯಿಂದ ಬರೆದಾಗ ಯಾಕೆ ಓದಿಸಿಕೊಂಡು ಹೋಗಲ್ಲ?
ಕಾಸಿಲ್ಲದೆ ಇದ್ದದ್ದಕ್ಕೆ ಸಣ್ಣ ಸಣ್ಣ ಪುಸ್ತಕಗಳನ್ನು ಅಂಗಡಿಯಲ್ಲೇ ಓದ್ತಿದ್ದೆ ಅನ್ನೋದನ್ನು ಲೇಖಕ ಬರೆದಾಗ ಆಗೋ ಖುಷಿ ’ನಾನು ಕಾದಂಬರಿಗಳನ್ನು ಅಮೆಝಾನ್ ಕಿಂಡಲ್ ನಲ್ಲೇ ಓದೋದು ’ ಅಂತ ಹೇಳಿದಾಗ ಯಾಕೆ ಆಗಲ್ಲ?
’ಮುಕ್ತ ಮುಕ್ತ ’ದ ಪೆದ್ದು ಪೆದ್ದಾಗಿ ಮಾತಾಡೋ ಶಾರದತ್ತೆ ಇಷ್ಟ ಆದಷ್ಟು ’ಕ್ಯೋಂಕಿ ಸಾಸ್ ಭಿ ’ ಸೀರಿಯಲ್ ನ ಜರತಾರಿ ಸೀರೆಯ ಆಂಟಿಯರು ಯಾಕೆ ಇಷ್ಟ ಆಗಲ್ಲ?
ಎಲ್ಲೋ ನಮಗೆ ಶ್ರೀಮಂತರು ಅಂದ್ರೆ ಸರಿ ಇಲ್ಲ,ಅವರಿಗೆ ಸಂವೇದನೆಗಳೇ ಇಲ್ಲ ಅನ್ನೋ ಭಾವನೆ ಮೂಡಿದೆ ಅನ್ಸುತ್ತೆ.ಅಥವಾ ನಮಗೆ ಬೆರೆಯವರ ಉನ್ನತಿ,ಶ್ರೀಮಂತಿಕೆ ಮೆಚ್ಚೋದಕ್ಕೆ ಆಗಲ್ವೇನೋ!
ನಾನೂ ಶ್ರೀಮಂತ,ಅವಳೂ ಶ್ರೀಮಂತೆ , ಮರ್ಸಿಡಿಸ್ ನಲ್ಲೇ ನಮ್ಮ ಓಡಾಟ ಅನ್ನೋ ಥರ ಕವಿತೆಗಳು ನಮಗೆ ಇಷ್ಟವಾಗೋದೇ ಇಲ್ವೇನೋ?
ಗುಲಾಬಿ ಟಾಕೀಸ್ ನ ಗುಲಾಬಿ ಒಂದು ವೇಳೆ ಶ್ರೀಮಂತೆ ಆಗಿದ್ರೆ ನಾವು ಅವಳನ್ನು ಈಗ ಇಷ್ಟ ಪಟ್ಟಷ್ಟೇ ಇಷ್ಟ ಪಡ್ತಿದ್ವಾ?ಬಡತನದಲ್ಲಿ ಬೆಂದದ್ದಕ್ಕೇ ಉಮಾಶ್ರೀಯವರಿಗೆ ಅಂಥ ಮನೋಜ್ಞ ಅಭಿನಯ ನೀಡೋದಕ್ಕೆ ಸಾಧ್ಯ ಆಯ್ತಾ?
ಇದು ಹ್ಯೂಮನ್ ಸೈಕಾಲಜಿ ಗೆ ಸಂಬಂಧ ಪಟ್ಟಿದ್ದಾ?