
ಹೈಸ್ಕೂಲ್ ನಲ್ಲಿ ಓದುತ್ತಿರ್ಬೇಕಾದ್ರೆ ಒಬ್ರಿದ್ರು ಶಶಿಕಲಾ ಟೀಚರ್ ಅಂತ.ಕನ್ನಡ ಟೀಚರ್ಅವ್ರು.ಕನ್ನಡದ ಪ್ರಖ್ಯಾತ ಸಾಹಿತಿಗಳ ಬಗ್ಗೆ ,ಕವಿಗಳ ಬಗ್ಗೆ ,ಲೇಖಕರ ಬಗ್ಗೆ ಯಾವಾಗ್ಲೂ ತಿಳಿಸ್ತಾ ಇದ್ರು ನಮಗೆ.ಕವಿ ಕಾವ್ಯ ಪರಿಚಯ ಅಂತ ಬರುತ್ತಲ್ಲ ಒಂದು ಪ್ರಶ್ನೆ ಅದಕ್ಕೋಸ್ಕರ ಅಂತಾನೇ ನಾವು ಕುತೂಹಲದಿಂದ ಕೇಳ್ತಾ ಇದ್ವಿ ಅವರು ಹೇಳಿದ್ದೆಲ್ಲಾ!ಅವರೂ ಪಾಪ ಹೊಗಳಿದ್ದೇ ಹೊಗಳಿದ್ದು ಲೇಖಕರ ಬಗ್ಗೆ ,ಸಾಹಿತಿಗಳ ಬಗ್ಗೆ .ಅಪ್ಪಿ ತಪ್ಪಿಯೂ ಆ ಟೀಚರ್ , ಈ ಸಾಹಿತಿ ಸಿಡುಕ ,ಆ ಲೇಖಕ ಆರೆಸ್ಸೆಸ್ಸು ಅವರು ಬರೆದಿದ್ದು ಸರಿ ಇರಲ್ಲ ,ಈ ಕಾದಂಬರಿಕಾರ ಸ್ತ್ರೀ ಪರ ಸಾಹಿತ್ಯ ಬರೆದರೂ ಮನೆಯಲ್ಲಿ ಹೆಂಡ್ತಿಗೆ ಹೊಡೀತಾನೆ ,ಆ ಕಾದಂಬರಿಕಾರ ಕಮ್ಯುನಿಸ್ಟು ಅಂತೆಲ್ಲ ಯಾವತ್ತೂ ಹೇಳಿಲ್ಲ .ಅವರು ಯಾವತ್ತೂ ಹೇಳಿದ್ದು,ಕನ್ನಡ ಸಾಹಿತ್ಯ ಶ್ರೇಷ್ಠ ಸಾಹಿತ್ಯ .ಕನ್ನಡ ಸಾಹಿತಿಗಳೆಲ್ಲ ಶ್ರೇಷ್ಠರು .ಕನ್ನಡಕ್ಕೆ ಇಷ್ಟು ಜ್ಞಾನಪೀಠ ಬಂದಿದೆ ,ಅಷ್ಟು ಕೇಂದ್ರ ಸಾಹಿತ್ಯ ಅಕೆಡಮಿ ಪ್ರಶಸ್ತಿ ಬಂದಿದೆ ಅಂತ!
ಇಷ್ಟು ದಿನ ಅದನ್ನೇ ನಂಬಿಕೊಂಡು ಬಂದಿದ್ದೆ ನಾನೂ.ಆದ್ರೆ ಈಗ ಗೊತ್ತಾಯ್ತು ಟೀಚರ್ ಯಾಮಾರಿಸಿದ್ದಾರೆ ಅಂತ!
ಕನ್ನಡ ಸಾಹಿತ್ಯವೇನೋ ಶ್ರೇಷ್ಠ ಆದ್ರೆ ಸಾಹಿತಿಗಳು ?????
ಪಾಪ ಟೀಚರ್ ದೇನೂ ತಪ್ಪಿಲ್ಲ ಅಲ್ವಾ?? ಆಗ ನಾವೆಲ್ಲ ಸ್ಕೂಲ್ ಹುಡುಗರು ’ಹೇಗೆ ಹೇಳೋಕಾಗುತ್ತೆ ಅಂಥ ’ಸತ್ಯ’ ??ಪಿ.ಯು.ಸಿ ಗೆ ಬಂದ ತಕ್ಷಣ ಸ್ಕೋರಿಂಗ್ ಸಬ್ಜೆಕ್ಟ್ ಅಂತ ಹಿಂದಿ ತಗೊಂಡಿದ್ದೆ .ಇಲ್ಲಾಂದ್ರೆ ಕೊನೆಪಕ್ಷ ಕಾಲೇಜಿನಲ್ಲಾದ್ರೂ ಗೊತ್ತಾಗ್ತಾ ಇತ್ತು ಕೆಲವರ ಬಂಡವಾಳ !!
ವಿಷಯ ಏನಿಲ್ಲ ಸಾಹಿತಿಗಳು ಮತಾಂತರದ ಬಗ್ಗೆ ಸಂವಾದದ ನೆಪದಲ್ಲಿ ಕೆಸರೆರಚಾಟ ಮಾಡೋದು ನೋಡಿ ಬೇಸರವಾಯ್ತು :(
ನಾನು ಯಾವತ್ತೂ ಶ್ರೇಷ್ಠ ಸಾಹಿತ್ಯದ ಹಿಂದೆ ಬಿದ್ದಿರಲಿಲ್ಲ.ಕೈಗೆ ಸಿಕ್ಕಿದ್ದೆಲ್ಲ ಓದೋ ಅಭ್ಯಾಸ ಇದ್ದವನು ನಾನು .ನನ್ನ ಅಕ್ಕನಿಗೆ ಓದುವ ಹುಚ್ಚಿದ್ದರಿಂದ ಮನೆಗೆ ಬೇಕಾದಷ್ಟು ಪುಸ್ತಕಗಳು ಬರುತ್ತಿದ್ದವು.ಸುಧಾ,ತರಂಗ,ಕಸ್ತೂರಿ ,ಮಯೂರಿ .ಯಾವತ್ತೂ ಬರೆದ ಕಂಟೆಂಟ್ ಬಗ್ಗೆ ತಲೆ ಕೆಡಿಸಿಕೊಳ್ತಾ ಇದ್ದೆ ಯಾರು ಬರೆದಿದ್ದರು ಅನ್ನೋ ಬಗ್ಗೆ ತಲೇನೇ ಕೆಡಿಸ್ಕೋತಾ ಇರ್ಲಿಲ್ಲ .ತರಂಗದ ಸಂಪಾದಕರು stylish ಆಗಿ ಅವರ ಹೆಸರು ಪ್ರಕಟಿಸ್ತಾ ಇದ್ದಿದ್ರಿಂದ ಅವರು ಸಂಪಾದಕರೆಂಬುದು ತಿಳಿದಿತ್ತು !ಅದು ಬಿಟ್ಟು ಉಳಿದ ಯಾವ ಸಾಹಿತಿಗಳ ಬಗ್ಗೆಯೂ ನನ್ಗೆ ಗೊತ್ತಿರ್ಲಿಲ್ಲ.ಆದ್ದರಿಂದ ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೆ ಓದೋದಕ್ಕೆ ನಂಗೆ ಸಾಧ್ಯ ಆಗ್ತಾ ಇತ್ತು.
ನಂಗೆ ಮೊಟ್ಟ ಮೊದಲಿಗೆ ಸಾಹಿತ್ಯ ಮನುಷ್ಯನ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಅನ್ನೋದರ ಪರಿಚಯ ಆಗಿದ್ದು ’ಹಾಯ್ ಬೆಂಗಳೂರ್’ ಓದಿ.ಅದರಲ್ಲಿ ರವಿ ಬೆಳಗೆರೆ ಭೈರಪ್ಪನವರ,ಖುಶ್ವಂತ್ ಸಿಂಗ್ ರ ಹಾಗೂ ಇತರರ ಸಾಹಿತ್ಯದ ಬಗ್ಗೆ ಬಹಳ ಮನಮುಟ್ಟುವ ಹಾಗೆ ಬರೀತಾ ಇದ್ರು. ಭೈರಪ್ಪನವರ ’ನಿರಾಕರಣ’ ಓದಿ ರವಿ ಹಿಮಾಲಯಕ್ಕೆ ಹೋದ ಕಥೆ ಕೇಳಿದ ಮೇಲಂತೂ ನಿಜಕ್ಕೂ ಶಾಕ್ ಆಗಿತ್ತು .’ಛೇ ಇಷ್ಟೊಂದು ಶಕ್ತಿ ಇದೆಯಾ ಆ ಕಾದಂಬರಿಗೆ ’ ಅಂದುಕೊಂಡು ನಾನೂ ಲೈಬ್ರೆರಿಗೆ ಹೋಗಿ ಹುಡುಕಿ ತಂದು ಓದಿದ್ದೆ ಆ ಕಾದಂಬರಿಯನ್ನು! ಓದುವಾಗ ಸ್ವಲ್ಪ ಮಟ್ಟಿಗೆ ಭಯ ಆಗ್ತಾ ಇತ್ತು ನಂಗೆ .ಈ ಕಾದಂಬರಿ ಓದಿ ಒಂದು ವೇಳೆ ’ನಾನೂ ಹಿಮಾಲಯಕ್ಕೆ ಹೋಗ್ಬೇಕು’ ಅಂತ ಏನಾದ್ರೂ ಮನಸ್ಸಾದ್ರೆ ಏನು ಗತಿ ಅಂದುಕೊಳ್ತಾ!ಅದೃಷ್ಟವಶಾತ್ ಅಂಥದ್ದೇನೂ ಆಗಲಿಲ್ಲ
ಅದಾದ ಮೇಲೆ ನಾನೂ ಸಾಹಿತ್ಯ -ಸಾಹಿತಿಗಳ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ .ಯಥಾ ಪ್ರಕಾರ ಕೈಗೆ ಸಿಕ್ಕಿದ್ದು ಓದ್ತಾ ಇದ್ದೆ.ಮೋಜು-ಗೋಜು ಓದ್ತಾ ಇದ್ದಷ್ಟೆ intense ಆಗಿ ಯಂಡಮೂರಿಯ ಕಾದಂಬರಿ ಓದ್ತಾ ಇದ್ದೆ .ರವಿ ಬೆಳಗೆರೆಯ ’ಹೇಳಿ ಹೋಗು ಕಾರಣ’ಓದುವಾಗ ಇದ್ದಷ್ಟು ಕುತೂಹಲ ’ಶೇರು ಮಾರುಕಟ್ಟೆಯಲ್ಲಿ ಹಣ ಗಳಿಸುವುದು ಹೇಗೆ ’ ಓದುವಾಗ್ಲೂ ಇರ್ತಾ ಇತ್ತು.ಹಾಗಾಗಿ ನಂಗೆ ಯಾವತ್ತೂ ಪ್ರಾಬ್ಲೆಮ್ ಆಗ್ಲಿಲ್ಲ.
ಯಾವಾಗ ’ಹಾಯ್ ಬೆಂಗಳೂರಿನಲ್ಲಿ ’ಒಬ್ಬ ಓದುಗರ ಪತ್ರ ಓದಿದ್ನೋ ಆಗ ಗೊತ್ತಾಯ್ತು ಲೇಖಕರ ಪವರ್! "ಅಣ್ಣಾ ,ಹಾಯ್ ಬೆಂಗಳೂರಿನಲ್ಲಿ ’ಈ ವಿಷ್ಯದ’ ಬಗ್ಗೆ (ಯಾವ ವಿಷಯ ಅನ್ನೋದು ಬೇಡ) ನಿನ್ನ ಅಭಿಪ್ರಾಯ ಏನೂಂತ ತಿಳಿದು ನನ್ನ ಅಭಿಪ್ರಾಯ ರೂಪಿಸಿಕೊಳ್ಳುವ ಅಂತ ಕಾಯ್ತ ಇದ್ದೆ ,ಸರಿಯಾದ ಟೈಮ್ ಗೆ ಲೇಖನ ಹಾಕಿದ್ದೀಯಾ " ಅಂತ ಬರೆದಿದ್ದ ಆತ .ಎಷ್ಟು ಶಕ್ತಿ ಇದೆ ಅಲ್ವಾ ಲೇಖನಿಗೆ?ಸಾವಿರಾರು ಜನ ತನ್ನ ನೆಚ್ಚಿನ ಲೇಖಕ ಹೇಳಿದ್ದೇ ಸರಿ ಅನ್ನೋ ಅಭಿಪ್ರಾಯ ಮೂಡಿಸಿಕೊಳ್ಳಬೇಕಾದ್ರೆ ಎಂಥ ಶಕ್ತಿ ಇದೆ ಅವರ ಬರಹಕ್ಕೆ!!!
ಆದ್ರೆ ಈ ಶಕ್ತಿಯ ದುರುಪಯೋಗ ಸರೀನಾ?ನಾನು ಬರೆದಿದ್ದನ್ನ ಸಾವಿರಾರು ಜನ ಓದ್ತಾರೆ ಅನ್ನೋ ಒಂದೇ ಕಾರಣಕ್ಕೆ ತಾನು ಶ್ರೇಷ್ಠ ಅಂದುಕೊಳ್ಳೋದು ಸರೀನಾ?
ವಿಜಯ ಕರ್ನಾಟಕದಲ್ಲಿ ಭೈರಪ್ಪ ಲೇಖನ ಬರೆದಿದ್ರು ಅವರ ಫೋಟೊ ಹಾಕಿದ್ರು !ಮಾರನೇ ದಿನ ರಾಮಚಂದ್ರ ಶೆಣೈ ಅಂತ ಒಬ್ಬರು ಬರೆದಿದ್ರು ಅವ್ರ ಫೋಟೊ ಇರ್ಲಿಲ್ಲ!ಮತ್ತೆ ರವಿ ಬೆಳಗೆರೆ ಬರೆದರು ಫೋಟೊ ಸಹಿತ ,ಆದ್ರೆ ಬೇರೊಬ್ಬ ಸಾಮಾನ್ಯ ವ್ಯಕ್ತಿ ಬರೆದ್ರು without photo!ಎಲ್ಲಾ ಜನರ ಫೋಟೊ ಪತ್ರಿಕೆಯ ಡೇಟಾಬೇಸ್ ನಲ್ಲಿ ಇರಲ್ಲ,ಆ ಮಾತು ಒಪ್ಪತಕ್ಕದ್ದೆ .ಆದ್ರೆ ಒಬ್ಬ ಸಾಮಾನ್ಯ ಮನುಷ್ಯ ಬರೆದರೆ ಅದಕ್ಕೆ ಅಷ್ಟೊಂದು ಪ್ರಾತಿನಿಧ್ಯ ಸಿಗಲ್ಲ.ಅದೇ ಹೆಸರಾಂತ ಸಾಹಿತಿಗಳು ಬರೆದರೆ ಮುಖಪುಟದಲ್ಲಿ ಸ್ಥಾನ!!
ಅಷ್ಟಕ್ಕೂ ಸಾಹಿತ್ಯ ಅನ್ನೋದು ಅದ್ಯಾಕೆ ಶ್ರೇಷ್ಠ ಅಂತ ನಂಗೆ ಇನ್ನೂ ಗೊತ್ತಾಗಿಲ್ಲ.ಫಿಲಿಪ್ಸ್ ನಲ್ಲಿ ಕೂತು ಒಬ್ಬ ಇಂಜಿನಿಯರ್ ತಯಾರಿಸಿದ ಮೆಡಿಕಲ್ ಉಪಕರಣ ಹಾಸ್ಪಿಟಲ್ ನಲ್ಲಿ ತಣ್ಣಗೆ ಕೂತು ಸಾವಿರಾರು ಜನರ ಪ್ರಾಣ ಕಾಪಾಡ್ತಾ ಇರುತ್ತೆ .ಅಂಥ ಇಂಜಿನಿಯರ್ ಗೆ ಗೌರವ ಸಿಗಲ್ಲ.ಅವನ ಹತ್ರ ಯಾರೂ ’ಮಂತಾಂತರದ ಬಗ್ಗೆ ನಿಮ್ಮ ಅಭಿಪ್ರಾಯ ಹೇಳಿ ’ ಅಂತ ಕೇಳಲ್ಲ! ಬದಲಾಗಿ ’ಕಳ್ ನನ್ ಮಗ ಎಷ್ಟು ಸಾವಿರ ದುಡೀತಾನೋ ,ಬೆಂಗಳೂರಿನ ಸಂಸ್ಕೃತಿ ಹಾಳು ಮಾಡಿ ಪಬ್ ಸಂಸ್ಕೃತಿ ತಂದಿದ್ದು ಇವ್ರೇ ಕಣ್ರಿ ’ ಅಂತಾರೆ.ನೋಕಿಯಾದಲ್ಲಿ ರಾತ್ರಿ ಹಗಲು ದುಡಿದು ಮೊಬೈಲ್ ಫೋನ್ ಅಭಿವೃದ್ಧಿ ಪಡಿಸಿದ ಇಂಜಿನಿಯರ್ ನನ್ನೂ ಯಾರೂ ಕೇಳಲ್ಲ ,ಬದಲಾಗಿ ಅದೇ ಕಂಪೆನಿಯ ಮೊಬೈಲ್ ಜೇಬಲ್ಲಿಟ್ಟುಕೊಂಡು ’ನೋಡಿ ಅವನದ್ದೇ ಕಂಪೆನಿಯಲ್ಲಿ ಮೊನ್ನೆ ಹುಡುಗಿ ಸುಸೈಡ್ ಮಾಡಿದ್ದು’ ಅಂತಾರೆ! ಯಾರೋ ಬರೆದ ಪುಸ್ತಕಕ್ಕೆ ಬೂಕರ್ ಬರುತ್ತೆ ,ನಾಳೆ ಅವನ ಅಭಿಪ್ರಾಯಕ್ಕೂ ಸಕ್ಕತ್ ಮರ್ಯಾದೆ ,ಆದ್ರೆ ATMನಲ್ಲಿ ಚಕ ಚಕ ಅಂತ ಕಾಸು ಹೊರಬರೋ ಥರ ಸಾಫ್ಟ್ ವೇರ್ ಬರೆದವನಿಗೆ ಪೂಕರ್ ಪ್ರಶಸ್ತಿ ಕೂಡ ಸಿಗಲ್ಲ ,ಯಾಕಂದ್ರೆ ಅವನಿಗೆ ನಾಲ್ಕು ಜನರು ಮೆಚ್ಚೋ ಥರ ಬರೆಯೋಕೆ ಬರಲ್ಲ!
ಒಂದು ಟ್ಯಾಬ್ಲಾಯ್ಡ್ ಪತ್ರಿಕೆಯ ಸಂಪಾದಕ ಅನ್ನೋ ಕಾರಣಕ್ಕೆ ಬರೆದದ್ದು ಫೋಟೊ ಸಹಿತ ಪ್ರಕಟ ಆಗುತ್ತೆ ,ಆದ್ರೆ ಚಂದ್ರಯಾನ ಯಶಸ್ವಿಯಾಗಿ ಉಡಾಯಿಸಿದ ವಿಜ್ಞಾನಿಗಳನ್ನು ಮಾತ್ರ ಯಾರೂ ಕೇಳಲ್ಲ ’ಮತಾಂತರದ ಬಗ್ಗೆ ನಿಮ್ಮ ಅಭಿಪ್ರಾಯ ಏನು ’ ಅಂತ ,ಯಾಕಂದ್ರೆ ಅವರಿಗೂ ತಮ್ಮ ಅಭಿಪ್ರಾಯ ಬರೆಯೋದಕ್ಕೆ ಬರಲ್ಲ!
ಕನ್ನಡಕ್ಕೆ ಏಳು ಜ್ಞಾನಪೀಠ ಪ್ರಶಸ್ತಿ ಸಿಕ್ಕಿದೆ ಅಂತ ಎಲ್ಲರಿಗೂ ಗೊತ್ತು ಆದ್ರೆ ಕರ್ನಾಟಕದ ಎಷ್ಟು ಜನರಿಗೆ ಪರಮವೀರ ಚಕ್ರ ಸಿಕ್ಕಿದೆ ಅನ್ನೋದು ಯಾರಿಗೂ ಗೊತ್ತಿಲ್ಲ.ಯಾಕಂದ್ರೆ ಅವರಿಗೆ ಬರೆಯೋದು ಗೊತ್ತಿಲ್ವಲ್ಲ!
ಇಷ್ಟೊಂದು ಗೌರವ ಸಿಕ್ತಾ ಇರೋದಕ್ಕೆ ತಾನೇ ಸಾಹಿತಿಗಳು ತಮ್ಮನ್ನು ತಾವು ಶ್ರೇಷ್ಠ ಅಂದುಕೊಂಡು ಕಿತ್ತಾಡ್ತಾ ಇರೋದು??ಕೇವಲ ಭೈರಪ್ಪನವರು ಬರೆದಿದ್ದಾರೆ ಅನ್ನೋ ಕಾರಣಕ್ಕೇ ಜನ ಅವರ ವಿರುದ್ಧ ,ಅವರ ಲೇಖನದ ವಿರುದ್ಧ ಸಾಕ್ಷಿ ಒಟ್ಟುಗೂಡಿಸ್ತಾ ಇದ್ದಾರೆ.ಯಡಿಯೂರಪ್ಪ ಹೇಳಿದ್ದಕ್ಕೇನಾದ್ರೂ ಯೆಸ್ ಅಂದು ಬಿಟ್ರೆ ಸರಕಾರ ಚೆನ್ನಾಗಿ ಕೆಲಸ ಮಾಡ್ತಾ ಇದೆ ಅಂತೇನಾದ್ರೂ ಜನ ತಿಳ್ಕೊಂಡು ಬಿಟ್ರೆ ಅಂತ ಪ್ರತಿಪಕ್ಷದವ್ರು ಎಲ್ಲಾದಕ್ಕೂ oppose ಮಾಡ್ತಾರಲ್ಲ ಹಾಗಾಯ್ತು ಸಾಹಿತಿಗಳ ಪರಿಸ್ಥಿತಿ !ಈ ಥರ ಆದ್ರೆ ಒಂದು ಬಣದವರಿಗೆ ಏನೂ ನಷ್ಟ ಆಗಲ್ಲ .ಯಾಕಂದ್ರೆ ಅವರು ಬರೀ ಒಂದು ಬಣದವರದ್ದಷ್ಟೆ ಓದೋ ಅಂಥವರು ! ಆದ್ರೆ ನಿಜವಾದ ನಷ್ಟ ಎರಡೂ ಬಣದವರನ್ನು ಇಷ್ಟ ಪಡೋರಿಗೆ!ತನ್ನ ಒಬ್ಬ ನೆಚ್ಚಿನ ಸಾಹಿತಿಯ ಬಗ್ಗೆ ಇನ್ನೊಬ್ಬ ನೆಚ್ಚಿನ ಸಾಹಿತಿ ಕೆಟ್ಟದಾಗಿ ಬರೆದ್ರೆ ಬೇಜಾರಾಗಲ್ವ??ಈ ಬೇಜಾರನ್ನು ಇಟ್ಕೊಂಡೇ ಮತ್ತೆ ಅವರು ಬರೆದದ್ದನ್ನು ಓದೋಕೆ ಸಾಧ್ಯ ಆಗುತ್ತಾ??ಅವರ ಸಂಕುಚಿತ ಮನೋಭಾವದ ಬಗ್ಗೆ ಗೊತ್ತಾಗಿಯೂ ಅವರನ್ನು ಗೌರವಿಸಲು ಸಾಧ್ಯಾ ಆಗುತ್ತಾ??
ಬಹುಷಃ ಆಗುತ್ತೇನೋ ?? ಯಾಕಂದ್ರೆ ಸಲ್ಮಾನ್ ಖಾನ್ ಅಷ್ಟು ಜನರ ಮೇಲೆ ಗಾಡಿ ಹರಿಸೀನೂ ಇನ್ನೂ ಸ್ಟಾರ್ ಅಗಿಲ್ವ?? ಮೈಕಲ್ ಜಾಕ್ಸನ್ ಏನೇ ಎಡವಟ್ಟು ಮಾಡ್ಕೊಂಡ್ರೂ ಜನ ಅವರನ್ನು ಪ್ರೀತಿಸಲ್ವ??
All the best ಸಾಹಿತಿಗಳೇ .............