
ಕಳೆದ ಶನಿವಾರ ಮೇ ಫ್ಲವರ್ ನಿಂದ ’ಹಂಪಿ ಎಕ್ಸ್ ಪ್ರೆಸ್ ’ ಕೊಂಡು ತಂದಿದ್ದೆ.ಬಹಳ ಅದ್ಭುತವಾದ ಕಥೆಗಳಿದ್ದವು ಅದರಲ್ಲಿ.ಅದರ ಕಿಕ್ಕು ಇಳಿಯುವ ಮೊದಲೇ ಇನ್ನಷ್ಟು ಪೆಗ್ಗು ಏರಿಸೋಣ ಅಂತ ಮನಸ್ಸು ಮಾಡಿ ಅಂಕಿತಕ್ಕೆ ಹೋದೆ,ವಸುಧೇಂದ್ರರ ಇನ್ನಷ್ಟು ಪುಸ್ತಕಗಳನ್ನು ಕೊಳ್ಳಲು!
ನಮ್ಮ ಮನೆಗೆ ಸಪ್ನಾ ಬುಕ್ ಹೌಸ್ ಹತ್ತಿರ.ಆದ್ರೂ ನಾನು ಯಾಕೆ ಅಂಕಿತಕ್ಕೇ ಹೋಗ್ತೀನಿ ಅಂತ ನನಗೇ ಗೊತ್ತಿಲ್ಲ! ಪುಸ್ತಕದ ಜೊತೆ ಒಂದು ಕ್ಯಾಲೆಂಡರ್ ಕೊಡ್ತಾರೆ ಅನ್ನೋದೂ ಒಂದು ಕಾರಣ ಇದ್ದಿರಬಹುದು.ನಮ್ಮ ರೂಮಿನ ಗೋಡೆಯ ಮೊಳೆಗೆ ಬೇರೆ ಕ್ಯಾಲೆಂಡರ್ ಅಂದ್ರೆ ಸ್ವಲ್ಪ ಅಲರ್ಜಿ!
ಅಂಕಿತಕ್ಕೇ ಹೋದವನೇ ಸೀದ ಒಳಗೆ ಹೋಗಿ ಅಲ್ಲಿ ಕೂತಿದ್ದ ಹುಡುಗಿಯ ಹತ್ತಿರ ’ ಮೇಡಂ ವಸುಧೇಂದ್ರ ರ ಪುಸ್ತಕಗಳು ಎಲ್ಲಿವೆ ?’ ಅಂತಲೇ ಕೇಳಿದೆ.
ಅದಕ್ಕೆ ಆ ಹುಡುಗಿ ನಗುತ್ತಾ ’ಈಗ ತಾನೆ ಆಚೆ ಹೋದ್ರು ವಸುಧೇಂದ್ರ ಇಷ್ಟು ಹೊತ್ತು ಇಲ್ಲೇ ಇದ್ರು ’ ಅಂದಳು.
ನನಗೆ ಆಶ್ಚರ್ಯ ಆಯ್ತು. ಇದೇನು ವಸುಧೇಂದ್ರ ಅವರು ತಮ್ಮ ಪುಸ್ತಕ ಮಾರಲು ಖುದ್ದಾಗಿ ಅಂಕಿತಕ್ಕೇ ಬರುತ್ತಾರೇನೋ ಅನ್ನೋ ಡೌಟು ಬಂತು.ಹಾಗೆಯೇ ’ಅಂಕಿತಕ್ಕೆ ಬಹಳಷ್ಟು ಜನ ಲೇಖಕರು ಭೇಟಿ ಕೊಡ್ತಾರೆ,ಅಲ್ಲಿಯೇ ಬಹಳ ಹೊತ್ತು ಕಳೀತಾರೆ ’ ಅಂತ ಎಲ್ಲೋ ಓದಿರೋದು ನೆನಪಾಯಿತು.
ಆಮೇಲೆ ಆ ಹುಡುಗಿ ನನ್ನನ್ನು ವಸುಧೇಂದ್ರರ ಪುಸ್ತಕಗಳನ್ನು ಜೋಡಿಸಿಟ್ಟ ಜಾಗಕ್ಕೆ ಕರೆದುಕೊಂಡು ಹೋದಳು.
’ಹಂಪಿ ಎಕ್ಸ್ ಪ್ರೆಸ್’ ಆಗಲೆ ಕೊಂಡು ಓದಿರೋದ್ರಿಂದ ’ಯುಗಾದಿ’ ,’ಮನೀಷೆ’ ಮತ್ತೆ ’ಕೋತಿಗಳು ಸಾರ್ ಕೋತಿಗಳು ’ ಪುಸ್ತಕಗಳನ್ನು ಎತ್ತಿಕೊಂಡೆ.
ಹುಡುಗಿ ’ವಸುಧೇಂದ್ರ ನಿಮಗೆ ಗೊತ್ತಾ ?’ ಕೇಳಿದಳು.
’ಹೂಂ ಗೊತ್ತು ಆದ್ರೆ ಅವರಿಗೆ ನಾನು ಗೊತ್ತಿಲ್ಲ !’ ಅಂದೆ.
’ಇರಿ ಸರ್ ಮತ್ತೆ ಬರ್ತಾರೆ ಅವರು ಇಲ್ಲೇ ಹೋಗಿರ್ತಾರೆ ’ ಅಂದ್ಲು.
ಹೇಗೂ ಈಗ ಬರ್ತಾರೆ ಅನ್ನೋ ಆಶ್ವಾಸನೆ ಕೊಟ್ಟಿದ್ದಾಳೆ ಹುಡುಗಿ ,ಅಲ್ಲಿ ತನಕ ಬೇರೆ ಪುಸ್ತಕಗಳನ್ನು ನೋಡೋಣ ಅಂದುಕೊಂಡೆ. ವಿಜಯಕರ್ನಾಟಕದ ದೀಪಾವಳಿ ವಿಶೇಷಾಂಕದಲ್ಲಿ ವಿವೇಕ್ ಶಾನುಭಾಗರ ಒಂದು ನಾಟಕ ಬಂದಿತ್ತು ಅದನ್ನೇ ಕೊಳ್ಳೋಣ ಅಂದುಕೊಂಡು ’ರೀ ಮೇಡಂ ವಿವೇಕ್ ಶಾನುಭಾಗರ ’ಹುಲಿ.... ’ ಅಂತ ಏನೋ ನಾಟಕ ಇದೆಯಲ್ಲ ಅದು ಇದೆಯಾ ’ ಅಂತ ಕೇಳಿದೆ.
ನನಗೆ ಆ ನಾಟಕದ ಹೆಸರೇ ಮರೆತು ಹೋಗಿತ್ತು.ನಾನು ದೊಡ್ಡ ಮರೆಗುಳಿ ಹಾಗಾಗಿ ನನಗೆ ಬಹಳಷ್ಟು ವಿಷಯಗಳು ನೆನಪಿಗೆ ಬರೋದೇ ಇಲ್ಲ.ಹಿಂದೊಮ್ಮೆ ಯಾರೋ ದೇವುಡುರವರ ’ಮಹಾಬ್ರಾಹ್ಮಣ ’ ಓದಿ ಚೆನ್ನಾಗಿದೆ ಅಂದಿದ್ರು.ನಾನು ಪುಸ್ತಕದ ಅಂಗಡಿಗೆ ಹೋಗಿ ’ಸರ್ ಡೇವಿಡ್ ರ ’ಮಹಾಬ್ರಾಹ್ಮಣ ’ ಇದೆಯಾ?’ ಅಂತ ಕೇಳಿ ಅವರ ಕೆಂಗಣ್ಣಿಗೆ ಗುರಿಯಾಗಿದ್ದೆ.
ಬ್ರಾಹ್ಮಣ ಅನ್ನೋ ಶಬ್ದ ಕೇಳಿದ್ರೆ ಎಲ್ಲರ ಕಣ್ಣೂ ಕೆಂಪಾಗುತ್ತೆ ಏನ್ ಮಾಡೋದು!
ಅಂಕಿತದ ಹುಡುಗಿ ’ ಸಾರ್ ಅದು ’ಹುಲಿ ಸವಾರಿ’ ಅನ್ನೋ ಪುಸ್ತಕ .ಆದ್ರೆ ಅದಿಲ್ಲ ’ಬಹುಮುಖಿ’ ಇದೆ ತಗೊಳ್ಳಿ ’ಅಂದ್ಲು.
’ಬಹುಮುಖಿ’ಯ ಬಗ್ಗೆ ಅಷ್ಟು ಆಸಕ್ತಿ ಇರದಿದ್ದರಿಂದ ಸುಮ್ಮನೆ ಬೇರೆ ಪುಸ್ತಕಗಳ ಮೇಲೆ ಕಣ್ಣು ಹಾಯಿಸಲೆಂದು ಆಚೆ ಕಡೆ ಹೋದೆ.
ಅಲ್ಲೇ ಮೂಲೆಯಲ್ಲಿ ಒಂದು ಪುಸ್ತಕ ಕಣ್ಣಿಗೆ ಬಿತ್ತು .’ಲೈಂಗಿಕತೆಯ ಬಗ್ಗೆ ನಿಮ್ಮ ಅರಿವು ಹೆಚ್ಚಿಸಿಕೊಳ್ಳಿ ’ ಅನ್ನೋ ಪುಸ್ತಕ ಅದು!
ಅವಕಾಶ ಸಿಕ್ಕರೆ ಯಾವಾಗಲೂ ಅರಿವನ್ನು ಹೆಚ್ಚಿಸಿಕೊಳ್ಳಬೇಕು ಅನ್ನೋ ಹಿರಿಯರ ಮಾತು ನೆನಪಾಯ್ತು!
ಆ ಕಡೆ ಈ ಕಡೆ ಒಮ್ಮೆ ಕಣ್ಣು ಹಾಯಿಸಿದೆ.ಅಂಗಡಿಯಲ್ಲಿ ಬೇರೆ ಯಾರೂ ಇರಲಿಲ್ಲ.ಹುಡುಗಿ ತನ್ನ ಪಾಡಿಗೆ ಪುಸ್ತಕಗಳನ್ನು ಜೋಡಿಸ್ತಾ ಇದ್ಲು.
ಆಸೆಯಿಂದ ಪುಸ್ತಕ ಕೈಗೆತ್ತಿ ಪುಟ ತಿರುವಿದೆ .ಅಷ್ಟರಲ್ಲಿ ಹುಡುಗಿ ನನ್ನ ಬಳಿ ಓಡೋಡ್ತಾ ಬಂದ್ಲು.
ನಾನು ಪುಸ್ತಕ ಅಲ್ಲೇ ಓದಲು ಪ್ರಾರಂಭಿಸಿರುವ ಬಗ್ಗೆ ಆಕ್ಷೇಪ ಎತ್ತಲು ಆ ಹುಡುಗಿ ಬರ್ತಾ ಇದ್ದಾಳೇನೋ ಅನ್ನಿಸಿ ಗಾಬರಿಯಾಯ್ತು ನಂಗೆ.
ಹಿಂದೊಮ್ಮೆ ಮಂಗಳೂರಿನ ಪುಸ್ತಕ ಪ್ರದರ್ಶನದಲ್ಲೊಮ್ಮೆ ಹೀಗೆ ಫ್ರೀ ಆಗಿ ’ಅಂಥ’ ಪುಸ್ತಕ ಸ್ಕ್ಯಾನ್ ಮಾಡ್ತಾ ಇದ್ದಾಗ ಸ್ಟಾಲ್ ನ ಮಾಲಕ ನನ್ನಿಂದ ಪುಸ್ತಕ ಕಿತ್ತುಕೊಂಡು ’ ನಿಮಗೆ ಇದನ್ನು ಮನೆಗೆ ತಗೊಂಡು ಹೋಗಿ ಓದೋ ಅಷ್ಟು ಧೈರ್ಯ ಇಲ್ಲ .ಎಲ್ಲಾ ಇಲ್ಲೆ ಮುಗಿಸಿಬಿಡ್ತೀರ ’ ಅಂತ ಉಗಿದಿದ್ದು ನೆನಪಾಯ್ತು!
ಹುಡುಗಿ ನನ್ನ ಬಳಿ ಬಂದು ’ಸಾರ್ ....’ ಅಂದ್ಲು .
’ಏನು ’ ಅಂದೆ ನಾನು ಗಾಬರಿಯಿಂದ !
’ಸಾರ್ .... ವಸುಧೇಂದ್ರ ಬಂದ್ರು !’ ಅಂದ್ಲು ಹುಡುಗಿ.
ಸಧ್ಯ ಬದುಕಿದೆ ಅಂದುಕೊಂಡು ಕ್ಯಾಶ್ ಕೌಂಟರ್ ಗೆ ಹೋದೆ ,ಅಲ್ಲಿ ವಸುಧೇಂದ್ರ ಮತ್ತೆ ಅಪಾರ ,ಪ್ರಕಾಶ್ ಕಂಬತ್ತಳಿಯವರೊಡನೆ ಮಾತಾಡಿಕೊಂಡು ನಿಂತಿದ್ರು !
ನಾನು ಕ್ಯಾಶ್ ಕೌಂಟರ್ ಬಳಿ ಹೋಗಿ ಟೇಬಲ್ ಮೇಲೆ ಪುಸ್ತಕಗಳನ್ನಿಟ್ಟೆ .ಅಷ್ಟರಲ್ಲಿ ವಸುಧೇಂದ್ರ ,ಅಪಾರ ಹೊರಟು ನಿಂತರು.
’ಸರ್.... ಆಟೋಗ್ರಾಫ್ ಪ್ಲೀಸ್ ’ ಅಂದೆ .
ವಸುಧೇಂದ್ರ ನಗುತ್ತಾ ಕೈ ಚಾಚಿ ’ಏನ್ ಹೆಸರು ’ ಅಂದ್ರು .
ಸಂದೀಪ್ ಕಾಮತ್ ಅಂದೆ. ಥಟ್ಟನೆ ’ಒಹ್ ನೀನಾ ಸಂದೀಪ್ ಕಾಮತ್ ! ನೀನು ’ಹಂಪಿ ಎಕ್ಸ್ಪ್ರೆಸ್’ ಬಗ್ಗೆ ನಂಗೆ ಮೇಲ್ ಮಾಡಿದ್ದೆ ಅಲ್ವಾ ?’ ಅಂತ ಕೇಳಿದ್ರು.
’ಹೌದು ಸರ್, ಅದು ನಾನೆ ’ ಅಂದೆ .
’ಹಂಪಿ ಎಕ್ಸ್ ಪ್ರೆಸ್’ ತುಂಬಾ ಇಷ್ಟ ಆಯ್ತು ಅಂತ ವಸುಧೇಂದ್ರರಿಗೆ ಮೇಲ್ ಮಾಡಿದ್ದೆ ನಾನು.ಜೊತೆಗೆ ಅದರಲ್ಲಿ ’ ಸರ್ ಕಥೆಗಾರರಾದ ನೀವು ಬ್ರಹ್ಮ-ವಿಷ್ಣು-ಮಹೇಶ್ವರ ಮೂರೂ ಆಗಿರ್ತೀರಾ .ಮತ್ತೆ ಯಾಕೆ ಸರ್ ಸುಜಾಳ ಗಂಡ ಶ್ರೀನಿವಾಸ ನಂಬೂದರಿಯ ಕೊಲೆ ಮಾಡಿದ್ರಿ ’ನೀವು’ ? ನಿಜ ಜೀವನದಲ್ಲಂತೂ ಬರೀ ಟ್ರಾಜೆಡಿಗಳೇ ಇರೋದು ಕೊನೆಪಕ್ಷ ಕಥೆಗಳಲ್ಲಾದ್ರೂ ಸುಖಾಂತ್ಯ ಮಾಡೋದಲ್ವಾ ? ಅಂತ ಗಂಭೀರವಾದ ಕೊಲೆ ಆರೋಪವನ್ನೂ ಹಾಕಿದ್ದೆ ಅವರ ಮೇಲೆ!
’ಹಂಪಿ ಎಕ್ಸ್ ಪ್ರೆಸ್’ ನ ’ಕ್ಷಮೆಯಿಲ್ಲದೂರಿನಲ್ಲಿ’ ಅನ್ನೋ ಕಥೆಯಲ್ಲಿ ಸುಜಾಳ ಗಂಡನ ಕೊಲೆ ಆಗುತ್ತೆ .ಅಂಥ ಟ್ರಾಜೆಡಿ ಅಂತ್ಯದ ಬಗ್ಗೆ ನನಗೆ ಅಸಮಧಾನವಿತ್ತು.ಅದನ್ನೇ ಅವರಿಗೆ ಮೇಲ್ ನಲ್ಲಿ ಬರೆದಿದ್ದೆ.ಬರೆದ ಮೇಲೆ ’ಛೇ ಕಥೆಗಾರರಿಗೆ ಅಂಥ ನಿರ್ಬಂಧ ಹಾಕಿದ್ರೆ ಸರಿ ಅಲ್ಲ ’ ಅಂತ ಬೇಜಾರಾಗಿತ್ತು ನಂಗೆ.
ಪಾಪ ಅವರು ಅದರ ಬಗ್ಗೆ ಏನೂ ಪ್ರಸ್ತಾವ ಮಾಡಿಲ್ಲ .ಆದ್ರೆ ಹಿಂದೊಮ್ಮೆ ’ಭಾಮಿನಿ ಷಟ್ಪದಿ’ಯ ಬಿಡುಗಡೆ ಸಂದರ್ಭದಲ್ಲಿ ಅವರ ಆಟೋಗ್ರಾಫ್ ಪಡೆದದ್ದು,ಅದರ ಬಗ್ಗೆ ಬ್ಲಾಗ್ ನಲ್ಲಿ ಬರೆದಿದ್ದು ನೆನಪಿತ್ತು ಅವರಿಗೆ! ’ಅದೇ ಸಂದೀಪ್ ಅಲ್ವಾ ನೀನು ’ ಅಂದ್ರು ಮತ್ತೆ.
ನಾನು ಮತ್ತೆ ಕ್ಲೋಸ್ ಅಪ್ ಸ್ಮೈಲ್ ಕೊಟ್ಟೆ.
ನಾನು ಕೊಂಡ ನಾಲ್ಕೂ ಪುಸ್ತಕದಲ್ಲಿ ಆಟೊಗ್ರಾಫ್ ಹಾಕಲು ನಿಂತರು ವಸುಧೇಂದ್ರ .
ಅಷ್ಟರಲ್ಲೆ ಒಬ್ಬ ಮಹನೀಯರು ಕೌಂಟರ್ ಗೆ ಬಂದ್ರು. ಕೌಂಟರ್ ನಲ್ಲಿದ್ದ ’ಕೋತಿಗಳು ಸಾರ್ ಕೋತಿಗಳು ’ ಪುಸ್ತಕ ನೋಡಿ ’ಓಹ್ ಇದೇ ಅಲ್ವ ಸಿನೆಮಾ ಆಗಿರೋದು’ ಅಂತ ವಸುಧೇಂದ್ರರನ್ನೇ ಕೇಳೋದಾ !!
ವಸುಧೇಂದ್ರ ನಗುತ್ತಾ ’ ಅಲ್ಲ ಸರ್ ಇದು ಬೇರೆ ಪುಸ್ತಕ ’ ಅಂದ್ರು . ನಾನೂ ದನಿ ಸೇರಿಸುತ್ತಾ ’ ಆ ಕೋತಿ ಬೇರೆ ,ಈ ಕೋತಿ ಬೇರೆ ಸರ್ ’ ಅಂದೆ ಅ ಮಹನೀಯರಿಗೆ!
ಎಲ್ಲಾ ಪುಸ್ತಕಕ್ಕೂ ಆಟೋಗ್ರಾಫ್ ಹಾಕಿ ’ ಓದಿ ಮೇಲ್ ಮಾಡು’ ಅಂತ ಹೇಳಿ ಹೊರಟರು ವಸುಧೇಂದ್ರ,ಅಪಾರ.
ಅವರು ಹೋದ ಮೇಲೆ ಆ ಮಹನೀಯರು ’ಓಹ್ ಅವರೂ ಲೇಖಕರಾ ’ ಅಂದ್ರು .
ನಾನು ’ ಇನ್ನೇನ್ ಮತ್ತೆ ಈ ನಾಲ್ಕೂ ಪುಸ್ತಕ ಅವರದ್ದೇ ಗೊತ್ತಾ? ’ ಅಂದೆ.
ಪ್ರಕಾಶ್ ಕಂಬತ್ತಳಿಯವರೂ ದನಿಗೂಡಿಸುತ್ತಾ ’ ಅವರು ಕನ್ನಡದ ಬಹಳ ಪ್ರಸಿದ್ಧ ಲೇಖಕರು ಟಾಪ್ ಟೆನ್ ನಲ್ಲಿ ಒಂದನೇ ಸ್ಥಾನದಲ್ಲಿದೆ ಅವರ ’ಹಂಪಿ ಎಕ್ಸ್ ಪ್ರೆಸ್’ ಅಂದ್ರು.
ಪ್ರಸಿದ್ಧ ಲೇಖಕರನ್ನು ಮುಖತಃ ನೋಡಿದ ಖುಷಿ ಕಾಣಿಸಿತು ಆ ಮಹನೀಯರ ಮುಖದಲ್ಲಿ.
ನನ್ನ ಖುಷಿಯೂ ಕಡಿಮೆ ಏನಿರಲಿಲ್ಲ !