Wednesday, May 6, 2009

ರೈಟ್ ಪೋಯಿ....

ಕಳೆದ ವಾರಾಂತ್ಯದಲ್ಲಿ ಮಂಗಳೂರಿನಲ್ಲಿದ್ದೆ.ಧರ್ಮಸ್ಥಳ ಗಲಬೆಯಲ್ಲಿ ನನ್ನದೇನೂ ಕೈವಾಡವಿಲ್ಲ ಸ್ವಾಮಿ ,ನಾನು ಹೋಗಿದ್ದು ಗೆಳೆಯನ ಮದುವೆಗೆ!

ಮಂಗಳೂರಿನಲ್ಲಿದ್ದಷ್ಟೂ ದಿನ ನನಗೆ ಬಹಳಷ್ಟು ಖುಷಿ ಕೊಡೋದು ಅಲ್ಲಿನ ಬಸ್ ಪ್ರಯಾಣ !ಯಾರಾದ್ರೂ ’ಎಷ್ಟು ಘಂಟೆಗೆ ಸಿಗುತ್ತೀರಾ ?’ ಅನ್ನೋ ಪ್ರಶ್ನೆ ಕೇಳಿದ್ರೆ ಇಂತಿಷ್ಟೇ ಘಂಟೆಗೆ ಅಲ್ಲಿರುತ್ತೇನೆ ಅಂತ ಖಚಿತವಾಗಿ ಹೇಳಲು ಸಾಧ್ಯವಾಗೋದು ಬಹುಷಃ ಮಂಗಳೂರಿನಲ್ಲಿ ಮಾತ್ರ.
ಬಸ್ ಸ್ಟ್ಯಾಂಡ್ ನಲ್ಲಿ ನಿಂತಿರೋ ವ್ಯಕ್ತಿಯ ಬಳಿ ಸುಮ್ಮನೆ ’ಸುರತ್ಕಲ್ ಗೆ ಬಸ್ ಎಷ್ಟು ಘಂಟೆಗೆ ?’ ಅಂತ ಕೇಳಿ ನೋಡೀದ್ರೆ ’8.35 ಕ್ಕೆ ಗಣೇಶ್ ಪ್ರಸಾದ್ 8.45 ಕ್ಕೆ ದುರ್ಗಾಂಬಾ ,8.58 ಕ್ಕೆ ನವದುರ್ಗಾ ಹೀಗೆ ನೀವು ನಿಲ್ಲಿಸಿ ಅನ್ನೋ ತನಕ ಅವನ ಲಿಸ್ಟು ಮುಂದುವರೆಯುತ್ತದೆ.

ಆ ಬಸ್ಸುಗಳೂ ಹರಕೆ ಹೊತ್ತವರ ಹಾಗೆ ಅದೇ ಸಮಯಕ್ಕೆ ಬಂದೂ ಬಿಡುತ್ತವೆ .

ಈಗಂತೂ ಪ್ರತಿ ಬಸ್ ಸ್ಟ್ಯಾಂಡ್ ನಲ್ಲಿ ಟೈಂ ಕೀಪರ್ ಗಳ ಹಾವಳಿ ಬೇರೆ.ಹಿಂದೆ ಒಂದು ಬಸ್ ಏನಾದ್ರೂ ಒಂದೆರಡು ನಿಮಿಷ ಹೆಚ್ಚಿನ ಕಾಲ ಬಸ್ ಸ್ಟ್ಯಾಂಡ್ ನಲ್ಲಿ ನಿಂತು ಪ್ರಯಾಣಿಕರನ್ನು ಸೆಳೆಯಲು ಪ್ರಯತ್ನ ಮಾಡ್ತಾ ಇದ್ರೆ ಹಿಂದಿನಿಂದ ಬರುವ ಮತ್ತೊಂದು ಬಸ್ಸಿನವ ಮೊದಲ ಬಸ್ಸಿನವನ ಕೊರಳ ಪಟ್ಟಿ ಹಿಡಿದು ಜಗಳಕ್ಕೇ ನಿಲ್ಲುತ್ತಿದ್ದ.ಇದನ್ನು ತಪ್ಪಿಸಲೆಂದೇ ಈಗ ಟೈಂ ಕೀಪರ್ ಗಳನ್ನು ಇರಿಸಲಾಗಿದೆ.

ಮಂಗಳೂರಿನ ಬಸ್ಸುಗಳೀಗ ವಿಡೀಯೋ ಕೋಚ್ ಗಳಾಗಿವೆ.ಬಸ್ ಹತ್ತಿ ಒಂದೆರಡು ಸೀನ್ ನೋಡುವಷ್ಟರಲ್ಲೇ ನಮ್ಮ ಸ್ಟಾಪ್ ಬಂದಿರುತ್ತೆ ಅಲ್ಲಿ ಅದ್ಯಾವ ಮನರಂಜನೆಗೆ ವಿಡಿಯೋ ಹಾಕುತ್ತಾರೋ ದೇವರಿಗೇ ಗೊತ್ತು.ಮೂಲ್ಕಿಯಿಂದ ಉಡುಪಿಗೆ ಅರ್ಧ ಗಂಟೆಯ ಪ್ರಯಾಣ .ಅಂಥ ಸಮಯದಲ್ಲಿ ವಿಡಿಯೋ ಸ್ವಲ್ಪ ಮನರಂಜನೆ ಕೊಡುತ್ತೆ ಅಂತ ಅಂದುಕೊಂಡ್ರೆ ಅದು ನಿಮ್ಮ ತಪ್ಪು !
ಮೊನ್ನೆ ಹಾಗೇ ಆಯ್ತು.’ದಾಸ’ ಸಿನೆಮಾ ಹಾಕಿದ್ದರು ಬಸ್ ನಲ್ಲಿ, ಒಳ್ಳೆ ಇಂಟರೆಸ್ಟಿಂಗ್ ಸೀನ್ ಬರುವಾಗಲೇ ನನ್ನ ಸ್ಟಾಪ್ ಬರೋದಾ! ಆಗಿದ್ದಾಗಲಿ ಅಂದುಕೊಂಡು ಸೀನ್ ಮುಗಿದ ಮೇಲೇನೆ ನಾನು ಮುಂದಿನ ಸ್ಟಾಪ್ ನಲ್ಲಿ ಇಳಿದದ್ದು.ಸಧ್ಯ ಕಂಡಕ್ಟರ್ ಗೆ ಗೊತ್ತಾಗಲಿಲ್ಲ,ಇಲ್ಲಾಂದ್ರೆ ಮಂಗಳಾರತಿ ಗ್ಯಾರಂಟಿ.

ಶಾಲೆಗೆ ಹೋಗುತ್ತಿದ್ದಾಗ ಐದು ನಿಮಿಷಕ್ಕೊಂದು ಬಸ್ ಇದ್ದರೂ ದಿನಾ ಒಂದೇ ಬಸ್ ನಲ್ಲಿ ಹೋಗುತ್ತಿದ್ದೆ ನಾನು.ಬಹುತೇಕ ಮಂಗಳೂರಿನ ಎಲ್ಲರೂ ಹೀಗೆ ’ಏಕ ಬಸ್ ವೃತರು’.ಶಾಲೆಗೆ,ಕೆಲಸಕ್ಕೆ ಹೋಗುವ ಎಲ್ಲರೂ ಯಾವುದಾದರೂ ಒಂದೇ ಬಸ್ ನಲ್ಲಿ ಹೋಗುವ ಅಭ್ಯಾಸ ಮಾಡಿಕೊಂಡಿರುತ್ತಾರೆ.

ನನ್ನ ಬಸ್ ಬೆಳಿಗ್ಗೆ 8.35ಕ್ಕೆ .ಮನೆಯಿಂದ ಕಾಲು ಹೊರಕ್ಕಿಟ್ಟರೆ ಅಲ್ಲೇ ಬಸ್ ಸ್ಟಾಪ್ .ಆದರೂ ನಾನು ಮಾತ್ರ ಎಂಟು ಘಂಟೆಗೇ ಹೋಗಿ ಬಸ್ ಸ್ಟಾಪ್ ನಲ್ಲಿ ಕೂರುತ್ತಿದ್ದೆ.ಎಂಟು ಘಂಟೆಯಿಂದ 8.35 ರ ತನಕ ಬರುವ ಎಲ್ಲಾ ಬಸ್ ನಲ್ಲಿ ,ಕಿಟಕಿಯ ಪಕ್ಕ ಕುಳಿತುಕೊಳ್ಳುವ ಹುಡುಗಿಯರು ಅಕಸ್ಮಾತ್ ಆಗಿ ತಲೆ ಹೊರ ಹಾಕಿ ನಕ್ಕರೆ ಅದು ’ನನ್ನನ್ನೇ ನೋಡಿ ನಕ್ಕಿದ್ದು ’ ಅಂತ ಸುಳ್ಳು ಸುಳ್ಳೇ ಸಂಭ್ರಮಿಸುತ್ತಿದ್ದೆ!

ಕಾಲೇಜು ದಿನಗಳಲ್ಲಂತೂ ಶಿಲ್ಪಾ ಸಿಗುತ್ತಾಳೆ ಅನ್ನೋ ಒಂದೇ ಒಂದು ಕಾರಣಕ್ಕೆ ಮೂರು ವರ್ಷ ಒಂದೇ ಬಸ್ ನಲ್ಲಿ ಪ್ರಯಾಣಿಸಿದ್ದೆ.ಆ ಶಿಲ್ಪಾ ಈಗ ಯಾವ ಮನೆಯ ಅಂದವನ್ನು ಹೆಚ್ಚಿಸಿದ್ದಾಳೋ ದೇವರಿಗೇ ಗೊತ್ತು !

ಕಾಲೇಜಿನಲ್ಲಿರುವಾಗ ಕೂರಲು ಸೀಟ್ ಇದ್ದರೂ ಫುಟ್ ಬೋರ್ಡ್ ನಲ್ಲಿ ನೇತಾಡಿಕೊಂಡು ಹೋಗೋದು ನಮ್ಮೆಲ್ಲರ ಹವ್ಯಾಸ.ಹೀಗೇ ಹೋದರೇನೆ ಹುಡುಗಿಯರ ಮುಂದೆ ನಾವೆಲ್ಲಾ ಮ್ಯಾಚೋಮ್ಯಾನ್ ಗಳಾಗಿ ಕಾಣಿಸೋದು ಅನ್ನೊ ಭಾವನೆ ಇತ್ತು ನಮಗೆ.ಅವತ್ತಿಗೆ AXN TV ಇರಲಿಲ್ಲ ಇದ್ದಿದ್ದರೆ ನಮ್ಮ ಸಾಹಸ ಪುಟಗೋಸಿ ಅನ್ನೋದು ಆವಾಗಲೇ ತಿಳಿಯುತ್ತಿತ್ತು ಬಹುಷ !

ಚಿಕ್ಕಂದಿನಲ್ಲಿ ನಮ್ಮನ್ನೆಲ್ಲಾ ಬೆರಗು ಮೂಡಿಸುತ್ತಿದ್ದ ವಿಷಯ ಅಂದ್ರೆ ಹತ್ತಾರು ಊರುಗಳ ಹೆಸರನ್ನು ಕಂಡಕ್ಟರ್ ಸಹಸ್ರನಾಮದ ಹಾಗೆ ಹೇಳುತ್ತಿದ್ದದ್ದು !

ಕಾಪು,ಎರ್ಮಾಳ್,ಉಚ್ಚಿಲ,ಪಡುಬಿದ್ರಿ,ಹೆಜಮಾಡಿ,ಮುಲ್ಕಿ,ಕಾರ್ನಾಡ್,ಕೊಲ್ನಾಡ್,ಮುಕ್ಕ,ಹಳೆಯಂಗಡಿ,ಸುರತ್ಕಲ್ ಹೀಗೆ ಉದ್ದಕ್ಕೆ ನಾನ್ ಸ್ಟಾಪ್ ಆಗಿ ಊರಿನ ಹೆಸರು ಹೇಳಿ ಜನರೆಲ್ಲ ಹತ್ತಿದ ಮೇಲೆ ಬಾಯಿಗೆ ಒಂದೇ ಒಂದು ಬೆರಳು ತೂರಿಸಿ ಸೀಟಿ ಊದಿ ರೈಟ್ ಪೋಯಿ ಅನ್ನೋದನ್ನು
ಬಲು ಮಜ ಕೊಡುತ್ತಿತ್ತು .

ಬಾಲ್ಯದಲ್ಲಂತೂ ಯಾವ ಹುಡುಗನನ್ನೂ ’ನೀನು ದೊಡ್ಡವನಾದ ಮೆಲೆ ಏನಾಗ್ತೀಯ?’ ಅಂತ ಕೇಳಿದ್ರೆ ’ಡ್ರೈವರ್ ’ ಅನ್ನೋ ಉತ್ತರ ಸಿಗುತ್ತಿತ್ತು.

’ಯಮಲೋಕದ ದರ್ಶನವನ್ನೇ ಮಾಡಿಸುತ್ತಾರೆ ’ ಅನ್ನೋ ಆರೋಪ ಒಂದು ಬಿಟ್ಟರೆ ಮಂಗಳೂರಿನ ಬಸ್ಸುಗಳಲ್ಲಿ ಪ್ರಯಾಣಿಸೋದೆ ಒಂದು ಮಜಾ.

17 comments:

ಹರೀಶ ಮಾಂಬಾಡಿ said...

ಮಂಗಳೂರಿನ ಕಂಡಕ್ಟರ್ , ಬಸ್ಸುಗಳ ಕುರಿತು ನಿಮ್ಮ ಬರೆಹ ಇಂಟರೆಸ್ಟಿಂಗ್. ಓದಿಸಿಕೊಂಡು ಹೋಯಿತು. ಇನ್ನೂ ಓದ್ಬೇಕು ಅನಿಸುವಸ್ಟರಲ್ಲಿ ಮುಗಿದೇ ಬಿಡೋದಾ?

Unknown said...

hmm... true.. alli busgalu haarutve...

Pramod said...

ಸತ್ಯ....ಹೌದು ನಾನು ಬಸ್ ಡ್ರೈವರ್ ಆಗುವ ಅ೦ತಾ ಇದ್ದೆ..:P
ನಮ್ಮ ಮ೦ಗಳೂರಿನ ಬಸ್ಸಲ್ಲಿ ಕೂತವರು ಆರಾಮವಾಗಿ ಜಾತ್ರೆಯ ಜೈ೦ಟ್ ವೀಲ್ ನಲ್ಲಿ ಕೂರಬಹುದು

Anonymous said...

ಅಹುದಹುದು ಸಂದೀಪ್!

ಕರೆಕ್ಟ್ ಆಗಿ ಹೇಳಿದ್ರಿ.
ನಾವು ಇತ್ತೀಚಿಗೆ ಮಂಗಳೂರಿನಿಂದ ಉಡಿಪಿಗೆ ಪ್ರಯಾಣಿಸುವಾಗ ’ಮಠ’ ಪಿಕ್ಚರ್ ಹಾಕಿದ್ರು. ಒಬ್ಬ್ರು ನಗ್ತಾ ನಗ್ತಾ ಪ್ಲಾಸ್ಟಿಕ್ ಕವರ್ ನಲ್ಲಿ ವಾಂತಿನೂ ಮಾಡ್ತಾ ಇದ್ದರು.ಸ್ಟಾಪ್ ಬಂದಾಗ ನನ್ನ ಯಜಮಾನರು ಇಳಿದ್ರಾ ಇಲ್ಲವಾ ಅಂತ ಮೊದಲು ನೋಡಿದ್ದು. ಜಗ್ಗೇಶ್ ಅವರ ಫೇವರಿಟ್ ಹೀರೋ!!!!!!
:-)
ms

Unknown said...

nice article .. till now i didn't see the yama loka.... ha !! ha!!
but mangalore udupi bus journey is far better than blore .. u will also agree i feel :-) :-).. i am very happy that they will maintain the time ...

Poorni said...

I am a Big fan of your articles from the day i read your article, 'Preethiinda Pratap ge',After that i have become a regular reader in Ur blog....rarely i get time to read
between my ofice hours...posting my comment for the first time as i was little free..i have completed reading all Ur articles now..last month they had blocked few sites and i was not able to read your blog... now again this month i'm able to access Ur blog..
Waiting to see more good topics...

sunaath said...

ಸಂದೀಪ,
ನಾನು (೪೦ ವರ್ಷಗಳ ಹಿಂದೆ)ಸುರತ್ಕಲ್ ನಲ್ಲಿ ಕಲೀತಿದ್ದಾಗಿನಿಂದಲೂ , ಮಂಗಳೂರು ಬಸ್ಸುಗಳು ಶಿಸ್ತಿನಿಂದ time keep up ಮಾಡ್ತಾ ಇರೋದನ್ನ ನೋಡ್ತಾ ಇದೀನಿ. ಈ ಥರಾ systemಅನ್ನು ನಾನು ಕರ್ನಾಟಕದಲ್ಲಿ ಮತ್ತೆಲ್ಲೂ ನೋಡಿಲ್ಲ. It`s really great.
ನೆನಪು ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು.
ರೈಟ್ ಪೋಯಿ!

ದಿವ್ಯಾ ಮಲ್ಯ ಕಾಮತ್ said...

ಸಂದೀಪ್,
ಬರಹದ ವಿಷಯ ಏನೇ ಆಗಿರಲಿ, ಅದನ್ನು ಹಾಸ್ಯ ಲೇಪನದ ಮೂಲಕ ಓದುಗರಿಗೆ ಉಣಬಡಿಸುವ ಕಲೆ ನಿಮಗೆ ಸಿದ್ಧಿಸಿದೆ. ತುಂಬಾನೇ ಚೆನ್ನಾಗಿದೆ ಬರಹ. ಊರಿನ ಕಡೆಯವರಿಗಂತೂ ಸಂತಸದ ಜೊತೆ ಒಂದು ರೀತಿಯ, ಹೆಮ್ಮೆ ಪುಳಕ ಆಗುವುದಂತೂ ನಿಜ :-)
-ದಿವ್ಯಾ.

Anonymous said...

ಕಾಮತರೇ,

ವಾರದ ಹಿಂದೆ ಹೋಗಿದ್ದೆ ಮಂಗಳೂರಿಗೆ. ನಾನು ಹೋಗಿದ್ದು ಗಲಾಟೆ ಮಾಡ್ಬೇಕು ಅಂತಾನೆ!- ಚಡ್ಡಿ ದೋಸ್ತು ಮಂಗಳೂರು ಮಂಜುನಾಥನ ಮದುವೆ ನೋಡಿ ಅಲ್ಲಿಷ್ಟು ಗಲಾಟೆ ಮಾಡ್ವ ಅಂತ ಅಷ್ಟೇ. ( ಗಂಟಲು ಗಲಾಟೆ ಬಿಟ್ಟು ಬೇರೆ ಯಾವದೂ ಮಾಡುವ ಸಾಮರ್ಥ್ಯವಿಲ್ಲ ಸ್ವಾಮೀ..)

ಮದುವೆ ಗಲಾಟೆ ಮುಗಿಸಿ, ಬಸ್ ಸ್ಟ್ಯಾಂಡಿಗೆ ಬಂದರೆ ಅಲ್ಲಿ ಅದೆಂಥಾ ಗಲಾಟೆ ಮಾರಾಯ್ರೆ.. ಸಿಕ್ಕಿದ್ದೊಂದು ಬಸ್ಸು ಹತ್ತಿ ಡ್ರೈವರ್ ಪಕ್ಕಾನೆ ಕೂತ್ಕೊಂಡೆ. ಮಂಗಳೂರಿಂದ ಉಡುಪಿವರೆಗೂ. ಎಂಥಾ ಸ್ಪೀಡು ಮರ್ರಾ.. ಸಖತ್ ಓವರ್ ಟೇಕಿಂಗು. ಮೊದ್ಲೇ ಅಂದಾಜಿದ್ದಿದ್ರೆ ಲೆಕ್ಕ ಮಾಡ್ತಿದ್ನೇನೋ? ಅದೊಂದು ತಪ್ಪಿಹೋಯ್ತು ನೋಡಿ!

ಬಸ್ ಡ್ರೈವರನಿಂದ ತಿಳಿದುಕೊಂಡಿದ್ದು:...ಗಾಡಿ ಓಡಿಸುವಾಗ ಅನುಮಾನಕ್ಕೆ ಆಸ್ಪದವಿರಬಾರದು. ಓವರ್ ಟೇಕ್ ಮಾಡುವಾಗ ಒಂದು ನಿರ್ದಿಷ್ಟ ಅಂತರವನ್ನು ಅಂದಾಜು ಮಾಡಬೇಕು. ಮತ್ತೆ ಎಕ್ಸಿಲರೇಟರ್ ಮೆಟ್ಟಿದರೆ ಕಾಲು ತೆಗೆಯುವಂತಿಲ್ಲ. ಲೆಕ್ಕಾಚಾರದಲ್ಲಿ ಹೆಚ್ಚುಕಡಿಮೆಯಾದರೆ ಅದು ಮುಂದಿನಿಂದ ಬರುತ್ತಿರುವ ಮತ್ತೂ ಹಿಂದಕ್ಕಾಗುತ್ತಿರುವ ಗಾಡಿಯವರ ಜವಾಬ್ದಾರಿ. ( ನಾನೀಗ ಅದನ್ನೇ ಬೆಂಗಳೂರಿನಲ್ಲಿ ಆಚರಣೆಗೆ ತಂದಿದ್ದೇನೆ. ಆದರೆ ನನ್ನ ಗಾಡಿಗೆ ಚಕ್ರ ಮಾತ್ರ ಕಡಿಮೆ!)

ವಿ.ಸೂ: ಯಾವುದಕ್ಕೂ ಒಂದು ಜೀವ ವಿಮೆಯಿರಲಿ!!

PaLa said...

ಹೆಚ್ಚು ಕಮ್ಮಿ ಇದೇ ಅನುಭವ..
ಕೋಟೇಶ್ವರ, ಕುಂಭಾಶಿ, ತೆಕ್ಕಟ್ಟೆ, ಕೋಟ, ಸಾಲಿಗ್ರಾಮ, ಸಾಸ್ತಾನ, ಬ್ರಹ್ಮಾವರ, ಉಡುಪಿ ಲೈನ್, ಉಡುಪಿ ಲೈನ್,,, ಹಾ ರೈಟ್ ಪೋಯ್ :)

Guruprasad said...

ಹಾ ಹ್ಹ ... ರೈಟೆ ಪೋಯಿ... ಚೆನ್ನಾಗಿದೆ... ಸಿಂಪಲ್ ಆಗಿ ಹೇಳಿದ್ದಿರ ನಿಮ್ಮೂರ ಬಸ್ ಅನುಭವ. (ಹಾಗೆ ಅರ್ದ ಗಂಟೆ ಕೂತು ಹುಡುಗಿರ್ನ ನೋಡೋ ನಿಮ್ಮ ಅನುಭವ.... ...)
ಗುರು

Keshav.Kulkarni said...

ತುಂಬ ಚೆನ್ನಾಗಿದೆ ಮರಾಯ್ರೇ!

- ಕೇಶವ

ಸುಧೇಶ್ ಶೆಟ್ಟಿ said...

ಸ೦ದೀಪ್...

ಎಡ್ಡೆ ಉ೦ಡು ಈ ಲೇಖನ....

ನಮ್ಮ ಊರಿನ ಬಸ್ಸು ವ್ಯವಸ್ಥೆಯ ಬಗ್ಗೆ ನ೦ಗೆ ತು೦ಬಾ ಖುಷಿ ಅನಿಸುತ್ತದೆ... ನಾನು ಕೂಡ ಗಣೇಶ್, ದೇವಿ ಪ್ರಸಾದ್ ಮು೦ತಾದ ಬಸ್ಸುಗಳ ಖಾಯ೦ ಗಿರಾಕಿಯಾಗಿದ್ದೆ.... ಕಾಪುವಿನಲ್ಲಿ ಓದುತ್ತಿರುವಾಗ ಮ೦ಗಳೂರು express ಬಸ್ಸುಗಳಲ್ಲಿ ಪ್ರಯಾಣ ಮಾಡುತ್ತಿದ್ದೆ. ಆ ಪ್ರಯಾಣದ ಮಜಾನೇ ಬೇರೆ.....

ಊರಿಗೆ ಹೋದಾಗಲೆಲ್ಲಾ ಕಾಲೇಜಿಗೆ ಹೋಗುತ್ತೇನೆ... ಆಗ ಅದೇ ಗಣೇಶ್, ದೇವಿ ಪ್ರಸಾದ್ ಬಸ್ಸುಗಳಲ್ಲಿ ಹೋಗುವಾಗ ಕಾಲೇಜು ದಿನಗಳ ನೆನಪು ಉಕ್ಕಿ ಬರುತ್ತದೆ....

MMS ಅ೦ತ ಒ೦ದು ಬಸ್ಸು ಉಡುಪಿಯಿ೦ದ ಮ೦ಗಳೂರಿಗೆ ಹೋಗುತ್ತದೆ... ಅದರ ಓನರ್ ಮಗ ನಮ್ಮ ಕಾಲೇಜಿನಲ್ಲೇ ಪಿ.ಯು. ಓದುತ್ತಿದೆ... ಅದನ್ನು ಸ್ವಲ್ಪ ನಿಧಾನವಾಗಿ ಓಡಿಸುತ್ತಿದ್ದುದರಿ೦ದ ನಾನು "ಮೆಲ್ಲ ಮೆಲ್ಲ ಸರ್ವೀಸ್" ಅ೦ತ ಅವನಿಗೆ ತಮಾಷೆ ಮಾಡುತ್ತಿದ್ದವು....

ಬಾಲ್ಯದ ನೆನಪುಗಳಿಗೆ ಜಾರುವ೦ತೆ ನಿನ್ನ ಲೇಖನಕ್ಕೆ ತು೦ಬಾ ಥ್ಯಾ೦ಕ್ಸ್.....

ರೈಟ್ ಪೋಯಿ!

Anonymous said...

ಸಂದೀಪ್,
ರೈಟ್ಸ್ ಪೋಯಿ.. ನನ್ನ ಸುರತ್ಕಲ್ಲಿನ ದಿನಗಳನ್ನು ನೆನಪಿಸಿತು, ತುಂಬ ಚನ್ನಾಗಿದೆ. ಮುಂದೆ ರಸ್ತೆ ಕಾಣುವಂತೆ ಕೂತು/ನಿಂತು ಆ ಬಸ್ಸುಗಳಲ್ಲಿ ಪ್ರಯಾಣಿಸುವಾಗ ಜೀವ ಅಂಗೈಯಲ್ಲೆ ಅನಿಸಿತ್ತು ಎಷ್ಟೋ ಸಾರಿ :). ಆದರೂ ಬೇಕಾದಾಗ ಹೆಚ್ಚು ಕಾಯಿಸದೆ ಬಸ್ಸು ಸಿಗುವದು ಅಲ್ಲಿ ಮಾತ್ರ ಅನ್ನುವದೂ ಹೌದು.

ಲಿಂಕ್ ಕೊಟ್ಟ ಕೇಶವರಿಗೆ ಧನ್ಯವಾದ.

ಅನಿಲ

ಸಂದೀಪ್ ಕಾಮತ್ said...

ಮೆಚ್ಚಿದವರಿಗೆಲ್ಲಾ ಧನ್ಯವಾದಗಳು:)

ಧರಿತ್ರಿ said...

ರೈಟ್ ಪೋಯಿ..ಸಕತ್ತಾಗಿದೆ. ನಂಗೂ ಸ್ಕೂಲ್ ಡೇಸ್ ನೆನಪಾದುವು.
-ಧರಿತ್ರಿ

ಪ್ರದೀಪ್ said...

ನಮ್ಮ ಹಳೇ ದಿನಗಳನ್ನೆಲ್ಲ ನೆನಪಿಸಿಬಿಟ್ರಿ! ಸರ್ವೀಸ್ ಬಸ್ ಅಲ್ಲದಿದ್ರೂ, ಸಿಟಿ ಬಸ್ನಲ್ಲೇ ನಮ್ಮ ಓಡಾಟವಾಗಿತ್ತು.. ಇವೆರಡಂತೂ ನಿಜ, ಎಷ್ಟು ಘಂಟೆಗೆ ಸಿಗುತ್ತೀರಾ ?’ ಅನ್ನೋ ಪ್ರಶ್ನೆ ಕೇಳಿದ್ರೆ ಇಂತಿಷ್ಟೇ ಘಂಟೆಗೆ ಅಲ್ಲಿರುತ್ತೇನೆ ಅಂತ ಖಚಿತವಾಗಿ ಹೇಳಲು ಸಾಧ್ಯವಾಗೋದು, ಮತ್ತು ’ಯಮಲೋಕದ ದರ್ಶನವನ್ನೇ ಮಾಡಿಸುತ್ತಾರೆ ’ ಅನ್ನೋ ಆರೋಪ ಒಂದು ಬಿಟ್ಟರೆ ಮಂಗಳೂರಿನ ಬಸ್ಸುಗಳಲ್ಲಿ ಪ್ರಯಾಣಿಸೋದೆ ಒಂದು ಮಜಾ...
;-)