Saturday, March 28, 2009

ಹೇ ಕ್ಯಾಸೆಟ್, ನಿನಗೊಂದು ಭಾವಪೂರ್ಣ ಶ್ರದ್ಧಾಂಜಲಿ.....ಬಹಳ ಸಮಯದ ನಂತರ ರೂಮ್ ಕ್ಲೀನ್ ಮಾಡುವ ಅನಿವಾರ್ಯತೆ ಉಂಟಾಯಿತು!ಕಳೆದ ಏಳು ವರ್ಷಗಳಿಂದ ಬೆಂಗಳೂರಿನಲ್ಲಿದ್ದು ಒಂದು ದೊಡ್ಡ ಡಬ್ಬಿ ಸಾಮಗ್ರಿಗಳನ್ನು ಬಹಳ ಜೋಪಾನಾವಾಗಿ ಕಾಪಾಡಿಕೊಂಡು ಬಂದಿದ್ದೆವು ನಾವೆಲ್ಲ ಗೆಳೆಯರು.ಈಗ ಅನಿವಾರ್ಯವಾಗಿ ಕೆಲವು ವಸ್ತುಗಳನ್ನು ತ್ಯಾಗ ಮಾಡಬೇಕಾದ ಪರಿಸ್ಥಿತಿ ಒದಗಿ ಬಂದಿದೆ.
ಅದರಲ್ಲಿ ಒಂದು ಚಿಕ್ಕ ಡಬ್ಬಿ ಬರೀ ಕ್ಯಾಸೆಟ್ ಗಳದ್ದೆ ಇದೆ.ಈ ಸಿ.ಡಿ ಹಾವಳಿ ಶುರು ಆಗೋ ಮೊದಲು ಕೊಂಡ ಕ್ಯಾಸೆಟ್ ಗಳು ಬಹಳಷ್ಟು ಹಾಗೆ ಇವೆ.ಮೊನ್ನೆ ಊರಿಗೆ ಹೋದಾಗ ಮನೆಯಲ್ಲಿನ ಕಪಾಟು ತೆರೆದರೆ ಸುಮಾರು ಐನೂರರಷ್ಟು ಕ್ಯಾಸೆಟ್ ಗಳನ್ನು ನೋಡಿ ತಲೆ ಸುತ್ತೇ ಬಂದಿತ್ತು!ಅದರಲ್ಲಿ ಬಹುತೆಕ ಕ್ಯಾಸೆಟ್ ಗಳು ಭಜನೆಯವು.ಪುತ್ತೂರು ನರಸಿಂಹ ನಾಯಕ್,ವಿದ್ಯಾಭೂಷಣ,ಬೀಮಸೇನ ಜೋಷಿ,ವೆಂಕಟೀಶ ಕುಮಾರ್,ಶೇಷಗಿರಿ ದಾಸ್ ,ಸುರೆಶ್ ವಾಡೇಕರ್ ಹೀಗೆ ಹತ್ತು ಹಲವು ಪ್ರಖ್ಯಾತರು ಹಾಡಿರುವ ಹಾಡುಗಳ ಕ್ಯಾಸೆಟ್ ಗಳು!ಹಾಗೆ ಕಪಾಟಿನ ಬಾಗಿಲು ಮುಚ್ಚಿ ಮತ್ತೆ ಬೆಂಗಳೂರಿಗೆ ವಾಪಸ್ ಆಗಿದ್ದೆ.

ಆದರೆ ಬೆಂಗಳೂರಿಗೆ ಬಂದ ಮೇಲೆ ರೂಮ್ ಕ್ಲೀನ್ ಮಾಡುವಾಗ ಮತ್ತೆ ಈ ಕ್ಯಾಸೆಟ್ ಗಳೇ ಸಿಗಬೇಕಾ?

ಊರಲ್ಲಿರಬೇಕಾದ್ರೆ ನನ್ನ ಅಣ್ಣನಿಗೆ ಕ್ಯಾಸೆಟ್ ಹುಚ್ಚಿತ್ತು.ಎಲ್ಲಾ ಥರದ ಕ್ಯಾಸೆಟ್ ಗಳು ,ಅಂದರೆ ಭಜನೆ ,ನಾಟಕ,ಗಝಲ್,ಹಿಂದಿ ,ಕನ್ನಡಚಿತ್ರಗಳ ಕ್ಯಾಸೆಟ್ ಹೀಗೆ ಎಲ್ಲಾ ಬಗೆಯ ಕ್ಯಾಸೆಟ್ ಗಳೂ ನಮ್ಮ ಬಳಿ ಇದ್ದವು.
ಒಂದು ದಿನ ಅಣ್ಣ ಬಹಳ ಇಷ್ಟ ಪಡುತ್ತಿದ್ದ ’ಇಮ್ತಿಹಾನ್’ ಅನ್ನೋ ಹಿಂದಿ ಕ್ಯಾಸೆಟ್ ಒಂದನ್ನು ಪಕ್ಕ ಮನೆಯ ಹುಡುಗನಿಗೆ ಕೊಟ್ಟಿದ್ದೆ.ಬೆಳಿಗ್ಗೆಯೊಳಗೆ ಕ್ಯಾಸೆಟ್ ಅನ್ನು ಹಿಂದಿಗುರಿಸುತ್ತಾನೆ ಅನ್ನೋ ಭರವಸೆಯೊಂದಿಗೇ ಕೊಟ್ಟಿದ್ದೆ.ಆದ್ರೆ ಆ ಪಾಪಿ ಅದನ್ನು ಕಳಕೊಂಡಿದ್ದ!ಕಳಕೊಂಡಿದ್ದ ಅನ್ನೋದಕ್ಕಿಂತ ಆ ಕಳ್ಳ ಅದನ್ನು ವಾಪಸ್ ಕೊಡದೇ ’ಕಳಕೊಂಡಿದ್ದೀನಿ ’ ಅಂತ ಸುಮ್ಮನೆ ಹೇಳಿದ್ದ ಅನ್ನೋದೆ ಸರಿ ಅನ್ನಿಸುತ್ತೆ.
ಆ ಕ್ಯಾಸೆಟ್ ಅಣ್ಣನಿಗೆ ವಾಪಾಸ್ ಕೊಡಲು ನಾನು ಬಹಳಷ್ಟು ಒದ್ದಾಡಿದ್ದೆ.ಇಡೀ ಮಂಗಳೂರು ,ಉಡುಪಿ,ಮಣಿಪಾಲ ಹುಡುಕಿದ್ರೂ ನನಗೆ ಆ ಕ್ಯಾಸೆಟ್ ಸಿಕ್ಕಿರಲಿಲ್ಲ.ಬದಲಾಗಿ ಅದೇ ಸಿನೆಮಾದ ಹಾಡಿನ ಜೊತೆ ಬೆರೆ ಸಿನೆಮಾದ ಹಾಡುಗಳಿರುವ combination ಕ್ಯಾಸೆಟ್ ಸಿಕ್ಕಿತ್ತು.ಆದರೆ ಆ ಕ್ಯಾಸೆಟ್ ವಾಪಾಸ್ ಕೊಟ್ಟಿಲ್ಲ ಅಂದ್ರೆ ನನ್ನಣ್ಣ ನನ್ನನ್ನು ಅಡ್ಡಡ್ಡ ಸಿಗಿದು ತೋರಣ ಕಟ್ಟೋದು ಖಂಡಿತ ಅನ್ನೋ ಭಯ ನನಗಿತ್ತು.

ಸಧ್ಯ ಮನೆಯಲ್ಲಿದ್ದ ಕೆಲವು ಪ್ರಭಾವಿ ಜನರ ಕೃಪೆಯಿಂದ ನಾನು ಅಣ್ಣನ ಕೈಯಿಂದ ಆ ದಿನ ಬಚಾವಾಗಿದ್ದೆ.

ಈಗ ಅದೇ ಕ್ಯಾಸೆಟ್ ಗಳನ್ನು ಕೈಯಾರೆ ಬಿಸಾಕುವ ಅನಿವಾರ್ಯತೆ ಉಂಟಾಗಿದೆ.ಉಚಿತವಾಗಿ ಕೊಟ್ಟರೂ ಈ ಕ್ಯಾಸೆಟ್ ಅನ್ನೋ ವಸ್ತುವನ್ನು ತಗೊಳ್ಳಲು ಪೌರಕಾರ್ಮಿಕರೂ ತಯಾರಿಲ್ಲ.

ಯಾಕಂದ್ರೆ ಅವರ ಮನೆಗಳಲ್ಲೂ ಈಗ ಸಿ.ಡಿ ಪ್ಲೇಯರ್ ಗಳು ರಾರಾಜಿಸುತ್ತಿವೆ!

ಕಾಲಕ್ಕೆ ತಕ್ಕಂತೆ ನಾವೂ ಬದಲಾಗಬೆಕು .ಈಗಿರುವ MP3 Player ಹಳೆಯ ಕ್ಯಾಸೆಟ್ ಗಳಿಗಿಂತ ಎಷ್ಟೋ ಪಾಲು ಉತ್ತಮ.ಹಾಗಾಗಿ ಹಳೆಯ ಕ್ಯಾಸೆಟ್ ಗಳು ಮಾಯವಾಗಿರುವುದರಲ್ಲಿ ಯಾವುದೇ ಆಶ್ಚರ್ಯ ಇಲ್ಲ.

ಆದರೆ ಈ ಕ್ಯಾಸೆಟ್ ಗಳು ಬಹಳಷ್ಟು ವರ್ಷ ನಮ್ಮ ಮನ ತಣಿಸಿರುವುದರಿಂದ ಅದಕ್ಕೊಂದು ಗೌರವಯುತ ಬೀಳ್ಕೊಡುಗೆ ನೀಡುವುದು ಅನಿವಾರ್ಯ ಆನಿಸ್ತಾ ಇದೆ.

ಆಗಿನ ಕಾಲದಲ್ಲಿ ಕ್ಯಾಸೆಟ್ ಅನ್ನೋದೇ ಒಂದು ಲಕ್ಸುರಿ.ಬಹಳಷ್ಟು ಜನ ಹೊಟ್ಟೆ ಬಟ್ಟೆಗೇ ಕಷ್ಟಪಡುವುವರಾಗಿದ್ದರಿಂದ ಟೇಪ್ ರೆಕಾರ್ರ್ಡರ್, ಕ್ಯಾಸೆಟ್ ಹೊಂದಿರುವವರಿಗೆ ತಕ್ಕ ಮಟ್ಟಿನ ಗೌರವ ಇತ್ತು.

ಒಂದು ದಿನ ನಾನು ನಮ್ಮ ಪರಿಚಿತ RSS ಧುರೀಣರೊಬ್ಬರಿಂದ ’ಭಾರತ ದರ್ಶನ’ ಕ್ಯಾಸೆಟ್ ತಂದಿದ್ದೆ.ಮಾಮೂಲಿಯಂತೆ ಕ್ರಿಕೆಟ್ ಆಡಿ ಮನೆಗೆ ವಾಪಾಸ್ ಆಗಿ ಸುಸ್ತಾಗಿ ಫ್ಯಾನ್ ಹಾಕಿ ಹಾಸಿಗೆಯಲ್ಲಿ ಮಲಗಬೇಕೆನ್ನಿಸಿ ಟೇಪ್ ರೆಕಾರ್ಡರ್ ಆನ್ ಮಾಡಿದ್ದೆ.ಅಸಡ್ಡೆಯಿಂದ ಕೈಯ್ಯಲ್ಲಿರೊ ಬ್ಯಾಟ್ ನಿಂದಲೇ ಟೇಪ್ ರೆಕಾರ್ಡರ್ ಅನ್ನು ಆನ್ ಮಾಡಿ ಹಾಸಿಗೆಯಲ್ಲಿ ಬಿದ್ದುಕೊಂಡಿದ್ದೆ ನಾನು.
ಐದು ನಿಮಿಷವಾದರೂ ವಿದ್ಯಾನಂದ ಶೆಣೈಯವರ ಸದ್ದಿಲ್ಲದಾಗ ಸಂಶಯ ಬಂದು ಟೇಪ್ ರೆಕಾರ್ಡರ್ ಬಳಿ ಹೋಗಿ ನೋಡಿದ್ರೆ ನನ್ನ ಗ್ರಹಚಾರಕ್ಕೆ ನಾನು ರೆಕಾರ್ಡ್ ಬಟನ್ ಅನ್ನು ಒತ್ತಿದ್ದೆ .ಪ್ಲೇ ಹಾಗೂ ರೆಕಾರ್ಡ್ ಎರಡೂ ಬಟನ್ ಗಳು ಒಟ್ಟಿಗೆ ಅದುಮಿದ್ದರಿಂದ ಕ್ಯಾಸೆಟ್ ರೆಕಾರ್ಡ್ ಮೋಡ್ ಗೆ ಹೋಗಿತ್ತು.’ಭಾರತ ದರ್ಶನ’ ದ ಶುರುವಿಗೆ ಬರುವ ಅದ್ಭುತ ಹಾಡೊಂದು ನನ್ನ ಎಡವಟ್ಟಿನಿಂದಾಗಿ ಅಳಿಸಿ ಹೋಗಿತ್ತು.ಆ RSS ಧುರೀಣರು ನನಗೆ ಬಿಟ್ಟಿ ’ಪಾತಾಳ ದರ್ಶನ’ ಮಾಡಿಸುತ್ತಾರೇನೋ ಅನ್ನೋ ಭಯ ನನಗೆ ಆಗ ಕಾಡಿತ್ತು.ಸಧ್ಯ ಅವರು ಅಷ್ಟು ದುಷ್ಟರಾಗಿರಲಿಲ್ಲ.ಬದಲಾಗಿ ನನಗೆ ಇನ್ನೊಂದು ಕ್ಯಾಸೆಟ್ ಕೇಳಲು ಕೊಟ್ರು!

ಕ್ಯಾಸೆಟ್ ನ ಇನ್ನೊಂದು ಸಮಸ್ಯೆ ರೀಲ್ ಕಚ್ಚಿಕೊಳ್ಳೋದು! ಚೆನ್ನಾಗಿ ಹಾಡುತ್ತಿದ್ದ ಕ್ಯಾಸೆಟ್ ಅಚಾನಕ್ ಆಗಿ ನಾಯಿ ಮರಿ ಕೂಗಿದ ಹಾಗೆ ಕೂಗತೊಡಗಿತು ಅಂದರೆ ಅದರ ರೀಲ್ ಸಿಕ್ಕಿ ಕೊಂಡಿತು ಅಂತಲೇ ಲೆಕ್ಕ.ಕೂಡಲೇ ಏನಾದ್ರೂ ಟೇಪ್ ರೆಕಾರ್ಡರ್ ಅನ್ನು off ಮಾಡಿಲ್ಲ ಅಂದ್ರೆ ಆ ಕ್ಯಾಸೆಟ್ ಅನ್ನು ಮರೆತು ಬಿಡುವುದೇ ಸೂಕ್ತ ನೀವು .
ರೀಲ್ ಸಿಕ್ಕಿಕೊಂಡಾಗ ಅದನ್ನು ಬಿಡಿಸುವುದೇ ಒಂದು ಕಲೆ!ಹುಷಾರಾಗಿ ರೀಲ್ ಬಿಡಿಸಿ ಅದನ್ನು ಮತ್ತೆ ಸುರುಳಿ ಸುತ್ತುವುದರೊಳಗೆ ಕೆಲವೊಮ್ಮೆ ರೀಲ್ ತಿರುಚಿ ಹೋಗೋದುಂಟು.ಒಮ್ಮೆ ರೀಲ್ ತಿರುಚಿ ಏನಾದ್ರೂ ಒಳಗೆ ಹೋಗಿ ಬಿಟ್ರೆ ಮತ್ತೆ ಹಾಡುಗಳೆಲ್ಲಾ ಅರಬಿಕ್ ಸ್ಟೈಲ್ ನಲ್ಲ್ ಕೇಳಿಸುವುದು!ಅದನ್ನು ಮತ್ತೆ ಸರಿ ಪಡಿಸಲು ಕ್ಯಾಸೆಟ್ ಬಿಚ್ಚಬೇಕು.
ಚೆನ್ನಾಗಿರುತ್ತೆ ಅಂತ ಯಾವಾಗಲೂ ಮಹಮ್ಮದ್ ರಫಿ ,ಲತಾ ಮಂಗೇಶ್ಕರ್ ರ ಹಳೆಯ ಕ್ಯಾಸೆಟ್ ಗಳನ್ನು ಕೇಳ್ತಾ ಇದ್ರೆ ಹೆಡ್ ಮೇಲೆ ಅಷ್ಟು ಕೊಳೆ ಕೂರೋದಂತೂ ಸಾಮಾನ್ಯ.ಅದನ್ನು ಕ್ಲೀನ್ ಮಾಡಿಲ್ಲ ಅಂದ್ರೆ ಲತಾ ಮಂಗೇಷ್ಕರ್ ಹಾಡಿರೋ ಹಾಡುಗಳು ಉಶಾ ಉತ್ತಪ್ ಹಾಡಿದ ಹಾಗೆ ಕೇಳಿಸೋದುಂಟು.

ಅಪ್ಪನ ಬಿಳಿ ಪಂಚೆಯ ಅಂಚಿನಲ್ಲಿ ಅದನ್ನು ಕ್ಲೀನ್ ಮಾಡಿದರಷ್ಟೇ ಹೆಡ್ ನಲ್ಲಿ ಎಷ್ಟು ಧೂಳು ಕೂತಿತ್ತು ಅಂತ ಗೊತ್ತಾಗೋದು!ಕೆಲವರು ಅದಕ್ಕೆಂದೇ ಹೆಡ್ ಕ್ಲೀನರ್ ಗಳನ್ನು ತರುತ್ತಿದ್ದದ್ದುಂಟು.ಆದರೆ ನಮಗೆ ದೈವದತ್ತವಾದ ಎಂಜಲು ಹಾಗೂ ಅಪ್ಪನ ಬಿಳಿ ಪಂಚೆ ಇರಬೇಕಾದ್ರೆ ಹೆಡ್ ಕ್ಲೀನರ್ ಯಾಕೆ ಅಲ್ವಾ?

ಈಗಿನ MP3 Player ಗಳಲ್ಲಾದ್ರೆ ಇಷ್ಟ ಪಟ್ಟ ಹಾಡನ್ನು ಆರಾಮಾಗಿ ಕೇಳಬಹುದು.ಕ್ಯಾಸೆಟ್ ಗಳ ಒಂದು ದೊಡ್ಡ ಸಮಸ್ಯೆ ಅಂದ್ರೆ ಯಾವುದಾದರೂ ನಿಶ್ಚಿತ ಹಾಡು ಕೇಳಬೇಕಾದ್ರೆ ಇಡೀ ಕ್ಯಾಸೆಟ್ forward ಮಾಡಬೇಕು!ಆ ಹಾಡನ್ನು ಹುಡುಕುವುದೇ ದೊಡ್ಡ ಸಮಸ್ಯೆ!ಹಾಡನ್ನು ಪೂರ್ತಿ ಕೇಳಿಯಾದ ಮೇಲೆ ಮತ್ತೆ ಕೇಳಬೇಕೆಂದರೆ ಮತ್ತೆ ಅದೇ ರಿವೈಂಡ್ ಬಟನ್ನೇ ಗತಿ.

ಲವ್ ಫೇಲ್ ಆಗಿ ಮುಖೇಶ್ ನ ಯಾವುದಾದರೂ ಹಾಡು ಕೇಳ್ತಾ ಇದ್ರೆ ಈ ರಿವೈಂಡ್ ,ಫಾರ್ವರ್ಡ್ ದೇ ಒಂದು ದೊಡ್ಡ ಸಮಸ್ಯೆ.ಒಮ್ಮೆ ಹಾಡು ಕೇಳಿದ ಮೇಲೆ ಮತ್ತೆ ಕೇಳಲು ರಿವೈಂಡ್ ಮಾಡಬೇಕು.ಈ ರಿವೈಂಡ್ ಫಾರ್ವರ್ಡ್ ಗೋಳಿನಿಂದ ಲವ್ವೇ ಬೇಡ ಅನ್ನಿಸೋದೂ ಉಂಟು ಒಮ್ಮೊಮ್ಮೆ.ಅಪ್ಪಿ ತಪ್ಪಿ ಏನಾದ್ರೂ ಬಹಳ ಸಾರಿ ರಿವೈಂಡ್ ಫಾರ್ವರ್ಡ್ ಮಾಡಿದ್ರಂತೂ ಕ್ಯಾಸೆಟ್ ರೀಲ್ ತುಂಡಾಗಿ ಪುಳಕ್ಕನೆ ಕ್ಯಾಸೆಟ್ ಒಳಗೆ ಸೇರೋದುಂಟು .ಅದನ್ನು ಮತ್ತೆ ಸ್ಕ್ರೂ ಬಿಚ್ಚಿ ರೀಲ್ ಗೆ ಒಂದಿಷ್ಟು ಅಂಟು ಹಚ್ಚಿ ಜೋಡಿಸಿಬೇಕು.

ಈಗ ಕ್ಯಾಸೆಟ್ ನ ಅರ್ಧ ಭಾಗದಷ್ಟಿರೋ Apple iPod ಅದರ ಜಾಗ ಆಕ್ರಮಿಸಿದೆ.ಕ್ಯಾಸೆಟ್ ಗಳಿಗಿಂತ ಉತ್ಕೃಷ್ಟ ಮಟ್ಟದ ಸಂಗೀತ ಈ iPod ನಲ್ಲಿ ಕೇಳಬಹುದು.

ಆದರೆ ನಮ್ಮನ್ನು ಬಹಳಷ್ಟು ವರ್ಷ ರಂಜಿಸಿದ ,ನಮ್ಮ ದುಖ ದುಮ್ಮಾನಗಳಿಗೆ ಸಾಥ್ ನೀಡಿದ ಈ ಕ್ಯಾಸೆಟ್ ಗಂತೂ ಒಂದು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸದೇ ಇರಲಾಗುವುದಿಲ್ಲ.

ಹೇ ಕ್ಯಾಸೆಟ್ ನಿನ್ನನ್ನು ದೂರಮಾಡುತ್ತಿರುವುದಕ್ಕೆ ಕ್ಷಮಿಸಿಬಿಡು.

ಫೋಟೋ ಕೃಪೆ: ಸ್ವಾಮಿ ಈ ಫೋಟೋ ನಾವೇ ತೆಗಿದಿರೋದು ಹಾಗಾಗಿ ಯಾರ ಕೃಪೆಯೂ ಬೇಕಿಲ್ಲ ! .....

17 comments:

Unknown said...

ತುಂಬಾ ಚೆನ್ನಾಗಿದೆ! ನಿಜವಾಗೂನು ಕ್ಯಾಸೆಟ್ ಕಾಲ ತುಂಬಾ ಮಜ ತರುತ್ತಿತ್ತು. ಒಂದು ಉತ್ತಮ ಹಾಡಿಗೆ ಪರದಾಡಿ ಎಲ್ಲಿಂದಲೋ ಕ್ಯಾಸೆಟ್ ತರಬೇಕಾಗುತ್ತೆ. ಈಗೆಲ್ಲ ಐ ಪೋಡ್ ಬಂದು ಒಂದು ಚಿಟಿಕೆಯಲ್ಲಿ ಬೇಕಾದ ಹಾಡು ಕೇಳಬಹುದು! ಈಗ ಹಳೆಯ ಕ್ಯಾಸೆಟ್ ಕಂಡಾಗ ಕನಿಕರ ಪಡಬೇಕಾಗುತ್ತೆ.

Shivanand said...

ಸಂದೀಪ್, ನೀವು ಬರೆದಿದ್ದರಲ್ಲಿ ಹೆಚ್ಚಿನವು ನನಗೂ ಅನ್ವಯವಾಗುತ್ತವೆ. ನಾನೂ ತುಂಬಾ ಸಲ ಸಿಕ್ಕಿಹಾಕಿಕೊಂಡ ರೀಲನ್ನು ಬಿಡಿಸಿದ್ದೇನೆ. ಒಂದು ಸಲವಂತೂ ಒಂದು ಕ್ಯಾಸೆಟ್ ನ ರೀಲನ್ನು ತೆಗೆದು ಇನ್ನೊಂದಕ್ಕೆ ಹಾಕಿದ್ದೆ(ಅದಲು ಬದಲು). Operation Success !!

"ಕಡಲತೀರ"ದ ಊರುಗಳಲ್ಲಿ ಇನ್ನೊಂದು ಸಮಸ್ಯೆ ಇದೆ. ಅಲ್ಲಿ ತೇವಾಂಶ ಜಾಸ್ತಿ ಇರೋದ್ರಿಂದ ಕ್ಯಾಸೆಟ್ ಗಳಲ್ಲಿ ಬಹಳ ಬೇಗ fungus ಆಗುತ್ತೆ.

ನನ್ನ ಹತ್ರನೂ ತುಂಬಾ ಕ್ಯಾಸೆಟ್ ಗಳಿವೆ. ಏನು ಮಾಡೋದೋ ಗೊತ್ತಿಲ್ಲ. ಹಳೇ ಕಬ್ಬಿಣ ಹಳೇ ಪೇಪರ್ ಗೆ ಗಿರಾಕಿಗಳು ಸಿಗ್ತಾರೆ. ಆದ್ರೆ ಈ ಹಳೇ ಕ್ಯಾಸೆಟ್ ಯಾರಿಗೆ ಬೇಕು ? ಅಲ್ವಾ ?

sunaath said...

ಸಂದೀಪ,
ಕ್ಯಾಸೆಟ್‍ಗಳಿಗೆ ವಿದಾಯ ಹೇಳುವ ನಿಮ್ಮ ಜೊತೆಗೆ ನನ್ನ ದನಿಯನ್ನೂ ಸೇರಿಸುತ್ತೇನೆ.
ನಮ್ಮಲ್ಲಿರುವ ಕ್ಯಾಸೆಟ್‍ಗಳೂ ಸಹ ಈಗ ನಾಕಾಮ್ ಆಗಿವೆ. ಆದರೆ ಚೆಲ್ಲಬೇಕೆಂದರೆ sentiments ಅಡ್ಡಿಬರುತ್ತವೆ!
ನಿಮ್ಮ ಲೇಖನದಲ್ಲಿ ಭಾವನೆ ಹಾಗು ತಿಳುವಿನೋದ ಚೆನ್ನಾಗಿ
ಬೆರೆತಿವೆ.

Anonymous said...

ಮಜ,ಮಜವಾದ ವಿಷಯ ಹೆಕ್ಕಿಕೊಂಡು ಬಂದು ಹೊಟ್ಟೆ ಉರಿಸುತ್ತೀರಿ ನೀವು! ಚೆಂದದ ಬರಹ...ನನ್ನ ಬಳಿಯೂ ಕಾಳಿಂಗ ನಾವುಡರ ಒಂದಷ್ಟು ಕ್ಯಾಸೆಟ್‌ಗಳಿದ್ದವು. ನಿಮ್ಮ ಬರಹ ಓದಿದ ಮೇಲೆ ನೆನಪಾಯಿತು. ಯಾವುದಕ್ಕೂ ಇದೆಯಾ ಅಂತಾ ಒಂದ್ಸಲ ಹುಡುಕಿ ನೋಡುವೆ!!!
ಕೋಡ್ಸರ

Prabhuraj Moogi said...

ನನ್ನ ಹತ್ತಿರವೂ ಕೆಲವು ಕ್ಯಾಸೆಟ್ಟುಗಳಿವೆ, ಪ್ಲೇಯರು ಇಲ್ಲ ಆದರೂ ಬೀಸಾಡಲು ಮನಸಿಲ್ಲ, ಕೆಲವಂತೂ ಉಡುಗೊರೆಯಾಗಿ ಕೊಟ್ಟದ್ದವು, ಅದರಲ್ಲಿ ಹಾಡು ಕೇಳ್ದಿದ್ದರೂ ಅದೇ ಹಾಡು MP3ನಲ್ಲಿ ಕೇಳಿ ಸಮಾಧಾನ ಪಡ್ತೀನಿ... ನೋಡ್ತಿರಿ ಇನ್ನೊಂದಿಷ್ಟು ದಿನಗಳಲ್ಲಿ CDಗಳು ಹಳೆಯದಾಗಿ DVD ಆ ಸ್ಥಾನ ಆಕ್ರಮಿಸಿತ್ತವೆ ಹಾಗೆ ಮುಂದೆ ಇನ್ನೊಂದೇನೊ ಬಂದು ಇದನ್ನು ಹಿಂದೆ ತಳ್ಳಿ ಬಿಡುತ್ತದೆ... ಹೀಗೆ...

shivu.k said...

ಸಂದೀಪ್,

ಈ ವಿಚಾರವಾಗಿ ನಾನು ಎಂದೋ ಬರೆಯಬೇಕೆನಿಸಿತ್ತು...ನೀವು ಬರೆದಿದ್ದು ಒಳ್ಳೆಯದಾಯಿತು...ನನ್ನದು ನಿಮ್ಮ ಹಾಗೆ ಸಮಸ್ಯೆ. ಸುಮಾರು ನಿಮ್ಮಷ್ಟೇ ಇರಬಹುದು....ನಾನು ಬಿಸಾಡುತ್ತೇನೆ..ಅನ್ನೋಕೆ..ನನ್ನ ಶ್ರೀಮತಿ ಬೇಡ ಅನ್ನೋಕೆ...ಈಗಲು ಆಕೆ ಭಜನೆ ಮತ್ತು ಜಾನಪದ ಕೇಳುವುದು...ಕ್ಯಾಸೆಟ್ಟಿನಿಂದಲೇ....ನಾನು ಹತ್ತಿರ ಹೋಗಿ ಸುಮಾರು ದಿನವೇ ಆಯಿತು....ಅದ್ರೆ ಹಾಡಿನ ಮದ್ಯೆ ಕ್ಯಾಸೆಟ್ ರೀಲು ಸುತ್ತಿಕೊಂಡಾಗ ಮಾತ್ರ ನಾನು ಬೇಕು....

Shrinidhi Hande said...

ಸಿ.ಡಿ. ಗಳ ಕಾಲ ಕೂಡ ಮುಗಿದು ಹೋಯಿತು ಹೊಸಾ ಹೋ೦ಡಾ ಸಿಟಿ ಕಾರಿನಲ್ಲಿ ಸಿ.ಡಿ. ಪ್ಲೇಯರ್ ಇಲ್ಲಾ... good post

Raveesh Kumar said...

ಸ೦ದೀಪ್,

ಕಾದಲನ್ ಸಿನಿಮಾದ ಹಾಡುಗಳು, ತುಳು ನಾಟಕದ (ಪ್ರಥಮವಾಗಿ ನಾನು ಕೇಳಿದ ಆಟದ ಉಲಯಿ ಆಟ, ಒರಿಯರ್ದೊರಿ ಅಸಲ್ ನಾಟಕಗಳ ಧ್ವನಿ ಸುರುಳಿ) ಹಾಗೂ ರೆಕಾರ್ಡ್ ಮಾಡಿದ ಕೆಲವು ಹಾಡುಗಳಿರುವ ಧ್ವನಿ ಸುರುಳಿಗಳನ್ನು ಎಸೆಯಲು ಯಾಕೋ ಮನಸ್ಸು ಬರುತ್ತಿಲ್ಲ.

Anonymous said...

Dear Sandeep!
i Have about 1000 cassettes with me. I have put it in a huge box. my girls have made a colourful cushion for it. We use it as a seat. i dont want to throw them. In the past whenever i was lonely the cassettes have been a great solace for me.
:-)
ms

ಬೆಂಗಳೂರು ರಘು said...

ohh sandeep...nimge audio casette problem aadre namma maneyalli Video casette problemmu..ondu roomnalli kolita kootide :(...btw next in the line is CDs as DVDs are taking over bigtime...(if not already)

ಬೆಂಗಳೂರು ರಘು said...

BTW...my dad replaced all the pooja casettes with CDs this year...for an old man it was hard to let go...i had to take a couple of days of CBA for him(cost benefit analysis)

Unknown said...

ನಾವು ಉಪಯೋಗಿಸಿದ ವಸ್ತುಗಳನ್ನು ಹಾಗೇ ಬಿಸಾಕುವುದಕ್ಕಿಂತ ಈ ರೀತಿ ಶ್ರದ್ಧಾಂಜಲಿ ಅರ್ಪಿಸುವುದು ಹೊಸತನದಿಂದ ಕೂಡಿದ ಚಿಂತನೆ. ನೆನಪಿನಲ್ಲಿ ಉಳಿಯುವಂತದ್ದು

Pramod said...

ರೀಲ್ ಹಾಳಾದಾಗ ನೆನಪಾಗೋದು ನೀಲಿ ಬಣ್ಣದ ರೇನೋಲ್ಡ್ಸ್ ಪೆನ್ :)
ಹಾಳಾದ ರೀಲ್ ಉದ್ದಕ್ಕೆ ತ೦ತಿ ತರ ಕಟ್ಟಿ, ಜೋರು ಗಾಳಿ ಬ೦ದಾಗ ಅದು ಹೊಳೆಯುವ ಸ್ಟೈಲ್ ನೋಡಿ ಖುಷಿ ಆಗ್ತಿತ್ತು..
ಈಗ ರೇಡಿಯೋ, ಟೇಪ್, ಪೆ೦ಡುಲಮನ ಗಡಿಯಾರ ಎಲ್ಲವೂ ಮಾಯಾ..

ಸಂದೀಪ್ ಕಾಮತ್ said...

ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು:)

ವಿ.ರಾ.ಹೆ. said...

ಸೀಡಿ ಸ್ಪೇಸ್ ಜಾಸ್ತಿ ಇರತ್ತೆ ಅನ್ನೋದು ಬಿಟ್ರೆ ಕ್ಯಾಸೆಟ್ ಗಳೇ ಕಂಫರ್ಟೇಬಲ್ ಅನ್ಸುತ್ತೆ ನಂಗೆ. ನಾಳೆ ಸೀಡಿ ಪ್ಲೇಯರ್ ಕೂಡ ಔಟ್ ದೇಟೆಡ್ ಆಗತ್ತೆ. ಎಲೆಕ್ಟ್ರಾನಿಕ್ ವಸ್ತುಗಳ ವ್ಯಾಪಾರ ತಂತ್ರ ಅದು. ಇವತ್ತಿದ್ದದ್ದು ನಾಳೆಗೆ ಔಟು. ಮತ್ತೆ ಹೊಸ ಬಗೆಯದು ಮಾರ್ಕೆಟ್ ನಲ್ಲಿ. ಹಳೆಯದಕ್ಕೆ ಶ್ರದ್ದಾಂಜಲಿ :)

ಕ್ಯಾಸೆಟ್ಗಳನ್ನ ಯಾವ್ದೇ ಕಾರಣಕ್ಕೂ ಬಿಸಾಕ್ಬೇಡ. ಇರಲಿ ಅದು.

Anonymous said...

nandu ondishtu cassetegaLa collection ide..
kelavu yakshagaana, ghazals, sonu albums... haLe kannada haadugaLu...
aadre prob andre... yella dhooLu tindu haaLagtave,...
aadre oLLEdirodannu eegloo kElteeni... ondu walkman ide.. adannu haaki aavaagaavaga keltaa irteeni

Anonymous said...

chanda chanda bareethiri... kadala tiiradashte chanda nimma baraha kooda