
ಸುಮಾರು ಐದು ವರ್ಷಗಳ ಹಿಂದಿನ ಮಾತು.ರಾಜೀವ್ ದೀಕ್ಷಿತ್ ರ ಲೇಖನಗಳು ನನ್ನ ಮೇಲೆ ತೀವ್ರ ಪ್ರಭಾವ ಬೀರಿದ್ದವು.ಸ್ವದೇಶಿ ಚಿಂತನೆಗಳ ಬಗೆಗಿನ ವಿಚಾರಧಾರೆ ನನ್ನನ್ನು ತೀವ್ರವಾಗಿ ಕಾಡಿದ್ದವು.ಅದರಿಂದ ಎಷ್ಟು ತೊಂದರೆ ಅನುಭವಿಸಿದ್ದೆ ಅಂದರೆ ಅಪ್ರೆಂಟಿಶ್ ಶಿಪ್ ಮುಗಿದ ತಕ್ಷಣ ಅಮೆರಿಕಾ ಮೂಲದ ಕಂಪೆನಿಯೊಂದು ಕೆಲಸದ ಆಫರ್ ನೀಡಿದಾಗ ತಗೊಳ್ಳೋದೋ ಬಿಡೋದೋ ಅನ್ನೋ ಗೊಂದಲ!ಕಡೆಗೂ ಗೆಳತಿಯೊಬ್ಬಳ ಸಮಯೋಚಿತ ಉಪದೇಶದಿಂದ ’ಹಣವೇ ಜೀವನದಲ್ಲಿ ಮುಖ್ಯ ,ಉಳಿದ ವಿಷಯಗಳು ಹೊಟ್ಟೆ ತುಂಬಿದ ಮೇಲೆ ’ ಅನ್ನೋ ನಿರ್ಧಾರಕ್ಕೆ ಬಂದು ಸ್ವದೇಶಿ ಚಿಂತನೆಗಳಿಗೆ ತಿಲಾಂಜಲಿ ನೀಡಿದ್ದೆ!
ನಿನ್ನೆ ಮೇ ಫ್ಲವರ್ ನ ’ಫಿಶ್ ಮಾರ್ಕೆಟ್’ ಕಾರ್ಯಕ್ರಮದಲ್ಲಿ ಶ್ರೀ ನಾಗೇಶ್ ಹೆಗಡೆಯವರೊಂದಿಗಿನ ಸಂವಾದ ಮುಗಿದ ಮೇಲೆ ಬಹಳ ಸಮಯದ ನಂತರ ಮನಸ್ಸು ಮತ್ತೆ ಒಂಥರಾ ಗೊಂದಲದ ಗೂಡಾಗಿದೆ.ಜಿ ಎನ್ ಮೋಹನ್ ರವರು ’ಫಿಶ್ ಮಾರ್ಕೆಟ್ ನಲ್ಲಿ ಬರುವವರು ತಮ್ಮ ತಮ್ಮ ಅಭಿಪ್ರಾಯಗಳೊಂದಿಗೆ ಬಂದು,ತಮ್ಮ ಅಭಿಪ್ರಾಯಗಳೊಂದಿಗೇ ವಾಪಾಸ್ ಆಗಬೇಕು/ಆಗುತ್ತಾರೆ ’ ಅನ್ನೋ ಮಾತನ್ನು ಯಾವಾಗಲೂ ಹೇಳ್ತಿರ್ತಾರೆ.ಆದರೆ ಈ ಸಲ ನನ್ನ ಅಭಿಪ್ರಾಯಗಳು ನಾಗೇಶ್ ಹೆಗಡೆಯವರ ವಿಚಾರಧಾರೆಯಿಂದಾಗಿ ಸ್ವಲ್ಪ ವಿಚಲಿತಗೊಂಡಿರೋ ಹಾಗಿದೆ.
ಇಡೀ ಸಂವಾದ ಪರಿಸರ,ವಿಜ್ಞಾನ,ವಿಜ್ಞಾನದ ಅವೈಜ್ಞಾನಿಕ ಉಪಯೋಗ ಇಂಥದ್ದೇ ವಿಚಾರಗಳ ಸುತ್ತ ಸುತ್ತುತ್ತಿತ್ತು.ವೈಯುಕ್ತಿಕವಾಗಿ ನಾನು ಪರಿಸರವಾದಿಯಲ್ಲ.ನನಗೆ ಆ ಕುರಿತು ಆಸಕ್ತಿಯೂ ಇಲ್ಲ.ಬಹುಷ ನನ್ನ ತಂದೆಯವರಿಗೆ ಮರದ ಸಾ ಮಿಲ್ ಇದ್ದಿದ್ದೇ ಅದಕ್ಕೆ ಕಾರಣ ಇದ್ದಿರಬಹುದು ಅನಿಸುತ್ತದೆ! ಯಾರಾದರೂ ಹಸಿ ಹಸಿ ಮರ ಕತ್ತರಿಸಿ ನಮ್ಮ ಮಿಲ್ ಗೆ ತಂದು ಹಾಕಿದರೆ ಮಾತ್ರ ನಮ್ಮ ಬಿಸ್ ನೆಸ್ ಚೆನ್ನಾಗಿ ನಡೀತಾ ಇದ್ದಿದ್ದು.ಅದೂ ಅಲ್ಲದೆ ಪರಿಸರ ಸಂರಕ್ಷಣೆ ಬಗ್ಗೆ ಗಂಟೆ ಗಟ್ಟಲೆ ಮಾತಾಡಿ ’ತಮ್ಮ ಮನೆಗೆ ಮಾತ್ರ ತೇಗದ ಮರದ ಬಾಗಿಲೇ ಬೇಕು,ಅದರಲ್ಲಿ ದಶಾವತಾರದ ಕೆತ್ತನೆ ಇರಬೇಕು ’ ಅನ್ನೋ ಮನೋಭಾವನೆಯ ಜನರನ್ನ;ಜಾಗತೀಕರಣದ ,ಸಮಾಜವಾದದ ಬಗ್ಗೆ ಉಪದೇಶ ಕೊಟ್ಟು ಮರ್ಸಿಡಿಸ್ ಬೆಂಜ್ ನಲ್ಲಿ ಪುರ್ರನೆ ಹಾರಿ ಹೋಗುವ ಜನರನ್ನು ಕಂಡ ಮೇಲೆ ನನಗ್ಯಾಕೋ ’ದೊಡ್ಡವರ’ ಮಾತನ್ನು ಕೇಳುವುದೇ ಸ್ವಲ್ಪ ಕಷ್ಟ.
ಆದರೆ ನಾಗೇಶ್ ಹೆಗಡೆಯವರು ಮಾತ್ರ ಹಾಗಿರಲಿಲ್ಲ.ಗೆಳತಿ ಮಾಲತಿ ಶೆಣೈ ಅವರು ಹೇಳಿದ ಹಾಗೆ He is gem of a person !ಅವರ ಒಂದೊಂದು ಮಾತೂ ಬಹಳ ಪ್ರಭಾವಿಯಾಗಿತ್ತು.ಅವರು ತಮ್ಮ ಮಾತನ್ನು ಸಮರ್ಥಿಸಿಕೊಂಡ ರೀತಿಯೂ ಇಷ್ಟವಾಯಿತು.
ಹೇಳಿ ಕೇಳಿ ನಾನು ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುವವನು.ನಿಮಗೆ ಈ ವರ್ಷ ಒಂದು ಟಿ.ವಿ ತೋರಿಸಿ ’ಅದ್ಭುತವಾಗಿದೆ ಕಣ್ರಿ ಅತ್ಯುತ್ತಮ ಟೆಕ್ನಾಲಜಿ ತಗೊಳ್ಳಿ ಅಂತ ಹೇಳಿ ,ಮುಂದಿನ ವರ್ಷ ಬೇರೆ ಮಾಡೆಲ್ ತೋರಿಸಿ ನಿಮ್ಮ ಬಳಿ ಈಗಿರೋದು ಸರಿ ಇಲ್ಲ ! ಇದು ಅದಕ್ಕಿಂತ ಸೂಪರ್ ’ ಅಂತ ಹೇಳಿ ಟೋಪಿ ಹಾಕುವಂಥ ಕಂಪೆನಿಗಳಿಗೆ ಕೆಲಸ ಮಾಡುತ್ತಿರುವವನು. ’ ವೈಜ್ಞಾನಿಕ ಆವಿಷ್ಕಾರಗಳೆಲ್ಲಾ ಹಣ ಉಳ್ಳವರು ತಮ್ಮ ಹಣದ ಥೈಲಿಯನ್ನು ಇನ್ನೂ ಭಾರಗೊಳಿಸುವ ಕೆಲಸ ಮಾಡುತ್ತಿವೆ ’ ಅನ್ನೋ ನಾಗೇಶ್ ಹೆಗಡೆಯವರ ಆರೋಪಕ್ಕೆ ಪುಷ್ಟಿ ನೀಡುವಂಥ ಕೆಲಸ ಮಾಡುತ್ತಿರುವವನು.ಹೆಗ್ಡೆಯವರ ಮಾತಿನಿಂದಾಗಿ ಒಮ್ಮೆ ಹೆಗಲು ಮುಟ್ಟಿ ನೋಡಿಕೊಳ್ಳುವಂತಾಗಿದೆ.
ಆದರೆ ಸಧ್ಯ ಜಾಸ್ತಿ ಹೊತ್ತು ನಾಗೇಶ್ ಹೆಗಡೆಯವರ ಜೊತೆ ಮಾತಾಡಿಲ್ಲವಾದ್ದರಿಂದ ನಾನಿನ್ನೂ ನನ್ನ ಅಭಿಪ್ರಾಯಗಳಿಂದಲೇ ಬದುಕಬಹುದಾಗಿದೆ.
ನಮಗೆ ಯಾವ ರೀತಿಯ ವಿಜ್ಞಾನ ಬೇಕು ,ಯಾವ ರೀತಿಯ ತಂತ್ರಜ್ಞಾನ ಬೇಕು ಅನ್ನೋದು ತುಂಬಾ ಚರ್ಚಾಸ್ಪದ ವಿಷಯ.ಹೆಗ್ಡೆಯವರು ತುಂಬಾ ಚೆನ್ನಾಗಿ ಒಂದು ಉದಾಹರಣೆ ಕೊಟ್ರು. ’ ನಮಗೆ ಪ್ಲ್ಯಾಸ್ಟಿಕ್ ಬೇಡ - ಈ ಭೂಮಿಯಲ್ಲಿ ಸುಲಭವಾಗಿ ಕರಗುವಂಥ ಪ್ಲ್ಯಾಸ್ಟಿಕ್ ಬೇಕು. ನ್ಯಾನೋ ಕಾರ್ ಬೇಡ, ನ್ಯಾನೋ ಕಾರ್ ನಷ್ಟೆ ಚೆನ್ನಾಗಿರುವ ಪರಿಸರ ಸ್ನೇಹಿ ನ್ಯಾನೋ ಬಸ್ ಬೇಕು .ಆದರೆ ಬಸ್ ನಿಂದಾಗಿ ಜಾಸ್ತಿ ಹಣ ಗಳಿಸೋಕಾಗಲ್ಲ ಅನ್ನೋ ಕಾರಣಕ್ಕೆ ಕಂಪೆನಿಯವರು ನ್ಯಾನೋ ಕಾರ್ ಮಾಡ್ತಾರೆ ವಿನಃ ಬಸ್ ಅಲ್ಲ ’ ಅಂತ.ತುಂಬಾನೇ ನಿಜ ಅಲ್ವಾ ಇದು?
ನನಗೂ ಪದೇ ಪದೇ ಇಂಥ ಜಿಜ್ಞಾಸೆ ಮೂಡೋದುಂಟು. ನಮಗೆ ಪಕ್ಕದ ಮನೆಯಲ್ಲಿರೋ ಸುರೇಶನ ಹತ್ತಿರ ಮಾತಾಡೋ ಅಷ್ಟು ವ್ಯವಧಾನ ಇಲ್ಲ .ಆದರೆ ದೂರದಲ್ಲಿರೋ ಯಾವನೋ ಅಪರಿಚಿತನ ಜೊತೆ ಯಾಹೂ ಚಾಟ್, ಆರ್ಕುಟ್ ಚಾಟ್ ಮಾಡೋದು ಇಷ್ಟ ! ಇಲ್ಲೇ ಮಲ್ಲೇಶ್ವರಂ ಮೈದಾನದಲ್ಲಿ ಆಗೋ ಕ್ರಿಕೆಟ್ ಮ್ಯಾಚ್ ನೋಡೋದಿಕ್ಕೆ ನಾವು ಮನೆ ಬಿಟ್ಟು ಹೊರ ಬರಲ್ಲ ಆದ್ರೆ ದೂರದ ಸೌತ್ ಆಫ್ರಿಕಾದಲ್ಲಿ ನಡೆಯೋ ಮ್ಯಾಚ್ ನ ಲೈವ್ ನೋಡೋದಿಕ್ಕೆ ಎಲ್ಲಿಲ್ಲದ ಉತ್ಸಾಹ!ದೂರದ ಪಾರ್ಕ್ ಗೆ ಬೈಕ್ ನಲ್ಲಿ ಹೋಗಿ ಅಲ್ಲಿ ವಾಕಿಂಗ್ ಮಾಡೋ ಜನ ನಾವು !ಸ್ವಂತದ ಬಟ್ಟೆ ಕೈಯಲ್ಲಿ ಒಗೆಯಲಾಗದೆ ಬೊಜ್ಜು ಬೆಳೆಸಿ ಆಮೇಲೆ ಟ್ರೇಡ್ ಮಿಲ್ ನಲ್ಲಿ ಕಿಲೋಮೀಟರ್ಗಳಷ್ಟು ದೂರ ವಾಕಿಂಗ್ ಮಾಡೋ ಜನ ನಾವು!
ನಮಗೆ ತಂತ್ರಜ್ಞಾನ ಬೇಕಿದೆ ಆದರೆ ಯಾತಕ್ಕೆ ಅನ್ನೋ ಪ್ರಶ್ನೆಗೆ ಉತ್ತರ ನಮ್ಮ ಬಳಿ ಇಲ್ಲ!ನಮಗೆ ವಿಜ್ಞಾನ ಬೇಕಾಗಿದೆ ಹೇಗೆ ಅನ್ನೋ ಪ್ರಶ್ನೆಗೆ ಉತ್ತರವಿಲ್ಲ !
ಭಾರತದಲ್ಲಿ ವೈಜ್ಞಾನಿಕ ಬರಹಗಳೇಕೆ ಅಷ್ಟು ಬರುತ್ತಿಲ್ಲ.ವಿದ್ಯಾರ್ಥಿಗಳ್ಯಾಕೆ ವಿಜ್ಞಾನದ ಕಲಿಕೆಗೆ ಆಸಕ್ತಿ ತೋರುತ್ತಿಲ್ಲ ಅನ್ನೋ ವಿಷಯದ ಬಗ್ಗೆಯೂ ಅಲ್ಲಿ ಚರ್ಚೆ ನಡೆಯಿತು.ಅದೃಷ್ಟವಶಾತ್ ಹಾಲ್ದೋಡ್ಡೇರಿ ಸುಧೀಂದ್ರ ಅಲ್ಲಿದ್ದರಿಂದ ಅದಕ್ಕೆ ಸಮರ್ಪಕ ಉತ್ತರ ದೊರೆಯಿತು.
ಪ್ರತಿಭಾ ಪಲಾಯನದ ಬಗೆಯೂ ಪ್ರಸ್ತಾವವಾದರೂ ಅದರ ಬಗ್ಗೆ ಹೆಚ್ಚಿನ ಚರ್ಚೆ ನಡೆಯಲಿಲ್ಲ.ವೈಯುಕ್ತಿಕವಾಗಿ ಪ್ರತಿಭಾ ಪಲಾಯನದ ಬಗ್ಗೆ ನನ್ನ ನಿಲುವೇ ಬೇರೆ .ಮಂಗಳೂರಿನಿಂದ ನಾನು ಬೆಂಗಳೂರಿಗೆ ಬಂದರೆ ಅದು ಹೊಟ್ಟೆ ಪಾಡು !ಆದರೆ ಪಾಪ ಯಾರೋ ಹೊಟ್ಟೆಪಾಡಿಗೆ ಅಮೆರಿಕಾಗೆ ಹೋದರೆ ಅದನ್ಯಾಕೆ ಪ್ರತಿಭಾ ಪಲಾಯನ ಅಂತಾರೋ ದೇವರಿಗೇ ಗೊತ್ತು.ಆದರೆ ಇಂಥ ವಿಷಯಗಳ ಹಣೆಬರಹವೇ ಇಷ್ಟು.ಎಲ್ಲಾ ಅವರವರ ಭಾವಕ್ಕೆ.
ಬಹಳ ದಿನಗಳ ನಂತರ ಹಾಸ್ಯ ಬಿಟ್ಟು ಗಂಭೀರವಾದ ಚಿಂತನೆಗೆ ತೊಡಗಿದ್ದಲ್ಲಿ ಅದಕ್ಕೆ ನಾಗೇಶ್ ಹೆಗಡೆಯವರೇ ನೇರ ಹೊಣೆ!