Sunday, May 31, 2009

ನಾಗೇಶ್ ಹೆಗ್ಡೆ ಯವರೊಂದಿಗೆ some-ವಾದ !


ಸುಮಾರು ಐದು ವರ್ಷಗಳ ಹಿಂದಿನ ಮಾತು.ರಾಜೀವ್ ದೀಕ್ಷಿತ್ ರ ಲೇಖನಗಳು ನನ್ನ ಮೇಲೆ ತೀವ್ರ ಪ್ರಭಾವ ಬೀರಿದ್ದವು.ಸ್ವದೇಶಿ ಚಿಂತನೆಗಳ ಬಗೆಗಿನ ವಿಚಾರಧಾರೆ ನನ್ನನ್ನು ತೀವ್ರವಾಗಿ ಕಾಡಿದ್ದವು.ಅದರಿಂದ ಎಷ್ಟು ತೊಂದರೆ ಅನುಭವಿಸಿದ್ದೆ ಅಂದರೆ ಅಪ್ರೆಂಟಿಶ್ ಶಿಪ್ ಮುಗಿದ ತಕ್ಷಣ ಅಮೆರಿಕಾ ಮೂಲದ ಕಂಪೆನಿಯೊಂದು ಕೆಲಸದ ಆಫರ್ ನೀಡಿದಾಗ ತಗೊಳ್ಳೋದೋ ಬಿಡೋದೋ ಅನ್ನೋ ಗೊಂದಲ!ಕಡೆಗೂ ಗೆಳತಿಯೊಬ್ಬಳ ಸಮಯೋಚಿತ ಉಪದೇಶದಿಂದ ’ಹಣವೇ ಜೀವನದಲ್ಲಿ ಮುಖ್ಯ ,ಉಳಿದ ವಿಷಯಗಳು ಹೊಟ್ಟೆ ತುಂಬಿದ ಮೇಲೆ ’ ಅನ್ನೋ ನಿರ್ಧಾರಕ್ಕೆ ಬಂದು ಸ್ವದೇಶಿ ಚಿಂತನೆಗಳಿಗೆ ತಿಲಾಂಜಲಿ ನೀಡಿದ್ದೆ!

ನಿನ್ನೆ ಮೇ ಫ್ಲವರ್ ನ ’ಫಿಶ್ ಮಾರ್ಕೆಟ್’ ಕಾರ್ಯಕ್ರಮದಲ್ಲಿ ಶ್ರೀ ನಾಗೇಶ್ ಹೆಗಡೆಯವರೊಂದಿಗಿನ ಸಂವಾದ ಮುಗಿದ ಮೇಲೆ ಬಹಳ ಸಮಯದ ನಂತರ ಮನಸ್ಸು ಮತ್ತೆ ಒಂಥರಾ ಗೊಂದಲದ ಗೂಡಾಗಿದೆ.ಜಿ ಎನ್ ಮೋಹನ್ ರವರು ’ಫಿಶ್ ಮಾರ್ಕೆಟ್ ನಲ್ಲಿ ಬರುವವರು ತಮ್ಮ ತಮ್ಮ ಅಭಿಪ್ರಾಯಗಳೊಂದಿಗೆ ಬಂದು,ತಮ್ಮ ಅಭಿಪ್ರಾಯಗಳೊಂದಿಗೇ ವಾಪಾಸ್ ಆಗಬೇಕು/ಆಗುತ್ತಾರೆ ’ ಅನ್ನೋ ಮಾತನ್ನು ಯಾವಾಗಲೂ ಹೇಳ್ತಿರ್ತಾರೆ.ಆದರೆ ಈ ಸಲ ನನ್ನ ಅಭಿಪ್ರಾಯಗಳು ನಾಗೇಶ್ ಹೆಗಡೆಯವರ ವಿಚಾರಧಾರೆಯಿಂದಾಗಿ ಸ್ವಲ್ಪ ವಿಚಲಿತಗೊಂಡಿರೋ ಹಾಗಿದೆ.

ಇಡೀ ಸಂವಾದ ಪರಿಸರ,ವಿಜ್ಞಾನ,ವಿಜ್ಞಾನದ ಅವೈಜ್ಞಾನಿಕ ಉಪಯೋಗ ಇಂಥದ್ದೇ ವಿಚಾರಗಳ ಸುತ್ತ ಸುತ್ತುತ್ತಿತ್ತು.ವೈಯುಕ್ತಿಕವಾಗಿ ನಾನು ಪರಿಸರವಾದಿಯಲ್ಲ.ನನಗೆ ಆ ಕುರಿತು ಆಸಕ್ತಿಯೂ ಇಲ್ಲ.ಬಹುಷ ನನ್ನ ತಂದೆಯವರಿಗೆ ಮರದ ಸಾ ಮಿಲ್ ಇದ್ದಿದ್ದೇ ಅದಕ್ಕೆ ಕಾರಣ ಇದ್ದಿರಬಹುದು ಅನಿಸುತ್ತದೆ! ಯಾರಾದರೂ ಹಸಿ ಹಸಿ ಮರ ಕತ್ತರಿಸಿ ನಮ್ಮ ಮಿಲ್ ಗೆ ತಂದು ಹಾಕಿದರೆ ಮಾತ್ರ ನಮ್ಮ ಬಿಸ್ ನೆಸ್ ಚೆನ್ನಾಗಿ ನಡೀತಾ ಇದ್ದಿದ್ದು.ಅದೂ ಅಲ್ಲದೆ ಪರಿಸರ ಸಂರಕ್ಷಣೆ ಬಗ್ಗೆ ಗಂಟೆ ಗಟ್ಟಲೆ ಮಾತಾಡಿ ’ತಮ್ಮ ಮನೆಗೆ ಮಾತ್ರ ತೇಗದ ಮರದ ಬಾಗಿಲೇ ಬೇಕು,ಅದರಲ್ಲಿ ದಶಾವತಾರದ ಕೆತ್ತನೆ ಇರಬೇಕು ’ ಅನ್ನೋ ಮನೋಭಾವನೆಯ ಜನರನ್ನ;ಜಾಗತೀಕರಣದ ,ಸಮಾಜವಾದದ ಬಗ್ಗೆ ಉಪದೇಶ ಕೊಟ್ಟು ಮರ್ಸಿಡಿಸ್ ಬೆಂಜ್ ನಲ್ಲಿ ಪುರ್ರನೆ ಹಾರಿ ಹೋಗುವ ಜನರನ್ನು ಕಂಡ ಮೇಲೆ ನನಗ್ಯಾಕೋ ’ದೊಡ್ಡವರ’ ಮಾತನ್ನು ಕೇಳುವುದೇ ಸ್ವಲ್ಪ ಕಷ್ಟ.

ಆದರೆ ನಾಗೇಶ್ ಹೆಗಡೆಯವರು ಮಾತ್ರ ಹಾಗಿರಲಿಲ್ಲ.ಗೆಳತಿ ಮಾಲತಿ ಶೆಣೈ ಅವರು ಹೇಳಿದ ಹಾಗೆ He is gem of a person !ಅವರ ಒಂದೊಂದು ಮಾತೂ ಬಹಳ ಪ್ರಭಾವಿಯಾಗಿತ್ತು.ಅವರು ತಮ್ಮ ಮಾತನ್ನು ಸಮರ್ಥಿಸಿಕೊಂಡ ರೀತಿಯೂ ಇಷ್ಟವಾಯಿತು.

ಹೇಳಿ ಕೇಳಿ ನಾನು ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುವವನು.ನಿಮಗೆ ಈ ವರ್ಷ ಒಂದು ಟಿ.ವಿ ತೋರಿಸಿ ’ಅದ್ಭುತವಾಗಿದೆ ಕಣ್ರಿ ಅತ್ಯುತ್ತಮ ಟೆಕ್ನಾಲಜಿ ತಗೊಳ್ಳಿ ಅಂತ ಹೇಳಿ ,ಮುಂದಿನ ವರ್ಷ ಬೇರೆ ಮಾಡೆಲ್ ತೋರಿಸಿ ನಿಮ್ಮ ಬಳಿ ಈಗಿರೋದು ಸರಿ ಇಲ್ಲ ! ಇದು ಅದಕ್ಕಿಂತ ಸೂಪರ್ ’ ಅಂತ ಹೇಳಿ ಟೋಪಿ ಹಾಕುವಂಥ ಕಂಪೆನಿಗಳಿಗೆ ಕೆಲಸ ಮಾಡುತ್ತಿರುವವನು. ’ ವೈಜ್ಞಾನಿಕ ಆವಿಷ್ಕಾರಗಳೆಲ್ಲಾ ಹಣ ಉಳ್ಳವರು ತಮ್ಮ ಹಣದ ಥೈಲಿಯನ್ನು ಇನ್ನೂ ಭಾರಗೊಳಿಸುವ ಕೆಲಸ ಮಾಡುತ್ತಿವೆ ’ ಅನ್ನೋ ನಾಗೇಶ್ ಹೆಗಡೆಯವರ ಆರೋಪಕ್ಕೆ ಪುಷ್ಟಿ ನೀಡುವಂಥ ಕೆಲಸ ಮಾಡುತ್ತಿರುವವನು.ಹೆಗ್ಡೆಯವರ ಮಾತಿನಿಂದಾಗಿ ಒಮ್ಮೆ ಹೆಗಲು ಮುಟ್ಟಿ ನೋಡಿಕೊಳ್ಳುವಂತಾಗಿದೆ.

ಆದರೆ ಸಧ್ಯ ಜಾಸ್ತಿ ಹೊತ್ತು ನಾಗೇಶ್ ಹೆಗಡೆಯವರ ಜೊತೆ ಮಾತಾಡಿಲ್ಲವಾದ್ದರಿಂದ ನಾನಿನ್ನೂ ನನ್ನ ಅಭಿಪ್ರಾಯಗಳಿಂದಲೇ ಬದುಕಬಹುದಾಗಿದೆ.
ನಮಗೆ ಯಾವ ರೀತಿಯ ವಿಜ್ಞಾನ ಬೇಕು ,ಯಾವ ರೀತಿಯ ತಂತ್ರಜ್ಞಾನ ಬೇಕು ಅನ್ನೋದು ತುಂಬಾ ಚರ್ಚಾಸ್ಪದ ವಿಷಯ.ಹೆಗ್ಡೆಯವರು ತುಂಬಾ ಚೆನ್ನಾಗಿ ಒಂದು ಉದಾಹರಣೆ ಕೊಟ್ರು. ’ ನಮಗೆ ಪ್ಲ್ಯಾಸ್ಟಿಕ್ ಬೇಡ - ಈ ಭೂಮಿಯಲ್ಲಿ ಸುಲಭವಾಗಿ ಕರಗುವಂಥ ಪ್ಲ್ಯಾಸ್ಟಿಕ್ ಬೇಕು. ನ್ಯಾನೋ ಕಾರ್ ಬೇಡ, ನ್ಯಾನೋ ಕಾರ್ ನಷ್ಟೆ ಚೆನ್ನಾಗಿರುವ ಪರಿಸರ ಸ್ನೇಹಿ ನ್ಯಾನೋ ಬಸ್ ಬೇಕು .ಆದರೆ ಬಸ್ ನಿಂದಾಗಿ ಜಾಸ್ತಿ ಹಣ ಗಳಿಸೋಕಾಗಲ್ಲ ಅನ್ನೋ ಕಾರಣಕ್ಕೆ ಕಂಪೆನಿಯವರು ನ್ಯಾನೋ ಕಾರ್ ಮಾಡ್ತಾರೆ ವಿನಃ ಬಸ್ ಅಲ್ಲ ’ ಅಂತ.ತುಂಬಾನೇ ನಿಜ ಅಲ್ವಾ ಇದು?

ನನಗೂ ಪದೇ ಪದೇ ಇಂಥ ಜಿಜ್ಞಾಸೆ ಮೂಡೋದುಂಟು. ನಮಗೆ ಪಕ್ಕದ ಮನೆಯಲ್ಲಿರೋ ಸುರೇಶನ ಹತ್ತಿರ ಮಾತಾಡೋ ಅಷ್ಟು ವ್ಯವಧಾನ ಇಲ್ಲ .ಆದರೆ ದೂರದಲ್ಲಿರೋ ಯಾವನೋ ಅಪರಿಚಿತನ ಜೊತೆ ಯಾಹೂ ಚಾಟ್, ಆರ್ಕುಟ್ ಚಾಟ್ ಮಾಡೋದು ಇಷ್ಟ ! ಇಲ್ಲೇ ಮಲ್ಲೇಶ್ವರಂ ಮೈದಾನದಲ್ಲಿ ಆಗೋ ಕ್ರಿಕೆಟ್ ಮ್ಯಾಚ್ ನೋಡೋದಿಕ್ಕೆ ನಾವು ಮನೆ ಬಿಟ್ಟು ಹೊರ ಬರಲ್ಲ ಆದ್ರೆ ದೂರದ ಸೌತ್ ಆಫ್ರಿಕಾದಲ್ಲಿ ನಡೆಯೋ ಮ್ಯಾಚ್ ನ ಲೈವ್ ನೋಡೋದಿಕ್ಕೆ ಎಲ್ಲಿಲ್ಲದ ಉತ್ಸಾಹ!ದೂರದ ಪಾರ್ಕ್ ಗೆ ಬೈಕ್ ನಲ್ಲಿ ಹೋಗಿ ಅಲ್ಲಿ ವಾಕಿಂಗ್ ಮಾಡೋ ಜನ ನಾವು !ಸ್ವಂತದ ಬಟ್ಟೆ ಕೈಯಲ್ಲಿ ಒಗೆಯಲಾಗದೆ ಬೊಜ್ಜು ಬೆಳೆಸಿ ಆಮೇಲೆ ಟ್ರೇಡ್ ಮಿಲ್ ನಲ್ಲಿ ಕಿಲೋಮೀಟರ್ಗಳಷ್ಟು ದೂರ ವಾಕಿಂಗ್ ಮಾಡೋ ಜನ ನಾವು!

ನಮಗೆ ತಂತ್ರಜ್ಞಾನ ಬೇಕಿದೆ ಆದರೆ ಯಾತಕ್ಕೆ ಅನ್ನೋ ಪ್ರಶ್ನೆಗೆ ಉತ್ತರ ನಮ್ಮ ಬಳಿ ಇಲ್ಲ!ನಮಗೆ ವಿಜ್ಞಾನ ಬೇಕಾಗಿದೆ ಹೇಗೆ ಅನ್ನೋ ಪ್ರಶ್ನೆಗೆ ಉತ್ತರವಿಲ್ಲ !

ಭಾರತದಲ್ಲಿ ವೈಜ್ಞಾನಿಕ ಬರಹಗಳೇಕೆ ಅಷ್ಟು ಬರುತ್ತಿಲ್ಲ.ವಿದ್ಯಾರ್ಥಿಗಳ್ಯಾಕೆ ವಿಜ್ಞಾನದ ಕಲಿಕೆಗೆ ಆಸಕ್ತಿ ತೋರುತ್ತಿಲ್ಲ ಅನ್ನೋ ವಿಷಯದ ಬಗ್ಗೆಯೂ ಅಲ್ಲಿ ಚರ್ಚೆ ನಡೆಯಿತು.ಅದೃಷ್ಟವಶಾತ್ ಹಾಲ್ದೋಡ್ಡೇರಿ ಸುಧೀಂದ್ರ ಅಲ್ಲಿದ್ದರಿಂದ ಅದಕ್ಕೆ ಸಮರ್ಪಕ ಉತ್ತರ ದೊರೆಯಿತು.

ಪ್ರತಿಭಾ ಪಲಾಯನದ ಬಗೆಯೂ ಪ್ರಸ್ತಾವವಾದರೂ ಅದರ ಬಗ್ಗೆ ಹೆಚ್ಚಿನ ಚರ್ಚೆ ನಡೆಯಲಿಲ್ಲ.ವೈಯುಕ್ತಿಕವಾಗಿ ಪ್ರತಿಭಾ ಪಲಾಯನದ ಬಗ್ಗೆ ನನ್ನ ನಿಲುವೇ ಬೇರೆ .ಮಂಗಳೂರಿನಿಂದ ನಾನು ಬೆಂಗಳೂರಿಗೆ ಬಂದರೆ ಅದು ಹೊಟ್ಟೆ ಪಾಡು !ಆದರೆ ಪಾಪ ಯಾರೋ ಹೊಟ್ಟೆಪಾಡಿಗೆ ಅಮೆರಿಕಾಗೆ ಹೋದರೆ ಅದನ್ಯಾಕೆ ಪ್ರತಿಭಾ ಪಲಾಯನ ಅಂತಾರೋ ದೇವರಿಗೇ ಗೊತ್ತು.ಆದರೆ ಇಂಥ ವಿಷಯಗಳ ಹಣೆಬರಹವೇ ಇಷ್ಟು.ಎಲ್ಲಾ ಅವರವರ ಭಾವಕ್ಕೆ.

ಬಹಳ ದಿನಗಳ ನಂತರ ಹಾಸ್ಯ ಬಿಟ್ಟು ಗಂಭೀರವಾದ ಚಿಂತನೆಗೆ ತೊಡಗಿದ್ದಲ್ಲಿ ಅದಕ್ಕೆ ನಾಗೇಶ್ ಹೆಗಡೆಯವರೇ ನೇರ ಹೊಣೆ!

20 comments:

Unknown said...

naanu nimma haage go0daladalli iddene. nanago I go0dalakke uttara sikkilla. nimage sikkidre nanagU tiLisi.
tu0ba oLLaya lEKana.

ದಿವ್ಯಾ ಮಲ್ಯ ಕಾಮತ್ said...

ಬರಹ ಚೆನ್ನಾಗಿದೆ... ನಿಜಕ್ಕೂ, ಮನದಾಳಕ್ಕಿಳಿಯುವ, ಚಿಂತನೆ ಮೂಡಿಸುವಂತಹ ವಿಷಯಗಳು... ಆದರೆ, ಇಂಥವುಗಳೆಲ್ಲಾ, ನೀವು ಹೇಳಿದಂತೆ, ಉತ್ತರ ಸಿಗದ / "ಅವರವರ ಭಾವಕ್ಕೆ" ಉಳಿದುಕೊಂಡು ಬಿಡುವ ವಿಚಾರಗಳು ಅನ್ನುವುದೂ ಅಷ್ಟೇ ಸತ್ಯ !

PaLa said...

[ಟಿ.ವಿ. - ಟೋಪಿ]
ಆಲೋಚನೆ ಏಕ ಮುಖವಾಗಿದೆ ಅಂತ ಅನ್ನಿಸ್ತಾ ಇದೆ. ನಾನು ೪ ವರ್ಷದ ಹಿಂದೆ ೨೫,೦೦೦ ರೂ. ಕೊಟ್ಟು ಒಂದು ಕ್ಯಾಮರಾ ತಗೊಂಡೆ. ಈಗ ಅದರ ಹೈಯರ್ ಎಂಡ್ ಮಾಡೆಲ್ಗಳು ಇದಕ್ಕಿಂತ ಕಡಿಮೆ ಬೆಲೆಗೆ ಸಿಗ್ತಾ ಇದೆ. ಅದರರ್ಥ ಆ ಕಂಪೆನಿಯಿಂದ ನನಗೆ ನಷ್ಟವಾಗಿದೆ ಅಂತಲ್ಲ. ನನ್ನ ದುಡ್ಡು ಹಾಗೆಯೇ ಇತರರ ದುಡ್ಡು, ಕಡಿಮೆ ಬೆಲೆಯಲ್ಲಿ ಹೊಸ ಆವಿಷ್ಕಾರ ಮಾಡಲು ನೆರವಾಗಿಲ್ಲವೇ. ಎಲ್ಲರೂ ಇನ್ನೆರಡು ವರ್ಷ ಬಿಟ್ಟು ನೋಡೋಣ ಬೆಲೆ ಕಮ್ಮಿಯಾಗಬಹುದು, ಫೀಚರ್ ಜಾಸ್ತಿಯಾಗಬಹುದು ಅಂತ ಕೂತ್ರೆ, ಹೊಸ ಆವಿಷ್ಕಾರಕ್ಕೆ..

[ನಮಗೆ ಪಕ್ಕದ ಮನೆಯಲ್ಲಿರೋ ಸುರೇಶನ ಹತ್ತಿರ ಮಾತಾಡೋ ಅಷ್ಟು ವ್ಯವಧಾನ ಇಲ್ಲ.]
ಇಲ್ಲಿ ವಿಷಯವನ್ನು ಜನರಲೈಸ್ ಮಾಡಿದ್ದು ಇಷ್ಟ ಆಗ್ಲಿಲ್ಲ. ಅದೂ ಅಲ್ಲದೇ ನಾನು ಜಾಸ್ತಿ ಮಾತನಾಡೋದು ನನ್ನ ಭಾವನೆಗೆ ಸ್ಪಂದಿಸುವ ವ್ಯಕ್ತಿಗಳು (ಸುರೇಶನ ಜೊತೆ ಮಾತನಾಡೋದು ನನಗೆ ಅನವಶ್ಯಕವಾಗಿರಬಹುದು), ಅವರು ದೂರದ ಪ್ರದೇಶದಲ್ಲಿದ್ದಲ್ಲಿ ತಂತ್ರಜ್ಞಾನ ಸಹಾಯಕವೇ ಅಲ್ಲವೇ..

[ಪರಿಸರ ಸಂರಕ್ಷಣೆ ಬಗ್ಗೆ ಗಂಟೆ ಗಟ್ಟಲೆ ಮಾತಾಡಿ ’ತಮ್ಮ ಮನೆಗೆ ಮಾತ್ರ ತೇಗದ ಮರದ ಬಾಗಿಲೇ ಬೇಕು]

ನಿಮ್ಮಭಿಪ್ರಾಯದಲ್ಲಿ ಪರಿಸರವಾದಿಗಳು ಊಟಮಾಡಲೂ ಬಾರದು, ಯಾಕಂದ್ರೆ ಅದ್ರಿಂದಾನೂ ಎಷ್ಟು ಪರಿಸರ ನಾಶ!

[ಸ್ವಂತದ ಬಟ್ಟೆ ಕೈಯಲ್ಲಿ ಒಗೆಯಲಾಗದೆ ಬೊಜ್ಜು ಬೆಳೆಸಿ ಆಮೇಲೆ ಟ್ರೇಡ್ ಮಿಲ್ ನಲ್ಲಿ ಕಿಲೋಮೀಟರ್ಗಳಷ್ಟು ದೂರ ವಾಕಿಂಗ್ ಮಾಡೋ ಜನ ನಾವು]

ಒಂದು ದಿನ ನಿಮ್ಮ ಒಲೆ ಸಿದ್ಧಪಡಿಸಿ, ಕಟ್ಟಿಗೆ ಆಯ್ದು, ಅಡಿಗೆ ಮಾಡ್ಕೊಂಡು (ಮಿಕ್ಸರ್ ಗ್ರೈಂಡರ್ ಬಳಸದೇ), ಪಾತ್ರೆ ತೊಳ್ಕೊಂಡು, ಬಟ್ಟೆ ಒಕ್ಕೊಂಡು ನೋಡಿ.. ನಿಮಗೆ ದಿನದಲ್ಲಿ ಎಷ್ಟು ಸಮಯ ಉಳಿತಾಯ ಆಗುತ್ತೆ ಹೀಗೆ ಬ್ಲಾಗ್ ಬರೆಯೋದಕ್ಕೋ, ಓದೋದಕ್ಕೋ, ಆಸಕ್ತಿ ಇರುವ ವಿಷಯದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಲಿಕ್ಕೋ..

ಸಂದೀಪ್ ಕಾಮತ್ said...

ಪ್ರೀತಿಯ ಪಾಲ,

ಆಲೋಚನೆಗಳು ಏಕಮುಖವಾಗಿದೆಯೋ ನನಗೂ ಗೊತ್ತಿಲ್ಲ.

ಇಲ್ಲಿ ನಾನು ಯಾವುದೇ ತಪ್ಪು ಅಥವಾ ಸರಿ ಅನ್ನೋದನ್ನೂ ಹೇಳಿಲ್ಲ.
ನನ್ನ ಮನಸ್ಸಿನಲ್ಲಿನ ಗೊಂದಲಗಳ ಬಗ್ಗೆಯಷ್ಟೇ ನಾನು ಹೇಳಿದ್ದು.

ವಿಜ್ಞಾನ ವರವೋ ಶಾಪವೋ ಅನ್ನೋ ಬಗ್ಗೆ ಎಲ್ಲಾ ಶಾಲೆಯಲ್ಲೂ ಚರ್ಚಾ ಸ್ಪರ್ಧೆಗಳಿಡುತ್ತಾರೆ.ಅದರರ್ಥ ಎರಡರ ಪರವಾಗಿ ಅಥವ ವಿರೋಧವಾಗಿ ಮಾತಾಡಲು ಯಥೇಚ್ಚ ವಿಷಯಗಳಿವೆ ಅಂತ.

ಆದರೆ ಅಲ್ಲಿ ನಿಮಗೆ ಪರ ಅಥ್ವ ವಿರೋಧವಾಗಿ ಮಾತಾಡುವ ಆಯ್ಕೆ ಇದೆ.ಆದರೆ ನನಗೆ ಆ ಆಯ್ಕೆ ಇಲ್ಲ.ನಾನು ಎರಡರ ಮಧ್ಯೆ ನಿಂತು ಗೊಂದಲದಲ್ಲಿದ್ದೇನೆ.
ನಿಮಗೆ ಬಹುಷ ನನ್ನ ಮನಸ್ಥಿತಿ ಅರ್ಥವಾಗಲಾರದು.ಯಾಕಂದ್ರೆ ನಿಮಗೆ ಅಂಥ ಗೊಂದಲಗಳು ಬಂದಿರಲಿಕ್ಕಿಲ್ಲ.

ಪ್ರತಾಪ್ ಸಿಂಹರ ಲೇಖನಕ್ಕೆ ನಾನು ವಿರೋಧವಾಗಿ ಬರೆದಾಗ ನನಗೆ ನನ್ನದೇ ಆದ ನಿಲುವುಗಳಿದ್ದವು.ಆದರೆ ಈ ಬ್ಲಾಗ್ ಲೇಖನದಲ್ಲಿ ನನಗೆ ಗೊಂದಲಗಳೇ ಜಾಸ್ತಿ ಇರೋದು.

PaLa said...

ಸಂದೀಪ್,
ಇದು ನಿಮ್ಮ ಮನದಲ್ಲಿಯ ಗೊಂದಲ ಅಂತ ಲೇಖನದ ಆರಂಭದಲ್ಲಿ ತಿಳಿಸಿದ್ದರಾದರೂ, ಹಾಗೆಯೇ ಓದುತ್ತಾ ಹೋದಂತೆ ಇದು ಗೊಂದಲವ ಬಿಂಬಿಸುವ ಬದಲು ನಿಮ್ಮ ಅಭಿಪ್ರಾಯವೇನೋ ಎಂಬಂತೆ ಭಾಸವಾಯಿತು. ನೀವೋಬ್ರೇ ಅಲ್ಲಾ, ನನಗೂ ಇಂತಹ ಗೊಂದಲ ಸಾವಿರಾರು ಇವೆ :)

ಸುಮ್ನೆ ನನ್ನ ಅಭಿಪ್ರಾಯ ತಿಳಿಸಿದೆ ಅಷ್ಟೆ, ಅದೂ ಎಲ್ಲಾ ಕೋನದಿಂದಲೂ ಸರಿ ಅಂತೇನೂ ಅಲ್ಲ.

ವಿ.ರಾ.ಹೆ. said...

Most of the people including me who think about all these are in the same confusion state of mind. :(

Any how, Fish Market program is incomplete without Sandeep's report :)

ಧರಿತ್ರಿ said...

ಚೆನ್ನಾಗ್ ಬರೆದಿರಿ ಸಂದೀಪ್
-ಧರಿತ್ರಿ

sunaath said...

ಸಂದೀಪ,
ಪರಿಸರವಾದಿಗಳು ಮತ್ತೂ ಅಂತಹ ಚಿಂತಕರು ಸಮಸ್ಯೆಯ ಒಂದು
ಮುಖವನ್ನು ಮಾತ್ರ ನೋಡುತ್ತಾರೆ.ಉದಾಹರಣೆ:
ಮರಗಳನ್ನು ಕಡಿಯಬೇಡಿರಿ ಅಂತ ಹೇಳುವದು ಸುಲಭ. ಆದರೆ,
ಭಾರತದಲ್ಲಿ ಇಂದು ಸುಮಾರು ೭೦ ಪ್ರತಿಶತ ಜನ ಉರುವಲಿಗಾಗಿ ಮರವನ್ನೇ ಬಳಸಬೇಕು ಅಂದರೆ ಸುಮಾರು ೭೦ ಕೋಟಿ ಜನ, ಒಬ್ಬನಿಗೆ ಒಂದು ದಿನಕ್ಕೆ ಅರ್ಧ ಕಿಲೊ ಉರುವಲ
ಕಟ್ಟಿಗೆಯೇ ಬೇಕೆಂದರೂ ಸಹ, ದಿನವೂ ನಾವು ೩೫ ಕೋಟಿ ಕಿಲೊ ಅರ್ಥಾತ್ ೩೫,೦೦೦ ಟನ್ ಅರಣ್ಯವನ್ನು ಕೇವಲ ಉರುವಲಿಗಾಗಿ ಕಡಿಯಲೇ ಬೇಕು.
ಸಮಸ್ಯೆ ಇರುವದು ಜನಸಂಖ್ಯಾಸ್ಫೋಟದಲ್ಲಿ.
ಎರಡನಯದಾಗಿ, ಭಾರತೀಯರು ಪರದೇಶಗಳಿಗೆ ಕೇವಲ ತಂತ್ರಜ್ಞರಾಗಿ ಹೋಗುತ್ತಿಲ್ಲ; ಅರಬದೇಶಗಳಲ್ಲಿ ಕೂಲಿಗಳಾಗಿ
ಹಾಗೂ ಮನೆಗೆಲಸದ ಆಳುಗಳಿಗಾಗಿ ಕಷ್ಟಕೋಟಲೆಗಳಲ್ಲಿ ಜೀವಿಸುತ್ತಿರುವವರು ಯಾರು, ಹಾಗೂ ಏಕೆ? ಇದಕ್ಕೆ ಕಾರಣ
once again ಜನಸಂಖ್ಯಾ ಸ್ಫೋಟ
ಜನಸಂಖ್ಯಾ ಸ್ಫೋಟಕ್ಕೆ ಕಾರಣ ಅದನ್ನು ಪ್ರತಿಬಂಧಿಸಲು ಹೆದರುತ್ತಿರುವ ಸರಕಾರ.
ಇದರಂತೆಯೇ ಇತರ ವಿಷಯಗಳು.
ನಮ್ಮ ಪರಿಸರವಾದಿಗಳು ಹಾಗೂ ಚಿಂತಕರು ಕಣ್ಣಿಗೆ ಚಾಳೀಸು ಹಾಕಿಕೊಂಡು ಸಮಸ್ಯೆಗೆ ಪರಿಹಾರ ಹುಡುಕುತ್ತಿದ್ದಾರೆ.

Anonymous said...

{ವೈಯುಕ್ತಿಕವಾಗಿ ಪ್ರತಿಭಾ ಪಲಾಯನದ ಬಗ್ಗೆ ನನ್ನ ನಿಲುವೇ ಬೇರೆ .ಮಂಗಳೂರಿನಿಂದ ನಾನು ಬೆಂಗಳೂರಿಗೆ ಬಂದರೆ ಅದು ಹೊಟ್ಟೆ ಪಾಡು !ಆದರೆ ಪಾಪ ಯಾರೋ ಹೊಟ್ಟೆಪಾಡಿಗೆ ಅಮೆರಿಕಾಗೆ ಹೋದರೆ ಅದನ್ಯಾಕೆ ಪ್ರತಿಭಾ ಪಲಾಯನ ಅಂತಾರೋ ದೇವರಿಗೇ ಗೊತ್ತು.}

ನನಗೆ ಅನಿಸೋ ಹಾಗೆ, ೨೦೦೮ರಲ್ಲಿ ಭಾರತದ ಘನ ಸರ್ಕಾರ ತನ್ನ ಬಜೇಟನ ಪ್ರತಿಶತ ೨೦ರಷ್ಟು ಪ್ರಮಾಣದ ಹಣವನ್ನು ಉನ್ನತಶಿಕ್ಷಣ ಕ್ಷೇತ್ರಕ್ಕೆ ಬಳಸಿದೆ, ಈ ಎಲ್ಲ ಹಣ ಭಾರತದ ಬಡ ಪ್ರಜೆಗಳದ್ದು ನಮ್ಮದು ಮತ್ತು ನಿಮ್ಮದು, ತೆರಿಗೆ ರೂಪದಲ್ಲಿ ಸಂಗ್ರಹಿಸಿದ್ದು.

ಭಾರತದ ಪ್ರಜೆಯ ಹಣದಲ್ಲಿ ಕಲಿತು, ಅದರ ಪ್ರತಿಫಲದಲ್ಲಿ ನಿಮ್ಮ ಬೌದ್ಧಿಕ ಶಕ್ತಿಯನ್ನು ನೀವು ಬೇರೆ ಯಾವುದೋ ದೇಶದ ಉದ್ಧಾರಕ್ಕಾಗಿ, ಯಾವುದೋ ದೇಶದ ಲಾಭಕ್ಕಾಗಿ, ಯಾವುದೋ ದೇಶದ ಉನ್ನತಿಗಾಗಿ ಬಳಸುವುದು "ಪ್ರತಿಭಾ ಪಲಾಯನ".

ಇದು ನನ್ನ ಭಾವಕ್ಕೆ... ನಿಮ್ಮ ಭಾವಕ್ಕೆ?

ಉಳಿದಂತೆ ನಿಮ್ಮ ಲೇಖನ ಉತ್ತಮವಾಗಿದೆ, ನಮ್ಮನ್ನು ಚಿಂತೆಗೆ ದೂಡುವದರಲ್ಲಿ ಸಂದೇಹವಿಲ್ಲ
-ಶೆಟ್ಟರು

ಸಂದೀಪ್ ಕಾಮತ್ said...

ಶೆಟ್ಟರೇ ,

ಪ್ರತಿಭಾ ಪಲಾಯನದ ಬಗ್ಗೆ ನಿಮಗಿದ್ದಂಥ ಅಭಿಪ್ರಾಯಗಳೇ ನನ್ನಲ್ಲೂ ಇದ್ದವು.ಇದೇ ಅಭಿಪ್ರಾಯದಿಂದಾಗಿ ಬಹಳಷ್ಟು ಅನಿವಾಸಿ ಭಾರತೀಯರೊಂದಿಗೆ ಜಗಳ ಆಡಿದ್ದೆ ಹಿಂದೆ!

ಆದ್ರೆ ಒಂದು ದಿನ ಅದ್ಯಾವುದೋ ಮರದ ಕೆಳಗೆ ನನಗೆ ಜ್ಞಾನೋದಯ ಆಯ್ತು!

ಭಾರತ ಸರಕಾರದ ಹಣ ಖರ್ಚಾಗಿದ್ದರಲ್ಲಿ ಸಂದೇಹವೇ ಇಲ್ಲ ಆ ವಿಚಾರ ಒಂದಷ್ಟು ಹೊತ್ತು ಬದಿಗಿಡೋಣ .ನನಗಿದ್ದ ಗೊಂದಲ ಇಷ್ಟೇ.ನಾನು ಮಂಗಳೂರಿನಲ್ಲಿ ನನ್ನ ಪ್ರತಿಭೆ ಯಾವುದೇ ’ಸ್ಕೋಪ್’ ಇಲ್ಲ ಅಂತ ಭಾವಿಸಿ ಈ ಬೆಂಗಳೂರಿಗೆ ಬಂದೆ .ಇದು ಪ್ರತಿಭಾ ಪಲಾಯನ ಅಲ್ಲವೇ?
ಮಂಗಳೂರಿನ ನೆಲ,ಜಲದ ಋಣ ನನಗಿಲ್ಲವೇ? ಇದು ಹಣದಾಸೆಯಲ್ಲವೇ? ನನ್ನ ಪ್ರತಿಭೆ ,ಬುದ್ಧಿಶಕ್ತಿ(ಇದ್ದಿದ್ದೇ ಅದ್ರೆ!) ಮಂಗಳೂರಿನ ಅಭಿವೃದ್ಧಿಗೆ ತಾನೇ ಬಳಕೆಯಾಗಬೇಕಾಗಿತ್ತು?

ನಾಲ್ಕುನೂರು ಕಿಲೋಮೀಟರ್ ದೂರದ ಬೆಂಗಳೂರಿಗೆ ನಾನು ಬಂದ್ರೆ ಅದು ಹೊಟ್ಟೆಪಾಡು ಅದೇ ನಾಲ್ಕುಸಾವಿರ ಮೈಲಿ ದೂರ ಹೋದ್ರೆ ಅದು ಪ್ರತಿಭಾ ಪಲಾಯನವೇ?

ಸರಕಾರದ ಹಣವನ್ನು ಈ ಅನಿವಾಸಿ ಭಾರತೀಯರಿಗಿಂತ ಅಧಿಕಾರದಲ್ಲಿರುವ ರಾಜಕಾರಣಿಗಳು ಪೋಲು ಮಾಡುತ್ತಾರೆ ಹಾಗಾಗಿ ಹಣ ಇಲ್ಲಿ ಮಾನದಂಡ ಆಗಲಾರದು ಅನ್ನೋದು ನನ್ನ ಅನಿಸಿಕೆ.

ಪ್ರತಿಭಾ ಪಲಾಯನಗೈಯುವ ಬದಲು ಜನರು ದೇಶದ ಅಭಿವೃದ್ಧಿಯಾಗೋ ರೀತಿಯಲ್ಲಿ ಭಾರತದಲ್ಲಿ ಯಾವುದಾದರೂ ಕೆಲಸಕ್ಕೆ ಸೇರಿದ್ರೆ ಏನೋ ಭಾರತಕ್ಕೆ ಸಹಾಯ ಆದೀತು .ಅದು ಬಿಟ್ಟು ನನ್ನ ಹಾಗೆ ಭಾರತದಲ್ಲಿದ್ದರೂ ಅಮೆರಿಕಾದ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದರೆ ಅವರು ಭಾರತದಲ್ಲಿದ್ದರೇನು ಅಮೆರಿಕಾದಲ್ಲಿದ್ದರೇನು ಅಲ್ಲವೇ?

Shivanand said...

ನೀವೇ ಹೇಳಿದಂತೆ ನಿಮ್ಮ ಲೇಖನ ಹಾಸ್ಯ ಬಿಟ್ಟು ಗಹನವಾದ ವಿಚಾರವನ್ನು ಎತ್ತಿಕೊಂಡಿದೆ.

ಈ ಎಲ್ಲಾ ವಿಚಾರಗಳಲ್ಲಿ ಹಾಗೂ ಇನ್ನೂ ಕೆಲವೊಂದು ಕಡೆ ನಾನೂ ಗೊಂದಲಕ್ಕೀಡಾಗಿದ್ದೇನೆ. ಎರಡು ಆಯ್ಕೆಗಳಿದ್ದಾಗ ಯಾವುದನ್ನು ಆರಿಸುವುದು ? ಎಂದು. ಒಂದನ್ನು ಆಯ್ಕೆ ಮಾಡಿದರೆ ಬೇರೆಯವರ ದೃಷ್ಟಿಯಲ್ಲಿ ತಪ್ಪು. ಇನ್ನೊಂದನ್ನು ಆಯ್ಕೆ ಮಾಡಿದರೆ ನಮಗೇ ನಷ್ಟ !! ಏನು ಮಾಡೋದು ?

ಕೆಲವೊಂದು ವಿಭಾಗಗಳಲ್ಲಿ ಭಾರತೀಯ ಉತ್ಪನ್ನಗಳೇ ಇಲ್ಲ, ಹಾಗಂತ ಕೊಳ್ಳದೇ ಕೂರೋದೇ ? ಸರಿ ತಪ್ಪುಗಳ ಮಧ್ಯೆ ಯಾರು ಗೆರೆ ಹಾಕೋರು ? ಒಬ್ಬೊಬ್ಬರು ಒಂದೊಂದು ವಾದ ಮುಂದೆ ಇಡುತ್ತಾರೆ. ತಮ್ಮದೇ ಸರಿ ಅಂತ ವಾದ ಮಾಡುತ್ತಾರೆ. ಅದಕ್ಕೆ ಕೊನೆ ಇರೋದಿಲ್ಲ. ನಾವೂ ಶಾಂತಚಿತ್ತರಾಗಿ ಯೋಚಿಸಿದಾದ ಎರಡೂ ಸರಿ ಅಥವಾ ಎರಡು ತಪ್ಪು ಅಂತ ಅನ್ನಿಸುತ್ತೆ. ಹಾಗಾದರೆ ಯಾವುದು ಸರಿ ಯಾವುದು ತಪ್ಪು ? ಯಾವುದಾದರೂ ಒಂದನ್ನು ಆಯ್ಕೆ ಮಾಡಿ ಗಟ್ಟಿ ಮಾಡಿಕೊಂದರೆ extremist ಆಗುತ್ತೇವೆ.

ನೀವು ಹೇಳೋದೂ ಸರಿ ... "ಅವರವರ ಭಾವಕ್ಕೆ..."
ಮಧ್ಯದಲ್ಲಿ ನಿಲ್ಲೋದು, ಗಾಳಿ ಬಂದಕಡೆ ವಾಲೋದು. ಇಂದು ಈಕಡೆ, ನಾಳೆ ಆಕಡೆ.

Pramod said...

ಬಹಳ ಚೆನ್ನಾಗಿದೆ..ವಿಷಯ, ಚಿ೦ತನೆ, ಉತ್ತರವಿಲ್ಲದ ಪ್ರಶ್ನೆಗಳು..ಮನುಷ್ಯರ ಸ್ವಾರ್ಥ..ಎಲ್ಲವೂ ಆಯೋಮಯ..

Unknown said...
This comment has been removed by the author.
Unknown said...

ಹಾಯ್ ಸಂದೀಪ್,
ಲೇಖನ ಚೆನ್ನಾಗಿದೆ..
ನಾನು ಪರಿಸರ ಹೋರಾಟಗಾರನೆನು ಅಲ್ಲ , ಪ್ರೇಮಿ ಅಂತು ಹೌದು . ಪರಿಸರ ಸಂರಕ್ಷಣೆ ಬಗ್ಗೆ ಗಂಟೆ ಗಟ್ಟಲೆ ಮಾತಾಡೋನೊಬ್ಬ ಮನೆಗೆ ತೇಗದ ಬಾಗಿಲು ಮಾಡಿಸಿದರೆ ಅವ್ನ ಬದ್ದತೆ ಬಗ್ಗೆ ಸಂಶಯ ಪಡೋದು ತಪ್ಪು ಅನ್ಸುತ್ತೆ. ಪರಿಸರ ಸ್ವಂತ ಉಪಯೋಗಕ್ಕಾಗಿ ಮಾಡೋ ಬಳಕೆಯಿಂದ ಅಷ್ಟಾಗಿ ಹಾಳಾಗಲಾರದು. ಮನುಷ್ಯ ಯಾವಾಗ ಸ್ವಾರ್ಥಿಯಾಗಿ ವ್ಯಾಪಾರಿ ಉದ್ದೇಶಕ್ಕಾಗಿ ಇದರ ದುರ್ಬಳಕೆ ಮಾಡ್ತಾನೋ ಆವಾಗಷ್ಟೆ ಪರಿಸರ ನಾಶವಗುತ್ತೆ. ಸಮಾಜವಾದದ ಬಗ್ಗೆ ನನಗೆ ಗೊತ್ತಿಲ್ಲ ಆದ್ರೆ ಪರಿಸರ ಪ್ರೇಮಿಯೊಬ್ಬ ತನ್ನ ಮನೆಗೆ ತೇಗದ ಬಾಗಿಲು ಮಾಡಿಸಬಾರದು ಅನ್ನೋದು ಒಪ್ಪತಕ್ಕ ವಿಷಯ ಅನ್ನ್ಸಿಲ್ಲ .ನಾನು ಹುಟ್ಟಿ ಬೆಳೆದ ಅರಣ್ಯದ ನಡುವೆ ಇರೋ ಮನೆಗೆ ಹೋಗೋದು ಅಂದ್ರೆ ಹತ್ತು ವರ್ಷದ ಹಿಂದೆ ಭಯಬೀಳೋ ಪರಿಸ್ತಿತಿ ಇತ್ತು.ಅಷ್ಟೊಂದು ಅರಣ್ಯ ತುಂಬಿಕೊಂಡಿತ್ತು. ತೇಗ , ಶ್ರೀಗಂಧದ ವ್ರುಕ್ಷಗಳೆಲ್ಲ ತುಂಬಾ ಇದ್ವು. ನಮ್ಮ ತಾತನ ಕಾಲದ ಮನೆಗಳೆಲ್ಲ ಬೆಲೆಬಾಳುವ ಮರಗಳಿಂದಲೇ ಮಾಡಿದ್ದವು.. ಪೂಜೆಗೆ ಬೇಕಿದ್ದ ಶ್ರೀಗಂಧನು ತಗೋತಾ ಇದ್ರೂ. ಕಟ್ಟಿಗೆ, ಮಾಡೋಕೆ ಒಣ ಮರಗಳೂ ಸಿಗ್ತಿದ್ವು.ಯಾರೂ ವ್ಯಾಪಾರಿ ಉದ್ದೇಶಕ್ಕೆ ಬಳಸ್ತಿರ್ಲಿಲ್ಲ. ಕಾಡೂ ನಾಶ ಆಗಿರಲಿಲ್ಲ.. ಆದ್ರೆ ಈ 5 ವರ್ಷದಲ್ಲಿ ರಸ್ತೆ ಪಕ್ಕ ಇರೋ ತೇಗದ ಮರಗಲ್ಯಾವುವೂ ಕಾಣಿಸ್ತಿಲ್ಲ..ಅರಣ್ಯ ಪೂರ್ತಿ ಹುಡ್ಕಿದ್ರೂ ಆಳೆತ್ತರ ಬೆಳೆದ ಶ್ರೀಗಂಧದ ಸಸಿ ಸಿಕ್ರೆ ನಮ್ ಅದೃಷ್ಟ.. ಊರವರ್ಯಾರೂ ಅಸ್ಟೊಂದು ಮರಗಳನ್ನ ಕಡಿದು ಮನೆ ಮಾಡಿಲ್ಲ. ಎಲ್ಲ ಮನೆಗಳು concrete ಆಗಿವೆ. ಆದ್ರೆ ಕೆಲವೇ ಕೆಲವರು ಕದ್ದು ಮರ ಕಡಿದು ಮಾರೋ ಕೆಲಸ ಮಾಡೋದ್ರಿಂದ ದಟ್ಟವಾಗಿದ್ದ ಅರಣ್ಯ ನಾಶ ಆಗ್ತಿದೆ ಅಷ್ಟೇ .ನಿಮ್ ಗೊಂದಲಕ್ಕೂ ನಾನು ಬರ್ದಿದ್ದಕ್ಕು ಸಂಬಂಧ ಇಲ್ಲ. ನೀವು ಪರಿಸರ ಸಂರಕ್ಷಣೆ ಬಗ್ಗೆ ಬರ್ದಿದ್ದು ಗಂಭೀರವಾಗಿಲ್ಲ್ದೆ ಇರಬಹುದು., ಆದ್ರೆ ಈ ವಿಚಾರಗಳನ್ನು ಎಲ್ಲರ ಗಮನಕ್ಕೆ ತರಬೇಕು ಅನ್ನಿಸ್ತು.

ಸುಬ್ಬು ಸುಳ್ಲ್ಯ

ಬಾಲು said...

maraya nin tharadde confusion nangu ide. idu sadhyakke kadime aagodu doubt ansutte!!

ಸಂದೀಪ್ ಕಾಮತ್ said...

ಪ್ರಮೋದ್ ,ಶಿವಾನಂದ,ಸುಬ್ಬು,ಬಾಲು ಪ್ರತಿಕ್ರಿಯೆಗಾಗಿ ಧನ್ಯವಾದಗಳು.

ಸುಬ್ಬು,
’ಹೇಳೋದು ಶಾಸ್ತ್ರ ಇಕ್ಕೋದು ಗಾಳ(ತಿನ್ನೋದು ಬದನೆಕಾಯಿ) ’ ಅಂಥ ಒಂದು ಗಾದೆ ಇದೆ.ಅದೇ ರೀತಿಯ ಪರಿಸರಪ್ರೇಮಿಗಳ ಬಗ್ಗೆ ಬೇಸರದಿಂದ ನಾನು ಹಾಗೆ ಬರೆದಿದ್ದೆ.
ನಿಜವಾದ ಪರಿಸರ ಪ್ರೇಮಿಗಳ ಬಗ್ಗೆ ನನಗೂ ಪ್ರೇಮವಿದೆ:)

ಒಂದು ಚಿಕ್ಕ ಉದಾಹರಣೆ!
ಮೊನ್ನೆ ಒಂದು ಆಫೀಸಿನಲ್ಲಿ ಸೈಕಲ್ ನಲ್ಲಿ ಆಫೀಸಿಗೆ ಬರುವ ಬಗ್ಗೆ ಏನೋ ಒಂದು ಕಾರ್ಯಕ್ರಮ ಇತ್ತು.ಟೆಕ್ಕಿಗಳೆಲ್ಲಾ ಅದೆಲ್ಲಾ ಎಲ್ಲಿಂದಲೋ ಸೈಕಲ್ ಗಳನು ಹೊಂಚಿ ತಂದು ,ಎಂದಿನಂತೆ ತಮ್ಮ ,ಕಾರ್ ಬೈಕ್ ನಲ್ಲಿ ಬರದೆ ಸೈಕಲ್ ನಲ್ಲಿ ಬಂದು ಫೋಟೋಗೆ ಪೋಸ್ ಕೊಟ್ಟರು.ಆಫೀಸ್ ಮುಂಬಾಗದಲ್ಲಿ ಆ ದಿನ ರಾಶಿ ರಾಶಿ ಸೈಕಲ್ ಗಳು ! ಸರಿಯಾಗಿ ಗಮನಿಸಿ ನೋಡಿದೆ .ಆ ಸೈಕಲ್ ಗಳಲ್ಲಿ ಕೆಲವು ಹಳೆ ಲಡಕಾಸು ಸೈಕಲ್ ಗಳಿದ್ದವು .ಕೆಲವು ಸೈಕಲ್ ಗಳ ಹಿಂದೆ ನಂಬರ್ ಬರೆದಿದ್ದವು!

ಆಗಿದ್ದೇನಂದರೆ ಸೈಕಲ್ ಕಡಿಮೆ ಇದ್ದದ್ದಕ್ಕೆ ಕೆಲವು ಬಾಡಿಗೆ ಸೈಕಲ್ ಗಳನ್ನು ಒಂದು ಟೆಂಪೋದಲ್ಲಿ ತಂದು ಅಲ್ಲಿ ಇರಿಸಲಾಗಿತ್ತು.ಮತ್ತೆ ಆ ಲಡಕಾಸು ಸೈಕಲ್ ಗಳು ಪಾಪ ಆಫೀಸಿಗೆ ನಿತ್ಯ ಸೈಕಲ್ ನಲ್ಲೇ ಬರುತ್ತಿದ್ದ ಆಫೀಸು ಬಾಯ್ ಗಳದ್ದು!ನಿತ್ಯ ಸೈಕಲಿನಲ್ಲೇ ಆಫೀಸಿಗೆ ಬರುತ್ತಿದ್ದ ಆಫೀಸ್ ಬಾಯ್ ಗಳು ಇವರಿಗೆ ಕಾಣಿಸೋದೇ ಇಲ್ಲ ನಿತ್ಯ -ಆದ್ರೆ ಟೆಕ್ಕಿಗಳು ಒಂದು ದಿನ ಸೈಕಲ್ ನಲ್ಲಿ ಬಂದು ಅದೇನ್ ಸಾಧನೆ ಮಾಡಿದ್ರೋ ಗೊತ್ತಾಗಿಲ್ಲ!

ಇಂಥ ಪರಿಸರವಾದಿಗಳ ಬಗ್ಗೆ ಸಾಂಕೇತಿಕವಾಗಿ ಬರೆದಿದ್ದು ನಾನು.

ಇಲ್ಲದೆ ಹೋದ್ರೆ ಜನರು ತೇಗದ ಬಾಗಿಲಾದ್ರೂ ಮಾಡಲಿ ,ಕಬ್ಬಿಣದ ಬಾಗಿಲಾದರೂ ಮಾಡಲಿ ನನ್ನ ಗಂಟೇನು ಹೋಗುತ್ತೆ ಅಲ್ಲವೇ?

ಪರಿಸರ ಸಂರಕ್ಷಣೆಯ ಬಗ್ಗೆ ಚೌಕಟ್ಟು ಹಾಕಿ ಬರೆಯೋದು ನಿಜಕ್ಕೂ ಕಷ್ಟಕರ.ಒಬ್ಬ ಪತ್ರಕರ್ತ (ಹೀಗೆ ಬರೆದರೆ ಬಹಳಷ್ಟು ಜನರಿಗೆ ಸಿಟ್ಟು ಬರುತ್ತೆ!) ಒಂದು ಪುರವಣಿಯಲ್ಲಿ ಲಾಲ್ ಬಾಗ್ ನ ಮರಗಳನ್ನು ಕಡಿಯುತ್ತಿರುವ ಬಗ್ಗೆ ,ಆ ಬಗ್ಗೆ ಎಚ್ಚೆತ್ತುಕೊಳ್ಳುವ ಬಗ್ಗೆ ಒಂದು ದೊಡ್ಡ ಲೇಖನ ಬರೆದ ಅಂದುಕೊಳ್ಳಿ.ನಾನು ಅವನ ಬಳಿ ಹೋಗಿ ’ಲೇಖನ ಏನೋ ಚೆನ್ನಾಗಿದೆ ಆದ್ರೆ ಈ ದಿನಪತ್ರಿಕೆಗಳನ್ನು ಮುದ್ರಿಸೋದಕ್ಕೂ ರಾಶಿ ರಾಶಿ ಮರಗಳನ್ನು ಕಡೀತಾರೆ ,ಹಾಗಾಗಿ ನೀವು ಪೇಪರ್ ಅನ್ನು ಮೇಲೆ ಬರೀ ಇಂಟರ್ನೆಟ್ ನಲ್ಲಿ ಕೊಡಿ ’ ಅಂದ್ರೆ ನನ್ನ ಗತಿ ಏನಾಗ್ಬೇಕು ಹೇಳಿ.
ಅದಕ್ಕೇ ಹೇಳಿದ್ದು ಅವರವರ ಭಾವಕ್ಕೆ ಅಂತ!

ಬಾಲು ಡೋಂಟ್ ವರಿ ಮಾಡಬೇಡಿ ,ಕನ್ಫ್ಯೂಸ್ ಆಗಬೇಡಿ!
ಬೇರೆ ಬೇರೆ ವಯಸ್ಸಿಗೆ ಬೇರೆ ಬೇರೆ ಕನ್ಫ್ಯೂಶನ್ ಗಳು !

shivu.k said...

ಸಂದೀಪ್,

ನಿಮ್ಮ ಇದೇ ಲೇಖನವನ್ನು ಅವಧಿಯಲ್ಲಿ ಓದಿದ್ದೆ. ನಂತರ ನಿಮ್ಮ ಬ್ಲಾಗಿಗೆ ಬಂದರೆ ಇಲ್ಲಿ ಪಾಲ, ಸುನಾಥ್, ಮತ್ತಿತರ ಗೆಳೆಯರ ಅಭಿಪ್ರಾಯಗಳನ್ನು ಓದುತ್ತಿದ್ದರೇ ಅದಕ್ಕೆ ನಿಮ್ಮ ಪ್ರತಿಕ್ರಿಯೆಗಳನ್ನು ನೋಡುತ್ತಿದ್ದರೇ ನನಗೂ ಈಗ ನಿಜಕ್ಕೂ ಗೊಂದಲವಾಗುತ್ತಿರುವುದಂತೂ ನಿಜ...

Unknown said...

ಸಂದೀಪ್ ,
ಪ್ರತಿಕ್ರಿಯೆಗೆ ಧನ್ಯವಾದಳು , ನಿಮ್ಮ ಅಭಿಪ್ರಾಯಕ್ಕೆ ನನ್ನ ಪೂರ್ಣ ಸಹಮತವಿದೆ ..
ನೀವು ಹೇಳಿದ ತರಹದ ನಾಟಕಗಳು ಎಲ್ಲ ಕದ್ರೆಯು ನಡೆಯುತ್ತಿದೆ "ಜಗತ್ತೇ ನಾಟಕ ರಂಗ" :( ಪತ್ರಿಕೆಯಲ್ಲಿ ಮುಖ ತೋರ್ಸೋ ಅಷ್ಟಕ್ಕೆ ಎಲ್ಲವು ಸೀಮಿತ ಆಗ್ತಿದೆ.
ನನ್ನ ಪರಿಸರ ಪ್ರೇಮ ಎಲ್ಲವನ್ನು ವಿರೋಧಿಸುವಸ್ಟು ಹೆಚ್ಚಾಗಿಲ್ಲ .ಅಭಿವೃದ್ದಿ ಜೊತೆ ಪರಿಸರದ ಬಗ್ಗೆ ಕಾಳಜಿನು ಇರ್ಬೇಕು ಅಸ್ಟೇ ..

Prabhuraj Moogi said...

ತಮ್ಮನ್ನೂ ಸೇರಿಸಿಕೊಂಡು ತಪ್ಪಿರಲಿ ಸರಿ ಇರಲಿ ಅದು ಮಾಡಿದ್ದು ಯಾರೇ ಇರಲಿ ಅದನ್ನ ಎತ್ತಿ ನೇರವಾಗಿ ನೀವು ಬರೆಯೋದ್ರಿಂದ್ಲೆ ನಿಮ್ಮ ಬ್ಲಾಗ ಅಷ್ಟು ಇಷ್ಟ ಆಗೋದು. ಎಲ್ರಿಗೂ ತಮ್ಮದೇ ಆದ ವಿಚಾರಗಳಿವೆ ವಾದಗಳಿವೆ, ಹಾಗಾಗಿ ಇದು ಸರಿ ಇದು ತಪ್ಪು ಎಂದು ಹೇಳಲಾಗುವುದಿಲ್ಲ, ಅದಕ್ಕೆ ನಿಮ್ಮ ಗೊಂದಲಗಳನ್ನು ನಮ್ಮವೂ ಕೂಡ.. ಈ ಸ್ವದೇಶಿ, ಪರಿಸರವಾದಿ, ಪ್ರತಿಭಾ ಪಲಾಯನ ಇವೆಲ್ಲ ಬಗ್ಗೆ ಹೀಗೆ ಅನಿಸುತ್ತದೆ ಆದರೆ ಮತ್ತೆ ಕೊನೆಗೆ ವಾಸ್ತವಕ್ಕೆ ನಾವು ಏನು ಮಾಡುತ್ತಿದ್ದೆವೊ ಅದನ್ನೆ ಮಾಡುತ್ತೇವೆ. ಹೀಗಾಗಿ ಈ ವಿಷಯಗಳೆ ಅಷ್ಟು ಗೊಂದಲದಿಂದ ಕೂಡಿವೆ. ಉದಾಹರಣೀ ಮೆಟ್ರೊ ರೈಲು ಬೇಕು ವಾಹನ ಸಂದಣಿ ಜಾಸ್ತಿ ಆಯ್ತು ಅಂತೀವಿ, ಅದಕ್ಕೆ ಮರ ಕಡಿದು(ಎಲ್ಲ ಕಡೆ ಕಡಿದದ್ದು ಸರಿ ಅಲ್ಲ ಅದರೂ ಕೆಲ ಕಡೆ ಅನಿವಾರ್ಯ) ದಾರಿ ಮಾಡಿದರೆ ಪರಿಸರ ಅಂತ ಬೋಬ್ಬೆಯಿಡುತ್ತೇವೆ, ಅದೇ ಕಡಿದ ಮರದ ಬದಲಾಗಿ ನಾಲ್ಕು ಬೇರೆ ಮರ ನೆಟ್ಟರೆ ಅಂತ ಯೋಚಿಸುವುದಿಲ್ಲ. ಅದೇ ಗೊಂದಲ

ಬೆಂಗಳೂರು ರಘು said...

Sandeep, Excellent Article. In my past organization this whole topic of "Dealing with ambiguity" was a skill every employee had to posses. The mantra is very effective - start somewhere or with something, define the end date and believe it or not it will all fall in place and gets completed with 10-20% errata. Was it only for product development not really, we experimented with human resource, quality etc and all passed, one thing failed and that was training of human mindset.human mindset took a path of "whatever i feel ok today is the right thing". Keep up the good work man